ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
© 2024 Watch Tower Bible and Tract Society of Pennsylvania
ಜನವರಿ 6-12
ಬೈಬಲಿನಲ್ಲಿರುವ ನಿಧಿ | ಕೀರ್ತನೆ 127-134
ಹೆತ್ತವರೇ, ನಿಮಗೆ ಸಿಕ್ಕಿರೋ ಅಮೂಲ್ಯ ಆಸ್ತಿನ ಕಾಪಾಡ್ಕೊಳ್ಳಿ
ಕಾವಲಿನಬುರುಜು21.08 ಪುಟ 5 ಪ್ಯಾರ 9
ಯೆಹೋವನ ಕುಟುಂಬದವರಾಗೋ ಅವಕಾಶವನ್ನು ಬಿಟ್ಟುಕೊಡಬೇಡಿ
9 ಯೆಹೋವ ಮನುಷ್ಯರಿಗೆ ಮಕ್ಕಳನ್ನ ಮಾಡಿಕೊಳ್ಳೋ ಸಾಮರ್ಥ್ಯ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ತನ್ನನ್ನ ಪ್ರೀತಿಸೋಕೆ, ಆರಾಧಿಸೋಕೆ ಕಲಿಸೋ ಜವಾಬ್ದಾರಿನೂ ಕೊಟ್ಟಿದ್ದಾರೆ. ಹೆತ್ತವರೇ, ನಿಮಗೆ ಕೊಟ್ಟಿರೋ ಈ ಉಡುಗೊರೆಗೆ ನೀವು ತುಂಬ ಥ್ಯಾಂಕ್ಸ್ ಹೇಳಬೇಕು. ಯಾಕಂದ್ರೆ ತುಂಬ ಸಾಮರ್ಥ್ಯ ಇರೋ ದೇವದೂತರಿಗೂ ಕೊಡದೇ ಇರೋ ಜವಾಬ್ದಾರಿನ ಯೆಹೋವ ದೇವರು ನಿಮಗೆ ಕೊಟ್ಟಿದ್ದಾರೆ. ಇದನ್ನ ಮನಸ್ಸಲ್ಲಿ ಇಟ್ರೆ ಮಕ್ಕಳನ್ನ ಬೆಳೆಸೋದು ಭಾರ ಅಲ್ಲ, ಬಹುಮಾನ ಅನಿಸುತ್ತೆ. ಹೆತ್ತವರೇ, ನಿಮ್ಮ ಮಕ್ಕಳಿಗೆ “ಯೆಹೋವ ಹೇಳೋ ತರಾನೇ ಅವ್ರಿಗೆ ಕಲಿಸ್ತಾ, ತರಬೇತಿ ಕೊಡ್ತಾ” ಬೆಳೆಸೋದು ಒಂದು ಪವಿತ್ರವಾದ ಕೆಲಸ. ಯೆಹೋವ ದೇವರು ನಿಮ್ಮನ್ನ ನಂಬಿ ಆ ಕೆಲಸನಾ ನಿಮಗೆ ಕೊಟ್ಟಿದ್ದಾರೆ. (ಎಫೆ. 6:4; ಧರ್ಮೋ. 6:5-7; ಕೀರ್ತ. 127:3) ಆ ಜವಾಬ್ದಾರಿನ ಸರಿಯಾಗಿ ಮಾಡೋಕೆ ಯೆಹೋವನ ಸಂಘಟನೆಯಿಂದ ನಿಮಗೆ ಸಹಾಯ ಸಿಗುತ್ತೆ. ಬೈಬಲಾಧರಿತ ಪ್ರಕಾಶನಗಳಿಂದ, ವಿಡಿಯೋಗಳಿಂದ, ಸಂಗೀತಗಳಿಂದ ಮತ್ತು jw.org ವೆಬ್‌ಸೈಟಿಂದನೂ ನಿಮಗೆ ತುಂಬ ಸಹಾಯ ಸಿಗುತ್ತೆ. ಯೆಹೋವ ಮತ್ತು ಯೇಸುಗೆ ಮಕ್ಕಳಂದ್ರೆ ತುಂಬ ಇಷ್ಟ. ಅದಕ್ಕೆ ಅವರು ನಿಮಗೆ ಇಷ್ಟೆಲ್ಲಾ ಸಹಾಯ ಮಾಡ್ತಿದ್ದಾರೆ. (ಲೂಕ 18:15-17) ಯೆಹೋವನ ಮಾರ್ಗದರ್ಶನದ ಪ್ರಕಾರ ಹೆತ್ತವರು ಮಕ್ಕಳನ್ನ ಚೆನ್ನಾಗಿ ನೋಡಿಕೊಂಡ್ರೆ ಆತನಿಗೆ ತುಂಬ ಇಷ್ಟ ಆಗುತ್ತೆ. ಇದ್ರಿಂದ ಮಕ್ಕಳು ಯೆಹೋವ ದೇವರ ಕುಟುಂಬಕ್ಕೆ ಸೇರೋಕೆ ಹೆತ್ತವರು ಸಹಾಯ ಮಾಡಿದ ಹಾಗೆ ಆಗುತ್ತೆ.
ಕಾವಲಿನಬುರುಜು19.12 ಪುಟ 26-27 ಪ್ಯಾರ 20
ಯೆಹೋವನನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ
20 ನಿಮ್ಮ ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. 127ನೇ ಕೀರ್ತನೆಯಲ್ಲಿ ಮಕ್ಕಳನ್ನು ಅಂಬುಗಳಿಗೆ ಅಂದ್ರೆ ಬಾಣಗಳಿಗೆ ಹೋಲಿಸಲಾಗಿದೆ. (ಕೀರ್ತನೆ 127:4 ಓದಿ.) ಎಲ್ಲಾ ಬಾಣಗಳು ಒಂದೇ ರೀತಿಯಲ್ಲಿ ಇರಲ್ಲ. ಬೇರೆ ಬೇರೆ ವಸ್ತುಗಳಿಂದ ಅದನ್ನ ತಯಾರಿಸುತ್ತಾರೆ, ಬೇರೆ ಬೇರೆ ಗಾತ್ರದಲ್ಲಿರುತ್ತೆ. ಅದೇ ರೀತಿ ಎಲ್ಲಾ ಮಕ್ಕಳು ಒಂದೇ ರೀತಿ ಇರಲ್ಲ. ಹಾಗಾಗಿ ಹೆತ್ತವರು ತಮ್ಮ ಮಕ್ಕಳಲ್ಲಿ ಒಬ್ಬೊಬ್ಬರಿಗೂ ಹೇಗೆ ತರಬೇತಿ ಕೊಡ್ಬೇಕಂತ ನಿರ್ಧರಿಸಬೇಕು. ತಮ್ಮ ಇಬ್ಬರು ಮಕ್ಕಳು ಯೆಹೋವನನ್ನು ಆರಾಧಿಸುವಂತೆ ಬೆಳೆಸಲು ಇಸ್ರೇಲ್‌ನ ಒಬ್ಬ ದಂಪತಿಗೆ ಯಾವ್ದು ಸಹಾಯಮಾಡಿತೆಂದು ನೋಡಿ. “ಇಬ್ಬರಿಗೂ ಒಟ್ಟಿಗೆ ಬೈಬಲ್ ಕಲಿಸುತ್ತಿರಲಿಲ್ಲ, ಬೇರೆ ಬೇರೆಯಾಗಿ ಕಲಿಸ್ತಿದ್ವಿ” ಅಂತ ಅವ್ರು ಹೇಳ್ತಾರೆ. ಈ ರೀತಿ ಬೇರೆ ಬೇರೆಯಾಗಿ ಕಲಿಸೋ ಅವಶ್ಯಕತೆ ಇದೆಯಾ, ಈ ರೀತಿ ಕಲಿಸೋಕೆ ಆಗುತ್ತಾ ಅಂತ ಕುಟುಂಬದ ತಲೆ ನಿರ್ಧರಿಸಬೇಕು.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 543
ಬೈಬಲಿನಲ್ಲಿ ಹೇಳಿರೋ ಗಿಡಗಳು
ಕೀರ್ತನೆಗಾರ ಮಕ್ಕಳನ್ನ ‘ಆಲಿವ್ ಮರದ ಚಿಗುರಿಗೆ’ ಹೋಲಿಸಿದ್ದಾನೆ. (ಕೀರ್ತ 128:1-3) ಆಲಿವ್ ಮರದ ಕೊಂಬೆಯನ್ನ ನೆಟ್ಟರೆ ಅದು ಹೊಸ ಗಿಡವಾಗಿ ಚಿಗುರುತ್ತೆ. ಅಷ್ಟೇ ಅಲ್ಲ, ವಯಸ್ಸಾದ ಆಲಿವ್ ಮರಗಳ ಬೇರುಗಳಿಂದ ಕೂಡ ಹೊಸ ಚಿಗುರುಗಳು ಹುಟ್ಟುತ್ತೆ. ಅದೇ ತರ ಮಕ್ಕಳು ತಂದೆ ಜೊತೆ ಇದ್ರೆ ಇಡೀ ಕುಟುಂಬ ಸಂತೋಷವಾಗಿರುತ್ತೆ.
ಜನವರಿ 13-19
ಬೈಬಲಿನಲ್ಲಿರುವ ನಿಧಿ | ಕೀರ್ತನೆ 135-137
“ಬೇರೆಲ್ಲ ದೇವರುಗಳಿಗಿಂತ ನಮ್ಮ ಒಡೆಯ ಶ್ರೇಷ್ಠ”
it-2-E ಪುಟ 661 ಪ್ಯಾರ 4-5
ಶಕ್ತಿ, ಅದ್ಭುತ ಕೆಲಸಗಳು
ಪ್ರಾಕೃತಿಕ ಶಕ್ತಿಗಳನ್ನ ದೇವರು ನಿಯಂತ್ರಿಸುತ್ತಾನೆ. ಯೆಹೋವನೇ ಸತ್ಯ ದೇವರು ಅನ್ನೋದನ್ನ ಸಾಬೀತು ಮಾಡೋಕೆ ಆತನು ಸೃಷ್ಟಿ ಮಾಡಿದ ವಿಷಯಗಳ ಮೇಲೆ ತನಗಿರೋ ನಿಯಂತ್ರಣವನ್ನ ವಿಶೇಷವಾದ ರೀತಿಯಲ್ಲಿ ತೋರಿಸಬೇಕು ಅಂತ ನಾವು ನಿರೀಕ್ಷಿಸ್ತೀವಿ. (ಕೀರ್ತ 135:5, 6) ಸೂರ್ಯ, ಚಂದ್ರ, ಗ್ರಹಗಳು ಮತ್ತು ನಕ್ಷತ್ರಗಳು ಯಾವಾಗ್ಲೂ ತಮ್ಮ ಕಕ್ಷೆಯಲ್ಲೇ ಸುತ್ತೋದು ಅಥವಾ ಸೃಷ್ಟಿಯಲ್ಲಿರೋ ಇತರ ವಿಷ್ಯಗಳು ತಮ್ಮ ಕೆಲಸ ಮಾಡೋದನ್ನ ನೋಡಿದಾಗ ಇದರಲ್ಲಿ ಏನೂ ವಿಶೇಷ ಇಲ್ಲ, ಇದು ಸಾಮಾನ್ಯವಾಗಿ ನಡಿಯೋ ವಿಷ್ಯ ಅಂತ ನಮಗೆ ಅನಿಸಬಹುದು. ಆದ್ರೆ ಯೆಹೋವನೇ ಸತ್ಯ ದೇವರು ಅಂತ ರುಜುಪಡಿಸೋಕೆ ಮತ್ತು ತನ್ನ ನಿರ್ದಿಷ್ಟ ಉದ್ದೇಶವನ್ನ ಪೂರೈಸೋಕೆ ದೇವರು ಈ ಸೃಷ್ಟಿಯನ್ನ ಬಳಸ್ತಾನೆ. ಉದಾಹರಣೆಗೆ ಬರಗಾಲ, ಚಂಡಮಾರುತ ಅಥವಾ ಹವಾಮಾನ ವೈಪರಿತ್ಯಗಳು ಪ್ರಕೃತಿಯಲ್ಲಿ ಆಗೋ ಸಹಜವಾದ ವಿಷಯಗಳಾಗಿದ್ರೂ ಕೆಲವು ಸಲ ಯೆಹೋವ ದೇವರು ತನ್ನ ಭವಿಷ್ಯವಾಣಿಯನ್ನ ನಿಜ ಮಾಡೋಕೆ ಇದನ್ನ ಬಳಸಿದ್ದಾನೆ. ಅದಕ್ಕೆ ಇದು ವಿಶೇಷವಾಗಿದೆ. (1ಅರ 17:1; 18:1, 2, 41-45 ಹೋಲಿಸಿ.) ಈ ಘಟನೆಗಳು ತುಂಬಾ ಭಯಾನಕವಾಗಿ ದೊಡ್ಡ ಪ್ರಮಾಣದಲ್ಲಿ ಆಯ್ತು. ಇದು ಕೂಡ ವಿಶೇಷವಾಗಿದೆ. (ವಿಮೋ 9:24) ಕೆಲವು ಸಲ ಅಂತೂ ಈ ಘಟನೆಗಳು ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಮತ್ತು ಸಮಯದಲ್ಲಿ ನಡೀತು. (ವಿಮೋ 9:24; 34:10; 1ಸಮು 12:16-18) ಈ ರೀತಿಯಲ್ಲಿ ಯೆಹೋವ ದೇವರು ತನಗೆ ಪ್ರಕೃತಿಯ ಮೇಲೆ ಸಂಪೂರ್ಣ ನಿಯಂತ್ರಣ ಇದೆ ಮತ್ತು ತಾನೇ ಸತ್ಯ ದೇವರು ಅಂತ ಸಾಬೀತು ಮಾಡಿದ್ದಾನೆ.
ಕಾವಲಿನಬುರುಜು21.11 ಪುಟ 6 ಪ್ಯಾರ 16
ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು
16 ಯೆಹೋವ ದೇವರು ನಮಗೆ ಸುರಕ್ಷಿತ ಜಾಗ ಆಗಿರುವಾಗ ನಮಗೆ ಯಾವ ಭಯನೂ ಇರಲ್ಲ. ಆದ್ರೆ ಕೆಲವೊಂದು ಸಲ ನಾವು ಕುಗ್ಗಿಹೋಗಿಬಿಡ್ತೀವಿ. ಆಗ ಯೆಹೋವ ನಮಗೋಸ್ಕರ ಏನು ಮಾಡ್ತಾನೆ? (ಕೀರ್ತನೆ 136:23 ಓದಿ.) ತನ್ನ ಕೈಯನ್ನ ಆಧಾರವಾಗಿ ಕೊಟ್ಟು ನಮ್ಮನ್ನ ನಿಧಾನವಾಗಿ ಮೇಲೆತ್ತುತ್ತಾನೆ. (ಕೀರ್ತ. 28:9; 94:18) ನಮಗೆ ಸಹಾಯ ಮಾಡೋಕೆ ಯೆಹೋವ ಯಾವಾಗಲೂ ನಮ್ಮ ಜೊತೆ ಇರುತ್ತಾನೆ ಅಂತ ಗೊತ್ತಾಗುತ್ತೆ. ಇದ್ರಿಂದ ನಮಗೆ ಹೇಗೆ ಒಳ್ಳೇದಾಗಿದೆ? ನಾವೆಲ್ಲೇ ಇದ್ದರೂ ಯೆಹೋವ ನಮ್ಮನ್ನ ಕಾಪಾಡ್ತಾನೆ ಅನ್ನೋ ನಂಬಿಕೆ ನಮಗಿರುತ್ತೆ. ನಮ್ಮ ಪ್ರೀತಿಯ ಅಪ್ಪ ನಮ್ಮನ್ನ ಚೆನ್ನಾಗಿ ನೋಡಿಕೊಳ್ತಾನೆ ಅನ್ನೋ ಭರವಸೆ ಇರುತ್ತೆ.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 1248
ಯಾಹು
ಬೈಬಲಿನಲ್ಲಿ ಈ ಪದವನ್ನ ಸಾಮಾನ್ಯವಾಗಿ ದೇವರನ್ನ ಸ್ತುತಿಸುವಾಗ, ಹಾಡು ಹಾಡುವಾಗ ಮತ್ತು ಪ್ರಾರ್ಥಿಸುವಾಗ ಬಳಸಿದ್ದಾರೆ. ಯೆಹೋವ ತನ್ನ ಸೇವಕರನ್ನ ಶತ್ರುಗಳಿಂದ ಕಾಪಾಡಿದಾಗ ಮತ್ತು ಯುದ್ಧದಲ್ಲಿ ಜಯ ಕೊಟ್ಟಾಗ ಅವರು ತಮಗಾದ ಸಂತೋಷವನ್ನ ವ್ಯಕ್ತಪಡಿಸೋಕೆ ಕೂಡ ಈ ಪದವನ್ನ ಬಳಸಿದ್ದಾರೆ. ಯೆಹೋವ ತನ್ನ ಅಪಾರ ಶಕ್ತಿಯನ್ನ ಬಳಸಿದಾಗ ಆತನಿಗೆ ಥ್ಯಾಂಕ್ಸ್ ಹೇಳೋದಕ್ಕೂ ಇದನ್ನ ಬಳಸಿದ್ದಾರೆ. “ಯಾಹುವನ್ನ ಸ್ತುತಿಸಿ!” (ಹಲ್ಲೆಲೂಯಾ) ಅನ್ನೋದನ್ನ ಮೊದಲು ಕೀರ್ತನೆ 104:35ರಲ್ಲಿ ಯೆಹೋವನನ್ನ ಸ್ತುತಿಸೋದಕ್ಕೆ ಬಳಸಿದ್ದಾರೆ. ಬೇರೆ ಕಡೆಗಳಲ್ಲಿ “ಯಾಹು” ಅನ್ನೋ ಪದವನ್ನ ಹಾಡುಗಳಲ್ಲಿ ಮತ್ತು ಪ್ರಾರ್ಥನೆಗಳಲ್ಲಿ ಉಪಯೋಗಿಸಿದ್ದಾರೆ. (ವಿಮೋ 15:2) ಯೆಶಾಯ ಹೆಚ್ಚು ಒತ್ತುಕೊಡೋಕೆ “ಯಾಹು ಯೆಹೋವ” ಅನ್ನೋ ಎರಡೂ ಹೆಸರುಗಳನ್ನ ಒಟ್ಟಿಗೆ ಹೇಳಿದ್ದಾನೆ. (ಯೆಶಾ 12:2; 26:4) ಹಿಜ್ಕೀಯನಿಗೆ ಅದ್ಭುತವಾಗಿ ಕಾಯಿಲೆ ವಾಸಿಯಾದಾಗ ತುಂಬ ಸಂತೋಷದಿಂದ “ಯಾಹು” ಅನ್ನೋ ಪದವನ್ನ ಪದೇ ಪದೇ ಹೇಳಿ ಯೆಹೋವನಿಗೆ ಧನ್ಯವಾದ ಹೇಳಿದ. (ಯೆಶಾ 38:9, 11) ಕೆಲವು ಕೀರ್ತನೆಗಳಲ್ಲಿ “ಯಾಹು” ಅನ್ನೋ ಪದವನ್ನ ಬಿಡುಗಡೆ, ಸಂರಕ್ಷಣೆ ಮತ್ತು ತಿದ್ದುಪಾಟು ಸಿಕ್ಕಿದಾಗ ಪ್ರಾರ್ಥನೆಯಲ್ಲಿ ಉಪಯೋಗಿಸಿದ್ದಾರೆ.—ಕೀರ್ತ 94:12; 118:5, 14.
ಜನವರಿ 20-26
ಬೈಬಲಿನಲ್ಲಿರುವ ನಿಧಿ ಕೀರ್ತನೆ 138-139
ಹೆದರಿ ಹಿಂಜರಿಬೇಡಿ
ಕಾವಲಿನಬುರುಜು19.01 ಪುಟ 10 ಪ್ಯಾರ 10
ಸಭೆಯಲ್ಲಿ ಯೆಹೋವನನ್ನು ಸ್ತುತಿಸಿ
10 ಕೈ ಎತ್ತಿ ಉತ್ತರ ಕೊಡಬೇಕು ಅಂತ ಯೋಚಿಸುವಾಗಲೇ ಚಳಿಜ್ವರ ಬಂದ ಹಾಗೆ ಆಗುತ್ತಾ? ತುಂಬ ಜನರಿಗೆ ಈ ರೀತಿ ಆಗುತ್ತದೆ. ಉತ್ತರ ಕೊಡುವಾಗ ನಮ್ಮಲ್ಲಿ ಹೆಚ್ಚಿನವರಿಗೆ ಸ್ವಲ್ಪ ಭಯ ಆಗುತ್ತದೆ. ಈ ಭಯವನ್ನು ಮೆಟ್ಟಿನಿಲ್ಲಬೇಕೆಂದರೆ ನಿಮಗೆ ಯಾಕೆ ಭಯ ಆಗುತ್ತದೆ ಅಂತ ಮೊದಲು ಅರ್ಥಮಾಡಿಕೊಳ್ಳಬೇಕು. ನೀವು ಏನು ಹೇಳಲು ಇಷ್ಟಪಡುತ್ತೀರೋ ಅದನ್ನು ಮರೆತುಬಿಡಬಹುದು ಅಥವಾ ತಪ್ಪು ಉತ್ತರ ಕೊಟ್ಟುಬಿಡಬಹುದು ಅಂತ ಹೆದರುತ್ತೀರಾ? ನೀವು ಕೊಡುವ ಉತ್ತರ ಬೇರೆಯವರು ಕೊಡುವ ಉತ್ತರದಷ್ಟು ಚೆನ್ನಾಗಿರಲ್ಲ ಅಂತ ಯೋಚಿಸುತ್ತೀರಾ? ಈ ರೀತಿಯ ಯೋಚನೆ ಒಂದು ಒಳ್ಳೇ ಸೂಚನೆ. ನಿಮ್ಮಲ್ಲಿ ದೀನತೆ ಇದೆ ಮತ್ತು ನೀವು ಬೇರೆಯವರನ್ನು ನಿಮಗಿಂತ ಶ್ರೇಷ್ಠರೆಂದು ನೋಡುತ್ತೀರಿ ಎಂದು ಇದು ತೋರಿಸುತ್ತದೆ. ಯೆಹೋವನಿಗೆ ಈ ಗುಣ ತುಂಬ ಇಷ್ಟ. (ಕೀರ್ತ. 138:6; ಫಿಲಿ. 2:3) ಆದರೆ ನೀವು ಕೂಟಗಳಲ್ಲಿ ಆತನನ್ನು ಸ್ತುತಿಸಬೇಕು ಮತ್ತು ನಿಮ್ಮ ಸಹೋದರ-ಸಹೋದರಿಯರನ್ನು ಪ್ರೋತ್ಸಾಹಿಸಬೇಕೆಂದು ಸಹ ಯೆಹೋವನು ಇಷ್ಟಪಡುತ್ತಾನೆ. (1 ಥೆಸ. 5:11) ಆತನು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮಗೆ ಬೇಕಾದ ಧೈರ್ಯವನ್ನು ಕೊಟ್ಟೇ ಕೊಡುತ್ತಾನೆ.
ಕಾವಲಿನಬುರುಜು23.04 ಪುಟ 21 ಪ್ಯಾರ 7
ಕೂಟಗಳಲ್ಲಿ ಒಬ್ರನ್ನೊಬ್ರು ಪ್ರೋತ್ಸಾಹಿಸಿ
7 ಅದಕ್ಕೆ ಕಾವಲಿನಬುರುಜು ಪತ್ರಿಕೆಯಲ್ಲಿರೋ ಕೆಲವು ಸಲಹೆಗಳು ನಿಮಗೆ ಸಹಾಯ ಮಾಡುತ್ತೆ. ಉದಾಹರಣೆಗೆ ಚೆನ್ನಾಗಿ ತಯಾರಿ ಮಾಡಿ. (ಜ್ಞಾನೋ. 21:5) ನೀವು ಚೆನ್ನಾಗಿ ತಯಾರಿ ಮಾಡಿದ್ರೆ ವಿಷ್ಯಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತೀರ. ಆಗ ಉತ್ರ ಹೇಳೋಕೆ ಸುಲಭ ಆಗುತ್ತೆ. ಅಷ್ಟೇ ಅಲ್ಲ, ನೀವು ಉತ್ರಗಳನ್ನ ಚಿಕ್ಕ-ಚಿಕ್ಕದಾಗಿ ಕೊಡೋಕೆ ಪ್ರಯತ್ನ ಮಾಡಿ. (ಜ್ಞಾನೋ. 15:23; 17:27) ಆಗ ನಿಮಗೆ ಭಯ ಆಗಲ್ಲ. ತುಂಬ ದೊಡ್ಡ ದೊಡ್ಡ ಉತ್ರಗಳನ್ನ ಹೇಳಿದ್ರೆ ಅದನ್ನ ಅರ್ಥ ಮಾಡ್ಕೊಳ್ಳೋಕೆ ಬೇರೆಯವ್ರಿಗೆ ಕಷ್ಟ ಆಗಬಹುದು. ಹಾಗಾಗಿ ನಿಮ್ಮ ಸ್ವಂತ ಮಾತಲ್ಲಿ ಚಿಕ್ಕ-ಚಿಕ್ಕ ಉತ್ರಗಳನ್ನ ಹೇಳಿ. ಆಗ ನೀವು ಚೆನ್ನಾಗಿ ತಯಾರಿ ಮಾಡಿದ್ದೀರ, ನೀವು ಹೇಳ್ತಿರೋದು ನಿಮಗೆ ಚೆನ್ನಾಗಿ ಅರ್ಥ ಆಗಿದೆ ಅಂತ ತೋರಿಸ್ತೀರ.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 862 ಪ್ಯಾರ 4
ಕ್ಷಮಿಸೋದು
ಯಾರಾದ್ರೂ ನಮ್ಮನ್ನ ನೋಯಿಸಿದ್ರೆ, ಬೇಜಾರುಮಾಡಿದ್ರೆ ಕ್ರೈಸ್ತರಾಗಿರೋದ್ರಿಂದ ನಾವು ಅವರನ್ನ ಕ್ಷಮಿಸಬೇಕು. ಅವರು ಪದೇ ಪದೇ ಈ ತರ ಮಾಡಿದ್ರೂ ಅವರನ್ನ ಕ್ಷಮಿಸಬೇಕು. (ಲೂಕ 17:3, 4; ಎಫೆ 4:32; ಕೊಲೊ 3:13) ನಾವು ಅವರನ್ನ ಕ್ಷಮಿಸಿಲ್ಲ ಅಂದ್ರೆ ದೇವರು ನಮ್ಮನ್ನ ಕ್ಷಮಿಸಲ್ಲ. (ಮತ್ತಾ 6:14, 15) ಯಾರಾದ್ರೂ ಗಂಭೀರ ತಪ್ಪು ಮಾಡಿ ಬಹಿಷ್ಕಾರ ಆಗಿದ್ರೂ ಅವರು ನಿಜವಾಗಲೂ ಪಶ್ಚಾತ್ತಾಪ ಪಟ್ಟರೆ ಯೆಹೋವ ಅವರನ್ನ ಕ್ಷಮಿಸ್ತಾನೆ. ಆಗ ಸಭೆಲಿರೋರು ಕೂಡ ಯೆಹೋವ ದೇವರ ತರಾನೇ ಆ ವ್ಯಕ್ತಿಗೆ ಪ್ರೀತಿ ತೋರಿಸಬೇಕು. (1ಕೊರಿಂ 5:13; 2ಕೊರಿಂ 2:6-11) ಆದ್ರೆ ಯಾರು ಬೇಕುಬೇಕಂತಾನೇ ತಪ್ಪುಮಾಡ್ತಾ ಪಶ್ಚಾತ್ತಾಪ ಪಡೋದಿಲ್ವೋ ಅಂಥವರನ್ನ ನಾವು ಕ್ಷಮಿಸಬೇಕಾಗಿಲ್ಲ. ಯಾಕಂದ್ರೆ ಅವರು ಯೆಹೋವನಿಗೆ ಶತ್ರುಗಳಾಗಿದ್ದಾರೆ.—ಇಬ್ರಿ 10:26-31; ಕೀರ್ತ 139:21, 22.
ಜನವರಿ 27–ಫೆಬ್ರವರಿ 2
ಬೈಬಲಿನಲ್ಲಿರುವ ನಿಧಿ | ಕೀರ್ತನೆ 140-143
ಪ್ರಾರ್ಥನೆಗೆ ತಕ್ಕಂತೆ ಪ್ರಯತ್ನನೂ ಹಾಕಿ
ಕಾವಲಿನಬುರುಜು22.02 ಪುಟ 12-13 ಪ್ಯಾರ 13-14
‘ವಿವೇಕಿಯ ಮಾತುಗಳನ್ನು ಕೇಳು’
13 ಬುದ್ಧಿಮಾತಲ್ಲಿ ಯೆಹೋವನ ಪ್ರೀತಿ ನೋಡಿ. ನಾವೆಲ್ಲ ಚೆನ್ನಾಗಿರಬೇಕು ಅಂತ ಯೆಹೋವ ಆಸೆ ಪಡ್ತಾನೆ. (ಜ್ಞಾನೋ. 4:20-22) ಬೈಬಲಿಂದ, ಪುಸ್ತಕ-ಪತ್ರಿಕೆಗಳಿಂದ ಅಥವಾ ಅನುಭವ ಇರೋ ಸಹೋದರ ಸಹೋದರಿಯರಿಂದ ನಮಗೆ ಸಲಹೆ ಸಿಕ್ಕಾಗ ಯೆಹೋವನಿಗೆ ನಮ್ಮ ಮೇಲೆ ಪ್ರೀತಿಯಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಯಾಕಂದ್ರೆ ಆತನು “ನಮ್ಮ ಒಳ್ಳೇದಕ್ಕೇ ಶಿಸ್ತು ಕೊಡ್ತಾನೆ” ಅಂತ ಇಬ್ರಿಯ 12:9, 10 ಹೇಳುತ್ತೆ.
14 ಹೇಗೆ ಹೇಳ್ತಿದ್ದಾರೆ ಅಂತ ಅಲ್ಲ, ಏನು ಹೇಳ್ತಿದ್ದಾರೆ ಅನ್ನೋದನ್ನ ನೋಡಿ. ಕೆಲವೊಮ್ಮೆ ಯಾರಾದ್ರೂ ಸಲಹೆ ಕೊಟ್ಟಾಗ ‘ಅವರು ಹೇಳಿದ ವಿಷಯ ಸರಿ, ಆದ್ರೆ ಅವರು ಹೇಳಿದ ರೀತಿ ನನಗೆ ಒಂಚೂರು ಇಷ್ಟ ಆಗಲಿಲ್ಲ’ ಅಂತ ಅನಿಸಬಹುದು. ನಿಜ, ಸಲಹೆ ಕೊಡುವವರು ಅದನ್ನ ಬೇರೆಯವರಿಗೆ ನೋವಾಗದ ತರ ಕೊಡೋಕೆ ಪ್ರಯತ್ನ ಮಾಡಬೇಕು. (ಗಲಾ. 6:1) ಆದ್ರೆ ನಿಮಗೆ ಯಾರಾದ್ರೂ ಸಲಹೆ ಕೊಟ್ಟಾಗ ಅವರು ಏನು ಹೇಳ್ತಿದ್ದಾರೆ ಅನ್ನೋದನ್ನ ಗಮನಿಸಿ, ಹೇಗೆ ಹೇಳ್ತಿದ್ದಾರೆ ಅನ್ನೋದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ‘ಅವರು ಸಲಹೆ ಕೊಟ್ಟ ರೀತಿ ನಮಗೆ ಇಷ್ಟ ಆಗಲಿಲ್ಲ ಅಂದ್ರೂ ಅವರು ಹೇಳಿದ ಹಾಗೆ ನಾನೇನಾದ್ರೂ ತಿದ್ದಿಕೊಳ್ಳಬೇಕಾ? ನಾನು ಅವರ ತಪ್ಪನ್ನ ನೋಡದೆ ನಾನೇನು ಸರಿ ಮಾಡಿಕೊಳ್ಳಬೇಕು ಅಂತ ಯೋಚಿಸ್ತಿದ್ದೀನಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಯಾರು ಹೇಗೆ ಸಲಹೆ ಕೊಟ್ರೂ ನಾವು ಅದನ್ನ ಕೇಳಿದಾಗ ವಿವೇಕಿಗಳು ಅಂತ ತೋರಿಸಿಕೊಡ್ತೀವಿ.—ಜ್ಞಾನೋ. 15:31.
ಕಾವಲಿನಬುರುಜು10 3/15 ಪುಟ 32 ಪ್ಯಾರ 4
ಈ ಕಠಿನಕಾಲಗಳಲ್ಲಿ ‘ಶುದ್ಧ ಹೃದಯವನ್ನು’ ಕಾಪಾಡಿಕೊಳ್ಳಿರಿ
ವಿರೋಧಿಗಳಿಂದ ಬರುವ ಒತ್ತಡ, ಆರ್ಥಿಕ ಬಿಕ್ಕಟ್ಟು ಮತ್ತು ಗಂಭೀರ ಕಾಯಿಲೆ ದೇವರ ಕೆಲವು ಸೇವಕರನ್ನು ನಿರುತ್ತೇಜನಗೊಳಿಸಿದೆ. ಇದರಿಂದ ಅವರ ಹೃದಯಗಳು ಸಹ ಕೆಲವೊಮ್ಮೆ ನಕಾರಾತ್ಮಕವಾಗಿ ಪ್ರಭಾವಿಸಲ್ಪಟ್ಟಿವೆ. ರಾಜ ದಾವೀದನಿಗೆ ಸಹ ಇದರ ಅನುಭವವಾಯಿತು. ಅವನಂದದ್ದು: “ನನ್ನ ಆತ್ಮವು ಕುಂದಿಹೋಗಿದೆ; ನನ್ನ ಮನಸ್ಸು ಬೆರಗಾಗಿದೆ.” (ಕೀರ್ತ. 143:4) ಇಂಥ ಕಷ್ಟದ ಗಳಿಗೆಯನ್ನು ಪಾರಾಗಲು ಅವನಿಗೆ ಯಾವುದು ಸಹಾಯಮಾಡಿತು? ದೇವರು ತನ್ನ ಸೇವಕರೊಂದಿಗೆ ಹೇಗೆ ವ್ಯವಹರಿಸಿದ್ದನು ಮತ್ತು ಸ್ವತಃ ತಾನೇ ಹೇಗೆ ಸಂರಕ್ಷಿಸಲ್ಪಟ್ಟನು ಎಂಬುದನ್ನು ದಾವೀದನು ಮನಸ್ಸಿಗೆ ತಂದುಕೊಂಡನು. ತನ್ನ ಮಹಾ ನಾಮದ ಸಲುವಾಗಿ ಯೆಹೋವನು ಏನು ಮಾಡಿದ್ದನು ಎಂಬುದರ ಕುರಿತು ಅವನು ಮನನಮಾಡಿದನು. ದಾವೀದನು ದೇವರ ಕೈಕೆಲಸಗಳನ್ನು ಸ್ಮರಿಸುತ್ತಾ ಇದ್ದನು. (ಕೀರ್ತ. 143:5) ತದ್ರೀತಿಯಲ್ಲಿ ನಮ್ಮ ಸೃಷ್ಟಿಕರ್ತನ ಕುರಿತು ಮತ್ತು ಆತನು ನಮಗಾಗಿ ಮಾಡಿರುವ, ಈಗಲೂ ಮಾಡುತ್ತಿರುವ ಎಲ್ಲ ವಿಷಯಗಳ ಕುರಿತು ಮನನಮಾಡುವುದು ನಾವು ಪರೀಕ್ಷೆಯನ್ನು ಎದುರಿಸುತ್ತಿರುವಾಗಲೂ ನಮಗೆ ಸಹಾಯಕರ.
ಕಾವಲಿನಬುರುಜು15 3/15 ಪುಟ 32 ಪ್ಯಾರ 2
“ಕರ್ತನಲ್ಲಿ ಮಾತ್ರ” ಮದುವೆ—ಈಗಲೂ ಸಾಧ್ಯವೇ?
ಕೀರ್ತನೆಗಾರ ದಾವೀದನಂದದ್ದು: “ಯೆಹೋವನೇ, ನನಗೆ ಬೇಗನೆ ಉತ್ತರ ಕೊಡು. ನನ್ನ ಪ್ರಾಣವು ಕುಂದಿಹೋಗಿದೆ; ನಿನ್ನ ಮುಖವನ್ನು ನನಗೆ ಮರೆಮಾಡಬೇಡ.” (ಕೀರ್ತ. 143:5-7, 10, ಪವಿತ್ರ ಗ್ರಂಥ ಭಾಷಾಂತರ) ಕೆಲವೊಮ್ಮೆ ನಿಮಗೂ ಹಾಗನಿಸಬಹುದು. ಆಗೆಲ್ಲ ನಿಮ್ಮ ಬಗ್ಗೆ ಸ್ವರ್ಗೀಯ ತಂದೆಯ ಚಿತ್ತವೇನೆಂದು ಆತನು ತೋರಿಸಿಕೊಡುವಂತೆ ಅವಕಾಶ ಮಾಡಿಕೊಡಿ. ಇದಕ್ಕಾಗಿ ನೀವು ಆತನ ವಾಕ್ಯವನ್ನು ಓದಲು ಮತ್ತು ಓದಿದ್ದನ್ನು ಯೋಚಿಸಲು ಸಮಯಮಾಡಿ. ಆಗ ಆತನ ಆಜ್ಞೆಗಳು ಮತ್ತು ಹಿಂದಿನ ಕಾಲದಲ್ಲಿ ತನ್ನ ಜನರಿಗಾಗಿ ಏನೆಲ್ಲ ಮಾಡಿದ್ದಾನೆಂಬದರ ಕುರಿತ ನಿಮ್ಮ ತಿಳಿವಳಿಕೆಯನ್ನು ಹೆಚ್ಚಿಸಬಲ್ಲಿರಿ. ಆತನಿಗೆ ಕಿವಿಗೊಡುವ ಮೂಲಕ, ಆತನಿಗೆ ವಿಧೇಯರಾಗುವುದು ಎಷ್ಟು ವಿವೇಕಭರಿತ ಎಂಬ ಭರವಸೆ ನಿಮ್ಮಲ್ಲಿ ಇನ್ನಷ್ಟು ಹೆಚ್ಚಾಗುವುದು.
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 1151
ವಿಷ
ಸಾಂಕೇತಿಕ ಅರ್ಥ. ಇಲ್ಲಿ ಕೆಟ್ಟವರ ನಾಲಿಗೆಯನ್ನ ಹಾವಿನ ನಾಲಿಗೆಗೆ ಹೋಲಿಸಲಾಗಿದೆ. ಯಾಕಂದ್ರೆ ಅವರು ಹೇಳೋ ಸುಳ್ಳುಗಳು ಮತ್ತು ಚಾಡಿಮಾತುಗಳು ವಿಷದ ತರ ಬೇರೆಯವರಿಗೆ ತುಂಬ ತೊಂದ್ರೆ ಕೊಡುತ್ತೆ. ಅಷ್ಟೇ ಅಲ್ಲ, ಇಂಥ ಮಾತುಗಳು ಬೇರೆಯವರ ಒಳ್ಳೇ ಹೆಸ್ರನ್ನೂ ಹಾಳುಮಾಡುತ್ತೆ.—ಕೀರ್ತ 58:3, 4; 140:3; ರೋಮ 3:13; ಯಾಕೋ 3:8.
ಫೆಬ್ರವರಿ 3-9
ಬೈಬಲಿನಲ್ಲಿರುವ ನಿಧಿ | ಕೀರ್ತನೆ 144-146
“ಯಾರಿಗೆ ಯೆಹೋವ ದೇವರಾಗಿ ಇರ್ತಾನೋ ಅಂಥವರು ಭಾಗ್ಯವಂತರು!”
ಕಾವಲಿನಬುರುಜು18.04 ಪುಟ 32 ಪ್ಯಾರ 3-4
ವಾಚಕರಿಂದ ಪ್ರಶ್ನೆಗಳು
2. ಬದಲಾವಣೆ ಮಾಡಿರುವುದರಿಂದ ಈ ಕೀರ್ತನೆಯಲ್ಲಿ ಮುಂದೆ ಕೊಡಲಾಗಿರುವ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. 12ನೇ ವಚನದಲ್ಲಿ “ಆಗ” ಎಂಬ ಪದವನ್ನು ಬಳಸಿರುವುದರಿಂದ 12ರಿಂದ 14ನೇ ವಚನಗಳಲ್ಲಿ ತಿಳಿಸಲಾಗಿರುವ ಆಶೀರ್ವಾದಗಳು ಒಳ್ಳೇ ಜನರಿಗೆ ಸಿಗುತ್ತದೆ ಎಂದು ಅರ್ಥಮಾಡಿಕೊಳ್ಳಬಹುದು. ಈ ಒಳ್ಳೆ ಜನರು, ತಮ್ಮನ್ನು ದುಷ್ಟರ “ಕೈಯಿಂದ . . . ಬಿಡಿಸಿ ಕಾಪಾಡು” ಎಂದು ದೇವರನ್ನು ಬೇಡಿಕೊಳ್ಳುತ್ತಾರೆ. (ವಚನ 11) ಇದರಿಂದಾಗಿ 15ನೇ ವಚನವನ್ನು ಅರ್ಥಮಾಡಿಕೊಳ್ಳುವ ವಿಧವೂ ಬದಲಾಗಿದೆ. ಈ ವಚನದಲ್ಲಿರುವ “ಧನ್ಯರು” “ಭಾಗ್ಯವಂತರು” ಅನ್ನುವ ಎರಡು ಪದಗಳನ್ನೂ ಈಗ ಸಕಾರಾತ್ಮಕ ಅರ್ಥದಲ್ಲಿ, ಒಂದನ್ನೊಂದು ಬೆಂಬಲಿಸುವ ರೀತಿಯಲ್ಲಿ ಕೊಡಲಾಗಿದೆ. ಅಂದರೆ ಧನ್ಯರು ಮತ್ತು ಭಾಗ್ಯವಂತರು ಬೇರೆ ಬೇರೆ ಜನರಲ್ಲ, “ಯಾರಿಗೆ ಯೆಹೋವನು ದೇವರಾಗಿರುತ್ತಾನೋ” ಆ ಜನರನ್ನೇ ಈ ಎರಡೂ ಪದಗಳು ಸೂಚಿಸುತ್ತವೆ. ಹೀಬ್ರು ಮೂಲಪ್ರತಿಯಲ್ಲಿ ಉದ್ಧರಣ ಚಿಹ್ನೆ ಇರಲಿಲ್ಲ ಅನ್ನುವುದನ್ನು ಸಹ ಮನಸ್ಸಲ್ಲಿಡಿ. ಆದ್ದರಿಂದ ಭಾಷಾಂತರ ಮಾಡುವವರು ಹೀಬ್ರು ಪದ್ಯರೂಪ, ವಚನದ ಪೂರ್ವಾಪರ ಮತ್ತು ಅದಕ್ಕೆ ಸಂಬಂಧಿಸಿದ ಬೇರೆ ವಚನಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಸರಿಯಾಗಿ ಭಾಷಾಂತರಿಸಬೇಕು.
3. ಈ ಬದಲಾವಣೆಯು ದೇವರ ನಂಬಿಗಸ್ತ ಜನರಿಗೆ ಆಶೀರ್ವಾದ ಸಿಗುತ್ತದೆ ಎಂದು ತಿಳಿಸುವ ಬೇರೆ ವಚನಗಳಿಗೆ ಸಹಮತದಲ್ಲಿದೆ. ಅಶೆರ್ ಪದವನ್ನು ಈಗ ಇನ್ನೊಂದು ಅರ್ಥದಲ್ಲಿ ಹಾಕಿರುವುದರಿಂದ ದಾವೀದನಲ್ಲಿ ಎಷ್ಟು ಬಲವಾದ ನಂಬಿಕೆ ಇತ್ತೆಂದು ಗೊತ್ತಾಗುತ್ತದೆ. ದೇವರು ಇಸ್ರಾಯೇಲ್ ಜನಾಂಗವನ್ನು ಅವರ ವೈರಿಗಳಿಂದ ಬಿಡಿಸಿದ ಬಳಿಕ ಅವರಿಗೆ ಸಂತೋಷ, ಸಮೃದ್ಧಿಯನ್ನು ಕೊಡುವನೆಂದು ದಾವೀದನು ನಂಬಿದ್ದನು. (ಯಾಜ. 26:9, 10; ಧರ್ಮೋ. 7:13; ಕೀರ್ತ. 128:1-6) ಧರ್ಮೋಪದೇಶಕಾಂಡ 28:4 ಕೂಡ ದೇವಜನರಿಗೆ ಸಿಗುವ ಆಶೀರ್ವಾದದ ಬಗ್ಗೆ ಮಾತಾಡುತ್ತಾ “ನಿಮ್ಮ ಸಂತಾನ ವ್ಯವಸಾಯಗಳಿಗೂ ದನಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವದು” ಎಂದು ಹೇಳುತ್ತದೆ. ಈ ವಿಷಯ ದಾವೀದನ ಮಗ ಸೊಲೊಮೋನನ ಸಮಯದಲ್ಲೇ ನೆರವೇರಿತು. ಜನರು ಆಗ ತುಂಬ ಶಾಂತಿ, ಸಂತೃಪ್ತಿಯಿಂದ ಜೀವನ ನಡೆಸಿದರು. ಇದು ಎಷ್ಟು ಚೆನ್ನಾಗಿತ್ತೆಂದರೆ, ಸೊಲೊಮೋನನ ಆಳ್ವಿಕೆಯನ್ನು ಮುಂದೆ ಬರಲಿರುವ ಮೆಸ್ಸೀಯನ ಆಳ್ವಿಕೆಯ ಮುನ್‌ಛಾಯೆಯಾಗಿ ಮಾತಾಡಲಾಗುತ್ತದೆ.—1 ಅರ. 4:20, 21; ಕೀರ್ತ. 72:1-20.
ಕಾವಲಿನಬುರುಜು22.10 ಪುಟ 28 ಪ್ಯಾರ 16-17
ನಿಮ್ಮ ನಿರೀಕ್ಷೆಯನ್ನ ಗಟ್ಟಿಯಾಗಿ ಹಿಡಿದುಕೊಳ್ಳಿ
16 ಶಾಶ್ವತ ಜೀವದ ನಿರೀಕ್ಷೆ ಯೆಹೋವ ದೇವರು ನಮಗೆ ಕೊಟ್ಟಿರೋ ಉಡುಗೊರೆ. ಅದಕ್ಕೆ ನಾವು ಬೆಲೆಕಟ್ಟಕ್ಕಾಗಲ್ಲ. ಏನೇ ಆದ್ರೂ ಈ ನಿರೀಕ್ಷೆ ಸುಳ್ಳಾಗಲ್ಲ. ಇದು ಲಂಗರದ ತರ ಇದೆ. ನಮಗೆ ಕಷ್ಟ ಬರಲಿ, ಹಿಂಸೆ ಬರಲಿ, ಸಾವೇ ನಮ್ಮ ಮುಂದೆ ಬಂದ್ರೂ ನಾವು ಧೈರ್ಯವಾಗಿ ಇರುತ್ತೀವಿ. ಈ ನಿರೀಕ್ಷೆ ಶಿರಸ್ತ್ರಾಣದ ತರ ಇದೆ. ಅದು ನಾವು ಕೆಟ್ಟದನ್ನ ಯೋಚನೆ ಮಾಡದೆ ಯಾವಾಗಲೂ ಒಳ್ಳೇದನ್ನೇ ಯೋಚನೆ ಮಾಡೋಕೆ ಸಹಾಯ ಮಾಡುತ್ತೆ. ಈ ನಿರೀಕ್ಷೆ ನಮ್ಮನ್ನ ಆತನ ಹತ್ರಕ್ಕೆ ಸೆಳೆಯುತ್ತೆ ಮತ್ತು ಆತನು ನಮ್ಮನ್ನೆಷ್ಟು ಪ್ರೀತಿಸ್ತಾನೆ ಅಂತ ತೋರಿಸಿಕೊಡುತ್ತೆ. ಹಾಗಾಗಿ ನಮ್ಮ ನಿರೀಕ್ಷೆಯನ್ನ ಗಟ್ಟಿಯಾಗಿ ಇಟ್ಟುಕೊಳ್ಳೋಣ, ಬಲವಾಗಿ ಇಟ್ಟುಕೊಳ್ಳೋಣ.
17 “ನಿರೀಕ್ಷೆ ಇರೋದ್ರಿಂದ ಖುಷಿಪಡಿ” ಅಂತ ಅಪೊಸ್ತಲ ಪೌಲ ರೋಮನ್ನರಿಗೆ ಪತ್ರದಲ್ಲಿ ಬರೆದ. (ರೋಮ. 12:12) ಪೌಲ ಯಾಕೆ ಅಷ್ಟು ಖುಷಿಯಾಗಿದ್ದ? ಯಾಕಂದ್ರೆ, ಯೆಹೋವನನ್ನು ನಂಬಿದ್ರೆ ಸ್ವರ್ಗದಲ್ಲಿ ತನಗೆ ಶಾಶ್ವತ ಜೀವ ಸಿಗುತ್ತೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಯೆಹೋವ ಕೊಟ್ಟ ಮಾತನ್ನ ಖಂಡಿತ ಉಳಿಸಿಕೊಳ್ತಾನೆ ಅಂತ ಗೊತ್ತಿರೋದರಿಂದ ನಾವು ಕೂಡ ಖುಷಿಯಾಗಿ ಇದ್ದೀವಿ. “ಯೆಹೋವನ ಮೇಲೆ ನಿರೀಕ್ಷೆ ಇಡೋರು ಭಾಗ್ಯವಂತರು. . . . [ಯಾಕಂದ್ರೆ] ಆತನು ಯಾವಾಗ್ಲೂ ನಂಬಿಗಸ್ತನಾಗೇ ಇರ್ತಾನೆ” ಅಂತ ಕೀರ್ತನೆಗಾರ ಹೇಳಿದ ಮಾತು ಎಷ್ಟು ನಿಜ ಅಲ್ವಾ!—ಕೀರ್ತ. 146:5, 6.
ಕಾವಲಿನಬುರುಜು18.01 ಪುಟ 26 ಪ್ಯಾರ 19-20
ಯಾವ ರೀತಿಯ ಪ್ರೀತಿ ನಿಜ ಸಂತೋಷ ತರುತ್ತದೆ?
19 ಸೈತಾನನ ಲೋಕ ಸುಮಾರು 6,000 ವರ್ಷಗಳಿಂದ ಮಾನವರಿಗೆ ಹೇಳಲಿಕ್ಕಾಗದಷ್ಟು ನೋವು ಕೊಟ್ಟಿದೆ. ಈ ಲೋಕದ ಅಂತ್ಯ ಹತ್ತಿರವಾಗಿರುವ ಈ ಸಮಯದಲ್ಲಿ ಈ ಲೋಕ ಸ್ವಪ್ರೇಮಿಗಳಿಂದ, ಹಣಪ್ರೇಮಿಗಳಿಂದ, ಭೋಗವನ್ನು ಪ್ರೀತಿಸುವವರಿಂದ ತುಂಬಿಕೊಂಡಿದೆ. ಜೀವನದಲ್ಲಿ ಏನೇ ಮಾಡಿದರೂ ಅದರಿಂದ ತಮಗೇನು ಲಾಭ ಸಿಗುತ್ತದೆ ಎಂದು ಯೋಚಿಸುತ್ತಾರೆ. ತಮ್ಮ ಆಸೆ-ಆಕಾಂಕ್ಷೆಗಳೇ ಅವರಿಗೆ ಜೀವನದಲ್ಲಿ ಮುಖ್ಯ ಆಗಿಬಿಟ್ಟಿದೆ. ಇಂಥ ಜನ ನಿಜವಾಗಲೂ ಸಂತೋಷವಾಗಿರಲು ಸಾಧ್ಯವಿಲ್ಲ! ಆದರೆ “ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು” ಅಥವಾ ಸಂತೋಷವಾಗಿರುವನು ಎಂದು ಬೈಬಲ್ ಹೇಳುತ್ತದೆ.—ಕೀರ್ತ. 146:5.
20 ಯೆಹೋವನ ಸೇವಕರು ಆತನನ್ನು ನಿಜವಾಗಲೂ ಪ್ರೀತಿಸುತ್ತಾರೆ. ಪ್ರತಿ ವರ್ಷ ಇನ್ನು ಎಷ್ಟೋ ಮಂದಿ ಆತನ ಕುರಿತು ತಿಳಿದುಕೊಂಡು ಆತನನ್ನು ಪ್ರೀತಿಸುತ್ತಾರೆ. ಇದು ದೇವರ ರಾಜ್ಯ ಆಳುತ್ತಿದೆ ಎಂಬುದಕ್ಕೆ ರುಜುವಾತಾಗಿದೆ. ಈ ರಾಜ್ಯ ತುಂಬ ಬೇಗನೆ ನಾವು ಊಹಿಸಲಿಕ್ಕೂ ಆಗದಂಥ ಆಶೀರ್ವಾದಗಳನ್ನು ತರಲಿದೆ. ನಾವು ಯೆಹೋವನು ಬಯಸುವಂಥದ್ದನ್ನು ಮಾಡುವಾಗ ಆತನನ್ನು ಸಂತೋಷಪಡಿಸುತ್ತೇವೆ. ಇದು ನಮಗೆ ಸಂತೋಷ ತರುತ್ತದೆ. ಯೆಹೋವನನ್ನು ಪ್ರೀತಿಸುವವರು ಎಂದೆಂದಿಗೂ ಸಂತೋಷವಾಗಿರುವರು! ಮುಂದಿನ ಲೇಖನದಲ್ಲಿ, ಸ್ವಾರ್ಥ ಪ್ರೀತಿಯಿಂದ ಹುಟ್ಟಿಕೊಳ್ಳುವ ಕೆಲವು ಕೆಟ್ಟ ಗುಣಗಳ ಬಗ್ಗೆ ನೋಡೋಣ. ಇದು ಯೆಹೋವನ ಸೇವಕರಲ್ಲಿರುವ ಒಳ್ಳೇ ಗುಣಗಳಿಗೆ ಹೇಗೆ ವಿರುದ್ಧವಾಗಿದೆ ಎಂದು ನೋಡೋಣ.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 111 ಪ್ಯಾರ 9
ಪ್ರಾಣಿಗಳು
ಪ್ರಾಣಿಗಳಿಗೆ ದಯೆ ತೋರಿಸಬೇಕು, ಅವುಗಳನ್ನ ಚೆನ್ನಾಗಿ ನೋಡ್ಕೊಬೇಕು ಅಂತ ಬೈಬಲ್ ಹೇಳುತ್ತೆ. ಯೆಹೋವನೂ ಪ್ರಾಣಿಗಳನ್ನ ಚೆನ್ನಾಗಿ ನೋಡಿಕೊಳ್ತಿದ್ದಾನೆ, ಅವುಗಳಿಗೆ ಬೇಕಾಗಿರೋದೆಲ್ಲಾ ಕೊಡ್ತಿದ್ದಾನೆ. (ಜ್ಞಾನೋ 12:10; ಕೀರ್ತ 145:15, 16) ಮೋಶೆಯ ನಿಯಮ ಪುಸ್ತಕದಲ್ಲಿ ಸಾಕುಪ್ರಾಣಿಗಳನ್ನ ಹೇಗೆ ನೋಡ್ಕೊಬೇಕು ಅಂತ ನಿರ್ದಿಷ್ಟ ನಿಯಮಗಳನ್ನ ಕೊಟ್ಟಿದ್ದನು. (ವಿಮೋ 23:4, 5; ಧರ್ಮೋ 22:10; 25:4) ಅವರು ಸಬ್ಬತ್ ದಿನ ಪ್ರಾಣಿಗಳಿಗೂ ವಿಶ್ರಾಂತಿ ಕೊಡಬೇಕಿತ್ತು.—ವಿಮೋ 20:10; 23:12; ಧರ್ಮೋ 5:14.
ಫೆಬ್ರವರಿ 10-16
ಬೈಬಲಿನಲ್ಲಿರುವ ನಿಧಿ | ಕೀರ್ತನೆ 147-150
ಯೆಹೋವನನ್ನ ಹೊಗಳೋಕೆ ಎಷ್ಟೋ ಕಾರಣಗಳಿವೆ
ಕಾವಲಿನಬುರುಜು17.07 ಪುಟ 18 ಪ್ಯಾರ 5-6
“ಯಾಹುವಿಗೆ ಸ್ತೋತ್ರ” ಸಲ್ಲಿಸಬೇಕು ಯಾಕೆ?
5 ಯೆಹೋವನು ಇಡೀ ಇಸ್ರಾಯೇಲ್ ಜನಾಂಗಕ್ಕೆ ಮಾತ್ರವಲ್ಲ ಒಬ್ಬೊಬ್ಬ ಇಸ್ರಾಯೇಲ್ಯನಿಗೂ ಸಾಂತ್ವನ ಕೊಟ್ಟನು. ಇಂದು ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಇದನ್ನೇ ಮಾಡುತ್ತಾನೆ. “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ” ಎಂದು ಕೀರ್ತನೆಗಾರನು ಬರೆದನು. (ಕೀರ್ತ. 147:3) ನಾವು ಕಾಯಿಲೆಬಿದ್ದಾಗ ಇಲ್ಲವೇ ಖಿನ್ನರಾಗಿರುವಾಗ ಯೆಹೋವನು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆಂದು ನಮಗೆ ಭರವಸೆ ಇದೆ. ಆತನು ನಮಗೆ ಸಾಂತ್ವನ ಕೊಡಲು, ನಮ್ಮ ಭಾವನಾತ್ಮಕ ಗಾಯಗಳನ್ನು ವಾಸಿಮಾಡಲು ಕಾತರದಿಂದಿದ್ದಾನೆ. (ಕೀರ್ತ. 34:18; ಯೆಶಾ. 57:15) ನಮಗೆ ಯಾವುದೇ ರೀತಿಯ ಸಮಸ್ಯೆ ಇರಲಿ ಅದನ್ನು ನಿಭಾಯಿಸಲು ಬೇಕಾದ ವಿವೇಕ ಮತ್ತು ಬಲವನ್ನು ಕೊಡುತ್ತಾನೆ.—ಯಾಕೋ. 1:5.
6 ಕೀರ್ತನೆಗಾರನು ನಂತರ ಆಕಾಶದ ಕಡೆಗೆ ಗಮನ ಹರಿಸಿ ಯೆಹೋವನು “ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ” ಎಂದು ಹೇಳುತ್ತಾನೆ. (ಕೀರ್ತ. 147:4) ಕೀರ್ತನೆಗಾರನಿಗೆ ನಕ್ಷತ್ರಗಳು ಕಾಣುತ್ತಿದ್ದರೂ ಒಟ್ಟು ಎಷ್ಟು ನಕ್ಷತ್ರಗಳಿವೆ ಅಂತ ಅವನಿಗೆ ಗೊತ್ತಿರಲಿಲ್ಲ. ಇಂದು ವಿಜ್ಞಾನಿಗಳು ಹೇಳುವಂತೆ, ನಮ್ಮ ಕ್ಷೀರಪಥ ಗ್ಯಾಲಕ್ಸಿಯೊಂದರಲ್ಲೇ ಕೋಟಿಗಟ್ಟಲೆ ನಕ್ಷತ್ರಗಳಿವೆ. ಇಡೀ ವಿಶ್ವದಲ್ಲಿ ಇಂಥ ಕೋಟ್ಯಾನುಕೋಟಿ ಗ್ಯಾಲಕ್ಸಿಗಳು ಇರಬಹುದು. ಮಾನವರು ಎಷ್ಟು ನಕ್ಷತ್ರಗಳಿವೆಯೆಂದು ಸರಿಯಾಗಿ ಹೇಳಲಾರರು. ಆದರೆ ಸೃಷ್ಟಿಕರ್ತನು ಹೇಳಬಲ್ಲನು. ಅವನಿಗೆ ಒಂದೊಂದು ನಕ್ಷತ್ರದ ಬಗ್ಗೆ ಎಷ್ಟು ಚೆನ್ನಾಗಿ ಗೊತ್ತಿದೆಯೆಂದರೆ ಒಂದೊಂದಕ್ಕೂ ಹೆಸರು ಇಟ್ಟಿದ್ದಾನೆ! (1 ಕೊರಿಂ. 15:41) ಎಲ್ಲಿ ಯಾವ ನಕ್ಷತ್ರ ಇದೆಯೆಂದು ತಿಳಿದಿರುವ ದೇವರಿಗೆ ನಿಮ್ಮ ಬಗ್ಗೆಯೂ ತಿಳಿದಿದೆ. ನೀವು ಎಲ್ಲಿ ಇದ್ದೀರಿ, ನಿಮಗೆ ಹೇಗನಿಸುತ್ತಾ ಇದೆ, ನಿಮಗೆ ಏನು ಅಗತ್ಯವಿದೆ ಇದೆಲ್ಲ ಆತನಿಗೆ ಚೆನ್ನಾಗಿ ತಿಳಿದಿದೆ!
ಕಾವಲಿನಬುರುಜು17.07 ಪುಟ 18-19 ಪ್ಯಾರ 7
“ಯಾಹುವಿಗೆ ಸ್ತೋತ್ರ” ಸಲ್ಲಿಸಬೇಕು ಯಾಕೆ?
7 ನಿಮ್ಮ ಸಮಸ್ಯೆಗಳಿಂದಾಗಿ ನಿಮಗಾಗುತ್ತಿರುವ ಕಷ್ಟನೋವು ಯೆಹೋವನಿಗೆ ಅರ್ಥವಾಗುತ್ತದೆ. ನಿಮಗೆ ಸಹಾಯ ಮಾಡಲು ಬೇಕಾದ ಶಕ್ತಿಯೂ ಆತನಿಗಿದೆ. (ಕೀರ್ತನೆ 147:5 ಓದಿ.) ನಿಮ್ಮ ಪರಿಸ್ಥಿತಿ ತುಂಬ ಕಷ್ಟಕರ ಆಗಿದೆ, ನಿಭಾಯಿಸಲು ಆಗುತ್ತಿಲ್ಲವೆಂದು ನಿಮಗನಿಸಬಹುದು. ನಮ್ಮ ಈ ಇತಿಮಿತಿಗಳನ್ನು ದೇವರು ಅರ್ಥಮಾಡಿಕೊಳ್ಳುತ್ತಾನೆ. “ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತ. 103:14) ನಾವು ಅಪರಿಪೂರ್ಣರು ಆಗಿರುವುದರಿಂದ ಮಾಡಿದ ತಪ್ಪುಗಳನ್ನೇ ಪುನಃ ಪುನಃ ಮಾಡುತ್ತೇವೆ. ಆಗ ನಮಗೆ ನಿರುತ್ತೇಜನ ಆಗಬಹುದು. ನಾವಾಡಿರುವ ಮಾತುಗಳ ಬಗ್ಗೆ, ನಮಗಿದ್ದ ತಪ್ಪು ಆಸೆಗಳ ಬಗ್ಗೆ, ಹೊಟ್ಟೆಕಿಚ್ಚಿನ ಭಾವನೆಗಳ ಬಗ್ಗೆ ನಮಗೆ ಎಷ್ಟೋ ಸಲ ಬೇಜಾರಾಗಿದೆ ಅಲ್ಲವಾ? ಯೆಹೋವನಿಗೆ ಇಂಥ ಯಾವುದೇ ಬಲಹೀನತೆಗಳು ಇಲ್ಲದಿದ್ದರೂ ‘ಆತನಿಗೆ ಅಪರಿಮಿತ ಜ್ಞಾನ’ ಇರುವುದರಿಂದ ನಮ್ಮನ್ನು ತುಂಬ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ.
ಕಾವಲಿನಬುರುಜು17.07 ಪುಟ 21 ಪ್ಯಾರ 18
“ಯಾಹುವಿಗೆ ಸ್ತೋತ್ರ” ಸಲ್ಲಿಸಬೇಕು ಯಾಕೆ?
18 ಭೂಮಿಯಲ್ಲಿರುವ ಎಲ್ಲ ಜನಾಂಗಗಳಿಂದ ಪುರಾತನ ಕಾಲದ ಇಸ್ರಾಯೇಲನ್ನು ಮಾತ್ರ ಯೆಹೋವನು ತನ್ನ ಜನರಾಗಿ ಆಯ್ಕೆಮಾಡಿದ್ದಾನೆಂದು ಕೀರ್ತನೆಗಾರನಿಗೆ ಗೊತ್ತಿತ್ತು. ಈ ಜನಾಂಗಕ್ಕೆ ಮಾತ್ರ ದೇವರ “ವಾಕ್ಯ” ಮತ್ತು ‘ನಿಯಮವಿಧಿಗಳನ್ನು’ ಕೊಡಲಾಗಿತ್ತು. (ಕೀರ್ತನೆ 147:19, 20 ಓದಿ.) ಇಂದು ದೇವರ ನಾಮಧಾರಿಗಳಾಗಿರುವ ಮಹಾ ಗೌರವ ನಮಗಿದೆ. ನಮಗೆ ಆತನ ಬಗ್ಗೆ ತಿಳಿದಿರುವುದು, ನಮ್ಮನ್ನು ಮಾರ್ಗದರ್ಶಿಸಲು ನಮ್ಮ ಬಳಿ ಆತನ ವಾಕ್ಯವಿರುವುದು, ಆತನ ಜೊತೆ ಒಂದು ಆಪ್ತ ಸಂಬಂಧ ಇರುವುದು ಇದೆಲ್ಲದಕ್ಕಾಗಿ ನಾವು ಕೃತಜ್ಞರು. ಹಾಗಾಗಿ ಕೀರ್ತನೆ 147ರ ಬರಹಗಾರನಂತೆ ನಿಮಗೂ “ಯಾಹುವಿಗೆ ಸ್ತೋತ್ರ!” ಎಂದು ಹಾಡಲು ಮತ್ತು ಬೇರೆಯವರೂ ಹಾಗೆ ಮಾಡುವಂತೆ ಪ್ರೋತ್ಸಾಹಿಸಲು ಹಲವಾರು ಕಾರಣಗಳಿವೆ.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 316
ಪಕ್ಷಿಗಳು
ಪಕ್ಷಿಗಳು ತಮ್ಮ ಅದ್ಭುತವಾದ ವಿನ್ಯಾಸ ಮತ್ತು ರಚನೆಯ ಮೂಲಕ ಯೆಹೋವನನ್ನ ಸ್ತುತಿಸುತ್ತಿವೆ. (ಕೀರ್ತ 148:1, 10) ಅದರ ಗರಿಗಳಲ್ಲಿರೋ ಚಿಕ್ಕಪುಟ್ಟ ಅಂಶಗಳನ್ನ ನೋಡಿದ್ರೆ ತುಂಬ ಆಶ್ಚರ್ಯ ಆಗುತ್ತೆ. ಅದರ ಮೂಳೆಗಳು ಟೊಳ್ಳಾಗಿರೋದ್ರಿಂದ ಅಷ್ಟು ಭಾರವಾಗಿರೋದಿಲ್ಲ. ಇದ್ರಿಂದ ಅವು ಗಾಳಿಯಲ್ಲಿ ಸುಲಭವಾಗಿ ಹಾರುತ್ತವೆ. ಇದರ ಮುಂದೆ ಆಧುನಿಕ ವಿಮಾನಗಳು ಏನೇನೂ ಅಲ್ಲ. ಪಕ್ಷಿಗಳ ಅದ್ಭುತ ರಚನೆ ಅದನ್ನ ಸೃಷ್ಟಿಮಾಡಿರೋ ಯೆಹೋವನಿಗೆ ಮಹಿಮೆ ತರುತ್ತಿದೆ.
ಫೆಬ್ರವರಿ 17-23
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 1
ಯುವಜನರೇ, ನೀವು ಯಾರ ಮಾತು ಕೇಳ್ತೀರಾ?
ಕಾವಲಿನಬುರುಜು17.11 ಪುಟ 29 ಪ್ಯಾರ 16-17
ಯಾವುದೂ ನಿಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಿರಲಿ
16 ನೀವೀಗ ಹದಿಪ್ರಾಯದಲ್ಲಿದ್ದರೆ ಅಪ್ಪಅಮ್ಮ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲ, ತುಂಬ ಕಟ್ಟುನಿಟ್ಟು ಎಂದು ಅನಿಸುತ್ತಿರಬಹುದು. ನಿಮಗೆ ಎಷ್ಟು ಬೇಜಾರಾಗಬಹುದೆಂದರೆ ಯೆಹೋವನನ್ನು ಆರಾಧಿಸುವುದೇ ಬೇಡ ಎಂದು ನೆನಸಬಹುದು. ಆದರೆ ನೀವು ಯೆಹೋವನನ್ನು ಬಿಟ್ಟುಹೋದರೆ, ನಿಮ್ಮ ಹೆತ್ತವರಷ್ಟು, ಸಭೆಯಲ್ಲಿರುವ ಸ್ನೇಹಿತರಷ್ಟು ನಿಮ್ಮನ್ನು ಪ್ರೀತಿಸುವವರು ಈ ಲೋಕದಲ್ಲಿ ಬೇರೆ ಯಾರೂ ಇಲ್ಲ ಎಂದು ನಿಮಗೆ ಸ್ವಲ್ಪ ಸಮಯದಲ್ಲೇ ಗೊತ್ತಾಗುತ್ತದೆ.
17 ನಿಮ್ಮ ಅಪ್ಪಅಮ್ಮ ನಿಮ್ಮನ್ನು ಯಾವತ್ತೂ ತಿದ್ದುವುದೇ ಇಲ್ಲ ಎಂದಿಟ್ಟುಕೊಳ್ಳಿ. ಆಗ ಅವರಿಗೆ ನಿಮ್ಮ ಮೇಲೆ ನಿಜವಾಗಲೂ ಕಾಳಜಿ ಇದೆ ಅಂತ ನೀವು ಹೇಗೆ ಹೇಳಲಿಕ್ಕಾಗುತ್ತದೆ? (ಇಬ್ರಿ. 12:8) ಅವರು ಪರಿಪೂರ್ಣರಲ್ಲ. ಹಾಗಾಗಿ ಅವರು ಶಿಸ್ತು ಕೊಡುವ ರೀತಿ ನಿಮಗೆ ಇಷ್ಟವಾಗದೇ ಇರಬಹುದು. ಆದರೆ ಶಿಸ್ತು ಕೊಡಲಾಗುವ ರೀತಿಗೆ ಗಮನಕೊಡಬೇಡಿ. ಅದರ ಬದಲು ಅವರು ಹೇಳುವ ಮತ್ತು ಮಾಡುವ ವಿಷಯದ ಹಿಂದಿರುವ ಕಾರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರು ನಿಮ್ಮನ್ನು ತಿದ್ದುವಾಗ ಶಾಂತವಾಗಿರಿ, ಅತಿಯಾಗಿ ಪ್ರತಿಕ್ರಿಯಿಸಬೇಡಿ. “ಹಿಡಿದು ಮಾತಾಡುವವನು ಜ್ಞಾನಿ. ಶಾಂತಾತ್ಮನು ವಿವೇಕಿ” ಎಂದು ದೇವರ ವಾಕ್ಯ ಹೇಳುತ್ತದೆ. (ಜ್ಞಾನೋ. 17:27) ಪ್ರೌಢ ವ್ಯಕ್ತಿಯಾಗುವ ಗುರಿಯಿಡಿ. ಬುದ್ಧಿವಾದ ಯಾವ ರೀತಿಯಲ್ಲೇ ಸಿಗಲಿ ಒಬ್ಬ ಪ್ರೌಢ ವ್ಯಕ್ತಿ ಅದನ್ನು ಸ್ವೀಕರಿಸುತ್ತಾನೆ ಮತ್ತು ತಿದ್ದಿಕೊಳ್ಳುತ್ತಾನೆ. (ಜ್ಞಾನೋ. 1:8) ಯೆಹೋವನನ್ನು ಪ್ರೀತಿಸುವ ಹೆತ್ತವರಿರುವುದು ಒಂದು ಆಶೀರ್ವಾದ ಎನ್ನುವುದನ್ನು ಯಾವತ್ತೂ ಮರೆಯಬೇಡಿ. ನೀವು ಜೀವದ ಬಹುಮಾನವನ್ನು ಗೆಲ್ಲಲು ಸಹಾಯ ಮಾಡಬೇಕೆನ್ನುವುದೇ ಅವರ ಉದ್ದೇಶ.
ಕಾವಲಿನಬುರುಜು05 2/15 ಪುಟ 19-20 ಪ್ಯಾರ 11-12
ನಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುವುದು
11 ಮನುಷ್ಯನನ್ನಲ್ಲ ಬದಲಾಗಿ ದೇವರನ್ನು ಮೆಚ್ಚಿಸಲು ಪ್ರಯತ್ನಿಸಿರಿ. ಒಂದು ಗುಂಪಿಗೆ ಸೇರಿದವರಾಗಿರುವ ಮೂಲಕ ಸ್ವಲ್ಪ ಮಟ್ಟಿಗೆ ನಮ್ಮ ಗುರುತನ್ನು ಸ್ಥಾಪಿಸುವುದು ಸ್ವಾಭಾವಿಕವೇ ಸರಿ. ಎಲ್ಲರಿಗೂ ಸ್ನೇಹಿತರ ಅಗತ್ಯವಿದೆ ಮತ್ತು ಅಂಗೀಕರಿಸಲ್ಪಡುವುದು ನಮ್ಮಲ್ಲಿ ಹಿತವಾದ ಭಾವನೆಯನ್ನು ಮೂಡಿಸುತ್ತದೆ. ತರುಣಾವಸ್ಥೆಯಲ್ಲಿ ಹಾಗೂ ಜೀವನದಲ್ಲಿ ಮುಂದಕ್ಕೆ ಸಮಾನಸ್ಥರ ಒತ್ತಡವು ಪ್ರಬಲವಾಗಿರಬಲ್ಲದು. ಮತ್ತು ಇದು ಇತರರನ್ನು ಅನುಕರಿಸುವ ಇಲ್ಲವೆ ಮೆಚ್ಚಿಸುವ ವಿಪರೀತ ಆಸೆಯನ್ನು ಹುಟ್ಟಿಸಬಲ್ಲದು. ಆದರೆ ಸ್ನೇಹಿತರು ಮತ್ತು ಸಮಾನಸ್ಥರು ಯಾವಾಗಲೂ ನಮ್ಮ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡಿರುವುದಿಲ್ಲ. ಕೆಲವೊಮ್ಮೆ ಅವರಿಗೆ ತಾವು ಮಾಡುವ ತಪ್ಪುಕೆಲಸದಲ್ಲಿ ಜೊತೆ ಬೇಕಾಗಿರುತ್ತದೆ ಅಷ್ಟೇ. (ಜ್ಞಾನೋಕ್ತಿ 1:11-19) ಒಬ್ಬ ಕ್ರೈಸ್ತನು ಸಮಾನಸ್ಥರ ನಕಾರಾತ್ಮಕ ಒತ್ತಡಕ್ಕೆ ಮಣಿಯುವಾಗ, ಅವನು ಸಾಮಾನ್ಯವಾಗಿ ತನ್ನ ಗುರುತನ್ನು ಮರೆಮಾಚಲು ಪ್ರಯತ್ನಿಸುತ್ತಾನೆ. (ಕೀರ್ತನೆ 26:4) ‘ಇಹಲೋಕದ ನಡವಳಿಕೆಯನ್ನು ಅನುಸರಿಸದಿರಿ’ ಎಂದು ಅಪೊಸ್ತಲ ಪೌಲನು ಎಚ್ಚರಿಸಿದನು. (ರೋಮಾಪುರ 12:2) ಅವರೊಂದಿಗೆ ಒಳಗೂಡಲಿಕ್ಕಾಗಿ ಬರುವಂಥ ಯಾವುದೇ ಬಾಹ್ಯ ಒತ್ತಡದೊಂದಿಗೆ ಹೋರಾಡಲು ನಮಗೆ ಅಗತ್ಯವಿರುವ ಆಂತರಿಕ ಬಲವನ್ನು ಯೆಹೋವನು ಒದಗಿಸುತ್ತಾನೆ.—ಇಬ್ರಿಯ 13:6.
12 ಬಾಹ್ಯ ಒತ್ತಡವು ನಮ್ಮ ಕ್ರೈಸ್ತ ಗುರುತಿನ ಪ್ರಜ್ಞೆಯನ್ನು ಹಾನಿಗೊಳಪಡಿಸುವ ಬೆದರಿಕೆಯನ್ನೊಡ್ಡುವಾಗ, ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೇದು. ಅದೇನೆಂದರೆ, ದೇವರ ಕಡೆಗಿನ ನಮ್ಮ ನಿಷ್ಠೆಯು, ಜನರ ಅಭಿಪ್ರಾಯ ಇಲ್ಲವೆ ಅಧಿಕಾಂಶ ಜನರ ಪ್ರವೃತ್ತಿಗಳಿಗಿಂತಲೂ ಹೆಚ್ಚು ಪ್ರಮುಖವಾಗಿದೆ. ವಿಮೋಚನಕಾಂಡ 23:2ರ ಮಾತುಗಳು ನಮ್ಮ ಸುರಕ್ಷೆಗಾಗಿರುವ ಮೂಲತತ್ತ್ವವಾಗಿ ಕಾರ್ಯನಡಿಸುತ್ತವೆ: “ದುಷ್ಕಾರ್ಯವನ್ನು ಮಾಡುವವರು ಬಹು ಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು.” ಜೊತೆ ಇಸ್ರಾಯೇಲ್ಯರಲ್ಲಿ ಅಧಿಕಾಂಶ ಮಂದಿ ಯೆಹೋವನು ತನ್ನ ವಾಗ್ದಾನಗಳನ್ನು ಪೂರೈಸುವ ಸಾಮರ್ಥ್ಯವುಳ್ಳವನು ಎಂಬುದರಲ್ಲಿ ಸಂದೇಹವನ್ನು ವ್ಯಕ್ತಪಡಿಸಿದಾಗ, ಕಾಲೇಬನು ಅಧಿಕಾಂಶ ಜನರ ಅಭಿಪ್ರಾಯವನ್ನು ಅನುಸರಿಸಲು ಕಡಾಖಂಡಿತವಾಗಿ ನಿರಾಕರಿಸಿದನು. ದೇವರ ವಾಗ್ದಾನಗಳು ಭರವಸಾರ್ಹವಾಗಿವೆಯೆಂಬ ನಿಶ್ಚಯ ಅವನಿಗಿತ್ತು, ಮತ್ತು ಅವನ ನಿಲುವಿಗಾಗಿ ಅವನಿಗೆ ಹೇರಳವಾದ ಪ್ರತಿಫಲ ದೊರಕಿತು. (ಅರಣ್ಯಕಾಂಡ 13:30; ಯೆಹೋಶುವ 14:6-11) ನೀವು ಅದೇ ರೀತಿಯಲ್ಲಿ, ದೇವರೊಂದಿಗಿನ ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲಿಕ್ಕಾಗಿ ಜನಪ್ರಿಯ ಅಭಿಪ್ರಾಯದ ಒತ್ತಡವನ್ನು ಪ್ರತಿರೋಧಿಸಲು ಸಿದ್ಧರಿದ್ದೀರೊ?
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 846
ಮೂರ್ಖ
ಬೈಬಲಲ್ಲಿ “ಮೂರ್ಖ” ಅಂತ ಹೇಳುವಾಗ ಬುದ್ಧಿ ಕಮ್ಮಿ ಇರೋರನ್ನ ಮಾತ್ರ ಸೂಚಿಸಲ್ಲ. ಯಾರು ದೇವರ ಮಾತನ್ನ ಕೇಳಲ್ವೋ, ಆತನ ನೀತಿ ನಿಯಮಗಳ ಪ್ರಕಾರ ನಡೆಯಲ್ವೋ ಅಂಥವರನ್ನ ಸೂಚಿಸೋಕೆ ಈ ಪದವನ್ನ ಬಳಸಲಾಗಿದೆ. ಬೈಬಲಲ್ಲಿ ಇಂಥವರ ಬಗ್ಗೆ ಹೇಳುವಾಗ ಬೇರೆಬೇರೆ ಹೀಬ್ರು ಮತ್ತು ಗ್ರೀಕ್ ಪದಗಳನ್ನ ಉಪಯೋಗಿಸಿದ್ದಾರೆ.—ಜ್ಞಾನೋ 1:22; 12:15; 17:7; 13:1; ಲೂಕ 12:20; ಗಲಾ 3:1; ಮತ್ತಾ 23:17; 25:2.
ಫೆಬ್ರವರಿ 24–ಮಾರ್ಚ್ 2
ಬೈಬಲಿನಲ್ಲಿರುವ ನಿಧಿ | ಜ್ಞಾನೋಕ್ತಿ 2
ವೈಯಕ್ತಿಕ ಅಧ್ಯಯನ ಯಾಕೆ ಪ್ರಾಮುಖ್ಯ?
ಕಾವಲಿನಬುರುಜು22.08 ಪುಟ 18-19 ಪ್ಯಾರ 16
ಸತ್ಯದ ಹಾದಿಯಲ್ಲಿ ನಡಿತಾ ಇರಿ
16 ನಮ್ಮಲ್ಲಿ ಎಲ್ಲರಿಗೂ ಓದೋಕೆ, ಅಧ್ಯಯನ ಮಾಡೋಕೆ ಅಷ್ಟು ಇಷ್ಟ ಆಗದೆ ಇರಬಹುದು. ಆದ್ರೂ ಸತ್ಯನ ಚೆನ್ನಾಗಿ ತಿಳ್ಕೊಬೇಕಂದ್ರೆ ಅದನ್ನ ‘ಹುಡುಕ್ತಾ ಇರಿ’ ಅಂತ ಯೆಹೋವ ಹೇಳ್ತಿದ್ದಾನೆ. (ಜ್ಞಾನೋಕ್ತಿ 2:4-6 ಓದಿ.) ಈ ತರ ಮಾಡೋದ್ರಿಂದ ನಮಗೆ ತುಂಬ ಪ್ರಯೋಜನ ಆಗುತ್ತೆ. ಸಹೋದರ ಕೊರೆ ಬೈಬಲ್ ಅಧ್ಯಯನ ಮಾಡುವಾಗ ಒಂದೊಂದು ವಚನನೂ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ತುಂಬ ಪ್ರಯತ್ನ ಮಾಡ್ತಾರೆ. “ಅದಕ್ಕೆ ಪ್ರತಿಯೊಂದು ವಚನದಲ್ಲಿ ಬರೋ ಪಾದಟಿಪ್ಪಣಿಗಳನ್ನ, ಕ್ರಾಸ್ ರೆಫೆರೆನ್ಸ್‌ಗಳನ್ನ ನಾನು ನೋಡ್ತೀನಿ. ಅದರ ಬಗ್ಗೆ ಜಾಸ್ತಿ ಸಂಶೋಧನೆ ಮಾಡ್ತೀನಿ. ಹೀಗೆ ಮಾಡೋದ್ರಿಂದ ನನಗೆ ತುಂಬ ವಿಷಯಗಳನ್ನ ಕಲಿಯೋಕಾಗುತ್ತೆ” ಅಂತ ಅವರು ಹೇಳ್ತಾರೆ. ನಾವು ವೈಯಕ್ತಿಕ ಅಧ್ಯಯನ ಮಾಡೋ ರೀತಿ ಬೇರೆಬೇರೆ ಆಗಿದ್ರೂ ಅದಕ್ಕಾಗಿ ನಾವು ಕೊಡೋ ಸಮಯ ಮತ್ತು ಪ್ರಯತ್ನ ನಾವು ಸತ್ಯವನ್ನ ಎಷ್ಟು ಪ್ರೀತಿಸ್ತೀವಿ ಅಂತ ತೋರಿಸುತ್ತೆ.—ಕೀರ್ತ. 1:1-3.
ಕಾವಲಿನಬುರುಜು22.10 ಪುಟ 19 ಪ್ಯಾರ 3-4
ವಿವೇಕದ ಕೂಗನ್ನ ಕೇಳಿಸಿಕೊಳ್ತಾ ಇದ್ದೀರಾ?
3 ನಮ್ಮ ಹತ್ರ ಇರೋ ಮಾಹಿತಿಗಳಿಂದ ಸರಿಯಾದ ತೀರ್ಮಾನಗಳನ್ನ ಮಾಡೋ ಸಾಮರ್ಥ್ಯವನ್ನ ವಿವೇಕ ಅಂತ ಕರಿತೀವಿ. ಆದ್ರೆ ನಿಜವಾದ ವಿವೇಕ ಇದಕ್ಕಿಂತ ಶ್ರೇಷ್ಠವಾಗಿದೆ. ಅದು ಹೇಗೆ ಸಿಗುತ್ತೆ? “ಯೆಹೋವನ ಭಯನೇ ಜ್ಞಾನದ ಆರಂಭ. ಅತಿ ಪವಿತ್ರನಾದ ದೇವರ ಜ್ಞಾನನೇ ವಿವೇಚನೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 9:10) ಜೀವನದಲ್ಲಿ ಮುಖ್ಯವಾದ ನಿರ್ಧಾರಗಳನ್ನ ಮಾಡುವಾಗ “ಅತಿ ಪವಿತ್ರನಾದ ದೇವರ ಜ್ಞಾನ” ಪಡಕೊಂಡು ಆತನು ಯೋಚನೆ ಮಾಡೋ ತರ ನಾವು ಯೋಚನೆ ಮಾಡಬೇಕು. ಅದಕ್ಕೆ ನಾವು ಬೈಬಲ್ ಮತ್ತು ಬೈಬಲ್ ಆಧಾರಿತ ಪ್ರಕಾಶನಗಳನ್ನ ಓದಬೇಕು. ಇದನ್ನ ಮಾಡಿದ್ರೆ ನಮಗೆ ನಿಜವಾದ ವಿವೇಕ ಸಿಗುತ್ತೆ.—ಜ್ಞಾನೋ. 2:5-7.
4 ಯೆಹೋವನಿಂದ ಮಾತ್ರ ನಮಗೆ ನಿಜವಾದ ವಿವೇಕನ ಕೊಡೋಕೆ ಆಗೋದು. (ರೋಮ. 16:27) ಯಾಕೆ? ಒಂದನೇದಾಗಿ, ಯೆಹೋವ ಎಲ್ಲವನ್ನ ಸೃಷ್ಟಿಸಿದ್ದಾನೆ. ಹಾಗಾಗಿ ಆತನಿಗೆ ಎಲ್ಲರ ಬಗ್ಗೆ, ಎಲ್ಲದರ ಬಗ್ಗೆನೂ ಚೆನ್ನಾಗಿ ಗೊತ್ತು. (ಕೀರ್ತ. 104:24) ಎರಡನೇದಾಗಿ, ಆತನು ಮಾಡಿರೋ ವಿಷಯಗಳು ಈಗಾಗ್ಲೇ ಆತನಿಗೆ ತುಂಬಾ ವಿವೇಕ ಇದೆ ಅನ್ನೋದನ್ನ ತೋರಿಸಿದೆ. (ರೋಮ. 11:33) ಮೂರನೇದಾಗಿ, ಯೆಹೋವ ಕೊಟ್ಟ ಬುದ್ಧಿವಾದವನ್ನ ಪಾಲಿಸಿದವರು ಜೀವನದಲ್ಲಿ ತುಂಬ ಖುಷಿಯಾಗಿದ್ದಾರೆ. (ಜ್ಞಾನೋ. 2:10-12) ಹಾಗಾಗಿ ನಮಗೆ ನಿಜವಾದ ವಿವೇಕ ಬೇಕಾದ್ರೆ ನಾವು ಈ ಸತ್ಯಗಳನ್ನ ಒಪ್ಕೋಬೇಕು ಮತ್ತು ನಿರ್ಧಾರಗಳನ್ನ ಮಾಡೋಕು ಮುಂಚೆ ಯೆಹೋವನ ಮಾತನ್ನ ಕೇಳಬೇಕು.
ಕಾವಲಿನಬುರುಜು16.09 ಪುಟ 23-24 ಪ್ಯಾರ 2-3
ಯುವಜನರೇ, ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ
2 ಇಂದು ತುಂಬ ಜನರು ನಮ್ಮನ್ನು ದೇವರು ಸೃಷ್ಟಿಮಾಡಿದನೆಂದು ನಂಬುವುದಿಲ್ಲ. ಯೆಹೋವನ ಸೇವೆ ಮಾಡುತ್ತಿರುವ ಅಥವಾ ಆತನ ಬಗ್ಗೆ ಕಲಿಯುತ್ತಿರುವ ಯುವ ವ್ಯಕ್ತಿ ನೀವಾಗಿದ್ದೀರಾ? ಹಾಗಿದ್ದರೆ ಯೆಹೋವನೇ ನಮ್ಮ ಸೃಷ್ಟಿಕರ್ತನೆಂದು ರುಜುಪಡಿಸುವುದು ಹೇಗೆ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ನಾವು ಕೇಳಿಸಿಕೊಳ್ಳುವ ಅಥವಾ ಓದುವ ವಿಷಯದ ಬಗ್ಗೆ ಯೋಚಿಸಲು ಮತ್ತು ಆ ವಿಷಯ ಸರಿಯೋ ತಪ್ಪೋ ಎಂದು ನಿರ್ಧರಿಸಲು ಬೈಬಲ್ ನಮಗೆ ಸಹಾಯಮಾಡುತ್ತದೆ. ಬೈಬಲಿನಲ್ಲಿ “ಬುದ್ಧಿಯು ನಿನಗೆ ಕಾವಲಾಗಿರುವದು” ಎಂದು ಹೇಳಲಾಗಿದೆ. ಅದು ಹೇಗೆ? ನಮಗಿರುವ ಬುದ್ಧಿಶಕ್ತಿಯು ಸುಳ್ಳು ವಿಷಯಗಳನ್ನು ತ್ಯಜಿಸಲು ಮತ್ತು ಯೆಹೋವನಲ್ಲಿರುವ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಸಹಾಯಮಾಡುತ್ತದೆ.—ಜ್ಞಾನೋಕ್ತಿ 2:10-12 ಓದಿ.
3 ಯೆಹೋವನಲ್ಲಿ ಬಲವಾದ ನಂಬಿಕೆ ಇರಬೇಕಾದರೆ ನಾವು ಆತನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. (1 ತಿಮೊ. 2:4) ಹಾಗಾಗಿ, ಬೈಬಲನ್ನು ಮತ್ತು ನಮ್ಮ ಪ್ರಕಾಶನಗಳನ್ನು ಓದುವಾಗ ಅವು ಯಾವುದರ ಬಗ್ಗೆ ಹೇಳುತ್ತಿವೆ ಎಂದು ತುಸು ಯೋಚಿಸಿ. ಓದುತ್ತಿರುವ ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. (ಮತ್ತಾ. 13:23) ಈ ರೀತಿಯಲ್ಲಿ ಅಧ್ಯಯನ ಮಾಡಿದರೆ ಯೆಹೋವನೇ ನಮ್ಮ ಸೃಷ್ಟಿಕರ್ತ ಮತ್ತು ಬೈಬಲ್ ಆತನಿಂದಲೇ ಬಂದದ್ದು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. (ಇಬ್ರಿ. 11:1) ಅದು ಹೇಗೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 1211 ಪ್ಯಾರ 4
ನಿಯತ್ತು
ನಾವು ಯೆಹೋವನಿಗೆ ನಿಯತ್ತಾಗಿರಬೇಕಂದ್ರೆ, ಮನಸಾರೆ ಆತನನ್ನ ಪ್ರೀತಿಸಿ ಆರಾಧಿಸಬೇಕಂದ್ರೆ ಮೊದಲು ಆತನ ಮೇಲೆ ನಂಬಿಕೆ ಮತ್ತು ಭರವಸೆ ಇಡಬೇಕು. ಏನೇ ಆದ್ರೂ ಆತನು ನಮ್ಮನ್ನ ಕಾಪಾಡ್ತಾನೆ ಅಂತನೂ ನಂಬಬೇಕು. (ಕೀರ್ತ 25:21) ತನಗೆ ನಿಯತ್ತಾಗಿ ಇರೋರಿಗೆ ಯೆಹೋವ “ಗುರಾಣಿ” ಮತ್ತು “ಭದ್ರಕೋಟೆ” ಆಗಿರ್ತೀನಿ ಅಂತ ಮಾತುಕೊಟ್ಟಿದ್ದಾನೆ. (ಜ್ಞಾನೋ 2:6-8; 10:29; ಕೀರ್ತ 41:12) ಇಂಥವರಿಗೆ ಯೆಹೋವನನ್ನ ಮೆಚ್ಚಿಸೋದೇ ಮುಖ್ಯ ಗುರಿಯಾಗಿರುತ್ತೆ. ಅದಕ್ಕೇ ಅವರು ಆತನಿಗೆ ಇಷ್ಟ ಆಗೋ ರೀತಿ ನಡಕೊಳ್ತಾರೆ. ಇದ್ರಿಂದ ಅವರು ಜೀವನದಲ್ಲಿ ಸರಿಯಾದ ಹೆಜ್ಜೆ ಇಡ್ತಾರೆ, ಸಂತೋಷವಾಗಿರ್ತಾರೆ. (ಕೀರ್ತ 26:1-3; ಜ್ಞಾನೋ 11:5; 28:18) ಅವರು ಜೀವನದಲ್ಲಿ ಎಷ್ಟೇ ಕಷ್ಟ ಅನುಭವಿಸಿದ್ರೂ, ಅವರು ಸತ್ರೂ ಅವರ ನಿಯತ್ತನ್ನ ಯೆಹೋವ ಯಾವತ್ತೂ ಮರಿಯಲ್ಲ. ಅವರನ್ನ ಖಂಡಿತ ಆಶೀರ್ವದಿಸ್ತಾನೆ.—ಯೋಬ 9:20-22; ಕೀರ್ತ 37:18, 19, 37; 84:11; ಜ್ಞಾನೋ 28:10.