ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr18 ಸೆಪ್ಟೆಂಬರ್‌ ಪು. 2-6
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
  • ಉಪಶೀರ್ಷಿಕೆಗಳು
  • ಸೆಪ್ಟೆಂಬರ್‌ 3-9
  • ಸೆಪ್ಟೆಂಬರ್‌ 10-16
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2018
mwbr18 ಸೆಪ್ಟೆಂಬರ್‌ ಪು. 2-6

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಸೆಪ್ಟೆಂಬರ್‌ 3-9

ಬೈಬಲಿನಲ್ಲಿರುವ ರತ್ನಗಳು | ಯೋಹಾನ 1-2

“ಯೇಸು ಮೊದಲ ಅದ್ಭುತ ಮಾಡಿದನು”:

jy 41 ¶6

ಅವನು ಮೊದಲ ಅದ್ಭುತ ಮಾಡಿದನು

ಇದು ಯೇಸು ಮಾಡಿದ ಮೊದಲ ಅದ್ಭುತ. ಅವನ ಹೊಸ ಶಿಷ್ಯರು ಈ ಅದ್ಭುತವನ್ನು ನೋಡಿದಾಗ ಅವರಿಗೆ ಅವನ ಮೇಲಿದ್ದ ನಂಬಿಕೆ ಬಲಗೊಂಡಿತು. ನಂತರ ಯೇಸು, ಅವನ ತಾಯಿ ಮತ್ತು ಅವನ ಮಲತಮ್ಮಂದಿರು ಕಪೆರ್ನೌಮ್‌ ಪಟ್ಟಣಕ್ಕೆ ಪ್ರಯಾಣ ಮಾಡಿದರು. ಇದು ಗಲಿಲಾಯ ಸಮುದ್ರದ ವಾಯುವ್ಯ ತೀರದಲ್ಲಿತ್ತು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಯೋಹಾ 1:1​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ವಾಕ್ಯ: ಅಥವಾ “ಲೋಗೋಸ್‌”. ಗ್ರೀಕ್‌ನಲ್ಲಿ ಹೋ ಲೋಗೋಸ್‌. ಇಲ್ಲಿ ಇದನ್ನು ಒಂದು ಬಿರುದಾಗಿ ಬಳಸಲಾಗಿದೆ. ಅಲ್ಲದೆ ಇದನ್ನು ಯೋಹಾ 1:14 ಮತ್ತು ಪ್ರಕ 19:13​ರಲ್ಲೂ ಬಳಸಲಾಗಿದೆ. ಈ ಬಿರುದು ಯೇಸುವಿಗೆ ಅನ್ವಯಿಸುತ್ತದೆಂದು ಯೋಹಾನನು ಗುರುತಿಸಿದನು. ಯೇಸು ಮಾನವ ಪೂರ್ವದ ಅಸ್ತಿತ್ವದಲ್ಲಿ ಆತ್ಮಜೀವಿಯಾಗಿದ್ದಾಗ, ಪರಿಪೂರ್ಣ ಮನುಷ್ಯನಾಗಿ ಭೂಮಿಯಲ್ಲಿ ಸೇವೆಮಾಡುತ್ತಿದ್ದಾಗ ಮತ್ತು ಸ್ವರ್ಗಕ್ಕೆ ಏರಿಸಲ್ಪಟ್ಟಾಗ ಅವನಿಗೆ ಈ ಬಿರುದನ್ನು ಅನ್ವಯಿಸಲಾಗಿತ್ತು. ದೇವರ ಸಂಪರ್ಕ ಸಾಧನವಾದ ವಾಕ್ಯ ಅಥವಾ ವಕ್ತಾರನು ಯೇಸು ಆಗಿದ್ದನು. ಸೃಷ್ಟಿಕರ್ತನ ಮಾಹಿತಿ ಮತ್ತು ಸಲಹೆಗಳನ್ನು ಬೇರೆ ಆತ್ಮಜೀವಿಗಳಿಗೆ ಮತ್ತು ಮನುಷ್ಯರಿಗೆ ತಿಳಿಸುವುದು ಅವನ ಕೆಲಸವಾಗಿತ್ತು. ಹಾಗಾಗಿ ಭೂಮಿಗೆ ಬರುವ ಮೊದಲು ಯೆಹೋವನು ಮನುಷ್ಯರೊಂದಿಗೆ ಈ ವಾಕ್ಯದ ಮೂಲಕ ಮಾತಾಡಿದನು ಎನ್ನುವುದು ನ್ಯಾಯಸಮ್ಮತ. ಯೇಸು ದೇವರ ದೇವದೂತ ಪ್ರತಿನಿಧಿಯಾಗಿ ಮಾತನಾಡಿದನು.—ಆದಿ 16:7-11; 22:11; 31:11; ವಿಮೊ 3:2-5; ನ್ಯಾಯ 2:1-4; 6:11, 12; 13:3.

ಒಂದಿಗೆ: ಅಕ್ಷರಾರ್ಥ “ಸಮೀಪ.” ಈ ಸನ್ನಿವೇಶದಲ್ಲಿ ಗ್ರೀಕ್‌ ಉಪಸರ್ಗವಾದ ಪ್ರೋಸ್‌ ಸಮೀಪದ ಸಂಬಂಧ ಅಥವಾ ಒಡನಾಟವನ್ನು ಸೂಚಿಸುತ್ತದೆ. ಇದು ಇಬ್ಬರು ಪ್ರತ್ಯೇಕ ವ್ಯಕ್ತಿಗಳಿಗೂ ಸೂಚಿತವಾಗುತ್ತದೆ. ಅಂದರೆ ಇಲ್ಲಿ, ವಾಕ್ಯ ಮತ್ತು ಒಬ್ಬನೇ ಸತ್ಯದೇವರಿಗೆ ಸೂಚಿತವಾಗಿದೆ.

ವಾಕ್ಯ ಒಬ್ಬ ದೇವನಾಗಿದ್ದನು: ಅಥವಾ “ವಾಕ್ಯವು ದೈವಿಕವಾಗಿತ್ತು [ಅಥವಾ “ದೇವ ಸದೃಶ್ಯನಾಗಿದ್ದನು”].” ಯೋಹಾನನ ಈ ಮಾತು “ವಾಕ್ಯ”ದ ಅಂದರೆ ಯೇಸು ಕ್ರಿಸ್ತನ ವಿಶೇಷ ಗುಣಲಕ್ಷಣವನ್ನು ವರ್ಣಿಸುತ್ತದೆ. (ಗ್ರೀಕ್‌ ಪದ, ಹೋ ಲೋಗೋಸ್‌; ಈ ವಚನದಲ್ಲಿ ವಾಕ್ಯ ಪದದ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ದೇವರು ಯೇಸುವಿನ ಮೂಲಕ ಸಮಸ್ತವನ್ನೂ ನಿರ್ಮಿಸಿದನು. ಅವನಿಗೆ ದೇವರ ಜೇಷ್ಠಪುತ್ರನೆಂಬ ಉನ್ನತ ಸ್ಥಾನವಿದೆ. ಹಾಗಾಗಿ ಅವನನ್ನು “ದೇವನು, ದೇವರಂತಿರುವವನು, ದೈವಿಕನು, ದೈವಿಕ ಜೀವಿ” ಎಂದು ವರ್ಣಿಸಲು ಆಧಾರವಿದೆ. ಅನೇಕ ಭಾಷಾಂತರಗಾರರು ಅವನನ್ನು ಸರ್ವಶಕ್ತ ದೇವರಿಗೆ ಸಮಾನನಾಗಿ ಭಾಷಾಂತರಿಸಿದ್ದಾರೆ. ಆದ್ದರಿಂದ “ವಾಕ್ಯ ದೇವರಾಗಿದ್ದನು” ಎಂಬ ತರ್ಜುಮೆಯನ್ನು ಬೆಂಬಲಿಸುತ್ತಾರೆ. ಆದರೆ “ವಾಕ್ಯ”ವನ್ನು ಸರ್ವಶಕ್ತ ದೇವರು ಎಂಬ ಅರ್ಥದಲ್ಲಿ ಯೋಹಾನನು ಸೂಚಿಸಲಿಲ್ಲ. ಅದಕ್ಕೆ ಕಾರಣಗಳೂ ಇವೆ. ಏನಂದರೆ ಅದಕ್ಕೆ ಮುಂಚಿನ ಮತ್ತು ನಂತರ ಬರುವ ವಾಕ್ಯ ಭಾಗಗಳು ಸ್ಪಷ್ಟವಾಗಿ “ವಾಕ್ಯ” ‘ದೇವರೊಂದಿಗೆ’ ಇದ್ದನು ಎಂದು ಹೇಳುತ್ತವೆ. ಅಲ್ಲದೆ, 1​ನೇ ಮತ್ತು 2​ನೇ ವಚನಗಳಲ್ಲಿ ಗ್ರೀಕ್‌ ಪದ ಥಿಯೋಸ್‌ (ದೇವರು) ಮೂರು ಬಾರಿ ಬರುತ್ತದೆ. ಒಂದನೆಯ ಮತ್ತು ಮೂರನೆಯ ವಚನಗಳಲ್ಲಿ ಥಿಯೋಸ್‌ ಪದದ ಮುಂಚೆ ನಿರ್ದೇಶಕ ಗುಣವಾಚಿ ಇದೆ. ಆದರೆ ಎರಡನೆಯ ಥಿಯೋಸ್‌ನ ಮುಂಚೆ ನಿರ್ದೇಶಕ ಗುಣವಾಚಿ ಇಲ್ಲದಿರುವುದು ಗಮನಾರ್ಹ ಎಂದು ಅನೇಕ ತಜ್ಞರು ಒಪ್ಪುತ್ತಾರೆ. ಈ ಸನ್ನಿವೇಶದಲ್ಲಿ ಎಲ್ಲಿ ಥಿಯೋಸ್‌ನ ಮುಂಚೆ ಗುಣವಾಚಿ ಬರುತ್ತದೋ ಅಲ್ಲಿ ಅದು ಸರ್ವಶಕ್ತ ದೇವರಿಗೆ ಸೂಚಿತ. ಆದರೆ ಥಿಯೋಸ್‌ನ ಮುಂಚೆ ಗುಣವಾಚಿ ಇಲ್ಲದಿದ್ದಾಗ ಅದರ ಅರ್ಥವು ವ್ಯಾಕರಣ ಬದ್ಧವಾಗಿ ಬದಲಾಗುತ್ತದೆ. “ವಾಕ್ಯ”ದ ಒಂದು ವಿಶೇಷ ಗುಣವನ್ನು ಅದು ವರ್ಣಿಸುತ್ತದೆ. ಹಾಗಾಗಿ ಇಂಗ್ಲಿಷ್‌, ಜರ್ಮನ್‌, ಫ್ರೆಂಚ್‌ ಭಾಷೆಗಳ ಅನೇಕ ಬೈಬಲ್‌ ಭಾಷಾಂತರಗಳು ಈ ವಚನವನ್ನು “ವಾಕ್ಯ,” “ಒಬ್ಬ ದೇವ; ದೈವಿಕ; ದೈವಿಕ ಜೀವಿ, ದೈವಿಕ ರೀತಿಯ; ದೇವಸದೃಶ್ಯ” ಆಗಿದ್ದನು ಎಂದೇ ಭಾಷಾಂತರಿಸಿವೆ. ನೂತನಲೋಕ ಭಾಷಾಂತರದಲ್ಲಿಯೂ ಹೀಗೆಯೇ ಇದೆ. ಇದೇ ವಿಚಾರವನ್ನು ಕಾಪ್ಟಿಕ್‌ ಭಾಷೆಯ ಸಹೀಡಿಕ್‌ ಮತ್ತು ಬೊಹ್ಯಾರಿಕ್‌ ಉಪಭಾಷೆಗಳ ಹಳೆಯ ತರ್ಜುಮೆಗಳೂ ಸಮರ್ಥಿಸಿವೆ. ಇವು ಪ್ರಾಯಶಃ ಕ್ರಿ.ಶ. 3-4​ನೇ ಶತಮಾನದಲ್ಲಿ ಬರೆಯಲಾದವು. ಇವು ಯೋಹಾನ 1:1​ರ ಥಿಯೋಸ್‌ನನ್ನು ಮೊದಲ ಬಾರಿ ಹೇಳಿರುವುದಕ್ಕೂ ಎರಡನೇ ಬಾರಿ ಹೇಳಿರುವುದಕ್ಕೂ ವ್ಯತ್ಯಾಸವಾಗಿ ಭಾಷಾಂತರಿಸಲಾಗಿದೆ. ಈ ಭಾಷಾಂತರಗಳು “ವಾಕ್ಯ”ದ ಒಂದು ಗುಣವನ್ನು ಎತ್ತಿಹೇಳಿವೆ. ಅಂದರೆ ಅವನ ಸ್ವಭಾವ ದೇವರಂತಿತ್ತು ಎಂದು ಹೇಳಿದರೂ ಅದು ಅವನನ್ನು ತಂದೆಯಾದ ಸರ್ವಶಕ್ತ ದೇವರಿಗೆ ಸರಿಸಮಾನನಾಗಿ ಮಾಡುವುದಿಲ್ಲ. ಇದಕ್ಕೆ ಹೊಂದಿಕೆಯಲ್ಲಿ ಕೊಲೊ 2:9 ಕ್ರಿಸ್ತನನ್ನು “ದೈವಿಕ ಗುಣದ ಸರ್ವ ಸಂಪೂರ್ಣತೆ” ಇರುವವನು ಎಂದು ವರ್ಣಿಸುತ್ತದೆ ಮತ್ತು 2 ಪೇತ್ರ 1:4​ಕ್ಕೆ ಅನುಸಾರ, ಕ್ರಿಸ್ತನ ಜೊತೆ ಬಾಧ್ಯರು ಸಹ “ದೈವಿಕ ಸ್ವಭಾವದಲ್ಲಿ” ಪಾಲುಗಾರರು ಆಗುವರು. ಅದಲ್ಲದೆ ಸೆಪ್ಟೂಅಜಂಟ್‌ ಭಾಷಾಂತರದಲ್ಲಿ ಥಿಯೋಸ್‌ ಎಂಬ ಗ್ರೀಕ್‌ ಪದವು, ಹಿಬ್ರೂ ಭಾಷೆಯಲ್ಲಿ “ದೇವರು” ಎಂದು ಭಾಷಾಂತರವಾಗಿರುವ ಎಲ್‌ ಮತ್ತು ಎಲೋಹಿಮ್‌ ಪದಗಳಿಗೆ ಸಮಾನಾರ್ಥದ ಪದ. ಈ ಪದಗಳಿಗೆ “ಶಕ್ತನು, ಬಲಾಢ್ಯನು” ಎಂಬ ಮೂಲಾರ್ಥವಿದೆ. ಈ ಹಿಬ್ರೂ ಪದಗಳನ್ನು ಸರ್ವಶಕ್ತನಾದ ದೇವರಿಗೆ, ಬೇರೆ ದೇವರುಗಳಿಗೆ ಮತ್ತು ಮನುಷ್ಯರಿಗೂ ಸೂಚಿಸಿ ಬಳಸಲಾಗುತ್ತದೆ. (ಯೋಹಾ 10:34​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ) ವಾಕ್ಯವನ್ನು“ಒಬ್ಬ ದೇವರು” ಅಥವಾ “ಪರಾಕ್ರಮಿಯಾದ (ಶಕ್ತನಾದ, ನೂತನಲೋಕ ಭಾಷಾಂತರ) ದೇವರು” ಎಂದು ಹೇಳಿರುವುದು ಯೆಶಾಯ 9:6​ರಲ್ಲಿರುವ ಪ್ರವಾದನೆಗೆ ಅನುಸಾರವಾಗಿದೆ. ಮೆಸ್ಸೀಯನನ್ನು “ಶಕ್ತನಾದ ದೇವರು” (“ಸರ್ವಶಕ್ತನಾದ ದೇವರು” ಅಲ್ಲ) ಎಂದು ಕರೆಯುವರೆಂದು ಇಲ್ಲಿ ಮುಂತಿಳಿಸಲಾಗಿದೆ ಮತ್ತು ಅವನು ತನ್ನ ಪ್ರಜೆಗಳಾಗಿ ಜೀವಿಸುವವರಿಗೆ “ನಿತ್ಯನಾದ ತಂದೆ” ಆಗಲಿರುವನು. ಅವನ ಸ್ವಂತ ತಂದೆಯಾದ “ಸೇನಾಧೀಶ್ವರನಾದ ಯೆಹೋವನ” ಆಗ್ರಹವು ಇದನ್ನು ಪೂರೈಸುವುದು.—ಯೆಶಾ 9:7.

ಯೋಹಾ 1:29​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ದೇವರ ಕುರಿಮರಿ: ಯೇಸು ದೀಕ್ಷಾಸ್ನಾನ ಹೊಂದಿ, ಪಿಶಾಚನಿಂದ ಶೋಧಿತನಾಗಿ ಹಿಂತಿರುಗಿದ ಬಳಿಕ ಸ್ನಾನಿಕನಾದ ಯೋಹಾನನು ಅವನನ್ನು “ದೇವರ ಕುರಿಮರಿ” ಎಂದು ಪರಿಚಯ ಪಡಿಸಿದನು. ಈ ಹೇಳಿಕೆಯು ಈ ವಚನದಲ್ಲಿ ಮತ್ತು ಯೋಹಾನ 1:36​ರಲ್ಲಿ ಮಾತ್ರ ಇದೆ. (ಪರಿಶಿಷ್ಟ ಎ7 ನೋಡಿ) ಯೇಸುವನ್ನು ಒಂದು ಕುರಿಮರಿಗೆ ಹೋಲಿಸಿರುವುದು ತಕ್ಕದ್ದಾಗಿದೆ. ಜನರ ಪಾಪಗಳ ಸೂಚನೆಯಾಗಿ ಮತ್ತು ದೇವರ ಸಾಮೀಪ್ಯತೆಯನ್ನು ಪ್ರವೇಶಿಸುವ ಸೂಚಕವಾಗಿ ಕುರಿಗಳನ್ನು ಅರ್ಪಿಸಲಾಗುತ್ತಿದ್ದ ವಿಷಯ ಬೈಬಲಿನಾದ್ಯಂತ ಇದೆ. ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನು ಮಾನವಕುಲದ ಪರವಾಗಿ ಅರ್ಪಿಸುವುದನ್ನು ಇದು ಮುನ್ಸೂಚಿಸಿತ್ತು. “ದೇವರ ಕುರಿಮರಿ” ಎಂಬ ಪದಸರಣಿ ಪ್ರೇರಿತ ಬೈಬಲಿನ ಬೇರೆ ಹಲವಾರು ಉದ್ದರಿತ ಭಾಗಗಳಿಂದ ಬಂದಿರ ಸಾಧ್ಯವಿದೆ. ಸ್ನಾನಿಕನಾದ ಯೋಹಾನನಿಗೆ ಹೀಬ್ರು ಶಾಸ್ತ್ರಗಳ ಒಳ್ಳೆಯ ಪರಿಚಯವಿತ್ತು. ಆ ರೀತಿಯಲ್ಲಿ ನೋಡುವುದಾದರೆ ಅವನು ದೇವರ ಕುರಿಮರಿ, ಎಂಬ ಹೇಳಿಕೆ ಈ ಮುಂದಿನ ಒಂದು ಅಥವಾ ಹೆಚ್ಚು ವಚನಗಳಿಗೆ ಸಂಬಂಧಿಸಿದ್ದಿರಬೇಕು, ಯಾವುದೆಂದರೆ, ಅಬ್ರಹಾಮನು ತನ್ನ ಸ್ವಂತ ಪುತ್ರನ ಬದಲಿಗೆ ಅರ್ಪಿಸಿದ ಗಂಡುಕುರಿ (ಆದಿ 22:13), ಈಜಿಪ್ಟಿನಲ್ಲಿ ದಾಸತ್ವದಲ್ಲಿದ್ದ ಇಸ್ರಾಯೇಲ್ಯರ ಬಿಡುಗಡೆಗಾಗಿ ಅರ್ಪಿಸಿದ ಪಸ್ಕದ ಕುರಿಮರಿ (ವಿಮೋ 12:1-13), ಇಲ್ಲವೆ ಯೆರೂಸಲೇಮಿನಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವರ ಯಜ್ಞವೇದಿಯ ಮೇಲೆ ಅರ್ಪಿಸಲಾದ ಗಂಡುಕುರಿಮರಿ (ವಿಮೋ 29:38-42). ಯೆಶಾಯನ ಪ್ರವಾದನೆಯಲ್ಲಿ ಯೆಹೋವನು “ನನ್ನ ಸೇವಕನು” ಎಂದು ಕರೆದವನನ್ನು, “ವದ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ” ಎಂದು ತಿಳಿಸಿರುವ ವಿಷಯ ಯೋಹಾನನ ಮನಸ್ಸಿನಲ್ಲಿದ್ದಿರಬಹುದು. (ಯೆಶಾ 52:13; 53:5, 7, 11) ಅಪೊಸ್ತಲ ಪೌಲನು ಕೊರಿಂಥದವರಿಗೆ ಬರೆದ ಪ್ರಥಮ ಪತ್ರಿಕೆಯಲ್ಲಿ ಯೇಸುವನ್ನು “ನಮ್ಮ ಪಸ್ಕದ ಕುರಿಮರಿ” ಎಂದು ಸೂಚಿಸಿದ್ದಾನೆ. (1 ಕೊರಿ 5:7) ಅಪೊಸ್ತಲ ಪೇತ್ರನು, ‘ದೋಷರಹಿತವೂ ನಿಷ್ಕಳಂಕವೂ ಆಗಿರುವ ಕುರಿಮರಿಯಾದ ಕ್ರಿಸ್ತನ ಅಮೂಲ್ಯವಾದ ರಕ್ತದ’ ಬಗ್ಗೆ ಮಾತಾಡಿದನು. (1 ಪೇತ್ರ 1:19) ಪ್ರಕಟನೆ ಪುಸ್ತಕದಲ್ಲಿ 25ಕ್ಕಿಂತಲೂ ಹೆಚ್ಚು ಬಾರಿ ಮಹಿಮಾಭರಿತ ಯೇಸುವನ್ನು ಸಾಂಕೇತಿಕ “ಕುರಿಮರಿ” ಎಂದು ಕರೆಯಲಾಗಿದೆ.—ಕೆಲವು ಉದಾಹರಣೆಗಳು: ಪ್ರಕಟನೆ 5:8; 6:1; 7:9; 12:11; 13:8; 14:1; 15:3; 17:14; 19:7; 21:9; 22:1.

ಸೆಪ್ಟೆಂಬರ್‌ 10-16

ಬೈಬಲಿನಲ್ಲಿರುವ ರತ್ನಗಳು | ಯೋಹಾನ 3-4

“ಯೇಸು ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡುತ್ತಾನೆ”

ಯೋಹಾ 4:6​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ದಣಿದಿದ್ದ ಯೇಸು: ಯೇಸು “ದಣಿದಿದ್ದ” ಎಂಬುದನ್ನು ಬೈಬಲ್‌ ಇದೊಂದೇ ಸ್ಥಳದಲ್ಲಿ ತಿಳಿಸುತ್ತದೆ. ಆಗ ಮಧ್ಯಾಹ್ನ ಸುಮಾರು 12 ಗಂಟೆಯಾಗಿತ್ತು. ಆ ದಿನ ಬೆಳಗ್ಗೆ ಯೇಸು ಯೂದಾಯದ ಯೋರ್ದನ್‌ ಕಣಿವೆಯಿಂದ ಸಮಾರ್ಯದ ಸಿಖರ್‌ ಊರಿಗೆ ಪ್ರಯಾಣ ಮಾಡಿದ್ದಿರಬೇಕು. ಅದು 900 ಮೀ. (3,000 ಅಡಿ) ಅಥವಾ ಅದಕ್ಕಿಂತ ಹೆಚ್ಚು ಎತ್ತರದ ಕಡಿದಾದ ಪ್ರದೇಶವಾಗಿತ್ತು.—ಯೋಹಾ 4:3-5; ಪರಿಶಿಷ್ಟ ಎ7 ನೋಡಿ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಯೋಹಾ 3:29​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಮದುಮಗನ ಸ್ನೇಹಿತನು: ಬೈಬಲ್‌ ಸಮಯಗಳಲ್ಲಿ ಮದುಮಗನ ಒಬ್ಬ ಆಪ್ತ ಪರಿಚಿತನು ಅವನ ಕಾನೂನುಬದ್ಧ ಪ್ರತಿನಿಧಿಯಾಗಿ ಕೆಲಸಮಾಡುತ್ತಾ ಮದುವೆಯ ಏರ್ಪಾಡಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದನು. ಮದುಮಗ ಮತ್ತು ಮದುಮಗಳನ್ನು ಒಟ್ಟುಸೇರಿಸಿದವನು ಅವನೇ ಎಂದು ಎಣಿಸಲಾಗುತ್ತಿತ್ತು. ಮದುವೆಯದಿನ ಮದುಮಗನ ಮನೆಗೆ ಇಲ್ಲವೆ ಅವನ ತಂದೆಯ ಮನೆಗೆ ವಧುವಿನ ಮೆರವಣಿಗೆ ಬರುತ್ತಿತ್ತು. ಅಲ್ಲಿ ಮದುವೆಯ ಔತಣ ನಡೆಯುತ್ತಿತ್ತು. ಆ ಔತಣದ ಸಮಯ ಮದುಮಗನು ತನ್ನ ವಧುವಿನೊಂದಿಗೆ ಮಾತಾಡುವುದನ್ನು ಕೇಳಿಸಿಕೊಂಡಾಗ, ಮದುಮಗನ ಸ್ವರದ ನಿಮಿತ್ತ ಅವನ ಸ್ನೇಹಿತನು ಸಂತೋಷಪಡುತ್ತಿದ್ದನು. ಏಕೆಂದರೆ ತಾನು ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿದ್ದೇನೆ ಎಂಬ ಅನಿಸಿಕೆ ಅವನಿಗಾಗುತ್ತಿತ್ತು. ಸ್ನಾನಿಕನಾದ ಯೋಹಾನನು ತನ್ನನ್ನು “ಮದುಮಗನ ಸ್ನೇಹಿತನಿಗೆ” ಹೋಲಿಸಿದನು. ಈ ಸನ್ನಿವೇಶದಲ್ಲಿ ಯೇಸು ಮದುಮಗನಾಗಿದ್ದನು ಮತ್ತು ಅವನ ಶಿಷ್ಯರು ಅವನ ಸಾಂಕೇತಿಕ ವಧು ವರ್ಗವಾಗಿದ್ದರು. ಮೆಸ್ಸೀಯನಿಗೆ ದಾರಿ ಸಿದ್ಧಮಾಡುತ್ತಾ ಸ್ನಾನಿಕ ಯೋಹಾನನು “ಮದುಮಗಳ” ಪ್ರಥಮ ಸದಸ್ಯರನ್ನು ಯೇಸು ಕ್ರಿಸ್ತನಿಗೆ ಪರಿಚಯ ಮಾಡಿಸಿದನು. (ಯೋಹಾ 1:29, 35; 2 ಕೊರಿ 11:2; ಎಫೆ 5:22-27; ಪ್ರಕ 21:2, 9) “ಮದುಮಗನ ಸ್ನೇಹಿತನು” ವಧುವಿನ ಪರಿಚಯ ಮಾಡಿಸುವುದರಲ್ಲಿ ಸಫಲನಾದನು. ಆ ಬಳಿಕ ಅವನು ಅದರಲ್ಲಿ ಪ್ರಮುಖ ಪಾತ್ರಧಾರಿಯಾಗಿರಲಿಲ್ಲ. ಅದೇ ರೀತಿ ಯೇಸುವಿನ ಸಂಬಂಧದಲ್ಲಿ ಯೋಹಾನನು ಹೀಗಂದನು: “ಅವನು ಹೆಚ್ಚುತ್ತಾ ಹೋಗಬೇಕು. ಆದರೆ ನಾನು ಕಡಿಮೆಯಾಗುತ್ತಾ ಹೋಗಬೇಕು.”—ಯೋಹಾ. 3:30.

ಯೋಹಾ 4:10​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಜೀವದಾಯಕ ನೀರು: ಈ ಗ್ರೀಕ್‌ ಪದಸರಣಿಯನ್ನು ಇಲ್ಲಿ ಅಕ್ಷರಾರ್ಥಕವಾಗಿ ಬಳಸಲಾಗಿದೆ. ಇದು ಹರಿಯುವ ನೀರು, ಬುಗ್ಗೆಯ ನೀರು ಅಥವಾ ಬುಗ್ಗೆಗಳಿಂದ ಹೊರಡುವ ಬಾವಿಯ ಸಿಹಿ ನೀರನ್ನು ಸೂಚಿಸುತ್ತದೆ. ಇದು ತೊಟ್ಟಿಯಲ್ಲಿ ಹರಿಯದೆ ನಿಂತ ನೀರಲ್ಲ. ಯಾಜ 14:5​ರಲ್ಲಿ “ಹರಿಯುವ ನೀರು” ಎಂಬುದಕ್ಕಿರುವ ಹೀಬ್ರು ಪದಸರಣಿಯು ಅಕ್ಷರಾರ್ಥದಲ್ಲಿ “ಜೀವಿಸುವ ನೀರು” ಎಂದಾಗಿದೆ. ಯೆರೆ 2:13 ಮತ್ತು 17:13​ರಲ್ಲಿ ಯೆಹೋವನನ್ನು “ಜೀವಜಲದ ಬುಗ್ಗೆ” ಅಂದರೆ “ಜೀವದಾಯಕ ಸಾಂಕೇತಿಕ ಬುಗ್ಗೆ” ಎಂದು ಕರೆಯಲಾಗಿದೆ. ಯೇಸು ಸಮಾರ್ಯದ ಹೆಂಗಸಿನೊಂದಿಗೆ ಮಾತಾಡಿದಾಗ “ಜೀವದಾಯಕ ನೀರು” ಎಂಬುದನ್ನು ಸಾಂಕೇತಿಕವಾಗಿ ಉಪಯೋಗಿಸಿದನು. ಆದರೆ ಮೊದಲು, ಅವಳು ಅದನ್ನು ಅಕ್ಷರಾರ್ಥಕವಾಗಿ ಅರ್ಥಮಾಡಿಕೊಂಡಳು. (ಯೋಹಾ 4:11; ಯೋಹಾ 4:14​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

wp16. 2 ಪುಟ, 9-10 ಕ್ರೈಸ್ತರು ದೇವಾಲಯದಲ್ಲಿ ಆರಾಧನೆ ಮಾಡಬೇಕೇ?

ಯೇಸು ಮುಂದುವರಿಸಿದ್ದು: “ಆದರೂ ಸತ್ಯಾರಾಧಕರು ತಂದೆಯನ್ನು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ, ಅದು ಈಗಲೇ ಬಂದಿದೆ; ಏಕೆಂದರೆ ತಂದೆಯು ತನ್ನನ್ನು ಆರಾಧಿಸಲು ಇಂಥವರನ್ನೇ ಹುಡುಕುತ್ತಿದ್ದಾನೆ.” (ಯೋಹಾನ 4:23) ಶತಮಾನಗಳಿಂದ ಯೆಹೂದ್ಯರು ಯೆರೂಸಲೇಮಿನಲ್ಲಿದ್ದ ಭವ್ಯವಾದ ದೇವಾಲಯವನ್ನು ತಮ್ಮ ಆರಾಧನೆಯ ಕೇಂದ್ರ ಅಂತ ಎಣಿಸುತ್ತಿದ್ದರು. ತಮ್ಮ ದೇವರಾದ ಯೆಹೋವನಿಗೆ ಯಜ್ಞವನ್ನರ್ಪಿಸಲು ಅವರು ವರ್ಷಕ್ಕೆ ಮೂರು ಬಾರಿ ಅಲ್ಲಿಗೆ ಪ್ರಯಾಣಿಸುತ್ತಿದ್ದರು. (ವಿಮೋಚನಕಾಂಡ 23:14-17) ಆದರೆ ಇದೆಲ್ಲ ಬದಲಾಗಿ, “ಸತ್ಯಾರಾಧಕರು” ದೇವರನ್ನು “ಪವಿತ್ರಾತ್ಮದಿಂದಲೂ ಸತ್ಯದಿಂದಲೂ” ಆರಾಧಿಸುತ್ತಾರೆ ಎಂದು ಯೇಸು ಹೇಳಿದನು.

ಯೆಹೂದ್ಯರ ದೇವಾಲಯವು ನಿರ್ದಿಷ್ಟ ಪ್ರದೇಶದಲ್ಲಿದ್ದ ನೋಡಬಹುದಾದ ಮತ್ತು ಹೋಗಬಹುದಾದ ಕಟ್ಟಡವಾಗಿತ್ತು. ಆದರೆ ಯೇಸು ಹೇಳಿದ ಆತ್ಮ ಮತ್ತು ಸತ್ಯ ಇಂಥ ವಿಷಯವಲ್ಲ ಅವು ಯಾವ ಸ್ಥಳಕ್ಕೂ ಸೀಮಿತವಲ್ಲ, ಮತ್ತು ಪಂಚೇಂದ್ರಿಯಗಳಿಂದ ಗ್ರಹಿಸಲು ಸಾಧ್ಯವಿಲ್ಲ. ಹೀಗೆ ಗೆರೀಜ್ಜೀಮ್‌ ಬೆಟ್ಟ, ಯೆರೂಸಲೇಮಿನಲ್ಲಿದ್ದ ದೇವಾಲಯ ಅಥವಾ ಬೇರೆ ಯಾವ ಸ್ಥಳವೇ ಆಗಲಿ ಸತ್ಯ ಕ್ರೈಸ್ತರ ಆರಾಧನೆ ಅದರ ಮೇಲೆ ಆಧರಿಸಿರುವುದಿಲ್ಲ ಎಂದು ಯೇಸು ಸ್ಪಷ್ಟಪಡಿಸಿದನು.

ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡುತ್ತಿದ್ದಾಗ ಯೇಸು, ದೇವರನ್ನು ಹೀಗೆ ಆರಾಧಿಸುವ ‘ಕಾಲ ಬರುತ್ತದೆ’ ಎಂದು ಹೇಳಿದನು. ಅದು ಯಾವಾಗ ಬರುತ್ತದೆ? ಯೇಸು ತನ್ನ ಪ್ರಾಣವನ್ನು ತ್ಯಾಗ ಮಾಡಿದಾಗ ಆ ಕಾಲ ಬಂದಿತು. ಮೋಶೆಯ ಧರ್ಮಶಾಸ್ತ್ರದ ಕೆಳಗೆ ಯೆಹೂದ್ಯ ವ್ಯವಸ್ಥೆಯ ಅನುಸಾರವಾಗಿ ನಡೆಯುತ್ತಿದ್ದ ಆರಾಧನೆ ಆಗ ಕೊನೆಗೊಂಡಿತು. (ರೋಮನ್ನರಿಗೆ 10:4) ಆದರೆ ಯೇಸು, “ಆ ಕಾಲ ಈಗಲೇ ಬಂದಿದೆ” ಎಂದು ಹೇಳಿದನು. ಯಾಕೆ? ಮೆಸ್ಸೀಯನಾಗಿದ್ದ ಯೇಸು, “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು” ಎಂಬ ತನ್ನ ಆಜ್ಞೆಗೆ ವಿಧೇಯರಾಗುವ ಶಿಷ್ಯರನ್ನು ಈಗಾಗಲೇ ಒಟ್ಟುಗೂಡಿಸಲು ಆರಂಭಿಸಿದ್ದನು. (ಯೋಹಾನ 4:24) ಹಾಗಾದರೆ, ಆತ್ಮ ಮತ್ತು ಸತ್ಯದಿಂದ ಆರಾಧಿಸುವುದು ಅಂದರೇನು?

ಆತ್ಮದಿಂದ ಆರಾಧಿಸಬೇಕೆಂದು ಯೇಸು ಹೇಳಿದಾಗ, ಉತ್ಸಾಹ, ಹುಮ್ಮಸ್ಸನಿಂದ ಆರಾಧಿಸಬೇಕೆಂದು ಹೇಳುತ್ತಿರಲಿಲ್ಲ. ಬದಲಿಗೆ, ದೇವರ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡುವುದನ್ನು ಸೂಚಿಸುತ್ತಿದ್ದನು. ಇದು ಅನೇಕ ವಿಷಯಗಳ ಜೊತೆಯಲ್ಲಿ ಬೈಬಲಿನ ಅರ್ಥವನ್ನು ತಿಳಿಯುವಂತೆ ನಮ್ಮನ್ನು ಮಾರ್ಗದರ್ಶಿಸುತ್ತದೆ. (1 ಕೊರಿಂಥದವರಿಗೆ 2:9-12) ಯೇಸು ಹೇಳಿದ ಸತ್ಯ, ಬೈಬಲಿನ ಬೋಧನೆಗಳ ನಿಷ್ಕೃಷ್ಟ ಜ್ಞಾನವಾಗಿದೆ. ಆದ್ದರಿಂದ, ದೇವರಿಗೆ ನಾವು ಸಲ್ಲಿಸುವ ಆರಾಧನೆಯು ಯಾವುದೇ ವಿಶೇಷವಾದ ಸ್ಥಳದ ಮೇಲೆ ಆಧರಿಸದೆ, ಬೈಬಲಿನಲ್ಲಿರುವ ಬೋಧನೆಗಳ ಮೇಲೆ ಮತ್ತು ದೇವರ ಪವಿತ್ರಾತ್ಮದಿಂದ ಮಾರ್ಗದರ್ಶನೆಯ ಮೇಲೆ ಆಧರಿಸಿರುತ್ತದೆ.

ಸೆಪ್ಟೆಂಬರ್‌ 17-23

ಬೈಬಲಿನಲ್ಲಿರುವ ರತ್ನಗಳು | ಯೋಹಾನ 5-6

“ಸರಿಯಾದ ಉದ್ದೇಶದಿಂದ ಯೇಸುವನ್ನು ಹಿಂಬಾಲಿಸಿ”

ಯೋಹಾ 6:10​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಸುಮಾರು 5,000 ಮಂದಿ ಪುರುಷರು ಕುಳಿತುಕೊಂಡರು: ಈ ಅದ್ಭುತವನ್ನು ವರದಿಸುವಾಗ ಮತ್ತಾಯನ ವೃತ್ತಾಂತ ಮಾತ್ರ “ಹೆಂಗಸರು ಮತ್ತು ಮಕ್ಕಳಲ್ಲದೆ” ಎಂದು ಹೇಳುತ್ತದೆ. (ಮತ್ತಾ 14:21) ಹೀಗೆ ಅದ್ಭುತಕರವಾಗಿ ಉಣಿಸಲ್ಪಟ್ಟವರ ಸಂಖ್ಯೆ 15,000ಕ್ಕಿಂತಲೂ ಹೆಚ್ಚಾಗಿದ್ದಿರಬಹುದು ಎಂದು ಹೇಳಬಹುದು.

ಯೋಹಾ 6:14​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಪ್ರವಾದಿ: ಒಂದನೇ ಶತಮಾನದಲ್ಲಿ ಅನೇಕ ಮಂದಿ ಯೆಹೂದ್ಯರು ಧರ್ಮೋ 8:15, 18​ರಲ್ಲಿ ತಿಳಿಸಿರುವಂತೆ ಮೆಸ್ಸೀಯನು ಮೋಶೆಯಂತೆ ಪ್ರವಾದಿಯಾಗಿರುವನೆಂದು ಎದುರು ನೋಡುತ್ತಿದ್ದರು. ಈ ಸನ್ನಿವೇಶದಲ್ಲಿ “ಲೋಕಕ್ಕೆ ಬರಬೇಕಾಗಿದ್ದ” ಪ್ರವಾದಿ ಎಂಬ ಅಭಿವ್ಯಕ್ತಿ ಮೆಸ್ಸೀಯನ ನಿರೀಕ್ಷಿತ ಬರುವಿಕೆಯನ್ನು ಸೂಚಿಸುತ್ತಿದ್ದಿರಬಹುದು. ಈ ವಚನದಲ್ಲಿರುವ ಘಟನೆಗಳನ್ನು ಯೋಹಾನನು ಮಾತ್ರ ದಾಖಲೆಮಾಡಿದ್ದಾನೆ.

ಯೋಹಾ 6:27, 54​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನಶಿಸಿ ಹೋಗುವ ಆಹಾರ . . . ನಿತ್ಯಜೀವಕ್ಕಾಗಿ ಉಳಿಯುವಂಥ ಆಹಾರ: ಕೆಲವರು ತನ್ನೊಂದಿಗೆ ಮತ್ತು ತನ್ನ ಶಿಷ್ಯರೊಂದಿಗೆ ಲೌಕಿಕ ಲಾಭಕ್ಕಾಗಿ ಮಾತ್ರ ಕೂಡಿಬರುತ್ತಾರೆ ಎಂದು ಯೇಸುವಿಗೆ ಗೊತ್ತಿತ್ತು. ಶಾರೀರಿಕ ಆಹಾರ ಪ್ರತಿದಿನ ಜನರನ್ನು ಪೋಷಿಸುತ್ತದೆ ನಿಜ. ಆದರೆ ದೇವರ ವಾಕ್ಯದ “ಆಹಾರ”ದಿಂದ ಜನರಿಗೆ ನಿತ್ಯಜೀವ ಪಡೆಯಲು ಸಾಧ್ಯವಿದೆ. ಆ ಜನಸಮೂಹವು “ನಿತ್ಯಜೀವಕ್ಕಾಗಿ ಉಳಿಯುವಂಥ ಆಹಾರಕ್ಕಾಗಿ” ದುಡಿಯುವಂತೆ ಯೇಸು ಪ್ರೋತ್ಸಾಹಿಸಿದನು. ಅಂದರೆ ಅವರು ತಮ್ಮ ಆಧ್ಯಾತ್ಮಿಕ ಆಹಾರದ ಅಗತ್ಯವನ್ನು ತೃಪ್ತಿಪಡಿಸಲು ಪ್ರಯತ್ನಿಸಬೇಕು ಮತ್ತು ತಾವು ಕಲಿತುಕೊಂಡದ್ದನ್ನು ನಂಬಬೇಕು ಎಂದರ್ಥ.—ಮತ್ತಾ 4:4; 5:3; ಯೋಹಾ 6:28-39.

ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವವನಿಗೆ: ಹೀಗೆ ತಿಂದು ಕುಡಿಯುವವರು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವ ಮೂಲಕ ಸಾಂಕೇತಿಕ ಅರ್ಥದಲ್ಲಿ ಅದನ್ನು ತಿಂದು ಕುಡಿಯುತ್ತಾರೆಂದು ಪೂರ್ವಾಪರ ತಿಳಿಸುತ್ತದೆ. (ಯೋಹಾ 6:35, 40) ಯೇಸು ಇದನ್ನು ಹೇಳಿದ್ದು ಕ್ರಿ.ಶ. 32​ರಲ್ಲಿ ಹಾಗಾಗಿ ಅವನು, ಇಲ್ಲಿ ಕರ್ತನ ಸಂಧ್ಯಾ ಭೋಜನದ ಬಗ್ಗೆ ಹೇಳುತ್ತಿಲ್ಲ. ಯಾಕೆಂದರೆ ಅದನ್ನು ಅವನು ಒಂದು ವರ್ಷದ ನಂತರ ಏರ್ಪಡಿಸಲಿದ್ದನು. ಯೆಹೂದ್ಯರ ಹಬ್ಬವಾದ ಪಸ್ಕಕ್ಕೆ ಸ್ವಲ್ಪ ಮುಂಚಿತವಾಗಿ ಅವನು ಆ ಘೋಷಣೆ ಮಾಡಿದ್ದನು. (ಯೋಹಾ 6:4) ಆದುದರಿಂದ ಅವನ ಕೇಳುಗರಿಗೆ ಇದು ಬರಲಿದ್ದ ಹಬ್ಬದ ಬಗ್ಗೆ ಹಾಗೂ ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಬಂದ ರಾತ್ರಿ ಅವರ ಜೀವವನ್ನು ರಕ್ಷಿಸಿದ ಕುರಿಮರಿಯ ರಕ್ತದ ಮಹತ್ವದ ಬಗ್ಗೆ ನೆನಪು ಹುಟ್ಟಿಸಿರಬೇಕು. (ವಿಮೋ 12:24-27) ತನ್ನ ಶಿಷ್ಯರು ನಿತ್ಯಜೀವ ಪಡೆಯುವುದರಲ್ಲಿ ಯೇಸುವಿನ ರಕ್ತವು ವಹಿಸುವ ಪ್ರಾಮುಖ್ಯ ಪಾತ್ರದ ಬಗ್ಗೆ ಆತನು ಒತ್ತಿಹೇಳುತ್ತಿದ್ದನು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಯೋಹಾ 6:44​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ಅವನನ್ನು ಸೆಳೆದ: “ಸೆಳೆ” ಎಂಬ ಗ್ರೀಕ್‌ ಕ್ರಿಯಾಪದವು ಮೀನಿನ ಬಲೆಯನ್ನು ಎಳೆಯುವ ವಿಷಯಕ್ಕೆ ಸೂಚಿಸುತ್ತದೆ. (ಯೋಹಾ 21:6, 11) ಇದು ದೇವರು ಜನರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಎಳೆಯುತ್ತಾನೆ ಎಂದು ಸೂಚಿಸುವುದಿಲ್ಲ. ಈ ಕ್ರಿಯಾಪದಕ್ಕೆ “ಆಕರ್ಷಿಸು” ಎಂಬ ಅರ್ಥವೂ ಇರಬಹುದು. ಯೇಸುವಿನ ಈ ಹೇಳಿಕೆ ಯೆರೆ 31:3ಕ್ಕೂ ನಿರ್ದೇಶಿಸಬಹುದು. ಅಲ್ಲಿ ಯೆಹೋವನು ತನ್ನ ಜನರಿಗೆ, “ನಿನ್ನನ್ನು ಮಮತೆಯಿಂದ ಸೆಳೆದುಕೊಂಡಿದ್ದೇನೆ” ಎಂದು ಹೇಳಿದ್ದಾನೆ. (ಇಲ್ಲಿ ಸೆಪ್ಟೂಅಜಂಟ್‌ ಇದೇ ಗ್ರೀಕ್‌ ಕ್ರಿಯಾಪದವನ್ನು ಬಳಸುತ್ತದೆ.) ಅದೇ ರೀತಿ ಯೇಸು ಎಲ್ಲ ರೀತಿಯ ಜನರನ್ನು ತನ್ನ ಬಳಿಗೆ ಸೆಳೆದುಕೊಳ್ಳುತ್ತಾನೆ ಎಂದು ಯೋಹಾನ 12:32 ತೋರಿಸುತ್ತದೆ. ಯೆಹೋವನು ಮನುಷ್ಯರಿಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆಂದು ಬೈಬಲ್‌ ಹೇಳುತ್ತದೆ. ಹಾಗಾಗಿ ದೇವರನ್ನು ಆರಾಧಿಸುವ ವಿಷಯದಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ನಿರ್ಣಯವನ್ನು ಮಾಡಬೇಕು. (ಧರ್ಮೋ 30:19, 20) ಯೋಗ್ಯ ಹೃದಯದ ಜನರನ್ನು ಯೆಹೋವನು ತನ್ನ ಬಳಿಗೆ ಮೃದುವಾಗಿ ಸೆಳೆಯುತ್ತಾನೆ. (ಕೀರ್ತ 11:5; ಜ್ಞಾನೋ 21:2; ಅಪೊ 13:48) ಯೆಹೋವನು ಬೈಬಲಿನ ಸಂದೇಶ ಮತ್ತು ತನ್ನ ಪವಿತ್ರಾತ್ಮದ ಮೂಲಕ ಇದನ್ನು ಮಾಡುತ್ತಾನೆ. ಯೋಹಾನ 6:45​ರಲ್ಲಿ ಉಲ್ಲೇಖಿಸಲಾಗಿರುವ ಯೆಶಾಯ 54:13​ರ ಪ್ರವಾದನೆ ತಂದೆಯಿಂದ ಸೆಳೆಯಲ್ಪಡುವವರಿಗೆ ಅನ್ವಯಿಸುತ್ತದೆ.—ಯೋಹಾ 6:65​ನ್ನು ಹೋಲಿಸಿ.

ಯೋಹಾ 6:64​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ತನಗೆ ನಂಬಿಕೆ ದ್ರೋಹ ಮಾಡುವವನು ಯಾರು ಎಂದು . . . ಯೇಸುವಿಗೆ ತಿಳಿದಿತ್ತು: ಯೇಸು ಇದನ್ನು ಇಸ್ಕರಿಯೋತ ಯೂದನನ್ನು ಸೂಚಿಸಿ ಮಾತಾಡಿದನು. 12 ಮಂದಿ ಅಪೊಸ್ತಲರನ್ನು ಆರಿಸುವ ಮೊದಲು ಯೇಸು ಇಡೀ ರಾತ್ರಿ ತಂದೆಗೆ ಪ್ರಾರ್ಥನೆಮಾಡಿದನು. (ಲೂಕ 6:12-16) ಹಾಗಾಗಿ ಆರಂಭದಲ್ಲಿ ಯೂದನು ದೇವರಿಗೆ ನಂಬಿಗಸ್ತನಾಗಿದ್ದನು. ಆದರೂ ಹೀಬ್ರು ಶಾಸ್ತ್ರದ ಪ್ರವಾದನೆಗಳಿಂದ, ತನ್ನ ಆಪ್ತ ಜೊತೆಗಾರನು ತನಗೆ ದ್ರೋಹ ಮಾಡುವನೆಂದು ಯೇಸು ತಿಳಿದಿದ್ದನು. (ಕೀರ್ತ 41:9; 109:8; ಯೋಹಾ 13:18, 19) ಯೂದನು ಕೆಟ್ಟವನಾಗಲು ಆರಂಭಿಸಿದಾಗ, ಹೃದಯದ ಆಲೋಚನೆಗಳನ್ನು ತಿಳಿಯಶಕ್ತನಾಗಿದ್ದ ಯೇಸು, ಯೂದನಲ್ಲಾದ ಈ ಬದಲಾವಣೆಯನ್ನು ಕಂಡುಹಿಡಿದನು. (ಮತ್ತಾ 9:4) ದೇವರು ಮುಂದೆ ನಡೆಯುವುದನ್ನು ತಿಳಿಯುವ ತನ್ನ ಸಾಮರ್ಥ್ಯವನ್ನು ಉಪಯೋಗಿಸುವ ಮೂಲಕ, ಯೇಸುವಿನ ಆಪ್ತ ಜೊತೆಗಾರರಲ್ಲಿ ಒಬ್ಬನು ಯೇಸುವಿಗೆ ದ್ರೋಹಬಗೆಯುವನೆಂದು ತಿಳಿದಿದ್ದನು. ಆದರೆ ಯೂದನೇ ದ್ರೋಹಬಗೆಯುತ್ತಾನೆಂದು ದೇವರು ಮುಂತಿಳಿಸಲಿಲ್ಲ, ಏಕೆಂದರೆ ಅದು ದೇವರ ಗುಣಗಳಿಗೆ ಹಾಗೂ ಹಿಂದೆ ಆತನು ವ್ಯವಹರಿಸಿದ ರೀತಿಗಳಿಗೆ ವಿರುದ್ದವೆಂದು ತಿಳಿದುಬರುತ್ತದೆ.

ಆರಂಭದಿಂದಲೇ: ಈ ಅಭಿವ್ಯಕ್ತಿ ಯೂದನ ಜನನವನ್ನಾಗಲಿ ಅವನು ಅಪೊಸ್ತಲನಾಗಿ ಆರಿಸಲ್ಪಟ್ಟ ಸಮಯವನ್ನಾಗಿ ಸೂಚಿಸುವುದಿಲ್ಲ. ಅವನು ಆರಿಸಲ್ಪಟ್ಟದ್ದು ಯೇಸು ಇಡೀ ರಾತ್ರಿ ಪ್ರಾರ್ಥಿಸಿದ ಬಳಿಕವೇ. (ಲೂಕ 6:12-16) ಬದಲಿಗೆ ಯೂದನ ನಂಬಿಕೆದ್ರೋಹದ ಆರಂಭವನ್ನು ಇದು ಸೂಚಿಸುತ್ತದೆ. ಅದನ್ನು ಯೇಸು ಕೂಡಲೇ ಗ್ರಹಿಸಿಕೊಂಡನು. (ಯೋಹಾ 2:24, 25; ಪ್ರಕ 1:1; 2:23; ಯೋಹಾ 6:70; 13:11​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ಅಲ್ಲದೆ ಯೂದನ ಕೃತ್ಯಗಳು ಹೃದಯದಲ್ಲಿ ಥಟ್ಟನೆ ಆದ ಬದಲಾವಣೆಯಲ್ಲ. ಅವು ಮುಂದಾಗಿ ಉದ್ದೇಶಿದ್ದ ಮತ್ತು ಯೋಜಿಸಿ ಮಾಡಿದ ಕೃತ್ಯಗಳು ಎಂದೂ ಇದು ತೋರಿಸುತ್ತದೆ. ಕ್ರೈಸ್ತ ಗ್ರೀಕ್‌ ಶಾಸ್ತ್ರದಲ್ಲಿರುವ “ಆರಂಭದಿಂದಲೇ” (ಗ್ರೀಕ್‌, ಆರ್ಕಿ) ಎಂಬ ಪದದ ಅರ್ಥ ಅದರ ಪೂರ್ವಾಪರದ ಮೇಲೆ ಹೊಂದಿಕೊಂಡಿದೆ, ಅಂದರೆ ಸಂಬಂಧಸೂಚಕವಾಗಿದೆ. ದೃಷ್ಟಾಂತಕ್ಕೆ 2 ಪೇತ್ರ 3:4​ರಲ್ಲಿ ಬಳಸಲಾಗಿರುವ “ಆರಂಭ” ಪದವು ಸೃಷ್ಟಿಯ ಆರಂಭವನ್ನು ಸೂಚಿಸುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ಹೆಚ್ಚು ಮಿತವಾದ ಅರ್ಥದಲ್ಲಿ ಬಳಸಲಾಗಿದೆ. ಉದಾಹರಣೆಗೆ ಪೇತ್ರನು, “ಆರಂಭದಲ್ಲಿ ಪವಿತ್ರಾತ್ಮವು ನಮ್ಮ ಮೇಲೆ ಬಂದಂತೆಯೇ” ಅನ್ಯರ ಮೇಲೂ ಬಂತು ಎಂದು ಹೇಳಿದ್ದನು. (ಅ.ಕಾ. 11:15) ಇಲ್ಲಿ ಪೇತ್ರನು ತನ್ನ ಜನನದ ಸಮಯದ ಆರಂಭ ಅಥವಾ ತಾನು ಅಪೊಸ್ತಲನಾಗಿ ಕರೆಯಲ್ಪಟ್ಟ ಸಮಯದ ಆರಂಭವನ್ನು ಸೂಚಿಸುತ್ತಿಲ್ಲ. ಬದಲಿಗೆ ಅವನು ಕ್ರಿ.ಶ. 33​ರ ಪಂಚಾಶತ್ತಮವನ್ನು ಅಂದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಪವಿತ್ರಾತ್ಮ ಸುರಿಸಲ್ಪಟ್ಟ ಆರಂಭವನ್ನು ಸೂಚಿಸುತ್ತಿದ್ದನು. (ಅಪೊ 2:1-4) “ಆರಂಭ” ಎಂಬ ಪದದ ಪೂರ್ವಾಪರವು ಅದರ ಅರ್ಥದ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬ ಬೇರೆ ಉದಾಹರಣೆಗಳನ್ನು ಲೂಕ 1:2, ಯೋಹಾ 15:27 ಮತ್ತು 1 ಯೋಹಾ. 2:7​ರಲ್ಲಿ ನೋಡಬಹುದು.

ಸೆಪ್ಟೆಂಬರ್‌ 24-30

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಯೋಹಾ 8:58​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ

ನಾನು ಇದ್ದೆನು: ಯೇಸುವಿಗೆ ಇನ್ನೂ “50 ವರ್ಷ” ಆಗಿಲ್ಲದಿದ್ದರೂ ಅವನು ‘ಅಬ್ರಹಾಮನನ್ನು ನೋಡಿದ್ದಾನೆಂದು’ ಹೇಳುತ್ತಿರುವುದು ತಪ್ಪೆಂದು ನೆನಸಿ, ಜನರು ಅವನಿಗೆ ಕಲ್ಲೆಸೆಯಬೇಕು ಅಂದುಕೊಂಡರು. (ಯೋಹಾ 8:57) ಅಬ್ರಹಾಮನು ಹುಟ್ಟುವ ಮೊದಲು, ಆತ್ಮಜೀವಿಯಾಗಿ ತಾನು ಮಾನವಪೂರ್ವದ ಅಸ್ತಿತ್ವದಲ್ಲಿದ್ದೆನು ಎಂಬರ್ಥದಲ್ಲಿ ಯೇಸು ಅದನ್ನು ಹೇಳಿದ್ದನು. ಆದರೆ ಇದು ಯೇಸುವನ್ನು ದೇವರೆಂದು ಗುರುತಿಸುತ್ತದೆ ಎಂದು ಕೆಲವರು ವಾದಿಸುತ್ತಾರೆ. ಇಲ್ಲಿ ಬಳಸಿರುವ ಇಗೋ ಈಮಿ ಎಂಬ ಗ್ರೀಕ್‌ ಅಭಿವ್ಯಕ್ತಿಯನ್ನು ಕೆಲವು ಬೈಬಲುಗಳು “ನಾನಿದ್ದೇನೆ” ಎಂದು ಭಾಷಾಂತರಿಸಿವೆ. ಇದು ವಿಮೋ 3:14​ಕ್ಕೆ (ಸೆಪ್ಟೂಅಜಂಟ್‌ ಭಾಷಾಂತರಕ್ಕೆ) ಪರೋಕ್ಷವಾಗಿ ಸೂಚಿಸುತ್ತದೆ. ಹಾಗಾಗಿ ಈ ಎರಡೂ ವಚನಗಳನ್ನು ಒಂದೇ ರೀತಿ ಭಾಷಾಂತರಿಸಬೇಕು ಎಂದವರ ವಾದ. (ಯೋಹಾ 4:26​ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.) ಆದರೆ ಈ ಪೂರ್ವಾಪರದಲ್ಲಿ ಈಮಿ ಎಂಬ ಗ್ರೀಕ್‌ ಕ್ರಿಯಾಪದ “ಅಬ್ರಹಾಮನು ಅಸ್ತಿತ್ವಕ್ಕೆ ಬರುವ ಮುಂಚೆ” ಆರಂಭಗೊಂಡಿತ್ತು ಮತ್ತು ಆಗಲೂ ಮುಂದುವರಿಯುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಆದ್ದರಿಂದ “ನಾನಿದ್ದೇನೆ” ಎಂಬುದಕ್ಕಿಂತ “ನಾನಿದ್ದೆನು” ಎಂದು ಭಾಷಾಂತರಿಸಿರುವುದು ಸರಿಯಾಗಿದೆ. ಹಿಂದಿನ ಮತ್ತು ಈಗಿನ ಅನೇಕ ಭಾಷಾಂತರಗಳು ಸಹ “ನಾನಿದ್ದೆನು” ಎಂಬುದಕ್ಕೆ ಹತ್ತಿರದ ಅರ್ಥವಿರುವ ಪದಗಳನ್ನೇ ಉಪಯೋಗಿಸಿವೆ. ವಾಸ್ತವದಲ್ಲಿ ಯೋಹಾನ 14:9​ರಲ್ಲಿರುವ “ಫಿಲಿಪ್ಪನೇ ನಾನು ನಿಮ್ಮೊಂದಿಗೆ ಇಷ್ಟು ದಿವಸವಿದ್ದರೂ ನೀನು ನನ್ನನ್ನು ತಿಳಿದುಕೊಂಡಿಲ್ಲವೇ” ಎಂಬ ಮಾತುಗಳು ಈಮಿ ಎಂಬ ಗ್ರೀಕ್‌ ಕ್ರಿಯಾಪದದ ಅದೇ ರೂಪವನ್ನು ಉಪಯೋಗಿಸಿದೆ. ಹೆಚ್ಚಿನ ಭಾಷಾಂತರಗಳು ಇದೇ ರೀತಿಯ ಪದಗಳನ್ನು ಬಳಸಿವೆ. ಹೀಗೆ ಪೂರ್ವಾಪರವನ್ನು ಹೊಂದಿಕೊಂಡು ಈಮಿ ಎಂಬುದನ್ನು “ನಾನು ಇದ್ದೆನು” ಎಂದು ಭಾಷಾಂತರಿಸುವುದಕ್ಕೆ ಯಾವ ವ್ಯಾಕರಣಬದ್ಧ ಆಕ್ಷೇಪವೂ ಇಲ್ಲ. (ಒಂದು ಪೂರ್ಣ ವರ್ತಮಾನಕಾಲದ ಕ್ರಿಯಾಪದವನ್ನು ಬಳಸಿ, ವರ್ತಮಾನಕಾಲದ ಗ್ರೀಕ್‌ ಕ್ರಿಯಾಪದವನ್ನು ಭಾಷಾಂತರಿಸಿರುವ ಬೇರೆ ಉದಾಹರಣೆಗಳನ್ನು ಲೂಕ 2:48; 13:7; 15:29; ಯೋಹಾ 1:9; 5:6; 15:27; ಅಪೊ 15:21; 2 ಕೊರಿಂ. 12:19; 1 ಯೋಹಾ 3:8​ರಲ್ಲಿ ನಾವು ನೋಡುತ್ತೇವೆ.) ಅಲ್ಲದೆ, ಯೋಹಾನ 8:54, 55​ರಲ್ಲಿ ಕೊಡಲಾಗಿರುವ ಯೇಸುವಿನ ತರ್ಕವು ಅವನು ತನ್ನನ್ನು ತನ್ನ ತಂದೆಯೆಂದು ಚಿತ್ರಿಸುತ್ತಿಲ್ಲವೆಂದು ಸ್ಪಷ್ಟಪಡಿಸುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ