ಬೈಬಲ್ ಪುಸ್ತಕ ನಂಬರ್ 42 ಲೂಕ
ಲೇಖಕ: ಲೂಕ
ಬರೆಯಲ್ಪಟ್ಟ ಸ್ಥಳ: ಕೈಸರೈಯ
ಬರೆದು ಮುಗಿಸಿದ್ದು: ಸುಮಾರು ಸಾ.ಶ. 56-58
ಆವರಿಸಲ್ಪಟ್ಟ ಕಾಲ: ಸಾ.ಶ.ಪೂ. 3-ಸಾ.ಶ. 33
ಲೂಕನ ಸುವಾರ್ತಾ ಪುಸ್ತಕವು ಉತ್ಸುಕ ಮನಸ್ಸೂ ದಯಾಭರಿತ ಹೃದಯವೂ ಇದ್ದ ಒಬ್ಬನಿಂದ ಬರೆಯಲ್ಪಟ್ಟಿತು. ಗುಣಗಳ ಈ ಉತ್ತಮ ಮಿಶ್ರಣಕ್ಕೆ ದೇವರಾತ್ಮದ ಮಾರ್ಗದರ್ಶನವು ಸೇರಿದ್ದರಿಂದ, ಆ ಸುವಾರ್ತಾ ಪುಸ್ತಕವು ನಿಷ್ಕೃಷ್ಟವೂ ಹೃದಯೋಲ್ಲಾಸಕರವೂ ಭಾವಪೂರ್ಣವೂ ಆದ ವೃತ್ತಾಂತವಾಗಿ ಪರಿಣಮಿಸಿದೆ. ಆರಂಭದ ವಚನಗಳಲ್ಲಿ ಅವನು ಹೀಗೆನ್ನುತ್ತಾನೆ: “ನಾನು ಬುಡದಿಂದ ಎಲ್ಲವನ್ನೂ ಚೆನ್ನಾಗಿ [“ನಿಷ್ಕೃಷ್ಟವಾಗಿ,” NW] ವಿಚಾರಿಸಿದವನಾದಕಾರಣ ಅವುಗಳನ್ನು ನಿನಗೆ ಕ್ರಮವಾಗಿ ಬರೆಯುವದು ಒಳ್ಳೇದೆಂದು ನನಗೂ ತೋಚಿತು.” ಅವನ ಈ ವಿವರವಾದ ಮತ್ತು ಅತಿ ಜಾಗರೂಕತೆಯ ನಿರೂಪಣೆಯು ಈ ವಾದಕ್ಕೆ ಪೂರ್ಣಾಧಾರವನ್ನು ಕೊಡುತ್ತದೆ.—ಲೂಕ 1:3.
2 ಈ ವೃತ್ತಾಂತವು ಲೂಕನನ್ನು ಎಲ್ಲಿಯೂ ಹೆಸರಿಸುವುದಿಲ್ಲವಾದರೂ, ಅವನೇ ಲೇಖಕನೆಂಬುದನ್ನು ಪುರಾತನಕಾಲದ ಬೈಬಲ್ ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ. ಮ್ಯೂರಟೋರಿಯನ್ ಅವಶಿಷ್ಟ ಭಾಗ (ಸುಮಾರು ಸಾ.ಶ. 170)ದಲ್ಲಿ ಈ ಸುವಾರ್ತಾ ಪುಸ್ತಕವು ಲೂಕನದ್ದೆಂದು ಹೇಳಲಾಗಿದ್ದು, ಐರನೇಯಸ್ ಮತ್ತು ಅಲೆಗ್ಸಾಂಡ್ರಿಯದ ಕ್ಲೆಮೆಂಟ್‌ರಂಥ ಎರಡನೆಯ ಶತಮಾನದ ಲೇಖಕರು ಇದನ್ನು ಅಂಗೀಕರಿಸಿದ್ದರು. ಆಂತರಿಕ ಪುರಾವೆ ಸಹ ಲೂಕನೇ ಲೇಖಕನೆಂದು ದೃಢವಾಗಿ ಹೇಳುತ್ತದೆ. ಪೌಲನು ಲೂಕನ ಬಗ್ಗೆ ಕೊಲೊಸ್ಸೆ 4:14ರಲ್ಲಿ “ಪ್ರಿಯ ವೈದ್ಯನಾಗಿರುವ ಲೂಕನು” ಎಂದು ಹೇಳುತ್ತಾನೆ ಮತ್ತು ಈ ಕೃತಿಯಲ್ಲಿರುವ ಪಾಂಡಿತ್ಯದ ಕಾರಣ, ಅದು ಒಬ್ಬ ವೈದ್ಯನಂಥ ವಿದ್ಯಾವಂತನಿಂದ ಬರೆಯಲ್ಪಟ್ಟದ್ದೆಂದು ಒಬ್ಬನು ನಿರೀಕ್ಷಿಸಬಹುದು. ಭಾಷೆಯ ಉತ್ತಮ ಆಯ್ಕೆ ಮತ್ತು ಅವನ ಸವಿಸ್ತಾರವಾದ ಶಬ್ದಭಂಡಾರವು (ಇತರ ಮೂವರು ಸುವಾರ್ತಾ ಲೇಖಕರ ಒಟ್ಟು ಶಬ್ದಭಂಡಾರಕ್ಕಿಂತಲೂ ಹೆಚ್ಚು), ಅವನ ಮಹತ್ವವುಳ್ಳ ವಿಷಯವನ್ನು ಅತಿ ಜಾಗರೂಕತೆಯ ಹಾಗೂ ಗ್ರಹಣೀಯವಾದ ರೀತಿಯಲ್ಲಿ ಬರೆದನೆಂದು ತೋರಿಸುತ್ತದೆ. ಪೋಲಿಹೋದ ಮಗನ ಕುರಿತ ಅವನ ಕಥನವನ್ನು, ಬರೆಯಲ್ಪಟ್ಟವುಗಳಲ್ಲಿ ಅತ್ಯಂತ ಉತ್ತಮವಾದ ಚಿಕ್ಕ ಕಥೆ ಎಂದು ಕೆಲವರು ಅಭಿಪ್ರಯಿಸುತ್ತಾರೆ.
3 ಲೂಕನು 300ಕ್ಕೂ ಹೆಚ್ಚು ವೈದ್ಯಕೀಯ ಪದಗಳನ್ನು ಬಳಸುತ್ತಾನೆ.a ಇವುಗಳಿಗೆ ಅವನು ಕೊಡುವ ಅರ್ಥವನ್ನು, ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಇತರ ಲೇಖಕರು (ಒಂದು ವೇಳೆ ಅಂಥ ಪದಗಳನ್ನು ಬಳಸಿರುವಲ್ಲಿಯೂ) ಕೊಡುವುದಿಲ್ಲ. ದೃಷ್ಟಾಂತಕ್ಕಾಗಿ, ಕುಷ್ಠರೋಗದ ವಿಷಯದಲ್ಲಿ ಮಾತಾಡುವಾಗ, ಇತರರು ಉಪಯೋಗಿಸುವ ಪದವನ್ನು ಲೂಕನು ಉಪಯೋಗಿಸುವುದಿಲ್ಲ. ಬೇರೆಯವರಿಗೆ ಕುಷ್ಠರೋಗವು ಕೇವಲ ಕುಷ್ಠರೋಗವಾಗಿದೆ. ಆದರೆ ಒಬ್ಬ ವೈದ್ಯನಿಗೆ ಕುಷ್ಠರೋಗದಲ್ಲಿ ವಿವಿಧ ಹಂತಗಳಿರುವುದು ತಿಳಿದಿದೆ. ಆದುದರಿಂದ ಲೂಕನು “ಮೈಯೆಲ್ಲಾ ಕುಷ್ಠರೋಗ ತುಂಬಿದ್ದ ಒಬ್ಬ ಮನುಷ್ಯನ” ಬಗ್ಗೆ ಮಾತಾಡುತ್ತಾನೆ. ಲಾಜರನ ಕುರಿತಾಗಿ, ಅವನ “ಮೈತುಂಬಾ ಹುಣ್ಣೆದ್ದವನು” ಎಂದು ಹೇಳುತ್ತಾನೆ. ಪೇತ್ರನ ಅತ್ತೆಗೆ “ಕಠಿಣ ಜ್ವರ”ವಿತ್ತೆಂದು ಇನ್ನಾವ ಸುವಾರ್ತಾ ಲೇಖಕನೂ ಹೇಳುವುದಿಲ್ಲ. (5:12; 16:20, 21; 4:38) ಪೇತ್ರನು ಮಹಾಯಾಜಕನ ಆಳಿನ ಕಿವಿಯನ್ನು ಕಡಿದುಹಾಕಿದನೆಂದು ಇತರ ಮೂವರು ಲೇಖಕರು ಹೇಳುತ್ತಾರಾದರೂ, ಯೇಸು ಅವನನ್ನು ವಾಸಿಮಾಡಿದ್ದನ್ನು ಲೂಕನು ಮಾತ್ರ ಹೇಳುತ್ತಾನೆ. (22:51) ಒಬ್ಬ ಸ್ತ್ರೀಗೆ, “ಹದಿನೆಂಟು ವರುಷಗಳಿಂದ ದೆವ್ವ ಬಡಿದು ಮೈಯಲ್ಲಿ ರೋಗ” ಇತ್ತೆಂದೂ “ಆಕೆಯು ನಡುಬೊಗ್ಗಿಹೋಗಿ ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾರದೆ ಇದ್ದಳು” ಎಂದೂ ಹೇಳುವುದು ವೈದ್ಯನ ಭಾಷೆಯಾಗಿದೆ. ಸಮಾರ್ಯದವನು ಯೆಹೂದ್ಯನೊಬ್ಬನಿಗೆ ಪ್ರಥಮ ಚಿಕಿತ್ಸೆಯನ್ನು ಒದಗಿಸಿದನೆಂದೂ, “ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿ”ದನೆಂದೂ ಅಷ್ಟು ವಿವರಣಾತ್ಮಕವಾಗಿ “ಪ್ರಿಯ ವೈದ್ಯನಾದ ಲೂಕನು” ಅಲ್ಲದೆ ಬೇರಾರು ಬರೆಯಸಾಧ್ಯ?—13:11; 10:34.
4 ಲೂಕನು ತನ್ನ ಸುವಾರ್ತಾ ಪುಸ್ತಕವನ್ನು ಯಾವಾಗ ಬರೆದನು? ಅಪೊಸ್ತಲರ ಕೃತ್ಯಗಳು 1:1ರಲ್ಲಿ, ಅದರ ಲೇಖಕನು (ಅದೂ ಲೂಕನೇ) ತಾನು “ಮೊದಲು ಬರೆದ ಚರಿತ್ರೆ”ಯನ್ನು, ಅಂದರೆ ಸುವಾರ್ತಾ ಪುಸ್ತಕವನ್ನು ರಚಿಸಿದ್ದನ್ನು ಸೂಚಿಸುತ್ತಾನೆ. ಅಪೊಸ್ತಲರ ಕೃತ್ಯಗಳ ಪುಸ್ತಕವನ್ನು, ಲೂಕನು ಪೌಲನೊಂದಿಗೆ ರೋಮ್‌ನಲ್ಲಿದ್ದಾಗ ಮತ್ತು ಪೌಲನು ಕೈಸರನಿಗೆ ಮಾಡಿದ ಅಪೀಲಿಗೆ ಉತ್ತರವನ್ನು ಕಾಯುತ್ತಿದ್ದಾಗ ಅಂದರೆ ಸಾ.ಶ. 61ರಲ್ಲಿ ಬರೆದು ಮುಗಿಸಲಾಯಿತೆಂಬುದು ಹೆಚ್ಚು ಸಂಭವನೀಯ. ಹಾಗಾದರೆ ತನ್ನ ಸುವಾರ್ತಾ ಪುಸ್ತಕವನ್ನು ಲೂಕನು ಕೈಸರೈಯದಲ್ಲಿ ಸುಮಾರು ಸಾ.ಶ. 56-58ರಲ್ಲಿ, ಪೌಲನ ಮೂರನೆಯ ಮಿಷನೆರಿ ಸಂಚಾರದ ಕೊನೆಯಲ್ಲಿ ಫಿಲಿಪ್ಪಿಯಿಂದ ಹಿಂದಿರುಗಿದ ನಂತರ ಬರೆದನು. ಅದು, ಪೌಲನು ಅಪೀಲಿಗಾಗಿ ರೋಮ್‌ಗೆ ಹೋಗುವ ಮೊದಲು ಕೈಸರೈಯದ ಸೆರೆಮನೆಯಲ್ಲಿ ಎರಡು ವರ್ಷಕಾಲ ಕಾಯುತ್ತಿದ್ದ ಸಮಯ ಆಗಿತ್ತು. ಈ ಸಮಯದಲ್ಲಿ ಲೂಕನು ಪಲೆಸ್ತೀನದಲ್ಲಿದ್ದುದರಿಂದ ಅವನು ಯೇಸುವಿನ ಜೀವನ ಮತ್ತು ಶುಶ್ರೂಷೆಯ ಬಗ್ಗೆ ‘ಬುಡದಿಂದ ಚೆನ್ನಾಗಿ ವಿಚಾರಿಸಲು’ ಸಾಧ್ಯವಾಯಿತು. ಹೀಗೆ, ಲೂಕನ ವೃತ್ತಾಂತವನ್ನು ಮಾರ್ಕನ ಸುವಾರ್ತಾ ಪುಸ್ತಕಕ್ಕಿಂತ ಮೊದಲು ಬರೆಯಲಾಗಿತ್ತೆಂದು ತೋರುತ್ತದೆ.
5 ಲೂಕನು ತನ್ನ ಸುವಾರ್ತಾ ಪುಸ್ತಕದಲ್ಲಿ ಬರೆದ ಎಲ್ಲ ಸಂಗತಿಗಳಿಗೆ ಪ್ರತ್ಯಕ್ಷಸಾಕ್ಷಿ ಆಗಿರಲಿಲ್ಲವೆಂಬುದು ನಿಶ್ಚಯ. ಏಕೆಂದರೆ ಅವನು 12 ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿರಲಿಲ್ಲ; ಅವನು ಪ್ರಾಯಶಃ ಯೇಸುವಿನ ಮರಣಾನಂತರವೇ ವಿಶ್ವಾಸಿಯಾದನು. ಆದರೆ ಅವನು ಮಿಷನೆರಿ ಕ್ಷೇತ್ರದಲ್ಲಿ ಪೌಲನ ಅತಿ ನಿಕಟ ಸಹವರ್ತಿಯಾಗಿದ್ದನು. (2 ತಿಮೊ. 4:10; ಫಿಲೆ. 24) ಆದುದರಿಂದ ನಿರೀಕ್ಷಿಸಬಹುದಾದಂತೆ, ಅವನ ಬರೆವಣಿಗೆಯ ಮೇಲೆ ಪೌಲನ ಪ್ರಭಾವ ಇತ್ತೆಂಬುದಕ್ಕೆ ಅವನ ವೃತ್ತಾಂತ ಸಾಕ್ಷಿಕೊಡುತ್ತದೆ. ಇದನ್ನು, ಅವರಿಬ್ಬರು ಬರೆದ ಕರ್ತನ ಸಂಧ್ಯಾಭೋಜನದ ವೃತ್ತಾಂತಗಳನ್ನು ಲೂಕ 22:19, 20 ಮತ್ತು 1 ಕೊರಿಂಥ 11:23-25ರಲ್ಲಿ ಹೋಲಿಸಿ ನೋಡುವಾಗ ಕಾಣಸಾಧ್ಯವಿದೆ. ಇದಲ್ಲದೆ ಲೂಕನು ಇನ್ನೂ ಹೆಚ್ಚಿನ ಆಧಾರಕ್ಕಾಗಿ ಮತ್ತಾಯನ ಸುವಾರ್ತಾ ವೃತ್ತಾಂತವನ್ನು ನೋಡಸಾಧ್ಯವಿತ್ತು. ಎಲ್ಲ ವಿಷಯಗಳನ್ನು ‘ಬುಡದಿಂದ ಚೆನ್ನಾಗಿ ವಿಚಾರಿಸುವುದರಲ್ಲಿ’ ಅವನು ಯೇಸುವಿನ ಜೀವನದ ಘಟನೆಗಳಿಗೆ ಪ್ರತ್ಯಕ್ಷಸಾಕ್ಷಿಗಳಾಗಿದ್ದ ಅನೇಕರನ್ನು ವೈಯಕ್ತಿಕವಾಗಿ ಸಂದರ್ಶಿಸಸಾಧ್ಯವಿತ್ತು. ಉದಾಹರಣೆಗೆ, ಅವನು ಶಿಷ್ಯರಲ್ಲಿ ಬದುಕಿ ಉಳಿದಿದ್ದವರಿಂದ ಮತ್ತು ಬಹುಶಃ ಯೇಸುವಿನ ತಾಯಿಯಾಗಿದ್ದ ಮರಿಯಳಿಂದ ಖುದ್ದಾಗಿ ಮಾಹಿತಿ ಪಡೆದಿರಬಹುದು. ಭರವಸಾರ್ಹವಾದ ವಿವರಗಳನ್ನು ಶೇಖರಿಸಲು ಅವನು ಸಕಲ ಪ್ರಯತ್ನವನ್ನೂ ಮಾಡಿದನೆಂಬ ಬಗ್ಗೆ ನಾವು ನಿಶ್ಚಯತೆಯಿಂದಿರಬಲ್ಲೆವು.
6 ಈ ನಾಲ್ಕು ಸುವಾರ್ತಾ ವೃತ್ತಾಂತಗಳನ್ನು ಪರೀಕ್ಷಿಸಿದಾಗ, ಇವುಗಳ ಲೇಖಕರು ಒಬ್ಬನು ಇನ್ನೊಬ್ಬನ ಕಥನವನ್ನು ಕೇವಲ ಪುನರಾವರ್ತಿಸಿ ಹೇಳುವುದಿಲ್ಲವೆಂದೂ ಅತಿ ಮಹತ್ವದ ಈ ಬೈಬಲ್ ದಾಖಲೆಗೆ ಅನೇಕ ಮಂದಿ ಸಾಕ್ಷಿಗಳನ್ನು ಒದಗಿಸುವುದಕ್ಕಾಗಿ ಮಾತ್ರ ಬರೆದಿರುವುದಿಲ್ಲವೆಂದೂ ಸ್ಪಷ್ಟವಾಗುತ್ತದೆ. ಲೂಕನು ತನ್ನ ವೃತ್ತಾಂತದ ನಿರೂಪಣೆಯಲ್ಲಿ ತನ್ನದೇ ಆದ ವೈಯಕ್ತಿಕ ಶೈಲಿಯನ್ನು ಬಳಸಿದ್ದಾನೆ. ಅವನ ಸುವಾರ್ತಾ ಪುಸ್ತಕದಲ್ಲಿ 59 ಪ್ರತಿಶತ ಭಾಗವು ಅಪೂರ್ವವಾಗಿ ಅವನದ್ದೇ ಆಗಿದೆ. ಬೇರೆ ಸುವಾರ್ತಾ ವೃತ್ತಾಂತಗಳಲ್ಲಿ ಹೇಳಲಾಗಿರದ ಕಡಮೆಪಕ್ಷ ಆರು ನಿರ್ದಿಷ್ಟ ಅದ್ಭುತಗಳನ್ನೂ ಅದರ ಇಮ್ಮಡಿಗಿಂತಲೂ ಹೆಚ್ಚು ದೃಷ್ಟಾಂತಗಳನ್ನೂ ಅವನು ದಾಖಲಿಸುತ್ತಾನೆ. ಅವನ ಸುವಾರ್ತಾ ಪುಸ್ತಕದಲ್ಲಿ ಮೂರರಲ್ಲಿ ಒಂದಂಶವನ್ನು ಕಥನಕ್ಕೂ ಮೂರರಲ್ಲಿ ಎರಡಂಶವನ್ನು ಸಂವಾದಕ್ಕೂ ಕೊಡುತ್ತಾನೆ. ಅವನ ಸುವಾರ್ತಾ ಪುಸ್ತಕವು ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ಅತಿ ಉದ್ದವಾದದ್ದು. ಮತ್ತಾಯನು ಪ್ರಧಾನವಾಗಿ ಯೆಹೂದ್ಯರಿಗಾಗಿಯೂ ಮಾರ್ಕನು ಯೆಹೂದ್ಯೇತರರಿಗಾಗಿ, ವಿಶೇಷವಾಗಿ ರೋಮ್‌ನ ಜನರಿಗಾಗಿ ಬರೆದನು. ಲೂಕನು “ಶ್ರೀಮತ್ ಥೆಯೋಫಿಲ”ನನ್ನು ಸಂಬೋಧಿಸಿ, ಅವನ ಮೂಲಕ ಯೆಹೂದ್ಯರನ್ನೂ ಯೆಹೂದ್ಯೇತರರನ್ನೂ ಸಂಬೋಧಿಸುತ್ತಾನೆ. (ಲೂಕ 1:1, 3, 4) ತನ್ನ ಸುವಾರ್ತಾ ಪುಸ್ತಕಕ್ಕೆ ಸಾರ್ವತ್ರಿಕ ರುಚಿ ಇರುವಂತೆ ಮಾಡಲಿಕ್ಕಾಗಿ ಅವನು ಯೇಸುವಿನ ವಂಶಾವಳಿಯನ್ನು ‘ದೇವರ ಮಗನಾದ ಆದಾಮ’ನಷ್ಟು ಹಿಂದೆ ಒಯ್ದಿದ್ದಾನೆ. ಮತ್ತಾಯನು ಕೇವಲ ಅಬ್ರಹಾಮನ ವರೆಗೆ ವಂಶಾವಳಿಯನ್ನು ಬರೆದದ್ದು ವಿಶೇಷವಾಗಿ ಯೆಹೂದ್ಯರಿಗಾಗಿ. ಲೂಕನಾದರೋ ಪ್ರತ್ಯೇಕವಾಗಿ, ಸಿಮೆಯೋನನ ಪ್ರವಾದನಾ ನುಡಿಯನ್ನು ಅಂದರೆ ಯೇಸು “ಅನ್ಯದೇಶದವರಿಗೆ ಜ್ಞಾನೋದಯದ ಬೆಳಕು” ಆಗಿರುವನೆಂದೂ “ಎಲ್ಲ ಮನುಷ್ಯರು ದೇವರಿಂದ ಸಿದ್ಧವಾಗುವ ರಕ್ಷಣೆಯನ್ನು ಕಾಣುವ”ರೆಂದೂ ಹೇಳುತ್ತಾನೆ.—3:38; 2:29-32; 3:6.
7 ಲೂಕನ ವೃತ್ತಾಂತದ ಬರವಣಿಗೆಯು ಸುವ್ಯವಸ್ಥಿತವೂ ನಿಷ್ಕೃಷ್ಟವೂ ಆಗಿದ್ದು ಅವನನ್ನು ಒಬ್ಬ ಗಮನಾರ್ಹ ಕಥನಗಾರನೆಂದು ರುಜುಪಡಿಸುತ್ತದೆ. ನಿಷ್ಕೃಷ್ಟತೆ ಮತ್ತು ಯಥಾರ್ಥತೆಯೆಂಬ ಈ ಗುಣಗಳು ಲೂಕನ ಬರವಣಿಗೆಯು ವಿಶ್ವಾಸಾರ್ಹವೆಂಬುದಕ್ಕೆ ಬಲವಾದ ರುಜುವಾತುಗಳಾಗಿವೆ. ನ್ಯಾಯವಾದಿಯೊಬ್ಬನು ಒಮ್ಮೆ ಹೀಗೆ ಅಭಿಪ್ರಯಿಸಿದನು: “ಪ್ರೇಮಕಥೆಗಳಲ್ಲಿ, ಪುರಾಣ ಕಥೆಗಳಲ್ಲಿ ಮತ್ತು ಸುಳ್ಳು ರುಜುವಾತುಗಳಲ್ಲಿ, ಘಟನೆಗಳು ಯಾವುದೊ ದೂರದ ದೇಶದಲ್ಲಿ ಮತ್ತು ಯಾವುದೊ ಒಂದು ಕಾಲದಲ್ಲಿ ನಡೆದವೆಂದು ಹೇಳಲು ಜಾಗರೂಕತೆ ವಹಿಸಲಾಗುತ್ತದೆ. ಹೀಗೆ ಅವು, ‘ಹೇಳಿಕೆಯು ಸಮಯ ಮತ್ತು ಸ್ಥಳವನ್ನು ಕೊಡಲೇಬೇಕು’ ಎಂಬ ನಮ್ಮ ವಕಾಲತ್ತಿನ ಉತ್ತಮ ನಿಯಮವನ್ನೇ ಉಲ್ಲಂಘಿಸುತ್ತವೆ. ಬೈಬಲಿನ ಕಥನಗಳಾದರೊ, ಘಟನೆಗಳು ನಡೆದ ಸಮಯ ಮತ್ತು ಸ್ಥಳವನ್ನು ಅತಿ ನಿಷ್ಕೃಷ್ಟವಾಗಿ ಕೊಡುತ್ತವೆ.”b ಇದಕ್ಕೆ ರುಜುವಾತಾಗಿ ಅವನು ಲೂಕ 3:1, 2ನ್ನು ಉಲ್ಲೇಖಿಸುತ್ತಾನೆ: “ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷದಲ್ಲಿ, ಪೊಂತ್ಯಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾಯಕ್ಕೆ ಉಪರಾಜನೂ ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ ಅನ್ನನೂ ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ದೇವರ ವಾಕ್ಯವುಂಟಾಯಿತು.” ಇಲ್ಲಿ ಸಮಯ ಮತ್ತು ಸ್ಥಳದ ಬಗ್ಗೆ ಯಾವುದೇ ಅನಿಶ್ಚಿತತೆಯಿಲ್ಲ. ಬದಲಿಗೆ ಲೂಕನು, ಯೋಹಾನನ ಮತ್ತು ಯೇಸುವಿನ ಶುಶ್ರೂಷೆಯ ಕಾಲವನ್ನು ರುಜುಪಡಿಸಲು ಕಡಮೆಯಲ್ಲ, ಏಳು ಮಂದಿ ಅಧಿಕಾರಿಗಳನ್ನು ಹೆಸರಿಸುತ್ತಾನೆ.
8 ಯೇಸುವಿನ ಜನನದ ಸಮಯವನ್ನು ನಿರ್ಣಯಿಸಲು ಲೂಕನು ನಮಗೆ ಎರಡು ಸೂಚಿಗಳನ್ನೂ ಕೊಡುತ್ತಾನೆ. ಅವನು ಲೂಕ 2:1, 2ರಲ್ಲಿ ಹೇಳುವುದು: “ಆ ಕಾಲದಲ್ಲಿ ರಾಜ್ಯವೆಲ್ಲಾ ಖಾನೆಷುಮಾರಿ ಬರಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು. ಕುರೇನ್ಯನು ಸುರಿಯಕ್ಕೆ ಅಧಿಪತಿಯಾಗಿದ್ದಾಗ ಈ ಮೊದಲನೆಯ ಖಾನೆಷುಮಾರಿ ನಡೆಯಿತು.” ಇದು ಯೋಸೇಫಮರಿಯರು ತಮ್ಮನ್ನು ನೋಂದಾಯಿಸಿಕೊಳ್ಳಲು ಬೇತ್ಲೆಹೇಮಿಗೆ ಹೋದಾಗ ನಡೆಯಿತು ಮತ್ತು ಅವರು ಅಲ್ಲಿದ್ದಾಗ ಯೇಸು ಹುಟ್ಟಿದನು.c ಆದುದರಿಂದ, “ಇದು ಲೂಕನ ಐತಿಹಾಸಿಕ ಜ್ಞಾನವನ್ನು ಪರೀಕ್ಷಿಸುವ ಅತಿ ಸೂಕ್ಷ್ಮ ಪರೀಕ್ಷೆಗಳಲ್ಲಿ ಒಂದಾಗಿದೆ. ಅವನು ಯಾವಾಗಲೂ ಪರಿಪೂರ್ಣ ನಿಷ್ಕೃಷ್ಟತೆಯನ್ನು ಸಾಧಿಸಿದ್ದಾನೆ,” ಎಂದು ಹೇಳಿದ ವ್ಯಾಖ್ಯಾನಕಾರನೊಂದಿಗೆ ನಮಗೆ ಒಪ್ಪದೆ ಬೇರೆ ಮಾರ್ಗವಿಲ್ಲ.d “ನಾನು ಬುಡದಿಂದ ಎಲ್ಲವನ್ನೂ ಚೆನ್ನಾಗಿ” ವಿಚಾರಿಸಿದ್ದೇನೆಂದು ಹೇಳಿದ ಲೂಕನ ವಾದವನ್ನು ಸರಿಯೆಂದು ನಾವು ಒಪ್ಪಿಕೊಳ್ಳಲೇಬೇಕು.
9 ಹೀಬ್ರು ಶಾಸ್ತ್ರಗಳ ಪ್ರವಾದನೆಗಳು ಯೇಸು ಕ್ರಿಸ್ತನಲ್ಲಿ ಹೇಗೆ ನಿಷ್ಕೃಷ್ಟವಾಗಿ ನೆರವೇರಿದವೆಂಬುದನ್ನೂ ಲೂಕನು ಸೂಚಿಸುತ್ತಾನೆ. ಇದರ ಕುರಿತ ಯೇಸುವಿನ ಪ್ರೇರಿತ ಸಾಕ್ಷಿಯನ್ನು ಅವನು ಉದ್ಧರಿಸುತ್ತಾನೆ. (24:27, 44) ಇದಲ್ಲದೆ ಅವನು ಭಾವೀ ಘಟನೆಗಳ ವಿಷಯದಲ್ಲಿ ಯೇಸುವಿನ ಸ್ವಂತ ಪ್ರವಾದನೆಗಳನ್ನೂ ನಿಷ್ಕೃಷ್ಟವಾಗಿ ದಾಖಲೆ ಮಾಡುತ್ತಾನೆ. ಮತ್ತು ಇವುಗಳಲ್ಲಿ ಅನೇಕ ಪ್ರವಾದನೆಗಳು ತಮ್ಮ ಮುಂತಿಳಿಸಲ್ಪಟ್ಟ ಎಲ್ಲ ವಿವರಗಳಿಗನುಸಾರ ಆಗಲೇ ನೆರವೇರಿವೆ. ದೃಷ್ಟಾಂತಕ್ಕೆ, ಯೇಸು ಮುಂತಿಳಿಸಿದಂತೆಯೇ ಯೆರೂಸಲೇಮಿಗೆ ಒಡ್ಡುಕಟ್ಟಿ (ಗೂಟಕಟ್ಟಿ) ಮುತ್ತಿಗೆಹಾಕಲಾಯಿತು ಮತ್ತು ಅದು ಸಾ.ಶ. 70ರಲ್ಲಿ ಭಯಂಕರ ನಾಶಕ್ಕೊಳಗಾಯಿತು. (ಲೂಕ 19:43, 44; 21:20-24; ಮತ್ತಾ. 24:2) ರೋಮನ್ ಸೈನ್ಯದ ಜೊತೆಯಲ್ಲಿ ಪ್ರತ್ಯಕ್ಷಸಾಕ್ಷಿಯಾಗಿದ್ದ ಐಹಿಕ ಇತಿಹಾಸಕಾರ ಫ್ಲೇವಿಯಸ್ ಜೋಸೀಫಸ್ ಎಂಬವನು, ಇಂಥ ಗೂಟಗಳನ್ನು ಒದಗಿಸಲು ಗ್ರಾಮಪ್ರದೇಶದಲ್ಲಿ ಸುಮಾರು 16 ಕಿಲೋಮೀಟರ್‌ನಷ್ಟು ದೂರಕ್ಕೆ ಮರಗಳನ್ನು ಕಡಿಯಲಾಯಿತೆಂದೂ, ಮುತ್ತಿಗೆಯ ಗೋಡೆಯು 7.2 ಕಿಲೋಮೀಟರ್ ಉದ್ದವಾಗಿತ್ತೆಂದೂ, ಅನೇಕ ಸ್ತ್ರೀಯರು ಮತ್ತು ಮಕ್ಕಳು ಕ್ಷಾಮದಿಂದ ಸತ್ತರೆಂದೂ, ಹತ್ತು ಲಕ್ಷಗಳಿಗಿಂತಲೂ ಹೆಚ್ಚು ಮಂದಿ ಯೆಹೂದ್ಯರು ಮೃತರಾದರೆಂದೂ 97,000 ಮಂದಿ ಸೆರೆಗೊಯ್ಯಲ್ಪಟ್ಟರೆಂದೂ ಸಾಕ್ಷಿ ನುಡಿಯುತ್ತಾನೆ. ರೋಮ್‌ನಲ್ಲಿ ಇಂದಿನ ವರೆಗೂ ಇರುವ ಟೈಟಸನ ಕಮಾನಿನ ಮೇಲೆ, ಯೆರೂಸಲೇಮ್ ದೇವಾಲಯದ ಸೂರೆಗಳನ್ನು ತೋರಿಸುವ ರೋಮನ್ ವಿಜಯೋತ್ಸವದ ಮೆರವಣಿಗೆಯ ಚಿತ್ರವಿದೆ.e ಲೂಕನು ಬರೆದ ಬೇರೆ ಪ್ರೇರಿತ ಪ್ರವಾದನೆಗಳು ಸಹ ಅಷ್ಟೇ ನಿಷ್ಕೃಷ್ಟವಾಗಿ ನೆರವೇರುವುದೆಂಬ ಖಾತ್ರಿ ನಮಗಿರಬಲ್ಲದು.
ಪ್ರಯೋಜನಕರವೇಕೆ?
30 “ಲೂಕನು ಬರೆದ” ಸುವಾರ್ತಾ ಪುಸ್ತಕವು ದೇವರ ವಾಕ್ಯದಲ್ಲಿ ಒಬ್ಬನ ಭರವಸೆಯನ್ನು ನೆಲೆಗೊಳಿಸಿ, ಈ ಪರಕೀಯ ಲೋಕದ ಏಟುಗಳೆದುರು ದೃಢವಾಗಿ ನಿಲ್ಲುವಂತೆ ಅವನ ನಂಬಿಕೆಯನ್ನು ಬಲಪಡಿಸುತ್ತದೆ. ಹೀಬ್ರು ಶಾಸ್ತ್ರಗಳ ನಿಷ್ಕೃಷ್ಟ ನೆರವೇರಿಕೆಗಳ ಅನೇಕ ಉದಾಹರಣೆಗಳನ್ನು ಲೂಕನು ಒದಗಿಸುತ್ತಾನೆ. ಯೆಶಾಯನ ಪುಸ್ತಕದಲ್ಲಿ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಲಾಗಿರುವ ತನ್ನ ನೇಮಕದ ಬಗ್ಗೆ ಯೇಸು ಹೇಳುವುದನ್ನು ಈ ವೃತ್ತಾಂತದಲ್ಲಿ ತೋರಿಸಲಾಗಿದೆ ಮತ್ತು ಲೂಕನು ಇದನ್ನು ತನ್ನ ಪುಸ್ತಕದಲ್ಲೆಲ್ಲ ಮುಖ್ಯವಿಷಯವಾಗಿ ಬಳಸುವಂತೆ ತೋರುತ್ತದೆ. (ಲೂಕ 4:17-19; ಯೆಶಾ. 61:1, 2) ಯೇಸು ಪ್ರವಾದಿಗಳ ಪುಸ್ತಕಗಳಿಂದ ಉದ್ಧರಿಸಿ ಮಾತಾಡಿದ ಸಂದರ್ಭಗಳಲ್ಲಿ ಇದು ಒಂದಾಗಿತ್ತು. ಮತ್ತು ಪಿಶಾಚನ ಮೂರು ಪ್ರಲೋಭನೆಗಳನ್ನು ತಳ್ಳಿಹಾಕಿದಾಗ ಮಾಡಿದಂತೆ, ಅವನು ಧರ್ಮಶಾಸ್ತ್ರದಿಂದಲೂ ಉದ್ಧರಿಸಿದನು. ಮತ್ತು, “ಬರಬೇಕಾದ ಕ್ರಿಸ್ತನು ದಾವೀದನ ಮಗನೆಂದು ಹೇಳುತ್ತಾರಲ್ಲಾ, ಅದು ಹೇಗಾದೀತು?” ಎಂದು ತನ್ನ ವಿರೋಧಿಗಳನ್ನು ಕೇಳಿದಾಗ ಅವನು ಕೀರ್ತನೆಗಳಿಂದಲೂ ಉದ್ಧರಿಸಿದನು. ಲೂಕನ ವೃತ್ತಾಂತದಲ್ಲಿ ಹೀಬ್ರು ಶಾಸ್ತ್ರಗಳಿಂದ ಬೇರೆ ಅನೇಕ ಉದ್ಧರಣೆಗಳಿವೆ.—ಲೂಕ 4:4, 8, 12; 20:41-44; ಧರ್ಮೋ. 8:3; 6:13, 16; ಕೀರ್ತ. 110:1.
31 ಜೆಕರ್ಯ 9:9 ಮುಂತಿಳಿಸಿದ್ದಂತೆ, ಯೇಸು ಕತ್ತೇಮರಿಯ ಮೇಲೆ ಕುಳಿತು ಯೆರೂಸಲೇಮಿಗೆ ಹೋದಾಗ, ಜನರ ಗುಂಪು ಅವನನ್ನು ಹರ್ಷದಿಂದ ವಂದಿಸುತ್ತಾ, ಕೀರ್ತನೆ 118:26ರ ವಚನವನ್ನು ಅವನಿಗೆ ಅನ್ವಯಿಸಿತು. (ಲೂಕ 19:35-38) ಒಂದು ಸ್ಥಳದಲ್ಲಿ ಲೂಕನು ಬರೆದ ಎರಡು ವಚನಗಳು, ಯೇಸುವಿನ ಅವಮಾನಕರ ಮರಣ ಮತ್ತು ಪುನರುತ್ಥಾನದ ಕುರಿತು ಹೀಬ್ರು ಶಾಸ್ತ್ರಗಳು ಬರೆದ ಆರು ವಿಷಯಗಳನ್ನು ಆವರಿಸಲು ಸಾಕಷ್ಟಾಗಿವೆ. (ಲೂಕ 18:32, 33; ಕೀರ್ತ. 22:7; ಯೆಶಾ. 50:6; 53:5-7; ಯೋನ 1:17) ಕೊನೆಯದಾಗಿ, ತನ್ನ ಪುನರುತ್ಥಾನದ ನಂತರ ಶಿಷ್ಯರ ಮನಸ್ಸಿಗೆ ಇಡೀ ಹೀಬ್ರು ಶಾಸ್ತ್ರದ ಮಹತ್ವವನ್ನು ಯೇಸು ಬಲವಾಗಿ ನಾಟಿಸಿದನು. “ತರುವಾಯ ಆತನು—ನಾನು ಇನ್ನೂ ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಕೀರ್ತನೆಗಳಲ್ಲಿಯೂ ಬರೆದಿರುವದೆಲ್ಲಾ ನೆರವೇರುವದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ ಅಂದನು. ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳುಕೊಳ್ಳುವಂತೆ ಆತನು ಅವರ ಬುದ್ಧಿಯನ್ನು” ತೆರೆದನು. (ಲೂಕ 24:44, 45) ಯೇಸು ಕ್ರಿಸ್ತನ ಆ ಪ್ರಥಮ ಶಿಷ್ಯರಂತೆಯೇ ನಾವೂ, ಲೂಕನು ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಇತರ ಲೇಖಕರು ಅಷ್ಟು ನಿಷ್ಕೃಷ್ಟವಾಗಿ ವಿವರಿಸಿರುವ ಹೀಬ್ರು ಶಾಸ್ತ್ರಗಳ ನೆರವೇರಿಕೆಗೆ ಗಮನ ಕೊಡುವ ಮೂಲಕ ಜ್ಞಾನೋದಯವನ್ನೂ ಬಲವಾದ ನಂಬಿಕೆಯನ್ನೂ ಪಡೆಯಬಲ್ಲೆವು.
32 ಲೂಕನು ತನ್ನ ಕಥನದಾದ್ಯಂತ ದೇವರ ರಾಜ್ಯದ ಕಡೆಗೆ ಓದುಗರ ಗಮನ ಸೆಳೆಯುತ್ತಾನೆ. ಈ ಪುಸ್ತಕದ ಆದಿಯಿಂದ ಅಂದರೆ ದೇವದೂತನು ಮರಿಯಳಿಗೆ ಆಕೆ ಹಡೆಯುವ ಮಗು “ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ” ಎಂದು ವಾಗ್ದಾನಿಸಿದ್ದಲ್ಲಿಂದ, ತನ್ನ ಅಪೊಸ್ತಲರನ್ನು ರಾಜ್ಯ ಒಡಂಬಡಿಕೆಯೊಳಗೆ ತರುವ ವಿಷಯದಲ್ಲಿ ಮಾತಾಡುವ ಕೊನೆಯ ಅಧ್ಯಾಯಗಳ ತನಕ, ಲೂಕನು ರಾಜ್ಯ ನಿರೀಕ್ಷೆಯನ್ನು ಎತ್ತಿಹೇಳುತ್ತಾನೆ. (1:33; 22:28, 29) ಯೇಸು ರಾಜ್ಯವನ್ನು ಸಾರುವುದರಲ್ಲಿ ನಾಯಕತ್ವ ವಹಿಸುತ್ತ, 12 ಮಂದಿ ಅಪೊಸ್ತಲರನ್ನು ಕಳುಹಿಸುವುದನ್ನು ಮತ್ತು ಅನಂತರ ಅದೇ ಕೆಲಸಕ್ಕಾಗಿ 70 ಮಂದಿಯನ್ನು ಕಳುಹಿಸುವುದನ್ನು ಲೂಕನು ತೋರಿಸುತ್ತಾನೆ. (4:43; 9:1, 2; 10:1, 8, 9) ರಾಜ್ಯವನ್ನು ಪ್ರವೇಶಿಸಲು ಬೇಕಾಗಿರುವ ಏಕನಿಷ್ಠ ಭಕ್ತಿಯು ಯೇಸುವಿನ ಈ ನೇರವಾದ ಮಾತುಗಳಿಂದ ಒತ್ತಿಹೇಳಲ್ಪಟ್ಟಿದೆ: “ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು,” ಮತ್ತು “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ.”—9:60, 62.
33 ಲೂಕನು ಪ್ರಾರ್ಥನೆಯನ್ನೂ ಒತ್ತಿಹೇಳಿದ್ದಾನೆ. ಅವನ ಸುವಾರ್ತಾ ಪುಸ್ತಕದಲ್ಲಿ ಇದು ಪ್ರಮುಖವಾಗಿ ಎದ್ದುಕಾಣುತ್ತದೆ. ಜೆಕರೀಯನು ದೇವಾಲಯಲ್ಲಿದ್ದಾಗ ಜನರ ಗುಂಪು ಪ್ರಾರ್ಥಿಸುವುದನ್ನೂ, ಒಬ್ಬ ಮಗನನ್ನು ಪಡೆಯಲು ಅವನು ಮಾಡಿದ ಪ್ರಾರ್ಥನೆಗೆ ಉತ್ತರವಾಗಿ ಸ್ನಾನಿಕ ಯೋಹಾನನು ಜನಿಸುವುದನ್ನೂ, ಪ್ರವಾದಿನಿ ಅನ್ನಳು ಹಗಲಿರುಳು ಪ್ರಾರ್ಥಿಸುತ್ತಿರುವುದನ್ನೂ ಅದು ಹೇಳುತ್ತದೆ. ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಯೇಸು ಪ್ರಾರ್ಥಿಸುವುದನ್ನು, 12 ಮಂದಿಯನ್ನು ಆರಿಸುವ ಮೊದಲು ಯೇಸು ಇಡೀ ರಾತ್ರಿ ಪ್ರಾರ್ಥನೆಯಲ್ಲಿ ಕಳೆಯುವುದನ್ನು ಮತ್ತು ರೂಪಾಂತರದ ಸಮಯದಲ್ಲಿ ಅವನ ಪ್ರಾರ್ಥನೆಯನ್ನು ಅದು ವಿವರಿಸುತ್ತದೆ. ‘ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂದು’ ಯೇಸು ತನ್ನ ಶಿಷ್ಯರಿಗೆ ಹೇಳಿದಾಗ, ನ್ಯಾಯಾಧಿಪತಿಯನ್ನು ನ್ಯಾಯಕ್ಕಾಗಿ ಪಟ್ಟುಹಿಡಿದು ಬೇಡಿಕೊಳ್ಳುತ್ತಾ ಇದ್ದ ವಿಧವೆಯ ದೃಷ್ಟಾಂತದ ಮೂಲಕ ಚಿತ್ರಿಸಿದನು. ಪ್ರಾರ್ಥಿಸಲು ತಮಗೆ ಕಲಿಸುವಂತೆ ಶಿಷ್ಯರು ಯೇಸುವನ್ನು ಕೇಳಿಕೊಂಡದ್ದನ್ನು ಮತ್ತು ಎಣ್ಣೇಮರಗಳ ಗುಡ್ಡದಲ್ಲಿ ಯೇಸು ಪ್ರಾರ್ಥಿಸುತ್ತಿದ್ದಾಗ ದೇವದೂತನು ಅವನನ್ನು ಬಲಪಡಿಸಿದ್ದನ್ನು ಲೂಕನು ಮಾತ್ರ ವರದಿಸುತ್ತಾನೆ. ಮತ್ತು ಯೇಸುವಿನ ಕೊನೆಯ ಪ್ರಾರ್ಥನೆಯಾದ “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” ಎಂಬ ಮಾತುಗಳನ್ನು ಅವನು ಮಾತ್ರ ದಾಖಲೆ ಮಾಡುತ್ತಾನೆ. (1:10, 13; 2:36, 37; 3:21; 6:12; 9:28, 29; 18:1-8; 11:1; 22:39-46; 23:46) ಲೂಕನು ತನ್ನ ಸುವಾರ್ತಾ ಪುಸ್ತಕವನ್ನು ಬರೆದಾಗ ಪ್ರಾರ್ಥನೆ ಎಷ್ಟು ಮಹತ್ವದ್ದಾಗಿತ್ತೊ, ಇಂದು ಸಹ ದೈವಿಕ ಚಿತ್ತವನ್ನು ಮಾಡುತ್ತಿರುವ ಎಲ್ಲರನ್ನು ಬಲಪಡಿಸಲಿಕ್ಕಾಗಿ ಪ್ರಾರ್ಥನೆಯು ಅಷ್ಟೇ ಮಹತ್ವಪೂರ್ಣವಾಗಿದೆ.
34 ಲೂಕನು ತನ್ನ ತೀಕ್ಷ್ಣ ಅವಲೋಕನಾಶಕ್ತಿಯಿಂದ ಹಾಗೂ ತನ್ನ ನಿರರ್ಗಳವಾದ, ವರ್ಣನಾತ್ಮಕ ಬರಹದಿಂದ ಯೇಸುವಿನ ಬೋಧನೆಗಳಿಗೆ ಭಾವುಕತೆ ಮತ್ತು ರೋಮಾಂಚಕ ಕಳೆಯನ್ನು ಒದಗಿಸುತ್ತಾನೆ. ಶಾಸ್ತ್ರಿಫರಿಸಾಯರ ದಯಾರಹಿತ, ವಿಧಿರೂಪದ, ಕಪಟ ಧರ್ಮಕ್ಕೆ ಹೋಲಿಕೆಯಲ್ಲಿ ಬಲಹೀನರ, ಶೋಷಿತರ ಮತ್ತು ದಬ್ಬಾಳಿಕೆಗೆ ಒಳಗಾದವರ ಕಡೆಗೆ ಯೇಸುವಿಗಿದ್ದ ಪ್ರೀತಿ, ದಯೆ, ಕರುಣೆ ಮತ್ತು ಅನುಕಂಪಗಳು ಆ ವೃತ್ತಾಂತದಲ್ಲಿ ಎದ್ದುಕಾಣುತ್ತವೆ. (4:18; 18:9) ಯೇಸು ಬಡವರಿಗೆ, ಬಂದಿಗಳಿಗೆ, ಕುರುಡರಿಗೆ ಮತ್ತು ಜಜ್ಜಲ್ಪಟ್ಟವರಿಗೆ ಸತತ ಪ್ರೋತ್ಸಾಹವನ್ನು ಕೊಟ್ಟು, ಹೀಗೆ “ತನ್ನ ಹೆಜ್ಜೆಯ ಜಾಡಿನಲ್ಲಿ” ನಡೆಯಲು ಪ್ರಯತ್ನಿಸುವವರಿಗೆ ಉಜ್ವಲವಾದ ಪೂರ್ವನಿದರ್ಶನವನ್ನು ಒದಗಿಸಿದನು.—1 ಪೇತ್ರ 2:21.
35 ಪರಿಪೂರ್ಣನೂ ಅದ್ಭುತ ಕಾರ್ಯಗಳನ್ನು ಮಾಡುವವನೂ ಆಗಿದ್ದ ದೇವಕುಮಾರನಾದ ಯೇಸು ತನ್ನ ಶಿಷ್ಯರಿಗೂ ಇತರ ಪ್ರಾಮಾಣಿಕ ಹೃದಯರಿಗೂ ಪ್ರೀತಿಯ ಚಿಂತೆಯನ್ನು ತೋರಿಸಿದಂತೆಯೇ, ನಾವೂ ನಮ್ಮ ಶುಶ್ರೂಷೆಯನ್ನು ಪ್ರೀತಿಯಿಂದ, ಹೌದು, ‘ನಮ್ಮ ದೇವರ ಅತ್ಯಂತ ಕರುಣೆಯಿಂದ’ ಪೂರೈಸಲು ಪ್ರಯತ್ನಿಸಬೇಕು. (ಲೂಕ 1:78) ಈ ಉದ್ದೇಶಕ್ಕಾಗಿ, “ಲೂಕನು ಬರೆದ” ಸುವಾರ್ತಾ ಪುಸ್ತಕವು ನಿಶ್ಚಯವಾಗಿಯೂ ಪ್ರಯೋಜನಕರವೂ ಸಹಾಯಕರವೂ ಆಗಿದೆ. “ಪ್ರಿಯ ವೈದ್ಯನಾಗಿರುವ” ಲೂಕನು ಈ ನಿಷ್ಕೃಷ್ಟವೂ ಭಕ್ತಿವರ್ಧಕವೂ ಪ್ರೋತ್ಸಾಹಕರವೂ ಆದ ವೃತ್ತಾಂತವನ್ನು, ಅಂದರೆ, “ದೇವರಿಂದ ಸಿದ್ಧವಾಗುವ ರಕ್ಷಣೆ”ಯಾದ ಯೇಸು ಕ್ರಿಸ್ತನ ರಾಜ್ಯದ ಮೂಲಕ ಬರುವ ವಿಮೋಚನೆಗೆ ಕೈತೋರಿಸಲು ಬರೆಯುವಂತೆ ಪ್ರೇರಿಸಿದ್ದಕ್ಕಾಗಿ ನಾವು ಯೆಹೋವನಿಗೆ ನಿಜವಾಗಿಯೂ ಕೃತಜ್ಞರಾಗಿರಬಲ್ಲೆವು.—ಕೊಲೊ. 4:14; ಲೂಕ 3:6.
[ಪಾದಟಿಪ್ಪಣಿಗಳು]
a ಲೂಕನ ವೈದ್ಯಕೀಯ ಭಾಷೆ (ಇಂಗ್ಲಿಷ್) 1954, ಡಬ್ಲ್ಯೂ. ಕೆ. ಹೋಬರ್ಟ್, ಪುಟಗಳು xi-xxviii.
b ನ್ಯಾಯವಾದಿಯೊಬ್ಬನು ಬೈಬಲನ್ನು ಪರೀಕ್ಷಿಸುತ್ತಾನೆ (ಇಂಗ್ಲಿಷ್) 1943, ಐ. ಏಚ್. ಲಿಂಟನ್, ಪುಟ 38.
c ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂ. 2, ಪುಟಗಳು 766-7.
d ಬೈಬಲಿನ ಆಧುನಿಕ ಕಂಡುಹಿಡಿತ (ಇಂಗ್ಲಿಷ್), 1955, ಎ. ರೆಂಡ್ಲ್ ಷಾರ್ಟ್, ಪುಟ 211.
e ಯೆಹೂದಿ ಯುದ್ಧ (ಇಂಗ್ಲಿಷ್), V, 491-515, 523 (xii, 1-4) VI, 420 (ix, 3); ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಸಂ. 2, ಪುಟಗಳು 751-2 ಸಹ ನೋಡಿ.