ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bsi08-1 ಪು. 12-15
  • ಬೈಬಲ್‌ ಪುಸ್ತಕ ನಂಬರ್‌ 43 ಯೋಹಾನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಪುಸ್ತಕ ನಂಬರ್‌ 43 ಯೋಹಾನ
  • “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ (ಮತ್ತಾಯ—ಕೊಲೊಸ್ಸೆ)
  • ಉಪಶೀರ್ಷಿಕೆಗಳು
  • ಪ್ರಯೋಜನಕರವೇಕೆ?
“ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ (ಮತ್ತಾಯ—ಕೊಲೊಸ್ಸೆ)
bsi08-1 ಪು. 12-15

ಬೈಬಲ್‌ ಪುಸ್ತಕ ನಂಬರ್‌ 43 ಯೋಹಾನ

ಲೇಖಕ: ಅಪೊಸ್ತಲ ಯೋಹಾನ

ಬರೆಯಲ್ಪಟ್ಟ ಸ್ಥಳ: ಎಫೆಸ ಅಥವಾ ಅದರ ಸಮೀಪ

ಬರೆದು ಮುಗಿಸಿದ್ದು: ಸುಮಾರು ಸಾ.ಶ. 98

ಆವರಿಸಲ್ಪಟ್ಟ ಕಾಲ: ಪೀಠಿಕೆಯ ಬಳಿಕ, ಸಾ.ಶ. 29-33

ಮತ್ತಾಯ, ಮಾರ್ಕ ಮತ್ತು ಲೂಕ—ಇವರು ಬರೆದ ಸುವಾರ್ತೆಯ ದಾಖಲೆಗಳು 30ಕ್ಕೂ ಹೆಚ್ಚು ವರ್ಷ ಚಲಾವಣೆಯಲ್ಲಿದ್ದು, ಪ್ರಥಮ ಶತಮಾನದ ಕ್ರೈಸ್ತರು ಅವುಗಳನ್ನು ಪವಿತ್ರಾತ್ಮಪ್ರೇರಿತ ಪುರುಷರ ಕೃತಿಗಳಾಗಿ ಅತ್ಯಮೂಲ್ಯವೆಂದು ಭಾವಿಸುತ್ತಿದ್ದರು. ಆದರೆ ಈಗ, ಆ ಶತಮಾನದ ಅಂತ್ಯ ಸಮೀಪಿಸಲಾಗಿ ಮತ್ತು ಯೇಸುವಿನೊಂದಿಗೆ ಇದ್ದವರ ಸಂಖ್ಯೆ ಕಡಿಮೆ ಆಗಿರಲಾಗಿ, ಕ್ರೈಸ್ತರಿಗೆ ಹೇಳಲು ಏನಾದರೂ ಬಾಕಿ ಇದೆಯೊ ಎಂಬ ಪ್ರಶ್ನೆ ಎದ್ದಿರಬಹುದು. ಯೇಸುವಿನ ಶುಶ್ರೂಷೆಯ ಅಮೂಲ್ಯ ವಿವರಗಳನ್ನು ತನ್ನ ಸ್ವಂತ ಸ್ಮರಣೆಗಳಿಂದ ಕೊಡಲು ಸಾಮರ್ಥ್ಯವಿರುವ ಇನ್ನಾವನಾದರೂ ಇದ್ದನೊ? ಹೌದು, ಇದ್ದನು. ವೃದ್ಧನಾಗಿದ್ದ ಯೋಹಾನನಿಗೆ, ಯೇಸುವಿನೊಂದಿಗಿನ ತನ್ನ ಸಹವಾಸದಿಂದಾಗಿ ವಿಶೇಷ ಸ್ಮರಣೆಗಳಿದ್ದವು. ಸ್ನಾನಿಕನಾದ ಯೋಹಾನನ ಶಿಷ್ಯರಲ್ಲಿ ದೇವರ ಕುರಿಮರಿಯಾದವನಿಗೆ ಪ್ರಥಮವಾಗಿ ಪರಿಚಯಿಸಲ್ಪಟ್ಟ ಮೊದಲಿಗರಲ್ಲಿ ಇವನು ಒಬ್ಬನಾಗಿದ್ದನು. ಕರ್ತನು ತನ್ನೊಂದಿಗೆ ಪೂರ್ಣಸಮಯದ ಸೇವೆಗೆ ಪ್ರಥಮವಾಗಿ ಕರೆದ ನಾಲ್ವರಲ್ಲಿ ಇವನಿದ್ದನೆಂದೂ ವ್ಯಕ್ತವಾಗುತ್ತದೆ. (ಯೋಹಾ. 1:35-39; ಮಾರ್ಕ 1:16-20) ಯೇಸುವಿನ ಶುಶ್ರೂಷೆಯ ಕಾಲದಲ್ಲೆಲ್ಲ ಅವನು ಯೇಸುವಿನ ಆಪ್ತ ಒಡನಾಡಿಯಾಗಿದ್ದನು ಮತ್ತು ಕೊನೆಯ ಪಸ್ಕದಲ್ಲಿ ಯೇಸುವಿನ ಎದೆಯ ಹತ್ತಿರ ಒರಗಿಕೊಂಡಿದ್ದ “ಯೇಸುವಿಗೆ ಪ್ರಿಯನಾಗಿದ್ದ” ಶಿಷ್ಯನು ಅವನಾಗಿದ್ದನು. (ಯೋಹಾ. 13:23; ಮತ್ತಾ. 17:1; ಮಾರ್ಕ 5:37; 14:33) ಯೇಸುವನ್ನು ಕಂಬಕ್ಕೇರಿಸಲಾದ ಹೃದಯವಿದ್ರಾವಕ ಸಂದರ್ಭದಲ್ಲಿ ಅವನು ಅಲ್ಲಿದ್ದನು. ಆಗ ಯೇಸು ತನ್ನ ತಾಯಿಯನ್ನು ಈ ಶಿಷ್ಯನ ವಶಕ್ಕೊಪ್ಪಿಸಿದನು. ಯೇಸು ಸತ್ತವರೊಳಗಿಂದ ಎದ್ದಿದ್ದಾನೆಂಬ ವರದಿ ದೊರೆತೊಡನೆ ಅದನ್ನು ಖಚಿತಪಡಿಸಲು ಸಮಾಧಿಗೆ ಓಡಿದಾಗ ಪೇತ್ರನನ್ನು ಮೀರಿಸಿ ಓಡಿದವನು ಇವನೇ.—ಯೋಹಾ. 19:26, 27; 20:2-4.

2 ಸುಮಾರು 70 ವರ್ಷಕಾಲ ಕ್ರಿಯಾಶೀಲ ಸೇವೆಯಲ್ಲಿ ತೊಡಗಿ ಹದಗೊಂಡ ಮತ್ತು ಇತ್ತೀಚೆಗೆ ಪತ್ಮೊಸ್‌ ದ್ವೀಪದ ಒಂಟಿ-ಸೆರೆವಾಸದಲ್ಲಿ ಪಡೆದ ದರ್ಶನಗಳು ಮತ್ತು ಮಾಡಿದಂಥ ಧ್ಯಾನದಿಂದಾಗಿ ಯೋಹಾನನು ತನ್ನ ಹೃದಯದಲ್ಲಿ ಬಹಳಷ್ಟು ಸಮಯದಿಂದ ಇಟ್ಟುಕೊಂಡಿದ್ದ ವಿಷಯಗಳನ್ನು ಬರೆಯಲು ಸುಸಜ್ಜಿತನಾಗಿದ್ದನು. ಈಗ ಪವಿತ್ರಾತ್ಮವು, ಅವನು ಆ ಅಮೂಲ್ಯವೂ ಜೀವದಾಯಕವೂ ಆದ ನುಡಿಗಳಲ್ಲಿ ಅನೇಕವನ್ನು ಮರುಜ್ಞಾಪಿಸಿಕೊಳ್ಳಲು ಮತ್ತು ಬರೆದಿಡಲು ಅವನಿಗೆ ಶಕ್ತಿಯನ್ನು ನೀಡಿತು. ಹೀಗೆ ಅದನ್ನು ಓದುವ ಪ್ರತಿಯೊಬ್ಬನು ‘ಯೇಸು ದೇವಕುಮಾರನಾದ ಕ್ರಿಸ್ತನೆಂದು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ’ ಮಾಡುವುದು ಇದರ ಉದ್ದೇಶವಾಗಿತ್ತು.—20:31.

3 ಎರಡನೆಯ ಶತಮಾನದ ಆದಿ ಕ್ರೈಸ್ತರು ಈ ವೃತ್ತಾಂತದ ಲೇಖಕನು ಯೋಹಾನನೇ ಎಂದು ಒಪ್ಪಿದ್ದು ಮಾತ್ರವಲ್ಲ, ಈ ಬರಹವು ಪ್ರೇರಿತ ಶಾಸ್ತ್ರಗಳ ಅಧಿಕೃತ ಪಟ್ಟಿಯ ವಾದಗ್ರಸ್ತವಲ್ಲದ ಭಾಗವೆಂದು ಕಂಡರು. ಅಲೆಗ್ಸಾಂಡ್ರಿಯದ ಕ್ಲೆಮೆಂಟ್‌, ಐರೆನೇಯಸ್‌, ಟೆರ್ಟಲಿಯನ್‌ ಮತ್ತು ಆರಜನ್‌ ಎಂಬ ಎರಡನೆಯ ಶತಮಾನದ ಉತ್ತರ ಭಾಗದ ಮತ್ತು ಮೂರನೆಯ ಶತಮಾನದ ಆದಿಭಾಗದ ಪಂಡಿತರೆಲ್ಲ ಯೋಹಾನನ ಬರಹಗಾರಿಕೆಗೆ ಸಾಕ್ಷಿ ನೀಡುತ್ತಾರೆ. ಇದಲ್ಲದೆ, ಯೋಹಾನನೇ ಲೇಖಕನೆಂಬುದಕ್ಕೆ ಈ ಪುಸ್ತಕದಲ್ಲಿಯೇ ಹೆಚ್ಚು ಆಂತರಿಕ ಪುರಾವೆ ದೊರೆಯುತ್ತದೆ. ಲೇಖಕನು ಯೆಹೂದ್ಯನೆಂದೂ ಯೆಹೂದಿ ಪದ್ಧತಿಗಳು ಮತ್ತು ದೇಶದ ಬಗ್ಗೆ ಸುಪರಿಚಿತನಾಗಿದ್ದನೆಂದೂ ವ್ಯಕ್ತವಾಗುತ್ತದೆ. (2:6; 4:5; 5:2; 10:22, 23) ಈ ವೃತ್ತಾಂತದಲ್ಲಿನ ಆತ್ಮೀಯತೆಯು ತಾನೇ, ಅವನು ಅಪೊಸ್ತಲನು ಮಾತ್ರವಲ್ಲ, ವಿಶೇಷ ಸಂದರ್ಭಗಳಲ್ಲಿ ಯೇಸುವಿನೊಂದಿಗಿದ್ದ ಪೇತ್ರ, ಯಾಕೋಬ ಮತ್ತು ಯೋಹಾನ ಎಂಬ ಮೂವರಲ್ಲಿ ಒಬ್ಬನೆಂದೂ ಸೂಚಿಸುತ್ತದೆ. (ಮತ್ತಾ. 17:1; ಮಾರ್ಕ 5:37; 14:33) ಇವರಲ್ಲಿ ಯಾಕೋಬ (ಜೆಬೆದಾಯನ ಮಗ) ಲೇಖಕನು ಆಗಿರಲು ಸಾಧ್ಯವಿಲ್ಲ, ಏಕೆಂದರೆ ಈ ಪುಸ್ತಕ ಬರೆಯಲ್ಪಡುವುದಕ್ಕೆ ದೀರ್ಘಕಾಲ ಮೊದಲೇ, ಅಂದರೆ ಸಾ.ಶ. 44ರಲ್ಲಿ ಅವನು ಹೆರೋದ Iನೇ ಅಗ್ರಿಪ್ಪ ಎಂಬವನ ಕೈಯಿಂದ ಹುತಾತ್ಮನಾದನು. (ಅ.ಕೃ. 12:2) ಇವರಲ್ಲಿ ಪೇತ್ರನನ್ನೂ ಲೇಖಕನೆಂದು ಹೇಳಸಾಧ್ಯವಿಲ್ಲ ಏಕೆಂದರೆ ಅವನನ್ನು ಯೋಹಾನ 21:20-24ರಲ್ಲಿ ಈ ಪುಸ್ತಕದ ಲೇಖಕನೊಂದಿಗೆ ಉಲ್ಲೇಖಿಸಲಾಗಿದೆ.

4 ಈ ಕೊನೆಯ ವಚನಗಳಲ್ಲಿ ಲೇಖಕನನ್ನು “ಯೇಸುವಿಗೆ ಪ್ರಿಯನಾಗಿದ್ದ” ಶಿಷ್ಯನೆಂದು ಸೂಚಿಸಲಾಗಿದೆ. ಅಪೊಸ್ತಲ ಯೋಹಾನನನ್ನು ಎಂದೂ ಹೆಸರಿಸಿಲ್ಲವಾದರೂ ಮೇಲೆ ಹೇಳಿದಂಥ ಮತ್ತು ಅದಕ್ಕೆ ಹೋಲಿಕೆಯಿರುವ ಅಭಿವ್ಯಕ್ತಿಗಳು ಈ ದಾಖಲೆಯಲ್ಲಿ ಅನೇಕ ಬಾರಿ ಬರುತ್ತವೆ. ಯೇಸು ಈ ವ್ಯಕ್ತಿಯ ಬಗ್ಗೆ ಹೀಗೆ ಹೇಳಿದನೆಂದು ಉದ್ಧರಿಸಲಾಗಿದೆ: “ನಾನು ಬರುವ ತನಕ ಇವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” (ಯೋಹಾ. 21:20, 22) ಇಲ್ಲಿ ಹೇಳಲಾಗಿರುವ ಶಿಷ್ಯನು ಪೇತ್ರ ಮತ್ತು ಬೇರೆ ಅಪೊಸ್ತಲರು ಸತ್ತ ಬಳಿಕವೂ ದೀರ್ಘಕಾಲ ಬದುಕುವನೆಂದು ಇದು ಸೂಚಿಸುತ್ತದೆ. ಮತ್ತು ಇದೆಲ್ಲ ಅಪೊಸ್ತಲ ಯೋಹಾನನ ಸ್ಥಿತಿಗೆ ಹೊಂದಿಕೆಯಾಗಿರುತ್ತದೆ. ಯೇಸುವಿನ ಬರೋಣದ ಬಗ್ಗೆ ಪ್ರಕಟನೆಯ ದರ್ಶನವು ಕೊಡಲ್ಪಟ್ಟ ಬಳಿಕ ಆ ಗಮನಾರ್ಹ ಪ್ರವಾದನೆಯನ್ನು ಯೋಹಾನನು, “ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ” ಎಂದು ಮುಕ್ತಾಯಗೊಳಿಸುವುದು ಆಸಕ್ತಿಕರವಾದ ವಿಷಯ.—ಪ್ರಕ. 22:20.

5 ಯೋಹಾನನು ತನ್ನ ಸುವಾರ್ತಾ ಪುಸ್ತಕವನ್ನು, ಪತ್ಮೊಸ್‌ ದ್ವೀಪದಲ್ಲಿನ ಸೆರೆವಾಸದಿಂದ ಹಿಂತಿರುಗಿ ಬಂದ ಮೇಲೆ ಬರೆದನೆಂಬುದು ಸಾಮಾನ್ಯ ನಂಬಿಕೆಯಾದರೂ ಯೋಹಾನನ ಬರಹಗಳು ಈ ವಿಷಯದಲ್ಲಿ ಯಾವ ನಿಶ್ಚಿತ ಮಾಹಿತಿಯನ್ನು ಕೊಡುವುದಿಲ್ಲ. (ಪ್ರಕ. 1:9) ರೋಮನ್‌ ಚಕ್ರವರ್ತಿ ನರ್ವ, ತನ್ನ ಪೂರ್ವವರ್ತಿಯಾಗಿದ್ದ ಡೊಮಿಷನ್‌ ಎಂಬವನ ಆಳ್ವಿಕೆಯ ಅಂತ್ಯದಲ್ಲಿ ದೇಶಭ್ರಷ್ಟರಾಗಿದ್ದ ಅನೇಕರನ್ನು ಸಾ.ಶ. 96-98ರಲ್ಲಿ ಹಿಂದೆ ಕರೆದನು. ಯೋಹಾನನು ತನ್ನ ಸುವಾರ್ತಾ ಪುಸ್ತಕವನ್ನು ಸುಮಾರು ಸಾ.ಶ. 98ರಲ್ಲಿ ಬರೆದ ಬಳಿಕ, ಯೋಹಾನನು ಚಕ್ರವರ್ತಿ ಟ್ರೇಜನ್‌ ಆಳ್ವಿಕೆಯ ಮೂರನೆಯ ವರುಷವಾದ ಸಾ.ಶ. 100ರಲ್ಲಿ ಎಫೆಸದಲ್ಲಿ ನೆಮ್ಮದಿಯಿಂದ ತೀರಿಕೊಂಡನೆಂದು ನಂಬಲಾಗುತ್ತದೆ.

6 ಬರೆದ ಸ್ಥಳವು ಎಫೆಸ ಇಲ್ಲವೆ ಅದರ ನೆರೆಹೊರೆಯಾಗಿತ್ತೆಂಬ ಬಗ್ಗೆ ಐರನೇಯಸ್‌ ಹೇಳಿದ ಮಾತುಗಳನ್ನು ಇತಿಹಾಸಕಾರ ಯುಸೀಬಿಯಸ್‌ (ಸುಮಾರು ಸಾ.ಶ. 260-342) ಉದ್ಧರಿಸುತ್ತಾನೆ: “ಕರ್ತನ ಎದೆಯ ಮೇಲೆ ಸಹ ಒರಗಿದ ಶಿಷ್ಯ ಯೋಹಾನನು ತಾನೇ ಏಷ್ಯಾದ ಎಫೆಸದಲ್ಲಿ ಜೀವಿಸುತ್ತಿದ್ದಾಗ ಸುವಾರ್ತಾ ಪುಸ್ತಕವನ್ನೂ ಕೊಟ್ಟನು.”a ಈ ಪುಸ್ತಕವು ಪಲೆಸ್ತೀನದ ಹೊರಗೆ ಬರೆಯಲ್ಪಟ್ಟಿತೆಂಬುದಕ್ಕೆ, ಯೇಸುವಿನ ವಿರೋಧಿಗಳನ್ನು “ಫರಿಸಾಯರು,” “ಯಾಜಕರು” ಎಂದು ಕರೆಯುವ ಬದಲಿಗೆ ಸಾಮಾನ್ಯ ಪದವಾದ “ಯೆಹೂದ್ಯರು” ಎಂದು ಅನೇಕ ಬಾರಿ ಸೂಚಿಸಿರುವುದು ಬೆಂಬಲ ಕೊಡುತ್ತದೆ. (ಯೋಹಾ. 1:19; 12:9) ಅಲ್ಲದೆ, ಗಲಿಲಾಯ ಸಮುದ್ರವನ್ನು ಅದರ ರೋಮನ್‌ ಹೆಸರಾದ ತಿಬೇರಿಯ ಸಮುದ್ರವೆಂದು ಹೇಳಲಾಗಿದೆ. (6:1; 21:1) ಯೆಹೂದ್ಯೇತರರಿಗಾಗಿ ಯೋಹಾನನು ಯೆಹೂದಿ ಹಬ್ಬಗಳ ಬಗ್ಗೆ ಸಹಾಯಕರ ವಿವರಗಳನ್ನು ಒದಗಿಸುತ್ತಾನೆ. (6:4; 7:2; 11:55) ಅವನ ದೇಶಭ್ರಷ್ಟತೆಯ ಸ್ಥಳವಾಗಿದ್ದ ಪತ್ಮೊಸ್‌ ದ್ವೀಪವು ಎಫೆಸಕ್ಕೆ ಸಮೀಪದಲ್ಲಿತ್ತು, ಮತ್ತು ಎಫೆಸ ಮತ್ತು ಏಷ್ಯಾ ಮೈನರಿನ ಬೇರೆ ಸಭೆಗಳ ಪರಿಚಯ ಅವನಿಗಿತ್ತೆಂಬುದನ್ನು ಪ್ರಕಟನೆ 2 ಮತ್ತು 3ನೆಯ ಅಧ್ಯಾಯಗಳು ತೋರಿಸುತ್ತವೆ.

7 ಯೋಹಾನನ ಸುವಾರ್ತಾ ಪುಸ್ತಕದ ವಿಶ್ವಾಸಾರ್ಹತೆಗೆ 20ನೆಯ ಶತಮಾನದಲ್ಲಿ ಕಂಡುಹಿಡಿಯಲಾದ ಪ್ರಮುಖ ಹಸ್ತಪ್ರತಿಗಳು ಸಾಕ್ಷಿ ನೀಡುತ್ತವೆ. ಇವುಗಳಲ್ಲಿ ಒಂದು, ಈಜಿಪ್ಟ್‌ನಲ್ಲಿ ಕಂಡುಹಿಡಿಯಲಾದ ಯೋಹಾನನ ಸುವಾರ್ತಾ ಪುಸ್ತಕದ ಅವಶಿಷ್ಟವಾಗಿದೆ. ಈಗ ಇದು ಪಪೈರಸ್‌ ರೈಲೆಂಡ್ಸ್‌ 457 (P52) ಎಂದು ಪ್ರಸಿದ್ಧವಾಗಿದೆ. ಇದರಲ್ಲಿ ಯೋಹಾನ 18:31-33, 37, 38 ವಚನಗಳಿದ್ದು, ಇದನ್ನು ಮ್ಯಾಂಚೆಸ್ಟರ್‌, ಇಂಗ್ಲೆಂಡ್‌ನ ಜಾನ್‌ ರೈಲೆಂಡ್ಸ್‌ ಲೈಬ್ರರಿಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ.b ಒಂದನೆಯ ಶತಮಾನದ ಅಂತ್ಯದಲ್ಲಿ ಯೋಹಾನನ ಬರಹಗಾರಿಕೆಯ ಪರಂಪರೆಯ ಮೇಲೆ ಅದಕ್ಕಿರುವ ಸಂಬಂಧದ ವಿಷಯದಲ್ಲಿ, ಮಾಜಿ ಸರ್‌ ಫ್ರೆಡರಿಕ್‌ ಕೆನ್ಯನ್‌ ಎಂಬವರು ಬೈಬಲ್‌ ಮತ್ತು ಆಧುನಿಕ ಪಾಂಡಿತ್ಯ (ಇಂಗ್ಲಿಷ್‌, 1949) ಎಂಬ ತಮ್ಮ ಪುಸ್ತಕದ ಪುಟ 21ರಲ್ಲಿ ಹೇಳುವುದು: “ರೋಮನ್‌ ಪ್ರಾಂತವಾಗಿದ್ದ ಈಜಿಪ್ಟ್‌ನಲ್ಲಿ ಕಂಡುಹಿಡಿಯಲಾಯಿತೆಂದು ಎಣಿಸಲಾಗುವ ಈ ಹಸ್ತಪ್ರತಿಯ ಅವಶಿಷ್ಟವು ಚಿಕ್ಕದ್ದಾಗಿದ್ದರೂ ಈ ಸುವಾರ್ತಾ ಪುಸ್ತಕವು ಅಲ್ಲಿ, ಸುಮಾರು ಕ್ರಿ.ಶ. 130-150ರ ಅವಧಿಯಲ್ಲಿ ಚಲಾವಣೆಯಲ್ಲಿತ್ತೆಂಬುದನ್ನು ರುಜುಪಡಿಸಲು ಅದು ಸಾಕು. ಈ ಕೃತಿಯು ತನ್ನ ಮೂಲ ಸ್ಥಳದಿಂದ ಚಲಾವಣೆಗೆ ಬರಲು ಕನಿಷ್ಠ ಪ್ರಮಾಣದ ಸಮಯವನ್ನು ಕೊಟ್ಟರೂ, ಅದರ ರಚನೆಯ ತೇದಿಯು ಪ್ರಥಮ ಶತಮಾನದ ಕೊನೆಯ ದಶಕದ ಸಾಂಪ್ರದಾಯಿಕ ತೇದಿಗೆ ಎಷ್ಟು ಹತ್ತಿರ ಬರುತ್ತದೆಂದರೆ ಈ ಪರಂಪರೆಯ ಸಪ್ರಮಾಣತೆಯನ್ನು ಸಂದೇಹಿಸಲು ಇನ್ನು ಮುಂದೆ ಯಾವ ಕಾರಣವೂ ಇರುವುದಿಲ್ಲ.”

8 ಯೋಹಾನನ ಸುವಾರ್ತಾ ಪುಸ್ತಕವು ಅದರ ಪೀಠಿಕೆಯ ವಿಷಯದಲ್ಲಿ ಗಮನಾರ್ಹವಾಗಿದೆ. ಅದು “ಆದಿಯಲ್ಲಿ ದೇವರ ಬಳಿ” ಇದ್ದ ವಾಕ್ಯವೆಂಬಾತನ ಮೂಲಕ ಸಕಲ ವಿಷಯಗಳು ಅಸ್ತಿತ್ವಕ್ಕೆ ಬಂದವೆಂದು ತಿಳಿಸುತ್ತದೆ. (1:2) ತಂದೆ ಮತ್ತು ಮಗ—ಇವರ ಮಧ್ಯೆ ಇದ್ದ ಅಮೂಲ್ಯ ಸಂಬಂಧವನ್ನು ತಿಳಿಸಿದ ಬಳಿಕ ಯೋಹಾನನು ಯೇಸುವಿನ ಕಾರ್ಯಗಳು ಮತ್ತು ಭಾಷಣಗಳ ಕೌಶಲಭರಿತ ಚಿತ್ರಣವನ್ನು ಕೊಡುತ್ತಾ ವಿಶೇಷವಾಗಿ, ದೇವರ ಮಹಾ ಏರ್ಪಾಡಿನಲ್ಲಿರುವ ಸಕಲವನ್ನು ಒಂದುಗೂಡಿಸುವ ನಿಕಟ ಪ್ರೀತಿಯ ದೃಷ್ಟಿಕೋನದಿಂದ ಬರೆಯುತ್ತಾನೆ. ಯೇಸುವಿನ ಭೂಜೀವನದ ಈ ವೃತ್ತಾಂತವು ಸಾ.ಶ. 29-33ರ ಅವಧಿಯನ್ನು ಆವರಿಸುತ್ತದೆ. ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ಉಪಸ್ಥಿತನಿದ್ದ ನಾಲ್ಕು ಪಸ್ಕಗಳ ಬಗ್ಗೆ ತಿಳಿಸಲು ಜಾಗ್ರತೆವಹಿಸುತ್ತಾ, ಹೀಗೆ ಅವನ ಶುಶ್ರೂಷೆಯು ಮೂರೂವರೆ ವರುಷದ್ದೆಂಬುದಕ್ಕೆ ಒಂದು ಪುರಾವೆಯನ್ನು ಒದಗಿಸುತ್ತದೆ. ಈ ಪಸ್ಕಗಳಲ್ಲಿ ಮೂರನ್ನು ಹಾಗೆಂದೇ ಕರೆಯಲಾಗಿದೆ. (2:13; 6:4; 12:1; 13:1) ಅವುಗಳಲ್ಲಿ ಒಂದನ್ನು “ಯೆಹೂದ್ಯರದೊಂದು ಜಾತ್ರೆ” ಎಂದು ಸೂಚಿಸಿದರೂ, ಅದರ ಪೂರ್ವಾಪರವು “ಇನ್ನು ನಾಲ್ಕು ತಿಂಗಳಿಗೆ ಸುಗ್ಗಿಬರುವದೆಂದು” ಯೇಸು ಹೇಳಿದ ಸ್ವಲ್ಪ ನಂತರದ ಸಮಯಕ್ಕೆ ಹಾಕುತ್ತದೆ. ಹೀಗೆ ಸುಮಾರು ಸುಗ್ಗಿಯ ಆದಿಭಾಗದಲ್ಲಿ ನಡೆದ ಈ ಜಾತ್ರೆಯು ಪಸ್ಕವಾಗಿತ್ತೆಂಬುದನ್ನು ಸೂಚಿಸುತ್ತದೆ.—4:35; 5:1.c

9 “ಯೋಹಾನನು ಬರೆದ” ಸುವಾರ್ತಾ ಪುಸ್ತಕವು ಅಧಿಕ ಮಾಹಿತಿಯನ್ನು ನೀಡುತ್ತದೆ. ಅದರಲ್ಲಿರುವ 92 ಪ್ರತಿಶತ ಭಾಗವು ಹೊಸತಾಗಿದ್ದು, ಅದನ್ನು ಬೇರೆ ಮೂರು ಸುವಾರ್ತಾ ಪುಸ್ತಕಗಳು ಆವರಿಸಿರುವುದಿಲ್ಲ. ಹೀಗಿದ್ದರೂ, ಯೋಹಾನನು ಈ ಮಾತುಗಳಿಂದ ಮುಕ್ತಾಯಗೊಳಿಸುತ್ತಾನೆ: “ಇದಲ್ಲದೆ ಯೇಸು ಮಾಡಿದ್ದು ಇನ್ನೂ ಬಹಳವಿದೆ; ಅದನ್ನೆಲ್ಲಾ ಒಂದೊಂದಾಗಿ ಬರೆಯುವದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸದೆ ಹೋದೀತೆಂದು ನಾನು ನೆನಸುತ್ತೇನೆ.”—21:25.

ಪ್ರಯೋಜನಕರವೇಕೆ?

30 “ಯೋಹಾನನು ಬರೆದ” ಸುವಾರ್ತಾ ಪುಸ್ತಕವು ಕ್ರಿಸ್ತನಾಗಿ ಪರಿಣಮಿಸಿದ ವಾಕ್ಯವೆಂಬಾತನ ಚಿತ್ರಣವನ್ನು ಅತಿ ನೇರವಾಗಿಯೂ ಆಪ್ತವಾಗಿಯೂ ಮನಮುಟ್ಟುವ ರೀತಿಯಲ್ಲಿ ಮನಗಾಣಿಸುವಂಥದ್ದೂ ಆಗಿ ಕೊಟ್ಟಿದೆ. ಅಲ್ಲದೆ, ಈ ಅಭಿಷಿಕ್ತ ದೇವಕುಮಾರನನ್ನು ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಚಿತ್ರಿಸುತ್ತಾ ನಿಕಟ ನೋಟವನ್ನೂ ಕೊಡುತ್ತದೆ. ಯೋಹಾನನ ಶೈಲಿ ಮತ್ತು ಶಬ್ದಭಂಡಾರ ಸರಳವಾಗಿದ್ದು, ‘ಶಾಸ್ತ್ರಾಭ್ಯಾಸ ಮಾಡದ ಸಾಧಾರಣನು’ ಎಂದು ಅವನನ್ನು ಗುರುತಿಸುತ್ತದಾದರೂ, ಅವನ ವಾಕ್ಸರಣಿಯಲ್ಲಿ ಭಾರೀ ಶಕ್ತಿಯಿದೆ. (ಅ.ಕೃ. 4:13) ತಂದೆ ಮತ್ತು ಮಗನ ಮಧ್ಯೆ ಇರುವ ಆಪ್ತ ಪ್ರೀತಿಯನ್ನು ಹಾಗೂ ಅವರೊಂದಿಗೆ ಐಕ್ಯವಾಗುವುದರಿಂದ ಸಿಗುವ ಧನ್ಯತೆಯ ಮತ್ತು ಪ್ರೀತಿಭರಿತ ಸಂಬಂಧವನ್ನು ಅವನ ಸುವಾರ್ತಾ ಪುಸ್ತಕವು ಅತ್ಯುತ್ತಮವಾಗಿ ತೋರಿಸುತ್ತದೆ. ಯೋಹಾನನು “ಪ್ರೀತಿ” ಮತ್ತು “ಪ್ರೀತಿಸಿದನು” ಎಂಬ ಪದಗಳನ್ನು ಬೇರೆ ಮೂರು ಸುವಾರ್ತಾ ಪುಸ್ತಕಗಳು ಕೂಡಿ ಬಳಸಿರುವುದಕ್ಕಿಂತಲೂ ಹೆಚ್ಚು ಬಾರಿ ಉಪಯೋಗಿಸುತ್ತಾನೆ.

31 ಈ ವಾಕ್ಯವೆಂಬವನ ಮತ್ತು ತಂದೆಯಾದ ದೇವರ ಮಧ್ಯೆ ಆದಿಯಲ್ಲಿ ಎಷ್ಟು ಮಹಿಮಾಭರಿತ ಸಂಬಂಧವಿತ್ತು! ದೇವರ ವಿಶೇಷಾನುಗ್ರಹದಿಂದ “ಆ ವಾಕ್ಯವೆಂಬವನು ನರಾವತಾರ ಎತ್ತಿ [“ನರನಾಗಿ,” NW] ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.” (ಯೋಹಾ. 1:14) ಯೇಸು ತನ್ನ ತಂದೆಯ ಚಿತ್ತಕ್ಕೆ ಸಂಪೂರ್ಣ ವಿಧೇಯತೆಯನ್ನು ತೋರಿಸುತ್ತಾ ಅಧೀನನಾಗಿರುವುದೇ ತನ್ನ ಸಂಬಂಧ ಎಂಬುದನ್ನು ಯೋಹಾನನ ವೃತ್ತಾಂತದಲ್ಲೆಲ್ಲ ಒತ್ತಿಹೇಳುತ್ತಾನೆ. (4:34; 5:19, 30; 7:16; 10:29, 30; 11:41, 42; 12:27, 49, 50; 14:10) ಈ ಆಪ್ತ ಸಂಬಂಧದ ಕುರಿತ ಅವನ ಅಭಿವ್ಯಕ್ತಿಯು, ಯೋಹಾನ 17ನೇ ಅಧ್ಯಾಯದಲ್ಲಿ ದಾಖಲಾಗಿರುವ ಅವನ ಹೃದಯಸ್ಪರ್ಶಿ ಪ್ರಾರ್ಥನೆಯಲ್ಲಿ ಮಹಿಮಾನ್ವಿತ ಪರಾಕಾಷ್ಠೆಯನ್ನು ತಲುಪುತ್ತದೆ. ತನ್ನ ತಂದೆ ಕೊಟ್ಟ ಕೆಲಸವನ್ನು ಭೂಮಿಯಲ್ಲಿ ಮಾಡಿ ಮುಗಿಸಿದ್ದೇನೆಂದು ಯೇಸು ವರದಿ ಮಾಡುತ್ತ ಕೂಡಿಸುವುದು: “ಈಗ ತಂದೆಯೇ, ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆಪಡಿಸು; ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು.”—17:5.

32 ಯೇಸುವಿಗೆ ತನ್ನ ಶಿಷ್ಯರ ಸಂಗಡ ಇದ್ದ ಸಂಬಂಧದ ವಿಷಯದಲ್ಲಿ ಏನು? ಇವರಿಗೂ ಸರ್ವ ಮಾನವಕುಲಕ್ಕೂ ದೇವರ ಆಶೀರ್ವಾದಗಳ ಏಕೈಕ ಮಾಧ್ಯಮ ಯೇಸುವೇ ಎಂಬುದನ್ನು ಸದಾ ಎತ್ತಿಹೇಳಲಾಗಿದೆ. (14:13, 14; 15:16; 16:23, 24) ಅವನನ್ನು “ದೇವರು ನೇಮಿಸಿದ ಕುರಿ[ಮರಿ],” “ಜೀವಕೊಡುವ ರೊಟ್ಟಿ,” “ಲೋಕಕ್ಕೆ ಬೆಳಕು,” ‘ಒಳ್ಳೇ ಕುರುಬನು,’ “ಪುನರುತ್ಥಾನವೂ ಜೀವವೂ,” “ಮಾರ್ಗವೂ ಸತ್ಯವೂ ಜೀವವೂ” ಮತ್ತು “ನಿಜವಾದ ದ್ರಾಕ್ಷೇಬಳ್ಳಿ” ಎಂದು ಸಂಬೋಧಿಸಲಾಗಿದೆ. (1:29; 6:35; 8:12; 10:11; 11:25; 14:6; 15:1) ‘ನಿಜವಾದ ದ್ರಾಕ್ಷೇಬಳ್ಳಿಯ’ ದೃಷ್ಟಾಂತದಲ್ಲಿಯೇ ಯೇಸು, ತನ್ನ ನಿಜ ಅನುಯಾಯಿಗಳೊಂದಿಗೆ ಮಾತ್ರವಲ್ಲ, ತಂದೆಯೊಂದಿಗೂ ತನಗಿರುವ ಆಶ್ಚರ್ಯಕರ ಐಕ್ಯವನ್ನು ಪ್ರಸಿದ್ಧಪಡಿಸುತ್ತಾನೆ. ಅಧಿಕ ಫಲವನ್ನು ಕೊಡುವ ಮೂಲಕ ಅವರು ತಮ್ಮ ತಂದೆಯನ್ನು ಮಹಿಮೆಪಡಿಸುವರು. “ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ” ಎಂದು ಯೇಸು ಸಲಹೆ ನೀಡುತ್ತಾನೆ.—15:9.

33 ಬಳಿಕ ಅವನು, ಈ ಪ್ರಿಯ ಶಿಷ್ಯರು ಮಾತ್ರವಲ್ಲ ‘ಇವರ ವಾಕ್ಯದಿಂದ [ಅವನನ್ನು] ನಂಬುವವರು’ ಸಹ ತಂದೆಯೊಂದಿಗೂ ತನ್ನೊಂದಿಗೂ ಸತ್ಯವಾಕ್ಯದಿಂದ ಶುದ್ಧೀಕರಿಸಲ್ಪಟ್ಟು ಒಂದಾಗಬೇಕೆಂದು ಎಷ್ಟು ಶ್ರದ್ಧೆಯಿಂದ ಯೆಹೋವನಿಗೆ ಪ್ರಾರ್ಥಿಸುತ್ತಾನೆ! ಹೌದು, ಯೇಸುವಿನ ಶುಶ್ರೂಷೆಯ ಪೂರ್ತಿ ಉದ್ದೇಶವನ್ನು ತಂದೆಗೆ ಅವನು ಮಾಡಿದ ಪ್ರಾರ್ಥನೆಯ ಕೊನೆಯ ಮಾತುಗಳಲ್ಲಿ ಬೆರಗುಗೊಳಿಸುವ ರೀತಿಯಲ್ಲಿ ವ್ಯಕ್ತಪಡಿಸಲಾಗಿದೆ: “ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು. ನೀನು ನನ್ನ ಮೇಲೆ ಇಟ್ಟಂಥ ಪ್ರೀತಿಯು ಅವರಲ್ಲಿ ಇರಬೇಕೆಂದೂ ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ.”—17:20, 26.

34 ಯೇಸು ತನ್ನ ಶಿಷ್ಯರನ್ನು ಈ ಲೋಕದಲ್ಲಿ ಬಿಟ್ಟುಹೋಗಲಿದ್ದನಾದರೂ, ಅವರಿಗೆ ‘ಸತ್ಯದ ಆತ್ಮ’ ಎಂಬ ಸಹಾಯಕನನ್ನು ಕೊಡಲಿದ್ದನು. ಅಲ್ಲದೆ, ಲೋಕದೊಂದಿಗೆ ಅವರ ಸಂಬಂಧದ ಬಗ್ಗೆ ಅವನು ಅವರಿಗೆ ಸಮಯೋಚಿತ ಸಲಹೆಯನ್ನು ಕೊಟ್ಟು, “ಬೆಳಕಿನ ಪುತ್ರರ” ಹಾಗೆ ಅವರು ಹೇಗೆ ಜಯಿಸಬಲ್ಲರೆಂದು ತೋರಿಸಿಕೊಟ್ಟನು. (14:16, 17; 3:19-21; 12:36, NIBV) ಯೇಸು ಹೇಳಿದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” ಇದಕ್ಕೆ ವೈದೃಶ್ಯವಾಗಿ, ಅವನು ಅಂಧಕಾರದ ಪುತ್ರರಿಗೆ ಹೇಳಿದ್ದು: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು . . . ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ.” ಆದುದರಿಂದ ನಾವು ಸತ್ಯದಲ್ಲಿ ಸದಾ ಸ್ಥಿರವಾಗಿ ನಿಲ್ಲಲು, ಹೌದು, ‘ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಲು’ ದೃಢನಿಶ್ಚಯ ಮಾಡಿ, “ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂಬ ಯೇಸುವಿನ ಮಾತುಗಳಿಂದ ಬಲವನ್ನು ಪಡೆಯೋಣ.—8:31, 32, 44; 4:23; 16:33.

35 ಇವೆಲ್ಲದ್ದಕ್ಕೆ, ದೇವರ ರಾಜ್ಯದೊಂದಿಗೂ ಸಂಬಂಧವಿದೆ. ವಿಚಾರಣೆಯ ಸಮಯದಲ್ಲಿ ಯೇಸು ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.” ಬಳಿಕ, ಪಿಲಾತನ ಪ್ರಶ್ನೆಗೆ ಉತ್ತರವಾಗಿ ಅವನು ಹೇಳಿದ್ದು: “ನನ್ನನ್ನು ಅರಸನೆಂದು ನೀನೇ ಹೇಳಿದ್ದೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಕೊಡುತ್ತಾರೆ.” (18:36, 37) ಇದಕ್ಕೆ ಕಿವಿಗೊಟ್ಟು, ಅರಸನೊಂದಿಗೆ “ದೇವರ ರಾಜ್ಯವನ್ನು” ಪ್ರವೇಶಿಸಲಿಕ್ಕಾಗಿ ‘ಹೊಸದಾಗಿ ಹುಟ್ಟುವವರು’ ಸಂತೋಷಿತರೇ ಸರಿ! ಈ ಕುರಿಪಾಲ-ರಾಜನ ಸ್ವರವನ್ನು ಕೇಳಿ ಜೀವವನ್ನು ಪಡೆಯುವ “ಬೇರೆ ಕುರಿಗಳು” ಸಹ ಸಂತೋಷಿತರು. ಯೋಹಾನನ ಸುವಾರ್ತಾ ಪುಸ್ತಕಕ್ಕಾಗಿ ಕೃತಜ್ಞರಾಗಿರಲು ನಿಶ್ಚಯವಾಗಿಯೂ ಕಾರಣವಿದೆ. ಏಕೆಂದರೆ “ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.”—3:3, 5; 10:16; 20:31.

[ಪಾದಟಿಪ್ಪಣಿಗಳು]

a ದಿ ಇಕ್ಲೀಸಿಆ್ಯಸ್ಟಿಕಲ್‌ ಹಿಸ್ಟರಿ, ಯುಸೀಬಿಯಸ್‌, V, VIII, 4.

b ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಸಂ. 1, ಪುಟ 323.

c ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌), ಸಂ. 2, ಪುಟಗಳು 57-8.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ