ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಒಬ್ಬ ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ಈಜೆಬೇಲಳ ಸೇವಕರು ಅವಳನ್ನು ಕಿಟಕಿಯಿಂದ ಹೊರಗೆ ಹಾಕುತ್ತಿದ್ದಾರೆ

      ಪಾಠ 49

      ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು

      ಒಂದಿನ ರಾಜ ಅಹಾಬ ಇಜ್ರೇಲಿನ ಅರಮನೆಯ ಕಿಟಕಿಯಿಂದ ಹೊರಗೆ ನೋಡುತ್ತಿದ್ದ. ಆಗ ನಾಬೋತನೆಂಬ ವ್ಯಕ್ತಿಯ ದ್ರಾಕ್ಷಿ ತೋಟ ಕಣ್ಣಿಗೆ ಬಿತ್ತು. ಅಹಾಬನಿಗೆ ಆ ತೋಟವನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆ ಹುಟ್ಟಿತು. ಅದಕ್ಕಾಗಿ ಅವನು ಆ ತೋಟವನ್ನು ಖರೀದಿಸಲು ಪ್ರಯತ್ನಿಸಿದ. ಆದರೆ ನಾಬೋತ ತನ್ನ ತೋಟವನ್ನು ಮಾರಲು ಸಿದ್ಧನಿರಲಿಲ್ಲ. ಯಾಕೆಂದರೆ ತಮ್ಮ ಪೂರ್ವಜರಿಂದ ಸಿಕ್ಕಿರೋ ಆಸ್ತಿನ ಮಾರುವುದು ಯೆಹೋವನ ನಿಯಮ ಪುಸ್ತಕಕ್ಕೆ ವಿರುದ್ಧವಾಗಿತ್ತು. ದೇವರ ನಿಯಮವನ್ನು ಪಾಲಿಸಬೇಕೆಂಬ ನಾಬೋತನ ನಿರ್ಧಾರವನ್ನು ಅಹಾಬ ಗೌರವಿಸಿದನಾ? ಇಲ್ಲ. ಅಹಾಬ ತುಂಬ ಕೋಪಗೊಂಡ. ಅವನಿಗೆ ಎಷ್ಟು ಬೇಜಾರಾಯಿತೆಂದರೆ ತನ್ನ ಕೋಣೆಯಿಂದ ಹೊರಗೆ ಬರಲಿಲ್ಲ, ಊಟನೂ ಮಾಡಲಿಲ್ಲ.

      ಅಹಾಬನ ಹೆಂಡತಿ ದುಷ್ಟ ರಾಣಿ ಈಜೆಬೇಲಳು ಅವನಿಗೆ ‘ನೀನು ಇಡೀ ಇಸ್ರಾಯೇಲಿನ ರಾಜ. ನಿನಗೆ ಏನು ಬೇಕೋ ಅದನ್ನೆಲ್ಲಾ ನೀನು ತೆಗೆದುಕೊಳ್ಳಬಹುದು. ಆ ತೋಟವನ್ನು ನಾನು ನಿನಗೆ ಕೊಡಿಸ್ತೀನಿ’ ಅಂದಳು. ನಾಬೋತ ದೇವರನ್ನು ದೂಷಿಸಿದ್ದಾನೆ ಎಂಬ ಆರೋಪ ಹಾಕಿ ಅವನನ್ನು ಕಲ್ಲೆಸೆದು ಕೊಲ್ಲಲು ಊರಿನ ಹಿರೀಪುರುಷರಿಗೆ ಅವಳು ಪತ್ರ ಬರೆದಳು. ಆ ಹಿರೀಪುರುಷರು ಅವಳು ಹೇಳಿದಂತೆ ಮಾಡಿದರು. ಆಗ ಈಜೆಬೇಲಳು ಅಹಾಬನಿಗೆ ‘ನಾಬೋತ ಸತ್ತ. ಅವನ ದ್ರಾಕ್ಷಿ ತೋಟ ಈಗ ನಿನ್ನದು’ ಅಂದಳು.

      ಈಜೆಬೇಲಳು ಕೊಂದಿದ್ದು ನಾಬೋತನನ್ನು ಮಾತ್ರ ಅಲ್ಲ. ಯೆಹೋವನನ್ನು ಪ್ರೀತಿಸುತ್ತಿದ್ದ ಇನ್ನೂ ಅನೇಕ ಮುಗ್ಧ ಜನರನ್ನೂ ಕೊಂದಳು. ಮೂರ್ತಿಗಳನ್ನು ಪೂಜಿಸಿದಳು ಮತ್ತು ಇನ್ನೂ ಅನೇಕ ಕೆಟ್ಟ ಕೆಲಸಗಳನ್ನು ಮಾಡಿದಳು. ಅವಳು ಮಾಡುತ್ತಿದ್ದ ಎಲ್ಲಾ ಕೆಟ್ಟ ಕೆಲಸಗಳನ್ನು ಯೆಹೋವನು ನೋಡುತ್ತಿದ್ದನು. ಆತನು ಅವಳಿಗೆ ಏನು ಮಾಡಿದ ಗೊತ್ತಾ?

      ಅಹಾಬ ಸತ್ತ ನಂತರ ಅವನ ಮಗ ಯೆಹೋರಾಮ ರಾಜನಾದ. ಯೆಹೋವನು ಈಜೆಬೇಲ್‌ ಮತ್ತು ಅವಳ ಕುಟುಂಬವನ್ನು ಶಿಕ್ಷಿಸಲು ಯೇಹು ಎಂಬ ವ್ಯಕ್ತಿಯನ್ನು ಕಳುಹಿಸಿದನು.

      ಯೇಹು ರಥವನ್ನು ಹತ್ತಿ ಈಜೆಬೇಲಳಿದ್ದ ಸ್ಥಳವಾದ ಇಜ್ರೇಲಿಗೆ ಹೋದ. ಆಗ ಯೆಹೋರಾಮ ರಥದಲ್ಲಿ ಬಂದು ಯೇಹುವನ್ನು ಭೇಟಿ ಮಾಡಿ ‘ನೀನು ಶಾಂತಿ ಮಾಡ್ಕೊಳ್ಳೋಕೆ ಬಂದಿದ್ಯಾ?’ ಎಂದು ಕೇಳಿದ. ಆಗ ಯೇಹು ‘ನಿನ್ನ ತಾಯಿ ಈಜೆಬೇಲ್‌ ದುಷ್ಟ ಕೆಲಸಗಳನ್ನು ಮಾಡ್ತಿರೋವಾಗ ಶಾಂತಿ ಎಲ್ಲಿರುತ್ತೆ?’ ಅಂದ. ಯೆಹೋರಾಮ ರಥವನ್ನು ಹಿಂದಕ್ಕೆ ತಿರುಗಿಸಿ ವಾಪಸ್ಸು ಹೋಗಲು ಪ್ರಯತ್ನಿಸಿದ. ಆಗ ಯೇಹು ಬಾಣ ಬೀಸಿ ಅವನನ್ನು ಕೊಂದ.

      ಯೇಹು ಈಜೆಬೇಲಳನ್ನು ಕೆಳಗೆ ದೊಬ್ಬಲು ಹೇಳುತ್ತಿದ್ದಾನೆ

      ಆಮೇಲೆ ಯೇಹು ಈಜೆಬೇಲಳ ಅರಮನೆಗೆ ಹೋದ. ಯೇಹು ಬರುತ್ತಿದ್ದಾನೆಂಬ ಸುದ್ದಿ ಕೇಳಿ ಈಜೆಬೇಲ್‌ ಅಲಂಕಾರ ಮಾಡಿಕೊಂಡು ಮಾಳಿಗೆಯ ಕಿಟಕಿಯ ಹತ್ತಿರ ನಿಂತು ಕಾಯುತ್ತಿದ್ದಳು. ಯೇಹು ಬಂದಾಗ ಅವನಿಗೆ ಒರಟಾಗಿ ವಂದಿಸಿದಳು. ಆಗ ಯೇಹು ಅವಳ ಪಕ್ಕದಲ್ಲಿ ನಿಂತಿದ್ದ ಸೇವಕರಿಗೆ ‘ಅವಳನ್ನು ಕೆಳಗೆ ದೊಬ್ಬಿ!’ ಅಂದ. ಅವರು ಈಜೆಬೇಲಳನ್ನು ಕಿಟಕಿಯಿಂದ ಹೊರಗೆ ಹಾಕಿದರು. ಅವಳು ಕೆಳಗೆ ಬಿದ್ದು ಸತ್ತಳು.

      ಆಮೇಲೆ ಯೇಹು ಅಹಾಬನ 70 ಗಂಡು ಮಕ್ಕಳನ್ನು ಕೊಲ್ಲಿಸಿದ ಮತ್ತು ಬಾಳನ ಆರಾಧನೆಯನ್ನು ತೆಗೆದುಹಾಕಿ ದೇಶವನ್ನು ಶುದ್ಧಮಾಡಿದ. ಈ ಕಥೆಯಿಂದ, ಯೆಹೋವನು ಎಲ್ಲವನ್ನು ನೋಡುತ್ತಿರುತ್ತಾನೆ ಮತ್ತು ಯಾರು ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾರೋ ಅವರಿಗೆ ಸರಿಯಾದ ಸಮಯದಲ್ಲಿ ಶಿಕ್ಷೆ ಕೊಡುತ್ತಾನೆಂದು ಗೊತ್ತಾಗುತ್ತೆ ಅಲ್ವಾ?

      “ದುರಾಸೆಯಿಂದ ಗಳಿಸಿದ ಆಸ್ತಿ ಕೊನೆಗೆ ಆಶೀರ್ವಾದ ತರಲ್ಲ.”—ಜ್ಞಾನೋಕ್ತಿ 20:21

      ಪ್ರಶ್ನೆಗಳು: ನಾಬೋತನ ದ್ರಾಕ್ಷಿ ತೋಟವನ್ನು ಪಡೆಯಲು ಈಜೆಬೇಲ್‌ ಏನು ಮಾಡಿದಳು? ಯೆಹೋವನು ಈಜೆಬೇಲಳನ್ನು ಏಕೆ ಶಿಕ್ಷಿಸಿದನು?

      1 ಅರಸು 21:1-29; 2 ಅರಸು 9:1–10:30

  • ಯೆಹೋವನು ಯೆಹೋಷಾಫಾಟನನ್ನು ಕಾಪಾಡಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
    • ರಾಜ ಯೆಹೋಷಾಫಾಟ ಮತ್ತು ಲೇವಿ ಹಾಡುಗಾರರು ಸೈನ್ಯದ ಮುಂದೆ ನಡೆಯುತ್ತಾ ಯೆರೂಸಲೇಮಿನಿಂದ ಹೊರಗೆ ಹೋಗುತ್ತಿದ್ದಾರೆ

      ಪಾಠ 50

      ಯೆಹೋವನು ಯೆಹೋಷಾಫಾಟನನ್ನು ಕಾಪಾಡಿದನು

      ಯೆಹೋಷಾಫಾಟ ಯೆಹೂದದ ರಾಜನಾದ ಮೇಲೆ ದೇಶದಿಂದ ಬಾಳನ ಯಜ್ಞವೇದಿ ಹಾಗೂ ಮೂರ್ತಿಗಳನ್ನು ತೆಗೆದುಹಾಕಿದನು. ಜನರು ಯೆಹೋವನ ನಿಯಮಗಳನ್ನು ತಿಳಿದುಕೊಳ್ಳಬೇಕು ಎನ್ನುವುದು ಅವನ ಆಸೆ. ಆದ್ದರಿಂದ ತನ್ನ ಅಧಿಕಾರಿಗಳನ್ನು ಹಾಗೂ ಲೇವಿಯರನ್ನು ಯೆಹೂದದ ಎಲ್ಲಾ ಕಡೆಗೂ ಕಳುಹಿಸಿ ಜನರಿಗೆ ಯೆಹೋವನ ನಿಯಮಗಳನ್ನು ಕಲಿಸಲು ಹೇಳಿದ.

      ಸುತ್ತಮುತ್ತ ಇದ್ದ ಜನಾಂಗದವರು ಯೆಹೂದದ ಮೇಲೆ ದಾಳಿಮಾಡಲು ಭಯಪಡುತ್ತಿದ್ದರು. ಯಾಕೆಂದರೆ ಯೆಹೋವನು ಅವರ ಜೊತೆ ಇದ್ದಾನೆ ಎಂದು ಅವರಿಗೆ ಗೊತ್ತಿತ್ತು. ಅವರು ಯೆಹೋಷಾಫಾಟನಿಗೆ ಕಾಣಿಕೆಗಳನ್ನು ಕೂಡ ಕೊಡುತ್ತಿದ್ದರು. ಆದರೆ ಮೋವಾಬ್ಯರು, ಅಮ್ಮೋನಿಯರು ಹಾಗೂ ಮೆಗೂನ್ಯರು ಯೆಹೂದದ ವಿರುದ್ಧ ಯುದ್ಧಕ್ಕೆ ಬಂದರು. ತಮಗೆ ಯೆಹೋವನ ಸಹಾಯದ ಅಗತ್ಯ ಇದೆ ಎಂದು ಯೆಹೋಷಾಫಾಟನಿಗೆ ಗೊತ್ತಿತ್ತು. ಆದ್ದರಿಂದ ಅವನು ಯೆಹೂದದ ಎಲ್ಲಾ ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಯೆರೂಸಲೇಮಿನಲ್ಲಿ ಒಟ್ಟುಸೇರಿಸಿದ. ಆಮೇಲೆ ‘ಯೆಹೋವನೇ, ನಿನ್ನ ಸಹಾಯವಿಲ್ಲದೆ ನಾವು ಯುದ್ಧದಲ್ಲಿ ಜಯಗಳಿಸಲು ಆಗಲ್ಲ. ದಯವಿಟ್ಟು ನಾವೇನು ಮಾಡಬೇಕು ಎಂದು ತಿಳಿಸು’ ಎಂದು ಪ್ರಾರ್ಥಿಸಿದ.

      ಆಗ ಯೆಹೋವನು ‘ಹೆದರಬೇಡಿ, ನಾನು ನಿಮಗೆ ಸಹಾಯ ಮಾಡ್ತೀನಿ. ನಿಮ್ಮ ಜಾಗದಲ್ಲಿ ಸ್ಥಿರವಾಗಿ ನಿಂತು ನಾನು ನಿಮ್ಮನ್ನು ಹೇಗೆ ಕಾಪಾಡ್ತೀನಿ ಅನ್ನೋದನ್ನ ನೋಡಿ’ ಎಂದು ಉತ್ತರಿಸಿದನು. ಯೆಹೋವನು ಅವರನ್ನು ಹೇಗೆ ಕಾಪಾಡಿದ?

      ಮಾರನೇ ದಿನ ಯೆಹೋಷಾಫಾಟ ಕೆಲವು ಹಾಡುಗಾರರನ್ನು ಆರಿಸಿ ಸೈನ್ಯದ ಮುಂದೆ ನಡೆಯಲು ಹೇಳಿದ. ಅವರು ಯೆರೂಸಲೇಮಿನಿಂದ ತೆಕೋವದ ಯುದ್ಧ ಭೂಮಿಯವರೆಗೆ ನಡೆದುಕೊಂಡು ಹೋದರು.

      ಒಂದು ಕಡೆ ಹಾಡುಗಾರರು ಸಂತೋಷದಿಂದ ಗಟ್ಟಿಯಾಗಿ ಯೆಹೋವನಿಗೆ ಸ್ತುತಿಯನ್ನು ಹಾಡುತ್ತಿದ್ದರು. ಇನ್ನೊಂದು ಕಡೆ ಯೆಹೋವನು ತನ್ನ ಜನರಿಗಾಗಿ ಯುದ್ಧ ಮಾಡುತ್ತಿದ್ದನು. ಆತನು ಅಮ್ಮೋನಿಯರಿಗೆ ಹಾಗೂ ಮೋವಾಬ್ಯರಿಗೆ ಗಲಿಬಿಲಿಯಾಗುವಂತೆ ಮಾಡಿದನು. ಆಗ ಅವರು ಒಬ್ಬರನ್ನೊಬ್ಬರು ಕೊಲ್ಲಲು ಶುರುಮಾಡಿದ್ದರಿಂದ ಒಬ್ಬನೂ ಉಳಿಯಲಿಲ್ಲ. ಆದರೆ ಯೆಹೋವನು ಯೆಹೂದದ ಜನರು, ಸೈನಿಕರು ಹಾಗೂ ಪುರೋಹಿತರನ್ನು ಕಾಪಾಡಿದನು. ಯೆಹೋವನು ತನ್ನ ಜನರನ್ನು ಹೀಗೆ ಕಾಪಾಡಿದ ಸುದ್ದಿ ಸುತ್ತಮುತ್ತಲಿನ ದೇಶಗಳಿಗೆ ಹಬ್ಬಿತು. ಆಗ ಅವರಿಗೆ ಯೆಹೋವನು ಇನ್ನೂ ತನ್ನ ಜನರನ್ನು ಕಾಪಾಡುತ್ತಿದ್ದಾನೆ ಎಂದು ಗೊತ್ತಾಯಿತು. ಯೆಹೋವನು ತನ್ನ ಜನರನ್ನು ಹೇಗೆ ಕಾಪಾಡುತ್ತಾನೆ? ಅನೇಕ ವಿಧಗಳಿವೆ. ತನ್ನವರನ್ನು ಕಾಪಾಡಲು ಯೆಹೋವನಿಗೆ ಮನುಷ್ಯರ ಸಹಾಯದ ಅಗತ್ಯವಿಲ್ಲ.

      “ಈ ಯುದ್ಧದಲ್ಲಿ ನೀವು ಹೋರಾಡೋ ಅವಶ್ಯಕತೆ ಇಲ್ಲ. ನೀವು ನಿಮ್ಮ ಜಾಗದಲ್ಲಿ ಸ್ಥಿರವಾಗಿ ನಿಂತು ಯೆಹೋವ ನಿಮ್ಮನ್ನ ಹೇಗೆ ಕಾಪಾಡ್ತಾನೆ ಅನ್ನೋದನ್ನ ನೋಡಿ.”—2 ಪೂರ್ವಕಾಲವೃತ್ತಾಂತ 20:17

      ಪ್ರಶ್ನೆಗಳು: ಯೆಹೋಷಾಫಾಟ ಯಾವ ರೀತಿಯ ರಾಜನಾಗಿದ್ದ? ಯೆಹೋವನು ಯೆಹೂದವನ್ನು ಹೇಗೆ ಕಾಪಾಡಿದ?

      2 ಪೂರ್ವಕಾಲವೃತ್ತಾಂತ 17:1-19; 20:1-30

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ