ಬೈಬಲ್ ಪುಸ್ತಕ ನಂಬರ್ 20—ಜ್ಞಾನೋಕ್ತಿಗಳು
ಹೇಳಿದವರು: ಸೊಲೊಮೋನ್, ಆಗೂರ, ಲೆಮೂವೇಲ
ಬರೆಯಲ್ಪಟ್ಟ ಸ್ಥಳ: ಯೆರೂಸಲೇಮ್
ಬರೆದು ಮುಗಿಸಿದ್ದು: ಸುಮಾರು ಸಾ.ಶ.ಪೂ. 717
ದಾವೀದನ ಪುತ್ರ ಸೊಲೊಮೋನನು ಸಾ.ಶ.ಪೂ. 1037ರಲ್ಲಿ ಇಸ್ರಾಯೇಲಿನ ರಾಜನಾಗಿ, ಆ “ಮಹಾಜನಾಂಗವನ್ನು ಆಳುವದಕ್ಕೆ” “ಜ್ಞಾನವಿವೇಕಗಳನ್ನು” ದಯಪಾಲಿಸಬೇಕೆಂದು ಪ್ರಾರ್ಥಿಸಿದಾಗ, ಯೆಹೋವನು ಅವನಿಗೆ “ಜ್ಞಾನವಿವೇಕಗಳನ್ನೂ ಮನೋವಿಶಾಲತೆಯನ್ನೂ” ಅಥವಾ ತಿಳಿವಳಿಕೆಯನ್ನು ಅನುಗ್ರಹಿಸಿದನು. (2 ಪೂರ್ವ. 1:10-12; 1 ಅರ. 3:12; 4:30, 31) ಇದರ ಪರಿಣಾಮವಾಗಿ, ಸೊಲೊಮೋನನು “ಮೂರು ಸಾವಿರ ಜ್ಞಾನೋಕ್ತಿಗಳನ್ನು ಹೇಳಿದನು.” (1 ಅರ. 4:32, NIBV) ಹೀಗೆ ನುಡಿಯಲ್ಪಟ್ಟ ಜ್ಞಾನೋಕ್ತಿಗಳಲ್ಲಿ ಕೆಲವು, ಬೈಬಲಿನ ಜ್ಞಾನೋಕ್ತಿಗಳು ಪುಸ್ತಕದಲ್ಲಿ ದಾಖಲೆಯಾಗಿವೆ. ಸೊಲೊಮೋನನ ವಿವೇಕವು ನಿಜವಾಗಿ “ದೇವರು . . . ಅನುಗ್ರಹಿಸಿದ” ವಿವೇಕವಾಗಿದುದರಿಂದ, ನಾವು ಈ ಜ್ಞಾನೋಕ್ತಿಗಳನ್ನು ಅಧ್ಯಯನಮಾಡುವಾಗ ವಾಸ್ತವದಲ್ಲಿ ಯೆಹೋವ ದೇವರ ವಿವೇಕದ ಬಗ್ಗೆ ಅಧ್ಯಯನಮಾಡುತ್ತಿದ್ದೇವೆ. (1 ಅರ. 10:23, 24) ಈ ಜ್ಞಾನೋಕ್ತಿಗಳು ಶಾಶ್ವತ ಸತ್ಯಗಳನ್ನು ಸಾರಾಂಶಿಸುತ್ತವೆ. ಅವು ಪ್ರಥಮ ಬಾರಿ ನುಡಿಯಲ್ಪಟ್ಟಾಗ ಎಷ್ಟು ಸದ್ಯೋಚಿತವಾಗಿದ್ದವೊ ಈಗಲೂ ಅಷ್ಟೇ ಸದ್ಯೋಚಿತವಾಗಿವೆ.
2 ಈ ದೈವಿಕ ಮಾರ್ಗದರ್ಶನವನ್ನು ಒದಗಿಸಲು ಸೊಲೊಮೋನನ ಆಳ್ವಿಕೆಯು ಯೋಗ್ಯವಾದ ಸಮಯವಾಗಿತ್ತು. ಸೊಲೊಮೋನನು “ಯೆಹೋವನ ಸಿಂಹಾಸನದಲ್ಲಿ” ಕುಳಿತನೆಂದು ಹೇಳಲಾಗಿತ್ತು. ಇಸ್ರಾಯೇಲಿನ ದೇವಪ್ರಭುತ್ವಾತ್ಮಕ ರಾಜ್ಯವು ವೈಭವದ ಪರಮಾವಧಿಗೇರಿದ ಸಮಯ ಅದಾಗಿತ್ತು ಮತ್ತು ಸೊಲೊಮೋನನಿಗೆ “ಹೆಚ್ಚಿನ ವೈಭವವನ್ನು” ಅನುಗ್ರಹಿಸಲಾಗಿತ್ತು. (1 ಪೂರ್ವ. 29:23, 25) ಅದು ಶಾಂತಿ, ಸಮೃದ್ಧಿ ಮತ್ತು ಸುಭದ್ರತೆಯಿದ್ದ ಸಮಯವಾಗಿತ್ತು. (1 ಅರ. 4:20-25) ಆದರೆ ಈ ದೇವಪ್ರಭುತ್ವಾತ್ಮಕ ಆಳ್ವಿಕೆಯ ಸಮಯದಲ್ಲೂ, ಮಾನವ ಅಪರಿಪೂರ್ಣತೆಗಳ ಕಾರಣ ಜನರಿಗೆ ವೈಯಕ್ತಿಕ ಸಮಸ್ಯೆಗಳೂ ಕಷ್ಟಗಳೂ ಇದ್ದೇ ಇದ್ದವು. ಆದುದರಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕ್ಕಾಗಿ ಜನರು ವಿವೇಕಿ ರಾಜನಾದ ಸೊಲೊಮೋನನ ಕಡೆಗೆ ತಿರುಗುತ್ತಿದ್ದರೆಂಬುದು ಗ್ರಾಹ್ಯ. (1 ಅರ. 3:16-28) ಹೀಗೆ, ಈ ಅನೇಕ ಮೊಕದ್ದಮೆಗಳಲ್ಲಿ ತೀರ್ಪುನೀಡುತ್ತಿದ್ದಾಗ, ಅವನು ಜೀವನದಲ್ಲಿ ದಿನೇ ದಿನೇ ಎದ್ದೇಳುವ ಪರಿಸ್ಥಿತಿಗಳಿಗೆ ಸೂಕ್ತವಾಗಿದ್ದ ನಾಣ್ಣುಡಿಗಳನ್ನು ನುಡಿದನು. ಸಂಕ್ಷಿಪ್ತ ಹಾಗೂ ಮನಸ್ಸಿನಲ್ಲಿ ಅಚ್ಚೊತ್ತುವಂಥ ಈ ನುಡಿಗಳನ್ನು, ದೇವರ ಚಿತ್ತಾನುಸಾರ ತಮ್ಮ ಜೀವಿತಗಳನ್ನು ಕ್ರಮಪಡಿಸಬಯಸುತ್ತಿದ್ದವರು ಅತ್ಯಮೂಲ್ಯವೆಂದು ಎಣಿಸುತ್ತಿದ್ದರು.
3 ಜ್ಞಾನೋಕ್ತಿಗಳನ್ನು ಸೊಲೊಮೋನನು ಬರೆದನೆಂದು ದಾಖಲೆಯು ತಿಳಿಸುವುದಿಲ್ಲ. ಆದರೆ ಅವನು ಜ್ಞಾನೋಕ್ತಿಗಳನ್ನು “ಹೇಳಿದನು” ಎಂದು ಅದು ತಿಳಿಸುತ್ತದಲ್ಲದೆ, ಅವನು “ಅನೇಕಾನೇಕ ಜ್ಞಾನೋಕ್ತಿಗಳನ್ನು . . . ಪರೀಕ್ಷಿಸಿ ಕ್ರಮಪಡಿಸಿದನು” ಎಂದು ತಿಳಿಸುತ್ತಾ, ಮುಂದೆ ಬಳಸಲಿಕ್ಕಾಗಿ ಅವುಗಳನ್ನು ಭದ್ರವಾಗಿ ಇಡುವುದರಲ್ಲಿ ಅವನಿಗೆ ಆಸಕ್ತಿಯಿತ್ತು ಎಂಬುದನ್ನು ತೋರಿಸುತ್ತದೆ. (1 ಅರ. 4:32, NIBV; ಪ್ರಸಂ. 12:9) ದಾವೀದ ಮತ್ತು ಸೊಲೊಮೋನರ ಕಾಲದಲ್ಲಿ ಆಸ್ಥಾನಾಧಿಕಾರಿಗಳ ಪಟ್ಟಿಗಳಲ್ಲಿ ಅಧಿಕೃತ ಲೇಖಕರಿದ್ದರು. (2 ಸಮು. 20:25; 2 ಅರ. 12:10) ಸೊಲೊಮೋನನ ಆಸ್ಥಾನದಲ್ಲಿದ್ದ ದಾಖಲೆಗಾರರು ಅವನ ಜ್ಞಾನೋಕ್ತಿಗಳನ್ನು ಬರೆದು ಸಂಗ್ರಹಿಸಿದರೊ ಇಲ್ಲವೊ ಎಂಬುದು ನಮಗೆ ತಿಳಿದಿಲ್ಲವಾದರೂ, ಅವನಷ್ಟು ಸಾಮರ್ಥ್ಯವಿದ್ದ ಯಾವನೇ ಪ್ರಭುವಿನ ಮಾತುಗಳು ಬಹಳ ಮೌಲ್ಯವುಳ್ಳವುಗಳೆಂದು ಎಣಿಸಲ್ಪಟ್ಟು, ಸಹಜವಾಗಿಯೇ ಬರೆದಿಡಲ್ಪಡುತ್ತಿದ್ದವು ಎಂಬುದು ನಿಶ್ಚಯ. ಈ ಪುಸ್ತಕವು ಬೇರೆ ಸಂಗ್ರಹಗಳಿಂದ ಸಂಕಲಿಸಲ್ಪಟ್ಟಿತೆಂದು ಸಾಮಾನ್ಯವಾಗಿ ಒಪ್ಪಲಾಗುತ್ತದೆ.
4 ಜ್ಞಾನೋಕ್ತಿಗಳ ಪುಸ್ತಕವನ್ನು ಈ ಐದು ವಿಭಾಗಗಳಾಗಿ ಮಾಡಬಹುದು: (1) “ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು” ಎಂದು ಆರಂಭಗೊಳ್ಳುವ 1-9ರ ವರೆಗಿನ ಅಧ್ಯಾಯಗಳು; (2) “ಸೊಲೊಮೋನನ ಜ್ಞಾನೋಕ್ತಿಗಳು” ಎಂದು ವರ್ಣಿಸಲ್ಪಟ್ಟಿರುವ 10-24ರ ವರೆಗಿನ ಅಧ್ಯಾಯಗಳು; (3) “ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು; ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಇವುಗಳನ್ನು ಸಂಗ್ರಹಿಸಿ ಬರೆದರು” ಎಂದು ಆರಂಭವಾಗುವ ವಿಭಾಗದ 25-29ರ ವರೆಗಿನ ಅಧ್ಯಾಯಗಳು; (4) “ಯಾಕೆ ಎಂಬವನ ಮಗನಾದ ಆಗೂರನ ಮಾತುಗಳು” ಎಂದು ಪರಿಚಯಿಸಲ್ಪಟ್ಟಿರುವ 30ನೇ ಅಧ್ಯಾಯ. (5) “ಅರಸನಾದ ಲೆಮೂವೇಲನ ಮಾತುಗಳು ಎಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವೋಕ್ತಿ” ಎಂದು ಹೇಳಲ್ಪಟ್ಟಿರುವ 31ನೇ ಅಧ್ಯಾಯ. ಹೀಗೆ ಸೊಲೊಮೋನನು ಜ್ಞಾನೋಕ್ತಿಗಳಲ್ಲಿ ಅಧಿಕಾಂಶ ಭಾಗದ ಮೂಲನಾಗಿದ್ದಾನೆ. ಆಗೂರ ಮತ್ತು ಲೆಮೂವೇಲನ ವಿಷಯದಲ್ಲಿ ಹೇಳುವುದಾದರೆ, ಅವರ ಗುರುತು ನಿಷ್ಕೃಷ್ಟವಾಗಿ ತಿಳಿದು ಬಂದಿರುವುದಿಲ್ಲ. ಲೆಮೂವೇಲ ಎಂಬುದು ಸೊಲೊಮೋನನಿಗಿದ್ದ ಇನ್ನೊಂದು ಹೆಸರಾಗಿದ್ದಿರಬಹುದೆಂಬುದು ಕೆಲವು ಮಂದಿ ವ್ಯಾಖ್ಯಾನಕಾರರು ಭಾವಿಸುತ್ತಾರೆ.
5 ಜ್ಞಾನೋಕ್ತಿಗಳು ಬರೆಯಲ್ಪಟ್ಟು ಸಂಗ್ರಹಿಸಲ್ಪಟ್ಟದ್ದು ಯಾವಾಗ? ಇವುಗಳಲ್ಲಿ ಹೆಚ್ಚಿನವು ಸೊಲೊಮೋನನು ಪಥಭ್ರಷ್ಟನಾಗುವ ಮೊದಲು ಆಳುತ್ತಿದ್ದ ಸಮಯದಲ್ಲಿ (ಸಾ.ಶ.ಪೂ. 1037-998) ಬರೆಯಲ್ಪಟ್ಟಿತೆಂಬುದರಲ್ಲಿ ಸಂದೇಹವಿಲ್ಲ. ಆಗೂರ ಮತ್ತು ಲೆಮೂವೇಲನ ಗುರುತು ನಿರ್ದಿಷ್ಟವಾಗಿ ತಿಳಿಯದಿರುವ ಕಾರಣ ಅವರ ಜ್ಞಾನೋಕ್ತಿಗಳ ಬಗ್ಗೆ ಯಾವುದೇ ತಾರೀಖನ್ನು ಕೊಡಲು ಸಾಧ್ಯವಿಲ್ಲ. ಆ ಸಂಗ್ರಹಗಳಲ್ಲಿ ಒಂದು ಹಿಜ್ಕೀಯನ ಆಳ್ವಿಕೆಯ ಸಮಯದಲ್ಲಿ (ಸಾ.ಶ.ಪೂ. 745-717) ಮಾಡಲ್ಪಟ್ಟಿರುವ ಕಾರಣ, ಅಂತಿಮ ಸಂಗ್ರಹವು ಅವನ ಆಳ್ವಿಕೆಗಿಂತ ಮೊದಲು ಮಾಡಲ್ಪಟ್ಟಿರಲು ಸಾಧ್ಯವಿಲ್ಲ. ಕೊನೆಯ ಎರಡು ವಿಭಾಗಗಳು ಕೂಡ ರಾಜ ಹಿಜ್ಕೀಯನ ವ್ಯಾಪ್ತಿಯಲ್ಲಿ ಸಂಗ್ರಹಿಸಲ್ಪಟ್ಟವೊ? ಇದಕ್ಕೆ ಉತ್ತರವಾಗಿ, ನೂತನ ಲೋಕ ಭಾಷಾಂತರ—ರೆಫರೆನ್ಸ್ಸ್ಗಳೊಂದಿಗೆ (ಇಂಗ್ಲಿಷ್) ಬೈಬಲಿನಲ್ಲಿ ಜ್ಞಾನೋಕ್ತಿ 31:31ರ ಬಗ್ಗೆ ತಿಳಿವಳಿಕೆ ನೀಡುವ ಪಾದಟಿಪ್ಪಣಿಯೊಂದಿದೆ: “ಹೀಬ್ರು ಗ್ರಂಥಪಾಠದ ಕೆಲವು ಆವೃತ್ತಿಗಳು ಚೆಹ್ತ್, ಸೇಯಿನ್, ಕೋಫ್ (חזק) ಎಂಬ ತ್ರ್ಯಕ್ಷರವನ್ನು ಅಂದರೆ ಮೂರು ಅಕ್ಷರಗಳನ್ನು ತೋರಿಸುತ್ತವೆ. ಇವು, ನಕಲುಮಾಡುವ ಈ ಕೆಲಸವನ್ನು ತನ್ನ ದಾಖಲೆಗಾರರು ಮುಗಿಸಿದ್ದಾರೆಂದು ಸೂಚಿಸುವ ರಾಜ ಹಿಜ್ಕೀಯನ ಸಹಿಯನ್ನು ಪ್ರತಿನಿಧಿಸುತ್ತವೆ.”
6 ಆರಂಭದ ಹೀಬ್ರು ಬೈಬಲ್ಗಳಲ್ಲಿ ಈ ಪುಸ್ತಕವನ್ನು ಅದರ ಮೊದಲ ಪದವಾದ ಮಿಶ್ಲೇ ಅಂದರೆ “ಜ್ಞಾನೋಕ್ತಿಗಳು” ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮಿಶ್ಲೇ ಎಂಬ ಪದ ಹೀಬ್ರು ನಾಮಪದವಾದ ಮಶಾಲ್ ಎಂಬುದರ ಬಹುವಚನ, ರೂಪನಿಷ್ಪತ್ತಿಯಾಗಿದೆ. ಮತ್ತು ಈ ನಾಮಪದವು “ಸಮಾನವಾಗಿರು” ಇಲ್ಲವೆ “ಸದೃಶವಾಗಿರು” ಎಂಬ ಅರ್ಥವಿರುವ ಮೂಲಪದದಿಂದ ಬಂದಿದೆಯೆಂದು ಸಾಮಾನ್ಯವಾಗಿ ಅಭಿಪ್ರಯಿಸಲಾಗುತ್ತದೆ. ಈ ಪದಗಳು ಈ ಪುಸ್ತಕದ ಒಳವಿಷಯವನ್ನು ಸೂಕ್ತವಾಗಿ ವರ್ಣಿಸುತ್ತವೆ, ಏಕೆಂದರೆ ಜ್ಞಾನೋಕ್ತಿಗಳು ಅನೇಕವೇಳೆ, ಸಾರೂಪ್ಯ ಅಥವಾ ಹೋಲಿಕೆಗಳನ್ನು ಬಳಸುವ ಮತ್ತು ಕೇಳುಗನು ಯೋಚಿಸುವಂತೆ ರೂಪಿಸಲ್ಪಟ್ಟಿರುವ ಸತ್ವಪೂರ್ಣ ನುಡಿಗಳಾಗಿವೆ. ಈ ಜ್ಞಾನೋಕ್ತಿಗಳ ಸಂಕ್ಷಿಪ್ತ ರೂಪವು ಅವನ್ನು ಅರ್ಥಮಾಡಿಕೊಳ್ಳಲು ಸುಲಭವೂ ಆಸಕ್ತಿಕರವೂ ಆಗಿ ಮಾಡುತ್ತದೆ, ಮತ್ತು ಈ ರೂಪದಲ್ಲಿ ಅವನ್ನು ಕಲಿಸಲು, ಕಲಿಯಲು ಮತ್ತು ಜ್ಞಾಪಿಸಿಕೊಳ್ಳಲು ಸುಲಭವಾಗುತ್ತದೆ. ಇದರಿಂದ ವಿಚಾರವು ನಮ್ಮ ಮನಸ್ಸಿಗೆ ಅಂಟಿಕೊಳ್ಳುತ್ತದೆ.
7 ಈ ಪುಸ್ತಕದಲ್ಲಿರುವ ಅಭಿವ್ಯಕ್ತಿ ಶೈಲಿಯೂ ತುಂಬ ಆಸಕ್ತಿಕರವಾಗಿದೆ. ಅದು ಹೀಬ್ರು ಕವಿತೆಯ ಶೈಲಿಯಲ್ಲಿದೆ. ಈ ಪುಸ್ತಕದ ಹೆಚ್ಚಿನ ಭಾಗದ ರಚನೆಯು ಸಮಾಂತರ ಕವಿತಾರೂಪದಲ್ಲಿದೆ. ಇದು, ಗೆರೆಗಳ ಅಥವಾ ಚರಣಗಳ ಅಂತ್ಯವನ್ನು ಪ್ರಾಸಬದ್ಧವಾಗಿಸುವುದಿಲ್ಲ ಇಲ್ಲವೆ ಒಂದೇ ರೀತಿ ಧ್ವನಿಸುವಂತೆ ಮಾಡುವುದಿಲ್ಲ. ಇದರಲ್ಲಿ ಛಂದೋಗತಿಯ ಪಂಕ್ತಿಗಳು ಸಮಾಂತರ ಆಲೋಚನೆಗಳನ್ನು ಅಥವಾ ವಿಚಾರಗಳನ್ನು ಕೊಡುವುದು ಸೇರಿದೆ. ಅದರ ರಮ್ಯತೆ ಮತ್ತು ಶಿಕ್ಷಣಶಕ್ತಿಯು ಈ ಆಲೋಚನಾ ಛಂದೋಗತಿಯಲ್ಲಿದೆ. ಆಲೋಚನೆಗಳು ಒಂದೊ ಸಮಾನಾರ್ಥಕವಾಗಿರಬಹುದು ಇಲ್ಲವೆ ವೈದೃಶ್ಯಾರ್ಥಕವಾಗಿರಬಹುದಾದರೂ ಆ ಆಲೋಚನೆಗೆ ವ್ಯಾಪ್ತಿಯನ್ನು ಕೊಡಲು, ವಿಸ್ತರಿಸಿ ಹೇಳಲು ಮತ್ತು ಅದರಲ್ಲಿರುವ ಅರ್ಥವನ್ನು ಖಂಡಿತ ವ್ಯಕ್ತಪಡಿಸಲು ಆ ಸಮಾಂತರತೆಗೆ ಸಾಮರ್ಥ್ಯವಿದೆ. ಸಮಾನಾರ್ಥಕ ಸಮಾಂತರತೆಯ ದೃಷ್ಟಾಂತಗಳು ಜ್ಞಾನೋಕ್ತಿ 11:25; 16:18; ಮತ್ತು 18:15ರಲ್ಲಿವೆ. ಹೆಚ್ಚು ಸಂಖ್ಯೆಯಲ್ಲಿರುವ ವೈದೃಶ್ಯಾರ್ಥಕ ಸಮಾಂತರತೆಯ ದೃಷ್ಟಾಂತಗಳು ಜ್ಞಾನೋಕ್ತಿ 10:7, 30; 12:25; 13:25; ಮತ್ತು 15:8ರಲ್ಲಿವೆ. ಇನ್ನೊಂದು ವಿಧದ ರಚನೆಯನ್ನು ಪುಸ್ತಕದ ಅತಿ ಕೊನೆಯಲ್ಲಿ ನೋಡುತ್ತೇವೆ. (ಜ್ಞಾನೋ. 31:10-31) ಹೀಬ್ರು ಭಾಷೆಯಲ್ಲಿ ಈ 22 ವಚನಗಳನ್ನು, ಹೀಬ್ರು ಅಕ್ಷರಮಾಲೆಯ ಕ್ರಮಾನುಸಾರವಾಗಿ ಬರುವ ಅಕ್ಷರಗಳಿಂದ ಪ್ರತಿಯೊಂದು ವಚನ ಆರಂಭಗೊಳ್ಳುವಂತೆ ಏರ್ಪಡಿಸಲಾಗಿದೆ. ಇದು ಅನೇಕ ಕೀರ್ತನೆಗಳಲ್ಲಿಯೂ ಉಪಯೋಗಿಸಲಾಗಿರುವ ಪದ್ಯಬಂಧ ಶೈಲಿಯಲ್ಲಿದೆ. ಈ ಶೈಲಿಯ ಸೌಂದರ್ಯಕ್ಕೆ ಸಮವಾಗಿರುವ ಇನ್ನಾವ ಶೈಲಿಯೂ ಪುರಾತನಕಾಲದ ಬರಹಗಳಲ್ಲಿ ಇಲ್ಲ.
8 ಜ್ಞಾನೋಕ್ತಿಗಳ ವಿಶ್ವಾಸಾರ್ಹತೆಯು, ಆದಿ ಕ್ರೈಸ್ತರು ವರ್ತನಾ ನಿಯಮಗಳನ್ನು ತಿಳಿಸಲಿಕ್ಕಾಗಿ ಈ ಪುಸ್ತಕವನ್ನು ವ್ಯಾಪಕವಾಗಿ ಉಪಯೋಗಿಸಿದ ಸಂಗತಿಯಿಂದ ತೋರಿಬರುತ್ತದೆ. ಯಾಕೋಬನಿಗೆ ಜ್ಞಾನೋಕ್ತಿಗಳ ಉತ್ತಮ ಪರಿಚಯವಿತ್ತೆಂದು ವ್ಯಕ್ತವಾಗುತ್ತದೆ. ಅವನು ಇದರ ಮೂಲಸೂತ್ರಗಳನ್ನು ಕ್ರೈಸ್ತ ನಡತೆಯ ಕುರಿತು ಕೊಟ್ಟ ಉತ್ತಮ ಸಲಹೆಯಲ್ಲಿ ಉಪಯೋಗಿಸಿದನು. (ಜ್ಞಾನೋಕ್ತಿ 14:29; 17:27ನ್ನು ಯಾಕೋಬ 1:19, 20ರೊಂದಿಗೂ, ಜ್ಞಾನೋಕ್ತಿ 3:34ನ್ನು ಯಾಕೋಬ 4:6ರೊಂದಿಗೂ, ಜ್ಞಾನೋಕ್ತಿ 27:1ನ್ನು ಯಾಕೋಬ 4:13, 14ರೊಂದಿಗೂ ಹೋಲಿಸಿರಿ.) ಜ್ಞಾನೋಕ್ತಿಗಳ ನೇರವಾದ ಉದ್ಧರಣೆಗಳನ್ನು ಸಹ ಈ ಕೆಳಗಿನ ವಚನಗಳಲ್ಲಿ ನೋಡಬಹುದು: ರೋಮಾಪುರ 12:20—ಜ್ಞಾನೋಕ್ತಿ 25:21, 22; ಇಬ್ರಿಯ 12:5, 6—ಜ್ಞಾನೋಕ್ತಿ 3:11, 12; 2 ಪೇತ್ರ 2:22—ಜ್ಞಾನೋಕ್ತಿ 26:11.
9 ಇದಕ್ಕೆ ಕೂಡಿಸಿ, ಜ್ಞಾನೋಕ್ತಿಗಳು ಪುಸ್ತಕವು ಅದು ಬೈಬಲಿನ ಮಿಕ್ಕ ಭಾಗದೊಂದಿಗೆ ಸಾಮರಸ್ಯದಿಂದಿದೆ ಎಂದು ತೋರಿಸುವ ಮೂಲಕ ಅದು ‘ಶಾಸ್ತ್ರಗಳ’ ಭಾಗವಾಗಿದೆ ಎಂದು ರುಜುಪಡಿಸುತ್ತದೆ. ಮೋಶೆಯ ಧರ್ಮಶಾಸ್ತ್ರ, ಯೇಸುವಿನ ಬೋಧನೆ, ಮತ್ತು ಅವನ ಶಿಷ್ಯರ ಹಾಗೂ ಅಪೊಸ್ತಲರ ಬರಹಗಳಲ್ಲಿರುವ ವಿಚಾರಗಳೊಂದಿಗೆ ಇದು ಗಮನಾರ್ಹವಾದ ಏಕತೆಯನ್ನು ತೋರಿಸುತ್ತದೆ. (ಜ್ಞಾನೋಕ್ತಿ 10:16—1 ಕೊರಿಂಥ 15:58 ಮತ್ತು ಗಲಾತ್ಯ 6:8, 9; ಜ್ಞಾನೋಕ್ತಿ 12:25—ಮತ್ತಾಯ 6:25; ಜ್ಞಾನೋಕ್ತಿ 20:20—ವಿಮೋಚನಕಾಂಡ 20:12 ಮತ್ತು ಮತ್ತಾಯ 15:4ನ್ನು ನೋಡಿ.) ಭೂಮಿಯು ಮಾನವನಿವಾಸಕ್ಕಾಗಿ ಸಿದ್ಧಗೊಳಿಸಲ್ಪಡುತ್ತಿದ್ದ ಸಂಗತಿಗಳ ಕುರಿತು ಮಾತಾಡುವಾಗಲೂ, ಬೇರೆ ಬೈಬಲ್ ಲೇಖಕರ ವಿಚಾರದೊಂದಿಗಿನ ಏಕತೆ ಇದರಲ್ಲಿದೆ.—ಜ್ಞಾನೋ. 3:19, 20; ಆದಿ. 1:6, 7; ಯೋಬ 38:4-11; ಕೀರ್ತ. 104:5-9.
10 ಈ ಪುಸ್ತಕವು ದೇವಪ್ರೇರಿತವಾಗಿದೆ ಎಂಬುದಕ್ಕೆ ಅದರ ವೈಜ್ಞಾನಿಕ ನಿಷ್ಕೃಷ್ಟತೆಯು ಸಹ ಸಾಕ್ಷಿ ನೀಡುತ್ತದೆ. ತಿಳಿಸಲ್ಪಟ್ಟಿರುವ ಜ್ಞಾನೋಕ್ತಿಯಲ್ಲಿ ರಾಸಾಯನಿಕ, ವೈದ್ಯಕೀಯ ಅಥವಾ ಆರೋಗ್ಯ ಮೂಲಸೂತ್ರಗಳು ಒಳಗೊಂಡಿದ್ದರೂ ಅದು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆ. ಜ್ಞಾನೋಕ್ತಿ 25:20 ಆಮ್ಲೀಯ-ಕ್ಷಾರಕ ಪ್ರತಿಕ್ರಿಯೆಯ ಕುರಿತು ಹೇಳುತ್ತದೆಂಬುದು ವ್ಯಕ್ತ. ಜ್ಞಾನೋಕ್ತಿ 31:4, 5 ಮದ್ಯಸಾರವು ಆಲೋಚನಾ ಪ್ರಕ್ರಿಯೆಗಳನ್ನು ಮಂದಗೊಳಿಸುತ್ತದೆಂಬ ಆಧುನಿಕ ವೈಜ್ಞಾನಿಕ ಕಂಡುಹಿಡಿತಗಳೊಂದಿಗೆ ಹೊಂದಿಕೆಯಲ್ಲಿದೆ. ಜೇನುತುಪ್ಪವು ಆರೋಗ್ಯಕರವಾದ ಆಹಾರವೆಂಬುದನ್ನು ಅನೇಕ ಮಂದಿ ಡಾಕ್ಟರರು ಮತ್ತು ಪೋಷಣತಜ್ಞರು ಒಪ್ಪುತ್ತಾರೆ; ಇದು “ಕಂದಾ, ಜೇನು ಚೆನ್ನಾಗಿದೆಯಲ್ಲವೆ, . . . ತಿನ್ನು” ಎಂಬ ಜ್ಞಾನೋಕ್ತಿಯನ್ನು ನೆನಪಿಗೆ ತರುತ್ತದೆ. (ಜ್ಞಾನೋ. 24:13) ಮನೋದೈಹಿಕ ಶಾಸ್ತ್ರದ ವಿಷಯದಲ್ಲಿ ಮಾಡಲ್ಪಟ್ಟಿರುವ ಅವಲೋಕನಗಳು ಜ್ಞಾನೋಕ್ತಿಗಳಿಗೆ ಹೊಸದೇನಲ್ಲ. “ಹರ್ಷಹೃದಯವು ಒಳ್ಳೇ ಔಷಧ.”—17:22; 15:17.
11 ಜ್ಞಾನೋಕ್ತಿಗಳ ಪುಸ್ತಕವು ಮಾನವನ ಪ್ರತಿಯೊಂದೂ ಆವಶ್ಯಕತೆ ಮತ್ತು ಸನ್ನಿವೇಶವನ್ನು ಎಷ್ಟು ಪೂರ್ತಿಯಾಗಿ ಚರ್ಚಿಸುತ್ತದೆಂದರೆ ಒಂದು ಪ್ರಮಾಣಗ್ರಂಥ ಹೇಳಿದ್ದು: “[ಜ್ಞಾನೋಕ್ತಿಗಳ ಪುಸ್ತಕದಲ್ಲಿ] ಜೀವನದ ಯಾವುದೇ ಸಂಬಂಧಕ್ಕೂ ತಕ್ಕದಾದ ಶಿಕ್ಷಣವಿದೆ, ಯಾವುದೇ ಒಳ್ಳೆಯ ಪ್ರವೃತ್ತಿಗೆ ತಕ್ಕದಾದ ಪ್ರೇರಣೆ ಮತ್ತು ಕೆಟ್ಟ ಪ್ರವೃತ್ತಿಗೆ ತಕ್ಕದಾದ ತಿದ್ದುಪಾಟು ಇದೆ. ಎಲ್ಲೆಡೆಯೂ ಮಾನವ ವಿಚಾರಗಳನ್ನು ದೇವರೊಂದಿಗಿನ ವಿಚಾರಗಳ ಸಂಬಂಧಕ್ಕೆ ತರಲಾಗುತ್ತದೆ, . . . ಮತ್ತು ಮನುಷ್ಯನು ತನ್ನ ನಿರ್ಮಾಣಿಕನ ಹಾಗೂ ನ್ಯಾಯಾಧೀಶನ ಸನ್ನಿಧಿಯಲ್ಲಿಯೊ ಎಂಬಂತೆ ನಡೆಯುತ್ತಾನೆ . . . ಈ ಪುರಾತನ ಪುಸ್ತಕದಲ್ಲಿ ಪ್ರತಿಯೊಂದೂ ರೀತಿಯ ಮಾನವಗುಣವು ಕಂಡುಬರುತ್ತದೆ, ಮತ್ತು ಇದು ಮೂರು ಸಾವಿರ ವರುಷಗಳ ಹಿಂದೆ ಬರೆಯಲ್ಪಟ್ಟಿದ್ದರೂ, ಅದು ಇನ್ನೂ, ಈಗ ತಾನೇ ಜೀವಿಸುವವರ ಸ್ವರೂಪದಿಂದ ಅದನ್ನು ತೆಗೆಯಲಾಗಿದೆಯೊ ಎಂಬಷ್ಟು ಸತ್ಯವಾಗಿದೆ.”—ಸ್ಮಿತ್ಸ್ ಡಿಕ್ಷನೆರಿ ಆಫ್ ದ ಬೈಬಲ್, 1890, ಸಂಪುಟ III, ಪುಟ 2616.
ಪ್ರಯೋಜನಕರವೇಕೆ?
19 ಜ್ಞಾನೋಕ್ತಿಗಳ ಪ್ರಯೋಜನಕರ ಉದ್ದೇಶವನ್ನು ಅದರ ಆರಂಭದ ವಚನಗಳಲ್ಲಿ ಹೀಗೆ ಕೊಡಲಾಗಿದೆ: “ಒಬ್ಬನು ವಿವೇಕ ಮತ್ತು ಶಿಸ್ತನ್ನು ತಿಳಿಯಲಿಕ್ಕಾಗಿ, ತಿಳಿವಳಿಕೆಯ ಮಾತುಗಳನ್ನು ಗ್ರಹಿಸಲಿಕ್ಕಾಗಿ, ಒಳನೋಟ, ನೀತಿ ಹಾಗೂ ನ್ಯಾಯ ಮತ್ತು ಪ್ರಾಮಾಣಿಕತೆಯನ್ನು ಕೊಡುವ ಶಿಸ್ತನ್ನು ಪಡೆಯಲಿಕ್ಕಾಗಿ, ಅನನುಭವಿಗೆ ಜಾಣ್ಮೆಯನ್ನು ಮತ್ತು ಯುವಕನಿಗೆ ಜ್ಞಾನ ಮತ್ತು ಯೋಚನಾ ಸಾಮರ್ಥ್ಯವನ್ನು ಕೊಡಲಿಕ್ಕಾಗಿಯೇ.” (1:2-4, NW) ನಮೂದಿಸಲ್ಪಟ್ಟಿರುವ ಆ ಉದ್ದೇಶದ ಪ್ರಕಾರ ಈ ಪುಸ್ತಕವು ಜ್ಞಾನ, ವಿವೇಕ ಮತ್ತು ತಿಳಿವಳಿಕೆಯನ್ನು ಎತ್ತಿತೋರಿಸುತ್ತದೆ ಮತ್ತು ಇವುಗಳಲ್ಲಿ ಪ್ರತಿಯೊಂದು ವಿಶಿಷ್ಟ ರೀತಿಯಲ್ಲಿ ಪ್ರಯೋಜನಕರವಾಗಿದೆ.
20 (1) ಜ್ಞಾನ ಮನುಷ್ಯನಿಗೆ ಅತ್ಯಾವಶ್ಯಕವಾಗಿರುವ ವಿಷಯವಾಗಿದೆ, ಏಕೆಂದರೆ ಅಜ್ಞಾನಕ್ಕೆ ಬಲಿಯಾಗುವುದು ಮನುಷ್ಯನಿಗೆ ಹಿತಕರವಲ್ಲ. ಯೆಹೋವನ ಭಯವಿಲ್ಲದೆ ಒಬ್ಬನು ನಿಷ್ಕೃಷ್ಟ ಜ್ಞಾನವನ್ನು ಎಂದಿಗೂ ಸಂಪಾದಿಸಲಾರನು, ಏಕೆಂದರೆ ಜ್ಞಾನವು ಆ ಭಯದೊಂದಿಗೆ ಆರಂಭಗೊಳ್ಳುತ್ತದೆ. ನಾವು ಶ್ರೇಷ್ಠಮಟ್ಟದ ಚಿನ್ನಕ್ಕಿಂತಲೂ ಹೆಚ್ಚಾಗಿ ಜ್ಞಾನವನ್ನು ಇಷ್ಟಪಟ್ಟು ಅದನ್ನು ಆರಿಸಿಕೊಳ್ಳಬೇಕು. ಏಕೆ? ಏಕೆಂದರೆ ನೀತಿವಂತರು ಜ್ಞಾನದ ಮೂಲಕವೇ ರಕ್ಷಿಸಲ್ಪಡುತ್ತಾರೆ; ನಾವು ಪಾಪದ ಬಲೆಯೊಳಗೆ ಧಾವಿಸಿ ಹೋಗುವುದರಿಂದ ಅದು ನಮ್ಮನ್ನು ತಡೆಯುತ್ತದೆ. ನಾವು ಅದನ್ನು ನಮ್ಮದಾಗಿ ಮಾಡಿಕೊಳ್ಳುವರೆ ಅದಕ್ಕಾಗಿ ಎಷ್ಟು ಹುಡುಕಬೇಕು! ಅದು ಅಮೂಲ್ಯವೆಂಬುದು ನಿಶ್ಚಯ. ಆದಕಾರಣ “ನೀನು ನನ್ನ ಜ್ಞಾನಕ್ಕೆ ಸಾಕ್ಷಾತ್ ನಿನ್ನ ಹೃದಯವನ್ನು ಅನ್ವಯಿಸಲಾಗುವಂತೆ ಕಿವಿಗೊಟ್ಟು ವಿವೇಕಿಗಳ ಮಾತುಗಳನ್ನು ಆಲಿಸು.” (22:17, NW; 1:7; 8:10; 11:9; 18:15; 19:2; 20:15) ಈ ವಚನಗಳಲ್ಲಿ ಕೆಲವೊಂದರಲ್ಲಿ ಕನ್ನಡ ಬೈಬಲು “ಜ್ಞಾನ” ಎಂಬ ಪದಕ್ಕೆ ‘ತಿಳುವಳಿಕೆ’ ಎಂಬ ಪದವನ್ನು ಉಪಯೋಗಿಸಿದೆ.
21 (2) ವಿವೇಕ ಅಂದರೆ ಯೆಹೋವನ ಸ್ತುತಿಗಾಗಿ ಜ್ಞಾನವನ್ನು ಸರಿಯಾಗಿ ಬಳಸುವ ಸಾಮರ್ಥ್ಯವೇ “ಪ್ರಧಾನ ಸಂಗತಿ” ಆಗಿದೆ (NIBV). ಅದನ್ನು ಸಂಪಾದಿಸಿರಿ. ಅದರ ಮೂಲನು ಯೆಹೋವನು. ಜೀವದಾಯಕ ವಿವೇಕವು ಯೆಹೋವ ದೇವರನ್ನು ಅರಿತುಕೊಂಡು ಆತನಿಗೆ ಭಯಪಡುವುದರಿಂದ ಆರಂಭಗೊಳ್ಳುತ್ತದೆ. ವಿವೇಕದ ಮಹಾ ರಹಸ್ಯವು ಅದೇ. ಆದಕಾರಣ ಮನುಷ್ಯನಿಗಲ್ಲ, ದೇವರಿಗೆ ಭಯಪಡಿರಿ. ವ್ಯಕ್ತೀಕರಿಸಲ್ಪಟ್ಟ ವಿವೇಕವು ಎಲ್ಲರೂ ತಮ್ಮ ಮಾರ್ಗಗಳನ್ನು ತಿದ್ದಿಕೊಳ್ಳುವಂತೆ ಒಂದು ಘೋಷಣೆಯನ್ನು ಹೊರಡಿಸುತ್ತದೆ. ವಿವೇಕವು ಬೀದಿಗಳಲ್ಲೇ ಗಟ್ಟಿಯಾಗಿ ಕೂಗಿ ಹೇಳುತ್ತದೆ. ಯೆಹೋವ ದೇವರು ಅನನುಭವಿಗಳೆಲ್ಲರಿಗೆ [ಕನ್ನಡ ಬೈಬಲಿನಲ್ಲಿ ‘ಮೂಢರು’ ಎಂದು ಕೊಡಲಾಗಿದೆ] ಮತ್ತು ತಿಳಿವಳಿಕೆಯಿಲ್ಲದವರಿಗೆ [ಕನ್ನಡ ಬೈಬಲಿನಲ್ಲಿ ‘ಬುದ್ಧಿಹೀನರು’ ಎಂದು ಕೊಡಲಾಗಿದೆ] ಅವರು ತಿರುಗಿಕೊಂಡು ವಿವೇಕವು ಬಡಿಸುವ ಆಹಾರವನ್ನು ಉಣ್ಣುವಂತೆ ಕರೆಕೊಡುತ್ತಾನೆ. ಆಗ, ಅವರು ಯೆಹೋವನ ಭಯವುಳ್ಳವರಾಗಿರುವುದರಿಂದ ಅವರಲ್ಲಿ ಇರುವುದು ಕೊಂಚವಾದರೂ ಅದರಲ್ಲಿಯೇ ಸಂತೋಷಿಸುವರು. ವಿವೇಕದ ಆಶೀರ್ವಾದಗಳೋ ಅನೇಕ ಮತ್ತು ಅದರ ಪರಿಣಾಮಗಳು ಅತಿ ಪ್ರಯೋಜನಕರ. ವಿವೇಕ ಮತ್ತು ಜ್ಞಾನ—ಇವೇ ಯೋಚನಾಸಾಮರ್ಥ್ಯಕ್ಕಿರುವ ಆರಂಭದ ಅಡಿಪಾಯಗಳು, ಅವು ನಮ್ಮನ್ನು ಭದ್ರವಾಗಿಡುವಂಥವುಗಳಾಗಿವೆ. ಜೇನುತುಪ್ಪದಂತೆ ವಿವೇಕವು ಸಹ ಪ್ರಯೋಜನಕರವೂ ಹಿತಕರವೂ ಆಗಿದೆ. ಅದು ಚಿನ್ನಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದು; ಅದು ಜೀವವೃಕ್ಷವಾಗಿದೆ. ವಿವೇಕವಿಲ್ಲದೆ ಜನರು ಸಾಯುತ್ತಾರೆ, ಆದರೆ ವಿವೇಕವು ಜೀವವನ್ನು ಉಳಿಸುತ್ತದೆ; ಅದು ಜೀವವಾಗಿದೆ. (4:7; 1:7, 20-23; 2:6, 7, 10, 11; 3:13-18, 21-26; 8:1-36; 9:1-6, 10; 10:8; 13:14; 15:16, 24; 16:16, 20-24; 24:13, 14) ಈ ವಚನಗಳಲ್ಲಿ ಕನ್ನಡ ಬೈಬಲು “ವಿವೇಕ” ಎಂಬ ಪದಕ್ಕೆ ‘ಜ್ಞಾನ’ ಎಂಬ ಪದವನ್ನು ಬಳಸುತ್ತದೆ.
22 (3) ಜ್ಞಾನ ಮತ್ತು ವಿವೇಕಗಳಲ್ಲದೆ ತಿಳಿವಳಿಕೆ ಸಹ ಅತ್ಯಾವಶ್ಯಕ. ಆದಕಾರಣ, “ನೀವು ಸಂಪಾದಿಸುವ ಸಕಲ ವಿಷಯಗಳೊಂದಿಗೆ ತಿಳಿವಳಿಕೆಯನ್ನು ಸಂಪಾದಿಸಿ.” ಒಂದು ವಿಷಯವನ್ನು ಅದಕ್ಕೆ ಸಂಬಂಧಪಟ್ಟ ಭಾಗಗಳಲ್ಲಿ ನೋಡುವ ಸಾಮರ್ಥ್ಯವೇ ತಿಳಿವಳಿಕೆ; ದೇವರನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡಿರುವ ವಿವೇಚನಾಶಕ್ತಿ ಎಂದು ಇದರ ಅರ್ಥ, ಏಕೆಂದರೆ ಮನುಷ್ಯನು ತನ್ನ ಸ್ವಂತ ತಿಳಿವಳಿಕೆಯ ಮೇಲೆ ಹೊಂದಿಕೊಳ್ಳಲಾರನು. ಒಬ್ಬನು ಯೆಹೋವನಿಗೆ ವಿರೋಧವಾಗಿ ಕೆಲಸ ಮಾಡುವಲ್ಲಿ, ತಿಳಿವಳಿಕೆಯನ್ನು ಅಥವಾ ವಿವೇಚನಾಶಕ್ತಿಯನ್ನು ಗಳಿಸುವುದು ತೀರಾ ಅಸಾಧ್ಯವೇ ಸರಿ! ತಿಳಿವಳಿಕೆಯನ್ನು ನಮ್ಮದಾಗಿ ಮಾಡಿಕೊಳ್ಳಲು, ನಾವದನ್ನು ನಿಕ್ಷೇಪದಂತೆ ತೀವ್ರಾಭಿಲಾಷೆಯಿಂದ ಹುಡುಕತಕ್ಕದ್ದು. ತಿಳುವಳಿಕೆಯಿರಬೇಕಾದರೆ, ನಮಗೆ ಜ್ಞಾನವಿರಲೇಬೇಕು. ತಿಳಿವಳಿಕೆಯುಳ್ಳವನು ಜ್ಞಾನವನ್ನು ಹುಡುಕಲು ಮಾಡುವ ಪ್ರಯತ್ನಗಳಿಗೆ ಪ್ರತಿಫಲ ದೊರೆಯುತ್ತದೆ, ಮತ್ತು ವಿವೇಕ ಅವನ ಮುಂದಿದೆ. ಅಸಂಖ್ಯಾತವಾಗಿರುವ ಕೆಟ್ಟ ಜನರು ಅವನು ತಮ್ಮೊಂದಿಗೆ ಕತ್ತಲೆಯಲ್ಲಿ ನಡೆಯುವಂತೆ ಮಾಡಲು ಬಲೆಬೀಸಬಹುದು. ಆದರೆ ಈ ಲೋಕದ ಇಂತಹ ಲೆಕ್ಕವಿಲ್ಲದಷ್ಟು ಬೀಳುಗುಂಡಿಗಳಿಂದ ಅವನು ರಕ್ಷಿಸಲ್ಪಡುತ್ತಾನೆ. ಆದುದರಿಂದ, ಜೀವದಾಯಕ ಜ್ಞಾನ, ವಿವೇಕ ಮತ್ತು ತಿಳಿವಳಿಕೆಯ ಮೂಲನಾದ ಯೆಹೋವ ದೇವರಿಗೆ ಕೃತಜ್ಞರಾಗಿರೋಣ!—4:7, NW; 2:3, 4; 3:5; 15:14; 17:24; 19:8; 21:30.
23 ಜ್ಞಾನೋಕ್ತಿಗಳ ಪ್ರಯೋಜನಕರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಈ ಪುಸ್ತಕವು ನಾವು ತಿಳಿವಳಿಕೆಯನ್ನು ಗಳಿಸಿ, ಯಾವುದರಿಂದ ‘ಜೀವಧಾರೆಗಳು ಹೊರಡುತ್ತವೊ’ ಆ ಹೃದಯವನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡಲು ಸಮೃದ್ಧವಾದ ವಿವೇಕಭರಿತ ಪ್ರೇರಿತ ಸಲಹೆಯನ್ನು ನೀಡುತ್ತದೆ. (4:23) ಈ ಪುಸ್ತಕದಾದ್ಯಂತ ಒತ್ತಿಹೇಳಲ್ಪಟ್ಟಿರುವ ವಿವೇಕಪೂರ್ಣ ಸಲಹೆಯಲ್ಲಿ ಕೆಲವೊಂದನ್ನು ಈ ಕೆಳಗೆ ಆಯ್ಕೆಮಾಡಿ ಕೊಡಲಾಗಿದೆ.
24 ದುಷ್ಟರ ಮತ್ತು ಶಿಷ್ಟರ ಮಧ್ಯೆ ಇರುವ ವೈದೃಶ್ಯ: ದುಷ್ಟನು ತನ್ನ ವಕ್ರಮಾರ್ಗದಲ್ಲೇ ಹಿಡಿಯಲ್ಪಡುವನು, ಮತ್ತು ದೇವರ ರೋಷದ ದಿನದಲ್ಲಿ ಅವನ ನಿಕ್ಷೇಪಗಳು ಅವನನ್ನು ರಕ್ಷಿಸಲಾರವು. ಶಿಷ್ಟನು ಅಂದರೆ ನೀತಿವಂತನು, ಜೀವವನ್ನು ಪಡೆಯುವವರ ಸಾಲಿನಲ್ಲಿರುವನು ಮತ್ತು ಯೆಹೋವನಿಂದ ಪ್ರತಿಫಲ ಪಡೆಯುವನು.—2:21, 22; 10:6, 7, 9, 24, 25, 27-32; 11:3-7, 18-21, 23, 30, 31; 12:2, 3, 7, 28; 13:6, 9; 14:2, 11; 15:3, 8, 29; 29:16.
25 ಶುದ್ಧ ನೀತಿಶೀಲಗಳ ಆವಶ್ಯಕತೆ: ಸೊಲೊಮೋನನು ಲೈಂಗಿಕ ಅನೈತಿಕತೆಯ ಬಗ್ಗೆ ಸತತವಾಗಿ ಎಚ್ಚರಿಕೆ ನೀಡುತ್ತಾನೆ. ವ್ಯಭಿಚಾರಿಗಳು ಪೀಡೆ ಹಾಗೂ ಅವಮಾನವನ್ನು ಅನುಭವಿಸುವರು, ಮತ್ತು ಅವರ ಅಪಮಾನ ಅಳಿಯದು. “ಕದ್ದ ನೀರು” ಒಬ್ಬ ಯುವವ್ಯಕ್ತಿಗೆ ಸಿಹಿಯಾಗಿ ರುಚಿಸಬಹುದಾದರೂ ವೇಶ್ಯೆಯು ಮರಣಕ್ಕೆ ಇಳಿದುಹೋಗುವಾಗ ಆಕೆಯು ತನ್ನ ಅನನುಭವಿ ಬಲಿಪಶುಗಳನ್ನು ತನ್ನೊಡನೆ ಕೊಂಡೊಯ್ಯುವಳು. ಇಂತಹ ಲೈಂಗಿಕ ಅನೀತಿಯ ಆಳವಾದ ಗುಂಡಿಗೆ ಬೀಳುವವರನ್ನು ಯೆಹೋವನು ಖಂಡಿಸುತ್ತಾನೆ.—2:16-19; 5:1-23; 6:20-35; 7:4-27; 9:13-18; 22:14; 23:27, 28.
26 ಆತ್ಮನಿಯಂತ್ರಣದ ಆವಶ್ಯಕತೆ: ಕುಡುಕತನ ಮತ್ತು ಹೊಟ್ಟೆಬಾಕತನವನ್ನು ಖಂಡಿಸಲಾಗಿದೆ. ದೇವರ ಮನ್ನಣೆಯನ್ನು ಪಡೆಯಲು ಬಯಸುವವರೆಲ್ಲರೂ ತಿನ್ನುವ ಮತ್ತು ಕುಡಿಯುವ ವಿಷಯಗಳಲ್ಲಿ ಮಿತಭಾವ ತೋರಿಸುವವರಾಗಿರಬೇಕು. (20:1; 21:17; 23:21, 29-35; 25:16; 31:4, 5) ಕೋಪದಲ್ಲಿ ನಿಧಾನಿಗಳಾಗಿರುವವರು [ಕನ್ನಡ ಬೈಬಲಿನಲ್ಲಿ ‘ದೀರ್ಘಶಾಂತರು’] ವಿವೇಚನಾಶಕ್ತಿಯಲ್ಲಿ ಸಮೃದ್ಧರಾಗಿದ್ದು ಒಂದು ನಗರವನ್ನೇ ವಶಮಾಡಿಕೊಳ್ಳುವ ವೀರನಿಗಿಂತಲೂ ಬಲಿಷ್ಠರಾಗಿದ್ದಾರೆ. (14:17, 29; 15:1, 18; 16:32; 19:11; 25:15, 28; 29:11, 22) ಯಾವುದು “ಎಲುಬಿಗೆ ಕ್ಷಯ” ಆಗಿದೆಯೊ ಆ ಅಸೂಯೆ ಮತ್ತು ಹೊಟ್ಟೆಕಿಚ್ಚಿನಿಂದ ದೂರವಿರಲು ಸಹ ಆತ್ಮನಿಯಂತ್ರಣವು ಅಗತ್ಯ.—14:30, NW; 24:1; 27:4; 28:22.
27 ಮಾತು—ಅದರ ವಿವೇಕಪೂರ್ಣ ಮತ್ತು ಅವಿವೇಕಪೂರ್ಣ ಉಪಯೋಗ: ಸೊಟ್ಟ ಅಥವಾ ಕುಟಿಲ ಮಾತನ್ನಾಡುವವನು, ಚಾಡಿಕೋರನು, ಸುಳ್ಳುಸಾಕ್ಷಿ ಹೇಳುವವನು ಮತ್ತು ಸುಳ್ಳುಗಾರನು—ಇವರೆಲ್ಲರೂ ಬಯಲಾಗುವರು, ಏಕೆಂದರೆ ಅವರು ಯೆಹೋವನಿಗೆ ಅಸಹ್ಯರು. (4:24; 6:16-19; 11:13; 12:17, 22; 14:5, 25; 17:4; 19:5, 9; 20:17; 24:28; 25:18) ಒಬ್ಬನ ಬಾಯಿ ಒಳ್ಳೆಯ ವಿಷಯಗಳನ್ನು ಮಾತಾಡುವಲ್ಲಿ ಅದು ಜೀವದ ಬುಗ್ಗೆಯಾಗಿದೆ, ಆದರೆ ಮೂರ್ಖನ ಬಾಯಿ ಅವನ ಪತನವನ್ನು ತ್ವರಿತಗೊಳಿಸುತ್ತದೆ. “ಜೀವಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು.” (18:21) ಚಾಡಿಮಾತು, ವಂಚಿಸುವ ಮಾತು, ಹುಸಿ ಹೊಗಳಿಕೆ ಮತ್ತು ದುಡುಕಿ ಆಡುವ ಮಾತುಗಳು ಖಂಡಿಸಲ್ಪಟ್ಟಿವೆ. ದೇವರಿಗೆ ಘನಕೊಡಲಿಕ್ಕಾಗಿ ಸತ್ಯಾವನ್ನಾಡುವುದು ವಿವೇಕಮಾರ್ಗ.—10:11, 13, 14; 12:13, 14, 18, 19; 13:3; 14:3; 16:27-30; 17:27, 28; 18:6-8, 20; 26:28; 29:20; 31:26.
28 ಗರ್ವದ ಮೌಢ್ಯ ಮತ್ತು ದೈನ್ಯದ ಆವಶ್ಯಕತೆ: ಗರ್ವಿಷ್ಠನು ತಾನು ನಿಜವಾಗಿಯೂ ಇಲ್ಲದಿರುವಂಥ ಎತ್ತರಕ್ಕೆ ಮೇಲಕ್ಕೇರುವ ಕಾರಣ, ಕುಸಿದು ಬೀಳುತ್ತಾನೆ. ಗರ್ವಿಷ್ಠ ಹೃದಯಿಗಳು ಯೆಹೋವನಿಗೆ ಹೇಯರು, ಆದರೆ ದೀನರಿಗೆ ಆತನು ವಿವೇಕ, ಧನ, ಮಾನ ಮತ್ತು ಜೀವವನ್ನು ಕೊಡುತ್ತಾನೆ.—3:7; 11:2; 12:9; 13:10; 15:33; 16:5, 18, 19; 18:12; 21:4; 22:4; 26:12; 28:25, 26; 29:23.
29 ಕಾರ್ಯತತ್ಪರತೆ, ಮೈಗಳ್ಳತನವಲ್ಲ: ಸೋಮಾರಿಯನ್ನು ಅನೇಕ ರೀತಿಗಳಲ್ಲಿ ವರ್ಣಿಸಲಾಗುತ್ತದೆ. ಅವನು ಒಂದು ಪಾಠವನ್ನು ಕಲಿಯಲಿಕ್ಕಾಗಿ ಮತ್ತು ವಿವೇಕಿಯಾಗಲಿಕ್ಕಾಗಿ ಇರುವೆಯ ಹತ್ತಿರ ಹೋಗಬೇಕು. ಆದರೆ ಕಾರ್ಯತತ್ಪರನೋ ಏಳಿಗೆ ಹೊಂದುವನು!—1:32; 6:6-11; 10:4, 5, 26; 12:24; 13:4; 15:19; 18:9; 19:15, 24; 20:4, 13; 21:25, 26; 22:13; 24:30-34; 26:13-16; 31:24, 25.
30 ಸುಸಹವಾಸ: ಯೆಹೋವನಿಗೆ ಭಯಪಡದವರೊಂದಿಗೆ, ದುಷ್ಟರೊಂದಿಗೆ ಅಥವಾ ಮೂಢರೊಂದಿಗೆ, ಮುಂಗೋಪಿಗಳೊಂದಿಗೆ, ಚಾಡಿಕೋರರೊಂದಿಗೆ ಅಥವಾ ಹೊಟ್ಟೆಬಾಕರೊಂದಿಗೆ ಸಹವಾಸ ಮಾಡುವುದು ಮೂರ್ಖತನವಾಗಿದೆ. ಬದಲಾಗಿ ವಿವೇಕಿಗಳೊಂದಿಗೆ ಸಹವಾಸಮಾಡಿದರೆ ನೀವು ಇನ್ನಷ್ಟು ವಿವೇಕಿಗಳಾಗುವಿರಿ.—1:10-19; 4:14-19; 13:20; 14:7; 20:19; 22:24, 25; 28:7.
31 ಗದರಿಕೆ ಮತ್ತು ತಿದ್ದುಪಡಿಸುವಿಕೆಯ ಆವಶ್ಯಕತೆ: “ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ” ಮತ್ತು ಈ ಶಿಸ್ತಿಗೆ ಕಿವಿಗೊಡುವವರು ಮಾನ ಹಾಗೂ ಜೀವಕ್ಕೆ ನಡೆಸುವ ಮಾರ್ಗದಲ್ಲಿದ್ದಾರೆ. ಗದರಿಕೆಯನ್ನು ದ್ವೇಷಿಸುವವನು ಅವಮಾನಕ್ಕೊಳಗಾಗುವನು.—3:11, 12; 10:17; 12:1; 13:18; 15:5, 31-33; 17:10; 19:25; 29:1.
32 ಒಳ್ಳೆಯ ಪತ್ನಿಯಾಗಿರುವ ವಿಷಯದಲ್ಲಿ ಸಲಹೆ: ಜ್ಞಾನೋಕ್ತಿಗಳು ಒಬ್ಬ ಪತ್ನಿ ಜಗಳಗಂಟಿಯಾಗಿ ಮತ್ತು ಮಾನ ಕಳೆಯುವ ರೀತಿಯಲ್ಲಿ ನಾಚಿಕೆಗೇಡಿಯಾಗಿ ವರ್ತಿಸುವ ವಿಷಯದಲ್ಲಿ ಪದೇಪದೇ ಎಚ್ಚರಿಕೆ ನೀಡುತ್ತವೆ. ವಿವೇಕಿಯಾದ ಮತ್ತು ದೇವಭಯವುಳ್ಳ ಸಮರ್ಥ ಇಲ್ಲವೆ ಗುಣವತಿಯಾದ ಪತ್ನಿಯ ನಾಲಿಗೆಯಲ್ಲಿ ಪ್ರೀತಿಪೂರ್ವಕ ದಯೆಯ ನಿಯಮವಿದೆ; ಇಂತಹ ಹೆಂಡತಿಯನ್ನು ಪಡೆಯುವವನು ಯೆಹೋವನಿಂದ ಅನುಗ್ರಹವನ್ನು ಪಡೆದಿರುವನು.—12:4; 18:22; 19:13, 14; 21:9, 19; 27:15, 16; 31:10-31.
33 ಮಕ್ಕಳನ್ನು ಬೆಳೆಸುವುದು: ದೇವರ ಆಜ್ಞೆಗಳನ್ನು ಮಕ್ಕಳು ‘ಮರೆತುಬಿಡದಂತೆ’ ಅವರಿಗೆ ಕ್ರಮವಾಗಿ ಕಲಿಸಿರಿ. ಶೈಶವದಿಂದಲೇ ಅವರನ್ನು ಯೆಹೋವನ ಶಿಕ್ಷಣದಲ್ಲಿ ಬೆಳೆಸಿರಿ. ಅಗತ್ಯವಿರುವಾಗ ಬೆತ್ತವನ್ನು ಉಪಯೋಗಿಸದೆ ಇರಬೇಡಿರಿ; ಅದು ಪ್ರೀತಿಯ ಅಭಿವ್ಯಕ್ತಿಯಾಗಿರಲಿ, ಏಕೆಂದರೆ ಬೆತ್ತ ಮತ್ತು ಗದರಿಕೆಯು ಹುಡುಗನಿಗೆ ವಿವೇಕವನ್ನು ಕೊಡುತ್ತದೆ. ದೇವರ ಮಾರ್ಗದಲ್ಲಿ ಮಕ್ಕಳನ್ನು ಬೆಳೆಸುವ ತಂದೆತಾಯಿಗಳಿಗೆ, ತುಂಬ ಹರ್ಷ ಮತ್ತು ಸುಖಾನುಭವವನ್ನು ತರುವ ವಿವೇಕಪೂರ್ಣ ಮಕ್ಕಳಿರುವರು.—4:1-9; 13:24; 17:21; 22:6, 15; 23:13, 14, 22, 24, 25; 29:15, 17.
34 ಇತರರಿಗೆ ಸಹಾಯ ನೀಡುವ ಜವಾಬ್ದಾರಿ: ಇದನ್ನು ಜ್ಞಾನೋಕ್ತಿಗಳಲ್ಲಿ ಅನೇಕಾವರ್ತಿ ಒತ್ತಿಹೇಳಲಾಗಿದೆ. ವಿವೇಕಿಯು ಇತರರ ಪ್ರಯೋಜನಾರ್ಥವಾಗಿ ಜ್ಞಾನವನ್ನು ಪಸರಿಸಬೇಕು. ಒಬ್ಬನು ಬಡವರಿಗೆ ದಯೆತೋರಿಸುವುದರಲ್ಲಿಯೂ ಉದಾರಿಯಾಗಿರಬೇಕು ಮತ್ತು ಹಾಗೆ ಮಾಡುವ ಮೂಲಕ ಅವನು, ಯಾರು ಮರುಪಾವತಿಯ ಖಾತರಿಯನ್ನು ಕೊಡುತ್ತಾನೊ ಆ ಯೆಹೋವನಿಗೆ ಸಾಲಕೊಡುತ್ತಾನೆ.—11:24-26; 15:7; 19:17; 24:11, 12; 28:27.
35 ಯೆಹೋವನ ಮೇಲೆ ಭರವಸೆ: ನಾವು ದೇವರ ಮೇಲೆ ಭರವಸೆಯಿಡಬೇಕೆಂದು ಸಲಹೆಕೊಡುವ ಮೂಲಕ ಜ್ಞಾನೋಕ್ತಿಗಳು ನಮ್ಮ ಸಮಸ್ಯೆಗಳ ಮೂಲಕ್ಕೆ ಹೋಗುತ್ತವೆ. ನಾವು ನಮ್ಮ ಎಲ್ಲ ಮಾರ್ಗಗಳಲ್ಲಿ ಯೆಹೋವನನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಲೇಬೇಕು. ಒಬ್ಬ ವ್ಯಕ್ತಿಯು ತನ್ನ ಮಾರ್ಗದ ಕುರಿತು ಯೋಜಿಸಬಹುದು, ಆದರೆ ಅವನ ಹೆಜ್ಜೆಗಳನ್ನು ಯೆಹೋವನೇ ನಿರ್ದೇಶಿಸಬೇಕು. ಯೆಹೋವನ ನಾಮವು ಬಲವಾದ ಬುರುಜಾಗಿದೆ. ನೀತಿವಂತರು ಅದರೊಳಗೆ ಓಡಿಹೋಗಿ ಆಶ್ರಯವನ್ನು ಪಡೆದುಕೊಳ್ಳುತ್ತಾರೆ. ಯೆಹೋವನಲ್ಲಿ ನಿರೀಕ್ಷಿಸಿ, ಮಾರ್ಗದರ್ಶನೆಗಾಗಿ ಆತನ ವಾಕ್ಯದ ಕಡೆಗೆ ತಿರುಗಿರಿ.—3:1, 5, 6; 16:1-9; 18:10; 20:22; 28:25, 26; 30:5, 6.
36 ನಮಗೂ ಇತರರಿಗೂ ಕಲಿಸಲಿಕ್ಕೆ ಮತ್ತು ಶಿಸ್ತಿಗೊಳಪಡಿಸಿಕೊಳ್ಳಲಿಕ್ಕೆ ಜ್ಞಾನೋಕ್ತಿಗಳ ಪುಸ್ತಕವು ಎಷ್ಟೊಂದು ಪ್ರಯೋಜನಕರ! ಮಾನವ ಸಂಬಂಧದ ಯಾವ ಅಂಶವನ್ನೂ ಅದು ಅಲಕ್ಷಿಸಿಲ್ಲವೆಂದು ತೋರುತ್ತದೆ. ತನ್ನ ಜೊತೆ ಆರಾಧಕರಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುವ ವ್ಯಕ್ತಿಯೊಬ್ಬನು ಇದ್ದಾನೆಯೆ? (18:1) ಉನ್ನತಾಧಿಕಾರಿಯೊಬ್ಬನು ಒಂದು ವಿಷಯದಲ್ಲಿ ಎರಡೂ ಪಕ್ಷಗಳಿಗೆ ಕಿವಿಗೊಡದೆ ತೀರ್ಪುಮಾಡಲು ಹೋಗುತ್ತಾನೆಯೆ? (18:17) ಒಬ್ಬನು ಅಪಾಯಕಾರಿಯಾದ ಕುಚೇಷ್ಟೆಗಳನ್ನು ಮಾಡುವವನಾಗಿದ್ದಾನೊ? (26:18, 19) ಒಬ್ಬನಿಗೆ ಪಕ್ಷಪಾತದ ಪ್ರವೃತ್ತಿ ಇದೆಯೆ? (28:21) ಅಂಗಡಿಯಲ್ಲಿರುವ ವ್ಯಾಪಾರಿ, ಗದ್ದೆಯಲ್ಲಿರುವ ರೈತನು, ಗಂಡ, ಹೆಂಡತಿ ಮತ್ತು ಮಕ್ಕಳು ಎಲ್ಲರೂ ಇದರಿಂದ ಹಿತಕರವಾದ ಸಲಹೆಯನ್ನು ಪಡೆದುಕೊಳ್ಳುತ್ತಾರೆ. ಯುವ ಜನರ ಮಾರ್ಗದಲ್ಲಿ ಹೊಂಚುಹಾಕುತ್ತಿರುವ ಅನೇಕ ಪಾಶಗಳನ್ನು ಬಯಲುಗೊಳಿಸುವಂತೆ ಹೆತ್ತವರಿಗೆ ಸಹಾಯ ದೊರೆಯುತ್ತದೆ. ವಿವೇಕಿಗಳು ಅನನುಭವಿಗಳಿಗೆ ಬೋಧಿಸಬಲ್ಲರು. ನಾವೆಲ್ಲಿಯೇ ಜೀವಿಸುತ್ತಿರಲಿ, ಜ್ಞಾನೋಕ್ತಿಗಳು ಪ್ರಾಯೋಗಿಕವಾಗಿವೆ. ಈ ಪುಸ್ತಕದ ಉಪದೇಶ ಮತ್ತು ಸಲಹೆಯು ಎಂದಿಗೂ ಬಳಕೆ ತಪ್ಪಿಹೋಗುವುದಿಲ್ಲ. ಅಮೆರಿಕನ್ ಶಿಕ್ಷಣಜ್ಞ ವಿಲ್ಯಮ್ ಲೈಅನ್ ಫೆಲ್ಪ್ಸ್ ಒಮ್ಮೆ ಹೇಳಿದ್ದು: “ಜ್ಞಾನೋಕ್ತಿಗಳ ಪುಸ್ತಕವು ಈ ದಿನದ ವಾರ್ತಾಪತ್ರಕ್ಕಿಂತಲೂ ಹೆಚ್ಚು ಸದ್ಯೋಚಿತವಾಗಿದೆ.”a ಜ್ಞಾನೋಕ್ತಿಗಳ ಪುಸ್ತಕವು ದೇವರಿಂದ ಪ್ರೇರಿತವಾಗಿರುವುದರಿಂದಲೇ ಅದು ಬೋಧಿಸಲು ಸದ್ಯೋಚಿತವೂ ಪ್ರಾಯೋಗಿಕವೂ ಪ್ರಯೋಜನಕರವೂ ಆಗಿದೆ.
37 ಹೆಚ್ಚಾಗಿ ಸೊಲೊಮೋನನೇ ನುಡಿದಿರುವ ಜ್ಞಾನೋಕ್ತಿಗಳಿರುವ ಈ ಪುಸ್ತಕವು ಸಂಗತಿಗಳನ್ನು ನೇರವಾಗಿರಿಸಲು ಪ್ರಯೋಜನಕರವಾಗಿರುವುದರಿಂದ ಮನುಷ್ಯರನ್ನು ಸರ್ವಶಕ್ತನಾದ ದೇವರ ಕಡೆಗೆ ನೋಡುವಂತೆ ಮಾಡುತ್ತದೆ. ‘ಸೊಲೊಮೋನನಿಗಿಂತಲೂ ಹೆಚ್ಚಿನವನು’ ಎಂದು ಮತ್ತಾಯ 12:42ರಲ್ಲಿ ಸೂಚಿಸಲ್ಪಟ್ಟಿರುವ ಕ್ರಿಸ್ತ ಯೇಸು ಕೂಡ ಅದನ್ನೇ ಮಾಡಿದನು.
38 ಸರ್ವಶ್ರೇಷ್ಠ ವಿವೇಕಿಯಾಗಿರುವ ಯೇಸು, ರಾಜ್ಯ ಸಂತಾನವಾಗಿರಲು ಯೆಹೋವನು ಆಯ್ಕೆಮಾಡಿದವನಾಗಿದ್ದಾನೆ ಎಂಬುದಕ್ಕೆ ನಾವೆಷ್ಟು ಕೃತಜ್ಞರಾಗಿರಬಲ್ಲೆವು! ರಾಜ ಸೊಲೊಮೋನನದ್ದಕ್ಕಿಂತಲೂ ಹೆಚ್ಚು ವೈಭವಭರಿತವಾದ ಶಾಂತಿಯ ಆಳ್ವಿಕೆಗಾಗಿ ‘ಧರ್ಮದಿಂದ ಸ್ಥಿರವಾಗುವ’ ಸಿಂಹಾಸನವು ಅವನದ್ದೇ. ಆ ರಾಜ್ಯಾಳ್ವಿಕೆ ಕುರಿತು, “ಕೃಪಾ [“ಪ್ರೀತಿಪೂರ್ವಕ ದಯೆ,” NW] ಸತ್ಯತೆಗಳು ಅವನನ್ನು ಕಾಯುವವು” ಎಂದೂ “ಅವನ ಕರುಣೆಯೇ [“ಪ್ರೀತಿಪೂರ್ವಕ ದಯೆ,” NW] ಅವನ ಸಿಂಹಾಸನಕ್ಕೆ ಆಧಾರ” ಎಂದೂ ಹೇಳಲಾಗುವುದು. ಇದು ಮಾನವಕುಲಕ್ಕಾಗಿ ನಿತ್ಯವಾದ ನೀತಿಯ ಸರಕಾರವನ್ನು ಒದಗಿಸಿಕೊಡುವುದು. ಅದರ ಕುರಿತು ಜ್ಞಾನೋಕ್ತಿಗಳು ಹೀಗೆ ಸಹ ಹೇಳುತ್ತವೆ: “ಬಡವರನ್ನು ನ್ಯಾಯವಾಗಿ ಆಳುವ ರಾಜನ ಸಿಂಹಾಸನವು ಶಾಶ್ವತವು.” ಹೀಗೆ, ಜ್ಞಾನೋಕ್ತಿಗಳು ಜ್ಞಾನ, ವಿವೇಕ, ತಿಳಿವಳಿಕೆ ಹಾಗೂ ನಿತ್ಯಜೀವಕ್ಕೆ ನಡೆಸುವ ನಮ್ಮ ಪಥವನ್ನು ಬೆಳಗಿಸುತ್ತವೆಂದು ಮಾತ್ರವಲ್ಲ, ಹೆಚ್ಚು ಪ್ರಾಮುಖ್ಯವಾಗಿ, ಅವು ಯೆಹೋವನನ್ನು ನಿಜ ವಿವೇಕದ ಮೂಲನೆಂದು ಘನಪಡಿಸುತ್ತವೆಂಬುದನ್ನು ನಾವು ಹರ್ಷದಿಂದ ಮಾನ್ಯಮಾಡಲಾರಂಭಿಸಿದ್ದೇವೆ. ಈ ವಿವೇಕವನ್ನು ಆತನು ರಾಜ್ಯದ ಬಾಧ್ಯಸ್ಥನಾದ ಕ್ರಿಸ್ತ ಯೇಸುವಿನ ಮೂಲಕ ಬಿತ್ತರಿಸುತ್ತಾನೆ. ದೇವರ ರಾಜ್ಯ ಮತ್ತು ಅದು ಈಗ ಯಾವುದರ ಮೂಲಕ ಕಾರ್ಯಭಾರ ನಡೆಸುತ್ತಿದೆಯೊ ಆ ನೀತಿಯ ಮೂಲತತ್ತ್ವಗಳಿಗಾಗಿ ನಮಗಿರುವ ಮೆಚ್ಚಿಕೆಯನ್ನು ಜ್ಞಾನೋಕ್ತಿಗಳು ಬಹಳಷ್ಟು ಬಲಪಡಿಸುತ್ತವೆ.—ಜ್ಞಾನೋ. 25:5; 16:12; 20:28; 29:14.
[ಪಾದಟಿಪ್ಪಣಿ]
a ಟ್ರೆಶರಿ ಆಫ್ ದ ಕ್ರಿಶ್ಚ್ಯನ್ ಫೇತ್, 1949, ಸ್ಟೂಬರ್ ಮತ್ತು ಕ್ಲಾರ್ಕ್ ಪರಿಷ್ಕೃತ, ಪುಟ 48.