ಪಾಠ 2
ಸ್ವಾಭಾವಿಕ ಸಂಭಾಷಣೆ
2 ಕೊರಿಂಥ 2:17
ಏನು ಮಾಡಬೇಕು: ಸ್ವಾಭಾವಿಕವಾಗಿ, ಮನದಾಳದಿಂದ ಮಾತಾಡಿ. ಆಗ ನೀವು ಮಾತಾಡುತ್ತಿರುವ ವಿಷಯದಲ್ಲಿ ಮತ್ತು ನಿಮಗೆ ಕಿವಿಗೊಡುತ್ತಿರುವ ಜನರಲ್ಲಿ ನಿಮಗೆ ಆಸಕ್ತಿ ಇದೆ ಎಂದು ಗೊತ್ತಾಗುತ್ತದೆ.
ಹೇಗೆ ಮಾಡಬೇಕು:
ಪ್ರಾರ್ಥಿಸಿ, ಚೆನ್ನಾಗಿ ಯೋಚಿಸಿ ತಯಾರಿ ಮಾಡಿ. ನಿಮ್ಮ ಗಮನ ನಿಮ್ಮ ಮೇಲೆ ಅಲ್ಲ, ನೀವು ಹೇಳುವ ವಿಷಯದ ಮೇಲೆ ಹೋಗುವಂತೆ ಪ್ರಾರ್ಥಿಸಿ. ನೀವು ಹೇಳಲಿಕ್ಕಿರುವ ಮುಖ್ಯಾಂಶಗಳು ನಿಮ್ಮ ಮನಸ್ಸಲ್ಲಿ ಸ್ಪಷ್ಟವಾಗಿರಬೇಕು. ಸ್ವಂತ ಮಾತಲ್ಲಿ ವಿಷಯಗಳನ್ನು ಹೇಳಿ. ಮುದ್ರಿತ ಪುಟದಲ್ಲಿರುವ ಪದಗಳನ್ನು ಹಾಗೆಯೇ ಹೇಳುವುದು ಸರಿಯಲ್ಲ.
ಮನದಾಳದಿಂದ ಮಾತಾಡಿ. ಜನರು ನೀವು ಹೇಳಲಿರುವ ವಿಷಯವನ್ನು ಕೇಳಿಸಿಕೊಳ್ಳುವುದು ಯಾಕೆ ಮುಖ್ಯ ಎಂದು ಯೋಚಿಸಿ. ನಿಮ್ಮ ಗಮನ ಜನರ ಮೇಲೆ ಇರಬೇಕು. ಆಗ ನೀವು ನಿಂತುಕೊಳ್ಳುವ ವಿಧ, ನಿಮ್ಮ ಕೈಸನ್ನೆ ಮತ್ತು ಮುಖಭಾವ ಪ್ರಾಮಾಣಿಕತೆ ಮತ್ತು ಪ್ರೀತಿಯನ್ನು ತೋರಿಸುತ್ತದೆ.
ಮುಖ ನೋಡಿ ಮಾತಾಡಿ. ಜನರಿಗೆ ಮುಜುಗರ ಆಗದಿದ್ದರೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ. ಭಾಷಣ ಕೊಡುತ್ತಿರುವಾಗ ಇಡೀ ಗುಂಪನ್ನು ನೋಡಿ ಮಾತಾಡಬೇಡಿ ಅಥವಾ ಎಲ್ಲರ ಮೇಲೆ ಕಣ್ಣು ಹಾಯಿಸುತ್ತಾ ಮಾತಾಡಬೇಡಿ. ಸಭಿಕರಲ್ಲಿರುವ ಒಬ್ಬೊಬ್ಬ ವ್ಯಕ್ತಿಯನ್ನು ನೋಡಿ ಮಾತಾಡಿ.