ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr20 ಜುಲೈ ಪು. 1-8
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2020
  • ಉಪಶೀರ್ಷಿಕೆಗಳು
  • ಜುಲೈ 6-12
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 6-7
  • ಜುಲೈ 13-19
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 8-9
  • ಜುಲೈ 20-26
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 10-11
  • ಜುಲೈ 27-ಆಗಸ್ಟ್‌ 2
  • ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 12
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2020
mwbr20 ಜುಲೈ ಪು. 1-8

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಜುಲೈ 6-12

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 6-7

“ನಾನು ಫರೋಹನಿಗೆ ಏನು ಮಾಡ್ತೀನಿ ಅಂತ ನಿನಗೆ ತೋರಿಸ್ತೀನಿ”

(ವಿಮೋಚನಕಾಂಡ 6:1) ಅದಕ್ಕೆ ಯೆಹೋವನು—ನಾನು ಫರೋಹನಿಗೆ ಮಾಡುವದನ್ನು ನೀನು ಈಗ ನೋಡುವಿ. ಅವನು ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ದೇಶದಿಂದ ಹೊರಡಿಸುವನು ಅಂದನು.

(ವಿಮೋಚನಕಾಂಡ 6:6, 7) ಆದದರಿಂದ ನೀನು ಇಸ್ರಾಯೇಲ್ಯರಿಗೆ [ನನ್ನ ಹೆಸರಿನಲ್ಲಿ] ಹೇಳಬೇಕಾದದ್ದೇನಂದರೆ—ನಾನು ಯೆಹೋವನು; ಐಗುಪ್ತ್ಯರು ನಿಮ್ಮಿಂದ ಮಾಡಿಸುವ ಬಿಟ್ಟೀಕೆಲಸಗಳನ್ನು ನಾನು ತಪ್ಪಿಸಿ ಅವರಲ್ಲಿ ನಿಮಗಿರುವ ದಾಸತ್ವವನ್ನು ತೊಲಗಿಸಿ ನನ್ನ ಕೈ ಚಾಚಿ ಅವರಿಗೆ ಮಹಾಶಿಕ್ಷೆಗಳನ್ನು ವಿಧಿಸಿ ನಿಮ್ಮನ್ನು ರಕ್ಷಿಸುವೆನು. 7 ನಾನು ನಿಮ್ಮನ್ನು ನನ್ನ ಪ್ರಜೆಯೆಂದು ಆರಿಸಿಕೊಂಡು ನಿಮಗೆ ದೇವರಾಗಿರುವೆನು. ಐಗುಪ್ತ್ಯರು ಮಾಡಿಸುವ ಬಿಟ್ಟೀಸೇವೆಯನ್ನು ನಾನು ನಿಮಗೆ ತಪ್ಪಿಸಿದಾಗ ಯೆಹೋವನು ಎಂಬ ನಾನೇ ನಿಮ್ಮ ದೇವರಾಗಿದ್ದೇನೆಂಬದು ನಿಮಗೆ ತಿಳಿದುಬರುವದು.

it-2-E ಪುಟ 436 ಪ್ಯಾರ 3

ಮೋಶೆ

ಇಸ್ರಾಯೇಲ್ಯರ ಮನಸ್ಸು ಒಂದೇ ರೀತಿ ಇರುತ್ತಿರಲಿಲ್ಲ. ಆರಂಭದಲ್ಲಿ ಅವ್ರು ಮೋಶೆ ಮಾಡಿದ ಅದ್ಭುತ ಕಾರ್ಯಗಳನ್ನು ನೋಡಿ ನಂಬಿದ್ರು. ಆದ್ರೆ ಇನ್ನೂ ಕಠಿಣ ಕೆಲಸ ಮಾಡ್ಬೇಕೆಂದು ಫರೋಹ ಆಜ್ಞೆ ಹೊರಡಿಸಿದಾಗ ಮೋಶೆ ವಿರುದ್ಧ ಗುಣುಗುಟ್ಟೋಕೆ ಶುರುಮಾಡಿದ್ರು. ಇದ್ರಿಂದ ರೋಸಿಹೋದ ಮೋಶೆ ಯೆಹೋವನ ಹತ್ರ ತನ್ನ ಅಳಲನ್ನು ತೋಡಿಕೊಂಡ. (ವಿಮೋ 4:29-31; 5:19-23) ಆಗ ಯೆಹೋವನು ಮೋಶೆಗೆ ಧೈರ್ಯತುಂಬಿದ್ನು. ಅಬ್ರಹಾಮ, ಇಸಾಕ, ಯಾಕೋಬ ಯಾವುದನ್ನು ಎದುರು ನೋಡ್ತಿದ್ರೋ ಅದನ್ನ ನೆರವೇರಿಸ್ತೇನೆ ಅಂತ ತಿಳಿಸಿದನು. ಅಂದ್ರೆ ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಿ ಕಾನಾನ್‌ ದೇಶದಲ್ಲಿ ಅವ್ರನ್ನು ದೊಡ್ಡ ಜನಾಂಗವಾಗಿ ಮಾಡೋ ಮೂಲಕ ತನ್ನ ಹೆಸ್ರಿನ ಸಂಪೂರ್ಣ ಅರ್ಥವನ್ನು ಪ್ರಕಟಿಸ್ತೇನೆ ಅಂತ ತಿಳಿಸಿದನು. (ವಿಮೋ 6:1-8) ಇದಾದ ನಂತ್ರನೂ ಇಸ್ರಾಯೇಲ್ಯರು ಮೋಶೆ ಮಾತಿಗೆ ಕಿವಿಗೊಡಲಿಲ್ಲ. ಆದ್ರೆ ಒಂಬತ್ತನೇ ಬಾಧೆ (ಪಿಡುಗು) ನಡೆದ ನಂತ್ರ ಅವನು ಹೇಳಿದ ತರ ನಡಕೊಂಡ್ರು, ಅವನಿಗೆ ಸಹಕರಿಸಿದ್ರು. ಹೀಗೆ ಅವ್ರು ಬೆಂಬಲ ಕೊಟ್ಟಿದ್ರಿಂದ ಹತ್ತನೇ ಬಾಧೆ ಆದ ಮೇಲೆ ಅವ್ರನ್ನು ಯಾವುದೇ ಗೊಂದಲ, ಗಲಿಬಿಲಿ ಇಲ್ಲದೆ ಒಂದು ‘ಸೈನ್ಯ’ ಹೇಗೆ ಕ್ರಮಬದ್ಧವಾಗಿ ಹೋಗುತ್ತೋ ಆ ರೀತಿ ಅಲ್ಲಿಂದ ಕರಕೊಂಡು ಹೋಗೋಕೆ ಮೋಶೆಗೆ ಸಾಧ್ಯವಾಯ್ತು.—ವಿಮೋ 13:18.

(ವಿಮೋಚನಕಾಂಡ 7:4, 5) ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ; ಆಗ ನಾನು ಐಗುಪ್ತದೇಶದವರನ್ನು ಬಾಧಿಸಿ ಅವರಿಗೆ ಮಹಾಶಿಕ್ಷೆಗಳನ್ನು ವಿಧಿಸಿ ನನ್ನ ಜನರಾಗಿರುವ ಇಸ್ರಾಯೇಲ್ಯರ ಸೈನ್ಯವನ್ನೆಲ್ಲಾ ಐಗುಪ್ತದೇಶದಿಂದ ಹೊರ ತರುವೆನು. 5 ನಾನು ಐಗುಪ್ತ್ಯರಿಗೆ ವಿರೋಧವಾಗಿ ಕೈಚಾಚಿ ಅವರ ಮಧ್ಯದಿಂದ ಇಸ್ರಾಯೇಲ್ಯರನ್ನು ಹೊರತಂದಾಗ ನಾನು ಯೆಹೋವನೆಂಬದನ್ನು ಐಗುಪ್ತ್ಯರು ತಿಳಿದುಕೊಳ್ಳುವರು.

it-2-E ಪುಟ 436 ಪ್ಯಾರ 1-2

ಮೋಶೆ

ಈಜಿಪ್ಟಿನ ಫರೋಹನ ಮುಂದೆ. ಇದು ಈಜಿಪ್ಟಿನ ದೇವರುಗಳ ಮತ್ತು ಯೆಹೋವನ ಮಧ್ಯೆ ನಡೆದ ಯುದ್ಧವಾಗಿತ್ತು. ಒಂದು ಕಡೆ ಮೋಶೆ ಮತ್ತು ಆರೋನ ಯೆಹೋವನ ಪಕ್ಷದಲ್ಲಿದ್ದು ಈ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ರು. ಇನ್ನೊಂದು ಕಡೆ ಈಜಿಪ್ಟಿನ ಜೋಯಿಸರು, ಮಂತ್ರಗಾರರು ಇದ್ರು. ಅವ್ರಲ್ಲಿ ಬಹುಶಃ ಯನ್ನ ಮತ್ತು ಯಂಬ್ರ ಅನ್ನೋ ಮುಖ್ಯಸ್ಥರು ಇದ್ದಿರಬಹುದು. (2ತಿಮೊ 3:8) ಇವ್ರ ಮೂಲಕ ಫರೋಹನು ಈಜಿಪ್ಟಿನ ಎಲ್ಲಾ ದೇವತೆಗಳ ಶಕ್ತಿಯನ್ನು ಯೆಹೋವನ ವಿರುದ್ಧ ಹೋರಾಡೋಕೆ ಕರೆಸಿದನು. ಮೋಶೆಯ ನೇತೃತ್ವದಡಿ ಆರೋನ ಮಾಡಿದ ಮೊದಲ ಅದ್ಭುತದಿಂದ ಯೆಹೋವನ ಬಲಾಢ್ಯ ಶಕ್ತಿ ಮುಂದೆ ಈಜಿಪ್ಟಿನ ದೇವರುಗಳು ಏನೇನೂ ಅಲ್ಲ ಅನ್ನೋದು ರುಜುವಾಯ್ತು. ಆದ್ರೆ ಫರೋಹ ತನ್ನ ಹಠ ಬಿಡಲಿಲ್ಲ. (ವಿಮೋ 7:8-13) ನಂತರ ಮೂರನೇ ಬಾಧೆ ಸಂಭವಿಸಿದಾಗ ಈ ಜೋಯಿಸರು ಬೇರೆ ದಾರಿ ಇಲ್ಲದೇ “ಇದು ದೇವರ ಕೈಕೆಲಸವೇ ಸರಿ” ಅಂತ ಒಪ್ಪಿಕೊಳ್ಳಬೇಕಾಯ್ತು. ಹುಣ್ಣುಗಳ ಬಾಧೆ ಬಂದಾಗಂತೂ ಅವ್ರ ಪರಿಸ್ಥಿತಿ ಎಷ್ಟು ಹೀನಾಯವಾಯಿತೆಂದ್ರೆ ಅವ್ರಿಗೆ ಫರೋಹನ ಮುಂದೆ ಬಂದು ನಿಂತು ಮೋಶೆಯನ್ನು ವಿರೋಧಿಸುವುದಕ್ಕೆ ಆಗ್ಲಿಲ್ಲ.—ವಿಮೋ 8:16-19; 9:10-12.

ಬಾಧೆಗಳನ್ನು ನೋಡ್ದಾಗ ಕೆಲವ್ರು ನಂಬಿಕೆಯಿಟ್ರು, ಕೆಲವ್ರು ಇನ್ನೂ ಹೆಚ್ಚು ವಿರೋಧಿಸಿದ್ರು. ಹತ್ತು ಬಾಧೆಗಳಲ್ಲಿ ಪ್ರತಿಯೊಂದು ಬಾಧೆ ಸಂಭವಿಸುವ ಮುಂಚೆನೇ ಮೋಶೆ ಮತ್ತು ಆರೋನ ಅದರ ಬಗ್ಗೆ ಪ್ರಕಟಿಸಿದ್ರು. ಅವರು ಪ್ರಕಟಿಸಿದಂತೆ ಬಾಧೆಗಳು ಸಂಭವಿಸಿದವು. ಆಗ ಮೋಶೆಯನ್ನು ಯೆಹೋವನೇ ಕಳುಹಿಸಿದ್ದು ಅನ್ನೋದು ರುಜುವಾಯ್ತು. ಹೀಗೆ ಯೆಹೋವನ ಹೆಸ್ರು ಪ್ರಸಿದ್ಧಿಗೆ ಬಂತು ಮತ್ತು ಈಜಿಪ್ಟಿನುದ್ದಕ್ಕೂ ಎಲ್ರ ಮನೆಮಾತಾಯಿತು. ಇಸ್ರಾಯೇಲ್ಯರು ಮತ್ತು ಕೆಲವು ಈಜಿಪ್ಟಿನವ್ರು ಯೆಹೋವನಲ್ಲಿ ನಂಬಿಕೆ ಇಟ್ರು. ಆದ್ರೆ ಫರೋಹ, ಅವನ ಸಲಹೆಗಾರರು ಮತ್ತವನ ಬೆಂಬಲಿಗರು ಯೆಹೋವನನ್ನು ಇನ್ನಷ್ಟು ವಿರೋಧಿಸಿದ್ರು. (ವಿಮೋ 9:16; 11:10; 12:29-39) ದೇವರುಗಳಿಗೆ ತಮ್ಮ ಮೇಲೆ ಕೋಪ ಬಂದಿರೋ ಕಾರಣ ಈ ರೀತಿ ಬಾಧೆಗಳು ಸಂಭವಿಸುತ್ತಿವೆ ಅಂತ ಈಜಿಪ್ಟಿನವ್ರು ನೆನಸಲಿಲ್ಲ. ಬದ್ಲಿಗೆ ಯೆಹೋವನೇ ತಮ್ಮ ದೇವರುಗಳ ವಿರುದ್ಧ ಇಂಥ ನ್ಯಾಯತೀರ್ಪು ಮಾಡ್ತಿದ್ದಾನೆ ಅಂತ ಅರ್ಥ ಮಾಡ್ಕೊಂಡ್ರು. ಒಂಬತ್ತನೇ ಬಾಧೆಯ ನಂತ್ರ ‘ಈಜಿಪ್ಟ್‌ನಲ್ಲಿ ಫರೋಹನ ಪ್ರಜಾ ಪರಿವಾರದವರು ಮತ್ತು ಜನರು ಮೋಶೆಯನ್ನು ಮಹಾಪುರುಷನೆಂದು ತಿಳಿದುಕೊಂಡರು.’—ವಿಮೋ 11:3.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ವಿಮೋಚನಕಾಂಡ 6:3) ಅಬ್ರಹಾಮ ಇಸಾಕ ಯಾಕೋಬರಿಗೆ ನಾನು ಸರ್ವಶಕ್ತನಾದ ದೇವರೆಂಬ ಹೆಸರುಳ್ಳವನಾಗಿ ಕಾಣಿಸಿಕೊಂಡೆನೇ ಹೊರತು ಯೆಹೋವನು ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ.

it-1-E ಪುಟ 78 ಪ್ಯಾರ 3-4

ಸರ್ವಶಕ್ತ

ಯೆಹೋವನು ಅಬ್ರಹಾಮನಿಗೆ ಇಸಾಕ ಹುಟ್ಟುತ್ತಾನೆ ಅಂತ ಮಾತು ಕೊಡ್ವಾಗ ‘ಸರ್ವಶಕ್ತನಾದ ದೇವರು’ ಅನ್ನೋ ಬಿರುದನ್ನು ಉಪಯೋಗಿಸಿದನು. ಯಾಕೆಂದ್ರೆ ಕೊಟ್ಟ ಮಾತು ನೆರವೇರಿಸೋ ಶಕ್ತಿ ದೇವರಿಗಿದೆ ಅನ್ನೋ ಅಚಲ ನಂಬಿಕೆ ಅಬ್ರಹಾಮನಲ್ಲಿ ಇರಬೇಕಿತ್ತು. ನಂತರ ಅಬ್ರಹಾಮನೊಟ್ಟಿಗೆ ಮಾಡಿಕೊಂಡ ಒಪ್ಪಂದದ ಬಾಧ್ಯಸ್ಥರಾಗಿದ್ದ ಇಸಾಕ ಮತ್ತು ಯಾಕೋಬನನ್ನು ಆಶೀರ್ವದಿಸುವಾಗ್ಲೂ ಯೆಹೋವ ಸರ್ವಶಕ್ತನಾದ ದೇವರಾಗಿದ್ದೇನೆ ಅಂತ ಹೇಳಿದನು.—ಆದಿ 17:1; 28:3; 35:11; 48:3.

ಇದಕ್ಕೆ ಹೊಂದಿಕೆಯಲ್ಲಿ, ಯೆಹೋವನು ಮೋಶೆಗೆ “ಅಬ್ರಹಾಮ ಇಸಾಕ ಯಾಕೋಬರಿಗೆ ನಾನು ಸರ್ವಶಕ್ತನಾದ ದೇವರೆಂಬ ಹೆಸರುಳ್ಳವನಾಗಿ ಕಾಣಿಸಿಕೊಂಡೆನೇ ಹೊರತು ಯೆಹೋವನು ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ” ಅಂತ ಹೇಳಿದನು. (ವಿಮೋ 6:3) ಅದರರ್ಥ ಈ ಪೂರ್ವಜರಿಗೆ ಯೆಹೋವನ ಹೆಸ್ರು ಗೊತ್ತಿರಲಿಲ್ಲ ಅಂತಲ್ಲ. ಯಾಕಂದ್ರೆ ಇವ್ರು ಮತ್ತು ಇವ್ರಿಗಿಂತ ಮುಂಚೆ ಜೀವಿಸಿದವ್ರು ಯೆಹೋವನ ಹೆಸ್ರನ್ನು ಉಪಯೋಗಿಸಿದ್ರು. (ಆದಿ 4:1, 26; 14:22; 27:27; 28:16) ಆದಿಕಾಂಡ ಪುಸ್ತಕದಲ್ಲಿ ಪೂರ್ವಜರ ಜೀವನಚರಿತ್ರೆಯ ಬಗ್ಗೆ ಸವಿವರವಾಗಿ ತಿಳಿಸಲಾಗಿದೆ. ಇದರ ಮೂಲ ಹೀಬ್ರು ಗ್ರಂಥದಲ್ಲಿ “ಸರ್ವಶಕ್ತ” ಅನ್ನೋ ಪದ ಕೇವಲ 6 ಬಾರಿ ಉಲ್ಲೇಖವಾಗಿದೆ. ಆದ್ರೆ ದೇವರ ವೈಯಕ್ತಿಕ ಹೆಸರಾದ ಯೆಹೋವ 172 ಬಾರಿ ಕಂಡುಬರುತ್ತೆ. ದೇವ್ರಿಗೆ ಸರ್ವಶಕ್ತ ಅನ್ನೋ ಬಿರುದು ಪಡಕೊಳ್ಳಲು ಹಕ್ಕಿದೆ, ಆತನು ಅದಕ್ಕೆ ಅರ್ಹ ಅನ್ನೋದನ್ನು ಪೂರ್ವಜರು ತಮ್ಮ ವೈಯಕ್ತಿಕ ಅನುಭವಗಳಿಂದ ತಿಳುಕೊಂಡ್ರು. ಆದ್ರೆ ಆ ಹೆಸ್ರಿನ ಸಂಪೂರ್ಣ ಅರ್ಥ ಏನು ಮತ್ತು ಅದ್ರಲ್ಲಿ ಏನೆಲ್ಲಾ ಒಳಗೂಡಿದೆ ಅನ್ನೋದನ್ನು ಅರ್ಥಮಾಡಿಕೊಳ್ಳೋ ಅವಕಾಶ ಅವರಿಗೆ ಸಿಗ್ಲಿಲ್ಲ. ಇದ್ರ ಬಗ್ಗೆ ಸಂಪಾದಕರಾದ ಜೆ. ಡಿ. ಡಾಗ್ಲಸ್‌ ದಿ ಇಲ್ಯೂಸ್ಟ್ರೇಟೆಡ್‌ ಬೈಬಲ್‌ ಡಿಕ್ಷನರಿಯಲ್ಲಿ ಒಂದು ಆಸಕ್ತಿಕರ ವಿಷ್ಯ ತಿಳ್ಸಿದ್ದಾರೆ. ಅದು ಹೀಗಿದೆ: ದೇವರು ಪೂರ್ವಜರಿಗೆ ಹಿಂದೆ ಕಾಣಿಸಿಕೊಂಡಾಗ ಭವಿಷ್ಯದಲ್ಲಿ ಏನಾಗುತ್ತೆ ಅಂತ ತಿಳಿಸಿದ್ನು. ಇದ್ರಿಂದ ಆ ಪೂರ್ವಜರಿಗೆ ಯಾಹ್ವೆ ಅನ್ನೋ ದೇವ್ರು ಏನನ್ನು ಉದ್ದೇಶಿಸ್ತಾನೋ ಅದನ್ನ ನೆರವೇರಿಸೋಕೆ ಆತನಿಗೆ ಖಂಡಿತ ಆಗುತ್ತೆ, ಆತನಿಗೆ ಶಕ್ತಿ ಇದೆ ಅನ್ನೋ ದೃಢನಂಬಿಕೆ ಇರಬೇಕಿತ್ತು. ಆದ್ರೆ ಉರಿಯುತ್ತಿದ್ದ ಪೊದೆಯ ಬಳಿ ಯೆಹೋವ ತನ್ನ ಬಗ್ಗೆ ಇನ್ನೂ ಹೆಚ್ಚು ಪ್ರಕಟಿಸಿದನು. ಆತನು ಅಲ್ಲಿ ಮತ್ತು ಮುಂದಕ್ಕೂ ಕಾಣಿಸಿಕೊಂಡಿದ್ರಿಂದ, ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದರಿಂದ ಯಾಹ್ವೆ ಅನ್ನೋ ಹೆಸ್ರಿನ ಅರ್ಥ ಏನು ಮತ್ತು ಅದ್ರಲ್ಲಿ ಏನೆಲ್ಲಾ ಒಳಗೂಡಿದೆ ಅನ್ನೋದು ಆಗಿನವ್ರಿಗೆ ಇನ್ನಷ್ಟು ಹೆಚ್ಚು ಸ್ಪಷ್ಟವಾಯ್ತು.

(ವಿಮೋಚನಕಾಂಡ 7:1) ಯೆಹೋವನು ಮೋಶೆಗೆ ಇಂತೆಂದನು—ನಿನ್ನನ್ನು ಫರೋಹನಿಗೆ ದೇವರ ಸ್ಥಾನದಲ್ಲಿ ನೇಮಿಸಿದ್ದೇನೆ, ನೋಡು. ನಿನ್ನ ಅಣ್ಣನಾದ ಆರೋನನು ನಿನಗೋಸ್ಕರ ಪ್ರವಾದಿಯಾಗಿರುವನು.

it-2-E ಪುಟ 435 ಪ್ಯಾರ 5

ಮೋಶೆ

ಮೋಶೆ ಹಿಂಜರಿದ್ರೂ ಯೆಹೋವನು ಅವನನ್ನೇ ಬಳಸಿದನು. ಸ್ಪಷ್ಟವಾಗಿ ಮಾತಾಡೋಕೆ ಬರಲ್ಲ ಅಂತ ಮೋಶೆ ಹಿಂಜರಿದನು. 40 ವರ್ಷಗಳ ಹಿಂದೆ ಇಸ್ರಾಯೇಲ್ಯರನ್ನು ಬಿಡಿಸುತ್ತೇನೆಂದು ತಾನಾಗಿಯೇ ಮುಂದೆ ಬಂದಿದ್ದ ಮೋಶೆ ಈಗ ಸಂಪೂರ್ಣ ಬದಲಾಗಿದ್ದ. ಆತ ಯೆಹೋವನ ಹತ್ರ ತಾನು ಇಸ್ರಾಯೇಲ್ಯರನ್ನ ಬಿಡಿಸೋಕೆ ಸಮರ್ಥನಲ್ಲ ಅಂತ ಪದೇಪದೇ ಹೇಳಿದ್ನು. ಕೊನೆಗೆ ತನ್ನ ಬದ್ಲಿಗೆ ಬೇರೆ ಯಾರನ್ನಾದ್ರೂ ನೇಮಿಸುವಂತೆ ಕೇಳಿದ್ನು. ಆಗ ದೇವ್ರಿಗೆ ಅವನ ಮೇಲೆ ಕೋಪ ಬಂದ್ರೂ ಅವನನ್ನೇ ಬಳಸಿದನು. ಅವನ ಅಣ್ಣನಾದ ಆರೋನನನ್ನು ಅವನ ಪರವಾಗಿ ಮಾತಾಡೋಕೆ ಕಳುಹಿಸಿದನು. ಮೋಶೆಯು ದೇವರಿಂದ ಬಂದಂಥ ಸಂದೇಶವನ್ನು ಆರೋನನಿಗೆ ತಿಳಿಸುತ್ತಿದ್ದನು. ಆರೋನನು ಆ ಸಂದೇಶವನ್ನು ಬೇರೆಯವ್ರಿಗೆ ತಿಳಿಸುತ್ತಿದ್ದನು. ಹೀಗೆ ಯೆಹೋವನ ಪ್ರತಿನಿಧಿಯಾಗಿದ್ದ ಮೋಶೆಯು ಆರೋನನಿಗೆ ‘ದೇವರಂತೆ’ ಆದನು. ಇಸ್ರಾಯೇಲ್ಯ ಹಿರೀಪುರುಷರನ್ನು ಭೇಟಿ ಮಾಡಿದಾಗ ಮತ್ತು ಫರೋಹನ ಆಸ್ಥಾನಕ್ಕೆ ಪದೇಪದೇ ಹೋಗ್ತಿದ್ದಾಗ ಏನು ಮಾತಾಡ್ಬೇಕು ಅನ್ನೋ ಸಲಹೆಸೂಚನೆ ಮತ್ತು ಆಜ್ಞೆಗಳನ್ನು ದೇವರು ಮೋಶೆಗೆ ಕೊಟ್ಟಿದ್ದನು. ಮೋಶೆಯು ಅದನ್ನು ಆರೋನನಿಗೆ ಹೇಳಿದನು. ಆರೋನ ಅದ್ರಲ್ಲಿ ಇದ್ದದ್ದನ್ನು ಹಾಗೇ ಫರೋಹನಿಗೆ ಹೇಳಿದನು. (ಈ ಫರೋಹ 40 ವರ್ಷಗಳ ಹಿಂದೆ ಮೋಶೆ ಈಜಿಪ್ಟಿನಿಂದ ಓಡಿಹೋದಾಗ ಇದ್ದ ಫರೋಹನ ಉತ್ತರಾಧಿಕಾರಿ ಆಗಿದ್ದನು). (ವಿಮೋ 2:23; 4:10-17) ಆರೋನನು ಮೋಶೆಯ ‘ಪ್ರವಾದಿಯಾಗಿರುತ್ತಾನೆ’ ಅಂತ ಸಹ ಯೆಹೋವ ತಿಳಿಸಿದನು. ಅದರರ್ಥ ದೇವರ ಪ್ರವಾದಿಯಾಗಿದ್ದ ಮೋಶೆ ಏನು ಹೇಳುತ್ತಿದ್ದನೋ ಅದನ್ನ ಆರೋನ ಮಾಡ್ಬೇಕಿತ್ತು. ಮೋಶೆಯು ಫರೋಹನಿಗೂ “ದೇವರ ಸ್ಥಾನದಲ್ಲಿ” ಇರುತ್ತಾನೆ ಅಂತ ಯೆಹೋವ ಹೇಳಿದ್ನು. ಇದರರ್ಥ ಯೆಹೋವನು ಮೋಶೆಗೆ ಫರೋಹನ ಮೇಲೆ ಅಧಿಕಾರವನ್ನು ಕೊಟ್ಟನು ಮತ್ತು ಅದ್ಭುತಗಳನ್ನು ಮಾಡಲು ತನ್ನ ಶಕ್ತಿ ಕೊಟ್ಟನು. ಈ ಕಾರಣದಿಂದ ಈಜಿಪ್ಟಿನ ರಾಜನಿಗೆ ಮೋಶೆ ಹೆದರುವ ಅವಶ್ಯಕತೆ ಇರಲಿಲ್ಲ.—ವಿಮೋ 7:1, 2.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಕಾವಲಿನಬುರುಜು15 1/15 ಪುಟ 9 ಪ್ಯಾರ 6-7

ಯೆಹೋವನಿಗೆ ಕೃತಜ್ಞರಾಗಿದ್ದು ಆಶೀರ್ವಾದ ಪಡೆಯಿರಿ

6 ಕೃತಜ್ಞತಾಭಾವ ಬೆಳೆಸಿಕೊಳ್ಳುವುದರಲ್ಲಿ ಮತ್ತು ತೋರಿಸುವುದರಲ್ಲಿ ಪೌಲನ ಮಾದರಿಯನ್ನು ಹೇಗೆ ಅನುಕರಿಸಬಹುದು? ಅವನಂತೆ ನಾವೂ ಯೆಹೋವನು ವೈಯಕ್ತಿಕವಾಗಿ ನಮಗೆ ಮಾಡಿರುವ ವಿಷಯಗಳ ಬಗ್ಗೆ ಧ್ಯಾನಿಸಬೇಕು. (ಕೀರ್ತ. 116:12) ಯೆಹೋವನಿಂದ ಬಂದಿರುವ ಯಾವ ಆಶೀರ್ವಾದಗಳಿಗಾಗಿ ನೀವು ಕೃತಜ್ಞರು? ಯೆಹೋವ ಮತ್ತು ನಿಮ್ಮ ನಡುವೆ ಇರುವ ಅಮೂಲ್ಯ ಸಂಬಂಧಕ್ಕಾಗಿಯಾ? ಕ್ರಿಸ್ತನ ವಿಮೋಚನಾ ಮೌಲ್ಯದಲ್ಲಿ ನೀವಿಟ್ಟಿರುವ ನಂಬಿಕೆಯಿಂದಾಗಿ ಸಿಗುವ ಕ್ಷಮಾಪಣೆಗಾಗಿಯಾ? ಬೇರೆಬೇರೆ ಕಷ್ಟತೊಂದರೆಗಳು ಬಂದಾಗ ನಿಮ್ಮಲ್ಲಿ ಧೈರ್ಯ ತುಂಬಿ ಆಸರೆಯಾಗಿ ನಿಂತ ನಿರ್ದಿಷ್ಟ ಸಹೋದರ ಸಹೋದರಿಯರಿಗಾಗಿನಾ? ನಿಮ್ಮ ಪ್ರೀತಿಯ ಸಂಗಾತಿ ಮತ್ತು ಮುದ್ದು ಮಕ್ಕಳ ಬಗ್ಗೆಯಂತೂ ಖಂಡಿತ ಹೇಳುವಿರಿ. ನಿಮ್ಮನ್ನು ತುಂಬ ಪ್ರೀತಿಸುವ ತಂದೆಯಾದ ಯೆಹೋವನಿಂದ ನಿಮಗೆ ಸಿಕ್ಕಿರುವ ಇಂಥ ಆಶೀರ್ವಾದಗಳ ಬಗ್ಗೆ ಧ್ಯಾನಿಸಲು ಸಮಯ ಮಾಡಿಕೊಳ್ಳಿ. ಆಗ ನಿಮ್ಮ ಹೃದಯದಲ್ಲಿ ಕೃತಜ್ಞತೆ ತುಂಬುತ್ತದೆ. ಇವೆಲ್ಲದಕ್ಕಾಗಿ ಒಂದೂ ದಿನ ಬಿಡದೆ ಯೆಹೋವನಿಗೆ ಧನ್ಯವಾದ ಹೇಳುತ್ತೀರಿ.—ಕೀರ್ತನೆ 92:1, 3 ಓದಿ.

7 ನಮಗೆ ಸಿಕ್ಕಿರುವ ಆಶೀರ್ವಾದಗಳು ನಮ್ಮ ಹೃದಮನದಲ್ಲಿ ಬೇರೂರಿದ್ದರೆ ಯೆಹೋವನಿಗೆ ಪ್ರಾರ್ಥನೆಯ ಮೂಲಕ ಕೃತಜ್ಞತೆ ತಿಳಿಸಲು ಸಿದ್ಧರಿರುತ್ತೇವೆ. (ಕೀರ್ತ. 95:2; 100:4, 5) ಅನೇಕರು ಏನಾದರೂ ಬೇಕಿದ್ದಾಗ ಮಾತ್ರ ಪ್ರಾರ್ಥನೆ ಮಾಡುತ್ತಾರೆ. ಆದರೆ ನಾವು ಹಾಗೆ ಮಾಡಬಾರದು. ಯೆಹೋವನು ನಮಗೆ ಕೊಟ್ಟಿರುವ ವಿಷಯಗಳಿಗಾಗಿ ಧನ್ಯವಾದ ಹೇಳಿದರೆ ಆತನಿಗೆ ತುಂಬ ಸಂತೋಷವಾಗುತ್ತದೆ. ಕೃತಜ್ಞತೆ ತುಂಬಿದ ಮನತಟ್ಟುವ ಪ್ರಾರ್ಥನೆಗಳು ಬೈಬಲ್‌ನಲ್ಲಿವೆ. ಹನ್ನ, ಹಿಜ್ಕೀಯರ ಪ್ರಾರ್ಥನೆಗಳು ಇದಕ್ಕೆ ಉದಾಹರಣೆ. (1 ಸಮು. 2:1-10; ಯೆಶಾ. 38:9-20) ಕೃತಜ್ಞತಾಭಾವ ತೋರಿಸಿದ ಇಂಥ ನಂಬಿಗಸ್ತ ಸೇವಕರನ್ನು ಅನುಕರಿಸಿರಿ. ನಿಮಗಿರುವ ಆಶೀರ್ವಾದಗಳಿಗಾಗಿ ಪ್ರಾರ್ಥನೆ ಮೂಲಕ ಯೆಹೋವನಿಗೆ ಕೃತಜ್ಞತೆ ಸಲ್ಲಿಸಿ. (1 ಥೆಸ. 5:17, 18) ಹೀಗೆ ಮಾಡಿದರೆ ಪ್ರಯೋಜನಗಳು ಬಹಳ. ನಿಮ್ಮಲ್ಲಿ ಉಲ್ಲಾಸ ತುಂಬುವುದು. ಯೆಹೋವನಿಗಾಗಿ ಪ್ರೀತಿ ಗಾಢವಾಗುವುದು. ಆತನೊಂದಿಗಿನ ಆಪ್ತತೆ ಹೆಚ್ಚುವುದು.—ಯಾಕೋ. 4:8.

ಜುಲೈ 13-19

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 8-9

“ಗರ್ವಿಷ್ಟ ಫರೋಹ ತನಗೇ ಗೊತ್ತಿಲ್ಲದೆ ದೇವರ ಉದ್ದೇಶ ಪೂರೈಸಿದ”

(ವಿಮೋಚನಕಾಂಡ 8:15) ಫರೋಹನು ಉಪಶಮನವಾಯಿತೆಂದು ತಿಳಿದಾಗ ತನ್ನ ಹೃದಯವನ್ನು ಮೊಂಡ ಮಾಡಿಕೊಂಡನು. ಯೆಹೋವನು ಹೇಳಿದ್ದಂತೆಯೇ ಅವನು ಅವರ ಮಾತನ್ನು ಕೇಳದೆ ಹೋದನು.

it-2-E ಪುಟ 1040-1041

ಮೊಂಡುತನ

ಯೆಹೋವ ದೇವ್ರು ಮನುಷ್ಯರ ಜೊತೆ ತಾಳ್ಮೆಯಿಂದ ನಡಕೊಳ್ತಾನೆ. ಕೆಲವು ವ್ಯಕ್ತಿಗಳು ಮತ್ತು ಜನಾಂಗಗಳು ಮರಣಕ್ಕೆ ಅರ್ಹರಾಗಿದ್ದರೂ ಅವ್ರನ್ನು ನಾಶಮಾಡ್ಲಿಲ್ಲ. (ಆದಿ 15:16; 2ಪೇತ್ರ 3:9) ಈ ರೀತಿ ಯೆಹೋವ ತಾಳ್ಮೆ ತೋರಿಸಿದಾಗ ಕೆಲವ್ರು ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ರು. ಅವ್ರಿಗೆ ಯೆಹೋವ ಕರುಣೆ ತೋರಿಸಿದನು. (ಯೆಹೋ 2:8-14; 6:22, 23; 9:3-15) ಇನ್ನು ಕೆಲವ್ರು ತಮ್ಮ ಹೃದಯವನ್ನು ಇನ್ನಷ್ಟು ಕಠಿಣ ಮಾಡಿಕೊಂಡ್ರು ಮತ್ತು ಯೆಹೋವನ, ಆತನ ಜನರ ವಿರೋಧಿಗಳಾದ್ರು. (ಧರ್ಮೋ 2:30-33; ಯೆಹೋ 11:19, 20) ಯಾರಾದ್ರೂ ಮೊಂಡುತನ ತೋರಿಸ್ವಾಗ ಯೆಹೋವ ಅವ್ರನ್ನು ತಡೆಯೋದಿಲ್ಲ. ಅದಕ್ಕೆ ಬೈಬಲ್‌ ಯೆಹೋವನ ಬಗ್ಗೆ “ಅವರನ್ನು ಕಠಿಣಪಡಿಸಿಕೊಳ್ಳಲು ಬಿಡುತ್ತಾನೆ” ಅಥ್ವಾ “ಅವರ ಹೃದಯಗಳನ್ನು ಕಠಿನಗೊಳಿಸಿದ್ದಾನೆ” ಅಂತ ತಿಳ್ಸುತ್ತೆ. ಮೊಂಡುತನ ತೋರಿಸುವವ್ರ ಮೇಲೆ ಯೆಹೋವ ತನ್ನ ನ್ಯಾಯತೀರ್ಪನ್ನು ಜಾರಿಗೊಳಿಸುವಾಗ ಆತನ ಬಲಾಢ್ಯ ಶಕ್ತಿ ಮತ್ತು ಆತನ ಹೆಸರು ಪ್ರಖ್ಯಾತವಾಗುತ್ತೆ.—ವಿಮೋ 4:21; ಯೋಹಾ 12:40; ರೋಮ 9:14-18 ಹೋಲಿಸಿ.

(ವಿಮೋಚನಕಾಂಡ 8:18, 19) ಜೋಯಿಸರು ತಮ್ಮ ಗುಪ್ತ ವಿದ್ಯೆಯಿಂದ ಹಾಗೆಯೇ ಹೇನುಗಳನ್ನು ಉಂಟುಮಾಡುವದಕ್ಕೆ ಪ್ರಯತ್ನಮಾಡಿದಾಗ್ಯೂ ಆಗದೆ ಹೋಯಿತು. ಆ ಹೇನುಗಳು ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಇದ್ದವು. 19 ಆಗ ಆ ಜೋಯಿಸರು—ಇದು ದೇವರ ಕೈಕೆಲಸವೇ ಸರಿ ಎಂದು ಫರೋಹನಿಗೆ ಹೇಳಿದರು. ಆದರೂ ಫರೋಹನ ಹೃದಯವು ಕಠಿಣವಾಗಿತ್ತು; ಯೆಹೋವನು ಮೋಶೆಗೆ ಮುಂತಿಳಿಸಿದಂತೆಯೇ ಅವನು ಅವರ ಮಾತನ್ನು ಕೇಳದೆ ಹೋದನು.

(ವಿಮೋಚನಕಾಂಡ 9:15-17) ನಾನು ಕೈಯೆತ್ತಿ ನಿನ್ನನ್ನೂ ನಿನ್ನ ಪ್ರಜೆಗಳನ್ನೂ ಅಂಟುರೋಗದಿಂದ ಸಾಯಿಸಬಹುದಾಗಿತ್ತು; ಆಗ ನೀನು ಈ ವರೆಗೆ ಭೂಮಿಯಲ್ಲಿ ಇರದಂತೆ ನಿರ್ಮೂಲವಾಗುತ್ತಿದ್ದಿ. 16 ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು. 17 ನೀನು ನನ್ನ ಜನರನ್ನು ಇನ್ನೂ ಹೋಗಗೊಡಿಸದೆ ನಿನ್ನನ್ನು ಅವರ ಮುಂದೆ ಆಟಂಕವಾಗಿ ಒಡ್ಡುತ್ತೀಯಾ?

it-2-E ಪುಟ 1181 ಪ್ಯಾರ 3-5

ದುಷ್ಟತನ

ಯೆಹೋವ ದೇವ್ರು ಕೆಲವು ಸನ್ನಿವೇಶಗಳನ್ನು ಹೇಗೆ ಬಳಸ್ತಾನಂದ್ರೆ ದುಷ್ಟ ಜನ್ರು ತಮಗೇ ಗೊತ್ತಿಲ್ಲದೇ ಆತನ ಉದ್ದೇಶವನ್ನು ನೆರವೇರಿಸಿರುತ್ತಾರೆ. ದುಷ್ಟಜನ್ರು ದೇವ್ರನ್ನು ವಿರೋಧಿಸಿದರೂ ಅಥ್ವಾ ಎದುರು ಹಾಕಿಕೊಂಡ್ರೂ ಆತ ಅವ್ರನ್ನು ತಡೆಯಲ್ಲ. ಆದ್ರೆ ಆ ದುಷ್ಟ ಜನ ತನ್ನ ನಂಬಿಗಸ್ತ ಆರಾಧಕರ ಪ್ರಾಣ ತೆಗೆಯೋದಕ್ಕೆ ಆತ ಬಿಡಲ್ಲ. ದುಷ್ಟ ಜನ್ರು ಮಾಡೋ ಕೆಟ್ಟ ಕೆಲ್ಸಗಳ ಮೂಲಕನೂ ಯೆಹೋವನಿಗೆ ತನ್ನ ನೀತಿಯನ್ನು ಪ್ರಖ್ಯಾತಿಪಡಿಸೋಕೆ ಆಗುತ್ತೆ! (ರೋಮ 3:3-5, 23-26; 8:35-39; ಕೀರ್ತ 76:10) ಇದನ್ನೇ ಜ್ಞಾನೋಕ್ತಿ 16:4 ಸಹ ತಿಳ್ಸುತ್ತೆ: “ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ, ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನುಂಟುಮಾಡಿದ್ದಾನೆ.”

ಫರೋಹನ ವಿಷ್ಯದಲ್ಲಿ ಯೆಹೋವ ದೇವ್ರು ಏನು ಮಾಡಿದನೆಂದು ನೋಡಿ. ಗುಲಾಮಗಿರಿಯಲ್ಲಿದ್ದ ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಬೇಕಂತ ಫರೋಹನಿಗೆ ಯೆಹೋವನು ಮೋಶೆ ಮತ್ತು ಆರೋನನ ಮೂಲಕ ಪದೇಪದೇ ಹೇಳಿಸಿದ್ರೂ ಅವ್ನು ಅವ್ರನ್ನು ಬಿಡುಗಡೆ ಮಾಡ್ಲೇ ಇಲ್ಲ. ಫರೋಹ ಇಷ್ಟು ದುಷ್ಟನಾಗೋಕೆ ಯೆಹೋವ ಕಾರಣ ಆಗಿರಲಿಲ್ಲ. ಆದ್ರೆ ಅವನನ್ನು ಸಾಯಿಸದೆ ಹಾಗೆ ಬಿಟ್ಟನು. ಜೊತೆಗೆ, ಫರೋಹ ಒಬ್ಬ ಕ್ರೂರಿ ಮತ್ತು ಮರಣಕ್ಕೆ ಅರ್ಹನು ಅನ್ನೋದನ್ನು ಸ್ವತಃ ಅವನಾಗಿಯೇ ರುಜುಪಡಿಸುವಂಥ ಸನ್ನಿವೇಶಗಳನ್ನು ಯೆಹೋವನು ತಂದನು. ಈ ರೀತಿ ಮಾಡೋದ್ರ ಹಿಂದೆ ಯೆಹೋವನ ಉದ್ದೇಶ ಏನಾಗಿತ್ತು ಅನ್ನೋದನ್ನು ವಿಮೋಚನಕಾಂಡ 9:16 ಹೀಗೆ ತಿಳ್ಸುತ್ತೆ: “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು.”

ಈಜಿಪ್ಟಿನ ಮೇಲೆ ಹತ್ತು ಬಾಧೆಗಳು ಬಂದಿದ್ದು, ಕೊನೆಗೆ ಕೆಂಪು ಸಮುದ್ರದಲ್ಲಿ ಫರೋಹ ಮತ್ತವನ ಮಿಲಿಟರಿ ಸೈನ್ಯ ಸಂಪೂರ್ಣವಾಗಿ ಜಲಸಮಾಧಿಯಾಗಿದ್ದು ಇವೆಲ್ಲ ಘಟನೆಗಳು ಯೆಹೋವನಿಗಿರುವ ಬಲಾಢ್ಯ ಶಕ್ತಿಯನ್ನು ತೋರಿಸಿಕೊಟ್ಟವು. (ವಿಮೋ 7:14–12:30; ಕೀರ್ತ 78:43-51; 136:15) ಇದಾಗಿ ವರ್ಷಗಳೇ ಕಳೆದ್ರೂ ಸುತ್ತಲಿದ್ದ ದೇಶದವರೆಲ್ಲಾ ಇದ್ರ ಬಗ್ಗೆನೇ ಮಾತಾಡಿಕೊಂಡ್ರು. ಹೀಗೆ ಭೂಮಿಯುದ್ದಕ್ಕೂ ಯೆಹೋವನ ಹೆಸ್ರು ಪ್ರಸಿದ್ಧವಾಯಿತು. (ಯೆಹೋ 2:10, 11; 1ಸಮು 4:8) ಒಂದುವೇಳೆ ಯೆಹೋವನು ಫರೋಹನನ್ನು ಮುಂಚೆನೇ ಸಾಯಿಸಿದ್ದಿದ್ರೆ ತನಗಿದ್ದ ಮಹಾನ್‌ ಶಕ್ತಿಯನ್ನು ಇಷ್ಟು ಅದ್ಭುತವಾಗಿ ತೋರಿಸೋಕೆ ಆಗ್ತಿರಲಿಲ್ಲ. ಜೊತೆಗೆ ಆತನ ಹೆಸ್ರಿಗೆ ಈ ರೀತಿಯಲ್ಲಿ ಮಹಿಮೆ ಸಲ್ಲುತ್ತಿರಲಿಲ್ಲ ಮತ್ತು ತನ್ನ ಜನ್ರನ್ನು ಇಷ್ಟು ಅದ್ಭುತವಾಗಿ ಬಿಡುಗಡೆ ಮಾಡೋಕೆ ಆಗ್ತಿರಲಿಲ್ಲ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ವಿಮೋಚನಕಾಂಡ 8:21) ಅಪ್ಪಣೆಕೊಡದೆಹೋದರೆ ನಾನು ನಿನಗೂ ನಿನ್ನ ಪ್ರಜಾಪರಿವಾರದವರಿಗೂ ನಿನ್ನ ಮನೆಗಳಿಗೂ ವಿಷದ ಹುಳಗಳ ಕಾಟವುಂಟಾಗುವಂತೆ ಮಾಡುವೆನು. ಐಗುಪ್ತ್ಯರ ಮನೆಗಳಲ್ಲಿಯೂ ಅವರು ಇರುವ ಎಲ್ಲಾ ಭೂಮಿಯಲ್ಲಿಯೂ ಆ ಹುಳಗಳು ತುಂಬಿಕೊಳ್ಳುವವು.

it-1-E ಪುಟ 878

ವಿಷಹುಳ

ಗೋಷೆನ್‌ ಸೀಮೆಯಲ್ಲಿದ್ದ ಇಸ್ರಾಯೇಲ್ಯರನ್ನು ಹೊರತುಪಡಿಸಿ ಈಜಿಪ್ಟಿನಲ್ಲಿ ಮಾತ್ರ ಸಂಭವಿಸಿದ ನಾಲ್ಕನೇ ಬಾಧೆಗೆ ಕಾರಣವಾಗಿದ್ದ ವಿಷಹುಳ ನಿರ್ದಿಷ್ಟವಾಗಿ ಯಾವ ಹುಳವಾಗಿತ್ತು ಅನ್ನೋದ್ರ ಬಗ್ಗೆ ಸ್ಪಷ್ಟತೆ ಇಲ್ಲ. ಕಾರಣ ಅದಕ್ಕಾಗಿ ಬಳಸಿರುವ ಹೀಬ್ರು ಪದವನ್ನು ಬೇರೆಬೇರೆ ರೀತಿಯಲ್ಲಿ ಭಾಷಾಂತರಿಸಲಾಗಿದೆ. (ವಿಮೋ 8:21, 22, 24, 29, 31; ಕೀರ್ತ 78:45; 105:31) ವಿಷಹುಳಕ್ಕೆ ಹೀಬ್ರುವಿನಲ್ಲಿ ‘ಎರವ್‌’ ಅಂತ ಕರೆಯಲಾಗಿದೆ ಮತ್ತು ಅದನ್ನು ಜೀರುಂಡೆ, ಹುಳಗಳು, ಗುಂಗುರೆ ಅಥವಾ ಸೊಳ್ಳೆ ಮತ್ತು ನಾಯಿಹುಳ ಅಂತ ಬೇರೆಬೇರೆ ಹೆಸರಿನಿಂದ ಭಾಷಾಂತರಿಸಲಾಗಿದೆ.

ವಿಷಹುಳಕ್ಕೆ ಇಂಗ್ಲಿಷ್‌ನಲ್ಲಿ ಬಳಸಿರುವ ಪದಗಳು ವಿವಿಧ ಜಾತಿಯ ಹಾರ್ಸ್‌ಫ್ಲೈಗಳು ಮತ್ತು ಬಾಟ್‌ಫ್ಲೈಗಳನ್ನು ಸೂಚಿಸುತ್ತವೆ. ಹೆಣ್ಣುಜಾತಿಯ ಹಾರ್ಸ್‌ಫ್ಲೈಗಳು ಪ್ರಾಣಿಯ ಅಥವಾ ಮನುಷ್ಯನ ಚರ್ಮ ಚುಚ್ಚಿ ರಕ್ತ ಹೀರುತ್ತವೆ. ಲಾರ್ವ ಹಂತದಲ್ಲಿರುವ ಬಾಟ್‌ಫ್ಲೈಗಳಿಗೆ ಪ್ರಾಣಿಗಳ ಮತ್ತು ಮನುಷ್ಯರ ದೇಹವೇ ವಾಸಸ್ಥಳವಾಗಿರುತ್ತವೆ. ಮನುಷ್ಯರಿಗೆ ತುಂಬ ಕಾಟ ಕೊಡುವಂಥ ಬಾಟ್‌ಫ್ಲೈಗಳು ಹೆಚ್ಚಾಗಿ ಉಷ್ಣವಲಯದಲ್ಲಿ ಕಂಡುಬರುತ್ತವೆ. ವಿಷಹುಳಗಳ ಬಾಧೆಯಿಂದಾಗಿ ಈಜಿಪ್ಟಿನವ್ರಿಗೆ, ಅವರ ಸಾಕುಪ್ರಾಣಿಗಳಿಗೆ ತುಂಬನೇ ಹಿಂಸೆ ಆಗಿರಬಹುದು. ಎಷ್ಟರ ಮಟ್ಟಿಗಂದ್ರೆ ಅವ್ರಲ್ಲಿ ಕೆಲವ್ರಿಗೆ ಸಾವು ಕೂಡ ಸಂಭವಿಸಿರಬಹುದು.

(ವಿಮೋಚನಕಾಂಡ 8:25-27) ಆಗ ಫರೋಹನು ಮೋಶೆ ಆರೋನರನ್ನು ಕರಿಸಿ—ನೀವು ಹೋಗಿ ಈ ದೇಶದೊಳಗೇ ನಿಮ್ಮ ದೇವರಿಗೆ ಯಜ್ಞಮಾಡಬಹುದು ಅಂದನು. 26 ಆದರೆ ಮೋಶೆ—ಹಾಗೆ ಮಾಡುವದು ಯುಕ್ತವಲ್ಲ. ನಮ್ಮ ದೇವರಾದ ಯೆಹೋವನಿಗೆ ನಾವು ಯಜ್ಞದಲ್ಲಿ ಕೊಡುವ ಆಹುತಿ ಐಗುಪ್ತ್ಯರಿಗೆ ನಿಷೇಧ. ನಿಷಿದ್ಧವೆಂದು ಐಗುಪ್ತ್ಯರು ತಿಳುಕೊಂಡಿರುವ ಆಹುತಿಯನ್ನು ನಾವು ಅವರ ಕಣ್ಣಿನ ಮುಂದೆ ಮಾಡಿದರೆ ಅವರು ನಮ್ಮನ್ನು ಕೊಲ್ಲುವದಕ್ಕೆ ಕಲ್ಲೆಸೆಯುವರಲ್ಲವೇ. 27 ನಾವು ಅರಣ್ಯದಲ್ಲಿ ಮೂರು ದಿವಸದ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಯೆಹೋವನು ಆಜ್ಞಾಪಿಸುವ ಪ್ರಕಾರ ಯಜ್ಞಮಾಡಬೇಕು ಅಂದನು.

ಕಾವಲಿನಬುರುಜು04 3/15 ಪುಟ 25 ಪ್ಯಾರ 10

ವಿಮೋಚನಕಾಂಡ ಪುಸ್ತಕದ ಮುಖ್ಯಾಂಶಗಳು

8:26, 27—ಇಸ್ರಾಯೇಲ್ಯರ ಯಜ್ಞಗಳು “ಐಗುಪ್ತರಿಗೆ ನಿಷೇಧ” ಎಂದು ಮೋಶೆ ಏಕೆ ಹೇಳಿದನು? ಐಗುಪ್ತದೇಶದಲ್ಲಿ ಬೇರೆಬೇರೆ ರೀತಿಯ ಅನೇಕ ಪ್ರಾಣಿಗಳನ್ನು ಆರಾಧಿಸಲಾಗುತ್ತಿತ್ತು. ಹೀಗೆ, ಯಜ್ಞಗಳ ಉಲ್ಲೇಖವು, ಯೆಹೋವನಿಗೆ ಯಜ್ಞಾರ್ಪಿಸಲಿಕ್ಕಾಗಿ ದೂರಹೋಗುವಂತೆ ಇಸ್ರಾಯೇಲ್ಯರಿಗೆ ಅನುಮತಿ ನೀಡಲ್ಪಡಲೇಬೇಕೆಂಬ ಮೋಶೆಯ ಒತ್ತಾಯಕ್ಕೆ ಇನ್ನೂ ಹೆಚ್ಚಿನ ಒತ್ತನ್ನು ಮತ್ತು ಒಡಂಬಡಿಸುವಿಕೆಯನ್ನು ಕೂಡಿಸಿತು.

ಜುಲೈ 20-26

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 10-11

“ಮೋಶೆ ಮತ್ತು ಆರೋನ ತೋರಿಸಿದ ಧೈರ್ಯ”

(ವಿಮೋಚನಕಾಂಡ 10:3-6) ಮೋಶೆ ಆರೋನರು ಫರೋಹನ ಬಳಿಗೆ ಹೋಗಿ ಅವನಿಗೆ—ಇಬ್ರಿಯರ ದೇವರಾಗಿರುವ ಯೆಹೋವನು ಆಜ್ಞಾಪಿಸುವದೇನಂದರೆ—ನೀನು ನನ್ನ ಮುಂದೆ ತಗ್ಗಿಸಿಕೊಳ್ಳದೆ ಇರುವದು ಇನ್ನು ಎಲ್ಲಿಯ ವರೆಗೋ? ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆಕೊಡು. 4 ಅಪ್ಪಣೆಕೊಡದೆಹೋದರೆ ನಾಳೆ ನಿನ್ನ ರಾಜ್ಯದೊಳಕ್ಕೆ ಮಿಡತೆಗಳನ್ನು ಬರಮಾಡುವೆನು. 5 ಅವು ಭೂಮಿಯನ್ನೆಲ್ಲಾ ಮುಚ್ಚಿಕೊಳ್ಳುವವು; ನೆಲವೇ ಕಾಣಿಸದೆ ಹೋಗುವದು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದದ್ದೆಲ್ಲವನ್ನು ಮಿಡತೆಗಳು ತಿಂದು ಬಿಡುವವು; ಹೊಲದಲ್ಲಿರುವ ನಿಮ್ಮ ಎಲ್ಲಾ ಮರಗಳ ಎಲೆಚಿಗುರುಗಳನ್ನೂ ತಿಂದುಬಿಡುವವು. 6 ಅವು ನಿನ್ನ ಮನೆಗಳಲ್ಲಿಯೂ ನಿನ್ನ ಪರಿವಾರದವರ ಮನೆಗಳಲ್ಲಿಯೂ ಐಗುಪ್ತ್ಯರೆಲ್ಲರ ಮನೆಗಳಲ್ಲಿಯೂ ತುಂಬಿಕೊಂಡಿರುವವು. ನಿಮ್ಮ ತಂದೆತಾತಂದಿರು ಹುಟ್ಟಿದಂದಿನಿಂದ ಇಂದಿನ ವರೆಗೂ ಅಂಥ ಮಿಡತೇ ದಂಡನ್ನು ಎಂದೂ ನೋಡಿಲ್ಲ ಎಂದು ಹೇಳಿದರು. ಇದನ್ನು ಹೇಳಿ ಮೋಶೆ ತಿರುಗಿಕೊಂಡು ಫರೋಹನ ಬಳಿಯಿಂದ ಹೊರಟುಹೋದನು.

ಕಾವಲಿನಬುರುಜು09 7/15 ಪುಟ 20 ಪ್ಯಾರ 6

ಯೇಸುವನ್ನು ಅನುಕರಿಸುತ್ತಾ ಧೈರ್ಯದಿಂದ ಸಾರಿರಿ

6 ಫರೋಹನೊಂದಿಗೆ ಮಾತಾಡುವಾಗ ಮೋಶೆ ತೋರಿಸಿದ ಧೈರ್ಯದ ಕುರಿತು ಸಹ ಯೋಚಿಸಿ. ಈ ಫರೋಹನನ್ನು ದೇವರುಗಳ ಪ್ರತಿನಿಧಿ ಎಂದಲ್ಲ ಬದಲಾಗಿ ಸ್ವತಃ ದೇವರೆಂದು, ‘ರಾ’ ಎಂಬ ಸೂರ್ಯದೇವನ ಮಗನೆಂದು ಪರಿಗಣಿಸಲಾಗುತ್ತಿತ್ತು. ಇತರ ಫರೋಹರಂತೆ ಇವನು ಸಹ ತನ್ನ ಸ್ವಂತ ಪ್ರತಿಮೆಯನ್ನು ಆರಾಧಿಸುತ್ತಿದ್ದಿರಬಹುದು. ಅವನ ಮಾತೇ ವೇದವಾಕ್ಯವಾಗಿತ್ತು. ಅವನು ಹೇಳಿದ್ದೇ ನಡೆಯುತ್ತಿತ್ತು ಮತ್ತು ಏನು ಮಾಡಬೇಕೆಂದು ಅವನಿಗೆ ಯಾರೂ ಹೇಳುವಂತಿರಲಿಲ್ಲ. ಇಂತಹ ಒಬ್ಬ ಪ್ರಭಾವಶಾಲಿ, ಅಹಂಕಾರಿ, ಹಠಮಾರಿ ವ್ಯಕ್ತಿಯ ಸಮ್ಮುಖಕ್ಕೆ ದೀನ ಕುರುಬನಾಗಿದ್ದ ಮೋಶೆ ಯಾವುದೇ ಆಮಂತ್ರಣವಿಲ್ಲದೆ, ಸ್ವಾಗತವಿಲ್ಲದೆ ಪದೇಪದೇ ಹೋಗಬೇಕಾಗುತ್ತಿತ್ತು. ಮೋಶೆ ಅಲ್ಲಿ ಏನನ್ನು ಮುಂತಿಳಿಸಿದನು? ಧ್ವಂಸಕಾರಿ ಬಾಧೆಗಳನ್ನೇ. ಅವನು ಫರೋಹನ ಮುಂದಿಟ್ಟ ಬೇಡಿಕೆ ಯಾವುದು? ಲಕ್ಷಾಂತರ ಗುಲಾಮರಿಗೆ ದೇಶಬಿಟ್ಟು ಹೋಗಲು ಅನುಮತಿ ನೀಡಬೇಕೆಂದೇ. ಹೀಗಿರುವಾಗ ಮೋಶೆಗೆ ಧೈರ್ಯದ ಅಗತ್ಯವಿತ್ತೋ? ಖಂಡಿತವಾಗಿ!—ಅರ. 12:3; ಇಬ್ರಿ. 11:27.

(ವಿಮೋಚನಕಾಂಡ 10:24-26) ಆಗ ಫರೋಹನು ಮೋಶೆಯನ್ನು ಕರಸಿ—ನೀವು ಹೋಗಿ ಯೆಹೋವನಿಗೆ ಆರಾಧನೆ ಮಾಡಿ ಬರಬಹುದು; ನಿಮ್ಮ ಮನೆಗಳಿಗೆ ಸೇರಿದವರೂ ಹೋಗಬಹುದು; ನಿಮ್ಮ ಕುರಿದನಗಳನ್ನು ಮಾತ್ರ ಇಲ್ಲೇ ಬಿಟ್ಟುಹೋಗಬೇಕು ಅಂದನು. 25 ಅದಕ್ಕೆ ಮೋಶೆ—ನಮ್ಮ ದೇವರಾದ ಯೆಹೋವನಿಗೆ ನಾವು ಯಜ್ಞಹೋಮಗಳನ್ನು ಮಾಡುವಂತೆ ಬೇಕಾದ ಪಶುಗಳನ್ನು 26 ಮಾತ್ರವಲ್ಲದೆ ನಮ್ಮ ಎಲ್ಲಾ ಪಶುಗಳನ್ನೂ ಸಹ ತೆಗೆದುಕೊಂಡು ಹೋಗುವ ಹಾಗೆ ನಮಗೆ ಅಪ್ಪಣೆ ಕೊಡಬೇಕು; ಒಂದು ಗೊರಸೆಯನ್ನಾದರೂ ನಾವು ಬಿಟ್ಟು ಹೋಗುವದಕ್ಕಾಗದು; ಆ ಪಶುಗಳಿಂದಲೇ ನಮ್ಮ ದೇವರಾದ ಯೆಹೋವನಿಗೆ ಯಜ್ಞಮಾಡಬೇಕಲ್ಲವೇ; ಯಾವ ಪಶುಗಳನ್ನೂ ಅರ್ಪಿಸಬೇಕೋ ಅದು ನಾವು ಅಲ್ಲಿಗೆ ಸೇರುವದಕ್ಕೆ ಮುಂಚೆ ನಮಗೆ ತಿಳಿಯದು ಅಂದನು.

(ವಿಮೋಚನಕಾಂಡ 10:28) ಅವನು ಮೋಶೆಗೆ—ನನ್ನ ಬಳಿಯಿಂದ ಹೋಗು; ಇನ್ನು ಮುಂದೆ ನನ್ನ ಮುಖದೆದುರಿಗೆ ಬರಲೇ ಕೂಡದು; ಎಚ್ಚರ; ತಿರಿಗಿ ಸನ್ನಿಧಿಗೆ ಬಂದರೆ ಮರಣದಂಡನೆ ಆಗುವದು ಎಂದು ಹೇಳಿದನು.

(ವಿಮೋಚನಕಾಂಡ 11:4-8) ಮೋಶೆ ಫರೋಹನಿಗೆ—ಯೆಹೋವನು ಅಪ್ಪಣೆ ಮಾಡುವದೇನಂದರೆ—ನಾನು ಮಧ್ಯರಾತ್ರಿಯಲ್ಲಿ ಐಗುಪ್ತ್ಯರ ನಡುವೆ ಹಾದುಹೋಗುವೆನು; 5 ಆಗ ಸಿಂಹಾಸನದ ಮೇಲೆ ಕೂತಿರುವ ಫರೋಹನ ಚೊಚ್ಚಲುಮಗನು ಮೊದಲುಗೊಂಡು ಬೀಸುವಕಲ್ಲಿನ ಹಿಂದೆ ಕೂತಿರುವ ದಾಸಿಯ ಚೊಚ್ಚಲುಮಗನ ವರೆಗೂ ಐಗುಪ್ತದೇಶದಲ್ಲಿ ಚೊಚ್ಚಲುಮಕ್ಕಳೆಲ್ಲರೂ ಸಾಯುವರು; ಪಶುಗಳಲ್ಲೂ ಚೊಚ್ಚಲಾದವುಗಳೆಲ್ಲಾ ಸಾಯುವವು; 6 ಆಗ ಐಗುಪ್ತದೇಶದಲ್ಲೆಲ್ಲಾ ದೊಡ್ಡ ಗೋಳಾಟವುಂಟಾಗುವದು; ಅಂಥ ಗೋಳಾಟ ಈ ವರೆಗೆ ಎಂದೂ ಆಗಿಲ್ಲ, ಮುಂದೆಯೂ ಆಗುವದಿಲ್ಲ. 7 ಆದರೆ ಐಗುಪ್ತ್ಯರಿಗೂ ಇಸ್ರಾಯೇಲ್ಯರಿಗೂ ಯೆಹೋವನು ವ್ಯತ್ಯಾಸಮಾಡಿದ್ದಾನೆಂಬದು ನಿಮಗೆ ತಿಳಿಯುವಂತೆ ಇಸ್ರಾಯೇಲ್ಯರಲ್ಲಿರುವ ಮನುಷ್ಯರ ಮೇಲಾಗಲಿ ಪಶುಗಳ ಮೇಲಾಗಲಿ ಒಂದು ನಾಯಿಯಾದರೂ ಬೊಗಳುವದಿಲ್ಲ. 8 ಆಗ ನಿನ್ನ ಪರಿವಾರದವರಾದ ಇವರೆಲ್ಲರೂ ನನ್ನ ಬಳಿಗೆ ಬಂದು ಅಡ್ಡಬಿದ್ದು—ನೀನೂ ನಿನ್ನ ಅಧೀನದಲ್ಲಿರುವ ಜನರೆಲ್ಲರೂ ನಮ್ಮನ್ನು ಬಿಟ್ಟುಹೋಗಬೇಕೆಂದು ಬೇಡುವರು; ಆ ಮೇಲೆ ನಾನು ಹೊರಟುಹೋಗುವೆನು ಎಂದು ಹೇಳಿದನು. ಮೋಶೆ ಈ ಮಾತನ್ನು ಹೇಳಿ ಕಿಡಿಕಿಡಿಯಾಗಿ ಫರೋಹನನ್ನು ಬಿಟ್ಟು ಹೊರಟುಹೋದನು.

it-2-E ಪುಟ 436 ಪ್ಯಾರ 4

ಮೋಶೆ

ಫರೋಹನ ಮುಂದೆ ಹೋಗೋಕೆ ಧೈರ್ಯ ಮತ್ತು ನಂಬಿಕೆ ಬೇಕಿತ್ತು. ಮೋಶೆ ಮತ್ತು ಆರೋನನಿಗೆ ಯೆಹೋವನಿಂದ ಸಿಕ್ಕ ಬಲದಿಂದಲೇ ಫರೋಹನ ಮುಂದೆ ಹೋಗಿ ನಿಲ್ಲೋಕೆ ಸಾಧ್ಯವಾಯ್ತು. ಅವ್ರಿಬ್ಬರಿಗೆ ಯೆಹೋವ ತನ್ನ ಪವಿತ್ರಾತ್ಮ ಶಕ್ತಿ ಕೊಟ್ಟನು. ಆಗಿನ ಕಾಲದಲ್ಲಿ ಬೇರೆಲ್ಲಾ ದೇಶಗಳಿಗಿಂತ ಶಕ್ತಿಶಾಲಿಯಾಗಿದ್ದ, ಲೋಕಶಕ್ತಿ ಈಜಿಪ್ಟಿನ ರಾಜ ಫರೋಹನ ಆಸ್ಥಾನದ ಬಗ್ಗೆ ಸ್ವಲ್ಪ ಊಹಿಸಿ. ಅಲ್ಲಿ ವೈಭವಯುತ ಸಿಂಹಾಸನದ ಮೇಲೆ ಅಹಂಕಾರಿಯಾದ, ತನ್ನನ್ನೇ ದೇವರೆಂದು ನೆನಸೋ ಫರೋಹ ಕೂತಿದ್ದಾನೆ. ಅವ್ನ ಸುತ್ತ ಸಲಹೆಗಾರರು, ಮಿಲಿಟರಿ ಅಧಿಕಾರಿಗಳು, ಕಾವಲುಗಾರರು ಮತ್ತು ಆಳುಗಳು ಇದ್ದಾರೆ. ಅಷ್ಟೇ ಅಲ್ಲ, ಮೋಶೆಯ ವಿರೋಧಿಗಳಲ್ಲಿ ಪ್ರಮುಖರಾದ ಧಾರ್ಮಿಕ ಮುಖಂಡರು, ಮಂತ್ರತಂತ್ರಗಳನ್ನು ಮಾಡುತ್ತಿದ್ದ ಜೋಯಿಸರು, ಪಂಡಿತರು ಇದ್ದಾರೆ. ಫರೋಹನಷ್ಟೇ ಇವರು ಸಹ ಈಜಿಪ್ಟಿನಲ್ಲಿ ಪ್ರಭಾವಿತ ವ್ಯಕ್ತಿಗಳಾಗಿದ್ರು. ಫರೋಹನ ಪಕ್ಷವಹಿಸಿದ್ರೆ ಈಜಿಪ್ಟಿನ ದೇವರುಗಳಿಗೆ ಬೆಂಬಲ ಕೊಟ್ಟಂತಾಗುತ್ತೆ ಅಂತ ನೆನಸುತ್ತಿದ್ರು. ಇಂಥವ್ರ ಮುಂದೆ ಮೋಶೆ ಮತ್ತು ಆರೋನ ಪದೇಪದೇ ಹೋಗ್ಬೇಕಾಗಿತ್ತು. ಪ್ರತಿ ಸಲ ಅವ್ರಿಬ್ಬರು ಬಂದಾಗ್ಲೂ ಫರೋಹನ ಹೃದಯ ಇನ್ನಷ್ಟು ಕಠಿಣವಾಗ್ತಿತ್ತು. ಯಾಕಂದ್ರೆ ಅವನ ಅಧಿಕಾರದ ಕೆಳಗಿದ್ದ ಇಬ್ರಿಯ ಗುಲಾಮರನ್ನು ಬಿಡುಗಡೆ ಮಾಡಬಾರದೆಂದು ಅವನು ದೃಢತೀರ್ಮಾನ ಮಾಡಿದ್ದನು. ಎಂಟನೇ ಬಾಧೆಯ ಬಗ್ಗೆ ಮೋಶೆ ಮತ್ತು ಆರೋನ ತಿಳಿಸಿದ ಮೇಲೆ ಫರೋಹನ ಸನ್ನಿಧಿಯಿಂದ ಅವರನ್ನು ಓಡಿಸಲಾಯಿತು. ಒಂಬತ್ತನೇ ಬಾಧೆಯ ನಂತ್ರವಂತೂ ಫರೋಹ ಅವ್ರಿಬ್ಬರಿಗೆ ‘ಇನ್ನೊಂದ್‌ ಸಲ ನನಗೆ ಕಾಣಿಸಿಕೊಂಡ್ರೆ ಮರಣದಂಡನೆ ಗ್ಯಾರಂಟಿ’ ಅಂತ ಧಮಕಿ ಹಾಕಿದ.—ವಿಮೋ 10:11, 28.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ವಿಮೋಚನಕಾಂಡ 10:1, 2) ತರುವಾಯ ಯೆಹೋವನು ಮೋಶೆಗೆ ಇಂತೆಂದನು—ಫರೋಹನ ಬಳಿಗೆ ತಿರಿಗಿ ಹೋಗು. ನಾನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ಈ ಮಹತ್ಕಾರ್ಯಗಳನ್ನು ನಡಿಸುವದಕ್ಕೆ ಆಸ್ಪದವಾಗುವದಕ್ಕೂ 2 ಇಸ್ರಾಯೇಲ್ಯರು ತಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ನಾನು ಐಗುಪ್ತ್ಯರ ನಡುವೆ ನಡಿಸಿರುವ ಮಹತ್ಕಾರ್ಯಗಳನ್ನು ವಿವರಿಸಿ—ಯೆಹೋವನು ಐಗುಪ್ತ್ಯರನ್ನು ತನಗೆ ಇಷ್ಟ ಬಂದಂತೆ ಆಡಿಸಿ ಶಿಕ್ಷಿಸಿದನು ಎಂಬದಾಗಿ ತಿಳಿಸುವದಕ್ಕೂ ನಾನು ಫರೋಹನ ಹೃದಯವನ್ನೂ ಅವನ ಪರಿವಾರದವರ ಹೃದಯಗಳನ್ನೂ ಮೊಂಡುಮಾಡಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳಿಂದ ನೀವು ನನ್ನನ್ನೇ ಯೆಹೋವನೆಂದು ತಿಳುಕೊಳ್ಳುವಿರಿ.

ಕಾವಲಿನಬುರುಜು95 9/1 ಪುಟ 11 ಪ್ಯಾರ 11

ಸುಳ್ಳು ದೇವರುಗಳ ವಿರುದ್ಧ ಸಾಕ್ಷಿಗಳು

11 ಇಸ್ರಾಯೇಲ್ಯರು ಇನ್ನೂ ಐಗುಪ್ತದಲಿದ್ಲಾಗ, ಯೆಹೋವನು ಮೋಶೆಯನ್ನು ಫರೋಹನ ಬಳಿಗೆ ಕಳುಹಿಸಿ ಹೇಳಿದ್ದು: “ಫರೋಹನ ಬಳಿಗೆ ತಿರಿಗಿ ಹೋಗು. ನಾನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ಈ ಮಹತ್ಕಾರ್ಯಗಳನ್ನು ನಡಿಸುವದಕ್ಕೆ ಆಸ್ಪದವಾಗುವದಕ್ಕೂ ಇಸ್ರಾಯೇಲ್ಯರು ತಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ನಾನು ಐಗುಪ್ತ್ಯರ ನಡುವೆ ನಡಿಸಿರುವ ಮಹತ್ಕಾರ್ಯಗಳನ್ನು ವಿವರಿಸಿ—ಯೆಹೋವನು ಐಗುಪ್ತ್ಯರನ್ನು ತನಗೆ ಇಷ್ಟ ಬಂದಂತೆ ಆಡಿಸಿ ಶಿಕ್ಷಿಸಿದನು ಎಂಬದಾಗಿ ತಿಳಿಸುವದಕ್ಕೂ ನಾನು ಫರೋಹನ ಹೃದಯವನ್ನೂ ಅವನ ಪರಿವಾರದವರ ಹೃದಯಗಳನ್ನೂ ಮೊಂಡಮಾಡಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳಿಂದ ನೀವು ನನ್ನನ್ನೇ ಯೆಹೋವನೆಂದು ತಿಳುಕೊಳ್ಳುವಿರಿ.” (ವಿಮೋಚನಕಾಂಡ 10:1, 2) ವಿಧೇಯ ಇಸ್ರಾಯೇಲ್ಯರು ತಮ್ಮ ಮಕ್ಕಳಿಗೆ ಯೆಹೋವನ ಬಲಿಷ್ಠ ಕೃತ್ಯಗಳ ಕುರಿತು ಹೇಳುತ್ತಿದ್ದರು. ಪ್ರತಿಯಾಗಿ, ಅವರ ಮಕ್ಕಳು ತಮ್ಮ ಮಕ್ಕಳಿಗೆ ಅವುಗಳ ಕುರಿತು ಹೇಳುತ್ತಿದ್ದರು, ಮತ್ತು ಹೀಗೆ ತಲತಲಾಂತರಗಳ ವರೆಗೆ ಅದನ್ನು ಮಾಡಸಾಧ್ಯವಿತ್ತು. ಹೀಗೆ, ಯೆಹೋವನ ಪ್ರಬಲ ಕಾರ್ಯಗಳನ್ನು ಜ್ಞಾಪಿಸಿಕೊಳ್ಳಬಹುದಿತ್ತು. ತದ್ರೀತಿಯಲ್ಲಿ ಇಂದು, ತಮ್ಮ ಮಕ್ಕಳಿಗೆ ಸಾಕ್ಷಿನೀಡುವ ಜವಾಬ್ದಾರಿಯು ಹೆತ್ತವರಿಗಿದೆ.—ಧರ್ಮೋಪದೇಶಕಾಂಡ 6:4-7; ಜ್ಞಾನೋಕ್ತಿ 22:6.

(ವಿಮೋಚನಕಾಂಡ 11:7) ಆದರೆ ಐಗುಪ್ತ್ಯರಿಗೂ ಇಸ್ರಾಯೇಲ್ಯರಿಗೂ ಯೆಹೋವನು ವ್ಯತ್ಯಾಸಮಾಡಿದ್ದಾನೆಂಬದು ನಿಮಗೆ ತಿಳಿಯುವಂತೆ ಇಸ್ರಾಯೇಲ್ಯರಲ್ಲಿರುವ ಮನುಷ್ಯರ ಮೇಲಾಗಲಿ ಪಶುಗಳ ಮೇಲಾಗಲಿ ಒಂದು ನಾಯಿಯಾದರೂ ಬೊಗಳುವದಿಲ್ಲ.

it-1-E ಪುಟ 783 ಪ್ಯಾರ 5

ಈಜಿಪ್ಟಿನಿಂದ ಇಸ್ರಾಯೇಲ್ಯರ ಬಿಡುಗಡೆ

ಯೆಹೋವ ತನ್ನ ಶಕ್ತಿಯನ್ನು ಅದ್ಭುತವಾಗಿ ಪ್ರದರ್ಶಿಸುವ ಮೂಲಕ ತನ್ನ ಹೆಸ್ರನ್ನು ಮಹಿಮೆಪಡಿಸಿ ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಿದನು. ಕೆಂಪು ಸಮುದ್ರದ ಆಚೆಯ ತೀರಕ್ಕೆ ಸುರಕ್ಷಿತವಾಗಿ ದಾಟಿದ ಮೇಲೆ ಮೋಶೆ ಮತ್ತು ಇಸ್ರಾಯೇಲ್ಯರು ಯೆಹೋವನಿಗೆ ಒಂದು ಕೀರ್ತನೆಯನ್ನು ಹಾಡಿದ್ರು. ಆಗ ಪ್ರವಾದಿನಿಯಾಗಿದ್ದ ಮೋಶೆಯ ಅಕ್ಕ ಮಿರ್ಯಾಮಳು ಬೇರೆ ಸ್ತ್ರೀಯರ ಜೊತೆ ಸೇರಿ ಕೈಯಲ್ಲಿ ದಮ್ಮಡಿಯನ್ನು ಹಿಡುಕೊಂಡು ನೃತ್ಯ ಮಾಡುತ್ತಾ ಈ ಪುರುಷರು ಹಾಡುತ್ತಿದ್ದ ಪಲ್ಲವಿ ಹಾಡಿದ್ಳು. (ವಿಮೋ 15:1, 20, 21) ಇಸ್ರಾಯೇಲ್ಯರಿಗೆ ಈಗ ತಮ್ಮ ವೈರಿಗಳಿಂದ ಸಂಪೂರ್ಣ ಬಿಡುಗಡೆ ಸಿಕ್ಕಿತ್ತು. ಅವ್ರು ಈಜಿಪ್ಟಿನಿಂದ ಹೊರಬರುತ್ತಿದ್ದಾಗ ಅವ್ರಿಗೆ ಮನುಷ್ಯನಿಂದಾಗಲಿ ಪ್ರಾಣಿಗಳಿಂದಾಗಲಿ ಯಾವುದೇ ಹಾನಿ ಆಗ್ಲಿಲ್ಲ. ಒಂದು ನಾಯಿ ಕೂಡ ಅವರನ್ನು ನೋಡಿ ಬೊಗಳಲಿಲ್ಲ. (ವಿಮೋ 11:7) ಫರೋಹ ತನ್ನ ಮಿಲಿಟರಿ ಸೈನ್ಯದೊಟ್ಟಿಗೆ ಅವನಾಗಿಯೇ ಕೆಂಪು ಸಮುದ್ರದೊಳಗೆ ನುಗ್ಗಿ ನಾಶವಾದ್ನು ಅಂತ ವಿಮೋಚನಕಾಂಡ ಪುಸ್ತಕದಲ್ಲಿ ತಿಳಿಸಿಲ್ಲ. ಆದ್ರೆ ಕೀರ್ತನೆ 136:15 ರಲ್ಲಿ ಯೆಹೋವನು “ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿಬಿಟ್ಟನು” ಅಂತ ತಿಳ್ಸುತ್ತೆ.

ಜುಲೈ 27-ಆಗಸ್ಟ್‌ 2

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 12

“ಪಸ್ಕ ಹಬ್ಬದ ಮಹತ್ವ”

(ವಿಮೋಚನಕಾಂಡ 12:5-7) ಆ ಮರಿಯು ಪೂರ್ಣಾಂಗವಾದ ಒಂದು ವರುಷದ ಗಂಡಾಗಿರಬೇಕು; ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು. 6 ಈ ತಿಂಗಳಿನ ಹದಿನಾಲ್ಕನೆಯ ದಿನದ ವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೇ ವೇಳೆಯಲ್ಲಿ ಇಸ್ರಾಯೇಲ್ಯರ ಸಮೂಹದವರೆಲ್ಲರು ತಮ್ಮತಮ್ಮ ಕೂಟಗಳಲ್ಲಿ ಕೊಯ್ಯಬೇಕು. 7 ಅವರು ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನವನ್ನು ಮಾಡುವ ಮನೇಬಾಗಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು.

ಕಾವಲಿನಬುರುಜು07 1/1 ಪುಟ 22 ಪ್ಯಾರ 4

“ನೀವು ಬಹಳ ಆನಂದದಿಂದಿರಬೇಕು”

4 ಯೇಸು ಸಾ.ಶ. 33 ರ ನೈಸಾನ್‌ 14 ರಂದು ಮರಣಹೊಂದಿದನು. ಇಸ್ರಾಯೇಲಿನಲ್ಲಿ ನೈಸಾನ್‌ 14 ಹರ್ಷೋಲ್ಲಾಸದಿಂದ ಆಚರಿಸಲಾಗುತ್ತಿದ್ದ ಪಸ್ಕ ಹಬ್ಬದ ದಿನವಾಗಿತ್ತು. ಪ್ರತಿ ವರುಷ ಆ ದಿನದಂದು ಕುಟುಂಬಗಳು ನಿಷ್ಕಳಂಕ ಕುರಿಮರಿಯ ಮಾಂಸವನ್ನು ಭೋಜನಮಾಡುತ್ತಿದ್ದರು. ಈ ವಿಧದಲ್ಲಿ, ಅವರು ಸಾ.ಶ.ಪೂ. 1513 ರ ನೈಸಾನ್‌ 14 ರಂದು ಕುರಿಮರಿಯ ರಕ್ತ ವಹಿಸಿದ ಪಾತ್ರವನ್ನು ಜ್ಞಾಪಿಸಿಕೊಂಡರು. ಅಂದು ಐಗುಪ್ತದವರ ಜ್ಯೇಷ್ಠಪುತ್ರರನ್ನು ಮೃತ್ಯುದೂತನು ಸಂಹರಿಸಿದಾಗ ಇಸ್ರಾಯೇಲ್ಯ ಜ್ಯೇಷ್ಠಪುತ್ರರನ್ನು ಸಂರಕ್ಷಿಸಿದ್ದರಲ್ಲಿ ಕುರಿಮರಿಯ ರಕ್ತವು ಪ್ರಮುಖ ಪಾತ್ರವನ್ನು ವಹಿಸಿತು. (ವಿಮೋಚನಕಾಂಡ 12:1-14) ಆ ಪಸ್ಕದ ಕುರಿಮರಿ ಯೇಸುವಿನ ಮುನ್‌ಛಾಯೆಯಾಗಿತ್ತು. ಅವನ ಕುರಿತು ಅಪೊಸ್ತಲ ಪೌಲನು ಹೇಳಿದ್ದು: “ನಮ್ಮ ಪಸ್ಕದ ಯಜ್ಞದ ಕುರಿಯು ಕೊಯಿದದೆ; ಅದಾವದಂದರೆ ಕ್ರಿಸ್ತನೇ.” (1 ಕೊರಿಂಥ 5:7) ಆ ಪಸ್ಕದ ಕುರಿಮರಿಯ ರಕ್ತದಂತೆ ಯೇಸು ಸುರಿಸಿದ ರಕ್ತವು ಅನೇಕರಿಗೆ ರಕ್ಷಣೆಯನ್ನು ಒದಗಿಸುತ್ತದೆ.—ಯೋಹಾನ 3:16, 36.

(ವಿಮೋಚನಕಾಂಡ 12:12, 13) ಆ ರಾತ್ರಿ ನಾನು ಐಗುಪ್ತ ದೇಶದ ನಡುವೆ ಹಾದುಹೋಗಿ ಮನುಷ್ಯರಲ್ಲಾಗಲಿ ಪಶುಗಳಲ್ಲಾಗಲಿ ಚೊಚ್ಚಲಾಗಿರುವದನ್ನೆಲ್ಲಾ ಸಂಹರಿಸುವೆನು; ಐಗುಪ್ತದೇಶದ ಸಮಸ್ತದೇವತೆಗಳಿಗೂ ಶಿಕ್ಷೆಮಾಡುವೆನು; ನಾನು ಯೆಹೋವನು. 13 [ನೀವು ಬಾಗಲಿಗೆ ಹಚ್ಚಿದ] ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವದಾದ ಕಾರಣ ನಾನು ಅದನ್ನು ಕಂಡು ನಿಮಗೆ ಯಾವ ನಷ್ಟವನ್ನೂ ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಐಗುಪ್ತದವರನ್ನು ಸಂಹರಿಸುವಾಗ ನಿಮಗೆ ಯಾವ ಹಾನಿಯೂ ಉಂಟಾಗುವದಿಲ್ಲ.

it-2-E ಪುಟ 583 ಪ್ಯಾರ 6

ಪಸ್ಕ

ಪಸ್ಕ ಹಬ್ಬದ ಆಚರಣೆಯಲ್ಲಿ ಇದ್ದ ಕೆಲವು ವಿಷ್ಯಗಳನ್ನು ಯೇಸು ನೆರವೇರಿಸಿದನು. ಒಂದು ನೆರವೇರಿಕೆ ಯಾವುದಂದ್ರೆ, ಈಜಿಪ್ಟಿನಲ್ಲಿ ಮನೆಬಾಗಲಿಗೆ ಹಚ್ಚಿದ ರಕ್ತವು ಸಂಹಾರಕ ದೂತನ ಕೈಯಿಂದ ಚೊಚ್ಚಲ ಜೀವಿಗಳು ನಾಶವಾಗದಂತೆ ಕಾಪಾಡಿತು. ಒಂದನೇ ಶತಮಾನದಲ್ಲಿದ್ದ ಅಭಿಷಿಕ್ತ ಕ್ರೈಸ್ತರನ್ನು ಪೌಲನು “ಚೊಚ್ಚಲಮಕ್ಕಳ ಸಭೆ” ಅಂತ ಕರೆದನು. (ಇಬ್ರಿ 12:23) ಮತ್ತು ಅವ್ರನ್ನು ಕ್ರಿಸ್ತನು ತನ್ನ ರಕ್ತದ ಮೂಲಕ ಕಾಪಾಡಿದನು. (1ಥೆಸ 1:10; ಎಫೆ 1:7) ಪಸ್ಕಹಬ್ಬದ ಕುರಿಯ ಒಂದು ಮೂಳೆಯೂ ಮುರಿದು ಹೋಗಬಾರದಿತ್ತು. ಅದೇ ರೀತಿಯಲ್ಲಿ ಯೇಸುವಿನ ಒಂದು ಮೂಳೆಯೂ ಮುರಿದು ಹೋಗಲ್ಲ ಅಂತ ಪ್ರವಾದನೆ ಇತ್ತು. ಇದು ಆತ ಮರಣ ಹೊಂದಿದಾಗ ನೆರವೇರಿತು. (ಕೀರ್ತ 34:20; ಯೋಹಾ 19:36) ಯೆಹೂದಿಗಳು ಶತಮಾನಗಳಿಂದ ಆಚರಿಸುತ್ತ ಬಂದಿದ್ದ ಈ ಪಸ್ಕ ಹಬ್ಬವು, ಧರ್ಮಶಾಸ್ತ್ರವು ತಿಳಿಸಿದ ಮುಂದೆ ಬರಲಿದ್ದ ಒಳ್ಳೆಯ ವಿಷಯಗಳ ಛಾಯೆಯಲ್ಲಿ ಒಂದು ವಿಷ್ಯವಾಗಿತ್ತು. ಮತ್ತು ಇದು “ದೇವರ ಕುರಿಮರಿ” ಆಗಿದ್ದ ಯೇಸು ಕ್ರಿಸ್ತನನ್ನು ಗುರುತಿಸಿತು.—ಇಬ್ರಿ 10:1; ಯೋಹಾ 1:29.

(ವಿಮೋಚನಕಾಂಡ 12:24-28ಎ) ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವೆಂದು ಆಚರಿಸಬೇಕು. 25 ಯೆಹೋವನು ತನ್ನ ಮಾತಿನ ಮೇರೆಗೆ ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ ಈ ಆಚಾರವನ್ನು ನಡಿಸಬೇಕು. 26 ಮುಂದೆ ನಿಮ್ಮ ಮಕ್ಕಳು—ನೀವು ನಡಿಸುವ ಈ ಆಚಾರವೇನೆಂದು ನಿಮ್ಮನ್ನು ಕೇಳುವಾಗ 27 ನೀವು ಅವರಿಗೆ—ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತದೇಶದಲ್ಲಿದ್ದ ಇಸ್ರಾಯೇಲ್ಯರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮವರನ್ನು ಉಳಿಸಿದದರಿಂದ ನಾವು ಯೆಹೋವನ ಪಸ್ಕವೆಂಬ ಈ ಯಜ್ಞಾಚಾರವನ್ನು ನಡಿಸುವದುಂಟು ಎಂದು ಹೇಳಬೇಕು ಅಂದನು. 28 ಜನರು ತಲೆಬಾಗಿ ನಮಸ್ಕರಿಸಿದರು.

ಕಾವಲಿನಬುರುಜು13 12/15 ಪುಟ 19-20 ಪ್ಯಾರ 13-14

‘ಆ ದಿನ ನಿಮಗೆ ಜ್ಞಾಪಕಾರ್ಥವಾಗಿರಬೇಕು’

13 ಇಸ್ರಾಯೇಲ್ಯರು ತಮ್ಮ ಮಕ್ಕಳಿಗೆ ಪಸ್ಕದ ಮಹತ್ವಪೂರ್ಣ ಪಾಠಗಳನ್ನು ಕಲಿಸುವ ಮೂಲಕ ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತಿದ್ದರು. ಆ ಪಾಠಗಳಲ್ಲಿ ಒಂದು ಯಾವುದೆಂದರೆ, ಯೆಹೋವನು ತನ್ನ ಆರಾಧಕರನ್ನು ಸಂರಕ್ಷಿಸಶಕ್ತನು ಎಂದೇ. ಯೆಹೋವನು ಯಾರಿಗೂ ಅರ್ಥವಾಗದ, ಭಾವರಹಿತ ದೇವರಲ್ಲ ಬದಲಾಗಿ ನೈಜ, ಜೀವಂತ ದೇವರಾಗಿದ್ದು ತನ್ನ ಜನರ ಬಗ್ಗೆ ಆಸಕ್ತಿತೋರಿಸಿ ಅವರಿಗಾಗಿ ಕ್ರಿಯೆಗೈಯುವಾತನು. ಇದನ್ನು ಆತನು ರುಜುಪಡಿಸಿದ್ದು “ಐಗುಪ್ತ್ಯರನ್ನು ಸಂಹರಿಸಿ” ಇಸ್ರಾಯೇಲ್ಯರ ಚೊಚ್ಚಲು ಮಕ್ಕಳನ್ನು ಸಂರಕ್ಷಿಸಿ, ಜೀವಂತವಾಗಿಡುವ ಮೂಲಕ. ಇದನ್ನು ಮಕ್ಕಳಿಗೆ ಕಲಿಸಲಾಯಿತು.

14 ಇಂದು ಕ್ರೈಸ್ತ ಹೆತ್ತವರು ಪ್ರತಿ ವರ್ಷ ತಮ್ಮ ಮಕ್ಕಳಿಗೆ ಆ ಪಸ್ಕ ಅಂದರೇನು ಎಂಬದನ್ನು ನೆನಪುಹುಟ್ಟಿಸುವುದಿಲ್ಲ. ಆದರೆ ಆ ಪಾಠವನ್ನು ಅಂದರೆ ದೇವರು ತನ್ನ ಜನರನ್ನು ಸಂರಕ್ಷಿಸುತ್ತಾನೆ ಎಂಬದನ್ನು ನಿಮ್ಮ ಮಕ್ಕಳಿಗೆ ಕಲಿಸುತ್ತೀರೊ? ಯೆಹೋವನು ಈಗಲೂ ತನ್ನ ಜನರ ಸಂರಕ್ಷಕನೆಂಬ ನಿಮ್ಮ ದೃಢ ನಿಶ್ಚಿತಾಭಿಪ್ರಾಯವನ್ನು ಅವರಿಗೆ ತೋರಿಸುತ್ತೀರೊ? (ಕೀರ್ತ. 27:11; ಯೆಶಾ. 12:2) ಇದನ್ನು ದೊಡ್ಡ ಭಾಷಣ ಬಿಗಿದು ಅಲ್ಲ ಬದಲಾಗಿ ಮಕ್ಕಳ ಜೊತೆ ಹರ್ಷಭರಿತ ಸಂಭಾಷಣೆಯ ರೂಪದಲ್ಲಿ ಮಾಡುತ್ತೀರೊ? ನಿಮ್ಮ ಕುಟುಂಬದ ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸುವ ಸಲುವಾಗಿ ಆ ಪಾಠವನ್ನು ಅವರಿಗೆ ಕಲಿಸಲು ಪ್ರಯತ್ನ ಮಾಡಿ.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

(ವಿಮೋಚನಕಾಂಡ 12:12) ಆ ರಾತ್ರಿ ನಾನು ಐಗುಪ್ತ ದೇಶದ ನಡುವೆ ಹಾದುಹೋಗಿ ಮನುಷ್ಯರಲ್ಲಾಗಲಿ ಪಶುಗಳಲ್ಲಾಗಲಿ ಚೊಚ್ಚಲಾಗಿರುವದನ್ನೆಲ್ಲಾ ಸಂಹರಿಸುವೆನು; ಐಗುಪ್ತದೇಶದ ಸಮಸ್ತದೇವತೆಗಳಿಗೂ ಶಿಕ್ಷೆಮಾಡುವೆನು; ನಾನು ಯೆಹೋವನು.

it-2-E ಪುಟ 582 ಪ್ಯಾರ 2

ಪಸ್ಕ

ಈಜಿಪ್ಟ್‌ನಲ್ಲಿ ಸಂಭವಿಸಿದ ಹತ್ತು ಬಾಧೆಗಳು ಈಜಿಪ್ಟಿನ ದೇವರುಗಳಿಗೆ ಏನೂ ಶಕ್ತಿ ಇಲ್ಲ ಅನ್ನೋದನ್ನು ತೋರಿಸಿಕೊಟ್ಟವು. ಅದ್ರಲ್ಲೂ ಚೊಚ್ಚಲ ಜೀವಿಗಳ ಸಾವಾಗಿದ್ದ ಹತ್ತನೇ ಬಾಧೆಯಂತೂ ಇದನ್ನು ಇನ್ನಷ್ಟು ಚೆನ್ನಾಗಿ ರುಜುಪಡಿಸ್ತು. (ವಿಮೋ 12:12) ಈಜಿಪ್ಟಿನವ್ರು ಗಂಡು ಕುರಿಯನ್ನು ‘ರಾ’ ದೇವರಂತ ಪರಿಗಣಿಸ್ತಿದ್ರು. ಹಾಗಾಗಿ ಮನೆಬಾಗಿಲಿಗೆ ಪಸ್ಕದ ಕುರಿಯ ರಕ್ತವನ್ನು ಹಚ್ಚುವುದು ಅವ್ರ ದೃಷ್ಟಿಯಲ್ಲಿ ದೇವ್ರಿಗೆ ಮಾಡೋ ಅವಮಾನ ಆಗಿತ್ತು. ಅವ್ರು ಹೋರಿಗಳನ್ನು ಒಸಿರಿಸ್‌ ದೇವರಂತ ನೆನಸಿ ಪೂಜಿಸ್ತಿದ್ರು. ಹಾಗಾಗಿ ಚೊಚ್ಚಲು ಹೋರಿಗಳು ನಾಶವಾದಾಗ ಒಸಿರಿಸ್‌ ದೇವ್ರ ಮರ್ಯಾದೆ ಹೋದಂತಿತ್ತು. ಫರೋಹನನ್ನೂ ರಾ ದೇವ್ರ ಪುತ್ರನೆಂದು ಅವ್ರು ಪೂಜಿಸ್ತಿದ್ರು. ಅವನ ಚೊಚ್ಚಲ ಮಗ ಸತ್ತುಹೋದಾಗ ರಾ ದೇವ್ರು ಮತ್ತು ಫರೋಹ ಇಬ್ರೂ ಅಸಮರ್ಥರು ಅನ್ನೋದು ಸ್ಪಷ್ಟವಾಗಿ ರುಜುವಾಯ್ತು.

(ವಿಮೋಚನಕಾಂಡ 12:14-16) ಆ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು. ಅದರಲ್ಲಿ ಯೆಹೋವನ ಘನಕ್ಕಾಗಿ ಹಬ್ಬವನ್ನು ಮಾಡಬೇಕು. ಅದನ್ನು ಶಾಶ್ವತನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು. 15 ಏಳು ದಿವಸ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನೆಲ್ಲಾ ನಿಮ್ಮ ಮನೆಗಳೊಳಗಿಂದ ತೆಗೆದುಬಿಡಬೇಕು. ಆ ದಿವಸ ಮೊದಲುಗೊಂಡು ಏಳು ದಿವಸಗಳೊಳಗೆ ಯಾವನಾದರೂ ಹುಳಿಬೆರಸಿದ್ದನ್ನು ತಿಂದರೆ ಅವನು ಇಸ್ರಾಯೇಲ್ಯರಿಂದ ತೆಗೆದುಹಾಕಲ್ಪಡಬೇಕು. 16 ಮೊದಲನೆಯ ದಿವಸದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕು; ಏಳನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆಕೂಡಬೇಕು. ಈ ಎರಡು ದಿವಸಗಳಲ್ಲಿ ಯಾವ ಕೆಲಸವನ್ನು ಮಾಡಕೂಡದು. ಊಟಕ್ಕೆ ಬೇಕಾದದ್ದನ್ನು ಮಾಡಬಹುದೇ ಹೊರತು ಬೇರೆ ಯಾವ ಕೆಲಸವನ್ನೂ ಮಾಡಕೂಡದು.

it-1-E ಪುಟ 504 ಪ್ಯಾರ 1

ಸಭೆ

‘ದೇವಾರಾಧನೆಗಾಗಿ ಕೂಡುತ್ತಿದ್ದ ಸಭೆಯ’ ಒಂದು ವೈಶಿಷ್ಟ್ಯ ಏನಾಗಿತ್ತಂದ್ರೆ ಆ ಸಂದರ್ಭದಲ್ಲಿ ಜನ್ರು ಪ್ರಯಾಸದ ಕೆಲ್ಸ ಮಾಡಬಾರದಾಗಿತ್ತು. ಉದಾಹರಣೆಗೆ, ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ಮೊದಲ್ನೇ ದಿನ ಮತ್ತು ಏಳನೇ ದಿನ ಜನ್ರು ‘ದೇವಾರಾಧನೆಗಾಗಿ ಕೂಡಿಬರಬೇಕಿತ್ತು.’ “ಈ ಎರಡು ದಿವಸಗಳಲ್ಲಿ ಯಾವ ಕೆಲಸವನ್ನು ಮಾಡಕೂಡದು. ಊಟಕ್ಕೆ ಬೇಕಾದದ್ದನ್ನು ಮಾಡಬಹುದೇ ಹೊರತು ಬೇರೆ ಯಾವ ಕೆಲಸವನ್ನೂ ಮಾಡಕೂಡದು” ಅಂತ ಯೆಹೋವ ದೇವ್ರು ಹೇಳಿದ್ದನು. (ವಿಮೋ 12:15, 16) ಆದ್ರೆ ‘ದೇವಾರಾಧನೆಗಾಗಿ ಕೂಡಿಬರುತ್ತಿದ್ದ ಸಭೆಗಳಲ್ಲಿ’ ಯಾಜಕರು ಯೆಹೋವನಿಗೆ ಯಜ್ಞವನ್ನು ಅರ್ಪಿಸುವುದರಲ್ಲಿ ತೊಡಗಿರಬೇಕಿತ್ತು. (ಯಾಜ 23:37, 38) ಅದರರ್ಥ ದಿನ ನಿತ್ಯದ ಸಾಮಾನ್ಯ ಕೆಲಸ ಮಾಡೋದು, ‘ಕೆಲ್ಸ ಮಾಡಬಾರದು’ ಅಂತ ಕೊಟ್ಟ ಆಜ್ಞೆಯ ಉಲ್ಲಂಘನೆ ಆಗಿರಲಿಲ್ಲ. ನಿಜ ಹೇಳಬೇಕಂದ್ರೆ ಜನ್ರು ಕೆಲ್ಸ ಮಾಡಬಾರದಾಗಿತ್ತು ಅನ್ನೋದ್ರ ಅರ್ಥ ಅವ್ರು ಸುಮ್ಮನೆ ಕೂತಿರಬೇಕಿತ್ತು ಅಂತಲ್ಲ. ಬದ್ಲಿಗೆ ಈ ಸಂದರ್ಭಗಳಲ್ಲಿ ಅವ್ರು ದೇವ್ರ ಬಗ್ಗೆ ತಿಳ್ಕೊಂಡು ಅದ್ರಿಂದ ಸಂಪೂರ್ಣ ಪ್ರಯೋಜನ ಪಡ್ಕೊಳ್ಳಬೇಕಿತ್ತು. ಪ್ರತಿವಾರ ಸಬ್ಬತ್‌ ದಿನದಂದು ಆರಾಧನೆಗಾಗಿ ಮತ್ತು ನಿರ್ದೇಶನಗಳನ್ನು ಪಡಕೊಳ್ಳಲಿಕ್ಕಾಗಿ ಜನ್ರು ಸಾರ್ವಜನಿಕವಾಗಿ ಒಟ್ಟುಸೇರಿ ಬರ್ತಿದ್ದರು. ಅಲ್ಲಿ ದೇವ್ರ ವಾಕ್ಯವನ್ನು ಸಾರ್ವಜನಿಕವಾಗಿ ಓದಿ ವಿವರಿಸಲಾಗ್ತಿತ್ತು. ಇದನ್ನೇ ಮುಂದಕ್ಕೆ ಸಭಾಮಂದಿರದಲ್ಲಿಯೂ ಮಾಡಿದ್ರು. (ಅಕಾ 15:21) ಇದ್ರಿಂದ ಏನು ಗೊತ್ತಾಗುತ್ತೆ ಅಂದ್ರೆ ಜನ್ರು ಸಬ್ಬತ್‌ ದಿನದಲ್ಲಾಗಲಿ, ‘ದೇವಾರಾಧನೆಗಾಗಿ ಕೂಡಿಬರುತ್ತಿದ್ದ’ ಸಂದರ್ಭದಲ್ಲಾಗ್ಲಿ ಪ್ರಯಾಸದ ಕೆಲ್ಸ ಮಾಡ್ತಿರಲಿಲ್ಲ. ಬದ್ಲಿಗೆ ತಮ್ಮ ಸೃಷ್ಟಿಕರ್ತನಿಗೆ ಪ್ರಾರ್ಥನೆ ಮಾಡಿ ಆತನ ಬಗ್ಗೆ ಮತ್ತು ಆತನ ಉದ್ದೇಶಗಳ ಬಗ್ಗೆ ಧ್ಯಾನಿಸ್ತಿದ್ರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ