ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr23 ಜುಲೈ ಪು. 1-11
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2023
  • ಉಪಶೀರ್ಷಿಕೆಗಳು
  • ಜುಲೈ 3-9
  • ಜುಲೈ 10-16
  • ಜುಲೈ 17-23
  • ಜುಲೈ 24-30
  • ಜುಲೈ 31-ಆಗಸ್ಟ್‌ 6
  • ಆಗಸ್ಟ್‌ 7-13
  • ಆಗಸ್ಟ್‌ 14-20
  • ಆಗಸ್ಟ್‌ 21-27
  • ಆಗಸ್ಟ್‌ 28-ಸೆಪ್ಟೆಂಬರ್‌ 3
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2023
mwbr23 ಜುಲೈ ಪು. 1-11

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

© 2023 Watch Tower Bible and Tract Society of Pennsylvania

ಜುಲೈ 3-9

ಬೈಬಲಿನಲ್ಲಿರುವ ನಿಧಿ | ಎಜ್ರ 4–6

“ಕೆಲ್ಸದಲ್ಲಿ ತಲೆಹಾಕಬೇಡಿ”

ಕಾವಲಿನಬುರುಜು22.03 ಪುಟ 18 ಪ್ಯಾರ 13

ಜೆಕರ್ಯ ನೋಡಿದ್ದು ನಿಮಗೂ ಕಾಣಿಸ್ತಿದ್ದೀಯಾ?

13 ಆಲಯ ಕಟ್ಟೋ ಕೆಲಸಕ್ಕೆ ನಿಷೇಧ ಹಾಕಿದ್ರೂ ಮಹಾ ಪುರೋಹಿತ ಯೇಷೂವ (ಯೆಹೋಶುವ) ಹಾಗೂ ರಾಜ್ಯಪಾಲ ಜೆರುಬ್ಬಾಬೆಲ್‌ “ದೇವರ ಆಲಯವನ್ನ ಮತ್ತೆ ಕಟ್ಟೋಕೆ ಶುರು ಮಾಡಿದ್ರು.” (ಎಜ್ರ 5:1, 2) ಇದು ಕೆಲವು ಯೆಹೂದ್ಯರಿಗೆ ಸರಿ ಅನಿಸಲಿಲ್ಲ. ಯಾಕಂದ್ರೆ ಯಾರಿಗೂ ಕಾಣದ ಹಾಗೆ ಕಟ್ಟೋಕಾಗಲ್ಲ. ಈ ಆಲಯನ ಕಟ್ಟೋಕೆ ಶುರುಮಾಡಿದ್ರೆ ಅವರ ವಿರೋಧಿಗಳು ಹೇಗಾದ್ರೂ ಮಾಡಿ ಇದನ್ನ ತಡೆಯುತ್ತಿದ್ರು. ಹಾಗಾಗಿ ಯೆಹೋಶುವ ಮತ್ತು ಜೆರುಬ್ಬಾಬೆಲನಿಗೆ ಈ ಕೆಲಸದ ಮೇಲೆ ಯೆಹೋವನ ಆಶೀರ್ವಾದ ಇದೆಯಾ ಅಂತ ತಿಳಿದುಕೊಳ್ಳೋಕೆ ಆಧಾರ ಬೇಕಾಗಿತ್ತು. ಅದು ಅವರಿಗೆ ಸಿಕ್ತು. ಹೇಗೆ?

ಕಾವಲಿನಬುರುಜು86-E 2/1 ಪುಟ 29, ಚೌಕದಲ್ಲಿರೋ ಪ್ಯಾರ 2-3

ಯೆಹೋವನ ಸಹಾಯ ಹಿರಿಯರಿಗಿತ್ತು

ಹಿರಿಯರು ತಮ್ಮ ವಿರೋಧಿಗಳಿಗೆ ಹೇಗೆ ಉತ್ತರ ಕೊಟ್ಟರು? ಒಂದುವೇಳೆ ಹಿರಿಯರು ಈ ವಿರೋಧಿಗಳಿಗೆ ಭಯಪಟ್ಟಿದ್ರೆ ಆಲಯದ ಕೆಲಸ ಅಲ್ಲಿಗೇ ನಿಂತು ಹೋಗ್ತಿತ್ತು ಅಥವಾ ಆ ಅಧಿಕಾರಿಗಳಿಗೆ ಸಿಟ್ಟು ಬರೋ ತರ ನಡ್ಕೊಂಡಿದ್ರೂ ಆ ಕೆಲಸ ನಿಂತು ಹೋಗ್ತಿತ್ತು. ಇದೊಂದು ಕಷ್ಟದ ಸನ್ನಿವೇಶ ಆಗಿದ್ರಿಂದ ಹಿರಿಯರು ತುಂಬ ಜಾಣ್ಮೆಯಿಂದ ನಿರ್ಧಾರ ತಗೋಬೇಕಿತ್ತು. ಹಿರಿಯರು ಕೂಡಲೇ ರಾಜ್ಯಪಾಲನಾಗಿದ್ದ ಜೆರುಬ್ಬಾಬೆಲ್‌ ಮತ್ತು ಮಹಾ ಪುರೋಹಿತನಾದ ಯೇಷೂವನ ಹತ್ರ ಸಲಹೆ ಕೇಳಿ ಪಡ್ಕೊಂಡು ಪತ್ರ ಬರೆದರು. ಆಲಯ ಕಟ್ಟೋಕೆ ಕೋರೆಷ ಮುಂಚೆ ಕೊಟ್ಟಿದ್ದ ಆಜ್ಞೆಯ ಬಗ್ಗೆ ಆ ಅಧಿಕಾರಿಗಳಿಗೆ ನೆನಪಿಸಿದರು. ಪರ್ಶಿಯ ರಾಜ ಕೊಟ್ಟಿರೋ ಆಜ್ಞೆಯನ್ನ ಬದಲಾಯಿಸೋಕೆ ಆಗಲ್ಲ ಅಂತ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವರು ಆ ಆಜ್ಞೆಗೆ ವಿರೋಧವಾಗಿ ನಡ್ಕೊಳ್ಳಲು ಧೈರ್ಯ ತೋರಿಸಲಿಲ್ಲ. ಹೀಗೆ ರಾಜ ದಾರ್ಯಾವೆಷ ಆಲಯ ಕಟ್ಟೋಕೆ ಅನುಮತಿ ಕೊಡೋ ತನಕ ಈ ಕೆಲಸ ಮುಂದುವರಿಯಿತು.—ಎಜ್ರ 5:11-17; 6:6-12.

ಕಾವಲಿನಬುರುಜು22.03 ಪುಟ 15 ಪ್ಯಾರ 7

ಜೆಕರ್ಯ ನೋಡಿದ್ದು ನಿಮಗೂ ಕಾಣಿಸ್ತಿದ್ದೀಯಾ?

7 ಸ್ವಲ್ಪ ದಿನ ಆದಮೇಲೆ ಪರಿಸ್ಥಿತಿ ಬದಲಾಯಿತು. ಕ್ರಿಸ್ತಪೂರ್ವ 520ರಲ್ಲಿ ದಾರ್ಯಾವೆಷನು ಪರ್ಷಿಯದ ರಾಜನಾದ. ಅವನು ರಾಜನಾಗಿ ಎರಡು ವರ್ಷಗಳಾದ ಮೇಲೆ ಆಲಯ ಕಟ್ಟೋ ಕೆಲಸನ ಈ ಮುಂಚೆ ಇದ್ದ ಅಧಿಕಾರಿಗಳು ಅನ್ಯಾಯವಾಗಿ ನಿಲ್ಲಿಸಿಬಿಟ್ಟಿದ್ದಾರೆ ಅಂತ ಅವನಿಗೆ ಗೊತ್ತಾಯ್ತು. ಹಾಗಾಗಿ ದೇವಾಲಯ ಕಟ್ಟಿ ಮುಗಿಸಿ ಅಂತ ಯೆಹೂದ್ಯರಿಗೆ ಆಜ್ಞೆ ಕೊಟ್ಟ. (ಎಜ್ರ 6:1-3) ಇದನ್ನ ಕೇಳಿದಾಗ ಯೆಹೂದ್ಯರಿಗೆ ತುಂಬ ಖುಷಿಯಾಗಿರುತ್ತೆ. ಅಷ್ಟೇ ಅಲ್ಲ, ಯೆಹೂದ್ಯರಿಗೆ ಯಾರೂ ತೊಂದ್ರೆ ಕೊಡಬಾರದು, ಆಲಯದ ಕೆಲಸಕ್ಕೆ ಹಣ, ವಸ್ತುಗಳನ್ನ ಕೊಟ್ಟು ಬೆಂಬಲ ಕೊಡಬೇಕು ಅಂತ ರಾಜ ಹೇಳಿದನು. (ಎಜ್ರ 6:7-12) ಇದರಿಂದ ಯೆಹೂದ್ಯರು ಖುಷಿಖುಷಿಯಿಂದ ಆಲಯ ಕಟ್ಟೋ ಕೆಲಸನ ಮಾಡಿದ್ರು. ನಾಲ್ಕೇ ವರ್ಷದಲ್ಲಿ ಅಂದ್ರೆ ಕ್ರಿಸ್ತಪೂರ್ವ 515ರಲ್ಲಿ ಆಲಯ ಕಟ್ಟಿ ಮುಗಿಸಿದರು.—ಎಜ್ರ 6:15.

ಕಾವಲಿನಬುರುಜು22.03 ಪುಟ 19 ಪ್ಯಾರ 16

ಜೆಕರ್ಯ ನೋಡಿದ್ದು ನಿಮಗೂ ಕಾಣಿಸ್ತಿದ್ದೀಯಾ?

16 ಇವತ್ತು ಯೆಹೋವ ದೇವರು ‘ನಂಬಿಗಸ್ತ ಮತ್ತು ವಿವೇಕಿ ಆದ ಆಳಿನ’ ಮೂಲಕನೂ ನಮಗೆ ನಿರ್ದೇಶನಗಳನ್ನ ಕೊಡುತ್ತಿದ್ದಾನೆ. (ಮತ್ತಾ. 24:45) ಕೆಲವೊಮ್ಮೆ ಈ ಆಳು ಕೊಡೋ ನಿರ್ದೇಶನ ನಮಗೆ ಪೂರ್ತಿಯಾಗಿ ಅರ್ಥ ಆಗದೇ ಹೋಗಬಹುದು. ಉದಾಹರಣೆಗೆ, ನೈಸರ್ಗಿಕ ವಿಪತ್ತುಗಳಾದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ಕೆಲವು ನಿರ್ದೇಶನಗಳನ್ನ ಕೊಡಬಹುದು. ಆದ್ರೆ ‘ಇವೆಲ್ಲಾ ನಾವಿರೋ ಕಡೆ ನಡಿಯಲ್ಲ, ಹಾಗಾಗಿ ಈ ನಿರ್ದೇಶನ ನಮಗೆ ಅವಶ್ಯಕತೆ ಇಲ್ಲ’ ಅಂತ ನಾವು ಅಂದುಕೊಳ್ಳಬಹುದು. ಈ ಕೊರೋನ ಸಮಯದಲ್ಲಿ ನಮಗೆ ಸಿಗೋ ನಿರ್ದೇಶನಗಳನ್ನ ನೋಡುವಾಗ ಅವರು ಅತಿಯಾಗಿ ತಲೆಕೆಡಿಸಿಕೊಂಡಿದ್ದಾರೆ ಅಂತ ನಮಗೆ ಅನಿಸಬಹುದು. ಇನ್ನೂ ಕೆಲವೊಮ್ಮೆ ಇವೆಲ್ಲಾ ನಮಗೆ ವಿಚಿತ್ರ ಅಂತ ಅನಿಸಬಹುದು. ಆದ್ರೆ ಹೀಗೆ ಅನಿಸುವಾಗ ಯೆಹೋಶುವ ಮತ್ತು ಜೆರುಬ್ಬಾಬೆಲ್‌ ಕೊಟ್ಟ ನಿರ್ದೇಶನದಿಂದ ಯೆಹೂದ್ಯರಿಗೆ ಎಷ್ಟು ಒಳ್ಳೇದಾಯ್ತು ಅನ್ನೋದರ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ಅಷ್ಟೇ ಅಲ್ಲ, ಇದೇ ತರ ಬೈಬಲಲ್ಲಿ ಇರೋ ಬೇರೆಬೇರೆ ಘಟನೆಗಳ ಬಗ್ಗೆನೂ ಯೋಚನೆ ಮಾಡಿ. ಆ ಕಾಲದಲ್ಲಿದ್ದ ದೇವಜನರಿಗೂ ಕೆಲವೊಮ್ಮೆ ಯೆಹೋವ ಕೊಟ್ಟ ನಿರ್ದೇಶನಗಳು ಸರಿ ಅನಿಸಲಿಲ್ಲ. ಆದ್ರೂ ಅದನ್ನ ಪಾಲಿಸಿದ್ರಿಂದ ಅವರ ಜೀವ ಕಾಪಾಡಿಕೊಂಡರು.—ನ್ಯಾಯ. 7:7; 8:10.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು93 6/15 ಪುಟ 32 ಪ್ಯಾರ 3-5

ನೀವು ಬೈಬಲಿನಲ್ಲಿ ಭರವಸೆ ಇಡಬಲ್ಲಿರೊ?

ಈ ನಾಣ್ಯವನ್ನು ಈಗ ಟರ್ಕಿಯಾಗಿರುವುದರ ಆಗ್ನೇಯ ಭಾಗದಲ್ಲಿನ ಒಂದು ಪಟ್ಟಣವಾದ ತಾರ್ಸದಲ್ಲಿ ಮಾಡಲಾಗಿತ್ತು. ಸಾ.ಶ.ಪೂ. ನಾಲ್ಕನೇ ಶತಮಾನದಲ್ಲಿ ಪಾರಸಿಯ ರಾಜ್ಯಪಾಲ ಮಾಜೆಯಸ್‌ನ ಆಳಿಕೆಯಲ್ಲಿ ಈ ನಾಣ್ಯವನ್ನು ನಿರ್ಮಿಸಲಾಯಿತು. ಇದು ಆತನನ್ನು “ಹೊಳೆಯ ಈಚೆಯ,” ಅಂದರೆ ಅದು, ಯೂಫ್ರೇಟೀಸ್‌ ಹೊಳೆಯ ಆಚೆಯ, ಪ್ರದೇಶಗಳ ರಾಜ್ಯಪಾಲ ಎಂದು ಗುರುತಿಸುತ್ತದೆ.

ಆದರೆ ಆ ವಾಕ್ಸರಣಿಯು ಯಾಕೆ ಅಭಿರುಚಿಯದ್ದಾಗಿದೆ? ಯಾಕಂದರೆ ಅದೇ ವರ್ಣನೆಯನ್ನು ನಿಮ್ಮ ಬೈಬಲಿನಲ್ಲಿ ನೀವು ಕಂಡುಕೊಳ್ಳುವಿರಿ. ಎಜ್ರ 5:6–6:13 ಪಾರಸಿಯ ರಾಜ ದಾರ್ಯಾವೆಷ ಮತ್ತು ಒಬ್ಬ ತತ್ತೆನೈಯ ಎಂದು ಹೆಸರಿಸಲ್ಪಟ್ಟ ಅಧಿಪತಿಯ ನಡುವೆ ಹೋಲಿಕೆಯನ್ನು ಇಡುತ್ತದೆ. ಆಗಿನ ವಿವಾದವು ಯೆಹೂದ್ಯರು ಯೆರೂಸಲೇಮಿನಲ್ಲಿ ಅವರ ದೇವಾಲಯವನ್ನು ಪುನಃ ಕಟ್ಟುವುದಾಗಿತ್ತು. ಎಜ್ರನು ದೇವರ ನಿಯಮಶಾಸ್ತ್ರದ ಕುಶಲ ನಕಲುಗಾರನಾಗಿದ್ದನು, ಮತ್ತು ಅವನು ಬರೆದಿರುವುದರಲ್ಲಿ ಅವನು ಕರಾರುವಾಕಾಗಿ, ನಿಷ್ಕೃಷ್ಟವಾಗಿ ಇರುವಂತೆ ನೀವು ನಿರೀಕ್ಷಿಸುವಿರಿ. ಎಜ್ರ 5:6 ಮತ್ತು 6:13ರಲ್ಲಿ ತತ್ತೆನೈಯನು “ಹೊಳೆಯ ಈಚೆಯ ಅಧಿಪತಿ” ಎಂಬದಾಗಿ ಕರೆಯಲ್ಪಟ್ಟಿರುವುದನ್ನು ನೀವು ನೋಡುವಿರಿ.

ಎಜ್ರನು ಅದನ್ನು ಸಾಧಾರಣ ಸಾ.ಶ.ಪೂ. 460ರಲ್ಲಿ, ಈ ನಾಣ್ಯವು ಛಾಪಿಸಲ್ಪಡುವ 100 ವರುಷಗಳಷ್ಟು ಮುಂಚೆಯೇ ಬರೆದನು. ಒಬ್ಬ ಪ್ರಾಚೀನ ಅಧಿಕಾರಿಯ ವರ್ಣನೆಯು ಒಂದು ಚಿಕ್ಕ ವಿವರವಾಗಿರುತ್ತದೆ ಎಂದು ಭಾವಿಸುವ ಜನರಿದ್ದಾರೆ. ಆದರೆ ಇಂಥ ಚಿಕ್ಕ ವಿವರಗಳಲ್ಲಿಯೂ ಬೈಬಲ್‌ ಬರಹಗಾರರ ಮೇಲೆ ನೀವು ಆತುಕೊಳ್ಳಬಹುದಾಗುವಲ್ಲಿ, ಅವರು ಬರೆದ ಇನ್ನಿತರ ವಿಷಯಗಳ ಮೇಲೆ ಅದು ನಿಮ್ಮ ಭರವಸೆಯನ್ನು ಹೆಚ್ಚಿಸಬಾರದೆ?

ಜುಲೈ 10-16

ಬೈಬಲಿನಲ್ಲಿರುವ ನಿಧಿ | ಎಜ್ರ 7–8

“ಎಜ್ರನ ನಡೆನುಡಿ ಯೆಹೋವನಿಗೆ ಮಹಿಮೆ ತಂತು”

ಕಾವಲಿನಬುರುಜು00 10/1 ಪುಟ 14 ಪ್ಯಾರ 8

ಫಲಪ್ರದ ಹಾಗೂ ಆನಂದಕರವಾದ ಅಧ್ಯಯನ

8 ಹೌದು, ಯೆಹೋವನ ವಾಕ್ಯಕ್ಕಾಗಿರುವ ನಮ್ಮ ಪ್ರೀತಿಯು, ಹೃದಯದಾಳದಿಂದ ಬರಬೇಕು. ಏಕೆಂದರೆ ಹೃದಯದಿಂದಲೇ ಭಾವನೆಗಳು ಹುಟ್ಟುತ್ತವೆ. ಆದುದರಿಂದ, ನಾವು ಆಗತಾನೇ ಓದಿರುವಂತಹ ಕೆಲವೊಂದು ಭಾಗಗಳ ಕುರಿತು ಆಲೋಚಿಸುವುದರಲ್ಲಿ ಆನಂದವನ್ನು ಪಡೆದುಕೊಳ್ಳಬೇಕು. ಗಹನವಾಗಿರುವಂತಹ ಕೆಲವು ಆತ್ಮಿಕ ವಿಷಯಗಳ ಕುರಿತು ನಾವು ಜಾಗರೂಕತೆಯಿಂದ ಮನನಮಾಡಬೇಕು, ಅವುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳ ಬಗ್ಗೆ ಧ್ಯಾನಿಸಬೇಕು. ಇದು ಶಾಂತವಾಗಿ ಮನನಮಾಡುವುದು ಹಾಗೂ ಪ್ರಾರ್ಥನೆ ಮಾಡುವುದನ್ನು ಕೇಳಿಕೊಳ್ಳುತ್ತದೆ. ದೇವರ ವಾಕ್ಯದ ವಾಚನ ಹಾಗೂ ಅಧ್ಯಯನಕ್ಕಾಗಿ, ನಾವು ಎಜ್ರನಂತೆ ನಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಅವನ ಕುರಿತು ಹೀಗೆ ಬರೆಯಲ್ಪಟ್ಟಿದೆ: “ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಲು ಮತ್ತು ಅದನ್ನು ಅನುಸರಿಸಲು ಹಾಗೂ ಇಸ್ರಾಯೇಲ್ಯರಿಗೆ ಅದರ ವಿಧಿನ್ಯಾಯಗಳನ್ನು ಕಲಿಸಲು ಎಜ್ರನು ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡಿದ್ದನು.” (ಎಜ್ರ 7:10, NW) ಎಜ್ರನು ಯಾವುದಕ್ಕಾಗಿ ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡನೋ ಆ ಮೂರು ಉದ್ದೇಶಗಳನ್ನು ಗಮನಿಸಿರಿ: ಅಭ್ಯಾಸಿಸಲು, ವೈಯಕ್ತಿಕ ಅನ್ವಯವನ್ನು ಮಾಡಿಕೊಳ್ಳಲು, ಹಾಗೂ ಕಲಿಸಲು. ನಾವು ಸಹ ಅವನ ಮಾದರಿಯನ್ನು ಅನುಸರಿಸಬೇಕು.

si-E ಪುಟ 75 ಪ್ಯಾರ 5

ಬೈಬಲಿನ 13ನೇ ಪುಸ್ತಕ—1 ಪೂರ್ವಕಾಲವೃತ್ತಾಂತ

5 ಎಜ್ರನಿಗೆ ಪವಿತ್ರ ಶಕ್ತಿಯನ್ನ ಕೊಟ್ಟು ಯೆಹೋವ ಸಹಾಯ ಮಾಡಿದನು. ದೇವರು ಅವನಿಗೆ ವಿವೇಕ ಕೊಟ್ಟಿದ್ದಾನೆ ಅಂತ ಪರ್ಶಿಯ ರಾಜನಿಗೆ ಗೊತ್ತಾಗಿದ್ರಿಂದ ಯೆಹೂದದ ಮೇಲೆ ಸಂಪೂರ್ಣ ಅಧಿಕಾರ ಎಜ್ರನಿಗೆ ಕೊಟ್ಟನು. (ಎಜ್ರ 7:12-26) ಹೀಗೆ ಎಜ್ರನಿಗೆ ದೇವರಿಂದ ಮತ್ತು ಪರ್ಶಿಯ ರಾಜನಿಂದ ಅಧಿಕಾರ ಸಿಕ್ತು.

ಕಾವಲಿನಬುರುಜು91-E 7/15 ಪುಟ 29

ದೀನತೆ

ಒಳ್ಳೆ ಮಾರ್ಗದರ್ಶನ ಸಿಗುತ್ತೆ. ಆಲಯಕ್ಕೋಸ್ಕರ ಬೇಕಾಗಿದ್ದ ಚಿನ್ನ ಮತ್ತು ಬೆಳ್ಳಿಯನ್ನ ತಗೊಂಡು ಬಾಬೆಲಿಂದ ಎಜ್ರ ಹೊರಟ. ಅವನ ಜೊತೆ ದೇವಜನರೂ ಇದ್ರು. ಆಗ ಅವನು ಜನ್ರಿಗೆ ದೇವರ ಮುಂದೆ ತಮ್ಮನ್ನೇ ತಗ್ಗಿಸಿಕೊಳ್ಳಲು ಉಪವಾಸ ಮಾಡಬೇಕು ಅಂತ ಹೇಳಿದ. ಇದರಿಂದ ಯಾವ ಪ್ರಯೋಜನ ಸಿಕ್ತು? ಆ ಇಡೀ ಪ್ರಯಾಣದಲ್ಲಿ ಶತ್ರುಗಳು ದಾಳಿ ಮಾಡದಂತೆ ಯೆಹೋವ ತನ್ನ ಜನರನ್ನ ಕಾದು ಕಾಪಾಡಿದನು. (ಎಜ್ರ 8:1-14, 21-32) ನಾವು ನೇಮಕಗಳನ್ನ ಮಾಡುವಾಗ ನಮಗೆ ತೋಚಿದಂತೆ ಮಾಡದೇ ದಾನಿಯೇಲ ಮತ್ತು ಎಜ್ರನ ತರ ನಮ್ಮನ್ನ ನಾವು ತಗ್ಗಿಸಿಕೊಳ್ಳಬೇಕು ಮತ್ತು ದೇವರ ಮಾರ್ಗದರ್ಶನವನ್ನ ಪಡೆದುಕೊಳ್ಳಬೇಕು.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು06 1/15 ಪುಟ 19 ಪ್ಯಾರ 11

ಎಜ್ರ ಪುಸ್ತಕದ ಮುಖ್ಯಾಂಶಗಳು

7:28–8:20—ಬಾಬೆಲಿನಲ್ಲಿದ್ದ ಅನೇಕ ಯೆಹೂದ್ಯರು ಎಜ್ರನೊಂದಿಗೆ ಯೆರೂಸಲೇಮಿಗೆ ಹೋಗಲು ಏಕೆ ಹಿಂಜರಿದರು? ಯೆಹೂದ್ಯರ ಮೊದಲ ಗುಂಪು ತಮ್ಮ ಸ್ವದೇಶಕ್ಕೆ ಹಿಂದಿರುಗಿ ಈಗಾಗಲೇ 60 ವರ್ಷಗಳು ಕಳೆದಿದ್ದವು. ಆದರೂ ಯೆರೂಸಲೇಮಿನಲ್ಲಿ ಕೊಂಚ ಮಂದಿಯೇ ನೆಲೆಸಿದ್ದರು. ಯೆರೂಸಲೇಮಿಗೆ ಹಿಂದಿರುಗುವುದಾದರೆ, ಸುಖಕರವಲ್ಲದ ಮತ್ತು ಅಪಾಯಕರವಾದ ಸಂದರ್ಭಗಳ ಕೆಳಗೆ ಹೊಸ ಜೀವನವನ್ನು ನಡೆಸಬೇಕಾಗುತ್ತಿತ್ತು. ಬಾಬೆಲಿನಲ್ಲಿ ಸಮೃದ್ಧಿಯನ್ನು ಅನುಭವಿಸುತ್ತಿದ್ದ ಯೆಹೂದ್ಯರಿಗೆ ಆ ಸಮಯದಲ್ಲಿ ಯೆರೂಸಲೇಮ್‌ ಪಟ್ಟಣವು ಆಕರ್ಷಕವಾದ ಭೌತಿಕ ಪ್ರತೀಕ್ಷೆಗಳನ್ನು ನೀಡಲಿಲ್ಲ. ಹಿಂದಿರುಗಿ ಹೋಗುವ ಪ್ರಯಾಣವು ಸಹ ಅಪಾಯಕರವಾಗಿತ್ತು. ಹಿಂದಿರುಗಿ ಹೋಗುವವರಿಗೆ ಯೆಹೋವನಲ್ಲಿ ಬಲವಾದ ನಂಬಿಕೆ, ಸತ್ಯ ಆರಾಧನೆಗಾಗಿ ಹುರುಪು ಮತ್ತು ಅಲ್ಲಿಗೆ ಸ್ಥಳಾಂತರಿಸಲು ಧೈರ್ಯವು ಬೇಕಾಗಿತ್ತು. ತನ್ನ ಮೇಲಿದ್ದ ಯೆಹೋವನ ಹಸ್ತದಿಂದ ಎಜ್ರನು ಕೂಡ ತನ್ನನ್ನು ಬಲಪಡಿಸಿಕೊಂಡನು. ಎಜ್ರನ ಪ್ರೋತ್ಸಾಹದಿಂದಾಗಿ 1,500 ಕುಟುಂಬಗಳು, ಬಹುಶಃ ಒಟ್ಟು 6,000 ಮಂದಿ ಪ್ರತಿಕ್ರಿಯೆ ತೋರಿಸಿದರು. ಮತ್ತು ಎಜ್ರನು ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡ ಬಳಿಕ, 38 ಮಂದಿ ಲೇವ್ಯರು ಹಾಗೂ 220 ಮಂದಿ ದೇವಸ್ಥಾನದಾಸರು ಪ್ರತಿಕ್ರಿಯೆ ತೋರಿಸಿದರು.

ಜುಲೈ 17-23

ಬೈಬಲಿನಲ್ಲಿರುವ ನಿಧಿ | ಎಜ್ರ 9–10

“ಮಾತು ಕೇಳದೆ ಇದ್ದಿದ್ರಿಂದ ಆದ ದುರಂತ”

ಕಾವಲಿನಬುರುಜು06 1/15 ಪುಟ 20 ಪ್ಯಾರ 1

ಎಜ್ರ ಪುಸ್ತಕದ ಮುಖ್ಯಾಂಶಗಳು

9:1, 2—ಆ ದೇಶದಲ್ಲಿದ್ದ ಜನರೊಂದಿಗೆ ಅಂತರ್ಜಾತಿ ವಿವಾಹವು ಎಷ್ಟು ಗಂಭೀರವಾದ ಬೆದರಿಕೆಯಾಗಿತ್ತು? ಪುನಸ್ಸ್ಥಾಪಿತ ಜನಾಂಗವು, ಮೆಸ್ಸೀಯನು ಬರುವ ವರೆಗೂ ಯೆಹೋವನ ಆರಾಧನೆಯನ್ನು ಕಾಪಾಡಿಕೊಳ್ಳಬೇಕಿತ್ತು. ಆದುದರಿಂದ ಇತರ ನಿವಾಸಿಗಳೊಂದಿಗಿನ ಅಂತರ್ಜಾತಿ ವಿವಾಹವು ಸತ್ಯಾರಾಧನೆಗೆ ದೊಡ್ಡ ಬೆದರಿಕೆಯಾಗಿರಲಿತ್ತು. ಕೆಲವರು ವಿಗ್ರಹಾರಾಧಕ ಜನರೊಂದಿಗೆ ಈಗಾಗಲೇ ವಿವಾಹಮಾಡಿಕೊಂಡಿದ್ದರಿಂದ, ಇಡೀ ಜನಾಂಗವೇ ಕಟ್ಟಕಡೆಗೆ ವಿಧರ್ಮೀ ಜನಾಂಗಗಳೊಂದಿಗೆ ಬೆರೆತುಹೋಗುವ ಸಾಧ್ಯತೆಯಿತ್ತು. ಶುದ್ಧಾರಾಧನೆಯು ಭೂಮಿಯಿಂದಲೇ ಅಳಿದುಹೋಗಸಾಧ್ಯವಿತ್ತು. ಹಾಗಾಗುವಲ್ಲಿ, ಮೆಸ್ಸೀಯನು ಯಾರ ಬಳಿಗೆ ಬರಲಿದ್ದನು? ಆದುದರಿಂದಲೇ ನಡೆದಂಥ ಸಂಗತಿಯನ್ನು ನೋಡಿ ಎಜ್ರನಿಗೆ ಆಘಾತವಾಯಿತು.

ಕಾವಲಿನಬುರುಜು10 7/1 ಪುಟ 16 ಪ್ಯಾರ 6

ಯೆಹೋವನು ನಮ್ಮಿಂದ ಏನು ಕೇಳಿಕೊಳ್ಳುತ್ತಾನೆ?

ನಾವು ಸ್ವಇಚ್ಛೆಯಿಂದ ತೋರಿಸುವ ವಿಧೇಯತೆ ಆಶೀರ್ವಾದಗಳನ್ನೇ ತರುತ್ತದೆ. ಮೋಶೆ ಬರೆದದ್ದು: ‘ನಾನು ನಿಮ್ಮ ಮೇಲಿಗಾಗಿ ಈಗ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಇರಿ.’ (ವಚನ 13) ಹೌದು, ಯೆಹೋವನ ಪ್ರತಿಯೊಂದು ಆಜ್ಞೆ ಅಂದರೆ ಆತನು ನಮ್ಮಿಂದ ಕೇಳಿಕೊಳ್ಳುವ ಪ್ರತಿಯೊಂದೂ ನಮ್ಮ ಒಳಿತಿಗಾಗಿಯೇ ಇದೆ. ಅದರಿಂದ ನಮಗೆ ಕೆಡುಕಾಗಲು ಸಾಧ್ಯವೇ ಇಲ್ಲ ಏಕೆಂದರೆ ಬೈಬಲ್‌ ತಿಳಿಸುವಂತೆ “ದೇವರು ಪ್ರೀತಿಯಾಗಿದ್ದಾನೆ.” (1 ಯೋಹಾನ 4:8) ಆತನು ಕೊಟ್ಟಿರುವ ಆಜ್ಞೆಗಳು ನಮಗೆ ನಿತ್ಯಕ್ಕೂ ಕ್ಷೇಮವನ್ನು ಉಂಟುಮಾಡುವಂಥವುಗಳೇ. (ಯೆಶಾಯ 48:17) ಯೆಹೋವನು ಹೇಳಿದ್ದೆಲ್ಲವನ್ನೂ ಮಾಡುವುದು ಇಂದು ನಮ್ಮನ್ನು ಅನೇಕ ಚಿಂತೆ, ಹತಾಶೆಗಳಿಂದ ಮುಕ್ತಗೊಳಿಸುತ್ತದೆ ಮತ್ತು ಮುಂದೆ ಆತನ ರಾಜ್ಯದಾಳಿಕೆಯ ಅಡಿಯಲ್ಲಿ ಅನಂತ ಆಶೀರ್ವಾದಗಳನ್ನು ತರುತ್ತದೆ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು06 1/15 ಪುಟ 20 ಪ್ಯಾರ 2

ಎಜ್ರ ಪುಸ್ತಕದ ಮುಖ್ಯಾಂಶಗಳು

10:3, 44—ಹೆಂಡತಿಯರೊಂದಿಗೆ ಮಕ್ಕಳನ್ನು ಸಹ ಏಕೆ ಕಳುಹಿಸಿಬಿಡಲಾಯಿತು? ಒಂದುವೇಳೆ ಮಕ್ಕಳನ್ನು ಇಟ್ಟುಕೊಳ್ಳುತ್ತಿದ್ದರೆ, ಹಿಂದೆ ಕಳುಹಿಸಲ್ಪಟ್ಟಿದ್ದ ಹೆಂಡತಿಯರು ಅವರಿಗಾಗಿ ಮರಳಿ ಬರುವ ಸಾಧ್ಯತೆ ಹೆಚ್ಚಾಗಿತ್ತು. ಅಲ್ಲದೆ, ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ಅವರ ತಾಯಂದಿರ ಆರೈಕೆಯು ಆವಶ್ಯಕ.

ಜುಲೈ 24-30

ಬೈಬಲಿನಲ್ಲಿರುವ ನಿಧಿ | ನೆಹೆಮೀಯ 1–2

“ತಕ್ಷಣ ನಾನು ಪ್ರಾರ್ಥನೆ ಮಾಡ್ದೆ”

ಕಾವಲಿನಬುರುಜು08 2/15 ಪುಟ 3 ಪ್ಯಾರ 5

ಯೆಹೋವನನ್ನು ಯಾವಾಗಲೂ ನಿಮ್ಮೆದುರಿಗೆ ಇಟ್ಟುಕೊಳ್ಳಿರಿ

5 ಕೆಲವೊಮ್ಮೆ ನಾವು ದೇವರ ಸಹಾಯಕ್ಕಾಗಿ ಆ ಕೂಡಲೇ ಪ್ರಾರ್ಥನೆಮಾಡಬೇಕಾದೀತು. ಒಂದು ಸಂದರ್ಭದಲ್ಲಿ ಪರ್ಷಿಯದ ರಾಜ ಅರ್ತಷಸ್ತನು, ತನ್ನ ಪಾನಸೇವಕ ನೆಹೆಮೀಯನು ದುಃಖದಿಂದಿರುವುದನ್ನು ಗಮನಿಸಿದನು. “ನಿನ್ನ ಅಪೇಕ್ಷೆಯೇನು”? ಎಂದು ರಾಜನು ಕೇಳಿದನು. ಆ ಕೂಡಲೇ ನೆಹೆಮೀಯನು “ಪರಲೋಕದ ದೇವರನ್ನು ಪ್ರಾರ್ಥಿಸಿ”ದನು. ನೆಹೆಮೀಯನು ಬಹುಶಃ ಮೌನವಾಗಿ ಮಾಡಿದ ಆ ಪ್ರಾರ್ಥನೆಯು ಚುಟುಕಾಗಿದ್ದಿರಬೇಕು. ಆದರೂ ದೇವರು ಅದಕ್ಕೆ ಉತ್ತರಕೊಟ್ಟನು. ಆದ್ದರಿಂದಲೇ ನೆಹೆಮೀಯನಿಗೆ ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟಲು ರಾಜನ ಬೆಂಬಲ ಸಿಕ್ಕಿತು. (ನೆಹೆಮೀಯ 2:1-8ನ್ನು ಓದಿ.) ಹೌದು, ಚುಟುಕಾದ, ಮೌನ ಪ್ರಾರ್ಥನೆ ಸಹ ಪರಿಣಾಮಕಾರಿ ಆಗಿರಬಲ್ಲದು.

ಶುಶ್ರೂಷಾ ಶಾಲೆ ಪುಟ 178 ಪ್ಯಾರ 1

ಆಶುಭಾಷಣ ಮಾಡುವುದು

ನೀವು ನಿಮ್ಮ ನಂಬಿಕೆಗಳ ಕುರಿತು ಪೂರ್ವಸಿದ್ಧತೆಯಿಲ್ಲದೆ ವಿವರಣೆಯನ್ನು ಕೊಡುವಂತೆ ಕೇಳಿಕೊಳ್ಳಲ್ಪಡುವಾಗ, ನಿಮ್ಮ ಹೇಳಿಕೆಗಳು ಪರಿಣಾಮಕಾರಿಯಾಗಿರುವಂತೆ ಯಾವುದು ಸಹಾಯಮಾಡಬಲ್ಲದು? ಅರ್ತಷಸ್ತ ರಾಜನ ಪ್ರಶ್ನೆಗೆ ಉತ್ತರ ಕೊಡುವ ಮೊದಲು ಮೌನವಾಗಿ ಪ್ರಾರ್ಥಿಸಿದ ನೆಹೆಮೀಯನನ್ನು ಅನುಕರಿಸಿರಿ. (ನೆಹೆ. 2:4) ಆಮೇಲೆ, ಥಟ್ಟನೆ ಒಂದು ಮಾನಸಿಕ ಹೊರಮೇರೆಯನ್ನು ಸಿದ್ಧಪಡಿಸಿಕೊಳ್ಳಿರಿ. ಮೂಲಭೂತ ಹೆಜ್ಜೆಗಳನ್ನು ಈ ವಿಧದಲ್ಲಿ ಪಟ್ಟಿಮಾಡಬಹುದು: (1) ವಿವರಣೆಯಲ್ಲಿ ಸೇರಿಸಬೇಕಾದ ಒಂದೊ ಎರಡೊ ಅಂಶಗಳನ್ನು ಆರಿಸಿಕೊಳ್ಳಿರಿ (“ಚರ್ಚೆಗಾಗಿ ಬೈಬಲ್‌ ವಿಷಯಗಳು” ಎಂಬ ಪುಸ್ತಿಕೆಯಲ್ಲಿ ಕಂಡುಬರುವ ಅಂಶಗಳನ್ನು ನೀವು ಉಪಯೋಗಿಸಬಹುದು). (2) ಈ ಅಂಶಗಳನ್ನು ಬೆಂಬಲಿಸಲು ನೀವು ಯಾವ ಶಾಸ್ತ್ರವಚನಗಳನ್ನು ಉಪಯೋಗಿಸುವಿರಿ ಎಂಬುದನ್ನು ನಿರ್ಣಯಿಸಿರಿ. (3) ನಿಮ್ಮ ವಿವರಣೆಯನ್ನು, ವಿಚಾರಿಸುತ್ತಿರುವವನು ಕೇಳಲು ಇಷ್ಟಪಡುವಂತೆ ಮಾಡಲು ಅದನ್ನು ಹೇಗೆ ಸಮಯೋಚಿತ ನಯದಿಂದ ಆರಂಭಿಸಬೇಕೆಂಬುದನ್ನು ಯೋಜಿಸಿರಿ. ಆ ಬಳಿಕ ಮಾತಾಡಲಾರಂಭಿಸಿರಿ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು86-E 2/15 ಪುಟ 25

ಸತ್ಯ ಆರಾಧನೆ ಮತ್ತೆ ಚಿಗುರೊಡೆಯಿತು

ಇಲ್ಲ, ಯೆರೂಸಲೇಮಿಗೆ ಬಂದ ಗತಿಯ ಬಗ್ಗೆ ನೆಹೆಮೀಯ ಸ್ವಲ್ಪ ಸಮಯದಿಂದನೇ “ಹಗಲೂರಾತ್ರಿ” ಪ್ರಾರ್ಥನೆ ಮಾಡ್ತಿದ್ದ. (ನೆಹೆ 1:4, 6) ಯೆರೂಸಲೇಮಿನ ಗೋಡೆಗಳನ್ನ ಮತ್ತೆ ಕಟ್ಟಬೇಕು ಅಂತ ರಾಜ ಅರ್ತಷಸ್ತನ ಹತ್ರ ಹೇಳೋ ಸಮಯ ಬಂದಾಗ ನೆಹೆಮೀಯ ಯಾವಾಗಲೂ ಮಾಡ್ತಿದ್ದ ತರಾನೇ ಮತ್ತೆ ಪ್ರಾರ್ಥನೆ ಮಾಡಿದ. ಯೆರೂಸಲೇಮಿನ ಗೋಡೆಗಳನ್ನ ಮತ್ತೆ ಕಟ್ಟೋಕೆ ರಾಜ ಅನುಮತಿ ಕೊಡೋ ತರ ಯೆಹೋವ ಮಾಡ್ತಾನೆ.

ನಮಗಿರೋ ಪಾಠ: ನೆಹೆಮೀಯ ಮಾರ್ಗದರ್ಶನಕ್ಕಾಗಿ ಯೆಹೋವನ ಹತ್ರ ಪ್ರಾರ್ಥನೆ ಮಾಡಿದ. ದೊಡ್ಡ ದೊಡ್ಡ ತೀರ್ಮಾನಗಳನ್ನ ಮಾಡೋ ಮುಂಚೆ ನಾವೂ ಯೆಹೋವನ ಮಾರ್ಗದರ್ಶನಕ್ಕಾಗಿ ‘ಪಟ್ಟುಬಿಡದೆ ಪ್ರಾರ್ಥನೆ ಮಾಡಬೇಕು.’—ರೋಮ 12:12.

ಜುಲೈ 31-ಆಗಸ್ಟ್‌ 6

ಬೈಬಲಿನಲ್ಲಿರುವ ನಿಧಿ | ನೆಹೆಮೀಯ 3–4

“ನೀವು ಸಾಧಾರಣ ಕೆಲಸಗಳನ್ನ ಮಾಡೋಕೂ ರೆಡಿ ಇದ್ದೀರಾ?”

ಕಾವಲಿನಬುರುಜು06 2/1 ಪುಟ 9 ಪ್ಯಾರ 9

ನೆಹೆಮೀಯ ಪುಸ್ತಕದ ಮುಖ್ಯಾಂಶಗಳು

3:5, 27. ಸತ್ಯಾರಾಧನೆಯ ಹಿತಾಸಕ್ತಿಯಿಂದ ಮಾಡಲ್ಪಡುವ ಶಾರೀರಿಕ ಶ್ರಮದ ಕೆಲಸವನ್ನು ಕೀಳಾದ ಕೆಲಸವೆಂದು ತೆಕೋವದ ‘ಶ್ರೀಮಂತರು’ ನೆನಸಿದಂತೆ ನಾವು ನೆನಸಬಾರದು. ಬದಲಾಗಿ, ತಮ್ಮನ್ನು ಇಚ್ಛಾಪೂರ್ವಕವಾಗಿ ನೀಡಿಕೊಂಡ ತೆಕೋವದ ಸಾಮಾನ್ಯ ಜನರನ್ನು ನಾವು ಅನುಕರಿಸಬೇಕು.

ಕಾವಲಿನಬುರುಜು19.10 ಪುಟ 23 ಪ್ಯಾರ 11

ನೀವೇನು ಆಗುವಂತೆ ಯೆಹೋವನು ಮಾಡುತ್ತಾನೆ?

11 ಇದಾಗಿ ನೂರಾರು ವರ್ಷಗಳ ನಂತರ ಯೆರೂಸಲೇಮಿನ ಗೋಡೆಗಳನ್ನು ಕಟ್ಟಲು ಯೆಹೋವನು ಉಪಯೋಗಿಸಿದ ಜನರಲ್ಲಿ ಶಲ್ಲೂಮನ ಹೆಣ್ಣುಮಕ್ಕಳೂ ಇದ್ದರು. (ನೆಹೆ. 2:20; 3:12) ತಂದೆ ಒಬ್ಬ ಉನ್ನತ ಅಧಿಕಾರಿಯಾಗಿದ್ದರೂ ಆ ಹೆಣ್ಣು ಮಕ್ಕಳು ತುಂಬ ಕಷ್ಟದ, ಅಪಾಯಕರ ಕೆಲಸ ಮಾಡಲು ಮುಂದೆ ಬಂದರು. (ನೆಹೆ. 4:15-18) ಆದರೆ ತೆಕೋವದ ಶ್ರೀಮಂತ ಪುರುಷರು ಆ ಕೆಲಸಕ್ಕೆ “ಹೆಗಲನ್ನು ಕೊಡಲಿಲ್ಲ.” (ನೆಹೆ. 3:5) ಕೇವಲ 52 ದಿನಗಳಲ್ಲೇ ಗೋಡೆ ನಿರ್ಮಾಣ ಕೆಲಸ ಪೂರ್ತಿಯಾದಾಗ ಶಲ್ಲೂಮನ ಹೆಣ್ಣು ಮಕ್ಕಳಿಗೆ ಎಷ್ಟು ಖುಷಿ ಆಗಿದ್ದಿರಬೇಕು! (ನೆಹೆ. 6:15) ಇಂದು ಸಹ ಅನೇಕ ಸಹೋದರಿಯರು ಒಂದು ವಿಶೇಷ ರೀತಿಯಲ್ಲಿ ಯೆಹೋವನ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಅವರು ಯೆಹೋವನ ಆರಾಧನೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣ ಮತ್ತು ದುರಸ್ತಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಚೆನ್ನಾಗಿ ಮಾಡಿ ಮುಗಿಸಲು ಕೌಶಲ, ಹುರುಪು ಮತ್ತು ನಿಷ್ಠೆಯಿರುವ ಆ ಸಹೋದರಿಯರು ತುಂಬನೇ ಅಗತ್ಯ.

ಕಾವಲಿನಬುರುಜು04 8/1 ಪುಟ 18 ಪ್ಯಾರ 16

ದೊಡ್ಡತನದ ವಿಷಯದಲ್ಲಿ ಕ್ರಿಸ್ತನಂಥ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು

16 ಎಲ್ಲಾ ಕ್ರೈಸ್ತರು, ಆಬಾಲವೃದ್ಧರೆಲ್ಲರೂ ದೊಡ್ಡತನದ ಕುರಿತಾದ ಕ್ರಿಸ್ತನ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಸಭೆಯಲ್ಲಿ ಬೇರೆ ಬೇರೆ ರೀತಿಯ ಕೆಲಸಗಳನ್ನು ನಿರ್ವಹಿಸಬೇಕಾಗಿರುತ್ತದೆ. ತೀರ ಅಲ್ಪವೆಂದು ತೋರಬಹುದಾದ ಕೆಲಸಗಳನ್ನು ಮಾಡುವಂತೆ ಕೇಳಲ್ಪಡುವಾಗ ಎಂದೂ ಅಸಮಾಧಾನಗೊಳ್ಳಬೇಡಿ. (1 ಸಮುವೇಲ 25:41; 2 ಅರಸುಗಳು 3:11) ಹೆತ್ತವರೇ, ರಾಜ್ಯ ಸಭಾಗೃಹದಲ್ಲಾಗಲಿ, ಸಮ್ಮೇಳನದ ಸ್ಥಳದಲ್ಲಾಗಲಿ, ಅಥವಾ ಅಧಿವೇಶನದ ನಿವೇಶನದಲ್ಲಾಗಲಿ ನಿಮ್ಮ ಮಕ್ಕಳಿಗೆ ಮತ್ತು ಹದಿವಯಸ್ಕರಿಗೆ ನೇಮಿಸಲ್ಪಡುವ ಯಾವುದೇ ಕೆಲಸವನ್ನು ಅವರು ಸಂತೋಷದಿಂದ ಮಾಡುವಂತೆ ಅವರನ್ನು ಉತ್ತೇಜಿಸುತ್ತೀರೋ? ನೀವು ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದನ್ನು ಅವರು ನೋಡುತ್ತಾರೋ? ಈಗ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಸೇವೆಮಾಡುತ್ತಿರುವ ಒಬ್ಬ ಸಹೋದರನು, ತನ್ನ ಹೆತ್ತವರ ಮಾದರಿಯನ್ನು ಸುಸ್ಪಷ್ಟವಾಗಿ ಜ್ಞಾಪಿಸಿಕೊಳ್ಳುತ್ತಾನೆ. ಅವನು ಹೇಳಿದ್ದು: “ರಾಜ್ಯ ಸಭಾಗೃಹವನ್ನು ಅಥವಾ ಅಧಿವೇಶನದ ಸ್ಥಳವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಅವರು ನಿರ್ವಹಿಸುತ್ತಿದ್ದ ವಿಧವು, ಈ ಕೆಲಸವನ್ನು ಅವರು ತುಂಬ ಪ್ರಾಮುಖ್ಯವಾದದ್ದಾಗಿ ಪರಿಗಣಿಸುತ್ತಾರೆ ಎಂಬುದನ್ನು ನನಗೆ ತಿಳಿಯಪಡಿಸಿತು. ಕೆಲವು ಕೆಲಸಗಳು ಎಷ್ಟೇ ಕ್ಷುಲ್ಲಕವಾಗಿ ಕಂಡುಬರುವುದಾದರೂ, ಸಭೆಯ ಅಥವಾ ಸಹೋದರರ ಬಳಗದ ಒಳಿತಿಗಾಗಿ ಅವುಗಳನ್ನು ಮಾಡಲು ಅವರು ತಾವಾಗಿಯೇ ಮುಂದೆ ಬರುತ್ತಿದ್ದರು. ಈ ಮನೋಭಾವವು, ಬೆತೆಲಿನಲ್ಲಿ ಕೊಡಲ್ಪಡುವ ಯಾವುದೇ ನೇಮಕವನ್ನು ಮನಃಪೂರ್ವಕವಾಗಿ ಸ್ವೀಕರಿಸುವಂತೆ ನನಗೆ ಸಹಾಯಮಾಡಿದೆ.”

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು06 2/1 ಪುಟ 9 ಪ್ಯಾರ 1

ನೆಹೆಮೀಯ ಪುಸ್ತಕದ ಮುಖ್ಯಾಂಶಗಳು

4:17, 18—ಪುನರ್ನಿರ್ಮಾಣ ಕಾರ್ಯವನ್ನು ಒಬ್ಬ ವ್ಯಕ್ತಿಯು ಬರೀ ಒಂದು ಕೈಯಿಂದ ಹೇಗೆ ಮಾಡಸಾಧ್ಯವಿತ್ತು? ಹೊರೆಹೊರುವವರಿಗೆ ಇದು ಒಂದು ಕಷ್ಟಕರ ಕೆಲಸವಾಗಿರಲಿಲ್ಲ. ಹೊರೆಯನ್ನು ಒಮ್ಮೆ ಅವರ ತಲೆಯ ಇಲ್ಲವೆ ಭುಜಗಳ ಮೇಲೆ ಇರಿಸಿದರೆ, ಅದು ಬೀಳದಂತೆ ಬರೀ ಒಂದು ಕೈಯಿಂದ ಅದನ್ನು ಹಿಡಿದುಕೊಂಡು ‘ಇನ್ನೊಂದು ಕೈಯಿಂದ ಈಟಿಹಿಡಿದುಕೊಳ್ಳಲು’ ಅವರು ಶಕ್ತರಾಗಿದ್ದರು. ಆದರೆ, ಕಟ್ಟುವವರಿಗೆ ಎರಡೂ ಕೈಗಳ ಅಗತ್ಯವಿದ್ದ ಕಾರಣ, ಅವರು ‘ತಮ್ಮ ತಮ್ಮ ಕತ್ತಿಯನ್ನು ಸೊಂಟಕ್ಕೆ ಬಿಗಿದುಕೊಂಡು ಕಟ್ಟುತ್ತಿದ್ದರು.’ ಒಂದುವೇಳೆ ವೈರಿಗಳು ಆಕ್ರಮಣಮಾಡಿದರೆ, ಕೂಡಲೆ ಹೋರಾಟಕ್ಕೆ ಅವರು ಸಿದ್ಧರಿದ್ದರು.

ಆಗಸ್ಟ್‌ 7-13

ಬೈಬಲಿನಲ್ಲಿರುವ ನಿಧಿ | ನೆಹೆಮೀಯ 5–7

“ನೆಹೆಮೀಯ ಸೇವೆ ಮಾಡಿಸ್ಕೊಳ್ಳೋಕೆ ಅಲ್ಲ, ಮಾಡೋಕೆ ಇಷ್ಟಪಟ್ಟ”

ಕಾವಲಿನಬುರುಜು02 11/1 ಪುಟ 27 ಪ್ಯಾರ 3

ಸತ್ಯಾರಾಧನೆಯ ಬೆಂಬಲಿಗರು ಅಂದು ಮತ್ತು ಇಂದು

ನೆಹೆಮೀಯನು ತನ್ನ ಸಮಯ ಮತ್ತು ಸಂಘಟನಾ ಕೌಶಲಗಳಿಗಿಂತಲೂ ಹೆಚ್ಚನ್ನು ನೀಡಿದನು. ಸತ್ಯಾರಾಧನೆಯನ್ನು ಬೆಂಬಲಿಸಲು ಅವನು ತನ್ನ ಪ್ರಾಪಂಚಿಕ ಸಂಪತ್ತನ್ನೂ ಉಪಯೋಗಿಸಿದನು. ತನ್ನ ಯೆಹೂದಿ ಸಹೋದರರನ್ನು ದಾಸತ್ವದಿಂದ ವಿಮೋಚಿಸಲಿಕ್ಕಾಗಿ ಅವನು ತನ್ನ ಸ್ವಂತ ಹಣವನ್ನು ಉಪಯೋಗಿಸಿದನು. ಅವನು ಬಡ್ಡಿತೆಗೆದುಕೊಳ್ಳದೆ ಹಣವನ್ನು ಸಾಲವಾಗಿ ಕೊಟ್ಟನು. ಅವನು ದೇಶಾಧಿಪತಿಯೋಪಾದಿ ಪಡೆದುಕೊಳ್ಳಲು ಹಕ್ಕಿದ್ದ ಭತ್ಯವನ್ನು ಕೇಳಿ ಯೆಹೂದ್ಯರ ಮೇಲೆ “ಬಹಳ ಭಾರ”ಹಾಕಲಿಲ್ಲ. ಬದಲಿಗೆ, “ನೂರೈವತ್ತು ಮಂದಿ ಅಧಿಕಾರಿಗಳೂ ಸುತ್ತಣ ಜನಾಂಗಗಳ ಮಧ್ಯದಿಂದ ನಮ್ಮ ಬಳಿಗೆ ಬರುತ್ತಿದ್ದವರೂ” ಊಟಮಾಡಲು ಅವನ ಮನೆ ಸದಾ ತೆರೆದಿತ್ತು. ಅವನು ತನ್ನ ಅತಿಥಿಗಳಿಗೆ ಪ್ರತಿದಿನ “ಒಂದು ಹೋರಿ ಆರು ಕೊಬ್ಬಿದ ಕುರಿ ಕೆಲವು ಕೋಳಿ”ಗಳನ್ನು ಒದಗಿಸಿದನು. ಅಲ್ಲದೆ, ಹತ್ತು ದಿವಸಕ್ಕೊಮ್ಮೆ ತನ್ನ ಸ್ವಂತ ಖರ್ಚಿನಲ್ಲಿ ಅವನು ಅವರಿಗೆ “ಎಲ್ಲಾ ತರದ ದ್ರಾಕ್ಷಾರಸವನ್ನು ಬೇಕಾಗುವಷ್ಟು” ಒದಗಿಸಿಕೊಟ್ಟನು.—ನೆಹೆಮೀಯ 5:8, 10, 14-18.

ಕಾವಲಿನಬುರುಜು16.09 ಪುಟ 6 ಪ್ಯಾರ 16

“ನಿಮ್ಮ ಕೈಗಳು ಸೋತುಹೋಗದಿರಲಿ”

16 ನೆಹೆಮೀಯನು ಮತ್ತು ಯೆಹೂದ್ಯರು ಯೆಹೋವನ ಸಹಾಯದಿಂದ ತಮ್ಮ ಕೈಗಳನ್ನು ಬಲಪಡಿಸಿಕೊಂಡರು. ಹಾಗಾಗಿ ಕೇವಲ 52 ದಿನಗಳಲ್ಲಿ ಯೆರೂಸಲೇಮಿನ ಗೋಡೆಗಳನ್ನು ಕಟ್ಟಿ ಮುಗಿಸಿದರು! (ನೆಹೆ. 2:18; 6:15, 16) ನೆಹೆಮೀಯನು ಜನರಿಗೆ ಕೆಲಸ ಹೇಳಿ ತಾನು ನೋಡುತ್ತಾ ನಿಂತಿರಲಿಲ್ಲ. ಅವನೂ ಅವರ ಜೊತೆ ಸೇರಿ ಕೆಲಸಮಾಡಿದನು. (ನೆಹೆ. 5:16) ನೆಹಮೀಯನಂತೆ ಇಂದಿರುವ ಹಿರಿಯರು ನಿರ್ಮಾಣ ಕೆಲಸದಲ್ಲಿ, ರಾಜ್ಯ ಸಭಾಗೃಹದ ಶುಚಿತ್ವ ಮತ್ತು ದುರಸ್ತಿ ಕೆಲಸದಲ್ಲಿ ಸಹಾಯಮಾಡುತ್ತಾರೆ. ಅಷ್ಟೇ ಅಲ್ಲ, ‘ಭಯಭ್ರಾಂತ ಹೃದಯದವರನ್ನು’ ಅಂದರೆ ಹೃದಯದಲ್ಲಿ ಚಿಂತೆ ಆತಂಕವಿರುವ ಸಹೋದರ ಸಹೋದರಿಯರನ್ನು ಭೇಟಿಮಾಡುವ ಮೂಲಕ, ಅವರೊಂದಿಗೆ ಸೇವೆಮಾಡುವ ಮೂಲಕ ಅವರನ್ನು ಬಲಗೊಳಿಸುತ್ತಾರೆ.—ಯೆಶಾಯ 35:3, 4 ಓದಿ.

ಕಾವಲಿನಬುರುಜು00 2/1 ಪುಟ 32

ಯೆಹೋವನು ನಿಮ್ಮನ್ನು ಹೇಗೆ ನೆನಪುಮಾಡಿಕೊಳ್ಳುವನು?

ಬೈಬಲ್‌ ಸುಸಂಗತವಾಗಿ ತೋರಿಸುವುದೇನೆಂದರೆ, ದೇವರ ವಿಷಯದಲ್ಲಿ “ನೆನಪುಮಾಡಿಕೊಳ್ಳುವುದು” ಎಂಬುದರ ಅರ್ಥವು, ಸಕಾರಾತ್ಮಕವಾಗಿ ಕ್ರಿಯೆಗೈಯುವುದಾಗಿದೆ. ಉದಾಹರಣೆಗೆ, 150 ದಿನಗಳ ವರೆಗೆ ಇಡೀ ಭೂಮಿಯು ಜಲಪ್ರಳಯದ ನೀರಿನಿಂದ ತುಂಬಿ ಹರಿಯುತ್ತಿದ್ದಾಗ, ‘ದೇವರು ನೋಹನನ್ನು . . . ನೆನಪಿಗೆ ತಂದುಕೊಂಡು ಭೂಲೋಕದ ಮೇಲೆ ಗಾಳಿಬೀಸುವಂತೆ ಮಾಡಲಾಗಿ ನೀರು ತಗ್ಗಿತು.’ (ಆದಿಕಾಂಡ 8:1) ಶತಮಾನಗಳ ನಂತರ, ಫಿಲಿಷ್ಟಿಯರಿಂದ ಕುರುಡಾಗಿಸಲ್ಪಟ್ಟು, ಕಬ್ಬಿಣದ ಬೇಡಿಗಳಿಂದ ಬಂಧಿಸಲ್ಪಟ್ಟಿದ್ದ ಸಂಸೋನನು ಪ್ರಾರ್ಥಿಸಿದ್ದು: “ಯೆಹೋವನೇ, ದಯವಿಟ್ಟು ಈ ಸಾರಿ ನನ್ನನ್ನು ನೆನಪಿಸಿಕೋ ಮತ್ತು ನನ್ನನ್ನು ಒಮ್ಮೆ ಬಲಪಡಿಸು” (NW). ಸಂಸೋನನು ದೇವರ ವೈರಿಗಳಿಗೆ ಮುಯ್ಯಿ ತೀರಿಸುವಂತೆ ಯೆಹೋವನು ಅವನಿಗೆ ಅತಿಮಾನುಷ ಶಕ್ತಿಯನ್ನು ಕೊಡುವ ಮೂಲಕ ಅವನನ್ನು ನೆನಪಿಸಿಕೊಂಡನು. (ನ್ಯಾಯಸ್ಥಾಪಕರು 16:28-30) ನೆಹೆಮೀಯನ ವಿಷಯದಲ್ಲಿ, ಯೆಹೋವನು ಅವನ ಪ್ರಯತ್ನಗಳನ್ನು ಆಶೀರ್ವದಿಸಿದನು ಮತ್ತು ಹೀಗೆ ಯೆರೂಸಲೇಮಿನಲ್ಲಿ ಸತ್ಯಾರಾಧನೆಯು ಪುನಃಸ್ಥಾಪಿಸಲ್ಪಟ್ಟಿತು.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು07 7/1 ಪುಟ 30 ಪ್ಯಾರ 15

“ಒಳ್ಳೆಯದರಿಂದ ಕೆಟ್ಟದ್ದನ್ನು ಗೆಲ್ಲುತ್ತ ಇರು”

15 ಮೂರನೆಯದಾಗಿ, ಶೆಮಾಯನೆಂಬ ಇಸ್ರಾಯೇಲ್ಯ ವಿಶ್ವಾಸಘಾತುಕನನ್ನು ಉಪಯೋಗಿಸಿ ನೆಹೆಮೀಯನು ದೇವರ ನಿಯಮವನ್ನು ಮುರಿಯುವಂತೆ ಮಾಡಲು ವೈರಿಗಳು ಪ್ರಯತ್ನಿಸಿದರು. ಶೆಮಾಯನು ನೆಹೆಮೀಯನಿಗೆ, “ನಿನ್ನನ್ನು ಕೊಲ್ಲುವದಕ್ಕೆ ಬರುತ್ತಾರೆ, ಈ ರಾತ್ರಿಯೇ ಬರುತ್ತಾರೆ. ಆದದರಿಂದ ನಾವಿಬ್ಬರೂ ದೇವಾಲಯಕ್ಕೆ ಹೋಗಿ ಪವಿತ್ರಸ್ಥಾನವನ್ನು ಪ್ರವೇಶಿಸಿ ಅದರ ಕದಗಳನ್ನು ಮುಚ್ಚಿಕೊಳ್ಳೋಣ ಬಾ” ಎಂದು ಹೇಳಿದನು. ನೆಹೆಮೀಯನನ್ನು ಇನ್ನೇನು ಕೊಲ್ಲಲಿಕ್ಕಿದ್ದಾರೆ, ಆದರೆ ದೇವಾಲಯದಲ್ಲಿ ಅಡಗಿಕೊಳ್ಳುವ ಮೂಲಕ ಅವನು ತನ್ನ ಜೀವವನ್ನು ಉಳಿಸಿಕೊಳ್ಳಬಲ್ಲನೆಂದು ಶೆಮಾಯನು ಹೇಳಿದನು. ನೆಹೆಮೀಯನಾದರೋ ಯಾಜಕನಾಗಿರಲಿಲ್ಲ. ಆದುದರಿಂದ ದೇವಾಲಯದಲ್ಲಿ ಅಡಗಿಕೊಳ್ಳುವ ಮೂಲಕ ಪಾಪಕ್ಕೊಳಗಾಗುತ್ತಿದ್ದನು. ಅವನು ತನ್ನ ಪ್ರಾಣರಕ್ಷಣೆಗಾಗಿ ದೇವರ ನಿಯಮವನ್ನು ಮುರಿಯುವನೊ? ನೆಹೆಮೀಯನು ಉತ್ತರ ಕೊಟ್ಟದ್ದು: “ನನ್ನಂಥವನು ಪ್ರಾಣರಕ್ಷಣೆಗಾಗಿ ಪವಿತ್ರಸ್ಥಾನವನ್ನು ಪ್ರವೇಶಿಸುವನೇ? ನಾನು ಬರುವದಿಲ್ಲ.” ನೆಹೆಮೀಯನಿಗಾಗಿ ಸಿದ್ಧಮಾಡಿದ್ದ ಪಾಶದೊಳಗೆ ಅವನೇಕೆ ಸಿಕ್ಕಿಬೀಳಲಿಲ್ಲ? ಏಕೆಂದರೆ, ಶೆಮಾಯನು ಜೊತೆ ಇಸ್ರಾಯೇಲ್ಯನಾಗಿದ್ದರೂ “ಇವನನ್ನು ಪ್ರೇರಿಸಿದವನು ದೇವರಲ್ಲ” ಎಂದು ಅವನಿಗೆ ತಿಳಿದಿತ್ತು. ಏಕೆಂದರೆ ನಿಜ ಪ್ರವಾದಿಯಾಗಿದ್ದ ಪಕ್ಷದಲ್ಲಿ ದೇವರ ನಿಯಮವನ್ನು ಮುರಿಯುವಂತೆ ಅವನು ಎಂದಿಗೂ ಸಲಹೆ ನೀಡುತ್ತಿದ್ದಿಲ್ಲ. ಹೀಗೆ, ನೆಹೆಮೀಯನು ಪುನಃ ದುಷ್ಟ ವಿರೋಧಿಗಳು ತನ್ನನ್ನು ಸೋಲಿಸುವಂತೆ ಬಿಡಲಿಲ್ಲ. ಇದಾಗಿ ಸ್ವಲ್ಪದರಲ್ಲಿ ಅವನು ಹೀಗೆ ಹೇಳಸಾಧ್ಯವಾಯಿತು: “ಗೋಡೆಯು ಭಾದ್ರಪದ ಮಾಸದ ಇಪ್ಪತ್ತೈದನೆಯ ದಿನದಲ್ಲಿ ತೀರಿತು. ಅದನ್ನು ಕಟ್ಟುವದಕ್ಕೆ ಒಟ್ಟು ಐವತ್ತೆರಡು ದಿನಗಳು ಹಿಡಿದವು.”—ನೆಹೆಮೀಯ 6:10-15; ಅರಣ್ಯಕಾಂಡ 1:51; 18:7.

ಆಗಸ್ಟ್‌ 14-20

ಬೈಬಲಿನಲ್ಲಿರುವ ನಿಧಿ | ನೆಹೆಮೀಯ 8–9

“ಯೆಹೋವ ಕೊಡೋ ಆನಂದನೇ ನಿಮ್ಮ ಬಲ”

ಕಾವಲಿನಬುರುಜು13 10/15 ಪುಟ 21 ಪ್ಯಾರ 2

ಲೇವಿಯರ ಪ್ರಾರ್ಥನೆಯಿಂದ ಪಾಠಗಳು

2 ಈ ಮೇಲಿನ ಸಮ್ಮೇಳನಕ್ಕೆ ಒಂದು ತಿಂಗಳು ಮುಂಚೆ ಯೆಹೂದ್ಯರು ಯೆರೂಸಲೇಮಿನ ಗೋಡೆಗಳ ಪುನರ್ನಿರ್ಮಾಣ ಮಾಡಿದ್ದರು. (ನೆಹೆ. 6:15) ದೇವಜನರು ಆ ಕೆಲಸವನ್ನು ಬರೀ 52 ದಿನಗಳಲ್ಲಿ ಮಾಡಿ, ಬಳಿಕ ತಮ್ಮ ಆಧ್ಯಾತ್ಮಿಕ ಅವಶ್ಯಕತೆಗಳಿಗೆ ಗಮನವನ್ನು ಕೊಡಲಾರಂಭಿಸಿದರು. ಹೊಸ ತಿಂಗಳಾದ ತಿಶ್ರಿಯ ಪ್ರಥಮದಿನ, ಅವರು ಅಲ್ಲಿಯ ಸಾರ್ವಜನಿಕ ಚೌಕದಲ್ಲಿ ಕೂಡಿಬಂದರು. ಎಜ್ರನೂ ಇತರ ಲೇವ್ಯರೂ ಧರ್ಮಶಾಸ್ತ್ರ ಓದುವುದನ್ನು ಅಲ್ಲಿ ಅವರು ಕೇಳಿಸಿಕೊಳ್ಳಲಿದ್ದರು. (ಚಿತ್ರ 1) “ಗ್ರಹಿಸಶಕ್ತರಾದ” ಎಲ್ಲ ಕುಟುಂಬಗಳು “ಪ್ರಾತಃಕಾಲದಿಂದ ಮಧ್ಯಾಹ್ನದ ವರೆಗೂ” ನಿಂತುಕೊಂಡು ಕೇಳಿದರು. ಇಂದು, ಎಲ್ಲ ಸೌಕರ್ಯಗಳಿರುವ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ನೆರೆದುಬರುವ ನಮಗೆ ಇದೆಷ್ಟು ಉತ್ತಮ ಮಾದರಿ! ಆದರೂ, ಕೆಲವೊಮ್ಮೆ ಇಂಥ ಸಂದರ್ಭಗಳಲ್ಲಿ ನಿಮ್ಮ ಮನಸ್ಸು ಅತ್ತಿತ್ತ ಅಲೆದಾಡುತ್ತಾ ಅಷ್ಟೇನು ಪ್ರಮುಖವಲ್ಲದ ವಿಷಯಗಳ ಕುರಿತು ಯೋಚಿಸುತ್ತಿದೆ ಎಂದು ನಿಮಗನಿಸುತ್ತಾ? ಹಾಗಿರುವಲ್ಲಿ ಆ ಪೂರ್ವಕಾಲದ ಇಸ್ರಾಯೇಲ್ಯರ ಮಾದರಿಯನ್ನು ಪುನಃ ಪರಿಗಣಿಸಿ. ಅವರು ಕೇಳಿಸಿಕೊಂಡದ್ದು ಮಾತ್ರವಲ್ಲ ಕೇಳಿದ್ದನ್ನು ಎಷ್ಟರಮಟ್ಟಿಗೆ ಮನಸ್ಸಿಗೆ ತಕ್ಕೊಂಡರೆಂದರೆ ಜನಾಂಗವಾಗಿ ದೇವರ ನಿಯಮಗಳಿಗೆ ವಿಧೇಯರಾಗಲು ತಪ್ಪಿದ್ದಕ್ಕೆ ಅಳತೊಡಗಿದರು.—ನೆಹೆ. 8:1-9.

ಕಾವಲಿನಬುರುಜು07 8/1 ಪುಟ 17 ಪ್ಯಾರ 9-10

ನೀವು ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತೀರೋ?’

9 ಆನಂದವು ಮಹಾ ಸಂತೋಷದ ಒಂದು ಸ್ಥಿತಿಯಾಗಿದೆ. ಯೆಹೋವನು “ಸಂತೋಷದ ದೇವರು.” (1 ತಿಮೊಥೆಯ 1:11, NW; ಕೀರ್ತನೆ 104:31) ಆತನ ಪುತ್ರನು ತನ್ನ ತಂದೆಯ ಚಿತ್ತವನ್ನು ಮಾಡಲು ಸಂತೋಷಿಸುತ್ತಾನೆ. (ಕೀರ್ತನೆ 40:8; ಇಬ್ರಿಯ 10:7-9) ಮತ್ತು “ಯೆಹೋವನ ಆನಂದವೇ [ನಮ್ಮ] ಆಶ್ರಯ.”—ನೆಹೆಮೀಯ 8:10.

10 ದೇವದತ್ತ ಆನಂದವು ಕಷ್ಟ, ಶೋಕ ಅಥವಾ ಹಿಂಸೆಯ ಸಮಯದಲ್ಲಿಯೂ ದೈವಿಕ ಚಿತ್ತವನ್ನು ಮಾಡುವಾಗ ನಮಗೆ ಗಾಢವಾದ ತೃಪ್ತಿಯನ್ನು ತರುತ್ತದೆ. “ದೈವಜ್ಞಾನವು” ನಮಗೆ ಅದೆಂಥ ಸಂತೋಷವನ್ನು ತರುತ್ತದೆ! (ಜ್ಞಾನೋಕ್ತಿ 2:1-5) ದೇವರೊಂದಿಗೆ ನಮಗಿರುವ ಆನಂದಪೂರ್ಣ ಸಂಬಂಧವು ನಿಷ್ಕೃಷ್ಟ ಜ್ಞಾನದ ಮೇಲೆ, ಆತನಲ್ಲಿ ಮತ್ತು ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಮಗಿರುವ ನಂಬಿಕೆಯ ಮೇಲೆ ಆಧಾರಿತವಾಗಿದೆ. (1 ಯೋಹಾನ 2:1, 2) ನಾವು ಅಂತರಾಷ್ಟ್ರೀಯವಾಗಿರುವ ಏಕಮಾತ್ರ ನಿಜ ಸಹೋದರತ್ವದ ಭಾಗವಾಗಿರುವುದು ಆನಂದದ ಇನ್ನೊಂದು ಮೂಲವಾಗಿದೆ. (ಚೆಫನ್ಯ 3:9; ಹಗ್ಗಾಯ 2:7) ನಮಗಿರುವ ರಾಜ್ಯ ನಿರೀಕ್ಷೆ ಮತ್ತು ಸುವಾರ್ತೆಯನ್ನು ಸಾರುವ ಮಹಾ ಸದವಕಾಶವು ನಮ್ಮನ್ನು ಆನಂದಭರಿತರನ್ನಾಗಿ ಮಾಡುತ್ತದೆ. (ಮತ್ತಾಯ 6:9, 10; 24:14) ನಿತ್ಯಜೀವದ ಪ್ರತೀಕ್ಷೆ ಕೂಡ ನಮಗೆ ಆನಂದವನ್ನು ತರುತ್ತದೆ. (ಯೋಹಾನ 17:3) ನಮಗೆ ಇಂಥ ಮಹಾ ನಿರೀಕ್ಷೆಯಿರುವುದರಿಂದ ನಾವು “ಬಹಳ ಆನಂದದಿಂದಿರಬೇಕು.”—ಧರ್ಮೋಪದೇಶಕಾಂಡ 16:15.

ಬೈಬಲಿನಲ್ಲಿರುವ ರತ್ನಗಳು

it-1-E ಪುಟ 145 ಪ್ಯಾರ 2

ಅರಾಮಿಕ್‌

ನೆಹೆಮೀಯ 8:8​ರಲ್ಲಿ ಹೀಗಿದೆ: “ಲೇವಿಯರು ಸತ್ಯ ದೇವರ ನಿಯಮ ಪುಸ್ತಕವನ್ನ ಗಟ್ಟಿಯಾಗಿ ಓದ್ತಾ, ಸ್ಪಷ್ಟವಾಗಿ ವಿವರಿಸ್ತಾ ಅದ್ರ ಅರ್ಥ ಏನಂತ ಹೇಳ್ತಾ ಹೋದ್ರು. ಹೀಗೆ ಓದಿದ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಜನ್ರಿಗೆ ಸಹಾಯ ಮಾಡಿದ್ರು.” “ಸ್ಪಷ್ಟವಾಗಿ ವಿವರಿಸ್ತಾ” ಅನ್ನೋದ್ರ ಅರ್ಥ ಇಬ್ರಿಯ ಭಾಷೆಯಲ್ಲಿ ಓದಿದ ವಿಷಯಗಳನ್ನ ಅರಾಮಿಕ್‌ ಭಾಷೆಯಲ್ಲಿ ಹೇಳಿ ಕೊಟ್ಟಿರಬಹುದು. ಯಾಕಂದ್ರೆ ಬಾಬೆಲಿನಲ್ಲಿದ್ದಾಗ ಯೆಹೂದ್ಯರು ಅರಾಮಿಕ್‌ ಭಾಷೆಯಲ್ಲಿ ಮಾತಾಡ್ತಾ ಇದ್ದಿರಬಹುದು. ಅಷ್ಟೇ ಅಲ್ಲ, ಯೆಹೂದ್ಯರಿಗೆ ಇಬ್ರಿಯ ಭಾಷೆ ಗೊತ್ತಿದ್ರೂ ದೇವರ ನಿಯಮ ಪುಸ್ತಕದಲ್ಲಿರೋ ವಿಷಯಗಳನ್ನ ಸ್ಪಷ್ಟವಾಗಿ ಅರಾಮಿಕ್‌ ಭಾಷೆಯಲ್ಲಿ ವಿವರಿಸಿದಾಗ ಅವರಿಗೆ ಇನ್ನೂ ಚೆನ್ನಾಗಿ ಅರ್ಥ ಆಗಿರಬಹುದು.

ಆಗಸ್ಟ್‌ 21-27

ಬೈಬಲಿನಲ್ಲಿರುವ ನಿಧಿ | ನೆಹೆಮೀಯ 10–11

“ಅವರು ಯೆಹೋವನಿಗಾಗಿ ತ್ಯಾಗಗಳನ್ನ ಮಾಡಿದ್ರು”

ಕಾವಲಿನಬುರುಜು98 10/15 ಪುಟ 22 ಪ್ಯಾರ 13

ತನ್ನ ಹೆಸರಿಗೆ ಯೋಗ್ಯವಾಗಿರುವ ಯೆರೂಸಲೇಮ್‌

13 ನೆಹೆಮೀಯನ ದಿನದಲ್ಲಿ ಮುದ್ರೆಹಾಕಲ್ಪಟ್ಟ “ಲೇಖನರೂಪವಾದ ಪ್ರತಿಜ್ಞೆಯು,” ಪ್ರಾಚೀನ ಸಮಯದ ದೇವಜನರನ್ನು, ಯೆರೂಸಲೇಮಿನ ಗೋಡೆಯ ಪ್ರತಿಷ್ಠಾಪನೆಯ ದಿನಕ್ಕಾಗಿ ತಯಾರುಗೊಳಿಸಿತು. ಆದರೆ ಮತ್ತೊಂದು ತುರ್ತಿನ ವಿಷಯಕ್ಕೆ ಗಮನವು ಕೊಡಲ್ಪಡಬೇಕಿತ್ತು. ಯೆರೂಸಲೇಮಿನ ದೊಡ್ಡ ಗೋಡೆಯು ಈಗ 12 ದ್ವಾರಗಳನ್ನು ಒಳಗೊಂಡಿದ್ದರಿಂದ, ಅಧಿಕ ಜನಸಂಖ್ಯೆಯ ಆವಶ್ಯಕತೆ ಅದಕ್ಕಿತ್ತು. ಕೆಲವು ಇಸ್ರಾಯೇಲ್ಯರು ಅಲ್ಲಿ ವಾಸಿಸುತ್ತಿದ್ದರೂ, “ಪಟ್ಟಣವು ಎಲ್ಲಾ ಕಡೆಗಳಲ್ಲಿ ವಿಸ್ತಾರವಾಗಿದ್ದರೂ ಅದರೊಳಗೆ ಬಹು ಸ್ವಲ್ಪ ಜನರಿದ್ದರು.” (ನೆಹೆಮೀಯ 7:4) ಈ ಸಮಸ್ಯೆಯನ್ನು ಬಗೆಹರಿಸಲು, ಜನರು “ಹತ್ತತ್ತು ಮಂದಿಯಲ್ಲಿ ಒಂಭತ್ತು ಮಂದಿ ತಮ್ಮ ತಮ್ಮ ಊರುಗಳಲ್ಲಿದ್ದುಕೊಂಡು ಒಬ್ಬನು ಪವಿತ್ರನಗರವಾಗಿರುವ ಯೆರೂಸಲೇಮಿನಲ್ಲಿ ವಾಸಿಸುವದಕ್ಕಾಗಿ ಅಲ್ಲಿಗೆ ಬರುವಂತೆ ಚೀಟುಹಾಕಿ ಗೊತ್ತುಮಾಡಿದರು.” ಈ ಏರ್ಪಾಡಿಗೆ ಸ್ವಇಚ್ಛೆಯಿಂದ ಪ್ರತಿಕ್ರಿಯಿಸಿದನ್ನು ನೋಡಿ, ಜನರು “ಯೆರೂಸಲೇಮಿನಲ್ಲಿ ವಾಸಿಸುವದಕ್ಕೆ ಮನಸ್ಸುಮಾಡಿದಂಥವರನ್ನು” ಆಶೀರ್ವದಿಸಿದರು. (ನೆಹೆಮೀಯ 11:1, 2) ಪ್ರೌಢ ಕ್ರೈಸ್ತ ಸಹಾಯಕ್ಕಾಗಿ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಲು ಇಂದು ಯಾರ ಪರಿಸ್ಥಿತಿಗಳು ಅನುಮತಿಸುತ್ತವೊ, ಅಂತಹ ಸತ್ಯಾರಾಧಕರಿಗೆ ಇದು ಎಂತಹ ಒಂದು ಉತ್ತಮ ಉದಾಹರಣೆಯಾಗಿದೆ!

ಕಾವಲಿನಬುರುಜು86-E 2/15 ಪುಟ 26

ಸತ್ಯ ಆರಾಧನೆ ಮತ್ತೆ ಚಿಗುರೊಡೆಯಿತು

ಪಿತ್ರಾರ್ಜಿತ ಆಸ್ತಿಯನ್ನ ಬಿಟ್ಟು ಯೆರೂಸಲೇಮಿಗೆ ಹೋಗೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಯಾಕಂದ್ರೆ ಅಲ್ಲಿ ಜೀವನ ಮಾಡೋದು ತುಂಬ ಅಪಾಯಕಾರಿ ಆಗಿತ್ತು. ಹೀಗೆ ಹೋದವರನ್ನ ಬೇರೆಯವರು ಮೆಚ್ಚಿದ್ರು. ಅಷ್ಟೇ ಅಲ್ಲ ಅವರು ಮಾಡಿರೋ ತ್ಯಾಗಗಳಿಗೆ ಆಶೀರ್ವಾದ ಸಿಗಲಿ ಅಂತ ಯೆಹೋವನ ಹತ್ತಿರ ಪ್ರಾರ್ಥನೆ ಮಾಡಿದ್ರು.

ಕಾವಲಿನಬುರುಜು16.04 ಪುಟ 8 ಪ್ಯಾರ 15

ನಂಬಿಗಸ್ತರಿಗೆ ದೇವರ ಮೆಚ್ಚಿಕೆ ಸಿಗುತ್ತದೆ

15 ಯೆಹೋವನಿಗೆ ನಾವು ನಮ್ಮ ಜೀವನವನ್ನು ಸಮರ್ಪಿಸಿದಾಗ ‘ಏನೇ ಆದರೂ ನಿನ್ನ ಚಿತ್ತ ಮಾಡ್ತೇವೆ’ ಎಂದು ಹರಕೆ ಮಾಡಿದೆವು ಅಂದರೆ ಮಾತುಕೊಟ್ಟೆವು. ಆ ಮಾತಿನ ಪ್ರಕಾರ ನಡೆಯುವುದು ಕೆಲವೊಮ್ಮೆ ಕಷ್ಟವಾಗಬಹುದೆಂದು ನಮಗೆ ಆಗಲೇ ಗೊತ್ತಿತ್ತು. ಆದರೆ ನೆನಸಿ, ನಮಗೆ ಇಷ್ಟವಾಗದ ಒಂದು ವಿಷಯವನ್ನು ಮಾಡಲು ಈಗ ಹೇಳಲಾಗುತ್ತದೆ. ನಮ್ಮ ಪ್ರತಿಕ್ರಿಯೆ ಏನು? ನಮ್ಮ ಮನಸ್ಸಿನ ಭಾವನೆಗಳನ್ನು ಮೆಟ್ಟಿನಿಂತು ಮನಃಪೂರ್ವಕವಾಗಿ ಯೆಹೋವನಿಗೆ ವಿಧೇಯರಾಗುತ್ತೇವಾ? ಹಾಗೆ ಮಾಡಿದರೆ ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂದು ತೋರಿಸಿಕೊಡುತ್ತೇವೆ. ತ್ಯಾಗಗಳನ್ನು ಮಾಡುವಾಗ ನಮಗೆ ಮನಸ್ಸಿಗೆ ನೋವಾಗಬಹುದು. ಆದರೆ ಆ ತ್ಯಾಗಗಳಿಗಾಗಿ ಯೆಹೋವನು ಕೊಡುವ ಆಶೀರ್ವಾದಗಳು ಯಾವಾಗಲೂ ಎಷ್ಟೋ ಹೆಚ್ಚಿರುತ್ತವೆ. (ಮಲಾ. 3:10) ಯೆಪ್ತಾಹನ ಮಗಳ ವಿಷಯದಲ್ಲೇನು? ತಂದೆಯ ಹರಕೆಯ ಬಗ್ಗೆ ಗೊತ್ತಾದಾಗ ಅವಳು ಏನಂದಳು?

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು06 2/1 ಪುಟ 11 ಪ್ಯಾರ 1

ನೆಹೆಮೀಯ ಪುಸ್ತಕದ ಮುಖ್ಯಾಂಶಗಳು

10:34—ಜನರು ಕಟ್ಟಿಗೆಯನ್ನು ಒದಗಿಸುವಂತೆ ಏಕೆ ಕೇಳಿಕೊಳ್ಳಲ್ಪಟ್ಟರು? ಮೋಶೆಯ ಧರ್ಮಶಾಸ್ತ್ರದಲ್ಲಿ ಕಟ್ಟಿಗೆಯನ್ನು ದಾನಮಾಡುವಂತೆ ಆಜ್ಞಾಪಿಸಿರಲಿಲ್ಲ. ಈ ನಿಯಮವು, ಅಗತ್ಯಕ್ಕೆ ಅನುಗುಣವಾಗಿ ಜಾರಿಗೆ ಬಂದಿದೆ. ಯಜ್ಞವೇದಿಯಲ್ಲಿ ಪ್ರಾಣಿಗಳನ್ನು ಸುಡಲು ದೊಡ್ಡ ಮೊತ್ತದ ಕಟ್ಟಿಗೆಯ ಅಗತ್ಯವಿತ್ತು. ಮಾತ್ರವಲ್ಲದೆ, ದೇವಸ್ಥಾನದಾಸರಾಗಿ ಸೇವೆಸಲ್ಲಿಸುತ್ತಿದ್ದ ಇಸ್ರಾಯೇಲ್ಯೇತರ ನೆಥಿನಿಮರು (ದೇವಸ್ಥಾನದಾಸರು) ಸಾಕಷ್ಟಿರಲಿಲ್ಲ. ಆದುದರಿಂದ, ಕ್ರಮವಾಗಿ ಕಟ್ಟಿಗೆಯು ಒದಗಿಸಲ್ಪಡುವಂತೆ ಚೀಟುಹಾಕಲಾಯಿತು.

ಆಗಸ್ಟ್‌ 28-ಸೆಪ್ಟೆಂಬರ್‌ 3

ಬೈಬಲಿನಲ್ಲಿರುವ ನಿಧಿ | ನೆಹೆಮೀಯ 12–13

“ಸ್ನೇಹಿತರನ್ನ ಆಯ್ಕೆ ಮಾಡುವಾಗ ಯೆಹೋವನಿಗೆ ನಿಷ್ಠೆ ತೋರಿಸಿ”

it-1-E ಪುಟ 95 ಪ್ಯಾರ 5

ಅಮ್ಮೋನಿಯರು

ಟೋಬೀಯನ ಎಲ್ಲ ವಸ್ತುಗಳನ್ನ ಹೊರಗೆ ಎಸೆದ ಮೇಲೆ ಧರ್ಮೋಪದೇಶಕಾಂಡ 23:3-6ರಲ್ಲಿ ಇರೋ ನಿಯಮವನ್ನ ಓದಿದ್ರು. ಅಲ್ಲಿ ಹೀಗಿದೆ: “ಅಮ್ಮೋನಿಯರಲ್ಲಿ, ಮೋವಾಬ್ಯರಲ್ಲಿ ಯಾರೂ ಯೆಹೋವನ ಸಭೆಯ ಸದಸ್ಯರಾಗಬಾರದು.” ಹಾಗಾಗಿ ಅವರು ಅದನ್ನ ಪಾಲಿಸಿದ್ರು. (ನೆಹೆ 13:1-3) ಈ ನಿಯಮವನ್ನ ಸುಮಾರು 1000 ವರ್ಷದ ಮುಂಚೆನೇ ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟಿದ್ದನು. ಯಾಕಂದ್ರೆ ದೇವರು ಮಾತು ಕೊಟ್ಟ ದೇಶಕ್ಕೆ ಹೋಗೋ ಸಮಯದಲ್ಲಿ ಅಮ್ಮೋನಿಯರು ಮತ್ತು ಮೋವಾಬ್ಯರು ಇಸ್ರಾಯೇಲ್ಯರಿಗೆ ಸಹಾಯ ಮಾಡಿರಲಿಲ್ಲ. ಹಾಗಾಗಿ ಇವರು ಯೆಹೋವನ ಸಭೆಯ ಸದಸ್ಯರಾಗೋಕೆ ಆಗ್ತಿರಲಿಲ್ಲ. ಅಷ್ಟೇ ಅಲ್ಲ, ಇಸ್ರಾಯೇಲ್ಯರಿಗೆ ಸಿಗ್ತಿದ್ದ ಹಕ್ಕು, ಆಶೀರ್ವಾದನೂ ಇವರಿಗೆ ಸಿಗ್ತಿರಲಿಲ್ಲ. ಇದರರ್ಥ ಅಮ್ಮೋನಿಯರು, ಮೋವಾಬ್ಯರು ಇಸ್ರಾಯೇಲ್ಯರ ಜೊತೆ ವಾಸ ಮಾಡಬಾರದು, ಬೆರೆಯಬಾರದು, ಆಶೀರ್ವಾದವನ್ನ ಪಡ್ಕೊಬಾರದು ಅಂತಲ್ಲ. ಉದಾಹರಣೆಗೆ ಮೋವಾಬ್ಯಳಾದ ರೂತ್‌ ಮತ್ತು ದಾವೀದನ ವೀರ ಸೈನಿಕ ಅಮ್ಮೋನಿಯನಾದ ಚೆಲೆಕ್‌ ಇಸ್ರಾಯೇಲ್ಯರ ಮಧ್ಯೆ ಇದ್ರು.—ರೂತ್‌ 1:4, 16-18.

ಕಾವಲಿನಬುರುಜು13 8/15 ಪುಟ 4 ಪ್ಯಾರ 5-6

ನೀವು ಪವಿತ್ರೀಕರಿಸಲ್ಪಟ್ಟಿದ್ದೀರಿ

5 ನೆಹೆಮೀಯ 13:4-9 ಓದಿ. ಸುತ್ತಲಿರುವ ಅಶುದ್ಧ ವಿಷಯಗಳು ನಮ್ಮನ್ನು ಪ್ರಭಾವಿಸುವುದರಿಂದ ಪವಿತ್ರರಾಗಿ ಉಳಿಯುವುದು ಅಷ್ಟೇನು ಸುಲಭವಲ್ಲ. ಉದಾಹರಣೆಗೆ ಎಲ್ಯಾಷೀಬ ಹಾಗೂ ಟೋಬೀಯನನ್ನು ತಕ್ಕೊಳ್ಳಿ. ಎಲ್ಯಾಷೀಬ ಮಹಾ ಯಾಜಕ. ಟೋಬೀಯ ಅಮ್ಮೋನಿಯ. ಪ್ರಾಯಶಃ ಅವನಿಗೆ ಪಾರಸೀಯ ರಾಜನ ಕೆಳಗೆ ಚಿಕ್ಕ ಹುದ್ದೆಯಿತ್ತು. ಈ ಮುಂಚೆ ನೆಹೆಮೀಯನು ಯೆರೂಸಲೇಮಿನ ಗೋಡೆಗಳ ಪುನರ್‌ನಿರ್ಮಾಣದ ಕೆಲಸ ಕೈಗೊಂಡಾಗ ಟೋಬೀಯ ಮತ್ತವನ ಸಹಚರರು ವಿರೋಧಿಸಿದ್ದರು. (ನೆಹೆ. 2:10) ಅಮ್ಮೋನಿಯರು ದೇವಾಲಯದ ಅಂಗಣದಲ್ಲಿ ಬರುವಂತಿರಲಿಲ್ಲ. (ಧರ್ಮೋ. 23:3) ಹಾಗೆಂದ ಮೇಲೆ ಮಹಾ ಯಾಜಕ ಎಲ್ಯಾಷೀಬನು ಟೋಬೀಯನಿಗೆ ದೇವಾಲಯದ ಕೊಠಡಿಯೊಂದರಲ್ಲಿ ಜಾಗ ಕೊಟ್ಟದ್ದಾದರೂ ಏಕೆ?

6 ಎಲ್ಯಾಷೀಬನಿಗೂ ಟೋಬೀಯನಿಗೂ ಆಪ್ತ ನಂಟಿತ್ತು. ಹೇಗೆಂದರೆ, ಟೋಬೀಯ ಯೆಹೂದಿ ಸ್ತ್ರೀಯನ್ನು ಮದುವೆಯಾಗಿದ್ದ. ನಂತರ ಅವನ ಮಗ ಯೆಹೋಹಾನಾನ ಕೂಡ ಯೆಹೂದಿ ಸ್ತ್ರೀಯನ್ನು ಮದುವೆಯಾದ. ಅನೇಕ ಯೆಹೂದ್ಯರು ಟೋಬೀಯನನ್ನು ಹಾಡಿಹೊಗಳುತ್ತಿದ್ದರು. (ನೆಹೆ. 6:17-19) ಎಲ್ಯಾಷೀಬನ ಮೊಮ್ಮಗನೊಬ್ಬನು ಸಮಾರ್ಯದ ದೇಶಾಧಿಪತಿಯಾಗಿದ್ದ ಸನ್ಬಲ್ಲಟನ ಮಗಳನ್ನು ಮದುವೆಯಾಗಿದ್ದ. ಸಮಾರ್ಯದವನಾಗಿದ್ದ ಈ ಸನ್ಬಲ್ಲಟ ಟೋಬೀಯನಿಗೆ ತುಂಬ ಆಪ್ತ. (ನೆಹೆ. 13:28) ಹಾಗಾಗಿ ಒಬ್ಬ ಅನ್ಯಜನಾಂಗದವನೂ ದೇವಜನರ ವಿರೋಧಿಯೂ ಆದ ಟೋಬೀಯನು ಮಹಾ ಯಾಜಕ ಎಲ್ಯಾಷೀಬನ ಮೇಲೆ ಅಷ್ಟೊಂದು ಪ್ರಭಾವಬೀರಲು ಸಾಧ್ಯವಾಗಿರಬೇಕು. ಆದರೆ ನೆಹೆಮೀಯನು ಟೋಬೀಯನ ಎಲ್ಲ ವಸ್ತುಗಳನ್ನು ದೇವಾಲಯದ ಕೊಠಡಿಯಿಂದ ಹೊರಗೆಸೆಯುವ ಮೂಲಕ ಯೆಹೋವನಿಗೆ ನಿಷ್ಠೆ ತೋರಿಸಿದನು.

ಕಾವಲಿನಬುರುಜು96 3/15 ಪುಟ 16 ಪ್ಯಾರ 6

ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದು

6 ನಾವು ಯೆಹೋವ ದೇವರಿಗೆ ನಿಷ್ಠಾವಂತರಾಗಿರುವುದಾದರೆ, ಆತನ ವೈರಿಗಳಾಗಿರುವವರೆಲ್ಲರೊಂದಿಗೆ ಸ್ನೇಹಿತರಾಗುವುದನ್ನು ತೊರೆಯುವೆವು. ಆ ಕಾರಣದಿಂದಲೇ ಶಿಷ್ಯನಾದ ಯಾಕೋಬನು ಬರೆದುದು: “ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ರಾಜ ದಾವೀದ ಹೀಗಂದನು: “ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸುತ್ತೇನಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವದಿಲ್ಲವೋ? ನಾನು ಅವರನ್ನು ಸಂಪೂರ್ಣವಾಗಿ ಹಗೆಮಾಡುತ್ತೇನೆ; ಅವರು ನನಗೂ ವೈರಿಗಳೇ ಆಗಿದ್ದಾರೆ.” (ಕೀರ್ತನೆ 139:21, 22) ಇಂಥ ನಿಷ್ಠೆಯನ್ನ ನಾವೂ ತೋರಿಸಬೇಕು. ಯಾವುದೇ ಉದ್ದೇಶಪೂರ್ವಕ ಪಾಪಿಗಳೊಂದಿಗೆ ನಾವು ಸ್ನೇಹ ಬೆಳೆಸಲು ಬಯಸುವುದಿಲ್ಲ, ಏಕೆಂದರೆ ನಮಗೆ ಅವರೊಂದಿಗೆ ಸಾಮಾನ್ಯವಾದ ಯಾವ ವಿಷಯವೂ ಇರುವುದಿಲ್ಲ. ದೇವರಿಗೆ ನಾವು ನಿಷ್ಠೆ ತೋರಿಸೋದಾದ್ರೆ, ವೈಯಕ್ತಿಕವಾಗಿ ಅಥವಾ ಟಿವಿ ಮಾಧ್ಯಮದ ಮೂಲಕ ಯೆಹೋವನ ಶತ್ರುಗಳ ಜೊತೆ ಸ್ನೇಹವನ್ನ ಬೆಳಸೋದಿಲ್ಲ.

ಬೈಬಲಿನಲ್ಲಿರುವ ರತ್ನಗಳು

it-2-E ಪುಟ 452 ಪ್ಯಾರ 9

ಸಂಗೀತ

ದೇವಾಲಯದಲ್ಲಿ ಹಾಡು ಹಾಡೋದು ಒಂದು ಪ್ರಾಮುಖ್ಯ ನೇಮಕವಾಗಿತ್ತು. ಇದು ಹೇಗೆ ಗೊತ್ತಾಗುತ್ತಂದ್ರೆ ಬೈಬಲಿನಲ್ಲಿ ಗಾಯಕರ ಬಗ್ಗೆ ತುಂಬ ಕಡೆ ಹೇಳಲಾಗಿದೆ. ಸಾಮಾನ್ಯವಾಗಿ ಲೇವಿಯರು ಮಾಡ್ತಿದ್ದ ಬೇರೆ ಕೆಲಸಗಳನ್ನ ಮಾಡದೆ “ಇವರು ಹಗಲೂರಾತ್ರಿ ತಮ್ಮ ಕೆಲಸದಲ್ಲೇ ಮುಳುಗಿರುತ್ತಿದ್ರು.” ಹಾಗಾಗಿ ಈ ನೇಮಕವನ್ನ ಚೆನ್ನಾಗಿ ಮಾಡೋಕೆ ಆಗ್ತಿತ್ತು. (1ಪೂರ್ವ 9:33) ಬಾಬೆಲಿನಿಂದ ವಾಪಸ್‌ ಬಂದವರ ಹೆಸರುಗಳಲ್ಲಿ ಇವರ ಹೆಸ್ರು ದಾಖಲಾಗಿದ್ರಿಂದ ಇವರು ಲೇವಿಯರಲ್ಲಿ ವಿಶೇಷ ಗುಂಪಿನವರು ಅಂತ ಗೊತ್ತಾಗುತ್ತೆ. (ಎಜ್ರ 2:40, 41) ಸಂಗೀತಗಾರರಿಂದ ಮತ್ತು ವಿಶೇಷ ಗುಂಪಿನವರಿಂದ ‘ತೆರಿಗೆ, ಕಪ್ಪ ಮತ್ತು ಸುಂಕ’ ವಸೂಲಿ ಮಾಡಬಾರದು ಅಂತ ಪರ್ಶಿಯ ರಾಜ ಅರ್ತಷಸ್ತ ಹೇಳಿದ್ದ. (ಎಜ್ರ 7:24) ಅಷ್ಟೇ ಅಲ್ಲ “ಈ ಗಾಯಕರಿಗೆ ಆಯಾ ದಿನಕ್ಕೆ ಬೇಕಾಗುವಷ್ಟು ಆಹಾರವನ್ನ” ಕೊಡಬೇಕಂತನೂ ರಾಜಾಜ್ಞೆಯಾಗಿತ್ತು. ರಾಜ ಅರ್ತಷಸ್ತನಿಂದ ಸಿಕ್ಕಿದ ಅಧಿಕಾರದಿಂದ ಎಜ್ರನೇ ಈ ಆಜ್ಞೆಯನ್ನ ಹೊರಡಿಸಿರಬಹುದು. (ನೆಹೆ 11:23; ಎಜ್ರ 7:18-26) ಈ ಗಾಯಕರೆಲ್ಲ ಲೇವಿಯರಾಗಿದ್ರೂ ಬೈಬಲಿನಲ್ಲಿ ಇವರನ್ನ ವಿಶೇಷ ಗುಂಪಿನವರು ಅಂತ ಹೇಳುತ್ತೆ. ಅದಕ್ಕೆ ಇವರನ್ನ ‘ಗಾಯಕರಾಗಿ, ಲೇವಿಯರಾಗಿ’ ನೇಮಿಸಲಾಯ್ತು.—ನೆಹೆ 7:1; 13:10.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ