ಬೈಬಲ್ ವಚನಗಳ ವಿವರಣೆ
ಜ್ಞಾನೋಕ್ತಿ 17:17—“ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ”
“ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.”—ಜ್ಞಾನೋಕ್ತಿ 17:17, ಹೊಸ ಲೋಕ ಭಾಷಾಂತರ.
“ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ17:17, ಸತ್ಯವೇದವು.
ಜ್ಞಾನೋಕ್ತಿ 17:17—ಅರ್ಥ
ನಿಜವಾದ ಸ್ನೇಹಿತರನ್ನ ನಾವು ಯಾವಾಗ್ಲೂ ನಂಬಬಹುದು. ಅವ್ರು ಒಡಹುಟ್ಟಿದವರ ತರ ನಮಗೆ ಕಾಳಜಿ ತೋರಿಸ್ತಾರೆ, ವಿಶೇಷವಾಗಿ ನಾವು ಕಷ್ಟದಲ್ಲಿದ್ದಾಗ ನಮ್ಮ ಕೈ ಹಿಡಿತಾರೆ.
“ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ.” ಈ ವಾಕ್ಯನ ಇನ್ನೊಂದು ಮಾತಿನಲ್ಲಿ ಹೇಳೋದಾದ್ರೆ “ಸ್ನೇಹಿತರು ಯಾವಾಗ್ಲೂ ತಮ್ಮ ಪ್ರೀತಿಯನ್ನ ತೋರಿಸ್ತಾರೆ” ಅಂತರ್ಥ. “ಪ್ರೀತಿ” ಅನ್ನೋದಕ್ಕಿರೋ ಹೀಬ್ರೂ ಪದ ಬರೀ ಭಾವನೆನ ಅಷ್ಟೇ ಅಲ್ಲ ಕ್ರಿಯೆಯಲ್ಲೂ ತೋರಿಸೋದನ್ನ ಸೂಚಿಸುತ್ತೆ. ಈ ತರ ಪ್ರೀತಿ ತೋರಿಸೋ ವ್ಯಕ್ತಿಯಲ್ಲಿ ಸ್ವಾರ್ಥ ಅನ್ನೋದು ಇರಲ್ಲ. (1 ಕೊರಿಂಥ 13:4-7) ಸ್ನೇಹಿತರ ಮಧ್ಯೆ ಇಂಥಾ ಪ್ರೀತಿ ಇದ್ರೆ ಭಿನ್ನಾಭಿಪ್ರಾಯಗಳು ಬಂದ್ರೂ, ಏನೇ ಸಮಸ್ಯೆಗಳಾದ್ರೂ ಒಬ್ಬರನ್ನೊಬ್ಬರು ಬಿಟ್ಟುಕೊಡಲ್ಲ. ತಪ್ಪಾದಾಗ ಒಬ್ಬರನ್ನೊಬ್ಬರು ಮನಸಾರೆ ಕ್ಷಮಿಸ್ತಾರೆ. (ಜ್ಞಾನೋಕ್ತಿ 10:12) ಒಬ್ಬ ನಿಜ ಸ್ನೇಹಿತ ಇನ್ನೊಬ್ಬ ಸ್ನೇಹಿತನಿಗೆ ಒಳ್ಳೇದಾದ್ರೆ ಹೊಟ್ಟೆಕಿಚ್ಚು ಪಡಲ್ಲ, ಬದಲಿಗೆ ಅವನ ಜೊತೆ ಖುಷಿ ಪಡ್ತಾನೆ.—ರೋಮನ್ನರಿಗೆ 12:15.
‘ನಿಜವಾದ ಸ್ನೇಹಿತ. . . ಕಷ್ಟಕಾಲದಲ್ಲಿ ನಿಮ್ಮ ಸಹೋದರನಾಗ್ತಾನೆ.’ ಒಡಹುಟ್ಟಿದವರು ಸಾಮಾನ್ಯವಾಗಿ ಆಪ್ತರಾಗಿ ಇರ್ತಾರೆ ಅಂತ ಈ ಜ್ಞಾನೋಕ್ತಿಯಲ್ಲಿರೋ ಮಾತಿಂದ ಗೊತ್ತಾಗುತ್ತೆ. ಆದ್ರೆ ನಿಜ ಸ್ನೇಹಿತ, ಕಷ್ಟದಲ್ಲಿರೋ ಸ್ನೇಹಿತನಿಗೆ ಸಹಾಯ ಮಾಡೋದಕ್ಕೆ ತನ್ನ ಕೈಲಾದ ಪ್ರಯತ್ನ ಹಾಕಿದಾಗ ಅವನು ಕೂಡ ಒಡಹುಟ್ಟಿದವನ ತರ ಆಗ್ತಾನೆ. ಯಾರ ಮಧ್ಯೆ ಇಂಥಾ ಸ್ನೇಹ ಇರುತ್ತೋ ಅಂಥವರಿಗೆ ಏನೇ ಕಷ್ಟ ಬಂದ್ರೂ ಅವ್ರ ಬಾಂಧವ್ಯ ಹಾಳಾಗಲ್ಲ. ಬದಲಿಗೆ ಒಬ್ಬರ ಮೇಲೆ ಒಬ್ಬರಿಗೆ ಇರೋ ಪ್ರೀತಿ ಮತ್ತು ಗೌರವ ಜಾಸ್ತಿ ಆಗುತ್ತೆ.
ಜ್ಞಾನೋಕ್ತಿ 17:17—ಸಂದರ್ಭ
ಜ್ಞಾನೋಕ್ತಿ ಪುಸ್ತಕದಲ್ಲಿರೋ ವಿವೇಕದ ಮಾತುಗಳನ್ನ ಚುಟುಕಾಗಿ, ಮನಸ್ಸಿಗೆ ಮುಟ್ಟೋ ತರ ಬರೆಯಲಾಗಿದೆ. ಇದ್ರಿಂದ ಅದು ಓದುವವರ ಹೃದಯದಲ್ಲಿ ಅಚ್ಚಳಿಯದೇ ಉಳಿಯುತ್ತೆ. ಜ್ಞಾನೋಕ್ತಿ ಪುಸ್ತಕದಲ್ಲಿರೋ ಹೆಚ್ಚಿನ ವಿಷ್ಯಗಳನ್ನ ರಾಜ ಸೊಲೊಮೋನನೇ ಬರೆದಿದ್ದಾನೆ. ಅವನು ಇದನ್ನ ಹೀಬ್ರೂ ಕಾವ್ಯಾತ್ಮಕ ಶೈಲಿಯಲ್ಲಿ ಬರೆದಿದ್ದಾನೆ. ಅವನು ಇದ್ರಲ್ಲಿ ಪ್ರಾಸಗಳ ಬದಲು ಒಂದಕ್ಕೊಂದು ಸಂಬಂಧಪಟ್ಟಿರೋ ಮತ್ತು ವಿರುದ್ಧವಾಗಿರೋ ವಿಷ್ಯಗಳನ್ನ ಹೇಳಿದ್ದಾನೆ. ಉದಾಹರಣೆಗೆ, ಜ್ಞಾನೋಕ್ತಿ 17:17ರಲ್ಲಿರೋ ಮಾತುಗಳು ಒಂದಕ್ಕೊಂದು ಸಂಬಂಧಪಟ್ಟಿದೆ. ಎರಡನೇ ವಾಕ್ಯದಿಂದ ಮೊದಲನೇ ವಾಕ್ಯಕ್ಕೆ ಜಾಸ್ತಿ ಅರ್ಥ ಸಿಗುತ್ತೆ. ವಿರುದ್ಧ ವಿಷ್ಯಗಳನ್ನ ಹೇಳಿರೋದಕ್ಕೆ ಜ್ಞಾನೋಕ್ತಿ 18:24 ಒಂದು ಉದಾಹರಣೆಯಾಗಿದೆ. ಅಲ್ಲಿ ಹೀಗಿದೆ, “ಒಬ್ರನ್ನೊಬ್ರು ಜಜ್ಜಿಬಿಡಬೇಕು ಅಂತ ಕಾಯೋ ಜೊತೆಗಾರರೂ ಇದ್ದಾರೆ, ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತನೂ ಇರ್ತಾನೆ.”
ಸೊಲೊಮೋನ ಜ್ಞಾನೋಕ್ತಿ 17:17ನ್ನ ಬರೆಯೋವಾಗ, ತನ್ನ ಅಪ್ಪ ದಾವೀದ ಮತ್ತು ರಾಜ ಸೌಲನ ಮಗನಾದ ಯೋನಾತಾನನ ಮಧ್ಯೆ ಇದ್ದ ಆಪ್ತ ಸ್ನೇಹ ಅವನ ಮನಸ್ಸಿಗೆ ಬಂದಿರಬಹುದು. (1 ಸಮುವೇಲ 13:16; 18:1; 19:1-3; 20:30-34, 41, 42; 23:16-18) ದಾವೀದ ಮತ್ತು ಯೋನಾತಾನ ರಕ್ತಸಂಬಂಧಿಗಳಲ್ಲದೇ ಇದ್ರೂ ಅವ್ರು ಒಡಹುಟ್ಟಿದವರಿಗಿಂತ ಆಪ್ತರಾಗಿದ್ರು. ಯೋನಾತಾನ ತನ್ನ ಸ್ನೇಹಿತ ದಾವೀದನಿಗೋಸ್ಕರ ಪ್ರಾಣ ಕೊಡೋಕೂ ರೆಡಿ ಇದ್ದa.
ಜ್ಞಾನೋಕ್ತಿ 17:17ನ್ನ ಬೇರೆ ಬೇರೆ ಬೈಬಲ್ಗಳಲ್ಲಿ ಹೀಗೆ ಹಾಕಿದ್ದಾರೆ
“ಒಬ್ಬ ಸ್ನೇಹಿತನು ಎಲ್ಲಾ ಸಮಯದಲ್ಲೂ ಪ್ರೀತಿಸುತ್ತಾನೆ ಮತ್ತು ತೊಂದರೆಯ ಸಮಯದಲ್ಲಿ ಸಹೋದರನಾಗುತ್ತಾನೆ.”—ದಿ ಬೈಬಲ್ ಇನ್ ಬೇಸಿಕ್ ಇಂಗ್ಲಿಷ್.
“ಸ್ನೇಹಿತ ಯಾವಾಗಲೂ ಸ್ನೇಹಿತನಾಗಿಯೇ ಇರ್ತಾನೆ, ಕಷ್ಟ ಬಂದಾಗ ಒಡಹುಟ್ಟಿದವನಾಗ್ತಾನೆ.”—ದಿ ಮೊಫಾಟ್ ಟ್ರಾನ್ಸ್ಲೇಶನ್ ಆಫ್ ದಿ ಬೈಬಲ್.
“ಒಬ್ಬ ಸ್ನೇಹಿತ ತನ್ನ ಸ್ನೇಹವನ್ನ ಎಲ್ಲಾ ಸಮಯದಲ್ಲೂ ತೋರಿಸ್ತಾನೆ. ಸಮಸ್ಯೆ ಬಂದಾಗ ಸಹೋದರನಾಗಿ ಬದಲಾಗ್ತಾನೆ.”—ದಿ ಕಂಪ್ಲೀಟ್ ಜೂಯಿಶ್ ಸ್ಟಡಿ ಬೈಬಲ್.
ಜ್ಞಾನೋಕ್ತಿ ಪುಸ್ತಕದ ಪರಿಚಯ ಮಾಡ್ಕೊಳ್ಳೋಕೆ ಈ ವಿಡಿಯೋ ನೋಡಿ.
a “ಪ್ರಾಣಸ್ನೇಹಿತರಾದರು” ಅನ್ನೋ ಲೇಖನ ನೋಡಿ.