ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr18 ಏಪ್ರಿಲ್‌ ಪು. 1-5
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
  • ಉಪಶೀರ್ಷಿಕೆಗಳು
  • ಏಪ್ರಿಲ್‌ 2-8
  • ಏಪ್ರಿಲ್‌ 9-15
  • ಏಪ್ರಿಲ್‌ 16-22
  • ಏಪ್ರಿಲ್‌ 23-29
  • ಏಪ್ರಿಲ್‌ 30–ಮೇ 6
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
mwbr18 ಏಪ್ರಿಲ್‌ ಪು. 1-5

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಏಪ್ರಿಲ್‌ 2-8

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 26

“ಪಸ್ಕ ಹಬ್ಬ ಮತ್ತು ಕ್ರಿಸ್ತನ ಮರಣದ ಸ್ಮರಣೆ—ಹೋಲಿಕೆಗಳು ಮತ್ತು ವ್ಯತ್ಯಾಸಗಳು”

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ಪಸ್ಕದ ಊಟ

ಪಸ್ಕದ ಊಟಕ್ಕೆ ಆವಶ್ಯಕವಾಗಿದ್ದ ವಸ್ತುಗಳು ಇವು: (1) ಸುಟ್ಟ ಕುರಿಮರಿ (ಆ ಕುರಿಮರಿಯ ಯಾವ ಎಲುಬನ್ನೂ ಮುರಿಯಬಾರದಿತ್ತು) (2) ಹುಳಿಯಿಲ್ಲದ ರೊಟ್ಟಿ (3) ಕಹಿ ಪಲ್ಯ. (ವಿಮೋ 12:5, 8; ಅರ 9:11) ಮಿಷ್ನಕ್ಕೆ ಅನುಸಾರ, ಈ ಕಹಿಪಲ್ಯದಲ್ಲಿ ಲೆಟಿಸ್‌ ಸೊಪ್ಪು, ಚಿಕೋರಿ ಗಿಡ, ಖಾರಸಸ್ಯ, ಎಂಡಿವ್‌ ಗಿಡ ಅಥವಾ ಕಾಡು ಸೇವಂತಿಗಳಿದ್ದಿರಬಹುದು. ಇವೆಲ್ಲವು ಇಸ್ರಾಯೇಲ್ಯರಿಗೆ ಐಗುಪ್ತದಲ್ಲಿ ಅವರಿಗಾದ ಕಟು ದಾಸತ್ವವನ್ನು ನೆನಪಿಸಿತ್ತು ಎಂದು ವ್ಯಕ್ತ. ಯೇಸು ಹುಳಿಯಿಲ್ಲದ ರೊಟ್ಟಿಯನ್ನು ತನ್ನ ಪರಿಪೂರ್ಣ ಮಾನವ ದೇಹದ ಸಂಕೇತವಾಗಿ ಬಳಸಿದನು. (ಮತ್ತಾ 26:26) ಅಪೊಸ್ತಲ ಪೌಲನು ಯೇಸುವನ್ನು ‘ನಮ್ಮ ಪಸ್ಕದ ಕುರಿ’ ಎಂದು ಕರೆದನು. (1ಕೊರಿಂ 5:7) ಒಂದನೆಯ ಶತಮಾನದೊಳಗೆ, (4) ದ್ರಾಕ್ಷಾಮದ್ಯವನ್ನು ಸಹ ಪಸ್ಕದ ಊಟದ ಭಾಗವಾಗಿ ನೀಡಲಾಯಿತು. ಯಜ್ಞವಾಗಿ ಸುರಿಸಲ್ಪಡಲಿದ್ದ ತನ್ನ ರಕ್ತವನ್ನು ಸೂಚಿಸಲು ಯೇಸು ದ್ರಾಕ್ಷಾಮದ್ಯವನ್ನು ಉಪಯೋಗಿಸಿದನು.—ಮತ್ತಾ 26:27, 28.

ಮತ್ತಾ 26:26​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸೂಚಿಸುತ್ತದೆ: ಇದರ ಗ್ರೀಕ್‌ ಪದರೂಪ ‘ಎಸ್ಟಿನ್‌’. ಇದಕ್ಕೆ “ಸೂಚಿಸು, ಸಾಂಕೇತಿಸು, ಪ್ರತಿನಿಧಿಸು, ಪರವಾಗಿನಿಲ್ಲು” ಎಂಬರ್ಥವಿದೆ. ಇದರ ಅರ್ಥವು ಅಪೊಸ್ತಲರಿಗೆ ಗೊತ್ತಿತ್ತು. ಯಾಕೆಂದರೆ ಆ ಸಂದರ್ಭದಲ್ಲಿ ಯೇಸುವಿನ ಪರಿಪೂರ್ಣ ದೇಹ ಅವರ ಕಣ್ಣ ಮುಂದಿತ್ತು. ಮಾತ್ರವಲ್ಲ ಅವರು ಆಗತಾನೇ ತಿನ್ನಲಿಕ್ಕಿದ್ದ ಹುಳಿಯಿಲ್ಲದ ರೊಟ್ಟಿ ಸಹ ಅವರ ಮುಂದಿತ್ತು. ಹಾಗಾಗಿ ಆ ರೊಟ್ಟಿ ಅವನ ಅಕ್ಷರಾರ್ಥಕ ದೇಹವಾಗಿರಲು ಸಾಧ್ಯವಿರಲಿಲ್ಲ. ಇದೇ ಗ್ರೀಕ್‌ ಪದವನ್ನು ಮತ್ತಾ 12:7​ರಲ್ಲಿ ಸಹ ಬಳಸಲಾಗಿದೆ ಎಂದು ಗಮನಿಸುವುದು ಸೂಕ್ತ. ಈ ಪದವನ್ನು ಅನೇಕ ಬೈಬಲ್‌ ಭಾಷಾಂತರಗಳು “ಸೂಚಿಸುತ್ತದೆ” ಎಂದೇ ಭಾಷಾಂತರಿಸಿವೆ.

ಮತ್ತಾ 26:28​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಒಡಂಬಡಿಕೆಯ ರಕ್ತ: ಯೆಹೋವನ ಮತ್ತು ಅಭಿಷಿಕ್ತ ಕ್ರೈಸ್ತರ ನಡುವೆ ಇರುವ ಒಡಂಬಡಿಕೆಯೆ ಹೊಸ ಒಡಂಬಡಿಕೆ. ಯೇಸುವಿನ ಯಜ್ಞದ ಮೂಲಕ ಇದು ಜಾರಿಗೆ ಬಂತು. (ಇಬ್ರಿ 8:10) ಮೋಶೆಯು ಮಧ್ಯಸ್ಧನಾದಾಗ ಮತ್ತು ಸೀನಾಯಿ ಬೆಟ್ಟದ ಮೇಲೆ ಇಸ್ರಾಯೇಲ್ಯರೊಂದಿಗೆ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಜಾರಿಗೆ ತಂದಾಗ ಬಳಸಿದ ಪದಗಳನ್ನೇ ಯೇಸು ಇಲ್ಲಿ ಬಳಸಿದ್ದಾನೆ. (ವಿಮೋ 24:8; ಇಬ್ರಿ 9:19-21) ದೇವರ ಮತ್ತು ಇಸ್ರಾಯೇಲ್ಯರ ನಡುವಿನ ಧರ್ಮಶಾಸ್ತ್ರದ ಒಡಂಬಡಿಕೆಯು ಹೋರಿ ಮತ್ತು ಹೋತಗಳ ರಕ್ತದಿಂದ ಸ್ಥಿರೀಕರಿಸಲ್ಪಟ್ಟಿತು. ಹಾಗೆಯೇ ಯೆಹೋವನು ಆಧ್ಯಾತ್ಮಿಕ ಇಸ್ರಾಯೇಲ್ಯರೊಂದಿಗೆ ಮಾಡಿದ ಹೊಸ ಒಡಂಬಡಿಕೆಯನ್ನು ಯೇಸುವಿನ ರಕ್ತವು ಸ್ಥಿರೀಕರಿಸಿತು. ಈ ಹೊಸ ಒಡಂಬಡಿಕೆಯು ಕ್ರಿ.ಶ 33​ರ ಪಂಚಾಶತ್ತಮದಂದು ಜಾರಿಗೆ ಬಂತು.—ಇಬ್ರಿ 9:14, 15.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 26:17​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ: ಹುಳಿಯಿಲ್ಲದ ರೊಟ್ಟಿಯ ಹಬ್ಬ ನೈಸಾನ್‌ 15​ಕ್ಕೆ ಆರಂಭಿಸತ್ತಿತ್ತು. ಇದನ್ನು ನೈಸಾನ್‌ 14​ರ ಪಸ್ಕಹಬ್ಬದ ಮರುದಿನ ಆಚರಿಸುತ್ತಿದ್ದರು. ಇದು ಏಳು ದಿನಗಳ ತನಕ ನಡೆಯುತ್ತಿತ್ತು. (ಪರಿಶಿಷ್ಟ. ಬಿ15 ನೋಡಿ.) ಆದರೆ ಯೇಸುವಿನ ದಿನಗಳಲ್ಲಿ ಪಸ್ಕವು ಈ ಹಬ್ಬಕ್ಕೆ ಬಹು ನಿಕಟವಾಗಿ ಜೋಡಿಸಲ್ಪಟ್ಟಿತ್ತು. ಎಷ್ಟೆಂದರೆ ಕೆಲವು ಸಲ ನೈಸಾನ್‌ 14ನ್ನೂ ಸೇರಿಸಿ ಎಲ್ಲಾ ಎಂಟು ದಿನಗಳನ್ನು ‘ಹುಳಿಯಿಲ್ಲದ ರೊಟ್ಟಿಯ ಹಬ್ಬ’ ಎಂದು ಸೂಚಿಸಲಾಗುತ್ತಿತ್ತು. (ಲೂಕ 22:1) ಈ ಸನ್ನಿವೇಶದಲ್ಲಿ ‘ಹಬ್ಬದ ಮೊದಲನೆಯ ದಿನ’ ಎಂಬ ಪದ ಸರಣಿಯನ್ನು ‘ಹಬ್ಬಕ್ಕೆ ಮುಂಚೆಯೇ’ ಎಂದು ಅನುವಾದಿಸ ಸಾಧ್ಯವಿದೆ. (ಯೋಹಾ 1:15, 30 ಹೋಲಿಸಿ, ಇಲ್ಲಿ ಗ್ರೀಕ್‌ ಪದವಾದ [ಪ್ರೋಟೊಸ್‌ “ಮೊದಲನೆ”] ಎಂಬುದನ್ನು “ಮುಂಚೆಯೇ” ಎಂದು ಭಾಷಾಂತರಿಸಲಾಗಿದೆ.) ಹೀಗೆ ಶಿಷ್ಯರ ಪ್ರಶ್ನೆ ನೈಸಾನ್‌ 13​ರಂದು ಕೇಳಲಾಗಿತ್ತು ಎಂಬುದಕ್ಕೆ ಮೂಲ ಗ್ರೀಕ್‌ ಭಾಷೆ ಮತ್ತು ಯೆಹೂದ ಸಂಪ್ರದಾಯವು ಸಮ್ಮತಿ ನೀಡುತ್ತದೆ. ನೈಸಾನ್‌ 13​ರ ಹಗಲು ಹೊತ್ತಿನಲ್ಲಿ ಶಿಷ್ಯರು ಪಸ್ಕಕ್ಕಾಗಿ ತಯಾರು ಮಾಡಿದರು ಮತ್ತು “ಸಂಜೆಯಾದಾಗ” ಅಂದರೆ ನೈಸಾನ್‌ 14​ರ ಆರಂಭದಲ್ಲಿ ಅವರು ಪಸ್ಕವನ್ನು ಆಚರಿಸಿದರು.—ಮಾರ್ಕ 14:16, 17.

ಮತ್ತಾ 26:39​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಈ ಪಾತ್ರೆ . . . ಬಿಟ್ಟುಹೋಗಲಿ: “ಪಾತ್ರೆ” ಎಂಬ ಪದವನ್ನು ಬೈಬಲು ಕೆಲವೊಮ್ಮೆ ಸಾಂಕೇತಿಕವಾಗಿ ದೇವರ ಚಿತ್ತವನ್ನು ಸೂಚಿಸಲು ಬಳಸುತ್ತದೆ. ಅಥವಾ ಒಬ್ಬನಿಗೆ ಮಾಡಲು “ನೇಮಿಸಲ್ಪಟ್ಟ ಭಾಗವನ್ನು” ಅದು ಸೂಚಿಸುತ್ತದೆ. (ಮತ್ತಾ 20:22​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ದೇವದೂಷಣೆ ಮತ್ತು ರಾಜದ್ರೋಹದ ಆರೋಪವಿದ್ದವನಾಗಿ ಯೇಸು ಸತ್ತನು. ಇದರಿಂದಾಗಿ ದೇವರ ಮೇಲೆ ಬರಸಾಧ್ಯವಿದ್ದ ನಿಂದೆಯ ಬಗ್ಗೆ ಯೇಸು ಬಹಳ ಚಿಂತಿತನಾಗಿದ್ದನು. ಇದರಿಂದ “ಈ ಪಾತ್ರೆ” ನನ್ನನ್ನು ಬಿಟ್ಟುಹೋಗಲಿ ಎಂದು ಪ್ರಾರ್ಥಿಸಲು ಅವನು ಪ್ರೇರಿಸಲ್ಪಟ್ಟನು.

ಏಪ್ರಿಲ್‌ 9-15

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 27-28

“ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ—ಯಾಕೆ, ಎಲ್ಲಿ ಮತ್ತು ಹೇಗೆ?”

ಮತ್ತಾ 28:19​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಶಿಷ್ಯರನ್ನಾಗಿ ಮಾಡಿರಿ: ಇದರ ಗ್ರೀಕ್‌ ಕ್ರಿಯಾಪದ ರೂಪ ಮಾ-ಥಿ-ಟ್ಯೂವೊ. ಇದನ್ನು ಶಿಷ್ಯರನ್ನಾಗಿ ಮಾಡುವ ಉದ್ದೇಶದಿಂದ ಅಥವಾ ವಿದ್ಯಾರ್ಥಿಗಳನ್ನಾಗಿ ಮಾಡುವ ಉದ್ದೇಶದಿಂದ “ಬೋಧಿಸುವುದು” ಎಂದು ಭಾಷಾಂತರಿಸ ಸಾಧ್ಯವಿದೆ. (ಮತ್ತಾ 13:52​ರಲ್ಲಿ ಇದು “ಬೋಧಿಸಲ್ಪಟ್ಟ” ಎಂದು ಭಾಷಾಂತರವಾಗಿರುವುದನ್ನು ಹೋಲಿಸಿ.) “ದೀಕ್ಷಾಸ್ನಾನ ಮಾಡಿಸಿ” ಮತ್ತು “ಬೋಧಿಸಿ” ಎಂಬುದು ಕ್ರಿಯಾಪದಗಳಾಗಿವೆ. ಹಾಗಾಗಿ “ಶಿಷ್ಯರನ್ನಾಗಿ ಮಾಡಿರಿ” ಎಂಬ ಆಜ್ಞೆಯಲ್ಲಿ ಏನೆಲ್ಲ ಕೂಡಿವೆಯೆಂದು ಅವು ತಿಳಿಸುತ್ತವೆ.

ಎಲ್ಲಾ ಜನಾಂಗಗಳ ಜನರನ್ನು: ಇದರ ಅಕ್ಷರಾರ್ಥ ಭಾಷಾಂತರ ‘ಎಲ್ಲಾ ಜನಾಂಗಗಳಿಗೆ’ ಎಂದಾಗಿದೆ. ಆದರೂ ಈ ಪದಗಳು ಎಲ್ಲ ಜನಾಂಗಗಳ ಜನರಿಗೆ ಸೂಚಿಸುತ್ತವೆಂದು ಪೂರ್ವಾಪರವು ತೋರಿಸುತ್ತದೆ. ಏಕೆಂದರೆ ಅವರಿಗೆ ದೀಕ್ಷಾಸ್ನಾನ ಮಾಡಿಸಿ ಎಂಬದು ಪುಲ್ಲಿಂಗದಲ್ಲಿದ್ದು ಜನರನ್ನು ಸೂಚಿಸುತ್ತದೆಯೆ ಹೊರತು ಜನಾಂಗಗಳನ್ನಲ್ಲ. ಗ್ರೀಕ್‌ ಭಾಷೆಯಲ್ಲಿ ಜನಾಂಗಗಳು ಎಂಬುದು ನಪುಂಸಕ ಲಿಂಗದಲ್ಲಿದೆ. “ಎಲ್ಲ ಜನಾಂಗಗಳ ಜನರಿಗೆ” ಸಾರುವ ಈ ಆಜ್ಞೆ ಹೊಸದಾಗಿತ್ತು. ಯೇಸುವಿನ ಸುವಾರ್ತಾ ಸೇವೆಗೆ ಮುಂಚೆ ಯೆಹೋವನನ್ನು ಆರಾಧಿಸಲು ಬಯಸಿದ್ದ ಅನ್ಯಜನರಿಗೆ ಇಸ್ರಾಯೇಲಿಗೆ ಬರಲು ಸ್ವಾಗತವಿತ್ತು ಎಂದು ಶಾಸ್ತ್ರವಚನಗಳು ಸೂಚಿಸುತ್ತವೆ. (1ಅರ 8:41-43) ಆದರೆ ಈ ಹೊಸ ಆಜ್ಞೆಯಲ್ಲಿ ಸಾರುವ ಕೆಲಸವನ್ನು ಯೆಹೂದ್ಯರಲ್ಲದವರಿಗೂ ವಿಸ್ತರಿಸುವಂತೆ ಯೇಸು ಶಿಷ್ಯರಿಗೆ ಆಜ್ಞಾಪಿಸಿದ್ದಾನೆ. ಹೀಗೆ ಶಿಷ್ಯರನ್ನಾಗಿ ಮಾಡುವ ಈ ಕ್ರಿಸ್ತೀಯ ಸೇವೆಯ ಲೋಕವ್ಯಾಪಕ ವಿಸ್ತಾರವನ್ನು ಒತ್ತಿಹೇಳಿದ್ದಾನೆ.—ಮತ್ತಾ 10:1, 5-7; ಪ್ರಕ 7:9; ಮತ್ತಾ 24:14​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ಮತ್ತಾ 28:20​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವರಿಗೆ ಬೋಧಿಸಿರಿ: “ಬೋಧಿಸಿರಿ” ಎಂಬುದರ ಗ್ರೀಕ್‌ ಪದರೂಪ ಭಾಷಾಂತರವು ಶಿಕ್ಷಣ ಮತ್ತು ವಿವರಣೆಗಳನ್ನು ಕೊಟ್ಟು ಬೋಧಿಸುವುದು ಮಾತ್ರವಲ್ಲ ತರ್ಕಗಳ ಮೂಲಕ ಮತ್ತು ಪುರಾವೆಗಳನ್ನು ಕೊಡುವ ಮೂಲಕ ಜನರಿಗೆ ಕಲಿಸುವುದನ್ನು ಕೂಡ ಸೂಚಿಸುತ್ತದೆ. (ಮತ್ತಾ 3:1; 4:23​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ಯೇಸು ಆಜ್ಞಾಪಿಸಿದ ಎಲ್ಲಾ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸುವುದು ಒಂದು ಮುಂದುವರಿಯುವ ಕಾರ್ಯಗತಿ. ಇದರಲ್ಲಿ ಯೇಸು ಕಲಿಸಿದ್ದನ್ನು ಬೋಧಿಸುವುದು, ಅವನ ಬೋಧನೆಗಳನ್ನು ಅನ್ವಯಿಸುವುದು ಮತ್ತು ಅವನ ಮಾದರಿಯನ್ನು ಅನುಸರಿಸುವುದು ಸೇರಿದೆ.—ಯೋಹಾ 13:17; ಎಫೆ 4:21; 1ಪೇತ್ರ 2:21.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮತ್ತಾ 27:51​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ತೆರೆ: ಈ ಸುಂದರವಾದ ಅಲಂಕೃತ ಪರದೆಯು ದೇವಾಲಯದಲ್ಲಿ ಅತಿಪವಿತ್ರ ಸ್ಥಳವನ್ನು ಪವಿತ್ರ ಸ್ಥಳದಿಂದ ಪ್ರತ್ಯೇಕಿಸಿತ್ತು. ಇದು ತುಂಬ ಭಾರವಾದ ಪರದೆ. ಸುಮಾರು 18 ಮೀಟರ್‌ (60 ಅಡಿ) ಉದ್ದ, 9 ಮೀಟರ್‌ (30 ಅಡಿ) ಅಗಲ ಮತ್ತು 7.4 ಸೆಂಟಿಮೀಟರ್‌ (2.9 ಇಂಚು) ದಪ್ಪವಿತ್ತೆಂದು ಯೆಹೂದಿ ಸಂಪ್ರದಾಯವು ಸೂಚಿಸುತ್ತದೆ. ಈ ಪರದೆಯನ್ನು ಇಬ್ಭಾಗವಾಗಿ ಹರಿದ ಮೂಲಕ ಯೆಹೋವನು ತನ್ನ ಕುಮಾರನ ಕೊಲೆಗಾರರ ಮೇಲೆ ಕ್ರೋಧವನ್ನು ವ್ಯಕ್ತಪಡಿಸಿದನು ಮಾತ್ರವಲ್ಲ ಸ್ವರ್ಗ ಪ್ರವೇಶವು ಈಗ ಸಾಧ್ಯವೆಂಬುದನ್ನೂ ಅದು ಸೂಚಿಸಿತು.—ಇಬ್ರಿ 10:19, 20; ಗ್ಲಾಸರಿ ನೋಡಿ.

ಪವಿತ್ರಸ್ಥಳ: ಇದರ ಗ್ರೀಕ್‌ ಪದರೂಪ ನಾ-ವೋಸ್‌ ಎಂಬುದು ಇದನ್ನು ಪವಿತ್ರ ಮತ್ತು ಅತಿಪವಿತ್ರ ಅಂಕಣಗಳಿರುವ ನಡುವಣ ಕಟ್ಟಡವಾಗಿ ವಿವರಿಸುತ್ತದೆ.

ಮತ್ತಾ 28:7​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವನು ಎಬ್ಬಿಸಲ್ಪಟ್ಟಿದ್ದಾನೆ ಎಂದು ಅವನ ಶಿಷ್ಯರಿಗೆ ಹೇಳಿರಿ: ಯೇಸುವಿನ ಪುನರುತ್ಥಾನದ ಬಗ್ಗೆ ಮೊದಲು ಹೇಳಲ್ಪಟ್ಟದ್ದು ಶಿಷ್ಯೆಯರಾದ ಈ ಸ್ತ್ರೀಯರಿಗೆ. ಮಾತ್ರವಲ್ಲ ಆ ಸುದ್ಧಿಯನ್ನು ಬೇರೆ ಶಿಷ್ಯರಿಗೆ ತಿಳಿಸುವಂತೆಯೂ ಈ ಸ್ತ್ರೀಯರಿಗೇ ಹೇಳಲಾಗಿತ್ತು. (ಮತ್ತಾ 28:2, 5, 7) ಅಶಾಸ್ತ್ರೀಯವಾದ ಯೆಹೂದಿ ಸಂಪ್ರದಾಯದಲ್ಲಿ ಸ್ತ್ರೀಯರಿಗೆ ಕೋರ್ಟಿನಲ್ಲಿ ಸಾಕ್ಷಿನೀಡಲು ಅನುಮತಿ ಇರಲಿಲ್ಲ. ಸ್ಪಷ್ಟ ವ್ಯತ್ಯಾಸದಲ್ಲಿ, ಯೆಹೋವನ ದೂತನಾದರೊ ಈ ಸಂತಸದ ನೇಮಕವನ್ನು ಕೊಡುವ ಮೂಲಕ ಆ ಸ್ತ್ರೀಯರನ್ನು ಗೌರವಿಸಿದನು.

ಏಪ್ರಿಲ್‌ 16-22

ಬೈಬಲಿನಲ್ಲಿರುವ ರತ್ನಗಳು | ಮಾರ್ಕ 1-2

“ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ”

ಮಾರ್ಕ 2:9​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಯಾವುದು ಸುಲಭ?: ಒಬ್ಬನು ತಾನು ಪಾಪಗಳನ್ನು ಕ್ಷಮಿಸಬಲ್ಲನು ಎಂದು ಬಾಯಲ್ಲಿ ಹೇಳುವುದು ಸುಲಭ. ಯಾಕೆಂದರೆ ಹಾಗೆ ವಾದ ಮಂಡಿಸಲು ಅವನಿಗೆ ದೃಶ್ಯ ಪುರಾವೆಯು ಬೇಕಾಗಿಲ್ಲ. ಆದರೆ ‘ಎದ್ದು. . . ನಡೆ’ ಎಂದು ಹೇಳಲು ಒಂದು ಅದ್ಭುತ ನಡಿಸುವ ಅವಶ್ಯವಿದೆ. ಆಗ ಯೇಸುವಿಗೆ ಪಾಪಗಳನ್ನು ಕ್ಷಮಿಸುವ ಅಧಿಕಾರವಿದೆ ಎಂದು ಎಲ್ಲರಿಗೆ ತಿಳಿಯುತ್ತದೆ. ಈ ವೃತ್ತಾಂತ ಮತ್ತು ಯೆಶಾ 33:24​ರ ವಚನವು ಅಸ್ವಸ್ಥತೆಗೂ ನಮ್ಮ ಪಾಪಪೂರ್ಣ ಸ್ಥಿತಿಗೂ ಸಂಬಂಧವಿದೆ ಎಂದು ತಿಳಿಸುತ್ತದೆ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮಾರ್ಕ 1:11​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ವಾಣಿಯು ಆಕಾಶದೊಳಗಿಂದ ಬಂತು: ಸುವಾರ್ತಾ ಪುಸ್ತಕಗಳಲ್ಲಿ ಯೆಹೋವನು ಮಾನವರೊಂದಿಗೆ ನೇರವಾಗಿ ಮಾತಾಡಿದ ಮೂರು ಸಂದರ್ಭಗಳಲ್ಲಿ ಇದು ಮೊದಲನೇದ್ದು.—ಮಾರ್ಕ 9:7; ಯೋಹಾ 12:28​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ನೀನು ನನ್ನ ಮಗ: ಆಧ್ಯಾತ್ಮಿಕ ಜೀವಿಯಾಗಿದ್ದ ಯೇಸು ದೇವರ ಮಗನಾಗಿದ್ದನು. (ಯೋಹಾ 3:16) ಮನುಷ್ಯನಾಗಿ ಹುಟ್ಟಿದಂದಿನಿಂದ ಯೇಸು ಪರಿಪೂರ್ಣ ಆದಾಮನಂತೆ ‘ದೇವರ ಮಗನಾಗಿದ್ದನು.’ (ಲೂಕ 1:35; 3:38) ಆದರೂ ಇಲ್ಲಿ ದೇವರ ಮಾತುಗಳು ಯೇಸುವಿನ ಬರೇ ಪರಿಚಯ ಮಾಡಿಸುವುದಕ್ಕಿಂತ ಹೆಚ್ಚಿನ ಅರ್ಥಗಳಿಂದ ಕೂಡಿದೆ. ದೇವರ ಪವಿತ್ರಾತ್ಮದ ಸುರಿಸುವಿಕೆಯು ಜೊತೆಗೂಡಿದ್ದ ಈ ಘೋಷಣೆಯ ಮೂಲಕ ಮನುಷ್ಯ ಯೇಸುವನ್ನು ದೇವರು ತನ್ನ ಆಧ್ಯಾತ್ಮಿಕ ಪುತ್ರನಾಗಿ ಆದುಕೊಂಡನು. ಸ್ವರ್ಗದ ಜೀವನಕ್ಕೆ ಮರಳುವ ನಿರೀಕ್ಷೆಯೊಂದಿಗೆ ಯೇಸು ಆಗ ‘ಪುನಃ ಹುಟ್ಟಿದನು’ ಮತ್ತು ದೇವರ ನೇಮಿತ ರಾಜನೂ ಮಹಾ ಯಾಜಕನೂ ಆಗಲಿಕ್ಕಾಗಿ ಪವಿತ್ರಾತ್ಮದಿಂದ ಅಭಿಷೇಕವನ್ನು ಹೊಂದಿದನು.—ಯೋಹಾ 3:3-6; 6:51; ಲೂಕ 1:31-33; ಇಬ್ರಿ 2:17; 5:1, 4-10; 7:1-3 ಹೋಲಿಸಿ.

ನಾನು ನಿನ್ನನ್ನು ಮೆಚ್ಚಿದ್ದೇನೆ: ಅಥವಾ “ನಾನು ನಿನ್ನಲ್ಲಿ ತುಂಬ ಸಂತುಷ್ಟನು; ನಿನ್ನಲ್ಲಿ ಬಹಳ ಸಂತೋಷಿಸುತ್ತೇನೆ” ಇತ್ಯಾದಿ. ಇದೇ ಮಾತುಗಳನ್ನು ಮತ್ತಾ 12:18​ರಲ್ಲಿ ಬಳಸಲಾಗಿದೆ, ಇದು ವಾಗ್ದತ್ತ ಮೆಸ್ಸೀಯ ಅಥವಾ ಕ್ರಿಸ್ತನ ಕುರಿತು ಯೆಶಾ 42:1​ರಿಂದ ತೆಗೆದ ಉಲ್ಲೇಖವಾಗಿದೆ. ಪವಿತ್ರಾತ್ಮದ ಸುರಿಸುವಿಕೆ ಮತ್ತು ತನ್ನ ಮಗನ ಕುರಿತ ದೇವರ ಘೋಷಣೆಯು ಯೇಸು ವಾಗ್ದತ್ತ ಮೆಸ್ಸೀಯನೆಂಬುದನ್ನು ಸ್ಪಷ್ಟವಾಗಿ ಗುರುತಿಸಿತ್ತು.—ಮತ್ತಾ 3:17; 12:18​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ಮಾರ್ಕ 2:28​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸಬ್ಬತ್ತಿಗೆ. . . ಒಡೆಯನು: ಯೇಸು ಈ ಪದಸರಣಿಯನ್ನು ತನಗೆ ಅನ್ವಯಿಸಿಕೊಂಡನು. (ಮತ್ತಾ 12:8; ಲೂಕ 6:5) ತನ್ನ ಸ್ವರ್ಗೀಯ ತಂದೆಯು ಆಜ್ಞಾಪಿಸಿದ ಕೆಲಸಗಳನ್ನು ಮಾಡುವ ಸಲುವಾಗಿ ಸಬ್ಬತ್‌ ಯೇಸುವಿನ ವಶದಲ್ಲಿದೆ ಎಂದು ಇದು ಸೂಚಿಸಿತು. (ಯೋಹಾ 5:19; 10:37, 38 ಹೋಲಿಸಿ.) ಯೇಸು ತನ್ನ ಮಹತ್ತಾದ ಕೆಲವು ಅದ್ಭುತಗಳನ್ನು ಮಾಡಿದ್ದು ಸಬ್ಬತ್‌ ದಿನದಲ್ಲಿಯೇ. ರೋಗಿಗಳನ್ನು ಸಹ ಸಬ್ಬತಿನಲ್ಲಿ ಗುಣಮಾಡಿದ್ದನು. (ಲೂಕ 13:10-13; ಯೋಹಾ 5:5-9; 9:1-14) ರಾಜ್ಯದಾಳಿಕೆಯ ಕೆಳಗೆ ಯೇಸು ಮಾನವರಿಗೆ ಸಬ್ಬತ್‌ ವಿಶ್ರಾಂತಿಗೆ ಸಮಾನವಾದ ಉಪಶಮನವನ್ನು ತರಲಿದ್ದಾನೆ ಎಂಬುದಕ್ಕೆ ಇದು ಮುನ್‌ ಛಾಯೆಯಾಗಿತ್ತು.—ಇಬ್ರಿಯ 10:1.

ಏಪ್ರಿಲ್‌ 23-29

ಬೈಬಲಿನಲ್ಲಿರುವ ರತ್ನಗಳು | ಮಾರ್ಕ 3-4

“ಸಬ್ಬತ್‌ ದಿನದಲ್ಲಿ ವಾಸಿಮಾಡುವುದು”

ಮಾರ್ಕ 3:5​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಕೋಪದಿಂದ ನೋಡಿ . . . ಬಹಳವಾಗಿ ದುಃಖಿಸಿ: ಧಾರ್ಮಿಕ ಮುಖಂಡರ ವಿಚಾರಹೀನ ಹೃದಯದ ಸಂವೇದನ ಶೂನ್ಯತೆಯನ್ನು ನೋಡಿ ಯೇಸು ಈ ರೀತಿ ಪ್ರತಿಕ್ರಿಯಿಸಿದ್ದನ್ನು ದಾಖಲಿಸಿದವನು ಮಾರ್ಕನು ಮಾತ್ರ. (ಮತ್ತಾ 12:13; ಲೂಕ 6:10) ಅತಿಭಾವುಕತೆಯಿದ್ದ ಪೇತ್ರನು ತಾನೇ ಯೇಸುವಿನ ಭಾವನೆಗಳ ಈ ಸೂಕ್ಷ್ಮ ವರ್ಣನೆಯ ಮೂಲವಾಗಿದ್ದಿರಬಹುದು.—“ಮಾರ್ಕ ಪುಸ್ತಕದ ಪರಿಚಯ” ನೋಡಿ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮಾರ್ಕ 3:29​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಪವಿತ್ರಾತ್ಮದ ವಿರುದ್ಧ ದೂಷಣೆ: ದೇವರ ಅಥವಾ ಪವಿತ್ರ ವಿಷಯಗಳ ಬಗ್ಗೆ ಅವಮಾನಕರ, ಹಾನಿಕಾರಕ ಅಥವಾ ನಿಂದಾತ್ಮಕ ಮಾತುಗಳೇ ದೇವದೂಷಣೆಯಾಗಿದೆ. ಪವಿತ್ರಾತ್ಮವು ದೇವರಿಂದ ತಾನೇ ಬರುವುದರಿಂದ ಅದನ್ನು ಬೇಕುಬೇಕೆಂದು ವಿರೋಧಿಸುವುದು ಮತ್ತು ಅದರ ಕೆಲಸವನ್ನು ಅಲ್ಲಗಳೆಯುವುದು ದೇವರ ವಿರುದ್ಧ ಮಾಡುವ ದೂಷಣೆಯಾಗಿದೆ. ಮತ್ತಾ 12:24, 28 ಮತ್ತು ಮಾರ್ಕ 3:22 ತೋರಿಸುವ ಪ್ರಕಾರ ಧಾರ್ಮಿಕ ಮುಖಂಡರು ಯೇಸು ಅದ್ಭುತಗಳನ್ನು ಮಾಡಿದಾಗ ದೇವರಾತ್ಮದ ಕಾರ್ಯವನ್ನು ನೋಡಿದ್ದರು. ಆದರೂ ಅದು ಪಿಶಾಚನಾದ ಸೈತಾನನ ಶಕ್ತಿಯೆಂದು ಹೇಳಿದರು. ಇದು ಪವಿತ್ರಾತ್ಮದ ವಿರುದ್ಧ ದೂಷಣೆ.

ಶಾಶ್ವತ ಪಾಪದ ಅಪರಾಧ: ಬುದ್ಧಿಪೂರ್ವಕವಾಗಿ ಬೇಕುಬೇಕೆಂದು ಮಾಡಿದ ಪಾಪಕ್ಕೆ ಇದು ಸೂಚಿಸುವಂತೆ ತೋರುತ್ತದೆ. ಇದರ ಪರಿಣಾಮಗಳು ಶಾಶ್ವತ, ಏಕೆಂದರೆ ಇಂಥ ಪಾಪವನ್ನು ಮುಚ್ಚಲು ಯಾವ ಯಜ್ಞವೂ ಇಲ್ಲ. ಈ ವಚನದಲ್ಲಿರುವ ಪವಿತ್ರಾತ್ಮದ ದೂಷಣೆಯ ಬಗ್ಗೆ ಇರುವ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ಮತ್ತು ಮತ್ತಾ 12:31 ರಲ್ಲಿರುವ ಸಮಾನ ವೃತ್ತಾಂತದ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ನಮ್ಮ ಕ್ರೈಸ್ತ ಜೀವನ

ಮಾರ್ಕ 4:9​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಆಲಿಸಲು ಕಿವಿಗಳಿರುವವನು ಆಲಿಸಲಿ: ಯೇಸು ಬಿತ್ತುವವನ ದೃಷ್ಟಾಂತವನ್ನು ಹೇಳುವುದಕ್ಕಿಂತ ಮುಂಚೆ, “ಕಿವಿಗೊಡಿ” ಎಂದು ಹೇಳಿದನು. (ಮಾರ್ಕ 4:3) ತನ್ನ ಶಿಷ್ಯರು ತನ್ನ ಸಲಹೆಗೆ ಜಾಗರೂಕತೆಯಿಂದ ಕಿವಿಗೊಡುವುದು ಎಷ್ಟು ಪ್ರಾಮುಖ್ಯ ಎಂದು ಹೇಳುತ್ತಾ ಈ ದೃಷ್ಟಾಂತವನ್ನು ಮುಕ್ತಾಯಗೊಳಿಸಿದನು. ಇದೇ ರೀತಿಯ ಬುದ್ಧಿ ಮಾತುಗಳು ಮತ್ತಾ 11:15; 13:9, 43; ಮಾರ್ಕ 4:23; ಲೂಕ 8:8; 14:35; ಪ್ರಕ 2:7, 11, 17, 29; 3:6, 13, 22; 13:9​ರಲ್ಲಿದೆ.

ಏಪ್ರಿಲ್‌ 30–ಮೇ 6

ಬೈಬಲಿನಲ್ಲಿರುವ ರತ್ನಗಳು | ಮಾರ್ಕ 5-6

“ಯೇಸುವಿಗೆ ತೀರಿಹೋಗಿರುವ ನಮ್ಮ ಆಪ್ತರನ್ನು ಪುನರುತ್ಥಾನ ಮಾಡುವ ಶಕ್ತಿಯಿದೆ”

ಮಾರ್ಕ 5:39​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸತ್ತಿಲ್ಲ . . . ನಿದ್ರೆಮಾಡುತ್ತಿದ್ದಾಳೆ: ಬೈಬಲಿನಲ್ಲಿ ಸಾವು ಅನೇಕವೇಳೆ ನಿದ್ರೆಗೆ ಹೋಲಿಸಲ್ಪಟ್ಟಿದೆ. (ಕೀರ್ತ 13:3; ಯೋಹಾ 11:11-14; ಅಕಾ 7:60; 1ಕೊರಿಂ 7:39; 15:51; 1ಥೆಸ 4:13) ಯೇಸು ಆ ಹುಡುಗಿಯನ್ನು ಪುನಃ ಬದುಕಿಸಲಿದ್ದನು. ಜನರನ್ನು ಲಘು ನಿದ್ರೆಯಿಂದ ಹೇಗೆ ಎಬ್ಬಿಸಲು ಸಾಧ್ಯವೊ ಹಾಗೆ ಅವರನ್ನು ಸತ್ತವರೊಳಗಿಂದಲೂ ಎಬ್ಬಿಸ ಸಾಧ್ಯವೆಂದು ತೋರಿಸಲು ಯೇಸು ಹಾಗೆ ಹೇಳಿರಬಹುದು. ಆ ಹುಡುಗಿಯನ್ನು ಪುನರುತ್ಥಾನಗೊಳಿಸುವ ಶಕ್ತಿ ಅವನ ತಂದೆಯಿಂದ ಬಂತು. ಏಕೆಂದರೆ ತಂದೆಯು “ಸತ್ತವರನ್ನು ಬದುಕಿಸುವಾತನೂ ಇಲ್ಲದಿರುವವುಗಳನ್ನು ಅವು ಇವೆಯೊ ಎಂಬಂತೆ ಕರೆಯುವಾತನೂ” ಆಗಿದ್ದಾನೆ.—ರೋಮ 4:17.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಮಾರ್ಕ 5:19​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವರಿಗೆ ತಿಳಿಸು: ತಾನು ಮಾಡಿದ ಅದ್ಭುತಗಳ ಕುರಿತು ಯಾರಿಗೂ ತಿಳಿಸಬಾರದೆಂದು ಯೇಸು ಈ ಹಿಂದೆ ಅಪ್ಪಣೆ ಮಾಡುತ್ತಿದ್ದನು. (ಮಾರ್ಕ 1:44; 3:12; 7:36) ಆದರೆ ಇಲ್ಲಿ ಮಾಡಿದ ಅದ್ಭುತವನ್ನು ಈ ಮನುಷ್ಯನು ತನ್ನ ಸಂಬಂಧಿಕರಿಗೆ ತಿಳಿಸುವಂತೆ ಯೇಸು ಹೇಳಿದನು. ಕಾರಣವೇನಾಗಿರಬಹುದೆಂದರೆ ಆ ಪ್ರದೇಶವನ್ನು ಬಿಟ್ಟು ಹೋಗುವಂತೆ ಯೇಸುವಿಗೆ ಹೇಳಲಾಗಿತ್ತು ಮತ್ತು ಅವನು ವೈಯಕ್ತಿಕವಾಗಿ ಅಲ್ಲಿನ ಜನರಿಗೆ ಸಾಕ್ಷಿಕೊಡಲು ಸಾಧ್ಯವಿರಲಿಲ್ಲ. ಅದಲ್ಲದೆ ಹಂದಿಗಳ ನಷ್ಟದಿಂದ ಹರಡಬಹುದಾಗಿದ್ದ ಕೆಟ್ಟ ವರದಿಗಳನ್ನು ಪ್ರತಿರೋಧಿಸಲಿಕ್ಕಾಗಿ ಸಹ ಅವನು ಹಾಗೆ ಹೇಳಿದ್ದಿರಬಹುದು.

ಮಾರ್ಕ 6:11​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿ: ಈ ಅಂಗಸನ್ನೆಯು ದೇವರಿಂದ ಬರುವ ತೀರ್ಪಿಗೆ ಶಿಷ್ಯರು ಜವಾಬ್ದಾರರಲ್ಲ ಎಂದು ತೋರಿಸಿತು. ಇದಕ್ಕೆ ಸಮಾನವಾದ ಪದಸರಣಿಯು ಮತ್ತಾ 10:14; ಲೂಕ 9:5​ರಲ್ಲಿ ಸಹ ಇದೆ. ಮಾರ್ಕ ಮತ್ತು ಲೂಕರು ಅವರಿಗೆ ಸಾಕ್ಷಿಯಾಗಿ [ಅಥವಾ, “ವಿರುದ್ಧವಾದ” ಸಾಕ್ಷಿಯಾಗಿ] ಎಂಬ ಪದಸರಣಿಯನ್ನು ಇದಕ್ಕೆ ಕೂಡಿಸಿದ್ದಾರೆ. ಪೌಲ ಮತ್ತು ಬಾರ್ನಬರು ಪಿಸಿದ್ಯರ ಅಂತಿಯೋಕ್ಯದಲ್ಲಿ ಈ ಆದೇಶವನ್ನು ಪಾಲಿಸಿದರು. (ಅ.ಕಾ. 13:51) ಇದೇ ರೀತಿಯಲ್ಲಿ ಪೌಲನು ಕೊರಿಂಥದಲ್ಲಿ ತನ್ನ ಬಟ್ಟೆಗಳನ್ನು ಝಾಡಿಸಿದ ಮೂಲಕ ‘ನಿಮ್ಮ ರಕ್ತಾಪರಾಧವು ನಿಮ್ಮ ಮೇಲೆಯೇ ಇರಲಿ. ನಾನು ನಿರ್ದೋಷಿ’ ಎಂಬ ವಿವರಣಾತ್ಮಕ ಪದಗಳನ್ನು ಕೂಡಿಸಿದನು. (ಅ.ಕಾ. 18:6) ಇಂಥ ಅಂಗಸನ್ನೆಯ ವಿಷಯದಲ್ಲಿ ಶಿಷ್ಯರಿಗೆ ಈ ಮೊದಲೇ ಗೊತ್ತಿದ್ದಿರಬಹುದು. ಧರ್ಮಶ್ರದ್ಧೆಯ ಯೆಹೂದ್ಯರು ಅನ್ಯರ ದೇಶದಲ್ಲಿ ಪಯಣ ಮಾಡಿದನಂತರ ಪುನಃ ತಮ್ಮ ಯೆಹೂದಿ ಪ್ರದೇಶಕ್ಕೆ ಪ್ರವೇಶಿಸುವ ಮೊದಲು ತಮ್ಮ ಕೆರಗಳಿಂದ ಧೂಳನ್ನು ಝಾಢಿಸುತ್ತಿದ್ದರು. ಯಾಕೆಂದರೆ ಆ ಧೂಳು ಅಶುದ್ಧವೆಂದು ಅವರೆಣಿಕೆಯಾಗಿತ್ತು. ಆದರೂ ಯೇಸು ತನ್ನ ಶಿಷ್ಯರಿಗೆ ಈ ಅಪ್ಪಣೆಯನ್ನು ಕೊಟ್ಟಾಗ ಅವನ ಮನಸ್ಸಿಲ್ಲಿದ್ದ ಅರ್ಥವು ಬೇರೆಯಾಗಿತ್ತೆಂದು ವ್ಯಕ್ತ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ