ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಜನವರಿ ಪು. 14-19
  • ಯೇಸುವಿನ ಕಣ್ಣೀರು ನಮಗೆ ತುಂಬ ಪಾಠಗಳನ್ನ ಕಲಿಸುತ್ತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸುವಿನ ಕಣ್ಣೀರು ನಮಗೆ ತುಂಬ ಪಾಠಗಳನ್ನ ಕಲಿಸುತ್ತೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸ್ನೇಹಿತರಿಗಾಗಿ ಕಣ್ಣೀರು ಸುರಿಸಿದನು
  • ಜನರಿಗಾಗಿ ಕಣ್ಣೀರು ಸುರಿಸಿದನು
  • ತನ್ನ ಅಪ್ಪನ ಹೆಸರಿಗೋಸ್ಕರ ಕಣ್ಣೀರು ಸುರಿಸಿದ
  • ನಿಮ್ಮ ಕಣ್ಣೀರ ಹಿಂದಿರುವ ರಹಸ್ಯ
    ಎಚ್ಚರ!—2014
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ನಿಮ್ಮ ಕಣ್ಣೀರನ್ನ ಯೆಹೋವ ಕೈಯಾರೆ ಕೂಡಿಸಿಡ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಈಗ ಮೃತರಾಗಿರುವ ದಶಲಕ್ಷಾಂತರ ಜನರು ಪುನಃ ಜೀವಿಸುವರು
    ಕಾವಲಿನಬುರುಜು—1991
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಜನವರಿ ಪು. 14-19

ಅಧ್ಯಯನ ಲೇಖನ 3

ಯೇಸುವಿನ ಕಣ್ಣೀರು ನಮಗೆ ತುಂಬ ಪಾಠಗಳನ್ನ ಕಲಿಸುತ್ತೆ

“ಯೇಸು ಕಣ್ಣೀರು ಸುರಿಸಿದನು.”—ಯೋಹಾ. 11:35.

ಗೀತೆ 84 “ನನಗೆ ಮನಸ್ಸುಂಟು”

ಕಿರುನೋಟa

1-3. ನಾವು ಯಾವಾಗೆಲ್ಲ ಅಳುತ್ತೀವಿ?

ಒಂದಲ್ಲಾ ಒಂದು ಸಮಯದಲ್ಲಿ ನಾವೆಲ್ಲ ಅತ್ತಿದ್ದೀವಿ. ಕೆಲವೊಮ್ಮೆ ಖುಷಿಯಿಂದನೂ ಕಣ್ಣೀರು ಬರುತ್ತೆ. ಆದ್ರೆ ದುಃಖ ಆದಾಗಲೇ ಜಾಸ್ತಿ ಅಳು ಬರೋದು. ಅದ್ರಲ್ಲೂ ನಮ್ಮವರು ಯಾರಾದ್ರೂ ತೀರಿಕೊಂಡಾಗ ತುಂಬ ಅಳ್ತೀವಿ. ಅಮೆರಿಕಾದಲ್ಲಿರೋ ಸಹೋದರಿ ಲೊರಿಲೀ ಹೇಳಿದ್ದು, “ನನ್ನ ಮಗಳು ತೀರಿಹೋದಾಗ ಆದ ದುಃಖನ ತಡ್ಕೊಳ್ಳೋಕೆ ಆಗಲಿಲ್ಲ. ನನ್ನ ಹೃದಯನೇ ಹಿಂಡಿದ ಹಾಗಾಯ್ತು. ಈ ದುಃಖನ ತಡ್ಕೊಳ್ಳೋ ಶಕ್ತಿ ನಂಗಿಲ್ಲ, ನಾನು ದುಃಖದಿಂದ ಹೊರಗೆ ಬರೋಕೆ ಆಗೋದೇ ಇಲ್ಲ ಅನಿಸ್ತಿತ್ತು.”b

2 ಬೇರೆ ಕಾರಣಗಳಿಗೂ ನಮಗೆ ಅಳು ಬರುತ್ತೆ. ಜಪಾನ್‌ನಲ್ಲಿರೋ ಸಹೋದರಿ ಹಿರೋಮಿಯ ಉದಾಹರಣೆ ನೋಡಿ. ಅವರು ಹೇಳಿದ್ದು, “ಸೇವೆ ಮಾಡುವಾಗ ಜನರಿಗೆ ಬೈಬಲ್‌ ಕಲಿಯೋಕೆ ಇಷ್ಟ ಇಲ್ಲದೆ ಇರೋದನ್ನ ನೋಡಿ ನನಗೆ ತುಂಬ ಬೇಜಾರಾಗುತ್ತೆ. ಆಗ ನಾನು ಯೆಹೋವ ದೇವರ ಹತ್ರ ‘ನಿನ್ನ ಬಗ್ಗೆ ಕಲಿಯೋಕೆ ಇಷ್ಟ ಇರೋ ಜನರನ್ನ ಹುಡುಕೋಕೆ ನನಗೆ ಸಹಾಯ ಮಾಡಪ್ಪಾ’ ಅಂತ ಅತ್ತು ಬೇಡಿಕೊಳ್ತೀನಿ.”

3 ಈ ಸಹೋದರಿಯರ ತರ ನಮಗೂ ತುಂಬ ಸಲ ಅನಿಸಿರುತ್ತೆ. (1 ಪೇತ್ರ 5:9) ನಮಗೆ “ಸಂತೋಷದಿಂದ ಯೆಹೋವನ ಸೇವೆ” ಮಾಡೋಕೆ ಆಸೆಯಿದೆ. ಆದ್ರೆ ಕೆಲವೊಂದು ಸಲ ಹಾಗಾಗಲ್ಲ. ನಮಗೆ ತುಂಬ ಹತ್ರ ಆದವರು ತೀರಿಕೊಂಡಾಗ, ನಾವು ಜೀವನದಲ್ಲಿ ಕುಗ್ಗಿಹೋದಾಗ ಅಥವಾ ಯೆಹೋವನಿಗೆ ನಿಯತ್ತಾಗಿರೋಕೆ ಕಷ್ಟ ಆದಾಗ ಅಳುತ್ತೀವಿ. (ಕೀರ್ತ. 6:6; 100:2) ಆಗ ಏನು ಮಾಡೋದು?

4. ಈ ಲೇಖನದಲ್ಲಿ ನಾವೇನು ಕಲಿತೀವಿ?

4 ಕೆಲವೊಮ್ಮೆ ದುಃಖ ತಡ್ಕೊಳ್ಳೋಕೆ ಆಗದೆ ಯೇಸು ಅತ್ತು “ಕಣ್ಣೀರು ಸುರಿಸಿದನು.” ಆತನಿಂದ ನಾವು ತುಂಬ ಪಾಠಗಳನ್ನ ಕಲಿಯಬಹುದು. (ಯೋಹಾ. 11:35; ಲೂಕ 19:41; 22:44; ಇಬ್ರಿ. 5:7) ಯೇಸು ಯಾವಾಗೆಲ್ಲ ಅತ್ತನು? ಇದ್ರಿಂದ ಯೆಹೋವ ಮತ್ತು ಯೇಸು ಬಗ್ಗೆ ನಮಗೇನು ಗೊತ್ತಾಗುತ್ತೆ? ನಮಗೆ ದುಃಖ ಆಗೋ ಸನ್ನಿವೇಶಗಳು ಬಂದಾಗ ಏನು ಮಾಡಬೇಕು? ಇದರ ಬಗ್ಗೆ ನಾವು ಈ ಲೇಖನದಲ್ಲಿ ನೋಡೋಣ.

ಸ್ನೇಹಿತರಿಗಾಗಿ ಕಣ್ಣೀರು ಸುರಿಸಿದನು

ಚಿತ್ರಗಳು: 1. ಮಾರ್ಥ, ಮರಿಯ ಮತ್ತು ಬೇರೆಯವರು ಅಳ್ತಿದ್ದಾರೆ . ಯೇಸುನೂ ಅವರ ಜೊತೆ ಅಳ್ತಿದ್ದಾನೆ . 2. ತನ್ನ ಕುಟುಂಬದವರಲ್ಲಿ ಒಬ್ಬರನ್ನ ಸಾವಲ್ಲಿ ಕಳ್ಕೊಂಡಿರೋ ಸಹೋದರಿಗೆ ಇಬ್ಬರು ಹಿರಿಯರು ಸಮಾಧಾನ ಮಾಡ್ತಿದ್ದಾರೆ .

ದುಃಖದಲ್ಲಿ ಇರೋರಿಗೆ ಯೇಸು ತರ ನೀವೂ ಸಹಾಯ ಮಾಡಿ (ಪ್ಯಾರ 5-9 ನೋಡಿ)d

5. ಯೋಹಾನ 11:32-36ರಲ್ಲಿ ಯೇಸು ಬಗ್ಗೆ ನಾವೇನು ತಿಳಿದುಕೊಳ್ತೀವಿ?

5 ಕ್ರಿಸ್ತಶಕ 32ರ ಚಳಿಗಾಲದಲ್ಲಿ ಯೇಸುವಿನ ಸ್ನೇಹಿತ ಲಾಜರ ಹುಷಾರಿಲ್ಲದೆ ತೀರಿಹೋದ. (ಯೋಹಾ. 11:3, 14) ಅವನು ಮತ್ತು ಅವನ ಅಕ್ಕಂದಿರಾದ ಮಾರ್ಥ, ಮರಿಯ ಯೇಸುವಿನ ಸ್ನೇಹಿತರಾಗಿದ್ದರು. ಲಾಜರ ತೀರಿಹೋದಾಗ ಅವನ ಅಕ್ಕಂದಿರಿಗೆ ಆಕಾಶನೇ ತಲೆ ಮೇಲೆ ಬಿದ್ದ ಹಾಗೆ ಆಯಿತು. ಸುದ್ದಿ ಕೇಳಿದಾಗ ಯೇಸು ಬೇಥಾನ್ಯಕ್ಕೆ ಬಂದನು. ಆಗ ಮಾರ್ಥ ಯೇಸುವಿನ ಹತ್ರ ಓಡಿ ಬಂದು “ಪ್ರಭು, ನೀನು ಇಲ್ಲಿ ಇರ್ತಿದ್ರೆ ನನ್ನ ತಮ್ಮ ಸಾಯ್ತಿರಲಿಲ್ಲ” ಅಂತ ಹೇಳಿದಳು. (ಯೋಹಾ. 11:21) ಮರಿಯ ಮತ್ತು ಬೇರೆಯವರೆಲ್ಲ ಅಳುತ್ತಿರೋದನ್ನ ನೋಡಿ ಯೇಸುನೂ “ಕಣ್ಣೀರು ಸುರಿಸಿದನು.”—ಯೋಹಾನ 11:32-36 ಓದಿ.

6. ಯೇಸು ಯಾಕೆ ಅತ್ತನು?

6 ಯೇಸು ಯಾಕೆ ಅತ್ತನು? ಇದಕ್ಕೆ ಉತ್ತರ ಶಾಸ್ತ್ರಗಳ ಒಳನೋಟ ಅನ್ನೋ ಇಂಗ್ಲಿಷ್‌ ಪುಸ್ತಕ ಕೊಡುತ್ತೆ. “ತನ್ನ ಆಪ್ತ ಸ್ನೇಹಿತನಾದ ಲಾಜರ ತೀರಿಕೊಂಡಿದ್ದನ್ನ ಮತ್ತು ಅವನ ಅಕ್ಕಂದಿರು ಅಳುತ್ತಾ ಇದ್ದಿದ್ದನ್ನ ನೋಡಿ ಯೇಸು ‘ಒಳಗೊಳಗೇ ನೊಂದ್ಕೊಂಡು ದುಃಖಪಟ್ಟನು.’”c ಲಾಜರನಿಗೆ ಹುಷಾರಿಲ್ಲದೆ ಇದ್ದಾಗ ಮತ್ತು ಸಾಯುವಾಗ ಎಷ್ಟು ನೋವಾಗಿರಬೇಕು ಅಂತ ಯೇಸು ಯೋಚನೆ ಮಾಡಿರಬಹುದು. ಅಷ್ಟೇ ಅಲ್ಲ, ಲಾಜರ ತೀರಿಹೋದಾಗ ಅವನ ಅಕ್ಕಂದಿರಿಗಾದ ದುಃಖನ ನೋಡಿ ಯೇಸುಗೆ ತುಂಬ ದುಃಖ ಆಯ್ತು. ನಮ್ಮ ಕುಟುಂಬದಲ್ಲಿ ಯಾರಾದ್ರೂ ತೀರಿಕೊಂಡಾಗ ಎಷ್ಟು ನೋವಾಗುತ್ತೆ ಅಂತ ನಮಗೂ ಗೊತ್ತು. ಆಗ ನಾವೇನು ಮಾಡಬೇಕು? ಸ್ನೇಹಿತನಿಗೋಸ್ಕರ ಯೇಸು ಸುರಿಸಿದ ಕಣ್ಣೀರು ನಮಗೆ ಯಾವ ಮೂರು ಪಾಠಗಳನ್ನ ಕಲಿಸುತ್ತೆ ಅಂತ ಈಗ ನೋಡೋಣ.

7. ಸ್ನೇಹಿತನಿಗೋಸ್ಕರ ಯೇಸು ಅತ್ತಿದ್ದು ಯೆಹೋವನ ಬಗ್ಗೆ ನಮಗೇನು ಕಲಿಸುತ್ತೆ?

7 ಯೆಹೋವ ನಮ್ಮ ನೋವನ್ನ ತುಂಬ ಚೆನ್ನಾಗಿ ಅರ್ಥಮಾಡಿಕೊಳ್ತಾನೆ. ಯೇಸುವಿನ “ಗುಣಗಳೆಲ್ಲ ಆತನ ತಂದೆ ತರಾನೇ” ಇದೆ. (ಇಬ್ರಿ. 1:3) ನಮ್ಮವರು ಯಾರಾದ್ರೂ ತೀರಿಹೋದಾಗ ಯೆಹೋವನಿಗೆ ಹೇಗನಿಸುತ್ತೆ ಅಂತ ಯೇಸು ಅತ್ತಿದ್ರಿಂದ ನಮಗೆ ಅರ್ಥ ಆಗುತ್ತೆ. (ಯೋಹಾ. 14:9) ಇಂಥ ಸನ್ನಿವೇಶದಲ್ಲಿ ಯೆಹೋವ ನಮ್ಮ ದುಃಖನ ನೋಡುವುದಷ್ಟೇ ಅಲ್ಲ, ಆತನಿಗೂ ತುಂಬ ದುಃಖ ಆಗುತ್ತೆ. ಆ ದುಃಖದಿಂದ ಹೊರಗೆ ಬರೋಕೆ ನಮಗೆ ಸಹಾಯನೂ ಮಾಡುತ್ತಾನೆ.—ಕೀರ್ತ. 34:18; 147:3.

8. ಯೇಸು ಸತ್ತವರಿಗೆ ಜೀವ ಕೊಡುತ್ತಾನೆ ಅಂತ ಯಾಕೆ ಗ್ಯಾರಂಟಿಯಾಗಿ ಹೇಳಬಹುದು?

8 ತೀರಿಹೋಗಿರೋ ನಿಮ್ಮವರಿಗೆ ಪುನಃ ಜೀವ ಕೊಡೋ ಆಸೆ ಯೇಸುಗಿದೆ. ಯೇಸು ಅಳುವ ಮುಂಚೆ ಮಾರ್ಥ ಹತ್ರ “ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ” ಅಂತ ಹೇಳಿದನು. ಮಾರ್ಥ ಯೇಸುವಿನ ಮಾತನ್ನ ನಂಬಿದಳು. (ಯೋಹಾ. 11:23-27) ಅವಳು ಯೆಹೋವನನ್ನು ಆರಾಧಿಸುತ್ತಿದ್ದಳು. ಹಾಗಾಗಿ ಈ ಮುಂಚೆ ಪ್ರವಾದಿ ಎಲೀಯ ಮತ್ತು ಎಲೀಷ ಸತ್ತವರಿಗೆ ಜೀವ ಕೊಟ್ಟಿದ್ದು ಅವಳಿಗೆ ಗೊತ್ತಿತ್ತು. (1 ಅರ. 17:17-24; 2 ಅರ. 4:32-37) ಯೇಸು ಕೆಲವರಿಗೆ ಪುನಃ ಜೀವ ಕೊಟ್ಟಿದ್ದೂ ಅವಳಿಗೆ ಗೊತ್ತಿತ್ತು. (ಲೂಕ 7:11-15; 8:41, 42, 49-56) ನೀವು ಕಳಕೊಂಡಿರೋ ಜನರಿಗೂ ಯೇಸು ಪುನಃ ಜೀವ ಕೊಡುತ್ತಾನೆ ಅಂತ ನೀವು ನಂಬಬಹುದು. ಯಾಕಂದ್ರೆ ಅವನು ಜನರಿಗೆ ಸಮಾಧಾನ ಹೇಳಿದ್ದು ಮಾತ್ರ ಅಲ್ಲ, ಅವರ ಜೊತೆ ಅತ್ತನು. ಇದ್ರಿಂದ ಸತ್ತವರಿಗೆ ಜೀವ ಕೊಡೋಕೆ ಆತನಿಗೆ ಆಸೆ ಇದೆ ಅಂತ ನಮಗೆ ಗೊತ್ತಾಗುತ್ತೆ.

9. ದುಃಖದಲ್ಲಿ ಇರೋರಿಗೆ ನಾವು ಯೇಸು ತರ ಹೇಗೆ ಸಹಾಯ ಮಾಡಬಹುದು? ಉದಾಹರಣೆ ಕೊಡಿ.

9 ದುಃಖದಲ್ಲಿ ಇರೋರಿಗೆ ಸಹಾಯ ಮಾಡಿ. ಮಾರ್ಥ ಮತ್ತು ಮರಿಯ ಜೊತೆ ಯೇಸು ಅತ್ತಿದ್ದು ಮಾತ್ರ ಅಲ್ಲ, ಅವರು ಹೇಳೋದನ್ನ ಕೇಳಿಸಿಕೊಂಡನು. ಅವರಿಗೆ ಸಮಾಧಾನ ಮಾಡಿದನು, ಧೈರ್ಯ ತುಂಬಿದನು. ನಾವೂ ದುಃಖದಲ್ಲಿ ಇರೋರಿಗೆ ಹೀಗೇ ಸಹಾಯ ಮಾಡಬೇಕು. ಆಸ್ಟ್ರೇಲಿಯದಲ್ಲಿ ಇರೋ ಡ್ಯಾನ್‌ ಅನ್ನೋ ಹಿರಿಯನ ಅನುಭವ ನೋಡಿ. ಅವರು ಹೇಳಿದ್ದು: “ನನ್ನ ಹೆಂಡತಿ ತೀರಿಹೋದಾಗ ನನಗೆ ತುಂಬ ದುಃಖ ಆಯ್ತು. ನನಗೆ ಸಹಾಯ ಬೇಕಾಯ್ತು. ಎಷ್ಟೋ ಸಹೋದರ ಸಹೋದರಿಯರು ಪ್ರತಿದಿನ ನಮ್ಮ ಮನೆಗೆ ಬಂದು ನಾನು ಹೇಳೋದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದರು. ನಾನು ಅಳುವಾಗ ನನ್ನನ್ನ ವಿಚಿತ್ರವಾಗಿ ನೋಡುತ್ತಿರಲಿಲ್ಲ. ಮನೆಕೆಲಸ ಮಾಡೋಕೆ, ಕಾರ್‌ ತೊಳೆಯೋಕೆ, ರೇಷನ್‌ ತಗೊಂಡು ಬರೋಕೆ, ಅಡುಗೆ ಮಾಡೋಕೆ ಅವರು ನನಗೆ ತುಂಬಾ ಸಹಾಯ ಮಾಡ್ತಿದ್ರು. ಅವರು ಆಗಾಗ ನನ್ನ ಜೊತೆ ಕೂತುಕೊಂಡು ಪ್ರಾರ್ಥನೆ ಮಾಡ್ತಿದ್ರು. ‘ನಿಜವಾದ ಸ್ನೇಹಿತರು ಕಷ್ಟಕಾಲದಲ್ಲಿ ನಮ್ಮ ಸಹೋದರರಾಗ್ತಾರೆ’ ಅನ್ನೋ ಮಾತು ನಿಜ ಅಂತ ತೋರಿಸಿಕೊಟ್ಟರು.”—ಜ್ಞಾನೋ. 17:17.

ಜನರಿಗಾಗಿ ಕಣ್ಣೀರು ಸುರಿಸಿದನು

10. ಲೂಕ 19:36-40ರಲ್ಲಿರೋ ಘಟನೆಯನ್ನ ವಿವರಿಸಿ.

10 ಕ್ರಿಸ್ತಶಕ 33, ನೈಸಾನ್‌ 9ರಂದು ಯೇಸು ಯೆರೂಸಲೇಮಿಗೆ ಬಂದನು. ಆಗ ಅಲ್ಲಿದ್ದ ಜನರೆಲ್ಲಾ ತಮ್ಮ ಬಟ್ಟೆಗಳನ್ನ ದಾರಿಯಲ್ಲಿ ಹಾಸಿ ಖುಷಿಖುಷಿಯಿಂದ ಯೇಸುವನ್ನ ರಾಜನಾಗಿ ಸ್ವಾಗತಿಸಿದರು. (ಲೂಕ 19:36-40 ಓದಿ.) ಆದ್ರೆ ಇದಾದ ಮೇಲೆ ನಡೆದ ವಿಷಯವನ್ನು ನೋಡಿದಾಗ ಶಿಷ್ಯರಿಗೆ ಆಶ್ಚರ್ಯ ಆಯ್ತು. ಯಾಕಂದ್ರೆ ‘ಯೇಸು ಯೆರೂಸಲೇಮ್‌ ಹತ್ರ ಬಂದಾಗ ಆ ಪಟ್ಟಣ ನೋಡಿ ಅತ್ತನು.’ ಮುಂದೆ ಆ ಜನರಿಗೆ ಏನೆಲ್ಲಾ ಕೆಟ್ಟದಾಗುತ್ತೆ ಅಂತ ಅಳುತ್ತಾ ಹೇಳಿದನು.—ಲೂಕ 19:41-44.

11. ಯೆರೂಸಲೇಮಿನ ಜನರಿಗಾಗಿ ಯೇಸು ಯಾಕೆ ಅತ್ತನು?

11 ಈಗ ಇಷ್ಟು ಖುಷಿಖುಷಿಯಿಂದ ಸ್ವಾಗತಿಸುತ್ತಿರೋ ಜನರಲ್ಲಿ ತುಂಬ ಜನ ಮುಂದೆ ಯೇಸು ಹೇಳೋ ಸಂದೇಶನ ಕೇಳಲ್ಲ ಅಂತ ಆತನಿಗೆ ಗೊತ್ತಿತ್ತು. ಇದ್ರಿಂದ ಯೆರೂಸಲೇಮ್‌ ನಾಶ ಆಗುತ್ತೆ ಮತ್ತು ಅಲ್ಲಿ ಬದುಕಿ ಉಳಿದವರು ಬೇರೆ ದೇಶಕ್ಕೆ ಕೈದಿಗಳಾಗಿ ಹೋಗ್ತಾರೆ ಅನ್ನೋದು ಯೇಸುಗೆ ಗೊತ್ತಿತ್ತು. ಇದನ್ನ ನೆನಸಿಕೊಂಡು ಯೇಸು ಅತ್ತನು. (ಲೂಕ 21:20-24) ಯೇಸು ಹೇಳಿದ ಹಾಗೇ ನಡಿತು. ತುಂಬ ಜನ ಯೇಸುವಿನ ಸಂದೇಶವನ್ನ ಕೇಳಿಸಿಕೊಳ್ಳಲಿಲ್ಲ. ಇವತ್ತು ನಿಮ್ಮ ಟೆರಿಟೊರಿಯಲ್ಲಿರೋ ತುಂಬ ಜನ ನೀವು ಹೇಳೋ ಸಂದೇಶನ ಕೇಳಿಸಿಕೊಳ್ಳದೇ ಹೋಗಬಹುದು. ಆಗ ಏನು ಮಾಡೋದು? ಯೇಸು ಜನರಿಗೋಸ್ಕರ ಸುರಿಸಿದ ಕಣ್ಣೀರು ನಮಗೆ ಮೂರು ಪಾಠಗಳನ್ನ ಕಲಿಸುತ್ತೆ. ಅದನ್ನೀಗ ನೋಡೋಣ.

12. ಜನರಿಗೋಸ್ಕರ ಯೇಸು ಕಣ್ಣೀರು ಸುರಿಸಿದ್ರಿಂದ ಯೆಹೋವ ದೇವರ ಬಗ್ಗೆ ನಾವೇನು ಕಲಿತೀವಿ?

12 ಯೆಹೋವ ದೇವರಿಗೆ ಜನರ ಮೇಲೆ ತುಂಬ ಪ್ರೀತಿ ಇದೆ. ಯೇಸು ಕಣ್ಣೀರು ಸುರಿಸಿದ್ದು ಯೆಹೋವಗೆ ಜನರ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸುತ್ತೆ. “ಯಾರೂ ನಾಶ ಆಗಬಾರದು ಅಂತ ದೇವರು ತಾಳ್ಮೆಯಿಂದ ಕಾಯ್ತಾ ಇದ್ದಾನೆ. ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ.” (2 ಪೇತ್ರ 3:9) ಯೆಹೋವ ದೇವರ ತರ ನಾವೂ ಜನರನ್ನ ಪ್ರೀತಿಸ್ತೀವಿ. ಅದಕ್ಕೆ ನಾವು ಜನರಿಗೆ ಸಿಹಿಸುದ್ದಿ ಸಾರೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡ್ತೀವಿ.—ಮತ್ತಾ. 22:39.

ಚಿತ್ರಗಳು: 1. ನಿಕೊದೇಮನಿಗೆ ಯೇಸು ರಾತ್ರಿ ಹೊತ್ತಲ್ಲಿ ಕಲಿಸ್ತಿದ್ದಾನೆ . 2. ರಾತ್ರಿ ತುಂಬ ಹೊತ್ತಾಗಿದ್ರೂ ಅಂಗಡಿಯ ಕ್ಯಾಶಿಯರ್‌ ಜೊತೆ ಒಬ್ಬ ಸಹೋದರ ಬೈಬಲ್‌ ಸ್ಟಡಿ ಮಾಡ್ತಿದ್ದಾರೆ .

ಸೇವೆ ಮಾಡುವಾಗ ಯೇಸು ತರ ಹೊಂದಾಣಿಕೆಗಳನ್ನು ಮಾಡಿ (ಪ್ಯಾರ 13-14 ನೋಡಿ)e

13-14. (ಎ) ಯೇಸು ಜನರಿಗೆ ಹೇಗೆ ಕರುಣೆ ತೋರಿಸಿದನು? (ಬಿ) ಈ ಗುಣನ ನಾವು ಹೇಗೆ ಬೆಳೆಸಿಕೊಳ್ಳೋದು?

13 ಸೇವೆಗೋಸ್ಕರ ಯೇಸು ತನ್ನಿಂದ ಆಗಿದ್ದನ್ನೆಲ್ಲ ಮಾಡಿದನು. ಯೇಸು ಜನರನ್ನ ತುಂಬ ಪ್ರೀತಿಸುತ್ತಿದ್ದನು. ಹಾಗಾಗಿ ಅವರಿಗೆ ಕಲಿಸೋಕೆ ಸಿಕ್ಕ ಎಲ್ಲಾ ಅವಕಾಶವನ್ನೂ ಉಪಯೋಗಿಸಿಕೊಂಡನು. (ಲೂಕ 19:47, 48) ಜನರ ಮೇಲೆ ಯೇಸುಗೆ ಕರುಣೆ ಇದ್ದಿದ್ರಿಂದ ಹೀಗೆ ಮಾಡಿದನು. ಎಷ್ಟೋ ಸಲ ಜನರು ಯೇಸುವಿನ ಮಾತು ಕೇಳೋಕೆ ಗುಂಪುಗುಂಪಾಗಿ ಆತನ ಹತ್ರ ಬರುತ್ತಿದ್ದರು. ಇದ್ರಿಂದ ‘ಯೇಸುಗೆ ಮತ್ತು ಅವನ ಶಿಷ್ಯರಿಗೆ ಊಟ ಮಾಡೋಕೂ’ ಸಮಯ ಸಿಗುತ್ತಿರಲಿಲ್ಲ. (ಮಾರ್ಕ 3:20) ಕಲಿಯೋ ಆಸೆ ಇದ್ದವರಿಗೆ ಯೇಸು ರಾತ್ರಿ ಹೊತ್ತಲ್ಲೂ ಕಲಿಸುತ್ತಿದ್ದನು. (ಯೋಹಾ. 3:1, 2) ಯೇಸುವಿನ ಸಂದೇಶ ಕೇಳಿದವರೆಲ್ಲಾ ಆತನ ಶಿಷ್ಯರಾಗಲಿಲ್ಲ. ಆದ್ರೆ ಅವರಿಗೆ ಸಿಹಿಸುದ್ದಿ ಕೇಳಿಸಿಕೊಳ್ಳೋ ಅವಕಾಶ ಸಿಕ್ಕಿತು. ಇವತ್ತು ನಾವು ಪ್ರತಿಯೊಬ್ಬರಿಗೂ ಸಿಹಿಸುದ್ದಿ ಸಿಗೋ ಹಾಗೆ ಮಾಡಬೇಕು. (ಅ. ಕಾ. 10:42) ಅದಕ್ಕಾಗಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು.

14 ಹೊಂದಾಣಿಕೆ ಮಾಡಿಕೊಳ್ಳಿ. ನಾವು ಬೇರೆಬೇರೆ ಸಮಯದಲ್ಲಿ ಸೇವೆ ಮಾಡಿದ್ರೆ ತುಂಬ ಜನರಿಗೆ ಸಿಹಿಸುದ್ದಿ ತಲುಪಿಸಬಹುದು. ಮೇಘನ ಅನ್ನೋ ಪಯನೀಯರ್‌ ಸಹೋದರಿ ಏನು ಹೇಳಿದ್ರು ನೋಡಿ, “ನನ್ನ ಗಂಡ ಮತ್ತು ನಾನು ಬೇರೆಬೇರೆ ಸಮಯದಲ್ಲಿ ಸೇವೆ ಮಾಡ್ತೀವಿ. ಬೆಳಗ್ಗೆ ಅಂಗಡಿಗಳಲ್ಲಿ ಸಾರುತ್ತೀವಿ, ಮಧ್ಯಾಹ್ನ ತಳ್ಳುಬಂಡಿ ಸಾಕ್ಷಿಕಾರ್ಯ ಮಾಡ್ತೀವಿ, ಸಂಜೆ ಜನರು ಮನೆಯಲ್ಲಿ ಇರೋದ್ರಿಂದ ಮನೆಮನೆ ಸೇವೆ ಮಾಡ್ತೀವಿ.” ನಾವು ನಮಗೆ ಅನುಕೂಲವಾದಾಗ ಅಲ್ಲ, ಜನರಿಗೆ ಅನುಕೂಲವಾದಾಗ, ಅವರು ಸಿಗೋ ಸಮಯದಲ್ಲಿ ಸೇವೆ ಮಾಡಬೇಕು. ಹೀಗೆ ಮಾಡಿದ್ರೆ ತುಂಬ ಜನರಿಗೆ ನಮ್ಮ ಸಂದೇಶ ತಲಪುತ್ತೆ. ಯೆಹೋವ ದೇವರಿಗೂ ಸಂತೋಷ ಆಗುತ್ತೆ.

ತನ್ನ ಅಪ್ಪನ ಹೆಸರಿಗೋಸ್ಕರ ಕಣ್ಣೀರು ಸುರಿಸಿದ

ಚಿತ್ರಗಳು: 1. ಯೇಸು ಪ್ರಾರ್ಥನೆ ಮಾಡಿದಾಗ ಅವನಿಗೆ ಧೈರ್ಯ ತುಂಬೋಕೆ ಒಬ್ಬ ದೇವದೂತ ಬರ್ತಿದ್ದಾನೆ . 2. ಒಬ್ಬ ಸಹೋದರ ಜೈಲಲ್ಲಿ ಪ್ರಾರ್ಥನೆ ಮಾಡ್ತಿರೋದನ್ನ ಆ ಜೈಲಿನ ಸಿಬ್ಬಂದಿ ನೋಡ್ತಿದ್ದಾನೆ .

ಕಷ್ಟದಲ್ಲಿದ್ದಾಗ ಯೇಸು ತರ ಯೆಹೋವನ ಹತ್ರ ಅಂಗಲಾಚಿ ಬೇಡಿಕೊಳ್ಳಿ (ಪ್ಯಾರ 15-17 ನೋಡಿ)f

15. ಯೇಸು ತೀರಿಹೋಗೋ ಹಿಂದಿನ ರಾತ್ರಿ ಏನಾಯ್ತು? (ಲೂಕ 22:39-44)

15 ಕ್ರಿಸ್ತಶಕ 33, ನೈಸಾನ್‌ 14ರ ರಾತ್ರಿಯಲ್ಲಿ ಯೇಸು ಗೆತ್ಸೇಮನೆ ತೋಟದ ಹತ್ರ ಬಂದನು. ಅಲ್ಲಿ ಅವನು ಯೆಹೋವ ದೇವರಿಗೆ ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡಿದನು. (ಲೂಕ 22:39-44 ಓದಿ.) “ದೇವರಿಗೆ ಗಟ್ಟಿಯಾಗಿ ಕೂಗ್ತಾ ಅತ್ತು ಅತ್ತು ಅಂಗಲಾಚಿ ಬೇಡಿದ, ವಿನಂತಿಗಳನ್ನ ಮಾಡಿದ.” (ಇಬ್ರಿ. 5:7) ಯೇಸು ಯಾವುದಕ್ಕಾಗಿ ಬೇಡಿಕೊಂಡನು? ಯೆಹೋವಗೆ ನಿಯತ್ತಾಗಿರೋಕೆ ಮತ್ತು ಆತನು ಕೊಟ್ಟ ಕೆಲಸ ಮಾಡೋಕೆ ಯೇಸುಗೆ ಆಸೆ ಇತ್ತು. ಆದ್ರೆ ಅದನ್ನ ಮಾಡೋಕೆ ಯೇಸುಗೆ ಬಲ ಬೇಕಿತ್ತು. ಅದಕ್ಕೆ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದನು. ಇದನ್ನ ಕೇಳಿ ಯೆಹೋವ ದೇವರು ತನ್ನ ಮಗನಿಗೆ ಬಲ ಕೊಡೋಕೆ ಒಬ್ಬ ದೇವದೂತನನ್ನ ಕಳುಹಿಸಿದನು.

16. ಯೇಸು ಪ್ರಾರ್ಥನೆ ಮಾಡುವಾಗ ಯಾಕೆ ಅತ್ತನು?

16 ಯೆಹೋವ ದೇವರಿಗೆ ಅವಮಾನ ಮಾಡೋ ವಿಷಯದ ಬಗ್ಗೆ ಯೇಸು ಯೋಚನೆ ಕೂಡ ಮಾಡಿರಲಿಲ್ಲ. ಆದ್ರೆ ಜನರು ಆತನ ಮೇಲೆ ಅದೇ ಆರೋಪವನ್ನ ಹಾಕೋಕೆ ನೋಡುತ್ತಿದ್ದರು. ಅದಕ್ಕೆ ಯೇಸು ಅತ್ತನು. ಅವನು ಅಳೋಕೆ ಇನ್ನೊಂದು ಕಾರಣನೂ ಇತ್ತು. ಅವನು ಯೆಹೋವ ದೇವರ ಹೆಸರಿಗೆ ಗೌರವ ಬರೋ ತರ ನಡಕೊಳ್ಳಬೇಕಿತ್ತು. ಮುಂದೆ ಅವನು ತುಂಬ ಕಷ್ಟ, ನೋವನ್ನ ಅನುಭವಿಸಿ ಸಾಯುವಾಗಲೂ ಯೆಹೋವ ದೇವರಿಗೆ ನಿಯತ್ತಾಗಿ ಇರಬೇಕಿತ್ತು. ಆ ಜವಾಬ್ದಾರಿ ಅವನ ಹೆಗಲ ಮೇಲಿತ್ತು. ಅದಕ್ಕೆ ಅವನು ಸಹಾಯಕ್ಕಾಗಿ ಅಳುತ್ತಾ ಬೇಡಿಕೊಂಡನು. ಯೆಹೋವ ದೇವರಿಗೆ ನಿಯತ್ತಾಗಿರೋಕೆ ಕಷ್ಟ ಆಗೋ ಸನ್ನಿವೇಶಗಳು ನಿಮಗೆ ಬಂದಾಗ ಏನು ಮಾಡಬೇಕು? ಯೆಹೋವನ ಹೆಸರಿಗೋಸ್ಕರ ಯೇಸು ಸುರಿಸಿದ ಕಣ್ಣೀರು ನಮಗೆ ಮೂರು ಪಾಠಗಳನ್ನ ಕಲಿಸುತ್ತೆ. ಅದನ್ನೀಗ ನೋಡೋಣ.

17. (ಎ) ಯೇಸುವಿನ ಪ್ರಾರ್ಥನೆಗೆ ಯೆಹೋವ ಯಾಕೆ ಉತ್ತರ ಕೊಟ್ಟನು? (ಬಿ) ಇದ್ರಿಂದ ಯೆಹೋವನ ಬಗ್ಗೆ ನಮಗೇನು ಗೊತ್ತಾಗುತ್ತೆ?

17 ನಾವು ಅಂಗಲಾಚಿ ಬೇಡಿದಾಗ ಯೆಹೋವ ದೇವರು ಕೇಳುತ್ತಾನೆ. ಯೆಹೋವ ದೇವರಿಗೆ ನಿಯತ್ತಾಗಿರಬೇಕು ಮತ್ತು ಆತನ ಹೆಸರಿಗೆ ಗೌರವ ತರಬೇಕು ಅನ್ನೋದೇ ಯೇಸು ಮನಸ್ಸಲ್ಲಿತ್ತು. ಅದಕ್ಕೇ ಯೇಸು ಅಂಗಲಾಚಿ ಬೇಡಿಕೊಂಡಾಗ ಯೆಹೋವ ಅದನ್ನ ಕೇಳಿದನು. ಯೇಸುವಿನ ತರ ನಾವೂ ಯೆಹೋವ ದೇವರಿಗೆ ಯಾವಾಗಲೂ ನಿಯತ್ತಾಗಿರಬೇಕು ಮತ್ತು ಆತನ ಹೆಸರಿಗೆ ಗೌರವ ತರಬೇಕು ಅನ್ನೋದು ನಮ್ಮ ಮನಸ್ಸಲ್ಲಿ ಇರಬೇಕು. ಆಗ ಯೆಹೋವ ನಮ್ಮ ಪ್ರಾರ್ಥನೆಗಳಿಗೆ ಖಂಡಿತ ಉತ್ತರ ಕೊಡ್ತಾನೆ.—ಕೀರ್ತ. 145:18, 19.

18. ಯೇಸು ನಮ್ಮನ್ನ ಅರ್ಥಮಾಡಿಕೊಳ್ಳೋ ಸ್ನೇಹಿತ ಅಂತ ಹೇಗೆ ಹೇಳಬಹುದು?

18 ಯೇಸು ನಮ್ಮ ಭಾವನೆಗಳನ್ನ ಅರ್ಥಮಾಡಿಕೊಳ್ತಾನೆ ಮತ್ತು ಸ್ಪಂದಿಸುತ್ತಾನೆ. ನಾವು ದುಃಖದಲ್ಲಿರುವಾಗ ನಮ್ಮನ್ನ ಅರ್ಥಮಾಡಿಕೊಳ್ಳೋ ಫ್ರೆಂಡ್‌ ನಮ್ಮ ಜೊತೆ ಇದ್ರೆ ಮನಸ್ಸಿಗೆ ನೆಮ್ಮದಿಯಾಗುತ್ತೆ. ಅದ್ರಲ್ಲೂ ನಾವು ಅನುಭವಿಸಿರೋ ಕಷ್ಟಗಳನ್ನೇ ಅನುಭವಿಸಿರೋ ವ್ಯಕ್ತಿ ಇದ್ದರಂತೂ ನಮಗೆ ಇನ್ನೂ ಧೈರ್ಯ ಬರುತ್ತೆ. ಕಷ್ಟ ಬಂದಾಗ ನಮಗೆ ಏನು ಅನಿಸುತ್ತೆ, ಏನು ಸಹಾಯ ಬೇಕು ಅನ್ನೋದು ಯೇಸುಗೆ ಚೆನ್ನಾಗಿ ಗೊತ್ತು. ಯಾಕಂದ್ರೆ ಯೇಸುನೂ ನಮ್ಮ ತರಾನೇ ಕಷ್ಟಗಳನ್ನ ಅನುಭವಿಸಿದ್ದಾನೆ, ಅಷ್ಟೇ ಅಲ್ಲ, ನಮಗೆ ‘ಬೇಕಾದ ಸಹಾಯನೂ’ ಮಾಡ್ತಾನೆ. ಹಾಗಾಗಿ ಯೇಸುನ ಒಳ್ಳೇ ಫ್ರೆಂಡ್‌ ಅಂತ ಹೇಳಬಹುದು. (ಇಬ್ರಿ. 4:15, 16) ಗೆತ್ಸೇಮನೆ ತೋಟದಲ್ಲಿ ದೇವದೂತ ಸಹಾಯ ಮಾಡಿದಾಗ ಯೇಸು ಅದನ್ನ ಸ್ವೀಕರಿಸಿದನು. ಅದೇ ತರ ಯೆಹೋವ ಇವತ್ತು ನಮಗೆ, ಪುಸ್ತಕ-ಪತ್ರಿಕೆಗಳು, ವಿಡಿಯೋಗಳು, ಭಾಷಣಗಳು, ಹಿರಿಯರು ಅಥವಾ ಸಹೋದರ ಸಹೋದರಿಯರಿಂದ ಸಹಾಯ ಮಾಡ್ತಾನೆ. ಅದನ್ನ ನಾವು ಸ್ವೀಕರಿಸಬೇಕು.

19. ಕಷ್ಟದ ಪರಿಸ್ಥಿತಿಯಲ್ಲಿರುವಾಗ ನಾವೇನು ಮಾಡಬೇಕು ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.

19 ಯೆಹೋವ ನಮಗೆ “ಶಾಂತಿ” ಕೊಡುತ್ತಾನೆ. ನಾವು ಪ್ರಾರ್ಥನೆ ಮಾಡುವಾಗ ದೇವರು ನಮಗೆ “ತಿಳುವಳಿಕೆಗೂ ಮೀರಿದ ಶಾಂತಿಯನ್ನ” ಕೊಡುತ್ತಾ ನಮ್ಮನ್ನ ಬಲಪಡಿಸ್ತಾನೆ. (ಫಿಲಿ. 4:6, 7) ಆಗ ನಾವು ಚಿಂತೆಯಿಂದ ಹೊರಗೆ ಬರೋಕೆ ಆಗುತ್ತೆ ಮತ್ತು ಸರಿಯಾಗಿ ಯೋಚನೆ ಮಾಡೋಕೂ ಆಗುತ್ತೆ. ಸಹೋದರಿ ಲೀನಾ ಅವರ ಜೀವನದಲ್ಲೂ ಹೀಗೇ ನಡಿತು. ಅವರು ಹೇಳೋದು, “ಕೆಲವೊಂದು ಸಲ ನಂಗೆ ಯಾರು ಇಲ್ಲ, ನಾನು ತಬ್ಬಲಿ ಆಗಿದ್ದೀನಿ, ಯೆಹೋವ ದೇವರೂ ನನ್ನನ್ನ ಪ್ರೀತಿಸಲ್ಲ ಅಂತ ಅನಿಸುತ್ತಿತ್ತು. ಆಗೆಲ್ಲಾ ನಾನು ಯೆಹೋವ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದೆ. ಆಗ ನಂಗೆ ಮನಶ್ಶಾಂತಿ ಸಿಗುತ್ತಿತ್ತು. ಸರಿಯಾಗಿ ಯೋಚನೆ ಮಾಡೋಕೆ ಆಗುತ್ತಿತ್ತು.” ಪ್ರಾರ್ಥನೆ ಮಾಡಿದ್ರೆ ನಮಗೂ ಮನಶ್ಶಾಂತಿ ಸಿಗುತ್ತೆ ಅಂತ ಈ ಸಹೋದರಿಯ ಅನುಭವದಿಂದ ಗೊತ್ತಾಗುತ್ತೆ.

20. ಯೇಸುವಿನ ಕಣ್ಣೀರು ನಮಗೆ ಯಾವೆಲ್ಲಾ ಪಾಠಗಳನ್ನ ಕಲಿಸಿತು?

20 ಯೇಸುವಿನ ಕಣ್ಣೀರು ನಮಗೆ ತುಂಬ ಪಾಠಗಳನ್ನ ಕಲಿಸಿತು. ನಮ್ಮ ಪ್ರಿಯರನ್ನ ಮರಣದಲ್ಲಿ ಕಳೆದುಕೊಂಡಾಗ ಯೆಹೋವ ಮತ್ತು ಯೇಸು ನಮ್ಮನ್ನ ಖಂಡಿತ ಬಲಪಡಿಸ್ತಾರೆ ಅಂತ ನೋಡಿದ್ವಿ. ಅವರ ತರಾನೇ ನಾವೂ ತೀರಿಹೋದವರಿಗಾಗಿ ದುಃಖ ಪಡುತ್ತಿರೋ ನಮ್ಮ ಮಿತ್ರರನ್ನ ಬಲಪಡಿಸಬೇಕು. ಜನರಿಗೆ ಸಿಹಿಸುದ್ದಿ ಸಾರುತ್ತಾ ಮತ್ತು ಕಲಿಸ್ತಾ ನಾವು ಯೆಹೋವ ಮತ್ತು ಯೇಸು ತರ ಕರುಣೆ ತೋರಿಸಬೇಕು ಅಂತ ಗೊತ್ತಾಯ್ತು. ಯೆಹೋವ ಮತ್ತು ಯೇಸು ನಮ್ಮ ಕಷ್ಟಗಳನ್ನ ಅರ್ಥಮಾಡಿಕೊಳ್ತಾರೆ ಮತ್ತು ಸಹಿಸಿಕೊಳ್ಳೋಕೆ ಸಹಾಯನೂ ಮಾಡ್ತಾರೆ ಅಂತ ತಿಳುಕೊಂಡ್ವಿ. ಹಾಗಾಗಿ ಯೆಹೋವ ನಮ್ಮ ‘ಕಣ್ಣೀರನ್ನೆಲ್ಲಾ ಒರಸಿಬಿಡೋ’ ಸಮಯ ಬರೋ ತನಕ ಈಗ ಕಲಿತಿರೋ ಎಲ್ಲಾ ಪಾಠಗಳನ್ನ ನಾವು ಜೀವನದಲ್ಲಿ ಪಾಲಿಸ್ತಾ ಇರೋಣ!—ಪ್ರಕ. 21:4.

ಈ ವಚನಗಳಿಂದ ಯೇಸು ಬಗ್ಗೆ ನೀವೇನು ಕಲಿತ್ರಿ?

  • ಯೋಹಾನ 11:35

  • ಲೂಕ 19:41

  • ಲೂಕ 22:44; ಇಬ್ರಿಯ 5:7

ಗೀತೆ 82 ಕ್ರಿಸ್ತನ ಸೌಮ್ಯಭಾವವನ್ನು ಅನುಕರಿಸಿರಿ

a ಯೇಸು ಕೆಲವೊಮ್ಮೆ ದುಃಖ ತಡಿಯೋಕೆ ಆಗದೆ ಅತ್ತಿದ್ದಾನೆ ಅಂತ ಬೈಬಲ್‌ ಹೇಳುತ್ತೆ. ಯಾವ ಮೂರು ಸನ್ನಿವೇಶಗಳಲ್ಲಿ ಯೇಸು ಅತ್ತನು ಮತ್ತು ಅದ್ರಿಂದ ನಾವೇನು ಕಲಿಯಬಹುದು ಅಂತ ಈ ಲೇಖನದಲ್ಲಿ ನೋಡೋಣ.

b ಕೆಲವು ಹೆಸರು ಬದಲಾಗಿವೆ.

c ಶಾಸ್ತ್ರಗಳ ಒಳನೋಟ ಅನ್ನೋ ಇಂಗ್ಲಿಷ್‌ ಪುಸ್ತಕದ ಸಂಪುಟ 2, ಪುಟ 69ನ್ನ ನೋಡಿ.

d ಚಿತ್ರ ವಿವರಣೆ: ಮರಿಯ ಮತ್ತು ಮಾರ್ಥಗೆ ಯೇಸು ಸಮಾಧಾನ ಮಾಡಿದ ತರ ಪ್ರಿಯರನ್ನ ಕಳಕೊಂಡವರಿಗೆ ನಾವೂ ಸಮಾಧಾನ ಮಾಡಬೇಕು.

e ಚಿತ್ರ ವಿವರಣೆ: ರಾತ್ರಿ ಹೊತ್ತಲ್ಲೂ ಯೇಸು ನಿಕೊದೇಮನಿಗೆ ಸಂತೋಷವಾಗಿ ಕಲಿಸಿದನು. ಜನರಿಗೆ ಅನುಕೂಲವಾದ ಸಮಯದಲ್ಲಿ ನಾವೂ ಬೈಬಲ್‌ ಕಲಿಸಬೇಕು.

f ಚಿತ್ರ ವಿವರಣೆ: ಕಷ್ಟ ಬಂದಾಗ ಯೆಹೋವನಿಗೆ ನಿಯತ್ತಾಗಿರೋಕೆ ಬೇಕಾಗಿರೋ ಬಲಕ್ಕಾಗಿ ಯೇಸು ಪ್ರಾರ್ಥನೆ ಮಾಡಿದನು. ನಾವೂ ಅದನ್ನೇ ಮಾಡಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ