ಒಳ್ಳೇ ಆಧ್ಯಾತ್ಮಿಕ ರೂಢಿಗಳನ್ನು ಬೆಳೆಸಿಕೊಳ್ಳಿರಿ, ಸಮೃದ್ಧ ಆರ್ಶೀವಾದಗಳನ್ನು ಕೊಯ್ಯಿರಿ
1. ನಿಮ್ಮ ಆಧ್ಯಾತ್ಮಿಕ ದಿನಚರಿಯನ್ನು ಪರಿಶೀಲಿಸುವುದು ಏಕೆ ಪ್ರಯೋಜನಕರ?
1 ನೀವು ಕ್ರೈಸ್ತರಾದ ಆರಂಭದಲ್ಲಿ, ಬೈಬಲ್ ಅಧ್ಯಯನ, ಕ್ಷೇತ್ರಸೇವೆ ಮತ್ತು ಪ್ರಾರ್ಥನೆ ಒಳಗೂಡಿರುವ ಆಧ್ಯಾತ್ಮಿಕ ಚಟುವಟಿಕೆಗಳ ಉತ್ತಮ ದಿನಚರಿಯನ್ನು ಬೆಳೆಸಿಕೊಳ್ಳಲು ಅಧಿಕ ಪ್ರಯತ್ನವನ್ನು ಮಾಡಿದ್ದೀರಿ ಎಂಬುದು ಸಂಭವನೀಯ. ಆ ನಿಮ್ಮ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದವಿದ್ದ ಕಾರಣ ನೀವು ಆಧ್ಯಾತ್ಮಿಕವಾಗಿ ಬೆಳೆಯಲು ಸಾಧ್ಯವಾಯಿತು. ನೀವು ದೀಕ್ಷಾಸ್ನಾನಪಡೆದು ಈಗ ಕೆಲವು ವರುಷಗಳೇ ಕಳೆದಿರಬಹುದು. ಕ್ರೈಸ್ತರಾದಾಗ ಬೆಳೆಸಿಕೊಂಡಿದ್ದ ಒಳ್ಳೇ ಆಧ್ಯಾತ್ಮಿಕ ರೂಢಿಗಳನ್ನು ನೀವಿನ್ನೂ ಕಾಪಾಡಿಕೊಂಡಿದ್ದೀರೋ?
2. ಪ್ರತಿದಿನ ಬೈಬಲ್ ಓದುವುದರಿಂದ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು?
2 ನಿಮ್ಮ ದಿನಚರಿಯನ್ನು ಮರುಪರಿಶೀಲಿಸಿರಿ: ಪ್ರತಿದಿನವೂ ದೇವರ ವಾಕ್ಯದ ಒಂದು ಭಾಗವನ್ನು ಓದುವುದು ನಿಮ್ಮ ರೂಢಿಯಾಗಿದೆಯೋ? ಈ ರೀತಿ ಮಾಡುವ ಮೂಲಕ ನಾವು ಎಂತಹ ಸಮೃದ್ಧ ಆಶೀರ್ವಾದಗಳನ್ನು ಕೊಯ್ಯಬಲ್ಲೆವು! (ಯೆಹೋ. 1:8; ಕೀರ್ತ. 1:2, 3) ಪುರಾತನ ಇಸ್ರಾಯೇಲಿನಲ್ಲಿನ ಪ್ರತಿಯೊಬ್ಬ ಅರಸನು ಧರ್ಮಶಾಸ್ತ್ರದ ತನ್ನ ಸ್ವಂತ ಪ್ರತಿಯನ್ನು “ತನ್ನ ಜೀವಮಾನದ ದಿನಗಳೆಲ್ಲಾ” ಓದಬೇಕಾಗಿತ್ತು. ಇದರ ಪ್ರಯೋಜನಗಳೇನಾಗಿದ್ದವು? ಈ ಮೂಲಕ ಅವನು ಒಂದು ದೀನ ಹೃದಯವನ್ನು ಬೆಳೆಸಿಕೊಳ್ಳಲು ಮತ್ತು ಯೆಹೋವನ ಆಜ್ಞೆಗಳನ್ನು ಮೀರಿ ನಡೆಯದೆ ಆತನಲ್ಲಿ ಭಯಭಕ್ತಿಯುಳ್ಳವನಾಗಿ ಇರುವುದನ್ನು ಕಲಿಯಲು ಸಾಧ್ಯವಾಯಿತು. (ಧರ್ಮೋ. 17:18-20) ತದ್ರೀತಿಯಲ್ಲಿ ಇಂದು ಪ್ರತಿದಿನವು ಬೈಬಲನ್ನು ಓದುವುದು ಈ ದುಷ್ಟ ಹಾಗೂ ಭ್ರಷ್ಟ ಲೋಕದಲ್ಲಿ ನಿರ್ದೋಷಿಗಳಾಗಿಯೂ ಯಥಾರ್ಥ ಮನಸ್ಸುಳ್ಳವರಾಗಿಯೂ ಉಳಿಯಲು ಸಹಾಯಮಾಡುತ್ತದೆ. ಮಾತ್ರವಲ್ಲ, ಶುಶ್ರೂಷೆಗಾಗಿ ಸಕಲ ರೀತಿಯಲ್ಲಿ ಸನ್ನದ್ಧರಾಗುವಂತೆ ಸಹ ಸಹಾಯಮಾಡುತ್ತದೆ.—ಫಿಲಿ. 2:15; 2 ತಿಮೊ. 3:17.
3. ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ ಯಾವ ಆಶೀರ್ವಾದಗಳನ್ನು ನಾವು ಕೊಯ್ಯಬಲ್ಲೆವು?
3 ಯೇಸು ಶಾಸ್ತ್ರವಚನಗಳು ಚರ್ಚಿಸಲ್ಪಡುತ್ತಿದ್ದ ಸಭಾಮಂದಿರಕ್ಕೆ ಹೋಗುವುದನ್ನು ತನ್ನ ವಾಡಿಕೆಯಾಗಿ ಮಾಡಿಕೊಂಡಿದ್ದನು. (ಲೂಕ 4:16) ಇದು, ಅವನು ಅನುಭವಿಸಲಿದ್ದ ಕಷ್ಟಪರೀಕ್ಷೆಗಳನ್ನು ಎದುರಿಸಲು ಅವನನ್ನು ಬಲಗೊಳಿಸಿತು ಎಂಬುದರಲ್ಲಿ ಸಂದೇಹವಿಲ್ಲ. ನಾವು ಕೂಡ ಸಭಾಕೂಟಗಳಲ್ಲಿ ಪಡೆದುಕೊಳ್ಳುವ ಆಧ್ಯಾತ್ಮಿಕ ಬೋಧನೆಯಿಂದ ಮತ್ತು ಹಿತಕರವಾದ “ಪರಸ್ಪರ ಪ್ರೋತ್ಸಾಹ”ದಿಂದ ಬಲಗೊಳಿಸಲ್ಪಡುತ್ತೇವೆ. (ರೋಮಾ. 1:12, NIBV) ನಮ್ಮ ಸಹೋದರರೊಂದಿಗೆ ಜೊತೆಗೂಡುವುದು ಈ ಕಡೇ ಕಾಲದಲ್ಲಿರುವ ತೊಂದರೆಗಳನ್ನು ತಾಳಿಕೊಳ್ಳಲು ಸಹಾಯಮಾಡುತ್ತದೆ. (ಇಬ್ರಿ. 10:24, 25) ಎಲ್ಲ ಕ್ರೈಸ್ತಕೂಟಗಳಿಗೆ ಹಾಜರಾಗುವುದು ಇಂದಿಗೂ ನಿಮ್ಮ ರೂಢಿಯಾಗಿದೆಯೋ?
4. ಪ್ರತಿವಾರ ಕ್ಷೇತ್ರಸೇವೆಯಲ್ಲಿ ಭಾಗವಹಿಸುವುದು ನಮಗೆ ಹೇಗೆ ಪ್ರಯೋಜನ ತರುತ್ತದೆ?
4 ಅಪೊಸ್ತಲರು “ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ” ಸುವಾರ್ತೆಯನ್ನು ಪ್ರಚುರಪಡಿಸುವುದರಲ್ಲಿ ಭಾಗವಹಿಸಿದರೆಂದು ಬೈಬಲ್ ವೃತ್ತಾಂತಗಳು ನಮಗೆ ತಿಳಿಸುತ್ತವೆ. (ಅ. ಕೃ. 5:42) ಪ್ರತಿದಿನ ಸಾರಲು ನಮಗೆ ಸಾಧ್ಯವಾಗದಿರಬಹುದು, ಆದರೆ ಪ್ರತಿವಾರ ಶುಶ್ರೂಷೆಯ ಕೆಲವೊಂದು ವಿಧಾನಗಳಲ್ಲಿ ಭಾಗವಹಿಸುವುದನ್ನು ನಮ್ಮ ರೂಢಿಯನ್ನಾಗಿ ಮಾಡಸಾಧ್ಯವಿದೆಯೋ? ಹೀಗೆ ಮಾಡುವ ಮೂಲಕ ನಾವು ನಿಶ್ಚಯವಾಗಿಯೂ ದೇವರ ವಾಕ್ಯವನ್ನು ಉಪಯೋಗಿಸುವುದರಲ್ಲಿ ಹೆಚ್ಚು ನಿಪುಣರಾಗುವೆವು ಮತ್ತು ಬೈಬಲ್ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ಉತ್ತೇಜನಭರಿತ ಅನುಭವಗಳನ್ನು ಆನಂದಿಸುವೆವು.
5. ಯೆಹೋವನಿಗೆ ಕ್ರಮವಾಗಿ ಪ್ರಾರ್ಥಿಸುವುದು ಏಕೆ ಅತ್ಯಾವಶ್ಯಕ?
5 ಪ್ರವಾದಿಯಾದ ದಾನಿಯೇಲನು ತನ್ನ ಜೀವನದುದ್ದಕ್ಕೂ ಯೆಹೋವನನ್ನು “ನಿತ್ಯವೂ” ಸೇವಿಸಿದ ಕಾರಣ ಹೇರಳವಾಗಿ ಆಶೀರ್ವದಿಸಲ್ಪಟ್ಟನು. ಇದರಲ್ಲಿ ಯೆಹೋವನಿಗೆ ಕ್ರಮವಾಗಿ ಪ್ರಾರ್ಥಿಸುವ ರೂಢಿಯು ಒಳಗೂಡಿತ್ತು. (ದಾನಿ. 6:10, 16, 20) ತದ್ರೀತಿಯಲ್ಲಿ, ಕ್ರಮವಾಗಿ ನಾವು ಹೃತ್ಪೂರ್ವಕ ಪ್ರಾರ್ಥನೆಗಳ ಮೂಲಕ ಯೆಹೋವನ ಕಡೆಗೆ ತಿರುಗುವುದಾದರೆ, ಆತನು ತನ್ನ ಪವಿತ್ರಾತ್ಮವನ್ನು ದಯಪಾಲಿಸಿ ನಮ್ಮನ್ನು ಆಶೀರ್ವದಿಸುವನು. (ಲೂಕ 11:9-13) ಮಾತ್ರವಲ್ಲ, ಆತನೊಂದಿಗೆ ನಾವು ಆಪ್ತಸಂಬಂಧದಲ್ಲಿ ಆನಂದಿಸಸಾಧ್ಯವಾಗುವಂತೆ ಆತನು ನಮ್ಮ ಬಳಿಸಾರುವ ಮೂಲಕ ಪ್ರತಿಕ್ರಿಯೆ ತೋರಿಸುವನು. (ಕೀರ್ತ. 25:14; ಯಾಕೋ. 4:8) ಎಂತಹ ಒಂದು ಮಹಾನ್ ಪ್ರತಿಫಲ ಅದಾಗಿದೆ! ಆದಕಾರಣ ನಾವು ಒಳ್ಳೇ ಆಧ್ಯಾತ್ಮಿಕ ರೂಢಿಗಳನ್ನು ಕಾಪಾಡಿಕೊಳ್ಳಲು ಶ್ರದ್ಧೆಯಿಂದ ಕೆಲಸಮಾಡಿ, ಯೆಹೋವನಿಂದ ಸಮೃದ್ಧ ಆಶೀರ್ವಾದಗಳನ್ನು ಪಡೆಯುವಂತಾಗಲಿ.