ಬೈಬಲ್ ಪುಸ್ತಕ ನಂಬರ್ 41 ಮಾರ್ಕ
ಲೇಖಕ: ಮಾರ್ಕ
ಬರೆಯಲ್ಪಟ್ಟ ಸ್ಥಳ: ರೋಮ್
ಬರೆದು ಮುಗಿಸಿದ್ದು: ಸುಮಾರು ಸಾ.ಶ. 60-65
ಆವರಿಸಲ್ಪಟ್ಟ ಕಾಲ: ಸಾ.ಶ. 29-33
ಯೇಸುವನ್ನು ಗೆತ್ಸೇಮನೆಯಲ್ಲಿ ದಸ್ತಗಿರಿ ಮಾಡಿದಾಗ ಅಪೊಸ್ತಲರು ಓಡಿಹೋಗಲಾಗಿ, “ಒಬ್ಬಾನೊಬ್ಬ ಯೌವನಸ್ಥನು ಬರೀ ಮೈಮೇಲೆ ನಾರುಮಡಿಯನ್ನು ಹೊದ್ದವನಾಗಿ” ಅವನ ಹಿಂದೆ ಬಂದನು. ಜನರ ಗುಂಪು ಅವನನ್ನು ಸಹ ಹಿಡಿಯಲು ಪ್ರಯತ್ನಿಸಿದಾಗ, “ಅವನು ಆ ನಾರುಮಡಿಯನ್ನು ಬಿಟ್ಟು ಬರೀ ಮೈಲಿ ಓಡಿಹೋದನು.” ಈ ಯೌವನಸ್ಥನು ಮಾರ್ಕನೇ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಅಪೊಸ್ತಲರ ಕೃತ್ಯ ಪುಸ್ತಕದಲ್ಲಿ ಅವನನ್ನು “ಮಾರ್ಕನೆನಿಸಿಕೊಳ್ಳುವ ಯೋಹಾನ” ಎಂದು ವರ್ಣಿಸಲಾಗಿದೆ. ಯೆರೂಸಲೇಮಿನಲ್ಲಿ, ಸ್ವಂತ ಮನೆ ಮತ್ತು ಸೇವಕರಿದ್ದ ಒಂದು ಅನುಕೂಲಸ್ಥ ಕುಟುಂಬದಿಂದ ಅವನು ಬಂದಿರಬಹುದು. ಅವನ ತಾಯಿ ಮರಿಯಳು ಕೂಡ ಕ್ರೈಸ್ತಳಾಗಿದ್ದಳು ಮತ್ತು ಆದಿಸಭೆಯು ಆಕೆಯ ಮನೆಯನ್ನು ಕೂಟದ ಸ್ಥಳವಾಗಿ ಬಳಸಿತ್ತು. ದೇವದೂತನು ಪೇತ್ರನನ್ನು ಸೆರೆಮನೆಯಿಂದ ಬಿಡಿಸಿದಾಗ, ಪೇತ್ರನು ಈ ಮನೆಗೆ ಹೋಗಿ ಅಲ್ಲಿ ಸಹೋದರರು ಕೂಡಿಬಂದಿರುವುದನ್ನು ಕಂಡನು.—ಮಾರ್ಕ 14:51, 52; ಅ.ಕೃ. 12:12, 13.
2 ಕುಪ್ರದ್ವೀಪದ ಲೇವಿಯನಾಗಿದ್ದ ಬಾರ್ನಬನೆಂಬ ಮಿಷನೆರಿ ಮಾರ್ಕನ ಸೋದರಸಂಬಂಧಿ. (ಅ.ಕೃ. 4:36; ಕೊಲೊ. 4:10) ಬಾರ್ನಬನು ಕ್ಷಾಮಪರಿಹಾರ ಕಾರ್ಯಕ್ಕಾಗಿ ಪೌಲನೊಂದಿಗೆ ಯೆರೂಸಲೇಮಿಗೆ ಬಂದಾಗ, ಮಾರ್ಕನಿಗೆ ಪೌಲನ ಪರಿಚಯವೂ ಆಯಿತು. ಸಭೆಯ ಇಂಥ ಸಹವಾಸಗಳು ಮತ್ತು ಹುರುಪಿನ ಶುಶ್ರೂಷಕರ ಭೇಟಿಗಳು ಮಾರ್ಕನಲ್ಲಿ ಮಿಷನೆರಿ ಸೇವೆಯನ್ನು ಪ್ರವೇಶಿಸುವ ಅಪೇಕ್ಷೆಯನ್ನು ಹುಟ್ಟಿಸಿತ್ತು. ಆದಕಾರಣ, ಅವನು ಪೌಲ ಮತ್ತು ಬಾರ್ನಬರಿಗೆ, ಅವರ ಪ್ರಥಮ ಮಿಷನೆರಿ ಪ್ರಯಾಣದಲ್ಲಿ ಸಂಗಾತಿಯೂ ಪರಿಚಾರಕನೂ ಆದನೆಂದು ನಾವು ಕಂಡುಕೊಳ್ಳುತ್ತೇವೆ. ಆದರೂ, ಯಾವುದೋ ಕಾರಣದಿಂದ, ಮಾರ್ಕನು ಅವರನ್ನು ಪಂಫುಲ್ಯದ ಪೆರ್ಗದಲ್ಲಿ ಬಿಟ್ಟು ಯೆರೂಸಲೇಮಿಗೆ ಹಿಂದಿರುಗಿದನು. (ಅ.ಕೃ. 11:29, 30; 12:25; 13:5, 13) ಈ ಕಾರಣದಿಂದ ತನ್ನ ಎರಡನೆಯ ಮಿಷನೆರಿ ಸಂಚಾರದಲ್ಲಿ ಪೌಲನು ಮಾರ್ಕನನ್ನು ಸಂಗಡ ಕರೆದೊಯ್ಯಲು ನಿರಾಕರಿಸಿದನು, ಮತ್ತು ಇದರಿಂದಾಗಿ ಪೌಲ ಮತ್ತು ಬಾರ್ನಬರ ಮಧ್ಯೆ ಒಡಕು ಉಂಟಾಯಿತು. ಆಗ ಪೌಲನು ಸೀಲನನ್ನು ಕರೆದೊಯ್ಯಲಾಗಿ, ಬಾರ್ನಬನು ತನ್ನ ಸೋದರಸಂಬಂಧಿ ಮಾರ್ಕನನ್ನು ಕುಪ್ರದ್ವೀಪಕ್ಕೆ ನೌಕಾಯಾನದಲ್ಲಿ ಸಂಗಡ ಕರೆದೊಯ್ದನು.—ಅ.ಕೃ. 15:36-41.
3 ಮಾರ್ಕನು ಯೋಗ್ಯ ಶುಶ್ರೂಷಕನಾಗಿ ಪರಿಣಮಿಸಿ, ಬಾರ್ನಬನಿಗೆ ಮಾತ್ರವಲ್ಲ, ಅಪೊಸ್ತಲರಾದ ಪೇತ್ರ ಮತ್ತು ಪೌಲನಿಗೂ ಸಮಯಾನಂತರ ಉಪಯುಕ್ತ ಸಹಾಯಕನಾದನು. ರೋಮ್ನಲ್ಲಿ ಪೌಲನು ಪ್ರಥಮ ಬಾರಿ (ಸುಮಾರು ಸಾ.ಶ. 60-61) ಸೆರೆಮನೆವಾಸಿಯಾದಾಗ ಮಾರ್ಕನು ಅವನೊಂದಿಗಿದ್ದನು. (ಫಿಲೆ. 1, 24) ಬಳಿಕ, ಮಾರ್ಕನು ಸಾ.ಶ. 62 ಮತ್ತು 64ರ ಮಧ್ಯದಲ್ಲಿ ಬಾಬೆಲಿನಲ್ಲಿ ಪೇತ್ರನೊಂದಿಗೆ ಇದ್ದನು. (1 ಪೇತ್ರ 5:13, 14) ಪೌಲನು ಪ್ರಾಯಶಃ ಸಾ.ಶ. 65ರಲ್ಲಿ ಪುನಃ ಸೆರೆವಾಸಿಯಾದಾಗ, ತಿಮೊಥೆಯನು ಮಾರ್ಕನನ್ನು ಸಂಗಡ ಕರೆತರುವಂತೆ ಹೇಳಿ, “ಅವನು ನನಗೆ ಸೇವೆಗಾಗಿ ಉಪಯುಕ್ತನಾಗಿದ್ದಾನೆ” ಎಂದು ಪತ್ರದಲ್ಲಿ ಬರೆಯುತ್ತಾನೆ. (2 ತಿಮೊ. 1:8; 4:11) ಇದು ಬೈಬಲ್ ದಾಖಲೆಯಲ್ಲಿ ಮಾರ್ಕನ ಕುರಿತ ಕೊನೆಯ ಪ್ರಸ್ತಾಪವಾಗಿದೆ.
4 ಸುವಾರ್ತಾ ಪುಸ್ತಕಗಳಲ್ಲಿ ಅತಿ ಚಿಕ್ಕದಾದ ಈ ಪುಸ್ತಕವನ್ನು ರಚಿಸಿದ ಖ್ಯಾತಿ ಈ ಮಾರ್ಕನಿಗೆ ಸಲ್ಲಿಸಲಾಗಿದೆ. ಅವನು ಯೇಸುವಿನ ಅಪೊಸ್ತಲರ ಜೊತೆಕೆಲಸಗಾರನೂ ತನ್ನ ಸ್ವಂತ ಜೀವನವನ್ನು ಸುವಾರ್ತೆಗಾಗಿ ಅರ್ಪಿಸಿದವನೂ ಆಗಿದ್ದನು. ಆದರೆ ಮಾರ್ಕನು ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿರಲಿಲ್ಲ. ಅವನು ಯೇಸುವಿನ ನಿಕಟ ಸಂಗಾತಿಯೂ ಆಗಿರಲಿಲ್ಲ. ಹಾಗಾದರೆ, ಯೇಸುವಿನ ಶುಶ್ರೂಷೆಯಾದ್ಯಂತದ ವೃತ್ತಾಂತವನ್ನು ಸಜೀವವನ್ನಾಗಿ ಮಾಡಿದ ಆಪ್ತ ವಿವರಗಳನ್ನು ಎಲ್ಲಿಂದ ಪಡೆದನು? ಪಾಪ್ಯಾಸ್, ಆರಜನ್ ಮತ್ತು ಟೆರ್ಟಲಿಯನ್ ಇವರ ಆದಿ ಬರಹಗಳಿಗನುಸಾರ, ಇದರ ಮೂಲನು ಪೇತ್ರನೇ. ಏಕೆಂದರೆ ಮಾರ್ಕನು ಪೇತ್ರನೊಂದಿಗೆ ಆಪ್ತವಾಗಿ ಜೊತೆಗೂಡಿದ್ದನು.a ಪೇತ್ರನು ಅವನನ್ನು “ನನ್ನ ಮಗನಾದ ಮಾರ್ಕನು” ಎಂದು ಕರೆಯಲಿಲ್ಲವೆ? (1 ಪೇತ್ರ 5:14) ಕಾರ್ಯತಃ, ಮಾರ್ಕನು ಬರೆದಿರುವ ಸಕಲ ಘಟನೆಗಳಿಗೆ ಪೇತ್ರನು ಪ್ರತ್ಯಕ್ಷಸಾಕ್ಷಿ ಆಗಿದ್ದನು. ಆದುದರಿಂದ, ಬೇರೆ ಸುವಾರ್ತಾ ಪುಸ್ತಕಗಳಲ್ಲಿಲ್ಲದ ಅನೇಕ ವಿವರಣಾತ್ಮಕ ಅಂಶಗಳನ್ನು ಅವನು ಪೇತ್ರನಿಂದ ಕೇಳಿರಸಾಧ್ಯವಿತ್ತು. ದೃಷ್ಟಾಂತಕ್ಕೆ, ಮಾರ್ಕನು ಜೆಬೆದಾಯನ “ಕೂಲಿಯಾಳುಗಳ” ಬಗ್ಗೆ, “ಮೊಣಕಾಲೂರಿಕೊಂಡು” ಯೇಸುವನ್ನು ಬೇಡಿದ ಕುಷ್ಠರೋಗಿಯ ಬಗ್ಗೆ, “ಕಲ್ಲುಗಳಿಂದ ತನ್ನನ್ನು ಕಡಿದುಕೊಳ್ಳುತ್ತ” ಇದ್ದ ದೆವ್ವಹಿಡಿದವನ ಬಗ್ಗೆ ಮತ್ತು ಯೇಸು, ಎಣ್ಣೇಮರಗಳ ಗುಡ್ಡದ ಮೇಲೆ “ದೇವಾಲಯಕ್ಕೆ ಎದುರಾಗಿ” ಕೂತು, “ಮನುಷ್ಯಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ” ಬರುವ ವಿಷಯದಲ್ಲಿ ಪ್ರವಾದಿಸಿದ ಬಗ್ಗೆ ಮಾತಾಡುತ್ತಾನೆ.—ಮಾರ್ಕ 1:20, 40; 5:5; 13:3, 26.
5 ಪೇತ್ರನು ಗಾಢವಾದ ಭಾವಾವೇಶದ ಮನುಷ್ಯನಾಗಿದ್ದುದರಿಂದ, ಅವನು ಯೇಸುವಿನ ಅನಿಸಿಕೆಗಳನ್ನೂ ಭಾವಾವೇಶಗಳನ್ನೂ ಮಾನ್ಯ ಮಾಡಿ ಅವನ್ನು ಮಾರ್ಕನಿಗೆ ವರ್ಣಿಸಸಾಧ್ಯವಿತ್ತು. ಆದಕಾರಣ ಯೇಸುವಿನ ಅನಿಸಿಕೆಗಳನ್ನೂ ಪ್ರತಿಕ್ರಿಯೆಗಳನ್ನೂ ಮಾರ್ಕನು ಪದೇಪದೇ ವರ್ಣಿಸುತ್ತಾನೆ. ದೃಷ್ಟಾಂತಕ್ಕೆ, ಯೇಸು “ದುಃಖಪಟ್ಟು ಕೋಪದಿಂದ ಸುತ್ತಲೂ ಅವರನ್ನು” ನೋಡಿದ್ದನ್ನು, ‘ನಿಟ್ಟುಸುರು ಬಿಟ್ಟದ್ದನ್ನು,’ “ಆತ್ಮದಲ್ಲಿ ನೊಂದು ನಿಟ್ಟುಸುರು” ಬಿಟ್ಟದ್ದನ್ನು ದಾಖಲೆಮಾಡುತ್ತಾನೆ. (3:5; 7:34; 8:12) ಯೇಸುವಿಗೆ ಒಬ್ಬ ಧನಿಕ ಯುವ ಅಧಿಕಾರಿಯ ಕಡೆಗಿದ್ದ ಮನೋಭಾವವನ್ನು, ಯೇಸು ಅವನನ್ನು ‘ಪ್ರೀತಿಸಿದ್ದನ್ನು’ ನಮಗೆ ಹೇಳುವುದು ಮಾರ್ಕನೇ. (10:21) ಯೇಸು ಒಂದು ಚಿಕ್ಕ ಮಗುವನ್ನು ತನ್ನ ಶಿಷ್ಯರ ಮಧ್ಯದಲ್ಲಿ ನಿಲ್ಲಿಸಿದ್ದು ಮಾತ್ರವಲ್ಲ, ಅದನ್ನು ‘ಅಪ್ಪಿಕೊಂಡದ್ದನ್ನು’ ಮತ್ತು ಇನ್ನೊಂದು ಸಂದರ್ಭದಲ್ಲಿ, ‘ಮಕ್ಕಳನ್ನು ಅಪ್ಪಿಕೊಂಡದ್ದನ್ನು’ ತಿಳಿಸುವ ವೃತ್ತಾಂತದಲ್ಲಿ ನಾವೆಂಥ ಹೃದಯೋಲ್ಲಾಸವನ್ನು ಕಂಡುಕೊಳ್ಳುತ್ತೇವೆ!—9:36; 10:13-16.
6 ಪೇತ್ರನ ವಿಶಿಷ್ಟ ಗುಣಗಳಲ್ಲಿ ಕೆಲವನ್ನು ನಾವು ಮಾರ್ಕನ ಬರೆವಣಿಗೆಯ ಶೈಲಿಯಲ್ಲಿ ನೋಡುತ್ತೇವೆ. ಅದು ಆವೇಗಪರವೂ, ಸ್ವಾರಸ್ಯಕರವೂ, ಚೈತನ್ಯಪೂರ್ಣವೂ, ಜೀವಂತಿಕೆಯುಳ್ಳದ್ದೂ, ವರ್ಣನಾತ್ಮಕವೂ ಆಗಿದೆ. ಅವನು ಸಂಭವಗಳನ್ನು ಸಾಕಷ್ಟು ವೇಗದಲ್ಲಿ ಹೇಳುವುದಕ್ಕೆ ಅಸಮರ್ಥನೋ ಎಂಬಂತೆ ತೋರಿಬರುತ್ತಾನೆ. ದೃಷ್ಟಾಂತಕ್ಕೆ, “ಕೂಡಲೇ” ಎಂಬ ಪದವು ಪದೇಪದೇ ಕಂಡುಬಂದು, ಅದು ಕಥೆಯನ್ನು ನಾಟಕೀಯ ಶೈಲಿಯಲ್ಲಿ ಹೇಳುತ್ತದೆ.
7 ಮಾರ್ಕನಿಗೆ ಮತ್ತಾಯನ ಸುವಾರ್ತಾ ವೃತ್ತಾಂತವನ್ನು ಓದುವ ಅವಕಾಶವಿತ್ತು ಮತ್ತು ಅವನ ದಾಖಲೆಯಲ್ಲಿ ಬೇರೆ ಸುವಾರ್ತಾ ಪುಸ್ತಕಗಳಲ್ಲಿ ಇಲ್ಲದ ಭಾಗವು ಕೇವಲ 7 ಪ್ರತಿಶತವೇ ಆಗಿದೆ. ಆದರೂ ಮಾರ್ಕನು, ಮತ್ತಾಯನ ಸುವಾರ್ತಾ ಪುಸ್ತಕವನ್ನು ಸಂಕ್ಷೇಪಿಸಿ, ಅದಕ್ಕೆ ಕೆಲವು ವಿಶೇಷ ವಿವರಗಳನ್ನು ಕೂಡಿಸಿದನು ಅಷ್ಟೇ ಎಂದು ಹೇಳುವುದು ತಪ್ಪು. ಮತ್ತಾಯನು ಯೇಸುವನ್ನು ವಾಗ್ದತ್ತ ಮೆಸ್ಸೀಯನೆಂದು ಚಿತ್ರಿಸಿರುವಾಗ, ಮಾರ್ಕನು ಯೇಸುವಿನ ಜೀವನ ಮತ್ತು ಕಾರ್ಯಗಳನ್ನು ಇನ್ನೊಂದು ಕೋನದಿಂದ ಚರ್ಚಿಸುತ್ತಾನೆ. ಅವನು ಯೇಸುವನ್ನು ಪವಾಡಪುರುಷನಾದ ದೇವಕುಮಾರನೆಂದು, ಜಯಶಾಲಿ ರಕ್ಷಕನೆಂದು ಚಿತ್ರೀಕರಿಸುತ್ತಾನೆ. ಮಾರ್ಕನು ಕ್ರಿಸ್ತನ ಪ್ರಸಂಗಗಳು ಮತ್ತು ಬೋಧನೆಗಳ ಮೇಲಲ್ಲ, ಅವನ ಚಟುವಟಿಕೆಗಳ ಮೇಲೆ ಒತ್ತು ಹಾಕುತ್ತಾನೆ. ಮಾರ್ಕನು ಯೇಸುವಿನ ದೃಷ್ಟಾಂತಗಳಲ್ಲಿ ಕೆಲವೊಂದನ್ನು, ದೀರ್ಘ ಭಾಷಣಗಳಲ್ಲಿ ಒಂದನ್ನು ಮಾತ್ರ ವರದಿ ಮಾಡಿ, ಪರ್ವತ ಪ್ರಸಂಗವನ್ನು ಬಿಟ್ಟುಬಿಡುತ್ತಾನೆ. ಈ ಕಾರಣದಿಂದಲೇ, ಮಾರ್ಕನ ಸುವಾರ್ತಾ ಪುಸ್ತಕದಲ್ಲಿ ಇತರರು ವರ್ಣಿಸಿರುವಷ್ಟೇ ಘಟನೆಗಳು ಕೂಡಿದ್ದರೂ ಅದು ಸಂಕ್ಷೇಪರೂಪದಲ್ಲಿದೆ. ಕಡಮೆಪಕ್ಷ 19 ಅದ್ಭುತಗಳನ್ನು ವಿಶಿಷ್ಟವಾಗಿ ಸೂಚಿಸಲಾಗಿದೆ.
8 ಮತ್ತಾಯನು ತನ್ನ ಸುವಾರ್ತಾ ಪುಸ್ತಕವನ್ನು ಯೆಹೂದ್ಯರಿಗಾಗಿ ಬರೆದಿರುವಾಗ, ಮಾರ್ಕನು ಪ್ರಧಾನವಾಗಿ ರೋಮನ್ ಜನರಿಗಾಗಿ ಬರೆದಿರುವುದು ಸುಸ್ಪಷ್ಟ. ಅದು ನಮಗೆ ಹೇಗೆ ಗೊತ್ತು? ಸಂಭಾಷಣೆಗಳನ್ನು ವರದಿಸುವಾಗ ಮಾತ್ರ ಮೋಶೆಯ ಧರ್ಮಶಾಸ್ತ್ರವನ್ನು ಹೆಸರಿಸಲಾಗಿದೆ. ಮತ್ತು ಯೇಸುವಿನ ವಂಶಾವಳಿಯನ್ನು ಬಿಟ್ಟುಬಿಡಲಾಗಿದೆ. ಕ್ರಿಸ್ತನ ಸುವಾರ್ತೆಯನ್ನು ಸಾರ್ವತ್ರಿಕ ಪ್ರಮುಖತೆಯದ್ದಾಗಿ ತಿಳಿಸಲಾಗಿದೆ. ಯೆಹೂದ್ಯೇತರ ವಾಚಕರು ಪರಿಚಿತರಾಗಿರದ ಯೆಹೂದಿ ಪದ್ಧತಿಗಳ ಮತ್ತು ಬೋಧನೆಗಳ ವಿಷಯದಲ್ಲಿ ಅವನು ವಿವರಣಾತ್ಮಕ ಹೇಳಿಕೆಗಳನ್ನು ಕೊಡುತ್ತಾನೆ. (2:18; 7:3, 4; 14:12; 15:42) ಅರಮೇಯಿಕ್ ಭಾಷೆಯ ಅಭಿವ್ಯಕ್ತಿಗಳನ್ನು ಭಾಷಾಂತರಿಸಲಾಗಿದೆ. (3:17; 5:41; 7:11, 34; 14:36; 15:22, 34) ಅವನು ಪಲೆಸ್ತೀನದ ಭೌಗೋಳಿಕ ಹೆಸರುಗಳನ್ನು ಮತ್ತು ಸಸ್ಯಗಳನ್ನು ವಿವರವಾಗಿ ವರ್ಣಿಸುತ್ತಾನೆ. (1:5, 13; 11:13; 13:3) ಯೆಹೂದಿ ನಾಣ್ಯಗಳ ಬೆಲೆಯನ್ನು ರೋಮನ್ ಹಣದಲ್ಲಿ ಕೊಡಲಾಗಿದೆ. (12:42, NW ಪಾದಟಿಪ್ಪಣಿ) ಬೇರೆ ಸುವಾರ್ತಾ ಪುಸ್ತಕಗಳ ಲೇಖಕರಿಗಿಂತ ಹೆಚ್ಚು ಲ್ಯಾಟಿನ್ ಪದಗಳನ್ನು, ಉದಾಹರಣೆಗೆ, ಸ್ಪೆಕ್ಯುಲೇಟರ್ (ಮೈಗಾವಲಿನ ಸಿಪಾಯಿ), ಪ್ರೇಟೋರಿಯಮ್ (ಅಧಿಪತಿಯ ಅರಮನೆ), ಮತ್ತು ಸೆಂಟೂರಿಯೊ (ಶತಾಧಿಪತಿ) ಎಂಬ ಪದಗಳನ್ನು ಅವನು ಬಳಸುತ್ತಾನೆ.—6:27; 15:16, 39.
9 ಮಾರ್ಕನು ಪ್ರಧಾನವಾಗಿ ರೋಮ್ನ ಜನರಿಗಾಗಿ ಬರೆದನೆಂದು ವ್ಯಕ್ತವಾಗುವುದರಿಂದ, ಅವನು ರೋಮ್ನಲ್ಲೇ ಅದನ್ನು ಬರೆದನೆಂಬುದು ಸಂಭವನೀಯ. ಆದಿಯ ಪರಂಪರೆಯಾಗಿ ಬಂದಿರುವ ಅಭಿಪ್ರಾಯ ಮತ್ತು ಪುಸ್ತಕದಲ್ಲಿನ ವಿಷಯಗಳು, ರೋಮ್ನಲ್ಲಿ ಅಪೊಸ್ತಲ ಪೌಲನ ಒಂದನೇ ಇಲ್ಲವೆ ಎರಡನೇ ಸೆರೆವಾಸದ ಸಮಯದಲ್ಲಿ ಅಂದರೆ ಸಾ.ಶ. 60-65ರ ವರುಷಗಳಲ್ಲಿ ಅದು ರಚಿಸಲ್ಪಟ್ಟಿತೆಂಬ ತೀರ್ಮಾನಕ್ಕೆ ಬರುವಂತೆ ಸಾಧ್ಯಗೊಳಿಸುತ್ತವೆ. ಆ ವರುಷಗಳಲ್ಲಿ ಮಾರ್ಕನು ಒಮ್ಮೆ ಅಥವಾ ಪ್ರಾಯಶಃ ಎರಡು ಬಾರಿ ರೋಮ್ನಲ್ಲಿದ್ದನು. ಎರಡನೆಯ ಮತ್ತು ಮೂರನೆಯ ಶತಮಾನಗಳ ಮುಖ್ಯ ಅಧಿಕಾರಿಗಳೆಲ್ಲರೂ ಮಾರ್ಕನೇ ಲೇಖಕನೆಂಬುದನ್ನು ಸ್ಥಿರೀಕರಿಸುತ್ತಾರೆ. ಎರಡನೆಯ ಶತಮಾನದ ಮಧ್ಯಭಾಗದೊಳಗೆ ಈ ಸುವಾರ್ತಾ ಪುಸ್ತಕವು ಕ್ರೈಸ್ತರ ಮಧ್ಯೆ ಚಲಾವಣೆಯಲ್ಲಿತ್ತು. ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಎಲ್ಲ ಆದಿ ಪೂರ್ಣಪಟ್ಟಿಗಳಲ್ಲಿನ ಅದರ ನಮೂದಿಸುವಿಕೆಯು, ಮಾರ್ಕನ ಸುವಾರ್ತಾ ಪುಸ್ತಕದ ವಿಶ್ವಾಸಾರ್ಹತೆಯನ್ನು ಸ್ಥಿರಪಡಿಸುತ್ತದೆ.
10 ಆದರೂ, ಅಧ್ಯಾಯ 16, ವಚನ 8ಕ್ಕೆ ಕೆಲವು ಬಾರಿ ಕೂಡಿಸಿರುವ ದೀರ್ಘ ಮತ್ತು ಸಂಕ್ಷಿಪ್ತ ಸಮಾಪ್ತಿಗಳನ್ನು ವಿಶ್ವಾಸಾರ್ಹವಾಗಿ ಕಾಣಬಾರದು. ಅವು ಪೂರ್ವಕಾಲದ ಅನೇಕ, ಅಂದರೆ, ಸೈನಾಯ್ಟಿಕ್ ಮತ್ತು ವ್ಯಾಟಿಕನ್ ನಂ. 1209ನಂಥ ಹಸ್ತಪ್ರತಿಗಳಲ್ಲಿ ಕಂಡುಬರುವುದಿಲ್ಲ. ವಿಶ್ವಾಸಾರ್ಹವಾದ ದಾಖಲೆಯು, “ಅವರು ಹೆದರಿಕೊಂಡದರಿಂದ ಯಾರಿಗೂ ಏನೂ ಹೇಳಲಿಲ್ಲ” ಎಂಬ ಮಾತುಗಳೊಂದಿಗೆ ಮುಕ್ತಾಯಗೊಳ್ಳುತ್ತದೆಂದು ನಾಲ್ಕನೆಯ ಶತಮಾನದ ವಿದ್ವಾಂಸರಾದ ಯುಸೀಬಿಯಸ್ ಮತ್ತು ಜೆರೋಮ್ ಒಮ್ಮತದಿಂದಿದ್ದಾರೆ. ಬೇರೆ ಸಮಾಪ್ತಿಗಳು, ಆ ಸುವಾರ್ತಾ ಪುಸ್ತಕವು ಥಟ್ಟನೆ ಮುಗಿಯುವುದನ್ನು ಸರಾಗವಾಗಿಸುವ ಉದ್ದೇಶದಿಂದ ಪ್ರಾಯಶಃ ಕೂಡಿಸಲ್ಪಟ್ಟವು.
11 ಮಾರ್ಕನ ವೃತ್ತಾಂತದ ನಿಷ್ಕೃಷ್ಟತೆಯನ್ನು, ಅವನ ಸುವಾರ್ತಾ ಪುಸ್ತಕವು ಇತರ ಸುವಾರ್ತಾ ಪುಸ್ತಕಗಳೊಂದಿಗೆ ಪೂರ್ಣ ಹೊಂದಿಕೆಯಲ್ಲಿರುವುದರಿಂದ ಮಾತ್ರವಲ್ಲ, ಆದಿಕಾಂಡದಿಂದ ಪ್ರಕಟನೆಯ ತನಕದ ಇಡೀ ಪವಿತ್ರ ಶಾಸ್ತ್ರದೊಂದಿಗೂ ಹೊಂದಿಕೆಯಲ್ಲಿರುವುದರಿಂದ ನೋಡಸಾಧ್ಯವಿದೆ. ಅಲ್ಲದೆ, ಅಲ್ಲಿ ಯೇಸುವನ್ನು ಪದೇಪದೇ ಆತನ ಅಧಿಕಾರನುಡಿಯಿಂದ ಮಾತ್ರವಲ್ಲ, ಪ್ರಕೃತಿ ಶಕ್ತಿಗಳ ಮೇಲೆಯೂ, ಸೈತಾನನ ಮತ್ತು ದೆವ್ವಗಳ ಮೇಲೆಯೂ, ಕಾಯಿಲೆ ಮತ್ತು ಅಸ್ವಸ್ಥತೆಗಳ ಮೇಲೆಯೂ, ಹೌದು, ಮರಣದ ಮೇಲೆ ಕೂಡ ಅಧಿಕಾರವಿದ್ದವನಂತೆ ತೋರಿಸಲಾಗಿದೆ. ಹೀಗೆ ಮಾರ್ಕನು ತನ್ನ ಕಥನವನ್ನು ಈ ಮನಮುಟ್ಟುವ ಪೀಠಿಕೆಯಿಂದ ಆರಂಭಿಸುತ್ತಾನೆ: “ಯೇಸು ಕ್ರಿಸ್ತನ ವಿಷಯವಾದ ಸುವಾರ್ತೆಯ ಪ್ರಾರಂಭವು.” ಅವನ ಬರೋಣವೂ ಸೇವೆಯೂ “ಸುವಾರ್ತೆಯ” ಅರ್ಥದಲ್ಲಿತ್ತು ಮತ್ತು ಈ ಕಾರಣದಿಂದ, ಮಾರ್ಕನ ಸುವಾರ್ತಾ ಪುಸ್ತಕದ ಅಧ್ಯಯನವು ಎಲ್ಲ ಓದುಗರಿಗೆ ಪ್ರಯೋಜನಕರವಾಗಿರಬೇಕು. ಮಾರ್ಕನು ವರ್ಣಿಸಿರುವ ಘಟನೆಗಳು ಸಾ.ಶ. 29ರ ವಸಂತಕಾಲದಿಂದ ಹಿಡಿದು ಸಾ.ಶ. 33ರ ವಸಂತಕಾಲದ ತನಕ ಆವರಿಸುತ್ತವೆ.
ಪ್ರಯೋಜನಕರವೇಕೆ?
31 ಯೇಸು ಕ್ರಿಸ್ತನ ಕುರಿತ ಈ ಎದ್ದುಕಾಣುವ ನುಡಿಚಿತ್ರದ ಮೂಲಕ ಮಾರ್ಕನ ಎಲ್ಲ ಓದುಗರು, ಆದಿಕ್ರೈಸ್ತ ಕಾಲಗಳಿಂದ ಹಿಡಿದು ಇಂದಿನ ವರೆಗೆ, ಮೆಸ್ಸೀಯನ ಕುರಿತ ಹೀಬ್ರು ಶಾಸ್ತ್ರಗಳ ಅನೇಕ ಪ್ರವಾದನೆಗಳ ನೆರವೇರಿಕೆಯನ್ನು ಗುರುತಿಸಶಕ್ತರಾಗಿದ್ದಾರೆ. “ಇಗೋ, ನಾನು ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ” ಎಂಬ ಈ ಆರಂಭದ ಉದ್ಧರಣೆಯಿಂದ ಹಿಡಿದು, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?” ಎಂಬ, ಕಂಬದ ಮೇಲಿನ ಸಂಕಟಮಯ ಮಾತುಗಳ ವರೆಗೆ, ಮಾರ್ಕನು ಯೇಸುವಿನ ಹುರುಪಿನ ಶುಶ್ರೂಷೆಯ ಬಗ್ಗೆ ಬರೆದ ಪೂರ್ತಿ ವೃತ್ತಾಂತವು ಹೀಬ್ರು ಶಾಸ್ತ್ರವು ಮುಂತಿಳಿಸಿದ್ದಕ್ಕೆ ಹೊಂದಿಕೆಯಲ್ಲಿದೆ. (ಮಾರ್ಕ 1:2; 15:34; ಮಲಾ. 3:1; ಕೀರ್ತ. 22:1) ಇದಲ್ಲದೆ, ಅವನ ಅದ್ಭುತಗಳು ಮತ್ತು ಮಹತ್ಕಾರ್ಯಗಳು, ಅವನ ಆರೋಗ್ಯಕರ ಬೋಧನೆಗಳು, ಅವನ ತಪ್ಪಿಲ್ಲದ ಖಂಡನೆಗಳು, ಯೆಹೋವನ ವಾಕ್ಯ ಮತ್ತು ಆತ್ಮದ ಮೇಲೆ ಅವನ ಪೂರ್ಣಾವಲಂಬನೆ, ಮತ್ತು ಅವನ ಮೃದುಭಾವದ ಕುರಿಪಾಲನೆ—ಇವೆಲ್ಲವೂ ಅವನು ದೇವಕುಮಾರನ ಅಧಿಕಾರವುಳ್ಳವನಾಗಿ ಬಂದವನು ಎಂಬುದನ್ನು ಗುರುತಿಸುತ್ತವೆ. ಅವನು “ಅಧಿಕಾರವಿದ್ದವನಂತೆ,” ಯೆಹೋವನಿಂದ ಪಡೆದ ಅಧಿಕಾರವಿದ್ದವನಂತೆ ಬೋಧಿಸಿದನು. ಮತ್ತು ಅವನು “ದೇವರ ಸುವಾರ್ತೆಯನ್ನು,” ಅಂದರೆ “ದೇವರರಾಜ್ಯವು ಸಮೀಪಿಸಿತು” ಎಂದು ಸಾರುವುದು ಭೂಮಿಯಲ್ಲಿ ಅವನ ಪ್ರಧಾನ ಕೆಲಸವಾಗಿತ್ತೆಂಬುದನ್ನು ಒತ್ತಿಹೇಳಿದನು. ಅವನ ಬೋಧನೆಯು ಅದನ್ನು ಆಲಿಸಿರುವವರಿಗೆ ಅಮೂಲ್ಯವಾದ ಪ್ರಯೋಜನದ್ದಾಗಿ ಪರಿಣಮಿಸಿದೆ.—ಮಾರ್ಕ 1:22, 14, 15.
32 “ದೇವರ ರಾಜ್ಯದ [“ಪವಿತ್ರ,” NW] ಗುಟ್ಟು ನಿಮಗೇ ಕೊಟ್ಟಿದೆ,” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. ಮಾರ್ಕನು “ದೇವರ ರಾಜ್ಯ” ಎಂಬ ಅಭಿವ್ಯಕ್ತಿಯನ್ನು 14 ಬಾರಿ ಬಳಸಿ, ರಾಜ್ಯದ ಮೂಲಕ ಜೀವವನ್ನು ಪಡೆಯುವವರಿಗೆ ಅನೇಕ ಮಾರ್ಗದರ್ಶಕ ಮೂಲತತ್ತ್ವಗಳನ್ನು ಬರೆದಿಡುತ್ತಾನೆ. ಯೇಸು ಹೇಳಿದ್ದು: “ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು.” ಜೀವಪಡೆಯುವುದನ್ನು ತಡೆಯುವ ಪ್ರತಿಯೊಂದು ಅಡ್ಡಿಯನ್ನು ತೊಲಗಿಸಬೇಕು: “ಎರಡು ಕಣ್ಣುಳ್ಳವನಾಗಿದ್ದು ನರಕದಲ್ಲಿ [“ಗೆಹೆನ್ನ,” NW] ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ದೇವರ ರಾಜ್ಯದಲ್ಲಿ ಸೇರುವದು ನಿನಗೆ ಉತ್ತಮ.” ಯೇಸು ಇನ್ನೂ ಹೇಳಿದ್ದು: “ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ.” ಮತ್ತು “ಧನವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ.” ಎರಡು ಮಹಾ ಆಜ್ಞೆಗಳನ್ನು ಪಾಲಿಸುವುದು ಎಲ್ಲ ಸರ್ವಾಂಗಹೋಮಗಳಿಗಿಂತಲೂ ಯಜ್ಞಗಳಿಗಿಂತಲೂ ಹೆಚ್ಚು ಬೆಲೆಯುಳ್ಳದ್ದೆಂದು ಗ್ರಹಿಸುವವನು “ದೇವರ ರಾಜ್ಯಕ್ಕೆ ದೂರವಾದವನಲ್ಲ” ಎಂದು ಅವನು ಹೇಳಿದನು. ಮಾರ್ಕನ ಸುವಾರ್ತಾ ಪುಸ್ತಕದ ಈ ಮತ್ತು ಇತರ ರಾಜ್ಯ ಬೋಧನೆಗಳಲ್ಲಿ, ನಮ್ಮ ದೈನಂದಿನ ಜೀವನದಲ್ಲಿ ಅನ್ವಯಿಸಿಕೊಳ್ಳಬಹುದಾದ ಹೆಚ್ಚು ಉತ್ತಮ ಸಲಹೆಗಳು ಅಡಕವಾಗಿವೆ.—4:11; 8:35; 9:43-48; 10:13-15, 23-25; 12:28-34.
33 “ಮಾರ್ಕನು ಬರೆದ” ಸುವಾರ್ತಾ ಪುಸ್ತಕವನ್ನು ಒಂದೆರಡು ತಾಸುಗಳಲ್ಲಿ ಪೂರ್ತಿಯಾಗಿ ಓದಸಾಧ್ಯವಿದೆ. ಇದು ಓದುಗನಿಗೆ ಯೇಸುವಿನ ಶುಶ್ರೂಷೆಯ ವಿಷಯದಲ್ಲಿ ರೋಮಾಂಚಕ, ಕ್ಷಿಪ್ರ ಮತ್ತು ಕ್ರಿಯಾತ್ಮಕ ಪುನರ್ವಿಮರ್ಶೆಯನ್ನು ಒದಗಿಸುತ್ತದೆ. ಈ ಪ್ರೇರಿತ ವೃತ್ತಾಂತದ ಇಂಥ ನೇರವಾದ ವಾಚನ ಹಾಗೂ ಅದರ ನಿಕಟ ಅಧ್ಯಯನ ಮತ್ತು ಧ್ಯಾನಿಸುವಿಕೆಯು ಯಾವಾಗಲೂ ಪ್ರಯೋಜನಕರವಾಗಿ ಪರಿಣಮಿಸುವುದು. ಮಾರ್ಕನ ಸುವಾರ್ತಾ ಪುಸ್ತಕವು ಒಂದನೆಯ ಶತಮಾನದಲ್ಲಿ ಹೇಗೊ ಹಾಗೆಯೇ ಇಂದು ಹಿಂಸೆಗೊಳಗಾಗಿರುವ ಕ್ರೈಸ್ತರಿಗೂ ಪ್ರಯೋಜನಕರವಾಗಿದೆ. ಏಕೆಂದರೆ ಈಗ ಸತ್ಯ ಕ್ರೈಸ್ತರು “ನಿಭಾಯಿಸಲು ಕಷ್ಟಕರವಾದ ಕಠಿನ ಕಾಲಗಳನ್ನು” ಎದುರಿಸುತ್ತಾರೆ. ನಮ್ಮ ಆದರ್ಶನಾದ ಯೇಸು ಕ್ರಿಸ್ತನ ಕುರಿತ ಈ ದಾಖಲೆಯಲ್ಲಿ ಕಂಡುಬರುವ ಪ್ರೇರಿತ ಮಾರ್ಗದರ್ಶನದ ಆವಶ್ಯಕತೆ ಅವರಿಗಿದೆ. ಅದನ್ನು ಓದಿ, ಅದರ ನಾಟಕೀಯ ಘಟನಾವಳಿಗಳಿಂದ ರೋಮಾಂಚಗೊಂಡು, ನಮ್ಮ ಮುಖ್ಯ ಕರ್ತೃವೂ ನಮ್ಮ ನಂಬಿಕೆಯ ಪರಿಪೂರ್ಣಕನೂ ಆದ ಯೇಸುವಿನ ಹೆಜ್ಜೆಜಾಡಿನಲ್ಲಿ ಹಿಂಬಾಲಿಸಲು ಬೇಕಾದ ಉತ್ತೇಜನವನ್ನು, ಅವನು ತೋರಿಸಿದ ಅದೇ ಅಜೇಯ ಆನಂದವನ್ನು ಪಡೆದುಕೊಳ್ಳಿರಿ. (2 ತಿಮೊ. 3:1, NW; ಇಬ್ರಿ. 12:2) ಹೌದು, ಅವನನ್ನು ಕ್ರಿಯಾತ್ಮಕ ಪುರುಷನೆಂಬಂತೆ ಕಂಡು, ಅವನ ಹುರುಪಿನಿಂದ ಭರಿತರಾಗಿ, ಪರೀಕ್ಷೆ ಮತ್ತು ವಿರೋಧದ ಮಧ್ಯದಲ್ಲಿ ಅವನ ರಾಜಿಮಾಡದ ಸಮಗ್ರತೆ ಹಾಗೂ ಧೈರ್ಯವನ್ನು ಅನುಕರಿಸಿರಿ. ಪ್ರೇರಿತ ಶಾಸ್ತ್ರದ ಈ ಅಮೂಲ್ಯ ಭಾಗದಿಂದ ಸಾಂತ್ವನ ಪಡೆದುಕೊಳ್ಳಿರಿ. ನಿತ್ಯಜೀವವನ್ನು ಬೆನ್ನಟ್ಟುವುದರಲ್ಲಿ ಅದು ನಿಮಗೆ ಉಪಯುಕ್ತವಾಗಿ ಪರಿಣಮಿಸಲಿ!
[ಪಾದಟಿಪ್ಪಣಿ]
a ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಸಂ. 2, ಪುಟ 337.