-
ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 57
ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ
ಯೆಹೋವನು ಯೆರೆಮೀಯನನ್ನು ಪ್ರವಾದಿಯಾಗಿ ಆರಿಸಿದನು. ಆತನು ಅವನಿಗೆ ಯೆಹೂದದ ಜನರಿಗೆ ಸಾರಲು ಮತ್ತು ಅವರು ಮಾಡುತ್ತಿದ್ದ ಕೆಟ್ಟ ಕೆಲಸಗಳನ್ನು ನಿಲ್ಲಿಸುವಂತೆ ಎಚ್ಚರಿಸಲು ಹೇಳಿದನು. ಆಗ ಯೆರೆಮೀಯನು ‘ಯೆಹೋವನೇ, ನಾನಿನ್ನೂ ಚಿಕ್ಕ ಹುಡುಗ. ನನಗೆ ಜನರ ಹತ್ತಿರ ಸರಿಯಾಗಿ ಮಾತಾಡೋಕ್ಕೂ ಬರಲ್ಲ’ ಅಂದನು. ಯೆಹೋವನು ಅವನಿಗೆ ‘ಭಯಪಡಬೇಡ. ಏನು ಹೇಳಬೇಕು ಅಂತ ನಾನು ನಿನಗೆ ಹೇಳ್ತೀನಿ, ನಾನು ನಿನಗೆ ಸಹಾಯ ಮಾಡ್ತೀನಿ’ ಅಂದನು.
ಯೆಹೋವನು ಯೆರೆಮೀಯನಿಗೆ ಹಿರಿಯರಲ್ಲಿ ಕೆಲವ್ರನ್ನ ಸೇರಿ ಬರಲು ಹೇಳಿದನು. ಅವರ ಮುಂದೆ ಮಣ್ಣಿನ ಜಾಡಿಯನ್ನು ಒಡೆದು ‘ಈ ಮಣ್ಣಿನ ಪಾತ್ರೆ ತರಾನೇ ಯೆರೂಸಲೇಮ್ ನಾಶವಾಗುವುದು ಎಂದು ಹೇಳು’ ಅಂದನು. ಯೆಹೋವನು ಹೇಳಿದಂತೆ ಯೆರೆಮೀಯ ಮಾಡಿದಾಗ ಅಲ್ಲಿನ ಹಿರಿಯರಿಗೆ ತುಂಬ ಸಿಟ್ಟು ಬಂತು. ಪಷ್ಹೂರನೆಂಬ ಪುರೋಹಿತ ಯೆರೆಮೀಯನನ್ನು ಹೊಡೆದು ಮರದ ಬೇಡಿಗಳಿಂದ ಅವನ ಕೈಕಾಲುಗಳನ್ನು ಬಿಗಿದ. ಇಡೀ ರಾತ್ರಿ ಯೆರೆಮೀಯನಿಗೆ ಅಲುಗಾಡಲೂ ಆಗಲಿಲ್ಲ. ಮಾರನೇ ದಿನ ಬೆಳಗ್ಗೆ ಪಷ್ಹೂರನು ಯೆರೆಮೀಯನನ್ನು ಬಿಡಿಸಿದ. ಆಗ ಯೆರೆಮೀಯ ‘ನನಗೆ ಸಾಕಾಯಿತು. ನಾನು ಇನ್ನು ಮುಂದೆ ಸಾರೋದಿಲ್ಲ’ ಅಂದನು. ಆದರೆ ಯೆರೆಮೀಯ ಸಾರೋದನ್ನ ನಿಜವಾಗಿಯೂ ನಿಲ್ಲಿಸಿಬಿಟ್ಟನಾ? ಇಲ್ಲ. ಈ ವಿಚಾರದ ಬಗ್ಗೆ ಅವನು ಸ್ವಲ್ಪ ಯೋಚಿಸಿದ. ಆಮೇಲೆ ಅವನು ‘ಯೆಹೋವನ ಸಂದೇಶ ಬೆಂಕಿ ತರ ನನ್ನ ಮೂಳೆಗಳ ಒಳಗೆ ಉರಿಯುತ್ತಿದೆ. ನಾನು ಸಾರುವುದನ್ನು ನಿಲ್ಲಿಸಲು ಆಗಲ್ಲ’ ಅಂದನು. ಅವನು ಜನರನ್ನು ಎಚ್ಚರಿಸುವುದನ್ನು ಮುಂದುವರೆಸಿದ.
ವರ್ಷಗಳು ಕಳೆದಂತೆ ಯೆಹೂದವನ್ನು ಒಬ್ಬ ಹೊಸ ರಾಜ ಆಳಲು ಶುರು ಮಾಡಿದ. ಯೆರೆಮೀಯ ಹೇಳುತ್ತಿದ್ದ ಸಂದೇಶ ಪುರೋಹಿತರಿಗೆ ಮತ್ತು ಸುಳ್ಳು ಪ್ರವಾದಿಗಳಿಗೆ ಇಷ್ಟ ಆಗುತ್ತಿರಲಿಲ್ಲ. ಅವರು ಅಧಿಕಾರಿಗಳಿಗೆ ‘ಇವನಿಗೆ ಮರಣ ಶಿಕ್ಷೆ ಕೊಡಿ’ ಅಂದರು. ಅದಕ್ಕೆ ಯೆರೆಮೀಯ ‘ನೀವೇನಾದ್ರೂ ನನ್ನನ್ನ ಕೊಂದ್ರೆ ಒಬ್ಬ ಅಮಾಯಕನನ್ನು ಕೊಂದಂತೆ. ನಾನು ಹೇಳುತ್ತಿರುವುದು ನನ್ನ ಸ್ವಂತ ಮಾತುಗಳಲ್ಲ, ಯೆಹೋವನ ಮಾತುಗಳು’ ಅಂದನು. ಆಗ ಅಧಿಕಾರಿಗಳು ‘ಇವನಿಗೆ ಮರಣ ಶಿಕ್ಷೆ ಕೊಡುವುದು ಬೇಡ’ ಅಂದರು.
ಯೆರೆಮೀಯ ಸಾರುವುದನ್ನು ಮುಂದುವರೆಸಿದ. ಇದರಿಂದ ಅಧಿಕಾರಿಗಳಿಗೆ ತುಂಬ ಕೋಪ ಬಂತು. ಅವರು ಅವನಿಗೆ ಮರಣ ಶಿಕ್ಷೆ ವಿಧಿಸುವಂತೆ ರಾಜನನ್ನು ಕೇಳಿಕೊಂಡರು. ಆಗ ರಾಜ ‘ಯೆರೆಮೀಯನಿಗೆ ಏನು ಬೇಕಾದ್ರೂ ಮಾಡಿ’ ಅಂದ. ಅವರು ಯೆರೆಮೀಯನನ್ನು ಆಳವಾದ ಕೆಸರಿನ ಗುಂಡಿಗೆ ಹಾಕಿದರು. ಅವನು ಅಲ್ಲೇ ಸಾಯಲಿ ಅಂತ ಅಂದುಕೊಂಡರು. ಆ ಕೆಸರಿನಲ್ಲಿ ಯೆರೆಮೀಯ ಸ್ವಲ್ಪಸ್ವಲ್ಪನೇ ಹೂತುಹೋಗ್ತಾ ಇದ್ದ.
ಆಸ್ಥಾನದ ಅಧಿಕಾರಿಯಾದ ಎಬೆದ್ಮೆಲೆಕ ರಾಜನಿಗೆ ‘ಅಧಿಕಾರಿಗಳು ಯೆರೆಮೀಯನನ್ನ ಗುಂಡಿಗೆ ಹಾಕಿದ್ದಾರೆ! ಅವನನ್ನ ಅಲ್ಲೇ ಬಿಟ್ರೆ ಸತ್ತೇ ಹೋಗ್ತಾನೆ’ ಅಂದನು. ಆಗ ರಾಜ ಅವನಿಗೆ ‘ಗಂಡಸರನ್ನ ಕರ್ಕೊಂಡು ಹೋಗಿ ಯೆರೆಮೀಯನನ್ನ ಗುಂಡಿಯಿಂದ ಹೊರಗೆ ಎತ್ತು’ ಎಂದು ಅಪ್ಪಣೆಕೊಟ್ಟನು. ಯೆರೆಮೀಯನಿಗೆ ಎಷ್ಟೇ ಕಷ್ಟ ಬಂದರೂ ಅವನು ಸಾರೋದನ್ನ ಮಾತ್ರ ನಿಲ್ಲಿಸಲಿಲ್ಲ. ನಾವು ಅವನಂತೆ ಇರಬೇಕಲ್ವಾ?
“ನೀವು ನನ್ನ ಶಿಷ್ಯರಾಗಿರೋ ಕಾರಣ ಜನ್ರೆಲ್ಲ ನಿಮ್ಮನ್ನ ದ್ವೇಷಿಸ್ತಾರೆ. ಆದ್ರೆ ಕೊನೆ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ.”—ಮತ್ತಾಯ 10:22
-
-
ಯೆರೂಸಲೇಮ್ ನಾಶವಾಯಿತುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 58
ಯೆರೂಸಲೇಮ್ ನಾಶವಾಯಿತು
ಯೆಹೂದದ ಜನರು ಪದೇ ಪದೇ ಯೆಹೋವನನ್ನು ಬಿಟ್ಟು ಸುಳ್ಳು ದೇವರುಗಳನ್ನು ಆರಾಧಿಸಿದರು. ಅನೇಕ ವರ್ಷಗಳವರೆಗೆ ಯೆಹೋವನು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದನು. ಆತನು ತನ್ನ ಪ್ರವಾದಿಗಳನ್ನು ಕಳುಹಿಸಿ ಅವರನ್ನು ಎಚ್ಚರಿಸಿದನು. ಆದರೆ ಜನರದನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಅವರು ಪ್ರವಾದಿಗಳನ್ನು ಗೇಲಿಮಾಡಿದರು. ಇವರ ವಿಗ್ರಹಾರಾಧನೆಯನ್ನು ಯೆಹೋವನು ಹೇಗೆ ನಿಲ್ಲಿಸಿದನು?
ಬಾಬೆಲಿನ ರಾಜನಾದ ನೆಬೂಕದ್ನೆಚ್ಚರ ಒಂದರ ನಂತರ ಒಂದು ಪಟ್ಟಣವನ್ನು ವಶಪಡಿಸಿಕೊಳ್ಳುತ್ತಿದ್ದ. ಮೊದಲನೇ ಬಾರಿ ಅವನು ಯೆರೂಸಲೇಮನ್ನು ಸೋಲಿಸಿದಾಗ ಅದರ ರಾಜನಾದ ಯೆಹೋಯಾಖೀನನನ್ನು ಬಂಧಿಸಿ, ದೇಶದಲ್ಲಿದ್ದ ಎಲ್ಲ ಅಧಿಕಾರಿಗಳನ್ನ, ಸೈನಿಕರನ್ನ ಹಾಗೂ ಕರಕುಶಲಗಾರನನ್ನ ಬಾಬೆಲಿಗೆ ಕರೆದುಕೊಂಡು ಹೋದ. ಅಲ್ಲದೇ, ಯೆಹೋವನ ಆಲಯದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನೂ ತೆಗೆದುಕೊಂಡ. ನಂತರ ನೆಬೂಕದ್ನೆಚ್ಚರ ಚಿದ್ಕೀಯನನ್ನು ಯೆಹೂದದ ರಾಜನಾಗಿ ಮಾಡಿದ.
ಮೊದಮೊದಲು ಚಿದ್ಕೀಯ ನೆಬೂಕದ್ನೆಚ್ಚರನ ಮಾತನ್ನು ಕೇಳುತ್ತಿದ್ದ. ಆದರೆ ಸುತ್ತಮುತ್ತ ಇದ್ದ ದೇಶದವರು ಹಾಗೂ ಸುಳ್ಳು ಪ್ರವಾದಿಗಳು ಬಾಬೆಲಿನ ವಿರುದ್ಧ ತಿರುಗಿಬೀಳಲು ಚಿದ್ಕೀಯನಿಗೆ ಕುಮ್ಮಕ್ಕು ಕೊಟ್ಟರು. ಯೆರೆಮೀಯ ಅವನಿಗೆ ‘ನೀನು ಬಾಬೆಲಿನ ವಿರುದ್ಧ ತಿರುಗಿಬಿದ್ದರೆ ಯೆಹೂದದಲ್ಲಿ ರಕ್ತದ ಹೊಳೆಯೇ ಹರಿಯುತ್ತೆ, ಬರಗಾಲ ಹಾಗೂ ಕಾಯಿಲೆಗಳು ಬರುತ್ತೆ’ ಎಂದು ಎಚ್ಚರಿಸಿದ.
ಎಂಟು ವರ್ಷಗಳ ಆಳ್ವಿಕೆಯ ನಂತರ ಚಿದ್ಕೀಯ ಬಾಬೆಲಿನ ವಿರುದ್ಧ ತಿರುಗಿಬಿದ್ದ. ಈಜಿಪ್ಟಿನ ಸೈನ್ಯದ ಸಹಾಯ ಕೇಳಿದ. ನಂತರ ನೆಬೂಕದ್ನೆಚ್ಚರ ತನ್ನ ಸೈನ್ಯವನ್ನು ಕಳುಹಿಸಿ ಯೆರೂಸಲೇಮನ್ನು ಮುತ್ತಿಗೆ ಹಾಕಿಸಿದ. ಆಗ ಯೆರೆಮೀಯ ಚಿದ್ಕೀಯನಿಗೆ ‘ಬಾಬೆಲಿನವರಿಗೆ ನೀನು ಶರಣಾದರೆ ನಿನ್ನ ಜೀವ ಹಾಗೂ ಈ ಪಟ್ಟಣ ಉಳಿಯುತ್ತದೆ. ಆದರೆ ನೀನು ಶರಣಾಗದೇ ಇದ್ದರೆ ಬಾಬೆಲಿನವರು ಯೆರೂಸಲೇಮನ್ನು ಸುಟ್ಟು, ನಿನ್ನನ್ನು ಹಿಡಿದುಕೊಂಡು ಹೋಗುತ್ತಾರೆ ಎಂದು ಯೆಹೋವನು ಹೇಳಿದ್ದಾನೆ’ ಅಂದ. ಅದಕ್ಕೆ ಚಿದ್ಕೀಯ ‘ನಾನು ಶರಣಾಗಲ್ಲ!’ ಅಂದ.
ಒಂದೂವರೆ ವರ್ಷಗಳ ನಂತರ ಬಾಬೆಲಿನ ಸೈನ್ಯ ಯೆರೂಸಲೇಮಿನ ಗೋಡೆಯನ್ನು ಒಡೆದುಹಾಕಿ ಪಟ್ಟಣಕ್ಕೆ ಬೆಂಕಿ ಹಚ್ಚಿದರು. ಅವರು ದೇವಾಲಯವನ್ನು ಸುಟ್ಟು, ಅನೇಕರನ್ನು ಕೊಂದು, ಸಾವಿರಾರು ಜನರನ್ನು ಕೈದಿಗಳಾಗಿ ಕರ್ಕೊಂಡು ಹೋದರು.
ಚಿದ್ಕೀಯ ಯೆರೂಸಲೇಮಿನಿಂದ ತಪ್ಪಿಸಿಕೊಂಡು ಓಡಿಹೋದ. ಆದರೆ ಬಾಬೆಲಿನವರು ಅವನನ್ನು ಯೆರಿಕೋವಿನ ಹತ್ತಿರ ಹಿಡಿದು ನೆಬೂಕದ್ನೆಚ್ಚರನ ಹತ್ತಿರ ತಂದರು. ನೆಬೂಕದ್ನೆಚ್ಚರನು ಚಿದ್ಕೀಯನ ಕಣ್ಣೆದುರೇ ಅವನ ಗಂಡು ಮಕ್ಕಳನ್ನು ಕೊಂದು ಅವನ ಕಣ್ಣುಗಳನ್ನು ಕಿತ್ತುಹಾಕಿದನು. ನಂತರ ಅವನನ್ನು ಜೈಲಿಗೆ ಹಾಕಿದನು. ಕೊನೆಗೆ ಚಿದ್ಕೀಯನು ಜೈಲಿನಲ್ಲೇ ಸತ್ತನು. ಆದರೆ ಯೆಹೋವನು ಯೆಹೂದದ ಜನರಿಗೆ, ‘70 ವರ್ಷ ಕಳೆದ್ಮೇಲೆ ನಾನು ನಿಮ್ಮನ್ನು ನಿಮ್ಮ ಸ್ವಂತ ಊರಾದ ಯೆರೂಸಲೇಮಿಗೆ ವಾಪಸ್ ಕರ್ಕೊಂಡು ಬರ್ತಿನಿ’ ಎಂದು ಮಾತುಕೊಟ್ಟನು.
ಕೈದಿಗಳಾಗಿ ಬಾಬೆಲಿಗೆ ಹೋದ ಮಕ್ಕಳಿಗೆ ಏನಾಗಿರಬಹುದು? ಅವರು ಯೆಹೋವನಿಗೆ ನಿಷ್ಠರಾಗಿ ಉಳಿದರಾ?
“ಯೆಹೋವ ದೇವರೇ, ಸರ್ವಶಕ್ತನೇ, ನೀನು ಯಾವಾಗ್ಲೂ ಸರಿಯಾಗೇ ತೀರ್ಪು ಮಾಡ್ತೀಯ. ಅದ್ರಲ್ಲಿ ನ್ಯಾಯ ಇರುತ್ತೆ.”—ಪ್ರಕಟನೆ 16:7
-