ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr16 ನವೆಂಬರ್‌ ಪು. 2-5
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2016
  • ಉಪಶೀರ್ಷಿಕೆಗಳು
  • ನವೆಂಬರ್‌ 7-13
  • ನವೆಂಬರ್‌ 14-20
  • ಕೆಲಸದ ಬಗ್ಗೆ ಸಕಾರಾತ್ಮಕ ನೋಟ ಬೆಳೆಸಿಕೊಳ್ಳಿ
  • ನಿಮ್ಮ ಕೆಲಸಕ್ಕೆ ಪೂರ್ತಿ ಗಮನಕೊಡಿ
  • ನಿಮ್ಮ ಕೆಲಸದಿಂದ ಬೇರೆಯವರಿಗೆ ಸಿಗುವ ಪ್ರಯೋಜನಗಳ ಮೇಲೆ ಗಮನವಿಡಿ
  • ಒಂದಿಷ್ಟು ಹೆಚ್ಚು ಮಾಡಿ
  • ಕೆಲಸಕ್ಕೆ ಎಷ್ಟು ಮಹತ್ವ ಕೊಡಬೇಕೊ ಅಷ್ಟನ್ನೇ ಕೊಡಿ
  • ನವೆಂಬರ್‌ 21-27
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2016
mwbr16 ನವೆಂಬರ್‌ ಪು. 2-5

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ನವೆಂಬರ್‌ 7-13

ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 27-31

“ಗುಣವತಿಯಾದ ಪತ್ನಿಯಲ್ಲಿರಬೇಕಾದ ಗುಣಗಳು”

it-2 1183

ಹೆಂಡತಿ

ಹೆಂಡತಿಗೆ ಧರ್ಮಶಾಸ್ತ್ರವು ಸಂರಕ್ಷಣೆ ಕೊಡುತ್ತಿತ್ತು. ವಿವಾಹದ ಏರ್ಪಾಡಿನಲ್ಲಿ ಗಂಡನ ಸ್ಥಾನ ಶ್ರೇಷ್ಠವಾಗಿತ್ತು. ಆದರೆ ಅವನು ಕುಟುಂಬದ ಭೌತಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಬೇಕು, ನೋಡಿಕೊಳ್ಳಬೇಕೆಂದು ಅವಶ್ಯಪಡಿಸಿದ ನಿಯಮಗಳನ್ನು ದೇವರು ಇಟ್ಟಿದನು. ಅಷ್ಟುಮಾತ್ರವಲ್ಲ, ಕುಟುಂಬದವರು ಯಾವುದೇ ತಪ್ಪು ಕೆಲಸ ಮಾಡಿದರೆ ಅದು ಅವನಿಗೆ ಕೆಟ್ಟ ಹೆಸರು ತರುತ್ತಿತ್ತು. ಹಾಗಾಗಿ ಅವನ ಮೇಲೆ ಒಂದು ದೊಡ್ಡ ಜವಾಬ್ದಾರಿಯಿತ್ತು. ಹೆಂಡತಿಗಿಂತ ಅವನಿಗೆ ಹೆಚ್ಚಿನ ಸುಯೋಗಗಳಿದ್ದವು ನಿಜ. ಆದರೆ ಹೆಂಡತಿ ಸಂತೋಷಭರಿತ, ಪ್ರತಿಫಲದಾಯಕ ಜೀವನ ನಡೆಸಲು ಸಾಧ್ಯವಾಗುವಂತೆ ಧರ್ಮಶಾಸ್ತ್ರವು ಆಕೆಗೆ ಸಂರಕ್ಷಣೆಯನ್ನು ಮಾತ್ರವಲ್ಲ, ನಿರ್ದಿಷ್ಟವಾದ ವಿಶೇಷ ಸುಯೋಗಗಳನ್ನೂ ಕೊಟ್ಟಿತು.

ಹೆಂಡತಿಯರಿಗಾಗಿ ಧರ್ಮಶಾಸ್ತ್ರದಲ್ಲಿದ್ದ ಏರ್ಪಾಡುಗಳ ಕೆಲವು ಉದಾಹರಣೆಗಳು ಹೀಗಿವೆ: ಗಂಡನಾಗಲಿ, ಹೆಂಡತಿಯಾಗಲಿ ಹಾದರ ನಡೆಸಿದರೆ ಅವರಿಗೆ ಮರಣದಂಡನೆ ಸಿಗುತ್ತಿತ್ತು. ಹೆಂಡತಿ ಗುಟ್ಟಿನಿಂದ ದಾಂಪತ್ಯದ್ರೋಹ ಮಾಡಿದ್ದಾಳೆಂದು ಗಂಡನಿಗೆ ಸಂಶಯವಿದ್ದರೆ ಆಕೆಯನ್ನು ಯಾಜಕನ ಬಳಿ ತರಬೇಕಿತ್ತು. ಏಕೆಂದರೆ ಯೆಹೋವ ದೇವರು ನ್ಯಾಯತೀರಿಸುವನು. ಅವಳು ತಪ್ಪುಮಾಡಿದ್ದರೆ ಅವಳ ಜನನಾಂಗಗಳು ಕ್ಷಯಿಸುವವು. ಅವಳು ತಪ್ಪುಮಾಡಿಲ್ಲವಾದರೆ ಗಂಡನು ಅವಳನ್ನು ಬಸುರಿಯಾಗಿ ಮಾಡಬೇಕಿತ್ತು. ಅವಳು ನಿರ್ದೋಷಿಯೆಂದು ಹೀಗೆ ಅವನು ಎಲ್ಲರಿಗೂ ತಿಳಿಯುವಂತೆ ಮಾಡಬೇಕಿತ್ತು. (ಅರ 5:12-31) ಗಂಡನು ಹೆಂಡತಿಯಲ್ಲಿ ಏನೋ ‘ಅವಲಕ್ಷಣ’ ಅಂದರೆ ಅಸಭ್ಯವಾದ ವಿಷಯವನ್ನು ಕಂಡರೆ ವಿಚ್ಛೇದನ ಕೊಡಬಹುದಿತ್ತು. ಅಸಭ್ಯ ಅಂದರೆ ಬಹುಶಃ, ಅವನಿಗೆ ವಿಪರೀತ ಅಗೌರವ ತೋರಿಸುವುದು ಅಥವಾ ಅವನ ಮನೆತನ ಅಥವಾ ತಂದೆಯ ಮನೆತನಕ್ಕೆ ಕೆಟ್ಟ ಹೆಸರನ್ನು ತರುವ ವಿಷಯಗಳನ್ನು ಮಾಡುವುದು ಇದರಲ್ಲಿ ಸೇರಿತ್ತು. ಆದರೆ ಇದರಿಂದ ಹೆಂಡತಿಗೆ ಹೇಗೆ ಸಂರಕ್ಷಣೆ ಸಿಗುತ್ತಿತ್ತೆಂದರೆ ಗಂಡನು ಅವಳಿಗೆ ತ್ಯಾಗಪತ್ರವನ್ನು ಬರೆದುಕೊಡಬೇಕಿತ್ತು. ಆಗ ಅವಳು ಇನ್ನೊಬ್ಬ ಪುರುಷನನ್ನು ಮದುವೆಯಾಗಲು ಸ್ವತಂತ್ರಳಾಗುತ್ತಿದ್ದಳು. (ಧರ್ಮೋ 24:1, 2) ಹೆಂಡತಿ ಹೊತ್ತಿರುವ ಹರಕೆ ಅವಿವೇಕಯುತ ಅಥವಾ ಕುಟುಂಬದ ಕ್ಷೇಮಕ್ಕೆ ಹಾನಿ ತರುವಂಥದ್ದೆಂದು ಗಂಡನಿಗೆ ಅನಿಸಿದರೆ ಅವನದನ್ನು ರದ್ದುಮಾಡಬಹುದಿತ್ತು. (ಅರ 30:10-15) ಇದು ಹೆಂಡತಿಗೆ ಹೇಗೆ ಒಂದು ರಕ್ಷಣೆಯಾಗಿತ್ತೆಂದರೆ, ಅವಳನ್ನು ಕಷ್ಟದಲ್ಲಿ ಸಿಕ್ಕಿಸಬಲ್ಲ ಯಾವುದೇ ಕ್ರಿಯೆಗೆ ಕೈಹಾಕಲು ದುಡುಕದಂತೆ ಮಾಡುತ್ತಿತ್ತು.

ಮೋಶೆಯ ಧರ್ಮಶಾಸ್ತ್ರದಲ್ಲಿ ಬಹುಪತ್ನಿತ್ವ ಪದ್ಧತಿಗೆ ಅನುಮತಿಯಿತ್ತು. ಆದರೆ ಹೆಂಡತಿಗೆ ಸಂರಕ್ಷಣೆ ಸಿಗುವ ಹಾಗೆ ಅದರಲ್ಲಿ ನಿಯಮಗಳಿದ್ದವು. ಗಂಡನಿಗೆ ಯಾರ ಮೇಲೆ ಕಡಿಮೆ ಪ್ರೀತಿಯಿದೆಯೊ ಆ ಹೆಂಡತಿಯ ಮಗ ಜ್ಯೇಷ್ಠಪುತ್ರನಾಗಿದ್ದರೆ ಅವನ ಹಕ್ಕನ್ನು ತನ್ನ ಅಚ್ಚುಮೆಚ್ಚಿನ ಹೆಂಡತಿಯ ಪುತ್ರನಿಗೆ ಕೊಡಲು ಸಾಧ್ಯವಿರಲಿಲ್ಲ. (ಧರ್ಮೋ 21:15-17) ಇಸ್ರಾಯೇಲ್ಯ ಹುಡುಗಿಯ ತಂದೆ ಅವಳನ್ನು ದಾಸಿಯಾಗಲು ಮಾರಿದರೆ ಮತ್ತು ಆ ಧಣಿ ಅವಳನ್ನು ತನ್ನ ಉಪಪತ್ನಿಯಾಗಿ ಮಾಡಿಕೊಂಡ ಬಳಿಕ ಅವನಿಗೆ ಅವಳು ಇಷ್ಟವಾಗದಿದ್ದರೆ ಅವಳನ್ನು ಬಿಡುಗಡೆ ಮಾಡಬಹುದಿತ್ತು. ಆದರೆ ಅವಳನ್ನು ಅನ್ಯಜನರಿಗೆ ಮಾರುವಂತಿರಲಿಲ್ಲ. (ವಿಮೋ 21:7, 8) ಅವನಾಗಲಿ ಅವನ ಮಗನಾಗಲಿ ಅವಳನ್ನು ಉಪಪತ್ನಿಯಾಗಿ ತಕ್ಕೊಂಡ ನಂತರ ಇನ್ನೊಬ್ಬಳನ್ನು ವಿವಾಹವಾದರೆ, ಇವಳಿಗೆ ಆಹಾರ, ಬಟ್ಟೆ, ವಸತಿ ಹಾಗೂ ವಿವಾಹ ಸಂಗಾತಿಯಾಗಿ ಸಲ್ಲತಕ್ಕದ್ದನ್ನು ಸಲ್ಲಿಸಬೇಕಿತ್ತು.—ವಿಮೋ 21:9-11.

ಕನ್ನಿಕೆಯಾಗಿದ್ದೇನೆಂದು ಸುಳ್ಳು ಹೇಳಿ ಮದುವೆಯಾದಳು ಅಂತ ಗಂಡನೊಬ್ಬನು ಹೆಂಡತಿಯ ಮೇಲೆ ಆರೋಪ ಹಾಕಿ ಆ ಆರೋಪ ಸುಳ್ಳೆಂದು ರುಜುವಾದರೆ ಅವನಿಗೆ ಶಿಕ್ಷೆಯಾಗಬೇಕಿತ್ತು. ಕನ್ನಿಕೆಗಳಿಗಾಗಿ ಕೊಡಲಾಗುತ್ತಿದ್ದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಅವನು ಅವಳ ತಂದೆಗೆ ಕೊಡಬೇಕಿತ್ತು, ಅಲ್ಲದೆ ಜೀವದಿಂದಿರುವ ವರೆಗೆ ಅವಳಿಗೆ ವಿಚ್ಛೇದನ ಕೊಡಬಾರದಿತ್ತು. (ಧರ್ಮೋ 22:13-19) ಯಾರಿಗೂ ನಿಶ್ಚಯವಾಗಿರದ ಕನ್ನಿಕೆಯನ್ನು ಯಾರಾದರೂ ಮಾನಭಂಗಮಾಡಿದರೆ ಅವನು ಅವಳ ತಂದೆಗೆ ವಧುದಕ್ಷಿಣೆ ಕೊಟ್ಟು, ಆಕೆಯ ತಂದೆ ಅನುಮತಿಸಿದರೆ ಆಕೆಯನ್ನು ಮದುವೆಯಾಗಬೇಕಿತ್ತು. ನಂತರ ಜೀವನಪೂರ್ತಿ ಆಕೆಗೆ ವಿಚ್ಛೇದನ ಕೊಡುವಂತಿರಲಿಲ್ಲ.—ಧರ್ಮೋ 22:28, 29; ವಿಮೋ 22:16, 17.

ಇಬ್ರಿಯ ಸಮಾಜದಲ್ಲಿ ಹೆಂಡತಿಗಿದ್ದ ಸ್ಥಾನ ಇಂದಿನ ಪಾಶ್ಚಾತ್ಯ ಸಮಾಜದಲ್ಲಿನ ಹೆಂಡತಿಯರಿಗಿರುವ ಅಂತಸ್ತಿಗಿಂತ ಸ್ವಲ್ಪ ಭಿನ್ನವಾಗಿದ್ದರೂ ನಂಬಿಗಸ್ತ ಇಬ್ರಿಯ ಹೆಂಡತಿಗೆ ತನ್ನ ಸ್ಥಾನ ಹಾಗೂ ಕೆಲಸ ಇಷ್ಟವಾಗುತ್ತಿತ್ತು. ಅವಳು ಗಂಡನಿಗೆ ಸಹಾಯಮಾಡುತ್ತಿದ್ದಳು, ಕುಟುಂಬವನ್ನು ಸಾಕಿಸಲಹುತ್ತಿದ್ದಳು, ಮನೆಕೆಲಸಗಳನ್ನು ನಿರ್ವಹಿಸುತ್ತಿದ್ದಳು. ತನ್ನ ಸ್ತ್ರೀಸಹಜ ಸ್ವಭಾವ ಹಾಗೂ ಪ್ರತಿಭೆಗಳನ್ನು ಪೂರ್ಣ ರೀತಿಯಲ್ಲಿ ವ್ಯಕ್ತಪಡಿಸಲು ಸಾಧ್ಯಮಾಡುತ್ತಿದ್ದ ಅನೇಕ ಸಂಗತಿಗಳು ಆಕೆಗೆ ತೃಪ್ತಿ ಹಾಗೂ ಆನಂದ ತರುತ್ತಿದ್ದವು.

ಒಳ್ಳೇ ಹೆಂಡತಿ ಹೇಗಿರುತ್ತಾಳೆಂಬ ವರ್ಣನೆ. ನಂಬಿಗಸ್ತ ಹೆಂಡತಿಯ ಸಂತೋಷ ಹಾಗೂ ಚಟುವಟಿಕೆಗಳನ್ನು ಜ್ಞಾನೋಕ್ತಿ 31⁠ರಲ್ಲಿ ವರ್ಣಿಸಲಾಗಿದೆ. ಆಕೆ ಗಂಡನಿಗೆ ಹವಳಗಳಿಗಿಂತಲೂ ಹೆಚ್ಚು ಅಮೂಲ್ಯಳೆಂದು ಹೇಳಲಾಗಿದೆ. ಅವನು ಆಕೆಯಲ್ಲಿ ಭರವಸೆ ಇಡಬಲ್ಲನು. ಅವಳು ಶ್ರಮಜೀವಿ. ನೂಲುವ ಕೆಲಸಮಾಡುತ್ತಾಳೆ, ಕುಟುಂಬಕ್ಕಾಗಿ ಬಟ್ಟೆಬರೆ ತಯಾರಿಸುತ್ತಾಳೆ, ಮನೆಗಾಗಿ ಬೇಕಾದದ್ದೆಲ್ಲವನ್ನು ಖರೀದಿಸುತ್ತಾಳೆ, ದ್ರಾಕ್ಷೇತೋಟದಲ್ಲಿ ಕೆಲಸಮಾಡುತ್ತಾಳೆ, ಮನೆಯಲ್ಲಿರುವ ಆಳುಕಾಳುಗಳನ್ನು ನೋಡಿಕೊಳ್ಳುತ್ತಾಳೆ, ಸಹಾಯದ ಅಗತ್ಯವುಳ್ಳವರಿಗೆ ನೆರವಾಗುತ್ತಾಳೆ, ಕುಟುಂಬದವರಿಗೆ ಆಕರ್ಷಕ ಬಟ್ಟೆ ತೊಡಿಸುತ್ತಾಳೆ, ಕೈಯಾರೆ ಮಾಡಿದ ವಸ್ತುಗಳನ್ನು ಮಾರಿ ಸ್ವಲ್ಪ ಆದಾಯ ತರುತ್ತಾಳೆ, ಮುಂದೆ ಎದುರಾಗಬಹುದಾದ ತುರ್ತು ಪರಿಸ್ಥಿತಿಗಳಿಗಾಗಿ ಕುಟುಂಬವನ್ನು ಸಿದ್ಧಗೊಳಿಸುತ್ತಾಳೆ, ಬುದ್ಧಿ ಹಾಗೂ ಪ್ರೀತಿಪೂರ್ವಕ ದಯೆಯುಳ್ಳ ಮಾತುಗಳನ್ನಾಡುತ್ತಾಳೆ. ಆಕೆಗೆ ಯೆಹೋವನ ಭಯ ಇರುತ್ತದೆ. ಇತರರಿಗೆ ನೆರವಾಗುವ ಸತ್ಕಾರ್ಯಗಳನ್ನು ಮಾಡುತ್ತಾಳೆ. ಇವೆಲ್ಲದ್ದರಿಂದಾಗಿ ಆಕೆಯ ಗಂಡ ಮತ್ತು ಪುತ್ರರು ಆಕೆಯನ್ನು ಹೊಗಳುತ್ತಾರೆ. ಅವಳು ಆ ಪ್ರದೇಶದಲ್ಲಿ ಗಂಡನಿಗೂ ಆಕೆಯ ಕುಟುಂಬಕ್ಕೂ ಮಾನ ತರುತ್ತಾಳೆ. ಒಳ್ಳೇ ಹೆಂಡತಿಯನ್ನು ಪಡೆದಿರುವವನಿಗೆ ಅದು ನಿಜವಾಗಲೂ ರತ್ನಲಾಭ ಮತ್ತು ಯೆಹೋವನ ಅನುಗ್ರಹವೇ.—ಜ್ಞಾನೋ 18:22.

ಕ್ರೈಸ್ತ ಸಭೆಯಲ್ಲಿ. ಕ್ರೈಸ್ತ ಸಭೆಯಲ್ಲಿರುವ ಮಟ್ಟವೇನೆಂದರೆ ಒಬ್ಬ ವ್ಯಕ್ತಿಯ ಹೆಂಡತಿ ಬದುಕಿರುವಾಗ ಅವನಿಗೆ ಅವಳೊಬ್ಬಳೇ ಹೆಂಡತಿ ಆಗಿರಬೇಕು. (1ಕೊರಿಂ 7:2; 1ತಿಮೊ 3:2) ಹೆಂಡತಿ ಗಂಡನಿಗೆ ಅಧೀನಳಾಗಿರಬೇಕೆಂದು ಆಜ್ಞಾಪಿಸಲಾಗಿದೆ. ಗಂಡನು ಕ್ರೈಸ್ತ ವಿಶ್ವಾಸಿ ಆಗಿರಲಿ ಇಲ್ಲದಿರಲಿ ಅವಳು ಅಧೀನಳಾಗಿರಬೇಕು. (ಎಫೆ 5:22-24) ಹೆಂಡತಿಯು ವಿವಾಹ ಸಂಗಾತಿಗೆ ಸಲ್ಲತಕ್ಕದ್ದನ್ನು ಸಲ್ಲಿಸದೇ ಇರಬಾರದು. ಗಂಡನಿಗೆ ಹೇಗೊ ಹಾಗೆ ಆಕೆಗೂ “ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ.” (1ಕೊರಿಂ 7:3, 4) ಹೆಂಡತಿಯರ ಮುಖ್ಯ ಅಲಂಕಾರ ಹೃದಯದ ಗುಪ್ತ ವ್ಯಕ್ತಿ ಆಗಿರಬೇಕೆಂದು ಹೇಳಲಾಗಿದೆ. ಅಂದರೆ ಅವರು ಪವಿತ್ರಾತ್ಮದ ಫಲವನ್ನು ತೋರಿಸಬೇಕು. ಹೀಗೆ ಬಹುಶಃ ತಮ್ಮ ನಡತೆಯ ಮೂಲಕವೇ ಅವಿಶ್ವಾಸಿ ಗಂಡನನ್ನು ಕ್ರೈಸ್ತತ್ವದೆಡೆಗೆ ಆಕರ್ಷಿಸಬಲ್ಲರು.—1ಪೇತ್ರ 3:1-6.

ಸಾಂಕೇತಿಕ ಬಳಕೆ. ಯೆಹೋವನು ಇಸ್ರಾಯೇಲ್‌ ಜನಾಂಗದೊಟ್ಟಿಗೆ ಮಾಡಿದ ಒಂದು ಒಡಂಬಡಿಕೆಯ ಕಾರಣ ಅದನ್ನು ತನ್ನ ಹೆಂಡತಿಯೆಂದು ಸಾಂಕೇತಿಕ ಅರ್ಥದಲ್ಲಿ ಕರೆದನು. (ಯೆಶಾ 54:6) ಯೆಹೋವನು ಆತ್ಮಜನಿತ ಕ್ರೈಸ್ತರ ತಂದೆ ಮತ್ತು ಅವರ ತಾಯಿ “ಮೇಲಣ ಯೆರೂಸಲೇಮ್‌” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. ಇದು, ಆ ಆತ್ಮಜನಿತ ಕ್ರೈಸ್ತರನ್ನು ಹುಟ್ಟಿಸುವ ಉದ್ದೇಶಕ್ಕಾಗಿ ಯೆಹೋವನು ಅವಳನ್ನು ಮದುವೆಯಾಗಿರುವಂತೆ ಇದೆ. (ಗಲಾ 4:6, 7, 26) ಕ್ರೈಸ್ತ ಸಭೆಯು ಯೇಸು ಕ್ರಿಸ್ತನ ಮದುಮಗಳು ಇಲ್ಲವೆ ಪತ್ನಿ ಎಂದು ಹೇಳಲಾಗಿದೆ.—ಎಫೆ 5:23, 25; ಪ್ರಕ 19:7; 21:2, 9.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

w11 8/1 29 ¶2

ಉನ್ನತ ನಿರೀಕ್ಷೆ ಹಾಗೂ ಸಂತೋಷದ ಪ್ರತೀಕ್ಷೆಗಳ ದಿನ

ಎರಡನೇದಾಗಿ, ಸಹೋದರ ಮಾರಿಸ್‌ ಜ್ಞಾನೋಕ್ತಿ 27:21 ಓದಿದರು: “ಪುಟಕುಲುಮೆಗಳಿಂದ ಬೆಳ್ಳಿಬಂಗಾರಗಳಿಗೆ ಶೋಧನೆಯು ಹೇಗೋ ಹೊಗಳಿಕೆಯಿಂದ ಮನುಷ್ಯನಿಗೆ ಶೋಧನೆಯು ಹಾಗೆ.” ಬೆಳ್ಳಿ ಬಂಗಾರವನ್ನು ಹೇಗೆ ಶೋಧಿಸಲಾಗುತ್ತದೊ ಅಥವಾ ಪರಿಷ್ಕರಿಸಲಾಗುತ್ತದೊ ಹಾಗೆಯೇ ನಾವು ಹೊಗಳಿಕೆಯಿಂದ ಪರಿಷ್ಕರಿಸಲ್ಪಡಬಹುದೆಂದು ಅವರು ವಿವರಿಸಿದರು. ಹೇಗೆ? ಹೊಗಳಿಕೆಯಿಂದ ನಮ್ಮ ವ್ಯಕ್ತಿತ್ವದ ಪರೀಕ್ಷೆ ಆಗುತ್ತದೆ. ಅದರಿಂದ ನಾವು ಅಹಂಕಾರಿಗಳಾಗಿ ಆಧ್ಯಾತ್ಮಿಕವಾಗಿ ಕುಸಿದುಬೀಳುವ ಸಾಧ್ಯತೆಯಿದೆ. ಅಥವಾ ನಾವು ಯೆಹೋವನಿಗೆ ಋಣಿಗಳೆಂದು ಒಪ್ಪಿಕೊಂಡು, ಯಾವತ್ತೂ ಆತನ ಮಟ್ಟಗಳಿಗೆ ತಪ್ಪಿಬೀಳಬಾರದೆಂಬ ನಿರ್ಧಾರವನ್ನು ಇನ್ನಷ್ಟು ದೃಢಗೊಳಿಸುವಂತೆ ಮಾಡಬಲ್ಲದು. ಈ ರೀತಿಯಲ್ಲಿ ಸಹೋದರ ಮಾರಿಸ್‌ ವಿದ್ಯಾರ್ಥಿಗಳು ತಮಗೆ ಸಿಗುವ ಯಾವುದೇ ಹೊಗಳಿಕೆಯನ್ನು ಸರಿಯಾದ ವಿಧದಲ್ಲಿ, ಅಂದರೆ ತಮಗೆ ಯೋಗ್ಯ ರೀತಿಯ “ಯೆಹೋವನ ಭಯ” ಇದೆಯೆಂದು ತೋರಿಸುವ ಅವಕಾಶವಾಗಿ ಸ್ವೀಕರಿಸಬೇಕೆಂದು ಪ್ರೇರಿಸಿದರು.

ನವೆಂಬರ್‌ 14-20

ಬೈಬಲಿನಲ್ಲಿರುವ ರತ್ನಗಳು | ಪ್ರಸಂಗಿ 1-6

“ಸಂತೋಷದಿಂದ ಕೆಲಸ ಮಾಡಿ”

w15 2/1 4-6

ಕಷ್ಟದ ಕೆಲಸದಿಂದ ಆನಂದ ಪಡೆಯುವುದು ಹೇಗೆ?

“ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ.” (ಪ್ರಸಂಗಿ 3:13) ನಮ್ಮ ಪ್ರಯಾಸದಲ್ಲಿ ಸುಖ ಅನುಭವಿಸಬೇಕು ಇಲ್ಲವೇ ನಮ್ಮ ಕೆಲಸದಲ್ಲಿ ನಾವು ಆನಂದಿಸಬೇಕೆಂದು ದೇವರೇ ಬಯಸಿರುವಲ್ಲಿ, ಆ ಆನಂದ ಹೇಗೆ ಕಂಡುಕೊಳ್ಳಬಹುದೆಂದು ಆತನು ಖಂಡಿತ ತೋರಿಸಿರುತ್ತಾನಲ್ಲವೇ? (ಯೆಶಾಯ 48:17) ಸಂತೋಷದ ಸಂಗತಿಯೇನೆಂದರೆ ಅದನ್ನು ತೋರಿಸಿದ್ದಾನೆ. ತನ್ನ ವಾಕ್ಯವಾದ ಬೈಬಲಿನ ಪುಟಗಳಲ್ಲಿ ತೋರಿಸಿದ್ದಾನೆ. ನಿಮ್ಮ ಕೆಲಸದಲ್ಲಿ ಹೇಗೆ ತೃಪ್ತಿ ಕಂಡುಕೊಳ್ಳಬಹುದೆಂಬ ಈ ಬೈಬಲಾಧರಿತ ಸಲಹೆಯನ್ನು ಓದಿನೋಡಿ.

ಕೆಲಸದ ಬಗ್ಗೆ ಸಕಾರಾತ್ಮಕ ನೋಟ ಬೆಳೆಸಿಕೊಳ್ಳಿ

ನಿಮ್ಮ ಕೆಲಸದಲ್ಲಿ ಹೆಚ್ಚಾಗಿ ಮಾನಸಿಕ ಶಕ್ತಿಯನ್ನು ಅಥವಾ ಹೆಚ್ಚಾಗಿ ದೈಹಿಕ ಶಕ್ತಿಯನ್ನು ಅಥವಾ ಎರಡನ್ನೂ ಬಳಸಬೇಕಾಗಿರಬಹುದು. ಏನಿದ್ದರೂ “ಶ್ರಮೆಯಿಂದ ಸಮೃದ್ಧಿ” ಅಥವಾ ಪ್ರಯೋಜನವಿದೆ ಎಂಬದನ್ನು ನೆನಪಿಡಿ. (ಜ್ಞಾನೋಕ್ತಿ 14:23) ಯಾವ ರೀತಿಯ ಪ್ರಯೋಜನ? ನಮ್ಮ ಭೌತಿಕ ಅಗತ್ಯಗಳನ್ನು ಪೂರೈಸಲು ಅದು ಸಹಾಯಮಾಡುತ್ತದೆ. ದೇವರನ್ನು ಯಥಾರ್ಥವಾಗಿ ಆರಾಧಿಸುವವರ ಅಗತ್ಯಗಳನ್ನು ಆತನು ಪೂರೈಸುತ್ತಾನೆಂದು ಮಾತು ಕೊಟ್ಟಿದ್ದಾನೆ ನಿಜ. (ಮತ್ತಾಯ 6:31, 32) ಆದರೆ ಅದೇ ಸಮಯದಲ್ಲಿ ಹೊಟ್ಟೆಪಾಡಿಗಾಗಿ ಪ್ರಾಮಾಣಿಕವಾಗಿ ದುಡಿಯುವ ಮೂಲಕ ನಮ್ಮ ಕಡೆಯಿಂದ ನಮ್ಮ ಪ್ರಯತ್ನ ಹಾಕುವಂತೆಯೂ ಆತನು ನಿರೀಕ್ಷಿಸುತ್ತಾನೆ.—2 ಥೆಸಲೊನೀಕ 3:10.

ಈ ಕಾರಣದಿಂದ ನಮ್ಮ ಉದ್ಯೋಗವನ್ನು ಒಂದು ಉದ್ದೇಶವನ್ನು ಪೂರೈಸಲಿಕ್ಕಾಗಿರುವ ಸಾಧನವೆಂದು ಎಣಿಸುತ್ತೇವೆ. ನಮ್ಮ ಜವಾಬ್ದಾರಿಗಳನ್ನು ಹೊರಲು ಒಂದು ಗೌರವಯುತ ವಿಧಾನ ಆಗಿದೆ. 25 ವರ್ಷದ ಜಾಶುವ ಹೇಳುವುದು: “ನಿಮ್ಮ ಅಗತ್ಯಗಳನ್ನು ನೀವೇ ಪೂರೈಸಿಕೊಳ್ಳುವುದು ಒಂದು ಸಾಧನೆಯೇ ಸರಿ. ನಿಮ್ಮೆಲ್ಲ ಅಗತ್ಯಗಳ ಖರ್ಚನ್ನು ನೀವೇ ನೋಡಿಕೊಳ್ಳಲು ಸಾಧ್ಯವಾಗುತ್ತಿದೆಯಾದರೆ ನಿಮ್ಮ ಉದ್ಯೋಗದ ಉದ್ದೇಶ ನೆರವೇರುತ್ತಿದೆ ಎಂದರ್ಥ.”

ಅಷ್ಟುಮಾತ್ರವಲ್ಲ, ಕಷ್ಟದ ಕೆಲಸ ನಮ್ಮ ಸ್ವಗೌರವವನ್ನೂ ಹೆಚ್ಚಿಸುತ್ತದೆ. ಕಷ್ಟದ ಕೆಲಸ ಎನ್ನುವಾಗಲೇ ಅದರಲ್ಲಿ ಕಷ್ಟ ಒಳಗೂಡಿದೆ ಅಂತ ಗೊತ್ತಾಗುತ್ತದೆ. ನಮ್ಮ ಕೆಲಸ ಬೇಸರ ಹುಟ್ಟಿಸುವಂಥದ್ದಾಗಿರಲಿ ಕಷ್ಟಕರವಾದದ್ದಾಗಿರಲಿ ಅದಕ್ಕೆ ನಾವದಕ್ಕೆ ಅಂಟಿಕೊಂಡರೆ ಒಂದು ಉನ್ನತ ಮಟ್ಟ ಪಾಲಿಸಿದ್ದೇವೆಂಬ ತೃಪ್ತಿ ನಮಗಿರುತ್ತದೆ. ‘ಕಷ್ಟಪಡುವುದು ಬೇಡ, ಸುಲಭದ ದಾರಿ ಹಿಡಿಯೋಣ’ ಎಂಬ ಅನಿಸಿಕೆಯನ್ನು ಜಯಿಸಿದ್ದೇವೆ. (ಜ್ಞಾನೋಕ್ತಿ 26:14) ಆ ಅರ್ಥದಲ್ಲಿ ಕೆಲಸವು ನಮ್ಮಲ್ಲಿ ತುಂಬ ತೃಪ್ತಿಯ ಭಾವನೆಯನ್ನು ಹುಟ್ಟಿಸುತ್ತದೆ. ಹಿಂದಿನ ಲೇಖನದಲ್ಲಿ ತಿಳಿಸಲಾದ ಏರನ್‌ ಅನ್ನುವುದು: “ದಿನವಿಡೀ ಕಷ್ಟದ ಕೆಲಸಮಾಡಿದ ನಂತರ ಹುಟ್ಟುವ ಭಾವನೆ ನನಗೆ ತುಂಬ ಇಷ್ಟ. ನನಗೆ ಪೂರ್ತಿ ಸುಸ್ತಾಗಿರುತ್ತದೆ, ನಾನು ಮಾಡಿದ ಕೆಲಸ ಬೇರೆಯವರ ಗಮನಕ್ಕೂ ಬರಲಿಕ್ಕಿಲ್ಲ, ಆದರೆ ನಾನೇನೊ ಕೆಲಸವನ್ನು ಸಾಧಿಸಿದ್ದೇನೆ ಎಂದು ನನಗೆ ಗೊತ್ತಿರುತ್ತದೆ.”

ನಿಮ್ಮ ಕೆಲಸಕ್ಕೆ ಪೂರ್ತಿ ಗಮನಕೊಡಿ

“ತನ್ನ ಕೆಲಸದಲ್ಲಿ ಚಟುವಟಿಕೆಯಾಗಿರುವವ” ಅಥವಾ ಕೌಶಲದಿಂದ ಮಾಡುವ ಪುರುಷನ ಬಗ್ಗೆ ಮತ್ತು “ಕೈಗೆಲಸ” ಮಾಡಲು ಸಂತೋಷಪಡುವ ಸ್ತ್ರೀಯ ಬಗ್ಗೆ ಬೈಬಲ್‌ ಮೆಚ್ಚುಗೆಯ ಮಾತುಗಳನ್ನಾಡುತ್ತದೆ. (ಜ್ಞಾನೋಕ್ತಿ 22:29; 31:13) ಕೆಲಸದಲ್ಲಿ ಕೌಶಲ ತನ್ನಿಂದ ತಾನೇ ಬರುವುದಿಲ್ಲ. ನಮ್ಮಲ್ಲಿ ಹೆಚ್ಚಿನವರಿಗೆ ಯಾವ ಕೆಲಸವನ್ನು ಚೆನ್ನಾಗಿ ಮಾಡಲು ಬರುವುದಿಲ್ಲವೊ ಆ ಕೆಲಸ ಮಾಡಲು ಇಷ್ಟವಾಗುವುದಿಲ್ಲ. ಬಹುಶಃ ಇದೇ ಕಾರಣಕ್ಕೆ, ಅಂದರೆ ತಮ್ಮ ಕೆಲಸವನ್ನು ಚೆನ್ನಾಗಿ, ಕೌಶಲದಿಂದ ಮಾಡಲು ಸಾಕಷ್ಟು ಪ್ರಯತ್ನವನ್ನೇ ಹಾಕಿರದ ಕಾರಣ ಅನೇಕರಿಗೆ ತಮ್ಮ ಕೆಲಸದಲ್ಲಿ ಆನಂದ ಸಿಗುವುದಿಲ್ಲ.

ನಿಜಾಂಶವೇನೆಂದರೆ ಯಾರೇ ಆಗಲಿ ಹೆಚ್ಚುಕಡಿಮೆ ಯಾವುದೇ ಕೆಲಸವನ್ನು ಆನಂದಿಸಲು ಕಲಿಯಬಹುದು. ಆದರೆ ಮೊದಲು ಅವನಿಗೆ ಆ ಕೆಲಸದ ಬಗ್ಗೆ ಸರಿಯಾದ ಮನೋಭಾವ ಇರಬೇಕು. ತನ್ನ ಕೆಲಸವನ್ನು ಸರಿಯಾಗಿ ಮಾಡುವುದು ಹೇಗೆ ಎಂಬದರ ಮೇಲೆ ಅವನು ಗಮನ ನೆಡಬೇಕು. 24 ವರ್ಷದ ವಿಲ್ಯಮ್‌ ಹೇಳುವುದು: “ಕೊಡಲಾಗಿರುವ ಕೆಲಸವನ್ನು ಪೂರ್ಣ ಗಮನ, ಪ್ರಯತ್ನ ಕೊಟ್ಟು ಮಾಡಿದಾಗ, ಅದರಿಂದ ಬರುವ ಪ್ರತಿಫಲ ನೋಡುವಾಗ ತುಂಬ ತೃಪ್ತಿ ಸಿಗುತ್ತದೆ. ಬೇಗಬೇಗ ಮಾಡಿ ಅರ್ಧಂಬರ್ಧ ಕೆಲಸ ಮಾಡಿದರೆ ಅಥವಾ ಆದಷ್ಟು ಕಡಿಮೆ ಪ್ರಯತ್ನ ಹಾಕಿದರೆ ಆ ತೃಪ್ತಿ ಸಿಗೋದೇ ಇಲ್ಲ.”

ನಿಮ್ಮ ಕೆಲಸದಿಂದ ಬೇರೆಯವರಿಗೆ ಸಿಗುವ ಪ್ರಯೋಜನಗಳ ಮೇಲೆ ಗಮನವಿಡಿ

ನಿಮ್ಮ ಕೆಲಸದಿಂದ ನಿಮಗೆಷ್ಟು ಹಣ ಸಂಪಾದಿಸಲಿಕ್ಕಾಗುತ್ತದೆ ಎಂಬದರ ಬಗ್ಗೆ ಮಾತ್ರ ಯೋಚಿಸುವ ಪಾಶಕ್ಕೆ ಬೀಳಬೇಡಿ. ಬದಲಾಗಿ, ‘ಈ ಕೆಲಸ ಯಾಕೆ ಅಗತ್ಯ? ಅದನ್ನು ಮಾಡದಿದ್ದರೆ ಅಥವಾ ಅದನ್ನು ಸರಿಯಾಗಿ ಮಾಡದಿದ್ದರೆ ಏನಾಗುವ ಸಾಧ್ಯತೆ ಇದೆ? ನನ್ನ ಕೆಲಸದಿಂದ ಬೇರೆಯವರಿಗೆ ಹೇಗೆ ಪ್ರಯೋಜನವಾಗುತ್ತದೆ?’ ಎಂದು ಯೋಚಿಸಿ.

ವಿಶೇಷವಾಗಿ ಆ ಕೊನೆ ಪ್ರಶ್ನೆ ಬಗ್ಗೆ ಯೋಚಿಸುವುದು ಒಳ್ಳೇದು. ಬೇರೆಯವರಿಗೆ ನಮ್ಮ ಕೆಲಸದಿಂದ ಆಗಲಿರುವ ಪ್ರಯೋಜನಗಳ ಬಗ್ಗೆ ಯೋಚಿಸುವಾಗ ಅತಿ ಹೆಚ್ಚಿನ ತೃಪ್ತಿ ಸಿಗುತ್ತದೆ. ‘ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ’ ಎಂದು ಯೇಸುವೇ ಹೇಳಿದ್ದಾನೆ. (ಅ. ಕಾರ್ಯಗಳು 20:35) ನಮ್ಮ ಕೆಲಸದಿಂದ ನೇರ ಪ್ರಯೋಜನ ಪಡೆಯುವ ಗಿರಾಕಿಗಳು ಮತ್ತು ಧಣಿಗಳಲ್ಲದೆ ಬೇರೆಯವರಿಗೂ ಪ್ರಯೋಜನವಾಗುತ್ತದೆ. ನಮ್ಮ ಕುಟುಂಬ ಸದಸ್ಯರು ಮತ್ತು ಸಹಾಯದ ಅಗತ್ಯವಿರುವವರು ಸಹ ಅದರಲ್ಲಿ ಸೇರಿದ್ದಾರೆ.

ನಮ್ಮ ಮನೆಮಂದಿ. ಕುಟುಂಬದ ಯಜಮಾನ ತನ್ನ ಮನೆಮಂದಿಯ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಶ್ರಮಪಡುವಾಗ ಅವರಿಗೆ ಕಡಿಮೆಪಕ್ಷ ಎರಡು ಪ್ರಯೋಜನಗಳು ಸಿಗುತ್ತವೆ. ಮೊದಲನೇದಾಗಿ, ಅವನು ಅವರಿಗೆ ಬದುಕಲು ಅಗತ್ಯವಾದ ವಿಷಯಗಳು ಅಂದರೆ ಊಟ, ಬಟ್ಟೆ, ವಸತಿ ಸಿಗುವಂತೆ ನೋಡಿಕೊಳ್ಳುತ್ತಿದ್ದಾನೆ. ಹೀಗೆ, ‘ತನ್ನ ಸ್ವಂತದವರಿಗೆ ಅಗತ್ಯವಿರುವುದನ್ನು ಒದಗಿಸುವ’ ದೇವದತ್ತ ಜವಾಬ್ದಾರಿಯನ್ನು ಪೂರೈಸುತ್ತಿದ್ದಾನೆ. (1 ತಿಮೊಥೆಯ 5:8) ಎರಡನೇದಾಗಿ, ಶ್ರದ್ಧೆಯಿಂದ ಕೆಲಸಮಾಡುವ ಅವನು ಕಷ್ಟಪಟ್ಟು ಕೆಲಸಮಾಡುವುದರ ಮಹತ್ವವನ್ನು ತನ್ನ ಮಾದರಿಯ ಮೂಲಕ ಕಲಿಸಿಕೊಡುತ್ತಿದ್ದಾನೆ. ಹಿಂದಿನ ಲೇಖನದಲ್ಲಿ ತಿಳಿಸಲಾದ ಶೇನ್‌ ಹೇಳುವುದು: “ಒಳ್ಳೇ ಕೆಲಸಗಾರನಾಗಿರುವುದು ಹೇಗೆಂಬ ವಿಷಯದಲ್ಲಿ ನನ್ನ ತಂದೆ ತುಂಬ ಉತ್ತಮ ಮಾದರಿ. ಅವರು ಜೀವನವಿಡೀ ಬೆವರುಸುರಿಸಿ ದುಡಿದಿರುವ ಪ್ರಾಮಾಣಿಕ ಮನುಷ್ಯ. ಅವರ ಜೀವನದ ಹೆಚ್ಚಿನಾಂಶ ಬಡಗಿಯಾಗಿ ದುಡಿದರು. ಕೈಗಳಿಂದ ಮಾಡುವ ಕೆಲಸ, ಜನರಿಗೆ ತುಂಬ ಉಪಯುಕ್ತವಾಗಲಿರುವ ವಸ್ತುಗಳನ್ನು ತಯಾರಿಸುವುದರ ಮೌಲ್ಯವನ್ನು ಅವರ ಮಾದರಿಯಿಂದ ಕಲಿತಿದ್ದೇನೆ.”

ಸಹಾಯದ ಅಗತ್ಯವುಳ್ಳವರು. ಅಪೊಸ್ತಲ ಪೌಲನು ಕ್ರೈಸ್ತರಿಗೆ ಈ ಬುದ್ಧಿವಾದ ಕೊಟ್ಟನು: ‘ಕಷ್ಟಪಟ್ಟು ದುಡಿಯಿರಿ. ಆಗ ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ನಿಮ್ಮ ಬಳಿ ಏನಾದರೂ ಇರುವುದು.’ (ಎಫೆಸ 4:28) ನಮ್ಮ ಹಾಗೂ ನಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ನಾವು ಕಷ್ಟಪಟ್ಟು ಕೆಲಸಮಾಡುವಾಗ, ಸಹಾಯದ ಅಗತ್ಯದಲ್ಲಿರುವವರಿಗೆ ನಾವು ನೆರವು ನೀಡಲೂ ಸಾಧ್ಯವಾಗುತ್ತದೆ. (ಜ್ಞಾನೋಕ್ತಿ 3:27) ಹೀಗೆ ಕಷ್ಟದ ಕೆಲಸವು ‘ಕೊಡುವುದರಿಂದ ಸಿಗುವ ಹೆಚ್ಚಿನ ಸಂತೋಷವನ್ನು’ ನಾವು ಅನುಭವಿಸುವಂತೆ ನೆರವಾಗುತ್ತದೆ.

ಒಂದಿಷ್ಟು ಹೆಚ್ಚು ಮಾಡಿ

ಯೇಸು ಕೊಟ್ಟ ಪ್ರಸಿದ್ಧವಾದ ‘ಪರ್ವತ ಪ್ರಸಂಗದಲ್ಲಿ’ ಹೀಗಂದನು: “ಅಧಿಕಾರದಲ್ಲಿರುವ ಯಾವನಾದರೂ ಒಂದು ಮೈಲು ದೂರ ಬರುವಂತೆ ನಿನ್ನನ್ನು ಒತ್ತಾಯಿಸುವಲ್ಲಿ ಅವನೊಂದಿಗೆ ಎರಡು ಮೈಲು ದೂರ ಹೋಗು.” (ಮತ್ತಾಯ 5:41) ಆ ಮಾತುಗಳ ಹಿಂದಿರುವ ತತ್ವವನ್ನು ನಿಮ್ಮ ಕೆಲಸಕ್ಕೆ ಹೇಗೆ ಅನ್ವಯಿಸಬಹುದು? ಆದಷ್ಟು ಕಡಿಮೆ ಕೆಲಸಮಾಡುವುದರ ಬದಲಿಗೆ, ನಿಮ್ಮಿಂದ ಕೇಳಲಾಗುವ ಕೆಲಸಕ್ಕಿಂತ ಹೆಚ್ಚನ್ನು ಮಾಡಲು ಮಾರ್ಗಗಳನ್ನು ಹುಡುಕಿರಿ. ವೈಯಕ್ತಿಕ ಗುರಿಗಳನ್ನಿಡಿ. ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಇಲ್ಲವೇ ನಿರೀಕ್ಷಿಸಲ್ಪಟ್ಟ ಸಮಯಕ್ಕಿಂತ ಹೆಚ್ಚು ವೇಗವಾಗಿ ಮಾಡಲಿಕ್ಕಾಗಿ ನಿಮಗೆ ನೀವೇ ಸವಾಲೊಡ್ಡಿ. ನಿಮ್ಮ ಕೆಲಸದ ಚಿಕ್ಕಪುಟ್ಟ ವಿವರಗಳಿಗೂ ಗಮನಕೊಟ್ಟು ಚೆನ್ನಾಗಿ ಮಾಡಲು ಪ್ರಯತ್ನಿಸಿ.

ನಿಮಗೆ ಕೇಳಲಾಗಿರುವುದಕ್ಕಿಂತ ಹೆಚ್ಚಿನ ಪ್ರಯತ್ನ ಮಾಡುವಾಗ ನಿಮ್ಮ ಕೆಲಸದಲ್ಲಿ ನಿಮಗೆ ಸಂತೋಷ ಸಿಗುತ್ತದೆ. ಏಕೆ? ಏಕೆಂದರೆ ನಿಮ್ಮ ಕ್ರಿಯೆಗಳನ್ನು ನೀವು ನಿಯಂತ್ರಿಸುತ್ತಾ ಇದ್ದೀರಿ. ಅಂದರೆ ನಿಮಗೆ ಮನಸ್ಸಿರುವುದರಿಂದ ನೀವು ಹೆಚ್ಚನ್ನು ಮಾಡುತ್ತಿದ್ದೀರಿ. ಯಾರೊ ಬಲವಂತ ಮಾಡಿದ್ದಕ್ಕಲ್ಲ. (ಫಿಲೆಮೋನ 14) ಈ ವಿಷಯದಲ್ಲಿ ನಾವು ಜ್ಞಾನೋಕ್ತಿ 12:24⁠ರಲ್ಲಿರುವ ತತ್ವವನ್ನು ನೆನಪಿಗೆ ತರೋಣ: “ಚುರುಕುಗೈಯವನಿಗೆ ರಾಜ್ಯಾಧಿಕಾರ; ಮೈಗಳ್ಳನಿಗೆ ಬಿಟ್ಟಿಯ ಬದುಕು.” ನಮ್ಮಲ್ಲಿ ಹೆಚ್ಚಿನವರಿಗೆ ಬಿಟ್ಟೀ ಕೆಲಸ ಅಂದರೆ ಗುಲಾಮಚಾಕರಿ ಮಾಡುವ ಪರಿಸ್ಥಿತಿ ಬರಲಿಕ್ಕಿಲ್ಲ ನಿಜ. ಆದರೆ ಆದಷ್ಟು ಕಡಿಮೆ ಕೆಲಸಮಾಡುವ ವ್ಯಕ್ತಿಗೆ ತಾನು ಒಂದು ರೀತಿಯಲ್ಲಿ ಗುಲಾಮ, ಯಾವಾಗಲೂ ಬೇರೆಯವರ ಬೇಡಿಕೆಗಳ ನೊಗದಡಿಯಲ್ಲೇ ಇದ್ದೇನೆಂಬ ಭಾವನೆ ಇರಬಹುದು. ಒಂದಿಷ್ಟು ಹೆಚ್ಚನ್ನು ಮಾಡಲು ಆರಿಸಿಕೊಳ್ಳುವ ವ್ಯಕ್ತಿಗಾದರೊ ತನ್ನ ಜೀವನದ ಮೇಲೆ ತನಗೇ ನಿಯಂತ್ರಣವಿದೆ ಎಂಬ ಭಾವನೆ ಇರುತ್ತದೆ. ತಾನು ಮಾಡಬೇಕಾದ ಕೆಲಸ, ತನ್ನ ಕ್ರಿಯೆಗಳ ಮೇಲೆ ಅವನಿಗೆ ನಿಯಂತ್ರಣವಿರುತ್ತದೆ.

ಕೆಲಸಕ್ಕೆ ಎಷ್ಟು ಮಹತ್ವ ಕೊಡಬೇಕೊ ಅಷ್ಟನ್ನೇ ಕೊಡಿ

ಕಷ್ಟಪಟ್ಟು ಕೆಲಸಮಾಡಬೇಕು ನಿಜ, ಅದು ಶ್ಲಾಘನೀಯ. ಆದರೆ ಜೀವನವೆಂದರೆ ಬರೀ ಕೆಲಸವಲ್ಲ, ಅದಕ್ಕಿಂತಲೂ ಹೆಚ್ಚಿನದ್ದು ಇದೆ ಎನ್ನುವುದನ್ನು ನಾವು ನೆನಪಿಡಬೇಕು. ಕಷ್ಟಪಟ್ಟು ದುಡಿಯುವದನ್ನು ಬೈಬಲ್‌ ಸಹ ಉತ್ತೇಜಿಸುತ್ತದೆ ನಿಜ. (ಜ್ಞಾನೋ 13:4) ಆದರೆ ಕೆಲಸದ ಚಟ ಇಲ್ಲವೆ ಗೀಳು ಹಿಡಿದವರಾಗುವಂತೆ ಅದು ಉತ್ತೇಜಿಸುವುದಿಲ್ಲ. “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು” ಎನ್ನುತ್ತದೆ ಪ್ರಸಂಗಿ 4:6. ಇದರರ್ಥ? ಕೆಲಸದ ಚಟ ಹಿಡಿದಿರುವವನಿಗೆ ತನ್ನ ದುಡಿಮೆಯ ಫಲವನ್ನು ಯಾವತ್ತೂ ಅನುಭವಿಸಲಿಕ್ಕಾಗಲಿಕ್ಕಿಲ್ಲ. ಏಕೆಂದರೆ ಅವನು ತನ್ನೆಲ್ಲ ಸಮಯ ಹಾಗೂ ಶಕ್ತಿಯನ್ನು ಕೆಲಸಕ್ಕೇ ಹಾಕುತ್ತಾನೆ. ಹೀಗೆ ಅವನ ಕೆಲಸ ಒಂದರ್ಥದಲ್ಲಿ “ಗಾಳಿಯನ್ನು ಹಿಂದಟ್ಟುವ” ಹಾಗೆ ವ್ಯರ್ಥವಾಗುತ್ತದೆ.

ಕೆಲಸದ ಬಗ್ಗೆ ಸಮತೂಕದ ನೋಟವಿರುವಂತೆ ಬೈಬಲ್‌ ಸಹಾಯ ಮಾಡುತ್ತದೆ. ಶ್ರದ್ಧೆಯಿಂದ ಮನಸ್ಸುಕೊಟ್ಟು ಕೆಲಸ ಮಾಡಬೇಕೆಂದು ಅದು ಹೇಳುತ್ತದಾದರೂ, ನಾವು “ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳು”ವಂತೆಯೂ ಅದು ಬುದ್ಧಿಹೇಳುತ್ತದೆ. (ಫಿಲಿಪ್ಪಿ 1:10) ಈ ಹೆಚ್ಚು ಪ್ರಮುಖವಾದ ವಿಷಯಗಳೆಂದರೇನು? ಒಂದು, ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವುದು. ಇದಕ್ಕಿಂತಲೂ ಹೆಚ್ಚು ಮುಖ್ಯವಾದದ್ದು ಆಧ್ಯಾತ್ಮಿಕ ಚಟುವಟಿಕೆಗಳು. ಉದಾಹರಣೆಗೆ ದೇವರ ವಾಕ್ಯವಾದ ಬೈಬಲನ್ನು ಓದಿ, ಅದರ ಬಗ್ಗೆ ಧ್ಯಾನಿಸುವುದು.

ಸಮತೂಕದ ಜೀವನ ನಡೆಸುವವರು ತಮ್ಮ ಕೆಲಸವನ್ನು ಇನ್ನೂ ಹೆಚ್ಚು ಆನಂದಿಸುವರು. ಈ ಹಿಂದೆ ತಿಳಿಸಲಾದ ವಿಲ್ಯಮ್‌ ಹೇಳಿದ್ದು: “ನನ್ನ ಹಿಂದಿನ ಧಣಿಗಳಲ್ಲಿ ಒಬ್ಬರು ಸಮತೂಕದ ಕೆಲಸದ ರೂಢಿಗಳ ವಿಷಯದಲ್ಲಿ ಒಳ್ಳೇ ಮಾದರಿ. ಅವರು ತುಂಬ ಶ್ರಮಪಟ್ಟು ಕೆಲಸಮಾಡುತ್ತಾರೆ. ಅವರ ಕೆಲಸದ ಗುಣಮಟ್ಟ ತುಂಬ ಚೆನ್ನಾಗಿರುವುದರಿಂದ ಅವರ ಗಿರಾಕಿಗಳೂ ಅವರನ್ನು ಇಷ್ಟಪಡುತ್ತಾರೆ. ಆದರೆ ದಿನದ ಅಂತ್ಯದಲ್ಲಿ ಕೆಲಸ ಮುಗಿದಾಗ, ಕೆಲಸದ ವಿಷಯವನ್ನು ಮನಸ್ಸಿನಿಂದ ಹೊರಗಿಟ್ಟು, ತಮ್ಮ ಕುಟುಂಬ ಹಾಗೂ ಆರಾಧನೆಗೆ ಪೂರ್ಣ ಗಮನಕೊಡುತ್ತಾರೆ. ಇನ್ನೊಂದು ವಿಷಯ ಏನ್‌ ಗೊತ್ತಾ? ನನಗೆ ಗೊತ್ತಿರುವವರಲ್ಲಿ ತುಂಬ ಸಂತೋಷವಾಗಿರುವ ವ್ಯಕ್ತಿ ಅಂದರೆ ಅವರೇ!”

[ಪುಟ 5⁠ರ ಚೌಕ]

ಕಷ್ಟದ ಕೆಲಸದ ಬಗ್ಗೆ ಅವರ ಅಭಿಪ್ರಾಯ

“ದಿನದ ಅಂತ್ಯದಲ್ಲಿ ನಾನು ದಣಿದಿರುವಾಗ, ಏನನ್ನೋ ಸಾಧಿಸಿಸಿದ್ದೇನೆ ಎಂಬ ಭಾವನೆ ಮತ್ತು ಆನಂದ ನನಗಿರುತ್ತದೆ. ಆ ದಿನ ನಾನು ನಿಜವಾಗಲೂ ದುಡಿದಿದ್ದೇನೆ ಎಂಬ ತೃಪ್ತಿ ಇರುತ್ತದೆ.”—ನಿಕ್‌.

“ಶ್ರಮಪಟ್ಟು ದುಡಿಯುವುದೇ ಕೆಲಸಮಾಡುವ ಅತ್ಯುತ್ತಮ ವಿಧಾನ. ಏನೋ ಸಾರ್ಥಕ ಕೆಲಸಮಾಡಲು ನಿಮಗೆ ಮನಸ್ಸಿದ್ದರೆ ಆ ಕೆಲಸವನ್ನು ಸರಿಯಾಗಿ ಮಾಡಿ.”—ಕ್ರಿಶ್ಚ್ಯನ್‌.

“ಈ ಮಾನವ ದೇಹ ಇದೆಯಲ್ಲಾ ಅದು ತುಂಬ ಅಸಾಧಾರಣವಾದ ಕೆಲಸಗಳನ್ನು ಮಾಡಬಲ್ಲದು. ಕಷ್ಟದ ಕೆಲಸಮಾಡಲು ಮತ್ತು ಇತರರಿಗೆ ಸಹಾಯಮಾಡಲು ಅದನ್ನು ಬಳಸುವ ಮೂಲಕ ಈ ಉಡುಗೊರೆಗಾಗಿ ನನ್ನ ಕೃತಜ್ಞತೆ ತೋರಿಸುತ್ತೇನೆ.”—ಡೇವಿಡ್‌.

(ಪ್ರಸಂಗಿ 4:6) ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು.

w15 2/1 6 ¶3-5

ಕಷ್ಟದ ಕೆಲಸದಿಂದ ಆನಂದ ಪಡೆಯುವುದು ಹೇಗೆ?

ಕೆಲಸಕ್ಕೆ ಎಷ್ಟು ಮಹತ್ವ ಕೊಡಬೇಕೊ ಅಷ್ಟನ್ನೇ ಕೊಡಿ

ಕಷ್ಟಪಟ್ಟು ಕೆಲಸಮಾಡಬೇಕು ನಿಜ, ಅದು ಶ್ಲಾಘನೀಯ. ಆದರೆ ಜೀವನವೆಂದರೆ ಬರೀ ಕೆಲಸವಲ್ಲ, ಅದಕ್ಕಿಂತಲೂ ಹೆಚ್ಚಿನದ್ದು ಇದೆ ಎನ್ನುವುದನ್ನು ನಾವು ನೆನಪಿಡಬೇಕು. ಕಷ್ಟಪಟ್ಟು ದುಡಿಯುವದನ್ನು ಬೈಬಲ್‌ ಸಹ ಉತ್ತೇಜಿಸುತ್ತದೆ ನಿಜ. (ಜ್ಞಾನೋ 13:4) ಆದರೆ ಕೆಲಸದ ಚಟ ಇಲ್ಲವೆ ಗೀಳು ಹಿಡಿದವರಾಗುವಂತೆ ಅದು ಉತ್ತೇಜಿಸುವುದಿಲ್ಲ. “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು” ಎನ್ನುತ್ತದೆ ಪ್ರಸಂಗಿ 4:6. ಇದರರ್ಥ? ಕೆಲಸದ ಚಟ ಹಿಡಿದಿರುವವನಿಗೆ ತನ್ನ ದುಡಿಮೆಯ ಫಲವನ್ನು ಯಾವತ್ತೂ ಅನುಭವಿಸಲಿಕ್ಕಾಗಲಿಕ್ಕಿಲ್ಲ. ಏಕೆಂದರೆ ಅವನು ತನ್ನೆಲ್ಲ ಸಮಯ ಹಾಗೂ ಶಕ್ತಿಯನ್ನು ಕೆಲಸಕ್ಕೇ ಹಾಕುತ್ತಾನೆ. ಹೀಗೆ ಅವನ ಕೆಲಸ ಒಂದರ್ಥದಲ್ಲಿ “ಗಾಳಿಯನ್ನು ಹಿಂದಟ್ಟುವ” ಹಾಗೆ ವ್ಯರ್ಥವಾಗುತ್ತದೆ.

ಕೆಲಸದ ಬಗ್ಗೆ ಸಮತೂಕದ ನೋಟವಿರುವಂತೆ ಬೈಬಲ್‌ ಸಹಾಯ ಮಾಡುತ್ತದೆ. ಶ್ರದ್ಧೆಯಿಂದ ಮನಸ್ಸುಕೊಟ್ಟು ಕೆಲಸ ಮಾಡಬೇಕೆಂದು ಅದು ಹೇಳುತ್ತದಾದರೂ, ನಾವು “ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳು”ವಂತೆಯೂ ಅದು ಬುದ್ಧಿಹೇಳುತ್ತದೆ. (ಫಿಲಿಪ್ಪಿ 1:10) ಈ ಹೆಚ್ಚು ಪ್ರಮುಖವಾದ ವಿಷಯಗಳೆಂದರೇನು? ಒಂದು, ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವುದು. ಇದಕ್ಕಿಂತಲೂ ಹೆಚ್ಚು ಮುಖ್ಯವಾದದ್ದು ಆಧ್ಯಾತ್ಮಿಕ ಚಟುವಟಿಕೆಗಳು. ಉದಾಹರಣೆಗೆ ದೇವರ ವಾಕ್ಯವಾದ ಬೈಬಲನ್ನು ಓದಿ, ಅದರ ಬಗ್ಗೆ ಧ್ಯಾನಿಸುವುದು.

ಸಮತೂಕದ ಜೀವನ ನಡೆಸುವವರು ತಮ್ಮ ಕೆಲಸವನ್ನು ಇನ್ನೂ ಹೆಚ್ಚು ಆನಂದಿಸುವರು. ಈ ಹಿಂದೆ ತಿಳಿಸಲಾದ ವಿಲ್ಯಮ್‌ ಹೇಳಿದ್ದು: “ನನ್ನ ಹಿಂದಿನ ಧಣಿಗಳಲ್ಲಿ ಒಬ್ಬರು ಸಮತೂಕದ ಕೆಲಸದ ರೂಢಿಗಳ ವಿಷಯದಲ್ಲಿ ಒಳ್ಳೇ ಮಾದರಿ. ಅವರು ತುಂಬ ಶ್ರಮಪಟ್ಟು ಕೆಲಸಮಾಡುತ್ತಾರೆ. ಅವರ ಕೆಲಸದ ಗುಣಮಟ್ಟ ತುಂಬ ಚೆನ್ನಾಗಿರುವುದರಿಂದ ಅವರ ಗಿರಾಕಿಗಳೂ ಅವರನ್ನು ಇಷ್ಟಪಡುತ್ತಾರೆ. ಆದರೆ ದಿನದ ಅಂತ್ಯದಲ್ಲಿ ಕೆಲಸ ಮುಗಿದಾಗ, ಕೆಲಸದ ವಿಷಯವನ್ನು ಮನಸ್ಸಿನಿಂದ ಹೊರಗಿಟ್ಟು, ತಮ್ಮ ಕುಟುಂಬ ಹಾಗೂ ಆರಾಧನೆಗೆ ಪೂರ್ಣ ಗಮನಕೊಡುತ್ತಾರೆ. ಇನ್ನೊಂದು ವಿಷಯ ಏನ್‌ ಗೊತ್ತಾ? ನನಗೆ ಗೊತ್ತಿರುವವರಲ್ಲಿ ತುಂಬ ಸಂತೋಷವಾಗಿರುವ ವ್ಯಕ್ತಿ ಅಂದರೆ ಅವರೇ!”

ನವೆಂಬರ್‌ 21-27

ಬೈಬಲಿನಲ್ಲಿರುವ ರತ್ನಗಳು | ಪ್ರಸಂಗಿ 7-12

“ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು”

w11 11/1 21 ¶1-6

ದೇವರ ಸಮೀಪಕ್ಕೆ ಬನ್ನಿರಿ

ದೇವರ ಕಡೆಗೆ ನಮಗಿರುವ ಕರ್ತವ್ಯವನ್ನು ಪೂರೈಸುವುದು

‘ಜೀವನದ ಉದ್ದೇಶವೇನು?’ ಅಂತ ಯಾವತ್ತಾದರೂ ಯೋಚಿಸಿದ್ದೀರಾ? ಅಂಥ ಪ್ರಶ್ನೆ ಕೇಳುವ ಸಾಮರ್ಥ್ಯವನ್ನು ಯೆಹೋವನು ನಮ್ಮಲ್ಲಿ ಇಟ್ಟಿರುವುದು ಮಾತ್ರವಲ್ಲ, ಅದಕ್ಕೆ ಉತ್ತರವೇನೆಂದು ತಿಳಿಯುವ ಅಗತ್ಯವನ್ನು ನಮ್ಮ ಅಂತರಂಗದಲ್ಲಿ ಆಳವಾಗಿ ಬೇರೂರಿಸಿದ್ದಾನೆ. ಆದರೆ ಈ ಬಗ್ಗೆ ನಾವು ಕತ್ತಲಲ್ಲಿ ತಡಕಾಡುವಂತೆ ನಮ್ಮ ಪ್ರೀತಿಯ ದೇವರು ಬಿಟ್ಟಿಲ್ಲ ಎನ್ನುವುದು ಸಂತೋಷದ ವಿಷಯ. ಆತನ ವಾಕ್ಯವಾದ ಬೈಬಲಿನಲ್ಲಿ ಆ ಪ್ರಶ್ನೆಗೆ ಉತ್ತರವಿದೆ. ಪ್ರಸಂಗಿ 12:13⁠ರಲ್ಲಿ ರಾಜ ಸೊಲೊಮೋನನು ಬರೆದ ಮಾತುಗಳಿಗೆ ಸ್ವಲ್ಪ ಗಮನಕೊಡಿ.

ಸಂತೋಷ ಕಂಡುಕೊಳ್ಳುವುದು ಹೇಗೆ, ಜೀವನದ ಉದ್ದೇಶವೇನು ಎಂಬದನ್ನು ಸೊಲೊಮೋನನು ಚೆನ್ನಾಗಿ ಹೇಳಲು ಸಮರ್ಥನಾಗಿದ್ದ ಸ್ಥಾನದಲ್ಲಿದ್ದನು. ಅವನಿಗೆ ಅಸಾಧಾರಣವಾದ ವಿವೇಕ, ಅಪಾರ ಐಶ್ವರ್ಯ, ರಾಜ್ಯಾಧಿಕಾರ ಇತ್ತು. ಹಾಗಾಗಿ ಮಾನವರು ಯಾವೆಲ್ಲ ವಿಷಯಗಳ ಬೆನ್ನುಹತ್ತುತ್ತಾರೆಂದು ಸೂಕ್ಷ್ಮವಾಗಿ ಪರಿಶೀಲನೆ ಮಾಡಲು ಅವನಿಗೆ ಸಾಧ್ಯವಾಯಿತು. ಉದಾಹರಣೆಗೆ, ಅವರು ಐಶ್ವರ್ಯ ಮತ್ತು ಪ್ರಖ್ಯಾತಿಯನ್ನು ಪಡೆಯುವದರ ಹಿಂದೆ ಹೋಗುತ್ತಾರೆ. (ಪ್ರಸಂಗಿ 2:4-9; 4:4) ಇದೆಲ್ಲದ್ದರಿಂದ ಅವನು ತಿಳಿದುಕೊಂಡ ವಿಷಯಗಳ ಸಾರಾಂಶವನ್ನು ದೇವರ ಪ್ರೇರಣೆಯಿಂದ ಹೀಗೆ ಹೇಳಿದನು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” ಈ ಮಾತುಗಳು ಮನುಷ್ಯರು ಮಾಡಬಹುದಾದ ಅತ್ಯಂತ ಪ್ರತಿಫಲದಾಯಕ ಹಾಗೂ ಅತ್ಯಂತ ಶ್ರೇಷ್ಠ ಕೆಲಸವೇನೆಂದು ತಿಳಿಸುತ್ತವೆ.

‘ದೇವರಿಗೆ ಭಯಪಡಿ.’ ದೇವರಿಗೆ ಭಯಪಡಬೇಕೆಂಬ ವಿಚಾರ ಕೇಳಿದೊಡನೆ ಮೊದಲು ಅಷ್ಟೊಂದು ಹಿಡಿಸಲಿಕ್ಕಿಲ್ಲ. ಆದರೆ ಈ ಭಯ ಹೃದಯದ ಒಂದು ಹಿತಕರವಾದ ಭಾವನೆಯಾಗಿದೆ. ತುಂಬ ಕ್ರೂರಿಯಾದ ಧಣಿಯ ಕೋಪವನ್ನು ಎಲ್ಲಿ ಕೆರಳಿಸುತ್ತೇನೊ ಎಂದು ಭಯಪಡುವ ಆಳಿನ ಚಿತ್ರಣ ಅದಲ್ಲ. ಬದಲಾಗಿ ತುಂಬ ಪ್ರೀತಿಯುಳ್ಳ ಅಪ್ಪನನ್ನು ಸಂತೋಷಪಡಿಸಲು ತವಕಿಸುತ್ತಿರುವ ಮಗನ ಚಿತ್ರಣ ಮನಸ್ಸಿಗೆ ಬರಬೇಕು. ಒಂದು ರೆಫರೆನ್ಸ್‌ ಪುಸ್ತಕ ಹೇಳುವುದೇನೆಂದರೆ ದೇವರ ಭಯ ಎನ್ನುವುದು “ಆತನ ಜನರು ಆತನನ್ನು ಪ್ರೀತಿಸುವುದರಿಂದ ಮತ್ತು ಆತನ ಶಕ್ತಿ ಹಾಗೂ ಮಹೋನ್ನತೆಯನ್ನು ಗೌರವಿಸುವುದರಿಂದ ಆತನ ಮೇಲೆ ಅವರಿಗಿರುವ ಪೂಜ್ಯಭಕ್ತಿ ಹಾಗೂ ವಿಸ್ಮಯದ ಮನೋಭಾವ” ಆಗಿದೆ. ಇಂಥ ಮನೋಭಾವ ನಾವು ದೇವರ ಚಿತ್ತಕ್ಕೆ ಅಧೀನರಾಗುವಂತೆ ಪ್ರೇರಿಸುತ್ತದೆ. ಏಕೆಂದರೆ ನಾವಾತನನ್ನು ಪ್ರೀತಿಸುತ್ತೇವೆ ಮತ್ತು ಆತನು ನಮ್ಮನ್ನು ಪ್ರೀತಿಸುತ್ತಾನೆಂದು ನಮಗೆ ತಿಳಿದಿದೆ. ಈ ಹಿತಕರವಾದ ಭಯ ಬರೀ ನಮ್ಮೊಳಗೆ ಒಂದು ಭಾವನೆಯಾಗಿ ಉಳಿಯುವುದಿಲ್ಲ. ಅದನ್ನು ಕ್ರಿಯೆಗಳಲ್ಲಿ ತೋರಿಸುತ್ತೇವೆ. ಹೇಗೆ?

‘ಆತನ ಆಜ್ಞೆಗಳನ್ನು ಕೈಕೊಳ್ಳಿ.’ ದೇವರ ಭಯ ನಾವಾತನಿಗೆ ವಿಧೇಯರಾಗುವಂತೆ ಮಾಡುತ್ತದೆ. ಯೆಹೋವನಿಗೆ ವಿಧೇಯತೆ ತೋರಿಸುವುದು ವಿವೇಕಯುತವೂ ಆಗಿದೆ. ಯಾವುದಾದರೊಂದು ವಸ್ತುವಿನ ತಯಾರಕನಿಗೆ ಅದನ್ನು ಹೇಗೆ ಬಳಸಿದರೆ ಅತ್ಯುತ್ತಮವೆಂದು ತಿಳಿದಿರುವಂತೆಯೇ ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ನಾವು ಹೇಗೆ ಜೀವಿಸಿದರೆ ಹೆಚ್ಚು ಒಳ್ಳೇದೆಂದು ಚೆನ್ನಾಗಿ ತಿಳಿದಿದೆ. ಅಷ್ಟುಮಾತ್ರವಲ್ಲ ಯೆಹೋವನು ನಮ್ಮ ಕ್ಷೇಮವನ್ನೇ ಬಯಸುತ್ತಾನೆ. ನಾವು ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆತನು ನಮ್ಮಿಂದ ಏನು ಅಪೇಕ್ಷಿಸುತ್ತಾನೊ ಅದೆಲ್ಲದ್ದರಿಂದ ನಮಗೆ ಒಳಿತೇ ಆಗುತ್ತದೆ. (ಯೆಶಾಯ 48:17) ಅಪೊಸ್ತಲ ಯೋಹಾನನು ಅದನ್ನು ಹೀಗೆ ಹೇಳಿದನು: “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.” ನಾವು ತೋರಿಸುವ ವಿಧೇಯತೆ ದೇವರ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುತ್ತದೆ ಮತ್ತು ದೇವರ ಆಜ್ಞೆಗಳು ಆತನಿಗೆ ನಮ್ಮ ಮೇಲಿರುವ ಪ್ರೀತಿಯನ್ನು ತೋರಿಸುತ್ತವೆ.

‘ಮನುಷ್ಯರೆಲ್ಲರ ಕರ್ತವ್ಯ ಇದೇ.’ ಈ ಮಾತುಗಳು ನಾವು ದೇವರಿಗೆ ಭಯಪಟ್ಟು ಆತನಿಗೆ ವಿಧೇಯರಾಗಲು ಒಂದು ಮುಖ್ಯವಾದ ಕಾರಣವನ್ನು ಎತ್ತಿಹಿಡಿಯುತ್ತವೆ: ಹಾಗೆ ಮಾಡುವುದು ನಮ್ಮ ಹಂಗು, ನಮ್ಮ ಕರ್ತವ್ಯ ಆಗಿದೆ. ಯೆಹೋವನು ನಮ್ಮ ಸೃಷ್ಟಿಕರ್ತ, ಹಾಗಾಗಿ ನಮ್ಮ ಜೀವಕ್ಕಾಗಿ ನಾವಾತನಿಗೆ ಋಣಿಗಳು. (ಕೀರ್ತನೆ 36:9) ಆತನಿಗೆ ವಿಧೇಯತೆ ತೋರಿಸುವ ಹಂಗೂ ನಮಗಿದೆ. ಆತನು ಬಯಸುವಂಥ ರೀತಿಯಲ್ಲಿ ನಾವು ಜೀವಿಸುವಾಗ ನಮ್ಮ ಕರ್ತವ್ಯವನ್ನು ಪೂರೈಸುತ್ತಿದ್ದೇವೆ.

ಹಾಗಾದರೆ, ಜೀವನದ ಉದ್ದೇಶವೇನು? ಸರಳವಾಗಿ ಹೇಳುವುದಾದರೆ, ನಾವು ಬದುಕಿರುವುದು ದೇವರ ಚಿತ್ತವನ್ನು ಮಾಡಲಿಕ್ಕಾಗಿ. ಇದನ್ನು ಬಿಟ್ಟರೆ, ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿ ಮಾಡುವಂಥ ಬೇರಾವುದೇ ಸಂಗತಿಯಿಲ್ಲ. ಯೆಹೋವನ ಚಿತ್ತವೇನು? ನಿಮ್ಮ ಬದುಕನ್ನು ಅದಕ್ಕೆ ಹೊಂದಿಕೆಯಲ್ಲಿ ತರುವುದು ಹೇಗೆ? ಇದರ ಬಗ್ಗೆ ಹೆಚ್ಚು ತಿಳಿಯಿರಿ. ಈ ವಿಷಯದಲ್ಲಿ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಪಡುತ್ತಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ