ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr20 ಆಗಸ್ಟ್‌ ಪು. 1-8
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2020
  • ಉಪಶೀರ್ಷಿಕೆಗಳು
  • ಆಗಸ್ಟ್‌ 3-9
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 13-14
  • ಆಗಸ್ಟ್‌ 10-16
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 15-16
  • ಆಗಸ್ಟ್‌ 17-23
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 17-18
  • ಆಗಸ್ಟ್‌ 24-30
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 19-20
  • ಆಗಸ್ಟ್‌ 31–ಸೆಪ್ಟೆಂಬರ್‌ 6
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 21-22
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2020
mwbr20 ಆಗಸ್ಟ್‌ ಪು. 1-8

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಆಗಸ್ಟ್‌ 3-9

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 13-14

“ಭಯಪಡದೆ ಸುಮ್ಮನೆ ನಿಂತು ಯೆಹೋವನು ನಿಮ್ಮನ್ನ ಹೇಗೆ ಕಾಪಾಡುತ್ತಾನೆ ಅಂತ ನೋಡಿ”

ಕಾವಲಿನಬುರುಜು13 4/1 ಪುಟ 4

ಅಚಲ ನಂಬಿಕೆ

“ಮೋಶೆ ಆ ಜನರಿಗೆ—ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ” ಅಂದರು. (ವಿಮೋಚನಕಾಂಡ 14:13) ದೇವರು ಕೆಂಪು ಸಮುದ್ರದ ಮಧ್ಯದಲ್ಲಿ ಒಣನೆಲ ಮಾಡಿ ಇಸ್ರೇಲಿಗಳನ್ನು ಕಾಪಾಡುತ್ತಾರೆ ಅನ್ನೋದು ಮೋಶೆಗೆ ಗೊತ್ತಿರದೇ ಇದ್ದಿರಬಹುದು. ಆದರೆ ದೇವರು ಏನಾದರೂ ಮಾಡೇ ಮಾಡುತ್ತಾರೆ ಅಂತ ಭರವಸೆ ಇತ್ತು. ಅದೇ ಭರವಸೆ ಎಲ್ಲ ಇಸ್ರೇಲಿಗಳಲ್ಲೂ ಇರಬೇಕು ಅನ್ನೋದು ಮೋಶೆಯ ಆಶಯವಾಗಿತ್ತು. ಇಸ್ರೇಲಿಗಳ ನಂಬಿಕೆ ಕಟ್ಟುವುದರಲ್ಲಿ ಮೋಶೆ ಯಶಸ್ವಿಯಾದರಾ? ಯಶಸ್ವಿಯಾದರು. “ನಂಬಿಕೆಯಿಂದಲೇ [ಇಸ್ರೇಲಿಗಳು] ಒಣನೆಲದಲ್ಲಿಯೋ ಎಂಬಂತೆ ಕೆಂಪು ಸಮುದ್ರವನ್ನು ದಾಟಿದರು” ಎನ್ನುತ್ತೆ ಬೈಬಲ್‌. (ಇಬ್ರಿಯ 11:29) ದೇವರ ಮೇಲೆ ಮೋಶೆಗಿದ್ದ ಅಚಲ ನಂಬಿಕೆಯನ್ನು ನೋಡಿದ ಇಸ್ರೇಲಿಗಳ ನಂಬಿಕೆ ಸಹ ಬಲವಾಯ್ತು.

ಕಾವಲಿನಬುರುಜು18.09 ಪುಟ 26 ಪ್ಯಾರ 13

ಸರ್ವಶಕ್ತನಾದರೂ ಸರ್ವರ ಬಗ್ಗೆ ಚಿಂತಿಸುತ್ತಾನೆ

13 ವಿಮೋಚನಕಾಂಡ 14:19-22 ಓದಿ. ನೀವು ಕೂಡ ಇಸ್ರಾಯೇಲ್ಯರಲ್ಲಿ ಒಬ್ಬರೆಂದು ಊಹಿಸಿಕೊಳ್ಳಿ. ನಿಮ್ಮ ಕಣ್ಣಮುಂದೆ ಕೆಂಪು ಸಮುದ್ರವಿದೆ, ಹಿಂದೆ ಐಗುಪ್ತ್ಯ ಸೈನ್ಯ ನಿಮ್ಮನ್ನು ಆಕ್ರೋಶದಿಂದ ಬೆನ್ನಟ್ಟುತ್ತಿದೆ. ಇವುಗಳ ಮಧ್ಯೆ ನೀವು ಸಿಕ್ಕಿಹಾಕಿಕೊಂಡಿದ್ದೀರಿ. ಇಂಥ ಸನ್ನಿವೇಶದಲ್ಲಿ ಯೆಹೋವನು ನಿಮ್ಮ ಸಹಾಯಕ್ಕಾಗಿ ಬರುತ್ತಾನೆ. ಇಷ್ಟು ಹೊತ್ತು ನಿಮ್ಮ ಮುಂದೆ ಇದ್ದ ಮೇಘಸ್ತಂಭವನ್ನು ನಿಮ್ಮ ಹಿಂದೆ ತಂದು ನಿಲ್ಲಿಸುತ್ತಾನೆ. ಈಗ ಅದು ಐಗುಪ್ತ್ಯರ ಸೈನ್ಯ ಮತ್ತು ನಿಮ್ಮ ಮಧ್ಯೆ ನಿಂತಿದೆ. ಐಗುಪ್ತ್ಯರ ಸೈನ್ಯ ಈಗ ಕಾರ್ಗತ್ತಲಲ್ಲಿ ಮುಳುಗಿದೆ. ಆದರೆ ನೀವು ಮಾತ್ರ ಅದ್ಭುತಕರವಾದ ಬೆಳಕಿನಲ್ಲಿ ಇದ್ದೀರಿ! ನಂತರ ಮೋಶೆ ತನ್ನ ಕೈಚಾಚಿದಾಗ ಪೂರ್ವ ದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುತ್ತದೆ. ಆಗ ಸಮುದ್ರದಲ್ಲಿ ಅಗಲವಾದ ದಾರಿ ತೆರೆಯುತ್ತದೆ. ನೀವು, ನಿಮ್ಮ ಕುಟುಂಬ, ನಿಮ್ಮ ಸಾಕುಪ್ರಾಣಿಗಳು ಮತ್ತು ಉಳಿದ ಜನರೆಲ್ಲರೂ ಯಾವುದೇ ಗಲಿಬಿಲಿ ಇಲ್ಲದೆ ಆ ದಾರಿಯಲ್ಲಿ ನಡೆಯುತ್ತಾ ಇದ್ದೀರಿ. ಅಲ್ಲಿ ಕೆಸರಿಲ್ಲ, ನೆಲ ಜಾರುತ್ತಿಲ್ಲ ಅಂತ ನೋಡಿದಾಗ ನಿಮಗೆ ಆಶ್ಚರ್ಯ ಆಗುತ್ತದೆ. ನಡೆಯುವುದಕ್ಕೆ ಕಷ್ಟಪಡುವವರು ಕೂಡ ಸಮುದ್ರ ತಳ ಒಣಗಿ ಗಟ್ಟಿಯಾಗಿರುವುದರಿಂದ ಆರಾಮಾಗಿ ಹೆಜ್ಜೆ ಇಡುತ್ತಾ ಸಮುದ್ರವನ್ನು ದಾಟಿಬಿಡುತ್ತಾರೆ!

ಕಾವಲಿನಬುರುಜು09 3/15 ಪುಟ 7 ಪ್ಯಾರ 2-3

ಯೆಹೋವನನ್ನು ಮರೆಯಬೇಡಿ

ಇಲ್ಲಿ ಐಗುಪ್ತ್ಯರು ತಮ್ಮ ಜಖಂಗೊಂಡ ರಥಗಳೊಂದಿಗೆ ಪರದಾಡುತ್ತಿದ್ದಾಗ, ಅಲ್ಲಿ ಇಸ್ರಾಯೇಲ್ಯರು ಪೂರ್ವತೀರವನ್ನು ತಲಪಿ ಬಿಟ್ಟಿದ್ದರು. ಮೋಶೆ ಈಗ ಕೆಂಪು ಸಮುದ್ರದ ಮೇಲೆ ತನ್ನ ಕೈಚಾಚಿದನು. ಆಗ ಯೆಹೋವನು ಗೋಡೆಗಳಂತೆ ನಿಂತಿದ್ದ ನೀರು ಪುನಃ ಹರಿಯುವಂತೆ ಮಾಡಿದನು. ಲಕ್ಷಗಟ್ಟಲೆ ಟನ್ನುಗಳಷ್ಟಿದ್ದ ನೀರು ಫರೋಹ ಮತ್ತವನ ಸೈನಿಕರ ಮೇಲೆ ರಭಸವಾಗಿ ಮುನ್ನುಗ್ಗಿ ಅವರನ್ನು ಮುಳುಗಿಸಿಬಿಟ್ಟಿತು. ಆ ಶತ್ರುಗಳಲ್ಲಿ ಯಾರೂ ಬದುಕಿ ಉಳಿಯಲಿಲ್ಲ. ಇಸ್ರಾಯೇಲ್ಯರೀಗ ಸ್ವತಂತ್ರರು!—ವಿಮೋ. 14:26-28; ಕೀರ್ತ. 136:13-15.

ಈ ಘಟನೆಯ ಸುದ್ದಿ ಕೇಳಿ ಆಸುಪಾಸಿನ ರಾಷ್ಟ್ರಗಳಲ್ಲಿ ಹುಟ್ಟಿದ ಭೀತಿಯು ಬಹುಕಾಲ ಉಳಿಯಿತು. (ವಿಮೋ. 15:14-16) ನಾಲ್ವತ್ತು ವರ್ಷಗಳ ನಂತರ ಯೆರಿಕೋವಿನ ರಾಹಾಬಳು ಇಸ್ರಾಯೇಲಿನ ಇಬ್ಬರು ಪುರುಷರಿಗೆ ಹೇಳಿದ್ದು: ‘ನಿಮ್ಮ ನಿಮಿತ್ತ ನಮಗೆ ಮಹಾಭೀತಿಯುಂಟಾಗಿದೆ; ನೀವು ಐಗುಪ್ತದಿಂದ ಹೊರಟು ಬಂದ ಮೇಲೆ ಯೆಹೋವನು ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟದ್ದನ್ನೂ ಕೇಳಿದ್ದೇವೆ.’ (ಯೆಹೋ. 2:9, 10) ಆ ಜನರು ವಿಧರ್ಮಿಗಳಾಗಿದ್ದರೂ ಯೆಹೋವನು ತನ್ನ ಜನರನ್ನು ಹೇಗೆ ಬಿಡುಗಡೆಗೊಳಿಸಿದ್ದನು ಎಂಬದನ್ನು ಅವರು ಮರೆತಿರಲಿಲ್ಲ. ಇಸ್ರಾಯೇಲ್ಯರಿಗಾದರೋ ಆತನನ್ನು ಮರೆಯದಿರಲು ಖಂಡಿತವಾಗಿ ಇನ್ನೂ ಹೆಚ್ಚಿನ ಕಾರಣಗಳಿದ್ದವು.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

it-1-E ಪುಟ 1117

ಹೆದ್ದಾರಿ, ರಸ್ತೆ

ಹಿಂದಿನ ಕಾಲದಿಂದಲೂ ಪ್ಯಾಲೆಸ್ಟೀನ್‌ ಪ್ರದೇಶದಾದ್ಯಂತ ಇದ್ದ ರಸ್ತೆಗಳು, ಹೆದ್ದಾರಿಗಳು ಮತ್ತು ಸರಕು ಸಾಮಗ್ರಿಗಳನ್ನು ಸಾಗಿಸಲು ಬಳಸುತ್ತಿದ್ದ ಕೆಲ್ವು ರಸ್ತೆಗಳು ಪಟ್ಟಣಗಳ ಮತ್ತು ದೇಶ ವಿದೇಶಗಳ ಮಧ್ಯೆ ಸಂಪರ್ಕವನ್ನ ಕಲ್ಪಿಸುತ್ತಿದ್ದವು. (ಅರ 20:17-19; 21:21, 22; 22:5, 21-23; ಯೆಹೋ 2:22; ನ್ಯಾಯ 21:19; 1ಸಮು 6:9, 12; 13:17, 18) ಈಜಿಪ್ಟ್‌ನಿಂದ ದಮಸಕ್ಕಕ್ಕೆ ಹೋಗಲು ಒಂದು ಮುಖ್ಯ ಹೆದ್ದಾರಿ ಇತ್ತು. ಅದು ಈಜಿಪ್ಟ್‌ನಿಂದ ಆರಂಭವಾಗಿ ಫಿಲಿಷ್ಟಿಯ ದೇಶದ ಗಾಜ಼ಾ ಮತ್ತು ಅಷ್ಕೆಲೋನ್‌ ಪಟ್ಟಣಗಳ ಮಧ್ಯೆ ಹಾದುಹೋಗ್ತಿತ್ತು. ನಂತ್ರ ಅಲ್ಲಿಂದ ಈಶಾನ್ಯ ದಿಕ್ಕಿನಲ್ಲಿದ್ದ ಮೆಗಿದ್ದೋ ಕಡೆಗೆ ಹೋಗ್ತಿದ್ದ ಹೆದ್ದಾರಿಗೆ ತಿರುಗಬೇಕಿತ್ತು. ಅದು ಮೆಗಿದ್ದೋ ಪಟ್ಟಣ, ಹಾಚೋರನ್ನು ದಾಟಿ ಗಲಿಲಾಯ ಸಮುದ್ರದ ಉತ್ತರ ದಿಕ್ಕನ್ನು ಹಾದು ಕೊನೆಗೆ ದಮಸ್ಕಕ್ಕೆ ತಲುಪ್ತಿತ್ತು. ಈಜಿಪ್ಟ್‌ನಿಂದ ಕಾನಾನ್‌ ದೇಶಕ್ಕೆ ಹೋಗಲು ಫಿಲಿಷ್ಟಿಯ ದೇಶದ ಮೂಲಕ ಹಾದುಹೋಗ್ತಿದ್ದ ಈ ರಸ್ತೆ ತುಂಬ ಹತ್ತಿರದ ಮಾರ್ಗವಾಗಿತ್ತು. ಆದ್ರೂ ಯೆಹೋವನು ಆ ಮಾರ್ಗ ಬಿಟ್ಟು ಇನ್ನೊಂದು ಮಾರ್ಗದಲ್ಲಿ ಇಸ್ರಾಯೇಲ್ಯರನ್ನು ನಡೆಸಿಕೊಂಡು ಹೋದನು. ಕಾರಣ ಆ ಮಾರ್ಗದಲ್ಲಿ ಹೋಗುವಾಗ ಫಿಲಿಷ್ಟಿಯರು ಮಾಡೋ ದಾಳಿಯಿಂದ ಅವ್ರು ಹೆದರೋ ಸಾಧ್ಯತೆ ಇತ್ತು.—ವಿಮೋ 13:17.

it-1-E ಪುಟ 782 ಪ್ಯಾರ 2-3

ಈಜಿಪ್ಟ್‌ನಿಂದ ಬಿಡುಗಡೆ

ಇಸ್ರಾಯೇಲ್ಯರು ದಾಟಿಹೋಗುವುದಕ್ಕಾಗಿ ಕೆಂಪು ಸಮುದ್ರ ಎಲ್ಲಿ ಇಬ್ಭಾಗವಾಯಿತು?

ಇಸ್ರಾಯೇಲ್ಯರು ತಮ್ಮ ಎರಡನೇ ಹಂತದ ಪ್ರಯಾಣ ಮುಗಿಸಿದ ಮೇಲೆ ಅಂದ್ರೆ “ಮರಳುಕಾಡಿನ ಅಂಚಿನಲ್ಲಿರುವ” ಏತಾಮಿನಲ್ಲಿ ಇಳಿದುಕೊಂಡಾಗ ಯೆಹೋವನು ಮೋಶೆಗೆ ‘ಇಸ್ರಾಯೇಲ್ಯರು ಅಡ್ಡ ತಿರುಗಿ [ಅಥ್ವಾ ಬಂದ ದಾರಿಯಲ್ಲೇ ವಾಪಸ್‌ ಹೋಗಿ] ಪೀಹಹೀರೋತಿನ ಎದುರಿಗಿರುವ ಸಮುದ್ರದ ಬಳಿಯಲ್ಲಿ ಇಳಿದುಕೊಳ್ಳಬೇಕು’ ಎಂದು ಹೇಳಿದನು. ‘ಇಸ್ರಾಯೇಲ್ಯರಿಗೆ ದಾರಿ ತಪ್ಪಿಹೋಗಿದೆ’ ಅಂತ ಫರೋಹ ನಂಬಿ ಮೋಸ ಹೋಗ್ಲಿಕ್ಕಾಗಿ ಯೆಹೋವ ಈ ಉಪಾಯ ಮಾಡಿದ್ದಿರಬಹುದು. (ವಿಮೋ 13:20; 14:1-3) ಇಸ್ರಾಯೇಲ್ಯರು ಈಜಿಪ್ಟ್‌ನಿಂದ ಹೊರಟಾಗ ಎಲ್‌ಹಜ್‌ ರಸ್ತೆಯ ಮಾರ್ಗದ ಮೂಲಕ ಹೋಗ್ತಿದ್ರು ಅಂತ ಕಾಣುತ್ತೆ ಅಂತ ಕೆಲ್ವು ವಿದ್ವಾಂಸರು ಹೇಳ್ತಾರೆ. ಅವ್ರ ಪ್ರಕಾರ ಯೆಹೋವನು ಇಸ್ರಾಯೇಲ್ಯರಿಗೆ “ಅಡ್ಡ ತಿರುಗಿ” ಅಂತ ಹೇಳಿದ ಪದಕ್ಕೆ ಬಳಸಿದ ಹೀಬ್ರೂ ಪದ ಸ್ವಲ್ಪ ದಿಕ್ಕನ್ನು ಬದಲಾಯಿಸೋದಲ್ಲ ಬದ್ಲಿಗೆ ಸ್ವಲ್ಪ ಹಿಂದೆ ಹೋಗಿ ಸಂಪೂರ್ಣ ದಿಕ್ಕನ್ನೇ ಬದಲಾಯಿಸೋದಾಗಿತ್ತು. ಇಸ್ರಾಯೇಲ್ಯರು ಸ್ಯೂಝ್‌ ಕೊಲ್ಲಿಯ ಉತ್ತರಕ್ಕೆ ತಲುಪಿದ ಮೇಲೆ ವಾಪಸ್‌ ಹಿಂತಿರುಗಿ ಆ ಕೊಲ್ಲಿಯ ಪಶ್ಚಿಮ ದಿಕ್ಕಿಗೆ ಬಂದು ತಲುಪಿರಬೇಕು ಅಂತ ವಿದ್ವಾಂಸರು ಹೇಳ್ತಾರೆ. ಆ ಜಾಗ ಹೇಗಿತ್ತೆಂದ್ರೆ ಒಂದುಕಡೆ ಜಬಲ್‌ಹತಾಕದ ದೊಡ್ಡ ಪರ್ವತ ಶ್ರೇಣಿಯಿತ್ತು ಇನ್ನೊಂದು ಕಡೆ ಸಮುದ್ರವಿತ್ತು. ಒಂದುವೇಳೆ ಈಜಿಪ್ಟ್‌ನವರು ಉತ್ತರ ದಿಕ್ಕಿನಿಂದ ದಾಳಿಮಾಡೋಕೆ ಬಂದಿದ್ರೆ ಲಕ್ಷಾಂತರ ಇಸ್ರಾಯೇಲ್ಯರಿಗೆ ತಪ್ಪಿಸಿಕೊಳ್ಳೋಕೆ ಮಾರ್ಗನೇ ಇರಲಿಲ್ಲ. ಒಂದು ರೀತಿಯಲ್ಲಿ ಅವ್ರು ಸಿಕ್ಕಿಹಾಕಿಕೊಂಡಿದ್ರು.

ಒಂದನೇ ಶತಮಾನದ ಯೆಹೂದಿಗಳು ಸಹ ಇಸ್ರಾಯೇಲ್ಯರು ಕೆಂಪು ಸಮುದ್ರವನ್ನ ದಾಟೋಕೆ ಇದೇ ಮಾರ್ಗವನ್ನ ಬಳಸಿದ್ರು ಅಂತ ನಂಬ್ತಿದ್ರು. ಬೈಬಲ್‌ ಕೂಡ ಅವ್ರು ಇದೇ ಮಾರ್ಗವನ್ನ ಬಳಸಿದ್ರು ಅನ್ನೋದಕ್ಕೆ ಸ್ಪಷ್ಟವಾದ ಚಿತ್ರಣ ಕೊಡುತ್ತೆ. ಆದ್ರೆ ಅನೇಕ ವಿದ್ವಾಂಸರು ಇದನ್ನ ಒಪ್ಪಲ್ಲ. (ವಿಮೋ 14:9-16) ಇಸ್ರಾಯೇಲ್ಯರು ಸ್ಯೂಝ್‌ ಕೊಲ್ಲಿಯ ಉತ್ತರದಲ್ಲಿ ಕೆಂಪು ಸಮುದ್ರವನ್ನ ದಾಟಿರೋಕೆ ಸಾಧ್ಯವಿಲ್ಲ. ಯಾಕಂದ್ರೆ ಒಂದುವೇಳೆ ಅಲ್ಲೇ ದಾಟಿದ್ದಿದ್ರೆ ಫರೋಹನ ಸೈನ್ಯ ಅವ್ರನ್ನು ಹಿಡಿಯೋಕೆ ಸಮುದ್ರದೊಳಗೆ ನುಗ್ಗೋ ಅವಶ್ಯಕತೆ ಇರುತ್ತಿರಲಿಲ್ಲ. ಬದ್ಲಿಗೆ ಸಮುದ್ರದ ತೀರದಲ್ಲೇ ಸಾಗಿ ಇನ್ನೊಂದು ದಿಕ್ಕಿನಲ್ಲಿದ್ದ ಇಸ್ರಾಯೇಲ್ಯರನ್ನ ಸುಲಭವಾಗಿ ಹಿಡಿಯುತ್ತಿತ್ತು.—ವಿಮೋ 14:22, 23.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಅಧ್ಯಯನ ಲೇಖನಗಳ ಬ್ರೋಷರ್‌07 12/15 ಪುಟ 20-22 ಪ್ಯಾರ 13-16

‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡಿರಿ’

13 ಈ ಅದ್ಭುತಕರ ಬಿಡುಗಡೆಯು ಪಾರಾದವರ ಮೇಲೆ ಯಾವ ಪ್ರಭಾವ ಬೀರಿತು? ಮೋಶೆ ಮತ್ತು ಇಸ್ರಾಯೇಲ್ಯರು ಸ್ವಯಂಪ್ರೇರಿತರಾಗಿ ಯೆಹೋವನಿಗೆ ಸ್ತುತಿಗೀತೆಯನ್ನು ಹಾಡಲಾರಂಭಿಸಿದರು! ಅವರು ಹಾಡಿದ್ದು: “ಯೆಹೋವನ ಸ್ತೋತ್ರವನ್ನು ಗಾನಮಾಡೋಣ; ಆತನು ಮಹಾಜಯಶಾಲಿಯಾದನು; . . . ಯೆಹೋವನೇ ಯುಗಯುಗಾಂತರಗಳಲ್ಲಿಯೂ ಆಳುವನು.” (ವಿಮೋಚನಕಾಂಡ 15:1, 18) ಅವರ ಮನಸ್ಸಿಗೆ ಮೊದಲು ಬಂದ ವಿಚಾರ, ದೇವರನ್ನು ಘನಪಡಿಸಬೇಕೆಂಬದೇ. ಏಕೆಂದರೆ ಆ ಸನ್ನಿವೇಶದಲ್ಲಿ ಯೆಹೋವನು ತನ್ನ ಪರಮಾಧಿಕಾರವನ್ನು ತೋರಿಸಿಕೊಟ್ಟಿದ್ದನು.

14 ಈ ರೋಮಾಂಚಕ ಘಟನೆಗಳಿಂದ ನಾವು ಯಾವ ಉಪದೇಶ, ಸಾಂತ್ವನ ಮತ್ತು ನಿರೀಕ್ಷೆಯನ್ನು ಪಡೆದುಕೊಳ್ಳುತ್ತೇವೆ? ಯೆಹೋವನು, ತನ್ನ ಜನರು ಅನುಭವಿಸಬೇಕಾದ ಯಾವುದೇ ಸಂಕಷ್ಟಕ್ಕಾಗಿಯೂ ಸಜ್ಜಾಗಿದ್ದಾನೆಂದು ನಾವು ಖಂಡಿತವಾಗಿ ನೋಡಬಲ್ಲೆವು. ಅವರಿಗೆ ಎದುರಾಗಬಹುದಾದ ಯಾವುದೇ ಸನ್ನಿವೇಶವನ್ನು ಆತನು ನಿಭಾಯಿಸಬಲ್ಲನು. ಕೆಂಪು ಸಮುದ್ರವು ಇಸ್ರಾಯೇಲ್ಯರಿಗೆ ಒಂದು ತಡೆಯಾಗಿರದಂತೆ ಯೆಹೋವನು ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿದನು. ಆದರೆ ಅದೇ ಕೆಂಪು ಸಮುದ್ರವು ಫರೋಹನ ಸೈನ್ಯಗಳಿಗೆ ಜಲಸಮಾಧಿಯಾಗುವಂತೆ ಮಾಡಲು ಶಕ್ತನಾಗಿದ್ದನು. ಇದರ ಕುರಿತು ಪರ್ಯಾಲೋಚಿಸುತ್ತಾ, “ಯೆಹೋವನು ನನಗಿದ್ದಾನೆ; ಭಯಪಡೆನು; ಮನುಷ್ಯನು ನನಗೆ ಏನು ಮಾಡಾನು?” ಎಂದು ಹೇಳಿದ ಕೀರ್ತನೆಗಾರನ ಮಾತುಗಳನ್ನು ನಾವು ಪ್ರತಿಧ್ವನಿಸಬಹುದು. (ಕೀರ್ತನೆ 118:6) ರೋಮಾಪುರ 8:31 ರಲ್ಲಿ ದಾಖಲಾಗಿರುವ ಪೌಲನ ಮಾತುಗಳೂ ನಮಗೆ ಸಾಂತ್ವನ ಕೊಡುತ್ತವೆ: “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?” ಈ ಪ್ರೇರಿತ ನುಡಿಗಳು ನಮಗೆ ಎಷ್ಟೊಂದು ಭರವಸೆಯನ್ನು ಕೊಡುತ್ತವೆ! ಅವು ನಮಗಿರಬಹುದಾದ ಯಾವುದೇ ಭಯ ಹಾಗೂ ಶಂಕೆಗಳನ್ನು ತೆಗೆದುಹಾಕಿ ನಮ್ಮಲ್ಲಿ ನಿರೀಕ್ಷೆಯನ್ನು ತುಂಬಿಸುತ್ತವೆ. ಹೀಗಿರುವುದರಿಂದ ಇಸವಿ 2008 ರ ನಮ್ಮ ವರ್ಷವಚನವಾದ, ‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡಿರಿ’ ಎಂಬುದು ಎಷ್ಟು ಸೂಕ್ತವಾಗಿದೆ!—ವಿಮೋಚನಕಾಂಡ 14:13, NW.

15 ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆಯಾದ ವೃತ್ತಾಂತದಿಂದ ನಾವು ಇನ್ನೇನು ಕಲಿಯಬಲ್ಲೆವು? ಯೆಹೋವನು ಏನೇ ಮಾಡುವಂತೆ ಹೇಳಲಿ ನಾವಾತನ ಮಾತಿಗೆ ವಿಧೇಯರಾಗಬೇಕೆಂದೇ. ಪಸ್ಕಹಬ್ಬದ ತಯಾರಿಗಾಗಿ ಕೊಡಲಾದ ಪ್ರತಿಯೊಂದು ಸೂಕ್ಷ್ಮ ವಿವರವನ್ನೂ ಪಾಲಿಸುತ್ತಾ ಇಸ್ರಾಯೇಲ್ಯರು ವಿಧೇಯರಾಗಿದ್ದರು. ಅವರು ನೈಸಾನ್‌ 14 ರ ರಾತ್ರಿಯಂದು ವಿಧೇಯತೆಯಿಂದ ತಮ್ಮ ಮನೆಯೊಳಗೇ ಉಳಿದರು. ಅವರು ಕೊನೆಗೆ ಐಗುಪ್ತದಿಂದ ಹೊರಡುವಾಗ “ಸೈನ್ಯ ವ್ಯೂಹದೋಪಾದಿ” (NW) ಹೋಗಬೇಕಾಗಿತ್ತು. (ವಿಮೋಚನಕಾಂಡ 13:18) ಇಂದು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಬರುವಂಥ ಮಾರ್ಗದರ್ಶನವನ್ನು ನಾವು ಅನುಸರಿಸುವುದು ಅತಿ ಪ್ರಾಮುಖ್ಯ! (ಮತ್ತಾಯ 24:45) ನಮ್ಮ ಹಿಂದೆ ಕೇಳಿಬರುವ ದೇವರ ವಾಕ್ಯಕ್ಕೆ ನಾವು ತುಂಬ ಜಾಗ್ರತೆಯಿಂದ ಕಿವಿಗೊಡಬೇಕು. ಅದು ಹೀಗನ್ನುತ್ತದೆ: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ಮಹಾ ಸಂಕಟವು ಆರಂಭಗೊಳ್ಳುವ ಸಮಯಕ್ಕೆ ನಾವು ಹೆಚ್ಚೆಚ್ಚು ಹತ್ತಿರವಾಗುತ್ತಿರುವಾಗ ಕೆಲವೊಂದು ವಿವರವಾದ ಸೂಚನೆಗಳು ನಮಗೆ ಸಿಗಬಹುದು. ಆ ಸಂಕಟಮಯ ದಿನಗಳ ಮಧ್ಯದಿಂದ ನಾವು ಸುರಕ್ಷಿತರಾಗಿ ಸಾಗಬೇಕಾದರೆ, ಯೆಹೋವನ ಇತರ ನಿಷ್ಠಾವಂಥ ಸೇವಕರೊಂದಿಗೆ ಹೆಜ್ಜೆಯಿಡುವುದು ಆವಶ್ಯಕ.

16 ಇದನ್ನು ಸಹ ನೆನಪಿಸಿಕೊಳ್ಳಿ: ಒಂದು ಬದಿಯಲ್ಲಿ ಪರ್ವತಗಳು ಮತ್ತು ಇನ್ನೊಂದು ಬದಿಯಲ್ಲಿ ಕೆಂಪು ಸಮುದ್ರವು ಇದ್ದಂಥ ಸ್ಥಳದಲ್ಲಿ ಇಸ್ರಾಯೇಲ್ಯರು ಸಿಕ್ಕಿಬಿದ್ದಿರುವಂತೆ ತೋರಿದ ಸನ್ನಿವೇಶಕ್ಕೆ ಯೆಹೋವನು ನಡೆಸಿದ್ದನು. ಖಂಡಿತವಾಗಿ ಏನೋ ಎಡವಟ್ಟಾಗಿರುವಂತೆ ತೋರಿತು. ಆದರೂ ಸನ್ನಿವೇಶವು ಯೆಹೋವನ ಅಂಕೆಯಲ್ಲಿತ್ತು, ಮತ್ತು ಎಲ್ಲವೂ ಸುಗಮವಾಗಿ ಅಂತ್ಯಗೊಂಡಿತು. ಅದು ಆತನಿಗೆ ಸ್ತುತಿಯನ್ನೂ ಆತನ ಜನರಿಗೆ ರಕ್ಷಣೆಯನ್ನೂ ತಂದಿತು. ಇಂದು, ಸಂಘಟನೆಯಲ್ಲಿ ಕೆಲವೊಂದು ವಿಷಯಗಳನ್ನು ನಿರ್ದಿಷ್ಟ ರೀತಿಯಲ್ಲಿ ಏಕೆ ನಡೆಸಲಾಗುತ್ತದೆಂದು ನಮಗೆ ಸರಿಯಾಗಿ ಅರ್ಥವಾಗದೇ ಇರಬಹುದು. ಆದರೆ, ಯೆಹೋವನು ತನ್ನ ನಂಬಿಗಸ್ತ ಸಂಪರ್ಕ-ಮಾಧ್ಯಮದ ಮುಖಾಂತರ ಕೊಡುವ ಮಾರ್ಗದರ್ಶನದಲ್ಲಿ ನಾವು ನಿಜವಾಗಿ ಭರವಸೆಯನ್ನಿಡಬಲ್ಲೆವು. ಕೆಲವೊಮ್ಮೆ ನಮ್ಮ ಶತ್ರುಗಳಿಗೆ ಯಶಸ್ಸು ಸಿಗುತ್ತಿರುವಂತೆ ತೋರಬಹುದು. ನಮ್ಮ ಸೀಮಿತ ದೃಷ್ಟಿಕೋನದಿಂದಾಗಿ ನಾವು ಇಡೀ ಚಿತ್ರಣವನ್ನು ನೋಡಲು ಶಕ್ತರಾಗಿರಲಿಕ್ಕಿಲ್ಲ. ಆದರೂ, ಹಿಂದೆ ಇಸ್ರಾಯೇಲ್ಯರೊಂದಿಗೆ ಯೆಹೋವನು ಮಾಡಿದಂತೆಯೇ, ಆತನು ತಕ್ಕ ಕಾಲದಲ್ಲಿ ಸನ್ನಿವೇಶವನ್ನು ಬದಲಾಯಿಸಶಕ್ತನು.—ಜ್ಞಾನೋಕ್ತಿ 3:5.

ಆಗಸ್ಟ್‌ 10-16

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 15-16

“ಹಾಡು ಹಾಡುತ್ತಾ ಯೆಹೋವನನ್ನು ಕೊಂಡಾಡಿ”

ಕಾವಲಿನಬುರುಜು95 10/15 ಪುಟ 11 ಪ್ಯಾರ 11

ಸತ್ಯದೇವರಿಗೆ ಈಗ ಏಕೆ ಭಯಪಡಬೇಕು?

11 ಐಗುಪ್ತ್ಯರ ಸೈನ್ಯ ಪಡೆಗಳನ್ನು ಯೆಹೋವನು ನಾಶಮಾಡಿದ್ದು, ಆತನ ಆರಾಧಕರ ದೃಷ್ಟಿಯಲ್ಲಿ ಆತನನ್ನು ಘನತೆಗೇರಿಸಿ, ಆತನ ಹೆಸರನ್ನು ವ್ಯಾಪಕವಾಗಿ ಪ್ರಸಿದ್ಧಗೊಳಿಸಿತು. (ಯೆಹೋಶುವ 2:9, 10; 4:23, 24) ಹೌದು, ಆತನ ನಾಮವು, ತಮ್ಮ ಆರಾಧಕರನ್ನು ವಿಮೋಚಿಸಲು ಅಶಕ್ತರಾಗಿ ಪರಿಣಮಿಸಿದ ಐಗುಪ್ತದ ಶಕಿಹ್ತೀನ ಸುಳ್ಳು ದೇವತೆಗಳಿಗಿಂತ ಉನ್ನತಕ್ಕೇರಿತು. ತಮ್ಮ ದೇವತೆಗಳ ಮತ್ತು ಮರ್ತ್ಯ ಮನುಷ್ಯನ ಮತ್ತು ಸೈನ್ಯಶಕ್ತಿಯ ಮೇಲೆ ಭರವಸೆಯು ಕಟುವಾದ ನಿರಾಶೆಗೆ ನಡೆಸಿತು. (ಕೀರ್ತನೆ 146:3) ತನ್ನ ಜನರನ್ನು ಬಲವತ್ತಾಗಿ ವಿಮೋಚಿಸುವ, ಜೀವಸ್ವರೂಪನಾದ ದೇವರ ಹಿತಕರವಾದ ಭಯವನ್ನು ಪ್ರತಿಬಿಂಬಿಸಿದ ಸುತ್ತಿಗಳನ್ನು ಹಾಡಲು ಇಸ್ರಾಯೇಲ್ಯರು ಪ್ರಚೋದಿತರಾದುದು ಆಶ್ಚರ್ಯವಲ್ಲ!

ಕಾವಲಿನಬುರುಜು95 10/15 ಪುಟ 11-12 ಪ್ಯಾರ 15-16

ಸತ್ಯದೇವರಿಗೆ ಈಗ ಏಕೆ ಭಯಪಡಬೇಕು?

15 ನಾವು ಮೋಶೆಯೊಂದಿಗೆ ಭದ್ರವಾಗಿ ನಿಂತಿದ್ದರೆ, ನಾವೂ ಖಂಡಿತವಾಗಿ ಹೀಗೆ ಹಾಡುವಂತೆ ಪ್ರೇರಿಸಲ್ಪಡುತ್ತಿದ್ದೆವು: “ಯೆಹೋವನೇ, ದೇವರುಗಳಲ್ಲಿ ನಿನ್ನ ಸಮಾನನು ಯಾವನು? ಪರಿಶುದ್ಧತ್ವದಿಂದ ಸರ್ವೋತ್ತಮನೂ ಪ್ರಖ್ಯಾತಕೃತ್ಯಗಳನ್ನು ಮಾಡಿರುವದರಿಂದ ಭಯಂಕರನೂ ಅದ್ಭುತಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನನು ಎಲ್ಲಿ?” (ವಿಮೋಚನಕಾಂಡ 15:11) ಅಂಥ ರಸಭಾವಗಳನ್ನು ಅಂದಿನಿಂದ ಶತಮಾನಗಳ ಆದ್ಯಂತವೂ ಪ್ರತಿಧ್ವನಿಸಲಾಗಿದೆ. ಬೈಬಲಿನ ಕೊನೆಯ ಪುಸ್ತಕದಲ್ಲಿ, ದೇವರ ನಂಬಿಗಸ್ತ ಅಭಿಷಿಕ್ತ ಸೇವಕರ ಒಂದು ಗುಂಪನ್ನು ಅಪೊಸ್ತಲ ಯೋಹಾನನು ವರ್ಣಿಸುತ್ತಾನೆ: ಅವರು “ದೇವರ ದಾಸನಾದ ಮೋಶೆಯ ಹಾಡನ್ನೂ ಯಜ್ಞದಕುರಿಯಾದಾತನ ಹಾಡನ್ನೂ” ಹಾಡುತ್ತಿದ್ದಾರೆ. ಈ ಮಹಾ ಹಾಡು ಯಾವುದು? “ದೇವರಾದ ಕರ್ತನೇ, [“ಯೆಹೋವ,” NW] ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ [“ಶಾಶ್ವತತೆಯ,” NW] ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಕರ್ತನೇ, [“ಯೆಹೋವ,” NW] ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು [“ನಿಷ್ಠನು,” NW].”—ಪ್ರಕಟನೆ 15:2-4.

16 ಹಾಗೆಯೇ ಇಂದೂ ದೇವರ ಸೃಷ್ಟಿ ಕೈಕಾರ್ಯಗಳನ್ನಷ್ಟೇಯಲ್ಲ, ಆತನ ಆಜ್ಞೆಗಳನ್ನೂ ಮಾನ್ಯಮಾಡುವ ವಿಮೋಚಿತ ಆರಾಧಕರಿದ್ದಾರೆ. ಸಕಲ ಜನಾಂಗಗಳ ಜನರು ಆತ್ಮಿಕವಾಗಿ ವಿಮೋಚಿಸಲ್ಪಟ್ಟು, ಈ ಮಲಿನಗೊಂಡಿರುವ ಲೋಕದಿಂದ ಪ್ರತ್ಯೇಕಿಸಲ್ಪಟ್ಟಿದ್ದಾರೆ, ಏಕೆಂದರೆ ಅವರು ದೇವರ ನೀತಿಯ ಆಜ್ಞೆಗಳನ್ನು ಒಪ್ಪಿ, ಅವನ್ನು ಕಾರ್ಯರೂಪಕ್ಕೆ ಹಾಕುತ್ತಾರೆ. ವಾರ್ಷಿಕವಾಗಿ, ಲಕ್ಷಾಂತರ ಜನರು ಯೆಹೋವನ ಆರಾಧಕರ ಶುದ್ಧವಾದ, ಪ್ರಾಮಾಣಿಕ ಸಂಸ್ಥೆಯೊಂದಿಗೆ ವಾಸಿಸಲು ಈ ಭ್ರಷ್ಟಲೋಕದಿಂದ ಪಲಾಯನಮಾಡುತ್ತಾರೆ. ಶೀಘ್ರವೇ, ಸುಳ್ಳು ಧರ್ಮ ಮತ್ತು ಈ ದುಷ್ಟ ವ್ಯವಸ್ಥೆಯಲ್ಲಿ ಬಾಕಿ ಉಳಿದಿರುವವರ ವಿರುದ್ಧ ದೇವರ ಉರಿಯುವ ತೀರ್ಪು ನಿರ್ವಹಿಸಲ್ಪಟ್ಟ ಮೇಲೆ, ಅವರು ಒಂದು ನೀತಿಯ ನೂತನ ಲೋಕದಲ್ಲಿ ಸದಾ ಜೀವಿಸುವರು.

it-2-E ಪುಟ 454 ಪ್ಯಾರ 1

ಸಂಗೀತ

ಇಸ್ರಾಯೇಲ್ಯರು ಗುಂಪಾಗಿ ಹಾಡುವಾಗೆಲ್ಲಾ ಹಾಡುಗಾರರು ಎರಡು ಗುಂಪು ಮಾಡಿಕೊಂಡು ಹಾಡ್ತಿದ್ರು. ಒಂದು ಗುಂಪು ಒಂದು ಸಾಲನ್ನ ಹಾಡಿದ ನಂತ್ರ ಅದಕ್ಕುತ್ತರವಾಗಿ ಇನ್ನೊಂದು ಗುಂಪು ಇನ್ನೊಂದು ಸಾಲನ್ನ ಹಾಡ್ತಿತ್ತು. ಇನ್ನೊಂದು ರೀತಿಯಲ್ಲೂ ಅವ್ರು ಹಾಡ್ತಿದ್ರು. ಹೇಗಂದ್ರೆ ಒಬ್ಬ ಗಾಯಕ ಒಂದು ಸಾಲನ್ನು ಹಾಡಿದ ನಂತ್ರ ಅದಕ್ಕುತ್ತರವಾಗಿ ಗಾಯಕರ ಗುಂಪು ಹಾಡ್ತಿತ್ತು. ಇದೇ ಶೈಲಿಯಲ್ಲಿ ಅವ್ರು ಪೂರ್ತಿ ಗೀತೆಯನ್ನು ಹಾಡ್ತಿದ್ರು. ಬೈಬಲಿನಲ್ಲೂ ಇದ್ರ ಬಗ್ಗೆ ತಿಳಿಸಲಾಗಿದೆ. (ವಿಮೋ 15:21; 1ಸಮು 18:6, 7) ಕೆಲ್ವು ಕೀರ್ತನೆಗಳನ್ನು ಇದೇ ಶೈಲಿಯಲ್ಲಿ ಬರೆಯಲಾಗಿದೆ. ಉದಾಹರಣೆಗೆ 136 ನೇ ಕೀರ್ತನೆ. ನೆಹಮೀಯನ ಸಮಯದಲ್ಲಿ ಯೆರೂಸಲೇಮಿನ ಗೋಡೆಯ ಉದ್ಘಾಟನೆ ಆದಾಗ ಎರಡು ಭಜನ ಮಂಡಲಿಯ ಗುಂಪಿನವ್ರು ಕೃತಜ್ಞತಾ ಗೀತೆಯನ್ನು ಬಹುಶಃ ಇದೇ ಶೈಲಿಯಲ್ಲಿ ಹಾಡಿರಬಹುದು.—ನೆಹೆ 12:31, 38, 40-42.

it-2-E ಪುಟ 698

ಪ್ರವಾದಿನಿ

ಬೈಬಲಿನಲ್ಲಿ ಪ್ರವಾದಿನಿ ನೇಮಕ ಪಡ್ಕೊಂಡ ಮೊದಲ ಸ್ತ್ರೀ ಮಿರ್ಯಾಮಳಾಗಿದ್ದಾಳೆ. ಆಕೆ ದೇವಪ್ರೇರಿತವಾಗಿ ಹಾಡಿದ ಗೀತೆಯಲ್ಲಿ ದೇವರು ಇಸ್ರಾಯೇಲ್ಯರಿಗೆ ತಿಳಿಸಿದ ಸಂದೇಶಗಳಿದ್ದಿರಬೇಕು. (ವಿಮೋ 15:20, 21) ಹಾಗಾಗಿಯೇ ಆಕೆ ಮತ್ತು ಆರೋನ ಮೋಶೆಯ ಬಗ್ಗೆ ಮಾತಾಡ್ತಾ “ನಮ್ಮ ಮೂಲಕವೂ ಆತನು [ಯೆಹೋವನು] ಮಾತಾಡಲಿಲ್ಲವೇ ಎಂದು ಹೇಳಿಕೊಂಡರು.” (ಅರ 12:2) ಅಷ್ಟೇ ಅಲ್ಲ, ಸ್ವತಃ ಯೆಹೋವನೇ ಪ್ರವಾದಿ ಮೀಕನ ಮೂಲಕ ಇಸ್ರಾಯೇಲ್ಯರು ಈಜಿಪ್ಟಿನಿಂದ ಬಿಡುಗಡೆಯಾದಾಗ ಅವ್ರನ್ನು ಮೋಶೆ, ಆರೋನ ಮತ್ತು ಮಿರ್ಯಾಮ ನಡೆಸಿಕೊಂಡು ಬಂದ್ರು ಅಂತ ತಿಳಿಸಿದ್ದಾನೆ. (ಮೀಕ 6:4) ದೇವರ ಸಂದೇಶವನ್ನು ಜನ್ರಿಗೆ ತಿಳಿಸುವ ಸುಯೋಗ ಮಿರ್ಯಾಮಳಿಗಿದ್ರೂ, ಯೆಹೋವನ ಜೊತೆ ಮೋಶೆಗಿದ್ದಷ್ಟು ಆಪ್ತತೆ ಆಕೆಗಿರಲಿಲ್ಲ. ಆಕೆ ಮೋಶೆಯ ವಿರುದ್ಧ ಗುಣುಗುಟ್ಟಿ ತನಗಿದ್ದ ಸುಯೋಗವನ್ನು ಮಾನ್ಯ ಮಾಡದಿದ್ದಾಗ ಯೆಹೋವನು ಅವಳಿಗೆ ಕಠಿಣ ಶಿಕ್ಷೆ ಕೊಟ್ಟನು.—ಅರ 12:1-15.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಕಾವಲಿನಬುರುಜು11-E 9/1 ಪುಟ 14

ನಿಮಗೆ ಗೊತ್ತಿತ್ತಾ?

ಯೆಹೋವನು ಇಸ್ರಾಯೇಲ್ಯರಿಗೆ ಲಾವಕ್ಕಿಗಳನ್ನು ಯಾಕೆ ಆಹಾರವಾಗಿ ಕೊಟ್ಟಿರಬಹುದು?

ಇಸ್ರಾಯೇಲ್ಯರು ಈಜಿಪ್ಟಿನಿಂದ ಬಿಡುಗಡೆಯಾದ ಮೇಲೆ ಯೆಹೋವನು ಅವ್ರಿಗೆ ಎರಡು ಬಾರಿ ಲಾವಕ್ಕಿಗಳ ಮಾಂಸವನ್ನು ಧಾರಾಳವಾಗಿ ಕೊಟ್ಟನು.—ವಿಮೋಚನಕಾಂಡ 16:13; ಅರಣ್ಯಕಾಂಡ 11:31.

ಲಾವಕ್ಕಿಗಳು ಚಿಕ್ಕ ಪಕ್ಷಿಗಳು. ಅದರ ಉದ್ದ ಸುಮಾರು 7 ಇಂಚು (18 ಸೆಂ. ಮೀ) ಮತ್ತು ತೂಕ ಸುಮಾರು 100 ಗ್ರಾಂ. ಅವು ಪಶ್ಚಿಮ ಏಷ್ಯದ ಮತ್ತು ಯೂರೋಪಿನ ಅನೇಕ ಭಾಗಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಚಳಿಗಾಲದಲ್ಲಿ ಅವು ಉತ್ತರ ಆಫ್ರಿಕ ಮತ್ತು ಅರೇಬಿಯಾಕ್ಕೆ ವಲಸೆ ಹೋಗುತ್ತವೆ. ಹೀಗೆ ಅವು ಗುಂಪುಗುಂಪಾಗಿ ವಲಸೆ ಹೋಗುವಾಗ ಮೆಡಿಟರೇನಿಯನ್‌ ಸಮುದ್ರದ ಪೂರ್ವ ತೀರವನ್ನು ದಾಟಿ ಸೀನಾಯಿ ಪರ್ಯಾಯ ದ್ವೀಪದ ಮೇಲೆ ಹಾದು ಹೋಗುತ್ತವೆ.

ದಿ ವೆಸ್ಟ್‌ಮಿನಿಸ್ಟರ್‌ ಡಿಕ್ಷನರಿ ಆಫ್‌ ದಿ ಬೈಬಲ್‌ ಹೇಳುವಂತೆ “ಲಾವಕ್ಕಿಗಳು ತುಂಬ ವೇಗವಾಗಿ ಹಾರಾಡುವ ಪಕ್ಷಿಗಳು. ಕೆಲವೊಮ್ಮೆ ಗಾಳಿಯ ಸಹಾಯದಿಂದಲೂ ಹಾರಾಡುತ್ತವೆ. ಆದ್ರೆ ಗಾಳಿ ಬೀಸುವ ದಿಕ್ಕು ಬದಲಾದಾಗ ಅಥ್ವಾ ತುಂಬ ದೂರ ಹಾರಾಡಿ ಸುಸ್ತಾದಾಗ ಈ ಪಕ್ಷಿಗಳ ಇಡೀ ಗುಂಪೇ ನೆಲಕ್ಕೆ ಬಿದ್ದು ಹಾಗೇ ಸ್ತಬ್ಧವಾಗಿಬಿಡ್ತವೆ.” ಅವು ಪುನಃ ವಲಸೆ ಹೋಗ್ಬೇಕಂದ್ರೆ ಒಂದು ಅಥ್ವಾ ಎರಡು ದಿನ ನೆಲದಲ್ಲೇ ವಿಶ್ರಾಂತಿ ತಗೊಳ್ಳಬೇಕು. ಹೀಗೆ ವಿಶ್ರಾಂತಿ ತಗೊಳ್ವಾಗ ಬೇಟೆಗಾರರಿಗೆ ಅವುಗಳನ್ನು ಹಿಡಿಯೋದು ತುಂಬ ಸುಲಭ. 20 ನೇ ಶತಮಾನದ ಆರಂಭದಲ್ಲಿ ಪ್ರತಿವರ್ಷ ಸುಮಾರು 30 ಲಕ್ಷದಷ್ಟು ಲಾವಕ್ಕಿಗಳನ್ನು ಈಜಿಪ್ಟಿನಿಂದ ರಫ್ತು ಮಾಡಲಾಗ್ತಿತ್ತು.

ಇಸ್ರಾಯೇಲ್ಯರಿಗೆ ಯೆಹೋವನು ಲಾವಕ್ಕಿಯ ಮಾಂಸವನ್ನು ಎರಡು ಸಲ ಕೊಟ್ಟಾಗ್ಲೂ ಅದು ವಸಂತ ಕಾಲವಾಗಿತ್ತು. ಈ ಕಾಲದಲ್ಲಿ ಸಾಮಾನ್ಯವಾಗಿ ಲಾವಕ್ಕಿಗಳು ಸೀನಾಯಿ ಪ್ರದೇಶದ ಮೂಲಕ ಹಾರಿ ಹೋಗ್ತಿದ್ವು. ಆದ್ರೆ ಈ ಪಕ್ಷಿಗಳು ಇಸ್ರಾಯೇಲ್ಯರು ಕ್ಯಾಂಪ್‌ ಮಾಡಿಕೊಂಡಿದ್ದ ಜಾಗದಲ್ಲಿ ಬಂದು ಬೀಳುವುದಕ್ಕೋಸ್ಕರ ಯೆಹೋವನು ‘ರಭಸವಾದ ಗಾಳಿ’ ಬೀಸುವಂತೆ ಮಾಡಿದನು.—ಅರಣ್ಯಕಾಂಡ 11:31.

ಕಾವಲಿನಬುರುಜು06 1/15 ಪುಟ 31

ವಾಚಕರಿಂದ ಪ್ರಶ್ನೆಗಳು

ಐಗುಪ್ತದಿಂದ ಬಿಡುಗಡೆಯಾದ ಸ್ವಲ್ಪ ಸಮಯದೊಳಗೆ ಇಸ್ರಾಯೇಲ್ಯರು ಆಹಾರದ ವಿಷಯದಲ್ಲಿ ಗುಣುಗುಟ್ಟತೊಡಗಿದರು. ಆದುದರಿಂದ ಯೆಹೋವನು ಅವರಿಗೆ ಮನ್ನವನ್ನು ಒದಗಿಸಿದನು. (ವಿಮೋಚನಕಾಂಡ 12:17, 18; 16:1-5) ಆ ಹಂತದಲ್ಲಿ, ಮೋಶೆಯು ಆರೋನನಿಗೆ ಹೇಳಿದ್ದು: “ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಗೋಮೆರಿನಷ್ಟು ಮನ್ನವನ್ನು ಹಾಕಿ ನಿಮ್ಮ ಸಂತತಿಯವರು ನೋಡುವದಕ್ಕೋಸ್ಕರ ಅದನ್ನು ಯೆಹೋವನ ಸನ್ನಿಧಿಯಲ್ಲಿ ಇಡು.” ಆ ವೃತ್ತಾಂತವು ತಿಳಿಸುವುದು: “ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಆರೋನನು ಮಾಡಿ ಆಜ್ಞಾಶಾಸನಮಂಜೂಷದ [ಇದು ಪ್ರಮುಖವಾದ ದಾಖಲೆಗಳ ಸುರಕ್ಷೆಗಾಗಿದ್ದ ಒಂದು ಸ್ಥಳವಾಗಿತ್ತು] ಮುಂದೆ ಅದನ್ನು ಇಟ್ಟನು.” (ವಿಮೋಚನಕಾಂಡ 16:33, 34) ಆರೋನನು ಆಗ ಮನ್ನವನ್ನು ಒಂದು ಪಾತ್ರೆಯಲ್ಲಿ ಹಾಕಿದನೆಂಬುದು ಖಂಡಿತವಾದರೂ, ಅದನ್ನು ಆಜ್ಞಾಶಾಸನಮಂಜೂಷದ ಮುಂದಿಡಲು ಮೋಶೆಯು ಮಂಜೂಷವನ್ನು ರಚಿಸಿ ಅದರಲ್ಲಿ ಆ ಹಲಿಗೆಗಳನ್ನು ಇಡುವ ತನಕ ಕಾಯಬೇಕಾಗಿತ್ತು.

ನಮ್ಮ ಕ್ರೈಸ್ತ ಜೀವನ

ಕೂಟದ ಕೈಪಿಡಿ16.07 ಪುಟ 8

ಪಯನೀಯರಿಂಗ್‌ ಮಾಡಲು ಶೆಡ್ಯೂಲ್‌

ಪಯನೀಯರಿಂಗ್‌ ಮಾಡಲು ಒಳ್ಳೇ ಶೆಡ್ಯೂಲ್‌ ಇರಬೇಕು. ನೀವು ಸೇವೆಯಲ್ಲಿ ಪ್ರತಿವಾರ 18 ತಾಸುಗಳನ್ನು ಕಳೆದರೆ ಪಯನೀಯರ್‌ ಸೇವೆ ಮಾಡಬಹುದು ಮತ್ತು ನಿಮಗೆ ರಜೆಗಳಿಗೆ ಸಹ ಸಮಯ ಸಿಗುತ್ತದೆ! ಇಂಥ ಶೆಡ್ಯೂಲ್‌ ಇದ್ದರೆ ಕೆಲವೊಂದು ಅನಿರೀಕ್ಷಿತ ಘಟನೆಗಳು, ಅನಾರೋಗ್ಯ ಅಥವಾ ಪ್ರತಿಕೂಲ ಹವಾಮಾನ ಮುಂತಾದ ಸಮಸ್ಯೆಗಳು ಬಂದರೂ ಪಯನೀಯರ್‌ ಸೇವೆ ಮಾಡಬಹುದು. ಅಲ್ಪ ಸಮಯ ಅಥವಾ ಪೂರ್ಣ ಸಮಯ ಕೆಲಸ ಮಾಡುವವರಿಗೆ ಮತ್ತು ಅನಾರೋಗ್ಯ ಅಥವಾ ಶಕ್ತಿಯಿಲ್ಲದೆ ಬಳಲುತ್ತಿರುವವರಿಗೆ ಕೆಳಗೆ ಕೊಡಲಾಗಿರುವ ಶೆಡ್ಯೂಲ್‌ ಸಹಾಯಕಾರಿಯಾಗಿದೆ. ಕೆಲವೊಂದು ಹೊಂದಾಣಿಕೆ ಮಾಡಿದರೆ ಕುಟುಂಬದಲ್ಲಿ ಒಬ್ಬರಾದರೂ ಸೆಪ್ಟೆಂಬರ್‌ನಲ್ಲಿ ಪಯನೀಯರಿಂಗನ್ನು ಆರಂಭಿಸಬಹುದು. ನಿಮ್ಮ ಮುಂದಿನ ಕುಟುಂಬ ಆರಾಧನೆಯಲ್ಲಿ ಇದರ ಬಗ್ಗೆ ಯಾಕೆ ಚರ್ಚಿಸಬಾರದು?

ಆಗಸ್ಟ್‌ 17-23

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 17-18

“ದೀನತೆ ಇರೋ ಸಹೋದರರು ಬೇರೆಯವರಿಗೆ ತರಬೇತಿ, ಜವಾಬ್ದಾರಿ ಕೊಡ್ತಾರೆ”

ಕಾವಲಿನಬುರುಜು13 4/1 ಪುಟ 6

ಪ್ರೀತಿ

ದೇವರನ್ನು ಮಾತ್ರ ಅಲ್ಲ ಇಸ್ರೇಲಿಗಳನ್ನೂ ಮೋಶೆ ಪ್ರೀತಿಸುತ್ತಿದ್ದರು. ಮೋಶೆ ಜೊತೆ ದೇವರಿದ್ದಾರೆ, ನಮ್ಮನ್ನು ಮಾರ್ಗದರ್ಶಿಸುತ್ತಿದ್ದಾರೆ ಅನ್ನೋದನ್ನು ಗ್ರಹಿಸಿದ ಜನರು ಸಮಸ್ಯೆಗಳ ಪರಿಹಾರಕ್ಕೆ ಮೋಶೆಯ ಬಳಿ ಬರುತ್ತಿದ್ದರು. “ಪ್ರಾತಃಕಾಲ ಮೊದಲುಗೊಂಡು ಸಾಯಂಕಾಲದ ವರೆಗೂ ಜನರು [ಮೋಶೆ] ಹತ್ತಿರ” ನಿಲ್ಲುತ್ತಿದ್ದರು ಎನ್ನುತ್ತೆ ಬೈಬಲ್‌. (ವಿಮೋಚನಕಾಂಡ 18:13-16) ನೀವೇ ಯೋಚಿಸಿ, ಗಂಟೆಗಟ್ಟಲೆ ಒಂದೇಸಮನೆ ಜನರ ಸಮಸ್ಯೆಗಳನ್ನು ಕೇಳಿ ಕೇಳಿ ಕೇಳಿ ಮೋಶೆಗೆಷ್ಟು ಸುಸ್ತಾಗಿರಬಹುದು! ಆದರೂ ತಾನು ಪ್ರೀತಿಸೋ ಜನರಿಗೆ ಸಹಾಯ ಮಾಡುವುದರಲ್ಲೇ ಮೋಶೆ ಸಂತೋಷ ಕಾಣುತ್ತಿದ್ದರು.

ಕಾವಲಿನಬುರುಜು03 11/1 ಪುಟ 6 ಪ್ಯಾರ 1

ಸಂತೋಷಕರ ಜೀವನಕ್ಕೆ ಭರವಸೆಯು ಅತ್ಯಮೂಲ್ಯ

ಇವರು, ಭರವಸಾರ್ಹವಾದ ಸ್ಥಾನಗಳಿಗೆ ನೇಮಕವನ್ನು ಪಡೆಯುವ ಮುನ್ನವೇ ನಿರ್ದಿಷ್ಟ ದೈವಿಕ ಗುಣಗಳನ್ನು ತೋರಿಸಿದ ಪುರುಷರಾಗಿದ್ದರು. ತಾವು ದೇವಭಯವುಳ್ಳವರೆಂದು ಅವರು ಈಗಾಗಲೇ ರುಜುಪಡಿಸಿದ್ದರು; ಅವರಿಗೆ ತಮ್ಮ ಸೃಷ್ಟಿಕರ್ತನ ಕಡೆಗೆ ಹಿತಕರವಾದ ಪೂಜ್ಯಭಾವನೆ ಇತ್ತು ಮತ್ತು ಆತನನ್ನು ಅಸಂತೋಷಪಡಿಸಲು ಹೆದರಿದರು. ಈ ಪುರುಷರು ದೇವರ ಮಟ್ಟಗಳನ್ನು ಎತ್ತಿಹಿಡಿಯಲು ತಮ್ಮಿಂದಾದುದ್ದೆಲ್ಲವನ್ನು ಮಾಡಿದರು ಎಂಬುದು ಎಲ್ಲರಿಗೂ ಸ್ಪಷ್ಟವಾಗಿತ್ತು. ಅವರು ಲಂಚವನ್ನು ಹಗೆಮಾಡಿದರು. ಇದು, ಅಧಿಕಾರದ ಕಾರಣ ಭ್ರಷ್ಟರಾಗದಂತೆ ತಮ್ಮನ್ನು ತಡೆಹಿಡಿಯಲು ಅವರಲ್ಲಿದ್ದ ನೈತಿಕ ಬಲವನ್ನು ತೋರಿಸುತ್ತಿತ್ತು. ಅವರು ತಮ್ಮ ಸ್ವಂತ ವೈಯಕ್ತಿಕ ಅಭಿರುಚಿಗಳನ್ನೋ ಅಥವಾ ತಮ್ಮ ಸಂಬಂಧಿಕರ ಇಲ್ಲವೆ ಸ್ನೇಹಿತರ ಅಭಿರುಚಿಗಳನ್ನೋ ಸಮರ್ಥಿಸಲಿಕ್ಕೋಸ್ಕರ ಇತರರ ಭರವಸೆಯನ್ನು ದುರುಪಯೋಗಿಸದಿರುವರು.

ಕಾವಲಿನಬುರುಜು02 5/15 ಪುಟ 25 ಪ್ಯಾರ 6

ಯಥಾರ್ಥವಂತರನ್ನು ಸಮಗ್ರತೆಯು ನಡೆಸುತ್ತದೆ

ಮೋಶೆಯು ಸಹ ವಿನಯಶೀಲನೂ ನಮ್ರನೂ ಆಗಿದ್ದನು. ಇತರರ ಸಮಸ್ಯೆಗಳನ್ನು ಬಗೆಹರಿಸುತ್ತಾ ಸ್ವತಃ ಬಳಲಿ ಬೆಂಡಾಗಿದ್ದ ಅವನಿಗೆ, ಅವನ ಮಾವನಾದ ಇತ್ರೋವನು ಈ ಪ್ರಾಯೋಗಿಕ ಪರಿಹಾರವನ್ನು ನೀಡಿದನು: ಸ್ವಲ್ಪ ಜವಾಬ್ದಾರಿಯನ್ನು ಬೇರೆ ಅರ್ಹ ಪುರುಷರಿಗೆ ಹಂಚಿಕೊಡು. ತನ್ನ ಸ್ವಂತ ಇತಿಮಿತಿಗಳನ್ನು ಅಂಗೀಕರಿಸುತ್ತಾ ಮೋಶೆಯು ಆ ಸಲಹೆಯನ್ನು ಕಾರ್ಯರೂಪಕ್ಕೆ ಹಾಕಿದನು. (ವಿಮೋಚನಕಾಂಡ 18:17-26; ಅರಣ್ಯಕಾಂಡ 12:3) ಒಬ್ಬ ವಿನಯಶೀಲ ಪುರುಷನು ಅಧಿಕಾರವನ್ನು ಇತರರಿಗೆ ವಹಿಸಿಕೊಡಲು ಹೆದರುವುದಿಲ್ಲ, ಇಲ್ಲವೆ ಬೇರೆ ಅರ್ಹ ವ್ಯಕ್ತಿಗಳೊಂದಿಗೆ ಸೂಕ್ತವಾದ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದರಿಂದ ತನ್ನ ಅಧಿಕಾರವು ಕಡಿಮೆಯಾಗುವುದೆಂಬ ಭಯ ಅವನಿಗಿರುವುದಿಲ್ಲ. (ಅರಣ್ಯಕಾಂಡ 11:16, 17, 26-29) ಅದರ ಬದಲು, ಅವರು ಆತ್ಮಿಕವಾಗಿ ಪ್ರಗತಿಮಾಡುವಂತೆ ಸಹಾಯಮಾಡಲು ಅವನು ತವಕಿಸುತ್ತಾನೆ. (1 ತಿಮೊಥೆಯ 4:15) ನಮ್ಮ ವಿಷಯದಲ್ಲೂ ಇದು ಸತ್ಯವಾಗಿರಬೇಕಲ್ಲವೊ?

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಕಾವಲಿನಬುರುಜು16.09 ಪುಟ 6 ಪ್ಯಾರ 14

ನಿಮ್ಮ ಕೈಗಳು ಸೋತುಹೋಗದಿರಲಿ

14 ಇಸ್ರಾಯೇಲ್ಯರು ಅಮಾಲೇಕ್ಯರ ವಿರುದ್ಧ ಯುದ್ಧಮಾಡುವಾಗ ಹೂರ ಮತ್ತು ಆರೋನನು ಮೋಶೆಯ ಕೈಗಳಿಗೆ ಆಧಾರಕೊಟ್ಟು ಅವುಗಳನ್ನು ಬಲಪಡಿಸಿದರು. ಇಂದು ನಾವು ಸಹ ಇತರರಿಗೆ ಆಧಾರವಾಗಿರಲು, ಸಹಾಯಮಾಡಲು ಅವಕಾಶಗಳಿಗಾಗಿ ಹುಡುಕಬೇಕು. ಕೆಲವು ಸಹೋದರರು ವೃದ್ಧರಾಗಿದ್ದಾರೆ, ಕೆಲವರಿಗೆ ಆರೋಗ್ಯ ಸಮಸ್ಯೆಗಳಿರುತ್ತವೆ, ಕುಟುಂಬದಿಂದ ಹಿಂಸೆ ಅನುಭವಿಸುತ್ತಿರುತ್ತಾರೆ, ಒಂಟಿತನ ಕಾಡುತ್ತಿರುತ್ತದೆ ಅಥವಾ ಪ್ರಿಯರ ಮರಣದಿಂದಾಗಿ ದುಃಖದಲ್ಲಿರುತ್ತಾರೆ. ಯುವ ಜನರಿಗೆ ತಪ್ಪನ್ನು ಮಾಡುವ ಅಥವಾ ಈ ಲೋಕದಲ್ಲಿ ಯಶಸ್ಸು ಗಳಿಸುವ ಒತ್ತಡ ಇರುತ್ತದೆ. ಇವರಿಗೆಲ್ಲ ನಾವು ಸಹಾಯ ಮಾಡಬಹುದು. (1 ಥೆಸ. 3:1-3; 5:11, 14) ಕೂಟಗಳಿಗೆ ಹೋದಾಗ, ಸೇವೆಗೆ ಹೋದಾಗ, ಒಟ್ಟಿಗೆ ಊಟ ಮಾಡುವಾಗ, ಪೋನ್‌ನಲ್ಲಿ ಮಾತಾಡುವಾಗ ಇತರರ ಕಡೆಗೆ ಆಸಕ್ತಿ-ಕಾಳಜಿ ತೋರಿಸಲು ಅವಕಾಶಗಳಿಗಾಗಿ ಹುಡುಕಿ.

it-1-E ಪುಟ 406

ಕ್ಯಾನನ್‌ (ಬೈಬಲಿನ ಅಧಿಕೃತ ಪುಸ್ತಕಗಳು)

ಬೈಬಲಿನ ಭಾಗವಾಗಲು ಒಂದು ಪುಸ್ತಕದಲ್ಲಿ ಯಾವೆಲ್ಲಾ ವಿಷಯಗಳು ಇರಬೇಕೋ ಆ ಎಲ್ಲಾ ವಿಷಯಗಳು ಮೋಶೆ ಬರೆದ ಪುಸ್ತಕದಲ್ಲಿದ್ದವು. ಉದಾಹರಣೆಗೆ ಮೋಶೆ ಬರೆದ ಪುಸ್ತಕಗಳು ದೇವರಿಂದ ಪ್ರೇರಿತವಾಗಿದ್ದವು. ಸತ್ಯಾರಾಧನೆಯನ್ನು ಹೇಗೆ ಮಾಡಬೇಕೆಂಬ ಸ್ಪಷ್ಟ ಮಾರ್ಗದರ್ಶನಗಳಿದ್ದವು. ಮೋಶೆಯು ಇಸ್ರಾಯೇಲ್ಯರ ನಾಯಕ ಮತ್ತು ಅಧಿಪತಿಯಾಗಲು ಮೊದಲಿಗೆ ಹಿಂಜರಿದನು. (ವಿಮೋ 3:10, 11; 4:10-14) ಆದ್ರೆ ಯೆಹೋವನು ಮೋಶೆಯನ್ನೇ ನಾಯಕನಾಗಿ ನೇಮಿಸಿದನು ಮತ್ತು ಅವನ ಕೈಯಿಂದ ಅನೇಕ ಅದ್ಭುತಗಳನ್ನು ಮಾಡಿಸಿದನು. ಅವನ ಅದ್ಭುತಗಳನ್ನು ನೋಡಿದ ಫರೋಹನ ಜೋಯಿಸರು ಮೋಶೆಯನ್ನು ದೇವರೇ ಕಳಿಸಿದ್ದು ಅಂತ ಬೇರೆ ದಾರಿಯಿಲ್ಲದೆ ಒಪ್ಪಿಕೊಳ್ಳಬೇಕಾಯ್ತು. (ವಿಮೋ 4:1-9; 8:16-19) ಜನ್ರ ಹತ್ರ ಹೋಗಿ ನಿರ್ದೇಶನಗಳನ್ನು ಕೊಡೋದಕ್ಕಾಗ್ಲಿ ಅಥ್ವಾ ಪುಸ್ತಕಗಳನ್ನು ಬರೆಯೋಕಾಗ್ಲಿ ಮೋಶೆಗೇನು ಆಸೆ ಇರಲಿಲ್ಲ. ಆದ್ರೆ ಹಾಗೆ ಮಾಡುವಂತೆ ಯೆಹೋವನು ಆಜ್ಞೆ ಕೊಟ್ಟಿದ್ದರಿಂದ ಮತ್ತು ಪವಿತ್ರಾತ್ಮದ ಸಹಾಯ ಇದ್ದಿದ್ದರಿಂದ ಮೋಶೆ ಜನರ ಹತ್ರ ಹೋಗಿ ಮಾತಾಡಿದನು ಮತ್ತು ಬೈಬಲಿನ ಭಾಗವಾಗಿದ್ದ ಕೆಲ್ವು ಪುಸ್ತಕಗಳನ್ನು ಬರೆದನು.—ವಿಮೋ 17:14.

ಆಗಸ್ಟ್‌ 24-30

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 19-20

“ದಶಾಜ್ಞೆಗಳಿಂದ ನೀವೇನು ಕಲಿಬಹುದು?”

ಕಾವಲಿನಬುರುಜು89-E 11/15 ಪುಟ 6 ಪ್ಯಾರ 1

ದಶಾಜ್ಞೆಗಳು ನಮಗೂ ಅನ್ವಯವಾಗುತ್ತವಾ?

ದಶಾಜ್ಞೆಗಳಲ್ಲಿ ಮೊದಲ ನಾಲ್ಕು ಆಜ್ಞೆಗಳು ಯೆಹೋವನ ಬಗ್ಗೆ ಮತ್ತು ಆತನ ಆರಾಧನೆಯನ್ನು ಹೇಗೆ ಮಾಡ್ಬೇಕು ಅನ್ನೋದ್ರ ಬಗ್ಗೆ ಒತ್ತಿಹೇಳುತ್ತವೆ. (ಮೊದಲ ಆಜ್ಞೆ) ಯೆಹೋವ ನಮ್ಮಿಂದ ಈಗ್ಲೂ ಸಂಪೂರ್ಣ ಭಕ್ತಿಯನ್ನು ಬಯಸ್ತಾನೆ. (ಮತ್ತಾಯ 4:10) (ಎರಡನೇ ಆಜ್ಞೆ) ಆತನ ಆರಾಧಕರು ವಿಗ್ರಹಗಳನ್ನು ಪೂಜಿಸಬಾರದು. (1 ಯೋಹಾನ 5:21) (ಮೂರನೇ ಆಜ್ಞೆ) ಯೆಹೋವನ ಹೆಸರನ್ನು ಸರಿಯಾದ ರೀತಿಯಲ್ಲಿ ಗೌರವಾರ್ಹವಾಗಿ ಉಪಯೋಗಿಸ್ಬೇಕೇ ಹೊರತು ಅದಕ್ಕೆ ಅಗೌರವ ತೋರಿಸಬಾರದು. (ಯೋಹಾನ 17:26; ರೋಮನ್ನರಿಗೆ 10:13) (ನಾಲ್ಕನೇ ಆಜ್ಞೆ) ಯೆಹೋವನ ಆರಾಧನೆಗೆ ಮೊದಲ ಸ್ಥಾನ ಕೊಡಬೇಕು. ಅಂದ್ರೆ ನಮ್ಮ ಇಚ್ಛೆಗಳಿಗಿಂತ ಹೆಚ್ಚಾಗಿ ಯೆಹೋವ ದೇವರ ಆರಾಧನೆಗೆ ಮೊದಲ ಸ್ಥಾನ ಕೊಡ್ಬೇಕು. ಆಗ ನಾವು ನಮ್ಮ ‘ಸ್ವಂತ ಕಾರ್ಯಗಳಿಂದ ವಿಶ್ರಾಂತಿ ತಗೊಳ್ಳೋಕೆ’ ಅಥ್ವಾ “ದೇವರ ವಿಶ್ರಾಂತಿಯಲ್ಲಿ” ಸೇರೋಕೆ ಆಗುತ್ತೆ.—ಇಬ್ರಿಯ 4:9, 10.

ಕಾವಲಿನಬುರುಜು89-E 11/15 ಪುಟ 6 ಪ್ಯಾರ 2-3

ದಶಾಜ್ಞೆಗಳು ನಮಗೂ ಅನ್ವಯವಾಗುತ್ತವಾ?

(ಐದನೇ ಆಜ್ಞೆ) ಮಕ್ಕಳು ಹೆತ್ತವರಿಗೆ ಸಂಪೂರ್ಣ ವಿಧೇಯರಾಗಬೇಕು. ಇದ್ರಿಂದ ಕುಟುಂಬದಲ್ಲಿ ಐಕ್ಯತೆ ಇರುತ್ತೆ ಮತ್ತು ಯೆಹೋವನ ಆಶೀರ್ವಾದ ಇರುತ್ತೆ. ‘ವಾಗ್ದಾನಸಹಿತವಾದ ಮೊದಲ ಆಜ್ಞೆಯಿಂದ’ ಎಂಥ ಆಶೀರ್ವಾದ ಸಿಕ್ಕಿದೆ ನೋಡಿ! ‘ತಂದೆ ತಾಯಿಗಳನ್ನು ಸನ್ಮಾನಿಸೋದ್ರಿಂದ ಬರೀ ಮೇಲಾಗೋದಷ್ಟೇ ಅಲ್ಲ ಭೂಮಿಯ ಮೇಲೆ ಬಹುಕಾಲ ಬಾಳೋಕೂ ಸಾಧ್ಯವಾಗುತ್ತೆ.’ (ಎಫೆಸ 6:1-3) ದುಷ್ಟ ಲೋಕದ ಕಡೇ ದಿವಸಗಳಲ್ಲಿ ಜೀವಿಸ್ತಿರೋ ಯುವ ಜನರು ದೇವರಿಂದ ಬಂದಿರೋ ಈ ಆಜ್ಞೆಯನ್ನು ಪಾಲಿಸೋದಾದ್ರೆ ಅವ್ರಿಗೆ ಸದಾಕಾಲ ಬಾಳೋ ಅವಕಾಶ ಸಿಗುತ್ತೆ.—2 ತಿಮೊಥೆಯ 3:1; ಯೋಹಾನ 11:26.

ನಮ್ಗೆ ನೆರಯವ್ರ ಮೇಲೆ ಪ್ರೀತಿ ಇದ್ರೆ ಅವ್ರ ವಿರುದ್ಧ ಈ ಕೆಟ್ಟ ಕೆಲ್ಸಗಳನ್ನು ಮಾಡೋಕೆ ಹೋಗಲ್ಲ. ಅವು ಯಾವುವೆಂದ್ರೆ (ಆರನೇ ಆಜ್ಞೆ) ಕೊಲೆ ಮಾಡಲ್ಲ, (ಏಳನೇ ಆಜ್ಞೆ) ವ್ಯಭಿಚಾರ ಮಾಡಲ್ಲ, (ಎಂಟನೇ ಆಜ್ಞೆ) ಕದಿಯಲ್ಲ, (ಒಂಬತ್ತನೇ ಆಜ್ಞೆ) ಸುಳ್ಳು ಸಾಕ್ಷಿ ಹೇಳಲ್ಲ. (1 ಯೋಹಾನ 3:10-12; ಇಬ್ರಿಯ 13:4; ಎಫೆಸ 4:28; ಮತ್ತಾಯ 5:37; ಜ್ಞಾನೋಕ್ತಿ 6:16-19) ನಾವು ಹೇಗೆ ನಡ್ಕೊಬೇಕು ಅನ್ನೋದಕ್ಕಷ್ಟೇ ಅಲ್ಲ ನಾವು ಯಾವ ರೀತಿ ಯೋಚ್ನೆಗಳನ್ನು ಮಾಡಬಾರದು ಅನ್ನೋದಕ್ಕೂ ಒಂದು ಆಜ್ಞೆ ಇದೆ. ಅದೇನಂದ್ರೆ, (ಹತ್ತನೇ ಆಜ್ಞೆ) ನಾವು ಬೇರೆಯವ್ರ ವಸ್ತುಗಳನ್ನು ಆಶಿಸಬಾರದು. ಈ ಆಜ್ಞೆಯಿಂದ ನಮ್ಮ ಯೋಚನೆಗಳು ಯಾವಾಗ್ಲೂ ಯೆಹೋವನು ಮೆಚ್ಚೋ ತರ ಇರಬೇಕು ಅನ್ನೋದನ್ನು ಕಲೀಬಹುದು.—ಜ್ಞಾನೋಕ್ತಿ 21:2.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

it-2-E ಪುಟ 687 ಪ್ಯಾರ 1-2

ಯಾಜಕ

ಕ್ರೈಸ್ತ ಯಾಜಕತ್ವ. ಯೆಹೋವನು ಇಸ್ರಾಯೇಲ್ಯರಿಗೆ ಆತನ ಮಾತನ್ನು ಕೇಳಿ ಅದ್ರಂತೆ ನಡೆದರೆ ಅವ್ರು ‘ಯಾಜಕರಾಜ್ಯವೂ ಪರಿಶುದ್ಧಜನವೂ ಆಗಿರುತ್ತೀರಿ’ ಅಂತ ಮಾತು ಕೊಟ್ಟನು. (ವಿಮೋ 19:6) ಆದ್ರೆ ಆರೋನ ಮತ್ತು ಅವನ ಸಂತತಿಗಿದ್ದ ಈ ಯಾಜಕತ್ವವು ಮುಂದೆ ಬರಲಿದ್ದ ಇನ್ನೂ ಉನ್ನತವಾದ ಯಾಜಕತ್ವದ ಮುನ್‌ ಛಾಯೆಯಾಗಿತ್ತು. (ಇಬ್ರಿ 8:4, 5) ಈ ಯಾಜಕತ್ವ ಧರ್ಮಶಾಸ್ತ್ರದ ಒಪ್ಪಂದ ಕೊನೆಯಾಗಿ ಹೊಸ ಒಪ್ಪಂದ ಜಾರಿ ಆಗುವವರೆಗೆ ಅಸ್ತಿತ್ವದಲ್ಲಿತ್ತು. (ಇಬ್ರಿ 7:11-14; 8:6, 7, 13) ದೇವರ ರಾಜ್ಯದ ಏರ್ಪಾಡಿನ ಕೆಳಗೆ ಯೆಹೋವನ ಯಾಜಕರಾಗಿ ಕೆಲ್ಸ ಮಾಡುವ ಅವಕಾಶ ಮೊದ್ಲಿಗೆ ಸಿಕ್ಕಿದ್ದು ಇಸ್ರಾಯೇಲ್ಯರಿಗೆ ಮಾತ್ರ. ಆದ್ರೆ ಸಮ್ಯ ಕಳೆದಂತೆ ಈ ಅವಕಾಶ ಅನ್ಯಜನಾಂಗದವ್ರಿಗೂ ಸಿಕ್ತು.—ಅಕಾ 10:34, 35; 15:14; ರೋಮ 10:21.

ಯೆಹೂದ್ಯರಲ್ಲಿ ಕೆಲವ್ರು ಮಾತ್ರ ಯೇಸುವನ್ನು ಸ್ವೀಕರಿಸಿದ್ರು. ಇದ್ರಿಂದಾಗಿ ದೇವರ ರಾಜ್ಯದ ಯಾಜಕರಾಗಿ ಮತ್ತು ಪವಿತ್ರ ಜನರಾಗಿ ಕೆಲ್ಸ ಮಾಡೋ ಸುಯೋಗ ಆ ಇಸ್ರಾಯೇಲ್ಯರಿಗೆ ತಪ್ಪಿಹೋಯ್ತು. (ರೋಮ 11:7, 20) ಇಸ್ರಾಯೇಲ್ಯರ ಅಪನಂಬಿಗಸ್ತಿಕೆ ನೋಡಿ ಯೆಹೋವನು ಶತಮಾನಗಳ ಮುಂಚೆನೇ ತನ್ನ ಪ್ರವಾದಿ ಹೋಶೇಯನ ಮೂಲಕ ಈ ರೀತಿ ಎಚ್ಚರಿಕೆ ಕೊಟ್ಟಿದ್ದನು: “ನೀವು ಜ್ಞಾನವನ್ನು ತಳ್ಳಿಬಿಟ್ಟದರಿಂದ ಇನ್ನು ನನಗೆ ಯಾಜಕಸೇವೆ ಮಾಡದಂತೆ ನಾನು ನಿಮ್ಮನ್ನು ತಳ್ಳಿಬಿಡುವೆನು; ನೀವು ನಿಮ್ಮ ದೇವರ ಧರ್ಮೋಪದೇಶವನ್ನು ಮರೆತಕಾರಣ ನಾನು ನಿಮ್ಮ ಸಂತತಿಯವರನ್ನು ಮರೆಯುವೆನು.” (ಹೋಶೇ 4:6) ಅದೇ ರೀತಿ ಯೇಸು ಸಹ ಯೆಹೂದಿ ಮುಖಂಡರಿಗೆ, “ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವುದು” ಅಂತ ಹೇಳಿದನು. (ಮತ್ತಾ 21:43) ಹಾಗಿದ್ರೂ ಯೇಸು ಕ್ರಿಸ್ತ ಭೂಮಿಯಲ್ಲಿದ್ದಾಗ ಆರೋನನ ಯಾಜಕತ್ವವು ಇನ್ನೂ ಜಾರಿಯಲ್ಲಿ ಇದ್ದಿದ್ರಿಂದ ಅದಕ್ಕೆ ವಿಧೇಯನಾದನ್ನು, ಮತ್ತು ತಾನು ವಾಸಿಮಾಡಿದ ಕುಷ್ಠರೋಗಿಗಳಿಗೆ, “ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿ ಎಂದು ಹೇಳಿದನು.”—ಮತ್ತಾ 8:4; ಮಾರ್ಕ 1:44; ಲೂಕ 17:14.

ಕಾವಲಿನಬುರುಜು04 3/15 ಪುಟ 27 ಪ್ಯಾರ 1

ವಿಮೋಚನಕಾಂಡ ಪುಸ್ತಕದ ಮುಖ್ಯಾಂಶಗಳು

20:5—ಯೆಹೋವನು ಹೇಗೆ “ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ” ಬರಮಾಡುತ್ತಾನೆ? ಒಬ್ಬ ವ್ಯಕ್ತಿಯು ವಯಸ್ಕನಾಗುವಾಗ, ಅವನ ಸ್ವಂತ ನಡತೆ ಹಾಗೂ ಮನೋಭಾವದ ಆಧಾರದ ಮೇಲೆ ಅವನಿಗೆ ತೀರ್ಪುಮಾಡಲ್ಪಡುತ್ತದೆ. ಆದರೆ ಇಸ್ರಾಯೇಲ್‌ ಜನಾಂಗವು ವಿಗ್ರಹಾರಾಧನೆಯನ್ನು ಅವಲಂಬಿಸಿದಾಗ, ಈ ಜನಾಂಗವು ಅನೇಕ ಸಂತತಿಗಳ ವರೆಗೆ ಇದರ ಪರಿಣಾಮಗಳನ್ನು ಅನುಭವಿಸಿತು. ನಂಬಿಗಸ್ತ ಇಸ್ರಾಯೇಲ್ಯರು ಸಹ ಇದರಿಂದ ಬಾಧಿಸಲ್ಪಟ್ಟರು; ಹೇಗೆಂದರೆ ಜನಾಂಗದ ಧಾರ್ಮಿಕ ಅಪರಾಧವು, ಈ ನಂಬಿಗಸ್ತರು ಸಮಗ್ರತೆಯ ಮಾರ್ಗದಲ್ಲಿ ಮುಂದುವರಿಯುವುದನ್ನು ಅತ್ಯಂತ ಕಷ್ಟಕರವಾಗಿ ಮಾಡಿತು.

ಆಗಸ್ಟ್‌ 31–ಸೆಪ್ಟೆಂಬರ್‌ 6

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 21-22

“ಯೆಹೋವ ದೇವರಂತೆ ನೀವೂ ಜೀವಕ್ಕೆ ಬೆಲೆ ಕೊಡಿ”

it-1-E ಪುಟ 271

ಹೊಡೆಯುವುದು

ಒಬ್ಬ ಇಬ್ರಿಯ ದಾಸನು ಅಥ್ವಾ ದಾಸಿಯು ತಮ್ಮ ಯಜಮಾನ ಹೇಳಿದಂತೆ ನಡಕೊಳ್ಳದಿದ್ರೆ ಅಥ್ವಾ ಅವನ ವಿರುದ್ಧ ದಂಗೆ ಎದ್ದರೆ ಆ ಯಜಮಾನನು ಅವ್ರಿಗೆ ಕೋಲಿನಿಂದ ಹೊಡೆಯಲು ಅನುಮತಿ ಇತ್ತು. ಅಕಸ್ಮಾತ್ತಾಗಿ ಹಾಗೆ ಹೊಡೆಯುವಾಗ ಆ ದಾಸನು ಸತ್ತು ಹೋದ್ರೆ ಯಜಮಾನನಿಗೆ ಶಿಕ್ಷೆಯಾಗ್ತಿತ್ತು. ಆದ್ರೆ ಒಂದುವೇಳೆ ಆ ದಾಸ ಒಂದು ಅಥ್ವಾ ಎರಡು ದಿನ ಬದುಕಿ ಉಳಿದರೆ ಅವ್ನು ಸಾಯಬೇಕು ಅನ್ನೋ ಉದ್ದೇಶ ಇಟ್ಕೊಂಡು ಯಜಮಾನ ಹೊಡೆಯಲಿಲ್ಲ ಅನ್ನೋದು ರುಜುವಾಗ್ತಿತ್ತು. ತನ್ನ ದಾಸನಿಗೆ ಶಿಕ್ಷೆ ಕೊಡೋ ಅಧಿಕಾರ ಯಜಮಾನನಿಗಿತ್ತು. ಯಾಕಂದ್ರೆ ಆ ದಾಸನು ಅವ್ನ ಸೊತ್ತಾಗಿದ್ದನು. ಸಾಮಾನ್ಯವಾಗಿ ಯಾರೂ ತಮ್ಮ ಹತ್ರ ಇರೋ ಸ್ವತ್ತನ್ನು ಅಥ್ವಾ ಅಮೂಲ್ಯವಾದ ಆಸ್ತಿಯನ್ನು ಕಳ್ಕೊಳ್ಳೋಕೆ ಇಷ್ಟಪಡಲ್ಲ. ಹಾಗಾಗಿ ಒಬ್ಬ ದಾಸನು ಒಂದು ಅಥ್ವಾ ಎರಡು ದಿನದ ನಂತ್ರ ಸತ್ತು ಹೋದಲ್ಲಿ ಆ ಸಾವು ಯಜಮಾನ ಹೊಡೆದ ಕಾರಣ ಅಥ್ವಾ ಬೇರೆ ಯಾವ ಕಾರಣದಿಂದ ಅನ್ನೋದು ಸರಿಯಾಗಿ ದೃಢವಾಗ್ತಿರಲಿಲ್ಲ. ಆದ್ರಿಂದ ಒಬ್ಬ ದಾಸನು ಒಂದು ಅಥ್ವಾ ಎರಡು ದಿನ ಬದುಕುಳಿದರೆ ಆಗ ಯಜಮಾನನಿಗೆ ಶಿಕ್ಷೆಯಾಗ್ತಿರಲಿಲ್ಲ.—ವಿಮೋ 21:20, 21.

“ದೇವರ ಪ್ರೀತಿ” ಪುಟ 91 ಪ್ಯಾರ 16

ದೇವರಂತೆಯೇ ನೀವು ಜೀವವನ್ನು ಅಮೂಲ್ಯವಾಗಿ ಪರಿಗಣಿಸುತ್ತೀರೊ?

16 ದೇವರ ದೃಷ್ಟಿಯಲ್ಲಿ ಅಜಾತ ಶಿಶುವಿನ ಜೀವವು ಕೂಡ ಅಮೂಲ್ಯ. ಪುರಾತನ ಇಸ್ರಾಯೇಲಿನಲ್ಲಿ, ಯಾರಾದರೂ ಗರ್ಭಿಣಿಯಾದ ಸ್ತ್ರೀಯನ್ನು ಗಾಯಗೊಳಿಸುವುದಾದರೆ ಮತ್ತು ಅದರಿಂದ ಅವಳು ಅಥವಾ ಅವಳ ಮಗು ಸತ್ತುಹೋಗುವುದಾದರೆ ಈ ಅಪರಾಧವನ್ನು ಮಾಡಿದವನನ್ನು ದೇವರು ನರಹಂತಕನಾಗಿ ಪರಿಗಣಿಸುತ್ತಿದ್ದನು ಮತ್ತು ಅವನು “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು” ಕೊಡಬೇಕಿತ್ತು. (ವಿಮೋಚನಕಾಂಡ 21:22, 23 ಓದಿ.) ಹಾಗಾದರೆ ಪ್ರತಿ ವರ್ಷ ಬೇಕುಬೇಕೆಂದೇ ಅಸಂಖ್ಯಾತ ಅಜಾತ ಶಿಶುಗಳ ಭ್ರೂಣಹತ್ಯೆ ಮಾಡಲ್ಪಡುವುದನ್ನು ನೋಡುವಾಗ ಯೆಹೋವನಿಗೆ ಹೇಗನಿಸುತ್ತಿರಬೇಕು ಎಂಬುದನ್ನು ಆಲೋಚಿಸಿ ನೋಡಿ. ಇಂಥ ಭ್ರೂಣಹತ್ಯೆಗಳು ಹೆಚ್ಚಾಗಿ ಸ್ವ-ಅನುಕೂಲತೆ ಮತ್ತು ಲೈಂಗಿಕ ಸಡಿಲು ನಡತೆಯ ಕಾರಣ ಮಾಡಲ್ಪಡುತ್ತವೆ.

ಕಾವಲಿನಬುರುಜು10 4/15 ಪುಟ 29 ಪ್ಯಾರ 4

ನೀವು “ಸುರಕ್ಷಿತವಾಗಿ” ಇರುವುದೇ ಯೆಹೋವನ ಅಪೇಕ್ಷೆ

ಸಾಕುಪ್ರಾಣಿಗಳಿಂದಾಗಿ ಹಾನಿಯುಂಟಾದರೆ ಸಹ ಧರ್ಮಶಾಸ್ತ್ರ ಶಿಕ್ಷೆಗಳನ್ನು ವಿಧಿಸುತ್ತಿತ್ತು. ಒಂದು ಎತ್ತು ಒಬ್ಬನನ್ನು ಹಾದು ಕೊಂದರೆ ಇತರರನ್ನು ಸುರಕ್ಷಿತವಾಗಿ ಇಡಲಿಕ್ಕಾಗಿ ಆ ಎತ್ತನ್ನು ಒಡೆಯನು ಕೊಂದುಹಾಕಬೇಕಿತ್ತು. ಅವನು ಅದರ ಮಾಂಸವನ್ನು ತಿನ್ನಬಾರದಿತ್ತು ಮತ್ತು ಇತರರಿಗೆ ಆಹಾರವಾಗಿ ಮಾರಲೂಬಾರದಿತ್ತು. ಆದ್ದರಿಂದ ಆ ಪ್ರಾಣಿಯನ್ನು ಕೊಲ್ಲುವುದರಿಂದ ಅವನಿಗೆ ತುಂಬ ನಷ್ಟವಾಗುತ್ತಿತ್ತು. ಆದರೆ ಒಂದು ಎತ್ತು ಒಬ್ಬನನ್ನು ಗಾಯಗೊಳಿಸಿದ ನಂತರವೂ ಆ ಎತ್ತಿನ ಒಡೆಯನು ಅದನ್ನು ಕಟ್ಟಿ ಇಡದಿದ್ದಲ್ಲಿ ಆಗೇನು? ಅದೇ ಎತ್ತು ಅನಂತರ ಬೇರೊಬ್ಬನನ್ನು ಹಾದು ಕೊಂದಲ್ಲಿ ಆ ಎತ್ತನ್ನೂ ಅದರ ಒಡೆಯನನ್ನೂ ಕೊಲ್ಲಬೇಕಿತ್ತು. ಆ ನಿಯಮವು, ತಮ್ಮ ಸಾಕುಪ್ರಾಣಿಗಳೊಂದಿಗೆ ದುರ್ಲಕ್ಷ್ಯದಿಂದ ವರ್ತಿಸುವ ಯಾವನಿಗಾದರೂ ತನ್ನ ವರ್ತನೆಯನ್ನು ಸರಿಪಡಿಸುವಂತೆ ಅವಕಾಶ ಕೊಟ್ಟಿತು.—ವಿಮೋ. 21:28, 29.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

ಕಾವಲಿನಬುರುಜು10 1/15 ಪುಟ 4 ಪ್ಯಾರ 4-5

ಯೆಹೋವನಿಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು?

4 ಕ್ರೈಸ್ತ ಸಮರ್ಪಣೆ ಒಂದು ಗಂಭೀರ ವಿಷಯ. ಅದು ಕೇವಲ ವಚನಬದ್ಧತೆಗಿಂತ ಹೆಚ್ಚಿನದ್ದು. ಹಾಗಾದರೆ ಸಮರ್ಪಣೆ ಮಾಡುವುದು ನಮಗೆ ಹೇಗೆ ಪ್ರಯೋಜನಕರ? ಹೋಲಿಕೆಗಾಗಿ, ಮಾನವ ಸಂಬಂಧಗಳಲ್ಲಿ ವಚನಬದ್ಧತೆಯನ್ನು ತೋರಿಸುವುದು ಹೇಗೆ ಪ್ರಯೋಜನಗಳನ್ನು ತರುತ್ತದೆ ಎಂಬುದನ್ನು ಪರಿಗಣಿಸೋಣ. ಉದಾಹರಣೆಗೆ ಗೆಳೆತನವನ್ನು ತೆಗೆದುಕೊಳ್ಳಿ. ನಮಗೆ ಒಬ್ಬ ಗೆಳೆಯನಿರುವ ಸುಯೋಗವು ಸಿಗಬೇಕಾದರೆ ಅವನ ಗೆಳೆಯನಾಗಿರುವ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳಬೇಕು. ಇದರಲ್ಲಿ ವಚನಬದ್ಧತೆಯು ಒಳಗೂಡಿರುತ್ತದೆ. ಅಂದರೆ ನಿಮ್ಮ ಸ್ನೇಹಿತನ ಬಗ್ಗೆ ಚಿಂತನೆ ತೋರಿಸುವ ಹೊಣೆಗಾರಿಕೆ ನಿಮಗಿರುವುದು. ಬೈಬಲ್‌ನಲ್ಲಿ ತಿಳಿಸಲಾದ ಒಂದು ಅತಿ ಎದ್ದುಕಾಣುವ ಗೆಳೆತನವು ದಾವೀದ ಮತ್ತು ಯೋನಾತಾನರದ್ದು. ಅವರು ಪರಸ್ಪರ ಗೆಳೆತನದ ಒಡಂಬಡಿಕೆಯನ್ನೂ ಮಾಡಿಕೊಂಡರು. (1 ಸಮುವೇಲ 17:57; 18:1, 3 ಓದಿ.) ಆ ರೀತಿಯ ವಚನಬದ್ಧತೆಯ ಮಟ್ಟವು ಅಪರೂಪ. ಆದರೂ, ಗೆಳೆಯ-ಗೆಳತಿಯರು ವಚನಬದ್ಧರಾಗಿರುವಾಗ ಅಥವಾ ಪರಸ್ಪರ ಹೊಣೆಗಾರಿಕೆ ತೋರಿಸುವಾಗ ಹೆಚ್ಚಿನ ಗೆಳೆತನಗಳು ಯಶಸ್ವಿಯಾಗುತ್ತವೆ.—ಜ್ಞಾನೋ. 17:17; 18:24.

5 ವಚನಬದ್ಧತೆಯನ್ನು ತೋರಿಸುವ ಮೂಲಕ ಪ್ರಯೋಜನ ಪಡೆದ ಇನ್ನೊಂದು ಸಂಬಂಧವನ್ನು ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವು ವಿವರಿಸುತ್ತದೆ. ಒಳ್ಳೇ ಯಜಮಾನನಿಂದ ದೊರೆಯುವ ಭದ್ರತೆಗಾಗಿ ದಾಸನೊಬ್ಬನು ಅವನಲ್ಲಿ ಖಾಯಂ ಉಳಿಯಲು ಬಯಸುವುದಾದರೆ, ಅವನು ಧಣಿಯೊಂದಿಗೆ ಒಂದು ಶಾಶ್ವತ ಹಾಗೂ ಕಟ್ಟುಪಡಿಸುವ ಕರಾರನ್ನು ಮಾಡಿಕೊಳ್ಳಬಹುದಿತ್ತು. ಧರ್ಮಶಾಸ್ತ್ರ ಹೇಳುವುದು: “ಆ ದಾಸನು—ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿ ಮಕ್ಕಳನ್ನೂ ಪ್ರೀತಿಸುತ್ತೇನಾದದರಿಂದ ಅವರನ್ನು ಅಗಲಿ ಬಿಡುಗಡೆಯಾಗಿ ಹೋಗಲೊಲ್ಲೆನೆಂದು ದೃಢವಾಗಿ ಹೇಳಿದರೆ ಅವನ ಯಜಮಾನನು ದೇವರ ಬಳಿಗೆ ಅವನನ್ನು ಕರಕೊಂಡು ಬಂದು ಕದದ ಹತ್ತಿರ ಅಥವಾ ಬಾಗಲಿನ ನಿಲುವು ಪಟ್ಟಿಗಳ ಹತ್ತಿರ ನಿಲ್ಲಿಸಿ ಅವನ ಕಿವಿಯನ್ನು ಸಲಾಕೆಯಿಂದ ಚುಚ್ಚಬೇಕು. ಆ ಹೊತ್ತಿನಿಂದ ಇವನು ಶಾಶ್ವತವಾಗಿ ಅವನಿಗೆ ದಾಸನಾಗಿರಬೇಕು.”—ವಿಮೋ. 21:5, 6.

it-1-E ಪುಟ 1143

ಯಜ್ಞವೇದಿಯ ಕೊಂಬು

ವಿಮೋಚನಕಾಂಡ 21:14 ರಲ್ಲಿರುವ ಮಾತಿನ ಅರ್ಥ ಏನಿರಬಹುದೆಂದ್ರೆ ಒಂದುವೇಳೆ ಒಬ್ಬ ಯಾಜಕ ಒಬ್ಬನ ಕೊಲೆ ಮಾಡಿದ್ರೂ ಆ ಯಾಜಕನಿಗೆ ಮರಣ ಶಿಕ್ಷೆಯಾಗಬೇಕಿತ್ತು. ಅಥ್ವಾ ಒಬ್ಬ ಯಾಜಕ ಉದ್ದೇಶಪೂರ್ವಕವಾಗಿ ಕೊಲೆ ಮಾಡಿಬಿಟ್ಟು ನಂತ್ರ ಯಜ್ಞವೇದಿಯ ಕೊಂಬನ್ನು ಹಿಡಿದುಕೊಂಡರೂ ಮರಣ ಶಿಕ್ಷೆಯಿಂದ ಅವ್ನು ಬಚಾವಾಗ್ತಿರಲಿಲ್ಲ.—1 ಅರ 2:28-34 ಹೋಲಿಸಿ.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಕಾವಲಿನಬುರುಜು09 10/1 ಪುಟ 21

ಅನಾಥ ಮಕ್ಕಳಿಗೆ ತಂದೆ

ವಿಮೋಚನಕಾಂಡ 22:22-24

‘ಪರಿಶುದ್ಧ ವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ [“ತಂದೆಯಿಲ್ಲದ ಹುಡುಗರಿಗೆ,” NW] ತಂದೆಯೂ ಆಗಿದ್ದಾನೆ.’ (ಕೀರ್ತನೆ 68:5) ಆ ಪ್ರೇರಿತ ಮಾತುಗಳು ದಿಕ್ಕಿಲ್ಲದವರ ಅಗತ್ಯತೆಗಳ ಕಡೆಗೆ ಯೆಹೋವ ದೇವರ ಸಂವೇದನಾಶೀಲತೆಯ ಕುರಿತು ಮನತಟ್ಟುವ ಪಾಠವನ್ನು ಕಲಿಸುತ್ತದೆ. ತಂದೆ ಅಥವಾ ತಾಯಿ ಇಲ್ಲದ ಮಕ್ಕಳ ಕಡೆಗೆ ಆತನಿಗಿರುವ ಚಿಂತೆಯು ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ ಸ್ಪಷ್ಟವಾಗಿ ತೋರಿಬಂದಿತ್ತು. “ತಂದೆಯಿಲ್ಲದ ಹುಡುಗನ” ವಿಷಯದಲ್ಲಿ ಬೈಬಲ್‌ ತಿಳಿಸಿದ ಮೊದಲ ಹೇಳಿಕೆಯನ್ನು ನಾವೀಗ ಪರೀಕ್ಷಿಸೋಣ. ಅದು ವಿಮೋಚನಕಾಂಡ 22:22-24 ರಲ್ಲಿ ಕಂಡುಬರುತ್ತದೆ.

ದೇವರು ಎಚ್ಚರಿಸಿದ್ದು: ‘[ನೀವು] ದಿಕ್ಕಿಲ್ಲದ ಮಕ್ಕಳನ್ನು ಬಾಧಿಸಬಾರದು.’ (ವಚನ 22) ಇದು ಮಾನವೀಯತೆಯನ್ನು ತೋರಿಸಲು ಹೇಳಿರುವ ಕೇವಲ ವಿನಂತಿಯಲ್ಲ. ಅದು ದೇವರ ಆಜ್ಞೆಯಾಗಿತ್ತು. ತಂದೆ ಸತ್ತ ಮಗುವು ತನ್ನ ಪಾಲಕ ಮತ್ತು ಪೋಷಕನನ್ನು ಕಳಕೊಳ್ಳುತ್ತದೆ. ಆದ್ದರಿಂದ ಅದು ಇತರರಿಂದ ದುರ್ಬಳಕೆ ಹೊಂದುವ ಅವಕಾಶವಿದೆ. ಅಂಥ ಮಗುವನ್ನು ಯಾವನಾದರೂ ಯಾವ ರೀತಿಯಲ್ಲಾದರೂ ‘ಬಾಧಿಸಬಾರದಿತ್ತು.’ ಬೇರೆ ಬೈಬಲ್‌ ಭಾಷಾಂತರಗಳಲ್ಲಿ ‘ಬಾಧಿಸು’ ಎಂಬ ಪದವನ್ನು “ದುರುಪಯೋಗಿಸು,” “ದುರುಪಚರಿಸು” ಮತ್ತು “ಸ್ವಪ್ರಯೋಜನಕ್ಕಾಗಿ ಬಳಸು” ಎಂದು ಅನುವಾದಿಸಲಾಗಿದೆ. ತಂದೆಯಿಲ್ಲದ ಮಗುವಿಗೆ ಕೆಟ್ಟದ್ದನ್ನು ಮಾಡುವುದು ದೇವರ ದೃಷ್ಟಿಯಲ್ಲಿ ಒಂದು ಗಂಭೀರವಾದ ವಿಷಯ. ಎಷ್ಟು ಗಂಭೀರ?

ಧರ್ಮಶಾಸ್ತ್ರವು ಮುಂದುವರಿಸಿ ಹೇಳುವುದು: “ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು; ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ.” (ವಚನ 23) ಹೀಬ್ರು ಮೂಲ ಗ್ರಂಥದಲ್ಲಿ ವಚನ 22 ರಲ್ಲಿ “ನೀವು” ಎಂಬ ಬಹುವಚನವನ್ನು ಉಪಯೋಗಿಸಲಾಗಿದೆ. ಆದರೆ ವಚನ 23 ರಲ್ಲಿ ಏಕವಚನವನ್ನು ಬಳಸಲಾಗಿದೆ. ಇದರಿಂದ, ಈ ದೈವಿಕ ಆಜ್ಞೆಯನ್ನು ಪಾಲಿಸಲು ಪ್ರತಿಯೊಬ್ಬನು ವೈಯಕ್ತಿಕವಾಗಿ ಹಾಗೂ ಇಡೀ ಜನಾಂಗವು ಸಹ ಹೊಣೆಯಾಗಿತ್ತು ಎಂಬುದು ಸ್ಪಷ್ಟ. ಯೆಹೋವನು ಎಲ್ಲವನ್ನು ಗಮನಿಸುತ್ತಿದ್ದನು. ತಂದೆಯಿಲ್ಲದ ಹುಡುಗರ ಮೊರೆಯನ್ನು ಅವನು ಕೇಳುತ್ತಿದ್ದನು. ಕೂಡಲೇ ಅವರ ಸಹಾಯಕ್ಕೆ ಬರುತ್ತಿದ್ದನು.—ಕೀರ್ತನೆ 10:14; ಜ್ಞಾನೋಕ್ತಿ 23:10, 11.

ಹಾಗಾದರೆ ಯಾರಾದರೂ ತಂದೆಯಿಲ್ಲದ ಹುಡುಗನಿಗೆ ಕೆಟ್ಟದ್ದನ್ನು ಮಾಡಿದಲ್ಲಿ ಆಗೇನು? ಆ ಮಗುವು ದುಃಖದಿಂದ ದೇವರಿಗೆ ಮೊರೆಯಿಟ್ಟರೆ? “ನಾನು ಕೋಪಿಸಿಕೊಂಡು ನಿಮ್ಮನ್ನು ಶತ್ರುಗಳ ಕತ್ತಿಯಿಂದ ಸಂಹಾರಮಾಡಿಸುವೆನು” ಎಂದು ಯೆಹೋವ ದೇವರು ಹೇಳುತ್ತಾನೆ. (ವಚನ 24) ಇದು ಕಡುಕೋಪವನ್ನು ಸೂಚಿಸುವ ಆಡುಮಾತಾದ “ಮೂಗಿನ ತುದಿ ಕೆಂಪಾಗು” ಅಂದರೆ ಕ್ರೋಧಾವಿಷ್ಟನಾಗು ಎಂಬ ಅಕ್ಷರಾರ್ಥವನ್ನು ಕೊಡುತ್ತದೆಂದು ಹೇಳುತ್ತದೆ ಬೈಬಲಿನ ಒಂದು ಪರಾಮರ್ಶೆ ಕೃತಿ. ಈ ನಿಯಮವನ್ನು ಜಾರಿಗೆ ತರಲು ಇಸ್ರಾಯೇಲಿನ ನ್ಯಾಯಸ್ಥಾಪಕರಿಗೆ ಯೆಹೋವನು ವಹಿಸಿಕೊಡಲಿಲ್ಲ ಎಂಬುದನ್ನು ಗಮನಿಸಿ. ಸಹಾಯಶೂನ್ಯ ಮಗುವನ್ನು ಯಾರಾದರೂ ಸ್ವಪ್ರಯೋಜನಕ್ಕಾಗಿ ಬಳಸಿದ್ದಲ್ಲಿ ಅವರ ಮೇಲೆ ದೇವರು ತಾನೇ ಶಿಕ್ಷಾ ತೀರ್ಪನ್ನು ಬರಮಾಡುವನು.—ಧರ್ಮೋಪದೇಶಕಾಂಡ 10:17, 18.

ಯೆಹೋವ ದೇವರು ಬದಲಾಗಿಲ್ಲ. (ಮಲಾಕಿಯ 3:6) ತಂದೆ, ತಾಯಿ ಅಥವಾ ಇಬ್ಬರನ್ನೂ ಕಳಕೊಂಡಿರುವ ಮಕ್ಕಳಿಗಾಗಿ ದೇವರ ಹೃದಯವು ಕನಿಕರದಿಂದ ಮಿಡಿಯುತ್ತದೆ. (ಯಾಕೋಬ 1:27) ಮುಗ್ಧಮಕ್ಕಳಿಗೆ ಕಿರುಕುಳಕೊಡುವಾಗ, ತಂದೆಯಿಲ್ಲದ ಮಕ್ಕಳ ಪಿತನಾದ ದೇವರು ಧರ್ಮಕ್ರೋಧದಿಂದ ಕೆರಳುತ್ತಾನೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಯಾರು ಸಹಾಯಶೂನ್ಯ ಮಗುವನ್ನು ದುರುಪಯೋಗಿಸಲು ಪ್ರಯತ್ನಿಸುತ್ತಾರೋ ಅವರು ‘ಯೆಹೋವನ ಉಗ್ರಕೋಪವನ್ನು’ ತಪ್ಪಿಸಿಕೊಳ್ಳಲಾರರು. (ಚೆಫನ್ಯ 2:1) ಅಂಥ ದುಷ್ಟಜನರು “ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವದು ಭಯಂಕರವಾದದ್ದು” ಎಂಬುದನ್ನು ಕಲಿತುಕೊಳ್ಳುವರು.—ಇಬ್ರಿಯ 10:31.

“ತಂದೆಯಿಲ್ಲದ ಹುಡುಗ” ಎಂಬ ಅಭಿವ್ಯಕ್ತಿಯು ಬೈಬಲಿನಲ್ಲಿ ಸುಮಾರು 40 ಸಲ ಕಾಣಸಿಗುತ್ತದೆ. ಈ ರೀತಿ ತರ್ಜುಮೆಯಾಗಿರುವ ಹೀಬ್ರು ಪದವು ಪುಲ್ಲಿಂಗ ರೂಪದಲ್ಲಿ ಇರುವುದಾದರೂ, ಅಂಥ ಹೇಳಿಕೆಯಲ್ಲಿರುವ ಮೂಲತತ್ತ್ವವು ತಂದೆಯಿಲ್ಲದ ಹೆಣ್ಣುಮಕ್ಕಳಿಗೆ ಅನ್ವಯಿಸುವುದಿಲ್ಲವೆಂದು ನಾವು ನೆನಸಬಾರದು. ಮೋಶೆಯ ಧರ್ಮಶಾಸ್ತ್ರವು ತಂದೆಯಿಲ್ಲದ ಹುಡುಗಿಯರ ಹಕ್ಕುಗಳನ್ನು ಸಹ ಸಮರ್ಥಿಸಿತ್ತು.—ಅರಣ್ಯಕಾಂಡ 27:1-8.

ನಮ್ಮ ಕ್ರೈಸ್ತ ಜೀವನ

ಕಾವಲಿನಬುರುಜು10 1/15 ಪುಟ 4 ಪ್ಯಾರ 4-7

ಯೆಹೋವನಿಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು?

4 ಕ್ರೈಸ್ತ ಸಮರ್ಪಣೆ ಒಂದು ಗಂಭೀರ ವಿಷಯ. ಅದು ಕೇವಲ ವಚನಬದ್ಧತೆಗಿಂತ ಹೆಚ್ಚಿನದ್ದು. ಹಾಗಾದರೆ ಸಮರ್ಪಣೆ ಮಾಡುವುದು ನಮಗೆ ಹೇಗೆ ಪ್ರಯೋಜನಕರ? ಹೋಲಿಕೆಗಾಗಿ, ಮಾನವ ಸಂಬಂಧಗಳಲ್ಲಿ ವಚನಬದ್ಧತೆಯನ್ನು ತೋರಿಸುವುದು ಹೇಗೆ ಪ್ರಯೋಜನಗಳನ್ನು ತರುತ್ತದೆ ಎಂಬುದನ್ನು ಪರಿಗಣಿಸೋಣ. ಉದಾಹರಣೆಗೆ ಗೆಳೆತನವನ್ನು ತೆಗೆದುಕೊಳ್ಳಿ. ನಮಗೆ ಒಬ್ಬ ಗೆಳೆಯನಿರುವ ಸುಯೋಗವು ಸಿಗಬೇಕಾದರೆ ಅವನ ಗೆಳೆಯನಾಗಿರುವ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳಬೇಕು. ಇದರಲ್ಲಿ ವಚನಬದ್ಧತೆಯು ಒಳಗೂಡಿರುತ್ತದೆ. ಅಂದರೆ ನಿಮ್ಮ ಸ್ನೇಹಿತನ ಬಗ್ಗೆ ಚಿಂತನೆ ತೋರಿಸುವ ಹೊಣೆಗಾರಿಕೆ ನಿಮಗಿರುವುದು. ಬೈಬಲ್‌ನಲ್ಲಿ ತಿಳಿಸಲಾದ ಒಂದು ಅತಿ ಎದ್ದುಕಾಣುವ ಗೆಳೆತನವು ದಾವೀದ ಮತ್ತು ಯೋನಾತಾನರದ್ದು. ಅವರು ಪರಸ್ಪರ ಗೆಳೆತನದ ಒಡಂಬಡಿಕೆಯನ್ನೂ ಮಾಡಿಕೊಂಡರು. (1 ಸಮುವೇಲ 17:57; 18:1, 3 ಓದಿ.) ಆ ರೀತಿಯ ವಚನಬದ್ಧತೆಯ ಮಟ್ಟವು ಅಪರೂಪ. ಆದರೂ, ಗೆಳೆಯ-ಗೆಳತಿಯರು ವಚನಬದ್ಧರಾಗಿರುವಾಗ ಅಥವಾ ಪರಸ್ಪರ ಹೊಣೆಗಾರಿಕೆ ತೋರಿಸುವಾಗ ಹೆಚ್ಚಿನ ಗೆಳೆತನಗಳು ಯಶಸ್ವಿಯಾಗುತ್ತವೆ.—ಜ್ಞಾನೋ. 17:17; 18:24.

5 ವಚನಬದ್ಧತೆಯನ್ನು ತೋರಿಸುವ ಮೂಲಕ ಪ್ರಯೋಜನ ಪಡೆದ ಇನ್ನೊಂದು ಸಂಬಂಧವನ್ನು ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವು ವಿವರಿಸುತ್ತದೆ. ಒಳ್ಳೇ ಯಜಮಾನನಿಂದ ದೊರೆಯುವ ಭದ್ರತೆಗಾಗಿ ದಾಸನೊಬ್ಬನು ಅವನಲ್ಲಿ ಖಾಯಂ ಉಳಿಯಲು ಬಯಸುವುದಾದರೆ, ಅವನು ಧಣಿಯೊಂದಿಗೆ ಒಂದು ಶಾಶ್ವತ ಹಾಗೂ ಕಟ್ಟುಪಡಿಸುವ ಕರಾರನ್ನು ಮಾಡಿಕೊಳ್ಳಬಹುದಿತ್ತು. ಧರ್ಮಶಾಸ್ತ್ರ ಹೇಳುವುದು: “ಆ ದಾಸನು—ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿ ಮಕ್ಕಳನ್ನೂ ಪ್ರೀತಿಸುತ್ತೇನಾದದರಿಂದ ಅವರನ್ನು ಅಗಲಿ ಬಿಡುಗಡೆಯಾಗಿ ಹೋಗಲೊಲ್ಲೆನೆಂದು ದೃಢವಾಗಿ ಹೇಳಿದರೆ ಅವನ ಯಜಮಾನನು ದೇವರ ಬಳಿಗೆ ಅವನನ್ನು ಕರಕೊಂಡು ಬಂದು ಕದದ ಹತ್ತಿರ ಅಥವಾ ಬಾಗಲಿನ ನಿಲುವು ಪಟ್ಟಿಗಳ ಹತ್ತಿರ ನಿಲ್ಲಿಸಿ ಅವನ ಕಿವಿಯನ್ನು ಸಲಾಕೆಯಿಂದ ಚುಚ್ಚಬೇಕು. ಆ ಹೊತ್ತಿನಿಂದ ಇವನು ಶಾಶ್ವತವಾಗಿ ಅವನಿಗೆ ದಾಸನಾಗಿರಬೇಕು.”—ವಿಮೋ. 21:5, 6.

6 ಮೇಲ್ಮಟ್ಟದ ವಚನಬದ್ಧತೆಯನ್ನು ಅವಶ್ಯಪಡಿಸುವ ಇನ್ನೊಂದು ಸಂಬಂಧವು ವಿವಾಹ. ಅದು ಒಬ್ಬ ವ್ಯಕ್ತಿಗೆ ತೋರಿಸುವ ವಚನಬದ್ಧತೆಯಾಗಿದೆ, ಒಂದು ಕರಾರಿಗಲ್ಲ. ಮದುವೆಮಾಡಿಕೊಳ್ಳದೆ ಒಟ್ಟಿಗೆ ಜೀವಿಸುವ ಇಬ್ಬರು ವ್ಯಕ್ತಿಗಳಾಗಲಿ ಅವರಿಗೆ ಹುಟ್ಟುವ ಮಕ್ಕಳಾಗಲಿ ನಿಜ ಭದ್ರತೆಯನ್ನು ಎಂದೂ ಆನಂದಿಸಶಕ್ತರಲ್ಲ. ಆದರೆ ಗೌರವಾರ್ಹ ಮದುವೆಯಲ್ಲಿ ಒಬ್ಬರಿಗೊಬ್ಬರು ವಚನಬದ್ಧರಾಗಿರುವ ವಿವಾಹ ಜೊತೆಯು, ಸಮಸ್ಯೆಗಳೆದ್ದಾಗ ತಮ್ಮ ಕಷ್ಟಗಳನ್ನು ಪ್ರೀತಿಯಿಂದ ಬಗೆಹರಿಸಲು ಶ್ರಮಿಸುವಂತೆ ದೇವರ ವಾಕ್ಯವು ಬಲವಾದ ಕಾರಣವನ್ನು ಕೊಡುತ್ತದೆ.—ಮತ್ತಾ. 19:5, 6; 1 ಕೊರಿಂ. 13:7, 8; ಇಬ್ರಿ. 13:4.

7 ಬೈಬಲ್‌ ಕಾಲದಲ್ಲಿ ಜನರು ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಬದ್ಧಪಡಿಸುವ ಕರಾರುಗಳ ಮೂಲಕವಾಗಿ ಪ್ರಯೋಜನ ಹೊಂದುತ್ತಿದ್ದರು. (ಮತ್ತಾ. 20:1, 2, 8) ಇಂದು ಸಹ ಅದೇ ರೀತಿ ಇದೆ. ಉದಾಹರಣೆಗೆ, ನಾವು ಒಂದು ವ್ಯಾಪಾರೋದ್ಯಮಕ್ಕೆ ಕೈಹಾಕುವ ಮೊದಲು ಅಥವಾ ಒಂದು ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುವ ಮೊದಲು ಬದ್ಧಪಡಿಸುವ ಲಿಖಿತ ಒಪ್ಪಂದ ಅಥವಾ ಲಿಖಿತ ಕರಾರನ್ನು ಮಾಡಿಕೊಳ್ಳುವುದರಿಂದ ಪ್ರಯೋಜನ ಪಡೆಯುತ್ತೇವೆ. ಹೀಗೆ ವಚನಬದ್ಧತೆಯು ಗೆಳೆತನ, ವಿವಾಹ ಮತ್ತು ಉದ್ಯೋಗದಂಥ ಸಂಬಂಧಗಳನ್ನು ಉತ್ತಮಗೊಳಿಸುವುದಾದರೆ, ಯೆಹೋವನೊಂದಿಗಿನ ಸಂಬಂಧದಿಂದಾಗಿ ನೀವು ಮಾಡುವ ಷರತ್ತಿಲ್ಲದ ಸಮರ್ಪಣೆಯು ನಿಮಗೆ ಇನ್ನೂ ಹೆಚ್ಚಿನ ಪ್ರಯೋಜನವನ್ನು ತರುವುದು ಖಂಡಿತ! ಯೆಹೋವ ದೇವರಿಗೆ ಸಮರ್ಪಣೆ ಮಾಡಿಕೊಳ್ಳುವುದರ ಮೂಲಕ ಪೂರ್ವಕಾಲದಲ್ಲಿ ಜನರು ಹೇಗೆ ಪ್ರಯೋಜನ ಪಡೆದರು ಮತ್ತು ಇದು ಹೇಗೆ ಕೇವಲ ವಚನಬದ್ಧತೆಗಿಂತಲೂ ಹೆಚ್ಚಿನದ್ದನ್ನು ಒಳಗೂಡಿತ್ತು ಎಂಬುದನ್ನು ನಾವೀಗ ಪರಿಗಣಿಸೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ