ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr18 ಅಕ್ಟೋಬರ್‌ ಪು. 1-8
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
  • ಉಪಶೀರ್ಷಿಕೆಗಳು
  • ಅಕ್ಟೋಬರ್‌ 1-7
  • ಅಕ್ಟೋಬರ್‌ 8-14
  • ಅಕ್ಟೋಬರ್‌ 15-21
  • ಅಕ್ಟೋಬರ್‌ 22-28
  • ಅಕ್ಟೋಬರ್‌ 29–ನವೆಂಬರ್‌ 4
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
mwbr18 ಅಕ್ಟೋಬರ್‌ ಪು. 1-8

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಅಕ್ಟೋಬರ್‌ 1-7

ಬೈಬಲಿನಲ್ಲಿರುವ ರತ್ನಗಳು | ಯೋಹಾನ 9-10

“ಯೇಸು ತನ್ನ ಕುರಿಗಳ ಆರೈಕೆ ಮಾಡುತ್ತಾನೆ”

ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ

ಕುರಿಹಟ್ಟಿ

ಕುರಿಹಟ್ಟಿ ಅಥವಾ ಕುರಿದೊಡ್ಡಿಯು ಸುತ್ತಲೂ ಬೇಲಿ ಹಾಕಿರುವ ಒಂದು ಚಿಕ್ಕ ಜಾಗವಾಗಿತ್ತು. ಕುರಿಗಳನ್ನು, ಕಳ್ಳರಿಂದ ಮತ್ತು ಪರಭಕ್ಷಕ ಮೃಗಗಳಿಂದ ರಕ್ಷಿಸಲು ಇದರೊಳಗೆ ಕೂಡಿಹಾಕುತ್ತಿದ್ದರು. ಕುರುಬರು ರಾತ್ರಿಯಲ್ಲಿ ತಮ್ಮ ಮಂದೆಗಳನ್ನು ಕುರಿಹಟ್ಟಿಯಲ್ಲಿ ಭದ್ರವಾಗಿಡುತ್ತಿದ್ದರು. ಬೈಬಲ್‌ ಕಾಲದ ಕುರಿಹಟ್ಟಿಗಳಿಗೆ ಛಾವಣಿಗಳಿರಲಿಲ್ಲ. ಅವುಗಳ ಆಕಾರ ಮತ್ತು ಗಾತ್ರ ವಿವಿಧವಾಗಿದ್ದವು. ಬಹುತೇಕವಾಗಿ ಕಲ್ಲಿನ ಗೋಡೆಗಳಿಂದ ಸುತ್ತುವರಿದಿದ್ದು ಒಂದೇ ಒಂದು ಬಾಗಲನ್ನು ಹೊಂದಿತ್ತು. (ಅರಣ್ಯ 32:16; 1 ಸಮು 24:3; ಚೆಫ 2:6) ‘ಬಾಗಿಲು ಕಾಯುವವನಿದ್ದ’ ಒಂದು ಕುರಿಹಟ್ಟಿಯನ್ನು ‘ಬಾಗಿಲ’ ಒಳಗಿನಿಂದ ಪ್ರವೇಶಿಸುವುದರ ಬಗ್ಗೆ ಯೋಹಾನನು ಹೇಳುತ್ತಾನೆ. (ಯೋಹಾ 10:1, 3) ಸಮುದಾಯಕ್ಕೆ ಸೇರಿದ ಕುರಿದೊಡ್ಡಿಯಲ್ಲಿ ಒಂದಕ್ಕಿಂತ ಹೆಚ್ಚು ಕುರಿಮಂದೆಗಳು ರಾತ್ರಿಯನ್ನು ಕಳೆಯುತ್ತಿದ್ದವು. ಬಾಗಿಲು ಕಾಯುವವನು ಕುರಿಗಳಿಗೆ ಕಾವಲಾಗಿ ಇರುತ್ತಿದ್ದನು. ಬೆಳಗ್ಗೆ ಈ ಕಾವಲುಗಾರ ಕುರುಬರಿಗೆ ಬಾಗಿಲು ತೆರೆಯುತ್ತಿದ್ದನು. ಪ್ರತಿಯೊಬ್ಬ ಕುರುಬನು ತನ್ನ ಕುರಿಗಳನ್ನು ಕರೆದು ಒಟ್ಟು ಸೇರಿಸುತ್ತಿದ್ದನು. ಕುರಿಗಳು ತಮ್ಮ ಕುರುಬನ ಸ್ವರವನ್ನು ಗುರುತಿಸಿ ಅವನನ್ನು ಹಿಂಬಾಲಿಸುತ್ತಿದ್ದವು. (ಯೋಹಾ 10:3-5) ತನ್ನ ಶಿಷ್ಯರನ್ನು ಹೇಗೆ ಪರಿಪಾಲಿಸುವೆಂದು ತೋರಿಸಲು ಈ ರೂಢಿಯನ್ನು ಸೂಚಿಸಿದನು.—ಯೋಹಾ 10:7-14.

ಯೋಹಾನ 10:16​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ತರಬೇಕು: ಅಥವಾ “ಮುನ್ನಡೆಸಬೇಕು.” ಇಲ್ಲಿ ಬಳಸಲಾದ ಗ್ರೀಕ್‌ ಪದ ಎಗೋ ಆಗಿದೆ. ಪೂರ್ವಾಪರದ ಮೇಲೆ ಹೊಂದಿಕೊಂಡು ಇದು “ತರು” ಅಥವಾ “ನಡೆಸು” ಎಂಬ ಅರ್ಥವನ್ನು ಕೊಡಬಲ್ಲದು. ಇದಕ್ಕೆ ಸಂಬಂಧಿತ (ಸಿನೆಗೋ) ಎಂಬ ಗ್ರೀಕ್‌ ಪದವನ್ನು ಸುಮಾರು ಕ್ರಿ.ಶ. 200​ರಷ್ಟು ಹಿಂದಿನ ಒಂದು ಗ್ರೀಕ್‌ ಹಸ್ತಪ್ರತಿಯಿಂದ ಪಡೆದಿದ್ದು ಇದನ್ನು “ಒಟ್ಟು ಸೇರಿಸು” ಎಂಬರ್ಥದಲ್ಲಿ ಉಪಯೋಗಿಸಲಾಗಿದೆ. ಒಳ್ಳೇ ಕುರುಬನಾದ ಯೇಸುವು ಈ ಹಟ್ಟಿಗೆ ಸೇರಿದ ಕುರಿಗಳನ್ನು (ಲೂಕ 12:32​ರಲ್ಲಿ ಇದನ್ನು “ಚಿಕ್ಕ ಹಿಂಡು” ಎಂದೂ ಸೂಚಿಸಿದೆ) ಮತ್ತು ತನ್ನ ಬೇರೆ ಕುರಿಗಳನ್ನು ಕೂಡಿಸಿ, ನಡೆಸಿ, ಮೇಯಿಸಿ, ರಕ್ಷಿಸುತ್ತಾನೆ. ಆಗ ಅವು ಒಬ್ಬನೇ ಕುರುಬನ ಕೆಳಗಿರುವ ಒಂದೇ ಹಿಂಡು ಆಗುತ್ತವೆ. ಈ ಶಬ್ದ ಚಿತ್ರವು ಯೇಸುವಿನ ಹಿಂಬಾಲಕರು ಆನಂದಿಸುವ ಐಕ್ಯತೆಯನ್ನು ಒತ್ತಿಹೇಳುತ್ತದೆ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಯೋಹಾ 9:38​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವನಿಗೆ ಪ್ರಣಾಮ ಮಾಡಿದನು: ಅಥವಾ “ಅವನಿಗೆ ತಲೆಬಗ್ಗಿಸಿ ನಮಿಸಿದನು; ಸಾಷ್ಟಾಂಗವೆರಗಿದನು; ಗೌರವಾರ್ಪಣ ಮಾಡಿದನು.” ಇದರ ಗ್ರೀಕ್‌ ಪದವಾದ ಪ್ರಾಸ್ಕಿನಿ’ಯೊವನ್ನು ದೇವರ ಅಥವಾ ದೇವತೆಯ ಆರಾಧನೆಯ ಬಗ್ಗೆ ನಿರ್ದೇಶಿಸುವಾಗ “ಆರಾಧಿಸು” ಎಂದು ಭಾಷಾಂತರಿಸಲಾಗುತ್ತದೆ. (ಮತ್ತಾ 4:10; ಲೂಕ 4:8) ಆದರೆ ಈ ಸನ್ನಿವೇಶದಲ್ಲಿ, ಹುಟ್ಟು ಕುರುಡನಾಗಿದ್ದ ಆದರೆ ಈಗ ಸ್ವಸ್ಥನಾದ ಈ ಮನುಷ್ಯನು ಯೇಸುವನ್ನು ದೇವರ ಪ್ರತಿನಿಧಿಯಾಗಿ ಗುರುತಿಸಿ ಅವನಿಗೆ ಪ್ರಣಾಮ ಮಾಡಿದನು. ಇವನು ಯೇಸುವನ್ನು ದೇವರಾಗಿ ಅಥವಾ ದೇವತೆಯಾಗಿ ನೋಡಲಿಲ್ಲ. ಬದಲಿಗೆ, ಮುಂತಿಳಿಸಲ್ಪಟ್ಟ ‘ಮನುಷ್ಯ ಕುಮಾರನಾಗಿ’, ದೇವರಿಂದ ಅಧಿಕಾರ ಪಡೆದ ಮೆಸ್ಸೀಯನನ್ನಾಗಿ ವೀಕ್ಷಿಸಿದನು. (ಯೋಹಾ 9:35) ಅವನು ಯೇಸುವಿಗೆ ಪ್ರಣಾಮ ಮಾಡಿದಾಗ ಹೀಬ್ರೂ ಶಾಸ್ತ್ರದಲ್ಲಿ ಹೇಳಲಾದ ಜನರು ಪ್ರಣಾಮ ಮಾಡುತ್ತಿದ್ದಂತೆಯೇ ಮಾಡಿದನೆಂಬುದು ಸ್ಪಷ್ಟ. ಅವರು ಪ್ರವಾದಿಗಳನ್ನು, ರಾಜರುಗಳನ್ನು ಮತ್ತು ದೇವರ ಮತ್ತಿತರ ಪ್ರತಿನಿಧಿಗಳನ್ನು ಭೇಟಿಯಾದಾಗ ಈ ರೀತಿ ಪ್ರಣಾಮ ಮಾಡುತ್ತಿದ್ದರು. (1ಸಮು 25:23, 24; 2ಸಮು 14:4-7; 1ಅರ 1:16; 2ಅರ 4:36, 37) ಅನೇಕ ಸಂದರ್ಭಗಳಲ್ಲಿ ಯೇಸುವಿಗೆ ಮಾಡಿದ ಪ್ರಣಾಮಗಳು, ದೇವರಿಂದ ಬಂದ ಪ್ರಕಟನೆಗಾಗಿ ಅಥವಾ ದೇವರು ಮಾಡಿದ ಸಹಾಯಕ್ಕಾಗಿ ಕೃತಜ್ಞತೆಯನ್ನು ಸೂಚಿಸಿದವು.—ಮತ್ತಾ 2:2; 8:2; 14:33; 15:25​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ಯೋಹಾ 10:22​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಪ್ರತಿಷ್ಠಾಪನೆಯ ಹಬ್ಬ: ಈ ಹಬ್ಬದ ಹೀಬ್ರೂ ಹೆಸರು ಹನುಕ್ಕಾ ಅಂದರೆ “ಉದ್ಘಾಟನೆ; ಸಮರ್ಪಣೆ” ಎಂದರ್ಥ. ಇದು ಎಂಟು ದಿನಗಳ ಹಬ್ಬ. ಚಳಿಗಾಲಕ್ಕೆ ಹತ್ತಿರದಲ್ಲಿರುವ ಚಿಸೆವ್ಲ್‌ ತಿಂಗಳ 25​ಕ್ಕೆ ಇದನ್ನು ಆರಂಭಿಸಲಾಗುತ್ತಿತ್ತು. (ಈ ವಚನದಲ್ಲಿರುವ ಚಳಿಗಾಲದ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ಮತ್ತು App B-15 ನೋಡಿ) ಕ್ರಿ.ಪೂ. 165​ರಲ್ಲಿ ಯೆರೂಸಲೇಮ್‌ ದೇವಾಲಯದ ಪುನರ್‌ ಪ್ರತಿಷ್ಠೆಯ ಜ್ಞಾಪಕಾರ್ಥವಾಗಿ ಇದನ್ನು ಆಚರಿಸಲಾಗುತ್ತಿತ್ತು. ಸಿರಿಯದ ಅರಸ ನಾಲ್ಕನೇ ಅಂಟಿಯೊಕಸ್‌ ಎಪಿಫೆನಸ್‌ ಎಂಬವನು ಯೆಹೂದ್ಯರ ದೇವರಾದ ಯೆಹೋವನ ಕಡೆಗೆ ತಿರಸ್ಕಾರ ತೋರಿಸಲಿಕ್ಕಾಗಿ ಯೆರೂಸಲೇಮ್‌ ದೇವಾಲಯವನ್ನು ಹಾಳುಗೆಡವಿದ್ದನು. ಉದಾಹರಣೆಗೆ, ಈ ಹಿಂದೆ ಪ್ರತಿದಿನ ಅರ್ಪಿಸಲಾಗುತ್ತಿದ್ದ ಸರ್ವಾಂಗ ಹೋಮ ಯಜ್ಞದ ಮಹಾ ಬಲಿಪೀಠದ ಮೇಲೆ ಬೇರೊಂದು ಬಲಿಪೀಠವನ್ನು ಅವನು ಕಟ್ಟಿಸಿದನು. ಕ್ರಿ.ಪೂ. 168​ರ ಚಿಸೆವ್ಲ್‌ 25​ರಂದು ಅಂಟಿಯೊಕಸನು ಯೆಹೋವನ ಆಲಯವನ್ನು ಪೂರ್ತಿಯಾಗಿ ಹೊಲೆಮಾಡಿದನು. ಯಜ್ಞವೇದಿಯ ಮೇಲೆ ಹಂದಿಯನ್ನುಯಜ್ಞವಾಗಿ ಅರ್ಪಿಸಿ ಅದರ ಮಾಂಸದ ತಿಳಿಸಾರನ್ನು ಆಲಯದ ಎಲ್ಲ ಕಡೆ ಚಿಮುಕಿಸಿಬಿಟ್ಟನು. ದೇವಾಲಯದ ಬಾಗಿಲುಗಳನ್ನು ಸುಟ್ಟುಬಿಟ್ಟನು. ಯಾಜಕರ ಕೊಠಡಿಗಳನ್ನು ಕೆಡವಿಹಾಕಿದನು. ಚಿನ್ನದ ಬಲಿಪೀಠ, ರೊಟ್ಟಿಯನ್ನಿಡುವ ಮೇಜು, ಬಂಗಾರದ ದೀಪಸ್ತಂಭವನ್ನು ಅಪಹರಿಸಿದನು. ಬಳಿಕ ಯೆಹೋವನ ಆ ದೇವಾಲಯವನ್ನು ಒಲಿಂಪಸ್ಸಿನ ಸ್ಯೂಸ್‌ ದೇವತೆಗೆ ಪುನರ್‌ ಪ್ರತಿಷ್ಠಾಪಿಸಿದನು. ಎರಡು ವರ್ಷಗಳ ಬಳಿಕ ಜೂಡಸ್‌ ಮಕ್ಕಾಬೀಯಸ್‌ ಎಂಬವನು ನಗರವನ್ನೂ ಆಲಯವನ್ನೂ ಪುನಃ ವಶಪಡಿಸಿಕೊಂಡನು. ಆಲಯವನ್ನು ಶುದ್ಥೀಕರಿಸಿದ ಬಳಿಕ ಅದರ ಪುನಃ ಪ್ರತಿಷ್ಠಾಪನೆಯು ಕ್ರಿ.ಪೂ. 165​ರ ಚಿಸೆವ್ಲ್‌ ತಿಂಗಳ 25​ನೇ ದಿನದಂದು ನಡೆಯಿತು. ಅಂಟಿಯೊಕಸನು ಯಜ್ಞವೇದಿಯ ಮೇಲೆ ಸ್ಯೂಸ್‌ ದೇವತೆಗೆ ಆ ಅಸಹ್ಯ ಯಜ್ಞವನ್ನು ಅರ್ಪಿಸಿ ಸರಿಯಾಗಿ ಮೂರು ವರ್ಷಗಳು ಕಳೆದ ನಂತರ ಇದು ನಡೆಯಿತು. ಅಂದಿನಿಂದ ಯೆಹೋವನಿಗೆ ಅರ್ಪಿಸುವ ದೈನಂದಿನದ ಅರ್ಪಣೆ ಪುನಃ ಆರಂಭಿಸಿತು. ಜೂಡಸ್‌ ಮಕ್ಕಾಬೀಯಸನಿಗೆ ಯೆಹೋವನೇ ವಿಜಯವನ್ನು ಕೊಟ್ಟನೆಂದಾಗಲಿ, ಆಲಯವನ್ನು ಪುನಃ ಸ್ಥಾಪಿಸಲು ಅವನನ್ನು ಮಾರ್ಗದರ್ಶಿಸಿದನೆಂದಾಗಲಿ ಹೇಳುವ ಯಾವ ಹೇಳಿಕೆಯೂ ಬೈಬಲಿನಲ್ಲಿಲ್ಲ. ಆದರೂ ಯೆಹೋವನು ತನ್ನ ಆರಾಧನೆಯ ನಿರ್ದಿಷ್ಟ ಉದ್ದೇಶಗಳನ್ನು ಪೂರೈಸಲಿಕ್ಕಾಗಿ ಪಾರಸಿ ರಾಜ ಕೋರೆಷನಂಥ ವಿದೇಶೀಯ ಜನಾಂಗಗಳ ಪುರುಷರನ್ನು ಬಳಸಿದ್ದು ನಿಜ. (ಯೆಶಾ 45:1) ಹಾಗಾಗಿ ಯೆಹೋವನು ತನ್ನ ಇಷ್ಟವನ್ನು ನೆರವೇರಿಸಲು ತನ್ನ ಸಮರ್ಪಿತ ಜನರಲ್ಲಿ ಒಬ್ಬನನ್ನು ಬಳಸಬಹುದು ಎಂದು ತೀರ್ಮಾನಿಸುವುದು ನ್ಯಾಯಸಮ್ಮತ. ಮೆಸ್ಸೀಯನ ಬಗ್ಗೆ ಅವನ ಸೇವೆ ಮತ್ತು ಯಜ್ಞಾರ್ಪಣೆಯ ಬಗ್ಗೆ ನುಡಿಯಲಾದ ಪ್ರವಾದನೆಗಳು ನೆರವೇರಲಿಕ್ಕಾಗಿ ಆಲಯವು ಅಲ್ಲಿರಬೇಕಿತ್ತು ಮತ್ತು ಅದು ಕಾರ್ಯಾಚರಣೆಯಲ್ಲಿ ಇರಬೇಕಿತ್ತೆಂದು ಬೈಬಲು ಹೇಳುತ್ತದೆ. ಅದಲ್ಲದೆ ಮೆಸ್ಸೀಯನು ತನ್ನ ಮಹಾ ಯಜ್ಞವನ್ನು ನೀಡುವ ತನಕ ಅಂದರೆ ಮಾನವರ ಪರವಾಗಿ ತನ್ನ ಜೀವವನ್ನು ತೆರುವ ತನಕ, ಲೇವಿಯರ ಯಜ್ಞಾರ್ಪಣೆಗಳನ್ನು ಅರ್ಪಿಸಬೇಕಿತ್ತು. (ದಾನಿ 9:27; ಯೋಹಾ 2:17; ಇಬ್ರಿ 9:11-14) ಆದರೆ ಕ್ರಿಸ್ತನ ಹಿಂಬಾಲಕರಿಗೆ ಪ್ರತಿಷ್ಠಾಪನೆಯ ಹಬ್ಬವನ್ನು ಆಚರಿಸಬೇಕೆಂಬ ಆಜ್ಞೆ ಇರಲಿಲ್ಲ. (ಕೊಲೊ 2:16, 17) ಆದರೆ ಈ ಆಚರಣೆಯನ್ನು ಯೇಸುವಾಗಲಿ ಅವನ ಹಿಂಬಾಲಕರಾಗಲಿ ಖಂಡಿಸಿದ್ದರೆಂಬುದಕ್ಕೆ ಯಾವ ದಾಖಲೆಯೂ ಇಲ್ಲ.

ಅಕ್ಟೋಬರ್‌ 8-14

ಬೈಬಲಿನಲ್ಲಿರುವ ರತ್ನಗಳು | ಯೋಹಾನ 11-12

“ಯೇಸುವಿನಂತೆ ಅನುಕಂಪ ತೋರಿಸಿ”

ಯೋಹಾ 11:24, 25​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವನು ಎದ್ದು ಬರುವನೆಂದು ನಾನು ಬಲ್ಲೆ: ಯೇಸು ಕಡೇ ದಿನದಲ್ಲಾಗುವ ಪುನರುತ್ಥಾನದ ಬಗ್ಗೆ ಸೂಚಿಸುತ್ತಿದ್ದನೆಂದು ಮಾರ್ಥ ಭಾವಿಸಿದಳು. ಆ ಬೋಧನೆಯ ಬಗ್ಗೆ ಅವಳಿಗಿದ್ದ ನಂಬಿಕೆಯು ಗಮನಾರ್ಹ. (ಯೋಹಾ 6:39​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ಬೈಬಲು ಆ ಬೋಧನೆಯನ್ನು ಸ್ಪಷ್ಟವಾಗಿ ತಿಳಿಸಿದೆ. ಆದರೂ ಮಾರ್ಥಳ ದಿನಗಳಲ್ಲಿದ್ದ ಸದ್ದುಕಾಯರೆಂಬ ಕೆಲವು ಧಾರ್ಮಿಕ ಮುಖಂಡರು ಪುನರುತ್ಥಾನ ಇಲ್ಲ ಎಂದು ಹೇಳುತ್ತಿದ್ದರು. (ದಾನಿ 12:13; ಮಾರ್ಕ 12:18) ಇನ್ನೊಂದು ಕಡೆ ಫರಿಸಾಯರು ಆತ್ಮದ ಅಮರತ್ವವನ್ನು ನಂಬುತ್ತಿದ್ದರು. ಯೇಸು ಪುನರುತ್ಥಾನದ ನಿರೀಕ್ಷೆಯನ್ನು ಬೋಧಿಸಿದ್ದನೆಂದು ಮಾರ್ಥಳಿಗೆ ಗೊತ್ತಿತ್ತು. ಅವನು ಪುನರುತ್ಥಾನಗಳನ್ನು ಸಹ ನಡಿಸಿದ್ದನು. ಪುನರುತ್ಥಾನಕ್ಕೆ ಮುಂಚೆ ಲಾಜರನಂತೆ ಬೇರೆ ಯಾರೂ ಅಷ್ಟು ದಿನ ಸತ್ತ ಸ್ಥಿತಿಯಲ್ಲಿ ಇರಲಿಲ್ಲವಾದರೂ ಯೇಸು ಬೇರೆಯವರನ್ನೂ ಪುನರುತ್ಥಾನ ಮಾಡಿದ್ದನೆಂಬುದು ನಜ.

ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ: ಯೇಸುವಿನ ಮರಣ ಮತ್ತು ಪುನರುತ್ಥಾನವು ಸತ್ತವರಿಗೆ ಪುನಃ ಜೀವಿಸುವ ದಾರಿಯನ್ನು ತೆರೆಯಿತು. ಯೇಸುವಿನ ಪುನರುತ್ಥಾನದ ಬಳಿಕ ಯೆಹೋವನು ಅವನಿಗೆ ಪುನರುತ್ಥಾನ ಮಾಡುವ ಶಕ್ತಿಯನ್ನು ಮಾತ್ರವಲ್ಲ ನಿತ್ಯಜೀವವನ್ನು ಕೊಡುವ ಶಕ್ತಿಯನ್ನೂ ಕೊಟ್ಟನು. (ಯೋಹಾ 5:26​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ಪ್ರಕ 1:18​ರಲ್ಲಿ ಯೇಸು ತನ್ನನ್ನು “ಜೀವಿಸುತ್ತಿರುವವನು” ಮತ್ತು “ಮರಣ ಮತ್ತು ಹೇಡೀಸ್‌ನ ಬೀಗದ ಕೈಗಳು” ಇರುವವನು ಎಂದು ಕರೆದಿದ್ದಾನೆ. ಆದ್ದರಿಂದ ಸತ್ತವರಿಗೂ ಜೀವಿಸುತ್ತಿರುವವರಿಗೂ ಯೇಸುವೇ ನಿರೀಕ್ಷೆಯಾಗಿದ್ದಾನೆ. ಸಮಾಧಿಗಳನ್ನು ತೆರೆದು ಸತ್ತವರನ್ನು ಜೀವಂತ ಎಬ್ಬಿಸುತ್ತಾನೆ. ಕೆಲವರನ್ನು ಸ್ವರ್ಗದಲ್ಲಿ ತನ್ನೊಂದಿಗೆ ಸಹರಾಜರಾಗಿ ಆಳಲು ಮತ್ತು ಇನ್ನು ಕೆಲವರನ್ನು ಈ ಭೂಮಿಯ ಮೇಲೆ ಶಾಶ್ವತ ಜೀವಿಸಲು ಎಬ್ಬಿಸುವನು.—ಯೋಹಾ 5:28, 29; 2 ಪೇತ್ರ 3:13.

ಯೋಹಾ 11:33-35​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ರೋಧಿಸು: ಅಥವಾ “ಅಳುವುದು.” ರೋಧಿಸು ಎಂಬ ಗ್ರೀಕ್‌ ಪದವು ಗಟ್ಟಿಯಾಗಿ ಅಳುವುದನ್ನು ಸೂಚಿಸುತ್ತದೆ. ಯೆರೂಸಲೇಮಿಗೆ ಬರಲಿರುವ ನಾಶನವನ್ನು ಮುಂತಿಳಿಸಿದಾಗ ‘ಅತ್ತನು’ ಎಂಬಲ್ಲಿ ಇದೇ ಕ್ರಿಯಾಪದವನ್ನು ಬಳಸಲಾಗಿದೆ.—ಲೂಕ 19:41.

ನರಳಿ . . . ಬಹಳವಾಗಿ ನೊಂದುಕೊಂಡನು: ಮೂಲಭಾಷೆಯ ಈ ಎರಡು ಪದಗಳ ಜೊತೆಯಾದ ಉಪಯೋಗವು ಆಗ ಯೇಸುವಿಗಾದ ಅತಿಯಾದ ಭಾವೋದ್ವೇಗವನ್ನು ವರ್ಣಿಸುತ್ತದೆ. ‘ನರಳು’ ಎಂಬ ಗ್ರೀಕ್‌ ಕ್ರಿಯಾಪದ (ಎಂ’ಬ್ರಿ ಮಾ’ವೊಮಾಯ್‌) ಸಾಮಾನ್ಯವಾಗಿ ಬಲವಾದ ಭಾವನೆಗಳನ್ನು ಸೂಚಿಸುತ್ತದೆ. ಆದರೆ ಈ ಸನ್ನಿವೇಶದಲ್ಲಿ ಯೇಸು ಎಷ್ಟು ಆಳವಾಗಿ ಪ್ರಭಾವಿತನಾದನೆಂದರೆ ಅವನು ‘ನರಳಿದನು’ ಎಂದು ಹೇಳಲಾಗಿದೆ. “ನೊಂದುಕೊಂಡನು” (ಟ’ರಾಸೊ) ಎಂಬ ಪದ ಗ್ರೀಕ್‌ನಲ್ಲಿ ಅಕ್ಷರಾರ್ಥವಾಗಿ ತಳಮಳವನ್ನು ಸೂಚಿಸುತ್ತದೆ. ಈ ಸನ್ನಿವೇಶದಲ್ಲಿ ಅದು ಅಂತರಿಕ ಕ್ಷೋಭೆಯನ್ನು, “ಬಹಳನೋವನ್ನು, ದುಃಖವನ್ನು” ಅವನು ಅನುಭವಿಸಿದನು ಎಂಬರ್ಥ ಕೊಡುತ್ತದೆಂದು ಒಬ್ಬ ವಿದ್ವಾಂಸ ಹೇಳಿದನು. ಯೂದನಿಂದಾದ ದ್ರೋಹಕ್ಕೆ ಯೇಸುವಿನ ಪ್ರತಿಕ್ರಿಯೆಯನ್ನು ವರ್ಣಿಸುವಾಗ ಯೋಹಾ 13:21 ಇದೇ ಕ್ರಿಯಾಪದವನ್ನು ಬಳಸುತ್ತದೆ.—ಯೋಹಾ 11:35​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ತನ್ನೊಳಗೆ: ಅಕ್ಷರಾರ್ಥ, “ಆಂತರ್ಯದಲ್ಲಿ.” ಇದರ ಗ್ರೀಕ್‌ ಪದ ನ್ಯೂಮ. ಒಬ್ಬ ವ್ಯಕ್ತಿಯ ಸಾಂಕೇತಿಕ ಹೃದಯದಿಂದ ಹೊರಡುವ ಪ್ರಚೋದಕ ಶಕ್ತಿಯನ್ನು ಇದು ಸೂಚಿಸುತ್ತದೆ. ಈ ಶಕ್ತಿ ಒಬ್ಬನನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಮಾತಾಡಲು ಮತ್ತು ಕ್ರಿಯೆಗೈಯಲು ಪ್ರೇರಿಸುತ್ತದೆ.—ಗ್ಲೋಸರಿಯಲ್ಲಿ “ಸ್ಪಿರಿಟ್‌” ನೋಡಿ.

ಕಣ್ಣೀರು ಸುರಿಸಿದನು: ಇಲ್ಲಿ ಬಳಸಿರುವ (ಡಕ್ರಿಯೊ) ಎಂಬ ಪದ “ಕಣ್ಣೀರು” ಎಂಬ ಗ್ರೀಕ್‌ ನಾಮಪದದ ಕ್ರಿಯಾರೂಪವಾಗಿದೆ. ಇದನ್ನು ಲೂಕ 7:38; ಅ.ಕಾ. 20:19, 31; ಇಬ್ರಿ 5:7; ಪ್ರಕ 7:17; 21:4 ಮುಂತಾದ ವಚನಗಳಲ್ಲಿ ಉಪಯೋಗಿಸಲಾಗಿದೆ. ಇಲ್ಲಿ ಗಟ್ಟಿಯಾಗಿ ಅಳುವ ಶಬ್ದಕ್ಕಿಂತ, ಕಣ್ಣೀರು ಸುರಿಸುವಿಕೆಗೆ ಹೆಚ್ಚು ಗಮನ ಕೊಡಲಾಗಿದೆ ಎಂದು ತೋರುತ್ತದೆ. ಕ್ರೈಸ್ತ ಗ್ರೀಕ್‌ ಶಾಸ್ತ್ರದಲ್ಲಿ ಈ ಗ್ರೀಕ್‌ ಕ್ರಿಯಾಪದವನ್ನು ಇಲ್ಲಿ ಮಾತ್ರ ಬಳಸಲಾಗಿದೆ. ಇದು ಮರಿಯ ಮತ್ತು ಯೆಹೂದ್ಯರ ಅಳುವಿಕೆಯನ್ನು ವರ್ಣಿಸಲು ಯೋಹಾ 11:33​ರಲ್ಲಿ ಬಳಸಿರುವ ಪದಕ್ಕಿಂತ ಭಿನ್ನವಾಗಿದೆ. (ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ) ತಾನು ಲಾಜರನನ್ನು ಮತ್ತೆ ಜೀವಂತ ಎಬ್ಬಿಸುವೆನೆಂದು ಯೇಸುವಿಗೆ ತಿಳಿದಿತ್ತು. ಆದರೂ ತನ್ನ ಪ್ರಿಯ ಮಿತ್ರರು ದುಃಖಿಸುವುದನ್ನು ನೋಡಿ ಅವನಿಗೆ ತುಂಬ ನೋವುಂಟಾಯಿತು. ತನ್ನ ಮಿತ್ರರ ಕಡೆಗಿದ್ದ ಆಳವಾದ ಪ್ರೀತಿ ಮತ್ತು ಅನುಕಂಪದಿಂದ ಪ್ರೇರಿತನಾಗಿ ಅವನು ಎಲ್ಲರ ಮುಂದೆ ಕಣ್ಣೀರು ಸುರಿಸಿದನು. ಆದಾಮನಿಂದ ಬಂದ ಮರಣದಿಂದಾಗಿ ತಮ್ಮ ಪ್ರಿಯಜನರನ್ನು ಕಳೆದುಕೊಳ್ಳುವವರ ಮೇಲೆ ಯೇಸುವಿಗೆ ತುಂಬಾ ಪ್ರೀತಿ, ಅನುಕಂಪವಿದೆ ಎಂದು ಇದು ತೋರಿಸುತ್ತದೆ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಯೋಹಾ 11:49​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಮಹಾಯಾಜಕ: ಇಸ್ರಾಯೇಲ್ಯರು ಸ್ವತಂತ್ರ ದೇಶವಾಗಿ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ ಮೇಲೆ ಮಹಾಯಾಜಕನ ಕೆಲಸವು ತನ್ನ ಜೀವನ ಪರ್ಯಂತದ ಕೆಲಸವಾಯಿತು. (ಅರಣ್ಯ 35:25) ಆದರೆ ಇಸ್ರಾಯೇಲ್‌, ರೋಮ್‌ ಸಾಮ್ರಾಜ್ಯದ ವಶವಾದಾಗ ರೋಮಿನಿಂದ ನೇಮಿತರಾದ ಪ್ರಭುಗಳು ಮಹಾ ಯಾಜಕರನ್ನು ನೇಮಿಸುವ ಅಥವಾ ತೆಗೆದುಬಿಡುವ ಅಧಿಕಾರವನ್ನು ಪಡೆದುಕೊಂಡರು. (‘ಮಹಾ ಯಾಜಕ’ ಗ್ಲೋಸರಿ ನೋಡಿ.) ರೋಮಿನಿಂದ ನೇಮಿತನಾದ ಕಾಯಫನು ತನಗಿಂತ ಮೊದಲಿದ್ದ ಎಲ್ಲರಿಗಿಂತ ಹೆಚ್ಚು ಸಮಯ ಹುದ್ದೆಯಲ್ಲಿದ್ದ ಅತಿ ಜಾಣ ರಾಜತಂತ್ರಜ್ಞನಾಗಿದ್ದ. ಕ್ರಿ.ಶ. 18​ರಲ್ಲಿ ನೇಮಕ ಹೊಂದಿ, ಕ್ರಿ.ಶ. 36​ರ ತನಕ ಆ ಕೆಲಸದಲ್ಲಿದ್ದನು. ಆ ವರ್ಷ ಅಂದರೆ ಕ್ರಿ.ಶ. 33​ರಲ್ಲಿ ಕಾಯಫನು ಮಹಾಯಾಜಕನಾಗಿದ್ದನು ಎಂದು ಹೇಳಿದಾಗ, ಯೇಸು ಕೊಲ್ಲಲ್ಬಟ್ಟ ಆ ವಿಶೇಷ ವರ್ಷವು ಕಾಯಫನ ಮಹಾಯಾಜಕತ್ವದ ಅವಧಿಯಲ್ಲಿ ಸೇರಿತ್ತು ಎಂಬರ್ಥದಲ್ಲಿ ಯೋಹಾನನು ಹೇಳಿರಬೇಕು.—ಕಾಯಫನ ಮನೆಯು ಇದ್ದಿರಬಹುದಾದ ಸ್ಥಳಕ್ಕಾಗಿ App. B12 ನೋಡಿ.

ಯೋಹಾ 12:42​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅಧಿಪತಿಗಳು: ಇಲ್ಲಿ “ಅಧಿಪತಿ” ಎಂಬ ಪದದ ಗ್ರೀಕ್‌ ಪದವು ಯೆಹೂದಿ ಮುಖ್ಯ ನ್ಯಾಯಾಲಯವಾದ ಸನ್ಹೆದ್ರಿನ್‌ನಲ್ಲಿನ ಸದಸ್ಯರಿಗೆ ಸೂಚಿಸುತ್ತಿರಬಹುದು. ಇದೇ ಪದವನ್ನು ಯೋಹಾ 3:1​ರಲ್ಲಿ ಆ ನ್ಯಾಯಾಲಯದ ಸದಸ್ಯನಾಗಿದ್ದ ನಿಕೊದೇಮನನ್ನು ಸೂಚಿಸಲು ಬಳಸಲಾಗಿದೆ.—ಯೋಹಾ 3:1​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ಸಭಾಮಂದಿರದಿಂದ ಹೊರಹಾಕುವುದು: ಅಥವಾ “ಬಹಿಷ್ಕರಿಸುವುದು; ಸಭಾಮಂದಿರದಿಂದ ನಿಷೇಧಿಸುವುದು.” ಅ’ಪೊಸಿನೊ’ಗೊಗಾಸ್‌ ಎಂಬ ಗ್ರೀಕ್‌ ನಾಮ ವಿಶೇಷಣವನ್ನು ಇಲ್ಲಿ ಮತ್ತು ಯೋಹಾ 12:42 ಮತ್ತು 16:2​ರಲ್ಲಿ ಮಾತ್ರವೇ ಬಳಸಲಾಗಿದೆ. ಹೊರಗೆ ಹಾಕಲ್ಪಟ್ಟ ವ್ಯಕ್ತಿಯನ್ನು ಸಮಾಜ ದೂರವಿಟ್ಟು ತಿರಸ್ಕರಿಸುತ್ತಿತ್ತು. ಹೀಗೆ ಯೆಹೂದ್ಯರ ಸಹವಾಸದಿಂದ ಕಡಿದು ಹಾಕಲಾಗುತ್ತಿದುದರಿಂದ ಕುಟುಂಬವು ವಿಪರೀತ ಆರ್ಥಿಕ ದುಷ್ಪರಿಣಾಮಗಳನ್ನು ಅನುಭವಿಸುತ್ತಿತ್ತು. ಸಭಾಮಂದಿರಗಳನ್ನು ಮುಖ್ಯವಾಗಿ ವಿದ್ಯಾಭ್ಯಾಸಕ್ಕಾಗಿ ಬಳಸುತ್ತಿದ್ದರು. ಆದರೆ ಕೆಲವೊಮ್ಮೆ ಅವನ್ನು ಸ್ಥಳೀಯ ನ್ಯಾಯಾಲಯಗಳಾಗಿಯೂ ಉಪಯೋಗಿಸುತ್ತಿದ್ದರು. ಜನರಿಗೆ ಕೊರಡೆಗಳಿಂದ ಹೊಡೆಸುವ ಮತ್ತು ಬಹಿಷ್ಕಾರ ಮಾಡುವ ಅಧಿಕಾರ ಈ ನ್ಯಾಯಾಲಯಗಳಿಗಿತ್ತು.—ಮತ್ತಾ 10:17​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ಅಕ್ಟೋಬರ್‌ 15-21

ಬೈಬಲಿನಲ್ಲಿರುವ ರತ್ನಗಳು | ಯೋಹಾನ 13-14

“ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ”

ಯೋಹಾ 13:5​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಶಿಷ್ಯರ ಪಾದಗಳನ್ನು ತೊಳೆಯುವುದು: ಪುರಾತನ ಇಸ್ರಾಯೇಲಿನಲ್ಲಿ ಚಪ್ಪಲಿಗಲು ತುಂಬ ಸಾಮಾನ್ಯವಾದ ಪಾದರಕ್ಷೆಗಳಾಗಿದ್ದವು. ಅವು ಪಾದಕ್ಕೂ ಹಿಮ್ಮಡಿಗೂ ಕಟ್ಟಲ್ಪಡುತ್ತಿದ್ದ ಬರೇ ಅಟ್ಟೆಯಾಗಿತ್ತು ಅಷ್ಟೆ. ಹಾಗಾಗಿ ಧೂಳು-ಕೆಸರಿನಿಂದ ತುಂಬಿದ ಹಾದಿಗಳು ಅಥವಾ ಹೊಲಗದ್ದೆಗಳಿಂದಾಗಿ ಪ್ರಯಾಣಿಕರ ಕಾಲುಗಳು ಬೇಗನೆ ಕೊಳಕಾಗುತ್ತಿದ್ದವು. ಅದರಿಂದಾಗಿ ಒಬ್ಬನು ಮನೆಯನ್ನು ಪ್ರವೇಶಿಸುವ ಮೊದಲು ತನ್ನ ಪಾದರಕ್ಷೆಯನ್ನು ಬಿಚ್ಚಿಡುವುದು ವಾಡಿಕೆಯಾಗಿತ್ತು. ಅತಿಥಿ ಸತ್ಕಾರಮಾಡುವ ವ್ಯಕ್ತಿಯು ತನ್ನ ಅತಿಥಿಯ ಪಾದಗಳು ತೊಳೆದಿರುವಂತೆ ನೋಡಿಕೊಳ್ಳುತ್ತಿದ್ದನು. ಈ ವಾಡಿಕೆಯ ಬಗ್ಗೆ ಬೈಬಲಿನಲ್ಲಿ ಅನೇಕ ವಚನಗಳಿವೆ. (ಆದಿ 18:4, 5; 24:32; 1 ಸಮು 25:41; ಲೂಕ 7:37, 38, 44) ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆದನು. ಅವನು ಹಾಗೆ ಮಾಡಿದ್ದು ದೀನತೆಯ ಮತ್ತು ಒಬ್ಬರು ಇನ್ನೊಬ್ಬರ ಸೇವೆಮಾಡುವುದರ ಬಗ್ಗೆ ಅವರಿಗೆ ಉತ್ತಮ ಪಾಠ ಕಲಿಸಲಿಕ್ಕಾಗಿ ಆಗಿತ್ತು.

ಯೋಹಾ 13:12-14​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ತೊಳೆಯಲೇಬೇಕು: ಅಥವಾ “ಹಂಗಿಗೊಳಗಾಗಿದ್ದೀರಿ.” ಇಲ್ಲಿ ಬಳಸಲಾಗಿರುವ ಗ್ರೀಕ್‌ ಕ್ರಿಯಾಪದವನ್ನು ಅನೇಕಸಾರಿ ಹಣಕಾಸಿಗೆ ಸಂಬಂಧಿಸಿದಂತೆ ಬಳಸಲಾಗುತ್ತದೆ. “ಮತ್ತೊಬ್ಬರಿಗೆ ಋಣಿಯಾಗಿರುವುದು, ಮತ್ತೊಬ್ಬರಿಗೆ ಏನಾದರೂ ಕೊಡುವ ಹಂಗಿನಲ್ಲಿರುವುದು” ಎಂಬ ಮೂಲಾರ್ಥವನ್ನು ಒಳಗೊಂಡಿದೆ. (ಮತ್ತಾ 18:28, 30, 34; ಲೂಕ 16:5, 7) ಇಲ್ಲಿ ಮತ್ತು ಇನ್ನಿತರ ಸನ್ನಿವೇಶಗಳಲ್ಲಿ, ಯಾವುದನ್ನಾದರೂ ಮಾಡುವ ಹಂಗಿನಲ್ಲಿರುವುದು ಅಥವಾ ಹಂಗಿಗೆ ಒಳಗಾಗುವುದು ಎಂಬ ವಿಶಾಲಾರ್ಥದಲ್ಲಿ ಇದನ್ನು ಬಳಸಲಾಗಿದೆ.—1 ಯೋಹಾ 3:16; 4:11; 3ಯೋಹಾ 8.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಯೋಹಾ 14:6​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ: ಯೇಸು ಮಾರ್ಗ ಆಗಿದ್ದಾನೆ. ಏಕೆಂದರೆ ಪ್ರಾರ್ಥನೆಯಲ್ಲಿ ದೇವರನ್ನು ಸಮೀಪಿಸಲು ಯೇಸುವಿನ ಮೂಲಕ ಮಾತ್ರ ಸಾಧ್ಯ. ಅಲ್ಲದೇ ದೇವರೊಂದಿಗೆ ಸಮಾಧಾನ ಮಾಡಿಕೊಳ್ಳಲು ಇರುವ ಒಂದೇ “ಮಾರ್ಗ” ಸಹ ಅವನೇ. (ಯೋಹಾ 16:23; ರೋಮ 5:8) ಯೇಸು ಸತ್ಯ ಕೂಡ ಆಗಿದ್ದಾನೆ. ಅವನು ಸತ್ಯವನ್ನಾಡಿದನು ಮತ್ತು ಸತ್ಯದ ಪ್ರಕಾರ ನಡೆದುಕೊಂಡನು. ದೇವರ ಉದ್ದೇಶದ ಪೂರೈಕೆಯಲ್ಲಿ ತನ್ನ ಪ್ರಮುಖ ಪಾತ್ರವನ್ನು ವಹಿಸುವ ಮೂಲಕ ಅನೇಕ ಪ್ರವಾದನೆಗಳನ್ನು ಸಹ ಅವನು ನೆರವೇರಿಸಿದನು. (ಯೋಹಾ 1:14; ಪ್ರಕ 19:10) ಈ ಪ್ರವಾದನೆಗಳು ಅವನ ಮೂಲಕ “ಹೌದು” ಆದವು ಅಂದರೆ ನೆರವೇರಿದವು. (2ಕೊರಿಂ 1:20) ಯೇಸು ಜೀವವೂ ಆಗಿದ್ದಾನೆ. ತನ್ನ ವಿಮೋಚನಾ ಯಜ್ಞದ ಮೂಲಕ ಮನುಷ್ಯರು “ವಾಸ್ತವವಾದ ಜೀವವನ್ನು” ಅಂದರೆ ನಿತ್ಯಜೀವವನ್ನು ಪಡೆಯುವಂತೆ ಅವನು ಸಾಧ್ಯಮಾಡಿದನು. (1 ತಿಮೊ 6:12, 19; ಎಫೆ 1:7; 1ಯೋಹಾ 1:7) ಪರದೈಸಿನಲ್ಲಿ ನಿತ್ಯವಾಗಿ ಬದುಕಲು ಪುನರುತ್ಥಾನವಾಗಿ ಎದ್ದುಬರುವ ಕೋಟಿಗಟ್ಟಲೆ ಜನರಿಗೂ ಅವನು ‘ಜೀವವಾಗಿ’ ಪರಿಣಮಿಸುವನು.—ಯೋಹಾ 5:28, 29.

ಯೋಹಾ 14:12​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಇವುಗಳಿಗಿಂತಲೂ ಮಹತ್ತಾದ ಕ್ರಿಯೆಗಳು: ತನ್ನ ಶಿಷ್ಯರು ತನ್ನ ಅದ್ಭುತ ಕ್ರಿಯೆಗಳಿಗಿಂತ ಮಹತ್ತಾದ ಅದ್ಭುತಗಳನ್ನು ಮಾಡುವರೆಂದು ಯೇಸು ಇಲ್ಲಿ ಹೇಳುತ್ತಿಲ್ಲ. ಬದಲಿಗೆ ಅವರು ಮಾಡಲಿರುವ ಸಾರುವ ಮತ್ತು ಬೋಧಿಸುವ ಕೆಲಸವು ತನ್ನದ್ದಕ್ಕಿಂತ ಹೆಚ್ಚು ವಿಸ್ತಾರವಾಗಿರುವುದು ಎಂದು ಯೇಸು ದೀನತೆಯಿಂದ ಒಪ್ಪಿಕೊಂಡನು. ತನ್ನ ಶಿಷ್ಯರು ಹೆಚ್ಚು ವಿಸ್ತಾರವಾದ ಕ್ಷೇತ್ರಗಳನ್ನು ಆವರಿಸುತ್ತಾರೆ. ಹೆಚ್ಚು ಜನರನ್ನು ತಲಪುತ್ತಾರೆ. ತನಗಿಂತ ಹೆಚ್ಚು ಸಮಯದ ತನಕ ಸಾರಲಿರುವರು ಎಂಬರ್ಥದಲ್ಲಿ ಅವನದನ್ನು ಹೇಳಿದನು. ತನ್ನ ಕೆಲಸವನ್ನು ತನ್ನ ಹಿಂಬಾಲಕರು ಮುಂದುವರಿಸುವರೆಂದು ಯೇಸು ನಿರೀಕ್ಷಿಸಿದ್ದನೆಂದು ಈ ಮಾತುಗಳು ಸೂಚಿಸುತ್ತವೆ.

ಅಕ್ಟೋಬರ್‌ 22-28

ಬೈಬಲಿನಲ್ಲಿರುವ ರತ್ನಗಳು | ಯೋಹಾನ 15-17

“ನೀವು ಲೋಕದ ಭಾಗವಾಗಿಲ್ಲ”

ಯೋಹಾ 15:19​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಲೋಕ: ಇಲ್ಲಿ ಕಾಸ್ಮೋಸ್‌ ಎಂಬ ಗ್ರೀಕ್‌ ಪದ ದೇವಜನರನ್ನು ಬಿಟ್ಟು ಉಳಿದಿರುವ ಲೋಕದಲ್ಲಿ ಉಳಿದಿರುವ ಜನರನ್ನು ಅಂದರೆ ದೇವರಿಂದ ದೂರವಾಗಿರುವ ಅನೀತಿವಂತ ಮಾನವ ಸಮಾಜವನ್ನು ಸೂಚಿಸುತ್ತದೆ. ಯೇಸುವಿನ ಶಿಷ್ಯರು ಲೋಕದ ಭಾಗವಲ್ಲ ಅಥವಾ ಲೋಕಕ್ಕೆ ಸೇರಿದವರಲ್ಲ ಎಂದು ಯೇಸುವಿನ ಮಾತುಗಳನ್ನು ಉಲ್ಲೇಖಿಸಿದ್ದು ಸುವಾರ್ತಾ ಲೇಖಕರಲ್ಲಿ ಯೋಹಾನನು ಮಾತ್ರ. ಯೇಸು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಮಾಡಿದ ಕೊನೆಯ ಪ್ರಾರ್ಥನೆಯಲ್ಲಿ ಇನ್ನೆರಡು ಬಾರಿ ಈ ವಿಚಾರವು ಹೇಳಲ್ಪಟ್ಟಿದೆ.—ಯೋಹಾ 17:14, 16.

ಯೋಹಾ 15:21​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನನ್ನ ಹೆಸರಿನ ನಿಮಿತ್ತ: ಬೈಬಲಿನಲ್ಲಿ ಕೆಲವೊಮ್ಮೆ “ಹೆಸರು” ಎಂಬ ಪದವು ಹೆಸರನ್ನು ಧರಿಸಿರುವ ವ್ಯಕ್ತಿಗೆ, ಅವನ ಪ್ರಖ್ಯಾತಿಗೆ ಮತ್ತು ಅವನನ್ನು ಪ್ರತಿನಿಧಿಸುವ ಸರ್ವಕ್ಕೆ ಸೂಚಿತವಾಗುತ್ತದೆ. (ಮತ್ತಾ 6:9​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ಯೇಸುವಿನ ಹೆಸರಿನ ಸಂಬಂಧದಲ್ಲಿ, ಅದು ಅವನ ತಂದೆಯು ಅವನಿಗೆ ಕೊಟ್ಟಿರುವ ಅಧಿಕಾರ ಮತ್ತು ಸ್ಥಾನವನ್ನು ಸಹ ಸೂಚಿಸುತ್ತದೆ. (ಮತ್ತಾ 28:18; ಫಿಲಿ 2:9, 10; ಇಬ್ರಿ 1:3, 4) ಇಲ್ಲಿ ಯೇಸು, ಲೋಕದ ಜನರು ತನ್ನ ಹಿಂಬಾಲಕರ ವಿರುದ್ಧ ಕೆಡುಕನ್ನು ಮಾಡುವುದೇಕೆಂದು ವಿವರಿಸುತ್ತಿದ್ದನು. ಅವನನ್ನು ಯಾರು ಕಳುಹಿಸಿದನೆಂದು ತಿಳಿಯದ ಕಾರಣ ಅವರು ಹಾಗೆ ಮಾಡುತ್ತಿದ್ದರು. ದೇವರನ್ನು ತಿಳಿದುಕೊಳ್ಳುವುದರ ಮೂಲಕ ಅವರು ಯೇಸುವಿನ ಹೆಸರು ಏನನ್ನು ಪ್ರತಿನಿಧಿಸುತ್ತದೆಂದು ಅರ್ಥಮಾಡಿಕೊಳ್ಳಲು ಮತ್ತು ಅಂಗೀಕರಿಸಲು ಅವರಿಗೆ ಸಹಾಯವಾಗುತ್ತಿತ್ತು. (ಅ. ಕಾ. 4:12) ಇದರಲ್ಲಿ, ಯೇಸುವನ್ನು ದೇವರ ನೇಮಿತ ರಾಜನೆಂದು, ಅರಸರ ಅರಸನೆಂದು ಮತ್ತು ಜೀವ ಪಡೆಯಲಿಕ್ಕಾಗಿ ಮಾನವರೆಲ್ಲರೂ ಯೇಸುವಿನ ಈ ಸ್ಥಾನವನ್ನು ಅಂಗೀಕರಿಸಿ ಅಧೀನರಾಗುವುದು ಒಳಗೂಡಿದೆ.—ಯೋಹಾ 17:3; ಪ್ರಕ 19:11-16; ಹೋಲಿಸಿ ಕೀರ್ತ 2:7-12.

it-1 516

ಧೈರ್ಯ

ಯೆಹೋವ ದೇವರ ವೈರಿಯಾಗಿರುವ ಈ ಲೋಕದ ಮನೋಭಾವ ಮತ್ತು ಕೃತ್ಯಗಳಿಂದ ಮಲಿನಗೊಳ್ಳದೆ ಇರಲು, ಲೋಕದ ದ್ವೇಷದ ಹೊರತಾಗಿಯೂ ದೇವರಿಗೆ ನಂಬಿಗಸ್ತರಾಗಿ ಉಳಿಯಲು ಕ್ರೈಸ್ತರಿಗೆ ಧೈರ್ಯಬೇಕು. ಅದಕ್ಕಾಗಿಯೇ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ: “ಲೋಕದಲ್ಲಿ ನಿಮಗೆ ಸಂಕಟವಿರುವುದು. ಆದರೆ ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದನು. (ಯೋಹಾ 16:33) ದೇವರ ಕುಮಾರನು ಎಂದೂ ಲೋಕದ ಪ್ರಭಾವಕ್ಕೆ ಮಣಿಯಲಿಲ್ಲ. ಯಾವ ವಿಷಯದಲ್ಲಿಯೂ ಲೋಕದವರಂತೆ ಆಗದೆ ಆತನು ಇಡೀ ಲೋಕವನ್ನು ಜಯಿಸಿದನು. ಕ್ರಿಸ್ತ ಯೇಸುವಿನ ಈ ಕಳಂಕರಹಿತ ಶ್ರೇಷ್ಠ ಮಾದರಿ ನಮ್ಮಲ್ಲಿ ಧೈರ್ಯವನ್ನು ತುಂಬುತ್ತದೆ. ಅವನನ್ನು ಅನುಕರಿಸಿ ಲೋಕದಿಂದ ಮಲಿನಗೊಳ್ಳದೆ ಪ್ರತ್ಯೇಕವಾಗಿ ಉಳಿಯಲು ಬೇಕಾದ ಬಲವನ್ನು ಕೊಡುತ್ತದೆ.—ಯೋಹಾ 17:16.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಯೋಹಾ 17:21-23​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಒಂದು: ಅಥವಾ “ಐಕ್ಯತೆಯಲ್ಲಿ.” ತಾನೂ ತನ್ನ ತಂದೆಯೂ ಸಹಕಾರ ಮತ್ತು ಆಲೋಚನೆಗಳಲ್ಲಿ “ಒಂದು” ಆಗಿರುವ ಪ್ರಕಾರ, ತನ್ನ ನಿಜ ಹಿಂಬಾಲಕರು ಸಹ ಅದೇ ಉದ್ದೇಶಕ್ಕಾಗಿ “ಒಂದು” ಆಗಿ ಕೆಲಸಮಾಡಬೇಕೆಂದು ಯೇಸು ಪ್ರಾರ್ಥಿಸಿದನು. (ಯೋಹಾ 17:22) 1ಕೊರಿಂ 3:6-9​ರಲ್ಲಿ ಪೌಲನು ಕ್ರೈಸ್ತರಲ್ಲಿರಬೇಕಾದ ಇಂಥ ಏಕತೆಯನ್ನು ವರ್ಣಿಸಿದನು. ಅವರು ಒಬ್ಬರೊಂದಿಗೊಬ್ಬರು ಮತ್ತು ದೇವರೊಂದಿಗೆ ಒಟ್ಟಾಗಿ ಕೆಲಸಮಾಡುವಾಗ ಈ ಐಕ್ಯವು ಸ್ಪಷ್ಟವಾಗಿ ತೋರಿಬರುತ್ತದೆ.—1ಕೊರಿಂ 3:8 ಮತ್ತು ಯೋಹಾ 10:30; 17:11​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.

ಐಕ್ಯದಲ್ಲಿ ಪರಿಪೂರ್ಣರಾಗಿರಲಿ: ಅಥವಾ “ಪೂರ್ಣೈಕ್ಯದಿಂದಿರಲಿ.” ಈ ವಚನದಲ್ಲಿ ಯೇಸು ಪರಿಪೂರ್ಣ ಐಕ್ಯವನ್ನು ತಂದೆಯಿಂದ ಪ್ರೀತಿಸಲ್ಪಡುವುದಕ್ಕೆ ಸಂಬಂಧಿಸಿ ಮಾತಾಡಿದ್ದಾನೆ. ಇದು ಕೊಲೊಸ್ಸೆ 3:14​ರ ವಚನದೊಂದಿಗೆ ಸಹಮತದಲ್ಲಿದೆ. ಅಲ್ಲಿ “ಪ್ರೀತಿ . . . ಐಕ್ಯತೆಯ ಪರಿಪೂರ್ಣ ಬಂಧ” ಎಂದು ಹೇಳುತ್ತದೆ. ಈ ಪರಿಪೂರ್ಣ ಐಕ್ಯವು ಸಂಬಂಧ ಸೂಚಕವಾಗಿದೆ. ಅಂದರೆ ಒಬ್ಬನ ವ್ಯಕ್ತಿತ್ವದ ಎಲ್ಲಾ ಭಿನ್ನತೆಗಳು ಅಂದರೆ ಅವರವರ ಸಾಮರ್ಥ್ಯಗಳು, ಹವ್ಯಾಸಗಳು, ಮತ್ತು ಮನಸ್ಸಾಕ್ಷಿಯಂಥ ವ್ಯಕ್ತಿತ್ವದ ಎಲ್ಲಾ ಭಿನ್ನತೆಗಳು ತೆಗೆಯಲ್ಪಡಲಾರವು. ಬದಲಿಗೆ ಯೇಸುವಿನ ಹಿಂಬಾಲಕರು ಕ್ರಿಯೆಯಲ್ಲಿ, ನಂಬಿಕೆಯಲ್ಲಿ ಮತ್ತು ಬೋಧನೆಗಳಲ್ಲಿ ಒಂದಾಗಿರುವರು, ಏಕತೆಯಲ್ಲಿರುವರು ಎಂದರ್ಥ.—ರೋಮ 15:5, 6; 1ಕೊರಿ 1:10; ಎಫೆ 4:3; ಫಿಲಿ 1:27.

ಯೋಹಾ 17:24​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಲೋಕಾದಿ: “ಆದಿ” ಎಂಬುದರ ಗ್ರೀಕ್‌ ಪದವನ್ನು ಇಬ್ರಿ 11:11​ರಲ್ಲಿ “ಗರ್ಭಧರಿಸು” ಎಂದು ಭಾಷಾಂತರಿಸಲಾಗಿದೆ. ಅಲ್ಲಿ ಅದನ್ನು “ಸಂತಾನದೊಂದಿಗೆ” ಬಳಸಲಾಗಿದೆ. ಇಲ್ಲಿ “ಲೋಕಾದಿ” ಎಂದು ಉಪಯೋಗಿಸಿದಾಗ ಅದು ಆದಾಮ ಹವ್ವರ ಮಕ್ಕಳ ಜನನವನ್ನು ಸೂಚಿಸುತ್ತದೆಂದು ವ್ಯಕ್ತವಾಗುತ್ತದೆ. ಯೇಸು “ಲೋಕಾದಿಯನ್ನು” ಹೇಬೆಲನೊಂದಿಗೆ ಜತೆಗೂಡಿಸಿದ್ದಾನೆ. ಏಕೆಂದರೆ ಹೇಬೆಲನು ವಿಮೋಚನೆಗೆ ಅರ್ಹರಾದ ಮನುಷ್ಯರಲ್ಲಿ ಪ್ರಥಮನೂ ಮತ್ತು “ಜೀವದ ಸುರುಳಿಯಲ್ಲಿ ಬರೆಯಲ್ಪಟ್ಟ” ಹೆಸರುಗಳಲ್ಲಿ ಮೊದಲಿಗನೂ ಆಗಿರುವುದರಿಂದಲೇ. (ಲೂಕ 11:50, 51; ಪ್ರಕ 17:8) ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು ಉಪಯೋಗಿಸಿದ ಈ ಮಾತುಗಳು, ಅತಿ ಪುರಾತನ ಕಾಲದಲ್ಲಿ, ಅಂದರೆ ಆದಾಮ ಹವ್ವರು ಮಕ್ಕಳನ್ನು ಹಡೆಯುವ ಮೊದಲೇ ದೇವರು ತನ್ನ ಏಕಜಾತ ಪುತ್ರನನ್ನು ಪ್ರೀತಿಸಿದನು ಎಂಬುದನ್ನೂ ದೃಢಪಡಿಸುತ್ತವೆ.

ಅಕ್ಟೋಬರ್‌ 29–ನವೆಂಬರ್‌ 4

ಬೈಬಲಿನಲ್ಲಿರುವ ರತ್ನಗಳು | ಯೋಹಾನ 18-19

“ಯೇಸು ಸತ್ಯಕ್ಕೆ ಸಾಕ್ಷಿಹೇಳಿದನು”

ಯೋಹಾ 18:37​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸಾಕ್ಷಿ ಹೇಳಲಿಕ್ಕಾಗಿ: ಕ್ರೈಸ್ತ ಗ್ರೀಕ್‌ ಶಾಸ್ತ್ರದಲ್ಲಿ ಬಳಸಲಾಗಿರುವಂತೆ, “ಸಾಕ್ಷಿಹೇಳಲಿಕ್ಕಾಗಿ” (ಮಾರ್ಟರಿಯೊ) ಮತ್ತು “ಸಾಕ್ಷಿ” (ಮಾರ್ಟಿರಿಯಾ; ಮಾರ್ಟಿಸ್‌) ಎಂಬ ಗ್ರೀಕ್‌ ಪದಗಳಿಗೆ ವಿಶಾಲಾರ್ಥವಿದೆ. ಈ ಎರಡೂ ಪದಗಳು ನೇರವಾದ ಅಥವಾ ಸ್ವಂತ ಜ್ಞಾನದಿಂದ ನಿಜತ್ವಗಳಿಗೆ ಸಾಕ್ಷಿ ನೀಡುವುದು ಎಂಬ ಮೂಲಾರ್ಥದಲ್ಲಿ ಬಳಸಲ್ಪಡುತ್ತವೆಯಾದರೂ ಅವುಗಳಲ್ಲಿ “ಪ್ರಕಟಪಡಿಸುವುದು, ಸ್ಥಿರಪಡಿಸುವುದು, ಮೆಚ್ಚಿ ಮಾತಾಡುವುದು” ಎಂಬ ವಿಚಾರಗಳೂ ಸೇರಿರಬಹುದು. ಯೇಸು ತನ್ನಲ್ಲಿ ಸ್ಥಿರವಾಗಿದ್ದ ಸತ್ಯಗಳಿಗೆ ಸಾಕ್ಷಿನೀಡಿ ಅವನ್ನು ಘೋಷಿಸಿದ್ದು ಮಾತ್ರವಲ್ಲ, ತನ್ನ ತಂದೆಯ ಪ್ರವಾದನಾ ವಾಕ್ಯ ಮತ್ತು ವಾಗ್ದಾನಗಳ ಸತ್ಯವನ್ನು ಸಮರ್ಥಿಸುವ ರೀತಿಯಲ್ಲಿ ಜೀವನವನ್ನು ನಡೆಸಿದನು. (2ಕೊರಿಂ 1:20) ದೇವರ ರಾಜ್ಯ ಮತ್ತು ಅದರ ಮೆಸ್ಸೀಯ ರಾಜನ ಕುರಿತಾದ ದೇವರ ಉದ್ದೇಶವು ಸವಿವರವಾಗಿ ಮುಂತಿಳಿಸಲ್ಪಟ್ಟಿತ್ತು. ಯೇಸುವಿನ ಯಜ್ಞಾರ್ಪಿತ ಮರಣದಲ್ಲಿ ಮುಗಿಯಲಿದ್ದ ಅವನ ಪೂರ್ತಿ ಭೂಜೀವಿತವು ಅವನ ಬಗ್ಗೆ ಇದ್ದ ಸಕಲ ಪ್ರವಾದನೆಗಳನ್ನು ನೆರವೇರಿಸಿತು. ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿದ್ದ ಛಾಯೆಗಳನ್ನು ಅಥವಾ ನಮೂನೆಗಳನ್ನು ಸಹ ನೆರವೇರಿಸಿತು. (ಕೊಲೊ 2:16, 17; ಇಬ್ರಿ 10:1) ಹೀಗೆ ಯೇಸು ತನ್ನ ನಡೆಯಲ್ಲಿಯೂ ನುಡಿಯಲ್ಲಿಯೂ “ಸತ್ಯಕ್ಕೆ ಸಾಕ್ಷಿ ಕೊಟ್ಟನು” ಎಂದು ಹೇಳಬಹುದಾಗಿದೆ.

ಸತ್ಯ: ಇಲ್ಲಿ ಯೇಸು ಸಾಮಾನ್ಯ ಸತ್ಯಕ್ಕೆ ಸೂಚಿಸಿ ಹೇಳುತ್ತಿಲ್ಲ. ಬದಲಿಗೆ ದೇವರ ಉದ್ದೇಶಗಳ ಸತ್ಯದ ಬಗ್ಗೆ ಸೂಚಿಸಿದನು. ದೇವರ ಉದ್ದೇಶದ ಒಂದು ಮುಖ್ಯಾಂಶವು “ದಾವೀದನ ಕುಮಾರ” ಯೇಸು, ದೇವರ ರಾಜ್ಯದ ಮಹಾಯಾಜಕ ಮತ್ತು ರಾಜನಾಗಿ ಆಳುವುದಾಗಿದೆ. (ಮತ್ತಾ 1:1) ತನ್ನ ಭೂಜೀವನ, ಸಾರುವ ಕೆಲಸ ಮತ್ತು ತಾನು ಮಾನವ ಲೋಕಕ್ಕೆ ಬಂದ ಮುಖ್ಯ ಕಾರಣವೇ ದೇವರಾಜ್ಯದ ಕುರಿತ ಸತ್ಯವನ್ನು ಪ್ರಕಟಿಸುವುದಾಗಿತ್ತು ಎಂದು ಯೇಸು ವಿವರಿಸಿದನು. ತದ್ರೀತಿಯ ಸಂದೇಶವನ್ನು ದೇವದೂತರು, ಯೇಸು ಹುಟ್ಟುವ ಮೊದಲು ಹಾಗೂ ಯೇಸು ಹುಟ್ಟಿದ ಸಮಯದಲ್ಲಿ ದಾವೀದನು ಜನಿಸಿದ ನಗರವಾದ ಯೂದಾಯದ ಬೇತ್ಲೆಹೇಮಿನಲ್ಲಿ ಪ್ರಕಟಿಸಿದ್ದರು.—ಲೂಕ 1:32, 33; 2:10-14.

ಯೋಹಾ 18:38​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸತ್ಯ ಎಂದರೇನು?: ಪಿಲಾತನು ಈ ಪ್ರಶ್ನೆ ಕೇಳಿದ್ದು ಸಾಮಾನ್ಯ ಸತ್ಯದ ಬಗ್ಗೆ ಆಗಿತ್ತು. ಯೇಸು ಆಗ ತಾನೇ ನಿಖರವಾಗಿ ತಿಳಿಸಿದ “ಸತ್ಯದ” ಬಗ್ಗೆ ಅಲ್ಲ. (ಯೋಹಾ 18:37) ಅದು ಯಥಾರ್ಥವಾದ ಪ್ರಶ್ನೆಯಾಗಿದ್ದಲ್ಲಿ ಯೇಸು ಅದಕ್ಕೆ ನಿಸ್ಸಂದೇಹವಾಗಿ ಉತ್ತರ ಕೊಡುತ್ತಿದ್ದನು. ಆದರೆ ಪಿಲಾತನು ಅದನ್ನು ಸಂಶಯದಿಂದ ಇಲ್ಲವೆ ತಪ್ಪುಹುಡುಕುವ ದೃಷ್ಟಿಯಿಂದ ಕೇಳಿದನು. ಸತ್ಯನಾ? ಹಾಗೆಂದರೇನು? ಅಂಥ ವಿಷಯವೇ ಇಲ್ಲ! ಎಂದು ಚಾತುರ್ಯದಿಂದ ಕೇಳಿರಬಹುದು. ನಿಜವೇನೆಂದರೆ, ಪಿಲಾತ ಪ್ರಶ್ನೆ ಕೇಳಿ ಉತ್ತರಕ್ಕಾಗಿ ಕಾಯಲೂ ಇಲ್ಲ. ಅಲ್ಲಿಂದ ಹೊರಗಿದ್ದ ಯೆಹೂದ್ಯರ ಬಳಿಗೆ ಅವನು ಹೋಗಿಬಿಟ್ಟನು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಯೋಹಾ 19:30​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವನು ತನ್ನ ಜೀವಶಕ್ತಿಯನ್ನು ಒಪ್ಪಿಸಿ ಕೊಟ್ಟನು: ಅಥವಾ “ಅವನು ಸತ್ತನು”; “ಉಸಿರಾಟ ನಿಲ್ಲಿಸಿದನು.” ಇಲ್ಲಿ ‘ಆತ್ಮ’ (ಗ್ರೀಕ್‌, ನ್ಯೂಮ) ಎಂಬ ಪದವನ್ನು “ಉಸಿರು” ಇಲ್ಲವೆ “ಜೀವಶಕ್ತಿ” ಎಂದು ಅರ್ಥಮಾಡಬಹುದು. ಇದಕ್ಕೆ ಆಧಾರವು, ಮಾರ್ಕ 15:37 ಮತ್ತು ಲೂಕ 23:46​ರ ಸಮಾನ ವೃತ್ತಾಂತಗಳಲ್ಲಿ ಗ್ರೀಕ್‌ ಕ್ರಿಯಾಪದ ಎಕ್ಪಿನಿಯೊ (ಅಕ್ಷರಶಃ, ‘ಉಸಿರು ಬಿಡುವನ್ನು’) ಬಳಸಿದ್ದೇ. (ಇಲ್ಲಿ ಅದನ್ನು “ಸತ್ತನು” ಅಥವಾ ಈ ವಚನಗಳ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯಲ್ಲಿ ತಿಳಿಸಿರುವ ಇನ್ನೊಂದು ಭಾಷಾಂತರದಲ್ಲಿ “ಕೊನೆಯ ಉಸಿರೆಳೆದನು” ಎಂದು ಭಾಷಾಂತರಿಸಲಾಗಿದೆ.) “ಒಪ್ಪಿಸಿಕೊಟ್ಟನು” ಎಂಬ ಗ್ರೀಕ್‌ ಪದದ ಉಪಯೋಗವು ಯೇಸು ಜೀವದ ಒದ್ದಾಟವನ್ನು ತಾನಾಗಿಯೇ ನಿಲ್ಲಿಸಿದನು ಎಂಬರ್ಥ ಕೊಡುತ್ತದೆಂದು ಕೆಲವರು ಸೂಚಿಸುತ್ತಾರೆ. ಯಾಕೆಂದರೆ ಆಗಲೇ ಎಲ್ಲ ವಿಷಯಗಳು ನೆರವೇರಿದ್ದವು. ಅವನು ಸ್ವಇಷ್ಟದಿಂದ, “ತನ್ನ ಪ್ರಾಣವನ್ನು ಧಾರೆಯೆರೆದನು.”—ಯೆಶಾ 53:12; ಯೋಹಾ 10:11.

ಯೋಹಾ 19:31​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಆ ದಿನವು ಮಹಾ ಸಬ್ಬತ್ತಾಗಿತ್ತು: ಪಸ್ಕವನ್ನು ಅನುಸರಿಸಿ ಬರುವ ನೈಸಾನ್‌ 15​ರ ದಿನವು, ಅದು ವಾರದ ಯಾವುದೇ ದಿನವಾಗಿದ್ದರೂ ಮಹಾ ಸಬ್ಬತ್ತಾಗಿತ್ತು. (ಯಾಜ 23:5-7) ಈ ವಿಶೇಷ ಸಬ್ಬತ್‌, ಕ್ರಮವಾದ ಸಬ್ಬತ್‌ ದಿನದೊಂದಿಗೆ ತಾಳೆಯಾಗುವಾಗ (ಶುಕ್ರವಾರದ ಸೂರ್ಯಾಸ್ತಮಾನದಿಂದ ಶನಿವಾರದ ಸೂರ್ಯಾಸ್ತಮಾನದ ವರೆಗಿನ ಯೆಹೂದಿ ವಾರದ ಏಳನೆಯ ದಿನ) ಅದು ಮಹಾ ಸಬ್ಬತ್ತಾಗುತ್ತಿತ್ತು. ಯೇಸು ತೀರಿಹೋದ ಶುಕ್ರವಾರವನ್ನು ಅಂಥ ಒಂದು ಸಬ್ಬತ್‌ ಅನುಸರಿಸಿತ್ತು. ಕ್ರಿ.ಶ. 29​ರಿಂದ 35​ರ ಸಮಯಾವಧಿಯಲ್ಲಿ ನೈಸಾನ್‌ 14ನೆಯ ದಿನ ಶುಕ್ರವಾರದಂದು ಬಿದ್ದಂಥ ಒಂದೇ ಒಂದು ವರ್ಷವು ಕ್ರಿ.ಶ. 33ನೆಯ ವರ್ಷದಲ್ಲಾಗಿತ್ತು. ಹೀಗೆ ಯೇಸು ತೀರಿಹೋದದ್ದು ನೈಸಾನ್‌ 14, ಕ್ರಿ.ಶ. 33​ರಂದೇ ಎಂಬ ತೀರ್ಮಾನಕ್ಕೆ ಈ ಪುರಾವೆ ಆಧಾರ ಕೊಡುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ