ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr18 ಜುಲೈ ಪು. 1-7
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
  • ಉಪಶೀರ್ಷಿಕೆಗಳು
  • ಜುಲೈ 2-8
  • ಜುಲೈ 9-15
  • ಜುಲೈ 16-22
  • ಜುಲೈ 23-29
  • ಜುಲೈ 30–ಆಗಸ್ಟ್‌ 5
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
mwbr18 ಜುಲೈ ಪು. 1-7

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಜುಲೈ 2-8

ಬೈಬಲಿನಲ್ಲಿರುವ ರತ್ನಗಳು | ಲೂಕ 6-7

“ಉದಾರವಾಗಿ ಅಳೆದು ಕೊಡಿ”

ಲೂಕ 6:37​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಕ್ಷಮಿಸುತ್ತಾ ಇರಿ ಆಗ ನಿಮ್ಮನ್ನೂ ಕ್ಷಮಿಸಲಾಗುವುದು: ಅಥವಾ “ಬಿಡುಗಡೆ ಮಾಡುತ್ತಾ ಇರಿ, ಆಗ ನಿಮ್ಮನ್ನೂ ಬಿಡುಗಡೆ ಮಾಡಲಾಗುವುದು.” “ಕ್ಷಮಿಸು” ಎಂಬ ಗ್ರೀಕ್‌ ಪದದ ಅಕ್ಷರಾರ್ಥವು ‘ಸ್ವತಂತ್ರಗೊಳಿಸು; ಕಳುಹಿಸಿಬಿಡು; ಬಿಡುಗಡೆಮಾಡು (ಉದಾ: ಕೈದಿಯನ್ನು)’ ಎಂದಾಗಿದೆ. ಈ ಪೂರ್ವಾಪರದಲ್ಲಿ, ತೀರ್ಪುಮಾಡು ಮತ್ತು ಖಂಡಿಸು ಪದಗಳಿಗೆ ಭಿನ್ನವಾಗಿ, ಅದು ‘ಬಿಟ್ಟುಬಿಡು’ ಮತ್ತು ‘ಕ್ಷಮಿಸು’ ಎಂಬ ಅರ್ಥವನ್ನು ಕೊಡುತ್ತದೆ. ಒಬ್ಬನು ಶಿಕ್ಷೆ ಅಥವಾ ದಂಡನೆಗೆ ಪಾತ್ರನೆಂದು ಕಂಡರೂ ಅವನನ್ನು ಕ್ಷಮಿಸಿ ಬಿಡುವುದನ್ನು ಅದು ಸೂಚಿಸುತ್ತದೆ.

ಲೂಕ 6:38​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಕೊಡುವುದನ್ನು ರೂಢಿಮಾಡಿಕೊಳ್ಳಿರಿ: ಅಥವಾ ‘ಕೊಡುತ್ತಾ ಇರಿ.’ ಇಲ್ಲಿ ಉಪಯೋಗಿಸಲಾದ ಗ್ರೀಕ್‌ ಕ್ರಿಯಾಪದವನ್ನು ‘ಕೊಡುವುದು’ ಎಂದು ಭಾಷಾಂತರಿಸಬಹುದು. ಅದು ಮುಂದುವರಿಯುವ ಕ್ರಿಯೆಯನ್ನು ಸೂಚಿಸುತ್ತದೆ.

ಲೂಕ 6:38​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನಿಮ್ಮ ಮಡಿಲು: ಇದರ ಗ್ರೀಕ್‌ ಪದದ ಅಕ್ಷರಾರ್ಥ ‘ನಿಮ್ಮ ಎದೆ (ವಕ್ಷಸ್ಥಳ)’ ಎಂದಾಗಿದೆ. ಆದರೆ ಈ ಪೂರ್ವಾಪರದಲ್ಲಿ ಇದು ಒಂದು ಸಡಿಲವಾದ ಮೇಲಂಗಿಯ ಮೇಲೆ ಸೊಂಟ-ಪಟ್ಟಿ ಕಟ್ಟುವಾಗ ಬರುವ ನೆರಿಗೆಗಳಿಗೆ ಸೂಚಿಸಿರುವಂತಿದೆ. ‘ಮಡಿಲಿಗೆ ಹಾಕುವರು’ ಎಂಬುದು ಅಲ್ಲಿನ ಒಂದು ಪದ್ಧತಿಗೆ ಸೂಚಿಸುತ್ತಿರಬಹುದು. ಕೆಲವು ಮಾರಾಟಗಾರರು, ಗಿರಾಕಿಗಳು ವಸ್ತುಗಳನ್ನು ಖರೀದಿಸಿದಾಗ ಅವನ್ನು ಈ ನೆರಿಗೆಗಳಲ್ಲಿ ತುಂಬಿಸಿ ಕೊಡುತ್ತಿದ್ದರು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಲೂಕ 7:35​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ತನ್ನ ಕ್ರಿಯೆಗಳ (ತನ್ನ ಮಕ್ಕಳ, ನೂತನ ಲೋಕ ಭಾಷಾಂತರ): ಅಥವಾ ತನ್ನ “ಫಲಿತಾಂಶಗಳ.” ಇಲ್ಲಿ ವಿವೇಕವನ್ನು ವ್ಯಕ್ತೀಕರಿಸಲಾಗಿದೆ. ವಿವೇಕಕ್ಕೆ ಮಕ್ಕಳಿರುವುದಾಗಿ ಚಿತ್ರಿಸಲಾಗಿದೆ. ಇದೇ ರೀತಿಯ ಹೇಳಿಕೆಯು ಮತ್ತಾ 11:19​ರಲ್ಲಿದೆ. ಇಲ್ಲಿ ವಿವೇಕವು ‘ಕ್ರಿಯೆಗಳ’ ಮೂಲಕ ಎಂಬ ವ್ಯಕ್ತೀಕರಣವಿದೆ. ವಿವೇಕದ ಮಕ್ಕಳು ಅಥವಾ ಕ್ರಿಯೆಗಳು ಅಂದರೆ ಸ್ನಾನಿಕ ಯೋಹಾನ ಮತ್ತು ಯೇಸುವಿನಿಂದ ನೀಡಲಾದ ನಿಜ ಪುರಾವೆಗಳಾಗಿವೆ. ಅವರ ವಿರುದ್ಧವಾಗಿ ಮಾಡಲಾದ ಆರೋಪಗಳನ್ನು ಸುಳ್ಳೆಂದು ಆ ಪುರಾವೆಗಳು ಸಾಬೀತುಪಡಿಸಿದವು. ವಾಸ್ತವದಲ್ಲಿ ಯೇಸು ಹೀಗೆ ಹೇಳುವಂತಿದೆ: “ಅವರ ನೀತಿಯ ಕ್ರಿಯೆಗಳನ್ನು ಮತ್ತು ನಡತೆಯನ್ನು ನೋಡಿರಿ. ಆಗ ಅವರ ವಿರುದ್ಧ ಮಾಡಿದ ಆರೋಪಗಳು ಸುಳ್ಳೆಂದು ನಿಮಗೆ ತಿಳಿದುಬರುವುದು.”

ಜುಲೈ 9-15

ಬೈಬಲಿನಲ್ಲಿರುವ ರತ್ನಗಳು | ಲೂಕ 8-9

“ಯೇಸುವಿನ ಹಿಂಬಾಲಕನಾಗಲು ಏನು ಮಾಡಬೇಕು?”

it-2 494

ಗೂಡು

ಶಾಸ್ತ್ರಿಗಳಲ್ಲಿ ಒಬ್ಬನು ಬಂದು ಯೇಸುವಿಗೆ, “ಬೋಧಕನೇ, ನೀನು ಎಲ್ಲಿಗೆ ಹೋಗಲಿರುವುದಾದರೂ ನಾನು ನಿನ್ನನ್ನು ಹಿಂಬಾಲಿಸುವೆ” ಎಂದು ಹೇಳಿದನು. ಆಗ ಯೇಸು ಉತ್ತರಿಸಿದ್ದು: “ನರಿಗಳಿಗೆ ಗುಹೆಗಳಿವೆ. ಆಕಾಶದ ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯ ಕುಮಾರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ.” (ಮತ್ತಾ 8:19, 20; ಲೂಕ 9:57, 58) ಆ ಮನುಷ್ಯನು ತನ್ನ ಹಿಂಬಾಲಕನಾಗಲು ಸಾಮಾನ್ಯವಾದ ಸುಖ ಸೌಕರ್ಯಗಳನ್ನೂ ತ್ಯಜಿಸಬೇಕು ಮತ್ತು ಯೆಹೋವನಲ್ಲಿ ಪೂರ್ಣಭರವಸೆ ಇಡಬೇಕು ಎಂದು ಯೇಸು ಇಲ್ಲಿ ಒತ್ತಿಹೇಳಿದನು. ಈ ತತ್ವವು ‘ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು’ ಎಂದು ಶಿಷ್ಯರಿಗೆ ಕಲಿಸಿದ ಮಾದರಿ ಪ್ರಾರ್ಥನೆಯಲ್ಲಿಯೂ ಇದೆ. ಜೊತೆಗೆ, “ಹೀಗೆ ನಿಮ್ಮಲ್ಲಿರುವ ಯಾವನಾದರೂ ತನ್ನ ಎಲ್ಲ ಆಸ್ತಿಗೆ ವಿದಾಯ ಹೇಳದಿದ್ದರೆ ನನ್ನ ಶಿಷ್ಯನಾಗಿರಲಾರನು” ಎಂಬ ಮಾತಿನಲ್ಲೂ ಇದೇ ತತ್ವವಿದೆ.—ಮತ್ತಾ 6:11; ಲೂಕ 14:33.

ಲೂಕ 9:59, 60​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನನ್ನ ತಂದೆಯನ್ನು ಹೂಣಿಟ್ಟು: ಈ ವಾಕ್ಯರಚನೆಯು ಅವನ ತಂದೆಯು ಆಗಲೇ ಸತ್ತಿದ್ದನೆಂಬುದನ್ನು ಸೂಚಿಸುವುದಿಲ್ಲ. ಇಲ್ಲವೆ ಶವಸಂಸ್ಕಾರ ಮಾಡಲು ಮಾತ್ರ ಸಮಯಬೇಕಂತ ಅವನು ಕೇಳುತ್ತಿದ್ದನೆಂದೂ ಸೂಚಿಸುವುದಿಲ್ಲ. ಒಂದು ವೇಳೆ ತಂದೆ ಸತ್ತಿದ್ದರೆ, ಅವನು ಅಲ್ಲಿ ನಿಂತು ಯೇಸುವಿನೊಂದಿಗೆ ಮಾತಾಡುತ್ತಿರಲಿಲ್ಲ. ಪುರಾತನ ಮಧ್ಯ-ಪ್ರಾಚ್ಯ ದೇಶಗಳಲ್ಲಿ, ಕುಟುಂಬದಲ್ಲಿ ಸಾವು ಸಂಭವಿಸಿದಾಗ ಆ ಕೂಡಲೇ ಶವಸಂಸ್ಕಾರದ ಏರ್ಪಾಡುಗಳು ನಡೆಯುತ್ತಿದ್ದವು. ಸಾಮಾನ್ಯವಾಗಿ ಅದೇ ದಿನ ಶವವನ್ನು ಹೂಣಿಡುತ್ತಿದ್ದರು. ಆದ್ದರಿಂದ ಅವನ ತಂದೆ ಬಹುಶಃ ಕಾಯಿಲೆ ಬಿದ್ದಿರಬೇಕು ಇಲ್ಲದಿದ್ದರೆ ಅವನಿಗೆ ವಯಸ್ಸಾಗಿರಬೇಕು. ಹಾಗಾಗಿ ಆ ಮನುಷ್ಯನ ತಂದೆ ಸತ್ತಿರಲಿಕ್ಕಿಲ್ಲ. ಕಾಯಿಲೆ ಬಿದ್ದಿರುವ ಅಥವಾ ಅಗತ್ಯದಲ್ಲಿರುವ ತಂದೆಯನ್ನು ಬಿಟ್ಟುಬಿಡು ಅಂತ ಆ ಮನುಷ್ಯನಿಗೆ ಯೇಸು ಹೇಳಿರಲಿಕ್ಕಿಲ್ಲ. ಏಕೆಂದರೆ ಇಂಥ ಆರೈಕೆಯನ್ನು ಮಾಡಲು ಅವನ ಕುಟುಂಬದಲ್ಲಿ ಬೇರೆ ಸದಸ್ಯರು ಕೂಡ ಇದ್ದಿರಬಹುದು. (ಮತ್ತಾ 7:9-13) ವಾಸ್ತವದಲ್ಲಿ, ಆ ಮನುಷ್ಯ ಹೀಗೆ ಹೇಳುತ್ತಿದ್ದನು: ‘ನಾನು ನಿನ್ನನ್ನು ಹಿಂಬಾಲಿಸುವೆ, ಆದರೆ ತಂದೆ ಜೀವಂತವಿರುವ ತನಕ ಆಗುವುದಿಲ್ಲ. ನನ್ನ ತಂದೆ ಸಾಯುವ ತನಕ ಮತ್ತು ಅವನನ್ನು ನಾನು ಹೂಣುವ ತನಕ ಕಾಯಬೇಕು.’ ಯೇಸುವಿನ ದೃಷ್ಟಿಯಲ್ಲಿ ಆ ಮನುಷ್ಯನು ನಿಜವಾಗಿ ದೇವರ ರಾಜ್ಯವನ್ನು ತನ್ನ ಜೀವನದಲ್ಲಿ ಪ್ರಥಮವಾಗಿಡಲಿಲ್ಲ. ಆ ಒಳ್ಳೇ ಅವಕಾಶವನ್ನು ಅವನು ಕಳೆದುಕೊಂಡನು.—ಲೂಕ 9:60, 62.

ಸತ್ತವರೇ ತಮ್ಮ ಸತ್ತವರನ್ನು ಹೂಣಿಡಲಿ: ಲೂಕ 9:59​ರ ಅಧ್ಯಯನ ಬೈಬಲಿನ ಮಾಹಿತಿಯು ತೋರಿಸುವ ಪ್ರಕಾರ, ಯೇಸು ಮಾತಾಡಿದ ಆ ಮನುಷ್ಯನ ತಂದೆಯು ಸತ್ತಿರಲಿಲ್ಲ, ಕಾಯಿಲೆ ಬಿದ್ದಿದ್ದನು ಅಥವಾ ಮುದುಕನಾಗಿದ್ದನು. ಆದುದರಿಂದಲೇ ಯೇಸು ವಾಸ್ತವದಲ್ಲಿ ‘ಆಧ್ಯಾತ್ಮಿಕವಾಗಿ ಸತ್ತ ಜನರೇ ಶಾರೀರಿಕವಾಗಿ ಸತ್ತವರನ್ನು ಹೂಣಿಡಲಿ’ ಎಂದು ಹೇಳಿದ್ದನೆಂಬುದು ವ್ಯಕ್ತ. ಅಂದರೆ ಅವನ ಸಂಬಂಧಿಕರು ಅವನ ತಂದೆಯನ್ನು ಸಾಯುವ ತನಕ ನೋಡಿಕೊಂಡು ಮತ್ತು ಸತ್ತಾಗ ಅವನನ್ನು ಹೂಣುವಂತೆ ಆ ಮನುಷ್ಯನು ಬಿಟ್ಟುಕೊಡಬೇಕಿತ್ತು. ಯೇಸುವನ್ನು ಹಿಂಬಾಲಿಸುವ ಮೂಲಕ ಆ ಮನುಷ್ಯನು ದೇವರ ದೃಷ್ಟಿಯಲ್ಲಿ ಆಧ್ಯಾತ್ಮಿಕವಾಗಿ ನಿತ್ಯಜೀವದ ಹಾದಿಯಲ್ಲಿರುತ್ತಿದ್ದನು. ಆಧ್ಯಾತ್ಮಿಕವಾಗಿ ಸತ್ತವರೊಂದಿಗೆ ಇರುತ್ತಿರಲಿಲ್ಲ. ಆಧ್ಯಾತ್ಮಿಕವಾಗಿ ಜೀವಂತನಾಗಿರಲು ಒಬ್ಬನು ದೇವರ ರಾಜ್ಯವನ್ನು ತನ್ನ ಜೀವನದಲ್ಲಿ ಪ್ರಥಮವಾಗಿಡಬೇಕು ಮತ್ತು ಅದನ್ನು ಎಲ್ಲೆಲ್ಲೂ ಸಾರಬೇಕು ಎಂದು ಯೇಸು ತನ್ನ ಪ್ರತ್ಯುತ್ತರದಲ್ಲಿ ಹೇಳಿದನು.

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ನೇಗಿಲಿಂದ ಉಳುವುದು

ಉಳುವ ಕೆಲಸವನ್ನು ಹೆಚ್ಚಾಗಿ ಶರತ್ಕಾಲದಲ್ಲಿ ಮಾಡಲಾಗುತ್ತದೆ. ಬೇಸಗೆಯ ತಿಂಗಳುಗಳಲ್ಲಿ ಸೂರ್ಯನ ತಾಪದಿಂದ ಬೆಂದು ಬರಡಾದ ನೆಲ ಆಗ ಮಳೆ ನೀರಿನಿಂದ ಮಿಂದು ಮೃದುವಾಗಿರುತ್ತದೆ. (ಪರಿಶಿಷ್ಟ ಬಿ15 ನೋಡಿ.) ಕೆಲವು ನೇಗಿಲುಗಳಲ್ಲಿ ಸಾದಾ ಮರದ ಅಥವಾ ಲೋಹದ ಚೂಪಾದ ತುದಿಗಳಿರುತ್ತವೆ. ಅದನ್ನು ನೇಗಿಲ ಮರಕ್ಕೆ ಜೋಡಿಸಲಾಗುತ್ತದೆ. ಅದನ್ನು ಒಂದು ಅಥವಾ ಹೆಚ್ಚು ಪ್ರಾಣಿಗಳು ಎಳೆದುಕೊಂಡು ಹೋಗುತ್ತವೆ. ಮಣ್ಣನ್ನು ಹದಮಾಡಿದ ಬಳಿಕ ಬೀಜ ಬಿತ್ತಲಾಗುತ್ತದೆ. ಹೀಬ್ರೂ ಶಾಸ್ತ್ರಗ್ರಂಥದ ಅನೇಕ ದೃಷ್ಟಾಂತಗಳಲ್ಲಿ, ಉಳುವ ಈ ಕೆಲಸವನ್ನು ಅನೇಕಬಾರಿ ತಿಳಿಸಲಾಗಿದೆ. ಯಾಕಂದರೆ ಅದು ಬಳಕೆಯಲ್ಲಿದ್ದ ಪರಿಚಿತ ಕೆಲಸ. (ನ್ಯಾಯ 14:18; ಯೆಶಾ 2:4; ಯೆರೆ 4:3; ಮೀಕ 4:3) ಯೇಸು ಪ್ರಮುಖ ಬೋಧನೆಗಳನ್ನು ದೃಷ್ಟಾಂತಿಸಲು ಅನೇಕಸಲ ವ್ಯವಸಾಯದ ಕೆಲಸಗಳನ್ನು ಬಳಸಿದನು. ಉದಾಹರಣೆಗೆ, ಒಬ್ಬನು ಪೂರ್ಣಹೃದಯದ ಶಿಷ್ಯನಾಗುವ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಉಳುವ ಕೆಲಸಕ್ಕೆ ಸೂಚಿಸಿದನು. (ಲೂಕ 9:62) ರೈತನು ಹೊಲವನ್ನು ಉಳುವಾಗ ಹಿಂದಕ್ಕೆ ನೋಡಿದರೆ ಅಂದರೆ, ಅಪಕರ್ಷಿತನಾದರೆ ಅವನ ಉಳುವ ಸಾಲುಗಳು ಡೊಂಕಾಗುತ್ತವೆ. ಅಂತೆಯೇ, ಕ್ರಿಸ್ತನ ಶಿಷ್ಯನು ತನ್ನ ಜವಾಬ್ದಾರಿಗಳನ್ನು ಮಾಡದೆ ಹಿಂದಕ್ಕೆ ನೋಡಿದರೆ ಅಥವಾ ಅಪಕರ್ಷಿತನಾದರೆ ಅವನು ದೇವರ ರಾಜ್ಯಕ್ಕೆ ಯೋಗ್ಯನಾಗಿರುವುದಿಲ್ಲ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಲೂಕ 8:3​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವರಿಗೆ ಉಪಚಾರ ಮಾಡುತ್ತಿದ್ದರು: ಅಥವಾ ‘ಅವರಿಗೆ ಆಸರೆಯಾಗಿದ್ದರು (ಪೋಷಿಸುತ್ತಿದ್ದರು)’ ಇದರ ಗ್ರೀಕ್‌ ಪದ ಡಯಕೊನಿಯೊ ಇತರರ ಶಾರೀರಿಕ ಅಗತ್ಯಗಳನ್ನು ನೋಡಿಕೊಳ್ಳುವುದಕ್ಕೆ ಸೂಚಿಸಬಲ್ಲದು. ಅವರಿಗಾಗಿ ವಸ್ತುಗಳನ್ನು ಖರೀದಿಸುವುದು, ಅಡಿಗೆ ಮಾಡುವುದು, ಊಟ ಬಡಿಸುವುದು ಇತ್ಯಾದಿ. ಲೂಕ 10:40 (‘ಎಲ್ಲ ಕೆಲಸಗಳು’), ಲೂಕ 12:37 (‘ಸೇವೆ’), ಲೂಕ 17:8 (‘ಸೇವೆಮಾಡು’) ಮತ್ತು ಅಕಾ 6:2​ರಲ್ಲಿರುವ (‘ಆಹಾರ ವಿತರಣೆ’) ಪದಗಳನ್ನು ಸಹ ಇದೇ ಅರ್ಥದಲ್ಲಿ ಬಳಸಲಾಗಿದೆ. ಇದೇ ರೀತಿಯ, ಬೇರೆಲ್ಲ ವ್ಯಕ್ತಿಗತ ಸೇವೆಗಳಿಗೂ ಇದು ಸೂಚಿಸಬಲ್ಲದು. 2 ಮತ್ತು 3​ನೇ ವಚನಗಳಲ್ಲಿ ತಿಳಿಸಲಾದ ಸ್ತ್ರೀಯರು ಹೇಗೆ ಯೇಸು ಮತ್ತು ಅವನ ಶಿಷ್ಯರಿಗೆ ಆಸರೆಯಾಗಿದ್ದರೆಂದು ಇಲ್ಲಿ ವಿವರಿಸಲಾಗಿದೆ. ದೇವರು ನೇಮಿಸಿದ ಕೆಲಸವನ್ನು ಅವರು ಪೂರೈಸುವಂತೆ ಆ ಸ್ತ್ರೀಯರು ನೆರವಾದರು. ಹೀಗೆ ಮಾಡುವ ಮೂಲಕ ಅವರು ದೇವರನ್ನು ಮಹಿಮೆಪಡಿಸಿದರು. ಆ ಸ್ತ್ರೀಯರ ಈ ದಯೆಯುಳ್ಳ, ಉದಾರ ಉಪಚಾರಕ್ಕಾಗಿ ಯೆಹೋವನು ಅವರಿಗೆ ಗಣ್ಯತೆ ತೋರಿಸಿದನು. ಹೇಗಂದರೆ, ಮುಂದಿನ ಎಲ್ಲಾ ಸಂತತಿಯವರು ಅದನ್ನು ಓದುವಂತೆ ಬೈಬಲಿನಲ್ಲಿ ಅದನ್ನು ದಾಖಲೆ ಮಾಡಿಸಿದನು. (ಜ್ಞಾನೋ 19:17; ಇಬ್ರಿ 6:10) ಸ್ತ್ರೀಯರ ಕುರಿತ ಇದೇ ಗ್ರೀಕ್‌ ಪದವನ್ನು ಮತ್ತಾ 27:55 ಮತ್ತು ಮಾರ್ಕ 15:41​ರಲ್ಲೂ ಬಳಸಲಾಗಿದೆ.

ಜುಲೈ 16-22

ಬೈಬಲಿನಲ್ಲಿರುವ ರತ್ನಗಳು | ಲೂಕ 10-11

“ನೆರೆಯವನಾದ ಸಮಾರ್ಯದವನ ದೃಷ್ಟಾಂತ”

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ಯೆರೂಸಲೇಮಿನಿಂದ ಯೆರಿಕೋಗೆ ಹೋಗುವ ದಾರಿ

ದಾರಿ (1), ಈ ಚಿಕ್ಕ ವಿಡಿಯೋದಲ್ಲಿ ಯೆರೂಸಲೇಮಿಗೆ ಯೆರಿಕೋವನ್ನು ಜೋಡಿಸಿದ ಆ ಪುರಾತನ ದಾರಿಗೆ ಸಮಾನವಾದ ಒಂದು ದಾರಿಯನ್ನು ತೋರಿಸಲಾಗಿದೆ. ಯೆರೂಸಲೇಮಿನಿಂದ ಯೆರಿಕೋಗೆ ಹೋಗುವ ದಾರಿಯು ಸುಮಾರು 20 ಕಿ.ಮೀ. ಉದ್ದ ಮತ್ತು 1 ಕಿ.ಮೀ. ಬಹು ಕಡಿದಾದ ಇಳಿಜಾರು ಪ್ರದೇಶವಾಗಿತ್ತು. ಕಗ್ಗಾಡಿನ ಈ ಏಕಾಂತ ಪ್ರದೇಶದಲ್ಲಿ ತುಂಬ ದರೋಡೆಗಳು ನಡೆಯುತ್ತಿದ್ದವು. ಹಾಗಾಗಿ ಪ್ರಯಾಣಿಕರ ರಕ್ಷಣೆಗಾಗಿ ಇಲ್ಲಿ ಕಾವಲುಗಾರರನ್ನು ನೇಮಿಸಲಾಗಿತ್ತು. ರೋಮನ್‌ ಯೆರಿಕೋ (2), ಇದು ಯೂದಾಯದ ಅರಣ್ಯ ಪ್ರದೇಶದಿಂದ ಹೊರಡುವ ದಾರಿಯಲ್ಲಿ ನೆಲೆಸಿತ್ತು. ಹಳೆಯ ಯೆರಿಕೋ ಪಟ್ಟಣ (3), ರೋಮನ್‌ ಪಟ್ಟಣದಿಂದ ಯೆರಿಕೋ ಸುಮಾರು 2 ಕಿ.ಮೀ ದೂರದಲ್ಲಿತ್ತು.

ಲೂಕ 10:33, 34​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಒಬ್ಬ ಸಮಾರ್ಯದವನು: ಸಮಾರ್ಯದವರನ್ನು ಯೆಹೂದ್ಯರು ಸಾಮಾನ್ಯವಾಗಿ ತುಚ್ಛವಾಗಿ ನೋಡುತ್ತಿದ್ದರು. ಅವರೊಂದಿಗೆ ಯಾವ ಹೊಕ್ಕು ಬಳಕೆಯನ್ನೂ ಮಾಡುತ್ತಿರಲಿಲ್ಲ. (ಯೋಹಾ 4:9) ತಿರಸ್ಕಾರ ಮತ್ತು ನಿಂದೆಯ ಪದಗಳನ್ನು ಆಡುವುದಕ್ಕೆ ಕೆಲವು ಯೆಹೂದ್ಯರು ‘ಸಮಾರ್ಯದವ’ ಎಂಬ ಪದವನ್ನೂ ಬಳಸುತ್ತಿದ್ದರು. (ಯೋಹಾ 8:48) ಮಿಷ್ನದಲ್ಲಿ, ಒಬ್ಬ ರಬ್ಬಿಯು “ಸಮಾರ್ಯದವರು ಮಾಡಿದ ರೊಟ್ಟಿಯನ್ನು ತಿನ್ನುವವನು ಹಂದಿ ಮಾಂಸವನ್ನು ತಿಂದವನಿಗೆ ಸಮಾನ” ಎಂದು ಹೇಳಿದ್ದನೆಂಬ ಉಲ್ಲೇಖವಿದೆ. (ಶೆಬಿತ್‌ 8:10) ಹೆಚ್ಚಿನ ಯೆಹೂದ್ಯರು ಸಮಾರ್ಯದವರು ಹೇಳುವ ಸಾಕ್ಷ್ಯಗಳನ್ನು ಕೂಡ ನಂಬುತ್ತಿರಲಿಲ್ಲ. ಅವರಲ್ಲಿ ಯಾವನಿಂದಲೂ ಯಾವುದೇ ಸೇವೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಯೆಹೂದ್ಯರಿಗಿದ್ದ ಈ ತಿರಸ್ಕಾರ ಭಾವದ ಬಗ್ಗೆ ಯೇಸು ತಿಳಿದಿದ್ದನು. ಹಾಗಾಗಿ ಒಳ್ಳೆಯ ಸಮಾರ್ಯದವನು ಅಥವಾ ಒಳ್ಳೆಯ ನೆರೆಯವನು ಎಂದು ಹೆಸರುವಾಸಿಯಾದ ಈ ದೃಷ್ಟಾಂತದಲ್ಲಿ ಯೇಸು ಒಂದು ಪ್ರಬಲವಾದ ಅಂಶವನ್ನು ತಿಳಿಸಿದ್ದಾನೆ.

ಅವನ ಗಾಯಗಳ ಮೇಲೆ ಎಣ್ಣೆಯನ್ನೂ ದ್ರಾಕ್ಷಾಮದ್ಯವನ್ನೂ ಸುರಿದು ಅದನ್ನು ಕಟ್ಟಿದನು: ವೈದ್ಯ ಲೂಕನು ಇಲ್ಲಿ ಯೇಸುವಿನ ದೃಷ್ಟಾಂತವನ್ನು ಜಾಗ್ರತೆಯಿಂದ ದಾಖಲೆ ಮಾಡಿದ್ದಾನೆ. ಆ ದಿನಗಳಲ್ಲಿ ಗಾಯಕ್ಕೆ ಬಳಸುತ್ತಿದ್ದ ಔಷಧೋಪಚಾರದ ವಿಧಾನವನ್ನು ವಿವರಿಸಿದ್ದಾನೆ. ಎಣ್ಣೆ ಮತ್ತು ದ್ರಾಕ್ಷಾಮದ್ಯವು ಗಾಯಗಳಿಗೆ ಹಚ್ಚಲು ಬಳಸುತ್ತಿದ್ದ ಮನೇಮದ್ದಾಗಿತ್ತು. ಕೆಲವೊಮ್ಮೆ ಗಾಯವನ್ನು ಮೃದುಗೊಳಿಸಲು ಎಣ್ಣೆಯನ್ನು ಬಳಸುತ್ತಿದ್ದರು. (ಯೆಶಾ 1:6 ಹೋಲಿಸಿ) ದ್ರಾಕ್ಷಾಮದ್ಯದಲ್ಲಿ, ಕೆಲವು ರೋಗಗಳನ್ನು ವಾಸಿ ಮಾಡುವ ಗುಣಗಳಿವೆ. ಅದು ಕೊಳೆಯುವಂತೆ ಬಿಡುವುದಿಲ್ಲ ಮತ್ತು ಸ್ವಲ್ಪ ಮಟ್ಟಿಗೆ ಸೋಂಕು-ನಿವಾರಕವಾಗಿದೆ. ಗಾಯಗಳು ಇನ್ನೂ ಹೆಚ್ಚಾಗದಂತೆ ಹೇಗೆ ಕಟ್ಟಲಾಗುತ್ತಿತ್ತು ಎಂಬದನ್ನೂ ಲೂಕನು ವಿವರಿಸಿದ್ದಾನೆ.

ಒಂದು ವಸತಿಗೃಹ: ಇದರ ಗ್ರೀಕ್‌ ಪದದ ಅಕ್ಷರಾರ್ಥವು “ಎಲ್ಲರನ್ನು ಸ್ವೀಕರಿಸುವ ಅಥವಾ ಸೇರಿಸಿಕೊಳ್ಳುವ ಒಂದು ಸ್ಥಳ” ಎಂದಾಗಿದೆ. ಪ್ರಯಾಣಿಕರಿಗೂ ಅವರ ಪ್ರಾಣಿಗಳಿಗೂ ಇಲ್ಲಿ ಉಳಿದುಕೊಳ್ಳಲು ಇಂಥ ವಸತಿಗೃಹಗಳಲ್ಲಿ ಸ್ಥಳ ಸಿಗುತ್ತಿತ್ತು. ವಸತಿಯ ಯಜಮಾನನು ಪ್ರಯಾಣಿಕರಿಗೆ ಕೆಲವು ಅಗತ್ಯ ವಸ್ತುಗಳನ್ನು ಕೊಡುತ್ತಿದ್ದನು ಮತ್ತು ಹಣ ಕೊಟ್ಟರೆ ತನ್ನ ಪರಾಮರಿಕೆಗೆ ಬಿಡಲ್ಪಟ್ಟವರ ಕಾಳಜಿಯನ್ನೂ ವಹಿಸುತ್ತಿದ್ದನು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಲೂಕ 10:18​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸೈತಾನನು ಈಗಾಗಲೇ ಮಿಂಚಿನಂತೆ ಆಕಾಶದಿಂದ ಬಿದ್ದಿರುವುದನ್ನು ನಾನು ಕಂಡೆನು: ಯೇಸು ಇಲ್ಲಿ ಪ್ರವಾದನಾ ರೂಪವಾಗಿ ಮಾತಾಡುತ್ತಿದ್ದನೆಂಬುದು ವ್ಯಕ್ತ. ಸ್ವರ್ಗದಿಂದ ಸೈತಾನನ ದೊಬ್ಬಲ್ಪಡುವಿಕೆಯು ಆಗಲೇ ಸಂಭವಿಸಿತ್ತೋ ಎಂಬಂತೆ ಅವನು ನೋಡಿದನು. ಆದರೆ ಮೆಸ್ಸೀಯ ರಾಜ್ಯದ ಜನನದೊಂದಿಗೆ ಸ್ವರ್ಗದಲ್ಲಿ ಯುದ್ಧವಾಗುವುದನ್ನು ಮತ್ತು ಸೈತಾನನೂ ಅವನ ದೆವ್ವಗಳೂ ಭೂಮಿಗೆ ಬೀಳುವುದನ್ನು ಪ್ರಕ 12:7-9 ವರ್ಣಿಸುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ನಡೆಯಲಿದ್ದ ಆ ಯುದ್ಧದಲ್ಲಿ ಸೈತಾನ ಮತ್ತು ಅವನ ದೆವ್ವಗಳು ಖಂಡಿತ ಸೋಲುತ್ತವೆಂದು ಯೇಸು ಇಲ್ಲಿ ಸೂಚಿಸುತ್ತಿದ್ದನು. ಹೇಗಂದರೆ ದೇವರು ಆ ಅಪರಿಪೂರ್ಣರಾದ 70 ಮಂದಿ ಶಿಷ್ಯರಿಗೆ ದೆವ್ವಗಳನ್ನು ಬಿಡಿಸುವ ಶಕ್ತಿಯನ್ನು ಆಗಷ್ಟೇ ಕೊಟ್ಟಿದ್ದನು.—ಲೂಕ 10:17.

ಲೂಕ 11:5-9​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸ್ನೇಹಿತನೇ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು: ಮಧ್ಯಪೂರ್ವ ದೇಶಗಳ ಸಂಸ್ಕೃತಿಯಲ್ಲಿ ಅತಿಥಿ ಸತ್ಕಾರವು ಒಂದು ಕರ್ತವ್ಯ. ಆದ್ದರಿಂದ ಇದರಲ್ಲಿ ಒಬ್ಬರನ್ನೊಬ್ಬರು ಮೀರಿಸಲು ಜನರು ಇಷ್ಟಪಡುತ್ತಿದ್ದರು. ಈ ದೃಷ್ಟಾಂತದಲ್ಲಿ ಅದನ್ನೇ ತೋರಿಸಲಾಗಿದೆ. ಅತಿಥಿಯು ಅನಿರೀಕ್ಷಿತ ಸಮಯದಲ್ಲಿ ಅಂದರೆ ಮಧ್ಯರಾತ್ರಿಯಲ್ಲಿ ಬಂದರೂ ಈ ವಿವರವು ಆ ಕಾಲದಲ್ಲಿ ಪ್ರಯಾಣದಲ್ಲಿದ್ದ ಅನಿಶ್ಚಿತತೆಗಳನ್ನೂ ಎತ್ತಿ ತೋರಿಸಬಹುದು, ಆತಿಥೇಯನು ಅವನಿಗೆ ಏನಾದರೂ ತಿನ್ನಲು ಕೊಡಲಿಕ್ಕಾಗಿ ಹಾತೊರೆಯುತ್ತಿದ್ದನು. ಇದಕ್ಕಾಗಿ ತನ್ನ ನೆರೆಯವನಿಗೆ ಆ ತಡರಾತ್ರಿಯಲ್ಲಿ ತೊಂದರೆ ಕೊಟ್ಟಾದರೂ ರೊಟ್ಟಿಯನ್ನು ಸಾಲವಾಗಿ ತರುವಂತೆ ಆತಿಥೇಯನು ಪ್ರೇರೇಪಿಸಲ್ಪಟ್ಟನು.

ನನಗೆ ತೊಂದರೆ ಕೊಡಬೇಡ: ಈ ದೃಷ್ಟಾಂತದಲ್ಲಿರುವ ಆ ನೆರೆಯವನಿಗೆ ಸಹಾಯಮಾಡಲು ಮನಸ್ಸಿರಲಿಲ್ಲ. ಅವನು ಸ್ನೇಹಪರನಲ್ಲದ ಕಾರಣದಿಂದಲ್ಲ ಬದಲಾಗಿ ಅವನು ಈಗಾಗಲೇ ಮಲಗಿದ್ದನು. ಆ ಕಾಲದ ಬಡವರ ಮನೆಗಳಲ್ಲಿ ಒಂದೇ ಒಂದು ದೊಡ್ಡ ಕೋಣೆ ಇರುತ್ತಿತ್ತು. ಒಂದುವೇಳೆ ಮನೆಯ ಯಜಮಾನನು ಎದ್ದರೆ ಇಡೀ ಕುಟುಂಬಕ್ಕೇ ತೊಂದರೆಯಾಗುತ್ತಿತ್ತು, ಮಲಗಿದ್ದ ಮಕ್ಕಳು ಸಹ ನಿದ್ದೆಯಿಂದ ಎಚ್ಚರಗೊಳ್ಳುವ ಸಾಧ್ಯತೆಯಿತ್ತು.

ಧೈರ್ಯದಿಂದ ಪಟ್ಟುಹಿಡಿಯುವಿಕೆ: ಇಲ್ಲಿ ಬಳಸಲಾದ ಗ್ರೀಕ್‌ ಪದವನ್ನು ಅಕ್ಷರಶಃ ‘ಸಭ್ಯತೆಯ ಕೊರತೆ’ ಅಥವಾ ‘ನಾಚಿಕೆಗೇಡಿತನ’ ಎಂದು ಭಾಷಾಂತರಿಸಲು ಸಾಧ್ಯವಿದೆ. ಆದರೂ ಈ ಪೂರ್ವಾಪರದಲ್ಲಿ ಧೈರ್ಯದಿಂದ ಪಟ್ಟುಹಿಡಿದು ಕೇಳುವುದನ್ನು ಅಥವಾ ಒತ್ತಾಯದಿಂದ ಕೇಳುವುದನ್ನು ಅದು ಸೂಚಿಸುತ್ತದೆ. ಯೇಸುವಿನ ದೃಷ್ಟಾಂತದ ಈ ಮನುಷ್ಯನು ತನಗೆ ಬೇಕಾದದ್ದನ್ನು ಪಟ್ಟು ಹಿಡಿದು ಕೇಳುವುದಕ್ಕೆ ಹಿಂಜರಿಯುವುದಿಲ್ಲ ಇಲ್ಲವೆ ನಾಚಿಕೆಪಡುವುದಿಲ್ಲ. ತನ್ನ ಶಿಷ್ಯರು ಸಹ ಪ್ರಾರ್ಥಿಸುವಾಗ ಪಟ್ಟುಹಿಡಿದು ಪ್ರಾರ್ಥಿಸಬೇಕೆಂದು ಯೇಸು ಅವರಿಗೆ ಹೇಳಿದನು.—ಲೂಕ 11:9, 10.

ಜುಲೈ 23-29

ಬೈಬಲಿನಲ್ಲಿರುವ ರತ್ನಗಳು | ಲೂಕ 12-13

“ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು”

ಲೂಕ 12:6​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಗುಬ್ಬಿಗಳು: ಸ್ತ್ರೌತಿಆನ್‌ ಎಂಬುದು ಅಲ್ಪಾರ್ಥಕವುಳ್ಳ ಗ್ರೀಕ್‌ ಪದ. ಯಾವುದೇ ಚಿಕ್ಕ ಗಾತ್ರದ ಪಕ್ಷಿ ಎಂಬ ಅರ್ಥವನ್ನು ಕೊಡುತ್ತದೆ. ಇದನ್ನು ಹೆಚ್ಚಾಗಿ ಗುಬ್ಬಿಗಳಿಗೆ ಸೂಚಿಸಲಾಗುತ್ತದೆ. ಅವು ಆಹಾರಕ್ಕಾಗಿ ಮಾರಲ್ಪಡುವ ಬೇರೆಲ್ಲ ಪಕ್ಷಿಗಳಿಗಿಂತ ಅತಿ ಕನಿಷ್ಟ ಬೆಲೆಯ ಪಕ್ಷಿಗಳು.

ಲೂಕ 12:7​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ: ಮನುಷ್ಯನ ತಲೆಗೂದಲುಗಳ ಸಂಖ್ಯೆ ಸರಾಸರಿ 100,000 ಕ್ಕಿಂತ ಹೆಚ್ಚಿದೆ ಎಂದು ಹೇಳಲಾಗುತ್ತದೆ. ಇಂಥ ಅತಿಸೂಕ್ಷ್ಮ ವಿವರಗಳ ವೈಯಕ್ತಿಕ ಜ್ಞಾನವು ಯೆಹೋವನಿಗಿದೆ. ಇದು ಆತನು ಪ್ರತಿಯೊಬ್ಬ ಕ್ರಿಸ್ತನ ಶಿಷ್ಯನಲ್ಲಿ ಅತ್ಯಾಸಕ್ತನಾಗಿದ್ದಾನೆ ಎಂದು ಖಚಿತಪಡಿಸುತ್ತದೆ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಲೂಕ 13:24​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಶಕ್ತಿಯುತವಾಗಿ ಪ್ರಯಾಸಪಡಿರಿ: ಅಥವಾ “ಹೆಣಗಾಡುತ್ತಾ ಇರಿ” ಇಕ್ಕಟ್ಟಾದ ಬಾಗಲಿನಿಂದ ಒಳಗೆ ಹೋಗಲಿಕ್ಕಾಗಿ ಪೂರ್ಣಾತ್ಮದ ಕ್ರಿಯೆಗಳನ್ನು ನಡಿಸುವ ಅಗತ್ಯವನ್ನು ಯೇಸುವಿನ ಈ ಬುದ್ಧಿವಾದ ಒತ್ತಿಹೇಳುತ್ತದೆ. ಈ ವಚನವನ್ನು ಬೇರೆ ಬೇರೆ ಪರಾಮರ್ಶೆ ಕೃತಿಗಳು ಈ ರೀತಿ ತರ್ಜುಮೆ ಮಾಡಿವೆ: “ಗರಿಷ್ಠ ಪ್ರಮಾಣದ ಪ್ರಯತ್ನ ಹಾಕಿರಿ” “ಸಾಧ್ಯವಿರುವ ಎಲ್ಲಾ ಪ್ರಯತ್ನಮಾಡಿರಿ.” ಈ ಗ್ರೀಕ್‌ ಕ್ರಿಯಾಪದ ಎಗೊನೈಸೊಮೈ, ಗ್ರೀಕ್‌ ನಾಮಪದವಾದ ಎಗೋನ್‌ಗೆ ಸಂಬಂಧಿತ. ಈ ಪದವನ್ನು ಹೆಚ್ಚಾಗಿ ಅಥ್ಲೆಟಿಕ್‌ ಸ್ಪರ್ಧೆಗಳಿಗೆ ಬಳಸಲಾಗುತ್ತದೆ. ಇಬ್ರಿಯರಿಗೆ 12:1​ರಲ್ಲಿ ಈ ನಾಮಪದವನ್ನು ಸಾಂಕೇತಿವಾಗಿ ಕ್ರೈಸ್ತನ, ಜೀವದ ‘ಓಟಕ್ಕೆ’ ಬಳಸಲಾಗಿದೆ. ಇದನ್ನು ಹೆಚ್ಚು ಸಾಮಾನ್ಯ ಅರ್ಥದಲ್ಲಿ ಒಂದು ‘ಹೋರಾಟವಾಗಿ’ (ಫಿಲಿ 1:30; ಕೊಲೊ 2:1) ಅಥವಾ ಒಂದು “ಯುದ್ಧವಾಗಿ” ಹೇಳಲಾಗಿದೆ. (1ತಿಮೊ 6:12; 2 ತಿಮೊ 4:7) ಈ ಗ್ರೀಕ್‌ ಕ್ರಿಯಾಪದದ ರೂಪಗಳನ್ನು ಲೂಕ 13:24​ರಲ್ಲಿ “ಸ್ಪರ್ಧೆಯಲ್ಲಿ ಭಾಗವಹಿಸುವ” ವಿಷಯವಾಗಿ (1ಕೊರಿ 9:25), ‘[ತನ್ನನ್ನು] ಪ್ರಯಾಸಪಟ್ಟು’ ದುಡಿಸುವುದಾಗಿ (ಕೊಲೊ 1:29; 4:12; 1ತಿಮೊ 4:10) ಮತ್ತು ‘ಹೋರಾಟವಾಗಿ’ (1ತಿಮೊ 6:12) ಬಳಸಲಾಗಿದೆ. ಈ ಹೇಳಿಕೆಗಳ ಹಿನ್ನೆಲೆಯು, ಅಥ್ಲೆಟಿಕ್‌ ಪಂದ್ಯಗಳಿಗೆ ಸಂಬಂಧಿಸಿದೆ. ಆದ್ದರಿಂದಲೇ ಯೇಸು ಪ್ರೋತ್ಸಾಹಿಸಿದ ಪ್ರಯತ್ನವನ್ನು ಒಬ್ಬ ಕ್ರೀಡಾಪಟು ಮಾಡುವ ಪ್ರಯತ್ನಕ್ಕೆ ಹೋಲಿಸಬಹುದೆಂದು ಕೆಲವರು ಸೂಚಿಸುತ್ತಾರೆ. ಯಾಕೆಂದರೆ ಬಹುಮಾನವನ್ನು ಪಡೆಯುವುದಕ್ಕಾಗಿ ಅವನು ಪ್ರತಿಯೊಂದು ನರವನ್ನು ನೋಯಿಸಿಕೊಂಡು ಸರ್ವ ಪ್ರಯತ್ನವನ್ನೂ ಮಾಡುತ್ತಾನೆ.

ಲೂಕ 13:33​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಹಾಗಾಗ ಸಾಧ್ಯವಿಲ್ಲ: ಅಥವಾ “ಅದು ಅಂಗೀಕಾರಾರ್ಹವಲ್ಲ (ಹಾಗೆ ನೆನಸಲಾಗದು).” ಬೈಬಲಿನ ಯಾವ ಪ್ರವಾದನೆಯೂ ಮೆಸ್ಸೀಯನು ಯೆರೂಸಲೇಮಿನಲ್ಲಿ ಸಾಯುವನೆಂದು ಸ್ಪಷ್ಟವಾಗಿ ತಿಳಿಸುವುದಿಲ್ಲ. ಆದರೂ ಇಲ್ಲಿರುವ ವಿಷಯ ದಾನಿಯೇಲ 9:24-26​ರಲ್ಲಿರುವ ಮಾಹಿತಿಯಿಂದ ಬಂದಿರಬಹುದು. ಅಲ್ಲದೇ, ಯೆಹೂದ್ಯರು ಒಬ್ಬ ಪ್ರವಾದಿಯನ್ನು, ವಿಶೇಷವಾಗಿ ಮೆಸ್ಸೀಯನನ್ನು ಕೊಲ್ಲುವುದಾದರೆ ಅವರು ಆ ನಗರದಲ್ಲೇ ಕೊಲ್ಲುತ್ತಾರೆ ಎಂದು ಹೇಳಬಹುದು. ಅಲ್ಲದೇ, 71 ಸದಸ್ಯರ ಮುಖ್ಯ ನ್ಯಾಯಾಲಯ ಸನ್ಹೆದ್ರಿನ್‌ ಯೆರೂಸಲೇಮಿನಲ್ಲೇ ಕೂಡಿಬರುತ್ತಿತ್ತು. ಹಾಗಾಗಿ ಸುಳ್ಳು ಪ್ರವಾದಿಗಳೆಂದು ಆರೋಪ ಹೊರಿಸಲ್ಪಟ್ಟವರನ್ನು ಅಲ್ಲೇ ವಿಚಾರಣೆ ಮಾಡಲಾಗುತ್ತಿತ್ತು. ಜೊತೆಗೆ, ದೇವರಿಗೆ ಕ್ರಮವಾಗಿ ಯಜ್ಞಗಳನ್ನು ಅರ್ಪಿಸುತ್ತಿದ್ದದ್ದು ಮತ್ತು ಪಸ್ಕದ ಕುರಿಯನ್ನು ವಧಿಸುತ್ತಿದ್ದದ್ದು ಯೆರೂಸಲೇಮಿನಲ್ಲಿಯೇ ಎಂದೂ ಯೇಸುವಿನ ಮನಸ್ಸಿನಲ್ಲಿದ್ದಿರಬೇಕು. ವಿಷಯಗಳು ಸಂಭವಿಸಿದಂತೆ ಯೇಸುವಿನ ಮಾತುಗಳು ನಿಜವಾದವು. ಯೆರೂಸಲೇಮಿನ ಸನ್ಹೆದ್ರಿನ್‌ನ ಮುಂದೆ ಅವನನ್ನು ವಿಚಾರಣೆಗೆ ಒಳಪಡಿಸಲಾಯಿತು. ಅವನಿಗೆ ಮರಣಶಿಕ್ಷೆ ವಿಧಿಸಲಾಯಿತು. “ಪಸ್ಕದ ಕುರಿಯಾಗಿ” ಅವನು ಸತ್ತದ್ದೂ ಯೆರೂಸಲೇಮ್‌ನಲ್ಲಿ, ಪಟ್ಟಣದ ಗೋಡೆಗಳ ತುಸು ಆಚೆಕಡೆ.

ಜುಲೈ 30–ಆಗಸ್ಟ್‌ 5

ಬೈಬಲಿನಲ್ಲಿರುವ ರತ್ನಗಳು | ಲೂಕ 14-16

“ಕಳೆದುಹೋದ ಮಗನ ಕಥೆ”

ಲೂಕ 15:11-16​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಒಬ್ಬ ಮನುಷ್ಯನಿಗೆ ಇಬ್ಬರು ಪುತ್ರರಿದ್ದರು: ಪೋಲಿಹೋದ ಮಗನ ದೃಷ್ಟಾಂತ. (“ತಪ್ಪಿಹೋದ ಮಗನು” ಎಂದೂ ಖ್ಯಾತ). ಈ ದೃಷ್ಟಾಂತದ ಕೆಲವು ಅಂಶಗಳು ವಿಶಿಷ್ಟವಾಗಿವೆ. ಯೇಸು ಕೊಟ್ಟ ದೃಷ್ಟಾಂತಗಳಲ್ಲಿ ಇದು ತುಂಬಾ ದೊಡ್ಡದು. ಇದರಲ್ಲಿ ಎದ್ದುಕಾಣುವ ಒಂದು ವಿಶೇಷತೆ ಅಂದರೆ ಅವನು ವಿವರಿಸಿದ ಕುಟುಂಬ ಸಂಬಂಧಗಳೇ. ಬೇರೆ ದೃಷ್ಟಾಂತಗಳಲ್ಲಿ ಯೇಸು ನಿರ್ಜೀವ ವಸ್ತುಗಳನ್ನು ಅಂದರೆ ವಿವಿಧ ತರದ ಮಣ್ಣು-ಬೀಜಗಳನ್ನು ಅಥವಾ ಯಜಮಾನನ ಮತ್ತು ದಾಸನ ಮಧ್ಯೆ ಇರುವ ಸಾಮಾನ್ಯವಾದ ಸಂಬಂಧಗಳನ್ನು ತಿಳಿಸಿದ್ದಾನೆ. (ಮತ್ತಾ 13:18-30; 25:14-30; ಲೂಕ 19:12-27) ಆದರೆ ಈ ದೃಷ್ಟಾಂತದಲ್ಲಿ, ಒಬ್ಬ ತಂದೆ ಮತ್ತು ಅವನ ಪುತ್ರರ ಮಧ್ಯೆ ಇರುವ ಆಪ್ತ ಸಂಬಂಧವನ್ನು ಯೇಸು ಒತ್ತಿ ಹೇಳುತ್ತಾನೆ. ಈ ವೃತ್ತಾಂತಕ್ಕೆ ಕಿವಿಗೊಟ್ಟ ಅನೇಕರಿಗೆ ಅಂಥ ದಯೆಯೂ ಪ್ರೀತಿಯೂ ಉಳ್ಳ ತಂದೆಯು ಪ್ರಾಯಶಃ ಇದ್ದಿರಲಿಕ್ಕಿಲ್ಲ. ನಮ್ಮ ಸ್ವರ್ಗದ ತಂದೆಗೆ ತನ್ನ ಭೂ ಮಕ್ಕಳ ಮೇಲಿರುವ ಆಳವಾದ ಅನುಕಂಪ ಮತ್ತು ಪ್ರೀತಿಯನ್ನು ಈ ದೃಷ್ಟಾಂತ ಚಿತ್ರಿಸುತ್ತದೆ. ಅವನ ಜೊತೆ ಉಳಿಯುವವರ ಕಡೆಗೂ ಹಾಗೂ ತಪ್ಪುದಾರಿಗಿಳಿದು ಮತ್ತೆ ಪುನಃ ಮರಳುವವರ ಕಡೆಗೂ ಆತನಿಗೆ ಅದೇ ರೀತಿಯ ಪ್ರೀತಿ ಅನುಕಂಪಗಳಿವೆ.

ಕಿರಿಯ ಮಗನು: ಮೋಶೆಯ ನಿಯಮಕ್ಕನುಸಾರ ಹಿರಿಯ ಮಗನಿಗೆ ತಂದೆಯ ಆಸ್ತಿಯಲ್ಲಿ ಎರಡು ಪಾಲು ಸಿಗುತ್ತಿತ್ತು. (ಧರ್ಮೋ 21:17) ಹಾಗಾಗಿ ಈ ದೃಷ್ಟಾಂತದ ಹಿರಿಯ ಮಗನು ಚೊಚ್ಚಲ ಮಗನಾಗಿದ್ದರೆ, ಕಿರಿಯ ಮಗನ ಪಾಲಿಗೆ ಸಿಗುವ ಆಸ್ತಿಯು ಅವನ ಅಣ್ಣನ ಪಾಲಿನ ಅರ್ಧಭಾಗದಷ್ಟು ಆಗಿತ್ತು.

ಹಾಳುಮಾಡಿದನು: ಇಲ್ಲಿ ಬಳಸಲಾದ ಗ್ರೀಕ್‌ ಪದದ ಅಕ್ಷರಶಃ ಅರ್ಥ “ಚದರಿಸಿಬಿಡು (ಬೇರೆ ಬೇರೆ ದಿಕ್ಕುಗಳಿಗೆ)” ಎಂದಾಗಿದೆ. (ಲೂಕ 1:51; ಅ. ಕಾ. 5:37) ಮತ್ತಾಯ 25:24, 26​ರಲ್ಲಿ ಅದನ್ನು ‘ತೂರುವುದು’ ಎಂದು ತರ್ಜುಮೆ ಮಾಡಲಾಗಿದೆ. ಇಲ್ಲಿ ಅದು ಪೋಲುಮಾಡು, ದುಂದುಮಾಡು, ಬುದ್ಧಿಹೀನತೆಯಿಂದ ಖರ್ಚುಮಾಡು ಎಂಬ ಅರ್ಥ ಕೊಡುತ್ತದೆ.

ಪಟಿಂಗತನದ ಬದುಕು: ಅಥವಾ “ದುಂದುವ್ಯಯದ (ಬೇಜವಾಬ್ದಾರಿ; ಎಚ್ಚರಗೇಡಿ) ಜೀವನ.” ಇದೇ ಅರ್ಥ ಕೊಡುವ ಸಂಬಂಧಿತ ಗ್ರೀಕ್‌ ಪದವನ್ನು ಎಫೆ 5:18; ತೀತ 1:6; 1 ಪೇತ್ರ 4:4​ರಲ್ಲಿಯೂ ಬಳಸಲಾಗಿದೆ. ಈ ಗ್ರೀಕ್‌ ಪದದಲ್ಲಿ ಬಹಳ ದುಂದುವೆಚ್ಚ ಮಾಡುವ ಅಥವಾ ವ್ಯರ್ಥಮಾಡುವ ಜೀವನಶೈಲಿಯು ಕೂಡಿರಲೂಬಹುದು. ಕೆಲವು ಬೈಬಲ್‌ ಭಾಷಾಂತರಗಳು “ಪೋಲಿಹೋದ ಜೀವನ” ಎಂಬ ಹೇಳಿಕೆಯನ್ನೂ ಬಳಸಿವೆ.

ಹಂದಿಗಳ ಹಿಂಡನ್ನು ಕಾಯಲಿಕ್ಕೆ: ಧರ್ಮಶಾಸ್ತ್ರಕ್ಕನುಸಾರ, ಹಂದಿಗಳು ಅಶುದ್ಧ ಪ್ರಾಣಿಗಳಾಗಿತ್ತು. ಹಾಗಾಗಿ ಒಬ್ಬ ಯೆಹೂದ್ಯನಿಗೆ ಇದು ಒಂದು ಕೀಳ್ಮಟ್ಟದ, ಅತಿ ತುಚ್ಛವಾದ ಕೆಲಸವಾಗಿತ್ತು.—ಯಾಜ 11:7, 8.

ಕ್ಯಾರಬ್‌ ಕಾಯಿಗಳು: ಈ ಕಾಯಿಗೆ ಹೊಳಪಿನ ಕೆನ್ನೀಲಿ-ಕಂದು ಬಣ್ಣದ ಸಿಪ್ಪೆಯಿದೆ. ಗ್ರೀಕ್‌ನಲ್ಲಿ ಇದರ ಹೆಸರು (ಕೆರಾಟಿಯನ್‌, “ಚಿಕ್ಕ ಕೊಂಬು”). ಈ ಹೆಸರಿನ ಅಕ್ಷರಶಃ ಅರ್ಥಕ್ಕೆ ಹೊಂದಿಕೆಯಲ್ಲಿ ಕೊಂಬಿನ ಹಾಗೆ ಬಾಗಿರುವ ಆಕಾರ ಇದಕ್ಕಿದೆ. ಇವತ್ತಿನವರೆಗೂ ಬಹು ವ್ಯಾಪಕವಾಗಿ ಈ ಕ್ಯಾರಬ್‌ ಕಾಯಿಗಳನ್ನು ಕುದುರೆಗಳಿಗೆ, ದನಗಳಿಗೆ ಮತ್ತು ಹಂದಿಗಳಿಗೆ ಆಹಾರವಾಗಿ ಬಳಸುತ್ತಾರೆ. ಆ ಯುವಕನು ಹಂದಿಯ ಆಹಾರವನ್ನು ಸಹ ತಿನ್ನಲು ಸಿದ್ಧನಾಗಿದ್ದನು. ಇದು ಅವನೆಷ್ಟು ದುಃಸ್ಥಿತಿಗೆ ಇಳಿದಿದ್ದನೆಂದು ತೋರಿಸುತ್ತದೆ.—ಲೂಕ 15:15​ರ ಅಧ್ಯಯನ ಬೈಬಲಿನ ಮಾಹಿತಿಯನ್ನು ನೋಡಿ.

ಲೂಕ 15:17-24​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನಿನಗೆ ವಿರುದ್ಥವಾಗಿಯೂ: ಅಥವಾ “ನಿನ್ನ ದೃಷ್ಟಿಯಲ್ಲಿ.” ಈ ಗ್ರೀಕ್‌ ಪದ ಇನೋಪಿಯನ್‌ನ ಅಕ್ಷರಾರ್ಥವು “ನಿನ್ನ ಮುಂದೆ; ನಿನ್ನ ದೃಷ್ಟಿಯಲ್ಲಿ” ಎಂದಾಗಿದೆ. ಸೆಪ್ಟೂಅಜಂಟ್‌ನಲ್ಲಿ 1 ಸಮು 20:1​ನ್ನು ಇದೇ ರೀತಿಯಲ್ಲಿ ಬಳಸಲಾಗಿದೆ. ಈ ವಚನದಲ್ಲಿ ದಾವೀದನು ಯೋನತಾನನಿಗೆ, “ನಿನ್ನ ತಂದೆಗೆ ವಿರುದ್ಧವಾಗಿ ನಾನು ಹೇಗೆ ಪಾಪ ಮಾಡಿದೆನು?” ಎಂದು ಕೇಳಿದನು.

ಕೂಲಿಯಾಳುಗಳು: ಕಿರಿಯ ಮಗನು ಮನೆಗೆ ಹಿಂತಿರುಗಿದಾಗ, ತನ್ನನ್ನು ಮಗನಾಗಿ ಅಲ್ಲ ಕೂಲಿಯಾಳುಗಳಲ್ಲಿ ಒಬ್ಬನಾಗಿ ಸ್ವೀಕಾರ ಮಾಡುವಂತೆ ತಂದೆಗೆ ವಿನಂತಿಸುತ್ತಾನೆ. ದಾಸರು ಅಥವಾ ಸೇವಕರು ಯಜಮಾನನ ಆಸ್ತಿಯ ಭಾಗವಾಗಿದ್ದರು. ಆದರೆ ಕೂಲಿಯಾಳುಗಳು ಹೊರಗಿನವರು, ಅವರನ್ನು ಆ ದಿನದ ಕೆಲಸಕ್ಕೆ ಗೊತ್ತು ಮಾಡಲಾಗುತ್ತಿತ್ತು.—ಮತ್ತಾ. 20:1, 2, 8.

ಅವನಿಗೆ ಕೋಮಲವಾಗಿ ಮುದ್ದಿಟ್ಟನು: ಅಥವಾ “ಮಮತೆಯಿಂದ ಮುದ್ದಿಟ್ಟನು.” “ಕೋಮಲವಾಗಿ ಮುದ್ದಿಟ್ಟನು” ಎಂದು ತರ್ಜುಮೆಯಾದ ಗ್ರೀಕ್‌ ಪದವು ಫಿಲಿಯೋ ಎಂಬ ಕ್ರಿಯಾಪದದ ಒಂದು ಗಾಢವಾದ ರೂಪವೆಂದು ಅರ್ಥೈಸಲಾಗುತ್ತದೆ. ಇದನ್ನು ಕೆಲವು ಸಾರಿ ಬರೇ “ಮುದ್ದಿಡು” ಎಂದು ತರ್ಜುಮೆ ಮಾಡಿರುವುದಾದರೂ (ಮತ್ತಾ 26:48; ಮಾರ್ಕ 14:44; ಲೂಕ 22:47) ಹೆಚ್ಚಾಗಿ ಅದರ ಅರ್ಥ ‘ಮಮತೆಯಿಂದ’ ಮುದ್ದಿಡುವುದು ಎಂದಾಗಿದೆ. (ಯೋಹಾ 5:20; 11:3, 16:27) ಅಂಥ ಬೆಚ್ಚಗಿನ ಅಕ್ಕರೆಯಿಂದ ಸ್ವಾಗತಿಸುವ ಮೂಲಕ ತನ್ನ ಪಶ್ಚಾತ್ತಾಪಿ ಮಗನು ಮರಳಿ ಬಂದದಕ್ಕಾಗಿ ತನಗಾದ ಮಹಾ ಸಂತೋಷವನ್ನು ತಂದೆ ಮನಸಾರೆ ವ್ಯಕ್ತಪಡಿಸಿದನು.

ನಿನ್ನ ಮಗನೆನಿಸಿಕೊಳ್ಳುವುದಕ್ಕೆ: ಕೆಲವು ಹಸ್ತಪ್ರತಿಗಳು “ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಾಗಿ ಇಟ್ಟುಕೊ” ಎಂಬುದನ್ನು ಕೂಡಿಸಿವೆ. ಆದರೆ ಈ ಪ್ರಸ್ತುತ ಮುಖ್ಯ ವಿಷಯಕ್ಕೆ ಅನೇಕ ಹಳೆಯ ಅಧಿಕೃತ ಹಸ್ತಪ್ರತಿಗಳ ಆಧಾರವಿದೆ. ಲೂಕ 15:19​ಕ್ಕೆ ಹೊಂದಿಕೆ ಮಾಡಲಿಕ್ಕಾಗಿ ಈ ಹೆಚ್ಚಿನ ಹೇಳಿಕೆಯನ್ನು ಕೂಡಿಸಲಾಗಿದೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ.

ನಿಲುವಂಗಿ . . . ಉಂಗುರ . . . ಕೆರಗಳು: ಆ ನಿಲುವಂಗಿ ಒಂದು ಸಾಧಾರಣ ಬಟ್ಟೆಯಲ್ಲ, ಅತ್ಯುತ್ತಮ ಗುಣಮಟ್ಟದ್ದಾಗಿತ್ತು. ಸನ್ಮಾನ್ಯ ವ್ಯಕ್ತಿಗೆ ನೀಡಲಾಗುವ ಬಹುಶಃ ಕಸೂತಿ ಕೆಲಸದಿಂದ, ಶೃಂಗರಿಸಿದ ಬೆಲೆಬಾಳುವ ಅಂಗಿಯದು. ತನ್ನ ಮಗನಿಗೆ ತಂದೆ ಉಂಗುರ ತೊಡಿಸಿದನು. ಇದು ತಂದೆಯ ಅನುಗ್ರಹ ಮತ್ತು ಮಮತೆಯನ್ನು ತೋರಿಸುತ್ತದೆ. ಮನೆಗೆ ಮರಳಿ ಬಂದ ಮಗನಿಗೆ ತೋರಿಸಲಾದ ಗೌರವ, ಮಾನ ಮತ್ತು ಅಂತಸ್ತನ್ನೂ ಅದು ಸೂಚಿಸಿತು. ದಾಸರು ಸಾಮಾನ್ಯವಾಗಿ ಉಂಗುರ ಮತ್ತು ಕೆರಗಳನ್ನು ಧರಿಸುವುದಿಲ್ಲ. ಹೀಗೆ ತನ್ನ ಮಗನು ಪೂರ್ತಿ ಸ್ಥಾನಮಾನ ಪಡೆದ ಕುಟುಂಬ ಸದಸ್ಯನಾಗಿ ಮನೆಗೆ ಸೇರಿಸಲ್ಪಟ್ಟನೆಂದು ತಂದೆಯು ಸ್ಪಷ್ಟಪಡಿಸಿದನು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಲೂಕ 14:26​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ದ್ವೇಷ: ಬೈಬಲಿನಲ್ಲಿ “ದ್ವೇಷ” ಎಂಬ ಪದಕ್ಕೆ ಬೇರೆ ಬೇರೆ ಅರ್ಥಗಳಿವೆ. ಇತರರಿಗೆ ಕೇಡು ಮಾಡಬೇಕೆಂದು ಒಬ್ಬನನ್ನು ಪ್ರೇರಿಸುವ ಮತ್ಸರಭರಿತ ಭಾವ ಅದಾಗಿರಬಹುದು. ಇಲ್ಲವೇ, ಒಬ್ಬನನ್ನು ಅಥವಾ ಒಂದು ವಸ್ತುವನ್ನು ಅತಿಯಾಗಿ ಅಸಹ್ಯಪಡುವ ಪ್ರವೃತಿಯಿಂದಾಗಿ ಅವರ ಅಥವಾ ಅದರ ಗೋಜಿಗೇ ಹೋಗದೆ ದೂರವಿರುವ ಭಾವ ಅದಾಗಿರಬಹುದು. ಇಲ್ಲವೇ, ಕಡಿಮೆಯಾಗಿ ಪ್ರೀತಿಸುವ ವಿಷಯವು ಅದಾಗಿರಬಹುದು. ಉದಾಹರಣೆಗೆ, ಯಾಕೋಬನು ಲೇಯಳನ್ನು ‘ಅಲಕ್ಷಿಸಿದನು’ (ಮೂಲ-ದ್ವೇಷಿಸಿದನು) ರಾಹೇಲಳನ್ನು ಪ್ರೀತಿಸಿದನೆಂದು ಹೇಳಲಾಗಿದೆ. ಇದರ ನಿಜ ಅರ್ಥ, ಯಾಕೋಬನು ಲೇಯಳನ್ನು ರಾಹೇಲಳಿಗಿಂತ ಕಡಿಮೆ ಪ್ರೀತಿಸಿದನೆಂದೇ. (ಆದಿ 29:31; ಧರ್ಮೋ 21:15) ಇತರ ಪುರಾತನ ಯೆಹೂದಿ ಸಾಹಿತ್ಯದಲ್ಲೂ ಈ ರೀತಿಯ ಅರ್ಥದಲ್ಲೇ ಈ ಪದವನ್ನು ಉಪಯೋಗಿಸಲಾಗಿದೆ. ಹಾಗಾಗಿ ಲೂಕ 14:26​ರಲ್ಲಿ ತನ್ನ ಶಿಷ್ಯರು ತಮ್ಮ ಕುಟುಂಬಗಳನ್ನು ಮತ್ತು ತಮ್ಮನ್ನೇ ದ್ವೇಷಿಸಬೇಕೆಂದು ಯೇಸು ಹೇಳಿದಾಗ, ಅವರನ್ನು ಹಗೆಮಾಡಬೇಕು ಅಥವಾ ಹೇಸಬೇಕೆಂದು ಅವನು ಹೇಳಲಿಲ್ಲ. ಏಕೆಂದರೆ ಬೈಬಲಿನ ಬೇರೆ ವಚನಗಳಿಗೆ ಅದು ಹೊಂದಿಕೆಯಾಗಿರದು. (ಮಾರ್ಕ 12:29-31; ಎಫೆ 5:28, 29, 33 ಹೋಲಿಸಿ) ಹಾಗಾಗಿ ಈ ಪೂರ್ವಾಪರದಲ್ಲಿ “ದ್ವೇಷ” ಎಂಬ ಪದಕ್ಕೆ ‘ಕಡಿಮೆ ಪ್ರೀತಿಸುವುದು’ ಎಂಬರ್ಥ ಕೊಡ ಸಾಧ್ಯವಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ