ಬೈಬಲ್ ಪುಸ್ತಕ ನಂಬರ್ 21—ಪ್ರಸಂಗಿ
ಲೇಖಕ: ಸೊಲೊಮೋನ್
ಬರೆಯಲ್ಪಟ್ಟ ಸ್ಥಳ: ಯೆರೂಸಲೇಮ್
ಬರೆದು ಮುಗಿಸಿದ್ದು: ಸಾ.ಶ.ಪೂ. 1000ಕ್ಕೆ ಮೊದಲು
ಪ್ರಸಂಗಿ ಪುಸ್ತಕವು ಒಂದು ಘನೋದ್ದೇಶಕ್ಕಾಗಿ ಬರೆಯಲ್ಪಟ್ಟಿತು. ಯೆಹೋವನ ಸಮರ್ಪಿತ ಜನರ ನಾಯಕನಾಗಿದ್ದ ಸೊಲೊಮೋನನಿಗೆ, ಆ ಜನರು ತಮ್ಮ ಸಮರ್ಪಣೆಗೆ ನಂಬಿಗಸ್ತರಾಗಿದ್ದು ಐಕ್ಯವಾಗಿರುವಂತೆ ಮಾಡುವ ಜವಾಬ್ದಾರಿಯಿತ್ತು. ಪ್ರಸಂಗಿ ಪುಸ್ತಕದ ವಿವೇಕಪೂರ್ಣ ಸಲಹೆಯ ಮುಖೇನ ಈ ಜವಾಬ್ದಾರಿಯನ್ನು ನಿರ್ವಹಿಸಲು ಅವನು ಉದ್ದೇಶಿಸಿದನು.
2 ಪ್ರಸಂಗಿ 1:1ರಲ್ಲಿ ಅವನು ತನ್ನನ್ನು “ಪ್ರಸಂಗಿ” ಎಂದು ಸೂಚಿಸಿಕೊಳ್ಳುತ್ತಾನೆ. ಹೀಬ್ರು ಭಾಷೆಯಲ್ಲಿರುವ ಪದವು ಕೊಹೀಲೆತ್ ಎಂದಾಗಿದ್ದು, ಹೀಬ್ರು ಬೈಬಲಿನಲ್ಲಿ ಈ ಪುಸ್ತಕಕ್ಕೆ ಆ ಹೆಸರೇ ಕೊಡಲಾಗಿರುತ್ತದೆ. ಗ್ರೀಕ್ ಸೆಪ್ಟ್ಯುಅಜಿಂಟ್ನಲ್ಲಿ ಅದಕ್ಕೆ ಇಕ್ಲೀಸಿಯಾಸ್ತೆಸ್ ಅಂದರೆ “ಒಂದು ಇಕ್ಲೀಸಿಯಾದ (ಸಭೆ; ನೆರವಿಗೆ) ಸದಸ್ಯ” ಎಂಬ ಶಿರೋನಾಮವಿದೆ. ಮತ್ತು ಇದರಿಂದ ಇಂಗ್ಲಿಷ್ನ ಇಕ್ಲೀಸಿಯಾಸ್ಟೀಸ್ ಹೆಸರು ಬಂದಿರುತ್ತದೆ. ಆದರೂ, ಕೊಹೀಲೆತ್ ಎಂಬುದನ್ನು “ಸಭೆ ಜಮಾಯಿಸುವವನು” ಎಂದು ಭಾಷಾಂತರಿಸಿರುವುದು ಹೆಚ್ಚು ಸಮಂಜಸ ಮಾತ್ರವಲ್ಲ, ಇದು ಸೊಲೊಮೋನನಿಗೆ ಹೆಚ್ಚು ಸೂಕ್ತವಾದ ಅಂಕಿತವೂ ಆಗಿದೆ. ಈ ಪುಸ್ತಕವನ್ನು ಬರೆಯುವುದರಲ್ಲಿ ಸೊಲೊಮೋನನಿಗಿದ್ದ ಉದ್ದೇಶವನ್ನು ಇದು ತಿಳಿಯಪಡಿಸುತ್ತದೆ.
3 ಅರಸ ಸೊಲೊಮೋನನು ಸಭೆಯನ್ನು ಜಮಾಯಿಸುವವನಾಗಿದುದು ಯಾವ ಅರ್ಥದಲ್ಲಿ, ಮತ್ತು ಯಾವುದಕ್ಕೆ ಅವನು ಸಭೆಯನ್ನು ಜಮಾಯಿಸಿದನು? ಅವನು ತನ್ನ ಜನರಾದ ಇಸ್ರಾಯೇಲ್ಯರ ಮತ್ತು ಅವರ ಸಂಗಾತಿಗಳಾದ ತಾತ್ಕಾಲಿಕ ನಿವಾಸಿಗಳನ್ನು ಜಮಾಯಿಸುವವನಾಗಿದ್ದನು. ಅವನು ಇವರೆಲ್ಲರನ್ನು ತನ್ನ ದೇವರಾದ ಯೆಹೋವನ ಆರಾಧನೆಗಾಗಿ ಜಮಾಯಿಸಿದನು. ಇದಕ್ಕೆ ಮೊದಲು ಅವನು ಯೆರೂಸಲೇಮಿನಲ್ಲಿ ಯೆಹೋವನ ಆಲಯವನ್ನು ಕಟ್ಟಿದ್ದನು ಮತ್ತು ಅದರ ಪ್ರತಿಷ್ಠಾಪನೆಯ ಸಮಯದಲ್ಲಿ ಅವರೆಲ್ಲರನ್ನು ದೇವರ ಆರಾಧನೆಗಾಗಿ ಒಟ್ಟುಸೇರಿಸಿದ್ದನು ಅಥವಾ ಒಂದು ಸಭೆಯಾಗಿ ಜಮಾಯಿಸಿದ್ದನು. (1 ಅರ. 8:1) ಈಗ ಅವನು ಪ್ರಸಂಗಿ ಪುಸ್ತಕದ ಮೂಲಕ ತನ್ನ ಜನರನ್ನು ಈ ಲೋಕದ ವ್ಯರ್ಥವೂ ನಿಷ್ಫಲವೂ ಆದ ಕೆಲಸಗಳಿಂದ ದೂರವಾಗಿ, ಸಾರ್ಥಕವಾದ ಕೆಲಸಗಳಿಗೆ ಜಮಾಯಿಸಲು ಉದ್ದೇಶಿಸಿದನು.—ಪ್ರಸಂ. 12:8-10.
4 ಸೊಲೊಮೋನನನ್ನು ಇಲ್ಲಿ ನಿರ್ದಿಷ್ಟವಾಗಿ ಹೆಸರಿಸಲಾಗಿಲ್ಲವಾದರೂ, ಹಲವಾರು ವಚನಗಳು ಅವನೇ ಲೇಖಕನೆಂಬುದನ್ನು ನಿಶ್ಚಾಯಕವಾಗಿ ತೋರಿಸುತ್ತವೆ. ಈ ಜಮಾವಣೆಗಾರನು ತನ್ನನ್ನು “ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರಿಗೆ ಅರಸ”ನೆಂದೂ “ದಾವೀದನ ಮಗ”ನೆಂದೂ ಪರಿಚಯಮಾಡಿಕೊಡುತ್ತಾನೆ. ಇದು ಅರಸ ಸೊಲೊಮೋನನಿಗೆ ಮಾತ್ರ ಅನ್ವಯಿಸಸಾಧ್ಯವಿದೆ, ಏಕೆಂದರೆ ಯೆರೂಸಲೇಮಿನಲ್ಲಿದ್ದ ಅವನ ಉತ್ತರಾಧಿಕಾರಿಗಳು ಯೆಹೂದದ ಮೇಲೆ ಮಾತ್ರ ಅರಸರಾಗಿ ಆಳಿದರು. ಇದಲ್ಲದೆ, ಈ ಜಮಾವಣೆಗಾರನು ಬರೆಯುವುದು: “ನನಗಿಂತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡಿದ್ದೇನೆ; ನನ್ನ ಹೃದಯವು ಜ್ಞಾನವನ್ನೂ ತಿಳುವಳಿಕೆಯನ್ನೂ ವಿಶೇಷವಾಗಿ ಹೊಂದಿದೆ.” (1:1, 12, 16) ಇದು ಸೊಲೊಮೋನನಿಗೆ ತಕ್ಕದಾಗಿ ಅನ್ವಯಿಸುತ್ತದೆ. ಅವನು “ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ ಪರೀಕ್ಷಿಸಿ ಕ್ರಮಪಡಿಸಿದನು” ಎಂದು ಪ್ರಸಂಗಿ 12:9 ತಿಳಿಸುತ್ತದೆ. ಅರಸ ಸೊಲೊಮೋನನು 3,000 ಜ್ಞಾನೋಕ್ತಿಗಳನ್ನು ನುಡಿದನು. (1 ಅರ. 4:32) ಪ್ರಸಂಗಿ 2:4-9 ಈ ಲೇಖಕನ ನಿರ್ಮಾಣ ಕಾರ್ಯಕ್ರಮವನ್ನು ತಿಳಿಯಪಡಿಸುತ್ತದೆ. ಅದರಲ್ಲಿ ದ್ರಾಕ್ಷಾತೋಟಗಳು, ಉದ್ಯಾನವನಗಳು, ನೀರಾವರಿ ವ್ಯವಸ್ಥೆ, ದಾಸದಾಸಿಯರ ಏರ್ಪಾಡು, ಬೆಳ್ಳಿ ಮತ್ತು ಚಿನ್ನದ ಶೇಖರಣೆ, ಹಾಗೂ ಇತರ ಸಾಧನೆಗಳು ಒಳಗೂಡಿವೆ. ಇವೆಲ್ಲವೂ ಸೊಲೊಮೋನನ ವಿಷಯದಲ್ಲಿ ಸತ್ಯವಾಗಿತ್ತು. ಶೆಬ ದೇಶದ ರಾಣಿಯು ಸೊಲೊಮೋನನ ವಿವೇಕ ಮತ್ತು ಸಮೃದ್ಧಿಯನ್ನು ನೋಡಿದಾಗ, “ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ” ಎಂದು ಉದ್ಗರಿಸಿದಳು.—1 ಅರ. 10:7.
5 ಈ ಜಮಾವಣೆಗಾರನು “ಯೆರೂಸಲೇಮಿನಲ್ಲಿ” ಅರಸನಾಗಿದ್ದನು ಎಂದು ಹೇಳುವ ಮೂಲಕ, ಬರವಣಿಗೆಯನ್ನು ಅಲ್ಲಿ ಮಾಡಲಾಗಿತ್ತು ಎಂದು ಈ ಪುಸ್ತಕ ತಿಳಿಸುತ್ತದೆ. ಇದನ್ನು ಬರೆದ ಸಮಯವು ಸಾ.ಶ.ಪೂ. 1000ಕ್ಕಿಂತ ಮೊದಲು ಆಗಿದ್ದಿರಬೇಕು. ಇದು ಸೊಲೊಮೋನನ 40 ವರ್ಷಗಳ ಆಳ್ವಿಕೆಯ ಅವಧಿಯಲ್ಲಿ ಸಾಕಷ್ಟು ಸಮಯ ದಾಟಿದ ಬಳಿಕ, ಅಂದರೆ ಆ ಪುಸ್ತಕವು ಸೂಚಿಸುವಂತೆ ಅವನು ಹಲವಾರು ಹವ್ಯಾಸಗಳನ್ನು ಬೆನ್ನಟ್ಟಿ ಮುಗಿಸಿದ ಬಳಿಕ, ಆದರೆ ಅವನು ಮೂರ್ತಿಪೂಜೆಗೆ ಬಲಿಬೀಳುವುದಕ್ಕೆ ಮುಂಚಿತವಾಗಿ ಬರೆಯಲ್ಪಟ್ಟಿದ್ದಿರಬೇಕು. ಅಷ್ಟರಲ್ಲಿ ಅವನು ಈ ಲೋಕದ ಕಾರ್ಯಕಲಾಪಗಳು ಮತ್ತು ಅದರ ಪ್ರಾಪಂಚಿಕವಾದ ಲಾಭಗಳನ್ನು ಪಡೆಯಲು ಪ್ರಯಾಸಪಡುವುದರ ವಿಷಯದಲ್ಲಿ ವ್ಯಾಪಕವಾದ ಜ್ಞಾನವನ್ನು ಪಡೆದಿದ್ದನು. ಆ ಸಮಯದಲ್ಲಿ, ಅವನು ಇನ್ನೂ ದೇವರ ಅನುಗ್ರಹಪಾತ್ರನೂ ದೇವರ ಪ್ರೇರಣೆಯುಳ್ಳವನೂ ಆಗಿದ್ದನು.
6 ಈ ಪ್ರಸಂಗಿ ಪುಸ್ತಕ ‘ದೇವರಿಂದ ಪ್ರೇರಿತವಾಗಿದೆ’ ಎಂದು ನಮಗೆ ಹೇಗೆ ಖಾತರಿಯಿರಬಲ್ಲದು? ಅದು ಯೆಹೋವ ಎಂಬ ದೈವಿಕ ನಾಮವನ್ನು ಒಮ್ಮೆಯೂ ತಿಳಿಸದಿರುವ ಕಾರಣ ಕೆಲವರು ಅದು ದೇವರಿಂದ ಪ್ರೇರಿತವಾಗಿದೆಯೊ ಎಂದು ಸಂದೇಹಿಸಬಹುದು. ಆದರೂ, ಅದು ದೇವರ ಸತ್ಯಾರಾಧನೆಯನ್ನು ನಿಶ್ಚಯವಾಗಿ ಸಮರ್ಥಿಸುತ್ತದೆ ಮತ್ತು ಹಾ ಎಲೋಹಿಂ, ಅಂದರೆ ಸತ್ಯದೇವರು ಎಂಬ ಅಭಿವ್ಯಕ್ತಿಯನ್ನು ಪದೇಪದೇ ಬಳಸುತ್ತದೆ. ಇನ್ನೊಂದು ಆಕ್ಷೇಪಣೆಯು, ಅದರಿಂದ ನೇರವಾದ ಉದ್ಧರಣೆಗಳು ಬೈಬಲಿನ ಬೇರೆ ಪುಸ್ತಕಗಳಲ್ಲಿಲ್ಲ ಎಂಬುದಾಗಿರಬಹುದು. ಆದರೂ, ಅದರಲ್ಲಿ ಕೊಡಲ್ಪಟ್ಟಿರುವ ಬೋಧನೆಗಳು ಮತ್ತು ಮೂಲತತ್ತ್ವಗಳು ಶಾಸ್ತ್ರದ ಉಳಿದ ಭಾಗದೊಂದಿಗೆ ಪೂರ್ಣವಾಗಿ ಸಹಮತದಲ್ಲಿವೆ. ಕ್ಲಾರ್ಕ್ಸ್ ಕಾಮೆಂಟರಿ, ಸಂಪುಟ III, ಪುಟ 799 ಹೇಳುವುದು: “ಕೊಹೀಲೆತ್ ಅಥವಾ ಪ್ರಸಂಗಿ ಎಂಬ ಪುಸ್ತಕವನ್ನು ಯೆಹೂದಿ ಮತ್ತು ಕ್ರೈಸ್ತ—ಈ ಎರಡೂ ಚರ್ಚುಗಳು ಸರ್ವಶಕ್ತನ ಪ್ರೇರಣೆಯಿಂದ ಬರೆಯಲ್ಪಟ್ಟದ್ದೆಂದು ಮತ್ತು ಯೋಗ್ಯವಾಗಿಯೇ ಪವಿತ್ರ ಅಂಗೀಕೃತ ಪುಸ್ತಕಗಳ ಭಾಗವೆಂದು ಅಂಗೀಕರಿಸುತ್ತವೆ.”
7 ಲೌಕಿಕ ಜ್ಞಾನವಿರುವ, “ಉನ್ನತ ವಿಮರ್ಶಕರು” ಪ್ರಸಂಗಿ ಪುಸ್ತಕವು ಸೊಲೊಮೋನನ ಬರವಣಿಗೆಯಾಗಲಿ, ‘ಎಲ್ಲ ಶಾಸ್ತ್ರದ’ ಶುದ್ಧ ಭಾಗವಾಗಲಿ ಆಗಿರುವುದಿಲ್ಲವೆಂದು ಹೇಳುತ್ತ, ಅದರ ಭಾಷೆ ಮತ್ತು ತತ್ತ್ವಜ್ಞಾನವು ಅದಕ್ಕೆ ಕೊಡಲ್ಪಟ್ಟಿರುವ ತಾರೀಖಿಗಿಂತ ಅನಂತರದ ಸಮಯದ್ದಾಗಿದೆ ಎಂದು ವಾದಿಸಿದ್ದಾರೆ. ಸೊಲೊಮೋನನು ತನ್ನ ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕೆಯ ಪ್ರಗತಿಪರ ವಿಕಾಸದಿಂದ, ಹಾಗೂ ದೇಶಸಂಚಾರಮಾಡುತ್ತಿದ್ದ ತನ್ನ ಉನ್ನತಾಧಿಕಾರಿಗಳು ಮತ್ತು ಹೊರಗಣ ಲೋಕದ ಬೇರೆ ಸಂಪರ್ಕದ ಮೂಲಕ ಶೇಖರಿಸಿದ್ದ ಜ್ಞಾನಭಂಡಾರವನ್ನು ಅವರು ಅಲಕ್ಷ್ಯಮಾಡುತ್ತಾರೆ. (1 ಅರ. 4:30, 34; 9:26-28; 10:1, 23, 24) ಎಫ್. ಸಿ. ಕುಕ್ ತಮ್ಮ ಬೈಬಲ್ ಕಾಮೆಂಟರಿ, ಸಂಪುಟ IV, ಪುಟ 622ರಲ್ಲಿ ಬರೆಯುವುದು: “ಆ ಮಹಾ ಹೀಬ್ರು ಅರಸನ ದೈನಂದಿನ ಹವ್ಯಾಸ ಮತ್ತು ಆಯ್ಕೆಯ ಬೆನ್ನಟ್ಟುವಿಕೆಗಳು ಸಾಧಾರಣವಾದ ಹೀಬ್ರು ಜೀವಿತ, ಯೋಚನೆ ಮತ್ತು ಭಾಷೆಯ ಕ್ಷೇತ್ರಕ್ಕಿಂತ ಎಷ್ಟೋ ಆಚೆಗೆ ಕೊಂಡೊಯ್ದಿದ್ದಿರಬೇಕು.”
8 ಆದರೂ, ಪ್ರಸಂಗಿ ಪುಸ್ತಕದ ಅಂಗೀಕೃತತೆಯ ಬಗ್ಗೆ ವಾದಿಸಲು ಹೊರಗಣ ಮೂಲಗಳು ನಿಜವಾಗಿಯೂ ಅಗತ್ಯವೊ? ಈ ಪುಸ್ತಕವನ್ನು ಪರೀಕ್ಷಿಸುವಲ್ಲಿ, ಅದರ ಆಂತರಿಕ ಸಾಮರಸ್ಯ ಮಾತ್ರವಲ್ಲ, ಮಿಕ್ಕ ಶಾಸ್ತ್ರದೊಂದಿಗಿನ ಅದರ ಸಾಮರಸ್ಯವೂ ಪ್ರಕಟವಾಗುತ್ತದೆ.
ಪ್ರಯೋಜನಕರವೇಕೆ?
15 ಪ್ರಸಂಗಿಯು ವಿಷಯಗಳ ನಿರಾಶಾವಾದಿ ಅಂಶಗಳಿಗೇ ಗಮನಕೊಡುವ ಪುಸ್ತಕವಾಗಿರುವ ಬದಲಿಗೆ ದೈವಿಕ ವಿವೇಕವೆಂಬ ಉಜ್ವಲವಾದ ರತ್ನಖಚಿತ ಪುಸ್ತಕವಾಗಿದೆ. ಸೊಲೊಮೋನನು ಅನೇಕ ಸಾಧನೆಗಳನ್ನು ವ್ಯರ್ಥವೆಂದು ಹೆಸರಿಸುವುದಾದರೂ ಅದರಲ್ಲಿ ಅವನು ಮೊರೀಯ ಬೆಟ್ಟದ ಮೇಲಿದ್ದ ಯೆಹೋವನ ಆಲಯದ ಕಟ್ಟಡವನ್ನಾಗಲಿ ಯೆಹೋವನ ಶುದ್ಧ ಆರಾಧನೆಯನ್ನಾಗಲಿ ವ್ಯರ್ಥವೆಂದು ಹೇಳುವುದಿಲ್ಲ. ದೇವರು ನಮಗೆ ಕೊಟ್ಟಿರುವ ಜೀವದ ಉಡುಗೊರೆಯನ್ನು ಅವನು ವ್ಯರ್ಥವೆಂದು ವರ್ಣಿಸದೆ, ಅದು ಮನುಷ್ಯನು ಸಂತೋಷಿಸಲಿಕ್ಕಾಗಿ ಮತ್ತು ಒಳ್ಳೆಯದನ್ನು ಮಾಡುವುದಕ್ಕಾಗಿ ಕೊಡಲ್ಪಟ್ಟಿದೆ ಎಂದು ತೋರಿಸುತ್ತಾನೆ. (3:12, 13; 5:18-20; 8:15) ದೇವರನ್ನು ಅಸಡ್ಡೆಮಾಡುವಂಥ ಕೆಲಸಗಳು ವ್ಯರ್ಥವಾಗಿವೆ ಇಲ್ಲವೆ ದುರವಸ್ಥೆಯ ಪ್ರಯತ್ನಗಳಾಗಿವೆ. ಒಬ್ಬ ತಂದೆ ತನ್ನ ಮಗನಿಗಾಗಿ ಸಂಪತ್ತನ್ನು ಶೇಖರಿಸಿಡಬಹುದು, ಆದರೆ ವಿಪತ್ತು ಬಂದೆರಗುವಾಗ ಅದು ಎಲ್ಲವನ್ನೂ ನಾಶಪಡಿಸಿ ಅವನನ್ನು ಏನೂ ಇಲ್ಲದವನಾಗಿ ಮಾಡಬಹುದು. ಆದುದರಿಂದ ಆಧ್ಯಾತ್ಮಿಕ ಐಶ್ವರ್ಯದ ಬಾಳುವ ಆಸ್ತಿಯನ್ನು ಒದಗಿಸುವುದು ಎಷ್ಟೋ ಮಿಗಿಲು. ಸಮೃದ್ಧಿಯುಳ್ಳವನಾಗಿದ್ದರೂ ಅದನ್ನು ಅನುಭವಿಸಲು ಅಸಮರ್ಥನಾಗುವುದು ಒಂದು ವಿಪತ್ತಾಗಿದೆ. ಲೋಕದ ಐಶ್ವರ್ಯವಂತರು ಕೈಯಲ್ಲಿ ಏನೂ ಇಲ್ಲದ ರೀತಿಯಲ್ಲಿ ಮರಣದಲ್ಲಿ “ಗತಿಸಿ” ಹೋಗುವಾಗ ದುರವಸ್ಥೆಯು ಅವರನ್ನು ಹಿಡಿಯುತ್ತದೆ.—5:13-15; 6:1, 2.
16 ಮತ್ತಾಯ 12:42ರಲ್ಲಿ, ಕ್ರಿಸ್ತ ಯೇಸು ತನ್ನನ್ನು ‘ಸೊಲೊಮೋನನಿಗಿಂತಲೂ ಹೆಚ್ಚಿನವನು’ ಎಂದು ಸೂಚಿಸಿಹೇಳಿದನು. ಸೊಲೊಮೋನನು ಯೇಸುವನ್ನು ಚಿತ್ರಿಸುವುದರಿಂದ, ಕೊಹೀಲೆತ್ ಪುಸ್ತಕದಲ್ಲಿರುವ ಸೊಲೊಮೋನನ ಮಾತುಗಳು ಯೇಸುವಿನ ಬೋಧನೆಗಳಿಗೆ ಹೊಂದಿಕೆಯಲ್ಲಿರುವುದನ್ನು ನಾವು ನೋಡುತ್ತೇವೊ? ಹೌದು, ನಾವು ಅನೇಕ ಸಮಾಂತರಗಳನ್ನು ಕಂಡುಕೊಳ್ಳುತ್ತೇವೆ! ಉದಾಹರಣೆಗೆ, ದೇವರ ಕೆಲಸದ ವಿಶಾಲವಾದ ವ್ಯಾಪ್ತಿಯನ್ನು ಎತ್ತಿತೋರಿಸುತ್ತಾ ಯೇಸು, “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾನೆ, ನಾನೂ ಕೆಲಸಮಾಡುತ್ತೇನೆ” ಎಂದು ಹೇಳಿದನು. (ಯೋಹಾ. 5:17) ಸೊಲೊಮೋನನು ಸಹ ದೇವರ ಕೆಲಸಗಳಿಗೆ ಸೂಚಿಸಿ ಹೀಗನ್ನುತ್ತಾನೆ: “ಲೋಕದಲ್ಲಿ ನಡೆಯುವದನ್ನು ಮನುಷ್ಯನು ಗ್ರಹಿಸಲಾರನು, ಎಷ್ಟು ಪ್ರಯಾಸಪಟ್ಟು ವಿಚಾರಿಸಿದರೂ ಗ್ರಹಿಸಲಾರನು; ಹೌದು ಜ್ಞಾನಿಯು ಗ್ರಹಿಸಬಹುದೆಂದರೂ ಗ್ರಹಿಸಲಾರನು ಎಂಬದಾಗಿ ನಾನು ದೇವರ ಕೆಲಸವನ್ನೆಲ್ಲಾ ದೃಷ್ಟಿಸಿ ತಿಳಿದುಕೊಂಡೆನು.”—ಪ್ರಸಂ. 8:17.
17 ಯೇಸು ಮತ್ತು ಸೊಲೊಮೋನ—ಇವರಿಬ್ಬರೂ ಸತ್ಯಾರಾಧಕರನ್ನು ಕೂಡಿಬರುವಂತೆ ಪ್ರೋತ್ಸಾಹಿಸಿದರು. (ಮತ್ತಾ. 18:20; ಪ್ರಸಂ. 4:9-12; 5:1) “ಯುಗದ ಸಮಾಪ್ತಿ” ಮತ್ತು ‘ಅನ್ಯದೇಶದವರ ಸಮಯಗಳ’ ವಿಷಯದಲ್ಲಿ ಯೇಸುವಿನ ಹೇಳಿಕೆಗಳು, “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು” ಎಂಬ ಸೊಲೊಮೋನನ ಹೇಳಿಕೆಗೆ ಹೊಂದಿಕೆಯಲ್ಲಿದೆ.—ಮತ್ತಾ. 24:3; ಲೂಕ 21:24; ಪ್ರಸಂ. 3:1.
18 ಎಲ್ಲಕ್ಕೂ ಮಿಗಿಲಾಗಿ, ಯೇಸುವೂ ಅವನ ಶಿಷ್ಯರೂ ಪ್ರಾಪಂಚಿಕತೆಯ ಬೀಳುಗುಂಡಿಗಳ ಕುರಿತು ಎಚ್ಚರಿಸುವುದರಲ್ಲಿ ಸೊಲೊಮೋನನನ್ನು ಜೊತೆಗೂಡುತ್ತಾರೆ. ವಿವೇಕವು ನಿಜಾಶ್ರಯ, ಏಕೆಂದರೆ “ತನ್ನನ್ನು ಹೊಂದಿದವನಿಗೆ ಅದು ಜೀವದಾಯಕ” ಎನ್ನುತ್ತಾನೆ ಸೊಲೊಮೋನನು. “ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು” ಎಂದು ಹೇಳುತ್ತಾನೆ ಯೇಸು. (ಪ್ರಸಂ. 7:12; ಮತ್ತಾ. 6:33) ಪ್ರಸಂಗಿ 5:10ರಲ್ಲಿ ಹೀಗೆ ಬರೆದದೆ: “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು. ಇದು ಸಹ ವ್ಯರ್ಥ.” ಇದಕ್ಕೆ ತೀರ ಹೋಲಿಕೆಯಲ್ಲಿ, ಪೌಲನು 1 ತಿಮೊಥೆಯ 6:6-19ರಲ್ಲಿ, “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ” ಎಂಬ ಸಲಹೆಯನ್ನು ಕೊಡುತ್ತಾನೆ. ಬೈಬಲ್ ಬೋಧಿಸುವ ಬೇರೆ ವಿಷಯಗಳಿಗೂ ಹೋಲುವ ಸಮಾಂತರವಾದ ವಚನಗಳಿವೆ.—ಪ್ರಸಂ. 3:17—ಅ. ಕೃ. 17:31; ಪ್ರಸಂ. 4:1—ಯಾಕೋ. 5:4; ಪ್ರಸಂ. 5:1, 2—ಯಾಕೋ. 1:19; ಪ್ರಸಂ. 6:12—ಯಾಕೋ. 4:14; ಪ್ರಸಂ. 7:20—ರೋಮಾ. 3:23; ಪ್ರಸಂ. 8:17—ರೋಮಾ. 11:33.
19 ಭೂಮಿಯ ಮೇಲೆ ಮಾನವನಾಗಿದ್ದಾಗ ವಿವೇಕಿ ಅರಸನಾದ ಸೊಲೊಮೋನನ ವಂಶಸ್ಥನಾಗಿದ್ದ ದೇವರ ಪ್ರಿಯ ಕುಮಾರನಾದ ಯೇಸು ಕ್ರಿಸ್ತನ ರಾಜ್ಯಾಳ್ವಿಕೆಯು ಒಂದು ಹೊಸ ಭೂಸಮಾಜವನ್ನು ಸ್ಥಾಪಿಸುವುದು. (ಪ್ರಕ. 21:1-5) ಸೊಲೊಮೋನನು ತನ್ನ ರಾಜ್ಯದಲ್ಲಿ ತನ್ನ ಪ್ರಜೆಗಳ ಮಾರ್ಗದರ್ಶನಕ್ಕಾಗಿ ಬರೆದ ಸಂಗತಿಗಳು, ಈಗ ಯಾರು ಕ್ರಿಸ್ತ ಯೇಸುವಿನ ಕೈಯಲ್ಲಿರುವ ದೇವರ ರಾಜ್ಯದಲ್ಲಿ ನಿರೀಕ್ಷೆಯಿಡುತ್ತಾರೊ ಅವರೆಲ್ಲರಿಗೆ ಮಹತ್ವಪೂರ್ಣ ಆಸಕ್ತಿಯ ವಿಷಯಗಳಾಗಿವೆ. ಆ ಆಳ್ವಿಕೆಯಲ್ಲಿ ಮಾನವಕುಲವು, ಆ ಜಮಾವಣೆಗಾರನು ಬರೆದಿಟ್ಟ ಅದೇ ವಿವೇಕಭರಿತ ಮೂಲತತ್ತ್ವಗಳಿಗನುಸಾರ ಜೀವಿಸಿ, ದೇವರ ಉಡುಗೊರೆಯಾದ ಸಂತೋಷಭರಿತ ಜೀವನದಲ್ಲಿ ನಿತ್ಯಕ್ಕೂ ಹರ್ಷಿಸುವುದು. ಯೆಹೋವನ ರಾಜ್ಯದಡಿಯಲ್ಲಿ ಜೀವನದ ಸಂತೋಷಗಳನ್ನು ಪೂರ್ಣವಾಗಿ ಅನುಭವಿಸುವರೆ, ಆತನ ಆರಾಧನೆಯಲ್ಲಿ ಜಮಾಯಿತರಾಗುವ ಸಮಯವು ಇದೇ ಆಗಿದೆ.—ಪ್ರಸಂ. 3:12, 13; 12:13, 14.