ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr25 ಮಾರ್ಚ್‌ ಪು. 1-11
  • “ಜೀವನ ಮತ್ತು ಸೇವೆ ಕೂಟದ ಕೈಪಿಡಿ” ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಜೀವನ ಮತ್ತು ಸೇವೆ ಕೂಟದ ಕೈಪಿಡಿ” ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2025
  • ಉಪಶೀರ್ಷಿಕೆಗಳು
  • ಮಾರ್ಚ್‌ 3-9
  • ಮಾರ್ಚ್‌ 10-16
  • ಮಾರ್ಚ್‌ 17-23
  • ಮಾರ್ಚ್‌ 24-30
  • ಮಾರ್ಚ್‌ 31–ಏಪ್ರಿಲ್‌ 6
  • ಏಪ್ರಿಲ್‌ 7-13
  • ಏಪ್ರಿಲ್‌ 14-20
  • ಏಪ್ರಿಲ್‌ 21-27
  • ಏಪ್ರಿಲ್‌ 28–ಮೇ 4
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2025
mwbr25 ಮಾರ್ಚ್‌ ಪು. 1-11

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

© 2024 Watch Tower Bible and Tract Society of Pennsylvania

ಮಾರ್ಚ್‌ 3-9

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 3

ಯೆಹೋವನ ಮೇಲೆ ನಂಬಿಕೆ ಇಡಿ

ijwbv-E ಲೇಖನ 14 ¶4-5

ಜ್ಞಾನೋಕ್ತಿ 3:5, 6—“ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ”

“ಪೂರ್ಣ ಹೃದಯದಿಂದ ಯೆಹೋವನ ಮೇಲೆ ನಂಬಿಕೆ ಇಡು.” ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳೋ ಮೂಲಕ ಆತನ ಮೇಲೆ ನಂಬಿಕೆ ಇದೆ ಅಂತ ತೋರಿಸಬಹುದು. ನಾವು ಯೆಹೋವ ದೇವರನ್ನ ಪೂರ್ಣ ಹೃದಯದಿಂದ ನಂಬಬೇಕು. ಬೈಬಲ್‌ನಲ್ಲಿ ಬಳಸಿರೋ ಹೃದಯ ಅನ್ನೋ ಪದ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನ ಸೂಚಿಸುತ್ತೆ. ಅದರಲ್ಲಿ ಅವನ ಭಾವನೆಗಳು, ಉದ್ದೇಶಗಳು, ಯೋಚನೆಗಳು ಮತ್ತು ಮನೋಭಾವ ಸೇರಿದೆ. ಇದರಿಂದ ಯೆಹೋವನ ಮೇಲೆ ಭರವಸೆ ಇಡೋದ್ರಲ್ಲಿ ಬರೀ ಭಾವನೆಗಳಷ್ಟೇ ಅಲ್ಲ ಹೆಚ್ಚಿನದ್ದು ಸೇರಿದೆ ಅಂತ ಗೊತ್ತಾಗುತ್ತೆ. ನಮಗೆ ಯಾವುದು ಒಳ್ಳೇದು ಅಂತ ನಮ್ಮ ಸೃಷ್ಟಿಕರ್ತನಿಗೆ ಚೆನ್ನಾಗಿ ಗೊತ್ತು. ಅದಕ್ಕೆ ನಾವು ಆತನ ಮೇಲೆ ಪೂರ್ತಿಯಾಗಿ ನಂಬಿಕೆ ಇಡ್ತೀವಿ.—ರೋಮನ್ನರಿಗೆ 12:1.

“ನಿನ್ನ ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ.” ನಾವು ಅಪರಿಪೂರ್ಣರಾಗಿ ಇರೋದ್ರಿಂದ ಸರಿಯಾಗಿ ತೀರ್ಮಾನ ಮಾಡೋಕೆ ಆಗಲ್ಲ, ಅದಕ್ಕೆ ನಾವು ದೇವರ ಮೇಲೆ ನಂಬಿಕೆ ಇಡಲೇಬೇಕು. ಒಂದುವೇಳೆ ನಮಗೆ ಸರಿ ಅನಿಸಿದ್ದನ್ನ ನಾವು ಮಾಡಿದ್ರೆ ಮೊದ್ಲು ಮೊದ್ಲು ಅದು ಚೆನ್ನಾಗಿ ಅನಿಸಬಹುದು, ಆದ್ರೆ ಹೋಗ್ತಾ ಹೋಗ್ತಾ ಅದರಿಂದ ಕೆಟ್ಟ ಪರಿಣಾಮಗಳನ್ನ ಅನುಭವಿಸಬೇಕಾಗಿ ಬರಬಹುದು. (ಜ್ಞಾನೋಕ್ತಿ 14:12; ಯೆರೆಮೀಯ 17:9) ದೇವರ ವಿವೇಕ ನಮ್ಮ ವಿವೇಕಕ್ಕಿಂತ ತುಂಬಾ ಉನ್ನತವಾಗಿದೆ. (ಯೆಶಾಯ 55:8, 9) ನಾವು ದೇವರ ಮಾತನ್ನ ಕೇಳಿದ್ರೆ ಜೀವನದಲ್ಲಿ ಖುಷಿಯಾಗಿ ಇರ್ತೀವಿ.—ಕೀರ್ತನೆ 1:1-3; ಜ್ಞಾನೋಕ್ತಿ 2:6-9; 16:20.

ijwbv-E ಲೇಖನ 14 ¶6-7

ಜ್ಞಾನೋಕ್ತಿ 3:5, 6—“ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ”

“ಅದನ್ನ ಮನಸ್ಸಲ್ಲಿ ಇಟ್ಕೊಂಡು ಎಲ್ಲ ಕೆಲಸ ಮಾಡು.” ಯೆಹೋವನ ಮೇಲೆ ನಮಗೆ ನಂಬಿಕೆ ಇದ್ರೆ ನಾವು ಏನೇ ಮಾಡಿದ್ರೂ ಆತನಿಗೆ ಇಷ್ಟ ಆಗೋ ತರ ನಡ್ಕೊತೀವಿ, ಪ್ರಾಮುಖ್ಯ ತೀರ್ಮಾನಗಳನ್ನ ಮಾಡೋವಾಗ ಯೆಹೋವನ ಯೋಚ್ನೆ ಏನು ಅಂತ ತಿಳ್ಕೊತೀವಿ. ಆತನ ಯೋಚ್ನೆ ತಿಳ್ಕೊಳ್ಳೋಕೆ ಏನು ಮಾಡಬೇಕು? ಮಾರ್ಗದರ್ಶನೆಗಾಗಿ ಯೆಹೋವನ ಹತ್ರ ಪ್ರಾರ್ಥಿಸಬೇಕು ಮತ್ತು ಬೈಬಲಿನಲ್ಲಿ ಹೇಳಿರೋದನ್ನ ಪಾಲಿಸಬೇಕು.—ಕೀರ್ತನೆ 25:4; 2 ತಿಮೊತಿ 3:16, 17.

“ದೇವರು ನಿನಗೆ ಸರಿ ದಾರಿ ತೋರಿಸ್ತಾನೆ.” ದೇವರು ತನ್ನ ನೀತಿ ನಿಯಮಗಳನ್ನ ಪಾಲಿಸೋಕೆ ಸಹಾಯ ಮಾಡೋದ್ರ ಮೂಲಕ ನಮಗೆ ಸರಿ ದಾರಿ ತೋರಿಸ್ತಾನೆ. (ಜ್ಞಾನೋಕ್ತಿ 11:5) ಇದ್ರಿಂದ ನಾವು ತೊಂದ್ರೆಯಲ್ಲಿ ಸಿಕ್ಕಿಹಾಕಿಕೊಳ್ಳಲ್ಲ, ಬದಲಿಗೆ ಸಂತೋಷವಾಗಿ ಇರ್ತೀವಿ.—ಕೀರ್ತನೆ 19:7, 8; ಯೆಶಾಯ 48:17, 18.

be 77 ¶5

ಪ್ರಗತಿಪರರಾಗಿರಿ—ಅಭಿವೃದ್ಧಿಮಾಡಿರಿ

ನಮ್ಮ ಜೀವನದಲ್ಲಿ ನಾವು ವಿವಿಧ ಪರಿಸ್ಥಿತಿಗಳಿಗೆ ಒಡ್ಡಲ್ಪಟ್ಟಿರುವುದರಿಂದ, ‘ನಾನು ಈ ಪರಿಸ್ಥಿತಿಯನ್ನು ಈ ಮೊದಲೇ ಎದುರಿಸಿದ್ದೇನೆ. ಆದುದರಿಂದ ಏನು ಮಾಡಬೇಕೆಂದು ನನಗೆ ಗೊತ್ತಿದೆ’ ಎಂದು ಒಬ್ಬನು ತರ್ಕಿಸುವಂತೆ ಪ್ರೇರೇಪಿಸಲ್ಪಡಬಹುದು. ಆದರೆ ಇದು ವಿವೇಕದ ಮಾರ್ಗವಾಗಿದ್ದೀತೊ? ಜ್ಞಾನೋಕ್ತಿ 3:7 ಎಚ್ಚರಿಸುವುದು: ‘ನೀನೇ ಬುದ್ಧಿವಂತನು ಎಂದೆಣಿಸಬೇಡ.’ ಜೀವನದ ಪರಿಸ್ಥಿತಿಗಳೊಂದಿಗೆ ಹೆಣಗಾಡುವಾಗ, ಪರಿಗಣಿಸಬೇಕಾದ ವಿಷಯಗಳ ಕುರಿತಾದ ನಮ್ಮ ದೃಷ್ಟಿಕೋನವನ್ನು ಅನುಭವವು ಖಂಡಿತವಾಗಿಯೂ ವಿಶಾಲಗೊಳಿಸಬೇಕು. ಆದರೆ ನಾವು ಆತ್ಮಿಕ ಪ್ರಗತಿಯನ್ನು ಮಾಡುತ್ತಿರುವಲ್ಲಿ, ಯಶಸ್ಸನ್ನು ಹೊಂದಬೇಕಾದರೆ ನಮಗೆ ಯೆಹೋವನ ಆಶೀರ್ವಾದವು ಅತ್ಯಗತ್ಯ ಎಂಬುದನ್ನೂ ನಮ್ಮ ಅನುಭವವು ನಮ್ಮ ಹೃದಮನಗಳಲ್ಲಿ ನಾಟಿಸಬೇಕು. ಆದಕಾರಣ, ನಮ್ಮ ಅಭಿವೃದ್ಧಿಯು ವ್ಯಕ್ತವಾಗುವುದು ನಾವು ಪರಿಸ್ಥಿತಿಗಳನ್ನು ಆತ್ಮವಿಶ್ವಾಸದಿಂದ ಎದುರಿಸುವುದರಿಂದಲ್ಲ, ಬದಲಿಗೆ ನಮ್ಮ ಜೀವಿತಗಳಲ್ಲಿ ಮಾರ್ಗದರ್ಶನಕ್ಕಾಗಿ ಸಿದ್ಧಮನಸ್ಸಿನಿಂದ ಯೆಹೋವನ ಕಡೆಗೆ ತಿರುಗುವುದರಿಂದಲೇ. ಆತನ ಅನುಮತಿಯಿಲ್ಲದೆ ಏನೂ ಸಂಭವಿಸುವುದಿಲ್ಲ ಎಂಬ ಆತ್ಮವಿಶ್ವಾಸದಿಂದ ಮತ್ತು ನಮ್ಮ ಸ್ವರ್ಗೀಯ ತಂದೆಯೊಂದಿಗೆ ಭರವಸೆಯ ಮತ್ತು ವಾತ್ಸಲ್ಯಭರಿತ ಸಂಬಂಧವನ್ನು ಕಾಪಾಡಿಕೊಳ್ಳುವುದರಿಂದ ಇದು ತೋರಿಸಲ್ಪಡುತ್ತದೆ.

ಬೈಬಲಿನಲ್ಲಿರುವ ರತ್ನಗಳು

w06 10/1 4 ¶4

ಜ್ಞಾನೋಕ್ತಿಗಳು ಪುಸ್ತಕದ ಮುಖ್ಯಾಂಶಗಳು

3:3. ಪ್ರೀತಿಪೂರ್ವಕ ದಯೆ ಮತ್ತು ಸತ್ಯತೆಯನ್ನು ನಾವು ಬಹುಮೂಲ್ಯವಾಗಿ ಎಣಿಸಿ ಅದನ್ನು ಕೊರಳಲ್ಲಿರುವ ಬೆಲೆಬಾಳುವ ಸರದಂತೆ ಎಲ್ಲರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಅಲ್ಲದೆ, ಈ ಗುಣಗಳನ್ನು ನಮ್ಮ ಹೃದಯದಲ್ಲಿ ಕೆತ್ತಬೇಕು, ಅಂದರೆ ಅವುಗಳನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಯೂ ಮಾಡಬೇಕು.

ಮಾರ್ಚ್‌ 10-16

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 4

“ನಿನ್ನ ಹೃದಯ ಕಾಪಾಡ್ಕೊ”

w19.01 14 ¶4

ನಿಮ್ಮ ಹೃದಯ ಕಾಪಾಡಿಕೊಳ್ಳಿ

4 ಜ್ಞಾನೋಕ್ತಿ 4:23ರಲ್ಲಿ “ಹೃದಯ” ಅನ್ನುವುದು ನಮ್ಮ ಮನದಾಳದ ಯೋಚನೆ, ಭಾವನೆ, ಉದ್ದೇಶ ಮತ್ತು ಆಸೆಗಳನ್ನು ಸೂಚಿಸುತ್ತದೆ. ಇದು ನಾವು ಹೊರಗೆ ಹೇಗೆ ಕಾಣುತ್ತೇವೋ ಅದಕ್ಕಲ್ಲ, ಒಳಗೆ ಏನಾಗಿದ್ದೇವೋ ಅದಕ್ಕೆ ಸೂಚಿಸುತ್ತದೆ.

w19.01 17 ¶10-11

ನಿಮ್ಮ ಹೃದಯ ಕಾಪಾಡಿಕೊಳ್ಳಿ

10 ಯಾವ ಯಾವ ವಿಷಯಗಳಿಂದ ಅಪಾಯ ಆಗುತ್ತದೆ ಎಂದು ಕಂಡುಹಿಡಿದು ಅದರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೂಡಲೇ ಕ್ರಮ ತೆಗೆದುಕೊಂಡರೆ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬಹುದು. ಜ್ಞಾನೋಕ್ತಿ 4:23ರಲ್ಲಿರುವ ‘ಕಾಪಾಡು’ ಎಂಬ ಪದ ಕಾವಲುಗಾರನ ಕೆಲಸವನ್ನು ನೆನಪಿಗೆ ತರುತ್ತದೆ. ಸೊಲೊಮೋನನ ಕಾಲದಲ್ಲಿ ಕಾವಲುಗಾರರು ಪಟ್ಟಣದ ಗೋಡೆಗಳ ಮೇಲೆ ನಿಂತು ಕಾವಲು ಕಾಯುತ್ತಿದ್ದರು. ಏನಾದರೂ ಅಪಾಯ ಬರುತ್ತಿರುವುದು ಕಾಣಿಸಿದರೆ ತಕ್ಷಣ ಎಚ್ಚರಿಕೆ ಕೊಡುತ್ತಿದ್ದರು. ನಾವು ಇದನ್ನು ಮನಸ್ಸಲ್ಲಿ ಚಿತ್ರಿಸಿಕೊಂಡರೆ, ಸೈತಾನನಿಂದ ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕೆಂದು ಅರ್ಥವಾಗುತ್ತದೆ.

11 ಹಿಂದಿನ ಕಾಲದಲ್ಲಿ ಕಾವಲುಗಾರರು ಮತ್ತು ದ್ವಾರಪಾಲಕರು ಒಗ್ಗಟ್ಟಿಂದ ಕೆಲಸಮಾಡುತ್ತಿದ್ದರು. (2 ಸಮು. 18:24-26) ಇದರಿಂದಾಗಿ, ಶತ್ರುಗಳು ಬರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಬಾಗಿಲನ್ನು ಮುಚ್ಚಿ ಪಟ್ಟಣವನ್ನು ಭದ್ರಪಡಿಸಲು ಸಾಧ್ಯವಾಗುತ್ತಿತ್ತು. (ನೆಹೆ. 7:1-3) ಬೈಬಲಿಗೆ ತಕ್ಕಂತೆ ತರಬೇತಿ ಪಡೆದ ನಮ್ಮ ಮನಸ್ಸಾಕ್ಷಿ ಕಾವಲುಗಾರನಂತಿದೆ. ನಮ್ಮ ಹೃದಯದ ಮೇಲೆ ಸೈತಾನ ದಾಳಿಮಾಡಲು ಪ್ರಯತ್ನಿಸುವಾಗ ಅಂದರೆ ನಮ್ಮ ಯೋಚನೆ, ಭಾವನೆ, ಉದ್ದೇಶ, ಆಸೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಾಗ ನಮ್ಮ ಮನಸ್ಸಾಕ್ಷಿ ನಮ್ಮನ್ನು ಎಚ್ಚರಿಸುತ್ತದೆ. ಆದ್ದರಿಂದ ಮನಸ್ಸಾಕ್ಷಿ ನಮ್ಮನ್ನು ಎಚ್ಚರಿಸಿದಾಗೆಲ್ಲ ಅಪಾಯದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೋ ಅದನ್ನೆಲ್ಲ ಮಾಡಬೇಕು.

w19.01 18 ¶14

ನಿಮ್ಮ ಹೃದಯ ಕಾಪಾಡಿಕೊಳ್ಳಿ

14 ನಮ್ಮ ಹೃದಯವನ್ನು ಒಂದು ಬಾಗಿಲ ತರ ಉಪಯೋಗಿಸಬೇಕು. ಕೆಟ್ಟ ವಿಷಯಗಳು ಒಳಗೆ ಬರದಂತೆ ಅದನ್ನು ಮುಚ್ಚಿಬಿಡಬೇಕು ಮತ್ತು ಒಳ್ಳೇ ವಿಷಯಗಳನ್ನು ಒಳಗೆ ಬಿಡಲು ಅದನ್ನು ತೆರೆಯಬೇಕು. ಹೀಗೆ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ದೊಡ್ಡ-ದೊಡ್ಡ ಗೋಡೆಗಳಿರುವ ಪಟ್ಟಣವನ್ನು ಪುನಃ ನೆನಪಿಸಿಕೊಳ್ಳಿ. ಶತ್ರುಗಳು ಒಳಗೆ ಬರದ ಹಾಗೆ ದ್ವಾರಪಾಲಕ ಅದರ ಬಾಗಿಲನ್ನು ಮುಚ್ಚುತ್ತಿದ್ದನು. ಆದರೆ ಆಹಾರ ಮತ್ತಿತರ ಸಾಮಾನುಗಳನ್ನು ಒಳಗೆ ತರಬೇಕೆಂದರೆ ಅವನು ಆ ಬಾಗಿಲನ್ನು ಕೆಲವೊಮ್ಮೆ ತೆರೆಯಬೇಕಾಗುತ್ತಿತ್ತು. ಬಾಗಿಲು ತೆರೆಯದೇ ಇದ್ದರೆ ಪಟ್ಟಣದ ಜನರೆಲ್ಲ ಊಟ ಇಲ್ಲದೆ ಸತ್ತುಹೋಗುತ್ತಿದ್ದರು. ಅದೇ ರೀತಿ ನಾವು ನಮ್ಮ ಹೃದಯವನ್ನು ಆಗಾಗ ತೆರೆದು ದೇವರ ಆಲೋಚನೆಗಳನ್ನು ತುಂಬಿಸಿಕೊಳ್ಳುತ್ತಾ ಇರಬೇಕು.

w12-E 5/1 32 ¶2

“ಹೃದಯವನ್ನ ಕಾಪಾಡಿಕೊಳ್ಳಿ!”

ನಾವು ಯಾಕೆ ನಮ್ಮ ಹೃದಯವನ್ನ ಕಾಪಾಡಿಕೊಳ್ಳಬೇಕು? ಅದ್ರ ಬಗ್ಗೆ ರಾಜ ಸೊಲೊಮೋನ ಹೀಗೆ ಹೇಳಿದ: “ಎಲ್ಲಕ್ಕಿಂತ ಮುಖ್ಯವಾಗಿ ನಿನ್ನ ಹೃದಯ ಕಾಪಾಡ್ಕೊ. ಯಾಕಂದ್ರೆ ನಿನಗೆ ಜೀವ ಸಿಗುತ್ತಾ ಇಲ್ವಾ ಅನ್ನೋದು ಅದ್ರ ಮೇಲೆ ಹೊಂದ್ಕೊಂಡಿದೆ.” (ಜ್ಞಾನೋಕ್ತಿ 4:23) ನಮ್ಮ ಹೃದಯ ಹೇಗಿದೆ ಅನ್ನೋದ್ರ ಮೇಲೆ ನಮ್ಮ ಈಗಿನ ಮತ್ತು ಮುಂದಿನ ಜೀವನ ಹೊಂದ್ಕೊಂಡಿದೆ. ಯಾಕೆ ಹಾಗೆ ಹೇಳಬಹುದು? ಯಾಕಂದ್ರೆ ದೇವರು ನಮ್ಮ ಹೃದಯವನ್ನ ನೋಡ್ತಾನೆ. (1 ಸಮುವೇಲ 16:7) ದೇವರು ನಮ್ಮ ಬಗ್ಗೆ ಏನು ಅಂದ್ಕೊಳ್ತಾನೆ ಅನ್ನೋದು ನಾವು “ಹೃದಯದಲ್ಲಿ” ಎಂಥವರಾಗಿದ್ದೀವಿ ಅನ್ನೋದ್ರ ಮೇಲೆ ಹೊಂದ್ಕೊಂಡಿದೆ.—1 ಪೇತ್ರ 3:4.

ಬೈಬಲಿನಲ್ಲಿರುವ ರತ್ನಗಳು

w21.08 8 ¶4

ಯೆಹೋವನ ಸಮಯಕ್ಕಾಗಿ ಕಾಯುತ್ತೀರಾ?

4 ಜ್ಞಾನೋಕ್ತಿ 4:18ರಲ್ಲಿ “ನೀತಿವಂತನ ದಾರಿ ಬೆಳಿಗ್ಗೆ ಕಾಣೋ ಕಿರಣಗಳ ತರ ಹೊಳೆಯುತ್ತೆ, ಮಟಮಟ ಮಧ್ಯಾಹ್ನ ಆಗ್ತಾ ಆ ಬೆಳಕು ಹೆಚ್ಚಾಗ್ತಾನೇ ಹೋಗುತ್ತೆ” ಅಂತ ಹೇಳುತ್ತೆ. ಯೆಹೋವ ದೇವರು ತನ್ನ ಉದ್ದೇಶನ ತನ್ನ ಜನರಿಗೆ ಹಂತ-ಹಂತವಾಗಿ ಹೇಳ್ತಾರೆ ಅಂತ ಈ ವಚನ ತಿಳಿಸುತ್ತೆ. ಈ ವಚನವನ್ನ ನಾವು ಇನ್ನೊಂದು ರೀತಿಯಲ್ಲೂ ಅನ್ವಯ ಮಾಡ್ಕೊಬಹುದು. ಹೇಗಂದ್ರೆ ಒಬ್ಬ ವ್ಯಕ್ತಿ ಯೆಹೋವನ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಸಮಯ ಹಿಡಿಯುತ್ತೆ. ಅವನು ಆ ಸ್ನೇಹವನ್ನ ತಟ್ಟಂತ ಬೆಳೆಸಿಕೊಳ್ಳೋಕೆ ಆಗಲ್ಲ. ಬೈಬಲ್‌ ಮತ್ತು ಸಂಘಟನೆ ಹೇಳೋದನ್ನ ಚೆನ್ನಾಗಿ ಅರ್ಥಮಾಡ್ಕೊಂಡು ಪಾಲಿಸಿದ್ರೆ ಯೇಸುವಿನಲ್ಲಿರೋ ಗುಣಗಳನ್ನ ನಾವು ನಿಧಾನವಾಗಿ ಬೆಳೆಸಿಕೊಳ್ತೀವಿ. ದೇವರ ಬಗ್ಗೆನೂ ಇನ್ನೂ ಚೆನ್ನಾಗಿ ತಿಳಿದುಕೊಳ್ತಾ ಹೋಗ್ತೀವಿ. ಈಗ ಯೇಸು ಹೇಳಿರೋ ಒಂದು ಉದಾಹರಣೆ ಬಗ್ಗೆ ನೋಡೋಣ ಬನ್ನಿ.

ಮಾರ್ಚ್‌ 17-23

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 5

ಲೈಂಗಿಕ ಅನೈತಿಕತೆಯಿಂದ ದೂರ ಇರಿ

w00 7/15 29 ¶1

ಅನೈತಿಕ ಲೋಕದಲ್ಲಿ ಶೀಲವಂತರಾಗಿರುವುದು

ಈ ಜ್ಞಾನೋಕ್ತಿಯಲ್ಲಿ ಸ್ವೇಚ್ಛಾಚಾರದ ವ್ಯಕ್ತಿಯನ್ನು, “ಪರಸ್ತ್ರೀ” ಅಂದರೆ, ಒಬ್ಬ ವೇಶ್ಯೆಯಾಗಿ ವರ್ಣಿಸಲಾಗಿದೆ. ಅವಳು, ತನ್ನ ಬಲಿಪಶುವನ್ನು ಮರುಳುಗೊಳಿಸುವುದಕ್ಕಾಗಿ ಆಡುವ ಮಾತುಗಳು ಜೇನಿನಂತೆ ಸಿಹಿಯೂ, ಆಲಿವ್‌ ಎಣ್ಣೆಗಿಂತಲೂ ನಯವೂ ಆಗಿರುತ್ತವೆ. ಇಂದು ಸಹ, ಹೆಚ್ಚಿನ ಅನೈತಿಕ ಸಂಬಂಧಗಳು ಈ ರೀತಿಯ ಸವಿಜೇನಿನಂಥ ನುಡಿಗಳಿಂದಲೇ ಆರಂಭವಾಗುವುದಿಲ್ಲವೇ? ಇದರ ಕುರಿತಾದ ಒಂದು ಉದಾಹರಣೆಯನ್ನು ಗಮನಿಸಿ. ಏಮೀ ಎಂಬ 27 ವರ್ಷದ ಆಕರ್ಷಕ ರೂಪುಳ್ಳ ಸೆಕ್ರೆಟರಿ ಹೇಳುವುದು: “ನಾನು ಕೆಲಸಮಾಡುತ್ತಿರುವ ಸ್ಥಳದಲ್ಲಿರುವ ಈ ವ್ಯಕ್ತಿ ಯಾವಾಗಲೂ ನನ್ನ ಹಿಂದೆ ಬಿದ್ದಿರುತ್ತಾನೆ. ಸಂದರ್ಭ ಸಿಕ್ಕಿದಾಗಲೆಲ್ಲಾ ಬಾಯಿ ತುಂಬ ಹೊಗಳುತ್ತಿರುತ್ತಾನೆ. ನಿಜ, ನಾವು ಬೇರೆಯವರ ಗಮನಕ್ಕೆ ಪಾತ್ರರಾಗಬೇಕೆಂದು ಬಯಸುವುದು ಸ್ವಾಭಾವಿಕವೇ. ಆದರೆ, ಅವನ ಕಣ್ಣೆಲ್ಲಾ ನನ್ನ ದೇಹ ಸೌಂದರ್ಯದ ಮೇಲೆಯೇ ಎಂದು ನನಗೆ ಚೆನ್ನಾಗಿ ಗೊತ್ತು. ಆದ್ದರಿಂದ, ಅವನು ಎಷ್ಟೇ ಪ್ರಯತ್ನಿಸಿದರು, ನಾನು ಅವನ ಮಾತಿಗೆ ಮರುಳಾಗಲಾರೆ.” ಸಾಮಾನ್ಯವಾಗಿ ಮೋಡಿಮಾಡುವವನು ಅಥವಾ ಮೋಡಿಮಾಡುವವಳ ಹೊಗಳುವ ಮಾತಿನ ಹಿಂದಿರುವ ಉದ್ದೇಶವೇನೆಂದು ಗೊತ್ತಿರದಿದ್ದರೆ, ನಾವು ಸುಲಭವಾಗಿ ಅವರ ಮೋಹದ ಬಲೆಯಲ್ಲಿ ಸಿಕ್ಕಿಬೀಳುವೆವು. ಹಾಗಾಗದಿರಲು, ನಾವು ನಮ್ಮ ಆಲೋಚನಾ ಸಾಮರ್ಥ್ಯವನ್ನು ಉಪಯೋಗಿಸಬೇಕು.

w00 7/15 29 ¶2

ಅನೈತಿಕ ಲೋಕದಲ್ಲಿ ಶೀಲವಂತರಾಗಿರುವುದು

ಅನೈತಿಕತೆಯ ಪರಿಣಾಮಗಳು ವಿಷದಷ್ಟು ಕಹಿಯಾಗಿದ್ದು, ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗಿರುತ್ತವೆ. ಅಂದರೆ, ಹೆಚ್ಚು ವೇದನಾಮಯವೂ ಮರಣಕ್ಕೆ ನಡೆಸುವಂಥದ್ದೂ ಆಗಿದೆ. ಅನೇಕವೇಳೆ, ಈ ರೀತಿಯ ಸಡಿಲು ನಡತೆಯ ಪರಿಣಾಮಗಳಾವುವೆಂದರೆ, ಕ್ಷೋಭೆಗೊಂಡ ಮನಸ್ಸಾಕ್ಷಿ, ಅನಪೇಕ್ಷಿತ ಗರ್ಭಧಾರಣೆ ಅಥವಾ ರತಿರವಾನಿತ ರೋಗಗಳಾಗಿವೆ. ಇವು ನಿಜವಾಗಿಯೂ ಕಹಿ ಅನುಭವಗಳೇ ಮತ್ತು ತನ್ನ ವಿವಾಹ ಪ್ರತಿಜ್ಞೆಗಳಿಗೆ ಅಪನಂಬಿಗಸ್ತನಾದ ವ್ಯಕ್ತಿಯ ನಡತೆಯಿಂದಾಗಿ ಮುಗ್ಧ ಸಂಗಾತಿಯು ಅನುಭವಿಸುವ ಹೇಳಲಾಗದ ಮಾನಸಿಕ ವೇದನೆಯ ಕುರಿತು ಸ್ವಲ್ಪ ಯೋಚಿಸಿ ನೋಡಿ. ಒಮ್ಮೆ ಮಾಡಿದ ದಾಂಪತ್ಯ ದ್ರೋಹವು ಜೀವನಪರ್ಯಂತ ಉಳಿಯುವಷ್ಟು ಆಳವಾದ ಗಾಯವನ್ನು ಉಂಟುಮಾಡಬಲ್ಲದು. ಹೌದು, ಅನೈತಿಕತೆಯು ನಿಜವಾಗಿಯೂ ಮನಸ್ಸನ್ನು ನೋಯಿಸುತ್ತದೆ.

w00 7/15 29 ¶5

ಅನೈತಿಕ ಲೋಕದಲ್ಲಿ ಶೀಲವಂತರಾಗಿರುವುದು

ಹಾಗಾಗಿ, ನಾವು ಅನೈತಿಕ ವ್ಯಕ್ತಿಗಳ ಪ್ರಭಾವದಿಂದ ಆದಷ್ಟು ದೂರವಿರಬೇಕಾಗಿದೆ. ಏಕೆಂದರೆ, ಅನೈತಿಕ ವ್ಯಕ್ತಿಗಳು ಕೀಳ್ಮಟ್ಟದ ಸಂಗೀತ, ಅಶ್ಲೀಲವಾದ ಕಾರ್ಯಕ್ರಮಗಳು ಅಥವಾ ಕಾಮಪ್ರಚೋದಕ ವಿಷಯಗಳನ್ನೊಳಗೊಂಡ ಪುಸ್ತಕಗಳು, ಚಿತ್ರಗಳು ಮತ್ತು ಕಂಪ್ಯೂಟರ್‌ ಕಾರ್ಯಕ್ರಮಗಳನ್ನು ರಚಿಸುವವರಾಗಿದ್ದಾರೆ. ಅಂಥವುಗಳನ್ನು ಕೇಳಿಸಿಕೊಳ್ಳುವ, ಓದುವ ಅಥವಾ ನೋಡುವ ಮೂಲಕ ಅವರ ಕುಟಿಲವಾದ ಮಾರ್ಗಗಳಿಗೆ ನಮ್ಮನ್ನು ನಾವು ಯಾಕೆ ಒಡ್ಡಿಕೊಳ್ಳಬೇಕು? (ಜ್ಞಾನೋಕ್ತಿ 6:27; 1 ಕೊರಿಂಥ 15:33; ಎಫೆಸ 5:3-5) ನಾವು ಧರಿಸುವ ಬಟ್ಟೆ, ಕೇಶಾಲಂಕಾರ ಇಲ್ಲವೇ ವಿನೋದಕ್ಕಾಗಿ ಚೆಲ್ಲಾಟವಾಡುವ ಮೂಲಕ ಅಂಥವರ ಗಮನವನ್ನು ಸೆಳೆಯುವುದು ಎಂಥ ಮೂರ್ಖತನವಾಗಿರುವುದು!—1 ತಿಮೊಥೆಯ 4:8; 1 ಪೇತ್ರ 3:3, 4.

ಬೈಬಲಿನಲ್ಲಿರುವ ರತ್ನಗಳು

w00 7/15 29 ¶7

ಅನೈತಿಕ ಲೋಕದಲ್ಲಿ ಶೀಲವಂತರಾಗಿರುವುದು

ಹೀಗೆ, ಸೊಲೊಮೋನನು ಅನೈತಿಕತೆಗೆ ಬಲಿಯಾಗುವುದರಿಂದ ತೆರಬೇಕಾದ ಭಾರಿ ಬೆಲೆಯನ್ನು ಎತ್ತಿತೋರಿಸುತ್ತಾನೆ. ಒಬ್ಬನು ವ್ಯಭಿಚಾರವನ್ನು ಮಾಡುವಾಗ, ತನ್ನ ಘನತೆ ಅಥವಾ ಸ್ವಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಲೈಂಗಿಕ ತೃಷೆಗಾಗಿ ಅಥವಾ ಯಾರೋ ಒಬ್ಬ ವ್ಯಕ್ತಿಯ ಲೈಂಗಿಕ ತೃಷೆಯನ್ನು ತಣಿಸುವುದಕ್ಕಾಗಿ ಕೇವಲ ನಾವು ಒಂದು ಸಾಧನವಾಗಿರುವುದು ವಾಸ್ತವದಲ್ಲಿ ನಾಚಿಕೆಗೇಡಿನ ಕೃತ್ಯವಲ್ಲವೇ? ನಾವು ವಿವಾಹವಾಗಿರದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಳ್ಳುವಾಗ, ಅದು ನಾಚಿಕೆಗೇಡಿತನವನ್ನು ತೋರಿಸುವುದಿಲ್ಲವೋ?

ಮಾರ್ಚ್‌ 24-30

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 6

ಇರುವೆಯಿಂದ ನಾವೇನು ಕಲಿಬಹುದು?

it-1-E 115 ¶1-2

ಇರುವೆ

‘ಹುಟ್ಟಿಂದಾನೇ ವಿವೇಕ ಇರುತ್ತೆ.’ ಇರುವೆಗಳಿಗೆ ಹುಟ್ಟಿದಾಗಿಂದನೇ ಸೃಷ್ಟಿಕರ್ತ ದೇವರು ವಿವೇಕ ಕೊಟ್ಟಿದ್ದಾನೆ. ಇರುವೆಗಳು “ಬೇಸಿಗೆಯಲ್ಲಿ ಆಹಾರಕ್ಕೆ ಬೇಕಾದ ತಯಾರಿ ಮಾಡ್ಕೊಳ್ಳುತ್ತೆ, ಕೊಯ್ಲಿನ ಕಾಲದಲ್ಲಿ ತನ್ನ ಆಹಾರ ಕೂಡಿಸಿಡುತ್ತೆ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋ 6:8) ಪ್ಯಾಲೆಸ್ತಿನ್‌ನಲ್ಲಿ ಒಂದು ರೀತಿಯ ಇರುವೆ ಇದೆ. ಅದು ವಸಂತಕಾಲ ಮತ್ತು ಬೇಸಿಗೆಯಲ್ಲಿ ಧಾನ್ಯ ಮತ್ತು ಕಾಳುಗಳನ್ನ ಶೇಖರಿಸಿಡುತ್ತೆ, ಚಳಿಗಾಲ ಬಂದಾಗ ಅದನ್ನ ಬಳಸುತ್ತೆ. ಮಳೆ ಬಂದಾಗ ಒಂದುವೇಳೆ ಕಾಳುಗಳು ಏನಾದ್ರೂ ಒದ್ದೆ ಆದ್ರೆ ಅವುಗಳನ್ನ ಬಿಸಿಲಿಗೆ ತಂದು ಒಣಗಿಸುತ್ತವೆ, ಹೀಗೆ ಕಾಳುಗಳು ಮೊಳಕೆಯೊಡೆಯದಂತೆ ನೋಡ್ಕೊಳ್ತವೆ.

ಅಪರೂಪದ ಗುಣಗಳು. ಇರುವೆಗಳ ಬಗ್ಗೆ ಮಾಡಿದ ಒಂದು ಅಧ್ಯಯನ “ಏ ಸೋಮಾರಿ, ಇರುವೆ ನೋಡಿ ಕಲಿ! ಅದು ಹೇಗೆ ಕೆಲಸ ಮಾಡುತ್ತೆ ಅಂತ ನೋಡು, ವಿವೇಕಿಯಾಗು” ಅನ್ನೋ ಮಾತನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡುತ್ತೆ. (ಜ್ಞಾನೋ 6:6) ಇರುವೆಗಳು ಭವಿಷ್ಯತ್ತಿಗಾಗಿ ಆಹಾರ ಕೂಡಿಸಿಡೋದಷ್ಟೇ ಅಲ್ಲ, ಯಾವಾಗ್ಲೂ ಕಷ್ಟಪಟ್ಟು ಕೆಲಸ ಮಾಡ್ತವೆ, ಅಂದ್ಕೊಂಡಿದ್ದ ಕೆಲಸವನ್ನ ಏನೇ ಆದ್ರೂ ಮಾಡಿ ಮುಗಿಸ್ತವೆ. ಇರುವೆಗಳು ತಮ್ಮ ದೇಹದ ಎರಡು ಪಟ್ಟು ಅಥವಾ ಅದಕ್ಕಿಂತ ಹೆಚ್ಚಿನ ಭಾರವನ್ನ ಹೊರುತ್ತೆ ಅಥವಾ ಸಾಗಿಸುತ್ತೆ. ಶುರು ಮಾಡಿದ ಕೆಲಸವನ್ನ ಮಾಡಿ ಮುಗಿಸೋಕೆ ತಮ್ಮ ಕೈಲಾದ ಎಲ್ಲ ಪ್ರಯತ್ನ ಹಾಕುತ್ತೆ. ಬಿದ್ರೂ, ಜಾರಿದ್ರೂ, ಉರುಳಿದ್ರೂ ಅಂದ್ಕೊಂಡ ಕೆಲಸನಾ ಬಿಡಲ್ಲ. ಅಷ್ಟೇ ಅಲ್ಲ, ತಮ್ಮ ಗೂಡುಗಳನ್ನ ನೀಟಾಗಿ ಇಡ್ತವೆ, ಬೇರೆ ಇರುವೆಗೆ ಏನಾದ್ರೂ ಏಟಾಗಿದ್ರೆ, ಸುಸ್ತಾಗಿದ್ರೆ ಅವುಗಳಿಗೆ ಸಹಾಯ ಮಾಡಿ ವಾಪಸ್‌ ಗೂಡಿಗೆ ಕರ್ಕೊಂಡು ಬರ್ತವೆ.

w00 9/15 26 ¶3-4

ನಿಮ್ಮ ಹೆಸರನ್ನು ಕಾಪಾಡಿಕೊಳ್ಳಿರಿ

ಇರುವೆಗಳಂತೆ ನಾವು ಸಹ ಉದ್ಯೋಗಶೀಲರಾಗಿರಬಾರದೊ? ನಮ್ಮ ಕೆಲಸದ ವಿಷಯದಲ್ಲಿ ಯಾರಾದರೂ ಮೇಲ್ವಿಚಾರಣೆಮಾಡುತ್ತಿರಲಿ ಇಲ್ಲದಿರಲಿ, ಕಷ್ಟಪಟ್ಟು ಕೆಲಸಮಾಡುವುದು ಹಾಗೂ ನಮ್ಮ ಕೆಲಸದಲ್ಲಿ ಪ್ರಗತಿಯನ್ನು ಮಾಡಲು ಶ್ರಮಿಸುವುದರಿಂದ ನಮಗೇ ಒಳ್ಳೇದಾಗುತ್ತದೆ. ಹೌದು, ಶಾಲೆಯಲ್ಲಿ, ನಮ್ಮ ಕೆಲಸದ ಸ್ಥಳದಲ್ಲಿ ಮತ್ತು ಆತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವಾಗ, ನಮ್ಮಿಂದಾದಷ್ಟು ಅತ್ಯುತ್ತಮವಾದ ರೀತಿಯಲ್ಲಿ ನಾವು ಕಾರ್ಯನಿರ್ವಹಿಸಬೇಕು. ತನ್ನ ಉದ್ಯೋಗಶೀಲತೆಯಿಂದ ಇರುವೆಯು ಪ್ರಯೋಜನವನ್ನು ಪಡೆದುಕೊಳ್ಳುವಂತೆಯೇ, ನಾವು ಸಹ ‘ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಸುಖವನ್ನನುಭವಿಸಬೇಕೆಂಬುದು’ ದೇವರ ಉದ್ದೇಶವಾಗಿದೆ. (ಪ್ರಸಂಗಿ 3:13, 22; 5:18) ಹೀಗೆ, ಕಷ್ಟಪಟ್ಟು ಕೆಲಸಮಾಡುವುದರ ಪ್ರತಿಫಲಗಳೇನೆಂದರೆ, ಶುದ್ಧ ಮನಸ್ಸಾಕ್ಷಿ ಮತ್ತು ವೈಯಕ್ತಿಕ ಸಂತೃಪ್ತಿಯೇ.—ಪ್ರಸಂಗಿ 5:12.

“ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ?” ಎಂಬ ಎರಡು ಭಾವೋತ್ತೇಜಕ ಪ್ರಶ್ನೆಗಳನ್ನು ಉಪಯೋಗಿಸುವ ಮೂಲಕ, ಸೊಲೊಮೋನನು ಒಬ್ಬ ಸೋಮಾರಿಯನ್ನು ತನ್ನ ಸೋಮಾರಿತನದಿಂದ ಎಚ್ಚರಿಸಲು ಪ್ರಯತ್ನಿಸುತ್ತಾನೆ. ಸೋಮಾರಿಯ ಮಾತುಗಳನ್ನು ಅನುಕರಿಸುತ್ತಾ ಅರಸನು ಕೂಡಿಸುವುದು: “ಇನ್ನು ಸ್ವಲ್ಪ ನಿದ್ದೆ, ಇನ್ನು ತುಸು ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.” (ಜ್ಞಾನೋಕ್ತಿ 6:9-11) ಒಬ್ಬ ಸೋಮಾರಿಯು ಮೇಲ್ಮುಖವಾಗಿ ಮಲಗಿಕೊಂಡಿರುವಾಗ, ಅವನ ಮೇಲೆ ಬಡತನವು ದಾರಿಗಳ್ಳನಷ್ಟು ವೇಗದಲ್ಲಿ ಬಂದು ಮುತ್ತಿಕೊಳ್ಳುತ್ತದೆ ಹಾಗೂ ಕೊರತೆಯು ಪಂಜುಗಳ್ಳನಂತೆ ಅವನ ಮೇಲೆ ಆಕ್ರಮಣಮಾಡುತ್ತದೆ. ಅಷ್ಟುಮಾತ್ರವಲ್ಲ, ಒಬ್ಬ ಸೋಂಬೇರಿಯ ಹೊಲಗಳು, ಅತಿ ಬೇಗನೆ ಮುಳ್ಳುಗಿಡಗಳು ಹಾಗೂ ಕಳೆಗಳಿಂದ ಮುಚ್ಚಿಹೋಗುತ್ತವೆ. (ಜ್ಞಾನೋಕ್ತಿ 24:30, 31) ಸ್ವಲ್ಪ ಕಾಲಾವಧಿಯಲ್ಲಿಯೇ ಅವನ ವ್ಯಾಪಾರ ಉದ್ಯಮಗಳು ನಷ್ಟವನ್ನು ಅನುಭವಿಸುತ್ತವೆ. ಒಬ್ಬ ಯಜಮಾನನು ಎಷ್ಟರ ತನಕ ಆಲಸಿಯನ್ನು ಸಹಿಸಿಕೊಂಡಾನು? ಮತ್ತು ತುಂಬ ಸೋಮಾರಿಯಾಗಿರುವ ವಿದ್ಯಾರ್ಥಿಯೊಬ್ಬನು ಶಾಲೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಾನೆ ಎಂದು ನಿರೀಕ್ಷಿಸಸಾಧ್ಯವಿದೆಯೊ?

ಬೈಬಲಿನಲ್ಲಿರುವ ರತ್ನಗಳು

w00 9/15 27 ¶3

ನಿಮ್ಮ ಹೆಸರನ್ನು ಕಾಪಾಡಿಕೊಳ್ಳಿರಿ

ಜ್ಞಾನೋಕ್ತಿಯು ಉಲ್ಲೇಖಿಸುವಂತಹ ಏಳು ವಿಷಯಗಳು ಮೂಲಭೂತವಾಗಿವೆ ಮತ್ತು ವಾಸ್ತವದಲ್ಲಿ ಅವು ಎಲ್ಲ ರೀತಿಯ ತಪ್ಪುಗಳನ್ನು ಒಳಗೊಳ್ಳುತ್ತವೆ. “ಹೆಮ್ಮೆಯ ಕಣ್ಣು” ಮತ್ತು “ದುರಾಲೋಚನೆಗಳನ್ನು ಕಲ್ಪಿಸುವ ಹೃದಯ”—ಇವು ಮನಸ್ಸಿನಲ್ಲಿ ನಡೆಸಲ್ಪಡುವ ಪಾಪಗಳಾಗಿವೆ. “ಸುಳ್ಳಿನ ನಾಲಿಗೆ” ಮತ್ತು “ಅಸತ್ಯವಾಡುವ ಸುಳ್ಳುಸಾಕ್ಷಿ”ಗಳು ಪಾಪಭರಿತ ಮಾತುಗಳಾಗಿವೆ. “ನಿರ್ದೋಷರಕ್ತವನ್ನು ಸುರಿಸುವ ಕೈ” ಮತ್ತು “ಕೇಡುಮಾಡಲು ತ್ವರೆಪಡುವ ಕಾಲು”ಗಳು ದುಷ್ಕೃತ್ಯಗಳಿಗೆ ಸೂಚಿತವಾಗಿವೆ. ಅಷ್ಟುಮಾತ್ರವಲ್ಲ, ಶಾಂತಿಯಿಂದ ಒಟ್ಟುಗೂಡಿ ಜೀವಿಸುತ್ತಿರುವ ಜನರ ನಡುವೆ ಜಗಳವನ್ನು ಉಂಟುಮಾಡುವುದರಲ್ಲಿ ಆನಂದವನ್ನು ಕಂಡುಕೊಳ್ಳುವಂತಹ ವ್ಯಕ್ತಿಯನ್ನು ಯೆಹೋವನು ತುಂಬ ಹಗೆಮಾಡುತ್ತಾನೆ. ಮಾನವರು ತಮ್ಮ ದುಷ್ಕೃತ್ಯಗಳನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇರುವುದರಿಂದ, ಈ ಪಟ್ಟಿಯು ಪೂರ್ಣಗೊಳಿಸಲ್ಪಟ್ಟಿಲ್ಲ ಎಂಬುದನ್ನು, ಯೆಹೋವನು ಹಗೆಮಾಡುವ ವಿಷಯಗಳ ಸಂಖ್ಯೆಯು ಆರರಿಂದ ಏಳಕ್ಕೆ ಏರಿರುವುದು ಸೂಚಿಸುತ್ತದೆ.

ಮಾರ್ಚ್‌ 31–ಏಪ್ರಿಲ್‌ 6

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 7

ತಪ್ಪಿಗೆ ನಡೆಸೋ ಸಂದರ್ಭಗಳಿಂದ ದೂರ ಇರಿ

w00 11/15 29 ¶5

“ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು”

ಸೊಲೊಮೋನನು ಯಾವ ಜಾಲರಿಯಿಂದ ಹೊರಗೆ ನೋಡುತ್ತಿದ್ದನೋ ಆ ಜಾಲರಿಗೆ ಅಡ್ಡಪಟ್ಟಿಗಳ ಚೌಕಟ್ಟು ಇತ್ತು. ಬಹುಶಃ ಇದು ಮರದ ಪಟ್ಟಿಗಳು ಹಾಗೂ ಅತ್ಯುತ್ತಮವಾದ ಕೆತ್ತನೆಗಳಿಂದ ಕೂಡಿದ ಒಂದು ಚೌಕಟ್ಟಾಗಿದ್ದಿರಬಹುದು. ಸಂಜೆಯ ಬೆಳಕು ಮೊಬ್ಬಾಗುತ್ತಾ ಹೋಗುವಾಗ, ಬೀದಿಗಳಲ್ಲಿ ರಾತ್ರಿಯ ಅಂಧಕಾರವು ಆವರಿಸುತ್ತದೆ. ಆ ಸಮಯದಲ್ಲಿ, ಸುಲಭವಾಗಿ ಶೋಧನೆಗೆ ಒಳಗಾಗಸಾಧ್ಯವಿರುವಂತಹ ಒಬ್ಬ ಯೌವನಸ್ಥನನ್ನು ಅರಸನು ನೋಡುತ್ತಾನೆ. ವಿವೇಚನಾಶಕ್ತಿ ಅಥವಾ ಒಳ್ಳೆಯ ಪರಿಜ್ಞಾನವಿಲ್ಲದವನಾಗಿರುವ ಅವನು ಜ್ಞಾನಹೀನನಾಗಿದ್ದಾನೆ. ತಾನು ಎಂತಹ ಜನರಿರುವ ಬೀದಿಯನ್ನು ಪ್ರವೇಶಿಸಿದ್ದೇನೆ ಮತ್ತು ತನಗೆ ಇಲ್ಲಿ ಏನು ಸಂಭವಿಸಸಾಧ್ಯವಿದೆ ಎಂಬುದು ಅವನಿಗೆ ಗೊತ್ತಿರಬಹುದು. ಆ ಯೌವನಸ್ಥನು ಅವಳ ಮನೆಯ ದಾರಿಯಲ್ಲಿರುವ “ಮೂಲೆಯ” ಹತ್ತಿರ ಬರುತ್ತಾನೆ. ಅವಳು ಯಾರು? ಅವಳು ಏನು ಮಾಡುತ್ತಿದ್ದಾಳೆ?

w00 11/15 30 ¶3-5

“ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು”

ಈ ಸ್ತ್ರೀಯ ತುಟಿಗಳು ತುಂಬ ನಯವಾಗಿವೆ. ಧೈರ್ಯದ ಮುಖವಾಡವನ್ನು ಹಾಕಿಕೊಳ್ಳುತ್ತಾ, ಅವಳು ತುಂಬ ವಿಶ್ವಾಸದಿಂದ ಅವನೊಂದಿಗೆ ಮಾತಾಡುತ್ತಾಳೆ. ಅವಳು ಹೇಳುವ ಪ್ರತಿಯೊಂದು ಮಾತು, ಈ ಯೌವನಸ್ಥನನ್ನು ದುಷ್ಪ್ರೇರಣೆಗೆ ನಡಿಸಲು ಜಾಗರೂಕತೆಯಿಂದ ಮೊದಲೇ ಲೆಕ್ಕಾಚಾರ ಹಾಕಿದಂತಿದೆ. ಅದೇ ದಿನ ಸಮಾಧಾನಯಜ್ಞವನ್ನು ಮತ್ತು ಹರಿಕೆಗಳನ್ನು ಸಲ್ಲಿಸಿದ್ದೇನೆ ಎಂದು ಆರಂಭಿಸುವ ಮೂಲಕ ಅವಳು, ತಾನು ನೀತಿವಂತಳೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ ಮತ್ತು ತನ್ನಲ್ಲಿ ಆತ್ಮಿಕತೆಯ ಕೊರತೆಯಿಲ್ಲ ಎಂಬ ಸುಳಿವು ನೀಡುತ್ತಿದ್ದಾಳೆ. ಯೆರೂಸಲೇಮಿನ ದೇವಾಲಯದಲ್ಲಿ ಸಮಾಧಾನಯಜ್ಞವನ್ನು ಸಮರ್ಪಿಸುವಾಗ, ಅದರಲ್ಲಿ ಮಾಂಸ, ಗೋದಿಹಿಟ್ಟು, ಎಣ್ಣೆ, ಮತ್ತು ದ್ರಾಕ್ಷಾರಸವು ಒಳಗೂಡಿರುತ್ತಿತ್ತು. (ಯಾಜಕಕಾಂಡ 19:5, 6; 22:21; ಅರಣ್ಯಕಾಂಡ 15:8-10) ಸಮಾಧಾನಯಜ್ಞವನ್ನು ಸಮರ್ಪಿಸುವಂತಹ ವ್ಯಕ್ತಿಯು, ತನಗೋಸ್ಕರ ಹಾಗೂ ತನ್ನ ಕುಟುಂಬಕ್ಕೋಸ್ಕರ ಪಾಲನ್ನು ಪಡೆಯಸಾಧ್ಯವಿತ್ತು. ಆದುದರಿಂದಲೇ ಅವಳು ತನ್ನ ಮನೆಯಲ್ಲಿ ತಿನ್ನಲು ಹಾಗೂ ಕುಡಿಯಲು ಸಮೃದ್ಧವಾಗಿದೆ ಎಂದು ಸೂಚಿಸುತ್ತಾಳೆ. ಇದರ ಅರ್ಥ ಸ್ಪಷ್ಟ: ಈ ಯೌವನಸ್ಥನು ಅವಳ ಮನೆಯಲ್ಲಿ ಆನಂದಮಯವಾಗಿ ಸಮಯವನ್ನು ಕಳೆಯಸಾಧ್ಯವಿದೆ. ವಿಶೇಷವಾಗಿ ಅವನನ್ನು ಎದುರುಗೊಳ್ಳಲಿಕ್ಕೋಸ್ಕರ ಅವಳು ಮನೆಯಿಂದ ಹೊರಗೆ ಬಂದಿದ್ದಾಳೆ. ಇಂತಹ ಒಂದು ಕಥೆಯನ್ನು ಯಾರಾದರೂ ನಂಬುವುದಾದರೆ, ಅದೆಷ್ಟು ನಾಚಿಕೆಗೇಡಿತನವಾಗಿದೆ! ಒಬ್ಬ ಬೈಬಲ್‌ ವಿದ್ವಾಂಸನು ಹೇಳುವುದು: “ಅವಳು ಒಬ್ಬನನ್ನು ಹುಡುಕುತ್ತಿದ್ದಳು ಎಂಬುದು ಸತ್ಯವಾದರೂ, ನಿರ್ದಿಷ್ಟವಾಗಿ ಈ ಯೌವನಸ್ಥನಿಗೋಸ್ಕರವೇ ಅವಳು ಹುಡುಕಾಟ ನಡೆಸುತ್ತಿದ್ದಳೋ? ಕೇವಲ ಮೂರ್ಖನು, ಅದರಲ್ಲೂ ಈ ಯೌವನಸ್ಥನಂತಹ ಬುದ್ಧಿಗೇಡಿಯು ಮಾತ್ರ ಅವಳನ್ನು ನಂಬಸಾಧ್ಯವಿತ್ತು.”

ತನ್ನ ವೇಷಭೂಷಣದ ತೋರಿಕೆಯ ಮೂಲಕ, ಮನಸೂರೆಮಾಡುವಂತಹ ಮಾತುಗಳಿಂದ, ತನ್ನ ಆಲಿಂಗನದ ಸ್ಪರ್ಶದಿಂದ, ಮತ್ತು ತನ್ನ ತುಟಿಗಳ ಸವಿಯಿಂದ ತನ್ನನ್ನು ಆಕರ್ಷಣೀಯವಾಗಿ ವ್ಯಕ್ತಪಡಿಸಿಕೊಂಡ ಬಳಿಕ, ಈ ದುಷ್ಪ್ರೇರಕಿಯು ಅವನಲ್ಲಿ ಸುವಾಸನೆಯ ಪರಿಜ್ಞಾನವನ್ನು ಮೂಡಿಸುತ್ತಾಳೆ. ಅವಳು ಹೇಳುವುದು: “ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ ಐಗುಪ್ತದೇಶದ ನೂಲಿನ ವಿಚಿತ್ರವಸ್ತ್ರಗಳನ್ನೂ ಹಾಸಿದ್ದೇನೆ. ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ ಚಕ್ಕೆ, ಇವುಗಳ ಚೂರ್ಣವನ್ನು ಉದರಿಸಿದ್ದೇನೆ.” (ಜ್ಞಾನೋಕ್ತಿ 7:16, 17) ಐಗುಪ್ತ ದೇಶದ ವರ್ಣರಂಜಿತ ನೂಲಿನ ವಸ್ತ್ರಗಳಿಂದ ಅವಳು ಕಲಾತ್ಮಕವಾಗಿ ಹಾಸಿಗೆಯನ್ನು ಸಿದ್ಧಪಡಿಸಿದ್ದಾಳೆ ಹಾಗೂ ರಕ್ತಬೋಳ, ಅಗುರು, ಲವಂಗ ಚಕ್ಕೆಗಳ ಅತ್ಯುತ್ತಮ ಪರಿಮಳದಿಂದ ಅದನ್ನು ಸುವಾಸನೆಭರಿತವಾದದ್ದಾಗಿ ಮಾಡಿದ್ದಾಳೆ.

“ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ” ಎಂದು ಅವಳು ಕರೆಕೊಡುತ್ತಾಳೆ. ಈ ಕರೆಯಲ್ಲಿ, ಅವರಿಬ್ಬರೂ ಒಟ್ಟಿಗೆ ಆಹ್ಲಾದಕರವಾದ ರಾತ್ರಿಯೂಟವನ್ನು ಮಾಡುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಪರಸ್ಪರ ಲೈಂಗಿಕ ಸಂಬಂಧದಲ್ಲಿ ಆನಂದಿಸುವ ವಾಗ್ದಾನವನ್ನು ಅವಳು ಮಾಡುತ್ತಿದ್ದಾಳೆ. ಈ ಕರೆಯು ತುಂಬ ಸಾಹಸಮಯವೂ ರೋಮಾಂಚನೀಯವೂ ಆಗಿದೆ ಎಂದು ಆ ಯೌವನಸ್ಥನಿಗೆ ಅನಿಸುತ್ತದೆ! ಮುಂದಿನ ಆಕರ್ಷಣೆಯೋಪಾದಿ ಅವಳು ಹೀಗೆ ಹೇಳುತ್ತಾಳೆ: “ಯಜಮಾನನು ಮನೆಯಲ್ಲಿಲ್ಲ, ದೂರ ಪ್ರಯಾಣದಲ್ಲಿದ್ದಾನೆ. ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, ಹುಣ್ಣಿಮೆಗೆ ಮನೆಗೆ ಬರುವನು.” (ಜ್ಞಾನೋಕ್ತಿ 7:18-20) ತನ್ನ ಗಂಡನು ವ್ಯಾಪಾರಕ್ಕಾಗಿ ಬಹು ದೂರದ ಪ್ರಯಾಣದಲ್ಲಿದ್ದಾನೆ ಮತ್ತು ಸಾಕಷ್ಟು ಕಾಲ ಅವನು ಹಿಂದೆ ಬರುವುದಿಲ್ಲ, ಆದುದರಿಂದ ತಾವು ಸಂಪೂರ್ಣವಾಗಿ ಸುರಕ್ಷಿತರಾಗಿದ್ದೇವೆ ಎಂದು ಅವಳು ಅವನಿಗೆ ಆಶ್ವಾಸನೆ ನೀಡುತ್ತಾಳೆ. ಒಬ್ಬ ಯುವಕನನ್ನು ತಪ್ಪುದಾರಿಗೆ ಸೆಳೆಯುವುದರಲ್ಲಿ ಅವಳೆಷ್ಟು ಚತುರಳಾಗಿದ್ದಾಳೆ! “ಅವನನ್ನು ತನ್ನ ಸವಿಮಾತುಗಳಿಂದ ಬಲಾತ್ಕರಿಸಿ ಬಹಳವಾಗಿ ಪ್ರೇರಿಸಿ ಸಮ್ಮತಿಪಡಿಸುತ್ತಾಳೆ.” (ಜ್ಞಾನೋಕ್ತಿ 7:21) ಯೋಸೇಫನಂತಹ ಮಾನಸಿಕ ಸ್ಥೈರ್ಯವಿರುವ ವ್ಯಕ್ತಿಯು ಮಾತ್ರ ಇಷ್ಟೊಂದು ಮೋಹಕವಾಗಿರುವಂತಹ ಕರೆಯನ್ನು ನಿರಾಕರಿಸಸಾಧ್ಯವಿತ್ತು. (ಆದಿಕಾಂಡ 39:9, 12) ಈ ಯೌವನಸ್ಥನು ಅಂತಹ ವ್ಯಕ್ತಿತ್ವವುಳ್ಳವನಾಗಿದ್ದಾನೋ?

w00 11/15 31 ¶2

“ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು”

ಅವಳ ಕರೆಯನ್ನು ನಿರಾಕರಿಸುವುದು ಅಸಾಧ್ಯ ಎಂದು ಈ ಯೌವನಸ್ಥನಿಗೆ ಅನಿಸುತ್ತದೆ. ತನ್ನೆಲ್ಲಾ ಬುದ್ಧಿಯನ್ನು ಗಾಳಿಗೆ ತೂರಿ, ‘ವಧ್ಯಸ್ಥಾನಕ್ಕೆ ಹೋಗುವ ಹೋರಿಯಂತೆ’ ಅವನು ಅವಳ ಹಿಂದೆ ಹೋಗುತ್ತಾನೆ. ಬೇಡಿಬಿದ್ದಿರುವ ಒಬ್ಬ ಮನುಷ್ಯನು ತನ್ನ ದಂಡನೆಯಿಂದ ತಪ್ಪಿಸಿಕೊಳ್ಳಲು ಅಸಮರ್ಥನಾಗಿರುವಂತೆಯೇ, ಈ ಯೌವನಸ್ಥನು ಸಹ ಪಾಪದ ಕಡೆಗೆ ಮುನ್ನುಗ್ಗುತ್ತಿದ್ದಾನೆ. “ಬಾಣವು ತನ್ನ ಕಾಳಿಜವನ್ನು ತಿವಿಯುವ” ತನಕ, ಅಂದರೆ ತನಗೆ ಮರಣವನ್ನು ಉಂಟುಮಾಡಸಾಧ್ಯವಿರುವಂತಹ ಗಾಯವನ್ನು ಮಾಡಿಕೊಳ್ಳುವ ತನಕ ಇದರ ಅಪಾಯವನ್ನು ಅವನು ಮನಗಾಣುವುದಿಲ್ಲ. ಈ ಮರಣವು ಶಾರೀರಿಕವಾಗಿರಬಹುದು, ಏಕೆಂದರೆ ಅವನು ತನ್ನನ್ನು ಮಾರಕವಾದ ರತಿರವಾನಿತ ರೋಗಕ್ಕೆ ಒಡ್ಡಿಕೊಳ್ಳುತ್ತಾನೆ. ಆ ಗಾಯವು ಅವನಿಗೆ ಆತ್ಮಿಕ ಮರಣವನ್ನೂ ಉಂಟುಮಾಡಸಾಧ್ಯವಿದೆ. ಏಕೆಂದರೆ ಇದರಲ್ಲಿ ಅವನ “ಪ್ರಾಣಾಪಾಯ”ವೇ ಒಳಗೂಡಿದೆ. ಅವನ ಇಡೀ ಜೀವಿತವೇ ಗಂಭೀರವಾಗಿ ಬಾಧಿಸಲ್ಪಟ್ಟಿದೆ, ಮತ್ತು ಅವನು ದೇವರ ವಿರುದ್ಧ ಗಂಭೀರವಾದ ತಪ್ಪನ್ನು ಮಾಡಿದ್ದಾನೆ. ಹೀಗೆ, ಪಕ್ಷಿಯು ಒಂದು ಬಲೆಯ ಕಡೆಗೆ ಹಾರುವ ಹಾಗೆ ಅವನು ಮರಣದ ಹಿಡಿತದ ಕಡೆಗೆ ತ್ವರಿತಗತಿಯಿಂದ ಸಾಗುತ್ತಾನೆ!

ಬೈಬಲಿನಲ್ಲಿರುವ ರತ್ನಗಳು

w00 11/15 29 ¶1

“ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು”

ಸೊಲೊಮೋನನು ಮುಂದುವರಿಸುತ್ತಾ ಹೇಳಿದ್ದು: “ಅವುಗಳನ್ನು [ನನ್ನ ಆಜ್ಞೆಗಳನ್ನು] ನಿನ್ನ ಬೆರಳುಗಳಿಗೆ ಉಂಗುರವಾಗಿ ಇಟ್ಟುಕೋ, ಹೃದಯದ ಹಲಗೆಯಲ್ಲಿ ಬರೆ.” (ಜ್ಞಾನೋಕ್ತಿ 7:3) ಬೆರಳುಗಳು ಯಾವಾಗಲೂ ನಮ್ಮ ಕಣ್ಣುಗಳ ಮುಂದೆಯೇ ಇರುತ್ತವೆ ಮತ್ತು ನಮ್ಮ ಕಾರ್ಯಗಳನ್ನು ಪೂರೈಸುವುದರಲ್ಲಿ ಅತ್ಯಾವಶ್ಯಕವಾಗಿವೆ. ತದ್ರೀತಿಯಲ್ಲಿ, ಹೆತ್ತವರಿಂದ ಕೊಡಲ್ಪಡುವ ಶಾಸ್ತ್ರೀಯ ತರಬೇತಿ ಅಥವಾ ಬೈಬಲ್‌ ಜ್ಞಾನದ ಮೂಲಕ ನಾವು ಕಲಿತಂಥ ಪಾಠಗಳು ಸಹ ತುಂಬ ಪ್ರಯೋಜನಕಾರಿಯಾಗಿವೆ. ಹೇಗೆಂದರೆ, ನಾವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಅವು ನಮಗೆ ಎಚ್ಚರಿಕೆಯನ್ನೂ ಮಾರ್ಗದರ್ಶನವನ್ನೂ ನೀಡುತ್ತವೆ. ನಾವು ದೇವರ ಆಜ್ಞೆಗಳನ್ನು ನಮ್ಮ ಹೃದಯದ ಹಲಗೆಯ ಮೇಲೆ ಕೆತ್ತಬೇಕಾಗಿದೆ ಮತ್ತು ಅವುಗಳನ್ನು ನಮ್ಮ ಆಂತರಿಕ ಬಲದ ಒಂದು ಭಾಗವಾಗಿ ಮಾಡಿಕೊಳ್ಳಬೇಕಾಗಿದೆ.

ಏಪ್ರಿಲ್‌ 7-13

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 8

ಯೇಸುವಿನ ವಿವೇಕಕ್ಕೆ ಗಮನ ಕೊಡಿ

cf 131 ¶ 7

“ನಾನು ತಂದೆಯನ್ನು ಪ್ರೀತಿಸುತ್ತೇನೆ”

ವಚನ 22ರಲ್ಲಿ ವಿವೇಕವು ಹೇಳುವುದು: “ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ.” ಇಲ್ಲಿ ಕೇವಲ ವಿವೇಕಕ್ಕಿಂತ ಹೆಚ್ಚಿನದ್ದು ಒಳಗೂಡಿರಬೇಕು. ಏಕೆಂದರೆ ವಿವೇಕವು ಎಂದೂ ‘ನಿರ್ಮಿಸಲ್ಪಟ್ಟಿಲ್ಲ.’ ಅದಕ್ಕೆ ಒಂದು ಆರಂಭ ಕೂಡ ಇಲ್ಲ. ಏಕೆಂದರೆ ಯೆಹೋವನು ಯಾವಾಗಲೂ ಅಸ್ತಿತ್ವದಲ್ಲಿದ್ದನು ಮತ್ತು ಆತನು ಯಾವಾಗಲೂ ವಿವೇಕಿಯಾಗಿದ್ದಾನೆ. (ಕೀರ್ತನೆ 90:2) ದೇವರ ಮಗನಾದರೋ, “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದಾನೆ. ಅವನು ನಿರ್ಮಿಸಲ್ಪಟ್ಟನು ಅಂದರೆ ಸೃಷ್ಟಿಸಲ್ಪಟ್ಟನು. ಯೆಹೋವನ ಪುರಾತನಕಾರ್ಯಗಳಲ್ಲಿ ಪ್ರಥಮನು ಅವನೇ. (ಕೊಲೊಸ್ಸೆ 1:15) ಜ್ಞಾನೋಕ್ತಿಯಲ್ಲಿ ವಿವರಿಸಲಾಗಿರುವಂತೆ ಈ ಮಗನು ಭೂಮಿ ಹಾಗೂ ಆಕಾಶಮಂಡಲ ಸ್ಥಾಪಿಸಲ್ಪಡುವ ಮುಂಚೆಯೇ ಅಸ್ತಿತ್ವದಲ್ಲಿದ್ದನು ಮತ್ತು ವಾಕ್ಯ ಇಲ್ಲವೇ ದೇವರ ವಕ್ತಾರನಾಗಿದ್ದ ಅವನು ಯೆಹೋವನ ವಿವೇಕದ ಪರಿಪೂರ್ಣ ಚಿತ್ರಣವಾಗಿದ್ದನು.—ಯೋಹಾನ 1:1.

cf 131-132 ¶8-9

“ನಾನು ತಂದೆಯನ್ನು ಪ್ರೀತಿಸುತ್ತೇನೆ”

8 ಭೂಮಿಗೆ ಬರುವುದಕ್ಕೂ ಮುಂಚೆ, ಅಷ್ಟೊಂದು ಸಮಯ ಮಗನು ಏನು ಮಾಡುತ್ತಿದ್ದನು? ದೇವರ ಬಳಿ “ಶಿಲ್ಪಿಯಾಗಿ” ಕೆಲಸ ಮಾಡುತ್ತಿದ್ದನು ಎಂಬುದಾಗಿ 30ನೇ ವಚನ ತಿಳಿಸುತ್ತದೆ. ಹಾಗೆಂದರೆ ಏನು? ಕೊಲೊಸ್ಸೆ 1:16 ವಿವರಿಸುವುದು: “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ . . . ಎಲ್ಲವುಗಳು, . . . ಅವನ ಮೂಲಕವೇ ಸೃಷ್ಟಿಸಲ್ಪಟ್ಟವು; ಅವನ ಮೂಲಕವೂ ಅವನಿಗಾಗಿಯೂ ಸೃಷ್ಟಿಸಲ್ಪಟ್ಟವು.” ಹಾಗಾದರೆ, ಸ್ವರ್ಗೀಯ ಕ್ಷೇತ್ರದಲ್ಲಿರುವ ಆತ್ಮಜೀವಿಗಳಿಂದ ಹಿಡಿದು ಅಗಾಧವಾದ ಭೌತಿಕ ವಿಶ್ವದ ತನಕ, ಅದ್ಭುತಕರವಾದ ವಿವಿಧ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಂದ ಹಿಡಿದು ಭೂಸೃಷ್ಟಿಯಲ್ಲೇ ಶ್ರೇಷ್ಠನಾಗಿರುವ ಮಾನವನ ತನಕ, ಪ್ರತಿಯೊಂದನ್ನು ಸೃಷ್ಟಿಸಲು ಸೃಷ್ಟಿಕರ್ತನಾದ ಯೆಹೋವನು ಕುಶಲ ಶಿಲ್ಪಿಯಾದ ತನ್ನ ಮಗನನ್ನು ಬಳಸಿದನು. ಪರಸ್ಪರ ಹೊಂದಿಕೊಂಡು ಸಹಮತದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮತ್ತು ಮಗನನ್ನು ಒಂದು ರೀತಿಯಲ್ಲಿ ನಾವು ಕಟ್ಟಡವಿನ್ಯಾಸಕನಿಗೂ ಅವನ ಕುಶಲ ವಿನ್ಯಾಸಗಳಿಗೆ ತಕ್ಕಂತೆ ಮನೆಕಟ್ಟಿಕೊಡುವ ಗೃಹನಿರ್ಮಾಪಕನಿಗೂ ಹೋಲಿಸಬಹುದು. ಸೃಷ್ಟಿಯ ಯಾವುದೇ ವೈಶಿಷ್ಟ್ಯವನ್ನು ನೋಡಿ ನಾವು ವಿಸ್ಮಿತರಾಗುವಾಗ, ವಾಸ್ತವದಲ್ಲಿ ನಾವು ಮಹಾ ವಿನ್ಯಾಸಕನಿಗೆ ಸ್ತುತಿ ಸಲ್ಲಿಸುತ್ತಿದ್ದೇವೆ. (ಕೀರ್ತನೆ 19:1) ಅದೇ ಸಮಯದಲ್ಲಿ, ಸೃಷ್ಟಿಕರ್ತ ಮತ್ತು ಆತನ ‘ಶಿಲ್ಪಿಯ’ ನಡುವೆ ದೀರ್ಘಕಾಲದಿಂದಿದ್ದ ಸಂತೋಷಭರಿತ ಸಹಯೋಗವು ಸಹ ನಮ್ಮ ಮನಸ್ಸಿಗೆ ಬರುತ್ತದೆ.

9 ಅಪರಿಪೂರ್ಣರಾದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಕೆಲಸಮಾಡುವಾಗ, ಪರಸ್ಪರ ಹೊಂದಿಕೊಂಡು ಹೋಗಲು ಕೆಲವೊಮ್ಮೆ ಅವರಿಗೆ ಕಷ್ಟವಾಗುತ್ತದೆ. ಆದರೆ ಯೆಹೋವನ ಮತ್ತು ಅವನ ಮಗನ ವಿಷಯದಲ್ಲಿ ಹಾಗಿಲ್ಲ! ಮಗನು ತಂದೆಯೊಂದಿಗೆ ಅನಂತಕಾಲದಿಂದ ಕೆಲಸಮಾಡುತ್ತಿದ್ದನು ಮತ್ತು “ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ” ಇದ್ದನು. (ಜ್ಞಾನೋಕ್ತಿ 8:30) ಹೌದು ತಂದೆಯೊಂದಿಗಿರಲು ಅವನು ಹರ್ಷಿಸಿದನು ಮತ್ತು ಅವರು ಪರಸ್ಪರ ಅನ್ಯೋನ್ಯವಾಗಿದ್ದರು. ಮಗನು ದೇವರ ಗುಣಗಳನ್ನು ಅನುಕರಿಸಲು ಕಲಿಯುತ್ತಾ ಕಲಿಯುತ್ತಾ ಸಹಜವಾಗಿಯೇ ತಂದೆಯ ಹಾಗಾದನು. ಹೀಗೆ ತಂದೆ ಮತ್ತು ಮಗನ ನಡುವಿನ ಆಪ್ತಬಾಂಧವ್ಯ ಇನ್ನಷ್ಟು ಗಾಢವಾದದ್ದರಲ್ಲಿ ಆಶ್ಚರ್ಯವಿಲ್ಲ! ಆದ್ದರಿಂದಲೇ ಅದನ್ನು ವಿಶ್ವದಲ್ಲೇ ಅತಿ ಹಳೆಯದಾದ ಹಾಗೂ ಗಾಢವಾದ ಪ್ರೀತಿಯ ಬಂಧವೆಂದು ಕರೆಯಲಾಗುತ್ತದೆ.

w09 4/15 31 ¶14

ಮಹಾ ದಾವೀದನೂ ಮಹಾ ಸೊಲೊಮೋನನೂ ಆದ ಯೇಸುವನ್ನು ಮಾನ್ಯಮಾಡುವುದು

14 ಮಾನವರ ಪೈಕಿ ಸೊಲೊಮೋನನನ್ನು ವಿವೇಕದಲ್ಲಿ ಮೀರಿಸಿದ್ದು, ಯೇಸು ಕ್ರಿಸ್ತನೊಬ್ಬನೇ. “ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ” ಎಂದು ಅವನು ತನ್ನ ಬಗ್ಗೆ ಹೇಳಿದನು. (ಮತ್ತಾ. 12:42) ಯೇಸು, “ನಿತ್ಯಜೀವದ ಮಾತು”ಗಳನ್ನಾಡಿದನು. (ಯೋಹಾ. 6:68) ಉದಾಹರಣೆಗೆ ಪರ್ವತ ಪ್ರಸಂಗವು, ಸೊಲೊಮೋನನ ಜ್ಞಾನೋಕ್ತಿಗಳಲ್ಲಿರುವ ಕೆಲವೊಂದು ಮೂಲತತ್ತ್ವಗಳನ್ನು ಇನ್ನಷ್ಟು ವಿಶಾಲವಾಗಿ ತಿಳಿಸಿತು. ಯೆಹೋವನ ಆರಾಧಕನಿಗೆ ಸಂತೋಷ ತರಬಲ್ಲ ಹಲವಾರು ವಿಷಯಗಳನ್ನು ಸೊಲೊಮೋನನು ವರ್ಣಿಸಿದ್ದನು. (ಜ್ಞಾನೋ. 3:13; 8:32, 33; 14:21; 16:20) ಯೆಹೋವನ ಆರಾಧನೆ ಮತ್ತು ಆತನ ವಾಗ್ದಾನಗಳ ನೆರವೇರಿಕೆಗೆ ಸಂಬಂಧಪಟ್ಟ ವಿಷಯಗಳಿಂದ ನಿಜ ಸಂತೋಷ ಸಿಗುತ್ತದೆಂದು ಯೇಸು ಒತ್ತಿ ಹೇಳಿದನು. ಅವನಂದದ್ದು: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು.” (ಮತ್ತಾ. 5:3) ಯೇಸುವಿನ ಬೋಧನೆಗಳಲ್ಲಿರುವ ಮೂಲತತ್ತ್ವಗಳನ್ನು ಅನ್ವಯಿಸುವವರು “ಜೀವದ ಬುಗ್ಗೆ” ಆದ ಯೆಹೋವನಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಾರೆ. (ಕೀರ್ತ. 36:9; ಜ್ಞಾನೋ. 22:11; ಮತ್ತಾ. 5:8) ಯೇಸು, ‘ದೇವರ ವಿವೇಕದ’ ಪ್ರತಿರೂಪವಾಗಿದ್ದಾನೆ. (1 ಕೊರಿಂ. 1:24, 30) ಮೆಸ್ಸೀಯ ರಾಜನಾಗಿರುವ ಯೇಸುವಿನಲ್ಲಿ “ಜ್ಞಾನವಿವೇಕದಾಯಕ ಆತ್ಮ” ಇದೆ.—ಯೆಶಾ. 11:2.

ಬೈಬಲಿನಲ್ಲಿರುವ ರತ್ನಗಳು

g 5/14 16

‘ವಿವೇಕವು ಕರೆಯುತ್ತಿದೆ’—ನಿಮಗದು ಕೇಳಿಸುತ್ತಿದೆಯಾ?

▪ “ಇತಿಹಾಸದಲ್ಲೇ ಅತಿ ವ್ಯಾಪಕವಾಗಿ ವಿತರಣೆ ಆಗಿರುವ ಪುಸ್ತಕ” ಬೈಬಲ್‌ ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡಿಯ ತಿಳಿಸುತ್ತದೆ. “ಬೇರೆಲ್ಲಾ ಪುಸ್ತಕಗಳಿಗಿಂತ ಹೆಚ್ಚು ಬಾರಿ ಭಾಷಾಂತರಗೊಂಡಿರುವ ಮತ್ತು ಹೆಚ್ಚು ಭಾಷೆಗಳಲ್ಲಿರುವ ಪುಸ್ತಕ ಇದು.” ಇಡೀ ಬೈಬಲ್‌ ಅಥವಾ ಅದರ ಭಾಗಗಳು ಇಂದು ಸುಮಾರು 2,600 ಭಾಷೆಗಳಲ್ಲಿ ಸಿಗುತ್ತವೆ ಅಂದರೆ ಇಡೀ ಮಾನವ ಕುಟುಂಬದ 90%ಕ್ಕಿಂತಲೂ ಹೆಚ್ಚು ಜನರಿಗೆ ಬೈಬಲ್‌ ಲಭ್ಯವಿದೆ.

▪ ವಿವೇಕವು ಅಕ್ಷರಾರ್ಥವಾಗಿಯೂ ‘ಕೂಗುತ್ತಿದೆ.’ ಮತ್ತಾಯ 24:14 ಹೀಗನ್ನುತ್ತದೆ: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ [ಈ ಲೋಕದ] ಅಂತ್ಯವು ಬರುವುದು.”

ಏಪ್ರಿಲ್‌ 14-20

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 9

ಗೇಲಿ ಮಾಡೋರಲ್ಲ, ವಿವೇಕಿಗಳಾಗಿರಿ

w22.02 9 ¶4

‘ವಿವೇಕಿಯ ಮಾತುಗಳನ್ನು ಕೇಳು’

4 ಬೇರೆಯವರಿಂದ ಸಲಹೆ ಸಿಕ್ಕಾಗ ಅದನ್ನ ಒಪ್ಪಿಕೊಳ್ಳೋಕೆ, ಪಾಲಿಸೋಕೆ ನಮಗೆ ಕಷ್ಟ ಆಗುತ್ತೆ. ಯಾಕಂದ್ರೆ ನಾವು ಅಪರಿಪೂರ್ಣರು, ನಮ್ಮಿಂದ ತಪ್ಪಾಗುತ್ತೆ ಅಂತ ನಾವು ಒಪ್ಪಿಕೊಂಡರೂ ಆ ತಪ್ಪನ್ನ ತಿದ್ದಿಕೊಳ್ಳೋಕೆ ಯಾರಾದ್ರೂ ಹೇಳಿದಾಗ ನಮಗೆ ಇಷ್ಟ ಆಗಲ್ಲ. (ಪ್ರಸಂಗಿ 7:9 ಓದಿ.) ‘ನಾನು ಬೇಕುಬೇಕಂತ ಇದನ್ನ ಮಾಡಲಿಲ್ಲ’ ಅಂತ ಕಾರಣಗಳನ್ನ ಕೊಡಬಹುದು. ಅಥವಾ ಸಲಹೆ ಕೊಟ್ಟವರ ಬಗ್ಗೆ ‘ಅವರು ಯಾವಾಗಲೂ ಹೀಗೇ ಹೇಳ್ತಾರೆ,’ ‘ಅವರು ಸಲಹೆ ಕೊಟ್ಟ ರೀತಿ ಸರಿಯಿಲ್ಲ’ ಅಂತೆಲ್ಲಾ ಹೇಳಬಹುದು. ಇನ್ನು ಕೆಲವೊಮ್ಮೆ ನಾವು ಅವರಲ್ಲಿ ತಪ್ಪು ಹುಡುಕ್ತಾ ‘ಇವರೇನು ದೊಡ್ಡ ಸಾಚಾನಾ? ಇವರು ಯಾರು ನಂಗೆ ಹೇಳೋಕೆ?’ ಅಂತ ಅಂದುಕೊಳ್ಳಬಹುದು. ಇದ್ರಿಂದ ನಾವು ಅವರ ಸಲಹೆಯನ್ನ ಕಿವಿಗೇ ಹಾಕಿಕೊಳ್ಳಲ್ಲ ಮತ್ತು ನಾವು ಹೇಳೋದಕ್ಕೆಲ್ಲ ತಲೆ ಆಡಿಸುವವರ ಹತ್ರ ಹೋಗಿ ಸಲಹೆ ಕೇಳ್ತೀವಿ.

w22.02 12 ¶12-14

‘ವಿವೇಕಿಯ ಮಾತುಗಳನ್ನು ಕೇಳು’

12 ಯಾರಾದ್ರೂ ನಮಗೆ ಬುದ್ಧಿ ಹೇಳಿದಾಗ ಅದನ್ನ ಕೇಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? ದೀನತೆ ಸಹಾಯ ಮಾಡುತ್ತೆ. ನಾವು ಕೆಲವೊಮ್ಮೆ ತಪ್ಪು ಮಾಡ್ತೀವಿ, ಬುದ್ಧಿನೇ ಇಲ್ಲದಿರುವವರ ತರ ನಡೆದುಕೊಂಡುಬಿಡ್ತೀವಿ ಅನ್ನೋದನ್ನ ಒಪ್ಪಿಕೊಂಡು ದೀನತೆ ತೋರಿಸಬೇಕು. ನಾವು ಈಗಾಗಲೇ ಯೋಬನ ಬಗ್ಗೆ ನೋಡಿದ್ವಿ. ಯೋಬ ಒಂದು ಸಲ ತಪ್ಪಾಗಿ ಯೋಚನೆ ಮಾಡಿದ. ಆದ್ರೆ ಅವನನ್ನ ತಿದ್ದಿದಾಗ ಅದನ್ನ ಸರಿ ಮಾಡಿಕೊಂಡ. ಇದ್ರಿಂದ ಅವನಿಗೆ ಯೆಹೋವನ ಆಶೀರ್ವಾದನೂ ಸಿಕ್ತು. ಎಲೀಹು ಯೋಬನಿಗಿಂತ ವಯಸ್ಸಲ್ಲಿ ಚಿಕ್ಕವನಾಗಿದ್ರೂ ಅವನು ಕೊಟ್ಟ ಸಲಹೆಯನ್ನ ಯೋಬ ಕೇಳಿದ. ಹೀಗೆ ಯೋಬ ತನಗೆ ದೀನತೆಯಿದೆ ಅಂತ ತೋರಿಸಿದ. (ಯೋಬ 32:6, 7) ಅದೇ ತರ ನಮಗಿಂತ ವಯಸ್ಸಲ್ಲಿ ಚಿಕ್ಕವರು ನಮಗೆ ಸಲಹೆ ಕೊಟ್ಟಾಗ ಅಥವಾ ಯಾರಾದ್ರೂ ನಮಗೆ ಅನಾವಶ್ಯಕವಾಗಿ ಸಲಹೆ ಕೊಡ್ತಿದ್ದಾರೆ ಅಂತ ಅನಿಸುವಾಗಲೂ ನಾವು ದೀನರಾಗಿದ್ರೆ ಅದನ್ನ ಕೇಳಿ, ಪಾಲಿಸ್ತೀವಿ. “ನಮ್ಮ ಬೆನ್ನು ನಮಗೆ ಹೇಗೆ ಕಾಣಲ್ವೋ ಹಾಗೇ ನಮ್ಮಲ್ಲಿರೋ ಕುಂದುಕೊರತೆಗಳು ನಮಗೆ ಗೊತ್ತಾಗಲ್ಲ. ಅದನ್ನ ಯಾರಾದ್ರೂ ಹೇಳಿದಾಗ ಮಾತ್ರ ಅದನ್ನ ತಿದ್ದಿಕೊಳ್ಳೋಕೆ ಆಗುತ್ತೆ” ಅಂತ ಕೆನಡಾದಲ್ಲಿರೋ ಒಬ್ಬ ಹಿರಿಯ ಹೇಳ್ತಾರೆ. ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಕೆ, ಚೆನ್ನಾಗಿ ಸೇವೆ ಮಾಡೋಕೆ ನಮಗೆ ಬೇರೆಯವರ ಸಹಾಯ ಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ.—ಕೀರ್ತನೆ 141:5 ಓದಿ.

13 ಬುದ್ಧಿಮಾತಲ್ಲಿ ಯೆಹೋವನ ಪ್ರೀತಿ ನೋಡಿ. ನಾವೆಲ್ಲ ಚೆನ್ನಾಗಿರಬೇಕು ಅಂತ ಯೆಹೋವ ಆಸೆ ಪಡ್ತಾನೆ. (ಜ್ಞಾನೋ. 4:20-22) ಬೈಬಲಿಂದ, ಪುಸ್ತಕ-ಪತ್ರಿಕೆಗಳಿಂದ ಅಥವಾ ಅನುಭವ ಇರೋ ಸಹೋದರ ಸಹೋದರಿಯರಿಂದ ನಮಗೆ ಸಲಹೆ ಸಿಕ್ಕಾಗ ಯೆಹೋವನಿಗೆ ನಮ್ಮ ಮೇಲೆ ಪ್ರೀತಿಯಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಯಾಕಂದ್ರೆ ಆತನು “ನಮ್ಮ ಒಳ್ಳೇದಕ್ಕೇ ಶಿಸ್ತು ಕೊಡ್ತಾನೆ” ಅಂತ ಇಬ್ರಿಯ 12:9, 10 ಹೇಳುತ್ತೆ.

14 ಹೇಗೆ ಹೇಳ್ತಿದ್ದಾರೆ ಅಂತ ಅಲ್ಲ, ಏನು ಹೇಳ್ತಿದ್ದಾರೆ ಅನ್ನೋದನ್ನ ನೋಡಿ. ಕೆಲವೊಮ್ಮೆ ಯಾರಾದ್ರೂ ಸಲಹೆ ಕೊಟ್ಟಾಗ ‘ಅವರು ಹೇಳಿದ ವಿಷಯ ಸರಿ, ಆದ್ರೆ ಅವರು ಹೇಳಿದ ರೀತಿ ನನಗೆ ಒಂಚೂರು ಇಷ್ಟ ಆಗಲಿಲ್ಲ’ ಅಂತ ಅನಿಸಬಹುದು. ನಿಜ, ಸಲಹೆ ಕೊಡುವವರು ಅದನ್ನ ಬೇರೆಯವರಿಗೆ ನೋವಾಗದ ತರ ಕೊಡೋಕೆ ಪ್ರಯತ್ನ ಮಾಡಬೇಕು. (ಗಲಾ. 6:1) ಆದ್ರೆ ನಿಮಗೆ ಯಾರಾದ್ರೂ ಸಲಹೆ ಕೊಟ್ಟಾಗ ಅವರು ಏನು ಹೇಳ್ತಿದ್ದಾರೆ ಅನ್ನೋದನ್ನ ಗಮನಿಸಿ, ಹೇಗೆ ಹೇಳ್ತಿದ್ದಾರೆ ಅನ್ನೋದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ‘ಅವರು ಸಲಹೆ ಕೊಟ್ಟ ರೀತಿ ನಮಗೆ ಇಷ್ಟ ಆಗಲಿಲ್ಲ ಅಂದ್ರೂ ಅವರು ಹೇಳಿದ ಹಾಗೆ ನಾನೇನಾದ್ರೂ ತಿದ್ದಿಕೊಳ್ಳಬೇಕಾ? ನಾನು ಅವರ ತಪ್ಪನ್ನ ನೋಡದೆ ನಾನೇನು ಸರಿ ಮಾಡಿಕೊಳ್ಳಬೇಕು ಅಂತ ಯೋಚಿಸ್ತಿದ್ದೀನಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಯಾರು ಹೇಗೆ ಸಲಹೆ ಕೊಟ್ರೂ ನಾವು ಅದನ್ನ ಕೇಳಿದಾಗ ವಿವೇಕಿಗಳು ಅಂತ ತೋರಿಸಿಕೊಡ್ತೀವಿ.—ಜ್ಞಾನೋ. 15:31.

w01 5/15 30 ¶1-2

‘ವಿವೇಕದಿಂದ ನಮ್ಮ ದಿನಗಳು ಹೆಚ್ಚುವವು’

ಗದರಿಕೆಗೆ ಒಬ್ಬ ವಿವೇಕಿಯು ತೋರಿಸುವ ಪ್ರತಿಕ್ರಿಯೆಯು, ಒಬ್ಬ ನಿಂದಕನ ಪ್ರತಿಕ್ರಿಯೆಗಿಂತ ತೀರ ವಿರುದ್ಧವಾದದ್ದಾಗಿರುತ್ತದೆ. ಸೊಲೊಮೋನನು ತಿಳಿಸುವುದು: “ವಿವೇಕಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿಸುವನು. ವಿವೇಕಿಗೆ ಉಪದೇಶಿಸಿದರೆ ಅವನು ಹೆಚ್ಚು ವಿವೇಕಿಯಾಗುವನು.” (ಜ್ಞಾನೋಕ್ತಿ 9:8ಬಿ, 9ಎ, NW) “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ” ಎಂಬುದು ಒಬ್ಬ ವಿವೇಕಿಗೆ ತಿಳಿದಿರುವ ಸಂಗತಿಯಾಗಿದೆ. (ಇಬ್ರಿಯ 12:11) ಸಲಹೆಯು ಮನಸ್ಸಿಗೆ ಸ್ವಲ್ಪ ನೋವನ್ನುಂಟುಮಾಡಿದರೂ, ಅದನ್ನು ಅಂಗೀಕರಿಸುವುದರಿಂದ ನಾವೇ ಹೆಚ್ಚು ವಿವೇಕಿಗಳಾಗುವುದಾದರೆ, ನಾವದನ್ನು ಏಕೆ ಅನ್ವಯಿಸದೇ ಇರಬೇಕು ಇಲ್ಲವೇ ಸಲಹೆಯನ್ನು ಪಡೆಯುವುದರಿಂದ ತಪ್ಪಿಸಿಕೊಳ್ಳಬೇಕು?

“ನೀತಿವಂತನಿಗೆ ಬೋಧಿಸಿದರೆ ಹೆಚ್ಚು ತಿಳುವಳಿಕೆಯನ್ನು ಪಡೆಯುವನು” ಎಂದು ಆ ಬುದ್ಧಿವಂತ ರಾಜನು ಮುಂದುವರಿಸುತ್ತಾ ಹೇಳುತ್ತಾನೆ. (ಜ್ಞಾನೋಕ್ತಿ 9:9ಬಿ) ತನ್ನಲ್ಲಿ ಹೆಚ್ಚು ವಿವೇಕವಿರುವುದರಿಂದ, ಇಲ್ಲವೇ ತನಗೆ ತುಂಬ ಪ್ರಾಯವಾಗಿರುವುದರಿಂದ ಇನ್ನೂ ಹೆಚ್ಚನ್ನು ಕಲಿಯಲು ಸಾಧ್ಯವಿಲ್ಲವೆಂದು ಯಾರೂ ಹೇಳಸಾಧ್ಯವಿಲ್ಲ. ವೃದ್ಧರು ಸಹ ಸತ್ಯವನ್ನು ಸ್ವೀಕರಿಸಿ, ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳುವುದನ್ನು ನೋಡಿ ಎಷ್ಟು ಸಂತೋಷವಾಗುತ್ತದೆ! ನಾವು ಸಹ ಯಾವಾಗಲೂ ಕಲಿಯುತ್ತಾ ಇರುವ ಇಚ್ಛೆಯನ್ನು ನಮ್ಮಲ್ಲಿ ಇಟ್ಟುಕೊಳ್ಳಲು ಮತ್ತು ಮನಸ್ಸನ್ನು ಸಕ್ರಿಯವಾಗಿಡಲು ಪ್ರಯತ್ನಿಸೋಣ.

w01 5/15 30 ¶5

‘ವಿವೇಕದಿಂದ ನಮ್ಮ ದಿನಗಳು ಹೆಚ್ಚುವವು’

ವಿವೇಕವನ್ನು ಸಂಪಾದಿಸಲು ಶ್ರಮಿಸುವುದು ನಮ್ಮ ವೈಯಕ್ತಿಕ ಜವಾಬ್ದಾರಿಯಾಗಿದೆ. ಈ ವಾಸ್ತವಾಂಶವನ್ನು ಒತ್ತಿಹೇಳುತ್ತಾ, ಸೊಲೊಮೋನನು ತಿಳಿಸಿದ್ದು: “ನೀನು ಜ್ಞಾನವಂತನಾದರೆ [“ವಿವೇಕಿಯಾದರೆ,” NW] ನಿನ್ನ ಜ್ಞಾನವು [“ವಿವೇಕವು,” NW] ನಿನಗೇ ಲಾಭಕರ, ಧರ್ಮನಿಂದಕನಾದರೆ ನೀನೇ ಅದರ ಫಲವನ್ನು ಅನುಭವಿಸುವಿ.” (ಓರೆ ಅಕ್ಷರಗಳು ನಮ್ಮವು.) (ಜ್ಞಾನೋಕ್ತಿ 9:12) ಒಬ್ಬ ವಿವೇಕಿಯ ವಿವೇಕದಿಂದ ಅವನಿಗೇ ಲಾಭವಾಗುತ್ತದೆ. ಮತ್ತು ಒಬ್ಬ ನಿಂದಕನು ಅನುಭವಿಸುವ ಕಷ್ಟಾನುಭವಕ್ಕೆ ಸ್ವತಃ ಅವನೇ ಜವಾಬ್ದಾರನು. ನಿಶ್ಚಯವಾಗಿಯೂ ನಾವೇನನ್ನು ಬಿತ್ತುತ್ತೇವೊ ಅದನ್ನೇ ಕೊಯ್ಯುತ್ತೇವೆ. ಹೀಗಿರುವುದರಿಂದ ನಾವು, ‘ಕಿವಿಯನ್ನು ಜ್ಞಾನದ [“ವಿವೇಕದ,” NW] ಕಡೆಗೆ ತಿರುಗಿಸಬೇಕು.’—ಜ್ಞಾನೋಕ್ತಿ 2:2.

ಬೈಬಲಿನಲ್ಲಿರುವ ರತ್ನಗಳು

w06 10/1 4 ¶2

ಜ್ಞಾನೋಕ್ತಿಗಳು ಪುಸ್ತಕದ ಮುಖ್ಯಾಂಶಗಳು

9:17—“ಕದ್ದ ನೀರು” ಎಂದರೇನು, ಮತ್ತು ಅದು ಏಕೆ “ಸಿಹಿಯಾಗಿದೆ”? ಬೈಬಲ್‌, ವಿವಾಹ ಬಂಧದೊಳಗಿನ ಲೈಂಗಿಕ ಸಂಬಂಧವನ್ನು ಆನಂದಿಸುವುದನ್ನು ಒಂದು ಬಾವಿಯಿಂದ ಚೇತೋಹಾರಿ ನೀರನ್ನು ಸೇದಿ ಕುಡಿಯುವುದಕ್ಕೆ ಹೋಲಿಸುವುದರಿಂದ, ಕದ್ದ ನೀರು ಗುಪ್ತವಾಗಿರುವ ಅನೈತಿಕ ಲೈಂಗಿಕ ಸಂಬಂಧಗಳಿಗೆ ಸೂಚಿಸುತ್ತದೆ. (ಜ್ಞಾನೋಕ್ತಿ 5:15-17) ಅನೈತಿಕ ಸಂಬಂಧಗಳನ್ನು ಕದ್ದುಮುಚ್ಚಿ ನಡೆಸಲಾಗುತ್ತಿದೆ ಎಂಬ ಸಂಗತಿಯಿಂದಾಗಿ ಇಂಥ ನೀರು ಸಿಹಿಯಾಗಿರುವಂತೆ ತೋರುತ್ತದೆ.

ಏಪ್ರಿಲ್‌ 21-27

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 10

ನಿಜವಾದ ಶ್ರೀಮಂತಿಕೆ ಸಿಗಬೇಕಾದ್ರೆ ಏನು ಮಾಡಬೇಕು?

w01 7/15 25 ¶1-3

‘ನೀತಿವಂತನು ಆಶೀರ್ವಾದದ ನೆಲೆ’

ನೀತಿವಂತನು ಇನ್ನೊಂದು ವಿಧದಲ್ಲೂ ಆಶೀರ್ವದಿಸಲ್ಪಟ್ಟಿದ್ದಾನೆ. “ಜೋಲುಗೈ ದಾರಿದ್ರ್ಯ; ಚುರುಕುಗೈ ಐಶ್ವರ್ಯ. ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತನು; ಕೊಯ್ಲಿನಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು.”—ಜ್ಞಾನೋಕ್ತಿ 10:4, 5.

ರಾಜನ ಈ ಮಾತುಗಳು, ವಿಶೇಷವಾಗಿ ಕೊಯ್ಲಿನ ಸಮಯದಲ್ಲಿ ಕೆಲಸಗಾರರಿಗೆ ಅರ್ಥಭರಿತವಾಗಿವೆ. ಕೊಯ್ಲಿನ ಸಮಯವು, ನಿದ್ರೆಮಾಡುವ ಸಮಯವಾಗಿರುವುದಿಲ್ಲ. ಅದು ಚುರುಕಾಗಿ ಮತ್ತು ಅನೇಕ ತಾಸುಗಳ ವರೆಗೆ ಕೆಲಸಮಾಡುವ ಸಮಯವಾಗಿರುತ್ತದೆ. ಹೌದು, ಅದು ತುರ್ತಿನ ಸಮಯವಾಗಿದೆ

ಧಾನ್ಯದ ಕೊಯ್ಲನ್ನಲ್ಲ ಬದಲಾಗಿ ಜನರ ಕೊಯ್ಲನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿದ್ದು, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಬೆಳೆಯು [“ಕೊಯ್ಲು,” NW] ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ [“ಕೊಯ್ಲಿನ,” NW] ಯಜಮಾನನನ್ನು [ಯೆಹೋವ ದೇವರನ್ನು]—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಮತ್ತಾಯ 9:35-38) ಇಸವಿ 2000ದಲ್ಲಿ, 1.4 ಕೋಟಿಗಿಂತಲೂ ಹೆಚ್ಚು ಜನರು ಯೇಸುವಿನ ಮರಣದ ಜ್ಞಾಪಕಾಚರಣೆಗೆ ಹಾಜರಾದರು. ಈ ಸಂಖ್ಯೆಯು ಯೆಹೋವನ ಸಾಕ್ಷಿಗಳ ಸಂಖ್ಯೆಗಿಂತ ಇಮ್ಮಡಿಯಾಗಿತ್ತು. ಆದುದರಿಂದ, ‘ಹೊಲಗಳು ಬೆಳ್ಳಗಾಗಿ ಕೊಯ್ಲಿಗೆ ಬಂದಿವೆ’ ಎಂಬುದನ್ನು ಯಾರು ತಾನೇ ಅಲ್ಲಗಳೆಯಬಲ್ಲರು? (ಯೋಹಾನ 4:35) ಸತ್ಯಾರಾಧಕರು ಯಜಮಾನನ ಬಳಿ ಹೆಚ್ಚಿನ ಕೆಲಸಗಾರರಿಗಾಗಿ ಕೇಳಿಕೊಳ್ಳುತ್ತಾರೆ. ಅದೇ ಸಮಯದಲ್ಲಿ, ತಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಅವರು ಸ್ವತಃ ಪರಿಶ್ರಮಪಡುತ್ತಾರೆ. (ಮತ್ತಾಯ 28:19, 20) ಮತ್ತು ಯೆಹೋವನು ಅವರ ಪ್ರಯತ್ನಗಳ ಮೇಲೆ ಎಷ್ಟೊಂದು ಆಶೀರ್ವಾದಗಳನ್ನು ಸುರಿಸಿದ್ದಾನೆ! 2000 ಸೇವಾ ವರ್ಷದಲ್ಲಿ, 2,80,000 ಹೊಸ ವ್ಯಕ್ತಿಗಳು ದೀಕ್ಷಾಸ್ನಾನ ಪಡೆದುಕೊಂಡರು. ಇವರು ಸಹ ದೇವರ ವಾಕ್ಯದ ಬೋಧಕರಾಗಲು ಪ್ರಯತ್ನಿಸುತ್ತಾರೆ. ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹೆಚ್ಚು ಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ ಈ ಕೊಯ್ಲಿನ ಸಮಯದಲ್ಲಿ ನಾವು ಆನಂದ ಮತ್ತು ತೃಪ್ತಿಯನ್ನು ಅನುಭವಿಸೋಣ.

w01 9/15 24 ¶3-4

‘ನೇರವಾದ ಮಾರ್ಗದಲ್ಲಿ’ ನಡೆಯಿರಿ

ಸೊಲೊಮೋನನು ನೀತಿಯ ಪ್ರಾಮುಖ್ಯತೆಯನ್ನು ಸೂಚಿಸುತ್ತಾನೆ. ಅವನು ಹೇಳುವುದು: “ಐಶ್ವರ್ಯವಂತನಿಗೆ ಐಶ್ವರ್ಯವು ಬಲವಾದ ಕೋಟೆ; ಬಡವನಿಗೆ ಬಡತನವು ಅಳಿವು. ನೀತಿವಂತನ ದುಡಿತ ಜೀವಾಸ್ಪದ; ದುಷ್ಟನ ಆದಾಯ ಪಾಪಾಸ್ಪದ.”—ಜ್ಞಾನೋಕ್ತಿ 10:15, 16, NW.

ಪೌಳಿಗೋಡೆಯಿರುವ ಪಟ್ಟಣವು ಹೇಗೆ ಅದರಲ್ಲಿ ವಾಸಿಸುವವರಿಗೆ ಒಂದಿಷ್ಟು ಪ್ರಮಾಣದ ಭದ್ರತೆಯನ್ನು ಕೊಡುತ್ತದೋ ಹಾಗೆಯೇ, ಸಿರಿಸಂಪತ್ತುಗಳು ಜೀವನದ ಕೆಲವು ಅನಿಶ್ಚಿತತೆಗಳಿಂದ ಆಶ್ರಯವಾಗಿರಬಲ್ಲದು. ಮತ್ತು ಅನಿರೀಕ್ಷಿತ ಬದಲಾವಣೆಗಳು ಬರುವಾಗ ಬಡತನವು ವಿನಾಶಕರವಾಗಿರಬಲ್ಲದು. (ಪ್ರಸಂಗಿ 7:12) ಆದರೂ, ಸಂಪತ್ತು ಮತ್ತು ಬಡತನ ಇವೆರಡರಲ್ಲೂ ಒಳಗೂಡಿರುವ ಅಪಾಯದ ಕುರಿತಾಗಿ ಜ್ಞಾನಿಯಾದ ರಾಜನು ಸುಳಿವನ್ನೂ ನೀಡುತ್ತಿರಬಹುದು. ಒಬ್ಬ ಧನವಂತನು, ತನ್ನ ಅಮೂಲ್ಯವಾದ ವಸ್ತುಗಳು ‘ಬಲವಾದ ಕೋಟೆಯಂತಿವೆ’ ಎಂದು ಭಾವಿಸುತ್ತಾ, ತನ್ನ ಸಂಪತ್ತಿನಲ್ಲೇ ಸಂಪೂರ್ಣವಾದ ಭರವಸೆಯನ್ನು ಇಡುವ ಪ್ರವೃತ್ತಿಯುಳ್ಳವನಾಗಿರಬಹುದು. (ಜ್ಞಾನೋಕ್ತಿ 18:11) ಮತ್ತು ಒಬ್ಬ ಬಡ ವ್ಯಕ್ತಿ, ಅವನ ಬಡತನವು ಅವನ ಭವಿಷ್ಯತ್ತನ್ನು ಆಶಾಹೀನವಾದದ್ದಾಗಿ ಮಾಡುತ್ತದೆ ಎಂಬ ತಪ್ಪಾದ ಅನಿಸಿಕೆಯುಳ್ಳವನಾಗಿರಬಹುದು. ಹೀಗೆ, ಇಬ್ಬರೂ ದೇವರೊಂದಿಗೆ ಒಂದು ಒಳ್ಳೇ ಹೆಸರನ್ನು ಮಾಡುವುದರಲ್ಲಿ ತಪ್ಪಿಹೋಗುತ್ತಾರೆ.

it-1-E 340

ಆಶೀರ್ವಾದ

ಮನುಷ್ಯರ ಮೇಲೆ ಯೆಹೋವನ ಆಶೀರ್ವಾದ. “ಯೆಹೋವನ ಆಶೀರ್ವಾದ ಒಬ್ಬನನ್ನ ಶ್ರೀಮಂತ ಮಾಡುತ್ತೆ, ಅದ್ರ ಜೊತೆ ಯಾವುದೇ ರೀತಿಯ ನೋವನ್ನ ದೇವರು ಸೇರಿಸಲ್ಲ.” (ಜ್ಞಾನೋ 10:22) ಯೆಹೋವ ಯಾರನ್ನ ಮೆಚ್ಚುತ್ತಾನೋ ಅವರನ್ನ ಆಶೀರ್ವದಿಸುತ್ತಾನೆ. ಅವರನ್ನ ರಕ್ಷಿಸ್ತಾನೆ, ಮಾರ್ಗದರ್ಶಿಸ್ತಾನೆ, ಸಹಾಯ ಮಾಡ್ತಾನೆ. ಅಷ್ಟೇ ಅಲ್ಲ, ಅವರ ಅಗತ್ಯಗಳನ್ನ ಪೂರೈಸ್ತಾನೆ. ಇದ್ರಿಂದ ಅವ್ರಿಗೆ ತುಂಬಾ ಪ್ರಯೋಜನ ಆಗುತ್ತೆ.

ಬೈಬಲಿನಲ್ಲಿರುವ ರತ್ನಗಳು

w06 5/15 30 ¶18

ಸಮಗ್ರತೆಯಿಂದ ನಡೆಯುವುದರಿಂದ ಸಿಗುವ ಆನಂದ

18 “ಯೆಹೋವನ ಆಶೀರ್ವಾದ”—ಇದೇ ಆತನ ಜನರಿಗೆ ಆಧ್ಯಾತ್ಮಿಕ ಸಮೃದ್ಧಿಯನ್ನು ನೀಡಿದೆ. ಮತ್ತು ಆತನು ‘ವ್ಯಸನವನ್ನು ಸೇರಿಸನು’ ಎಂಬ ಆಶ್ವಾಸನೆ ನಮಗೆ ಕೊಡಲ್ಪಟ್ಟಿದೆ. (ಜ್ಞಾನೋಕ್ತಿ 10:22) ಹಾಗಾದರೆ ದೇವರ ನಿಷ್ಠಾವಂತ ಸೇವಕರ ಮೇಲೆ ಏಕೆ ಪರೀಕ್ಷೆಗಳು ಬರುತ್ತವೆ ಮತ್ತು ಅವರಿಗೆ ಅಪಾರ ನೋವು ಹಾಗೂ ಕಷ್ಟಸಂಕಟವನ್ನು ಉಂಟುಮಾಡುತ್ತವೆ? ಮೂರು ಮುಖ್ಯ ಕಾರಣಗಳಿಗಾಗಿ ನಮಗೆ ಕಷ್ಟತೊಂದರೆಗಳು ಮತ್ತು ಸಂಕಟವು ಬರುತ್ತದೆ. (1) ನಮ್ಮ ಸ್ವಂತ ಪಾಪಪೂರ್ಣ ಪ್ರವೃತ್ತಿ. (ಆದಿಕಾಂಡ 6:5; 8:21; ಯಾಕೋಬ 1:14, 15) (2) ಸೈತಾನನು ಮತ್ತು ಅವನ ದೆವ್ವಗಳು. (ಎಫೆಸ 6:11, 12) (3) ದುಷ್ಟ ಲೋಕ. (ಯೋಹಾನ 15:19) ನಮಗೆ ಕೆಟ್ಟ ವಿಷಯಗಳು ಸಂಭವಿಸುವಂತೆ ಯೆಹೋವನು ಅನುಮತಿಸುತ್ತಾನಾದರೂ, ಅವುಗಳು ನಮಗೆ ಸಂಭವಿಸುವಂತೆ ಮಾಡುವವನು ಆತನಲ್ಲ. ವಾಸ್ತವದಲ್ಲಿ, “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ.” (ಯಾಕೋಬ 1:17) ಯೆಹೋವನ ಆಶೀರ್ವಾದಗಳು ವ್ಯಸನವನ್ನು ಉಂಟುಮಾಡುವುದಿಲ್ಲ.

ಏಪ್ರಿಲ್‌ 28–ಮೇ 4

ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 11

ಹೇಳಬೇಡಿ!

w02 5/15 26 ¶4

ಯಥಾರ್ಥವಂತರನ್ನು ಸಮಗ್ರತೆಯು ನಡೆಸುತ್ತದೆ

ಯಥಾರ್ಥ ಜನರ ಸಮಗ್ರತೆ ಮತ್ತು ಕೆಡುಕರ ದುಷ್ಟತನವು ಕೂಡ ಬೇರೆ ಜನರ ಮೇಲೆ ಪ್ರಭಾವ ಬೀರುತ್ತದೆ. “ಧರ್ಮಭ್ರಷ್ಟನು ಬಾಯಿಂದ ನೆರೆಯವನನ್ನು ಹಾಳು ಮಾಡುವನು; ಶಿಷ್ಟನು [“ನೀತಿವಂತನು,” NW] ತಿಳುವಳಿಕೆಯಿಂದ [“ಜ್ಞಾನದಿಂದ,” NW] ಉದ್ಧಾರವಾಗುವನು” ಎಂದು ಇಸ್ರಾಯೇಲಿನ ರಾಜನು ಹೇಳುತ್ತಾನೆ. (ಜ್ಞಾನೋಕ್ತಿ 11:9) ಚಾಡಿ ಮಾತು, ಹಾನಿಕರ ಹರಟೆ, ಅಶ್ಲೀಲ ಮಾತು ಮತ್ತು ನಿಷ್ಪ್ರಯೋಜಕ ಮಾತುಕತೆಯು ಬೇರೆಯವರಿಗೆ ಹಾನಿಕರವಾಗಿದೆಯೆಂಬುದನ್ನು ಯಾರು ಅಲ್ಲಗಳೆಯಬಲ್ಲರು? ಆದರೆ ಇನ್ನೊಂದು ಬದಿಯಲ್ಲಿ, ಒಬ್ಬ ನೀತಿವಂತನ ಮಾತುಕತೆಯು ಶುದ್ಧವೂ, ಆಲೋಚನಾಭರಿತವೂ, ಮತ್ತು ವಿಚಾರಪೂರ್ಣವೂ ಆಗಿರುತ್ತದೆ. ಜ್ಞಾನದಿಂದಾಗಿ ಅವನಿಗೆ ಉದ್ಧಾರವಾಗುತ್ತದೆ ಯಾಕೆಂದರೆ ಅವನ ಸಮಗ್ರತೆಯು, ತನ್ನ ಆರೋಪಿಗಳು ಸುಳ್ಳುಹೇಳುತ್ತಿದ್ದಾರೆಂದು ತೋರಿಸಲು ಬೇಕಾದ ತರ್ಕಾಂಶಗಳನ್ನು ಅವನಿಗೆ ಕೊಡುತ್ತದೆ.

w02 5/15 27 ¶3-4

ಯಥಾರ್ಥವಂತರನ್ನು ಸಮಗ್ರತೆಯು ನಡೆಸುತ್ತದೆ

ಯಥಾರ್ಥವಾದ ಮಾರ್ಗಕ್ರಮವನ್ನು ಅನುಸರಿಸುವ ಪಟ್ಟಣದ ಜನರು ಶಾಂತಿ, ಕ್ಷೇಮವನ್ನು ವರ್ಧಿಸಿ, ಸಮುದಾಯದಲ್ಲಿ ಇತರರನ್ನು ಉತ್ತೇಜಿಸುತ್ತಾರೆ. ಹೀಗೆ ಒಂದು ಪಟ್ಟಣವು ಉನ್ನತಿಗೆ ಬರುತ್ತದೆ; ಅದು ಸಮೃದ್ಧವಾಗುತ್ತದೆ. ಚಾಡಿ ಮಾತು, ಹಾನಿಕರ ಹಾಗೂ ತಪ್ಪಾದ ವಿಷಯಗಳನ್ನು ಆಡುವವರು, ಗಲಭೆ, ಅಸಂತೋಷ, ಅನೈಕ್ಯ ಮತ್ತು ತೊಂದರೆಯನ್ನು ಉಂಟುಮಾಡುತ್ತಾರೆ. ಮತ್ತು ಇಂಥವರು ಯಾವುದೊ ಪ್ರಮುಖ ಹುದ್ದೆಯಲ್ಲಿರುವಾಗ ಇದು ವಿಶೇಷವಾಗಿ ಸತ್ಯವಾಗಿದೆ. ಅಂಥ ಪಟ್ಟಣವು, ಅವ್ಯವಸ್ಥೆ, ಭ್ರಷ್ಟಾಚಾರ, ಮತ್ತು ನೈತಿಕ ಹಾಗೂ ಪ್ರಾಯಶಃ ಆರ್ಥಿಕ ಪತನವನ್ನು ಅನುಭವಿಸುತ್ತದೆ.

ಜ್ಞಾನೋಕ್ತಿ 11:11ರಲ್ಲಿ ತಿಳಿಸಲ್ಪಟ್ಟಿರುವ ಸೂತ್ರವು, ಇಂದು ಸಹ ಯೆಹೋವನ ಜನರಿಗೆ ಅನ್ವಯಿಸುತ್ತದೆ. ಅವರು ತಮ್ಮ ಪಟ್ಟಣಸದೃಶ ಸಭೆಗಳಲ್ಲಿ ಪರಸ್ಪರ ಸಹವಾಸಮಾಡುತ್ತಾರೆ. ಆತ್ಮಿಕ ಜನರು, ಅಂದರೆ ತಮ್ಮ ಸಮಗ್ರತೆಯಿಂದ ನಡೆಸಲ್ಪಟ್ಟಿರುವ ಯಥಾರ್ಥ ಜನರು ಯಾವುದರ ಮೇಲೆ ಪ್ರಭಾವವನ್ನು ಬೀರುತ್ತಾರೊ ಆ ಸಭೆಯು, ದೇವರಿಗೆ ಗೌರವವನ್ನು ತರುವ ಸಂತೋಷದ, ಸಕ್ರಿಯ ಮತ್ತು ಸಹಾಯಕಾರಿ ಜನರ ಗುಂಪಾಗಿದೆ. ಯೆಹೋವನು ಆ ಸಭೆಯನ್ನು ಆಶೀರ್ವದಿಸುತ್ತಾನೆ ಮತ್ತು ಅದು ಆತ್ಮಿಕವಾಗಿ ಸಮೃದ್ಧವಾಗುತ್ತದೆ. ಅಲ್ಲಿಲ್ಲಿ ದುಮ್ಮಾನಗೊಂಡಿರುವ ಮತ್ತು ಅತೃಪ್ತರಾಗಿರುವ ಕೆಲವರು, ಕೆಲಸಗಳು ಮಾಡಲ್ಪಡುತ್ತಿರುವ ರೀತಿಯ ಬಗ್ಗೆ ಯಾವಾಗಲೂ ಟೀಕಿಸುತ್ತಾ, ಕಹಿಯಾಗಿ ಮಾತಾಡುತ್ತಾರೆ. ಇವರು ‘ವಿಷವುಳ್ಳ ಬೇರಿನಂತಿದ್ದು,’ ಹರಡಿಕೊಂಡು, ಆರಂಭದಲ್ಲಿ ಯಾವುದೇ ಪ್ರಭಾವವು ತಟ್ಟಿರದಂಥ ಇತರರಿಗೂ ವಿಷ ತಟ್ಟಿಸುತ್ತಾರೆ. (ಇಬ್ರಿಯ 12:15) ಅಂಥವರಿಗೆ ಅನೇಕವೇಳೆ ಹೆಚ್ಚಿನ ಅಧಿಕಾರ ಮತ್ತು ಪ್ರತಿಷ್ಠೆ ಬೇಕು. ಸಭೆಯಲ್ಲಿ ಅಥವಾ ಹಿರಿಯರಿಂದ ಅನ್ಯಾಯವಾಗುತ್ತಿದೆ, ಜಾತೀಯ ಪೂರ್ವಾಗ್ರಹವಿದೆ ಎಂಬಂಥ ಗಾಳಿ ಸುದ್ದಿಗಳನ್ನು ಅವರು ಹಬ್ಬಿಸುತ್ತಾರೆ. ಅವರ ಬಾಯಿ ನಿಜವಾಗಿಯೂ ಸಭೆಯಲ್ಲಿ ಒಡಕನ್ನುಂಟುಮಾಡಬಲ್ಲದು. ನಾವು ಅವರ ಮಾತುಗಳಿಗೆ ಕಿವಿಗೊಡದೆ, ಸಭೆಯ ಶಾಂತಿ ಮತ್ತು ಐಕ್ಯಕ್ಕಾಗಿ ಕೆಲಸಮಾಡುತ್ತಿರುವ ಆತ್ಮಿಕ ಜನರಾಗಿರಲು ಪ್ರಯಾಸಪಡಬಾರದೊ?

w02 5/15 27 ¶6

ಯಥಾರ್ಥವಂತರನ್ನು ಸಮಗ್ರತೆಯು ನಡೆಸುತ್ತದೆ

“ಬುದ್ಧಿಹೀನನು” ಇಲ್ಲವೆ ಒಳ್ಳೆಯ ವಿವೇಚನಾಶಕ್ತಿಯ ಕೊರತೆಯುಳ್ಳ ಒಬ್ಬನು ಎಂಥ ದೊಡ್ಡ ಹಾನಿಯನ್ನು ಉಂಟುಮಾಡಬಲ್ಲನು! ಅವನ ಲಂಗುಲಗಾಮಿಲ್ಲದ ಮಾತುಗಳು, ಚಾಡಿ ಮಾತು ಇಲ್ಲವೆ ಹೀನವಾದ ಮಾತಿನ ಹಂತವನ್ನೂ ತಲಪುತ್ತವೆ. ಅಂಥ ಅಹಿತಕರವಾದ ಪ್ರಭಾವವನ್ನು ಕೊನೆಗೊಳಿಸಲು ನೇಮಿತ ಹಿರಿಯರು ತಡಮಾಡಬಾರದು. ಆದರೆ ವಿವೇಕಿಯಾದ ವ್ಯಕ್ತಿಯು, “ಬುದ್ಧಿಹೀನ”ನಂತಿರದೆ, ಯಾವಾಗ ಮೌನವಾಗಿರಬೇಕೆಂದು ತಿಳಿದವನಾಗಿದ್ದಾನೆ. ಒಬ್ಬನ ಗುಟ್ಟನ್ನು ರಟ್ಟುಮಾಡುವ ಬದಲು, ಅವನು ಅದನ್ನು ಗುಪ್ತವಾಗಿಡುತ್ತಾನೆ. ಕಡಿವಾಣವಿಲ್ಲದ ನಾಲಿಗೆಯು ತುಂಬ ಹಾನಿಯನ್ನು ಮಾಡಬಲ್ಲದೆಂದು ತಿಳಿದವನಾಗಿ, ವಿವೇಕಿಯು “ನಂಬಿಗಸ್ತ”ನಾಗಿರುತ್ತಾನೆ. ಅವನು ಜೊತೆ ವಿಶ್ವಾಸಿಗಳಿಗೆ ನಿಷ್ಠನಾಗಿರುತ್ತಾನೆ ಮತ್ತು ಅವರನ್ನು ಅಪಾಯದಲ್ಲಿ ಸಿಕ್ಕಿಸಬಲ್ಲ ಗೋಪ್ಯ ವಿಷಯಗಳನ್ನು ತಿಳಿಸಿಬಿಡುವುದಿಲ್ಲ. ಅಂಥ ಸಮಗ್ರತೆ ಪಾಲಕರು ಸಭೆಗೆ ಎಂಥ ಆಶೀರ್ವಾದವಾಗಿದ್ದಾರೆ!

ಬೈಬಲಿನಲ್ಲಿರುವ ರತ್ನಗಳು

g20.1 11, ಚೌಕ

ಒತ್ತಡದಿಂದ ಹೊರ ಬರುವ ದಾರಿ

“ಪ್ರೀತಿಯಿಂದ ಒತ್ತಡನಾ ಸಾಯಿಸಿ”

“ಪರೋಪಕಾರವು ತನಗೂ ಉಪಕಾರ; ಕ್ರೂರನು ತನ್ನ ಶರೀರವನ್ನೂ ಹಿಂಸಿಸುವನು.”—ಜ್ಞಾನೋಕ್ತಿ 11:17.

ಒವರ್‌ಕಮ್ಮಿಂಗ್‌ ಸ್ಟ್ರೆಸ್‌ ಅನ್ನೋ ಪುಸ್ತಕದಲ್ಲಿ “ಪ್ರೀತಿಯಿಂದ ಒತ್ತಡನಾ ಸಾಯಿಸಿ” ಅನ್ನೋ ಅಧ್ಯಾಯ ಇದೆ. ಅದರಲ್ಲಿ, ನಾವು ಬೇರೆಯವರ ಹತ್ತಿರ ಪ್ರೀತಿಯಿಂದ ನಡಕೊಂಡರೆ ನಮ್ಮ ಆರೋಗ್ಯ ಚೆನ್ನಾಗಿರುತ್ತೆ, ಜೀವನದಲ್ಲಿ ಸಂತೋಷನೂ ಹೆಚ್ಚುತ್ತೆ ಅಂತ ಈ ಪುಸ್ತಕ ಬರೆದ ಡಾ. ಟಿಮ್‌ ಕ್ಯಾಂಟುಫರ್‌ ಹೇಳುತ್ತಾರೆ. ಪ್ರೀತಿ ಇಲ್ಲದ ಕ್ರೂರ ವ್ಯಕ್ತಿ ಸಂತೋಷವಾಗಿ ಇರಲ್ಲ. ಯಾಕಂದ್ರೆ ಅವನನ್ನು ಯಾರೂ ಇಷ್ಟಪಡಲ್ಲ.

ಬೇರೆಯವರ ಮೇಲೆ ಮಾತ್ರ ಅಲ್ಲ ನಮ್ಮ ಮೇಲೂ ನಮಗೆ ಪ್ರೀತಿ ಇರಬೇಕು. ಆಗ ಮಾತ್ರ ನಮ್ಮ ಒತ್ತಡ ಕಮ್ಮಿ ಆಗುತ್ತೆ. ಉದಾಹರಣೆಗೆ, ಮಾಡಲು ಆಗದ ವಿಷಯಗಳನ್ನು ಮಾಡ್ತೀನಿ ಅಂತ ಹೋಗಬಾರದು. ಹಾಗಂತ ನನ್ನ ಕೈಲಿ ಏನೂ ಮಾಡಕ್ಕಾಗಲ್ಲ ಅನ್ನೋ ಮನೋಭಾವನೂ ಇರಬಾರದು. ಯೇಸು ಸಹ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಅಂತ ಹೇಳಿದನು.—ಮಾರ್ಕ 12:31.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ