ಪರಿಶಿಷ್ಟ
ವಿವಾಹ ವಿಚ್ಛೇದನ ಮತ್ತು ಪ್ರತ್ಯೇಕವಾಸದ ವಿಷಯದಲ್ಲಿ ಬೈಬಲಿನ ದೃಷ್ಟಿಕೋನ
ವಿವಾಹಿತರಾಗಿರುವವರು ವಿವಾಹದ ಪ್ರತಿಜ್ಞೆಗೆ ನಂಬಿಗಸ್ತರಾಗಿ ಉಳಿಯುವಂತೆ ಯೆಹೋವನು ನಿರೀಕ್ಷಿಸುತ್ತಾನೆ. ಪ್ರಥಮ ಪುರುಷನನ್ನು ಮತ್ತು ಸ್ತ್ರೀಯನ್ನು ವಿವಾಹದಲ್ಲಿ ಐಕ್ಯಗೊಳಿಸುವಾಗ ಯೆಹೋವನು, “ಪುರುಷನು . . . ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು” ಎಂದು ಹೇಳಿದನು. ಸಮಯಾನಂತರ ಯೇಸು ಕ್ರಿಸ್ತನು ಇದೇ ಹೇಳಿಕೆಯನ್ನು ಪುನರಾವರ್ತಿಸಿದನು ಮತ್ತು “ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ” ಎಂದು ಕೂಡಿಸಿ ಹೇಳಿದನು. (ಆದಿಕಾಂಡ 2:24; ಮತ್ತಾಯ 19:3-6) ಹೀಗಿರುವುದರಿಂದ ಯೆಹೋವನೂ ಯೇಸುವೂ ವಿವಾಹವನ್ನು ಜೀವನಪರ್ಯಂತರ ಉಳಿಯುವ ಬಂಧವಾಗಿ ಪರಿಗಣಿಸುತ್ತಾರೆ; ಒಬ್ಬ ಸಂಗಾತಿಯು ತೀರಿಕೊಂಡಾಗ ಮಾತ್ರ ಈ ಬಂಧವು ಕೊನೆಗೊಳ್ಳುತ್ತದೆ. (1 ಕೊರಿಂಥ 7:39) ವಿವಾಹವು ಪವಿತ್ರ ಏರ್ಪಾಡಾಗಿರುವುದರಿಂದ ವಿವಾಹ ವಿಚ್ಛೇದನವನ್ನು ಹಗುರವಾಗಿ ಪರಿಗಣಿಸಬಾರದಾಗಿದೆ. ವಾಸ್ತವದಲ್ಲಿ ಶಾಸ್ತ್ರಾಧಾರವಿಲ್ಲದ ವಿವಾಹ ವಿಚ್ಛೇದನಗಳನ್ನು ಯೆಹೋವನು ದ್ವೇಷಿಸುತ್ತಾನೆ.—ಮಲಾಕಿಯ 2:15, 16.
ವಿವಾಹ ವಿಚ್ಛೇದನಕ್ಕೆ ಯಾವುದು ಶಾಸ್ತ್ರಾಧಾರವನ್ನು ಒದಗಿಸುತ್ತದೆ? ಯೆಹೋವನು ವ್ಯಭಿಚಾರ ಮತ್ತು ಜಾರತ್ವವನ್ನು ದ್ವೇಷಿಸುತ್ತಾನೆ. (ಆದಿಕಾಂಡ 39:9; 2 ಸಮುವೇಲ 11:26, 27; ಕೀರ್ತನೆ 51:4) ವಾಸ್ತವದಲ್ಲಿ ಆತನು ಜಾರತ್ವವನ್ನು ಎಷ್ಟು ತಿರಸ್ಕರಣೀಯವಾಗಿ ಕಾಣುತ್ತಾನೆಂದರೆ, ಆತನು ಅದನ್ನು ವಿವಾಹ ವಿಚ್ಛೇದನಕ್ಕೆ ಆಧಾರವಾಗಿ ಅನುಮತಿಸುತ್ತಾನೆ. (ಜಾರತ್ವದಲ್ಲಿ ಏನು ಒಳಗೂಡಿದೆ ಎಂಬುದರ ಕುರಿತಾದ ಚರ್ಚೆಗಾಗಿ ಅಧ್ಯಾಯ 9ರಲ್ಲಿರುವ ಪ್ಯಾರಗ್ರಾಫ್ 7ನ್ನು ನೋಡಿ; ಅಲ್ಲಿ ಜಾರತ್ವದ ಅರ್ಥವನ್ನು ವಿವರಿಸಲಾಗಿದೆ.) ದೋಷಿಯಾದ ಸಂಗಾತಿಯೊಂದಿಗೆ ಉಳಿಯಬೇಕೊ ಅಥವಾ ವಿವಾಹ ವಿಚ್ಛೇದನವನ್ನು ಪಡೆಯಬೇಕೊ ಎಂಬ ವಿಷಯದಲ್ಲಿ ನಿರ್ಧಾರವನ್ನು ಮಾಡುವ ಹಕ್ಕನ್ನು ಯೆಹೋವನು ನಿರ್ದೋಷಿಯಾದ ಸಂಗಾತಿಗೆ ಕೊಡುತ್ತಾನೆ. (ಮತ್ತಾಯ 19:9) ಆದುದರಿಂದ ಒಬ್ಬ ನಿರ್ದೋಷಿ ಸಂಗಾತಿಯು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳಲು ಪ್ರಯತ್ನಿಸುವಲ್ಲಿ, ಇಂಥ ವಿಚ್ಛೇದನವನ್ನು ಯೆಹೋವನು ಹಗೆಮಾಡುವುದಿಲ್ಲ. ಆದರೆ ಅದೇ ಸಮಯದಲ್ಲಿ ಕ್ರೈಸ್ತ ಸಭೆಯು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳಲು ಪ್ರಯತ್ನಿಸುವಂತೆ ಯಾರನ್ನೂ ಉತ್ತೇಜಿಸುವುದಿಲ್ಲ. ವಾಸ್ತವದಲ್ಲಿ, ಕೆಲವು ಸನ್ನಿವೇಶಗಳು ದೋಷಿಯೊಂದಿಗೆ ಜೀವಿಸುವಂತೆ ನಿರ್ದೋಷಿಯಾದ ಸಂಗಾತಿಯನ್ನು ಪ್ರಚೋದಿಸಬಹುದು—ವಿಶೇಷವಾಗಿ ದೋಷಿಯು ಯಥಾರ್ಥವಾದ ಪಶ್ಚಾತ್ತಾಪವನ್ನು ತೋರಿಸುವಾಗ ಹೀಗೆ ಮಾಡಬಹುದು. ಆದರೂ ಶಾಸ್ತ್ರಾಧಾರಿತ ವಿವಾಹ ವಿಚ್ಛೇದನಕ್ಕೆ ಕಾರಣವಿರುವವರು ತಮ್ಮ ಸ್ವಂತ ನಿರ್ಣಯವನ್ನು ಮಾಡಬೇಕು ಮತ್ತು ಇದರಿಂದ ಉಂಟಾಗಬಹುದಾದ ಯಾವುದೇ ಪರಿಣಾಮಗಳನ್ನು ಅಂಗೀಕರಿಸಬೇಕು.—ಗಲಾತ್ಯ 6:5.
ಕೆಲವೊಂದು ಅತಿರೇಕ ಸನ್ನಿವೇಶಗಳಲ್ಲಿ, ಒಬ್ಬ ವಿವಾಹ ಸಂಗಾತಿಯು ಜಾರತ್ವವನ್ನು ಮಾಡಿಲ್ಲದಿರುವುದಾದರೂ ಕೆಲವು ಕ್ರೈಸ್ತರು ಅಂಥ ಸಂಗಾತಿಗಳಿಂದ ಪ್ರತ್ಯೇಕವಾಗಲು ಅಥವಾ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಇಂಥ ವಿದ್ಯಮಾನದಲ್ಲಿ ಯಾರು ಸಂಗಾತಿಯನ್ನು ಬಿಟ್ಟುಹೋಗುತ್ತಾರೋ ಅವರು ‘ಮದುವೆಯಾಗದೇ ಉಳಿಯುವಂತೆ ಅಥವಾ ಪುನಃ ಸಮಾಧಾನಮಾಡಿಕೊಳ್ಳುವಂತೆ’ ಬೈಬಲು ಅಗತ್ಯಪಡಿಸುತ್ತದೆ. (1 ಕೊರಿಂಥ 7:11) ಇಂಥ ಒಬ್ಬ ಕ್ರೈಸ್ತನು ಪುನರ್ವಿವಾಹದ ಉದ್ದೇಶದಿಂದ ಭಾವೀ ಸಂಗಾತಿಯನ್ನು ಹುಡುಕಿಕೊಂಡು ಹೋಗಲು ಸ್ವತಂತ್ರನಾಗಿರುವುದಿಲ್ಲ. (ಮತ್ತಾಯ 5:32) ಕೆಲವರು ಪ್ರತ್ಯೇಕವಾಸಕ್ಕೆ ಆಧಾರವಾಗಿ ವೀಕ್ಷಿಸಿರುವಂಥ ಕೆಲವು ಅತಿರೇಕ ಸನ್ನಿವೇಶಗಳನ್ನು ಪರಿಗಣಿಸಿರಿ.
ಉದ್ದೇಶಪೂರ್ವಕವಾಗಿ ಜೀವನಾವಶ್ಯಕತೆಗಳನ್ನು ಒದಗಿಸದಿರುವುದು. ಒಬ್ಬ ಗಂಡನು ತನ್ನ ಕುಟುಂಬಕ್ಕೆ ಒದಗಿಸುವಿಕೆಯನ್ನು ಮಾಡಲು ಶಕ್ತನಾಗಿರುವುದಾದರೂ ಹಾಗೆ ಮಾಡಲು ತಪ್ಪಿಹೋಗುವ ಕಾರಣ ಆ ಕುಟುಂಬವು ಜೀವನದ ಮೂಲಭೂತ ಆವಶ್ಯಕತೆಗಳ ಕೊರತೆಯಿಂದಾಗಿ ನಿರ್ಗತಿಕವಾಗಬಹುದು. “ಯಾವನಾದರೂ ತನ್ನ . . . ಮನೆವಾರ್ತೆಯ ಸದಸ್ಯರಿಗೆ ಅಗತ್ಯವಿರುವುದನ್ನು ಒದಗಿಸದಿದ್ದರೆ ಅವನು ನಂಬಿಕೆಯನ್ನು ನಿರಾಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ” ಎಂದು ಬೈಬಲ್ ತಿಳಿಸುತ್ತದೆ. (1 ತಿಮೊಥೆಯ 5:8) ಇಂಥ ವ್ಯಕ್ತಿಯು ತನ್ನ ಮಾರ್ಗಗಳನ್ನು ಬದಲಾಯಿಸಲು ನಿರಾಕರಿಸುವಲ್ಲಿ, ಕಾನೂನುಬದ್ಧ ಪ್ರತ್ಯೇಕವಾಸವನ್ನು ಪಡೆದುಕೊಳ್ಳುವ ಮೂಲಕ ತನ್ನ ಹಾಗೂ ತನ್ನ ಮಕ್ಕಳ ಹಿತಕ್ಷೇಮವನ್ನು ನೋಡಿಕೊಳ್ಳಬೇಕೊ ಇಲ್ಲವೊ ಎಂಬುದನ್ನು ಹೆಂಡತಿಯು ನಿರ್ಧರಿಸಬೇಕಾಗಿದೆ. ಒಬ್ಬ ಕ್ರೈಸ್ತನು ತನ್ನ ಕುಟುಂಬದ ಆವಶ್ಯಕತೆಗಳನ್ನು ಪೂರೈಸಲು ನಿರಾಕರಿಸುತ್ತಿದ್ದಾನೆ ಎಂಬ ದೋಷಾರೋಪಣೆಗೆ ಕ್ರೈಸ್ತ ಹಿರಿಯರು ಜಾಗರೂಕ ಪರಿಗಣನೆಯನ್ನು ತೋರಿಸಬೇಕಾಗಿದೆ ಎಂಬುದಂತೂ ಖಂಡಿತ. ಒಬ್ಬನು ತನ್ನ ಕುಟುಂಬವನ್ನು ನೋಡಿಕೊಳ್ಳಲು ನಿರಾಕರಿಸುವುದು ಅವನನ್ನು ಬಹಿಷ್ಕಾರದ ಶಿಕ್ಷೆಗೂ ಗುರಿಮಾಡುವ ಸಾಧ್ಯತೆಯಿದೆ.
ವಿಪರೀತ ಶಾರೀರಿಕ ದೌರ್ಜನ್ಯ. ದೌರ್ಜನ್ಯ ನಡೆಸುವ ಸಂಗಾತಿಯು ಎಷ್ಟು ಹಿಂಸಾತ್ಮಕವಾಗಿ ವರ್ತಿಸಬಹುದೆಂದರೆ ದೌರ್ಜನ್ಯಕ್ಕೊಳಗಾಗುವ ಸಂಗಾತಿಯ ಆರೋಗ್ಯ ಮತ್ತು ಜೀವವು ಸಹ ಅಪಾಯದಲ್ಲಿರಬಹುದು. ದೌರ್ಜನ್ಯ ನಡೆಸುತ್ತಿರುವ ಸಂಗಾತಿಯು ಒಬ್ಬ ಕ್ರೈಸ್ತನಾಗಿರುವಲ್ಲಿ, ಸಭೆಯ ಹಿರಿಯರು ಈ ಆರೋಪಗಳ ಬಗ್ಗೆ ವಿಚಾರಣೆ ನಡೆಸಬೇಕು. ಕೋಪದ ಕೆರಳಿಕೆಗಳು ಮತ್ತು ಯಾವಾಗಲೂ ಹಿಂಸಾತ್ಮಕ ವರ್ತನೆಯನ್ನು ತೋರಿಸುವುದು ಬಹಿಷ್ಕಾರಕ್ಕೆ ಆಧಾರವನ್ನು ಕೊಡುತ್ತದೆ.—ಗಲಾತ್ಯ 5:19-21.
ಆಧ್ಯಾತ್ಮಿಕ ಜೀವನಕ್ಕೆ ಸಂಪೂರ್ಣ ಅಪಾಯ. ಒಬ್ಬ ಸಂಗಾತಿಯು ಸತ್ಯಾರಾಧನೆಯನ್ನು ಬೆನ್ನಟ್ಟುವುದನ್ನು ಅಸಾಧ್ಯವನ್ನಾಗಿ ಮಾಡಲು ಇನ್ನೊಬ್ಬ ಸಂಗಾತಿಯು ಸತತವಾಗಿ ಪ್ರಯತ್ನಿಸಬಹುದು ಅಥವಾ ತನ್ನ ಸಂಗಾತಿಯು ಯಾವುದಾದರೊಂದು ರೀತಿಯಲ್ಲಿ ದೇವರ ಆಜ್ಞೆಗಳನ್ನು ಉಲ್ಲಂಘಿಸುವಂತೆ ಒತ್ತಡವನ್ನು ಹೇರಲು ಸಹ ಪ್ರಯತ್ನಿಸಬಹುದು. ಇಂಥ ಸನ್ನಿವೇಶದಲ್ಲಿ, ಅಪಾಯದಲ್ಲಿರುವ ಸಂಗಾತಿಯು “ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವ” ಏಕಮಾತ್ರ ವಿಧವು ಕಾನೂನುಬದ್ಧ ಪ್ರತ್ಯೇಕವಾಸವನ್ನು ಪಡೆದುಕೊಳ್ಳುವುದೇ ಆಗಿದೆಯೋ ಎಂಬುದನ್ನು ನಿರ್ಧರಿಸಬೇಕಾಗಿದೆ.—ಅಪೊಸ್ತಲರ ಕಾರ್ಯಗಳು 5:29.
ಈಗಷ್ಟೇ ಚರ್ಚಿಸಿದ ಅತಿರೇಕ ಸನ್ನಿವೇಶಗಳನ್ನು ಒಳಗೂಡಿರುವ ಎಲ್ಲ ವಿದ್ಯಮಾನಗಳಲ್ಲಿ, ತನ್ನ ಸಂಗಾತಿಯಿಂದ ಪ್ರತ್ಯೇಕವಾಸವನ್ನು ಪಡೆಯಲು ಅಥವಾ ಅವರೊಂದಿಗೆ ಉಳಿಯಲು ಯಾರೊಬ್ಬರೂ ನಿರ್ದೋಷಿ ಸಂಗಾತಿಯ ಮೇಲೆ ಒತ್ತಡ ಹೇರಬಾರದು. ಆಧ್ಯಾತ್ಮಿಕವಾಗಿ ಪ್ರೌಢರಾಗಿರುವ ಸ್ನೇಹಿತರು ಮತ್ತು ಹಿರಿಯರು ಬೆಂಬಲ ಹಾಗೂ ಬೈಬಲ್ ಆಧಾರಿತ ಸಲಹೆಯನ್ನು ನೀಡಬಹುದಾದರೂ, ಒಬ್ಬ ಗಂಡನ ಹಾಗೂ ಹೆಂಡತಿಯ ಮಧ್ಯೆ ಏನು ನಡೆಯುತ್ತದೆ ಎಂಬುದರ ಕುರಿತಾದ ಎಲ್ಲ ವಿವರಗಳನ್ನು ಅವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಯೆಹೋವನು ಮಾತ್ರ ಅದನ್ನು ನೋಡಬಲ್ಲನು. ಒಬ್ಬ ಕ್ರೈಸ್ತ ಹೆಂಡತಿಯು ತನ್ನ ಗಂಡನಿಂದ ಪ್ರತ್ಯೇಕವಾಗಿ ವಾಸಿಸುವ ಒಂದೇ ಕಾರಣಕ್ಕಾಗಿ—ಅಥವಾ ಒಬ್ಬ ಕ್ರೈಸ್ತ ಗಂಡನು ತನ್ನ ಹೆಂಡತಿಯಿಂದ ಪ್ರತ್ಯೇಕವಾಗಿ ವಾಸಿಸುವ ಒಂದೇ ಕಾರಣಕ್ಕಾಗಿ—ತಮ್ಮ ಕೌಟುಂಬಿಕ ಸಮಸ್ಯೆಗಳ ಗಂಭೀರತೆಯನ್ನು ಅತಿಶಯಿಸಿ ಹೇಳುವಲ್ಲಿ, ಅವರು ದೇವರನ್ನು ಅಥವಾ ವಿವಾಹದ ಏರ್ಪಾಡನ್ನು ಗೌರವಿಸದವರಾಗಿದ್ದಾರೆ ಎಂಬುದಂತೂ ನಿಶ್ಚಯ. ಪ್ರತ್ಯೇಕವಾಸದ ಹಿಂದಿರುವ ಯಾವುದೇ ಒಳಸಂಚನ್ನು ಮರೆಮಾಚಲು ಒಬ್ಬನು ಎಷ್ಟೇ ಪ್ರಯತ್ನಿಸುವುದಾದರೂ ಯೆಹೋವನಿಗೆ ಅದು ಖಂಡಿತ ತಿಳಿದಿರುತ್ತದೆ. ವಾಸ್ತವದಲ್ಲಿ “ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ಕಣ್ಣುಗಳಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದೂ ಬಟ್ಟಬಯಲಾದದ್ದೂ ಆಗಿದೆ.” (ಇಬ್ರಿಯ 4:13) ಆದರೆ ವಿಪರೀತ ಅಪಾಯಕರ ಸನ್ನಿವೇಶವು ದೀರ್ಘ ಸಮಯದ ವರೆಗೆ ಇರುವುದಾದರೆ, ಅಂತಿಮೋಪಾಯವಾಗಿ ಪ್ರತ್ಯೇಕವಾಸವನ್ನು ಆಯ್ಕೆಮಾಡುವ ಒಬ್ಬ ಕ್ರೈಸ್ತನನ್ನು ಯಾರೊಬ್ಬರೂ ಟೀಕಿಸಬಾರದು. ಎಷ್ಟೆಂದರೂ ಅಂತಿಮವಾಗಿ “ನಾವೆಲ್ಲರು ದೇವರ ನ್ಯಾಯಾಸನದ ಮುಂದೆ ನಿಲ್ಲುವೆವು.”—ರೋಮನ್ನರಿಗೆ 14:10-12.