ಅವರು ತಮಗಾಗಿ ದೊಡ್ಡ ಹೆಸರನ್ನು ಮಾಡಿಕೊಳ್ಳಲಿಲ್ಲ
ಬೈಬಲು ಬಾಬೆಲಿನ ಕುಖ್ಯಾತ ಗೋಪುರದ ನಿರ್ಮಾಪಕರ ಹೆಸರನ್ನು ಕೊಡುವುದಿಲ್ಲ. ವೃತ್ತಾಂತವು ಹೇಳುವುದು: “ಅವರು . . . ಬನ್ನಿ, ಒಳ್ಳೊಳ್ಳೇ ಸುಟ್ಟ ಇಟ್ಟಿಗೆಗಳನ್ನು ಮಾಡೋಣ; ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವ ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಪಡೆಯೋಣ; ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರುವದಕ್ಕೆ ಆಸ್ಪದವಾಗುವದಿಲ್ಲ ಅಂದುಕೊಂಡರು.”—ಆದಿಕಾಂಡ 11:2, 4.
“ಅವರು” ಯಾರಾಗಿದ್ದರು? ಈ ಘಟನೆಯು ಜಲಪ್ರಳಯದ ಸುಮಾರು 200 ವರ್ಷಗಳ ಅನಂತರ ನಡೆಯಿತು. ಅಷ್ಟರಲ್ಲಿ ನೋಹನು, ಸುಮಾರು 800 ವರ್ಷ ಪ್ರಾಯದವನಾಗಿದ್ದು, ತನ್ನ ಸಾವಿರಾರು ವಂಶಜರ ಮಧ್ಯದಲ್ಲಿ ಜೀವಿಸುತ್ತಿದ್ದನು. ಅವರೆಲ್ಲರೂ ಒಂದೇ ಭಾಷೆಯನ್ನಾಡುತ್ತಾ, ಅವನು ಮತ್ತು ಅವನ ಪುತ್ರರು ಪ್ರಳಯಾನಂತರ ನೆಲೆಸಿದ್ದ ಅದೇ ಜಾಗದಲ್ಲಿ ಒಟ್ಟಿಗೆ ವಾಸಿಸಿದರು. (ಆದಿಕಾಂಡ 11:1) ಯಾವುದೋ ಒಂದು ಸಮಯದಲ್ಲಿ, ಹೀಗೆ ಬೆಳೆದು ದೊಡ್ಡದಾಗಿದ್ದ ಜನಸಂಖ್ಯೆಯ ಒಂದು ಭಾಗವು ಪೂರ್ವದಿಕ್ಕಿಗೆ ಸ್ಥಳಾಂತರಿಸಿ, “ಶಿನಾರ್ ದೇಶದಲ್ಲಿ ಬೈಲುಸೀಮೆ”ಯನ್ನು ಕಂಡುಕೊಂಡಿತು.—ಆದಿಕಾಂಡ 11:2.
ಸಂಪೂರ್ಣ ವೈಫಲ್ಯ
ಆ ಗುಂಪು ದೇವರ ವಿರುದ್ಧ ದಂಗೆಯೇಳಲು ನಿರ್ಣಯಿಸಿದ್ದು ಈ ಬೈಲುಸೀಮೆಯಲ್ಲಿಯೇ. ಅದು ಹೇಗೆ? ಯೆಹೋವ ದೇವರು ಪ್ರಥಮ ಮಾನವ ದಂಪತಿಗಳಿಗೆ ‘ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಳ್ಳಿರಿ’ ಎಂದು ಆಜ್ಞಾಪಿಸಿದಾಗ, ಆತನು ತನ್ನ ಉದ್ದೇಶವನ್ನು ವ್ಯಕ್ತಪಡಿಸಿದ್ದನು. (ಆದಿಕಾಂಡ 1:28) ಇದು ಪ್ರಳಯಾನಂತರ ನೋಹನಿಗೂ ಅವನ ಪುತ್ರರಿಗೂ ಪುನಃ ಹೇಳಲ್ಪಟ್ಟಿತು. ದೇವರು ಅವರಿಗೆ ಹೇಳಿದ್ದು: “ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯ ಮೇಲೆ ನಿಮಗೆ ಬಹುಸಂತಾನವಾಗಲಿ.” (ಆದಿಕಾಂಡ 9:7) ಯೆಹೋವನ ನಿರ್ದೇಶನಕ್ಕೆ ವಿರುದ್ಧವಾಗಿ, “ಭೂಮಿಯ ಮೇಲೆಲ್ಲಾ ಚದರ”ದಿರುವಂತೆ ಜನರು ಒಂದು ನಗರವನ್ನು ಕಟ್ಟಿದರು.
ಈ ಜನರು, ತಮಗಾಗಿ ಒಂದು “ದೊಡ್ಡ ಹೆಸರನ್ನು” ಮಾಡಿಕೊಳ್ಳುವ ಉದ್ದೇಶದಿಂದ ಒಂದು ಗೋಪುರವನ್ನು ಸಹ ಕಟ್ಟಲು ಪ್ರಾರಂಭಿಸಿದರು. ಆದರೆ ಅವರ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ, ಆ ಗೋಪುರದ ನಿರ್ಮಾಣವನ್ನು ಅವರು ಪೂರ್ಣಗೊಳಿಸಲಿಲ್ಲ. ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳದಂತೆ ಯೆಹೋವನು ಅವರ ಭಾಷೆಯನ್ನು ಗಲಿಬಿಲಿಗೊಳಿಸಿದನು ಎಂದು ಬೈಬಲ್ ದಾಖಲೆಯು ತೋರಿಸುತ್ತದೆ. ಆ ಪ್ರೇರಿತ ವೃತ್ತಾಂತವು ಹೇಳುವುದು: “ಹಾಗೆಯೇ ಮಾಡಿ ಯೆಹೋವನು ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದನು. ಅವರು ಆ ಪಟ್ಟಣ ಕಟ್ಟುವದನ್ನು ನಿಲ್ಲಿಸಿಬಿಟ್ಟರು.”—ಆದಿಕಾಂಡ 11:7, 8.
ಈ ಸಾಹಸದ ಸಂಪೂರ್ಣ ವಿಫಲತೆಯು, ಆ ನಿರ್ಮಾಪಕರ ಹೆಸರುಗಳು ಎಂದೂ “ದೊಡ್ಡ”ದು ಇಲ್ಲವೇ ಸುಪ್ರಸಿದ್ಧವಾಗಲಿಲ್ಲವೆಂಬ ನಿಜಾಂಶದಿಂದ ಎತ್ತಿತೋರಿಸಲ್ಪಟ್ಟಿದೆ. ವಾಸ್ತವವಾಗಿ, ಅವರ ಹೆಸರುಗಳು ಅಜ್ಞಾತವಾಗಿದ್ದು, ಮಾನವ ಇತಿಹಾಸದಿಂದ ಅಳಿಸಿಹಾಕಲ್ಪಟ್ಟಿವೆ. ಆದರೆ ನೋಹನ ಮರಿಮೊಮ್ಮಗನಾದ ನಿಮ್ರೋದನ ಕುರಿತೇನು? ದೇವರ ವಿರುದ್ಧ ಈ ದಂಗೆಯ ನಾಯಕನು ಅವನಾಗಿರಲಿಲ್ಲವೋ? ಅವನ ಹೆಸರು ಸುಪ್ರಸಿದ್ಧವಾಗಿಲ್ಲವೋ?
ನಿಮ್ರೋದ—ದುರಹಂಕಾರದ ದಂಗೆಕೋರ
ನಿಮ್ರೋದನು ಸಂಚುಕಾರನೆಂಬುದು ನಿಸ್ಸಂದೇಹ. ಆದಿಕಾಂಡ 10ನೇ ಅಧ್ಯಾಯವು, ಅವನನ್ನು “ಅತಿಸಾಹಸಿಯಾದ ಬೇಟೆಗಾರ” ಎಂದು ಪರಿಚಯಿಸುತ್ತದೆ. (ಆದಿಕಾಂಡ 10:9) “ಭೂಮಿಯ ಮೇಲೆ ಬಲಿಷ್ಠನಾಗಿ ಪರಿಣಮಿಸಿದುದರಲ್ಲಿ ಅವನು ಆರಂಭವನ್ನು ಮಾಡಿದನು” (NW) ಎಂದು ಸಹ ಶಾಸ್ತ್ರವಚನಗಳು ತಿಳಿಸುತ್ತವೆ. (ಆದಿಕಾಂಡ 10:8) ನಿಮ್ರೋದನು ಒಬ್ಬ ಯೋಧ, ಹಿಂಸಾತ್ಮಕ ಪ್ರವೃತ್ತಿಯ ವ್ಯಕ್ತಿಯಾಗಿದ್ದನು. ಅವನು ಪ್ರಳಯಾನಂತರ ತನ್ನನ್ನು ಒಬ್ಬ ರಾಜನನ್ನಾಗಿ ನೇಮಿಸಿಕೊಳ್ಳುತ್ತಾ, ಪ್ರಥಮ ಮಾನವ ರಾಜನಾದನು. ನಿಮ್ರೋದನು ಕಟ್ಟಡ ನಿರ್ಮಾಪಕನು ಸಹ ಆಗಿದ್ದನು. ಬಾಬೆಲನ್ನು ಸೇರಿಸಿ, ಎಂಟು ಪಟ್ಟಣಗಳ ಸ್ಥಾಪಕನಾಗಿರುವ ಖ್ಯಾತಿಯನ್ನು ಬೈಬಲು ಅವನಿಗೆ ನೀಡುತ್ತದೆ.—ಆದಿಕಾಂಡ 10:10-12.
ಆದಕಾರಣ, ದೇವರ ವಿರೋಧಿ, ಬಾಬೆಲಿನ ರಾಜ ಮತ್ತು ಪಟ್ಟಣಗಳ ನಿರ್ಮಾಪಕನಾದ ನಿಮ್ರೋದನು, ಬಾಬೆಲಿನ ಗೋಪುರವನ್ನು ಕಟ್ಟುವುದರಲ್ಲಿ ಖಂಡಿತವಾಗಿಯೂ ಪಾಲನ್ನು ಹೊಂದಿದ್ದನು. ಅವನು ತನಗಾಗಿ ಒಂದು ದೊಡ್ಡ ಹೆಸರನ್ನು ಮಾಡಿಕೊಳ್ಳಲಿಲ್ಲವೋ? ನಿಮ್ರೋದನ ಹೆಸರಿನ ಸಂಬಂಧದಲ್ಲಿ, ಪೌರಸ್ತ್ಯಪಂಡಿತರಾದ ಇ. ಎಫ್. ಸಿ. ರೋಸನ್ಮ್ಯೂಲರ್ ಬರೆದುದು: “[ಮರಡ್] ಎಂಬುದರಿಂದ ನಿಮ್ರೋದನಿಗೆ ಹೆಸರು ಕೊಡಲಾಯಿತು, ಇಬ್ರಿಯ ಅರ್ಥಕ್ಕನುಸಾರ ಇದು, ‘ಅವನು ದಂಗೆಯೆದ್ದನು,’ ‘ಅವನು ದೋಷಮಾಡಿದನು’ ಎಂದಾಗಿದೆ.” ಅನಂತರ ರೋಸನ್ಮ್ಯೂಲರ್ ವಿವರಿಸುವುದು: “ತಮ್ಮ ಪ್ರಮುಖ ವ್ಯಕ್ತಿಗಳಿಗೆ, ಅವರು ಸತ್ತ ನಂತರ ಕೊಡಲ್ಪಟ್ಟ ಹೆಸರುಗಳಿಂದ ಕರೆಯುವುದು ಅನೇಕ ವೇಳೆ ಪೌರಸ್ತ್ಯರ ವಾಡಿಕೆ. ಇದರಿಂದಾಗಿ ಅವರ ಹೆಸರುಗಳು ಮತ್ತು ಅವರು ಮಾಡಿದ ಕಾರ್ಯಗಳ ನಡುವೆ ಆಶ್ಚರ್ಯಕರವಾದ ಒಮ್ಮತವಿರುತ್ತದೆ.”
ನಿಮ್ರೋದ್ ಎಂಬ ಹೆಸರು ಜನ್ಮತಃ ಕೊಡಲ್ಪಟ್ಟದ್ದಲ್ಲ ಎಂಬುದು ಹಲವಾರು ವಿದ್ವಾಂಸರ ಅಭಿಪ್ರಾಯವಾಗಿದೆ. ಅದಕ್ಕೆ ಬದಲಾಗಿ, ಅವನ ದಂಗೆಕೋರ ಸ್ವಭಾವವು ಗೊತ್ತಾದ ಮೇಲೆ, ಅದಕ್ಕೆ ಸರಿಹೋಲುವ ಒಂದು ಹೆಸರು ಕೊಡಲ್ಪಟ್ಟಿರಬೇಕೆಂದು ಅವರು ನೆನಸುತ್ತಾರೆ. ಉದಾಹರಣೆಗೆ, ಸಿ. ಎಫ್. ಕೈಲ್ ಹೇಳುವುದು: “[ಮರಡ್]ನಿಂದ ತೆಗೆದ ನಿಮ್ರೋದ್, ‘ನಾವು ಪ್ರತಿಭಟಿಸುವೆವು’ ಎಂಬ ಹೆಸರೇ ದೇವರ ವಿರುದ್ಧವಾಗಿ ಹಿಂಸಾತ್ಮಕ ಪ್ರತಿಭಟನೆಯನ್ನು ಸೂಚಿಸುತ್ತದೆ. ಅದು ಎಷ್ಟೊಂದು ವಿಶಿಷ್ಟವಾದದ್ದೆಂದರೆ, ಅದು ಕೇವಲ ಅವನ ಸಮಕಾಲೀನರಿಂದ ಕೊಡಲ್ಪಟ್ಟಿರಸಾಧ್ಯವಿದೆ ಮತ್ತು ಹೀಗೆ ಒಂದು ವೈಯಕ್ತಿಕ ಹೆಸರಾಗಿ ಪರಿಣಮಿಸಿದೆ.” ಪಾದಟಿಪ್ಪಣಿಯೊಂದರಲ್ಲಿ, ಕೈಲ್ರವರು ಇತಿಹಾಸಕಾರ ಜೇಕಬ್ ಪೆರಿಸಾನ್ಯಸ್ರವರ ಬರವಣಿಗೆಯನ್ನು ಉಲ್ಲೇಖಿಸುತ್ತಾರೆ: “ಒಬ್ಬ ಉಗ್ರ ಬೇಟೆಗಾರನೂ, ಒಡನಾಡಿಗಳ ತಂಡದಿಂದ ಸುತ್ತುವರಿಯಲ್ಪಟ್ಟವನೂ ಆಗಿದ್ದು, ಈ ಮನುಷ್ಯ [ನಿಮ್ರೋದ್]ನು ಇತರರನ್ನು ದಂಗೆಯೇಳುವಂತೆ ಪ್ರೇರಿಸುವ ಸಲುವಾಗಿ, ಯಾವಾಗಲೂ ಅವನ ಬಾಯಿಂದ ‘ನಿಮ್ರೋದ್, ನಿಮ್ರೋದ್’ ಅಂದರೆ ‘ನಾವು ದಂಗೆಯೇಳೋಣ! ‘ನಾವು ದಂಗೆಯೇಳೋಣ!’ ಎಂಬ ಶಬ್ದವು ಹೊರಡುತ್ತಿತ್ತು ಎಂಬುದು ನನ್ನ ಅನಿಸಿಕೆ. ಆದಕಾರಣ, ತದನಂತರದ ಸಮಯಗಳಲ್ಲಿ, ಇತರರಿಂದ, ಮೋಶೆಯಿಂದಲೂ ಸಹ ಆ ಪದವು ಅವನ ಅಂಕಿತ ನಾಮವಾಗಿ ಬಳಸಲ್ಪಟ್ಟಿತು.”
ನಿಮ್ರೋದನು ತನಗಾಗಿ ಒಂದು ದೊಡ್ಡ ಹೆಸರನ್ನು ಮಾಡಿಕೊಳ್ಳಲಿಲ್ಲವೆಂಬುದು ಸ್ಪಷ್ಟ. ಅವನು ಹುಟ್ಟಿದಾಗ ಕೊಡಲ್ಪಟ್ಟ ಹೆಸರು ಅಜ್ಞಾತವೆಂಬುದು ಸುವ್ಯಕ್ತ. ಅದು ಅವನ ಮಾರ್ಗದರ್ಶನವನ್ನು ಅನುಸರಿಸಿದವರ ಹೆಸರುಗಳಂತೆ, ಇತಿಹಾಸದಿಂದ ಅಳಿಸಿಹಾಕಲ್ಪಟ್ಟಿದೆ. ತನ್ನ ಹೆಸರನ್ನು ಮುಂದುವರಿಸಿಕೊಂಡು ಹೋಗಲಿಕ್ಕಾಗಿ ಅವನಿಗೆ ಮಕ್ಕಳೂ ಇರಲಿಲ್ಲ. ಕೀರ್ತಿ ಮತ್ತು ಖ್ಯಾತಿಯನ್ನು ಪಡೆದುಕೊಳ್ಳುವ ಬದಲಿಗೆ ಅವನು ಕೆಟ್ಟಹೆಸರಿನಿಂದ ಹೊದಿಸಲ್ಪಟ್ಟಿದ್ದಾನೆ. ನಿಮ್ರೋದನೆಂಬ ಆ ಹೆಸರು, ಯೆಹೋವ ದೇವರಿಗೆ ಮೂರ್ಖತನದಿಂದ ಸವಾಲೆಸೆದ ಒಬ್ಬ ದುರಹಂಕಾರದ ದಂಗೆಕೋರ ಎಂಬ ನಿರಂತರವಾದ ಹೆಸರನ್ನು ಅವನಿಗೆ ಅಂಟಿಸಿದೆ.