ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನೀವು ಯಾರನ್ನು ನಂಬಬೇಕು?
    ಎಚ್ಚರ!—2006 | ಅಕ್ಟೋಬರ್‌
    • ನೀವು ಯಾರನ್ನು ನಂಬಬೇಕು?

      “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” ​—⁠ಇಬ್ರಿಯ 3:⁠4.

      ಈ ಮಾತುಗಳನ್ನು ಬರೆದ ಬೈಬಲ್‌ ಲೇಖಕನ ತರ್ಕವನ್ನು ನೀವು ಒಪ್ಪುತ್ತೀರೊ? ಇದನ್ನು ಬರೆದನಂತರದ ಸುಮಾರು 2,000 ವರ್ಷಗಳಲ್ಲಿ ಮಾನವಕುಲವು ವೈಜ್ಞಾನಿಕ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಮಾಡಿದೆ. ಹೀಗಿರುವಾಗ, ಪ್ರಕೃತಿಯಲ್ಲಿ ಕಂಡುಬರುವ ವಿನ್ಯಾಸವು ಒಬ್ಬ ವಿನ್ಯಾಸಕನ, ಒಬ್ಬ ಸೃಷ್ಟಿಕರ್ತನ ಅಂದರೆ ಒಬ್ಬ ದೇವರ ಅಸ್ತಿತ್ವಕ್ಕೆ ಕೈತೋರಿಸುತ್ತದೆಂಬ ಅಭಿಪ್ರಾಯವುಳ್ಳವರು ಈಗಲೂ ಇದ್ದಾರೊ?

      ಹೌದೆಂದು ಮುಂದುವರಿದ ದೇಶಗಳಲ್ಲೂ ಇರುವ ಅನೇಕ ಜನರು ಹೇಳುತ್ತಾರೆ. ಉದಾಹರಣೆಗಾಗಿ, 2005ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ನ್ಯೂಸ್‌ವೀಕ್‌ ವಾರ್ತಾಪತ್ರಿಕೆಯು ನಡೆಸಿದಂಥ ಸಮೀಕ್ಷೆಯಲ್ಲಿ, 80 ಪ್ರತಿಶತ ಜನರು “ದೇವರೇ ವಿಶ್ವವನ್ನು ಸೃಷ್ಟಿಸಿದ್ದಾನೆ” ಎಂಬುದನ್ನು ನಂಬುತ್ತಾರೆಂದು ತಿಳಿದುಬಂತು. ಹೀಗೆ ನಂಬುವವರು ಅವಿದ್ಯಾವಂತರೊ? ದೇವರಿದ್ದಾನೆಂದು ವಿಜ್ಞಾನಿಗಳಲ್ಲಿ ಯಾರಾದರೂ ನಂಬುತ್ತಾರೊ? 1997ರಲ್ಲಿ ಪ್ರಕೃತಿ (ಇಂಗ್ಲಿಷ್‌) ಎಂಬ ಹೆಸರಿನ ವೈಜ್ಞಾನಿಕ ಪತ್ರಿಕೆಯು, ಒಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಜೀವವಿಜ್ಞಾನಿಗಳು, ಭೌತವಿಜ್ಞಾನಿಗಳು ಮತ್ತು ಗಣಿತಜ್ಞರಲ್ಲಿ 40 ಪ್ರತಿಶತ ಮಂದಿ ದೇವರಿದ್ದಾನೆಂದು ಮಾತ್ರವಲ್ಲ ಆತನು ಪ್ರಾರ್ಥನೆಗಳನ್ನು ಆಲಿಸಿ ಉತ್ತರಕೊಡುತ್ತಾನೆ ಎಂಬುದನ್ನೂ ನಂಬುತ್ತಾರೆಂದು ವರದಿಸಿತು.

      ಆದರೆ ಇನ್ನಿತರ ವಿಜ್ಞಾನಿಗಳು ಈ ವಿಷಯವನ್ನು ಬಲವಾಗಿ ವಿರೋಧಿಸುತ್ತಾರೆ. ಪ್ರಕೃತ್ಯತೀತ ಶಕ್ತಿಯಲ್ಲಿ ನಂಬಿಕೆ, ವಿಶೇಷವಾಗಿ ದೇವರಲ್ಲಿ ನಂಬಿಕೆಯು ನಿಜ ವಿಜ್ಞಾನದೊಂದಿಗೆ ಹೊಂದಿಕೊಳ್ಳಲಾರದು ಎಂದು ನೋಬೆಲ್‌ ಪ್ರಶಸ್ತಿವಿಜೇತರಾದ ಡಾಕ್ಟರ್‌ ಹರ್ಬಟ್‌ ಎ. ಹಾಫ್ಟ್‌ಮ್ಯಾನ್‌ ಇತ್ತೀಚೆಗೆ ವೈಜ್ಞಾನಿಕ ಸಮ್ಮೇಳನವೊಂದರಲ್ಲಿ ತಿಳಿಸಿದರು. “ಈ ರೀತಿಯ ನಂಬಿಕೆಯು ಮಾನವಕುಲದ ಹಿತಕ್ಷೇಮಕ್ಕೆ ಹಾನಿಕರ” ಎಂದು ಅವರು ಹೇಳಿದರು. ಅಲ್ಲದೆ, ದೇವರಿದ್ದಾನೆಂದು ನಂಬುವ ವಿಜ್ಞಾನಿಗಳು ಸಹ, ಸಸ್ಯಗಳಲ್ಲಿ ಹಾಗೂ ಪ್ರಾಣಿಗಳಲ್ಲಿ ಕಂಡುಬರುವ ವಿನ್ಯಾಸದಿಂದ ಒಬ್ಬ ವಿನ್ಯಾಸಕನಿದ್ದಾನೆಂಬುದು ತೋರಿಬರುತ್ತದೆಂದು ಕಲಿಸಲು ಹಿಂದೇಟುಹಾಕುತ್ತಾರೆ. ಏಕೆ? ಇದಕ್ಕೆ ಒಂದು ಕಾರಣವನ್ನು ಗುರುತಿಸುತ್ತಾ, ಸ್ಮಿತ್‌ಸೋನಿಯನ್‌ ಸಂಸ್ಥೆಯಲ್ಲಿರುವ ಪ್ರಾಗ್ಜೀವಿಶಾಸ್ತ್ರಜ್ಞರಾದ ಡಗ್ಲಸ್‌ ಎಚ್‌. ಅರ್ವಿನ್‌ ಹೇಳುವುದು: “ವಿಜ್ಞಾನವು ಪವಾಡಗಳನ್ನು ಅನುಮೋದಿಸುವುದಿಲ್ಲ; ಇದು ವಿಜ್ಞಾನದ ನಿಯಮ.”

      ನೀವೇನು ಯೋಚಿಸಬೇಕು ಮತ್ತು ಏನು ನಂಬಬೇಕೆಂದು ಒಂದೇ ಇತರರು ನಿಮಗೆ ಹೇಳಿಕೊಡುವಂತೆ ಬಿಡಬಹುದು ಅಥವಾ ನೀವು ಸ್ವತಃ ಪುರಾವೆಯನ್ನು ಪರೀಕ್ಷಿಸಿ ನಿಮ್ಮ ಸ್ವಂತ ತೀರ್ಮಾನಕ್ಕೆ ಬರಲು ಇಚ್ಛಿಸಬಹುದು. ಮುಂದಿನ ಪುಟಗಳಲ್ಲಿ ನೀವು ವಿಜ್ಞಾನದ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ಓದುವಾಗ, ‘ಒಬ್ಬ ಸೃಷ್ಟಿಕರ್ತನು ಇದ್ದಾನೆಂಬ ತೀರ್ಮಾನಕ್ಕೆ ಬರುವುದು ತರ್ಕಸಮ್ಮತವೊ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. (g 9/06)

      [ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

      ನೀವೇ ಪುರಾವೆಯನ್ನು ಪರೀಕ್ಷಿಸಿನೋಡಿರಿ

      [ಪುಟ 3ರಲ್ಲಿರುವ ಚೌಕ]

      ಯೆಹೋವನ ಸಾಕ್ಷಿಗಳು ಸೃಷ್ಟಿವಾದಿಗಳೊ?

      ಬೈಬಲಿನ ಆದಿಕಾಂಡ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ಸೃಷ್ಟಿಯ ವೃತ್ತಾಂತವನ್ನು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಆದರೆ ಅವರು ನೀವೆಣಿಸುವಂಥ ರೀತಿಯಲ್ಲಿ ಸೃಷ್ಟಿವಾದಿಗಳಲ್ಲ. ಯಾಕೆ? ಮೊದಲನೆಯದಾಗಿ, ವಿಶ್ವ, ಈ ಭೂಮಿ ಮತ್ತು ಅದರಲ್ಲಿರುವ ಎಲ್ಲ ಜೀವರಾಶಿಯು ಸುಮಾರು 10,000 ವರ್ಷಗಳ ಹಿಂದೆ 24 ತಾಸುಗಳುಳ್ಳ 6 ದಿನಗಳೊಳಗೇ ಸೃಷ್ಟಿಸಲ್ಪಟ್ಟಿತ್ತೆಂಬುದು ಅನೇಕ ಸೃಷ್ಟಿವಾದಿಗಳ ನಂಬಿಕೆ. ಆದರೆ ಬೈಬಲ್‌ ಇದನ್ನು ಕಲಿಸುವುದಿಲ್ಲ.a ಅಲ್ಲದೆ, ಸೃಷ್ಟಿವಾದಿಗಳು ಅಂಗೀಕರಿಸಿರುವಂಥ ಅನೇಕ ಬೋಧನೆಗಳಿಗೆ ಬೈಬಲಿನಲ್ಲಿ ಯಾವುದೇ ಆಧಾರವಿಲ್ಲ. ಯೆಹೋವನ ಸಾಕ್ಷಿಗಳಾದರೊ ತಮ್ಮೆಲ್ಲ ಧಾರ್ಮಿಕ ನಂಬಿಕೆಗಳನ್ನು ದೇವರ ವಾಕ್ಯದ ಮೇಲೆ ಮಾತ್ರ ಆಧರಿಸುತ್ತಾರೆ.

      ಅಷ್ಟುಮಾತ್ರವಲ್ಲದೆ, ಕೆಲವು ದೇಶಗಳಲ್ಲಿ ಸೃಷ್ಟಿವಾದಿಗಳು ಎಂಬ ಪದವನ್ನು ರಾಜಕೀಯದಲ್ಲಿ ಸಕ್ರಿಯವಾಗಿ ಒಳಗೂಡಿರುವ ಮೂಲಭೂತವಾದಿಗಳ ಗುಂಪುಗಳಿಗೂ ಉಪಯೋಗಿಸಲಾಗುತ್ತದೆ. ಈ ಗುಂಪುಗಳು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಹೊಂದಿಕೊಳ್ಳುವ ಕಾನೂನುಗಳು ಮತ್ತು ಬೋಧನೆಗಳನ್ನು ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಶಿಕ್ಷಕರು ಅನುಮೋದಿಸುವಂತೆ ಅವರ ಮೇಲೆ ಒತ್ತಡಹೇರುತ್ತಾರೆ.

      ಆದರೆ ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳಲ್ಲಿ ತಟಸ್ಥರು. ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕು ಸರಕಾರಗಳಿಗಿದೆ ಎಂಬುದನ್ನು ಅವರು ಮಾನ್ಯಮಾಡುತ್ತಾರೆ. (ರೋಮಾಪುರ 13:​1-7) ಆದರೆ, ಅದೇ ಸಮಯದಲ್ಲಿ ತಾವು ‘ಲೋಕದ ಭಾಗವಾಗಿಲ್ಲ’ ಎಂಬ ಯೇಸುವಿನ ಹೇಳಿಕೆಯನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (ಯೋಹಾನ 17:​14-16, NW) ಅವರು ತಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ, ದೇವರ ಮಟ್ಟಗಳಿಗನುಸಾರ ಜೀವಿಸುವುದರ ಪ್ರಯೋಜನಗಳ ಕುರಿತು ಕಲಿಯುವ ಸದವಕಾಶವನ್ನು ಜನರ ಮುಂದಿಡುತ್ತಾರೆ. ಅಲ್ಲದೆ, ಯೆಹೋವನ ಸಾಕ್ಷಿಗಳು ಮೂಲಭೂತವಾದಿಗಳ ಗುಂಪುಗಳನ್ನು ಬೆಂಬಲಿಸುವುದೂ ಇಲ್ಲ. ಏಕೆಂದರೆ ಈ ಗುಂಪುಗಳು, ಬೈಬಲ್‌ ಮಟ್ಟಗಳನ್ನು ಸ್ವೀಕರಿಸುವಂತೆ ಇತರರನ್ನು ಬಲಾತ್ಕರಿಸುವ ಪೌರ ನಿಯಮಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತವೆ, ಮತ್ತು ಅವುಗಳಿಗೆ ಬೆಂಬಲಕೊಡುವಲ್ಲಿ ಸಾಕ್ಷಿಗಳು ತಮ್ಮ ಕ್ರೈಸ್ತ ತಾಟಸ್ಥ್ಯವನ್ನು ರಾಜಿಮಾಡಿದಂತಾಗುತ್ತದೆ.​—⁠ಯೋಹಾನ 18:⁠36.

      [ಪಾದಟಿಪ್ಪಣಿ]

      a ಈ ಸಂಚಿಕೆಯ ಪುಟ 18ರಲ್ಲಿರುವ “ಬೈಬಲಿನ ದೃಷ್ಟಿಕೋನ: ವಿಜ್ಞಾನವು ಆದಿಕಾಂಡ ವೃತ್ತಾಂತವನ್ನು ವಿರೋಧಿಸುತ್ತದೊ?” ಎಂಬ ಲೇಖನವನ್ನು ನೋಡಿ.

  • ಪ್ರಕೃತಿ ಏನನ್ನು ಕಲಿಸುತ್ತದೆ?
    ಎಚ್ಚರ!—2006 | ಅಕ್ಟೋಬರ್‌
    • ಪ್ರಕೃತಿ ಏನನ್ನು ಕಲಿಸುತ್ತದೆ?

      “ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶಮಾಡುವವು; ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು; ಭೂಮಿಯನ್ನು ಮಾತಾಡಿಸು, ನಿನಗೆ ಬೋಧಿಸುವದು; ಸಮುದ್ರದ ಮೀನುಗಳು ನಿನಗೆ ಹೇಳುವವು.”​—⁠ಯೋಬ 12:7, 8.

      ವಿಜ್ಞಾನಿಗಳು ಮತ್ತು ಇಂಜಿನಿಯರರು ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಸಸ್ಯಗಳನ್ನು ಅಕ್ಷರಶಃವಾಗಿ ತಮ್ಮ ಶಿಕ್ಷಕರನ್ನಾಗಿ ಮಾಡಿಕೊಂಡಿದ್ದಾರೆ. ನವನವೀನ ಉತ್ಪನ್ನಗಳ ರಚನೆಗಾಗಿ ಮತ್ತು ಈಗಾಗಲೇ ಇರುವಂಥ ಯಂತ್ರಗಳ ಕೆಲಸಮಾಡುವ ರೀತಿಯನ್ನು ಉತ್ತಮಗೊಳಿಸಲಿಕ್ಕಾಗಿ ಅವರು ವಿಭಿನ್ನ ಜೀವಿಗಳ ವಿನ್ಯಾಸಗಳನ್ನು ಅಧ್ಯಯನಮಾಡಿ ನಕಲುಮಾಡುತ್ತಿದ್ದಾರೆ. ಇದನ್ನು “ಬಯೊಮಿಮೆಟಿಕ್ಸ್‌” (ಜೀವಾನುಕರಣ ವಿಜ್ಞಾನ) ಎಂದು ಕರೆಯಲಾಗಿದೆ. ಇದರ ಕುರಿತು ನೀವು ಮುಂದಿನ ಉದಾಹರಣೆಗಳನ್ನು ಪರಿಗಣಿಸುವಾಗ, ‘ಈ ಎಲ್ಲ ವಿನ್ಯಾಸಗಳಿಗಾಗಿ ಕೀರ್ತಿ ಯಾರಿಗೆ ಸಲ್ಲಬೇಕು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ.

      ತಿಮಿಂಗಿಲದ ಈಜು ಅಂಗಗಳು ಕಲಿಸುವ ಸಂಗತಿಗಳು

      ವಿಮಾನ ವಿನ್ಯಾಸಕರು ಗೂನುಬೆನ್ನಿನ ತಿಮಿಂಗಿಲದಿಂದ (ಹಂಪ್‌ಬ್ಯಾಕ್‌ ವೇಲ್‌) ಏನನ್ನು ಕಲಿಯಬಲ್ಲರು? ಬಹಳಷ್ಟನ್ನು! ಪೂರ್ತಿಯಾಗಿ ಬೆಳೆದಿರುವ ಒಂದು ಗೂನುಬೆನ್ನಿನ ತಿಮಿಂಗಿಲದ ತೂಕ ಸುಮಾರು 30 ಟನ್ನುಗಳಷ್ಟಾಗಿರುತ್ತದೆ. ಇದು, ಸರಕು ತುಂಬಿರುವ ಒಂದು ಟ್ರಕ್ಕಿನ ಭಾರಕ್ಕೆ ಸಮಾನ. ಈ ತಿಮಿಂಗಿಲಕ್ಕೆ ಬಹುಮಟ್ಟಿಗೆ ಬಾಗಿಸಲಾಗದ ದೇಹವಿದೆ ಮತ್ತು ದೊಡ್ಡ ರೆಕ್ಕೆಗಳಂಥ ಈಜು ಅಂಗಗಳಿವೆ. 40 ಅಡಿ ಉದ್ದದ ಈ ಪ್ರಾಣಿಯು ನೀರಿನಲ್ಲಿ ತುಂಬ ಸಲೀಸಾಗಿ ಚಲಿಸುತ್ತದೆ. ಉದಾಹರಣೆಗಾಗಿ, ಆಹಾರಕ್ಕಾಗಿ ಬೇಟೆಯಾಡುವಾಗ ಈ ತಿಮಿಂಗಿಲವು ತನ್ನ ಭೋಜನವಾಗಲಿಕ್ಕಿರುವ ಚಿಪ್ಪುಜೀವಿಗಳು ಇಲ್ಲವೆ ಮೀನಿನ ರಾಶಿಯಡಿಯಿಂದ ತನ್ನ ತಲೆ ಮೇಲಿರುವ ಮೂಗಿನ ಹೊಳ್ಳೆಯ ಮೂಲಕ ನಿರಂತರವಾಗಿ ಗುಳ್ಳೆಗಳ ಪ್ರವಾಹವನ್ನು ಊದುತ್ತಾ, 5 ಅಡಿಗಳಷ್ಟು ಉದ್ದಳತೆಯ ವೃತ್ತಾಕಾರದಲ್ಲಿ ಸುರುಳಿಸುರುಳಿಯಾಗಿ ಈಜಿಕೊಂಡು ಸಮುದ್ರದ ಮೇಲ್ಭಾಗಕ್ಕೆ ಬರುತ್ತದೆ. ಗುಳ್ಳೆಗಳ ಆ ಚಿಕ್ಕ ‘ಬಲೆಯು’ ಆ ಜೀವಿಗಳನ್ನು ನೀರಿನ ಮೇಲ್ಮೈಯಲ್ಲಿ ಒಟ್ಟುಗೂಡಿಸುವಾಗ ತಿಮಿಂಗಿಲವು ಬಂದು, ಗವಿಯಂಥ ಬಾಯ್ತೆರೆದು ಚೆನ್ನಾಗಿ ಅಣಿಮಾಡಲ್ಪಟ್ಟಿರುವ ತನ್ನ ಈ ಭೋಜನವನ್ನು ಕಬಳಿಸಿಬಿಡುತ್ತದೆ.

      ವಿಶೇಷವಾಗಿ ಸಂಶೋಧಕರ ಕುತೂಹಲವನ್ನು ಕೆರಳಿಸಿದಂಥ ವಿಷಯ ಯಾವುದೆಂದರೆ, ಬಾಗಿಸಲಾಗದ ದೇಹವುಳ್ಳ ಈ ಜೀವಿಯು ಉಹಿಸಲಾಗದಂಥ ರೀತಿಯಲ್ಲಿ 5 ಅಡಿಯಷ್ಟು ಚಿಕ್ಕ ಉದ್ದಳತೆಯ ವೃತ್ತಾಕಾರದಲ್ಲಿ ಹೇಗೆ ಸುತ್ತುತ್ತದೆಂಬುದೇ. ಇದರ ರಹಸ್ಯವು ತಿಮಿಂಗಿಲದ ಈಜು ಅಂಗಗಳಲ್ಲಿದೆಯೆಂದು ಅವರು ಪತ್ತೆಮಾಡಿದರು. ಆ ಅಂಗಗಳ ಮುಂದಿನ ಅಂಚು ವಿಮಾನದ ರೆಕ್ಕೆಯಂತೆ ನುಣುಪಾಗಿಲ್ಲ. ಅವಕ್ಕೆ ಗರಗಸದ ಹಲ್ಲುಸಾಲಿನಂತೆ ಹೊರಚಾಚಿರುವ ಉಬ್ಬುಗಳಿವೆ. ಇವುಗಳಿಗೆ ಗಂತಿಗಳು (ಟ್ಯೂಬರ್ಕಲ್ಸ್‌) ಎಂದು ಹೆಸರು.

      ತಿಮಿಂಗಿಲವು ನೀರಿನಲ್ಲಿ ವೇಗವಾಗಿ ಚಲಿಸುತ್ತಿರುವಾಗ ಈ ಗಂತಿಗಳು ಮೇಲ್ಮುಖ ಒತ್ತಡವನ್ನು ಹೆಚ್ಚಿಸುತ್ತವೆ ಮತ್ತು ನೀರಿನ ಎಳೆತವನ್ನು ಕಡಿಮೆಗೊಳಿಸುತ್ತವೆ. ಹೇಗೆ? ಪ್ರಕೃತಿ ಚರಿತ್ರೆ (ಇಂಗ್ಲಿಷ್‌) ಎಂಬ ಪತ್ರಿಕೆಯು ವಿವರಿಸುವುದೇನೆಂದರೆ, ತಿಮಿಂಗಿಲವು ತುಂಬ ಕಡಿದಾದ ಕೋನಗಳಲ್ಲಿ ಮೇಲೇರುತ್ತಿರುವಾಗಲೂ ಈ ಗಂತಿಗಳು ನೀರು ಸುಗಮವಾಗಿ ವೃತ್ತಾಕಾರವಾಗಿ ಹರಿಯುತ್ತಾ ಈಜು ಅಂಗಗಳ ಮೇಲಿಂದ ವೇಗವಾಗಿ ಚಲಿಸುವಂತೆ ಮಾಡುತ್ತವೆ. ಒಂದುವೇಳೆ ಆ ಈಜು ಅಂಗಗಳ ಮುಂಭಾಗದ ಅಂಚು ನುಣುಪಾಗಿರುತ್ತಿದ್ದಲ್ಲಿ, ನೀರು ಆ ಅಂಗಗಳ ಹಿಂದೆ ಕುಲುಕಾಡುತ್ತಾ ಸುತ್ತುತ್ತಿರುತ್ತಿತ್ತು ಮತ್ತು ಮೇಲೆತ್ತುವ ಒತ್ತಡವು ಇಲ್ಲದಿರುತ್ತಿತ್ತು ಮತ್ತು ಇದರಿಂದಾಗಿ ತಿಮಿಂಗಿಲಕ್ಕೆ ಅಷ್ಟು ಚಿಕ್ಕದಾದ ಆವರ್ತನಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.

      ಈ ಆವಿಷ್ಕಾರವನ್ನು ಯಾವ ವಿಧದಲ್ಲಿ ಪ್ರಾಯೋಗಿಕವಾಗಿ ಬಳಸುವ ಸಾಧ್ಯತೆಗಳಿವೆ? ಒಂದುವೇಳೆ ವಿಮಾನಗಳ ರೆಕ್ಕೆಗಳನ್ನು ಈ ತಿಮಿಂಗಿಲಗಳ ಈಜು ಅಂಗಗಳಂತೆ ವಿನ್ಯಾಸಿಸಿದರೆ, ವಾಯುಹರಿತವನ್ನು ಬದಲಾಯಿಸಲಿಕ್ಕಾಗಿ ಹೆಚ್ಚಿನ ಮಡಿರೆಕ್ಕೆಗಳು ಇಲ್ಲವೆ ಬೇರೆ ಯಾಂತ್ರಿಕ ಸಾಧನಗಳ ಅಗತ್ಯವಿರಲಿಕ್ಕಿಲ್ಲ. ಅಲ್ಲದೆ ಅಂಥ ರೆಕ್ಕೆಗಳು ಹೆಚ್ಚು ಸುರಕ್ಷಿತವೂ ದುರಸ್ತಾಗಿಡಲು ಹೆಚ್ಚು ಸುಲಭವೂ ಆಗಿರುವವು. ಬಯೊಮೆಕ್ಯಾನಿಕ್ಸ್‌ ತಜ್ಞರಾದ ಜಾನ್‌ ಲಾಂಗ್‌ರವರ ಅಭಿಪ್ರಾಯವೇನೆಂದರೆ ಬೇಗನೆ ಒಂದು ದಿನ “ಪ್ರತಿಯೊಂದು ಜೆಟ್‌ಲೈನರ್‌ಗೆ, ಗೂನುಬೆನ್ನಿನ ತಿಮಿಂಗಿಲಗಳ ಈಜು ಅಂಗಗಳಲ್ಲಿರುವಂಥ ರೀತಿಯ ಉಬ್ಬುಗಳಿರುವುದನ್ನು ನಾವು ನೋಡುವ ಸಾಧ್ಯತೆ ಹೆಚ್ಚು.”

      ಕಡಲಕಾಗೆಯ ರೆಕ್ಕೆಗಳ ಅನುಕರಣೆ

      ಈಗಾಗಲೇ ಇರುವ ವಿಮಾನಗಳ ರೆಕ್ಕೆಗಳು ಹಕ್ಕಿಗಳ ರೆಕ್ಕೆಗಳ ನಕಲು ಎಂಬುದು ನಿಜ. ಆದರೆ ಇತ್ತೀಚೆಗೆ ಇಂಜಿನಿಯರರು ಈ ನಕಲುಮಾಡುವಿಕೆಯಲ್ಲಿ ದಾಪುಗಾಲನ್ನಿಟ್ಟಿದ್ದಾರೆ. ನ್ಯೂ ಸೈಅಂಟಿಸ್ಟ್‌ ಎಂಬ ಪತ್ರಿಕೆಯು ವರದಿಸುವುದು: “ವೇಗವಾಗಿ ಕೆಳಕ್ಕಿಳಿಯುವ, ಮೇಲಕ್ಕೇರುವ ಮತ್ತು ಒಂದೇ ಸ್ಥಳದಲ್ಲಿ ಗಾಳಿಯಲ್ಲಿ ತೂಗಾಡಲು ಕಡಲಕಾಗೆಗಿರುವ ಸಾಮರ್ಥ್ಯವುಳ್ಳ ಒಂದು ದೂರನಿಯಂತ್ರಿತ (ರಿಮೋಟ್‌-ಕಂಟ್ರೋಲ್‌) ವಾಯುನೌಕೆಯನ್ನು ಫ್ಲಾರಿಡ ವಿಶ್ವವಿದ್ಯಾನಿಲಯದ ಸಂಶೋಧಕರು ರಚಿಸಿದ್ದಾರೆ.”

      ಕಡಲಕಾಗೆಗಳು ಅವುಗಳ ರೆಕ್ಕೆಗಳ ಬಾಗಿನಲ್ಲಿ ಇಲ್ಲವೆ ಹೆಗಲಿನ ಸಂದಿಗಳಲ್ಲಿ ರೆಕ್ಕೆಗಳನ್ನು ಮಡಚುತ್ತಾ ಗಾಳಿಯಲ್ಲಿ ಚಾಕಚಕ್ಯತೆಯಿಂದ ಮನಸೆಳೆಯುವಂಥ ರೀತಿಯಲ್ಲಿ ಹಾರಾಡುತ್ತವೆ. ರೆಕ್ಕೆಯನ್ನು ಬಾಗಿಸುವಂಥ ಈ ವಿನ್ಯಾಸವನ್ನು ನಕಲುಮಾಡುವ “60 ಸೆಂಟಿಮೀಟರಿನ ಆ ವಾಯುನೌಕೆಯು, ಅದರ ರೆಕ್ಕೆಗಳನ್ನು ಚಲಿಸುವಂತೆ ಮಾಡುವ ಲೋಹ ಕಂಬಗಳ ಸಾಲನ್ನು ನಿಯಂತ್ರಿಸಲು ಒಂದು ಚಿಕ್ಕ ಮೋಟಾರನ್ನು ಬಳಸುತ್ತದೆ” ಎಂದು ಆ ಪತ್ರಿಕೆಯು ಹೇಳುತ್ತದೆ. ಚಾಣಾಕ್ಷತನದಿಂದ ವಿನ್ಯಾಸಿಸಲ್ಪಟ್ಟಿರುವ ಈ ರೆಕ್ಕೆಗಳಿಂದಾಗಿ ಆ ಚಿಕ್ಕ ವಾಯುನೌಕೆಗೆ ತೂಗಾಡಲು ಮತ್ತು ಎತ್ತರವಾದ ಕಟ್ಟಡಗಳ ಮಧ್ಯೆ ತಟ್ಟನೆ ಕೆಳಕ್ಕಿಳಿಯಲು ಸಾಧ್ಯವಾಗುತ್ತದೆ. ತುಂಬ ಕುಶಲ ಚಲನೆಯ ಇಂಥ ವಾಯುನೌಕೆಯನ್ನು, ದೊಡ್ಡ ದೊಡ್ಡ ನಗರಗಳಲ್ಲಿ ರಾಸಾಯನಿಕ ಇಲ್ಲವೆ ಜೈವಿಕ ಶಸ್ತ್ರಗಳನ್ನು ಪತ್ತೆಹಚ್ಚಲಿಕ್ಕಾಗಿ ಇನ್ನಷ್ಟು ವಿಕಸಿಸಲು ಒಂದು ರಾಷ್ಟ್ರದ ಮಿಲಿಟರಿ ಸಂಘಟನೆಯು ಆಸಕ್ತಿತೋರಿಸಿದೆ.

      ಹಲ್ಲಿಯ ಪಾದದ ನಕಲು

      ನೆಲದ ಮೇಲಿರುವ ಜೀವಿಗಳಿಂದಲೂ ನಮಗೆ ಬಹಳಷ್ಟು ಕಲಿಯಲಿಕ್ಕಿದೆ. ಉದಾಹರಣೆಗಾಗಿ, ಗೆಕೊ ಎಂದು ಕರೆಯಲಾಗುವ ಮನೆಹಲ್ಲಿಗೆ, ಗೋಡೆಗಳ ಮೇಲೇರುವ ಮತ್ತು ಛಾವಣಿಗಳಿಗೆ ಮೇಲೆಕೆಳಗಾಗಿ ಅಂಟಿಕೊಳ್ಳುವ ಸಾಮರ್ಥ್ಯವಿದೆ. ಈ ಜೀವಿಯು ಅದರ ಆಶ್ಚರ್ಯಕರ ಸಾಮರ್ಥ್ಯಕ್ಕಾಗಿ ಬೈಬಲ್‌ ಸಮಯಗಳಲ್ಲೂ ಪ್ರಸಿದ್ಧವಾಗಿತ್ತು. (ಜ್ಞಾನೋಕ್ತಿ 30:28) ಗುರುತ್ವಾಕರ್ಷಣವನ್ನು ನಿರೋಧಿಸಲು ಈ ಹಲ್ಲಿಗಿರುವ ಸಾಮರ್ಥ್ಯದ ಗುಟ್ಟೇನು?

      ಗಾಜಿನಷ್ಟು ನುಣುಪಾದ ಮೇಲ್ಮೈಗಳಿಗೂ ಅಂಟಿಕೊಳ್ಳಲು ಈ ಹಲ್ಲಿಗಿರುವ ಸಾಮರ್ಥ್ಯವು, ಅದರ ಪಾದಗಳ ಮೇಲೆಲ್ಲಾ ಇರುವ ಸೂಕ್ಷ್ಮ ಬಿರುಗೂದಲುಗಳಲ್ಲಿ (ಸೀಟೀ) ಇದೆ. ಆ ಪಾದಗಳಿಂದ ಯಾವುದೇ ಅಂಟು ಬರುವುದಿಲ್ಲ ಬದಲಿಗೆ, ಅವು ಅತಿ ಸೂಕ್ಷ್ಮವಾದ ಆಣ್ವಿಕ ಶಕ್ತಿಯನ್ನು ಬಳಸುತ್ತವೆ. ಎರಡೂ ಮೇಲ್ಮೈಗಳಲ್ಲಿರುವ ಅಣುಗಳು ಒಂದಕ್ಕೊಂದು ಅಂಟಿಕೊಳ್ಳಲು ಕಾರಣ, ವಾನ್‌ಡರ್‌ ವಾಲ್ಸ್‌ ಶಕ್ತಿಗಳು ಎಂದು ಕರೆಯಲಾಗುವ ಅತಿ ದುರ್ಬಲವಾದ ಆಕರ್ಷಕ ಶಕ್ತಿಗಳಾಗಿವೆ. ಸಾಮಾನ್ಯವಾಗಿ, ಗುರುತ್ವಾಕರ್ಷಣಾ ಶಕ್ತಿಯು ಈ ವಾನ್‌ಡರ್‌ ವಾಲ್ಸ್‌ ಶಕ್ತಿಗಳನ್ನು ಸುಲಭವಾಗಿ ಅಡಗಿಸುತ್ತದೆ. ಈ ಕಾರಣದಿಂದಲೇ ನೀವು ನಿಮ್ಮ ಕೈಗಳನ್ನು ಗೋಡೆಗೆ ಒತ್ತಿಕೊಂಡು ಹತ್ತಲಾರಿರಿ. ಆದರೆ ಹಲ್ಲಿಗಿರುವ ಆ ಸೂಕ್ಷ್ಮ ಬಿರುಗೂದಲುಗಳು, ಗೋಡೆಯೊಂದಿಗೆ ಅದಕ್ಕಿರುವ ಸಂಪರ್ಕದ ಕ್ಷೇತ್ರವನ್ನು ಹೆಚ್ಚಿಸುತ್ತದೆ. ಈ ವಾನ್‌ಡರ್‌ ವಾಲ್ಸ್‌ ಶಕ್ತಿಗಳು ಹಲ್ಲಿಯ ಪಾದದಲ್ಲೆಲ್ಲ ಇರುವ ಸಾವಿರಾರು ಬಿರುಗೂದಲಿಗೆ ತಗಲುವುದರಿಂದ ಉಲ್ಬಣಿಸುವಾಗ, ಆ ಪುಟ್ಟ ಹಲ್ಲಿಯ ಭಾರವನ್ನು ಹಿಡಿದಿಡುವಷ್ಟು ಆಕರ್ಷಕ ಶಕ್ತಿಯನ್ನು ಉತ್ಪಾದಿಸುತ್ತವೆ.

      ಈ ಆವಿಷ್ಕಾರವನ್ನು ಯಾವುದಕ್ಕಾಗಿ ಬಳಸಬಹುದು? ಹಲ್ಲಿಯ ಪಾದಗಳ ಅನುಕರಣೆಮಾಡುತ್ತಾ ತಯಾರಿಸಲಾಗುವಂಥ ಸಿಂಥೆಟಿಕ್‌ ಉತ್ಪನ್ನಗಳನ್ನು, ಪ್ರಕೃತಿಯಿಂದಲೇ ನಕಲುಮಾಡಲಾಗಿರುವ ಇನ್ನೊಂದು ಉತ್ಪನ್ನವಾದ ವೆಲ್‌ಕ್ರೋಗೆ ಬದಲಿಯಾಗಿ ಉಪಯೋಗಿಸಸಾಧ್ಯವಿದೆ.a ಈ ಉತ್ಪನ್ನದಿಂದ ತಯಾರಿಸಲ್ಪಡುವ “ಗೆಕೊ ಪಟ್ಟೆಯು,” “ಎಲ್ಲಿ ರಾಸಾಯನಿಕ ಅಂಟುಸಾಮಗ್ರಿಗಳನ್ನು ಬಳಸಲು ಸಾಧ್ಯವಿಲ್ಲವೊ ಅಂಥ ವೈದ್ಯಕೀಯ ಉದ್ದೇಶಗಳಿಗಾಗಿ” ವಿಶೇಷವಾಗಿ ಉಪಯುಕ್ತವಾಗಿರುವುದು ಎಂದು ಒಬ್ಬ ಸಂಶೋಧಕನು ಹೇಳಿರುವುದನ್ನು ದಿ ಎಕಾನಮಿಸ್ಟ್‌ ಎಂಬ ಪತ್ರಿಕೆಯು ಉಲ್ಲೇಖಿಸುತ್ತದೆ.

      ಕೀರ್ತಿ ಯಾರಿಗೆ ಸಲ್ಲಬೇಕು?

      ಚೇಳಿನಂತೆ ನಡೆಯುವ, ಹಲವಾರು ಕಾಲುಗಳುಳ್ಳ ರೊಬಾಟ್‌ ಯಂತ್ರವನ್ನು ನ್ಯಾಷನಲ್‌ ಏರೋನೋಟಿಕ್ಸ್‌ ಆ್ಯಂಡ್‌ ಸ್ಪೇಸ್‌ ಆ್ಯಡ್‌ಮಿನಿಸ್ಟ್ರೇಷನ್‌ ಈಗ ತಯಾರಿಸುತ್ತಾ ಇದೆ. ಮತ್ತು ಫಿನ್ಲೆಂಡ್‌ನ ಇಂಜಿನಿಯರರು ಈಗಾಗಲೇ, ಆರು ಕಾಲುಗಳುಳ್ಳ ಒಂದು ಟ್ರ್ಯಾಕ್ಟರನ್ನು ತಯಾರಿಸಿದ್ದಾರೆ. ಇದು, ದಾರಿಯಲ್ಲಿ ಎದುರಾಗುವ ಯಾವುದೇ ತಡೆಗಳನ್ನು ಒಂದು ದೈತ್ಯಾಕಾರದ ಕೀಟದಂತೆ ಹತ್ತಿ ದಾಟಿಕೊಂಡು ಹೋಗಬಲ್ಲದು. ಇನ್ನೂ ಕೆಲವು ಸಂಶೋಧಕರು, ಪೈನ್‌ ಮರದ ಕಾಯಿಯು ಹವಾಮಾನಕ್ಕನುಸಾರ ತೆರೆದುಕೊಳ್ಳುವ ಮತ್ತು ಮುಚ್ಚಿಕೊಳ್ಳುವ ವಿಧವನ್ನು ನಕಲುಮಾಡುತ್ತಾ ಚಿಕ್ಕ ಬೀಳುಮುಚ್ಚಳಗಳಿರುವಂಥ ಬಟ್ಟೆಯನ್ನು ರಚಿಸಿದ್ದಾರೆ. ಬಾಕ್ಸ್‌ಫಿಷ್‌ ಮೀನಿಗೆ, ಚಲನೆಯ ದಿಕ್ಕಿನಲ್ಲಿ ಕಡಿಮೆ ಪ್ರತಿರೋಧವಿರುವ ಆಶ್ಚರ್ಯಕರವಾದ ವಿನ್ಯಾಸವಿದೆ ಮತ್ತು ಇದನ್ನು ನಕಲುಮಾಡುವ ಒಂದು ವಾಹನವನ್ನು ಕಾರ್‌ ಉತ್ಪಾದಕ ಕಂಪನಿಯೊಂದು ತಯಾರಿಸುತ್ತಿದೆ. ಮತ್ತಿತರ ಸಂಶೋಧಕರು, ಆಬಲೋನಿ ಚಿಪ್ಪುಗಳಲ್ಲಿರುವ ಆಘಾತ ಚೋಷಕ ಅಂಶಗಳ ಬಗ್ಗೆ ಶೋಧ ನಡೆಸುತ್ತಿದ್ದಾರೆ. ಅವರ ಉದ್ದೇಶ, ದೇಹಕ್ಕಾಗಿ ಹೆಚ್ಚು ಹಗುರವಾದ ಆದರೆ ಹೆಚ್ಚು ಗಡುಸಾದ ರಕ್ಷಾಕವಚವನ್ನು ತಯಾರಿಸುವುದಾಗಿದೆ.

      ಪ್ರಕೃತಿ ಎಷ್ಟೊಂದು ಒಳ್ಳೊಳ್ಳೆ ಉಪಾಯಗಳ ಭಂಡಾರವಾಗಿದೆಯೆಂದರೆ, ಸಂಶೋಧಕರು ಸಾವಿರಾರು ವಿಭಿನ್ನ ಜೀವಶಾಸ್ತ್ರೀಯ ವ್ಯೂಹಗಳನ್ನು ಪಟ್ಟಿಮಾಡುವ ದತ್ತಾಂಶದ ಸಂಗ್ರಹವನ್ನು ಇಟ್ಟಿದ್ದಾರೆ. “ವಿನ್ಯಾಸದಲ್ಲಿ ಇರುವ ಯಾವುದೇ ಸಮಸ್ಯೆಗಳಿಗೆ ಪ್ರಾಕೃತಿಕ ಪರಿಹಾರಗಳನ್ನು” ಈ ದತ್ತಾಂಶ ಸಂಗ್ರಹದಲ್ಲಿ ವಿಜ್ಞಾನಿಗಳು ಹುಡುಕಬಹುದು ಎಂದು ದಿ ಎಕಾನಮಿಸ್ಟ್‌ ಪತ್ರಿಕೆಯು ಹೇಳುತ್ತದೆ. ಈ ದತ್ತಾಂಶ ಸಂಗ್ರಹದಲ್ಲಿರುವ ಪ್ರಾಕೃತಿಕ ವ್ಯೂಹಗಳನ್ನು “ಜೈವಿಕ ಹಕ್ಕುಪತ್ರಗಳು” ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಹಕ್ಕುಪತ್ರವುಳ್ಳವರು ಎಂದು ಹೇಳುವಾಗ ಅದು, ಒಂದು ಹೊಸ ಉಪಾಯ ಇಲ್ಲವೆ ಯಂತ್ರವನ್ನು ಕಾನೂನುಬದ್ಧವಾಗಿ ನೋಂದಾಯಿಸಿರುವ ಒಬ್ಬ ವ್ಯಕ್ತಿ ಇಲ್ಲವೆ ಕಂಪೆನಿಗೆ ಸೂಚಿಸುತ್ತದೆ. ಆದುದರಿಂದ, ಜೈವಿಕ ಹಕ್ಕುಪತ್ರ ದತ್ತಾಂಶಸಂಗ್ರಹದ ಬಗ್ಗೆ ಚರ್ಚಿಸುತ್ತಾ ದಿ ಎಕಾನಮಿಸ್ಟ್‌ ಪತ್ರಿಕೆಯು ಹೇಳುವುದು: “ಜೀವಾನುಕರಣ ವಿನ್ಯಾಸಗಳನ್ನು ‘ಜೈವಿಕ ಹಕ್ಕುಪತ್ರಗಳು’ ಎಂದು ಕರೆಯುವ ಮೂಲಕ, ವಾಸ್ತವದಲ್ಲಿ ಪ್ರಕೃತಿಯು ಹಕ್ಕುಪತ್ರವುಳ್ಳದ್ದೆಂಬ ಸಂಗತಿಯನ್ನು ಸಂಶೋಧಕರು ಒತ್ತಿಹೇಳುತ್ತಿದ್ದಾರೆ ಅಷ್ಟೇ.”

      ಆದರೆ ಈ ಎಲ್ಲ ಒಳ್ಳೊಳ್ಳೆ ಉಪಾಯಗಳು ಪ್ರಕೃತಿಗೆ ಹೇಗೆ ಸಿಕ್ಕಿದವು? ಅನೇಕ ಸಂಶೋಧಕರು ಪ್ರಕೃತಿಯಲ್ಲಿ ಚಮತ್ಕಾರದಿಂದ ಬಂದಿರುವಂತೆ ತೋರುವ ವಿನ್ಯಾಸಗಳು, ಕೋಟಿಗಟ್ಟಲೆ ವರ್ಷಗಳ ಜೀವವಿಕಾಸದ ಪರೀಕ್ಷಾಪ್ರಯೋಗಗಳಿಂದಾಗಿ ಉಂಟಾಯಿತೆಂದು ಹೇಳುವರು. ಆದರೆ ಇತರ ಸಂಶೋಧಕರಿಗಿರುವ ಅಭಿಪ್ರಾಯವೇ ಬೇರೆ. ಸೂಕ್ಷ್ಮಜೀವಿವಿಜ್ಞಾನಿ ಮೈಕಲ್‌ ಬೀಹೀ, 2005ರಲ್ಲಿ ದ ನ್ಯೂ ಯಾರ್ಕ್‌ ಟೈಮ್ಸ್‌ ವಾರ್ತಾಪತ್ರಿಕೆಯಲ್ಲಿ ಹೀಗೆ ಬರೆದರು: “[ಪ್ರಕೃತಿಯಲ್ಲಿ] ಸ್ಪಷ್ಟವಾಗಿ ಕಂಡುಬರುವ ವಿನ್ಯಾಸವು ಮನವರಿಕೆಮಾಡುವಂಥ ರೀತಿಯಲ್ಲಿ ಈ ಸರಳ ತರ್ಕವನ್ನು ಪ್ರಸ್ತುತಪಡಿಸುತ್ತದೆ: ನಡೆಯುವ, ತೋರುವ, ಹರಟುವ ರೀತಿ ಬಾತುಕೋಳಿಯಂತಿದ್ದು, ಅದಲ್ಲವೆಂದು ಹೇಳಲು ಬೇರಾವುದೇ ಪುರಾವೆಯಿಲ್ಲದಿರುವಾಗ, ಅದು ಬಾತುಕೋಳಿಯೇ ಎಂದು ಹೇಳಲು ನಮಗೆ ದೃಢವಾದ ಆಧಾರವಿದೆ.” ಅವರ ತೀರ್ಮಾನವೇನು? “ಯಾವುದನ್ನಾದರೂ ಜಾಗರೂಕತೆಯಿಂದ ರಚಿಸಲಾಗಿದೆಯೆಂಬುದು ತುಂಬ ಸ್ಪಷ್ಟವಾಗಿ ತೋರಿಬರುವಾಗ, ಆ ವಾಸ್ತವಾಂಶವನ್ನು ಅಲ್ಲಗಳೆಯಬಾರದು.”

      ವಾಯುನೌಕೆಗಾಗಿ ಹೆಚ್ಚು ಸುರಕ್ಷಿತವಾದ, ಹೆಚ್ಚು ಕಾರ್ಯದಕ್ಷ ರೆಕ್ಕೆಗಳನ್ನು ವಿನ್ಯಾಸಿಸುವ ಒಬ್ಬ ಇಂಜಿನಿಯರ್‌ ತನ್ನ ವಿನ್ಯಾಸಕ್ಕಾಗಿ ಕೀರ್ತಿ ಪಡೆಯಲರ್ಹನು. ಅದೇ ರೀತಿಯಲ್ಲಿ, ಬಹುಕಾರ್ಯೋಪಯೋಗಿ ಬ್ಯಾಂಡೇಜನ್ನು, ಹೆಚ್ಚು ಹಿತವಾದ ಬಟ್ಟೆಯನ್ನು ಅಥವಾ ಹೆಚ್ಚು ಉತ್ತಮವಾಗಿ ಕೆಲಸಮಾಡುವ ಮೋಟಾರು ವಾಹನವನ್ನು ಕಂಡುಹಿಡಿದ ಹೆಗ್ಗಳಿಕೆ ಅದರ ಅನ್ವೇಷಕರಿಗೆ ಸಲ್ಲುವುದು ಉಚಿತ. ಆದರೆ, ಇನ್ನೊಬ್ಬ ವ್ಯಕ್ತಿಯ ರಚನೆಯನ್ನು ನಕಲುಮಾಡಿ, ಅದಕ್ಕೊಬ್ಬ ಮೂಲ ವಿನ್ಯಾಸಕನಿದ್ದಾನೆಂಬುದನ್ನು ಅಂಗೀಕರಿಸಲು ಒಪ್ಪದವನು ಇಲ್ಲವೆ ಅವನಿಗೆ ಕೀರ್ತಿ ಸಲ್ಲಿಸದಿರುವ ತಯಾರಕನನ್ನು ಪಾತಕಿಯೆಂದು ದೃಷ್ಟಿಸಲ್ಪಡುವ ಸಾಧ್ಯತೆಯಿದೆ.

      ಹಾಗೆಯೇ ಉಚ್ಚ ತರಬೇತಿಯುಳ್ಳ ಸಂಶೋಧಕರು ತುಂಬ ಕ್ಲಿಷ್ಟಕರವಾದ ಇಂಜಿನಿಯರಿಂಗ್‌ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ಪ್ರಕೃತಿಯಲ್ಲಿನ ವ್ಯೂಹಗಳನ್ನು ಸಾಧಾರಣಮಟ್ಟಿಗೆ ನಕಲುಮಾಡಿ ಅವುಗಳ ಮೂಲ ಉಪಾಯವನ್ನು ರಚಿಸುವ ಬುದ್ಧಿವಂತಿಕೆಗಾಗಿ, ಯಾರ ಬುದ್ಧಿವಂತಿಕೆಯೂ ಇಲ್ಲದೆ ನಡೆದಂಥ ಜೀವವಿಕಾಸಕ್ಕೆ ಕೀರ್ತಿಸಲ್ಲಿಸುವುದು ನಿಮಗೆ ತರ್ಕಬದ್ಧವೆಂದು ಅನಿಸುತ್ತದೊ? ನಕಲು ಮಾಡಿರುವ ಉತ್ಪನ್ನಕ್ಕೇ ಒಬ್ಬ ಬುದ್ಧಿಶಾಲಿ ವಿನ್ಯಾಸಕನ ಅಗತ್ಯವಿರುವಲ್ಲಿ, ಅಸಲಿ ಉತ್ಪನ್ನದ ಕುರಿತೇನು? ವಾಸ್ತವದಲ್ಲಿ ಯಾರಿಗೆ ಹೆಚ್ಚಿನ ಕೀರ್ತಿ ಸಲ್ಲಬೇಕು? ಅತಿ ಕುಶಲ ಕಲಾವಿದನಿಗೊ, ಅವನ ವಿಧಾನಗಳನ್ನು ನಕಲುಮಾಡುತ್ತಿರುವ ವಿದ್ಯಾರ್ಥಿಗೊ?

      ಒಂದು ತರ್ಕಬದ್ಧ ತೀರ್ಮಾನ

      ಪ್ರಕೃತಿಯಲ್ಲಿನ ವಿನ್ಯಾಸದ ಸಾಕ್ಷ್ಯವನ್ನು ವಿಮರ್ಶಿಸಿದ ಬಳಿಕ, ಚಿಂತನಾಶೀಲರಾದ ಅನೇಕ ಜನರು ಕೀರ್ತನೆಗಾರನ ಈ ಭಾವನೆಗಳನ್ನು ಪ್ರತಿಧ್ವನಿಸುತ್ತಾರೆ. ಅವನು ಬರೆದುದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.” (ಕೀರ್ತನೆ 104:24) ಬೈಬಲ್‌ ಲೇಖಕನಾದ ಪೌಲನು ಇದೇ ತೀರ್ಮಾನಕ್ಕೆ ಬಂದನು. ಅವನು ಬರೆದದ್ದು: “ಕಣ್ಣಿಗೆ ಕಾಣದಿರುವ [ದೇವರ] ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.”​—⁠ರೋಮಾಪುರ 1:19, 20.

      ಬೈಬಲನ್ನು ಗೌರವಿಸುವ ಮತ್ತು ದೇವರನ್ನು ನಂಬುವ ಅನೇಕ ಪ್ರಾಮಾಣಿಕ ಜನರ ವಾದವೇನೆಂದರೆ, ಪ್ರಕೃತಿಯಲ್ಲಿನ ಅದ್ಭುತಗಳನ್ನು ಸೃಷ್ಟಿಸಲಿಕ್ಕಾಗಿ ದೇವರು ಜೀವವಿಕಾಸವನ್ನು ಬಳಸಿದ್ದಿರಬಹುದೆಂದೇ. ಆದರೆ ಬೈಬಲ್‌ ಏನು ಬೋಧಿಸುತ್ತದೆ? (g 9/06)

      [ಪಾದಟಿಪ್ಪಣಿ]

      a ವೆಲ್‌ಕ್ರೋ, ಬರ್ಡಾಕ್‌ ಗಿಡದ ಬೀಜಗಳಲ್ಲಿ ಕಂಡುಬರುವ ವಿನ್ಯಾಸದ ಮೇಲೆ ಆಧರಿತವಾಗಿರುವ ಉತ್ಪನ್ನವಾಗಿದ್ದು, ಎರಡು ಪಟ್ಟಿಗಳನ್ನು ಒಂದರ ಮೇಲೊಂದು ಇಟ್ಟು ಅಮುಕಿದಾಗ ಹಿಡಿದುಕೊಳ್ಳುವ ಬಂಧನಿಯಾಗಿದೆ.

      [ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

      ಇಷ್ಟೊಂದು ಒಳ್ಳೊಳ್ಳೆ ಉಪಾಯಗಳು ಪ್ರಕೃತಿಗೆ ಹೇಗೆ ಸಿಕ್ಕಿದವು?

      [ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

      ಪ್ರಕೃತಿಯ ಸ್ವಾಮ್ಯದ ಹಕ್ಕುಳ್ಳವನು ಯಾರು?

      [ಪುಟ 7ರಲ್ಲಿರುವ ಚೌಕ/ಚಿತ್ರಗಳು]

      ನಕಲು ಮಾಡಿರುವ ಉತ್ಪನ್ನಕ್ಕೇ ಒಬ್ಬ ಬುದ್ಧಿಶಾಲಿ ವಿನ್ಯಾಸಕನ ಅಗತ್ಯವಿರುವಲ್ಲಿ, ಅಸಲಿ ಉತ್ಪನ್ನದ ಕುರಿತೇನು?

      ತುಂಬ ಕುಶಲ ಚಲನೆಯ ಈ ವಾಯುನೌಕೆಯ ರೆಕ್ಕೆಗಳು, ಕಡಲಕಾಗೆಯ ರೆಕ್ಕೆಯ ನಕಲಾಗಿವೆ

      ಹಲ್ಲಿಯ ಪಾದಗಳು ಎಂದೂ ಕೊಳೆಯಾಗುವುದಿಲ್ಲ, ಅವು ಹೆಜ್ಜೆಗುರುತನ್ನು ಬಿಟ್ಟುಹೋಗುವುದಿಲ್ಲ, ಟೆಫ್ಲಾನ್‌ ಅನ್ನು ಬಿಟ್ಟು ಬೇರಾವುದೇ ಮೇಲ್ಮೈಗೆ ಹತ್ತಿಕೊಳ್ಳುತ್ತವೆ ಮತ್ತು ಸುಲಭವಾಗಿ ಅಂಟಿಕೊಳ್ಳುತ್ತವೆ ಹಾಗೂ ಬಿಡಿಸಿಕೊಳ್ಳುತ್ತವೆ. ಸಂಶೋಧಕರು ಅವುಗಳನ್ನು ನಕಲು ಮಾಡಲು ಪ್ರಯತ್ನಿಸುತ್ತಿದ್ದಾರೆ

      ಬಾಕ್ಸ್‌ಫಿಷ್‌ ಮೀನಿಗೆ, ಚಲನೆಯ ದಿಕ್ಕಿನಲ್ಲಿ ಕಡಿಮೆ ಪ್ರತಿರೋಧವಿರುವ ವಿಸ್ಮಯಕಾರಿ ವಿನ್ಯಾಸವಿದೆ. ಅಂಥದ್ದೇ ವಾಹನವೊಂದನ್ನು ರಚಿಸುವ ಉಪಾಯಕ್ಕೆ ಇದು ಸ್ಫೂರ್ತಿಯಾಗಿದೆ

      [ಕೃಪೆ]

      ವಿಮಾನ: Kristen Bartlett/ University of Florida; ಹಲ್ಲಿಯ ಪಾದ: Breck P. Kent; ಬಾಕ್ಸ್‌ಫಿಷ್‌ ಮತ್ತು ಕಾರು: Mercedes-Benz USA

      [ಪುಟ 8ರಲ್ಲಿರುವ ಚೌಕ/ಚಿತ್ರಗಳು]

      ಹುಟ್ಟರಿವಿನಿಂದಲೇ ವಿವೇಕಿಗಳಾಗಿರುವ ಸಂಚಾರ ನಿರ್ದೇಶಕರು

      ಅನೇಕ ಜೀವಿಗಳು ಭೂಗ್ರಹದಲ್ಲಿ ಸಂಚರಿಸುವ ವಿಧದಿಂದ ಹುಟ್ಟರಿವಿನಿಂದಲೇ ಅವುಗಳಿಗಿರುವ ವಿವೇಕ ತೋರಿಬರುತ್ತದೆ. ಎರಡು ಉದಾಹರಣೆಗಳನ್ನು ಪರಿಗಣಿಸಿರಿ.

      ◼ ಇರುವೆ ಸಂಚಾರ ನಿಯಂತ್ರಣ ಆಹಾರವನ್ನು ಹುಡುಕಿಕೊಂಡು ಹೋಗುವ ಇರುವೆಗಳು ತಮ್ಮ ಗೂಡುಗಳಿಗೆ ಹಿಂದಿರುಗುವುದು ಹೇಗೆ? ಇರುವೆಗಳು ವಾಸನೆಯ ಗುರುತುಗಳನ್ನು ಬಿಟ್ಟುಹೋಗುವುದಲ್ಲದೆ, ಕೆಲವು ಇರುವೆಗಳು ಮನೆಗೆ ಸುಲಭವಾಗಿ ಹಿಂದಿರುಗುವಂತೆ ಸಹಾಯಮಾಡುವ ಹಾದಿಗಳನ್ನು ತಯಾರಿಸಲು ರೇಖಾಜ್ಯಾಮಿತಿಯನ್ನು ಉಪಯೋಗಿಸುತ್ತವೆ. ಉದಾಹರಣೆಗಾಗಿ, ಫೇರೋ ಆ್ಯಂಟ್ಸ್‌ ಎಂಬ ಹೆಸರಿನ ಇರುವೆಗಳು, “ಗೂಡಿನಿಂದ ಸೂರ್ಯನ ಕಿರಣಗಳಂತೆ ಹರಡಿರುವಂಥ ಹಾದಿಗಳನ್ನು ರಚಿಸುತ್ತವೆ. ಮುಂದೆ ಈ ಹಾದಿಗಳು 50ರಿಂದ 60 ಡಿಗ್ರಿ ಕೋನದಲ್ಲಿ ಕವಲೊಡೆಯುತ್ತವೆ” ಎಂದು ನ್ಯೂ ಸೈಯಂಟಿಸ್ಟ್‌ ಪತ್ರಿಕೆಯು ಹೇಳುತ್ತದೆ. ಈ ವಿನ್ಯಾಸದ ವಿಶೇಷತೆ ಏನು? ಒಂದು ಇರುವೆಯು ಗೂಡಿಗೆ ಹಿಂದಿರುಗುತ್ತಿರುವಾಗ ಆ ಹಾದಿಯು ಕವಲೊಡೆದಿರುವ ಬಿಂದುವಿಗೆ ಬಂದಾಗ ಅದು ಹುಟ್ಟರಿವಿನಿಂದ ಹೆಚ್ಚು ಓರೆಯಾಗಿರದ ಹಾದಿಯನ್ನು ಹಿಡಿದು ನೇರವಾಗಿ ಮುಂದಕ್ಕೆ ಹೋಗುತ್ತದೆ ಮತ್ತು ಹೀಗೆ ಖಂಡಿತವಾಗಿ ಗೂಡನ್ನು ತಲಪುತ್ತದೆ. ಆ ಲೇಖನವು ಹೇಳುವುದು: “ಕವಲೊಡೆಯುವ ಹಾದಿಗಳ ಈ ರೇಖಾಜ್ಯಾಮಿತಿಯು, ಆ ಹಾದಿಗಳ ಜಾಲದಲ್ಲಿ ಇರುವೆಗಳು ಸರಿಯಾದ ದಿಕ್ಕಿನಲ್ಲಿ ಓಡಾಡುವುದಕ್ಕೆ ಮತ್ತು ವಿಶೇಷವಾಗಿ ಅವು ಒಂದೇ ಹಾದಿಯಲ್ಲಿ ವಿರುದ್ಧ ದಿಕ್ಕುಗಳಲ್ಲಿ ಚಲಿಸುವಾಗ ಲಾಭದಾಯಕವಾಗಿದೆ. ಇದರಿಂದಾಗಿ, ಇರುವೆಗಳು ದಿಕ್ಕುತಪ್ಪಿ ತಮ್ಮ ಶಕ್ತಿ ಕಳಕೊಳ್ಳುವುದು ತಪ್ಪುತ್ತದೆ.”

      ◼ ಪಕ್ಷಿ ದಿಕ್ಸೂಚಿಗಳು ಅನೇಕ ಪಕ್ಷಿಗಳು ಚಾಚೂತಪ್ಪದಷ್ಟು ನಿಖರವಾಗಿ ದೀರ್ಘ ಅಂತರಗಳನ್ನು ದಾಟುತ್ತವೆ ಮತ್ತು ಎಲ್ಲ ವಿಧದ ಹವಾಮಾನದಲ್ಲೂ ಪ್ರಯಾಣಿಸುತ್ತವೆ. ಹೇಗೆ? ಪಕ್ಷಿಗಳು ಭೂಮಿಯ ಕಾಂತಕ್ಷೇತ್ರವನ್ನು ಗುರುತಿಸಬಲ್ಲವೆಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಆದರೆ ಭೂಮಿಯ “ಕಾಂತಕ್ಷೇತ್ರದ ರೇಖೆಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭಿನ್ನವಾಗಿರುತ್ತವೆ ಮತ್ತು ಯಾವಾಗಲೂ ನಿಜವಾದ ಉತ್ತರದಿಕ್ಕಿಗೆ ಸೂಚಿಸುವುದಿಲ್ಲ” ಎಂದು ಸೈಯನ್ಸ್‌ ಪತ್ರಿಕೆಯು ಹೇಳುತ್ತದೆ. ವಲಸೆಹೋಗುತ್ತಿರುವ ಪಕ್ಷಿಗಳು ತಪ್ಪಾದ ದಿಕ್ಕಿನಲ್ಲಿ ಹಾರಿಹೋಗದಂತೆ ಯಾವುದು ತಡೆಯುತ್ತದೆ? ಪಕ್ಷಿಗಳು ತಮ್ಮ ಆಂತರಿಕ ದಿಕ್ಸೂಚಿಯನ್ನು, ಮುಳುಗುವ ಸೂರ್ಯನಿಗೆ ತಕ್ಕಂತೆ ಪ್ರತಿ ಸಾಯಂಕಾಲ ಸರಿಹೊಂದಿಸುತ್ತವೆಂಬುದು ವ್ಯಕ್ತ. ಆದರೆ ಸೂರ್ಯ ಅಸ್ತಮಿಸುವ ಸ್ಥಾನವು ಭೂಮಿಯ ಅಕ್ಷಾಂಶ ಮತ್ತು ಋತುಗಳಿಗನುಸಾರ ಬದಲಾಗುತ್ತಾ ಇರುತ್ತದೆ. ಆದುದರಿಂದ ಈ ಪಕ್ಷಿಗಳು, “ವರ್ಷದ ಸಮಯ ಯಾವುದೆಂದು ಹೇಳುವ [ಅವುಗಳಲ್ಲಿನ] ಒಂದು ಜೈವಿಕ ಗಡಿಯಾರ”ದಿಂದಾಗಿ ಆ ಬದಲಾವಣೆಗಳಿಗೆ ಸರಿದೂಗಲು ಶಕ್ತವಾಗುತ್ತವೆಂಬುದನ್ನು ಸಂಶೋಧಕರು ನೆನಸುತ್ತಾರೆಂದು ಸೈಯನ್ಸ್‌ ಪತ್ರಿಕೆ ಹೇಳುತ್ತದೆ.

      ಇರುವೆಗೆ ರೇಖಾಜ್ಯಾಮಿತಿಯ ತಿಳಿವಳಿಕೆಯನ್ನು ಪ್ರೋಗ್ರ್ಯಾಮ್‌ ಮಾಡಿಕೊಟ್ಟವರು ಯಾರು? ಪಕ್ಷಿಗಳಿಗೆ ಒಂದು ದಿಕ್ಸೂಚಿ, ಒಂದು ಜೈವಿಕ ಗಡಿಯಾರ ಮತ್ತು ಇವುಗಳು ರವಾನಿಸುವ ಮಾಹಿತಿಯನ್ನು ಅರ್ಥಮಾಡಿಕೊಳ್ಳುವ ಸಮರ್ಥ ಮಿದುಳನ್ನು ಕೊಟ್ಟವರು ಯಾರು? ಬುದ್ಧಿವಂತಿಕೆಯಿಲ್ಲದ ಜೀವವಿಕಾಸವೊ? ಇಲ್ಲವೆ ಬುದ್ಧಿವಂತಿಕೆಯುಳ್ಳ ಒಬ್ಬ ಸೃಷ್ಟಿಕರ್ತನೊ?

      [ಕೃಪೆ]

      © E.J.H. Robinson 2004

  • ಜೀವಿಗಳ ಸೃಷ್ಟಿಗಾಗಿ ದೇವರು ವಿಕಾಸವನ್ನು ಬಳಸಿದನೊ?
    ಎಚ್ಚರ!—2006 | ಅಕ್ಟೋಬರ್‌
    • ಜೀವಿಗಳ ಸೃಷ್ಟಿಗಾಗಿ ದೇವರು ವಿಕಾಸವನ್ನು ಬಳಸಿದನೊ?

      “[ಯೆಹೋವನೇ] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”​—⁠ಪ್ರಕಟನೆ 4:⁠11.

      ಚಾರ್ಲ್ಸ್‌ ಡಾರ್ವಿನ್‌ ಜೀವವಿಕಾಸದ ಸಿದ್ಧಾಂತವನ್ನು ಜನಪ್ರಿಯಗೊಳಿಸಿದ ಸ್ವಲ್ಪ ಸಮಯಾನಂತರ, ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದ ಅನೇಕ ಪಂಗಡಗಳು ದೇವರಿದ್ದಾನೆಂಬ ತಮ್ಮ ನಂಬಿಕೆಯನ್ನು ಜೀವವಿಕಾಸದ ಸಿದ್ಧಾಂತದೊಂದಿಗೆ ಬೆಸೆಯಲು ಮಾರ್ಗಗಳಿಗಾಗಿ ಹುಡುಕಲಾರಂಭಿಸಿದರು.

      ಇಂದು ಹೆಚ್ಚಿನ ಪ್ರಮುಖ “ಕ್ರೈಸ್ತ” ಧಾರ್ಮಿಕ ಗುಂಪುಗಳು, ಜೀವಿಗಳ ಸೃಷ್ಟಿಗಾಗಿ ದೇವರು ಯಾವುದೋ ರೀತಿಯಲ್ಲಿ ಜೀವವಿಕಾಸದ ಪ್ರಕ್ರಿಯೆಯನ್ನು ಬಳಸಿರಬೇಕೆಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿರುವಂತೆ ತೋರುತ್ತದೆ. ಇನ್ನು ಕೆಲವರು ‘ಆಸ್ತಿಕವಾದಿ ಜೀವವಿಕಾಸ ಸಿದ್ಧಾಂತ’ ಎಂಬ ಬೋಧನೆಯನ್ನು ನಂಬುತ್ತಾರೆ. ಈ ಬೋಧನೆಗನುಸಾರ, ಜೀವರಾಶಿಗಳು ನಿರ್ಜೀವ ರಾಸಾಯನಿಕಗಳಿಂದ ವಿಕಾಸವಾಗುತ್ತಾ ಕಟ್ಟಕಡೆಗೆ ಮಾನವಜಾತಿಯನ್ನು ಉತ್ಪಾದಿಸುವಂಥ ವಿಧದಲ್ಲಿ ದೇವರು ಈ ವಿಶ್ವವನ್ನು ಮುಂಚೆಯೇ ಪ್ರೋಗ್ರ್ಯಾಮ್‌ ಮಾಡಿಟ್ಟಿದ್ದನು. ಈ ಪ್ರಕ್ರಿಯೆಯು ಆರಂಭವಾದ ಬಳಿಕ ದೇವರು ಮಧ್ಯೆ ಕೈಹಾಕಲಿಲ್ಲವೆಂಬುದು ಆ ಬೋಧನೆಯನ್ನು ನಂಬುವವರ ಎಣಿಕೆ. ಮತ್ತಿತ್ತರರು, ಸಸ್ಯಪ್ರಾಣಿಗಳ ಹೆಚ್ಚಿನ ವರ್ಗಗಳನ್ನು ಉತ್ಪಾದಿಸಲು ದೇವರು ಜೀವವಿಕಾಸವನ್ನು ಬಳಸಿದನಾದರೂ, ಈ ಪ್ರಕ್ರಿಯೆಯು ಮುಂದುವರಿಯುವಂತೆ ಮಾಡಲು ಆತನು ಮಧ್ಯಮಧ್ಯದಲ್ಲಿ ಕೈಹಾಕಿದನೆಂದು ಸಾಮಾನ್ಯವಾಗಿ ನೆನಸುತ್ತಾರೆ.

      ಬೋಧನೆಗಳ ಸಮ್ಮಿಳನ​—⁠ಸರಿಬೀಳುತ್ತದೊ?

      ಜೀವವಿಕಾಸದ ಸಿದ್ಧಾಂತವು ಬೈಬಲಿನ ಬೋಧನೆಗಳೊಂದಿಗೆ ನಿಜವಾಗಿಯೂ ಹೊಂದಿಕೊಳ್ಳುತ್ತದೊ? ಒಂದುವೇಳೆ ಜೀವಿಗಳು ವಿಕಾಸವಾದದ್ದು ಸತ್ಯವಾಗಿರುವಲ್ಲಿ, ಪ್ರಥಮ ಮನುಷ್ಯನಾದ ಆದಾಮನ ಸೃಷ್ಟಿಯ ಕುರಿತಾದ ಬೈಬಲ್‌ ವೃತ್ತಾಂತವು, ಅಕ್ಷರಾರ್ಥಕವಾಗಿ ತೆಗೆದುಕೊಳ್ಳಬಾರದಾದ ಒಂದು ನೀತಿಕಥೆಯಾಗಿದೆ ಹೊರತು ಬೇರೇನಲ್ಲ. (ಆದಿಕಾಂಡ 1:​26, 27; 2:​18-24) ಈ ಬೈಬಲ್‌ ವೃತ್ತಾಂತದ ಬಗ್ಗೆ ಯೇಸುವಿಗೆ ಇದೇ ನೋಟವಿತ್ತೊ? ಅವನು ಹೇಳಿದ್ದು: “ಮನುಷ್ಯರನ್ನು ನಿರ್ಮಾಣಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ ಅವರ ವಿಷಯದಲ್ಲಿ​—⁠ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ? ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”​—⁠ಮತ್ತಾಯ 19:4-6.

      ಇಲ್ಲಿ ಯೇಸು, ಆದಿಕಾಂಡದ ಎರಡನೆಯ ಅಧ್ಯಾಯದಲ್ಲಿ ದಾಖಲಾಗಿರುವ ಸೃಷ್ಟಿಯ ವೃತ್ತಾಂತದಲ್ಲಿನ ಮಾತುಗಳನ್ನು ಉಲ್ಲೇಖಿಸುತ್ತಿದ್ದನು. ಆ ಪ್ರಥಮ ಮದುವೆಯ ಕುರಿತಾದ ವೃತ್ತಾಂತವು ಒಂದು ಕಟ್ಟುಕಥೆಯಾಗಿದೆ ಎಂದು ಯೇಸು ನಂಬುತ್ತಿದ್ದಲ್ಲಿ, ವಿವಾಹಬಂಧವು ಪವಿತ್ರವಾದುದೆಂಬ ಅವನ ಬೋಧನೆಯನ್ನು ಬೆಂಬಲಿಸಲಿಕ್ಕಾಗಿ ಅವನು ಅದಕ್ಕೆ ಸೂಚಿಸುತ್ತಿದ್ದನೊ? ಖಂಡಿತವಾಗಿ ಇಲ್ಲ. ಆದಿಕಾಂಡದ ಆ ವೃತ್ತಾಂತವು ಒಂದು ಕಟ್ಟುಕಥೆಯಲ್ಲ ಬದಲಾಗಿ ಒಂದು ನಿಜ ಘಟನೆಯಾಗಿದೆಯೆಂದು ಯೇಸುವಿಗೆ ತಿಳಿದಿದ್ದರಿಂದಲೇ ಅವನು ಅದಕ್ಕೆ ಸೂಚಿಸಿ ಮಾತಾಡಿದನು.​—⁠ಯೋಹಾನ 17:⁠17.

      ಅದೇ ರೀತಿಯಲ್ಲಿ ಯೇಸುವಿನ ಶಿಷ್ಯರಿಗೆ ಸಹ ಸೃಷ್ಟಿಯ ಕುರಿತಾದ ಆದಿಕಾಂಡದ ವೃತ್ತಾಂತದಲ್ಲಿ ನಂಬಿಕೆಯಿತ್ತು. ಉದಾಹರಣೆಗಾಗಿ, ಲೂಕನ ಸುವಾರ್ತಾ ವೃತ್ತಾಂತವು ಯೇಸುವಿನ ವಂಶಾವಳಿಯನ್ನು ಪಟ್ಟಿಮಾಡುತ್ತಾ ಆದಾಮನ ವರೆಗೆ ಹಿಂದಕ್ಕೆ ಹೋಗುತ್ತದೆ. (ಲೂಕ 3:​23-38) ಆದಾಮನು ಒಬ್ಬ ಕಾಲ್ಪನಿಕ ವ್ಯಕ್ತಿಯಾಗಿದ್ದಲ್ಲಿ, ಆ ವಂಶಾವಳಿಯ ಪಟ್ಟಿಯು ಯಾವ ಹಂತದಲ್ಲಿ ನೈಜತೆಯಿಂದ ಮಿಥ್ಯೆಗೆ ಬದಲಾಯಿತು? ಈ ಕುಟುಂಬ ವೃಕ್ಷದ ಮೂಲಪುರುಷನೇ ಕಾಲ್ಪನಿಕವಾಗಿದ್ದಲ್ಲಿ, ದಾವೀದನ ವಂಶದಲ್ಲಿ ಹುಟ್ಟಿರುವ ಮೆಸ್ಸೀಯನು ತಾನೇ ಎಂಬ ಯೇಸುವಿನ ಪ್ರತಿಪಾದನೆಯು ಎಷ್ಟು ನಂಬಲರ್ಹವಾಗಿರಸಾಧ್ಯವಿತ್ತು? (ಮತ್ತಾಯ 1:⁠1) ಆ ಸುವಾರ್ತಾ ಪುಸ್ತಕದ ಲೇಖಕನಾದ ಲೂಕನು, ತಾನು ‘ಬುಡದಿಂದ ಎಲ್ಲವನ್ನೂ ಚೆನ್ನಾಗಿ ವಿಚಾರಿಸಿದ್ದೇನೆ’ ಎಂದು ಹೇಳಿದನು. ಅವನು ಸಹ ಆದಿಕಾಂಡದಲ್ಲಿನ ಸೃಷ್ಟಿಯ ವೃತ್ತಾಂತವನ್ನು ನಂಬಿದ್ದನೆಂಬುದು ಸ್ಪಷ್ಟ.​—⁠ಲೂಕ 1:⁠3.

      ಅಪೊಸ್ತಲ ಪೌಲನಿಗೆ ಯೇಸುವಿನಲ್ಲಿದ್ದ ನಂಬಿಕೆಯು, ಆದಿಕಾಂಡದ ವೃತ್ತಾಂತದಲ್ಲಿ ಅವನಿಗಿದ್ದ ಭರವಸೆಯೊಂದಿಗೆ ಹೆಣೆಯಲ್ಪಟ್ಟಿತ್ತು. ಅವನು ಬರೆದುದು: “ಮನುಷ್ಯನ ಮೂಲಕ ಮರಣವು ಉಂಟಾದ ಕಾರಣ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವುಂಟಾಗುವದು. ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು.” (1 ಕೊರಿಂಥ 15:21, 22) ಒಂದುವೇಳೆ, ಯಾರ ಮೂಲಕ ‘ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವೊ’ ಆ ಆದಾಮನು ಎಲ್ಲಾ ಮಾನವಕುಲದ ಮೂಲಪಿತನಾಗಿರದಿದ್ದಲ್ಲಿ, ಬಾಧ್ಯತೆಯಾಗಿ ಬಂದಿರುವ ಪಾಪದ ಪರಿಣಾಮಗಳನ್ನು ರದ್ದುಮಾಡಲು ಯೇಸು ಏಕೆ ಸಾಯಬೇಕಾಗಿತ್ತು?​—⁠ರೋಮಾಪುರ 5:12; 6:⁠23.

      ಹೀಗೆ, ಆದಿಕಾಂಡದ ಸೃಷ್ಟಿ ವೃತ್ತಾಂತದಲ್ಲಿನ ನಂಬಿಕೆಯನ್ನು ಶಿಥಿಲಗೊಳಿಸುವುದು, ಕ್ರೈಸ್ತ ನಂಬಿಕೆಯ ಅಸ್ತಿವಾರಗಳನ್ನೇ ಶಿಥಿಲಗೊಳಿಸುವುದೆಂದರ್ಥ. ಜೀವವಿಕಾಸದ ಸಿದ್ಧಾಂತ ಮತ್ತು ಕ್ರಿಸ್ತನ ಬೋಧನೆಗಳು ಒಂದಕ್ಕೊಂದು ಹೊಂದಿಕೊಳ್ಳುವುದೇ ಇಲ್ಲ. ಇವುಗಳ ಸಮ್ಮಿಳನ ಮಾಡುವ ಯಾವುದೇ ಪ್ರಯತ್ನವು ಒಂದು ದುರ್ಬಲವಾದ ನಂಬಿಕೆಗೆ ಜನ್ಮನೀಡುವುದು, ಅಷ್ಟೇ. ಇಂಥ ನಂಬಿಕೆಯು ಒಬ್ಬನನ್ನು “ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು” ಹೋಗುವಂತೆ ಮಾಡುತ್ತದೆ.​—⁠ಎಫೆಸ 4:⁠14.

      ಸ್ಥಿರವಾದ ಅಸ್ತಿವಾರವುಳ್ಳ ನಂಬಿಕೆ

      ಅನೇಕ ಶತಮಾನಗಳಿಂದ ಬೈಬಲು ಟೀಕೆ ಹಾಗೂ ದಾಳಿಗೆ ಗುರಿಯಾಗಿದೆ. ಆದರೆ ಬೈಬಲಿನಲ್ಲಿರುವ ವಿಷಯವು ಸತ್ಯವೆಂದು ಪದೇಪದೇ ರುಜುವಾಗಿದೆ. ಇತಿಹಾಸ, ಆರೋಗ್ಯ, ವಿಜ್ಞಾನ, ಹೀಗೆ ಯಾವುದೇ ವಿಷಯದ ಬಗ್ಗೆ ಬೈಬಲು ಮಾತಾಡಲಿ, ಅದು ತಿಳಿಸುವಂಥ ವಿಷಯಗಳು ಭರವಸಾರ್ಹವೆಂದು ಮೇಲಿಂದ ಮೇಲೆ ರುಜುವಾಗುತ್ತಾ ಇದೆ. ಮಾನವ ಸಂಬಂಧಗಳ ಬಗ್ಗೆ ಅದು ಕೊಡುವ ಸಲಹೆಸೂಚನೆಗಳು ಭರವಸಾರ್ಹವಾಗಿವೆ ಮತ್ತು ಯಾವುದೇ ಯುಗಕ್ಕೆ ಅನ್ವಯವಾಗುವಂಥದ್ದಾಗಿವೆ. ಮಾನವ ತತ್ತ್ವಜ್ಞಾನಗಳೂ ಸಿದ್ಧಾಂತಗಳೂ ಹಸಿರುಹುಲ್ಲಿನಂತೆ ಚಿಗುರಿ ಸಮಯಾನಂತರ ಬಾಡಿಹೋಗುತ್ತವೆ. ದೇವರ ವಾಕ್ಯವಾದರೊ ‘ಸದಾಕಾಲ ಇರುತ್ತದೆ.’​—⁠ಯೆಶಾಯ 40:⁠8.

      ಜೀವವಿಕಾಸದ ಬೋಧನೆಯು ಕೇವಲ ಒಂದು ವೈಜ್ಞಾನಿಕ ಸಿದ್ಧಾಂತ ಮಾತ್ರವಲ್ಲ. ಇದು ದಶಕಗಳಿಂದ ಚಿಗುರಿ ಹುಲುಸಾಗಿ ಬೆಳೆದಂಥ ಒಂದು ಮಾನವ ತತ್ತ್ವಜ್ಞಾನವೂ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ, ಬುದ್ಧಿವಂತಿಕೆಯಿಂದ ಮಾಡಲ್ಪಟ್ಟ ವಿನ್ಯಾಸದ ಬಗ್ಗೆ ಪ್ರಾಕೃತಿಕ ಜಗತ್ತಿನಲ್ಲಿ ಸಿಗುತ್ತಿರುವ ಹೆಚ್ಚೆಚ್ಚು ಪುರಾವೆಗೆ ಯಾವುದೋ ವಿವರಣೆಕೊಟ್ಟು ತೇಲಿಸಿಬಿಡಲು ಪ್ರಯತ್ನಿಸುತ್ತಾ, ಡಾರ್ವಿನನ ಜೀವವಿಕಾಸದ ಬೋಧನೆಯೇ ವಿಕಾಸಗೊಂಡಿದೆ ಇಲ್ಲವೆ ವಿಕೃತಿಗೊಂಡಿದೆ. ಈ ವಿಷಯವನ್ನು ನೀವು ಇನ್ನೂ ಹೆಚ್ಚಾಗಿ ಪರೀಕ್ಷಿಸುವಂತೆ ನಿಮ್ಮನ್ನು ಆಮಂತ್ರಿಸುತ್ತೇವೆ. ಇದೇ ಸಂಚಿಕೆಯಲ್ಲಿರುವ ಇತರ ಲೇಖನಗಳನ್ನು ಪರಿಶೀಲಿಸುವ ಮೂಲಕ ನೀವಿದನ್ನು ಮಾಡಸಾಧ್ಯವಿದೆ. ಅಷ್ಟುಮಾತ್ರವಲ್ಲದೆ, ನಿಮಗಿಷ್ಟವಿರುವಲ್ಲಿ ಈ ಪುಟ ಮತ್ತು 32ನೇ ಪುಟದಲ್ಲಿ ತೋರಿಸಲಾಗಿರುವ ಪ್ರಕಾಶನಗಳನ್ನು ಸಹ ನೀವು ಓದಬಹುದು.

      ಈ ವಿಷಯದ ಬಗ್ಗೆ ಸಂಶೋಧನೆಮಾಡಿದ ಬಳಿಕ, ಗತಕಾಲದ ಬಗ್ಗೆ ಬೈಬಲ್‌ ಏನು ಹೇಳುತ್ತದೊ ಅದರಲ್ಲಿನ ನಿಮ್ಮ ಭರವಸೆಯು ಹೆಚ್ಚಾಗುವುದನ್ನು ನೀವು ನೋಡಬಹುದು. ಇದಕ್ಕಿಂತಲೂ ಮಿಗಿಲಾಗಿ, ಭವಿಷ್ಯದ ಕುರಿತಾದ ಬೈಬಲಿನ ವಾಗ್ದಾನಗಳಲ್ಲಿ ನಿಮ್ಮ ನಂಬಿಕೆಯು ಬಲಗೊಳಿಸಲ್ಪಡುವುದು. (ಇಬ್ರಿಯ 11:⁠1) ‘ಭೂಮಿ, ಆಕಾಶಗಳನ್ನು ನಿರ್ಮಿಸಿದವನಾದ’ ಯೆಹೋವನನ್ನು ಸ್ತುತಿಸಲೂ ನೀವು ಪ್ರಚೋದಿಸಲ್ಪಡಬಹುದು.​—⁠ಕೀರ್ತನೆ 146:⁠6. (g 9/06)

      ಹೆಚ್ಚಿನ ವಾಚನಕ್ಕಾಗಿ

      ಸಕಲ ಜನರಿಗಾಗಿರುವ ಒಂದು ಗ್ರಂಥ - ಬೈಬಲಿನ ವಿಶ್ವಾಸಾರ್ಹತೆಯ ಕುರಿತಾದ ನಿರ್ದಿಷ್ಟ ಉದಾಹರಣೆಗಳನ್ನು ಈ ಬ್ರೋಷರ್‌ನಲ್ಲಿ ಚರ್ಚಿಸಲಾಗಿದೆ

      Is There a Creator Who Cares About You? ಹೆಚ್ಚಿನ ವೈಜ್ಞಾನಿಕ ಪುರಾವೆಯನ್ನು ಪರೀಕ್ಷಿಸಿ, ಕಾಳಜಿಯುಳ್ಳ ಒಬ್ಬ ದೇವರು ಇಷ್ಟೊಂದು ಕಷ್ಟಸಂಕಟಕ್ಕೆ ಏಕೆ ಅನುಮತಿಕೊಟ್ಟಿರ ಬಹುದೆಂಬುದನ್ನು ತಿಳಿದುಕೊಳ್ಳಿರಿ

      ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? “ಭೂಮಿಗಾಗಿ ದೇವರ ಉದ್ದೇಶವೇನು?” ಎಂಬ ಪ್ರಶ್ನೆಯನ್ನು ಈ ಪುಸ್ತಕದ 3ನೇ ಅಧ್ಯಾಯದಲ್ಲಿ ಉತ್ತರಿಸಲಾಗಿದೆ

      [ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]

      ಸೃಷ್ಟಿಯ ಕುರಿತಾದ ಆದಿಕಾಂಡ ವೃತ್ತಾಂತವನ್ನು ಯೇಸು ನಂಬಿದನು. ಅವನ ನಂಬಿಕೆ ತಪ್ಪಾಗಿತ್ತೊ?

      [ಪುಟ 9ರಲ್ಲಿರುವ ಚೌಕ]

      ಜೀವವಿಕಾಸ ಅಂದರೇನು?

      “ಜೀವವಿಕಾಸ” ಎಂಬ ಪದಕ್ಕಿರುವ ಒಂದು ಅರ್ಥನಿರೂಪಣೆಯು, “ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಬದಲಾವಣೆಗಳ ಪ್ರಕ್ರಿಯೆ” ಎಂದಾಗಿದೆ. ಆದರೆ ಆ ಪದವನ್ನು ಹಲವಾರು ವಿಧಗಳಲ್ಲಿ ಬಳಸಲಾಗಿದೆ. ಉದಾಹರಣೆಗೆ, ವಿಶ್ವದ ಬೆಳವಣಿಗೆಯಂಥ ನಿರ್ಜೀವ ವಸ್ತುಗಳಲ್ಲಿನ ಬೃಹತ್‌ ಬದಲಾವಣೆಗಳನ್ನು ವರ್ಣಿಸಲಿಕ್ಕಾಗಿ ಅದನ್ನು ಬಳಸಲಾಗಿದೆ. ಅಷ್ಟುಮಾತ್ರವಲ್ಲದೆ ಈ ಪದವನ್ನು, ಸಸ್ಯ ಹಾಗೂ ಪ್ರಾಣಿಗಳು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುವ ವಿಧಾನದಂಥ, ಜೀವರಾಶಿಯಲ್ಲಾಗುವ ಚಿಕ್ಕ ಬದಲಾವಣೆಗಳನ್ನು ವರ್ಣಿಸಲಿಕ್ಕಾಗಿಯೂ ಬಳಸಲಾಗಿದೆ. ಆದರೆ ಅತಿ ಸಾಮಾನ್ಯವಾಗಿ ಈ ಪದವನ್ನು, ಜೀವವು ನಿರ್ಜೀವ ರಾಸಾಯನಿಕಗಳಿಂದ ಉದ್ಭವಿಸಿ, ಕೋಶಗಳು ಉತ್ಪತ್ತಿಯಾಗಿ, ನಿಧಾನವಾಗಿ ವಿಕಾಸಹೊಂದುತ್ತಾ ಹೆಚ್ಚೆಚ್ಚು ಸಂಕೀರ್ಣವಾದ ಜೀವಿಗಳಾದವು ಮತ್ತು ಈ ಪ್ರಕ್ರಿಯೆಯಿಂದುಂಟಾದ ಉತ್ಪತ್ತಿಗಳಲ್ಲಿ ಮನುಷ್ಯನೇ ಅತಿ ಬುದ್ಧಿವಂತನು ಎಂಬ ಸಿದ್ಧಾಂತವನ್ನು ವರ್ಣಿಸಲಿಕ್ಕಾಗಿ ಬಳಸಲಾಗುತ್ತದೆ. ಈ ಮೂರನೆಯ ವಿಚಾರವೇ, ಈ ಲೇಖನದಲ್ಲಿ ಬಳಸಲಾದ “ಜೀವವಿಕಾಸ” ಎಂಬ ಪದದ ಅರ್ಥವಾಗಿದೆ.

      [ಪುಟ 10ರಲ್ಲಿರುವ ಚಿತ್ರ ಕೃಪೆ]

      ಅಂತರಿಕ್ಷದ ಫೋಟೋ: J. Hester and P. Scowen (AZ State Univ.), NASA

  • ಜೀವರಸಾಯನ ವಿಜ್ಞಾನಿಯೊಂದಿಗೆ ಸಂದರ್ಶನ
    ಎಚ್ಚರ!—2006 | ಅಕ್ಟೋಬರ್‌
    • ಜೀವರಸಾಯನ ವಿಜ್ಞಾನಿಯೊಂದಿಗೆ ಸಂದರ್ಶನ

      ಇಸವಿ 1996ರಲ್ಲಿ, ಈಗ ಅಮೆರಿಕದ ಪೆನ್ಸಿಲ್ವೇನಿಯದ ಲೀಹೈ ವಿಶ್ವವಿದ್ಯಾಲಯದಲ್ಲಿ ಜೀವರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿರುವ ಮೈಕಲ್‌ ಜೆ. ಬೀಹೀ, ಡಾರ್ವಿನ್ಸ್‌ ಬ್ಲ್ಯಾಕ್‌ಬಾಕ್ಸ್‌​—⁠ದ ಬಯಲಾಜಿಕಲ್‌ ಚ್ಯಾಲೆಂಜ್‌ ಟು ಎವಲ್ಯೂಷನ್‌ (ಡಾರ್ವಿನನ ಕಪ್ಪುಪೆಟ್ಟಿಗೆ​—⁠ಜೀವವಿಕಾಸಕ್ಕೆ ಜೀವರಸಾಯನದ ಸವಾಲು) ಎಂಬ ತಮ್ಮ ಪುಸ್ತಕವನ್ನು ಬಿಡುಗಡೆ ಮಾಡಿದರು. ಮೇ 8, 1997ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ, “ನಾವು ಇಲ್ಲಿಗೆ ಬಂದಿರುವುದು ಹೇಗೆ? ಆಕಸ್ಮಿಕವಾಗಿಯೊ ಉದ್ದೇಶಪೂರ್ವಕವಾಗಿಯೊ?” ಎಂಬ ಮುಖ್ಯಶೀರ್ಷಿಕೆಯ ಮೇಲಾಧರಿತವಾಗಿ ಪ್ರಕಟಿಸಲ್ಪಟ್ಟ ಲೇಖನಮಾಲೆಯಲ್ಲಿ ಬೀಹೀಯವರ ಪುಸ್ತಕಕ್ಕೆ ಸೂಚಿಸಲಾಗಿತ್ತು. ಆ ಪುಸ್ತಕ ಪ್ರಕಟವಾದಂದಿನಿಂದ, ವಿಕಾಸವಾದಿ ವಿಜ್ಞಾನಿಗಳು ಬೀಹೀ ಎತ್ತಿರುವ ವಾದಗಳನ್ನು ತಪ್ಪೆಂದು ಸ್ಥಾಪಿಸಲು ಹೆಣಗಾಡಿದ್ದಾರೆ. ಬೀಹೀಯವರು ರೋಮನ್‌ ಕ್ಯಾಥೊಲಿಕರಾಗಿರುವುದರಿಂದ, ಅವರ ಧಾರ್ಮಿಕ ನಂಬಿಕೆಗಳು ಅವರ ವೈಜ್ಞಾನಿಕ ತೀರ್ಮಾನಗಳನ್ನು ಮಬ್ಬುಗೊಳಿಸುವಂತೆ ಬಿಟ್ಟಿದ್ದಾರೆಂದು ವಿಮರ್ಶಕರು ಅಪವಾದ ಹೊರಿಸಿದ್ದಾರೆ. ಇತರರು, ಅವರ ತರ್ಕ ಅವೈಜ್ಞಾನಿಕವೆಂದು ವಾದಿಸುತ್ತಾರೆ. ಅವರ ವಿಚಾರಗಳು ಇಷ್ಟೊಂದು ವಾಗ್ವಾದವನ್ನು ಏಕೆ ಹುಟ್ಟಿಸಿವೆಯೆಂದು ತಿಳಿಯಲು ಎಚ್ಚರ! ಪತ್ರಿಕೆ ಅವರೊಂದಿಗೆ ಸಂದರ್ಶನ ನಡೆಸಿತು.

      ಎಚ್ಚರ!: ಜೀವರಾಶಿಯು ಬುದ್ಧಿವಂತಿಕೆಯಿಂದ ವಿನ್ಯಾಸಿಸಲ್ಪಟ್ಟಿರುವುದಕ್ಕೆ ರುಜುವಾತನ್ನು ಒದಗಿಸುತ್ತದೆಂದು ನೀವು ನಂಬುವುದೇಕೆ?

      ಪ್ರೊಫೆಸರ್‌ ಬೀಹೀ: ಯಾವುದೇ ಉಪಕರಣದಲ್ಲಿನ ವಿಭಿನ್ನ ಭಾಗಗಳು ಜಟಿಲ ಕೆಲಸಗಳನ್ನು ಮಾಡುವಂತೆ ಜೋಡಿಸಲ್ಪಟ್ಟಿರುವುದನ್ನು ನಾವು ನೋಡುವಾಗೆಲ್ಲ ಅದು ಯಾರೊ ರಚಿಸಿದ್ದಾರೆಂಬ ತೀರ್ಮಾನಕ್ಕೆ ಬರುತ್ತೇವೆ. ದೃಷ್ಟಾಂತಕ್ಕೆ, ನಾವು ದಿನಾಲೂ ಉಪಯೋಗಿಸುವ ಹುಲ್ಲುಗತ್ತರಿ ಯಂತ್ರ, ಕಾರು, ಇಲ್ಲವೆ ಇನ್ನೂ ಸರಳ ಯಂತ್ರಗಳನ್ನು ತೆಗೆದುಕೊಳ್ಳಿ. ನನಗಿಷ್ಟವಾದ ಉದಾಹರಣೆ, ಇಲಿ-ಹಿಡಿಯುವ ಬೋನಿನದ್ದಾಗಿದೆ. ಅದರ ವಿವಿಧ ಭಾಗಗಳು ಇಲಿಯನ್ನು ಪಕ್ಕನೆ ಹಿಡಿಯುವಂಥ ರೀತಿಯಲ್ಲಿ ಜೋಡಿಸಲ್ಪಟ್ಟಿರುವುದರಿಂದ ನೀವು ಅದನ್ನು ಯಾರೊ ತಯಾರುಮಾಡಿದ್ದಾರೆಂಬ ತೀರ್ಮಾನಕ್ಕೆ ಬರುವಿರಿ.

      ವಿಜ್ಞಾನವು ಈಗ ಜೀವದ ಪ್ರಾಥಮಿಕ ಮಟ್ಟವನ್ನು ಕಂಡುಹಿಡಿಯುವಷ್ಟರ ಮಟ್ಟಿಗೆ ಪ್ರಗತಿಮಾಡಿದೆ. ಮತ್ತು ನಮ್ಮನ್ನು ಬೆರಗುಗೊಳಿಸುವ ವಿಷಯವೇನೆಂದರೆ, ವಿಜ್ಞಾನಿಗಳು ಜೀವದ ಈ ಆಣ್ವಿಕ ಮಟ್ಟದಲ್ಲಿ ಜಟಿಲ ಕೆಲಸಗಳನ್ನು ಮಾಡುವ “ಯಂತ್ರಭಾಗಗಳು” ಇರುವುದನ್ನು ಕಂಡುಹಿಡಿದಿದ್ದಾರೆ. ಉದಾಹರಣೆಗೆ ಜೀವಕೋಶಗಳೊಳಗೆ, ಕೋಶದ ಒಂದು ಬದಿಯಿಂದ ಇನ್ನೊಂದು ಬದಿಗೆ ಸರಕನ್ನು ಸಾಗಿಸುವ ಸೂಕ್ಷ್ಮ ಆಣ್ವಿಕ “ಟ್ರಕ್ಕುಗಳು” ಇವೆ. ಈ “ಟ್ರಕ್ಕುಗಳು” ಎಡಕ್ಕೆ ತಿರುಗಬೇಕೊ ಬಲಕ್ಕೆ ತಿರುಗಬೇಕೊ ಎಂದು ಹೇಳುವ ಸೂಕ್ಷ್ಮ ಆಣ್ವಿಕ “ಸೂಚಕಫಲಕಗಳೂ” ಇವೆ. ಕೆಲವು ಜೀವಕೋಶಗಳಿಗೆ ದ್ರವದಲ್ಲಿ ಚಲಿಸಲು “ಮೋಟಾರುಗಳು” ಜೋಡಿಸಲ್ಪಟ್ಟಿವೆ. ಜನರು ಈ ರೀತಿಯ ಜಟಿಲ ಕೆಲಸಗಳನ್ನು ಮಾಡುವ ಯಂತ್ರಭಾಗಗಳನ್ನು ಬೇರಾವುದಲ್ಲಾದರೂ ನೋಡಿದರೆ ಅದನ್ನು ಯಾರೊ ವಿನ್ಯಾಸಿಸಿದ್ದಾರೆ ಎಂಬ ತೀರ್ಮಾನಕ್ಕೆ ಬರುವರು. ಹಾಗೆಯೇ, ಜೀವಕೋಶಗಳ ಜಟಿಲತೆಗೆ ಕಾರಣವೇನೆಂಬುದಕ್ಕೆ ನಾವು ಇದನ್ನು ಬಿಟ್ಟು ಬೇರಾವುದೇ ವಿವರಣೆಯನ್ನು ಕೊಡಸಾಧ್ಯವಿಲ್ಲ. ಡಾರ್ವಿನನ ಜೀವವಿಕಾಸ ಸಿದ್ಧಾಂತ ಇದರ ಎದುರಿನಲ್ಲಿ ನಿಲ್ಲಲಾರದು. ಈ ರೀತಿಯ ಏರ್ಪಾಡು ಬುದ್ಧಿವಂತಿಕೆಯಿಂದ ವಿನ್ಯಾಸಿಸಲ್ಪಟ್ಟಿದೆ ಎಂದು ನಾವು ನಿರಂತರವೂ ಕಂಡುಕೊಳ್ಳುವುದರಿಂದ, ಈ ಆಣ್ವಿಕ ವ್ಯವಸ್ಥೆಗಳು ಸಹ ಬುದ್ಧಿವಂತಿಕೆಯಿಂದ ವಿನ್ಯಾಸಿಸಲ್ಪಟ್ಟವೆಂದು ನಾವು ಅಭಿಪ್ರಯಿಸುವುದು ಸಮರ್ಥನೀಯ.

      ಎಚ್ಚರ!: ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸದ ಬಗ್ಗೆ ನಿಮ್ಮ ತೀರ್ಮಾನಗಳನ್ನು ನಿಮ್ಮ ಸಹೋದ್ಯೋಗಿಗಳಲ್ಲಿ ಹೆಚ್ಚಿನವರು ಏಕೆ ಒಪ್ಪುವುದಿಲ್ಲವೆಂದು ನಿಮ್ಮ ಅಭಿಪ್ರಾಯ?

      ಪ್ರೊಫೆಸರ್‌ ಬೀಹೀ: ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸಕ್ಕೆ ವೈಜ್ಞಾನಿಕಾತೀತ ಸೂಚ್ಯಾರ್ಥಗಳಿವೆ, ಅಂದರೆ ಅದು ಪ್ರಕೃತ್ಯತೀತ ದಿಕ್ಕಿಗೆ ಕೈತೋರಿಸುತ್ತದೆ ಎಂದು ಅವರಿಗೆ ಗೊತ್ತಾಗುವ ಕಾರಣದಿಂದ ಅವರು ಒಪ್ಪುವುದಿಲ್ಲ. ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸದ ಕುರಿತಾದ ತೀರ್ಮಾನದಿಂದ ಅನೇಕರಿಗೆ ಕಸಿವಿಸಿಯಾಗುತ್ತದೆ. ಆದರೂ, ರುಜುವಾತು ಎಲ್ಲಿಗೆ ಕೈತೋರಿಸುತ್ತದೆಯೊ ಅದನ್ನೇ ವಿಜ್ಞಾನ ಅನುಸರಿಸಬೇಕೆಂದು ನನಗೆ ಸದಾ ಕಲಿಸಲಾಗಿದೆ. ನನ್ನ ಅಭಿಪ್ರಾಯದ ಮೇರೆಗೆ, ಒಂದು ತೀರ್ಮಾನಕ್ಕೆ ಸುಸ್ಪಷ್ಟ ರುಜುವಾತಿದ್ದರೂ, ಅದಕ್ಕೆ ಅಪ್ರಿಯವಾದ ತತ್ತ್ವಜ್ಞಾನ ಸೂಚ್ಯಾರ್ಥಗಳಿವೆ ಎಂಬ ಕಾರಣಮಾತ್ರಕ್ಕೆ ಅದನ್ನು ಒಪ್ಪದಿರುವುದು ಶುದ್ಧ ಹೇಡಿತನವಾಗಿದೆ.

      ಎಚ್ಚರ!: ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸದ ವಿಚಾರವನ್ನು ಅಂಗೀಕರಿಸುವುದು ಮೌಢ್ಯವೆಂದು ವಾದಿಸುವ ವಿಮರ್ಶಕರಿಗೆ ನಿಮ್ಮ ಉತ್ತರವೇನು?

      ಪ್ರೊಫೆಸರ್‌ ಬೀಹೀ: ಪ್ರಕೃತಿಯಲ್ಲಿ, ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸವನ್ನು ನೋಡಸಾಧ್ಯವಿದೆ ಎಂಬ ತೀರ್ಮಾನವು ಮೌಢ್ಯವಲ್ಲ. ಏಕೆಂದರೆ, ನಮಗೆ ಗೊತ್ತಿಲ್ಲದ ವಿಷಯದಿಂದಲ್ಲ ಬದಲಾಗಿ ನಮಗೆ ಖಂಡಿತವಾಗಿ ಗೊತ್ತಿರುವ ವಿಷಯದಿಂದ ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ. ಆರಿಜಿನ್‌ ಆಫ್‌ ಸ್ಪೀಷೀಸ್‌ (ಜೀವಿ ಪ್ರಭೇದಗಳ ಉಗಮ) ಎಂಬ ಪುಸ್ತಕವನ್ನು ಡಾರ್ವಿನನು 150 ವರ್ಷಗಳ ಹಿಂದೆ ಪ್ರಕಟಿಸಿದಾಗ ಜೀವವು ಜಟಿಲವಲ್ಲವೆಂದು ತೋರುತ್ತಿತ್ತು. ಜೀವಕೋಶ ಎಷ್ಟು ಸರಳವಾಗಿದೆಯೆಂದರೆ ಅದು ಸಮುದ್ರದ ಕೆಸರಿನಿಂದ ಗುಳ್ಳೆಯಾಗಿ ತಟ್ಟನೆ ಮೇಲಕ್ಕೇರಿಬರಬಲ್ಲದೆಂದು ವಿಜ್ಞಾನಿಗಳು ನೆನಸುತ್ತಿದ್ದರು. ಆದರೆ ಜೀವಕೋಶಗಳು ತುಂಬ ಜಟಿಲವಾದವುಗಳು, ನಮ್ಮ 21ನೇ ಶತಮಾನದ ಯಂತ್ರಗಳಿಗಿಂತಲೂ ಬಹಳಷ್ಟು ಜಟಿಲವಾದವುಗಳೆಂದು ಈಗ ವಿಜ್ಞಾನವು ಕಂಡುಕೊಂಡಿದೆ. ಜಟಿಲ ಕೆಲಸಗಳನ್ನು ಮಾಡುವ ಅದರ ಸಾಮರ್ಥ್ಯವು ಅದು ಒಂದು ಉದ್ದೇಶಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ ಎಂಬುದನ್ನು ಸೂಚಿಸುತ್ತದೆ.

      ಎಚ್ಚರ!: ನೀವು ಹೇಳುತ್ತಿರುವ ಆ ಜಟಿಲವಾದ ಆಣ್ವಿಕ ಯಂತ್ರಗಳನ್ನು ಜೀವವಿಕಾಸವು ನೈಸರ್ಗಿಕ ಆಯ್ಕೆಯ ಮೂಲಕ ಸೃಷ್ಟಿಸಿರಲು ಸಾಧ್ಯವಿದೆ ಎಂಬುದಕ್ಕೆ ವಿಜ್ಞಾನವು ಯಾವುದೇ ರುಜುವಾತನ್ನು ಒದಗಿಸಿದೆಯೆ?

      ಪ್ರೊಫೆಸರ್‌ ಬೀಹೀ: ನೀವು ವೈಜ್ಞಾನಿಕ ಸಾಹಿತ್ಯದಲ್ಲಿ ಹುಡುಕುವಲ್ಲಿ, ಡಾರ್ವಿನನ ಸಿದ್ಧಾಂತಕ್ಕನುಸಾರವಾದ ಪ್ರಕ್ರಿಯೆಗಳಿಂದ ಇಂತಹ ಆಣ್ವಿಕ ಯಂತ್ರಗಳು ಹೇಗೆ ಬಂದವೆಂದು ಪ್ರಯೋಗದಿಂದಾಗಲಿ ಸವಿವರ ವೈಜ್ಞಾನಿಕ ನಮೂನೆಯಿಂದಾಗಲಿ ತೋರಿಸಿಕೊಡಲು ಯಾರೂ ಗಂಭೀರ ಪ್ರಯತ್ನ ಮಾಡಿಲ್ಲವೆಂದು ಕಂಡುಹಿಡಿಯುವಿರಿ. ನನ್ನ ಪುಸ್ತಕ ಪ್ರಕಟಿಸಲ್ಪಟ್ಟು ಕಳೆದಿರುವ ಈ ಹತ್ತು ವರುಷಗಳಲ್ಲಿ, ನ್ಯಾಷನಲ್‌ ಅಕಾಡಮಿ ಆಫ್‌ ಸೈಅನ್ಸೆಸ್‌ ಮತ್ತು ಅಮೆರಿಕನ್‌ ಅಸೋಸಿಯೇಷನ್‌ ಫಾರ್‌ ದಿ ಅಡ್ವಾನ್ಸ್‌ಮೆಂಟ್‌ ಆಫ್‌ ಸೈಅನ್ಸೆಸ್‌ನಂತಹ ಅನೇಕ ವೈಜ್ಞಾನಿಕ ಸಂಘಟನೆಗಳು ತಮ್ಮ ಸದಸ್ಯರಿಗೆ, ಜೀವರಾಶಿಯು ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸಕ್ಕೆ ರುಜುವಾತನ್ನು ಕೊಡುತ್ತದೆಂಬ ವಿಚಾರವನ್ನು ನಿವಾರಿಸಲು ಸಾಧ್ಯವಾದದ್ದೆಲ್ಲವನ್ನೂ ಮಾಡಬೇಕೆಂದು ತುರ್ತಿನ ಬಿನ್ನಹಗಳನ್ನು ಮಾಡಿದರೂ ಅದು ಸಾಧ್ಯವಾಗಿಲ್ಲ.

      ಎಚ್ಚರ!: ಸಸ್ಯಗಳ ಅಥವಾ ಪ್ರಾಣಿಗಳಲ್ಲಿರುವ ಕೆಲವೊಂದು ಅಂಗಗಳು ಅಸಮರ್ಪಕವಾಗಿ ವಿನ್ಯಾಸಿಸಲ್ಪಟ್ಟಿವೆಯೆಂದು ಹೇಳುವವರಿಗೆ ನೀವು ಹೇಗೆ ಉತ್ತರಿಸುತ್ತೀರಿ?

      ಪ್ರೊಫೆಸರ್‌ ಬೀಹೀ: ಒಂದು ಶರೀರದಲ್ಲಿ ಕೆಲವು ಅಂಗಗಳು ಏಕಿವೆ ಎಂಬುದು ನಮಗೆ ತಿಳಿದಿರದ ಕಾರಣ ಆ ಅಂಗ ಪ್ರಮುಖವಲ್ಲವೆಂದು ಅರ್ಥವಲ್ಲ. ಉದಾಹರಣೆಗೆ, ಅನುಪಯುಕ್ತವೆಂದು ಯೋಚಿಸಲಾಗಿದ್ದ ಅಂಗಗಳು ಮಾನವ ದೇಹ ಮತ್ತು ಇತರ ಜೀವಿಗಳು ಅಸಮರ್ಪಕವಾಗಿ ವಿನ್ಯಾಸಿಸಲ್ಪಟ್ಟಿವೆ ಎಂಬುದನ್ನು ತೋರಿಸುತ್ತವೆಂದು ಒಂದೊಮ್ಮೆ ನೆನಸಲಾಗುತ್ತಿತ್ತು. ದೃಷ್ಟಾಂತಕ್ಕೆ, ಕರುಳುಬಾಲ (ಅಪೆಂಡಿಕ್ಸ್‌) ಮತ್ತು ಗಲಗ್ರಂಥಿಗಳು ಅನುಪಯುಕ್ತ ಅಂಗಗಳೆಂದು ನೆನಸಿ ಒಂದೊಮ್ಮೆ ಅವುಗಳನ್ನು ಶಸ್ತ್ರಕ್ರಿಯೆಮಾಡಿ ತೆಗೆಯಲಾಗುತ್ತಿತ್ತು. ಆದರೆ, ಈ ಅಂಗಗಳು ಸೋಂಕುರಕ್ಷಣಾ ವ್ಯವಸ್ಥೆಯಲ್ಲಿ ಪಾತ್ರವಹಿಸುತ್ತವೆ ಎಂದು ಬಳಿಕ ಕಂಡುಹಿಡಿಯಲಾದ ಕಾರಣ, ಈಗ ಅವುಗಳನ್ನು ಅನುಪಯುಕ್ತವೆಂದು ಪರಿಗಣಿಸಲಾಗುವುದಿಲ್ಲ.

      ನೆನಪಿನಲ್ಲಿಡಬೇಕಾದ ಇನ್ನೊಂದು ವಿಷಯವೇನೆಂದರೆ, ಜೀವವಿಜ್ಞಾನದಲ್ಲಿ ಕೆಲವು ಸಂಗತಿಗಳು ಹಠಾತ್ತನೆ ಸಂಭವಿಸುತ್ತವೆ. ಉದಾಹರಣೆಗೆ, ನನ್ನ ಕಾರ್‌ನಲ್ಲಿ ಒಂದು ಕುಳಿ ಇದೆ ಅಥವಾ ಅದರ ಟಯರ್‌ನ ಗಾಳಿ ಹೋಗಿಬಿಟ್ಟಿದೆ ಎಂದಿಟ್ಟುಕೊಳ್ಳಿ. ಈ ಕಾರಣಕ್ಕಾಗಿ ನನ್ನ ಕಾರ್‌ ಅಥವಾ ಟಯರನ್ನು ಯಾರೂ ತಯಾರುಮಾಡಲಿಲ್ಲವೆಂದು ಹೇಳಲಾಗುವುದಿಲ್ಲ. ತದ್ರೀತಿ, ಜೀವವಿಜ್ಞಾನದಲ್ಲಿ ಕೆಲವು ಸಂಗತಿಗಳು ಹಠಾತ್ತನೆ ಸಂಭವಿಸುತ್ತವೆ ಎಂಬ ವಾಸ್ತವಾಂಶದಿಂದಾಗಿ, ಶ್ರೇಷ್ಠಮಟ್ಟದ ಜಟಿಲವಾದ ಆಣ್ವಿಕ ಜೀವಯಂತ್ರವು ಆಕಸ್ಮಿಕವಾಗಿ ಯಾರ ವಿನ್ಯಾಸವಿಲ್ಲದೆ ಬಂತೆಂದು ಹೇಳಲಾಗುವುದಿಲ್ಲ. ಅಂತಹ ವಾದವು ತರ್ಕಸಮ್ಮತವೇ ಅಲ್ಲ. (g 9/06)

      [ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]

      “ನನ್ನ ಅಭಿಪ್ರಾಯದ ಮೇರೆಗೆ, ಒಂದು ತೀರ್ಮಾನಕ್ಕೆ ಸುಸ್ಪಷ್ಟ ರುಜುವಾತಿದ್ದರೂ, ಅದಕ್ಕೆ ಅಪ್ರಿಯವಾದ ತತ್ತ್ವಜ್ಞಾನ ಸೂಚ್ಯಾರ್ಥಗಳಿವೆ ಎಂಬ ಕಾರಣಮಾತ್ರಕ್ಕೆ ಅದನ್ನು ಒಪ್ಪದಿರುವುದು ಶುದ್ಧ ಹೇಡಿತನವಾಗಿದೆ”

  • ಜೀವವಿಕಾಸವು ವಾಸ್ತವಾಂಶವೇ?
    ಎಚ್ಚರ!—2006 | ಅಕ್ಟೋಬರ್‌
    • ಜೀವವಿಕಾಸವು  ವಾಸ್ತವಾಂಶವೇ?

      ಪ್ರಸಿದ್ಧ ಜೀವವಿಕಾಸ ವಿಜ್ಞಾನಿ ಪ್ರೊಫೆಸರ್‌ ರಿಚರ್ಡ್‌ ಡಾಕನ್ಸ್‌, “ಜೀವವಿಕಾಸವು ಸೂರ್ಯಶಾಖದಷ್ಟೇ ಸತ್ಯವಾದ ವಾಸ್ತವಾಂಶ” ಎಂದು ಹೇಳುತ್ತಾರೆ. ಸೂರ್ಯ ಬಿಸಿ ಆಗಿದೆಯೆಂಬುದನ್ನು ಪ್ರಯೋಗಗಳು ಹಾಗೂ ನೇರ ವೀಕ್ಷಣೆಗಳು ರುಜುಪಡಿಸಿವೆ ನಿಶ್ಚಯ. ಆದರೆ ಅಷ್ಟೇ ನಿರ್ವಿವಾದದ ಬೆಂಬಲವನ್ನು ಪ್ರಯೋಗಗಳು ಮತ್ತು ನೇರ ವೀಕ್ಷಣೆಗಳು ಜೀವವಿಕಾಸದ ಬೋಧನೆಗೆ ಕೊಡುತ್ತವೊ?

      ಆ ಪ್ರಶ್ನೆಯನ್ನು ಉತ್ತರಿಸುವ ಮುಂಚೆ ಒಂದು ವಿಷಯವನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಜೀವಿಗಳ ಮುಂದಿನ ಪೀಳಿಗೆಗಳಲ್ಲಿ ಕಾಲಾನುಕಾಲಕ್ಕೆ ಸ್ವಲ್ಪ ಬದಲಾವಣೆಗಳಾಗಬಹುದೆಂದು ಅನೇಕ ವಿಜ್ಞಾನಿಗಳು ಗಮನಿಸಿದ್ದಾರೆ ಮತ್ತು ಈ ಪ್ರಕ್ರಿಯೆಯನ್ನು ಚಾರ್ಲ್ಸ್‌ ಡಾರ್ವಿನ್‌, “ಮುಂದೆ ಪರಿವರ್ತನೆ ಹೊಂದುವ ವಂಶಕ್ರಮ” ಎಂದು ಕರೆದನು. ಇಂಥ ಬದಲಾವಣೆಗಳನ್ನು ನೇರವಾಗಿ ಗಮನಿಸಲಾಗಿದೆ, ಪ್ರಯೋಗಗಳಲ್ಲಿ ದಾಖಲಿಸಲಾಗಿದೆ ಮತ್ತು ಸಸ್ಯ ಹಾಗೂ ಪ್ರಾಣಿ ತಳಿಗಾರರು (ಬ್ರೀಡರ್ಸ್‌) ಇದನ್ನು ಚಾತುರ್ಯದಿಂದ ಬಳಸಿದ್ದಾರೆ.a ಆದುದರಿಂದ ಈ ಬದಲಾವಣೆಗಳನ್ನು ವಾಸ್ತವಾಂಶಗಳೆಂದು ಪರಿಗಣಿಸಸಾಧ್ಯವಿದೆ. ಆದರೆ ವಿಜ್ಞಾನಿಗಳು ಇಂತಹ ಚಿಕ್ಕ ಬದಲಾವಣೆಗಳನ್ನು ಸೂಕ್ಷ್ಮವಿಕಾಸ (ಮೈಕ್ರೋಎವಲ್ಯೂಷನ್‌) ಎಂದು ಕರೆಯುತ್ತಾರೆ. ಈ ಹೆಸರೇ, ಅನೇಕ ವಿಜ್ಞಾನಿಗಳು ವಾದಿಸುವ ಸಂಗತಿಗೆ, ಅಂದರೆ ಜೀವಿಗಳಲ್ಲಾಗುವ ಸೂಕ್ಷ್ಮ ಬದಲಾವಣೆಗಳು ಬೃಹದ್ವಿಕಾಸಕ್ಕೆ (ಮ್ಯಾಕ್ರೋಎವಲ್ಯೂಷನ್‌) ಪುರಾವೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಬೃಹದ್ವಿಕಾಸವು ಸಂಪೂರ್ಣವಾಗಿ ಭಿನ್ನವಾದ ಮತ್ತು ಯಾರೂ ನೋಡಿರದಂಥ ಪ್ರಕ್ರಿಯೆಯಾಗಿದೆ.

      ಡಾರ್ವಿನನು, ನೇರವಾಗಿ ನೋಡಸಾಧ್ಯವಿರುವಂಥ ಅಂತಹ ಬದಲಾವಣೆಗಳಿಗಿಂತ ಮುಂದಕ್ಕೆ ಹೋದನು. ಜೀವಿ ಪ್ರಭೇದಗಳ ಉಗಮ (ಇಂಗ್ಲಿಷ್‌) ಎಂಬ ತನ್ನ ಪ್ರಸಿದ್ಧ ಪುಸ್ತಕದಲ್ಲಿ ಅವನು ಬರೆದುದು: “ನನ್ನ ಅಭಿಪ್ರಾಯದಲ್ಲಿ, ಎಲ್ಲ ಜೀವಿಗಳು ವಿಶೇಷ ರೀತಿಯ ಸೃಷ್ಟಿಗಳಲ್ಲ ಬದಲಾಗಿ ಕೆಲವೇ ಜೀವಿಗಳ ವಂಶಸ್ಥ ಜೀವಿಗಳಾಗಿವೆ.” ಆದಿಯಲ್ಲಿದ್ದ ಈ “ಕೆಲವೇ ಜೀವಿಗಳು” ಅಥವಾ ಸರಳವಾದ ಜೀವರೂಪಗಳು ಬಹು ವಿಸ್ತಾರವಾದ ಸಮಯಾವಧಿಗಳಾದ್ಯಂತ “ತೀರ ಚಿಕ್ಕ ಪರಿವರ್ತನೆಗಳ” ಮೂಲಕ ನಿಧಾನವಾಗಿ, ಭೂಮಿಯ ಮೇಲಿರುವ ಕೋಟ್ಯಂತರ ಜೀವರೂಪಗಳಾಗಿ ವಿಕಾಸಗೊಂಡವು ಎಂದು ಡಾರ್ವಿನ್‌ ಹೇಳಿದನು. ಈ ಚಿಕ್ಕ ಬದಲಾವಣೆಗಳು ಸಂಗ್ರಹವಾಗುತ್ತಾ, ಮೀನುಗಳನ್ನು ಉಭಯಚರಿಗಳಾಗಿ (ಆ್ಯಂಫೀಬಿಯನ್‌) ಮತ್ತು ಕಪಿಗಳನ್ನು ಮನುಷ್ಯರಾಗಿ ಮಾಡಿದ ದೊಡ್ಡ ಬದಲಾವಣೆಗಳನ್ನು ಉಂಟುಮಾಡಿದವೆಂದು ವಿಕಾಸವಾದಿಗಳು ಬೋಧಿಸುತ್ತಾರೆ. ಇಂತಹ ಭಾವಿತ ದೊಡ್ಡ ಬದಲಾವಣೆಗಳನ್ನು ಬೃಹದ್ವಿಕಾಸ (ಮ್ಯಾಕ್ರೋಎವಲ್ಯೂಷನ್‌) ಎಂದು ಸೂಚಿಸಲಾಗುತ್ತದೆ. ಅನೇಕರಿಗೆ, ಈ ಎರಡನೆಯ ವಾದವು ತರ್ಕಬದ್ಧವೆಂದು ತೋರುತ್ತದೆ. ‘ಒಂದೇ ಪ್ರಭೇದದೊಳಗೆ ಚಿಕ್ಕ ಬದಲಾವಣೆಗಳು ಸಾಧ್ಯವಿರುವಲ್ಲಿ, ದೀರ್ಘಾವಧಿಗಳಾದ್ಯಂತ ಜೀವವಿಕಾಸದಿಂದ ದೊಡ್ಡ ಬದಲಾವಣೆಗಳು ಏಕಾಗಬಾರದು?’ ಎಂದು ಅವರು ಯೋಚಿಸುತ್ತಾರೆ.b

      ಬೃಹದ್ವಿಕಾಸ ಬೋಧನೆಯು ಮೂರು ಮುಖ್ಯ ಊಹೆಗಳ ಮೇಲೆ ಹೊಂದಿಕೊಂಡಿದೆ:

      1. ವಿಕೃತಿಗಳು (ಮ್ಯುಟೇಷನ್ಸ್‌) ಹೊಸ ಪ್ರಭೇದಗಳನ್ನು ಉಂಟುಮಾಡಲು ಬೇಕಾದ ಮೂಲಸಾಮಗ್ರಿಗಳನ್ನು ಒದಗಿಸುತ್ತವೆ.c

      2. ನೈಸರ್ಗಿಕ ಆಯ್ಕೆ (ನ್ಯಾಚುರಲ್‌ ಸಿಲೆಕ್ಷನ್‌) ಹೊಸ ಪ್ರಭೇದಗಳ ಉತ್ಪಾದನೆಗೆ ನಡೆಸುತ್ತದೆ.

      3. ಸಸ್ಯ ಮತ್ತು ಪ್ರಾಣಿಗಳಲ್ಲಿ ಆಗುವ ಬೃಹದ್ವಿಕಾಸಾತ್ಮಕ ಬದಲಾವಣೆಗಳನ್ನು ಪಳೆಯುಳಿಕೆಯ (ಫಾಸಿಲ್‌) ದಾಖಲೆಯು ಸ್ಥಾಪಿಸುತ್ತದೆ.

      ಬೃಹದ್ವಿಕಾಸಕ್ಕಿರುವ ಪುರಾವೆಯು ಅದು ವಾಸ್ತವಾಂಶವೆಂದು ತೋರಿಸುವಷ್ಟು ಬಲವಾಗಿದೆಯೆ?

      ವಿಕೃತಿಗಳು ಹೊಸ ಪ್ರಭೇದಗಳನ್ನು ಉತ್ಪಾದಿಸಬಲ್ಲವೊ?

      ಒಂದು ಸಸ್ಯ ಅಥವಾ ಪ್ರಾಣಿಯ ಗುಣಲಕ್ಷಣಗಳನ್ನು ನಿರ್ಧರಿಸುವುದು ಅದರ ಆನುವಂಶಿಕ ಸಂಕೇತ ಭಾಷೆಯ (ಜಿನೆಟಿಕ್‌ ಕೋಡ್‌) ಸೂಚನೆಗಳೇ, ಅಂದರೆ ಪ್ರತಿ ಜೀವಕೋಶದ ನಾಭಿಯಲ್ಲಿ ಒಳಗೂಡಿರುವ ನೀಲಿಪ್ರತಿಗಳೇ.d ಜಿನೆಟಿಕ್‌ ಕೋಡ್‌ನ ವಿಕೃತಿಗಳು ಅಥವಾ ಹಠಾತ್ತಾದ ಬದಲಾವಣೆಗಳು, ಸಸ್ಯ ಮತ್ತು ಪ್ರಾಣಿಗಳ ವಂಶಗಳಲ್ಲಿ ಮಾರ್ಪಾಟುಗಳನ್ನು ಉಂಟುಮಾಡಬಲ್ಲವೆಂದು ಸಂಶೋಧಕರು ಕಂಡುಹಿಡಿದಿದ್ದಾರೆ. 1946ರಲ್ಲಿ, ನೋಬೆಲ್‌ ಪ್ರಶಸ್ತಿವಿಜೇತ ಮತ್ತು ವಿಕೃತಿ ತಳಿಶಾಸ್ತ್ರ ಅಧ್ಯಯನದ ಸ್ಥಾಪಕರಾದ ಹರ್ಮನ್‌ ಜೆ. ಮಲರ್‌ ಹೀಗೆಂದರು: “ಈ ಅನೇಕ, ವಿರಳವಾದ, ಮುಖ್ಯವಾಗಿ ಚಿಕ್ಕ ಬದಲಾವಣೆಗಳ ಸಂಗ್ರಹಣೆಯು ಕೃತಕ ರೀತಿಯಲ್ಲಿ ಪ್ರಾಣಿ ಮತ್ತು ಸಸ್ಯಗಳ ಅಭಿವೃದ್ಧಿಗಾಗಿರುವ ಮುಖ್ಯ ಮಾಧ್ಯಮವಾಗಿದೆ ಮಾತ್ರವಲ್ಲ, ಅದು ಹೆಚ್ಚು ವಿಶೇಷವಾಗಿ, ನೈಸರ್ಗಿಕ ಆಯ್ಕೆಯ ಮಾರ್ಗದರ್ಶನದಲ್ಲಿ ಪ್ರಾಕೃತಿಕ ವಿಕಾಸವು ನಡೆದುಬಂದಿರುವ ರೀತಿಯಾಗಿದೆ.”

      ಬೃಹದ್ವಿಕಾಸದ ಬೋಧನೆಯು, ವಿಕೃತಿಗಳು ಹೊಸ ಜೀವಿ ಪ್ರಭೇದಗಳನ್ನು ಮಾತ್ರವಲ್ಲ, ಸಸ್ಯ ಮತ್ತು ಪ್ರಾಣಿಗಳಲ್ಲಿ ಪೂರ್ತಿ ಹೊಸದಾಗಿರುವ ಕುಟುಂಬಗಳನ್ನೂ ಉತ್ಪಾದಿಸಬಲ್ಲವೆಂಬ ವಾದದ ಮೇಲೆ ಕಟ್ಟಲ್ಪಟ್ಟಿದೆ ನಿಶ್ಚಯ. ಘಂಟಾಘೋಷವಾಗಿ ಮಾಡಲಾಗಿರುವ ಈ ವಾದವನ್ನು ಪರೀಕ್ಷಿಸಲು ಯಾವ ಮಾರ್ಗವಾದರೂ ಇದೆಯೆ? ಸುಮಾರು 100 ವರ್ಷಗಳಲ್ಲಿ ತಳಿಶಾಸ್ತ್ರ ಸಂಶೋಧನೆಯ ಕ್ಷೇತ್ರದಲ್ಲಿ ಮಾಡಲ್ಪಟ್ಟಿರುವ ಅಧ್ಯಯನವು ಹೊರಗೆಡಹಿರುವ ಕೆಲವೊಂದು ವಿಷಯಗಳನ್ನು ಪರಿಗಣಿಸಿರಿ.

      ನೈಸರ್ಗಿಕ ಆಯ್ಕೆಯು ಗೊತ್ತುಗುರಿಯಿಲ್ಲದ ವಿಕೃತಿಗಳ ಮೂಲಕ ಹೊಸ ಸಸ್ಯ ಪ್ರಭೇದಗಳನ್ನು ಉತ್ಪಾದಿಸಸಾಧ್ಯವಿರುವಲ್ಲಿ, ಮಾನವನಿರ್ದೇಶನದ ಕೆಳಗೆ ಇಲ್ಲವೆ ಕೃತಕ ರೀತಿಯಲ್ಲಿ ವಿಕೃತಿಗಳ ಆಯ್ಕೆಯು ಹೆಚ್ಚು ಕಾರ್ಯಸಾಧಕವಾಗಿ ಹೊಸ ಪ್ರಭೇದಗಳನ್ನು ಉತ್ಪನ್ನಮಾಡಶಕ್ತವಾಗಿರಬೇಕು ಎಂಬ ವಿಚಾರವನ್ನು ವಿಜ್ಞಾನಿಗಳು 1930ನೇ ದಶಕದ ಉತ್ತರಾರ್ಧದಲ್ಲಿ ಉತ್ಸಾಹಪೂರ್ವಕವಾಗಿ ಅಂಗೀಕರಿಸಿದರು. “ಈ ಸುಖಭ್ರಾಂತಿಯು ಹೆಚ್ಚಿನ ಜೀವವಿಜ್ಞಾನಿಗಳು ಮತ್ತು ವಿಶೇಷವಾಗಿ ತಳಿಶಾಸ್ತ್ರಜ್ಞರು ಹಾಗೂ ತಳಿಗಾರರ ಮಧ್ಯೆ ಹರಡಿತು” ಎಂದು ಜರ್ಮನಿಯ ಸಸ್ಯ ತಳಿಬೆಳೆಸುವಿಕೆ ಸಂಶೋಧನೆಗಾಗಿರುವ ಮ್ಯಾಕ್ಸ್‌-ಪ್ಲಾಂಕ್‌ ಸಂಸ್ಥೆಯ ವಿಜ್ಞಾನಿ ವಾಲ್ಫ್‌-ಎಕಹಾರ್ಟ್‌ ಲೋನಿಗ್‌ ಎಚ್ಚರ!ದೊಂದಿಗಿನ ಒಂದು ಸಂದರ್ಶನದಲ್ಲಿ ಹೇಳಿದರು. ವಿಜ್ಞಾನಿಗಳಿಗೆ ಆ ಸುಖಭ್ರಾಂತಿ ಇದದ್ದೇಕೆ? ಸುಮಾರು 28 ವರ್ಷಕಾಲ, ಸಸ್ಯಗಳಲ್ಲಿ ವಿಕೃತಿ ತಳಿಶಾಸ್ತ್ರವನ್ನು ಅಧ್ಯಯನ ಮಾಡಿದ್ದ ವಿಜ್ಞಾನಿ ಲೋನಿಗ್‌ ಹೇಳಿದ್ದು: “ಸಸ್ಯ ಮತ್ತು ಪ್ರಾಣಿಗಳ ತಳಿಬೆಳೆಸುವಿಕೆಯ ಸಾಂಪ್ರದಾಯಿಕ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡುವ ಕಾಲ ಬಂದಿದೆಯೆಂದು ಈ ಸಂಶೋಧಕರು ನೆನಸಿದರು. ಅನುಕೂಲಕರವಾದ ವಿಕೃತಿಗಳನ್ನು ಉತ್ತೇಜಿಸಿ, ಆಯ್ದುಕೊಳ್ಳುವಲ್ಲಿ, ತಾವು ಹೊಸ ಮತ್ತು ಹೆಚ್ಚು ಉತ್ತಮವಾದ ಸಸ್ಯ ಮತ್ತು ಪ್ರಾಣಿಗಳನ್ನು ಬೆಳೆಸಲು ಶಕ್ತರಾಗುವೆವೆಂದು ಅವರು ಅಭಿಪ್ರಯಿಸಿದರು.”e

      ಯುನೈಟೆಡ್‌ ಸ್ಟೇಟ್ಸ್‌, ಏಷಿಯ ಮತ್ತು ಯೂರೋಪಿನ ವಿಜ್ಞಾನಿಗಳು, ಸಸ್ಯ ಹಾಗೂ ಪ್ರಾಣಿಗಳಲ್ಲಿ ವಿಕಾಸವನ್ನು ಬಿರುಸುಗೊಳಿಸುವುದೆಂದು ಭರವಸೆಯಿಟ್ಟ ವಿಧಾನಗಳನ್ನು ಬಳಸುತ್ತಾ, ದೊಡ್ಡಮೊತ್ತದ ಧನಸಹಾಯವಿದ್ದ ಸಂಶೋಧನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. 40ಕ್ಕೂ ಹೆಚ್ಚು ವರ್ಷಗಳ ತೀವ್ರ ಸಂಶೋಧನೆಯ ಫಲಿತಾಂಶಗಳೇನಾಗಿದ್ದವು? ಸಂಶೋಧಕರಾದ ಪೇಟರ್‌ ಫಾನ್‌ ಸೆಂಗ್‌ಬುಷ್‌ ಹೇಳುವುದು: “ಭಾರೀ ಮೊತ್ತದ ಹಣವು ವೆಚ್ಚವಾಯಿತಾದರೂ, ವಿಕಿರಣದ ಮೂಲಕ ಹೆಚ್ಚು ಉತ್ಪಾದಕವಾದ ಸಸ್ಯಗಳನ್ನು ಬೆಳೆಸುವ ಪ್ರಯತ್ನಗಳು ವ್ಯಾಪಕವಾಗಿ ನೆಲಕಚ್ಚಿದವು.” ಲೋನಿಗ್‌ ಹೇಳಿದ್ದು: “1980ರ ದಶಕದೊಳಗೆ, ವಿಜ್ಞಾನಿಗಳ ಹಾರೈಕೆಗಳು ಮತ್ತು ಸುಖಭ್ರಾಂತಿಯು ಲೋಕವ್ಯಾಪಕವಾಗಿ ವೈಫಲ್ಯದಲ್ಲಿ ಅಂತ್ಯಗೊಂಡಿತ್ತು. ಪಾಶ್ಚಾತ್ಯ ದೇಶಗಳಲ್ಲಿ, ವಿಕೃತಿ ತಳಿಬೆಳೆಸುವಿಕೆಯನ್ನು ಸಂಶೋಧನೆಯ ಒಂದು ಪ್ರತ್ಯೇಕ ಶಾಖೆಯಾಗಿ ಮಾಡುವುದನ್ನು ತ್ಯಜಿಸಲಾಯಿತು. ಹೆಚ್ಚುಕಡಮೆ ಎಲ್ಲ ಪರಿವರ್ತಿತ ರೂಪಗಳು ‘ನಕಾರಾತ್ಮಕ ಆಯ್ಕೆಯ ಮೌಲ್ಯಗಳನ್ನು’ ಪ್ರದರ್ಶಿಸಿದವು. ಅಂದರೆ, ಅವು ಒಂದೋ ಸತ್ತವು ಇಲ್ಲವೆ ನೈಸರ್ಗಿಕ ಸಸ್ಯಗಳಿಗಿಂತ ಬಲಹೀನವಾಗಿದ್ದವು.”f

      ಹಾಗಿದ್ದರೂ, ಸಾಮಾನ್ಯವಾಗಿ ಈಗ, ಸುಮಾರು ಒಂದು ನೂರು ವರುಷಗಳಿಂದ ನಡೆದಿರುವ ವಿಕೃತಿ ಸಂಶೋಧನೆಯಿಂದ, ಮತ್ತು ವಿಶೇಷವಾಗಿ 70 ವರುಷಗಳ ವಿಕೃತಿ ತಳಿಬೆಳೆಸುವಿಕೆಯಿಂದ ಸಂಗ್ರಹಿಸಿದ ಅಂಕಿಸಂಖ್ಯೆಗಳು, ಹೊಸ ಪ್ರಭೇದಗಳನ್ನು ಉತ್ಪಾದಿಸಲು ವಿಕೃತಿಗಳಿಗಿರುವ ಸಾಮರ್ಥ್ಯದ ಕುರಿತು ತೀರ್ಮಾನಮಾಡಲು ವಿಜ್ಞಾನಿಗಳನ್ನು ಶಕ್ತರನ್ನಾಗಿ ಮಾಡುತ್ತವೆ. ರುಜುವಾತನ್ನು ಪರೀಕ್ಷಿಸಿದ ಬಳಿಕ ಲೋನಿಗ್‌ ಈ ತೀರ್ಮಾನಕ್ಕೆ ಬಂದರು: “ವಿಕೃತಿಗಳು [ಸಸ್ಯ ಅಥವಾ ಪ್ರಾಣಿಯ] ಮೂಲ ಪ್ರಭೇದವನ್ನು ಪೂರ್ತಿಯಾಗಿ ಹೊಸದಾದ ಪ್ರಭೇದವಾಗಿ ಪರಿವರ್ತಿಸುವುದು ಅಸಾಧ್ಯ. ಈ ನಿರ್ಣಯವು, 20ನೆಯ ಶತಮಾನದಲ್ಲಿ ಒಟ್ಟಿನಲ್ಲಿ ಮಾಡಲಾಗಿರುವ ವಿಕೃತಿ ಸಂಶೋಧನೆಯ ಪ್ರಯೋಗಗಳು ಮತ್ತು ಫಲಿತಾಂಶಗಳು ಹಾಗೂ ಸಂಭಾವ್ಯತೆಯ ನಿಯಮಗಳೊಂದಿಗೆ ಸಹಮತದಲ್ಲಿದೆ. ಹೀಗೆ, ತಳಿಶಾಸ್ತ್ರಾನುಸಾರವಾಗಿ ಸರಿಯಾಗಿ ನಿರೂಪಿಸಲ್ಪಟ್ಟಿರುವ ಜಾತಿಗಳಿಗೆ ಆಕಸ್ಮಿಕ ವಿಕೃತಿಗಳು ರದ್ದುಗೊಳಿಸಸಾಧ್ಯವಿಲ್ಲದ ಅಥವಾ ಅತಿಕ್ರಮಿಸಸಾಧ್ಯವಿಲ್ಲದ ನಿಜವಾದ ಮಿತಿಗಳಿವೆಯೆಂಬುದನ್ನು ಪುನರಾವರ್ತಕ ವ್ಯತ್ಯಯನ ನಿಯಮವು ಸೂಚಿಸುತ್ತದೆ.”

      ಈ ಮೇಲಿನ ನಿಜತ್ವಗಳ ಮಹತ್ತ್ವದ ಕುರಿತು ಚಿಂತಿಸಿರಿ. ಶ್ರೇಷ್ಠರೀತಿಯ ತರಬೇತಿಹೊಂದಿರುವ ವಿಜ್ಞಾನಿಗಳೇ ಅನುಕೂಲ ವಿಕೃತಿಗಳನ್ನು ಕೃತಕವಾಗಿ ಚೋದಿಸುವ ಮೂಲಕ ಮತ್ತು ಆಯ್ಕೆಮಾಡುವ ಮೂಲಕ ಹೊಸ ಪ್ರಭೇದಗಳನ್ನು ಉಂಟುಮಾಡಲು ಅಶಕ್ತರಾದರೆ, ಬುದ್ಧಿಶಕ್ತಿಯಿಲ್ಲದ ಪ್ರಕ್ರಿಯೆಯೊಂದು ಹೆಚ್ಚು ಉತ್ತಮವಾಗಿರುವ ಕಾರ್ಯವನ್ನು ಮಾಡುವುದು ಸಂಭವನೀಯವೇ? ವಿಕೃತಿಗಳು ಒಂದು ಮೂಲ ಪ್ರಭೇದವನ್ನು ಪೂರ್ತಿ ಹೊಸತಾದ ಪ್ರಭೇದವಾಗಿ ಪರಿವರ್ತನೆ ಮಾಡಲು ಸಾಧ್ಯವಿಲ್ಲವೆಂದು ಸಂಶೋಧನೆ ತೋರಿಸುವಲ್ಲಿ, ಬೃಹದ್ವಿಕಾಸವು ಸಂಭವಿಸಿರುವುದಾದರೂ ಹೇಗೆ?

      ನೈಸರ್ಗಿಕ ಆಯ್ಕೆಯಿಂದ ಹೊಸ ಪ್ರಭೇದಗಳ ಸೃಷ್ಟಿ ಸಾಧ್ಯವೇ?

      ಯಾವುದನ್ನು ಡಾರ್ವಿನ್‌ ನೈಸರ್ಗಿಕ ಆಯ್ಕೆಯೆಂದು ಕರೆದನೊ ಅದರಿಂದಾಗಿ, ಪರಿಸರಕ್ಕೆ ಅತಿ ಯೋಗ್ಯತಮವಾದ ಜೀವರೂಪಗಳ ಪೋಷಣೆಯಾಗುವುದೆಂದು ಮತ್ತು ಯೋಗ್ಯತಮವಲ್ಲದ ಜೀವರೂಪಗಳು ಕ್ರಮೇಣ ನಿರ್ಮೂಲವಾಗುವವೆಂದು ಡಾರ್ವಿನ್‌ ನಂಬಿದನು. ಆಧುನಿಕ ವಿಕಾಸವಾದಿಗಳು ಕಲಿಸುವುದೇನಂದರೆ ಜೀವಿ ಪ್ರಭೇದಗಳು ಹರಡಿ, ಬೇರ್ಪಡುತ್ತಾ ಹೋದಂತೆ, ಅವುಗಳಲ್ಲಿ ಯಾವುದರ ತಳಿವಿಕೃತಿಗಳು ಹೊಸ ಪರಿಸರಕ್ಕೆ ಅವನ್ನು ಅತ್ಯುತ್ತಮವಾಗಿ ಹೊಂದಿಕೊಳ್ಳುವಂತೆ ಮಾಡಿದವೊ ಆ ಜೀವಿ ಪ್ರಭೇದಗಳನ್ನು ಪ್ರಕೃತಿ ಆಯ್ಕೆಮಾಡಿತು. ಇದರ ಪರಿಣಾಮವಾಗಿ, ಈ ಬೇರ್ಪಟ್ಟ ಗುಂಪುಗಳು ಕ್ರಮೇಣ ಪೂರ್ತಿ ಹೊಸ ಪ್ರಭೇದಗಳಾಗಿ ವಿಕಾಸಗೊಂಡವೆಂಬುದು ವಿಕಾಸವಾದಿಗಳ ವಾದ.

      ಈ ಹಿಂದೆ ಗಮನಿಸಿರುವಂತೆ, ವಿಕೃತಿಗಳು ಸಂಪೂರ್ಣವಾಗಿ ಹೊಸ ಜಾತಿಯ ಸಸ್ಯಗಳನ್ನಾಗಲಿ ಪ್ರಾಣಿಗಳನ್ನಾಗಲಿ ಉಂಟುಮಾಡುವುದು ಅಸಾಧ್ಯವೆಂಬುದನ್ನು ಸಂಶೋಧನೆಯ ರುಜುವಾತು ಪ್ರಬಲವಾಗಿ ಸೂಚಿಸುತ್ತದೆ. ಹೀಗಿದ್ದರೂ, ನೈಸರ್ಗಿಕ ಆಯ್ಕೆಯು ಹೊಸ ಪ್ರಭೇದಗಳನ್ನು ಉತ್ಪಾದಿಸಲು ಪ್ರಯೋಜನಕರವಾದ ವಿಕೃತಿಗಳನ್ನು ಆರಿಸಿಕೊಳ್ಳುತ್ತದೆಂಬ ವಾದವನ್ನು ಬೆಂಬಲಿಸಲು ವಿಕಾಸವಾದಿಗಳು ಯಾವ ಪುರಾವೆಯನ್ನು ಒದಗಿಸುತ್ತಾರೆ? ಅಮೆರಿಕದ ರಾಷ್ಟ್ರೀಯ ವಿಜ್ಞಾನಗಳ ಅಕಾಡೆಮಿ (NAS) 1999ರಲ್ಲಿ ಪ್ರಕಾಶಿಸಿದ ಒಂದು ಬ್ರೋಷರ್‌ ಹೇಳುವುದು: “ಜಾತ್ಯುದ್ಭವ [ಸ್ಪೀಷಿಏಷನ್‌, ಅಂದರೆ ಹೊಸ ಪ್ರಭೇದಗಳ ವಿಕಾಸ]ಕ್ಕಿರುವ ವಿಶೇಷವಾಗಿ ನಿರ್ಬಂಧಪಡಿಸುವ ಒಂದು ಉದಾಹರಣೆಯು, ಗಲಾಪಗಸ್‌ ದ್ವೀಪಗಳಲ್ಲಿ ಡಾರ್ವಿನ್‌ ಅಧ್ಯಯನ ಮಾಡಿದ 13 ಪ್ರಭೇದಗಳ ಫಿಂಚ್‌ ಪಕ್ಷಿಗಳಾಗಿವೆ. ಈ ಪಕ್ಷಿಗಳು ಈಗ ಡಾರ್ವಿನನ ಫಿಂಚ್‌ ಪಕ್ಷಿಗಳೆಂದು ಪ್ರಸಿದ್ಧವಾಗಿವೆ.”

      ಸಾವಿರದ ಒಂಬೈನೂರ ಎಪ್ಪತ್ತುಗಳಲ್ಲಿ, ಪೀಟರ್‌ ಮತ್ತು ರೋಸ್ಮರೀ ಗ್ರಾಂಟ್‌ರ ನೇತೃತ್ವದಲ್ಲಿ ಒಂದು ಸಂಶೋಧನೆಯ ತಂಡವು ಈ ಫಿಂಚ್‌ ಪಕ್ಷಿಗಳ ಅಧ್ಯಯನವನ್ನು ಆರಂಭಿಸಿತು. ಒಂದು ವರ್ಷದ ಅನಾವೃಷ್ಟಿಯ ಬಳಿಕ, ತುಸು ದೊಡ್ಡ ಕೊಕ್ಕುಗಳಿದ್ದ ಫಿಂಚ್‌ ಪಕ್ಷಿಗಳು ಚಿಕ್ಕ ಕೊಕ್ಕುಗಳಿದ್ದ ಫಿಂಚ್‌ ಪಕ್ಷಿಗಳಿಗಿಂತ ಹೆಚ್ಚು ಸುಲಭವಾಗಿ ಬದುಕಿ ಉಳಿದವೆಂದು ಆ ತಂಡವು ಕಂಡುಹಿಡಿಯಿತು. ಈ 13 ಫಿಂಚ್‌ ಪಕ್ಷಿ ಪ್ರಭೇದಗಳನ್ನು ಗುರುತಿಸುವ ಪ್ರಧಾನ ವಿಧಗಳಲ್ಲಿ ಒಂದು ಅವುಗಳ ಕೊಕ್ಕುಗಳ ಗಾತ್ರ ಮತ್ತು ಆಕಾರವಾಗಿರುವುದರಿಂದ ಈ ಶೋಧನೆಯು ಮಹತ್ವದ್ದೆಂದು ಅಭಿಪ್ರಯಿಸಲಾಯಿತು. ಆ ಬ್ರೋಷರ್‌ ಮುಂದುವರಿಸುತ್ತ ಹೇಳುವುದು: “ಗ್ರಾಂಟ್‌ ದಂಪತಿಯ ಅಂದಾಜಿಗನುಸಾರ, ಈ ದ್ವೀಪಗಳಲ್ಲಿ ಸುಮಾರು 10 ವರ್ಷಗಳಿಗೊಮ್ಮೆ ಅನಾವೃಷ್ಟಿ ಸಂಭವಿಸುವಲ್ಲಿ, ಸುಮಾರು 200 ವರ್ಷಗಳಲ್ಲಿಯೇ ಒಂದು ಹೊಸ ಫಿಂಚ್‌ ಪ್ರಭೇದ ಎದ್ದು ಬರಬಹುದು.”

      ಆದರೂ, ಈ ಎನ್‌ಎಎಸ್‌ ಬ್ರೋಷರ್‌, ವಿಶಿಷ್ಟವಾದರೂ ಪೇಚಾಟಕ್ಕೆ ಸಿಕ್ಕಿಸುವ ಕೆಲವು ನಿಜತ್ವಗಳನ್ನು ತಿಳಿಸುವುದಿಲ್ಲ. ಆ ಅನಾವೃಷ್ಟಿಯ ಅನಂತರದ ವರುಷಗಳಲ್ಲಿ, ಚಿಕ್ಕ ಕೊಕ್ಕುಗಳ ಫಿಂಚ್‌ಗಳೇ ಪುನಃ ಹೆಚ್ಚು ಸಂಖ್ಯೆಯಲ್ಲಿ ತೋರಿಬಂದವು. ಹೀಗಿರುವುದರಿಂದ ಪೀಟರ್‌ ಗ್ರಾಂಟ್‌ ಮತ್ತು ವಿದ್ಯಾರ್ಥಿ ಲೈಲ್‌ ಗಿಬ್ಸ್‌ ತಾವು “ಆಯ್ಕೆಯ ದಿಕ್ಕು ಬದಲಾದುದನ್ನು” ನೋಡಿದೆವು ಎಂದು 1987ರಲ್ಲಿ ಪ್ರಕೃತಿ (ಇಂಗ್ಲಿಷ್‌) ಎಂಬ ವಿಜ್ಞಾನ ಪತ್ರಿಕೆಯಲ್ಲಿ ಬರೆದರು. ಪ್ರತಿ ಬಾರಿ ಹವಾಮಾನದಲ್ಲಿ ಬದಲಾವಣೆ ಉಂಟಾದಾಗ ಪಕ್ಷಿಗಳ “ಸಂಖ್ಯೆಯು ನೈಸರ್ಗಿಕ ಆಯ್ಕೆಯಿಂದಾಗಿ ಹಿಂದೆ ಮುಂದೆ ಓಲಾಡುತ್ತಿದೆ” ಎಂದು ವಿಜ್ಞಾನಿ ಗ್ರಾಂಟ್‌ 1991ರಲ್ಲಿ ಬರೆದರು. ಮತ್ತು ವಿವಿಧ “ಪ್ರಭೇದಗಳ” ಫಿಂಚ್‌ ಪಕ್ಷಿಗಳಲ್ಲಿ ಕೆಲವು ತಳಿಮಿಶ್ರವಾಗುತ್ತ, ಹೆತ್ತವರಿಗಿಂತ ಹೆಚ್ಚುಕಾಲ ಉಳಿಯುವ ಮರಿಗಳನ್ನು ಹುಟ್ಟಿಸುತ್ತವೆಂದು ಸಹ ಆ ಸಂಶೋಧಕರು ಗಮನಿಸಿದರು. ಈ ತಳಿಮಿಶ್ರವಾಗುವಿಕೆ ಮುಂದುವರಿಯುವಲ್ಲಿ, 200 ವರುಷಗಳೊಳಗೆ ಈ ಎರಡು “ಪ್ರಭೇದಗಳು” ಒಂದುಗೂಡಿ ಒಂದೇ ಪ್ರಭೇದವಾಗಬಲ್ಲದೆಂದು ಪೀಟರ್‌ ಮತ್ತು ರೋಸ್ಮರೀ ಗ್ರಾಂಟ್‌ರವರು ತೀರ್ಮಾನಿಸಿದರು.

      ಹಿಂದೆ ಇಸವಿ 1966ರಲ್ಲಿ, ವಿಕಾಸವಾದ ಜೀವವಿಜ್ಞಾನಿ ಜಾರ್ಜ್‌ ಕ್ರಿಸ್ಟಫರ್‌ ವಿಲ್ಯಮ್ಸ್‌ ಎಂಬವರು ಬರೆದುದು: “ನೈಸರ್ಗಿಕ ಆಯ್ಕೆಯ ವಾದವು ಪ್ರಥಮವಾಗಿ ವಿಕಾಸಾತ್ಮಕ ಬದಲಾವಣೆಗೆ ಒಂದು ವಿವರಣೆಯಾಗಿ ಬಳಸಲ್ಪಟ್ಟಿರುವುದು ವಿಷಾದಕರವೆಂದು ನನ್ನ ಅಭಿಪ್ರಾಯ. ಅದು, ಹೊಂದಾಣಿಕೆಗಳಾಗುವುದಕ್ಕೆ ಕಾರಣ ಕೊಡುವ ಒಂದು ವಿವರಣೆಯಾಗಿರುವುದು ಎಷ್ಟೋ ಹೆಚ್ಚು ಮಹತ್ವಪೂರ್ಣ.” ವಿಕಾಸವಾದದ ಸಿದ್ಧಾಂತಕಾರ ಜೆಫ್ರಿ ಶ್ವಾರ್ಟ್ಸ್‌, 1999ರಲ್ಲಿ ಬರೆದುದೇನಂದರೆ ವಿಲ್ಯಮ್ಸ್‌ರವರ ತೀರ್ಮಾನಗಳು ಸರಿಯಾಗಿರುವಲ್ಲಿ, ನೈಸರ್ಗಿಕ ಆಯ್ಕೆಯು, ಜೀವಿ ಪ್ರಭೇದಗಳು ಅಸ್ತಿತ್ವದಲ್ಲಿರಲಿಕ್ಕಾಗಿ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಸಹಾಯಮಾಡುತ್ತಿರಬಹುದೇ ಹೊರತು “ಹೊಸತಾದದ್ದೇನನ್ನೂ ಉಂಟುಮಾಡುತ್ತಿಲ್ಲ.”

      ಹೌದು, ಡಾರ್ವಿನನ ಫಿಂಚ್‌ ಪಕ್ಷಿಗಳು ‘ಹೊಸತಾದದ್ದಾಗಿ’ ಪರಿಣಮಿಸುತ್ತಿಲ್ಲ. ಅವು ಈಗಲೂ ಫಿಂಚ್‌ ಪಕ್ಷಿಗಳೇ. ಮತ್ತು ಅವುಗಳಲ್ಲಾಗುವ ತಳಿಮಿಶ್ರವಾಗುವಿಕೆಯು, ಕೆಲವು ವಿಕಾಸವಾದಿಗಳು ಒಂದು ಪ್ರಭೇದವನ್ನು ನಿರ್ಧರಿಸಲು ಯಾವ ವಿಧಾನಗಳನ್ನು ಉಪಯೋಗಿಸುತ್ತಾರೆ ಎಂಬುದನ್ನು ಅನುಮಾನಿಸುವಂತೆ ಮಾಡುತ್ತದೆ. ಅಲ್ಲದೆ, ಪ್ರತಿಷ್ಠಿತ ವೈಜ್ಞಾನಿಕ ಅಕಾಡಮಿಗಳು ಸಹ, ದೊರೆಯುವ ರುಜುವಾತನ್ನು ಪೂರ್ವಕಲ್ಪಿತ ಅಭಿಪ್ರಾಯದ ಮೇರೆಗೆ ವರದಿಮಾಡುತ್ತವೆ ಎಂಬ ನಿಜತ್ವವನ್ನು ಅದು ಬಯಲಿಗೆಳೆಯುತ್ತದೆ.

      ಪಳೆಯುಳಿಕೆಯ ದಾಖಲೆಯು ಬೃಹದ್ವಿಕಾಸಾತ್ಮಕ ಬದಲಾವಣೆಗಳನ್ನು ಸಮರ್ಥಿಸುತ್ತದೊ?

      ಈ ಹಿಂದೆ ತಿಳಿಸಲ್ಪಟ್ಟಿರುವ ಎನ್‌ಎಎಸ್‌ ಬ್ರೋಷರ್‌, ವಿಜ್ಞಾನಿಗಳು ಕಂಡುಕೊಂಡಿರುವ ಪಳೆಯುಳಿಕೆಗಳು ಬೃಹದ್ವಿಕಾಸದ ಬಗ್ಗೆ ಬೇಕಾಗುವುದಕ್ಕಿಂತಲೂ ಹೆಚ್ಚು ರುಜುವಾತನ್ನು ಕೊಡುತ್ತವೆಂಬ ಅಭಿಪ್ರಾಯವನ್ನು ವಾಚಕನಲ್ಲಿ ಮೂಡಿಸುತ್ತದೆ. ಅದು ಘೋಷಿಸುವುದು: “ಮೀನು ಮತ್ತು ಉಭಯಚರಿ ಜೀವಿಗಳ ಮಧ್ಯೆ, ಉಭಯಚರಿಗಳು ಮತ್ತು ಸರೀಸೃಪಗಳ ಮಧ್ಯೆ, ಸರೀಸೃಪಗಳು ಮತ್ತು ಸಸ್ತನಿಗಳ ಮಧ್ಯೆ, ಮತ್ತು ಪ್ರೈಮೇಟ್‌ ಗಣದ ವಂಶಕ್ರಮದಲ್ಲಿ ಎಷ್ಟೊಂದು ಮಧ್ಯವರ್ತಿ ಜೀವರೂಪಗಳು ಕಂಡುಹಿಡಿಯಲ್ಪಟ್ಟಿವೆಯೆಂದರೆ, ಒಂದು ನಿರ್ದಿಷ್ಟ ಪ್ರಭೇದದಿಂದ ಇನ್ನೊಂದಕ್ಕೆ ಪರಿವರ್ತನೆ ಯಾವಾಗ ಸಂಭವಿಸುತ್ತದೆಂದು ಸ್ಪಷ್ಟವಾಗಿ ಗುರುತಿಸಲು ಅನೇಕ ವೇಳೆ ಕಷ್ಟಕರವಾಗಿರುತ್ತದೆ.”

      ತುಂಬ ಭರವಸೆಯಿಂದ ಮಾಡಲ್ಪಟ್ಟಿರುವ ಈ ಹೇಳಿಕೆಯು ಆಶ್ಚರ್ಯಹುಟ್ಟಿಸುತ್ತದೆ. ಏಕೆ? ನ್ಯಾಷನಲ್‌ ಜಿಯಗ್ರಾಫಿಕ್‌ ಪತ್ರಿಕೆಯು 2004ರಲ್ಲಿ, ಪಳೆಯುಳಿಕೆಯ ದಾಖಲೆಯು, “ಜೀವವಿಕಾಸವೆಂಬ ಚಲನಚಿತ್ರದಲ್ಲಿ ಪ್ರತಿ 1,000 ಬಿಡಿಚಿತ್ರಗಳಲ್ಲಿ 999 ಬಿಡಿಚಿತ್ರಗಳು ಕತ್ತರಿಸಲ್ಪಟ್ಟಿರುವಂತೆ” ಇದೆಯೆಂದು ವರ್ಣಿಸಿತು. ಹಾಗಾದರೆ, ಪ್ರತಿ 1,000 “ಬಿಡಿಚಿತ್ರಗಳಲ್ಲಿ” ಉಳಿದಿರುವ ಒಂದೇ ಚಿತ್ರವು ಬೃಹದ್ವಿಕಾಸದ ಕಾರ್ಯಗತಿಯನ್ನು ನಿಜವಾಗಿಯೂ ರುಜುಪಡಿಸುತ್ತದೆಯೆ? ಪಳೆಯುಳಿಕೆಯ ದಾಖಲೆಯು ವಾಸ್ತವವಾಗಿ ಏನನ್ನು ತೋರಿಸುತ್ತದೆ? ಅತ್ಯುತ್ಸಾಹಿ ವಿಕಾಸವಾದಿಯಾದ ನೈಲ್ಸ್‌ ಎಲ್ಡ್ರೆಜ್‌ ಒಪ್ಪಿಕೊಳ್ಳುವುದೇನಂದರೆ, ಆ ದಾಖಲೆಯು ದೀರ್ಘ ಸಮಯಾವಧಿಗಳಾದ್ಯಂತ “ಹೆಚ್ಚಿನ ಜೀವಿ ಪ್ರಭೇದಗಳಲ್ಲಿ ಹೆಚ್ಚುಕಡಮೆ ಯಾವುದೇ ವಿಕಾಸಾತ್ಮಕ ಬದಲಾವಣೆ ನಡೆದಿಲ್ಲವೆಂಬುದನ್ನು” ತೋರಿಸುತ್ತದೆ.

      ವಿಜ್ಞಾನಿಗಳು ಇಂದಿನ ವರೆಗೆ ಲೋಕವ್ಯಾಪಕವಾಗಿ ಸುಮಾರು 20 ಕೋಟಿ ದೊಡ್ಡ ಪಳೆಯುಳಿಕೆಗಳನ್ನೂ ನೂರಾರು ಕೋಟಿ ಸೂಕ್ಷ್ಮ ಪಳೆಯುಳಿಕೆಗಳನ್ನೂ ಭೂಮಿಯಿಂದ ಅಗೆದುತೆಗೆದಿದ್ದಾರೆ. ಈ ದೊಡ್ಡ ಮೊತ್ತದ ವಿವರವಾದ ದಾಖಲೆಯು, ಪ್ರಾಣಿಗಳ ಪ್ರಧಾನ ಗುಂಪುಗಳೆಲ್ಲ ಹಠಾತ್ತಾಗಿ ತೋರಿಬಂದು, ಕಾರ್ಯತಃ ಬದಲಾವಣೆಯೇ ಇಲ್ಲದೆ ಉಳಿದವೆಂದೂ, ಅನೇಕ ಪ್ರಭೇದಗಳು ಅವುಗಳು ತೋರಿಬಂದಷ್ಟೇ ಹಠಾತ್ತಾಗಿ ಕಣ್ಮರೆಯಾಗಿ ಹೋದವೆಂದೂ ತೋರಿಸುತ್ತವೆಂಬ ಸಂಗತಿಯನ್ನು ಅನೇಕ ಸಂಶೋಧಕರು ಒಪ್ಪಿಕೊಳ್ಳುತ್ತಾರೆ. ಪಳೆಯುಳಿಕೆಯ ದಾಖಲೆಯ ರುಜುವಾತನ್ನು ವಿಮರ್ಶಿಸಿದ ಬಳಿಕ, ಜಾನತನ್‌ ವೆಲ್ಸ್‌ ಎಂಬ ಜೀವವಿಜ್ಞಾನಿಯು ಬರೆಯುವುದು: “ಸಾಮ್ರಾಜ್ಯ (ಕಿಂಗ್ಡಮ್‌), ವಿಭಾಗ (ಫೈಲ) ಮತ್ತು ವರ್ಗ (ಕ್ಲಾಸ್‌)ಗಳ ಅಂತಸ್ತಿನಲ್ಲಿ, ಒಂದೇ ಪಿತೃಗಳಿಂದ ಇಳಿದುಬಂದು ಮುಂದೆ ಪರಿವರ್ತನೆ ಹೊಂದುವ ವಂಶಕ್ರಮವು ವೈಜ್ಞಾನಿಕವಾಗಿ ಅವಲೋಕಿಸಲ್ಪಟ್ಟಿರುವ ಒಂದು ನಿಜತ್ವ ಅಲ್ಲ ಎಂಬುದು ವ್ಯಕ್ತ. ಪಳೆಯುಳಿಕೆ ಮತ್ತು ಆಣ್ವಿಕ ಪುರಾವೆಗನುಸಾರ ತೀರ್ಮಾನಿಸುವಾಗ ಅದು ಸಾಧಾರವುಳ್ಳ ಸಿದ್ಧಾಂತವೂ ಅಲ್ಲ.”

      ಜೀವವಿಕಾಸ​—⁠ವಾಸ್ತವವೊ ಮಿಥ್ಯೆಯೊ?

      ಹಾಗಾದರೆ ಅನೇಕ ಗಣ್ಯ ವಿಕಾಸವಾದಿಗಳು ಬೃಹದ್ವಿಕಾಸ ನಿಜತ್ವವೆಂದು ಪಟ್ಟುಹಿಡಿಯುವುದೇಕೆ? ರಿಚರ್ಡ್‌ ಡಾಕನ್ಸ್‌ರ ತರ್ಕವಾದಗಳಲ್ಲಿ ಕೆಲವೊಂದನ್ನು ಟೀಕಿಸಿದ ಬಳಿಕ ಪ್ರಭಾವಶಾಲಿ ವಿಕಾಸವಾದಿ ರಿಚರ್ಡ್‌ ಲವಾಂಟಿನ್‌ ಬರೆದದ್ದೇನೆಂದರೆ, ಅನೇಕ ವಿಜ್ಞಾನಿಗಳು ಸಾಮಾನ್ಯ ಪರಿಜ್ಞಾನಕ್ಕೆ ಹೊಂದಿಕೆಯಾಗಿಲ್ಲದ ವೈಜ್ಞಾನಿಕ ವಾದಗಳನ್ನು ಒಪ್ಪಿಕೊಳ್ಳಲು ಸಿದ್ಧರಾಗಿರುತ್ತಾರೆ “ಏಕೆಂದರೆ ನಮ್ಮ ಆದ್ಯ ಬದ್ಧತೆ ಭೌತಿಕವಾದಕ್ಕಿದೆ.”g ಅನೇಕ ವಿಜ್ಞಾನಿಗಳು, ಒಬ್ಬ ಬುದ್ಧಿಶಾಲಿ ವಿನ್ಯಾಸಕನಿದ್ದಾನೆಂಬ ಸಾಧ್ಯತೆಯ ಕುರಿತು ಯೋಚಿಸಲೂ ನಿರಾಕರಿಸುತ್ತಾರೆ, ಯಾಕೆಂದರೆ “ದೇವರು ಒಳಗೆ ಕಾಲಿಡಲು ಬಿಡಲಾರೆವು” ಎಂದು ಲವಾಂಟಿನ್‌ ಬರೆಯುತ್ತಾರೆ.

      ಈ ಸಂಬಂಧದಲ್ಲಿ, ಸಮಾಜಶಾಸ್ತ್ರಜ್ಞ ರಾಡ್ನಿ ಸ್ಟಾರ್ಕ್‌, ಹೀಗೆ ಹೇಳಿದರೆಂದು ಸೈಅಂಟಿಫಿಕ್‌ ಅಮೆರಿಕನ್‌ ಪತ್ರಿಕೆ ತಿಳಿಸುತ್ತದೆ: “ನೀವು ವೈಜ್ಞಾನಿಕ ವ್ಯಕ್ತಿ ಅನಿಸಿಕೊಳ್ಳಬೇಕಾದರೆ, ಧರ್ಮದ ಬೇಡಿಗಳಿಂದ ನಿಮ್ಮ ಮನಸ್ಸನ್ನು ಸ್ವತಂತ್ರವಾಗಿಟ್ಟುಕೊಳ್ಳಬೇಕೆಂಬುದು 200 ವರುಷಗಳಿಂದ ಉತ್ತೇಜಿಸಲ್ಪಟ್ಟಿರುವ ವಿಚಾರವಾಗಿದೆ.” ಅವರು ಮತ್ತೂ ಹೇಳುವುದು, ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ “ಧಾರ್ಮಿಕ ಜನ ಬಾಯಿಮುಚ್ಚಿಕೊಂಡಿರುತ್ತಾರೆ ಮತ್ತು ಅಧಾರ್ಮಿಕರು ಧಾರ್ಮಿಕರ ವಿರುದ್ಧ ಭೇದಭಾವ ತೋರಿಸುತ್ತಾರೆ.” ಸ್ಟಾರ್ಕ್‌ ಅವರಿಗನುಸಾರ, “[ವೈಜ್ಞಾನಿಕ ಸಮುದಾಯದ] ಉನ್ನತ ಶ್ರೇಣಿಯಲ್ಲಿನ ಜನರ ಮಧ್ಯೆ ಅಧಾರ್ಮಿಕ ವ್ಯಕ್ತಿಗೆ ಮಾನವಿದೆ.”

      ಒಂದುವೇಳೆ ನೀವು ಬೃಹದ್ವಿಕಾಸವು ಸತ್ಯವೆಂದು ಅಂಗೀಕರಿಸುತ್ತೀರಾದರೆ, ಅಜ್ಞೇಯತಾವಾದಿ ಅಥವಾ ನಾಸ್ತಿಕ ವಿಜ್ಞಾನಿಗಳು ತಮ್ಮ ವೈಯಕ್ತಿಕ ನಂಬಿಕೆಗಳು ವೈಜ್ಞಾನಿಕ ಆವಿಷ್ಕಾರಗಳ ಕುರಿತಾದ ತಮ್ಮ ವಿವರಣೆಯನ್ನು ಪ್ರಭಾವಿಸಲು ಬಿಡುವುದಿಲ್ಲವೆಂಬ ಮಾತು ನಿಜವೆಂದು ನಂಬಬೇಕಾಗುವುದು. ಸರಿಯಾಗಿ ನಿರೂಪಿಸಲ್ಪಟ್ಟ ಒಂದೇ ಒಂದು ಜೀವಿ ಪ್ರಭೇದವನ್ನು ಸಹ ವಿಕೃತಿಗಳು ಪೂರ್ತಿಯಾಗಿ ಹೊಸತಾದ ಇನ್ನೊಂದು ಪ್ರಭೇದವಾಗಿ ಮಾರ್ಪಡಿಸಿಲ್ಲ ಎಂಬುದನ್ನು ನೂರಾರು ಕೋಟಿ ವಿಕೃತಿಗಳ ಅಧ್ಯಯನದಲ್ಲಿ ಕಳೆಯಲಾದ ನೂರು ವರುಷಗಳ ಸಂಶೋಧನೆಯು ತೋರಿಸಿರುವುದಾದರೂ, ವಿಕೃತಿಗಳು ಮತ್ತು ನೈಸರ್ಗಿಕ ಆಯ್ಕೆಯೇ ಸಕಲ ಜಟಿಲವಾದ ಜೀವರೂಪಗಳನ್ನು ಉತ್ಪಾದಿಸಿದವೆಂಬುದನ್ನು ನೀವು ನಂಬಬೇಕಾಗುವುದು. ಸಸ್ಯ ಹಾಗೂ ಪ್ರಾಣಿಗಳ ಪ್ರಧಾನ ಜಾತಿಗಳು ಹಠಾತ್ತಾಗಿ ಕಾಣಿಸಿಕೊಂಡು ಅಪರಿಮಿತ ಸಮಯಾವಧಿ ದಾಟಿದರೂ ವಿಕಾಸಗೊಂಡು ಹೊಸ ಜಾತಿಗಳಾಗಲಿಲ್ಲ ಎಂಬುದನ್ನು ಪಳೆಯುಳಿಕೆಯ ದಾಖಲೆ ತೋರಿಸಿದರೂ, ಎಲ್ಲ ಜೀವಿಗಳು ಒಂದು ಸಾಮಾನ್ಯ ಪೂರ್ವಿಕ ಜೀವಿಯಿಂದ ಕ್ರಮೇಣ ವಿಕಾಸಗೊಂಡವು ಎಂಬುದನ್ನು ನೀವು ನಂಬಬೇಕಾಗುವುದು. ಆದರೆ, ಈ ರೀತಿಯ ನಂಬಿಕೆ ವಾಸ್ತವಾಂಶದ ಮೇಲೆ ಆಧರಿಸಿದೆಯೆಂದು ತೋರುತ್ತದೊ ಇಲ್ಲವೆ ಮಿಥ್ಯೆಯ ಮೇಲಾಧರಿತವಾಗಿದೆಯೊ? (g 9/06)

      [ಪಾದಟಿಪ್ಪಣಿಗಳು]

      a ತಳಿಗಾರರು ನಾಯಿಗಳನ್ನು ಆಯ್ಕೆಮಾಡುತ್ತ ಸಂಗ ಮಾಡಿಸುವಾಗ ಕ್ರಮೇಣ, ಮರಿಗಳಿಗೆ ಅವುಗಳ ಪೂರ್ವಿಕರಿಗಿಂತ ಗಿಡ್ಡ ಕಾಲುಗಳು ಅಥವಾ ಉದ್ದ ಕೂದಲುಗಳಿರುತ್ತವೆ. ಆದರೂ, ನಾಯಿಗಳ ತಳಿಗಾರರು ಉಂಟುಮಾಡಬಲ್ಲ ಬದಲಾವಣೆಗಳು ಅನೇಕವೇಳೆ ವಂಶವಾಹಿಯಲ್ಲಿನ ಕಾರ್ಯನಷ್ಟದಿಂದ ಉಂಟಾಗುತ್ತವೆ. ದೃಷ್ಟಾಂತಕ್ಕೆ, ಡಾಕ್ಸ್‌ಹುಂಟ್‌ ನಾಯಿಯ ಚಿಕ್ಕ ಗಾತ್ರಕ್ಕೆ ಕಾರಣವು ಮೃದ್ವಸ್ಥಿಯ (ಕಾರ್ಟಿಲಿಜ್‌) ಸಾಧಾರಣ ಬೆಳವಣಿಗೆ ನಡೆಯದೆ ಹೋಗುವುದೇ. ಇದು ಕುಬ್ಜತೆಯನ್ನು (ಡ್ವಾರ್ಫಿಸ್ಮ್‌) ಉಂಟುಮಾಡುತ್ತದೆ.

      b “ಪ್ರಭೇದ” ಎಂಬ ಪದವನ್ನು ಈ ಲೇಖನದಲ್ಲಿ ಪದೇಪದೇ ಉಪಯೋಗಿಸಲಾಗಿರುವುದಾದರೂ, ಇದು ಬೈಬಲಿನ ಆದಿಕಾಂಡ ಪುಸ್ತಕದಲ್ಲಿ ಕಂಡುಬರುವುದಿಲ್ಲ ಎಂಬುದನ್ನು ಗಮನಿಸತಕ್ಕದ್ದು. ಆದಿಕಾಂಡ ಪುಸ್ತಕದಲ್ಲಿ, ಹೆಚ್ಚಿನದ್ದನ್ನು ಒಳಗೂಡಿಸುವ “ಜಾತಿ” ಎಂಬ ಪದವನ್ನು ಬಳಸಲಾಗಿದೆ. ಹೆಚ್ಚಾಗಿ ವಿಜ್ಞಾನಿಗಳು ಹೊಸ ಪ್ರಭೇದದ ವಿಕಾಸವೆಂದು ಕರೆಯಲು ಇಷ್ಟಪಡುವ ಸಂಗತಿಯು ಆದಿಕಾಂಡದ ವೃತ್ತಾಂತದಲ್ಲಿ ಉಪಯೋಗಿಸಲ್ಪಟ್ಟಿರುವಂಥ ಒಂದು “ಜಾತಿ”ಯೊಳಗಿನ ವಿಭಿನ್ನತೆಯಾಗಿದೆಯಷ್ಟೇ.

      c “ಜೀವಿಗಳನ್ನು ಹೇಗೆ ವರ್ಗೀಕರಿಸಲಾಗಿದೆ?” ಎಂಬ ಚೌಕವನ್ನು ನೋಡಿ.

      d ಜೀವಕೋಶದ ಕೋಶದ್ರವ್ಯವು (ಸೈಟೋಪ್ಲಾಸ್ಮ್‌), ಅದರ ಪೊರೆಗಳು (ಮೆಂಬ್ರೇನ್‌) ಮತ್ತು ಇತರ ರಚನೆಗಳು ಸಹ ಒಂದು ಜೀವಿಯನ್ನು ರೂಪಿಸುವುದರಲ್ಲಿ ಪಾತ್ರ ವಹಿಸುತ್ತವೆಂದು ಸಂಶೋಧನೆಯು ತೋರಿಸುತ್ತದೆ.

      e ಈ ಲೇಖನದಲ್ಲಿರುವ ಲೋನಿಗ್‌ರ ಹೇಳಿಕೆಗಳು ಅವರ ಸ್ವಂತದ್ದೇ ಹೊರತು, ಸಸ್ಯ ತಳಿಬೆಳೆಸುವಿಕೆ ಸಂಶೋಧನೆಗಾಗಿರುವ ಮ್ಯಾಕ್ಸ್‌-ಪ್ಲಾಂಕ್‌ ಸಂಸ್ಥೆಯ ಅಭಿಪ್ರಾಯವಲ್ಲ.

      f ವಿಕೃತಿ ಪ್ರಯೋಗಗಳನ್ನು ಮಾಡಿದಾಗ, ಪರಿವರ್ತಿತ ರೂಪಗಳ ಸಂಖ್ಯೆಯು ಒಂದೇ ಸಮನೆ ಇಳಿಮುಖವಾದವು, ಆದರೆ ಮೂಲ ರೂಪಗಳು ಹೆಚ್ಚಾಗುತ್ತ ಇದ್ದವೆಂಬುದು ಪದೇ ಪದೇ ತೋರಿಬಂತು. ಈ ಅಸಾಧಾರಣ ಘಟನೆಯಿಂದ ವಿಜ್ಞಾನಿ ಲೋನಿಗ್‌, “ಪುನರಾವರ್ತಕ ವ್ಯತ್ಯಯನ ನಿಯಮ”ವನ್ನು ಗುರುತಿಸಿದನು. ಇದಕ್ಕೆ ಕೂಡಿಸಿ, ಇನ್ನೂ ಹೆಚ್ಚಿನ ಸಂಶೋಧನೆಗಾಗಿ 1ಕ್ಕಿಂತಲೂ ಕಡಿಮೆ ಪ್ರತಿಶತ ಸಸ್ಯ ವಿಕೃತಿಗಳನ್ನು ಆರಿಸಲಾಯಿತು ಮತ್ತು ಅದರಲ್ಲಿ 1ಕ್ಕಿಂತಲೂ ಕಡಮೆ ಪ್ರತಿಶತ ಸಸ್ಯಗಳು ಮಾತ್ರ ವ್ಯಾಪಾರೋಪಯೋಗಕ್ಕೆ ಯೋಗ್ಯವೆಂದು ಕಂಡುಬಂತು. ಪ್ರಾಣಿಗಳಲ್ಲಂತೂ ವಿಕೃತಿ ತಳಿಬೆಳೆಸುವಿಕೆಯ ಫಲಿತಾಂಶಗಳು ಸಸ್ಯಗಳಿಗಿಂತಲೂ ಹೀನವಾದದ್ದಾಗಿತ್ತು. ಆದುದರಿಂದ ಈ ವಿಧಾನವನ್ನು ಸಂಪೂರ್ಣವಾಗಿ ಬಿಟ್ಟುಬಿಡಲಾಯಿತು.

      g ಇಲ್ಲಿ ಭೌತಿಕವಾದಕ್ಕಿರುವ ಅರ್ಥ, ಭೌತದ್ರವ್ಯವು ಏಕಮಾತ್ರ ಅಥವಾ ಮೂಲಭೂತ ವಾಸ್ತವಿಕತೆಯಾಗಿದೆ, ಅಂದರೆ ವಿಶ್ವದಲ್ಲಿರುವ ಸಕಲವೂ​—⁠ಜೀವರಾಶಿ ಸೇರಿಸಿ​—⁠ಪ್ರಕೃತ್ಯಾತೀತ ಹಸ್ತಕ್ಷೇಪವಿಲ್ಲದೇ ಅಸ್ತಿತ್ವಕ್ಕೆ ಬಂದಿದೆ ಎಂಬ ವಾದಕ್ಕೆ ಸೂಚಿಸುತ್ತದೆ.

      [ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]

      “ವಿಕೃತಿಗಳು [ಸಸ್ಯ ಅಥವಾ ಪ್ರಾಣಿಯ] ಮೂಲ ಪ್ರಭೇದವನ್ನು ಪೂರ್ತಿಯಾಗಿ ಹೊಸದಾದ ಪ್ರಭೇದವಾಗಿ ಪರಿವರ್ತಿಸುವುದು ಅಸಾಧ್ಯ”

      [ಪುಟ 16ರಲ್ಲಿರುವ ಸಂಕ್ಷಿಪ್ತ ವಿವರಣೆ]

      ಡಾರ್ವಿನನ ಫಿಂಚ್‌ ಪಕ್ಷಿಗಳ ವಿಷಯದಿಂದ ನಾವು ಮಾಡಬಹುದಾದ ಬಲವಾದ ತೀರ್ಮಾನವೇನೆಂದರೆ, ಒಂದು ಜೀವಿ ಪ್ರಭೇದವು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಬಲ್ಲದು

      [ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]

      ಪಳೆಯುಳಿಕೆ ದಾಖಲೆಗನುಸಾರ, ಪ್ರಾಣಿಗಳ ಪ್ರಧಾನ ಗುಂಪುಗಳೆಲ್ಲ ಹಠಾತ್ತಾಗಿ ತೋರಿಬಂದು, ಕಾರ್ಯತಃ ಬದಲಾವಣೆಯೇ ಇಲ್ಲದೆ ಉಳಿದವು

      [ಪುಟ 14ರಲ್ಲಿರುವ ಚಾರ್ಟು]

      (ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

      ಜೀವಿಗಳನ್ನು ಹೇಗೆ ವರ್ಗೀಕರಿಸಲಾಗಿದೆ?

      ಜೀವಿಗಳನ್ನು ಹೆಚ್ಚೆಚ್ಚು ವಿಶಾಲವಾದ ಗುಂಪುಗಳಾಗಿ, ನಿರ್ದಿಷ್ಟವಾದ ಪ್ರಭೇದಗಳಿಂದ ಹಿಡಿದು ಸಾಮ್ರಾಜ್ಯಗಳ ವರೆಗೆ ವರ್ಗೀಕರಿಸಲಾಗುತ್ತದೆ.h ಕೆಳಗೆ ಕೊಡಲ್ಪಟ್ಟ ಮಾನವರ ಮತ್ತು ಹಣ್ಣುನೊಣಗಳ ವರ್ಗೀಕರಣಗಳನ್ನು ಹೋಲಿಸಿ.

      ಮಾನವರು ಹಣ್ಣುನೊಣಗಳು

      ಪ್ರಭೇದ ಸ್ಯಾಪಿಎನ್ಸ್‌ ಮೆಲನೋಗಾಸ್ಟರ್‌

      ಜಾತಿ ಹೋಮೋ ಡ್ರೋಸಾಫಿಲ

      ಕುಟುಂಬ ಹೋಮಿನಿಡೇ ಡ್ರೋಸಾಫಿಲಿಡ್ಸ್‌

      ಗಣ ಪ್ರೈಮೇಟಾ ಡಿಪ್ಟರ ಹಾರುಹುಳುಗಳು

      ವರ್ಗ ಮ್ಯಾಮಲ್‌ಸ್ತನಿಗಳು ಕೀಟಗಳು

      ವಿಭಾಗ ಕಾರ್ಡೇಟಾ ಆ್ಯನ್‌ತ್ರಪಾಡ್ಸ್‌

      ಸಾಮ್ರಾಜ್ಯ ಪ್ರಾಣಿಗಳು ಪ್ರಾಣಿಗಳು

      [ಪಾದಟಿಪ್ಪಣಿ]

      h ಗಮನಿಸಿ: ಆದಿಕಾಂಡ 1ನೆಯ ಅಧ್ಯಾಯವು, ಸಸ್ಯಗಳೂ ಪ್ರಾಣಿಗಳೂ “ತಮ್ಮತಮ್ಮ ಜಾತಿಯ ಪ್ರಕಾರ” ಪುನರುತ್ಪಾದಿಸುವುವು ಎಂದು ಹೇಳುತ್ತದೆ. (ಆದಿಕಾಂಡ 1:​12, 21, 24, 25) ಆದರೂ, “ಜಾತಿ” ಎಂದು ಬೈಬಲ್‌ ಯಾವುದನ್ನು ಹೇಳುತ್ತದೊ ಅದೊಂದು ವೈಜ್ಞಾನಿಕ ಪದವಲ್ಲ, ಆದಕಾರಣ ಅದನ್ನು ವೈಜ್ಞಾನಿಕ ಪದವಾದ “ಪ್ರಭೇದ”ವೆಂದು ತಪ್ಪಾಗಿ ಗ್ರಹಿಸಬಾರದು.

      [ಕೃಪೆ]

      ಜಾನತನ್‌ ವೆಲ್ಸ್‌ರ ವಿಕಾಸವಾದದ ಬಿಂಬಗಳು​—⁠ವಿಜ್ಞಾನವೇ ಮಿಥ್ಯೆಯೇ? ವಿಕಾಸವಾದದ ಕುರಿತು ನಾವು ಕಲಿಸುವುದರಲ್ಲಿ ಹೆಚ್ಚಿನದ್ದು ತಪ್ಪಾಗಿರುವುದೇಕೆ? (ಇಂಗ್ಲಿಷ್‌) ಎಂಬ ಪುಸ್ತಕದ ಮೇಲೆ ಆಧರಿತವಾದ ತಖ್ತೆ.

      [ಪುಟ 15ರಲ್ಲಿರುವ ಚಿತ್ರಗಳು]

      ವಿಕೃತ ಹಣ್ಣುನೊಣ [ಡ್ರೋಸಾಫಿಲ] (ತುದಿಯಲ್ಲಿ) ವಿರೂಪವಾಗಿರುವುದಾದರೂ, ಅದು ಆಗಲೂ ಹಣ್ಣುನೊಣವೇ

      [ಕೃಪೆ]

      © Dr. Jeremy Burgess/Photo Researchers, Inc.

      [ಪುಟ 15ರಲ್ಲಿರುವ ಚಿತ್ರಗಳು]

      ವಿಕೃತಿ ಪ್ರಯೋಗಗಳನ್ನು ಮಾಡಿದಾಗ, ಪರಿವರ್ತಿತ ರೂಪಗಳ ಸಂಖ್ಯೆಯು ಒಂದೇ ಸಮನೆ ಇಳಿಮುಖವಾದವು, ಆದರೆ ಮೂಲ ರೂಪಗಳು ಹೆಚ್ಚಾಗುತ್ತ ಇದ್ದವೆಂಬುದು ಪದೇ ಪದೇ ತೋರಿಬಂತು (ತೋರಿಸಲಾಗಿರುವ ವಿಕೃತಿಗೆ ಹೆಚ್ಚು ದೊಡ್ಡ ಹೂವುಗಳಿವೆ)

      [ಪುಟ 13ರಲ್ಲಿರುವ ಚಿತ್ರ ಕೃಪೆ]

      From a Photograph by Mrs. J. M. Cameron/ U.S. National Archives photo

      [ಪುಟ 16ರಲ್ಲಿರುವ ಚಿತ್ರ ಕೃಪೆ]

      ಫಿಂಚ್‌ ತಲೆಗಳು: © Dr. Jeremy Burgess/ Photo Researchers, Inc.

      [ಪುಟ 17ರಲ್ಲಿರುವ ಚಿತ್ರ ಕೃಪೆ]

      ಡೈನೊಸಾರ್‌: © Pat Canova/Index Stock Imagery; ಪಳೆಯುಳಿಕೆ: GOH CHAI HIN/AFP/Getty Images

  • ವಿಜ್ಞಾನವು ಆದಿಕಾಂಡ ವೃತ್ತಾಂತವನ್ನು ವಿರೋಧಿಸುತ್ತದೊ?
    ಎಚ್ಚರ!—2006 | ಅಕ್ಟೋಬರ್‌
    • ಬೈಬಲಿನ ದೃಷ್ಟಿಕೋನ

      ವಿಜ್ಞಾನವು ಆದಿಕಾಂಡ ವೃತ್ತಾಂತವನ್ನು ವಿರೋಧಿಸುತ್ತದೊ?

      ಸೃಷ್ಟಿಯ ಕುರಿತ ಬೈಬಲಿನ ವೃತ್ತಾಂತವನ್ನು ವಿಜ್ಞಾನವು ಸುಳ್ಳೆಂದು ಸ್ಥಾಪಿಸುತ್ತದೆಂಬುದು ಅನೇಕರ ವಾದ. ಆದರೆ ನಿಜ ವಿರೋಧೋಕ್ತಿ ಇರುವುದು ವಿಜ್ಞಾನ ಮತ್ತು ಬೈಬಲಿನ ಮಧ್ಯೆಯಲ್ಲ ಬದಲಾಗಿ ವಿಜ್ಞಾನ ಮತ್ತು ಕ್ರೈಸ್ತ ಮೂಲಭೂತವಾದಿಗಳೆಂದು ಹೇಳಿಕೊಳ್ಳುವವರ ಅಭಿಪ್ರಾಯಗಳ ಮಧ್ಯೆಯೇ. ಈ ಗುಂಪುಗಳಲ್ಲಿ ಕೆಲವು, ಬೈಬಲಿಗನುಸಾರ ಸುಮಾರು 10,000 ವರುಷಗಳ ಹಿಂದೆ ಎಲ್ಲ ಭೌತಿಕ ಸೃಷ್ಟಿಯು 24 ತಾಸುಗಳಿರುವ ಆರು ದಿನಗಳಲ್ಲಿ ಉಂಟುಮಾಡಲ್ಪಟ್ಟಿತೆಂದು ತಪ್ಪಾಗಿ ಪ್ರತಿಪಾದಿಸುತ್ತವೆ.

      ಆದರೆ ಬೈಬಲ್‌ ಅಂತಹ ತೀರ್ಮಾನವನ್ನು ಬೆಂಬಲಿಸುವುದಿಲ್ಲ. ಒಂದುವೇಳೆ ಅದು ಬೆಂಬಲಿಸುತ್ತಿದ್ದಲ್ಲಿ, ಕಳೆದ ನೂರಾರು ವರುಷಗಳಲ್ಲಿ ಮಾಡಲ್ಪಟ್ಟಿರುವ ವೈಜ್ಞಾನಿಕ ಆವಿಷ್ಕಾರಗಳು ಬೈಬಲಿನ ನಿಷ್ಕೃಷ್ಟತೆಯ ಬಗ್ಗೆ ಸಂದೇಹಬರಿಸುತ್ತಿದ್ದವು ನಿಶ್ಚಯ. ಆದರೆ ಬೈಬಲಿನ ಗ್ರಂಥಪಾಠದ ಜಾಗರೂಕತೆಯ ಅಧ್ಯಯನವು, ಸ್ಥಾಪಿತ ವೈಜ್ಞಾನಿಕ ನಿಜತ್ವಗಳೊಂದಿಗೆ ಅದು ಯಾವುದೇ ರೀತಿಯಲ್ಲಿ ಘರ್ಷಿಸುವುದಿಲ್ಲವೆಂಬುದನ್ನು ತೋರಿಸುತ್ತದೆ. ಈ ಕಾರಣದಿಂದಲೇ, ಯೆಹೋವನ ಸಾಕ್ಷಿಗಳು ಈ “ಕ್ರೈಸ್ತ” ಮೂಲಭೂತವಾದಿಗಳೊಂದಿಗೆ ಮತ್ತು ಅನೇಕ ಸೃಷ್ಟಿವಾದಿಗಳೊಂದಿಗೆ ಒಮ್ಮತದಲ್ಲಿಲ್ಲ. ಬೈಬಲ್‌ ನಿಜವಾಗಿಯೂ ಏನು ಬೋಧಿಸುತ್ತದೆಂಬುದನ್ನು ಈ ಕೆಳಗೆ ಕೊಡಲಾಗಿದೆ.

      “ಆದಿಯಲ್ಲಿ” ಎಂದರೆ ಯಾವಾಗ?

      ಆದಿಕಾಂಡದ ವೃತ್ತಾಂತವು, “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎಂಬ ಸರಳವಾದರೂ ಪ್ರಬಲವಾದ ಹೇಳಿಕೆಯಿಂದ ಆರಂಭಗೊಳ್ಳುತ್ತದೆ. (ಆದಿಕಾಂಡ 1:⁠1) ಬೈಬಲ್‌ ವಿದ್ವಾಂಸರು ಒಪ್ಪಿಕೊಳ್ಳುವುದೇನೆಂದರೆ ಈ 1ನೇ ವಚನವು, ಇದೇ ಅಧ್ಯಾಯದ 3ನೆಯ ವಚನದಿಂದಾರಂಭಿಸುತ್ತಾ ಹೇಳಲಾಗಿರುವ ಸೃಷ್ಟಿಯ ದಿನಗಳಿಗಿಂತ ಪ್ರತ್ಯೇಕವಾದ ಕ್ರಿಯೆಯನ್ನು ವರ್ಣಿಸುತ್ತದೆ. ಇದಕ್ಕೆ ಅಗಾಧವಾದ ಮಹತ್ವಾರ್ಥವಿದೆ. ಅದೇನೆಂದರೆ ಬೈಬಲಿನ ಆರಂಭದ ಆ ಹೇಳಿಕೆಗನುಸಾರ, ನಮ್ಮ ಭೂಗ್ರಹದ ಸಮೇತ ಈ ವಿಶ್ವವು, ಸೃಷ್ಟಿಯ ದಿನಗಳು ಆರಂಭವಾಗುವುದಕ್ಕೆ ಎಷ್ಟೋ ಮುಂಚೆ ಅನಿಶ್ಚಿತ ಸಮಯದಿಂದ ಅಸ್ತಿತ್ವದಲ್ಲಿತ್ತು.

      ಈ ಭೂಮಿ ಸುಮಾರು 400 ಕೋಟಿ ವರುಷ ಹಳೆಯದ್ದು ಎಂದು ಭೂವಿಜ್ಞಾನಿಗಳು ಹೇಳುವಾಗ, ಖಗೋಲ ವಿಜ್ಞಾನಿಗಳು ವಿಶ್ವವು 1,500 ಕೋಟಿ ವರುಷಗಳಷ್ಟು ಹಳೆಯದ್ದೆಂದು ಲೆಕ್ಕಹಾಕುತ್ತಾರೆ. ಈ ಆವಿಷ್ಕಾರಗಳು ಇಲ್ಲವೆ ಭಾವೀ ಪರಿಷ್ಕಾರಗಳು ಆದಿಕಾಂಡ 1:1ನ್ನು ವಿರೋಧಿಸುತ್ತವೊ? ಇಲ್ಲ. ಏಕೆಂದರೆ, ‘ಆಕಾಶ ಮತ್ತು ಭೂಮಿ’ ನಿಜವಾಗಿ ಎಷ್ಟು ಹಳೆಯದ್ದೆಂದು ಬೈಬಲ್‌ ನಿರ್ದಿಷ್ಟವಾಗಿ ತಿಳಿಸುವುದಿಲ್ಲ. ಹೀಗೆ, ಬೈಬಲಿನ ಗ್ರಂಥಪಾಠ ತಪ್ಪೆಂದು ವಿಜ್ಞಾನವು ತೋರಿಸುವುದಿಲ್ಲ.

      ಸೃಷ್ಟಿ ದಿನಗಳ ಉದ್ದವೆಷ್ಟು?

      ಸೃಷ್ಟಿ ದಿನಗಳ ಉದ್ದದ ಕುರಿತು ಏನು ಹೇಳಬಹುದು? ಅವು ಅಕ್ಷರಾರ್ಥದಲ್ಲಿ 24 ತಾಸುಗಳ ದಿನಗಳಾಗಿದ್ದವೊ? ಆದಿಕಾಂಡದ ಲೇಖಕನಾದ ಮೋಶೆಯು ಸಮಯಾನಂತರ, ಈ ಆರು ಸೃಷ್ಟಿ ದಿನಗಳ ನಂತರದ ದಿನವನ್ನು ಸಾಪ್ತಾಹಿಕ ಸಬ್ಬತ್‌ ದಿನಕ್ಕಾಗಿ ಮಾದರಿಯಾಗಿ ಸೂಚಿಸಿರುವ ಕಾರಣದಿಂದ ಪ್ರತಿಯೊಂದು ಸೃಷ್ಟಿ ದಿನವು 24 ತಾಸುಗಳ ಉದ್ದದ್ದಾಗಿರಲೇಬೇಕೆಂದು ಕೆಲವರು ವಾದಿಸುತ್ತಾರೆ. (ವಿಮೋಚನಕಾಂಡ 20:11) ಆದರೆ ಆದಿಕಾಂಡದಲ್ಲಿನ ಪದರಚನೆ ಈ ತೀರ್ಮಾನವನ್ನು ಬೆಂಬಲಿಸುತ್ತದೆಯೆ?

      ಇಲ್ಲ. ವಾಸ್ತವಾಂಶವೇನಂದರೆ, “ದಿನ” ಎಂದು ಭಾಷಾಂತರವಾಗಿರುವ ಹೀಬ್ರು ಪದಕ್ಕೆ 24 ತಾಸುಗಳ ಅವಧಿ ಮಾತ್ರವಲ್ಲ, ವಿವಿಧ ಇತರ ಸಮಯಾವಧಿಗಳ ಅರ್ಥವೂ ಇರಬಲ್ಲದು. ಉದಾಹರಣೆಗೆ, ದೇವರ ಸೃಷ್ಟಿಕಾರಕ ಕಾರ್ಯವನ್ನು ಸಾರಾಂಶವಾಗಿ ಹೇಳುವಾಗ, ಮೋಶೆ ಆ ಆರು ಸೃಷ್ಟಿ ದಿನಗಳನ್ನು ಒಟ್ಟಿನಲ್ಲಿ ಒಂದು ದಿನವೆಂದು ಕರೆಯುತ್ತಾನೆ. (ಆದಿಕಾಂಡ 2:⁠4, NW) ಇದಲ್ಲದೆ, ಒಂದನೆಯ ಸೃಷ್ಟಿ ದಿನದಲ್ಲಿ, ದೇವರು ‘ಬೆಳಕಿಗೆ ಹಗಲೆಂದೂ [ಹೀಬ್ರುವಿನಲ್ಲಿ ಅಕ್ಷರಶಃ “ದಿನವೆಂದೂ”] ಮತ್ತು ಕತ್ತಲೆಗೆ ಇರುಳೆಂದು ಹೆಸರಿಟ್ಟನು.’ (ಆದಿಕಾಂಡ 1:⁠5) ಇಲ್ಲಿ, 24 ತಾಸುಗಳ ಒಂದು ಭಾಗವನ್ನು ಮಾತ್ರ “ದಿನ” ಎಂದು ಕರೆಯಲಾಗಿದೆ. ಹೀಗೆ, ಪ್ರತಿಯೊಂದು ಸೃಷ್ಟಿ ದಿನವು 24 ತಾಸುಗಳಷ್ಟು ಉದ್ದವಾಗಿತ್ತೆಂದು ಮನಸ್ಸಿಗೆ ಬಂದಂತೆ ಹೇಳಲು ಯಾವುದೇ ಆಧಾರ ಬೈಬಲಿನಲ್ಲಿಲ್ಲ.

      ಹಾಗಾದರೆ, ಆ ಸೃಷ್ಟಿ ದಿನಗಳ ಉದ್ದವೆಷ್ಟು? ಆದಿಕಾಂಡ 1 ಮತ್ತು 2ನೆಯ ಅಧ್ಯಾಯಗಳ ಮಾತುಗಳು, ಆ ದಿನಗಳು ಗಣನೀಯವಾಗಿ ದೀರ್ಘ ಸಮಯಾವಧಿಗಳದ್ದಾಗಿದ್ದವು ಎಂಬುದನ್ನು ಸೂಚಿಸುತ್ತವೆ.

      ಸೃಷ್ಟಿಗಳು ಕ್ರಮೇಣವಾಗಿ ತೋರಿಬರುತ್ತವೆ

      ಮೋಶೆ ಆದಿಕಾಂಡ ವೃತ್ತಾಂತವನ್ನು ಹೀಬ್ರು ಭಾಷೆಯಲ್ಲಿ ಬರೆದನು ಮತ್ತು ಅವನದನ್ನು ಭೂಮಿಯ ಮೇಲೆ ನಿಂತು ದೃಶ್ಯವನ್ನು ನೋಡುತ್ತಿರುವ ಒಬ್ಬ ವ್ಯಕ್ತಿಯಂತೆ ಬರೆದನು. ಈ ಎರಡು ನಿಜತ್ವಗಳು ಮತ್ತು ವಿಶ್ವವು ಈ ಸೃಷ್ಟಿಕಾರಕ ಅವಧಿಗಳು ಇಲ್ಲವೆ “ದಿನಗಳು” ಆರಂಭವಾಗುವುದಕ್ಕಿಂತ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂಬ ತಿಳಿವಳಿಕೆಯು ಈ ಸೃಷ್ಟಿ ವೃತ್ತಾಂತವನ್ನು ಸುತ್ತುವರಿದಿರುವ ಹೆಚ್ಚಿನ ವಿವಾದವನ್ನು ಪರಿಹರಿಸಬೇಕು. ಹೇಗೆ?

      ಆದಿಕಾಂಡದ ವೃತ್ತಾಂತದ ಜಾಗರೂಕ ಪರಿಶೀಲನೆಯು, ಒಂದು “ದಿನ”ದಲ್ಲಿ ಆರಂಭವಾದ ಸಂಗತಿಗಳು ಮುಂದಿನ ಒಂದು ಇಲ್ಲವೆ ಹೆಚ್ಚು ದಿನಗಳ ವರೆಗೆ ಮುಂದುವರಿದವೆಂಬುದನ್ನು ತೋರಿಸುತ್ತದೆ. ದೃಷ್ಟಾಂತಕ್ಕೆ, ಮೊದಲನೆಯ ಸೃಷ್ಟಿ “ದಿನ” ಆರಂಭಗೊಳ್ಳುವ ಮೊದಲು, ಆಗಲೇ ಅಸ್ತಿತ್ವದಲ್ಲಿದ್ದ ಸೂರ್ಯಬೆಳಕು ಭೂಮಿಯ ಮೇಲ್ಮೈಯ ಮೇಲೆ ಬೀಳದಂತೆ ಹೇಗೊ, ಪ್ರಾಯಶಃ ದಟ್ಟವಾದ ಮೋಡಗಳ ಕಾರಣ ತಡೆಹಿಡಿಯಲ್ಪಟ್ಟಿತು. (ಯೋಬ 38:⁠9) ಆದರೆ ಒಂದನೆಯ “ದಿನ”ದಲ್ಲಿ, ಆ ತಡೆಯು ತಿಳಿಯಾಗಲು ಪ್ರಾರಂಭಿಸಿ, ಚೆದರಿ ಹರಡಿದ ಬೆಳಕು ವಾತಾವರಣವನ್ನು ತೂರಿ ಬರುವಂತೆ ಸಾಧ್ಯವಾಯಿತು.a

      ಎರಡನೆಯ “ದಿನ”ದಲ್ಲಿ, ವಾತಾವರಣವು ತಿಳಿಯಾಗುತ್ತಾ ಹೋದಾಗ ಅದು ಮೇಲಿದ್ದ ದಟ್ಟವಾದ ಮೋಡಗಳು ಮತ್ತು ಕೆಳಗಿದ್ದ ಸಾಗರದ ಮಧ್ಯದಲ್ಲಿ ಗುಮಟವನ್ನು ಅಂದರೆ ಅಂತರವನ್ನು ಸೃಷ್ಟಿಸಿತೆಂದು ವ್ಯಕ್ತವಾಗುತ್ತದೆ. ನಾಲ್ಕನೆಯ “ದಿನ”ದಲ್ಲಿ, ವಾತಾವರಣವು ಕ್ರಮೇಣ ಎಷ್ಟು ತಿಳಿಯಾಯಿತೆಂದರೆ “ಆಕಾಶಮಂಡಲದಲ್ಲಿ” ಸೂರ್ಯ ಚಂದ್ರ ಗೋಚರವಾದವು. (ಆದಿಕಾಂಡ 1:​14-16) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಭೂಮಿಯ ಮೇಲಿರುವ ವ್ಯಕ್ತಿಗೆ ಸೂರ್ಯ ಮತ್ತು ಚಂದ್ರ​—⁠ಇವುಗಳನ್ನು ನೋಡಲು ಸಾಧ್ಯವಾಯಿತು. ಈ ಘಟನೆಗಳು ಕ್ರಮೇಣವಾಗಿ ಸಂಭವಿಸಿದವು.

      ವಾತಾವರಣ ತಿಳಿಗೊಂಡ ಹಾಗೆ ಪಕ್ಷಿಗಳು​—⁠ಕೀಟಗಳು ಮತ್ತು ಪೊರೆಗಳಂಥ ರೆಕ್ಕೆಗಳಿರುವ ಜೀವಿಗಳ ಸಮೇತ​—⁠ಐದನೆಯ “ದಿನ”ದಲ್ಲಿ ತೋರಿಬರತೊಡಗಿದವೆಂದು ಆದಿಕಾಂಡ ವೃತ್ತಾಂತವು ಹೇಳುತ್ತದೆ. ಆದರೂ, ಆರನೆಯ “ದಿನ”ದಲ್ಲಿ ದೇವರು “ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ” ಇನ್ನೂ ನಿರ್ಮಿಸುತ್ತ ಇದ್ದನೆಂದು ಬೈಬಲ್‌ ಸೂಚಿಸುತ್ತದೆ.​—⁠ಆದಿಕಾಂಡ 2:19.

      ಹೀಗೆ, ಪ್ರತಿ “ದಿನ”ದಲ್ಲಿ ಅಥವಾ ಸೃಷ್ಟಿಕಾರಕ ಅವಧಿಯಲ್ಲಿ ಕೆಲವು ದೊಡ್ಡ ಘಟನೆಗಳು ಕ್ಷಣಮಾತ್ರದಲ್ಲಿ ನಡೆಯುವ ಬದಲಿಗೆ ಕ್ರಮೇಣ ಸಂಭವಿಸಿದವೆಂಬುದಕ್ಕೆ, ಪ್ರಾಯಶಃ ಅವುಗಳಲ್ಲಿ ಕೆಲವು ಮುಂದಿನ ಸೃಷ್ಟಿಕಾರಕ “ದಿನಗಳ” ವರೆಗೂ ಮುಂದುವರಿದಿರುವ ಸಾಧ್ಯತೆಯಿದೆ ಎಂಬುದಕ್ಕೆ ಬೈಬಲಿನ ಭಾಷೆ ಅವಕಾಶ ಕೊಡುತ್ತದೆ.

      ಅವುಗಳ ಜಾತಿಗನುಸಾರವಾಗಿ

      ಹಾಗಾದರೆ, ಸಸ್ಯಗಳ ಮತ್ತು ಪ್ರಾಣಿಗಳ ಪ್ರಗತಿಪರವಾದ ತೋರಿಬರುವಿಕೆಯು, ದೇವರು ಜೀವರಾಶಿಗಳ ಭಾರೀ ವೈವಿಧ್ಯವನ್ನು ಉತ್ಪಾದಿಸಲಿಕ್ಕಾಗಿ ಜೀವವಿಕಾಸವನ್ನು ಬಳಸಿದನೆಂದು ಸೂಚಿಸುತ್ತದೆಯೆ? ಇಲ್ಲ. ದೇವರೇ ಸಸ್ಯ ಮತ್ತು ಪ್ರಾಣಿಗಳ ಎಲ್ಲ ಮೂಲ “ಜಾತಿಗಳನ್ನು” ಸೃಷ್ಟಿಸಿದನೆಂದು ದಾಖಲೆಯು ಸ್ಪಷ್ಟವಾಗಿ ತಿಳಿಸುತ್ತದೆ. (ಆದಿಕಾಂಡ 1:​11, 12, 20-25) ಹಾಗಾದರೆ, ಸಸ್ಯಗಳ ಮತ್ತು ಪ್ರಾಣಿಗಳ ಈ ಮೂಲ “ಜಾತಿಗಳು,” ಬದಲಾಗುತ್ತಿರುವ ಪರಿಸರೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವುಳ್ಳವುಗಳಾಗಿ ಮಾಡಲ್ಪಟ್ಟಿದ್ದವೊ? ಒಂದು ‘ಜಾತಿಯ’ ಪರಿಮಿತಿಯನ್ನು ಯಾವುದು ನಿರೂಪಿಸುತ್ತದೆ? ಇದನ್ನೂ ಬೈಬಲ್‌ ತಿಳಿಸುವುದಿಲ್ಲ. ಆದರೂ, ಜೀವಜಂತುಗಳು “ಅವುಗಳ ಜಾತಿಗನುಸಾರವಾಗಿ” ಸೃಷ್ಟಿಸಲ್ಪಟ್ಟವೆಂದು ಅದು ತಿಳಿಸುತ್ತದೆ. (ಆದಿಕಾಂಡ 1:21) ಈ ಹೇಳಿಕೆಯು, ಒಂದು “ಜಾತಿ”ಯೊಳಗೆ ಸಂಭವಿಸುವ ವೈವಿಧ್ಯದ ಮೊತ್ತಕ್ಕೆ ಒಂದು ಮಿತಿಯಿದೆ ಎಂಬುದನ್ನು ಸೂಚಿಸುತ್ತದೆ. ವಿಸ್ತಾರವಾದ ಸಮಯಾವಧಿಗಳಲ್ಲಿ, ಸಸ್ಯಗಳ ಮತ್ತು ಪ್ರಾಣಿಗಳ ಮೂಲವರ್ಗಗಳಲ್ಲಿ ಆಗಿರುವ ಬದಲಾವಣೆ ಕೊಂಚವೇ ಎಂಬುದನ್ನು ಪಳೆಯುಳಿಕೆ ದಾಖಲೆ ಮತ್ತು ಆಧುನಿಕ ಸಂಶೋಧನೆ ಬೆಂಬಲಿಸುತ್ತದೆ.

      ಮೂಲಭೂತವಾದಿಗಳಲ್ಲಿ ಕೆಲವರು ಹೇಳುವಂತೆ, ಭೂಮಿ ಮತ್ತು ಸಕಲ ಜೀವಿಗಳ ಸಮೇತ ವಿಶ್ವವು ಸ್ವಲ್ಪಾವಧಿಯಲ್ಲಿ ಹಾಗೂ ಸಾಪೇಕ್ಷವಾಗಿ ಇತ್ತೀಚೆಗೆ ಸೃಷ್ಟಿಸಲ್ಪಟ್ಟಿತ್ತೆಂಬ ಸಂಗತಿಯನ್ನು ಆದಿಕಾಂಡ ಬೋಧಿಸುವುದಿಲ್ಲ. ಬದಲಿಗೆ, ವಿಶ್ವದ ಸೃಷ್ಟಿ ಮತ್ತು ಭೂಮಿಯ ಮೇಲೆ ಜೀವರಾಶಿಗಳ ತೋರಿಬರುವಿಕೆಯ ಬಗ್ಗೆ ಆದಿಕಾಂಡದಲ್ಲಿರುವ ವರ್ಣನೆಯು ಇತ್ತೀಚಿನ ಅನೇಕ ವೈಜ್ಞಾನಿಕ ಆವಿಷ್ಕಾರಗಳಿಗೆ ಹೊಂದಿಕೆಯಲ್ಲಿದೆ.

      ಅನೇಕ ಮಂದಿ ವಿಜ್ಞಾನಿಗಳು ತಮ್ಮ ತತ್ತ್ವಜ್ಞಾನಿ ನಂಬಿಕೆಗಳ ಕಾರಣ, ದೇವರು ಸಮಸ್ತವನ್ನು ನಿರ್ಮಿಸಿದನೆಂಬ ಬೈಬಲ್‌ ಹೇಳಿಕೆಯನ್ನು ತಳ್ಳಿಹಾಕುತ್ತಾರೆ. ಆದರೆ ಆಸಕ್ತಿಕರವಾಗಿ, ಪುರಾತನ ಬೈಬಲ್‌ ಪುಸ್ತಕವಾದ ಆದಿಕಾಂಡದಲ್ಲಿ ವಿಶ್ವಕ್ಕೆ ಒಂದು ಆದಿಯಿತ್ತೆಂದು ಮತ್ತು ಜೀವರಾಶಿಯು ಹಂತಹಂತವಾಗಿ, ಪ್ರಗತಿಪರವಾಗಿ, ಸಮಯಾವಧಿಗಳಾದ್ಯಂತ ತೋರಿಬಂತೆಂದು ಮೋಶೆ ಬರೆದನು. ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿರುವ ಇಂತಹ ಮಾಹಿತಿಯನ್ನು ಸುಮಾರು 3,500 ವರ್ಷಗಳ ಹಿಂದೆ ಮೋಶೆ ಹೇಗೆ ಪಡೆಯಲು ಶಕ್ತನಾದನು? ಇದಕ್ಕೆ ತರ್ಕಸಮ್ಮತವಾದ ಒಂದು ವಿವರಣೆಯಿದೆ. ಅದೇನೆಂದರೆ, ಭೂಮ್ಯಾಕಾಶಗಳನ್ನು ಸೃಷ್ಟಿಸಲು ಶಕ್ತಿ, ವಿವೇಕಗಳಿದ್ದಾತನು, ಇಂತಹ ನಿಷ್ಕೃಷ್ಟ ಜ್ಞಾನವನ್ನು ಮೋಶೆಗೆ ನಿಶ್ಚಯವಾಗಿಯೂ ಕೊಡಶಕ್ತನಾಗಿದ್ದನು. ಇದು, ಬೈಬಲ್‌ “ದೈವಪ್ರೇರಿತ” ಎಂದು ಅದರಲ್ಲಿರುವ ಹೇಳಿಕೆಗೆ ಹೆಚ್ಚಿನ ಒತ್ತನ್ನು ಕೊಡುತ್ತದೆ.​—⁠2 ತಿಮೊಥೆಯ 3:16. (g 9/06)

      ನೀವು ಇದರ ಬಗ್ಗೆ ಕೌತುಕಪಟ್ಟದ್ದುಂಟೊ?

      ◼ ದೇವರು ವಿಶ್ವವನ್ನು ಎಷ್ಟು ಸಮಯದ ಹಿಂದೆ ಸೃಷ್ಟಿಸಿದನು?​—⁠ಆದಿಕಾಂಡ 1:⁠1.

      ◼ ಭೂಮಿ 24 ತಾಸುಗಳ ಆರು ದಿನಗಳಲ್ಲಿ ಸೃಷ್ಟಿಸಲ್ಪಟ್ಟಿತೊ?​—⁠ಆದಿಕಾಂಡ 2:⁠4.

      ◼ ಭೂಮಿಯ ಆದಿಯ ಬಗ್ಗೆ ಮೋಶೆಯ ಬರಹಗಳು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿರಲು ಹೇಗೆ ಸಾಧ್ಯ? ​—⁠2 ತಿಮೊಥೆಯ 3:16.

      [ಪಾದಟಿಪ್ಪಣಿ]

      a ಮೊದಲನೆಯ “ದಿನ”ದಲ್ಲಿ ನಡೆದ ಸಂಗತಿಗಳ ವರ್ಣನೆಯಲ್ಲಿ, ಬೆಳಕಿಗೆ ಉಪಯೋಗಿಸಲಾಗಿರುವ ಪದವು ‘ಆರ್‌’ ಎಂದಾಗಿದ್ದು, ಅದು ಸಾಮಾನ್ಯವಾದ ಬೆಳಕನ್ನು ಸೂಚಿಸುತ್ತದೆ. ಆದರೆ, ನಾಲ್ಕನೆಯ ‘ದಿನಕ್ಕೆ’ ಮಾಆರ್‌ ಎಂಬ ಪದವನ್ನು ಉಪಯೋಗಿಸಲಾಗಿದ್ದು ಅದು ಬೆಳಕಿನ ಮೂಲಕ್ಕೆ ಸೂಚಿಸುತ್ತದೆ.

      [ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

      ವಿಶ್ವವು ಸ್ವಲ್ಪಾವಧಿಯಲ್ಲಿ, ಸಾಪೇಕ್ಷವಾಗಿ ಇತ್ತೀಚೆಗೆ ಸೃಷ್ಟಿಸಲ್ಪಟ್ಟಿತ್ತೆಂಬ ಸಂಗತಿಯನ್ನು ಆದಿಕಾಂಡ ಬೋಧಿಸುವುದಿಲ್ಲ

      [ಪುಟ 20ರಲ್ಲಿರುವ ಸಂಕ್ಷಿಪ್ತ ವಿವರಣೆ]

      “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.”​—⁠ಆದಿಕಾಂಡ 1:⁠1.

      [ಪುಟ 18ರಲ್ಲಿರುವ ಚಿತ್ರ ಕೃಪೆ]

      ವಿಶ್ವ: IAC/RGO/David Malin Images

      [ಪುಟ 20ರಲ್ಲಿರುವ ಚಿತ್ರ ಕೃಪೆ]

      NASA photo

  • ಸೃಷ್ಟಿಕರ್ತನು ಇದ್ದಾನೆಂದು ನಂಬಲು ನಮಗಿರುವ ಕಾರಣಗಳು
    ಎಚ್ಚರ!—2006 | ಅಕ್ಟೋಬರ್‌
    • ಸೃಷ್ಟಿಕರ್ತನು ಇದ್ದಾನೆಂದು ನಂಬಲು ನಮಗಿರುವ ಕಾರಣಗಳು

      ವಿವಿಧ ವೈಜ್ಞಾನಿಕ ಕ್ಷೇತ್ರಗಳ ಅನೇಕ ಪರಿಣತರು ಪ್ರಕೃತಿಯಲ್ಲಿ, ಬುದ್ಧಿವಂತಿಕೆಯನ್ನು ತೋರಿಸುವ ವಿನ್ಯಾಸಗಳಿರುವುದನ್ನು ಗ್ರಹಿಸುತ್ತಾರೆ. ಅವರ ಅಭಿಪ್ರಾಯದಲ್ಲಿ, ಭೂಮಿಯ ಮೇಲೆ ಅತಿ ಸಂಕೀರ್ಣವಾಗಿರುವ ಜೀವರಾಶಿಯು ಆಕಸ್ಮಿಕವಾಗಿ ಬಂತೆಂದು ನಂಬುವುದು ತರ್ಕಸಮ್ಮತವಲ್ಲ. ಈ ಕಾರಣದಿಂದ, ಅನೇಕ ಮಂದಿ ವಿಜ್ಞಾನಿಗಳು ಮತ್ತು ಸಂಶೋಧಕರು ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಂಬುತ್ತಾರೆ.

      ಇವರಲ್ಲಿ ಕೆಲವರು ಈಗ ಯೆಹೋವನ ಸಾಕ್ಷಿಗಳಾಗಿದ್ದಾರೆ. ಬೈಬಲಿನ ದೇವರು ಈ ಭೌತಿಕ ವಿಶ್ವದ ವಿನ್ಯಾಸಕನೂ ನಿರ್ಮಾಪಕನೂ ಆಗಿದ್ದಾನೆಂದು ಅವರಿಗೆ ಮನವರಿಕೆಯಾಗಿದೆ. ಅವರು ಈ ತೀರ್ಮಾನಕ್ಕೆ ಬಂದಿರುವುದೇಕೆ? ಎಚ್ಚರ! ಈ ಪ್ರಶ್ನೆಯನ್ನು ಅವರಲ್ಲಿ ಕೆಲವರನ್ನು ಕೇಳಿತು. ಅವರ ಹೇಳಿಕೆಗಳು ನಿಮಗೆ ಆಸಕ್ತಿಕರವಾಗಿ ಕಂಡುಬರಬಹುದು.a

      “ಜೀವಿಗಳಲ್ಲಿನ ಗ್ರಹಿಸಲು ಕಷ್ಟಕರವಾದ ಅಗಾಧ ಜಟಿಲತೆಗಳು”

      ◼ ವಾಲ್ಫ್‌ ಎಕಹಾರ್ಟ್‌ ಲೋನಿಗ್‌

      ವ್ಯಕ್ತಿಪರಿಚಯ: ಕಳೆದ 28 ವರ್ಷಗಳಿಂದ ನಾನು ಸಸ್ಯಗಳ ತಳಿಶಾಸ್ತ್ರೀಯ ವಿಕೃತಿಗೆ ಸಂಬಂಧಪಟ್ಟ ವೈಜ್ಞಾನಿಕ ಕೆಲಸಮಾಡಿದ್ದೇನೆ. ಅವುಗಳಲ್ಲಿ 21 ವರುಷ, ನಾನು ಜರ್ಮನಿಯ ಕೊಲೋನ್‌ ನಗರದ ತಳಿಬೆಳೆಸುವಿಕೆಯ ಸಂಶೋಧನೆಗಾಗಿರುವ ಮಾಕ್ಸ್‌-ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸಮಾಡುತ್ತಿದ್ದೇನೆ. ಸುಮಾರು 30 ವರುಷಗಳಿಂದ, ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯಲ್ಲಿ ನಾನು ಹಿರಿಯನಾಗಿಯೂ ಸೇವೆಸಲ್ಲಿಸುತ್ತಿದ್ದೇನೆ.

      ತಳಿಶಾಸ್ತ್ರದಲ್ಲಿ (ಜಿನೆಟಿಕ್ಸ್‌) ನನ್ನ ಪ್ರಯೋಗ ಹಾಗೂ ವೀಕ್ಷಣಾವಲಂಬಿತ ಸಂಶೋಧನೆ ಮತ್ತು ಶರೀರ ವಿಜ್ಞಾನ (ಫಿಸಿಯಾಲಜಿ) ಹಾಗೂ ಆಕೃತಿ ವಿಜ್ಞಾನ (ಮಾರ್ಫಾಲಜಿ)ದಂಥ ಜೀವಶಾಸ್ತ್ರೀಯ ವಿಷಯಗಳ ನನ್ನ ಅಧ್ಯಯನವು, ಜೀವಿಗಳಲ್ಲಿನ ಭಾರೀ ಹಾಗೂ ಅನೇಕವೇಳೆ ಗ್ರಹಿಸಲು ಕಷ್ಟಕರವಾದ ಅಗಾಧ ಜಟಿಲತೆಗಳನ್ನು ಮುಖಾಮುಖಿಯಾಗಿ ನೋಡಲು ಸಾಧ್ಯಮಾಡುತ್ತದೆ. ಈ ವಿಷಯಗಳ ಕುರಿತಾದ ನನ್ನ ಅಧ್ಯಯನವು ಜೀವರಾಶಿಯು, ಅದರ ಅತಿ ಮೂಲರೂಪಗಳು ಸಹ ಬುದ್ಧಿವಂತಿಕೆಯಿಂದ ಸೃಷ್ಟಿಸಲ್ಪಟ್ಟಿರಲೇಬೇಕೆಂಬ ನನ್ನ ದೃಢನಿಶ್ಚಯವನ್ನು ಬಲಪಡಿಸಿದೆ.

      ವೈಜ್ಞಾನಿಕ ಸಮುದಾಯಕ್ಕೆ ಸಹ ಜೀವರಾಶಿಗಳಲ್ಲಿ ಕಂಡುಬರುವ ಜಟಿಲತೆಯ ಉತ್ತಮ ಪರಿಚಯವಿದೆ. ಆದರೆ ನಮ್ಮನ್ನು ಸ್ತಬ್ಧಗೊಳಿಸುವಂಥ ಈ ನಿಜತ್ವಗಳನ್ನು ಸಾಮಾನ್ಯವಾಗಿ, ಜೀವವಿಕಾಸ ಸಿದ್ಧಾಂತವನ್ನು ಬೆಂಬಲಿಸುವ ಪೂರ್ವಾಪರದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಆದರೆ ನನ್ನ ಅಭಿಪ್ರಾಯದಲ್ಲಿ, ಬೈಬಲಿನ ಸೃಷ್ಟಿವೃತ್ತಾಂತವನ್ನು ವಿರೋಧಿಸುವಂಥ ವಾದಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸುವಲ್ಲಿ ಅವು ಕುಸಿದು ಬೀಳುತ್ತವೆ. ನಾನು ಅಂತಹ ವಾದಗಳನ್ನು ಅನೇಕ ದಶಕಗಳಿಂದ ಪರೀಕ್ಷಿಸಿ ನೋಡಿದ್ದೇನೆ. ಜೀವಿಗಳ ಬಹಳ ಜಾಗರೂಕತೆಯ ಅಧ್ಯಯನ, ಮತ್ತು ಭೂಮಿಯಲ್ಲಿ ಜೀವ ಅಸ್ತಿತ್ವದಲ್ಲಿರುವದಕ್ಕೋಸ್ಕರ ವಿಶ್ವವನ್ನು ನಿಯಂತ್ರಿಸುವಂಥ ನಿಯಮಗಳು ಪರಿಪೂರ್ಣ ಹೊಂದಿಕೆಯಲ್ಲಿರುವ ರೀತಿಯನ್ನು ಪರಿಗಣಿಸಿದ ಬಳಿಕ, ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಂಬಲು ನಾನು ನಿರ್ಬಂಧಿಸಲ್ಪಟ್ಟಿದ್ದೇನೆ.

      “ನಾನು ಅವಲೋಕಿಸುವ ಪ್ರತಿಯೊಂದೂ ಉಂಟುಮಾಡಲ್ಪಟ್ಟಿತು”

      ◼ ಬೈರನ್‌ ಲೀಆನ್‌ ಮೀಡೋಸ್‌

      ವ್ಯಕ್ತಿಪರಿಚಯ: ನಾನು ಅಮೆರಿಕದಲ್ಲಿ ವಾಸಿಸುತ್ತಿದ್ದೇನೆ. ನ್ಯಾಷನಲ್‌ ಆ್ಯರನಾಟಿಕ್ಸ್‌ ಆ್ಯಂಡ್‌ ಸ್ಪೇಸ್‌ ಆ್ಯಡ್‌ಮಿನಿಸ್ಟ್ರೇಷನ್‌ನಲ್ಲಿ ಲೇಸರ್‌ ಭೌತವಿಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುತ್ತೇನೆ. ಸದ್ಯಕ್ಕೆ ನಾನು, ಭೌಗೋಳಿಕ ವಾಯುಗುಣ, ಹವಾಮಾನ ಮತ್ತು ಗ್ರಹದ ಅಸಾಧಾರಣ ಪ್ರಕೃತಿ ಘಟನೆಗಳನ್ನು ಮಾನಿಟರ್‌ ಮಾಡುವ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ತಂತ್ರಜ್ಞಾನ ವಿಕಸನ ಕೆಲಸದಲ್ಲಿ ಒಳಗೂಡಿದ್ದೇನೆ. ನಾನು ವರ್ಜೀನಿಯದ ಕಿಲ್ಮಾರ್ನಕ್‌ ಪ್ರದೇಶದ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಹಿರಿಯನಾಗಿದ್ದೇನೆ.

      ನನ್ನ ಸಂಶೋಧನೆಯಲ್ಲಿ ನಾನು ಹೆಚ್ಚಾಗಿ ಭೌತಶಾಸ್ತ್ರದ ಮೂಲಸೂತ್ರಗಳಿಗೆ ಸಂಬಂಧಪಟ್ಟ ಕೆಲಸಮಾಡುತ್ತೇನೆ. ನಿರ್ದಿಷ್ಟ ವಿಷಯಗಳು ಹೇಗೆ ಮತ್ತು ಏಕೆ ಸಂಭವಿಸುತ್ತವೆಂದು ತಿಳಿಯಲು ಪ್ರಯತ್ನಿಸುವುದು ನನ್ನ ಕೆಲಸ. ನನ್ನ ಅಧ್ಯಯನ ಕ್ಷೇತ್ರದಲ್ಲಿ, ನಾನು ಅವಲೋಕಿಸುವ ಪ್ರತಿಯೊಂದೂ ಉಂಟುಮಾಡಲ್ಪಟ್ಟಿತು ಎಂಬುದಕ್ಕೆ ಸ್ಪಷ್ಟ ರುಜುವಾತು ನನಗೆ ತೋರಿಬರುತ್ತದೆ. ದೇವರು ಪ್ರಕೃತಿಯಲ್ಲಿರುವ ಸಕಲ ವಸ್ತುಗಳಿಗೆ ಮೂಲಕಾರಣನೆಂದು ಅಂಗೀಕರಿಸುವುದು ವೈಜ್ಞಾನಿಕವಾಗಿ ತರ್ಕಸಮ್ಮತವೆಂಬುದು ನನ್ನ ನಂಬಿಕೆ. ಪ್ರಕೃತಿಯ ನಿಯಮಗಳು ಎಷ್ಟು ಸ್ಥಿರವಾಗಿವೆಯೆಂದರೆ, ಒಬ್ಬ ವ್ಯವಸ್ಥಾಪಕನು ಅಥವಾ ಒಬ್ಬ ಸೃಷ್ಟಿಕರ್ತನು ಅವುಗಳನ್ನು ಸ್ಥಾಪಿಸಿದನೆಂದು ನಂಬದಿರಲು ನನಗೆ ಅಸಾಧ್ಯ.

      ಒಬ್ಬ ಸೃಷ್ಟಿಕರ್ತನಿದ್ದಾನೆಂಬ ಈ ತೀರ್ಮಾನವು ಅಷ್ಟು ಸ್ಪಷ್ಟವಾಗಿ ತೋರಿಬರುತ್ತಿರುವುದಾದರೆ, ಅನೇಕ ವಿಜ್ಞಾನಿಗಳು ಜೀವವಿಕಾಸವನ್ನು ನಂಬುವುದೇಕೆ? ವಿಕಾಸವಾದಿಗಳು ತಮ್ಮ ಬಳಿಯಿರುವ ರುಜುವಾತನ್ನು ಅವರ ಪೂರ್ವಕಲ್ಪಿತ ಅಭಿಪ್ರಾಯಗಳಿಂದ ನೋಡುತ್ತಿರುವುದರಿಂದಲೊ? ವಿಜ್ಞಾನಿಗಳು ಹೀಗೆ ಮಾಡುವುದು ಹಿಂದೆಂದೂ ಕೇಳಿಲ್ಲದಂಥ ವಿಷಯವಲ್ಲ. ಆದರೆ ಅವಲೋಕನೆ, ಅದೆಷ್ಟೇ ಮನವರಿಕೆಮಾಡುವಂಥದ್ದಾಗಿರಲಿ, ಒಬ್ಬನು ಸರಿಯಾದ ತೀರ್ಮಾನಕ್ಕೆ ಬರುವನೆಂಬುದಕ್ಕೆ ಖಾತರಿಯಾಗಿರುವುದಿಲ್ಲ. ದೃಷ್ಟಾಂತಕ್ಕೆ, ಲೇಸರ್‌ ಭೌತಶಾಸ್ತ್ರದ ಸಂಶೋಧನೆ ಮಾಡುವ ಒಬ್ಬ ವ್ಯಕ್ತಿಯು, ಬೆಳಕು ಧ್ವನಿತರಂಗದಂತೆ ಒಂದು ತರಂಗವಾಗಿದೆಯೆಂದು ಪಟ್ಟುಹಿಡಿದು ಹೇಳಬಹುದು. ಕಾರಣ, ಬೆಳಕು ಅನೇಕವೇಳೆ ತರಂಗದಂತೆ ವರ್ತಿಸುತ್ತದೆ. ಆದರೂ ಅವನ ತೀರ್ಮಾನ ಅಪೂರ್ಣವಾದುದಾಗಿದೆ, ಏಕೆಂದರೆ ಬೆಳಕು, ಫೋಟಾನ್‌ಗಳೆಂದು ಕರೆಯಲ್ಪಡುವ ಕಣಸಮುದಾಯಗಳಾಗಿಯೂ ವರ್ತಿಸುತ್ತವೆಂದು ರುಜುವಾತು ಸೂಚಿಸುತ್ತವೆ. ತದ್ರೀತಿ, ಜೀವವಿಕಾಸವು ವಾಸ್ತವಾಂಶವೆಂದು ವಾದಿಸುವವರು ತಮ್ಮ ತೀರ್ಮಾನಗಳನ್ನು ರುಜುವಾತಿನ ಒಂದು ಭಾಗದ ಮೇಲೆ ಮಾತ್ರ ಆಧರಿಸುತ್ತಾರೆ, ಮತ್ತು ತಮ್ಮ ಪೂರ್ವಕಲ್ಪಿತ ತೀರ್ಮಾನಗಳು ಆ ರುಜುವಾತನ್ನು ದೃಷ್ಟಿಸುವ ವಿಧವನ್ನು ಪ್ರಭಾವಿಸುವಂತೆ ಅವರು ಬಿಡುತ್ತಾರೆ.

      ಸ್ವತಃ ವಿಕಾಸವಾದಿ “ಪರಿಣತರು,” ಜೀವವಿಕಾಸವು ಹೇಗೆ ಸಂಭವಿಸಿದ್ದಿರಬಹುದೆಂದು ತಮ್ಮೊಳಗೇ ವಾದಿಸುತ್ತಿದ್ದಾರೆ. ಹೀಗಿರುವಾಗ, ಜೀವವಿಕಾಸವು ವಾಸ್ತವಾಂಶವೆಂದು ಯಾವನಾದರೂ ಒಪ್ಪಿಕೊಳ್ಳುವುದನ್ನು ನೋಡುವಾಗ ನನಗೆ ಆಶ್ಚರ್ಯವೆನಿಸುತ್ತದೆ. ದೃಷ್ಟಾಂತಕ್ಕೆ, ಕೆಲವು ಮಂದಿ ಪರಿಣತರು 2 ಮತ್ತು 2ನ್ನು ಕೂಡಿಸಿದರೆ ಒಟ್ಟು 4 ಆಗುತ್ತದೆ ಎಂದು ಹೇಳುವಾಗ, ಬೇರೆ ಪರಿಣತರು ಅದು ಒಟ್ಟು 3 ಅಥವಾ 6 ಆಗುತ್ತದೆ ಎಂದು ಹೇಳುವಲ್ಲಿ, ಗಣಿತವು ರುಜುವಾಗಿರುವ ನಿಜತ್ವವೆಂದು ನೀವು ಒಪ್ಪುವಿರೊ? ಯಾವುದು ರುಜುವಾಗಿದೆಯೊ, ಪರೀಕ್ಷಿಸಲಾಗಿದೆಯೊ ಮತ್ತು ಪುನಃ ಪ್ರಯೋಗಮಾಡಿ ತೋರಿಸಲಾಗಿದೆಯೊ ಅದನ್ನು ಮಾತ್ರ ಒಪ್ಪಿಕೊಳ್ಳುವುದೇ ವಿಜ್ಞಾನದ ಪಾತ್ರವಾಗಿರುವಲ್ಲಿ, ಎಲ್ಲ ಜೀವರಾಶಿಯು ಒಂದು ಸಾಮಾನ್ಯ ಮೂಲರೂಪದಿಂದ ವಿಕಾಸವಾಗುತ್ತಾ ಬಂದಿದೆ ಎಂಬ ವಾದವು ವೈಜ್ಞಾನಿಕ ವಾಸ್ತವಾಂಶವಾಗಿರುವುದಿಲ್ಲ. (g 9/06)

      “ಶೂನ್ಯದಿಂದ ಏನೂ ಬರಲಾರದು”

      ◼ ಕೆನತ್‌ ಲಾಯ್ಡ್‌ ಟಾನಾಕಾ

      ವ್ಯಕ್ತಿಪರಿಚಯ: ನಾನೊಬ್ಬ ಭೂವಿಜ್ಞಾನಿ. ಸದ್ಯಕ್ಕೆ ಆ್ಯರಿಸೋನದ ಫ್ಲ್ಯಾಗ್‌ಸ್ಟಾಫ್‌ನಲ್ಲಿರುವ ಯು.ಎಸ್‌. ಜೀಯಲಾಜಿಕಲ್‌ ಸರ್ವೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಹಗಳ ವಿಜ್ಞಾನವು ಸೇರಿರುವ ಭೂವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿನ ವೈಜ್ಞಾನಿಕ ಸಂಶೋಧನೆಯಲ್ಲಿ ನಾನು ಸುಮಾರು 30 ವರುಷಕಾಲ ಭಾಗವಹಿಸಿರುತ್ತೇನೆ. ಮಂಗಳ ಗ್ರಹದ ಸಂಬಂಧದಲ್ಲಿ ನಾನು ತಯಾರಿಸಿರುವ ಅನೇಕ ಲೇಖನಗಳು ಮತ್ತು ನಕ್ಷೆಗಳು ಅಂಗೀಕೃತ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವ ನಾನು, ಬೈಬಲ್‌ ಓದುವಂತೆ ಇತರರನ್ನು ಪ್ರೋತ್ಸಾಹಿಸುವುದರಲ್ಲಿ ಪ್ರತಿ ತಿಂಗಳು ಸುಮಾರು 70 ತಾಸುಗಳನ್ನು ಕಳೆಯುತ್ತೇನೆ.

      ಜೀವವಿಕಾಸ ಸಿದ್ಧಾಂತದಲ್ಲಿ ನಂಬುವಂತೆ ನನಗೆ ಕಲಿಸಲಾಗಿತ್ತು. ಆದರೆ ವಿಶ್ವರಚನೆಗೆ ಬೇಕಾಗಿದ್ದ ಭಾರೀ ಶಕ್ತಿಯು ಬಲಾಢ್ಯ ಸೃಷ್ಟಿಕರ್ತನಿಲ್ಲದೆ ಬಂತೆಂಬುದನ್ನು ನನಗೆ ನಂಬಲಾಗಲಿಲ್ಲ. ಶೂನ್ಯದಿಂದ ಏನೂ ಬರಲಾರದು. ಅಲ್ಲದೆ, ಸೃಷ್ಟಿಕರ್ತನೊಬ್ಬನು ಇದ್ದಾನೆಂಬುದಕ್ಕೆ ಒಂದು ಶಕ್ತಿಯುತ ವಾದವು ನನಗೆ ಬೈಬಲಿನಲ್ಲಿಯೇ ದೊರೆಯುತ್ತದೆ. ಈ ಗ್ರಂಥವು ನಾನು ಪರಿಣತನಾಗಿರುವ ಕ್ಷೇತ್ರದ ವೈಜ್ಞಾನಿಕ ನಿಜತ್ವಗಳಿಗೆ ಅನೇಕ ದೃಷ್ಟಾಂತಗಳನ್ನು ಕೊಡುತ್ತದೆ. ಉದಾಹರಣೆಗೆ ಭೂಮಿ ಗೋಳಾಕಾರದಲ್ಲಿದೆ ಮತ್ತು “ಯಾವ ಆಧಾರವೂ ಇಲ್ಲದೆ” ತೂಗುಹಾಕಲ್ಪಟ್ಟಿದೆ ಎಂದು ಅದು ಹೇಳುತ್ತದೆ. (ಯೋಬ 26:7; ಯೆಶಾಯ 40:22) ಮಾನವ ತನಿಖೆಗಳು ಇದನ್ನು ರುಜುಪಡಿಸುವುದಕ್ಕೆ ಎಷ್ಟೋ ಪೂರ್ವದಲ್ಲಿ ಈ ನಿಜತ್ವಗಳನ್ನು ಬೈಬಲಿನಲ್ಲಿ ಬರೆಯಲಾಗಿತ್ತು.

      ನಮ್ಮ ರಚನೆಯ ಬಗ್ಗೆ ಯೋಚಿಸಿರಿ. ನಮ್ಮಲ್ಲಿ ಇಂದ್ರಿಯ ಗ್ರಹಣಶಕ್ತಿ, ಸ್ವಪ್ರಜ್ಞೆ, ಬುದ್ಧಿವಂತಿಕೆಯಿಂದ ಕೂಡಿದ ಯೋಚನೆ, ಸಂವಾದಿಸುವ ಸಾಮರ್ಥ್ಯಗಳು ಮತ್ತು ಭಾವನೆಗಳಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಾವು ಪ್ರೀತಿಯನ್ನು ಅನುಭವಿಸಿ, ಮಾನ್ಯಮಾಡಿ, ವ್ಯಕ್ತಪಡಿಸಬಲ್ಲೆವು. ಆದರೆ ಈ ಆಶ್ಚರ್ಯಕರವಾದ ಮಾನವ ಗುಣಗಳು ಹೇಗೆ ಬಂದವೆಂಬುದನ್ನು ವಿಕಾಸವಾದ ವಿವರಿಸಲಾರದು.

      ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ: ‘ಜೀವವಿಕಾಸ ಸಿದ್ಧಾಂತವನ್ನು ಬೆಂಬಲಿಸಲು ಬಳಸಲಾಗುವ ಮಾಹಿತಿಮೂಲಗಳು ಎಷ್ಟು ಭರವಸಾರ್ಹ ಮತ್ತು ವಿಶ್ವಸನೀಯವಾಗಿವೆ?’ ಭೂವಿಜ್ಞಾನದ ದಾಖಲೆ ಅಪೂರ್ಣ, ಜಟಿಲ ಮತ್ತು ಅಸ್ತವ್ಯಸ್ತವಾಗಿದೆ. ವಿಕಾಸವಾದಿಗಳು ವೈಜ್ಞಾನಿಕ ವಿಧಾನಶಾಸ್ತ್ರವನ್ನು ಉಪಯೋಗಿಸಿ ಜೀವವಿಕಾಸದ ಪ್ರಕ್ರಿಯೆಗಳನ್ನು ಪ್ರಯೋಗಶಾಲೆಯಲ್ಲಿ ತೋರಿಸಿಕೊಡಲು ತಪ್ಪಿದ್ದಾರೆ. ಮತ್ತು ಸಾಮಾನ್ಯವಾಗಿ ವಿಜ್ಞಾನಿಗಳು ದತ್ತಾಂಶಗಳನ್ನು ಪಡೆಯಲು ಉತ್ತಮ ಸಂಶೋಧನಾ ವಿಧಾನಗಳನ್ನು ಬಳಸುತ್ತಾರಾದರೂ, ತಾವು ಕಂಡುಹಿಡಿದ ವಿಷಯಗಳನ್ನು ವಿವರಿಸುವಾಗ ಅವರು ಅನೇಕವೇಳೆ ಸ್ವಾರ್ಥೋದ್ದೇಶಗಳಿಂದ ಪ್ರಭಾವಿತರಾಗುತ್ತಾರೆ. ದತ್ತಾಂಶಗಳು ನಿರ್ಣಯವಿಹೀನವಾಗಿರುವಾಗ ಇಲ್ಲವೆ ಪರಸ್ಪರ ವಿರೋಧದಲ್ಲಿರುವಾಗ, ವಿಜ್ಞಾನಿಗಳು ತಮ್ಮ ಸ್ವಂತ ಅಭಿಪ್ರಾಯಗಳನ್ನು ಕೊಡುತ್ತಾರೆಂಬುದು ತಿಳಿದಿರುವ ಸಂಗತಿಯಾಗಿದೆ. ಆಗ ಅವರ ವೃತ್ತಿಗಳು ಮತ್ತು ಆತ್ಮಾಭಿಮಾನದ ಸ್ವಂತ ಅನಿಸಿಕೆಗಳು ಪ್ರಮುಖ ಪಾತ್ರಗಳನ್ನು ವಹಿಸುತ್ತವೆ.

      ಒಬ್ಬ ವಿಜ್ಞಾನಿಯೂ ಬೈಬಲ್‌ ವಿದ್ಯಾರ್ಥಿಯೂ ಆಗಿ ನಾನು, ಅತಿ ನಿಷ್ಕೃಷ್ಟ ತಿಳಿವಳಿಕೆಯನ್ನು ಪಡೆಯಲು ಎಲ್ಲ ಜ್ಞಾತ ವಾಸ್ತವಾಂಶಗಳಿಗೆ ಮತ್ತು ವೀಕ್ಷಣೆಗಳಿಗೆ ಹೊಂದಿಕೆಯಲ್ಲಿರುವ ಪೂರ್ಣ ಸತ್ಯಕ್ಕಾಗಿ ಹುಡುಕುತ್ತೇನೆ. ನನಗಂತೂ, ಸೃಷ್ಟಿಕರ್ತನೊಬ್ಬನು ಇದ್ದಾನೆಂದು ನಂಬುವುದೇ ಅತ್ಯಂತ ತರ್ಕಸಮ್ಮತವಾದ ವಿಚಾರವಾಗಿದೆ.

      “ಜೀವಕೋಶದಲ್ಲಿ ಸ್ಫುಟವಾಗಿ ತೋರಿಬರುವ ವಿನ್ಯಾಸ”

      ◼ ಪೌಲಾ ಕಿಂಚಲೋ

      ವ್ಯಕ್ತಿಪರಿಚಯ: ನನಗೆ ಜೀವಕೋಶ ಮತ್ತು ಅಣು ಜೀವವಿಜ್ಞಾನ (ಸೆಲ್‌ ಆ್ಯಂಡ್‌ ಮಲೆಕ್ಯುಲರ್‌ ಬಯಾಲಜಿ) ಮತ್ತು ಸೂಕ್ಷ್ಮಜೀವಿವಿಜ್ಞಾನ (ಮೈಕ್ರೋಬಯಾಲಜಿ) ಕ್ಷೇತ್ರಗಳಲ್ಲಿ ಸಂಶೋಧಕಿಯಾಗಿ ಅನೇಕ ವರುಷಗಳ ಅನುಭವವಿದೆ. ನಾನು ಈಗ ಅಮೆರಿಕದ ಜಾರ್ಜಿಯದ ಅಟ್ಲಾಂಟದಲ್ಲಿರುವ ಇಮರೀ ವಿಶ್ವವಿದ್ಯಾಲಯದಲ್ಲಿ ಉದ್ಯೋಗದಲ್ಲಿದ್ದೇನೆ. ನಾನು ರಷ್ಯನ್‌ ಭಾಷೆ ಮಾತಾಡುವ ಸಮುದಾಯದಲ್ಲಿ ಬೈಬಲ್‌ ಶಿಕ್ಷಕಿಯಾಗಿ ಸ್ವಯಂಸೇವೆಮಾಡುತ್ತಿದ್ದೇನೆ.

      ಜೀವವಿಜ್ಞಾನದ ನನ್ನ ವಿದ್ಯಾಭ್ಯಾಸದ ಭಾಗವಾಗಿ ನಾನು ನಾಲ್ಕು ವರುಷ, ಜೀವಕೋಶ ಮತ್ತು ಅದರ ಅಂಗಭಾಗಗಳ ಮೇಲೆ ಮಾತ್ರ ಕೇಂದ್ರಿತವಾದ ಅಧ್ಯಯನವನ್ನು ಮಾಡಿದೆ. ಡಿಎನ್‌ಎ, ಆರ್‌ಎನ್‌ಎ, ಪ್ರೋಟೀನ್‌, ಉಪಾಪಚಯ ಪ್ರತಿಕ್ರಿಯಾಸರಣಿಗಳು​—⁠ಇವುಗಳ ವಿಷಯ ನಾನು ಹೆಚ್ಚೆಚ್ಚು ಕಲಿತಷ್ಟಕ್ಕೆ, ಅವುಗಳ ಜಟಿಲತೆ, ಸಂಯೋಜನೆ ಮತ್ತು ನಿಖರತೆಯ ಬಗ್ಗೆ ಹೆಚ್ಚೆಚ್ಚು ವಿಸ್ಮಿತಳಾದೆ. ಜೀವಕೋಶದ ವಿಷಯದಲ್ಲಿ ಮನುಷ್ಯನು ಎಷ್ಟೊಂದನ್ನು ಕಲಿತುಕೊಂಡಿದ್ದಾನೆಂಬುದರ ಬಗ್ಗೆ ನಾನು ಪ್ರಭಾವಿತಳಾದರೂ, ಕಲಿಯಲು ಇನ್ನೂ ಎಷ್ಟಿದೆಯೆಂಬುದರ ಬಗ್ಗೆ ಇನ್ನೂ ಹೆಚ್ಚು ಬೆರಗಾದೆ. ಜೀವಕೋಶದಲ್ಲಿ ಸ್ಫುಟವಾಗಿ ತೋರಿಬರುವ ವಿನ್ಯಾಸವು, ದೇವರಿದ್ದಾನೆಂದು ನಾನು ನಂಬುವುದಕ್ಕೆ ಒಂದು ಕಾರಣವಾಗಿದೆ.

      ನನ್ನ ಬೈಬಲ್‌ ಅಧ್ಯಯನವು ನನಗೆ ಆ ಸೃಷ್ಟಿಕರ್ತನು ಯಾರಾಗಿದ್ದಾನೆಂಬುದನ್ನು ತಿಳಿಯಪಡಿಸಿದೆ. ಆತನು ಯೆಹೋವ ದೇವರೇ. ಆತನು ಬುದ್ಧಿಶಕ್ತಿಯುಳ್ಳ ವಿನ್ಯಾಸಕಾರನು ಮಾತ್ರವಲ್ಲ, ನನ್ನನ್ನು ಪರಾಮರಿಸುವ ದಯಾಪರ ಮತ್ತು ಪ್ರೀತಿಪರ ತಂದೆಯೂ ಆಗಿದ್ದಾನೆಂದು ನನಗೆ ಮನವರಿಕೆಯಾಗಿದೆ. ಬೈಬಲು ಜೀವನದ ಉದ್ದೇಶವೇನೆಂಬುದನ್ನು ವಿವರಿಸಿ, ಸುಖೀ ಭವಿಷ್ಯತ್ತಿನ ನಿರೀಕ್ಷೆಯನ್ನೂ ಒದಗಿಸುತ್ತದೆ.

      ಶಾಲೆಯಲ್ಲಿ ಜೀವವಿಕಾಸದ ಬಗ್ಗೆ ಕಲಿಸಲಾಗುತ್ತಿರುವ ಎಳೆಯರು ತಾವೇನು ನಂಬಬೇಕೆಂಬ ವಿಷಯ ಅನಿಶ್ಚಿತರಾಗಿರಬಹುದು. ಇದು ಅವರಿಗೆ ಗೊಂದಲದ ಸಮಯವಾಗಿರಬಲ್ಲದು. ಅವರು ದೇವರನ್ನು ನಂಬುತ್ತಿರುವುದಾದರೆ, ಇದೊಂದು ನಂಬಿಕೆಯ ಪರೀಕ್ಷೆ ಆಗಿರುತ್ತದೆ. ಆದರೆ, ನಿಸರ್ಗದಲ್ಲಿ ನಮ್ಮ ಸುತ್ತಲೂ ಇರುವ ಅನೇಕ ಆಶ್ಚರ್ಯಕರ ವಿಷಯಗಳನ್ನು ಪರೀಕ್ಷಿಸುವ ಮೂಲಕ ಮತ್ತು ಸೃಷ್ಟಿಕರ್ತನ ಹಾಗೂ ಆತನ ಗುಣಗಳ ಕುರಿತ ಜ್ಞಾನದಲ್ಲಿ ಬೆಳೆಯುತ್ತ ಹೋಗುವ ಮೂಲಕ ಅವರು ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಲ್ಲರು. ನಾನು ಸ್ವತಃ ಹೀಗೆ ಮಾಡಿದ್ದೇನೆ ಮತ್ತು ಈ ಮೂಲಕ ಬೈಬಲಿನ ಸೃಷ್ಟಿವೃತ್ತಾಂತವು ನಿಷ್ಕೃಷ್ಟವೆಂದೂ ಅದು ನಿಜ ವಿಜ್ಞಾನಕ್ಕೆ ವಿರೋಧದಲ್ಲಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದೇನೆ.

      “ನಿಯಮಗಳ ಲಲಿತವಾದ ಸರಳತೆ”

      ◼ಎನ್ರೀಕೆ ಅರ್ನಾಂಡೆಸ್‌ ಲೇಮೂಸ್‌

      ವ್ಯಕ್ತಿಪರಿಚಯ: ನಾನು ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕನಾಗಿದ್ದೇನೆ. ಅಲ್ಲದೆ ನಾನು ಮೆಕ್ಸಿಕೊವಿನ ನ್ಯಾಷನಲ್‌ ಯುನಿವರ್ಸಿಟಿಯಲ್ಲಿ ಕೆಲಸಮಾಡುತ್ತಿರುವ ಒಬ್ಬ ಸೈದ್ಧಾಂತಿಕ ಭೌತವಿಜ್ಞಾನಿಯೂ (ಥಿಯರೆಟಿಕಲ್‌ ಫಿಸಿಸಿಸ್ಟ್‌) ಆಗಿದ್ದೇನೆ. ನಾನು ಈಗ ಮಾಡುತ್ತಿರುವ ಕೆಲಸದಲ್ಲಿ, ನಕ್ಷತ್ರ ಬೆಳವಣಿಗೆಯ ಒಂದು ಪ್ರಕ್ರಿಯೆಯಾದ, ಗುರುತ್ವಕ್ಕೆ ಸಂಬಂಧಿಸಿದ ವಿನಾಶ (ಗ್ರ್ಯಾವೋಥರ್ಮಲ್‌ ಕೆಟಾಸ್ಟ್ರಫಿ) ಎಂದು ಜ್ಞಾತವಾಗಿರುವ ಪ್ರಕೃತಿ ಘಟನೆ ಏಕೆ ನಡೆಯುತ್ತದೆಂಬುದಕ್ಕೆ ಉಷ್ಣಬಲ ವಿಜ್ಞಾನದ ಸೂತ್ರಗಳ ಮೇಲಾಧಾರಿತವಾದ ವಿವರಣೆಯನ್ನು ಕಂಡುಹಿಡಿಯುವುದು ಸೇರಿದೆ. ನಾನು ಡಿಎನ್‌ಎ ಅನುಕ್ರಮಗಳಲ್ಲಿನ ಜಟಿಲತೆಗೆ ಸಂಬಂಧಪಟ್ಟ ಕೆಲಸವನ್ನೂ ಮಾಡಿದ್ದೇನೆ.

      ಜೀವರಾಶಿಯು ಎಷ್ಟು ಜಟಿಲವೆಂದರೆ ಅದು ಅಕಸ್ಮಾತ್ತಾಗಿ ಉದ್ಭವಿಸಲು ಸಾಧ್ಯವಿಲ್ಲ. ದೃಷ್ಟಾಂತಕ್ಕೆ, ಡಿಎನ್‌ಎ ಕಣದಲ್ಲಿ ಅಡಗಿರುವ ಬಹು ವಿಸ್ತಾರವಾದ ಮಾಹಿತಿಯ ಬಗ್ಗೆ ಯೋಚಿಸಿರಿ. ಒಂದು ವರ್ಣತಂತು (ಕ್ರೋಮೋಸೋಮ್‌) ಗೊತ್ತುಗುರಿಯಿಲ್ಲದೆ ಉದ್ಭವಿಸುವ ಗಣಿತಶಾಸ್ತ್ರೀಯ ಸಂಭಾವ್ಯತೆಯು 90 ಲಕ್ಷಕೋಟಿಗಳಲ್ಲಿ 1ಕ್ಕೂ ಕಡಮೆಯಾಗಿದೆ. ಇದು ಎಷ್ಟು ಅಸಂಭವನೀಯವೆಂದರೆ, ಅದನ್ನು ಅಸಾಧ್ಯವೆಂದೇ ಎಣಿಸಬಹುದು. ಬುದ್ಧಿವಂತಿಕೆಯಿಲ್ಲದ ಶಕ್ತಿಗಳು ಒಂದು ವರ್ಣತಂತುವನ್ನು ಮಾತ್ರವಲ್ಲ, ಜೀವಿಗಳಲ್ಲಿರುವ ಬೆರಗಾಗಿಸುವ ಎಲ್ಲ ಜಟಿಲತೆಯನ್ನು ಸೃಷ್ಟಿಸಿವೆ ಎಂದು ನಂಬುವುದು ತೀರ ಮೂಢತನವೆಂಬುದೇ ನನ್ನ ಎಣಿಕೆ.

      ಇದಲ್ಲದೆ, ನಾನು ಭೌತದ್ರವ್ಯದ (ಮ್ಯಾಟರ್‌) ತುಂಬ ಜಟಿಲವಾದ ವರ್ತನೆಯನ್ನು, ಸೂಕ್ಷ್ಮದರ್ಶಕೀಯ (ಮೈಕ್ರೋಸ್ಕಾಪಿಕ್‌) ಹಂತದಿಂದ ಹಿಡಿದು ಅಂತರಿಕ್ಷದಲ್ಲಿರುವ ಬೃಹದಾಕಾರದ ನಾಕ್ಷತ್ರಿಕ ಮೋಡಗಳ ಚಲನೆಯ ಹಂತದ ವರೆಗೆ ಅಧ್ಯಯನ ಮಾಡುವಾಗ, ಅವುಗಳ ಚಲನೆಯನ್ನು ನಿರ್ದೇಶಿಸುವ ನಿಯಮಗಳ ಲಲಿತವಾದ ಸರಳತೆಯಿಂದ ಪ್ರಭಾವಿತನಾಗುತ್ತೇನೆ. ನನಗಂತೂ, ಈ ನಿಯಮಗಳು ಒಬ್ಬ ಅತಿ ಚತುರ ಗಣಿತಜ್ಞನ ಕೆಲಸಕ್ಕಿಂತಲೂ ಹೆಚ್ಚಿನದನ್ನು ಸೂಚಿಸುತ್ತದೆ. ನನಗೆ ಅವು ಒಬ್ಬ ಮೇರು ಕಲಾವಿದನು ಹಾಕಿರುವ ಸಹಿಯಂತಿವೆ.

      ನಾನು ಯೆಹೋವನ ಸಾಕ್ಷಿಗಳಲ್ಲೊಬ್ಬನೆಂದು ಹೇಳುವಾಗ ಅನೇಕವೇಳೆ ಜನರಿಗೆ ಆಶ್ಚರ್ಯವಾಗುತ್ತದೆ. ದೇವರಿದ್ದಾನೆಂದು ನಾನು ಹೇಗೆ ನಂಬಸಾಧ್ಯ ಎಂದು ಕೆಲವು ಸಲ ಅವರು ಕೇಳುತ್ತಾರೆ. ಅವರ ಈ ಪ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳಬಹುದು, ಏಕೆಂದರೆ ಹೆಚ್ಚಿನ ಧರ್ಮಗಳು ತಮ್ಮ ಅನುಯಾಯಿಗಳಿಗೆ ಕಲಿಸುವಂಥ ವಿಷಯಗಳಿಗಾಗಿ ರುಜುವಾತನ್ನು ಕೇಳುವಂತೆ ಇಲ್ಲವೆ ಅವರ ನಂಬಿಕೆಗಳ ಬಗ್ಗೆ ಸಂಶೋಧನೆಮಾಡುವಂತೆ ಅವರನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ, ನಮ್ಮ ‘ಯೋಚನಾ ಸಾಮರ್ಥ್ಯವನ್ನು’ ಬಳಸುವಂತೆ ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಜ್ಞಾನೋಕ್ತಿ 3:​21, NW) ಪ್ರಕೃತಿಯಲ್ಲಿ ಬುದ್ಧಿವಂತಿಕೆಯನ್ನು ತೋರಿಸುವ ವಿನ್ಯಾಸಗಳ ಸಕಲ ರುಜುವಾತು ಮತ್ತು ಬೈಬಲಿನಲ್ಲಿರುವ ಸಾಕ್ಷ್ಯವು ದೇವರಿದ್ದಾನೆಂದು ಮಾತ್ರವಲ್ಲ ಆತನು ನಮ್ಮ ಪ್ರಾರ್ಥನೆಗಳ ಕುರಿತೂ ಆಸಕ್ತಿವಹಿಸುತ್ತಾನೆಂಬುದನ್ನು ನನಗೆ ಮನದಟ್ಟುಮಾಡುತ್ತದೆ.

      [ಪಾದಟಿಪ್ಪಣಿ]

      a ಈ ಲೇಖನದಲ್ಲಿನ ಪರಿಣತರು ಕೊಟ್ಟಿರುವ ಅಭಿಪ್ರಾಯಗಳು ಅವರ ಧಣಿಗಳದ್ದಾಗಿರಲಿಕ್ಕಿಲ್ಲ ಇಲ್ಲವೆ ಸಂಸ್ಥೆಗಳದ್ದಾಗಿರಲಿಕ್ಕಿಲ್ಲ.

      [ಪುಟ 22ರಲ್ಲಿರುವ ಚಿತ್ರ ಕೃಪೆ]

      ಹಿನ್ನಲೆಯಲ್ಲಿ ಮಂಗಳಗ್ರಹ: Courtesy USGS Astrogeology Research Program, http://astrogeology.usgs.gov

  • ಸಸ್ಯಗಳಲ್ಲಿನ ಕುತೂಹಲ ಕೆರಳಿಸುವ ವಿನ್ಯಾಸಗಳು
    ಎಚ್ಚರ!—2006 | ಅಕ್ಟೋಬರ್‌
    • ಸಸ್ಯಗಳಲ್ಲಿನ ಕುತೂಹಲ ಕೆರಳಿಸುವ ವಿನ್ಯಾಸಗಳು

      ಅನೇಕ ಸಸ್ಯಗಳು ಸುರುಳಿ ರಚನಾಕ್ರಮದಲ್ಲಿ ಬೆಳೆಯುವುದನ್ನು ನೀವೆಂದಾದರೂ ಗಮನಿಸಿದ್ದೀರೊ? ಉದಾಹರಣೆಗೆ ಅನಾನಸನ್ನು ತೆಗೆದುಕೊಳ್ಳಿ. ಅದರ ಸಿಪ್ಪೆಯ ಮೇಲಿರುವ ವಜ್ರಾಕಾರದ ಗುರುತುಗಳು ಒಂದು ದಿಕ್ಕಿನಲ್ಲಿ 8, ವಿರುದ್ಧ ದಿಕ್ಕಿನಲ್ಲಿ 5 ಇಲ್ಲವೆ 13ರಂತೆ ಸುರುಳಿ ರಚನೆಯಲ್ಲಿ ಸುತ್ತು ಹೋಗುತ್ತಿರಬಹುದು. (ಚಿತ್ರ 1ನ್ನು ನೋಡಿ.) ನೀವು ಸೂರ್ಯಕಾಂತಿ ಹೂವಿನ ಮಧ್ಯದಲ್ಲಿರುವ ಬೀಜಗಳನ್ನು ನೋಡುವಲ್ಲಿ, ಅವುಗಳಲ್ಲಿ 55 ಇಲ್ಲವೆ 89 ಅಥವಾ ಅದಕ್ಕಿಂತಲೂ ಹೆಚ್ಚು ಸುರುಳಿ ರಚನೆಗಳು ಒಂದರ ಮೇಲೊಂದು ದಾಟುವುದನ್ನು ನೋಡಬಹುದು. ಅಷ್ಟೇಕೆ, ಹೂಕೋಸಿನಲ್ಲೂ ನೀವು ಸುರುಳಿ ರಚನೆಯನ್ನು ನೋಡಬಹುದು. ಇವುಗಳನ್ನು ಗಮನಿಸುವುದು ನಿಮಗೆ ಒಮ್ಮೆ ರೂಢಿಯಾಗಿಬಿಟ್ಟರೆ, ಹಣ್ಣುತರಕಾರಿಗಳ ಅಂಗಡಿಗೆ ಹೋಗುವುದು ನಿಮಗೆ ತುಂಬ ಆಸಕ್ತಿಕರವಾಗಿರಬಹುದು. ಆದರೆ ಸಸ್ಯಗಳು ಈ ರೀತಿಯಲ್ಲಿ ಬೆಳೆಯುವುದೇಕೆ? ಸುರುಳಿಗಳ ಸಂಖ್ಯೆಗೆ ಯಾವುದೇ ಮಹತ್ವವಿದೆಯೊ?

      ಸಸ್ಯಗಳು ಹೇಗೆ ಬೆಳೆಯುತ್ತವೆ?

      ಹೆಚ್ಚಿನ ಸಸ್ಯಗಳ ದಂಟುಗಳು, ಎಲೆಗಳು ಮತ್ತು ಹೂವುಗಳಂಥ ಹೊಸ ಸಸ್ಯಾಂಗಗಳು, ಕಾಂಡದ ತುದಿಯಲ್ಲಿರುವ ಸಸ್ಯೋತಕ (ಮೆರಿಸ್ಟೆಮ್‌) ಎಂಬ ಬೆಳವಣಿಗೆಯ ಒಂದು ಚಿಕ್ಕ ಕೇಂದ್ರಬಿಂದುವಿನಿಂದ ಉತ್ಪತ್ತಿಯಾಗುತ್ತವೆ. ಮೂಲಾಂಗ (ಪ್ರೈಮಾರ್ಡಿಅಮ್‌) ಎಂದು ಕರೆಯಲ್ಪಡುವ ಪ್ರತಿಯೊಂದು ಹೊಸ ಸಸ್ಯಾಂಗವು, ಹಿಂದಿನ ಬೆಳವಣಿಗೆಯೊಂದಿಗೆ ಒಂದು ಕೋನವನ್ನು ರಚಿಸುತ್ತಾ ಸಸ್ಯದ ಮಧ್ಯದಿಂದ ಒಂದು ಹೊಸ ದಿಕ್ಕಿನಲ್ಲಿ ಬೆಳೆಯುತ್ತದೆ.a (ಚಿತ್ರ 2ನ್ನು ನೋಡಿ.) ಹೆಚ್ಚಿನ ಸಸ್ಯಗಳಲ್ಲಿ ಹೊಸ ಭಾಗಗಳು ಒಂದು ಅಪೂರ್ವವಾದ ಕೋನದಲ್ಲಿ ಬೆಳೆಯುತ್ತವೆ ಮತ್ತು ಇದರಿಂದಾಗಿಯೇ ಸುರುಳಿ ರಚನೆಯು ಉಂಟಾಗುತ್ತದೆ. ಆ ಅಪೂರ್ವ ಕೋನ ಯಾವುದು?

      ಈ ಸಮಸ್ಯೆಯನ್ನು ಪರಿಗಣಿಸಿರಿ: ನೀವೊಂದು ಸಸ್ಯವನ್ನು, ಅದರ ಬೆಳವಣಿಗೆಯ ಬಿಂದುವಿನ ಸುತ್ತಲೂ ಹೊಸ ಭಾಗಗಳನ್ನು ಒತ್ತಾಗಿ ಏರ್ಪಡಿಸುತ್ತಾ, ಯಾವುದೇ ಸ್ಥಳವು ವ್ಯರ್ಥವಾಗದ ಹಾಗೆ ಬೆಳೆಸಲು ಪ್ರಯತ್ನಿಸುತ್ತಿದ್ದೀರೆಂದು ಊಹಿಸಿಕೊಳ್ಳಿ. ಪ್ರತಿಯೊಂದು ಹೊಸ ಸಸ್ಯಾಂಗವನ್ನು ಅದರ ಹಿಂದಿನ ಸಸ್ಯಾಂಗದಿಂದ, ಒಂದು ಆವರ್ತನದ 2/5 ಡಿಗ್ರಿ ಕೋನದಲ್ಲಿ (144 ಡಿಗ್ರಿ) ಬೆಳೆಸುತ್ತೀರೆಂದು ಇಟ್ಟುಕೊಳ್ಳಿ. ಆದರೆ ಆಗ ಪ್ರತಿ ಐದನೆಯ ಸಸ್ಯಾಂಗವು, ಅದೇ ಜಾಗದಲ್ಲಿ ಮತ್ತು ಒಂದೇ ದಿಕ್ಕಿನಲ್ಲಿ ಬೆಳೆಯುವ ಸಮಸ್ಯೆಯನ್ನು ನೀವು ಎದುರಿಸುವಿರಿ. ಅವು ಪಂಕ್ತಿಗಳನ್ನು ರಚಿಸಿ, ಆ ಪಂಕ್ತಿಗಳ ನಡುವೆ ಇರುವ ಸ್ಥಳ ವ್ಯರ್ಥವಾಗುವುದು. (ಚಿತ್ರ 3ನ್ನು ನೋಡಿ.) ಒಂದು ಆವರ್ತನದ ಯಾವುದೇ ಭಿನ್ನಾಂಕವು, ಜಾಗವನ್ನು ಪೂರ್ಣವಾಗಿ ಉಪಯೋಗಿಸದೆ ಪಂಕ್ತಿಗಳಾಗಿ ಪರಿಣಮಿಸುತ್ತದೆಂಬುದು ಸತ್ಯ. ಆದರೆ ಸರಿಸುಮಾರು 137.5 ಡಿಗ್ರಿಯ “ಸುವರ್ಣ ಕೋನ”ವೆಂದು ಕರೆಯಲಾಗುವ ಕೋನದಲ್ಲಿ ಮಾತ್ರ, ಹೊಸ ಸಸ್ಯಾಂಗಗಳು ಉತ್ತಮವಾಗಿ ಒತ್ತಾದ ರೀತಿಯಲ್ಲಿ ಬೆಳೆಯುತ್ತವೆ. (ಚಿತ್ರ 5ನ್ನು ನೋಡಿ.) ಈ ಕೋನದ ವಿಶೇಷತೆಯೇನು?

      ಈ ಸುವರ್ಣ ಕೋನವು ಆದರ್ಶವಾದದ್ದು ಏಕೆಂದರೆ ಅದನ್ನು ಒಂದು ಆವರ್ತನದ ಸರಳ ಭಿನ್ನಾಂಕವಾಗಿ ವ್ಯಕ್ತಪಡಿಸಲಾಗುವುದಿಲ್ಲ. 5/8 ಭಿನ್ನಾಂಕವು ಅದಕ್ಕೆ ಹತ್ತಿರವಿದೆ, 8/13 ಇನ್ನೂ ಹತ್ತಿರ ಹಾಗೂ 13/21 ಮತ್ತಷ್ಟು ಹತ್ತಿರವಿದೆ. ಆದರೆ ಯಾವುದೇ ಒಂದು ಭಿನ್ನಾಂಕವು ಒಂದು ಆವರ್ತನದಲ್ಲಿನ ಸುವರ್ಣ ಅನುಪಾತವನ್ನು ನಿಖರವಾಗಿ ಕೊಡುವುದಿಲ್ಲ. ಹೀಗಿರುವುದರಿಂದ ಈ ಸುವರ್ಣ ಕೋನದಲ್ಲಿ ಒಂದು ಸಸ್ಯೋತಕದಿಂದ ಒಂದು ಹೊಸ ಸಸ್ಯಾಂಗವು ಹಿಂದಿನ ಬೆಳವಣಿಗೆಗೆ ಅನುಪಾತದಲ್ಲಿ ಬೆಳೆಯಲಾರಂಭಿಸುವಾಗ, ಯಾವುದೇ ಎರಡು ಬೆಳವಣಿಗೆಗಳು ಸರಿಯಾಗಿ ಒಂದೇ ದಿಕ್ಕಿನಲ್ಲಿ ಎಂದಿಗೂ ಬೆಳೆಯವು. (ಚಿತ್ರ 4ನ್ನು ನೋಡಿ.) ಇದರ ಫಲಿತಾಂಶವಾಗಿ, ಈ ಮೂಲಾಂಗಗಳು ಒಂದು ಕೇಂದ್ರದಿಂದ ಹೊರಟು ಕಿರಣಗಳಂತೆ ಹರಡುವುದರ ಬದಲಿಗೆ ಸುರುಳಿಯಾಗಿ ಬೆಳೆಯುತ್ತವೆ.

      ಗಮನಾರ್ಹ ಸಂಗತಿಯೇನೆಂದರೆ, ಒಂದು ಕೇಂದ್ರಬಿಂದುವಿನಿಂದ ಸಸ್ಯಾಂಗಗಳು ಬೆಳೆಯುವುದನ್ನು ಕಂಪ್ಯೂಟರ್‌ನಲ್ಲಿ ಅನುಕರಣೆಮಾಡುವಾಗ, ಹೊಸ ಬೆಳವಣಿಗಗಳ ಮಧ್ಯೆ ಕೋನವು ಅತ್ಯುಚ್ಚ ಮಟ್ಟದಲ್ಲಿ ನಿಖರವಾಗಿರುವಲ್ಲಿ ಮಾತ್ರ ಗುರುತಿಸಬಹುದಾದಂಥ ಸುರುಳಿ ರಚನೆ ಉಂಟಾಗುತ್ತದೆ. ಸುವರ್ಣ ಕೋನದಿಂದ 1/10 ಡಿಗ್ರಿಯಷ್ಟು ವ್ಯತ್ಯಾಸವಾದರೂ ಆ ಸುರುಳಿ ರಚನೆ ಬರಲು ಸಾಧ್ಯವಿಲ್ಲ.​—⁠ಚಿತ್ರ 5ನ್ನು ನೋಡಿ.

      ಒಂದು ಹೂವಿನಲ್ಲಿ ಎಷ್ಟು ದಳಗಳಿರಬೇಕು?

      ಸುವರ್ಣ ಕೋನದ ಮೇಲಾಧರಿತವಾದ ಬೆಳವಣಿಗೆಯಿಂದಾಗಿ ಉಂಟಾಗುವ ಸುರುಳಿಗಳ ಸಂಖ್ಯೆಯು ಸಾಮಾನ್ಯವಾಗಿ, ಪ್ರಸಿದ್ಧವಾದ ಫೀಬನಾಚೀ ಸಂಖ್ಯಾ ಶ್ರೇಣಿಯಲ್ಲಿನ ಒಂದು ಸಂಖ್ಯೆಯಾಗಿರುತ್ತದೆ. ಈ ಶ್ರೇಣಿಯನ್ನು, 13ನೇ ಶತಮಾನದ ಲೇಒನಾರ್ಡೋ ಫೀಬನಾಚೀ ಎಂಬ ಇಟ್ಯಾಲಿಯನ್‌ ಗಣಿತಜ್ಞನು ಪ್ರಥಮವಾಗಿ ವರ್ಣಿಸಿದನು. ಈ ಸಂಖ್ಯಾ ಶ್ರೇಣಿಯಲ್ಲಿ, 1ರ ನಂತರ ಬರುವ ಪ್ರತಿಯೊಂದು ಸಂಖ್ಯೆಯು, ಅದರ ಹಿಂದಿನ ಎರಡು ಸಂಖ್ಯೆಗಳ ಮೊತ್ತವಾಗಿರುತ್ತದೆ​—⁠1, 1, 2, 3, 5, 8, 13, 21, 34, 55 ಇತ್ಯಾದಿ.

      ಸುರುಳಿಯಾಗಿ ಬೆಳೆಯುವ ನಮೂನೆಯುಳ್ಳ ಅನೇಕ ಸಸ್ಯಗಳ ಹೂವುಗಳಿಗೆ, ಫೀಬನಾಚೀ ಸಂಖ್ಯೆಯಲ್ಲಿನ ದಳಗಳಿರುತ್ತವೆ. ಕೆಲವು ಅವಲೋಕನಗಾರರಿಗನುಸಾರ ಕಾಗೆಹೆಜ್ಜೆ (ಬಟರ್‌ಕಪ್ಸ್‌) ಹೂವುಗಳಿಗೆ 5 ದಳಗಳು, ನೆತ್ತರು ಗಿಡದ ಹೂವಿಗೆ 8 ದಳಗಳು, ವಿಷ ದತ್ತೂರಿ ಗಿಡದ ಹೂವಿಗೆ  13, ಸೀಮೆ ಸೇವಂತಿಗೆ (ಆ್ಯಸ್ಟರ್‌) 21, ಗೂಳಿಗಣ್ಣು ಡೆಯ್ಸಿಗೆ 34 ಮತ್ತು ಮೈಕಲ್‌ಮಾಸ್‌ ಡೇಸೀಗಳಿಗೆ 55ರಿಂದ 89 ದಳಗಳಿರುವುದು ಸಾಧಾರಣ. (ಚಿತ್ರ 6ನ್ನು ನೋಡಿ.) ಅನೇಕವೇಳೆ ಹಣ್ಣುಹಂಪಲುಗಳಿಗೆ, ಫೀಬನಾಚೀ ಸಂಖ್ಯೆಗಳಿಗೆ ಸರಿಹೋಲುವ ವೈಶಿಷ್ಟ್ಯಗಳಿರುತ್ತವೆ. ಉದಾಹರಣೆಗೆ, ಬಾಳೆಹಣ್ಣನ್ನು ಅಡ್ಡವಾಗಿ ಕತ್ತರಿಸಿದಾಗ ಅದರಲ್ಲಿ ಐದು ಭಾಗಗಳ ಒಂದು ವಿನ್ಯಾಸವಿರುತ್ತದೆ.

      ‘ಒಂದೊಂದು ವಸ್ತುವನ್ನು ಅಂದವಾಗಿ ನಿರ್ಮಿಸಿದ್ದಾನೆ’

      ಈ ಸುವರ್ಣ ಅನುಪಾತವನ್ನು ಕಲಾವಿದರು ಎಷ್ಟೋ ಸಮಯದಿಂದ ನಯನಮನೋಹರವೆಂದು ಎಣಿಸಿದ್ದಾರೆ. ಸಸ್ಯಗಳಲ್ಲಿ ಈ ಕುತೂಹಲಕಾರಿ ಕೋನದಲ್ಲಿಯೇ ಹೊಸ ಸಸ್ಯಾಂಗಗಳು ಬೆಳೆಯುವಂತೆ ಮಾಡುವಂಥದ್ದು ಯಾವುದು? ಇದು, ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸಕ್ಕೆ ಜೀವರಾಶಿಗಳಲ್ಲಿ ಇನ್ನೊಂದು ಉದಾಹರಣೆಯಾಗಿದೆ ಎಂದು ಅನೇಕರು ತೀರ್ಮಾನಿಸುತ್ತಾರೆ.

      ಜೀವರಾಶಿಗಳಲ್ಲಿನ ವಿನ್ಯಾಸ ಮತ್ತು ಅವುಗಳಲ್ಲಿ ಸಂತೋಷಪಡುವಂತೆ ನಮಗಿರುವ ಸಾಮರ್ಥ್ಯದ ಬಗ್ಗೆ ಯೋಚಿಸುವಾಗ, ಇದೆಲ್ಲವೂ ನಾವು ಜೀವನದಲ್ಲಿ ಆನಂದಿಸಬೇಕೆಂದು ಬಯಸುವ ಒಬ್ಬ ಸೃಷ್ಟಿಕರ್ತನ ಕೈಕೃತಿಯಾಗಿದೆ ಎಂಬುದನ್ನು ಅನೇಕರು ಗ್ರಹಿಸುತ್ತಾರೆ. ನಮ್ಮ ಆ ಸೃಷ್ಟಿಕರ್ತನ ಬಗ್ಗೆ ಬೈಬಲ್‌ ಹೇಳುವುದು: “[ಆತನು] ಒಂದೊಂದು ವಸ್ತುವನ್ನು . . . ಅಂದವಾಗಿ ನಿರ್ಮಿಸಿದ್ದಾನೆ.”​—⁠ಪ್ರಸಂಗಿ 3:⁠11. (g 9/06)

      [ಪಾದಟಿಪ್ಪಣಿ]

      a ಕುತೂಹಲದ ಸಂಗತಿಯೇನೆಂದರೆ, ಸೂರ್ಯಕಾಂತಿ ಹೂವು ಅಸಾಮಾನ್ಯವಾಗಿದೆ. ಬೀಜಗಳಾಗಿ ಬದಲಾಗುವ ಅದರ ಕಿರಿಹೂವುಗಳು, ಗೊಂಡೆಯ ಮಧ್ಯದಿಂದಲ್ಲ ಬದಲಾಗಿ ಹೊರ ಅಂಚಿನಿಂದ ಸುರುಳಿಗಳನ್ನು ಉಂಟುಮಾಡಲಾರಂಭಿಸುತ್ತವೆ.

      [ಪುಟ 24ರಲ್ಲಿರುವ ರೇಖಾಕೃತಿಗಳು]

      [ಪುಟ 24, 25ರಲ್ಲಿರುವ ರೇಖಾಕೃತಿಗಳು]

      Figure 1

      (ಪ್ರಕಾಶನ ನೋಡಿ)

      Figure 2

      (ಪ್ರಕಾಶನ ನೋಡಿ)

      Figure 3

      (ಪ್ರಕಾಶನ ನೋಡಿ)

      Figure 4

      (ಪ್ರಕಾಶನ ನೋಡಿ)

      Figure 5

      (ಪ್ರಕಾಶನ ನೋಡಿ)

      Figure 6

      (ಪ್ರಕಾಶನ ನೋಡಿ)

      [ಪುಟ 24ರಲ್ಲಿರುವ ಚಿತ್ರ]

      ಸಸ್ಯೋತಕದ ನಿಕಟ ನೋಟ

      [ಕೃಪೆ]

      R. Rutishauser, University of Zurich, Switzerland

      [ಪುಟ 25ರಲ್ಲಿರುವ ಚಿತ್ರ ಕೃಪೆ]

      ಬಿಳಿಹೂವು: Thomas G. Barnes @ USDA-NRCS PLANTS Database

  • ಎಲ್ಲವನ್ನು ಸೃಷ್ಟಿಸಲಾಯಿತೆಂಬ ನನ್ನ ನಂಬಿಕೆಯನ್ನು ಹೇಗೆ ಸಮರ್ಥಿಸಬಲ್ಲೆ?
    ಎಚ್ಚರ!—2006 | ಅಕ್ಟೋಬರ್‌
    • ಯುವ ಜನರು ಪ್ರಶ್ನಿಸುವುದು . . .

      ಎಲ್ಲವನ್ನು ಸೃಷ್ಟಿಸಲಾಯಿತೆಂಬ ನನ್ನ ನಂಬಿಕೆಯನ್ನು ಹೇಗೆ ಸಮರ್ಥಿಸಬಲ್ಲೆ?

      “ತರಗತಿಯಲ್ಲಿ ಚರ್ಚಿಸಲ್ಪಟ್ಟ ಜೀವವಿಕಾಸದ ವಿಷಯವು, ನನಗೇನನ್ನು ಕಲಿಸಲಾಗಿತ್ತೊ ಅದೆಲ್ಲದಕ್ಕಿಂತಲೂ ತುಂಬ ಭಿನ್ನವಾಗಿತ್ತು. ಅಲ್ಲದೆ, ಅದನ್ನು ಒಂದು ವಾಸ್ತವಾಂಶವೆಂಬಂತೆ ಪ್ರಸ್ತುತಪಡಿಸಲಾಗಿತ್ತು. ಇದರಿಂದಾಗಿ ನನಗೆ ಗಾಬರಿಯಾಯಿತು.” ​​—⁠ ರೈಅನ್‌, 18.

      “ನಾನು ಸುಮಾರು 12 ವರ್ಷದವನಾಗಿದ್ದಾಗ ನನಗೆ ಶಿಕ್ಷಕಿಯಾಗಿದ್ದವರು ಪಕ್ಕಾ ವಿಕಾಸವಾದಿಯಾಗಿದ್ದರು. ಅವರು ತಮ್ಮ ಕಾರ್‌ ಮೇಲೆಯೂ ಡಾರ್ವಿನನ ಲಾಂಛನವನ್ನು ಅಂಟಿಸಿದ್ದರು! ಇದು, ದೇವರು ಎಲ್ಲವನ್ನು ಸೃಷ್ಟಿಸಿದನೆಂಬ ನನ್ನ ನಂಬಿಕೆಯನ್ನು ಸಮರ್ಥಿಸಲು ಹಿಂಜರಿಯುವಂತೆ ಮಾಡಿತು.”​​—⁠ ಟೈಲರ್‌, 19.

      “ನನ್ನ ಸಾಮಾಜಿಕ ಅಧ್ಯಯನಗಳ ಟೀಚರ್‌ ನಮ್ಮ ಮುಂದಿನ ಪಾಠವು ಜೀವವಿಕಾಸದ ಬಗ್ಗೆ ಎಂದು ಹೇಳಿದಾಗ ನಾನು ದಿಗಿಲುಗೊಂಡೆ. ಏಕೆಂದರೆ ಈ ವಿವಾದಾಸ್ಪದ ವಿಷಯದ ಬಗ್ಗೆ ನನ್ನ ಅಭಿಪ್ರಾಯವೇನೆಂಬುದನ್ನು ಇಡೀ ತರಗತಿಗೆ ವಿವರಿಸಬೇಕಾಗಬಹುದೆಂದು ನನಗೆ ಗೊತ್ತಿತ್ತು.”​​—⁠ ರಾಕೆಲ್‌, 14.

      ರೈಅನ್‌, ಟೈಲರ್‌ ಮತ್ತು ರಾಕೆಲ್‌ಳಂತೆ, ತರಗತಿಯಲ್ಲಿ ಜೀವವಿಕಾಸದ ವಿಷಯವು ಬರುವಾಗ ನಿಮಗೂ ಸ್ವಲ್ಪ ಕಸಿವಿಸಿಯಾಗಬಹುದು. ಏಕೆಂದರೆ ದೇವರೇ ‘ಸಮಸ್ತವನ್ನು ಸೃಷ್ಟಿಸಿದನು’ ಎಂದು ನೀವು ನಂಬುತ್ತೀರಿ. (ಪ್ರಕಟನೆ 4:11) ಮಾತ್ರವಲ್ಲದೆ, ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸಕ್ಕೆ ನಿಮ್ಮ ಸುತ್ತಮುತ್ತಲೂ ಪುರಾವೆಯಿರುವುದನ್ನು ನೀವು ನೋಡುತ್ತೀರಿ. ಆದರೆ ಪಠ್ಯಪುಸ್ತಕಗಳು ನಾವು ವಿಕಾಸದಿಂದ ಬಂದಿದ್ದೇವೆಂದು ಹೇಳುತ್ತವೆ ಮತ್ತು ನಿಮ್ಮ ಶಿಕ್ಷಕರೂ ಅದನ್ನೇ ಹೇಳುತ್ತಾರೆ. ಆದುದರಿಂದ, ‘ಈ ಎಲ್ಲ ದೊಡ್ಡ “ಪರಿಣತ”ರೊಂದಿಗೆ ವಾದಮಾಡಲು ನಾನ್ಯಾರು?’ ಅಲ್ಲದೆ, ‘ನಾನು ದೇವರ ಬಗ್ಗೆ ಮಾತಾಡಲಾರಂಭಿಸಿದರೆ ನನ್ನ ಸಹಪಾಠಿಗಳು ನನ್ನ ಬಗ್ಗೆ ಏನು ನೆನಸುವರು?’ ಎಂದು ನೀವು ಯೋಚಿಸಬಹುದು.

      ಈ ಪ್ರಶ್ನೆಗಳ ಬಗ್ಗೆ ನೀವು ತಲೆಕೆಡಿಸಿಕೊಂಡಿದ್ದೀರೊ? ಹಾಗಿದ್ದರೆ, ಚಿಂತಿಸಬೇಡಿ! ಎಲ್ಲವನ್ನೂ ಸೃಷ್ಟಿಸಲಾಯಿತೆಂದು ನಂಬುವವರು ನೀವೊಬ್ಬರೇ ಅಲ್ಲ. ನಿಜ ಹೇಳಬೇಕಾದರೆ, ಹಲವಾರು ವಿಜ್ಞಾನಿಗಳು ಸಹ ಜೀವವಿಕಾಸದ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ಅನೇಕ ಶಿಕ್ಷಕರೂ ಅದನ್ನು ನಂಬುವುದಿಲ್ಲ. ಒಂದು ದೇಶದಲ್ಲಿ, 5 ವಿದ್ಯಾರ್ಥಿಗಳಲ್ಲಿ 4 ಮಂದಿ ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಂಬುತ್ತಾರೆ. ಪಠ್ಯಪುಸ್ತಕಗಳು ಏನು ಹೇಳುತ್ತವೆಂದು ಇವರಿಗೆ ಗೊತ್ತಿದ್ದರೂ ಅವರು ಹೀಗೆ ನಂಬುತ್ತಾರೆ!

      ಆದರೆ, ‘ಎಲ್ಲವನ್ನು ಸೃಷ್ಟಿಸಲಾಯಿತೆಂಬ ನನ್ನ ನಂಬಿಕೆಯನ್ನು ಸಮರ್ಥಿಸಲು ನಾನೇನು ಹೇಳಬಲ್ಲೆ?’ ಎಂದು ನೀವು ಕೇಳಬಹುದು. ಒಂದುವೇಳೆ ನೀವು ಅಂಜುವ ಸ್ವಭಾವದವರಾಗಿದ್ದರೂ ನಿಮ್ಮ ನಿಲುವನ್ನು ಖಂಡಿತವಾಗಿಯೂ ಭರವಸೆಯಿಂದ ವ್ಯಕ್ತಪಡಿಸಬಲ್ಲಿರೆಂಬ ನಿಶ್ಚಯ ನಿಮಗಿರಸಾಧ್ಯವಿದೆ. ಆದರೆ ಅದಕ್ಕಾಗಿ ಸ್ವಲ್ಪ ತಯಾರಿ ಅಗತ್ಯ.

      ನಿಮ್ಮ ನಂಬಿಕೆಗಳನ್ನು ಪರೀಕ್ಷಿಸಿರಿ

      ಒಂದುವೇಳೆ ನೀವು ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಡುತ್ತಿರುವುದಾದರೆ, ಅವರು ನಿಮಗೆ ಸೃಷ್ಟಿಯ ಬಗ್ಗೆ ಕಲಿಸಿದ್ದಾರೆಂಬ ಕಾರಣಕ್ಕಾಗಿ ಮಾತ್ರ ನೀವದನ್ನು ನಂಬುತ್ತಿರಬಹುದು. ಆದರೆ ನೀವೀಗ ದೊಡ್ಡವರಾಗುತ್ತಿದ್ದೀರಿ, ಆದುದರಿಂದ ನೀವು ನಿಮ್ಮ ನಂಬಿಕೆಗಳಿಗಾಗಿ ದೃಢವಾದ ಅಸ್ತಿವಾರವನ್ನು ಹೊಂದಿದ್ದು, ನಿಮ್ಮ ಸ್ವಂತ “ತರ್ಕಶಕ್ತಿ”ಯಿಂದ ದೇವರನ್ನು ಆರಾಧಿಸಬೇಕು. (ರೋಮಾಪುರ 12:⁠1, NW) ಪ್ರಥಮ ಶತಮಾನದ ಕ್ರೈಸ್ತರು ‘ಎಲ್ಲವನ್ನೂ ಪರಿಶೋಧಿಸುವಂತೆ’ ಪೌಲನು ಉತ್ತೇಜಿಸಿದನು. (1 ಥೆಸಲೊನೀಕ 5:21) ಎಲ್ಲವನ್ನು ಸೃಷ್ಟಿಸಲಾಯಿತೆಂಬ ನಿಮ್ಮ ನಂಬಿಕೆಗಳ ವಿಷಯದಲ್ಲಿ ನೀವಿದನ್ನು ಹೇಗೆ ಮಾಡಬಲ್ಲಿರಿ?

      ಪ್ರಥಮವಾಗಿ, ಪೌಲನು ದೇವರ ಬಗ್ಗೆ ಬರೆದಂಥ ಒಂದು ವಿಷಯವನ್ನು ಪರಿಗಣಿಸಿರಿ: “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” (ರೋಮಾಪುರ 1:20) ಈ ಮಾತುಗಳನ್ನು ಮನಸ್ಸಿನಲ್ಲಿಟ್ಟು ಮಾನವ ಶರೀರ, ಭೂಮಿ, ವಿಶಾಲವಾದ ವಿಶ್ವ, ಸಾಗರದ ಆಳಗಳನ್ನು ನಿಕಟವಾಗಿ ಪರಿಶೀಲಿಸಿರಿ. ಕೀಟಗಳ, ಸಸ್ಯಗಳ, ಪ್ರಾಣಿಗಳ ಚಿತ್ತಾಕರ್ಷಕ ಜಗತ್ತನ್ನು, ಅಂದರೆ ಒಟ್ಟಿನಲ್ಲಿ ನಿಮಗೆ ಸ್ವಾರಸ್ಯಕರವಾಗಿರುವ ಯಾವುದೇ ಕ್ಷೇತ್ರವನ್ನು ಪರೀಕ್ಷಿಸಿರಿ. ತದನಂತರ ನಿಮ್ಮ “ತರ್ಕಶಕ್ತಿಯನ್ನು” ಬಳಸುತ್ತಾ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಒಬ್ಬ ಸೃಷ್ಟಿಕರ್ತನಿದ್ದಾನೆಂದು ನನಗೆ ಯಾವುದರಿಂದ ಮನದಟ್ಟಾಗುತ್ತದೆ?’

      ಈ ಪ್ರಶ್ನೆಯನ್ನು ಉತ್ತರಿಸಲು 14 ವರ್ಷದವನಾದ ಸ್ಯಾಮ್‌ ಕೊಡುವ ಉದಾಹರಣೆಯು ಮಾನವ ಶರೀರದ್ದಾಗಿದೆ. “ಅದರಲ್ಲಿ ಎಷ್ಟು ವಿವರಗಳಿವೆ ಮತ್ತು ಅದೆಷ್ಟು ಜಟಿಲವಾಗಿದೆ. ಅಲ್ಲದೆ, ಅದರ ಎಲ್ಲ ಅಂಗಗಳು ಎಷ್ಟು ಉತ್ತಮವಾಗಿ ಹೊಂದಿಕೆಯಿಂದ ಕೆಲಸಮಾಡುತ್ತವೆ. ಮಾನವ ಶರೀರವು ನಿಶ್ಚಯವಾಗಿಯೂ ವಿಕಾಸಹೊಂದಿರಲು ಸಾಧ್ಯವೇ ಇಲ್ಲ!” ಎಂದವನು ಹೇಳುತ್ತಾನೆ. ಈ ಮಾತನ್ನು 16 ವರ್ಷದ ಹಾಲಿ ಒಪ್ಪಿಕೊಳ್ಳುತ್ತಾ ಹೇಳುವುದು: “ನನಗೆ ಡೈಅಬಿಟೀಸ್‌ ಕಾಯಿಲೆ ಇದೆಯೆಂದು ಪತ್ತೆಮಾಡಲ್ಪಟ್ಟಂದಿನಿಂದ, ದೇಹವು ಹೇಗೆ ಕೆಲಸಮಾಡುತ್ತದೆಂಬುದರ ಬಗ್ಗೆ ನಾನು ಬಹಳಷ್ಟನ್ನು ಕಲಿತಿದ್ದೇನೆ. ಉದಾಹರಣೆಗಾಗಿ, ರಕ್ತ ಹಾಗೂ ಇತರ ಅಂಗಗಳು ಕಾರ್ಯನಿರ್ವಹಿಸುತ್ತಾ ಇರುವಂತೆ ಮಾಡುವುದರಲ್ಲಿ ಹೊಟ್ಟೆಯ ಹಿಂಬದಿಯಿರುವ ಒಂದು ಪುಟ್ಟ ಅಂಗವಾದ ಮೇದೋಜೀರಕ ಗ್ರಂಥಿಯು ಎಷ್ಟು ಬೃಹತ್‌ ಕೆಲಸವನ್ನು ಮಾಡುತ್ತದೆಂಬುದು ಅಚ್ಚರಿಯ ಸಂಗತಿಯಾಗಿದೆ.”

      ಬೇರೆ ಯುವಜನರು ಈ ವಿಷಯವನ್ನು ಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ. 19 ವರ್ಷದ ಜ್ಯಾರೆಡ್‌ ಎಂಬವನು ಹೇಳುವುದು: “ನನಗಿರುವ ಅತಿ ದೊಡ್ಡ ರುಜುವಾತೇನೆಂದರೆ, ಮಾನವರಾದ ನಮಗೆ ಆಧ್ಯಾತ್ಮಿಕತೆಯ ಸಾಮರ್ಥ್ಯವಿದೆ ಮತ್ತು ಅದರ ಅಗತ್ಯವೂ ಇದೆ. ಅಷ್ಟುಮಾತ್ರವಲ್ಲದೆ, ಸೌಂದರ್ಯವನ್ನು ಸವಿಯುವ ಮತ್ತು ಕಲಿಯಬೇಕೆಂಬ ಆಸೆಯೂ ನಮ್ಮಲ್ಲಿದೆ. ಜೀವವಿಕಾಸ ಸಿದ್ಧಾಂತಕ್ಕನುಸಾರ ಉಳಿವಿಗಾಗಿ ಇವೆಲ್ಲದ್ದರ ಅಗತ್ಯವಿಲ್ಲ. ಹೀಗಿರುವುದರಿಂದ ಜೀವನದಲ್ಲಿ ಆನಂದಿಸಲಿಕ್ಕಾಗಿ ನಮ್ಮನ್ನು ಇಲ್ಲಿ ಸೃಷ್ಟಿಸಲಾಗಿತ್ತೆಂಬ ವಿವರಣೆಯೇ ನನಗೆ ಅರ್ಥವತ್ತಾಗಿ ತೋರುತ್ತದೆ.” ಆರಂಭದಲ್ಲಿ ತಿಳಿಸಲ್ಪಟ್ಟಿರುವ ಟೈಲರ್‌ ಸಹ ಅದೇ ತೀರ್ಮಾನಕ್ಕೆ ಬಂದನು. ಅವನು ಹೇಳಿದ್ದು: “ಜೀವಪೋಷಣೆಯಲ್ಲಿ ಸಸ್ಯಗಳ ಪಾತ್ರ ಮತ್ತು ಅವುಗಳ ರಚನೆಯಲ್ಲಿನ ದಂಗುಗೊಳಿಸುವಂಥ ಜಟಿಲತೆಯನ್ನು ಪರಿಗಣಿಸುವಾಗ, ಒಬ್ಬ ಸೃಷ್ಟಿಕರ್ತನು ಇರಲೇಬೇಕೆಂದು ನನಗೆ ಮನದಟ್ಟಾಗುತ್ತದೆ.”

      ಎಲ್ಲವನ್ನೂ ಸೃಷ್ಟಿಸಲಾಯಿತೆಂಬುದರ ಬಗ್ಗೆ ಚೆನ್ನಾಗಿ ಯೋಚಿಸಿ ಅದರ ಬಗ್ಗೆ ನಿಮಗೆ ನಿಜವಾಗಿಯೂ ಮನದಟ್ಟಾಗಿರುವಲ್ಲಿ, ಅದನ್ನು ಸಮರ್ಥಿಸುತ್ತಾ ಎಲ್ಲರ ಮುಂದೆ ಮಾತಾಡಲು ಹೆಚ್ಚು ಸುಲಭವಾಗುವುದು. ಆದುದರಿಂದ ಸ್ಯಾಮ್‌, ಹಾಲಿ, ಜ್ಯಾರೆಡ್‌ ಮತ್ತು ಟೈಲರ್‌ನಂತೆ ದೇವರ ಕೈಕೃತಿಗಳ ಅದ್ಭುತಗಳನ್ನು ಪರಿಗಣಿಸಲು ಸ್ವಲ್ಪ ಸಮಯತೆಗೆದುಕೊಳ್ಳಿ. ತದನಂತರ, ಈ ವಿಷಯಗಳು ನಿಮಗೆ ಏನು “ಹೇಳುತ್ತಿವೆ” ಎಂಬುದಕ್ಕೆ “ಕಿವಿಗೊಡಿ.” ಆಗ ನೀವು ಸಹ ಅಪೊಸ್ತಲ ಪೌಲನಂತೆಯೇ, ದೇವರಿದ್ದಾನೆಂಬುದನ್ನು ಮಾತ್ರವಲ್ಲ ಆತನ ಗುಣಗಳನ್ನೂ ‘ಸೃಷ್ಟಿಗಳ ಮೂಲಕ’ ಸ್ಪಷ್ಟವಾಗಿ ನೋಡಸಾಧ್ಯವಿದೆ ಎಂಬ ತೀರ್ಮಾನಕ್ಕೆ ಬರುವಿರೆಂಬುದರಲ್ಲಿ ಸಂದೇಹವೇ ಇಲ್ಲ.a

      ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆಂದು ತಿಳಿದುಕೊಳ್ಳಿರಿ

      ಎಲ್ಲವನ್ನು ಸೃಷ್ಟಿಸಲಾಯಿತೆಂಬದನ್ನು ಸಮರ್ಥಿಸಲಿಕ್ಕೋಸ್ಕರ, ದೇವರು ಉಂಟುಮಾಡಿರುವ ವಿಷಯಗಳನ್ನು ಪರಿಶೀಲಿಸುವುದರ ಜೊತೆಗೆ ಬೈಬಲ್‌ ಆ ವಿಷಯದ ಕುರಿತು ನಿಜವಾಗಿ ಏನನ್ನು ಬೋಧಿಸುತ್ತದೆಂದು ನೀವು ತಿಳಿಯುವ ಅಗತ್ಯವೂ ಇದೆ. ಬೈಬಲ್‌ ನೇರವಾಗಿ ಏನನ್ನು ಹೇಳುವುದಿಲ್ಲವೊ ಅದರ ಬಗ್ಗೆ ವಾದಿಸುವ ಅಗತ್ಯವಿಲ್ಲ. ಇದರ ಕೆಲವು ಉದಾಹರಣೆಗಳು ಇಲ್ಲಿ ಕೊಡಲ್ಪಟ್ಟಿವೆ.

      ◼ ನನ್ನ ವಿಜ್ಞಾನದ ಪಠ್ಯಪುಸ್ತಕವು, ಭೂಮಿ ಮತ್ತು ಸೌರವ್ಯೂಹ ಕೋಟ್ಯನುಕೋಟಿ ವರ್ಷಗಳಿಂದ ಅಸ್ತಿತ್ವದಲ್ಲಿದೆಯೆಂದು ಹೇಳುತ್ತದೆ. ಈ ಭೂಮಿ ಇಲ್ಲವೆ ಸೌರವ್ಯೂಹದ ವಯಸ್ಸಿನ ಬಗ್ಗೆ ಬೈಬಲ್‌ ಏನೂ ಹೇಳುವುದಿಲ್ಲ. ವಾಸ್ತವದಲ್ಲಿ ಅದೇನು ಹೇಳುತ್ತದೊ ಅದು, ಈ ಇಡೀ ವಿಶ್ವವು ಪ್ರಥಮ ಸೃಷ್ಟಿಯ ‘ದಿನಕ್ಕೆ’ ಮುಂಚೆಯೇ ಕೋಟ್ಯನುಕೋಟಿ ವರ್ಷಗಳಿಂದ ಅಸ್ತಿತ್ವದಲ್ಲಿದ್ದಿರಬಹುದೆಂಬ ವಿಚಾರದೊಂದಿಗೆ ಹೊಂದಿಕೆಯಲ್ಲಿದೆ.​—⁠ಆದಿಕಾಂಡ 1:​1, 2.

      ◼ ಭೂಮಿಯ ಸೃಷ್ಟಿ ಬರೀ ಆರು ದಿನಗಳಲ್ಲಿ ಆಗಲು ಸಾಧ್ಯವೇ ಇಲ್ಲವೆಂದು ನನ್ನ ಟೀಚರ್‌ ಹೇಳುತ್ತಾರೆ. ಆ ಆರು ಸೃಷ್ಟಿ ‘ದಿನಗಳು’ ಅಕ್ಷರಶಃ 24 ತಾಸುಗಳ ಅವಧಿಯದ್ದಾಗಿತ್ತೆಂದು ಬೈಬಲ್‌ ಹೇಳುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ಈ ಪತ್ರಿಕೆಯ 18-20ನೇ ಪುಟಗಳನ್ನು ನೋಡಿರಿ.

      ◼ ಸಮಯ ದಾಟಿದಂತೆ ಪ್ರಾಣಿಗಳ ಮತ್ತು ಮಾನವರ ರೂಪವು ಹೇಗೆ ಬದಲಾಗುತ್ತಾ ಹೋಯಿತು ಎಂಬದಕ್ಕೆ ಮನದಟ್ಟುಮಾಡುವಂಥ ಹಲವಾರು ಉದಾಹರಣೆಗಳನ್ನು ನಮ್ಮ ತರಗತಿಯಲ್ಲಿ ಚರ್ಚಿಸಲಾಯಿತು. ದೇವರು ಜೀವರಾಶಿಯನ್ನು “ಅವುಗಳ ಜಾತಿಗನುಸಾರವಾಗಿ” ಸೃಷ್ಟಿಸಿದನೆಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 1:​20, 21) ಜೀವವು ನಿರ್ಜೀವ ಪದಾರ್ಥದಿಂದ ಬಂತು ಇಲ್ಲವೆ ಏಕಾಣುವಿನಿಂದ ವಿಕಾಸದ ಪ್ರಕ್ರಿಯೆಯನ್ನು ಆರಂಭಿಸಿದವನು ದೇವರೇ ಎಂಬ ವಿಚಾರವನ್ನು ಬೈಬಲ್‌ ಬೆಂಬಲಿಸುವುದಿಲ್ಲ. ಹಾಗಿದ್ದರೂ, ಪ್ರತಿಯೊಂದು ‘ಜಾತಿಗೆ’ ಬಹಳಷ್ಟು ವೈವಿಧ್ಯವಿರುವ ಸಾಮರ್ಥ್ಯವಿದೆ. ಆದುದರಿಂದ ಪ್ರತಿಯೊಂದು ‘ಜಾತಿ’ಯೊಳಗೆ ಬದಲಾವಣೆಗಳಾಗುತ್ತವೆ ಎಂಬ ವಿಚಾರಕ್ಕೆ ಬೈಬಲ್‌ ಎಡೆಕೊಡುತ್ತದೆ.

      ನಿಮ್ಮ ನಂಬಿಕೆಗಳ ಬಗ್ಗೆ ದೃಢಭರವಸೆಯಿಂದಿರಿ!

      ಎಲ್ಲವೂ ಸೃಷ್ಟಿಸಲ್ಪಟ್ಟಿತ್ತೆಂದು ನೀವು ನಂಬುತ್ತಿರುವುದಕ್ಕಾಗಿ ಮುಜುಗರಪಡಬೇಕಾಗಿಲ್ಲ ಇಲ್ಲವೆ ನಾಚಿಕೆಪಡಬೇಕಾಗಿಲ್ಲ. ಪುರಾವೆಯನ್ನು ಪರಿಗಣಿಸುವಾಗ, ಎಲ್ಲವನ್ನೂ ಬುದ್ಧಿವಂತಿಕೆಯಿಂದ ವಿನ್ಯಾಸಿಸಲಾಯಿತೆಂದು ನಂಬುವುದು ಪೂರ್ತಿಯಾಗಿ ತರ್ಕಸಮ್ಮತ ಮಾತ್ರವಲ್ಲ ವೈಜ್ಞಾನಿಕವೂ ಆಗಿದೆಯೆಂದು ತಿಳಿದುಬರುತ್ತದೆ. ಕೊನೆಯಲ್ಲಿ ಹೇಳುವುದಾದರೆ, ಯಾವುದೇ ತರ್ಕಸಂಗತ ಸಾಕ್ಷ್ಯವಿಲ್ಲದೆ ಕಣ್ಮುಚ್ಚಿ ನಂಬಿಬಿಡುವಂತೆ ಹಾಗೂ ಚಮತ್ಕಾರ ನಡೆಸುವವನಿಲ್ಲದೆ ಚಮತ್ಕಾರಗಳಾಗಬಲ್ಲವೆಂದು ನಂಬುವಂತೆ ಅವಶ್ಯಪಡಿಸುವಂಥದ್ದು ಜೀವವಿಕಾಸದ ಸಿದ್ಧಾಂತವೇ ವಿನಾಃ ಸೃಷ್ಟಿಯಲ್ಲ. ವಾಸ್ತವದಲ್ಲಿ ಪುರಾವೆಯು ಎಲ್ಲವನ್ನೂ ಸೃಷ್ಟಿಸಲಾಯಿತೆಂಬ ಪಕ್ಷದಲ್ಲಿದೆಯೆಂದು ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿನ ಇತರ ಲೇಖನಗಳನ್ನು ಪರಿಗಣಿಸಿದ ನಂತರ ನಿಮಗೆ ಮನವರಿಕೆಯಾಗುವುದು ನಿಸ್ಸಂದೇಹ. ನಿಮ್ಮ ತರ್ಕಶಕ್ತಿಯನ್ನು ಬಳಸಿ ನೀವು ಈ ವಿಷಯದ ಬಗ್ಗೆ ಜಾಗ್ರತೆಯಿಂದ ಪರ್ಯಾಲೋಚಿಸಿದ ಬಳಿಕ, ನಿಮ್ಮ ತರಗತಿಯಲ್ಲಿ ಎಲ್ಲರ ಮುಂದೆ ನಿಮ್ಮ ನಂಬಿಕೆಯನ್ನು ಸಮರ್ಥಿಸಲು ನಿಮಗೆ ದೃಢಭರವಸೆಯಿರುವುದು.

      ಆರಂಭದಲ್ಲಿ ಉಲ್ಲೇಖಿಸಲ್ಪಟ್ಟಿರುವ ರಾಕೆಲ್‌ ಇದು ಸತ್ಯವೆಂದು ಕಂಡುಕೊಂಡಳು. ಅವಳು ಹೇಳುವುದು: “ನನ್ನ ನಂಬಿಕೆಗಳ ಬಗ್ಗೆ ನಾನು ಮೌನವಾಗಿರಬಾರದೆಂದು ಕೆಲವೇ ದಿನಗಳಲ್ಲಿ ಗ್ರಹಿಸಿದೆ. ಆದುದರಿಂದ, ನನ್ನ ಟೀಚರ್‌ಗೆ ಜೀವ​—⁠ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? (ಇಂಗ್ಲಿಷ್‌) ಎಂಬ ಪುಸ್ತಕವನ್ನು ಕೊಟ್ಟೆ. ಅದರಲ್ಲಿ, ನಾನು ಅವರ ಗಮನಕ್ಕೆ ತರಬೇಕೆಂದಿದ್ದ ಭಾಗಗಳನ್ನು ಹೈಲೈಟ್‌ ಮಾಡಿಟ್ಟಿದ್ದೆ. ಆ ಪುಸ್ತಕ ಓದಿದ ಬಳಿಕ, ಅದು ಅವರಿಗೆ ಜೀವವಿಕಾಸದ ಸಿದ್ಧಾಂತವನ್ನು ಒಂದು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡಿತು ಮತ್ತು ಮುಂದೆ ಅವರು ಈ ವಿಷಯವನ್ನು ಚರ್ಚಿಸುವಾಗಲೆಲ್ಲ ಆ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳುವರೆಂದು ಹೇಳಿದರು.” (g 9/06)

      “ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

      ಇದರ ಕುರಿತು ಯೋಚಿಸಿ

      ◼ ಎಲ್ಲವನ್ನು ಸೃಷ್ಟಿಸಲಾಯಿತೆಂಬ ನಿಮ್ಮ ನಂಬಿಕೆಯನ್ನು ಶಾಲೆಯಲ್ಲಿ ಸುಲಭವಾಗಿ ವ್ಯಕ್ತಪಡಿಸಬಹುದಾದ ಕೆಲವು ವಿಧಗಳಾವವು?

      ◼ ಎಲ್ಲವನ್ನೂ ಸೃಷ್ಟಿಮಾಡಿದಾತನಿಗೆ ನಿಮ್ಮ ಕೃತಜ್ಞತೆಯನ್ನು ಹೇಗೆ ತೋರಿಸಬಲ್ಲಿರಿ?​—⁠ಅ. ಕೃತ್ಯಗಳು 17:​26, 27.

      [ಪಾದಟಿಪ್ಪಣಿ]

      a ಜೀವ​—⁠ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? ಮತ್ತು ನಿಮ್ಮ ಕುರಿತು ಕಾಳಜಿವಹಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೊ? (ಇಂಗ್ಲಿಷ್‌) ಎಂಬಂಥ ಪ್ರಕಾಶನಗಳಲ್ಲಿರುವ ಮಾಹಿತಿಯನ್ನು ವಿಮರ್ಶಿಸುವುದರಿಂದ ಅನೇಕ ಯುವಜನರು ಪ್ರಯೋಜನಪಡೆದಿದ್ದಾರೆ. ಇವೆರಡು ಪುಸ್ತಕಗಳು ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿವೆ.

      [ಪುಟ 27ರಲ್ಲಿರುವ ಚೌಕ]

      “ಹೇರಳವಾದ ಪುರಾವೆಯಿದೆ”

      “ಸೃಷ್ಟಿಕರ್ತನೊಬ್ಬನು ಇದ್ದಾನೆಂದು ನಂಬುವಂತೆ ಹೆತ್ತವರಿಂದ ಕಲಿಸಲ್ಪಟ್ಟಿದ್ದರೂ ಶಾಲೆಯಲ್ಲಿ ಜೀವವಿಕಾಸ ಸಿದ್ಧಾಂತವನ್ನು ಕಲಿಸಲಾಗುವ ಒಬ್ಬ ಯುವ ವ್ಯಕ್ತಿಗೆ ನೀವೇನು ಸಲಹೆಕೊಡುವಿರಿ?” ಎಂದು ಯೆಹೋವನ ಸಾಕ್ಷಿಯಾಗಿರುವ ಸೂಕ್ಷ್ಮಜೀವಿವಿಜ್ಞಾನಿಯೊಬ್ಬಳಿಗೆ ಕೇಳಲಾಯಿತು. ಅವಳ ಉತ್ತರವೇನಾಗಿತ್ತು? “ನೀವು ಈ ಸನ್ನಿವೇಶವನ್ನು, ದೇವರೊಬ್ಬನಿದ್ದಾನೆಂದು ಸ್ವತಃ ನಿಮಗೆ ರುಜುಪಡಿಸಿಕೊಳ್ಳುವ ಒಂದು ಅವಕಾಶವಾಗಿ ದೃಷ್ಟಿಸಬೇಕು. ದೇವರಿದ್ದಾನೆಂದು ನಿಮ್ಮ ಹೆತ್ತವರು ಕಲಿಸಿರುವ ಕಾರಣಕ್ಕಾಗಿ ಮಾತ್ರ ನೀವು ಅದನ್ನು ನಂಬಬಾರದು, ಬದಲಾಗಿ ನೀವೇ ಪುರಾವೆಯನ್ನು ಪರೀಕ್ಷಿಸಿ ಆ ತೀರ್ಮಾನಕ್ಕೆ ಬರಬೇಕು. ಕೆಲವೊಮ್ಮೆ, ಶಿಕ್ಷಕರಿಗೆ ಜೀವವಿಕಾಸ ಸಿದ್ಧಾಂತವನ್ನು ‘ರುಜುಪಡಿಸುವಂತೆ’ ಕೇಳಲಾಗುವಾಗ, ಅವರಿಗದನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಸಿದ್ಧಾಂತವು ತಮಗೆ ಕಲಿಸಲ್ಪಟ್ಟ ಕಾರಣಕ್ಕಾಗಿ ಮಾತ್ರ ತಾವದನ್ನು ಸ್ವೀಕರಿಸಿದ್ದೇವೆಂದು ಆಗ ಅವರು ಗ್ರಹಿಸುತ್ತಾರೆ. ನೀವು ಸಹ, ಸೃಷ್ಟಿಕರ್ತನಿದ್ದಾನೆಂಬ ನಿಮ್ಮ ನಂಬಿಕೆಯ ವಿಷಯದಲ್ಲಿ ಅದೇ ಬಲೆಗೆ ಬೀಳುವ ಸಾಧ್ಯತೆಯಿದೆ. ಆದುದರಿಂದ, ದೇವರು ನಿಜವಾಗಿ ಅಸ್ತಿತ್ವದಲ್ಲಿದ್ದಾನೆಂಬುದನ್ನು ಸ್ವತಃ ನಿಮಗೆ ರುಜುಪಡಿಸಿಕೊಳ್ಳುವುದು ಸಾರ್ಥಕ. ಹೇರಳವಾದ ಪುರಾವೆಯಿದೆ. ಅದನ್ನು ಹುಡುಕುವುದು ಕಷ್ಟಕರವಲ್ಲ.”

      [ಪುಟ 28ರಲ್ಲಿರುವ ಚೌಕ/ಚಿತ್ರ]

      ನಿಮಗೆ ಯಾವುದು ಮನದಟ್ಟು ಮಾಡುತ್ತದೆ?

      ಒಬ್ಬ ಸೃಷ್ಟಿಕರ್ತನಿದ್ದಾನೆಂದು ನಿಮಗೆ ಮನದಟ್ಟುಮಾಡುವ ಮೂರು ವಿಷಯಗಳನ್ನು ಪಟ್ಟಿಮಾಡಿರಿ:

      1. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

      2. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

      3. ․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

  • ನೀವೇನು ನಂಬುತ್ತೀರೆಂಬುದು ಪ್ರಾಮುಖ್ಯವೊ?
    ಎಚ್ಚರ!—2006 | ಅಕ್ಟೋಬರ್‌
    • ನೀವೇನು ನಂಬುತ್ತೀರೆಂಬುದು ಪ್ರಾಮುಖ್ಯವೊ?

      ಜೀವನಕ್ಕೊಂದು ಉದ್ದೇಶವಿದೆಯೆಂದು ನೆನಸುತ್ತೀರೊ? ಜೀವವಿಕಾಸ ಸಿದ್ಧಾಂತವು ಸತ್ಯವಾಗಿರುತ್ತಿದ್ದಲ್ಲಿ, ಸೈಅಂಟಿಫಿಕ್‌ ಅಮೆರಿಕನ್‌ ಎಂಬ ಪತ್ರಿಕೆಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಈ ಹೇಳಿಕೆಯು ಸರಿ: “ಜೀವವಿಕಾಸದ ಕುರಿತಾದ ನಮ್ಮ ಆಧುನಿಕ ತಿಳುವಳಿಕೆಯು . . . ಕಟ್ಟಕಡೆಗೆ ಜೀವನಕ್ಕೆ ಅರ್ಥವಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತದೆ.”

      ಆ ಮಾತುಗಳ ಸೂಚ್ಯಾರ್ಥವನ್ನು ಪರಿಗಣಿಸಿರಿ. ಒಂದುವೇಳೆ ಕಟ್ಟಕಡೆಗೆ ಜೀವನಕ್ಕೆ ಯಾವುದೇ ಅರ್ಥವಿಲ್ಲದಿರುವಲ್ಲಿ, ಜೀವನದಲ್ಲಿ ಸ್ವಲ್ಪ ಒಳಿತನ್ನು ಮಾಡಲು ಪ್ರಯತ್ನಿಸುವುದು ಮತ್ತು ಬಹುಶಃ ನಿಮ್ಮ ವಂಶವಾಹಿ ಗುಣಲಕ್ಷಣಗಳನ್ನು ಮುಂದಿನ ಪೀಳಿಗೆಗೆ ದಾಟಿಸುವುದನ್ನು ಬಿಟ್ಟರೆ ನಿಮಗೆ ಜೀವನದಲ್ಲಿ ಬೇರೇನೂ ಉದ್ದೇಶವಿಲ್ಲ. ನೀವು ಸಾಯುವಾಗ, ನಿಮ್ಮ ಅಸ್ತಿತ್ವವು ನಿತ್ಯಕ್ಕೂ ಅಂತ್ಯಗೊಳ್ಳುವುದು. ಜೀವನದ ಉದ್ದೇಶದ ಬಗ್ಗೆ ಯೋಚಿಸುವ, ತರ್ಕಿಸುವ ಮತ್ತು ಧ್ಯಾನಿಸುವ ಸಾಮರ್ಥ್ಯವುಳ್ಳ ನಿಮ್ಮ ಮಿದುಳು ಪ್ರಕೃತಿಯ ಒಂದು ಆಕಸ್ಮಿಕ ಅಷ್ಟೇ.

      ಇವುಗಳಲ್ಲದೆ ಬೇರೆ ಸೂಚ್ಯಾರ್ಥಗಳೂ ಇವೆ. ಜೀವವಿಕಾಸದಲ್ಲಿ ನಂಬುವ ಅನೇಕರು, ದೇವರೇ ಇಲ್ಲ ಅಥವಾ ಒಂದುವೇಳೆ ಇದ್ದರೂ ಆತನು ಮಾನವ ವ್ಯವಹಾರಗಳಲ್ಲಿ ಕೈಹಾಕುವುದಿಲ್ಲವೆಂದು ನಂಬುತ್ತಾರೆ. ಇವುಗಳಲ್ಲಿ ಯಾವುದೇ ಒಂದನ್ನು ನಂಬಿದರೂ, ನಮ್ಮ ಭವಿಷ್ಯವು ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಮುಖಂಡರ ಕೈಯಲ್ಲಿದೆ ಎಂದಾಗುವುದು. ಮತ್ತು ಇವರೆಲ್ಲರ ಗತ ಚರಿತ್ರೆಯ ಆಧಾರದಿಂದ ಹೇಳುವುದಾದರೆ, ಮಾನವ ಸಮಾಜದಲ್ಲಿನ ಕೋಲಾಹಲ, ಕಲಹ ಹಾಗೂ ಭ್ರಷ್ಟಾಚಾರ ಮುಂದುವರಿಯುತ್ತಾ ಹೋಗುವುದು. ಹೌದು, ಜೀವವಿಕಾಸ ಸಿದ್ಧಾಂತವು ನಿಜವಾಗಿರುವಲ್ಲಿ, “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂಬ ವಿಷಮಭರಿತ ಧ್ಯೇಯಮಂತ್ರಕ್ಕನುಸಾರ ಜೀವಿಸಲು ಅದು ಸಾಕಷ್ಟು ಕಾರಣವನ್ನೀಯುವಂತೆ ತೋರುವುದು.​—⁠1 ಕೊರಿಂಥ 15:⁠32.

      ಆದರೆ ಯೆಹೋವನ ಸಾಕ್ಷಿಗಳು ಈ ಮೇಲಿನ ಹೇಳಿಕೆಗಳನ್ನು ಅಂಗೀಕರಿಸುವುದಿಲ್ಲ ಎಂಬ ವಿಷಯದಲ್ಲಿ ನೀವು ನಿಶ್ಚಿತರಾಗಿರಬಲ್ಲಿರಿ. ಆ ಹೇಳಿಕೆಗಳು ಯಾವ ಆಧಾರದ ಮೇಲೆ ಮಾಡಲ್ಪಟ್ಟಿವೆಯೊ ಅದನ್ನು, ಅಂದರೆ ಜೀವವಿಕಾಸ ಸಿದ್ಧಾಂತವನ್ನು ಸಹ ಸಾಕ್ಷಿಗಳು ಸ್ವೀಕರಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬೈಬಲ್‌ ಸತ್ಯವಾಗಿದೆಯೆಂದು ಸಾಕ್ಷಿಗಳು ನಂಬುತ್ತಾರೆ. (ಯೋಹಾನ 17:17) ಆದುದರಿಂದಲೇ, ನಾವು ಹೇಗೆ ಅಸ್ತಿತ್ವಕ್ಕೆ ಬಂದೆವೆಂಬುದರ ಬಗ್ಗೆ ಅದು ಹೇಳುವ ಈ ಮಾತನ್ನು ಅವರು ನಂಬುತ್ತಾರೆ: “[ದೇವರ] ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ.” (ಕೀರ್ತನೆ 36:9) ಈ ಮಾತುಗಳಿಗೆ ಮಹತ್ವಪೂರ್ಣವಾದ ಸೂಚ್ಯಾರ್ಥಗಳಿವೆ.

      ಬದುಕಿಗೊಂದು ಅರ್ಥವಿದೆ. ನಮ್ಮ ಸೃಷ್ಟಿಕರ್ತನಿಗೆ ಒಂದು ಪ್ರೀತಿಪೂರ್ಣ ಉದ್ದೇಶವಿದೆ, ಮತ್ತು ಇದರಲ್ಲಿ ಆತನ ಚಿತ್ತಕ್ಕನುಸಾರ ಜೀವಿಸಲು ಆಯ್ಕೆಮಾಡುವವರೆಲ್ಲರು ಒಳಗೂಡಿರುತ್ತಾರೆ. (ಪ್ರಸಂಗಿ 12:13) ಆ ಉದ್ದೇಶದಲ್ಲಿ, ಕೋಲಾಹಲ, ಕಲಹ, ಭ್ರಷ್ಟಾಚಾರ ಹಾಗೂ ಮರಣದಿಂದಲೂ ಮುಕ್ತವಾಗಿರುವ ಲೋಕವೊಂದರಲ್ಲಿ ಮಾನವರು ಜೀವಿಸುವುದು ಸೇರಿದೆ. (ಯೆಶಾಯ 2:4; 25:​6-8) ಲೋಕದಲ್ಲೆಲ್ಲಾ ಇರುವ ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು, ಬೇರಾವುದೇ ವಿಷಯಕ್ಕಿಂತಲೂ ಹೆಚ್ಚಾಗಿ ದೇವರ ಬಗ್ಗೆ ಕಲಿಯುವುದು ಮತ್ತು ಆತನ ಚಿತ್ತವನ್ನು ಮಾಡುವುದು ಬದುಕಿಗೆ ಅರ್ಥವನ್ನು ಕೊಡುತ್ತದೆಂದು ಸಾಕ್ಷ್ಯಕೊಡಬಲ್ಲರು!​—⁠ಯೋಹಾನ 17:⁠3.

      ನೀವೇನು ನಂಬುತ್ತೀರೊ ಅದು ನಿಶ್ಚಯವಾಗಿಯೂ ಪ್ರಾಮುಖ್ಯವಾಗಿದೆ, ಏಕೆಂದರೆ ಅದು ನಿಮ್ಮ ಸದ್ಯದ ಸಂತೋಷದ ಮೇಲೂ ನಿಮ್ಮ ಭವಿಷ್ಯದ ಜೀವನದ ಮೇಲೂ ಪರಿಣಾಮಬೀರಬಲ್ಲದು. ಹಾಗಾದರೆ, ಪ್ರಾಕೃತಿಕ ಜಗತ್ತಿನಲ್ಲಿರುವ ವಿನ್ಯಾಸದ ಬಗ್ಗೆ ಹೆಚ್ಚುತ್ತಿರುವ ಪುರಾವೆಗಳಿಗೆ ಸೂಕ್ತ ವಿವರಣೆಗಳನ್ನು ನೀಡಲಾಗದ ಒಂದು ಸಿದ್ಧಾಂತದಲ್ಲಿ ನೀವು ನಂಬಿಕೆಯಿಡುವಿರೊ? ಅಥವಾ ಬೈಬಲ್‌ ಹೇಳುವಂತೆ, ಭೂಮಿಯೂ ಅದರಲ್ಲಿರುವ ಜೀವರಾಶಿಯೂ, ಅದ್ಭುತಕರ ವಿನ್ಯಾಸಕನು ಮತ್ತು ‘ಸಮಸ್ತವನ್ನು ಸೃಷ್ಟಿಸಿದ’ ಯೆಹೋವ ದೇವರ ರಚನೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುವಿರೊ? ಆಯ್ಕೆ ನಿಮ್ಮದು.​—⁠ಪ್ರಕಟನೆ 4:⁠11. (g 9/06)

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ