ಪ್ರೀತಿ ಹಾಗೂ ಹಿಂಸಾಚಾರದಿಂದ ಗುರುತಿಸಲ್ಪಟ್ಟ ಶೂನೇಮ್
ದಕ್ಷಿಣ ಗಲಿಲಾಯದಲ್ಲಿ, ಇಜ್ರೇಲ್ನ ತಗ್ಗುಪ್ರದೇಶದ ಪೂರ್ವ ತುದಿಯಲ್ಲಿ, ಶೂನೇಮ್ ನಗರವು ನೆಲೆಸಿತ್ತು. ಈ ಚಿಕ್ಕ ನಗರವು, ಬೈಬಲ್ ಇತಿಹಾಸದ ಅತ್ಯಂತ ಪ್ರಾಮುಖ್ಯ ಕದನಗಳಲ್ಲಿ ಎರಡು ಕದನಗಳಿಗೆ ಸಾಕ್ಷಿಯಾಗಿತ್ತಾದರೂ, ನಿಷ್ಠೆಯುಳ್ಳ ಪ್ರೀತಿಯನ್ನು ದೃಷ್ಟಾಂತಿಸಿದ ಇಬ್ಬರು ಸ್ತ್ರೀಯರ ಜನ್ಮಸ್ಥಳವಾಗಿಯೂ ಅದು ಹೆಸರುವಾಸಿಯಾಯಿತು.
ಶೂನೇಮ್ನ ಹಿಂಭಾಗದಲ್ಲಿ ಮೋರೆ ಎಂದೆಣಿಸಲಾದ ಬೆಟ್ಟವಿತ್ತು. ಆ ತಗ್ಗುಪ್ರದೇಶದ ಇನ್ನೊಂದು ಬದಿಯಲ್ಲಿ, ಸುಮಾರು ಎಂಟು ಕಿಲೊಮೀಟರುಗಳಷ್ಟು ದೂರದಲ್ಲಿ ಗಿಲ್ಬೋವ ಎಂಬ ಗುಡ್ಡವಿತ್ತು. ಆ ಎರಡು ಬೆಟ್ಟಗಳ ನಡುವೆ, ಪುಷ್ಕಳವಾಗಿ ನೀರು ಹರಿಯುವ, ಫಲಭರಿತವಾದ ಒಂದು ಪ್ರದೇಶವಿತ್ತು—ಇಡೀ ಇಸ್ರಾಯೇಲಿನ ಅತ್ಯಂತ ಉತ್ಪನ್ನದಾಯಕ ಪ್ರದೇಶಗಳಲ್ಲಿ ಒಂದು.
ಶೂನೇಮಿನ ಸುತ್ತಲೂ ಹುಲುಸಾಗಿಯೂ ಸಾರವತ್ತಾಗಿಯೂ ಇದ್ದ ಈ ಗ್ರಾಮಪ್ರದೇಶವು, ಹೇಳಲ್ಪಟ್ಟಿರುವ ಪ್ರೇಮ ಕಥೆಗಳಲ್ಲಿ ಅತ್ಯಂತ ಮೋಹಕವಾದ ಒಂದಕ್ಕೆ—ಪರಮ ಗೀತ—ಹಿನ್ನೆಲೆಯನ್ನು ಒದಗಿಸುತ್ತದೆ. ಈ ಹಾಡು, ರಾಜ ಸೊಲೊಮೋನನ ಹೆಂಡತಿಯರಲ್ಲಿ ಒಬ್ಬಳಾಗುವ ನೀಡಿಕೆಯನ್ನು ಸ್ವೀಕರಿಸುವುದಕ್ಕೆ ಬದಲಾಗಿ, ತನ್ನ ಕುರುಬ ಸಂಗಾತಿಯನ್ನು ವಿವಾಹವಾಗಲು ಇಷ್ಟಪಟ್ಟ ಒಬ್ಬ ಸುಂದರ ಹಳ್ಳಿ ಹುಡುಗಿಯ ಕುರಿತಾಗಿ ಹೇಳುತ್ತದೆ. ಅವಳ ಹೃದಯವನ್ನು ಗೆಲ್ಲಲಿಕ್ಕಾಗಿ ಸೊಲೊಮೋನನು ತನ್ನೆಲ್ಲಾ ವಿವೇಕ ಹಾಗೂ ಐಶ್ವರ್ಯವನ್ನು ಉಪಯೋಗಿಸಿದನು. ಪುನಃ ಪುನಃ ಅವನು ಅವಳನ್ನು ಹೀಗೆ ಹೊಗಳಿದನು: “ಅರುಣೋದಯವು ದೃಷ್ಟಿಸುವಂತಿರುವ ಇವಳಾರು? ಚಂದ್ರನಂತೆ ಸೌಮ್ಯಳು, ಸೂರ್ಯನಂತೆ ಶುಭ್ರಳು . . . ಆಗಿರುವ ಇವಳಾರು?” ಮತ್ತು ಅವಳು ಊಹಿಸಸಾಧ್ಯವಿರುವ ಎಲ್ಲ ರತ್ನಾಭರಣಗಳಿಂದ ಅವಳನ್ನು ಅತಿಯಾಗಿ ಲಾಲನೆಮಾಡುವೆನೆಂದು ಅವನು ಭರವಸೆಕೊಟ್ಟನು.—ಪರಮ ಗೀತ 1:11; 6:10.
ಅವಳಿಗೆ ರಾಜಯೋಗ್ಯ ಜೀವಿತದ ರುಚಿಯನ್ನು ತೋರಿಸಲಿಕ್ಕಾಗಿ, ತನ್ನ ಅತ್ಯುತ್ತಮ ಸೈನಿಕರಲ್ಲಿ 60 ಜನರ ಜೊತೆಗೂಡಿ, ತನ್ನ ಪರಿವಾರದ ಭಾಗದೋಪಾದಿ ಅವಳು ತನ್ನೊಂದಿಗೆ ಯೆರೂಸಲೇಮಿಗೆ ಬರುವಂತೆ ಸೊಲೊಮೋನನು ಏರ್ಪಡಿಸಿದ್ದನು. (ಪರಮ ಗೀತ 3:6-11) ಅವನು ಅವಳನ್ನು ತನ್ನ ರಾಜನಿವಾಸದಲ್ಲಿ ಇರಿಸಿದನು. ಅವನ ಆಸ್ಥಾನವು ಎಷ್ಟು ಪ್ರಭಾವಶೀಲವಾಗಿತ್ತೆಂದರೆ, ಶೆಬದ ರಾಣಿಯು ಅದನ್ನು ನೋಡಿದಾಗ, ಅವಳು ‘ವಿಸ್ಮಿತಳಾದಳು.’—1 ಅರಸುಗಳು 10:4, 5.
ಆದರೆ ಶೂನೇಮಿನ ಹುಡುಗಿಯು ಆ ಕುರುಬ ಹುಡುಗನಿಗೆ ನಿಷ್ಠಾವಂತೆಯಾಗಿದ್ದಳು. “ಉದ್ಯಾನ ವೃಕ್ಷಗಳಲ್ಲಿ ಸೇಬು ಹೇಗೋ ಪುರುಷರಲ್ಲಿ ನನ್ನ ಕಾಂತನು ಹಾಗೆಯೇ ಇಷ್ಟನು” ಎಂದು ಅವಳು ಹೇಳಿದಳು. (ಪರಮ ಗೀತ 2:3) ಸೊಲೊಮೋನನು ತನ್ನ ಸಾವಿರ ದ್ರಾಕ್ಷಿತೋಟಗಳೊಂದಿಗೆ ಹರ್ಷಿಸಲಿ. ಅವಳ ಪ್ರಿಯನ ಜೊತೆಗೆ ಒಂದೇ ದ್ರಾಕ್ಷಿತೋಟವು ಅವಳಿಗೆ ಸಾಕಾಗಿತ್ತು. ಅವಳ ಪ್ರೀತಿಯು ಅಚಲವಾಗಿತ್ತು.—ಪರಮ ಗೀತ 8:11, 12.
ಇನ್ನೊಬ್ಬ ಸುಂದರ ಸ್ತ್ರೀ ಶೂನೇಮಿನಲ್ಲಿ ವಾಸಿಸುತ್ತಿದ್ದಳು. ಅವಳ ಶಾರೀರಿಕ ತೋರಿಕೆಯ ಕುರಿತು ನಮಗೆ ಏನೂ ಗೊತ್ತಿಲ್ಲವಾದರೂ, ಅವಳು ಹೃದಯದಲ್ಲಿ ಸೌಂದರ್ಯವತಿಯಾಗಿದ್ದಳೆಂಬುದು ನಿಶ್ಚಯ. ಪ್ರವಾದಿಯಾದ ಎಲೀಷನಿಗೆ ಕ್ರಮವಾಗಿ ಊಟಗಳನ್ನು ಹಾಗೂ ವಸತಿ ವ್ಯವಸ್ಥೆಯನ್ನು ಒದಗಿಸಲಿಕ್ಕಾಗಿ ಅವಳು ‘ಕಷ್ಟಪಟ್ಟಳು’ ಅಥವಾ ತುಂಬ ತೊಂದರೆಯನ್ನು ತೆಗೆದುಕೊಂಡಳೆಂದು ಬೈಬಲು ಹೇಳುತ್ತದೆ.—2 ಅರಸುಗಳು 4:8-13.
ದೀರ್ಘವಾದ, ಆಯಾಸಕರ ಪ್ರಯಾಣದ ಬಳಿಕ ಎಲೀಷನು, ಅವಳೂ ಅವಳ ಗಂಡನೂ ತನಗಾಗಿ ಸಿದ್ಧಪಡಿಸಿದ್ದ ಚಿಕ್ಕ ಮಾಳಿಗೆಯ ಕೋಣೆಗೆ ಕೃತಜ್ಞತಾಪೂರ್ವಕವಾಗಿ ಹಿಂದಿರುಗುತ್ತಿದ್ದುದನ್ನು ನಾವು ಊಹಿಸಿಕೊಳ್ಳಬಲ್ಲೆವು. ಅವನ ಶುಶ್ರೂಷೆಯು 60 ವರ್ಷಗಳಷ್ಟು ವಿಸ್ತಾರವಾಗಿದ್ದುದರಿಂದ, ಅವನು ಅನೇಕವೇಳೆ ಅವರ ಮನೆಯನ್ನು ಭೇಟಿಮಾಡಿದ್ದಿರಬಹುದು. ಪ್ರತಿ ಬಾರಿ ಎಲೀಷನು ಆ ಮಾರ್ಗದಿಂದ ಹಾದುಹೋದಾಗ, ತಮ್ಮ ಮನೆಯಲ್ಲಿಯೇ ಉಳಿಯುವಂತೆ ಈ ಶೂನೇಮ್ಯ ಸ್ತ್ರೀಯು ಏಕೆ ಅವನನ್ನು ಒತ್ತಾಯಿಸಿದಳು? ಏಕೆಂದರೆ ಅವಳು ಎಲೀಷನ ಕೆಲಸವನ್ನು ಅಮೂಲ್ಯವಾದದ್ದಾಗಿ ಪರಿಗಣಿಸಿದಳು. ಈ ದೀನಭಾವದ, ನಿಸ್ವಾರ್ಥ ಪ್ರವಾದಿಯು, ಯೆಹೋವನನ್ನು ಸೇವಿಸುವ ಅವರ ಕರ್ತವ್ಯದ ಕುರಿತು ಅರಸರು, ಯಾಜಕರು, ಹಾಗೂ ಸಾಮಾನ್ಯ ಜನರಿಗೆ ಜ್ಞಾಪಕಹುಟ್ಟಿಸುತ್ತಾ, ಆ ಜನಾಂಗದ ಮನಸ್ಸಾಕ್ಷಿಯೋಪಾದಿ ಕಾರ್ಯನಡಿಸಿದನು.
“ಪ್ರವಾದಿಯನ್ನು ಪ್ರವಾದಿಯೆಂದು ಸೇರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು” ಎಂದು ಯೇಸು ಹೇಳಿದಾಗ, ಆ ಶೂನೇಮ್ಯ ಸ್ತ್ರೀಯು ಅವನ ಮನಸ್ಸಿನಲ್ಲಿದ್ದ ಜನರಲ್ಲಿ ಒಬ್ಬಳಾಗಿದ್ದಳು ಎಂಬುದರಲ್ಲಿ ಸಂಶಯವಿಲ್ಲ. (ಮತ್ತಾಯ 10:41) ದೇವಭಯವುಳ್ಳ ಈ ಸ್ತ್ರೀಗೆ ಯೆಹೋವನು ಒಂದು ವಿಶೇಷ ಬಹುಮಾನವನ್ನು ಕೊಟ್ಟನು. ಅವಳು ಅನೇಕ ವರ್ಷಗಳ ವರೆಗೆ ಬಂಜೆಯಾಗಿದ್ದರೂ, ಅವಳು ಒಂದು ಗಂಡು ಮಗುವಿಗೆ ಜನ್ಮನೀಡಿದಳು. ಅನೇಕ ವರ್ಷಗಳ ತರುವಾಯ, ಏಳು ವರ್ಷದ ಬರವು ಆ ದೇಶವನ್ನು ಧ್ವಂಸಮಾಡಿದಾಗಲೂ, ಅವಳಿಗೆ ದೈವಿಕ ಸಹಾಯವು ಕೊಡಲ್ಪಟ್ಟಿತು. ಈ ಪ್ರಚೋದನಾತ್ಮಕ ವೃತ್ತಾಂತವು, ದೇವರ ಸೇವಕರಿಗೆ ನಾವು ತೋರಿಸುವ ದಯಾಭಾವವು, ನಮ್ಮ ಸ್ವರ್ಗೀಯ ತಂದೆಯಿಂದ ಗಮನಿಸಲ್ಪಡದೇ ಹೋಗುವುದಿಲ್ಲ ಎಂಬುದನ್ನು ನಮ್ಮ ಜ್ಞಾಪಕಕ್ಕೆ ತರುತ್ತದೆ.—2 ಅರಸುಗಳು 4:13-37; 8:1-6; ಇಬ್ರಿಯ 6:10.
ಎರಡು ನಿರ್ಣಾಯಕ ಕದನಗಳು
ಶೂನೇಮನ್ನು ಈ ಇಬ್ಬರು ನಿಷ್ಠಾವಂತೆಯರಾದ ಸ್ತ್ರೀಯರ ಸ್ವದೇಶವಾಗಿ ಜ್ಞಾಪಿಸಿಕೊಳ್ಳಲಾಗುತ್ತದಾದರೂ, ಇಸ್ರಾಯೇಲಿನ ಇತಿಹಾಸದ ಮಾರ್ಗಗತಿಯನ್ನೇ ಬದಲಾಯಿಸಿದ ಎರಡು ಕದನಗಳಿಗೂ ಇದು ಸಾಕ್ಷಿಯಾಗಿತ್ತು. ಇದರ ಸಮೀಪದಲ್ಲಿ ಒಂದು ಆದರ್ಶಪ್ರಾಯವಾದ ರಣರಂಗವಿತ್ತು—ಮೋರೆ ಹಾಗೂ ಗಿಲ್ಬೋವ ಬೆಟ್ಟಗಳ ನಡುವಿನ ತಗ್ಗುಪ್ರದೇಶ. ಬೈಬಲ್ ಸಮಯಗಳಲ್ಲಿ ಮಿಲಿಟರಿ ಸೇನಾಧಿಪತಿಗಳು ಯಾವಾಗಲೂ, ಬಹಳಷ್ಟು ನೀರಿನ ಸರಬರಾಯಿ, ಸಂರಕ್ಷಣೆಗಾಗಿ ಎತ್ತರ ಪ್ರದೇಶ, ಮತ್ತು ಸಾಧ್ಯವಿರುವಲ್ಲಿ, ಒಣ ತಗ್ಗುಪ್ರದೇಶವನ್ನು ಕಾಣಸಾಧ್ಯವಿರುವುದರೊಂದಿಗೆ, ಪುರುಷರು, ಕುದುರೆಗಳು ಹಾಗೂ ರಥಗಳ ತಂಡಗಳನ್ನು ಯುಕ್ತಿಯಿಂದ ನಡೆಸಲಿಕ್ಕಾಗಿ ಸಾಕಷ್ಟು ಸ್ಥಳಾವಕಾಶವಿರುವ ಉನ್ನತ ಜಾಗದಲ್ಲಿ ಪಾಳೆಯ ಹೂಡುತ್ತಿದ್ದರು. ಶೂನೇಮ್ ಹಾಗೂ ಗಿಲ್ಬೋವ ಬೆಟ್ಟಗಳು ಅಂತಹ ಪ್ರಯೋಜನಗಳನ್ನು ಒದಗಿಸಿದವು.
ನ್ಯಾಯಸ್ಥಾಪಕರ ಸಮಯದಲ್ಲಿ, 1,35,000 ಮಿದ್ಯಾನ್ಯರು, ಅಮಾಲೇಕ್ಯರು, ಹಾಗೂ ಇತರರ ಒಂದು ಸೇನೆಯು, ಮೋರೆ ಬೆಟ್ಟದ ಎದುರಿನಲ್ಲಿರುವ ತಗ್ಗುಪ್ರದೇಶದಲ್ಲಿ ಪಾಳೆಯ ಹೂಡಿತ್ತು. ಅವರ ಒಂಟೆಗಳು “ಸಮುದ್ರ ತೀರದ ಮರಳಿನಂತೆ ಅಸಂಖ್ಯವಾಗಿದ್ದವು.” (ನ್ಯಾಯಸ್ಥಾಪಕರು 7:12) ತಗ್ಗುಪ್ರದೇಶದ ಆಚೆ ಭಾಗದಲ್ಲಿ, ಗಿಲ್ಬೋವ ಬೆಟ್ಟದ ತಪ್ಪಲಿನಲ್ಲಿರುವ ಹರೋದಿನ ಬುಗ್ಗೆಯ ಬಳಿ, ಅವರಿಗೆದುರಾಗಿ ನ್ಯಾಯಸ್ಥಾಪಕ ಗಿದ್ಯೋನನ ನಾಯಕತ್ವದ ಕೆಳಗೆ ಇಸ್ರಾಯೇಲ್ಯರು ಪಾಳೆಯ ಹೂಡಿದ್ದರು. ಅವರು ಕೇವಲ 32,000 ಮಂದಿ ಸೈನಿಕರಿದ್ದರು.
ಕದನಕ್ಕೆ ಮುಂಚಿನ ದಿನಗಳಲ್ಲಿ, ಪ್ರತಿಯೊಂದು ಪಕ್ಷವು ತನ್ನ ಎದುರಾಳಿಯ ಸ್ಥೈರ್ಯಗೆಡಿಸಲು ಪ್ರಯತ್ನಿಸುತ್ತಿತ್ತು. ಅಪಹಾಸ್ಯಮಾಡುತ್ತಿರುವ ಸೇನೆಗಳು, ಯುದ್ಧದ ಒಂಟೆಗಳು, ರಥಗಳು, ಹಾಗೂ ಕುದುರೆಗಳು, ಇಸ್ರಾಯೇಲ್ನ ಕಾಲಾಳು ಸೈನಿಕರೊಳಗೆ ಭಯವನ್ನು ಉಂಟುಮಾಡಸಾಧ್ಯವಿತ್ತು. ನಿಸ್ಸಂದೇಹವಾಗಿ, ಇಸ್ರಾಯೇಲ್ಯರು ಒಟ್ಟುಗೂಡುತ್ತಿದ್ದಾಗ, ಈಗಾಗಲೇ ತಮ್ಮ ಸ್ಥಳದಲ್ಲಿ ನೆಲೆಸಿದ್ದ ಮಿದ್ಯಾನ್ಯರು, ಒಂದು ಭಯೋತ್ಪಾದಕ ನೋಟವಾಗಿ ಕಂಡುಬಂದರು. “ಧೈರ್ಯವಿಲ್ಲದವರೂ ಅಂಜುವವರೂ ಯಾರಿದ್ದಾರೆ?” (NW) ಎಂದು ಗಿದ್ಯೋನನು ಕೇಳಿದಾಗ, ಅವನ ಸೇನೆಯ ಮೂರನೇ ಎರಡು ಭಾಗದಷ್ಟು ಜನರು ರಣರಂಗವನ್ನು ಬಿಟ್ಟು ಹೋಗುವ ಮೂಲಕ ಪ್ರತಿಕ್ರಿಯಿಸಿದರು.—ನ್ಯಾಯಸ್ಥಾಪಕರು 7:1-3.
ಈಗ ಕೇವಲ 10,000 ಮಂದಿ ಇಸ್ರಾಯೇಲ್ಯ ಸೈನಿಕರು, 1,35,000 ಶತ್ರು ಸೈನಿಕರಿದ್ದ ತಗ್ಗುಪ್ರದೇಶದ ಕಡೆಗೆ ದುರುಗುಟ್ಟಿ ನೋಡಿದರು, ಮತ್ತು ಬೇಗನೆ ಯೆಹೋವನು ಇಸ್ರಾಯೇಲ್ಯ ಸೈನಿಕರ ಸಂಖ್ಯೆಯನ್ನು ಕೇವಲ 300ಕ್ಕೆ ಇಳಿಸಿದನು. ಇಸ್ರಾಯೇಲ್ಯ ಪದ್ಧತಿಯನ್ನು ಅನುಸರಿಸುತ್ತಾ, ಈ ಚಿಕ್ಕ ಗುಂಪು ಮೂರು ವಿಭಾಗಗಳಾಗಿ ಭಾಗವಾಯಿತು. ಕತ್ತಲೆಯು ಆವರಿಸಿದಾಗ, ಅವರು ಬೇರೆ ಬೇರೆಯಾಗಿ ಚದರಿಹೋಗಿ, ಶತ್ರು ಶಿಬಿರದ ಮೂರು ದಿಕ್ಕುಗಳಲ್ಲಿ ತಮ್ಮ ತಮ್ಮ ಸ್ಥಾನಗಳಲ್ಲಿ ನಿಂತುಕೊಂಡರು. ತದನಂತರ ಗಿದ್ಯೋನನು ಅಪ್ಪಣೆಕೊಟ್ಟಾಗ, ಆ 300 ಜನರು ತಮ್ಮ ಪಂಜುಗಳನ್ನು ಮರೆಮಾಡಿದ್ದ ಕೊಡಗಳನ್ನು ಒಡೆದುಬಿಟ್ಟು, ಆ ಪಂಜುಗಳನ್ನು ಮೇಲೆತ್ತಿ ಹಿಡಿದು, “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ” ಎಂದು ಕೂಗಿದರು. ಅವರು ತಮ್ಮ ಕೊಂಬುಗಳನ್ನು ಊದಿದರು, ಮತ್ತು ಊದುತ್ತಾ ಇದ್ದರು. ಕತ್ತಲೆಯಲ್ಲಿ, ಗಾಬರಿಗೊಂಡ ಸೈನಿಕರ ಮಿಶ್ರ ಗುಂಪು, ಸೈನಿಕರ 300 ಪಡೆಗಳು ತಮ್ಮ ಮೇಲೆ ಆಕ್ರಮಣಮಾಡುತ್ತಿವೆಯೆಂದು ಭಾವಿಸಿತು. ಯೆಹೋವನು ಪ್ರತಿಯೊಬ್ಬನನ್ನು ಇನ್ನೊಬ್ಬನ ವಿರುದ್ಧ ದಂಗೆಯೇಳಿಸಿದನು, ಮತ್ತು “ಪಾಳೆಯದವರಾದರೋ ಭ್ರಾಂತರಾಗಿ ಕೂಗುತ್ತಾ ಓಡಿಹೋಗ ಪ್ರಾರಂಭಿಸಿದರು.”—ನ್ಯಾಯಸ್ಥಾಪಕರು 7:15-22; 8:10.
ಶೂನೇಮಿನ ಬಳಿ ಎರಡನೆಯ ಕದನವು, ರಾಜ ಸೌಲನ ಸಮಯದಲ್ಲಿ ನಡೆಯಿತು. “ಫಿಲಿಷ್ಟಿಯರು ಸೈನ್ಯಕೂಡಿಸಿಕೊಂಡು ಬಂದು ಶೂನೇಮಿನಲ್ಲಿ ಪಾಳೆಯಮಾಡಿಕೊಂಡಿದ್ದರು. ಸೌಲನು ಎಲ್ಲಾ ಇಸ್ರಾಯೇಲ್ಯರೊಡನೆ ಬಂದು ಗಿಲ್ಬೋವದಲ್ಲಿ ಇಳುಕೊಂಡನು” ಎಂದು ಬೈಬಲು ವರದಿಸುತ್ತದೆ. ಕೆಲವು ವರ್ಷಗಳ ಹಿಂದೆ ಗಿದ್ಯೋನನ ಸೇನೆಯು ಹೀಗೆಯೇ ಇಳುಕೊಂಡಿತ್ತು. ಆದರೆ ಗಿದ್ಯೋನನಿಗೆ ಅಸದೃಶವಾಗಿ ಸೌಲನು, ಏಂದೋರಿನ ಪ್ರೇತವ್ಯವಹಾರ ಮಾಧ್ಯಮವನ್ನು ಸಂಪರ್ಕಿಸಲು ಇಷ್ಟಪಡುತ್ತಾ, ಯೆಹೋವನಲ್ಲಿ ಭರವಸೆಯಿಲ್ಲದವನಾಗಿದ್ದನು. ಅವನು ಫಿಲಿಷ್ಟಿಯರ ಪಾಳೆಯವನ್ನು ನೋಡಿದಾಗ, “ಬಹಳ ಭಯದಿಂದ ಎದೆಯೊಡೆದವನಾದನು.” ತರುವಾಯ ಸಂಭವಿಸಿದ ಕದನದಲ್ಲಿ, ಇಸ್ರಾಯೇಲ್ಯರು ಓಡಿಹೋದರು ಮತ್ತು ಸಂಪೂರ್ಣವಾಗಿ ಅಪಜಯಹೊಂದಿದರು. ಸೌಲನೂ ಯೋನಾತಾನನೂ ತಮ್ಮ ಜೀವಗಳನ್ನು ಕಳೆದುಕೊಂಡರು.—1 ಸಮುವೇಲ 28:4-7; 31:1-6.
ಹೀಗೆ ಶೂನೇಮಿನ ಇತಿಹಾಸವು ಪ್ರೀತಿ ಹಾಗೂ ಹಿಂಸಾಚಾರದಿಂದ, ಯೆಹೋವನಲ್ಲಿ ಭರವಸೆ ಹಾಗೂ ದೆವ್ವಗಳ ಮೇಲಿನ ಅವಲಂಬನೆಯಿಂದ ಗುರುತಿಸಲ್ಪಟ್ಟಿತು. ಈ ತಗ್ಗುಪ್ರದೇಶದಲ್ಲಿ, ಇಬ್ಬರು ಸ್ತ್ರೀಯರು ಪ್ರೀತಿಯಲ್ಲಿ ಹಾಗೂ ಅತಿಥಿಸತ್ಕಾರದಲ್ಲಿ ಸ್ಥಿರತೆಯನ್ನು ತೋರಿಸಿದರು, ಮತ್ತು ಇಸ್ರಾಯೇಲ್ಯ ನಾಯಕರಿಬ್ಬರು ನಿರ್ಣಾಯಕ ಕದನಗಳನ್ನು ಕಾದಾಡಿದರು. ಎಲ್ಲ ನಾಲ್ಕು ಉದಾಹರಣೆಗಳು, ಯೆಹೋವನ ಮೇಲೆ ಆತುಕೊಳ್ಳುವುದರ ಪ್ರಮುಖತೆಯನ್ನು ದೃಷ್ಟಾಂತಿಸುತ್ತವೆ. ತನ್ನನ್ನು ಸೇವಿಸುವವರಿಗೆ ಪ್ರತಿಫಲವನ್ನು ಕೊಡಲು ಆತನು ಎಂದೂ ತಪ್ಪುವುದಿಲ್ಲ.
[ಪುಟ 31 ರಲ್ಲಿರುವ ಚಿತ್ರ]
ಪುರಾತನ ಶೂನೇಮ್—ಮೋರೆ ಬೆಟ್ಟದ ಹಿನ್ನೆಲೆಯೊಂದಿಗೆ—ನಗರದ ನಿವೇಶನದಲ್ಲಿ, ಸೂಲಮ್ನ ಆಧುನಿಕ ಹಳ್ಳಿ
[ಕೃಪೆ]
Pictorial Archive (Near Eastern History) Est.