ನಾವು ಯೆಹೋವನಿಗೆ ಏನು ಕೊಡಬಹುದು?
1 ಮಾನವರು ದೇವರಿಗೆ ಏನನ್ನೋ ಕೊಡಸಾಧ್ಯವಿದೆ ಎಂದು ನಿಮಗೆ ಗೊತ್ತಿತ್ತೋ? ಹೇಬೆಲನು ತನ್ನ ಬಳಿಯಿದ್ದ ಅತ್ಯುತ್ತಮ ಕುರಿಗಳನ್ನು ಯೆಹೋವನಿಗೆ ಯಜ್ಞವಾಗಿ ಅರ್ಪಿಸಿದನು. ನೋಹ ಮತ್ತು ಯೋಬರು ಕೂಡ ತದ್ರೀತಿಯ ಯಜ್ಞಗಳನ್ನು ಅರ್ಪಿಸಿದರು. (ಆದಿ. 4:4; 8:20; ಯೋಬ 1:5) ಆ ಯಜ್ಞಗಳಿಂದ ದೇವರು ಸಿರಿವಂತನಾಗಲಿಲ್ಲ ಖಂಡಿತ. ಏಕೆಂದರೆ ಹೇಗೂ ಎಲ್ಲವೂ ಆತನದ್ದೇ. ಆದರೆ, ಈ ಯಜ್ಞಗಳು ಆ ನಂಬಿಗಸ್ತ ವ್ಯಕ್ತಿಗಳಿಗೆ ದೇವರ ಕಡೆಗಿದ್ದ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಿದವು. ಇಂದು ನಾವು ನಮ್ಮ ಸಮಯ, ಶಕ್ತಿ, ಸಂಪತ್ತನ್ನು ಯೆಹೋವನಿಗೆ “ಸ್ತೋತ್ರಯಜ್ಞ” ನೀಡಲಿಕ್ಕಾಗಿ ಬಳಸಬಹುದು.—ಇಬ್ರಿ. 13:15.
2 ಸಮಯ: ಶುಶ್ರೂಷೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ, ಅಷ್ಟೇನೂ ಪ್ರಾಮುಖ್ಯವಲ್ಲದ ವಿಷಯಗಳಿಂದ ಸಮಯ ತೆಗೆದು ‘ಸದ್ವಿನಿಯೋಗಿಸಿದರೆ’ ಅದೆಷ್ಟು ಪ್ರಶಂಸನೀಯ! (ಎಫೆ. 5:15, 16, NIBV) ನಾವು ನಮ್ಮ ಶೆಡ್ಯೂಲನ್ನು ಹೊಂದಿಸಿಕೊಂಡು ವರ್ಷದಲ್ಲಿ ಒಂದು ಅಥವಾ ಹೆಚ್ಚು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಹುದು. ಇಲ್ಲವೇ ನಾವು ಶುಶ್ರೂಷೆಯಲ್ಲಿ ಸಾಮಾನ್ಯವಾಗಿ ವ್ಯಯಿಸುವ ಸಮಯವನ್ನು ಹೆಚ್ಚಿಸಬಹುದು. ಪ್ರತಿ ವಾರ ಶುಶ್ರೂಷೆಯಲ್ಲಿ ಅರ್ಧ ತಾಸಿನಷ್ಟು ಹೆಚ್ಚಿನ ಸಮಯ ಕಳೆಯುವುದಾದರೆ ತಿಂಗಳಿಗೆ ನಮ್ಮ ಸೇವೆ ಎರಡು ತಾಸುಗಳಷ್ಟು ಹೆಚ್ಚಾಗುವುದು.
3 ಶಕ್ತಿ: ಶುಶ್ರೂಷೆಯಲ್ಲಿ ಬಳಸಲು ಶಕ್ತಿ ಇರಬೇಕಾದರೆ, ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡಲಾಗದಷ್ಟರ ಮಟ್ಟಿಗೆ ನಮ್ಮನ್ನು ದಣಿಸಿಬಿಡುವ ಮನೋರಂಜನೆ ಮತ್ತು ಉದ್ಯೋಗವನ್ನು ನಾವು ತೊರೆಯಬೇಕು. ನಮ್ಮ ‘ಮನಸ್ಸನ್ನು ಕುಗ್ಗಿಸಿ’ ದೇವರ ಸೇವೆಗಾಗಿ ಬೇಕಾದ ಶಕ್ತಿಯನ್ನು ನಮ್ಮಿಂದ ಹೀರಿಕೊಳ್ಳುವ ಚಿಂತೆಗಳನ್ನೂ ಬದಿಗೊತ್ತುವುದು ಅಗತ್ಯ. (ಜ್ಞಾನೋ. 12:25) ನ್ಯಾಯವಾದ ಚಿಂತೆಗಳೇ ನಮಗಿರುವುದಾದರೂ, ನಮ್ಮ ‘ಚಿಂತಾಭಾರವನ್ನು ಯೆಹೋವನ ಮೇಲೆ ಹಾಕುವುದು’ ಎಷ್ಟೊಂದು ಉತ್ತಮ!—ಕೀರ್ತ. 55:22; ಫಿಲಿ. 4:6, 7.
4 ಸಂಪತ್ತು: ಸಾರುವ ಕೆಲಸವನ್ನು ಬೆಂಬಲಿಸಲು ನಾವು ನಮ್ಮ ಭೌತಿಕ ಸಂಪತ್ತನ್ನೂ ಉಪಯೋಗಿಸಬಹುದು. ಅಗತ್ಯದಲ್ಲಿರುವವರಿಗೆ ನೆರವು ನೀಡಸಾಧ್ಯವಾಗುವಂತೆ, ಕ್ರಮವಾಗಿ ಏನನ್ನಾದರೂ “ಕೂಡಿಟ್ಟು”ಕೊಳ್ಳುವಂತೆ ಪೌಲನು ಜೊತೆ ಕ್ರೈಸ್ತರನ್ನು ಉತ್ತೇಜಿಸಿದನು. (1 ಕೊರಿಂ. 16:1, 2, NIBV) ತದ್ರೀತಿಯಲ್ಲಿ ನಾವು ಸಹ, ಸ್ಥಳಿಕ ಸಭೆಯ ಅಗತ್ಯಗಳಿಗಾಗಿ ಮತ್ತು ಲೋಕವ್ಯಾಪಕ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಸ್ವಲ್ಪ ಹಣವನ್ನು ಪ್ರತ್ಯೇಕಿಸಿಡಬಹುದು. ಮೊತ್ತವು ಚಿಕ್ಕದ್ದಾಗಿದ್ದರೂ ಹೃತ್ಪೂರ್ವಕವಾಗಿ ಕೊಡುವಲ್ಲಿ ಯೆಹೋವನು ಅದನ್ನು ಮೆಚ್ಚುತ್ತಾನೆ.—ಲೂಕ 21:1-4.
5 ಯೆಹೋವನು ನಮಗೆ ಬಹಳಷ್ಟನ್ನು ಕೊಟ್ಟಿದ್ದಾನೆ. (ಯಾಕೋ. 1:17) ನಮ್ಮ ಸಮಯ, ಶಕ್ತಿ, ಸಂಪತ್ತನ್ನು ಧಾರಾಳವಾಗಿ ಆತನ ಸೇವೆಯಲ್ಲಿ ಉಪಯೋಗಿಸುವ ಮೂಲಕ ನಾವಾತನಿಗೆ ಕೃತಜ್ಞತೆ ತೋರಿಸುತ್ತೇವೆ. ಇದು ಯೆಹೋವನನ್ನು ಸಂತೋಷಪಡಿಸುತ್ತದೆ. “ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.”—2 ಕೊರಿಂ. 9:7.