ಅಧ್ಯಾಯ ಎರಡು
ಒಂದು ಯಶಸ್ವೀ ವಿವಾಹಕ್ಕಾಗಿ ತಯಾರಿಸುವುದು
1, 2. (ಎ) ಯೋಜನೆ ಮಾಡುವ ಪ್ರಾಮುಖ್ಯವನ್ನು ಯೇಸು ಹೇಗೆ ಒತ್ತಿಹೇಳಿದನು? (ಬಿ) ವಿಶೇಷವಾಗಿ ಯಾವ ಕ್ಷೇತ್ರದಲ್ಲಿ ಯೋಜನೆಯು ಮಹತ್ವದ್ದು?
ಒಂದು ಕಟ್ಟಡ ರಚನೆಗೆ ಜಾಗ್ರತೆಯ ತಯಾರಿಯು ಅವಶ್ಯ. ಅಸ್ತಿವಾರವನ್ನು ಹಾಕುವ ಮೊದಲು ಜಮೀನನ್ನು ಪಡೆಯಬೇಕು ಮತ್ತು ನಕಾಸೆಗಳ ವ್ಯವಸ್ಥೆಮಾಡಬೇಕು. ಆದರೂ, ಮಹತ್ವದ ಇನ್ನೇನೊ ವಿಷಯವಿದೆ. ಯೇಸು ಹೇಳಿದ್ದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ?”—ಲೂಕ 14:28.
2 ಕಟ್ಟಡವೊಂದರ ರಚನೆಯಲ್ಲಿ ಯಾವುದು ಸತ್ಯವೊ ಅದು ಒಂದು ಯಶಸ್ವೀ ವಿವಾಹದ ರಚನೆಗೂ ಅನ್ವಯಿಸುತ್ತದೆ. “ನನಗೆ ವಿವಾಹವಾಗಬೇಕು” ಎಂದು ಅನೇಕರು ಹೇಳುತ್ತಾರೆ. ಆದರೆ ಅದರ ವೆಚ್ಚದ ಕುರಿತು ನಿಂತು ಯೋಚಿಸುವವರು ಎಷ್ಟು ಜನ? ಬೈಬಲು ವಿವಾಹದ ಬಗೆಗೆ ಅನುಕೂಲಕರವಾಗಿ ಮಾತನಾಡುತ್ತದಾದರೂ, ವಿವಾಹವು ನೀಡುವ ಪಂಥಾಹ್ವಾನಗಳಿಗೂ ಅದು ಗಮನವನ್ನು ಸೆಳೆಯುತ್ತದೆ. (ಜ್ಞಾನೋಕ್ತಿ 18:22; 1 ಕೊರಿಂಥ 7:28) ಆದಕಾರಣ, ಯಾರು ವಿವಾಹದ ಕುರಿತು ಚಿಂತಿಸುತ್ತಾರೊ ಅವರು ವಿವಾಹಿತರಾಗುವುದರಲ್ಲಿರುವ ಆಶೀರ್ವಾದಗಳು ಮತ್ತು ತಗಲುವ ವೆಚ್ಚಗಳು, ಇವೆರಡರ ವಾಸ್ತವವಾದ ವೀಕ್ಷಣವುಳ್ಳವರಾಗಿರುವುದು ಅಗತ್ಯ.
3. ವಿವಾಹಕ್ಕಾಗಿ ಯೋಜಿಸುತ್ತಿರುವವರಿಗೆ ಬೈಬಲು ಒಂದು ಬೆಲೆಬಾಳುವ ಸಹಾಯಕವೇಕೆ, ಮತ್ತು ಯಾವ ಮೂರು ಪ್ರಶ್ನೆಗಳಿಗೆ ಉತ್ತರಕೊಡಲು ಅದು ನಮಗೆ ಸಹಾಯ ಮಾಡುವುದು?
3 ಬೈಬಲು ಸಹಾಯ ಮಾಡಬಲ್ಲದು. ಅದರ ಸಲಹೆಯು ವಿವಾಹದ ಮೂಲಕರ್ತನಾದ ಯೆಹೋವ ದೇವರಿಂದ ಪ್ರೇರಿಸಲ್ಪಟ್ಟಿದೆ. (ಎಫೆಸ 3:14, 15; 2 ತಿಮೊಥೆಯ 3:16) ಈ ಪುರಾತನದ್ದಾದರೂ ಅತಿ ಸದ್ಯೋಚಿತವಾದ ಮಾರ್ಗದರ್ಶಕ ಪುಸ್ತಕದಲ್ಲಿ ಕಂಡುಬರುವ ಮೂಲತತ್ವಗಳನ್ನು ಉಪಯೋಗಿಸುತ್ತಾ, ನಾವು (1) ಒಬ್ಬ ವ್ಯಕ್ತಿಯು ತಾನು ವಿವಾಹಕ್ಕೆ ಸಿದ್ಧನು ಅಥವಾ ಸಿದ್ಧಳು ಎಂದು ಹೇಗೆ ಹೇಳಸಾಧ್ಯವಿದೆ? (2) ಒಬ್ಬ ಸಂಗಾತಿಯಲ್ಲಿ ಯಾವುದಕ್ಕಾಗಿ ನೋಡಬೇಕು? ಮತ್ತು (3) ಪ್ರಣಯಯಾಚನೆಯನ್ನು ಗೌರವಾರ್ಹವಾಗಿ ಹೇಗೆ ಇಟ್ಟುಕೊಳ್ಳಸಾಧ್ಯವಿದೆ? ಎಂಬುದನ್ನು ನಾವು ನಿರ್ಧರಿಸೋಣ.
ನೀವು ವಿವಾಹಕ್ಕೆ ಸಿದ್ಧರಾಗಿದ್ದೀರೊ?
4. ಒಂದು ಯಶಸ್ವೀ ವಿವಾಹವನ್ನು ಕಾಪಾಡಿಕೊಳ್ಳುವುದರಲ್ಲಿ ಯಾವುದು ಒಂದು ಮಹತ್ವದ ಅಂಶವಾಗಿದೆ, ಮತ್ತು ಏಕೆ?
4 ಕಟ್ಟಡ ರಚನೆ ದುಬಾರಿಯಾಗಿರಬಹುದಾದರೂ ಅದರ ದೀರ್ಘಾವಧಿಯ ದುರಸ್ತನ್ನು ನೋಡಿಕೊಳ್ಳುವುದೂ ಹೆಚ್ಚು ಬೆಲೆಯದ್ದಾಗಿದೆ. ವಿವಾಹದ ವಿಷಯದಲ್ಲಿಯೂ ಇದು ಹಾಗೆಯೆ. ವಿವಾಹವಾಗುವುದು ಒಂದು ತಕ್ಕ ಮಟ್ಟಿಗಿನ ಪಂಥಾಹ್ವಾನವಾಗಿದೆಯೆಂದು ತೋರುತ್ತದೆ; ಆದರೂ ವೈವಾಹಿಕ ಸಂಬಂಧವನ್ನು ವರ್ಷ ವರ್ಷಕ್ಕೆ ಕಾಪಾಡಿಕೊಳ್ಳುವುದನ್ನು ಸಹ ಪರಿಗಣಿಸತಕ್ಕದ್ದು. ಇಂತಹ ಒಂದು ಸಂಬಂಧವನ್ನು ಕಾಪಾಡಿಕೊಳ್ಳುವುದರಲ್ಲಿ ಏನು ಸೇರಿದೆ? ಒಂದು ಮಹತ್ವದ ಅಂಶವು ಸಂಪೂರ್ಣ ಹೃದಯದ ಬದ್ಧತೆಯಾಗಿದೆ. ವಿವಾಹ ಸಂಬಂಧವನ್ನು ಇಲ್ಲಿ ಬೈಬಲು ಹೀಗೆ ವರ್ಣಿಸುತ್ತದೆ: “ಪುರುಷನು ತನ್ನ ತಂದೆ ಮತ್ತು ತನ್ನ ತಾಯಿಯನ್ನು ಬಿಟ್ಟು ತನ್ನ ಹೆಂಡತಿಗೆ ಅಂಟಿಕೊಳ್ಳತಕ್ಕದ್ದು ಮತ್ತು ಅವರು ಒಂದು ಶರೀರವಾಗಿರತಕ್ಕದ್ದು.” (ಆದಿಕಾಂಡ 2:24, NW) ಯೇಸು ಕ್ರಿಸ್ತನು, ಪುನರ್ವಿವಾಹದ ಸಂಭವನೀಯತೆಯಿಂದ, ವಿವಾಹ ವಿಚ್ಛೇದಕ್ಕಿರುವ ಶಾಸ್ತ್ರಾಧಾರಿತವಾದ ಏಕಮಾತ್ರ ಆಧಾರವನ್ನು ಕೊಟ್ಟನು—ಅದು “ಜಾರತ್ವ,” ಅಂದರೆ ವಿವಾಹದ ಹೊರಗಣ ನಿಷಿದ್ಧ ಲೈಂಗಿಕ ಸಂಬಂಧವಾಗಿದೆ. (ಮತ್ತಾಯ 19:9) ನೀವು ವಿವಾಹವಾಗಲು ಚಿಂತಿಸುತ್ತಿರುವುದಾದರೆ, ಈ ಶಾಸ್ತ್ರೀಯ ಮಟ್ಟಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಈ ಘನವಾದ ಬದ್ಧತೆಗೆ ನೀವು ಸಿದ್ಧರಾಗಿಲ್ಲದಿರುವಲ್ಲಿ, ನೀವು ವಿವಾಹವಾಗಲು ಸಿದ್ಧರಾಗಿಲ್ಲ.—ಧರ್ಮೋಪದೇಶಕಾಂಡ 23:21; ಪ್ರಸಂಗಿ 5:4, 5.
5. ವಿವಾಹದ ಘನವಾದ ಬದ್ಧತೆಯು ಕೆಲವರನ್ನು ಭಯಗೊಳಿಸುತ್ತದಾದರೂ, ವಿವಾಹವಾಗಲು ಉದ್ದೇಶಿಸುವವರಿಂದ ಅದು ಏಕೆ ತೀರ ಬೆಲೆಯುಳ್ಳದ್ದೆಂದು ಎಣಿಸಲ್ಪಡಬೇಕು?
5 ಈ ಘನವಾದ ಬದ್ಧತೆಯ ವಿಚಾರವು ಅನೇಕರನ್ನು ಭಯಗೊಳಿಸುತ್ತದೆ. ಒಬ್ಬ ಯುವಕನು ಒಪ್ಪಿಕೊಂಡದ್ದು: “ನಾವಿಬ್ಬರು ಜೀವನ ಪರ್ಯಂತ ಅಂಟಿಕೊಂಡಿರಬೇಕೆಂಬ ಅರಿವು, ಮೂಲೆಗೆ ದಬ್ಬಿ, ಸುತ್ತುಗಟ್ಟಿ, ಪೂರ್ತಿ ಬಂಧಿಸಿದ ಅನಿಸಿಕೆಯನ್ನು ನನಗೆ ಕೊಟ್ಟಿತು.” ಆದರೆ ನೀವು ವಿವಾಹವಾಗಲು ಬಯಸುವ ವ್ಯಕ್ತಿಯನ್ನು ನೀವು ನಿಜವಾಗಿಯೂ ಪ್ರೀತಿಸುವಲ್ಲಿ, ಬದ್ಧತೆಯು ಒಂದು ಹೊರೆಯಾಗಿ ತೋರದು. ಬದಲಾಗಿ, ಅದೊಂದು ಭದ್ರತೆಯ ಮೂಲವಾಗಿ ವೀಕ್ಷಿಸಲ್ಪಡುವುದು. ವಿವಾಹದಲ್ಲಿ ಸೂಚಿತವಾದ ಬದ್ಧತೆಯ ಪ್ರಜ್ಞೆಯು ದಂಪತಿಗಳು ಸುಸಮಯಗಳಲ್ಲಿ ಮತ್ತು ಕೆಟ್ಟ ಸಮಯಗಳಲ್ಲಿ ಕೂಡಿ ಜೀವಿಸಬಯಸುವಂತೆ ಮತ್ತು ಏನೇ ಆಗಲಿ, ಪರಸ್ಪರ ಬೆಂಬಲಿಸಿಕೊಳ್ಳುವಂತೆ ಮಾಡುವುದು. ನಿಜ ಪ್ರೀತಿಯು, “ಎಲ್ಲವನ್ನೂ ಸಹಿಸಿಕೊಳ್ಳುತ್ತದೆ,” ಮತ್ತು “ಎಲ್ಲವನ್ನೂ ತಾಳಿಕೊಳ್ಳುತ್ತದೆ,” ಎಂದು ಕ್ರೈಸ್ತ ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 13:4, 7, NW) “ವಿವಾಹದ ಬದ್ಧತೆಯು ನನಗೆ ಹೆಚ್ಚು ಸುರಕ್ಷಿತಳಾಗಿರುವ ಅನಿಸಿಕೆಯನ್ನು ಕೊಡುತ್ತದೆ,” ಎನ್ನುತ್ತಾಳೆ ಒಬ್ಬ ಸ್ತ್ರೀ. “ನಾವು ಒಬ್ಬರಿಗೊಬ್ಬರು ಅಂಟಿಕೊಳ್ಳಲು ಸಂಕಲ್ಪಿಸಿದ್ದೇವೆಂದು ನಮ್ಮೊಳಗೂ ಲೋಕಕ್ಕೂ ಒಪ್ಪಿಕೊಂಡದ್ದರಲ್ಲಿರುವ ನೆಮ್ಮದಿಯನ್ನು ನಾನು ಪ್ರೀತಿಸುತ್ತೇನೆ.”—ಪ್ರಸಂಗಿ 4:9-12.
6. ಚಿಕ್ಕ ಪ್ರಾಯದಲ್ಲಿ ವಿವಾಹಕ್ಕೆ ಮುನ್ನುಗ್ಗುವುದು ಅತ್ಯುತ್ತಮವಲ್ಲವೇಕೆ?
6 ಇಂತಹ ಬದ್ಧತೆಗನುಸಾರ ಜೀವಿಸುವುದು ಪಕ್ವತೆಯನ್ನು ಕೇಳಿಕೊಳ್ಳುತ್ತದೆ. ಆದಕಾರಣ, “ಯೌವನದ ಉಚ್ಫ್ರಾಯ ಸ್ಥಿತಿಯು ಗತಿಸುವ” ತನಕ, ಲೈಂಗಿಕ ಅನಿಸಿಕೆಗಳು ಬಲವಾಗಿ ಹರಿದು ಒಬ್ಬನ ತೀರ್ಮಾನವನ್ನು ಅಪಾರ್ಥ ಮಾಡಿಕೊಳ್ಳಸಾಧ್ಯವಿರುವ ಅವಧಿಯು ಮುಗಿಯುವ ತನಕ ಕ್ರೈಸ್ತರು ವಿವಾಹವಾಗದಿರುವುದು ಒಳಿತೆಂದು ಪೌಲನು ಸಲಹೆ ನೀಡುತ್ತಾನೆ. (1 ಕೊರಿಂಥ 7:36, NW) ಯುವ ಜನರು ಬೆಳೆದಂತೆ ಶೀಘ್ರವಾಗಿ ಬದಲಾವಣೆ ಹೊಂದುತ್ತಾರೆ. ತೀರ ಚಿಕ್ಕ ಪ್ರಾಯದಲ್ಲಿ ವಿವಾಹವಾಗುವ ಅನೇಕರು, ಕೆಲವೇ ವರುಷಗಳಲ್ಲಿ ತಮ್ಮ ಹಾಗೂ ತಮ್ಮ ಸಂಗಾತಿಯ ಆವಶ್ಯಕತೆಗಳೂ ಬಯಕೆಗಳೂ ಬದಲಾಗಿರುವುದನ್ನು ಕಂಡುಕೊಳ್ಳುತ್ತಾರೆ. ವಿವಾಹವಾಗುವ ಹದಿಹರೆಯದವರು ಸ್ವಲ್ಪ ಹೆಚ್ಚುಕಾಲ ಕಾಯುವವರಿಗಿಂತ ಹೆಚ್ಚು ಅಸಂತುಷ್ಟರಾಗಿರುವುದೂ ವಿವಾಹ ವಿಚ್ಫೇದವನ್ನು ಹುಡುಕುವುದೂ ಎಷ್ಟೋ ಹೆಚ್ಚು ಸಂಭವನೀಯವೆಂದು ಸಂಖ್ಯಾಸಂಗ್ರಹಣಗಳು ತೋರಿಸುತ್ತವೆ. ಆದಕಾರಣ ವಿವಾಹದೊಳಗೆ ಮುನ್ನುಗ್ಗಬೇಡಿರಿ. ಒಬ್ಬ ಯುವ, ಒಂಟಿಗ ಪ್ರಾಪ್ತ ವಯಸ್ಕರಾಗಿ ಕಳೆಯುವ ಕೆಲವು ವರ್ಷಗಳು, ನಿಮ್ಮನ್ನು ಹೆಚ್ಚು ಪಕ್ವತೆಯುಳ್ಳವರೂ ಯೋಗ್ಯ ಸಂಗಾತಿಯಾಗಲು ಹೆಚ್ಚು ಅರ್ಹತೆಯುಳ್ಳವರೂ ಆಗಿರುವಂತೆ ಮಾಡುವ ಅಮೂಲ್ಯ ಅನುಭವವನ್ನು ನಿಮಗೆ ಕೊಡಬಲ್ಲದು. ವಿವಾಹವಾಗಲಿಕ್ಕಾಗಿ ಕಾಯುವುದು, ನೀವು ಸ್ವತಃ ನಿಮ್ಮ ಕುರಿತು ಹೆಚ್ಚು ಉತ್ತಮವಾಗಿ—ನಿಮ್ಮ ವಿವಾಹದಲ್ಲಿ ಯಶಸ್ವಿಯಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕಾದರೆ ಒಂದು ಆವಶ್ಯಕ ಸಂಗತಿ—ಅರ್ಥಮಾಡಿಕೊಳ್ಳಲು ಸಹ ಸಹಾಯ ಮಾಡಬಲ್ಲದು.
ಮೊದಲಾಗಿ ಸ್ವತಃ ನಿಮ್ಮ ಕುರಿತು ತಿಳಿದುಕೊಳ್ಳಿರಿ
7. ವಿವಾಹವಾಗಲು ಯೋಜಿಸುತ್ತಿರುವವರು ತಮ್ಮನ್ನು ಏಕೆ ಪ್ರಥಮವಾಗಿ ಪರೀಕ್ಷಿಸಿಕೊಳ್ಳಬೇಕು?
7 ಒಬ್ಬ ಸಂಗಾತಿಯಲ್ಲಿ ನೀವು ಬಯಸುವ ಗುಣಗಳನ್ನು ಪಟ್ಟಿಮಾಡುವುದು ಸುಲಭವೆಂದು ನೀವು ಕಂಡುಕೊಳ್ಳುತ್ತೀರೊ? ಹೆಚ್ಚಿನವರು ಸುಲಭವೆಂದು ಕಂಡುಕೊಳ್ಳುತ್ತಾರೆ. ಆದರೂ ನಿಮ್ಮ ಸ್ವಂತ ಗುಣಗಳ ಕುರಿತೇನು? ಒಂದು ಯಶಸ್ವೀ ವಿವಾಹಕ್ಕೆ ನೀಡಲು ನಿಮಗೆ ನೆರವಾಗುವ ಯಾವ ಗುಣಗಳು ನಿಮ್ಮಲ್ಲಿವೆ? ನೀವು ಯಾವ ವಿಧದ ಗಂಡ ಅಥವಾ ಹೆಂಡತಿಯಾಗಿರುವಿರಿ? ಉದಾಹರಣೆಗಾಗಿ, ನೀವು ನಿಮ್ಮ ದೋಷಗಳನ್ನು ಸುಲಭವಾಗಿ ಒಪ್ಪಿಕೊಂಡು ಬುದ್ಧಿವಾದವನ್ನು ಅಂಗೀಕರಿಸುತ್ತೀರೊ ಅಥವಾ ತಿದ್ದಲ್ಪಡುವ ಸಮಯದಲ್ಲಿ ನೀವು ಸದಾ ಆತ್ಮರಕ್ಷಣೆ ಮಾಡಿಕೊಳ್ಳುವವರಾಗಿದ್ದೀರೊ? ನೀವು ಸಾಮಾನ್ಯವಾಗಿ ಹರ್ಷಚಿತ್ತರೂ ಆಶಾವಾದಿಗಳೂ ಆಗಿದ್ದೀರೊ ಅಥವಾ ಖಿನ್ನರಾಗಿದ್ದು, ಅಡಿಗಡಿಗೆ ಗೊಣಗುತ್ತಿರುತ್ತೀರೊ? (ಜ್ಞಾನೋಕ್ತಿ 8:33; 15:15) ವಿವಾಹವು ನಿಮ್ಮ ವ್ಯಕ್ತಿತ್ವವನ್ನು ಮಾರ್ಪಡಿಸದು ಎಂಬುದು ನೆನಪಿರಲಿ. ನೀವು ಅವಿವಾಹಿತರಾಗಿರುವಾಗ ಹೆಮ್ಮೆಯುಳ್ಳವರೂ ವಿಪರೀತ ಸೂಕ್ಷ್ಮಸಂವೇದಿಗಳೂ ಅಥವಾ ವಿಪರೀತ ನಿರಾಶಾವಾದಿಗಳೂ ಆಗಿರುವಲ್ಲಿ, ವಿವಾಹಿತರಾದಾಗಲೂ ಹಾಗೆಯೇ ಇರುವಿರಿ. ಇತರರು ನಮ್ಮನ್ನು ಹೇಗೆ ವೀಕ್ಷಿಸುತ್ತಾರೊ ಹಾಗೆಯೇ ನಾವು ನಮ್ಮನ್ನು ವೀಕ್ಷಿಸಿಕೊಳ್ಳುವುದು ಕಷ್ಟಕರವಾಗಿರುವುದರಿಂದ, ಮುಚ್ಚುಮರೆಯಿಲ್ಲದ ಹೇಳಿಕೆಗಳು ಮತ್ತು ಸೂಚನೆಗಳಿಗಾಗಿ ಹೆತ್ತವರಲ್ಲೊಬ್ಬರನ್ನು ಅಥವಾ ಭರವಸಾರ್ಹ ಮಿತ್ರನೊಬ್ಬನನ್ನು ಏಕೆ ಕೇಳಬಾರದು? ಮಾಡಸಾಧ್ಯವಿರುವ ಬದಲಾವಣೆಗಳ ಕುರಿತು ನೀವು ಅರಿಯುವಲ್ಲಿ, ವಿವಾಹವಾಗಲು ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೊದಲು ಇವುಗಳ ಕುರಿತು ಕಾರ್ಯನಡಿಸಿರಿ.
ಇನ್ನೂ ಅವಿವಾಹಿತರಾಗಿರುವಾಗಲೆ, ವಿವಾಹದಲ್ಲಿ ನಿಮಗೆ ಒಳ್ಳೆಯದಾಗಿ ಉಪಯುಕ್ತವಾಗುವ ಗುಣಗಳನ್ನು, ಅಭ್ಯಾಸಗಳನ್ನು ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಿರಿ
8-10. ಒಬ್ಬ ವ್ಯಕ್ತಿಯು ವಿವಾಹಕ್ಕಾಗಿ ತಯಾರಿಸುವರೆ ಸಹಾಯ ಮಾಡುವ ಯಾವ ಸಲಹೆಯನ್ನು ಬೈಬಲು ಕೊಡುತ್ತದೆ?
8 ದೇವರ ಪವಿತ್ರಾತ್ಮವು ನಮ್ಮಲ್ಲಿ, “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ”ಗಳಂತಹ ಗುಣಗಳನ್ನು ಉತ್ಪಾದಿಸುತ್ತಾ ಕಾರ್ಯನಡಿಸುವಂತೆ ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. “[ನಮ್ಮ] ಮನಸ್ಸನ್ನು ಕ್ರಿಯಾಶಕ್ತವಾಗುವಂತೆ ಮಾಡುವ ಶಕ್ತಿಯಲ್ಲಿ . . . ಹೊಸಬರಾಗಿ ಮಾಡಲ್ಪಟ್ಟು, ನಿಜವಾದ ನೀತಿ ಮತ್ತು ನಿಷ್ಠೆಯಲ್ಲಿ ಸೃಷ್ಟಿಸಲ್ಪಟ್ಟ ನೂತನ ವ್ಯಕ್ತಿತ್ವವನ್ನು ಧರಿಸು”ವಂತೆಯೂ ಅದು ಹೇಳುತ್ತದೆ. (ಗಲಾತ್ಯ 5:22, 23; ಎಫೆಸ 4:23, 24, NW) ನೀವಿನ್ನೂ ಅವಿವಾಹಿತರಾಗಿರುವಾಗ ಈ ಸಲಹೆಯನ್ನು ಅನ್ವಯಿಸಿಕೊಳ್ಳುವುದು, ಬ್ಯಾಂಕ್‌ನಲ್ಲಿ ಹಣವನ್ನು, ಭವಿಷ್ಯತ್ತಿನಲ್ಲಿ—ನೀವು ವಿವಾಹಮಾಡಿಕೊಳ್ಳುವಾಗ—ಅತಿ ಬೆಲೆಯುಳ್ಳದ್ದಾಗಿ ಪರಿಣಮಿಸುವ ಠೇವಣಾತಿಯನ್ನು ಇಟ್ಟಹಾಗಿರುವುದು.
9 ಉದಾಹರಣೆಗಾಗಿ, ನೀವೊಬ್ಬ ಮಹಿಳೆಯಾಗಿರುವಲ್ಲಿ, ನಿಮ್ಮ ಶಾರೀರಿಕ ತೋರಿಕೆಗಿಂತ “ಹೃದಯದ ನಿಗೂಢ ಸ್ವರೂಪ” (NW)ಕ್ಕೆ ಹೆಚ್ಚು ಗಮನವನ್ನು ಕೊಡಲು ಕಲಿಯಿರಿ. (1 ಪೇತ್ರ 3:3, 4) ಅಭಿಮಾನ ಮಿತಿ ಮತ್ತು ಸ್ವಸ್ಥ ಮನಸ್ಸು ನಿಮಗೆ ವಿವೇಕವನ್ನು, ನಿಜವಾದ “ಸುಂದರ ಕಿರೀಟ”ವನ್ನು ಪಡೆಯುವಂತೆ ಸಹಾಯ ಮಾಡುವುದು. (ಜ್ಞಾನೋಕ್ತಿ 4:9; 31:10, 30; 1 ತಿಮೊಥೆಯ 2:9, 10) ನೀವು ಒಬ್ಬ ಪುರುಷರಾಗಿರುವಲ್ಲಿ, ಸ್ತ್ರೀಯರನ್ನು ದಯಾಭಾವದಿಂದ ಮತ್ತು ಗೌರವದಿಂದ ಉಪಚರಿಸಲು ಕಲಿಯಿರಿ. (1 ತಿಮೊಥೆಯ 5:1, 2) ನಿರ್ಣಯಗಳನ್ನು ಮಾಡಲು ಮತ್ತು ಜವಾಬ್ದಾರಿ ವಹಿಸಿಕೊಳ್ಳಲು ಕಲಿಯುತ್ತಿರುವಾಗ, ಅಭಿಮಾನ ಮಿತಿಯುಳ್ಳವರೂ ನಮ್ರರೂ ಆಗಿರಲು ಸಹ ಕಲಿಯಿರಿ. ಅಹಂಭಾವದ ಮನೋಭಾವವು, ಒಂದು ವಿವಾಹದಲ್ಲಿ ತೊಂದರೆಗೆ ನಡಿಸುವುದು.—ಜ್ಞಾನೋಕ್ತಿ 29:23; ಮೀಕ 6:8; ಎಫೆಸ 5:28, 29.
10 ಈ ಕ್ಷೇತ್ರಗಳಲ್ಲಿ ಮನಸ್ಸನ್ನು ಬದಲಾಯಿಸುವುದು ಸುಲಭವಲ್ಲದಿದ್ದರೂ, ಇದು ಕ್ರೈಸ್ತರೆಲ್ಲರೂ ಕಾರ್ಯನಡಿಸಬೇಕಾದ ಒಂದು ಸಂಗತಿಯಾಗಿದೆ. ಮತ್ತು ಅದು ನೀವು ಹೆಚ್ಚು ಉತ್ತಮವಾದ ವಿವಾಹ ಸಹಭಾಗಿಯಾಗುವಂತೆ ಸಹಾಯ ಮಾಡುವುದು.
ಒಬ್ಬ ಸಂಗಾತಿಯಲ್ಲಿ ಅವಲೋಕಿಸಬೇಕಾದ ವಿಷಯಗಳು
11, 12. ಇಬ್ಬರು ಜನರು ತಾವು ಸಹವರ್ತನ ಸಾಧ್ಯರೊ ಅಲ್ಲವೊ ಎಂದು ಹೇಗೆ ಕಂಡುಹಿಡಿಯಬಹುದು?
11 ನೀವು ವಾಸಿಸುವಲ್ಲಿ ಒಬ್ಬ ವ್ಯಕ್ತಿಗೆ ಅವನ ಅಥವಾ ಅವಳ ಸ್ವಂತ ವಿವಾಹ ಸಂಗಾತಿಯನ್ನು ಆರಿಸುವ ಪದ್ಧತಿಯಿದೆಯೆ? ಹಾಗಿರುವಲ್ಲಿ, ನೀವು ವಿರುದ್ಧ ಲಿಂಗದ ಯಾರಾದರೊಬ್ಬರನ್ನು ಆಕರ್ಷಕರೆಂದು ಕಂಡುಕೊಳ್ಳುವಲ್ಲಿ ಹೇಗೆ ಮುಂದುವರಿಯಬೇಕು? ‘ವಿವಾಹವು ನಿಜವಾಗಿಯೂ ನನ್ನ ಇಂಗಿತವಾಗಿದೆಯೆ?’ ಎಂದು ಪ್ರಥಮವಾಗಿ ನಿಮ್ಮನ್ನೇ ಕೇಳಿಕೊಳ್ಳಿರಿ. ಸುಳ್ಳು ನಿರೀಕ್ಷಣೆಗಳನ್ನು ಎಬ್ಬಿಸುತ್ತಾ ಇನ್ನೊಬ್ಬ ವ್ಯಕ್ತಿಯ ಭಾವಾವೇಶಗಳೊಂದಿಗೆ ಆಟವಾಡುವುದು ನಿಷ್ಕರುಣೆಯಾಗಿದೆ. (ಜ್ಞಾನೋಕ್ತಿ 13:12) ಬಳಿಕ, ‘ನಾನು ವಿವಾಹ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದೇನೊ?’ ಎಂಬುದಾಗಿ ನಿಮ್ಮನ್ನೇ ಕೇಳಿಕೊಳ್ಳಿರಿ. ಇವೆರಡು ಪ್ರಶ್ನೆಗಳಿಗೂ ಉತ್ತರವು ಸಕಾರಾತ್ಮಕವಾಗಿರುವಲ್ಲಿ, ನೀವು ಇಡಲಿರುವ ಮುಂದಿನ ಹೆಜ್ಜೆಗಳು ಸ್ಥಳಿಕ ಪದ್ಧತಿಗಳ ಮೇಲೆ ಹೊಂದಿಕೊಂಡು ವೈವಿಧ್ಯವುಳ್ಳದ್ದಾಗಿರುವುವು. ಕೆಲವು ದೇಶಗಳಲ್ಲಿ, ಸ್ವಲ್ಪ ಸಮಯ ಗಮನಿಸಿದ ಬಳಿಕ, ನೀವು ಆ ವ್ಯಕ್ತಿಯನ್ನು ಸಮೀಪಿಸಿ ಹೆಚ್ಚು ಪರಿಚಯ ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಬಹುದು. ಪ್ರತಿಕ್ರಿಯೆಯು ನಕಾರಾತ್ಮಕವಾಗಿರುವಲ್ಲಿ, ಆಕ್ಷೇಪಣೀಯವಾಗುವ ವರೆಗೂ ಪಟ್ಟುಹಿಡಿಯಬೇಡಿ. ಆ ಇನ್ನೊಬ್ಬ ವ್ಯಕ್ತಿಗೂ ಆ ವಿಷಯದಲ್ಲಿ ನಿರ್ಣಯಮಾಡುವ ಹಕ್ಕಿದೆಯೆಂಬುದು ನೆನಪಿರಲಿ. ಆದರೆ, ಪ್ರತಿಕ್ರಿಯೆಯು ಸಕಾರಾತ್ಮಕವಾಗಿರುವುದಾದರೆ, ಹಿತಕರವಾದ ಚಟುವಟಿಕೆಗಳಲ್ಲಿ ಸಮಯವನ್ನು ಕೂಡಿ ಕಳೆಯುವಂತೆ ನೀವು ಏರ್ಪಡಿಸಬಹುದು. ಇದು, ಈ ವ್ಯಕ್ತಿಯೊಂದಿಗೆ ವಿವಾಹವು ವಿವೇಕಪ್ರದವೊ ಎಂದು ನೋಡುವ ಸಂದರ್ಭವನ್ನು ಕೊಡುವುದು.a ಈ ಹಂತದಲ್ಲಿ ನೀವು ಯಾವುದಕ್ಕಾಗಿ ನೋಡಬೇಕು?
12 ಆ ಪ್ರಶ್ನೆಗೆ ಉತ್ತರ ಕೊಡಲು, ಎರಡು ಸಂಗೀತದ ಉಪಕರಣಗಳನ್ನು—ಬಹುಶಃ ಒಂದು ಪಿಯಾನೊ ಮತ್ತು ಒಂದು ಗಿಟಾರ್—ಊಹಿಸಿಕೊಳ್ಳಿರಿ. ಅವನ್ನು ಸರಿಯಾಗಿ ಶ್ರುತಿಮಾಡಿರುವಲ್ಲಿ ಅವುಗಳಲ್ಲಿ ಯಾವುದೂ ಸೊಗಸಾದ ತನಿ ಸಂಗೀತವನ್ನು ಉಂಟುಮಾಡಬಲ್ಲದು. ಆದರೂ, ಈ ಉಪಕರಣಗಳನ್ನು ಜೊತೆಯಾಗಿ ನುಡಿಸುವುದಾದರೆ ಏನು ಸಂಭವಿಸುತ್ತದೆ? ಈಗ ಅವು ಒಂದರೊಂದಿಗೊಂದು ಶ್ರುತಿಗೂಡಬೇಕು. ನಿಮ್ಮ ಮತ್ತು ನಿಮ್ಮ ಭಾವೀ ಸಂಗಾತಿಯ ಸಂಬಂಧದಲ್ಲಿಯೂ ಹಾಗೆಯೇ. ನಿಮ್ಮಲ್ಲಿ ಒಬ್ಬೊಬ್ಬರೂ ನಿಮ್ಮ ನಿಮ್ಮ ವ್ಯಕ್ತಿತ್ವ ಲಕ್ಷಣಗಳನ್ನು “ಶ್ರುತಿಗೂಡಿಸಲು” ಶ್ರಮಿಸಿರಬಹುದು. ಆದರೆ ಈಗ ಇರುವ ಪ್ರಶ್ನೆಯು ಇದು: ನೀವು ಪರಸ್ಪರವಾಗಿ ಶ್ರುತಿಗೂಡಿದವರಾಗಿದ್ದೀರೊ? ಬೇರೆ ಮಾತುಗಳಲ್ಲಿ, ನೀವು ಸಹವರ್ತಿಸುವವರಾಗಿದ್ದೀರೊ?
13. ನಿಮ್ಮ ನಂಬಿಕೆಯಲ್ಲಿ ಭಾಗಿಯಾಗಿಲ್ಲದ ಯಾವನೊಂದಿಗಾದರೂ ಪ್ರಣಯಯಾಚನೆಯಲ್ಲಿ ತೊಡಗುವುದು ತೀರ ಅವಿವೇಕವೇಕೆ?
13 ನಿಮ್ಮಿಬ್ಬರಿಗೂ ಸಾಮಾನ್ಯವಾದ ನಂಬಿಕೆಗಳೂ ಮೂಲತತ್ವಗಳೂ ಇರುವುದು ಪ್ರಾಮುಖ್ಯ. ಅಪೊಸ್ತಲ ಪೌಲನು ಬರೆದುದು: “ಅವಿಶ್ವಾಸಿಗಳೊಂದಿಗೆ ಅಸಮತೆಯ ನೊಗ ಹೂಡುವವರಾಗಬೇಡಿರಿ.” (2 ಕೊರಿಂಥ 6:14, NW; 1 ಕೊರಿಂಥ 7:39) ದೇವರಲ್ಲಿ ನಿಮಗಿರುವ ನಂಬಿಕೆಯಲ್ಲಿ ಭಾಗಿಯಾಗದವನೊಂದಿಗೆ ಮಾಡಿಕೊಳ್ಳುವ ವಿವಾಹವು ತೀವ್ರ ಅಸಾಮರಸ್ಯವಿರುವುದನ್ನು ಹೆಚ್ಚು ಸಂಭವನೀಯವಾಗಿ ಮಾಡುತ್ತದೆ. ಇನ್ನೊಂದು ಕಡೆಯಲ್ಲಿ, ಯೆಹೋವ ದೇವರಿಗೆ ಪರಸ್ಪರವಾಗಿರುವ ಭಕ್ತಿಯು ಐಕ್ಯಕ್ಕಿರುವ ಅತಿ ಬಲವಾದ ಆಧಾರವಾಗಿದೆ. ನೀವು ಸಂತೋಷದಿಂದಿರುವಂತೆ ಮತ್ತು ನೀವು ವಿವಾಹವಾಗುವ ವ್ಯಕ್ತಿಯೊಂದಿಗೆ ಸಾಧ್ಯವಿರುವಷ್ಟು ಅತ್ಯಾಪ್ತ ಬಂಧವನ್ನು ಅನುಭವಿಸಬೇಕೆಂದು ಯೆಹೋವನು ಬಯಸುತ್ತಾನೆ. ನೀವು ಆತನಿಗೆ ಮತ್ತು ಪರಸ್ಪರವಾಗಿ, ಮೂರುಹುರಿಯ ಪ್ರೀತಿಯ ಬಂಧದಿಂದ ಬಂಧಿಸಲ್ಪಡುವಂತೆ ಆತನು ಬಯಸುತ್ತಾನೆ.—ಪ್ರಸಂಗಿ 4:12.
14, 15. ಒಂದೇ ನಂಬಿಕೆಯಿರುವುದು ವಿವಾಹವೊಂದರಲ್ಲಿನ ಐಕ್ಯದ ಏಕಮಾತ್ರ ಅಂಶವೊ? ವಿವರಿಸಿ.
14 ದೇವರನ್ನು ಜೊತೆಗೂಡಿ ಆರಾಧಿಸುವುದು ಐಕ್ಯದ ಅತಿ ಪ್ರಾಮುಖ್ಯ ರೂಪವಾಗಿರುವಾಗ, ಅದರಲ್ಲಿ ಹೆಚ್ಚಿನದ್ದು ಒಳಗೂಡಿದೆ. ಒಬ್ಬರಿಗೊಬ್ಬರು ಶ್ರುತಿಗೂಡಿರಲು, ನಿಮಗೂ ನಿಮ್ಮ ಭಾವೀ ಸಂಗಾತಿಗೂ ಏಕರೀತಿಯ ಗುರಿಗಳಿರಬೇಕು. ನಿಮ್ಮ ಗುರಿಗಳೇನು? ಉದಾಹರಣೆಗಾಗಿ, ಮಕ್ಕಳನ್ನು ಪಡೆಯುವುದರ ಕುರಿತು ನಿಮಗಿಬ್ಬರಿಗೂ ಹೇಗನಿಸುತ್ತದೆ? ನಿಮ್ಮ ಜೀವನದಲ್ಲಿ ಯಾವ ವಿಷಯಗಳಿಗೆ ಪ್ರಥಮ ಸ್ಥಾನವಿದೆ?b (ಮತ್ತಾಯ 6:33) ನಿಜವಾಗಿಯೂ ಯಶಸ್ವಿಯಾಗಿರುವ ಒಂದು ವಿವಾಹದಲ್ಲಿ, ದಂಪತಿಗಳು ಒಳ್ಳೆಯ ಸ್ನೇಹಿತರಾಗಿದ್ದು ಒಬ್ಬರು ಇನ್ನೊಬ್ಬರ ಒಡನಾಟದಲ್ಲಿ ಆನಂದಿಸುತ್ತಾರೆ. (ಜ್ಞಾನೋಕ್ತಿ 17:17) ಇದಕ್ಕೆ, ಅವರಲ್ಲಿ ಸಾಮಾನ್ಯ ಅಭಿರುಚಿಗಳಿರುವುದು ಅಗತ್ಯ. ಹಾಗಿಲ್ಲದಿರುವಲ್ಲಿ, ವಿವಾಹವನ್ನು ಬಿಡಿರಿ, ಒಂದು ಆತ್ಮೀಯ ಮಿತ್ರತ್ವವನ್ನು ಪೋಷಿಸುವುದೂ ಕಷ್ಟಕರ. ಆದರೂ, ನಿಮ್ಮ ಭಾವೀ ಸಹಭಾಗಿಯು ನಾಡು ಸುತ್ತಿ (ಹೈಕಿಂಗ್)ನಂತಹ ಒಂದು ನಿರ್ದಿಷ್ಟ ಚಟುವಟಿಕೆಯಲ್ಲಿ ಆನಂದಿಸುವುದಾದರೆ, ನೀವು ಅದರಲ್ಲಿ ಆನಂದಿಸದಿದ್ದರೆ, ಅದು ನೀವಿಬ್ಬರು ವಿವಾಹವಾಗಬಾರದೆಂಬುದನ್ನು ಅರ್ಥೈಸುತ್ತದೊ? ಹಾಗಾಗಬೇಕೆಂದಿಲ್ಲ. ಪ್ರಾಯಶಃ ನೀವು ಇತರ, ಹೆಚ್ಚು ಪ್ರಾಮುಖ್ಯವಾದ ಅಭಿರುಚಿಗಳಲ್ಲಿ ಪಾಲಿಗರಾಗುತ್ತೀರಿ. ಅದಲ್ಲದೆ, ಆ ವ್ಯಕ್ತಿ ಅವುಗಳಲ್ಲಿ ಆನಂದಿಸುವ ಕಾರಣ ಹಿತಕರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನೀವು ನಿಮ್ಮ ಸಹಭಾಗಿಗೆ ಸಂತೋಷವನ್ನು ಕೊಟ್ಟೀರಿ.—ಅ. ಕೃತ್ಯಗಳು 20:35.
15 ಒಂದು ದೊಡ್ಡ ಮಟ್ಟಕ್ಕೆ, ಸಹವರ್ತನ ಸಾಧ್ಯತೆಯು ನೀವಿಬ್ಬರೂ ಎಷ್ಟು ತದ್ರೂಪರು ಎಂಬುದರಿಂದ ನಿರ್ಣಯಿಸಲ್ಪಡುವುದಿಲ್ಲ, ನೀವು ಎಷ್ಟು ಹೊಂದಿಕೊಳ್ಳುವವರು ಎಂಬುದರಿಂದ ನಿರ್ಣಯಿಸಲ್ಪಡುವುದು ನಿಶ್ಚಯ. “ನಾವು ಪ್ರತಿಯೊಂದು ವಿಷಯದಲ್ಲಿಯೂ ಸಮ್ಮತಿಸುತ್ತೇವೊ?” ಎಂದು ಕೇಳುವ ಬದಲಿಗೆ, “ನಾವು ಅಸಮ್ಮತಿಸುವಾಗ ಏನಾಗುತ್ತದೆ? ಒಬ್ಬರಿಗೊಬ್ಬರು ಗೌರವ ಮತ್ತು ಘನತೆಯನ್ನು ಕೊಡುತ್ತ ನಾವು ಶಾಂತಭಾವದಿಂದ ವಿಷಯಗಳನ್ನು ಚರ್ಚಿಸಬಲ್ಲೆವೊ? ಅಥವಾ ಚರ್ಚೆಗಳು ಅನೇಕ ವೇಳೆ ಬಿಸಿಯೇರಿದ ವಾದಗಳಾಗಿ ಕ್ಷಯಿಸುತ್ತವೆಯೆ?” ಎಂಬವು ಕೆಲವು ಉತ್ತಮ ಪ್ರಶ್ನೆಗಳಾಗಿರಬಹುದು. (ಎಫೆಸ 4:29, 31) ನೀವು ವಿವಾಹವಾಗಬಯಸುವುದಾದರೆ, ಗರ್ವವುಳ್ಳ, ಸ್ವನಿಶ್ಚಯದಂತೆ ನಡೆಯುವ, ಎಂದಿಗೂ ರಾಜಿ ಮಾಡಿಕೊಳ್ಳದ, ಅಥವಾ ಎಡೆಬಿಡದೆ ತಗಾದೆ ಮಾಡುವವನ ಮತ್ತು ಅವನ ಅಥವಾ ಅವಳ ಸ್ವಂತ ಮನಸ್ಸಿನಂತೆ ವರ್ತಿಸಲು ಹೂಟಹೂಡುವ ಯಾರಾದರೊಬ್ಬರ ಕುರಿತು ಎಚ್ಚರಿಕೆ ವಹಿಸಿರಿ.
ಮುಂಚಿತವಾಗಿಯೇ ಕಂಡುಹಿಡಿಯಿರಿ
16, 17. ಭಾವೀ ವಿವಾಹ ಸಂಗಾತಿಯನ್ನು ಪರಿಗಣಿಸುತ್ತಿರುವಾಗ ಒಬ್ಬ ಪುರುಷ ಅಥವಾ ಸ್ತ್ರೀಯು ಯಾವುದಕ್ಕಾಗಿ ನೋಡಬಹುದು?
16 ಕ್ರೈಸ್ತ ಸಭೆಯಲ್ಲಿ ಯಾರಿಗೆ ಜವಾಬ್ದಾರಿಯು ಕೊಡಲ್ಪಡುತ್ತದೊ ಅವರು “ಅರ್ಹತೆಯ ಸಂಬಂಧದಲ್ಲಿ ಪ್ರಥಮವಾಗಿ ಪರೀಕ್ಷಿಸಲ್ಪಡ”ಬೇಕಾಗಿದೆ. (1 ತಿಮೊಥೆಯ 3:10, NW) ನೀವೂ ಈ ಮೂಲತತ್ವವನ್ನು ಉಪಯೋಗಿಸಬಲ್ಲಿರಿ. ಉದಾಹರಣೆಗಾಗಿ, ಒಬ್ಬ ಸ್ತ್ರೀ, “ಈ ವ್ಯಕ್ತಿಗೆ ಯಾವ ರೀತಿಯ ಖ್ಯಾತಿಯಿದೆ? ಅವನ ಸ್ನೇಹಿತರು ಯಾರು? ಅವನು ಆತ್ಮಸಂಯಮವನ್ನು ಪ್ರದರ್ಶಿಸುತ್ತಾನೆಯೆ? ವೃದ್ಧ ವ್ಯಕ್ತಿಗಳನ್ನು ಅವನು ಹೇಗೆ ಉಪಚರಿಸುತ್ತಾನೆ? ಅವನು ಯಾವ ರೀತಿಯ ಕುಟುಂಬದಿಂದ ಬಂದಿದ್ದಾನೆ? ಅವನು ಅವರೊಂದಿಗೆ ಹೇಗೆ ವರ್ತಿಸುತ್ತಾನೆ? ಹಣದ ಕಡೆಗೆ ಅವನ ಮನೋಭಾವವೇನು? ಅವನು ಮದ್ಯಪಾನೀಯಗಳನ್ನು ದುರುಪಯೋಗಿಸುತ್ತಾನೊ? ಅವನು ಕೆರಳುವ ಪ್ರಕೃತಿಯವನಾಗಿದ್ದು ಹಿಂಸಾಚಾರಿಯಾಗಿದ್ದಾನೊ? ಅವನಿಗೆ ಯಾವ ಸಭಾ ಜವಾಬ್ದಾರಿಗಳಿವೆ, ಮತ್ತು ಅವನು ಅವುಗಳನ್ನು ಹೇಗೆ ನಿರ್ವಹಿಸುತ್ತಾನೆ? ನಾನು ಅವನನ್ನು ಆಳವಾಗಿ ಗೌರವಿಸಬಲ್ಲೆನೊ?” ಎಂದು ಕೇಳಿಕೊಳ್ಳಬಹುದು.—ಯಾಜಕಕಾಂಡ 19:32; ಜ್ಞಾನೋಕ್ತಿ 22:29; 31:23; ಎಫೆಸ 5:3-5, 33; 1 ತಿಮೊಥೆಯ 5:8; 6:10; ತೀತ 2:6, 7.
17 ಒಬ್ಬ ಪುರುಷನು ಹೀಗೆ ಪ್ರಶ್ನಿಸಬಹುದು: “ಈ ಸ್ತ್ರೀ ದೇವರಿಗಾಗಿ ಪ್ರೀತಿ ಮತ್ತು ಗೌರವವನ್ನು ಪ್ರದರ್ಶಿಸುತ್ತಾಳೊ? ಒಂದು ಮನೆಯ ಜಾಗ್ರತೆ ವಹಿಸಿಕೊಳ್ಳಲು ಅವಳು ಸಮರ್ಥಳಾಗಿದ್ದಾಳೊ? ಅವಳ ಕುಟುಂಬವು ನಮ್ಮಿಂದ ಏನನ್ನು ನಿರೀಕ್ಷಿಸುವುದು? ಆಕೆ ವಿವೇಕಿಯೂ ಉದ್ಯೋಗಶೀಲೆಯೂ ಮಿತವ್ಯಯಿಯೂ ಆಗಿದ್ದಾಳೊ? ಆಕೆ ಯಾವ ವಿಷಯದ ಕುರಿತಾಗಿ ಮಾತನಾಡುತ್ತಾಳೆ? ಇತರರ ಯೋಗಕ್ಷೇಮದ ಕುರಿತು ಅವಳು ನಿಜವಾಗಿಯೂ ಚಿಂತಿತಳೊ, ಅಥವಾ ಅವಳು ಸ್ವವಿಚಾರಾಸಕ್ತೆ, ತರಲೆಯೊ? ಆಕೆ ವಿಶ್ವಾಸಪಾತ್ರಳೊ? ಆಕೆ ತಲೆತನಕ್ಕೆ ಅಧೀನಳಾಗಲು ಇಚ್ಛಿತಳೊ ಅಥವಾ ಆಕೆ ಹಟಮಾರಿ, ಪ್ರಾಯಶಃ ಪ್ರತಿಭಟಿಸುವವಳೂ ಆಗಿದ್ದಾಳೊ?”—ಜ್ಞಾನೋಕ್ತಿ 31:10-31; ಲೂಕ 6:45; ಎಫೆಸ 5:22, 23; 1 ತಿಮೊಥೆಯ 5:13; 1 ಪೇತ್ರ 4:15.
18. ಪ್ರಣಯಯಾಚನೆಯ ಸಮಯದಲ್ಲಿ ಚಿಕ್ಕ ಬಲಹೀನತೆಗಳು ಕಂಡುಬರುವಲ್ಲಿ, ಯಾವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
18 ನೀವು ವ್ಯವಹರಿಸುತ್ತಿರುವುದು ಆದಾಮನ ಅಪರಿಪೂರ್ಣ ಸಂತತಿಯವನೊಂದಿಗೆ, ಒಂದು ರಂಜನ ಕಾವ್ಯದ ಯಾರೊ ಒಬ್ಬ ಆದರ್ಶೀಕರಿಸಲ್ಪಟ್ಟ ನಾಯಕ ಅಥವಾ ನಾಯಕಿಯೊಂದಿಗಲ್ಲ ಎಂಬುದನ್ನು ಮರೆಯದಿರಿ. ಪ್ರತಿಯೊಬ್ಬರಲ್ಲಿಯೂ ಕುಂದುಗಳಿವೆ, ಮತ್ತು ಇವುಗಳಲ್ಲಿ ಕೆಲವು—ನಿಮ್ಮದೂ ನಿಮ್ಮ ಭಾವೀ ಸಹಭಾಗಿಯದ್ದೂ—ಮನ್ನಿಸಲ್ಪಡಬೇಕು. (ರೋಮಾಪುರ 3:23; ಯಾಕೋಬ 3:2) ಅಲ್ಲದೆ, ಗೋಚರವಾಗುವ ಒಂದು ಬಲಹೀನತೆಯು ಬೆಳೆಯಲು ಸಂದರ್ಭವೊಂದನ್ನು ನೀಡಬಲ್ಲದು. ಉದಾಹರಣೆಗಾಗಿ, ನಿಮ್ಮ ಪ್ರಣಯಯಾಚನೆಯ ಸಮಯದಲ್ಲಿ ನಿಮ್ಮೊಳಗೆ ಒಂದು ವಾದ ನಡೆಯುತ್ತದೆಂದು ಭಾವಿಸಿಕೊಳ್ಳಿ. ಪರಿಗಣಿಸಿರಿ: ಒಬ್ಬರನ್ನೊಬ್ಬರು ಪ್ರೀತಿಸಿ ಗೌರವಿಸುವ ಜನರೂ ಕೆಲವು ಬಾರಿ ಅಸಮ್ಮತಿಸುತ್ತಾರೆ. (ಹೋಲಿಸಿ ಆದಿಕಾಂಡ 30:2; ಅ. ಕೃತ್ಯಗಳು 15:39.) ನೀವಿಬ್ಬರೂ ಸುಮ್ಮನೆ ‘ನಿಮ್ಮ ಆತ್ಮವನ್ನು’ ತುಸು ಹೆಚ್ಚು ‘ಸ್ವಾಧೀನ ಪಡಿಸಿಕೊಳ್ಳುವ’ ಮತ್ತು ಹೆಚ್ಚು ಶಾಂತ ರೀತಿಯಲ್ಲಿ ವಿಷಯಗಳನ್ನು ಇತ್ಯರ್ಥಮಾಡಲು ಕಲಿಯುವ ಅಗತ್ಯವಿರಸಾಧ್ಯವಿದೆಯೊ? (ಜ್ಞಾನೋಕ್ತಿ 25:28) ನಿಮ್ಮ ಭಾವೀ ಸಂಗಾತಿಯು ಉತ್ತಮಗೊಳಿಸಿಕೊಳ್ಳುವ ಬಯಕೆಯನ್ನು ತೋರಿಸುತ್ತಾನೆಯೆ? ನೀವು ತೋರಿಸುತ್ತೀರೊ? ನೀವು ಕಡಮೆ ಸೂಕ್ಷ್ಮಸಂವೇದಿಗಳೂ ಕಡಮೆ ಸಿಡುಕಿನವರೂ ಆಗಿರಲು ಕಲಿಯಬಲ್ಲಿರೊ? (ಪ್ರಸಂಗಿ 7:9) ಸಮಸ್ಯೆಗಳನ್ನು ಬಗೆಹರಿಸಲು ಕಲಿಯುವುದು, ನೀವಿಬ್ಬರು ವಿವಾಹ ಮಾಡಿಕೊಳ್ಳುವಲ್ಲಿ ಅವಶ್ಯವಿರುವ ಪ್ರಾಮಾಣಿಕ ಸಂವಾದದ ಒಂದು ನಮೂನೆಯನ್ನು ಸ್ಥಾಪಿಸಬಲ್ಲದು.—ಕೊಲೊಸ್ಸೆ 3:13.
19. ಪ್ರಣಯಯಾಚನೆಯ ಸಮಯದಲ್ಲಿ ಗುರುತರವಾದ ಸಮಸ್ಯೆಗಳು ಏಳುವಲ್ಲಿ ವಿವೇಕದ ಒಂದು ಕ್ರಿಯಾಪಥವು ಯಾವುದಾಗಿರುವುದು?
19 ಆದರೆ ನಿಮ್ಮನ್ನು ಆಳವಾಗಿ ಕಳವಳಗೊಳಿಸುವ ವಿಷಯಗಳನ್ನು ನೀವು ಗಮನಿಸುವಲ್ಲಿ ಆಗೇನು? ಅಂತಹ ಸಂದೇಹಗಳನ್ನು ಜಾಗ್ರತೆಯಿಂದ ಪರ್ಯಾಲೋಚಿಸಬೇಕು. ನೀವೆಷ್ಟು ಪ್ರಣಯಕಲ್ಪನಾಶೀಲರೇ ಆಗಿರಲಿ, ವಿವಾಹವಾಗಲು ನೀವೆಷ್ಟು ತವಕವುಳ್ಳವರೇ ಆಗಿರಲಿ, ಗುರುತರವಾದ ದೋಷಗಳಿಗೆ ಕಣ್ಣುಮುಚ್ಚಿಕೊಳ್ಳಬೇಡಿರಿ. (ಜ್ಞಾನೋಕ್ತಿ 22:3; ಪ್ರಸಂಗಿ 2:14) ಯಾರೊಂದಿಗಾದರೂ ಗಂಭೀರವಾದ ಒಪ್ಪಿಗೆಯ ಪರಿಮಿತಿಗಳಿರುವಂತಹ ಒಂದು ಸಂಬಂಧವು ನಿಮಗಿರುವಲ್ಲಿ, ಆ ಸಂಬಂಧವನ್ನು ನಿಲ್ಲಿಸುವುದು ಮತ್ತು ಆ ವ್ಯಕ್ತಿಯೊಂದಿಗೆ ಶಾಶ್ವತವಾದ ಬದ್ಧತೆಯನ್ನು ಮಾಡದಿರುವುದು ವಿವೇಕಯುತವಾದದ್ದಾಗಿದೆ.
ನಿಮ್ಮ ಪ್ರಣಯಯಾಚನೆಯನ್ನು ಗೌರವಾರ್ಹವಾಗಿ ಇಡಿರಿ
20. ಪ್ರಣಯಯಾಚಿಸುವ ದಂಪತಿಗಳು ತಮ್ಮ ನೈತಿಕ ವರ್ತನೆಯನ್ನು ಹೇಗೆ ನಿಂದಾರ್ಹವಾಗಿರದಂತೆ ಇಡಬಲ್ಲರು?
20 ನೀವು ನಿಮ್ಮ ಪ್ರಣಯಯಾಚನೆಯನ್ನು ಹೇಗೆ ಗೌರವಾರ್ಹವಾಗಿ ಇಟ್ಟುಕೊಳ್ಳಬಲ್ಲಿರಿ? ಪ್ರಥಮವಾಗಿ, ನಿಮ್ಮ ನೈತಿಕ ನಡತೆಯು ನಿಂದಾರ್ಹವಾಗಿರದಂತೆ ಖಾತರಿ ಮಾಡಿಕೊಳ್ಳಿರಿ. ನೀವು ಜೀವಿಸುವಲ್ಲಿ ಅವಿವಾಹಿತ ದಂಪತಿಗಳು ಕೈ ಹಿಡಿದುಕೊಳ್ಳುವುದು, ಚುಂಬಿಸುವುದು ಅಥವಾ ಅಪ್ಪಿಕೊಳ್ಳುವುದು ಯೋಗ್ಯ ವರ್ತನೆಯೆಂದು ಎಣಿಸಲ್ಪಡುತ್ತದೊ? ಇಂತಹ ಮಮತೆಯ ಅಭಿವ್ಯಕ್ತಿಗಳು ಅಸಮ್ಮತಿಸಲ್ಪಡುವುದಿಲ್ಲವಾದರೂ, ಅವುಗಳನ್ನು, ವಿವಾಹವು ನಿಶ್ಚಯವಾಗಿ ಯೋಜಿಸಲ್ಪಟ್ಟಿರುವ ಹಂತವನ್ನು ಸಂಬಂಧವು ತಲಪುವಾಗ ಮಾತ್ರ ಅನುಮತಿಸಬೇಕು. ಮಮತೆಯ ಈ ಪ್ರದರ್ಶನಗಳು ಅಶುದ್ಧ ನಡತೆ ಅಥವಾ ಜಾರತ್ವಕ್ಕೆ ಕೂಡ ಮುಂದುವರಿಯದಂತೆ ಎಚ್ಚರಿಕೆ ವಹಿಸಿರಿ. (ಎಫೆಸ 4:18, 19; ಹೋಲಿಸಿ ಪರಮಗೀತ 1:2; 2:6; 8:5, 9, 10.) ಹೃದಯವು ವಂಚಕವಾಗಿರುವುದರಿಂದ ನೀವಿಬ್ಬರೂ ಮಾತ್ರವೇ ಪ್ರತ್ಯೇಕವಾಗಿ ಒಂದು ಮನೆಯಲ್ಲಿ, ಒಂದು ವಾಸದ ಮಹಡಿಯಲ್ಲಿ, ತಂಗಿರುವ ವಾಹನದಲ್ಲಿ ಅಥವಾ ಕೆಟ್ಟ ನಡತೆಗೆ ಅವಕಾಶವನ್ನು ಕೊಡುವ ಇನ್ನೆಲ್ಲಿಯೂ ಇರುವುದನ್ನು ತಪ್ಪಿಸುವುದು ವಿವೇಕವು. (ಯೆರೆಮೀಯ 17:9) ನಿಮ್ಮ ಪ್ರಣಯಯಾಚನೆಯನ್ನು ನೈತಿಕ ರೀತಿಯಲ್ಲಿ ನಿರ್ಮಲವಾಗಿಡುವುದು ನಿಮಗೆ ಆತ್ಮಸಂಯಮವಿದೆಯೆಂಬುದಕ್ಕೆ ಮತ್ತು ನಿಮ್ಮ ಸ್ವಂತ ಬಯಕೆಗಳಿಗಿಂತ ಮೊದಲಾಗಿ ನೀವು ಇನ್ನೊಬ್ಬ ವ್ಯಕ್ತಿಯ ಹಿತಕ್ಕಾಗಿ ನಿಸ್ವಾರ್ಥ ಚಿಂತೆಯನ್ನು ಇಡುತ್ತೀರೆಂಬುದಕ್ಕೆ ಸ್ಪಷ್ಟವಾದ ಸಾಕ್ಷ್ಯವನ್ನು ಕೊಡುತ್ತದೆ. ಅತಿ ಪ್ರಾಮುಖ್ಯವಾಗಿ, ನಿರ್ಮಲವಾದ ಪ್ರಣಯಯಾಚನೆಯು, ತನ್ನ ಸೇವಕರು ಅಶುದ್ಧತೆ ಮತ್ತು ಜಾರತ್ವವನ್ನು ವಿಸರ್ಜಿಸಬೇಕೆಂದು ಆಜ್ಞಾಪಿಸುವ ಯೆಹೋವ ದೇವರನ್ನು ಸಂತೋಷಪಡಿಸುವುದು.—ಗಲಾತ್ಯ 5:19-21.
21. ಪ್ರಣಯಯಾಚನೆಯನ್ನು ಗೌರವಾರ್ಹವಾಗಿಡಲು ಯಾವ ಪ್ರಾಮಾಣಿಕ ಸಂವಾದವು ಆವಶ್ಯಕವಾಗಿರಬಹುದು?
21 ಎರಡನೆಯದಾಗಿ, ಗೌರವಾರ್ಹವಾದ ಪ್ರಣಯಯಾಚನೆಯು ಪ್ರಾಮಾಣಿಕ ಸಂವಾದವನ್ನೂ ಒಳಗೂಡುತ್ತದೆ. ಪ್ರಣಯಯಾಚನೆಯು ವಿವಾಹದತ್ತ ಪ್ರಗತಿಹೊಂದುವಾಗ ಕೆಲವು ವಿಷಯಗಳನ್ನು ಮನಬಿಚ್ಚಿ ಚರ್ಚಿಸುವುದು ಆವಶ್ಯಕ. ನೀವು ಎಲ್ಲಿ ಜೀವಿಸುವಿರಿ? ನೀವಿಬ್ಬರೂ ಐಹಿಕವಾಗಿ ಕೆಲಸಮಾಡುವಿರೊ? ನೀವು ಮಕ್ಕಳನ್ನು ಪಡೆಯಲು ಬಯಸುತ್ತೀರೊ? ಅಲ್ಲದೆ, ವಿವಾಹವನ್ನು ಬಾಧಿಸಬಲ್ಲ, ಪ್ರಾಯಶಃ ಒಬ್ಬನ ಗತಕಾಲದ ವಿಷಯಗಳನ್ನು ತಿಳಿಯಪಡಿಸುವುದು ಸಹ ಕೇವಲ ನ್ಯಾಯವಾಗಿದೆ. ನಿಮಗಿರಬಹುದಾದ ದೊಡ್ಡ ಮೊತ್ತದ ಸಾಲಗಳು ಅಥವಾ ಋಣಗಳು ಅಥವಾ ಗುರುತರವಾದ ರೋಗ ಅಥವಾ ರೋಗಾವಸ್ಥೆಯಂತಹ ಆರೋಗ್ಯ ಸಂಬಂಧವಾದ ವಿಷಯಗಳನ್ನು ಇವು ಒಳಗೊಳ್ಳಬಹುದು. ಏಚ್‌ಐವಿ (ಏಡ್ಸ್ ಬರಮಾಡುವ ವೈರಸ್) ಸೋಂಕಿರುವ ಅನೇಕ ವ್ಯಕ್ತಿಗಳು ಆ ರೋಗಲಕ್ಷಣಗಳನ್ನು ಕೂಡಲೆ ತೋರಿಸುವುದಿಲ್ಲವಾದುದರಿಂದ, ಹಿಂದೆ ಲೈಂಗಿಕ ಸ್ವೇಚ್ಛಾಸಂಪರ್ಕ ನಡೆಸಿರುವವನೊಂದಿಗೆ ಅಥವಾ ಅಭಿಧಮನಿಗಳ ಮೂಲಕ ಅಮಲೌಷಧ ಬಳಸಿರುವವನೊಂದಿಗೆ ಏಡ್ಸ್ ರಕ್ತಪರೀಕ್ಷೆ ಮಾಡಿಸಿಕೊಳ್ಳುವಂತೆ ಒಬ್ಬನು ಅಥವಾ ಚಿಂತಿಸುವ ಹೆತ್ತವರು ಕೇಳಿಕೊಳ್ಳುವುದು ತಪ್ಪಾಗಿರದು. ಪರೀಕ್ಷೆಯಲ್ಲಿ ರೋಗವಿದೆಯೆಂದು ರುಜುವಾಗುವಲ್ಲಿ, ಉದ್ದೇಶಿತ ಸಂಗಾತಿಯು ಸಂಬಂಧವನ್ನು ಈಗ ಕೊನೆಗಾಣಿಸಲು ಬಯಸುವಲ್ಲಿ, ಸೋಂಕಿರುವ ವ್ಯಕ್ತಿಯು ಅದನ್ನು ಮುಂದುವರಿಸಬೇಕೆಂದು ಆ ಸಂಗಾತಿಯ ಮೇಲೆ ಒತ್ತಡ ಹಾಕಬಾರದು. ವಾಸ್ತವವಾಗಿ, ಅಧಿಕಾಪಾಯದ ಜೀವನ ಶೈಲಿಯಲ್ಲಿ ಭಾಗವಹಿಸಿರುವ ಯಾವನೂ, ಪ್ರಣಯಯಾಚನೆಯನ್ನು ಆರಂಭಿಸುವ ಮೊದಲು ತನ್ನನ್ನು ಸ್ವಪ್ರೇರಣೆಯಿಂದ ಏಡ್ಸ್ ಪರೀಕ್ಷೆಗೆ ಒಪ್ಪಿಸಿಕೊಳ್ಳುವುದು ಯುಕ್ತವಾಗಿರುವುದು.
ವಿವಾಹ ದಿನದ ಆಚೆಗೆ ನೋಡುವುದು
22, 23. (ಎ) ಒಂದು ವಿವಾಹಕ್ಕಾಗಿ ತಯಾರಿಸುವಾಗ ಸಮತೆಯು ಹೇಗೆ ನಷ್ಟವಾಗಬಲ್ಲದು? (ಬಿ) ವಿವಾಹೋತ್ಸವ ಮತ್ತು ವಿವಾಹದ ಕುರಿತು ಪರ್ಯಾಲೋಚಿಸುವಾಗ ಯಾವ ಸಮತೆಯ ವೀಕ್ಷಣವನ್ನು ಇಟ್ಟುಕೊಳ್ಳಬೇಕು?
22 ವಿವಾಹಕ್ಕೆ ಮುಂಚಿನ ಕೊನೆಯ ತಿಂಗಳುಗಳಲ್ಲಿ, ನೀವಿಬ್ಬರೂ ವಿವಾಹೋತ್ಸವಕ್ಕಾಗಿ ಏರ್ಪಡಿಸುವುದರಲ್ಲಿ ತೀರ ಕಾರ್ಯಮಗ್ನರಾಗಿರುವುದು ಸಂಭವನೀಯ. ಹೆಚ್ಚಿನ ಉದ್ರಿಕ್ತತೆಯನ್ನು ನೀವು ಮಿತತ್ವದ ಮೂಲಕ ಲಘುವಾಗಿಸಬಲ್ಲಿರಿ. ಒಂದು ತೀರ ಪರಿಷ್ಕಾರವಾದ ವಿವಾಹವು ಸಂಬಂಧಿಗಳನ್ನೂ ಸಮುದಾಯವನ್ನೂ ಸಂತೋಷಪಡಿಸಬಹುದಾದರೂ ಅದು ನವ ವಿವಾಹಿತರನ್ನೂ ಅವರ ಕುಟುಂಬಗಳನ್ನೂ ದೈಹಿಕವಾಗಿ ಬಳಲಿಸಿ ಆರ್ಥಿಕವಾಗಿ ಬರಿದುಮಾಡೀತು. ಸ್ಥಳಿಕ ಪದ್ಧತಿಗಳಿಗೆ ಸ್ವಲ್ಪ ಮಟ್ಟಿಗೆ ಅಂಟಿಕೊಳ್ಳುವುದು ನ್ಯಾಯಸಮ್ಮತವಾದರೂ ದಾಸ್ಯಭಾವದ ಮತ್ತು ಪ್ರಾಯಶಃ ಸ್ಪರ್ಧಾತ್ಮಕ ಹೊಂದಿಕೆಯು ಆ ಸಂದರ್ಭದ ಅರ್ಥವನ್ನು ಮಬ್ಬುಗವಿಸಿ ನಿಮಗಿರಬೇಕಾಗಿದ್ದ ಆನಂದವನ್ನು ಕಸಿದುಕೊಳ್ಳಬಹುದು. ಇತರರ ಅನಿಸಿಕೆಗಳನ್ನು ಪರಿಗಣಿಸಬೇಕೆಂಬುದು ನಿಜವಾದರೂ, ವಿವಾಹೋತ್ಸವದಲ್ಲಿ ಏನು ನಡೆಯುವುದೆಂದು ನಿರ್ಣಯಿಸಲು ಪ್ರಧಾನವಾಗಿ ವರನು ಜವಾಬ್ದಾರನಾಗಿದ್ದಾನೆ.—ಯೋಹಾನ 2:9.
23 ನಿಮ್ಮ ವಿವಾಹೋತ್ಸವವು ಒಂದೇ ದಿನ ಉಳಿಯುತ್ತದೆ ಆದರೂ, ನಿಮ್ಮ ವಿವಾಹವು ಒಂದು ಆಯುಷ್ಕಾಲ ಉಳಿಯುತ್ತದೆಂಬುದನ್ನು ನೆನಪಿನಲ್ಲಿಡಿರಿ. ವಿವಾಹ ಮಾಡಿಕೊಳ್ಳುವ ಕ್ರಿಯೆಯ ಮೇಲೆ ವಿಪರೀತವಾಗಿ ಕೇಂದ್ರೀಕರಿಸುವುದನ್ನು ದೂರೀಕರಿಸಿರಿ. ಬದಲಾಗಿ, ಮಾರ್ಗದರ್ಶನೆಗಾಗಿ ಯೆಹೋವ ದೇವರ ಕಡೆಗೆ ನೋಡಿ, ವಿವಾಹಿತರು ಆಗಿರುವ ಜೀವಿತಕ್ಕಾಗಿ ಮುಂದಾಗಿ ಯೋಜಿಸಿರಿ. ಆಗ ಒಂದು ಯಶಸ್ವೀ ವಿವಾಹಕ್ಕಾಗಿ ನೀವು ಸುಸಜ್ಜಿತರಾಗಿರುವಿರಿ.
a ಕ್ರೈಸ್ತರಿಗೆ ವಿಹಾರದಿನಾಂಕ ಪದ್ಧತಿ (ಡೇಟಿಂಗ್) ಸಮಂಜಸವೆಂದು ಎಣಿಸಲ್ಪಡುವ ದೇಶಗಳಲ್ಲಿ ಇದು ಅನ್ವಯಿಸುವುದು.
b ಕ್ರೈಸ್ತ ಸಭೆಯಲ್ಲಿ ಕೂಡ, ಅಂಚುಗಳಲ್ಲಿಯೊ ಎಂಬಂತೆ ಜೀವಿಸುವ ಕೆಲವರಿರಬಹುದು. ದೇವರ ಪೂರ್ಣ ಹೃದಯದ ಸೇವಕರಾಗಿರುವ ಬದಲಿಗೆ, ಅವರು ಲೋಕದ ಮನೋಭಾವಗಳಿಂದ ಮತ್ತು ನಡತೆಯಿಂದ ಪ್ರಭಾವಿತರಾಗಿರಬಹುದು.—ಯೋಹಾನ 17:16; ಯಾಕೋಬ 4:4.