‘ನಿಮ್ಮ ಸಂಭಾಷಣೆ ಯಾವಾಗಲೂ ರಸವತ್ತಾಗಿರಲಿ’
1. ‘ನಮ್ಮ ಸಂಭಾಷಣೆಯನ್ನು ರಸವತ್ತಾಗಿಸುವುದರ’ ಅರ್ಥವೇನು?
1 “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರ ಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.” (ಕೊಲೊ. 4:6) ನಮ್ಮ ಸಂಭಾಷಣೆಯನ್ನು ರಸವತ್ತಾಗಿ ಮಾಡುವುದರ ಅರ್ಥ, ಸರಿಯಾದ ಪದಗಳನ್ನು ಆಯ್ಕೆಮಾಡಿ ಕೇಳುಗರಿಗೆ ಹಿಡಿಸುವಂಥ ರೀತಿಯಲ್ಲಿ ಮಾತಾಡುವುದಾಗಿದೆ. ಹಾಗೆ ಮಾಡುವುದು ಶುಶ್ರೂಷೆಯಲ್ಲಿ ಬಹಳ ಪ್ರಾಮುಖ್ಯ.
2. ಸಮಾರ್ಯದ ಸ್ತ್ರೀಯೊಬ್ಬಳಿಗೆ ಸಾಕ್ಷಿಕೊಡಲು ಯೇಸು ಹೇಗೆ ಶಕ್ತನಾದನು?
2 ಯೇಸುವಿನ ಮಾದರಿ: ಯೇಸು ಒಂದು ಬಾವಿ ಬಳಿ ವಿಶ್ರಮಿಸುತ್ತಿದ್ದಾಗ ನೀರು ಸೇದಲು ಅಲ್ಲಿಗೆ ಬಂದ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡಲು ಮುಂದಾದನು. ಆಕೆ ಸಂಭಾಷಣೆಯಾದ್ಯಂತ ಹಲವು ಬಾರಿ ಯೆಹೂದ್ಯರು ಮತ್ತು ಸಮಾರ್ಯದವರ ಮಧ್ಯೆ ಇದ್ದ ದೀರ್ಘಕಾಲಿಕ ವೈರತ್ವದ ಕುರಿತು ಮಾತೆತ್ತಿದಳು. ಅಲ್ಲದೆ, ಸಮಾರ್ಯದವರು ವಿದೇಶೀಯ ವಂಶದವರೆಂಬ ಬಲವಾದ ಭಾವನೆ ಯೆಹೂದ್ಯರಲ್ಲಿತ್ತಾದರೂ ಸಮಾರ್ಯದವರು ಯಾಕೋಬನ ವಂಶಜರೆಂಬ ತನ್ನ ನಂಬಿಕೆಯನ್ನು ಆಕೆ ವ್ಯಕ್ತಪಡಿಸಿದಳು. ಆಕೆಯ ಹೇಳಿಕೆಗಳನ್ನು ವಿರೋಧಿಸುವ ಬದಲು ಯೇಸು ಸಂಭಾಷಣೆಯನ್ನು ಸಕಾರಾತ್ಮಕವಾಗಿಟ್ಟನು. ಫಲಿತಾಂಶವಾಗಿ ಆಕೆಗೆ ಮತ್ತು ಆ ಊರಿನ ಜನರಿಗೆ ಪ್ರಯೋಜನದಾಯಕ ಸಾಕ್ಷಿಕೊಡಲು ಆತನು ಶಕ್ತನಾದನು.—ಯೋಹಾ. 4:7-15, 39.
3. ಶುಶ್ರೂಷೆಯಲ್ಲಿ ಯೇಸುವಿನ ಮಾದರಿಯನ್ನು ನಾವು ಹೇಗೆ ಅನುಸರಿಸಬಹುದು?
3 ಸಾರುತ್ತಿರುವಾಗ “ಶುಭದ ಸುವಾರ್ತೆಯನ್ನು ಸಾರುವ” ನಮ್ಮ ಉದ್ದೇಶವನ್ನು ನೆನಪಿನಲ್ಲಿಡಬೇಕು. (ರೋಮಾ. 10:15) ನಾವು ಮನೆಯವನ ವೈಯಕ್ತಿಕ ನಂಬಿಕೆಗಳನ್ನು ಖಂಡಿಸುವವರಾಗಿ ತೋರದೆ, ಮನಸ್ಸಿಗೆ ಹಿಡಿಸುವಂಥ ಹಾಗೂ ಅದೇ ಸಮಯದಲ್ಲಿ ಭಕ್ತಿವೃದ್ಧಿ ಮಾಡುವಂಥ ವಿಚಾರಗಳನ್ನು ಬೈಬಲಿನಿಂದ ಅವನೊಂದಿಗೆ ಹಂಚಿಕೊಳ್ಳಬೇಕು. ಅವನು ತಪ್ಪಾದ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ನಮ್ಮ ಪ್ರತಿಕ್ರಿಯೆಯು ಅವನನ್ನು ವಿರೋಧಿಸುವಂತಿರಬಾರದು. ಅವನ ಹೇಳಿಕೆಯಲ್ಲಿ, ನಾವು ಒಪ್ಪುವ ಅಥವಾ ಯಥಾರ್ಥ ಪ್ರಶಂಸೆಯನ್ನು ನೀಡಲು ಆಧಾರವಾಗಿ ಉಪಯೋಗಿಸಬಲ್ಲ ಅಂಶವೇನಾದರೂ ಇದೆಯೋ? “ಇದು ಸಾಧ್ಯ ಎಂದು ನೀವೆಂದಾದರೂ ನೆನಸಿದ್ದೀರೊ?” ಎಂದು ಕೇಳುತ್ತಾ ಬಹುಶಃ ಒಂದು ವಚನವನ್ನು ಪರಿಚಯಿಸಬಹುದು.
4. ಮನೆಯವನು ಬಯ್ದು ಅವಮಾನಿಸುವಲ್ಲಿ ನಾವೇನು ಮಾಡಬೇಕು?
4 ಮನೆಯವನು ಬಯ್ದು ಅವಮಾನಿಸುವಲ್ಲಿ ಅಥವಾ ಅವನು ಕೇವಲ ವಾದಮಾಡಲು ಬಯಸುವಲ್ಲಿ ಆಗೇನು? ನಾವು ನಮ್ಮ ವರ್ತನೆ ಮತ್ತು ಮಾತುಗಳಲ್ಲಿ ಶಾಂತಭಾವ ಹಾಗೂ ಸಾಧುತ್ವವನ್ನು ತೋರಿಸುವುದನ್ನು ಮುಂದುವರಿಸಬೇಕು. (2 ತಿಮೊ. 2:24, 25) ಆ ವ್ಯಕ್ತಿಯು ರಾಜ್ಯ ಸಂದೇಶವನ್ನು ಇಷ್ಟಪಡದಿರುವಲ್ಲಿ ಜಾಣ್ಮೆಯಿಂದ ಅಲ್ಲಿಂದ ಹೊರಡುವುದು ಉತ್ತಮ.—ಮತ್ತಾ. 7:6; 10:11-14.
5. ದಯೆಯಿಂದ ಉತ್ತರಿಸುವ ಮೂಲಕ ಒಬ್ಬ ಸಹೋದರಿ ಹೇಗೆ ಉತ್ತಮ ಫಲಿತಾಂಶಗಳನ್ನು ಪಡೆದಳು?
5 ಉತ್ತಮ ಫಲಿತಾಂಶಗಳು: ಸಹೋದರಿಯೊಬ್ಬಳು ತನ್ನ ನೆರೆಯವಳಿಗೆ ಸಾಕ್ಷಿನೀಡಲು ಪ್ರಯತ್ನಿಸಿದಾಗ ಆಕೆ ಕೋಪದಿಂದ ಅರಚಿದಳು. ನಮ್ಮ ಸಹೋದರಿ ದಯೆಯಿಂದ ಹೇಳಿದ್ದು: “ನಿಮಗೆ ಹೀಗನಿಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ಬರ್ತೇನೆ, ನಮಸ್ಕಾರ.” ಎರಡು ವಾರಗಳ ನಂತರ ಆ ಸ್ತ್ರೀಯು ಸಹೋದರಿಯ ಮನೆಗೆ ಬಂದು ತನ್ನ ವರ್ತನೆಗಾಗಿ ಕ್ಷಮೆಯಾಚಿಸಿದಳು ಮತ್ತು ಸಹೋದರಿಗೆ ಏನು ಹೇಳಲಿಕ್ಕಿತ್ತೋ ಅದಕ್ಕೆ ಕಿವಿಗೊಡಲು ಒಪ್ಪಿದಳು. ಅನೇಕ ವೇಳೆ ದಯೆಯುಳ್ಳ ಮಾತು ಉತ್ತಮ ಫಲಿತಾಂಶಗಳನ್ನು ತರುತ್ತದೆ.—ಜ್ಞಾನೋ. 15:1; 25:15.
6. ನಾವು ಶುಶ್ರೂಷೆಯಲ್ಲಿ ರಸವತ್ತಾದ ಸಂಭಾಷಣೆಯನ್ನು ಬಳಸುವುದು ಪ್ರಾಮುಖ್ಯವೇಕೆ?
6 ಸುವಾರ್ತೆಯನ್ನು ಸಾರುವಾಗ ರಸವತ್ತಾದ ಸಂಭಾಷಣೆಯನ್ನು ಬಳಸಲು ಪ್ರಯತ್ನಿಸಿ. ಮನೆಯವನು ಕಿವಿಗೊಡಲು ಬಯಸದಿದ್ದರೂ ಯೆಹೋವನ ಸಾಕ್ಷಿಗಳು ಇನ್ನೊಮ್ಮೆ ಆ ಮನೆಗೆ ಹೋದಾಗ ಅವನು ಕಿವಿಗೊಡಲು ಹೆಚ್ಚು ಮನಸ್ಸುಳ್ಳವನಾಗಿರಬಹುದು.