ಶುಶ್ರೂಷೆಯಲ್ಲಿ ತೊಡಗಿರುವಾಗ ಪರಸ್ಪರ ಭಕ್ತಿವೃದ್ಧಿ ಮಾಡುವುದು
1 ನಾವೆಲ್ಲರೂ ಉತ್ತೇಜನದಾಯಕವಾದ ‘ಸಮಯೋಚಿತ ಮಾತುಗಳನ್ನು’ ಕೇಳಲು ಇಷ್ಟಪಡುತ್ತೇವೆ. (ಜ್ಞಾನೋ. 25:11) ಇತರರೊಂದಿಗೆ ಶುಶ್ರೂಷೆಯಲ್ಲಿ ಕೆಲಸಮಾಡುವಾಗ, ನಮ್ಮ ಸಂಭಾಷಣೆಯಿಂದ ಅವರಿಗೆ ಉತ್ತೇಜನವಾಗುವಂತೆ ಹೇಗೆ ನೋಡಿಕೊಳ್ಳಬಲ್ಲೆವು?
2 ಭಕ್ತಿವೃದ್ಧಿ ಮಾಡುವ ಸಂಭಾಷಣೆ: ಸಾರುವ ಕಾರ್ಯದಲ್ಲಿ ತೊಡಗಿರುವಾಗ ನಮ್ಮ ಸಂಭಾಷಣೆಯಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ಒಳಗೂಡಿಸುವುದು ಎಷ್ಟು ಭಕ್ತಿವೃದ್ಧಿ ಮಾಡುವುದು! (ಕೀರ್ತ. 37:30) ನಾವು ಉಪಯೋಗಿಸಲಿರುವ ನಿರೂಪಣೆ ಅಥವಾ ಕ್ಷೇತ್ರ ಸೇವೆಯ ಇತ್ತೀಚಿನ ಯಾವುದೇ ಉತ್ತೇಜನದಾಯಕ ಅನುಭವಗಳ ಕುರಿತು ಮಾತಾಡಬಹುದು. (ಅ. ಕೃ. 15:3) ವೈಯಕ್ತಿಕ ಬೈಬಲ್ ಅಧ್ಯಯನದಲ್ಲಿ, ಇತ್ತೀಚಿನ ಪತ್ರಿಕೆಗಳಲ್ಲಿ ಅಥವಾ ಸಭಾ ಕೂಟಗಳಲ್ಲಿ ನೀವು ಕಲಿತ ಆಸಕ್ತಿಕರ ಅಂಶವನ್ನು ಹಂಚಿಕೊಳ್ಳಬಹುದೋ? ರಾಜ್ಯ ಸಭಾಗೃಹದಲ್ಲಿ ಇತ್ತೀಚೆಗೆ ಕೇಳಿದ ಸಾರ್ವಜನಿಕ ಭಾಷಣದ ಅಂಶಗಳನ್ನು ಕೂಡ ಚರ್ಚಿಸಬಹುದು.
3 ಮನೆಯವನು ಆಕ್ಷೇಪಿಸಿದಾಗ, ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲು ನಮಗೆ ಸಾಧ್ಯವಾಗದೇ ಹೋದಲ್ಲಿ ನಾವು ಹತಾಶರಾಗಬಹುದು. ಮುಂದೆ ಇಂಥ ಸನ್ನಿವೇಶಗಳನ್ನು ಹೇಗೆ ನಿಭಾಯಿಸುವುದೆಂಬುದರ ಕುರಿತು, ಆ ಮನೆಯನ್ನು ಬಿಟ್ಟುಬಂದ ನಂತರ ನಿಮ್ಮೊಟ್ಟಿಗೆ ಇರುವವರೊಂದಿಗೆ ಕೆಲವು ನಿಮಿಷ ಚರ್ಚಿಸುವುದು ತುಂಬ ಸಹಾಯಕಾರಿ ಆಗಿರಬಹುದು. ಇದಕ್ಕಾಗಿ ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯನ್ನು ಕೂಡ ಪರಿಗಣಿಸಬಹುದು. ನಮ್ಮ ಒಟ್ಟಿಗಿದ್ದವರು ಉಪಯೋಗಿಸಿದ ನಿರೂಪಣೆಯ ಯಾವುದೇ ಅಂಶ ನಮಗೆ ಇಷ್ಟವಾದರೆ ಅದರ ಕುರಿತು ಯಥಾರ್ಥ ಮನಸ್ಸಿನಿಂದ ಪ್ರಶಂಸಿಸುವುದು ಅವರನ್ನು ಉತ್ತೇಜಿಸುತ್ತದೆ.
4 ಮೊದಲ ಹೆಜ್ಜೆ ತೆಗೆದುಕೊಳ್ಳುವುದು: ನಮ್ಮ ಪುಸ್ತಕ ಅಧ್ಯಯನ ಗುಂಪಿನ ಕೆಲವರೊಂದಿಗೆ ನಾವು ಶುಶ್ರೂಷೆಯಲ್ಲಿ ಕೆಲಸಮಾಡಿ ತುಂಬ ಸಮಯ ದಾಟಿದೆಯೋ? ನಮ್ಮೊಂದಿಗೆ ಶುಶ್ರೂಷೆಯಲ್ಲಿ ಜೊತೆಗೂಡುವಂತೆ ಅವರನ್ನು ವೈಯಕ್ತಿಕವಾಗಿ ಆಮಂತ್ರಿಸುವುದು ‘ಪರಸ್ಪರ ಪ್ರೋತ್ಸಾಹಕ್ಕೆ’ ದಾರಿ ಮಾಡಿಕೊಡುವುದು. (ರೋಮಾ. 1:12, NIBV) ರೆಗ್ಯುಲರ್ ಮತ್ತು ಆಕ್ಸಿಲಿಯರಿ ಪಯನೀಯರರು ತಮ್ಮೊಂದಿಗೆ ಇತರರು, ವಿಶೇಷವಾಗಿ ಬೆಳಗ್ಗೆ ಬೇಗನೆ ಮತ್ತು ಸಾಯಂಕಾಲಗಳಲ್ಲಿ ಸೇವೆ ಮಾಡುವುದನ್ನು ಬಹಳ ಗಣ್ಯ ಮಾಡುತ್ತಾರೆ. ಏಕೆಂದರೆ ಆ ಸಮಯಗಳಲ್ಲಿ ಅವರೊಂದಿಗೆ ಜೊತೆಗೂಡಲು ಹೆಚ್ಚು ಪ್ರಚಾರಕರು ಸಿಗುವುದಿಲ್ಲ. ಪಯನೀಯರರೊಂದಿಗೆ ಹೋಗುವ ಮೂಲಕ ನಾವು ಅವರಿಗೆ ಸಹಾಯ ಮಾಡಬಹುದು. ಅನಾರೋಗ್ಯದ ನಿಮಿತ್ತ ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲಾಗದ ಅಶಕ್ತ ಪ್ರಚಾರಕರಿದ್ದಾರೋ? ಇಂಥವರು ನಮ್ಮೊಂದಿಗೆ ಶುಶ್ರೂಷೆಯಲ್ಲಿ ಜೊತೆಗೂಡುವಂತೆ, ಬಹುಶಃ ಒಂದು ಬೈಬಲ್ ಅಧ್ಯಯನಕ್ಕೆ ಬರುವಂತೆ ಏರ್ಪಡಿಸಬಹುದು. ಇದರಿಂದ ಅವರಿಗೂ ನಮಗೂ ಪ್ರಯೋಜನವಾಗುವುದು.—ಜ್ಞಾನೋ. 27:17.
5 ಸಣ್ಣ ವಿಚಾರಗಳೇ ಆಗಿರಲಿ, ಅದಕ್ಕಾಗಿ ಪ್ರಶಂಸಿಸುವುದು ಮತ್ತು ಮೆಚ್ಚಿಕೆ ವ್ಯಕ್ತಪಡಿಸುವುದು ಯಾವಾಗಲೂ ಇತರರನ್ನು ಉತ್ತೇಜಿಸುತ್ತದೆ. ಇತರರೊಂದಿಗೆ ಶುಶ್ರೂಷೆಯಲ್ಲಿ ಕೆಲಸಮಾಡುವಾಗ ನಾವು ಇದನ್ನು ಮನಸ್ಸಿನಲ್ಲಿಡಬೇಕು ಏಕೆಂದರೆ ನಾವು “ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ” ಇರಲು ಬಯಸುತ್ತೇವೆ.—1 ಥೆಸ. 5:11.