ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bh ಅಧ್ಯಾ. 2 ಪು. 18-26
  • ಬೈಬಲ್‌—ದೇವರಿಂದ ಬಂದಿರುವ ಒಂದು ಗ್ರಂಥ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌—ದೇವರಿಂದ ಬಂದಿರುವ ಒಂದು ಗ್ರಂಥ
  • ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೊಂದಿಕೆ ಮತ್ತು ನಿಷ್ಕೃಷ್ಟತೆ
  • ಪ್ರಾಯೋಗಿಕ ವಿವೇಕದ ಒಂದು ಗ್ರಂಥ
  • ಪ್ರವಾದನೆಯ ಗ್ರಂಥ
  • “ದೇವರ ವಾಕ್ಯವು ಸಜೀವವಾದದ್ದು”
  • ಬೈಬಲ್‌—ದೇವರು ನಮಗೆ ಕೊಟ್ಟ ಉಡುಗೊರೆ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ದೇವರ ಜ್ಞಾನವನ್ನು ಪ್ರಕಟಿಸುವ ಗ್ರಂಥ
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಪ್ರವಾದನೆಯ ಒಂದು ಗ್ರಂಥ
    ಸಕಲ ಜನರಿಗಾಗಿರುವ ಒಂದು ಗ್ರಂಥ
  • ಸತ್ಯದ ಬೇರು—ಬೈಬಲ್‌
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
ಇನ್ನಷ್ಟು
ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
bh ಅಧ್ಯಾ. 2 ಪು. 18-26

ಅಧ್ಯಾಯ ಎರಡು

ಬೈಬಲ್‌—ದೇವರಿಂದ ಬಂದಿರುವ ಒಂದು ಗ್ರಂಥ

  • ಬೈಬಲು ಬೇರೆ ಯಾವುದೇ ಪುಸ್ತಕಕ್ಕಿಂತ ಯಾವ ವಿಧಗಳಲ್ಲಿ ಭಿನ್ನವಾಗಿದೆ?

  • ವೈಯಕ್ತಿಕ ಸಮಸ್ಯೆಗಳನ್ನು ನಿಭಾಯಿಸುವಂತೆ ಬೈಬಲು ನಿಮಗೆ ಹೇಗೆ ಸಹಾಯಮಾಡಬಲ್ಲದು?

  • ಬೈಬಲಿನಲ್ಲಿ ದಾಖಲೆಯಾಗಿರುವ ಪ್ರವಾದನೆಗಳಲ್ಲಿ ನೀವು ಏಕೆ ಭರವಸೆಯಿಡಬಲ್ಲಿರಿ?

1, 2. ಬೈಬಲು ಯಾವ ವಿಧಗಳಲ್ಲಿ ದೇವರಿಂದ ಬಂದಿರುವ ರೋಮಾಂಚಕ ಉಡುಗೊರೆಯಾಗಿದೆ?

ಒಬ್ಬ ಆತ್ಮೀಯ ಮಿತ್ರನಿಂದ ನೀವು ಒಂದು ವಿಶೇಷ ಉಡುಗೊರೆಯನ್ನು ಪಡೆದುಕೊಂಡ ಸಮಯವನ್ನು ನೆನಪಿಸಿಕೊಳ್ಳಬಲ್ಲಿರಾ? ಅದು ನಿಮ್ಮಲ್ಲಿ ರೋಮಾಂಚನವನ್ನು ಹುಟ್ಟಿಸಿತು ಮಾತ್ರವಲ್ಲ, ನಿಮ್ಮ ಹೃದಯವನ್ನೂ ಸ್ಪರ್ಶಿಸಿದ್ದಿರಬೇಕು. ಏಕೆಂದರೆ ಒಂದು ಉಡುಗೊರೆಯು, ಅದನ್ನು ಕೊಡುವವನ ವಿಷಯದಲ್ಲಿ ನಿಮಗೆ ಏನನ್ನೊ ತಿಳಿಸುತ್ತದೆ. ಅದೇನೆಂದರೆ, ಅವನೊ ಅವಳೊ ನಿಮ್ಮ ಸ್ನೇಹವನ್ನು ಅಮೂಲ್ಯವೆಂದೆಣಿಸುತ್ತಾರೆಂದೇ. ಮತ್ತು ನಿಮ್ಮ ಮಿತ್ರನ ಉಡುಗೊರೆಗೆ ನೀವು ಕೃತಜ್ಞತೆಯನ್ನು ವ್ಯಕ್ತಪಡಿಸಿರುತ್ತೀರಿ ಎಂಬುದರಲ್ಲಿ ಸಂದೇಹವಿಲ್ಲ.

2 ಬೈಬಲು ದೇವರಿಂದ ಬಂದಿರುವ ಒಂದು ಉಡುಗೊರೆಯಾಗಿದೆ. ಅದಕ್ಕಾಗಿ ನಾವು ನಿಜವಾಗಿಯೂ ಕೃತಜ್ಞರಾಗಿರಬಲ್ಲೆವು. ಈ ಅದ್ವಿತೀಯ ಗ್ರಂಥವು ನಾವು ಎಂದಿಗೂ ಇನ್ನೆಲ್ಲಿಯೂ ಕಂಡುಕೊಳ್ಳಲಾಗದಂತಹ ವಿಷಯಗಳನ್ನು ತಿಳಿಯಪಡಿಸುತ್ತದೆ. ದೃಷ್ಟಾಂತಕ್ಕೆ, ಅದು ನಮಗೆ ತಾರಾರಂಜಿತ ಆಕಾಶ, ಭೂಮಿ ಮತ್ತು ಪ್ರಥಮ ಪುರುಷ ಹಾಗೂ ಸ್ತ್ರೀಯ ಸೃಷ್ಟಿಯ ಬಗ್ಗೆ ತಿಳಿಸುತ್ತದೆ. ಜೀವನದ ಸಮಸ್ಯೆಗಳನ್ನು ಮತ್ತು ಚಿಂತೆಗಳನ್ನು ನಿಭಾಯಿಸಲು ನಮಗೆ ಸಹಾಯಮಾಡುವ ಭರವಸಾರ್ಹವಾದ ಮೂಲತತ್ತ್ವಗಳು ಬೈಬಲಿನಲ್ಲಿವೆ. ದೇವರು ತನ್ನ ಉದ್ದೇಶವನ್ನು ಹೇಗೆ ಪೂರೈಸುವನು ಮತ್ತು ಭೂಮಿಯ ಮೇಲೆ ಉತ್ತಮ ಪರಿಸ್ಥಿತಿಗಳನ್ನು ಹೇಗೆ ತರಲಿರುವನು ಎಂಬುದನ್ನು ವಿವರಿಸುತ್ತದೆ. ಬೈಬಲು ಎಷ್ಟೊಂದು ರೋಮಾಂಚಕವಾದ ಉಡುಗೊರೆಯಾಗಿದೆ!

3. ಯೆಹೋವನು ಬೈಬಲನ್ನು ನಮಗೆ ಕೊಟ್ಟಿರುವ ನಿಜತ್ವವು ಆತನ ಬಗ್ಗೆ ಏನನ್ನು ತಿಳಿಸುತ್ತದೆ, ಮತ್ತು ಇದು ಹೃದಯಸ್ಪರ್ಶಿ ವಿಚಾರವಾಗಿದೆಯೇಕೆ?

3 ಬೈಬಲು ಹೃದಯಸ್ಪರ್ಶಿ ಉಡುಗೊರೆಯೂ ಆಗಿದೆ. ಏಕೆಂದರೆ ಅದು ಅದರ ದಾತನಾದ ಯೆಹೋವ ದೇವರ ಕುರಿತು ಏನನ್ನೋ ತಿಳಿಸುತ್ತದೆ. ಆತನು ಅಂತಹ ಒಂದು ಗ್ರಂಥವನ್ನು ಒದಗಿಸಿರುವ ನಿಜತ್ವವು, ನಾವು ಆತನನ್ನು ಚೆನ್ನಾಗಿ ಪರಿಚಯಮಾಡಿಕೊಳ್ಳಬೇಕೆಂಬುದು ಆತನ ಬಯಕೆಯಾಗಿದೆ ಎಂಬುದಕ್ಕೆ ರುಜುವಾತಾಗಿದೆ. ಹೌದು, ನೀವು ಯೆಹೋವನ ಸಮೀಪಕ್ಕೆ ಬರುವಂತೆ ಬೈಬಲು ನಿಮಗೆ ಸಹಾಯಮಾಡಬಲ್ಲದು.

4. ಬೈಬಲ್‌ ವಿತರಣೆಯ ಬಗ್ಗೆ ಯಾವ ವಿಷಯವು ನಿಮ್ಮನ್ನು ಪ್ರಭಾವಿಸುತ್ತದೆ?

4 ನಿಮ್ಮ ಬಳಿ ಒಂದು ಬೈಬಲ್‌ ಇರುವುದಾದರೆ, ಅದನ್ನು ಹೊಂದಿರುವವರು ನೀವೊಬ್ಬರೇ ಅಲ್ಲ. ಬೈಬಲನ್ನು ಪೂರ್ಣವಾಗಿ ಇಲ್ಲವೆ ಭಾಗಶಃ 2,300ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟಿಸಲಾಗಿದೆ ಮತ್ತು ಹೀಗೆ ಅದು ಲೋಕದ ಜನಸಂಖ್ಯೆಯಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚು ಜನರಿಗೆ ಲಭ್ಯವಾಗಿದೆ. ಪ್ರತಿವಾರ ಸರಾಸರಿ ಹತ್ತು ಲಕ್ಷಕ್ಕೂ ಹೆಚ್ಚು ಬೈಬಲುಗಳು ವಿತರಿಸಲ್ಪಡುತ್ತವೆ! ಸಂಪೂರ್ಣ ಬೈಬಲ್‌ ಅಥವಾ ಅದರ ಕೆಲವೊಂದು ಭಾಗಗಳ ಕೋಟಿಗಟ್ಟಲೆ ಪ್ರತಿಗಳನ್ನು ಉತ್ಪಾದಿಸಲಾಗಿದೆ. ಬೈಬಲಿನಂಥ ಗ್ರಂಥ ಇನ್ನಾವುದೂ ಇಲ್ಲವೆಂಬುದು ಖಂಡಿತ.

ಬೇರೆ ಬೇರೆ ಭಾಷೆಗಳಲ್ಲಿ ನೂತನ ಲೋಕ ಭಾಷಾಂತರ ಬೈಬಲ್‌

“ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌” ಅನೇಕ ಭಾಷೆಗಳಲ್ಲಿ ಲಭ್ಯವಿದೆ

5. ಬೈಬಲು ಹೇಗೆ “ದೈವಪ್ರೇರಿತ”ವಾಗಿದೆ?

5 ಇಷ್ಟೇ ಅಲ್ಲದೆ, ಬೈಬಲು “ದೈವಪ್ರೇರಿತ”ವಾಗಿದೆ. (2 ತಿಮೊಥೆಯ 3:16) ಅದು ಯಾವ ವಿಧದಲ್ಲಿ? ಬೈಬಲ್‌ ತಾನೇ ಉತ್ತರ ಕೊಡುವುದು: “ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:21) ಇದನ್ನು ಹೀಗೆ ದೃಷ್ಟಾಂತಿಸಬಹುದು: ಒಬ್ಬ ವ್ಯಾಪಾರೋದ್ಯಮಿಯು ತನ್ನ ಕಾರ್ಯದರ್ಶಿಗೆ ಒಂದು ಪತ್ರವನ್ನು ಬರೆಯುವಂತೆ ಹೇಳಬಹುದು. ಆದರೆ ಆ ಪತ್ರದಲ್ಲಿ ಆ ಉದ್ಯಮಿಯ ಆಲೋಚನೆಗಳೂ ಆದೇಶಗಳೂ ಇರುತ್ತವೆ. ಹೀಗೆ ಅದು ನಿಜವಾಗಿಯೂ ಅವನ ಪತ್ರವಾಗಿದೆಯೇ ಹೊರತು ಕಾರ್ಯದರ್ಶಿಯದ್ದಲ್ಲ. ತದ್ರೀತಿಯಲ್ಲಿ, ಬೈಬಲಿನಲ್ಲಿ ದೇವರ ಸಂದೇಶವು ಅಡಕವಾಗಿದೆ, ಅದನ್ನು ಬರೆದ ಪುರುಷರದ್ದಲ್ಲ. ಹೀಗೆ, ಇಡೀ ಬೈಬಲು ನಿಜವಾಗಿಯೂ “ದೇವರ ವಾಕ್ಯವೇ.”—1 ಥೆಸಲೊನೀಕ 2:13.

ಹೊಂದಿಕೆ ಮತ್ತು ನಿಷ್ಕೃಷ್ಟತೆ

6, 7. ಬೈಬಲಿನಲ್ಲಿರುವ ಮಾಹಿತಿಯ ಆಂತರಿಕ ಹೊಂದಿಕೆಯು ಏಕೆ ವಿಶೇಷವಾಗಿ ಗಮನಾರ್ಹವಾಗಿದೆ?

6 ಬೈಬಲು 1,600 ವರ್ಷಗಳ ಸಮಯಾವಧಿಯಲ್ಲಿ ಬರೆಯಲ್ಪಟ್ಟಿತು. ಅದರ ಲೇಖಕರು ವಿವಿಧ ಸಮಯಗಳಲ್ಲಿ ಜೀವಿಸಿದ್ದರು ಮತ್ತು ವಿಭಿನ್ನ ಹಿನ್ನೆಲೆಗಳಿಂದ ಬಂದವರಾಗಿದ್ದರು. ಕೆಲವರು ವ್ಯವಸಾಯಗಾರರು, ಬೆಸ್ತರು ಮತ್ತು ಕುರುಬರು ಆಗಿದ್ದರು. ಇತರರು ಪ್ರವಾದಿಗಳು, ನ್ಯಾಯಸ್ಥಾಪಕರು ಮತ್ತು ಅರಸರು ಆಗಿದ್ದರು. ಸುವಾರ್ತಾ ಲೇಖಕನಾದ ಲೂಕನು ವೈದ್ಯನಾಗಿದ್ದನು. ಬೈಬಲ್‌ ಲೇಖಕರ ಹಿನ್ನೆಲೆಗಳು ವಿವಿಧವಾಗಿದ್ದರೂ, ಬೈಬಲ್‌ ಪುಸ್ತಕಗಳು ಆದಿಯಿಂದ ಅಂತ್ಯದ ವರೆಗೆ ಪರಸ್ಪರ ಹೊಂದಿಕೆಯಲ್ಲಿವೆ.a

7 ಬೈಬಲಿನ ಪ್ರಥಮ ಪುಸ್ತಕವು ಮಾನವಕುಲದ ಸಮಸ್ಯೆಗಳು ಹೇಗೆ ಆರಂಭಗೊಂಡವೆಂದು ನಮಗೆ ತಿಳಿಸುತ್ತದೆ. ಕೊನೆಯ ಪುಸ್ತಕವು ಇಡೀ ಭೂಮಿಯು ಒಂದು ಪರದೈಸ್‌ ಇಲ್ಲವೆ ಉದ್ಯಾನವನವಾಗುವುದೆಂದು ತೋರಿಸುತ್ತದೆ. ಬೈಬಲಿನ ಎಲ್ಲ ಬೇರೆಬೇರೆ ಭಾಗಗಳು ಸಾವಿರಾರು ವರುಷಗಳ ಇತಿಹಾಸವನ್ನು ಆವರಿಸಿದ್ದು, ದೇವರ ಉದ್ದೇಶಗಳ ನೆರವೇರಿಕೆಯೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಹೊಂದಿವೆ. ಬೈಬಲಿನ ಪುಸ್ತಕಗಳ ನಡುವಣ ಪರಸ್ಪರ ಹೊಂದಿಕೆಯು ಹೃದಯಸ್ಪರ್ಶಿಯಾಗಿದೆ, ಮತ್ತು ದೇವರಿಂದ ಬಂದಿರುವ ಒಂದು ಗ್ರಂಥದಿಂದ ನಾವು ನಿಶ್ಚಯವಾಗಿ ಇಂಥ ಹೊಂದಿಕೆಯನ್ನೇ ನಿರೀಕ್ಷಿಸುತ್ತೇವೆ.

8. ಬೈಬಲು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆ ಎಂಬುದನ್ನು ತೋರಿಸಲು ಉದಾಹರಣೆಗಳನ್ನು ಕೊಡಿ.

8 ಬೈಬಲು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆ. ಅದು ಬರೆಯಲ್ಪಟ್ಟ ಸಮಯದಲ್ಲಿ ಮಾನವರಿಗೆ ಅಜ್ಞಾತವಾಗಿದ್ದ ಮಾಹಿತಿಯೂ ಅದರಲ್ಲಿದೆ. ದೃಷ್ಟಾಂತಕ್ಕೆ, ಯಾಜಕಕಾಂಡ ಪುಸ್ತಕದಲ್ಲಿ ಸಂಪರ್ಕ ನಿಷೇಧ ಮತ್ತು ನೈರ್ಮಲ್ಯದ ಬಗ್ಗೆ ಪುರಾತನ ಕಾಲದ ಇಸ್ರಾಯೇಲಿಗೆ ಕೊಡಲ್ಪಟ್ಟಿದ್ದ ನಿಯಮಗಳಿವೆ. ಆದರೆ ಅಂತಹ ವಿಷಯಗಳ ಬಗ್ಗೆ ಸುತ್ತಮುತ್ತಲಿನ ಜನಾಂಗಗಳಿಗೆ ಏನೂ ತಿಳಿದಿರಲಿಲ್ಲ. ಭೂಮಿಯ ಆಕಾರದ ಬಗ್ಗೆ ತಪ್ಪು ಅಭಿಪ್ರಾಯಗಳಿದ್ದ ಒಂದು ಸಮಯದಲ್ಲಿ, ಬೈಬಲಾದರೊ ಅದರ ಆಕಾರವು “ವೃತ್ತ” ಅಥವಾ ಗೋಳವೆಂದು ಸೂಚಿಸಿತು. (ಯೆಶಾಯ 40:22, NIBV) ಭೂಮಿಯು ‘ಯಾವ ಆಧಾರವೂ ಇಲ್ಲದೆ ತೂಗುತ್ತಿದೆ’ ಎಂದು ಬೈಬಲು ನಿಖರವಾಗಿಯೇ ತಿಳಿಸಿತು. (ಯೋಬ 26:7) ಬೈಬಲು ವಿಜ್ಞಾನದ ಪಠ್ಯಪುಸ್ತಕವಲ್ಲ ಎಂಬುದು ನಿಶ್ಚಯ. ಆದರೆ ವೈಜ್ಞಾನಿಕ ಸಂಗತಿಗಳ ಪ್ರಸ್ತಾಪವು ಬರುವಾಗ ಅದು ತಿಳಿಸುವ ವಿಷಯವು ನಿಷ್ಕೃಷ್ಟವಾಗಿದೆ. ದೇವರಿಂದ ಬಂದಿರುವ ಒಂದು ಗ್ರಂಥದಿಂದ ನಾವು ಇದನ್ನೇ ನಿರೀಕ್ಷಿಸುತ್ತೇವಲ್ಲವೊ?

9. (ಎ) ಐತಿಹಾಸಿಕ ವಿಷಯಗಳಲ್ಲಿಯೂ ಬೈಬಲು ನಿಷ್ಕೃಷ್ಟವಾಗಿದೆ ಮತ್ತು ಭರವಾಸರ್ಹವಾಗಿದೆಯೆಂದು ಅದು ಯಾವ ವಿಧಗಳಲ್ಲಿ ತೋರಿಸಿಕೊಡುತ್ತದೆ? (ಬಿ) ಬೈಬಲ್‌ ಲೇಖಕರ ಪ್ರಾಮಾಣಿಕತೆಯು ಬೈಬಲಿನ ಬಗ್ಗೆ ನಿಮಗೆ ಏನು ತಿಳಿಸುತ್ತದೆ?

9 ಬೈಬಲು ಐತಿಹಾಸಿಕ ವಿಷಯಗಳಲ್ಲಿಯೂ ನಿಷ್ಕೃಷ್ಟವಾಗಿದೆ ಮತ್ತು ಭರವಸಾರ್ಹವಾಗಿದೆ. ಅದರಲ್ಲಿರುವ ವೃತ್ತಾಂತಗಳು ಸ್ಪಷ್ಟ. ಅವುಗಳಲ್ಲಿ ವ್ಯಕ್ತಿಗಳ ಹೆಸರುಗಳು ಮಾತ್ರವಲ್ಲ ಅವರ ವಂಶಾವಳಿ ಸಹ ಇದೆ.b ಅನೇಕವೇಳೆ ತಮ್ಮ ಸ್ವಂತ ಜನರ ಅಪಜಯಗಳನ್ನು ದಾಖಲಿಸದಂಥ ಲೌಕಿಕ ಇತಿಹಾಸಕಾರರಿಗೆ ವ್ಯತಿರಿಕ್ತವಾಗಿ, ಬೈಬಲ್‌ ಲೇಖಕರು ಪ್ರಾಮಾಣಿಕರಾಗಿದ್ದರು. ಅವರು ತಮ್ಮ ಸ್ವಂತ ದೋಷಗಳನ್ನು ಮತ್ತು ತಮ್ಮ ಜನರ ದೋಷಗಳನ್ನು ಸಹ ದಾಖಲಿಸಿದರು. ಉದಾಹರಣೆಗೆ, ಬೈಬಲ್‌ ಪುಸ್ತಕವಾದ ಅರಣ್ಯಕಾಂಡದಲ್ಲಿ ಲೇಖಕನಾದ ಮೋಶೆಯು, ತಾನು ಮಾಡಿದಂಥ ಗಂಭೀರವಾದ ತಪ್ಪು ಮತ್ತು ಅದಕ್ಕಾಗಿ ತನಗೆ ಸಿಕ್ಕಿದಂಥ ಕಠಿನ ಗದರಿಕೆಯನ್ನು ಒಪ್ಪಿಕೊಳ್ಳುತ್ತಾನೆ. (ಅರಣ್ಯಕಾಂಡ 20:2-12) ಅಂತಹ ಪ್ರಾಮಾಣಿಕತೆಯು ಬೇರೆ ಐತಿಹಾಸಿಕ ವೃತ್ತಾಂತಗಳಲ್ಲಿ ಕಂಡುಬರುವುದು ವಿರಳ. ಆದರೆ ಬೈಬಲು ದೇವರಿಂದ ಬಂದಿರುವ ಗ್ರಂಥವಾಗಿರುವುದರಿಂದಲೇ ಅದರಲ್ಲಿ ಅಂತಹ ಪ್ರಾಮಾಣಿಕತೆ ಕಂಡುಬರುತ್ತದೆ.

ಪ್ರಾಯೋಗಿಕ ವಿವೇಕದ ಒಂದು ಗ್ರಂಥ

10. ಬೈಬಲು ಪ್ರಾಯೋಗಿಕವಾದ ಒಂದು ಗ್ರಂಥವಾಗಿರುವುದು ಆಶ್ಚರ್ಯಕರವಲ್ಲವೇಕೆ?

10 ಬೈಬಲು ದೇವಪ್ರೇರಿತವಾಗಿರುವುದರಿಂದ, “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ . . . ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಹೌದು, ಬೈಬಲು ಪ್ರಾಯೋಗಿಕವಾದ ಗ್ರಂಥ. ಅದು ಮಾನವನ ಸ್ವಭಾವದ ಕುರಿತು ಸೂಕ್ಷ್ಮ ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಇದೇನೂ ಆಶ್ಚರ್ಯದ ಸಂಗತಿಯಲ್ಲ, ಏಕೆಂದರೆ ಅದರ ಗ್ರಂಥಕರ್ತನು ಸೃಷ್ಟಿಕರ್ತನಾದ ಯೆಹೋವ ದೇವರಾಗಿದ್ದಾನೆ! ನಮ್ಮ ಯೋಚನೆ ಮತ್ತು ಭಾವನೆಗಳನ್ನು ನಮಗಿಂತಲೂ ಚೆನ್ನಾಗಿ ಆತನು ಅರ್ಥಮಾಡಿಕೊಳ್ಳಬಲ್ಲನು. ಇದಲ್ಲದೆ, ಸಂತೋಷದಿಂದಿರಲು ನಮಗೇನು ಆವಶ್ಯಕವೆಂಬುದು ಯೆಹೋವನಿಗೆ ಗೊತ್ತಿದೆ. ನಾವು ಯಾವ ಮಾರ್ಗಗಳಿಂದ ದೂರವಿರಬೇಕೆಂಬುದೂ ಆತನಿಗೆ ತಿಳಿದಿದೆ.

11, 12. (ಎ) ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಯಾವ ವಿಷಯಗಳನ್ನು ಚರ್ಚಿಸಿದನು? (ಬಿ) ಬೈಬಲಿನಲ್ಲಿ ಇನ್ನಾವ ಪ್ರಾಯೋಗಿಕ ವಿಷಯಗಳನ್ನು ಪರಿಗಣಿಸಲಾಗಿದೆ, ಮತ್ತು ಅದರ ಸಲಹೆಯು ಇತಿಹಾಸದ ಒಂದು ನಿರ್ದಿಷ್ಟ ಸಮಯಾವಧಿಗೆ ಮಾತ್ರ ಸೀಮಿತವಾಗಿಲ್ಲವೇಕೆ?

11 ಮತ್ತಾಯ 5-7 ನೇ ಅಧ್ಯಾಯಗಳಲ್ಲಿ ದಾಖಲಿಸಲ್ಪಟ್ಟಿರುವ ಪರ್ವತ ಪ್ರಸಂಗವೆಂದು ಕರೆಯಲಾಗಿರುವ ಯೇಸುವಿನ ಭಾಷಣವನ್ನು ಪರಿಗಣಿಸಿರಿ. ಬೋಧನೆಯ ಅತ್ಯುತ್ತಮ ಕೃತಿಯಾಗಿರುವ ಇದರಲ್ಲಿ, ಯೇಸು ಅನೇಕ ಸಂಗತಿಗಳ ಕುರಿತು ಮಾತಾಡಿದನು. ನಿಜ ಸಂತೋಷವನ್ನು ಕಂಡುಕೊಳ್ಳುವ ವಿಧ, ವ್ಯಾಜ್ಯಗಳನ್ನು ಬಗೆಹರಿಸುವ ವಿಧ, ಪ್ರಾರ್ಥಿಸುವ ರೀತಿ ಮತ್ತು ಪ್ರಾಪಂಚಿಕ ವಸ್ತುಗಳ ವಿಷಯದಲ್ಲಿ ಸರಿಯಾದ ದೃಷ್ಟಿಕೋನವನ್ನು ಹೇಗೆ ಪಡೆದುಕೊಳ್ಳುವುದು ಎಂಬ ವಿಷಯಗಳು ಅದರಲ್ಲಿದ್ದವು. ಯೇಸು ಆ ಮಾತುಗಳನ್ನು ನುಡಿದಾಗ ಅವು ಎಷ್ಟು ಬಲವುಳ್ಳವುಗಳೂ ಪ್ರಾಯೋಗಿಕವೂ ಆಗಿದ್ದವೊ ಇಂದಿಗೂ ಅವು ಹಾಗೆಯೇ ಇವೆ.

12 ಕೆಲವು ಬೈಬಲ್‌ ಮೂಲತತ್ತ್ವಗಳು ಕುಟುಂಬ ಜೀವನ, ಕೆಲಸದ ರೂಢಿಗಳು ಮತ್ತು ಇತರರೊಂದಿಗಿನ ಸಂಬಂಧಗಳ ಕುರಿತಾಗಿವೆ. ಈ ಬೈಬಲ್‌ ಮೂಲತತ್ತ್ವಗಳು ಸರ್ವರಿಗೆ ಅನ್ವಯಿಸುತ್ತವೆ ಮತ್ತು ಅದರ ಸಲಹೆ ಸದಾ ಪ್ರಯೋಜನಕಾರಿಯಾಗಿದೆ. ಬೈಬಲಿನಲ್ಲಿ ಕಂಡುಬರುವ ವಿವೇಕವು ಯೆಶಾಯ ಪ್ರವಾದಿಯ ಮೂಲಕ ತಿಳಿಸಲ್ಪಟ್ಟ ದೇವರ ಈ ಮಾತುಗಳಲ್ಲಿ ಸಾರಾಂಶಿಸಲ್ಪಟ್ಟಿದೆ: ‘ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು [ಉಪಯುಕ್ತವಾದುದನ್ನು] ಬೋಧಿಸುವವನಾಗಿದ್ದೇನೆ.’—ಯೆಶಾಯ 48:17.

ಪ್ರವಾದನೆಯ ಗ್ರಂಥ

ಒಬ್ಬ ವ್ಯಕ್ತಿ ಬೈಬಲ್‌ ಓದುತ್ತಾ ಯೆಶಾಯ ಪ್ರವಾದನೆಯಲ್ಲಿ ಹೇಳಿರುವ ಬಾಬೆಲ್‌ ನಾಶನವನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳುತ್ತಿದ್ದಾನೆ

ಬೈಬಲ್‌ ಲೇಖಕನಾದ ಯೆಶಾಯನು ಬಾಬೆಲಿನ ಪತನವನ್ನು ಮುಂತಿಳಿಸಿದನು

13. ಬಾಬೆಲಿನ ಕುರಿತು ಪ್ರವಾದಿ ಯೆಶಾಯನು ಯಾವ ವಿವರಗಳನ್ನು ದಾಖಲಿಸುವಂತೆ ಯೆಹೋವನು ಪ್ರೇರಿಸಿದನು?

13 ಬೈಬಲಿನಲ್ಲಿ ಅನೇಕಾನೇಕ ಪ್ರವಾದನೆಗಳು ಅಡಕವಾಗಿವೆ. ಅವುಗಳಲ್ಲಿ ಹಲವಾರು ಪ್ರವಾದನೆಗಳು ಈಗಾಗಲೇ ನೆರವೇರಿವೆ. ಒಂದು ಉದಾಹರಣೆಯನ್ನು ಪರಿಗಣಿಸಿರಿ. ಬಾಬೆಲ್‌ ನಗರವು ನಾಶಗೊಳ್ಳುವದೆಂದು, ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಜೀವಿಸಿದ್ದ ಪ್ರವಾದಿ ಯೆಶಾಯನ ಮೂಲಕ ಯೆಹೋವನು ಮುಂತಿಳಿಸಿದನು. (ಯೆಶಾಯ 13:19; 14:22, 23) ನಗರವನ್ನು ಹೇಗೆ ವಶಮಾಡಿಕೊಳ್ಳಲಾಗುವುದು ಎನ್ನುವುದರ ಕುರಿತು ವಿವರಗಳು ಕೊಡಲ್ಪಟ್ಟವು. ಆಕ್ರಮಿಸುವ ಸೈನ್ಯಗಳು ಬಾಬೆಲಿನ ನದಿಯನ್ನು ಬತ್ತಿಸಿಬಿಡುವವು ಮತ್ತು ಯುದ್ಧಮಾಡದೆ ನಗರದೊಳಕ್ಕೆ ನಡೆದು ಬರುವವು. ಅಷ್ಟೇ ಅಲ್ಲ, ಬಾಬೆಲನ್ನು ಸೋಲಿಸುವ ಅರಸನು ಯಾರಾಗಿರುವನು ಎಂಬುದನ್ನೂ ಯೆಶಾಯನ ಪ್ರವಾದನೆಯು ಹೆಸರಿಸಿತು. ಅವನು ಕೋರೆಷನಾಗಿದ್ದನು.—ಯೆಶಾಯ 44:27–45:2.

14, 15. ಬಾಬೆಲಿನ ಬಗ್ಗೆ ಯೆಶಾಯನ ಪ್ರವಾದನೆಯಲ್ಲಿದ್ದ ವಿವರಗಳು ಹೇಗೆ ನೆರವೇರಿದವು?

14 ಸುಮಾರು 200 ವರುಷಗಳ ಬಳಿಕ, ಸಾ.ಶ.ಪೂ. 539ರ ಅಕ್ಟೋಬರ್‌ 5/6ರ ರಾತ್ರಿ, ಒಂದು ಸೈನ್ಯವು ಬಾಬೆಲ್‌ ನಗರದ ಸಮೀಪದಲ್ಲಿ ಪಾಳೆಯಹೂಡಿತು. ಅದರ ಸೇನಾಪತಿ ಯಾರಾಗಿದ್ದನು? ಕೋರೆಷನೆಂಬ ಪಾರಸಿಯ ರಾಜನೇ. ಹೀಗೆ, ಬೆರಗುಗೊಳಿಸುವ ಒಂದು ಪ್ರವಾದನೆಯ ನೆರವೇರಿಕೆಗಾಗಿ ರಂಗವು ಸಜ್ಜುಗೊಳಿಸಲ್ಪಟ್ಟಿತು. ಆದರೆ ಮುಂತಿಳಿಸಲ್ಪಟ್ಟಿದ್ದಂತೆಯೇ ಕೋರೆಷನ ಸೈನ್ಯವು ಯುದ್ಧಮಾಡದೇ ಬಾಬೆಲನ್ನು ಪ್ರವೇಶಿಸಲಿತ್ತೊ?

15 ಬಾಬೆಲಿನವರು ಆ ರಾತ್ರಿ ಒಂದು ದೊಡ್ಡ ಉತ್ಸವವನ್ನು ಆಚರಿಸುತ್ತಿದ್ದರು. ನಗರದ ಬೃಹದಾಕಾರದ ಗೋಡೆಗಳ ಮರೆಯಲ್ಲಿ ಅವರಿಗೆ ಸುಭದ್ರತೆಯ ಅನಿಸಿಕೆಯಿತ್ತು. ಈ ಮಧ್ಯೆ, ಕೋರೆಷನು ನಗರದ ಮಧ್ಯದಿಂದ ಹಾದುಹೋಗುತ್ತಿದ್ದ ನದೀನೀರಿನ ದಿಕ್ಕನ್ನು ಕೌಶಲದಿಂದ ಬದಲಾಯಿಸಿದನು. ಸ್ವಲ್ಪ ಸಮಯದಲ್ಲೇ ನೀರು, ಅವನ ಸೈನಿಕರು ನದೀತಳವನ್ನು ನಡೆದು ದಾಟುವಷ್ಟರ ಮಟ್ಟಿಗೆ ಕಡಿಮೆಯಾಯಿತು. ಹೀಗೆ ಅವರು ನಗರದ ಗೋಡೆಗಳನ್ನು ಸಮೀಪಿಸಲು ಸಾಧ್ಯವಾಯಿತು. ಆದರೆ ಕೋರೆಷನ ಸೈನ್ಯವು ಬಾಬೆಲಿನ ಗೋಡೆಗಳನ್ನು ಹೇಗೆ ದಾಟೀತು? ಯಾವುದೊ ಕಾರಣಕ್ಕಾಗಿ, ಆ ರಾತ್ರಿ ನಗರದ ದ್ವಾರಗಳನ್ನು ಅಲಕ್ಷ್ಯದಿಂದ ತೆರೆದಿಡಲಾಗಿತ್ತು!

16. (ಎ) ಬಾಬೆಲಿನ ಅಂತಿಮ ಪರಿಣಾಮದ ಬಗ್ಗೆ ಯೆಶಾಯನು ಏನು ಮುಂತಿಳಿಸಿದನು? (ಬಿ) ಬಾಬೆಲಿನ ನಾಶನದ ಕುರಿತಾದ ಯೆಶಾಯನ ಪ್ರವಾದನೆಯು ಹೇಗೆ ನೆರವೇರಿತು?

16 ಬಾಬೆಲಿನ ಕುರಿತು ಹೀಗೆ ಮುಂತಿಳಿಸಲಾಗಿತ್ತು: “ಅದು ಎಂದಿಗೂ ನಿವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲಿರರು; ಯಾವ ಅರಬಿಯನೂ ಗುಡಾರಹಾಕನು; ಕುರುಬರು ಮಂದೆಗಳನ್ನು ತಂಗಿಸರು.” (ಯೆಶಾಯ 13:20) ಈ ಪ್ರವಾದನೆಯು ಆ ನಗರದ ಪತನವನ್ನು ಮಾತ್ರವಲ್ಲದೆ ಇನ್ನೂ ಹೆಚ್ಚಿನದ್ದನ್ನು ಮುಂತಿಳಿಸಿತು. ಬಾಬೆಲು ಕಾಯಂ ಆಗಿ ನಿರ್ಜನವಾಗುವುದೆಂದು ಅದು ತೋರಿಸಿತು. ಈ ಮಾತುಗಳ ನೆರವೇರಿಕೆಯ ಪುರಾವೆಯನ್ನು ನೀವು ನೋಡಬಲ್ಲಿರಿ. ಇರಾಕ್‌ ದೇಶದ ಬಾಗ್ದಾದ್‌ ನಗರದ 80 ಕಿಲೊಮೀಟರ್‌ ದಕ್ಷಿಣದಲ್ಲಿರುವ ಪುರಾತನ ಬಾಬೆಲಿನ ನಿರ್ಜನ ನಿವೇಶನವು, “ನಾಶನವೆಂಬ ಬರಲಿನಿಂದ ಗುಡಿಸಿಬಿಡುವೆನು” ಎಂದು ಯೆಹೋವನು ಯೆಶಾಯನ ಮೂಲಕ ಹೇಳಿದ ಮಾತುಗಳು ನೆರವೇರಿವೆ ಎಂಬುದಕ್ಕೆ ರುಜುವಾತಾಗಿದೆ.—ಯೆಶಾಯ 14:22, 23.c

ಬಾಬೆಲಿನ ಅವಶೇಷಗಳು

ಬಾಬೆಲಿನ ಅವಶೇಷಗಳು

17. ಬೈಬಲ್‌ ಪ್ರವಾದನೆಯ ನೆರವೇರಿಕೆಯು ಹೇಗೆ ನಂಬಿಕೆಯನ್ನು ಬಲಗೊಳಿಸುತ್ತದೆ?

17 ಬೈಬಲು ಭರವಸಾರ್ಹ ಪ್ರವಾದನೆಯ ಗ್ರಂಥವಾಗಿದೆ ಎಂಬುದರ ಕುರಿತಾದ ಚರ್ಚೆಯು ನಂಬಿಕೆಯನ್ನು ಬಲಗೊಳಿಸುತ್ತದೆ, ಅಲ್ಲವೆ? ಯೆಹೋವನು ತನ್ನ ಗತ ವಾಗ್ದಾನಗಳನ್ನು ನೆರವೇರಿಸಿರುವಲ್ಲಿ, ಭೂಪರದೈಸಿನ ಕುರಿತಾದ ತನ್ನ ವಾಗ್ದಾನವನ್ನೂ ನೆರವೇರಿಸುವನೆಂಬ ದೃಢಭರವಸೆ ನಮಗಿರಬಲ್ಲದು. (ಅರಣ್ಯಕಾಂಡ 23:19) ಹೌದು, “ಸುಳ್ಳಾಡದ ದೇವರು ನಿತ್ಯಕಾಲಕ್ಕೆ ಮುಂಚೆಯೇ ವಾಗ್ದಾನಮಾಡಿದ ನಿತ್ಯಜೀವದ ನಿರೀಕ್ಷೆ” ನಮಗಿದೆ.—ತೀತ 1:2, NIBV.d

“ದೇವರ ವಾಕ್ಯವು ಸಜೀವವಾದದ್ದು”

18. ‘ದೇವರ ವಾಕ್ಯದ’ ವಿಷಯದಲ್ಲಿ ಕ್ರೈಸ್ತ ಅಪೊಸ್ತಲನಾದ ಪೌಲನು ಯಾವ ಪ್ರಬಲವಾದ ಹೇಳಿಕೆಯನ್ನು ಮಾಡುತ್ತಾನೆ?

18 ಈ ಅಧ್ಯಾಯದಲ್ಲಿ ನಾವೀಗ ಪರಿಗಣಿಸಿರುವ ವಿಷಯಗಳಿಂದ, ಬೈಬಲು ನಿಜವಾಗಿಯೂ ಅದ್ವಿತೀಯವಾದ ಒಂದು ಗ್ರಂಥವೆಂಬುದು ಸ್ಪಷ್ಟವಾಗುತ್ತದೆ. ಆದರೂ, ಅದರ ಮೌಲ್ಯವು ಅದರ ಆಂತರಿಕ ಹೊಂದಿಕೆ, ವೈಜ್ಞಾನಿಕ ಮತ್ತು ಐತಿಹಾಸಿಕ ನಿಷ್ಕೃಷ್ಟತೆ, ಪ್ರಾಯೋಗಿಕ ವಿವೇಕ ಹಾಗೂ ಭರವಸಾರ್ಹ ಪ್ರವಾದನೆಗಿಂತಲೂ ಎಷ್ಟೋ ಹೆಚ್ಚಿನದ್ದಾಗಿದೆ. ಕ್ರೈಸ್ತ ಅಪೊಸ್ತಲ ಪೌಲನು ಬರೆದುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.”—ಇಬ್ರಿಯ 4:12.

19, 20. (ಎ) ನೀವು ನಿಮ್ಮನ್ನೇ ಪರೀಕ್ಷಿಸಿಕೊಳ್ಳುವಂತೆ ಬೈಬಲು ಹೇಗೆ ಸಹಾಯಮಾಡಬಲ್ಲದು? (ಬಿ) ದೇವರ ಅದ್ವಿತೀಯ ಉಡುಗೊರೆಯಾದ ಬೈಬಲಿಗಾಗಿ ನೀವು ಹೇಗೆ ಕೃತಜ್ಞತೆಯನ್ನು ತೋರಿಸಬಲ್ಲಿರಿ?

19 ದೇವರ “ವಾಕ್ಯ” ಇಲ್ಲವೆ ಸಂದೇಶವನ್ನು ಬೈಬಲಿನಲ್ಲಿ ಓದುವುದು ನಮ್ಮ ಜೀವನವನ್ನು ಬದಲಾಯಿಸಬಲ್ಲದು. ನಾವು ಪುನಃ ಒಮ್ಮೆ ಮತ್ತು ಹೆಚ್ಚು ಉತ್ತಮವಾಗಿ ನಮ್ಮನ್ನೇ ಪರೀಕ್ಷಿಸಿಕೊಳ್ಳುವಂತೆ ಅದು ನಮಗೆ ಸಹಾಯಮಾಡಬಲ್ಲದು. ನಾವು ದೇವರನ್ನು ಪ್ರೀತಿಸುತ್ತೇವೆಂದು ಹೇಳುತ್ತಿರಬಹುದಾದರೂ ಆತನ ಪ್ರೇರಿತ ವಾಕ್ಯವಾದ ಬೈಬಲು ಬೋಧಿಸುವ ವಿಷಯಗಳಿಗೆ ನಾವು ಪ್ರತಿಕ್ರಿಯೆ ತೋರಿಸುವ ವಿಧವು, ನಮ್ಮ ನಿಜವಾದ ಆಲೋಚನೆಗಳನ್ನು ಮತ್ತು ನಮ್ಮ ಹೃದಯದ ಉದ್ದೇಶಗಳನ್ನು ಸಹ ಬಯಲುಪಡಿಸುವುದು.

20 ಬೈಬಲು ನಿಜವಾಗಿಯೂ ದೇವರಿಂದ ಬಂದಿರುವ ಒಂದು ಗ್ರಂಥವಾಗಿದೆ. ಈ ಗ್ರಂಥವನ್ನು ಓದಬೇಕು, ಅಧ್ಯಯನ ಮಾಡಬೇಕು ಮತ್ತು ಪ್ರೀತಿಯಿಂದ ಕಾಣಬೇಕು. ಆದುದರಿಂದ ಅದರ ಒಳವಿಷಯಗಳನ್ನು ಪರೀಕ್ಷಿಸುವುದನ್ನು ಮುಂದುವರಿಸುತ್ತ, ಈ ದೈವಿಕ ಉಡುಗೊರೆಗೆ ನಿಮ್ಮ ಕೃತಜ್ಞತೆಯನ್ನು ತೋರಿಸಿರಿ. ಹೀಗೆ ಮಾಡುವಾಗ, ಮಾನವಕುಲಕ್ಕಾಗಿರುವ ದೇವರ ಉದ್ದೇಶದ ಕುರಿತು ಹೆಚ್ಚು ಗಾಢವಾದ ತಿಳಿವಳಿಕೆಯನ್ನು ನೀವು ಪಡೆದುಕೊಳ್ಳುವಿರಿ. ಆ ಉದ್ದೇಶವೇನು ಮತ್ತು ಅದು ಹೇಗೆ ಕೈಗೂಡಿಸಲ್ಪಡುವುದು ಎಂಬುದನ್ನು ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗುವುದು.

a ಬೈಬಲಿನ ಕೆಲವೊಂದು ಭಾಗಗಳು ಅದರ ಬೇರೆ ಭಾಗಗಳಿಗೆ ಪರಸ್ಪರ ವಿರುದ್ಧವಾಗಿವೆಯೆಂದು ಕೆಲವು ಜನರು ಹೇಳುತ್ತಾರಾದರೂ, ಅಂತಹ ವಾದಗಳು ನಿರಾಧಾರವಾಗಿವೆ. ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟ, ಬೈಬಲ್‌—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್‌) ಎಂಬ ಪುಸ್ತಕದ 7ನೆಯ ಅಧ್ಯಾಯವನ್ನು ನೋಡಿ.

b ದೃಷ್ಟಾಂತಕ್ಕಾಗಿ, ಲೂಕ 3:23-38 ರಲ್ಲಿರುವ ಯೇಸುವಿನ ಸವಿವರವಾದ ವಂಶಾವಳಿಯನ್ನು ಗಮನಿಸಿ.

c ಬೈಬಲ್‌ ಪ್ರವಾದನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರಿನ 27-9ನೆಯ ಪುಟಗಳನ್ನು ನೋಡಿರಿ.

d ಬಾಬೆಲಿನ ನಾಶನವು, ನೆರವೇರಿರುವ ಬೈಬಲ್‌ ಪ್ರವಾದನೆಗಳಲ್ಲಿ ಕೇವಲ ಒಂದು ಉದಾಹರಣೆಯಾಗಿದೆ. ಬೇರೆ ಉದಾಹರಣೆಗಳಲ್ಲಿ, ತೂರ್‌ ಮತ್ತು ನಿನೆವೆಯ ನಾಶನವು ಸೇರಿದೆ. (ಯೆಹೆಜ್ಕೇಲ 26:1-5; ಚೆಫನ್ಯ 2:13-15) ಅಲ್ಲದೆ, ಬಾಬೆಲನ್ನು ಹಿಂಬಾಲಿಸಿ ಅಧಿಕಾರಕ್ಕೆ ಬರಲಿದ್ದ ಲೋಕ ಸಾಮ್ರಾಜ್ಯಗಳ ಒಂದು ಶ್ರೇಣಿಯ ಬಗ್ಗೆ ದಾನಿಯೇಲನ ಪ್ರವಾದನೆ ಮುಂತಿಳಿಸಿತು. ಇವುಗಳಲ್ಲಿ ಮೇದ್ಯ ಪಾರಸಿಯ ಮತ್ತು ಗ್ರೀಸ್‌ ಸಾಮ್ರಾಜ್ಯಗಳು ಸೇರಿದ್ದವು. (ದಾನಿಯೇಲ 8:5-7, 20-22) ಯೇಸು ಕ್ರಿಸ್ತನಲ್ಲಿ ನೆರವೇರಿರುವ ಅನೇಕ ಮೆಸ್ಸೀಯ ಸಂಬಂಧಿತ ಪ್ರವಾದನೆಗಳ ಚರ್ಚೆಗಾಗಿ ಪರಿಶಿಷ್ಟದ 200-201ನೇ ಪುಟಗಳನ್ನು ನೋಡಿ.

ಬೈಬಲು ಹೀಗೆ ಬೋಧಿಸುತ್ತದೆ

  • ಬೈಬಲು ದೇವಪ್ರೇರಿತವಾಗಿದೆ ಮತ್ತು ಈ ಕಾರಣದಿಂದ ನಿಷ್ಕೃಷ್ಟವೂ ಭರವಸಾರ್ಹವೂ ಆಗಿದೆ.—2 ತಿಮೊಥೆಯ 3:16.

  • ಬೈಬಲಿನಲ್ಲಿರುವ ಮಾಹಿತಿಯು ದೈನಂದಿನ ಜೀವನಕ್ಕೆ ಪ್ರಾಯೋಗಿಕವಾಗಿದೆ.—ಯೆಶಾಯ 48:17.

  • ಬೈಬಲಿನಲ್ಲಿರುವ ದೇವರ ವಾಗ್ದಾನಗಳು ಖಂಡಿತವಾಗಿಯೂ ನೆರವೇರುತ್ತವೆ.—ಅರಣ್ಯಕಾಂಡ 23:19.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ