ಐಶ್ವರ್ಯಕ್ಕಿಂತಲೂ ಮಿಗಿಲಾದ ಆಶೀರ್ವಾದಗಳು
ಜಾನ್ ಅಮೆರಿಕದಲ್ಲಿ ಕೈತುಂಬ ಸಂಬಳ ಸಿಗುವ ಕೆಲಸದಲ್ಲಿದ್ದ. ಯುವಕನಿದ್ದಾಗಲೇ ಅವನು ಇಡೀ ಪ್ರಪಂಚ ಸುತ್ತಿ ತುಂಬ ಹಣಗಳಿಸಿದ್ದ. ಅವನೂ ಅವನ ಮಡದಿಯೂ ಒಂದು ಸುಂದರ ಹಾಗೂ ಸುಖಸವಲತ್ತಿನ ಮನೆಯಲ್ಲಿ ಜೀವಿಸುತ್ತಿದ್ದರು. ಅನೇಕರು ಅವರನ್ನು ಭಾಗ್ಯವಂತರಾಗಿ ಪರಿಗಣಿಸುತ್ತಿದ್ದರು.
ಕಾಸ್ಟಸ್a ಎಂಬವನ ಇನ್ನೊಂದು ಉದಾಹರಣೆಯನ್ನು ಪರಿಗಣಿಸಿ. ಪ್ರಸಿದ್ಧ ಯುರೋಪಿಯನ್ ಬ್ಯಾಂಕ್ ಒಂದರಲ್ಲಿ ತರಬೇತಿಗಾಗಿ ಅವನೂ ಸೇರಿದಂತೆ 5,000ಕ್ಕಿಂತಲೂ ಹೆಚ್ಚು ಮಂದಿ ಅರ್ಜಿಸಲ್ಲಿಸಿದ್ದರು; ಆಯ್ಕೆಯಾದ ಕೇವಲ 80 ಮಂದಿಯಲ್ಲಿ ಕಾಸ್ಟಸ್ ಒಬ್ಬನಾಗಿದ್ದನು. ಕೆಲವೇ ವರ್ಷಗಳಲ್ಲಿ ಅವನಿಗೆ ಒಂದರ ಮೇಲೊಂದು ಪ್ರಮೋಷನ್ ದೊರೆಯಿತು. ಕೊನೆಗೆ ಅವನು ಇನ್ನೊಂದು ಬ್ಯಾಂಕ್ನ ಪ್ರಮುಖ ವಿಭಾಗದಲ್ಲಿ ಮುಖ್ಯ ಹುದ್ದೆಗೆ ನೇಮಿಸಲ್ಪಟ್ಟನು. ತನ್ನ ಸ್ವಂತ ಕಂಪನಿಯನ್ನು ಆರಂಭಿಸಲಿಕ್ಕಾಗಿ ಆ ಕೆಲಸವನ್ನು ಅವನು ಬಿಟ್ಟಾಗ ಅವನು ತುಂಬ ಹಣ ಮಾಡಿದ್ದನು. ಹೆಚ್ಚಿನ ಜನರು ತಮ್ಮ ಇಡೀ ಜೀವಮಾನದಲ್ಲಿ ಸಂಪಾದನೆ ಮಾಡುವಷ್ಟು ಹಣವನ್ನು ಅವನು ಕೇವಲ ಒಂದೇ ವರ್ಷದಲ್ಲಿ ಗಳಿಸುತ್ತಿದ್ದನು. ತಾನು ಧನ್ಯನೆಂದು ನೆನಸಿದನು ಅವನು.
ಆದರೂ ಈ ಇಬ್ಬರು ಪುರುಷರಿಗೂ ಪ್ರಾಪಂಚಿಕ ಐಶ್ವರ್ಯಕ್ಕಿಂತಲೂ ಮಿಗಿಲಾದ ಬೇರೆ ಆಶೀರ್ವಾದಗಳು ಇವೆಯೆಂಬ ಖಾತ್ರಿ ಆಯಿತು. ಉದಾಹರಣೆಗೆ, ಇಂದು ಜಾನ್ ಬೈಬಲ್ ಶಿಕ್ಷಕನಾಗಿ ಜನರನ್ನು ದೇವರ ಸಮೀಪಕ್ಕೆ ಬರುವಂತೆ ನೆರವು ನೀಡುತ್ತಾ ಸ್ವಯಂ ಸೇವೆ ಮಾಡುತ್ತಿದ್ದಾನೆ. ಜಾನ್ ತಿಳಿಸುವುದು: “ಲೌಕಿಕ ಐಶ್ವರ್ಯವು ಸಂತೋಷಕ್ಕೆ ನಡೆಸುವುದಿಲ್ಲ ಎಂಬುದನ್ನು ನಾನು ವೈಯಕ್ತಿಕವಾಗಿ ಕಂಡಿದ್ದೇನೆ, ಅನುಭವಿಸಿದ್ದೇನೆ. ಸಿರಿಸಂಪತ್ತನ್ನು ಗಳಿಸಲು, ಉಳಿಸಿಕೊಳ್ಳಲು ನಾವು ಎಷ್ಟು ಸಮಯ ವ್ಯಯಿಸುತ್ತೇವೆಂದರೆ ಬೇರೆ ಯಾವ ಕೆಲಸಕ್ಕೂ ನಮಗೆ ಸಮಯವೇ ಸಿಗುವುದಿಲ್ಲ. ಇನ್ನೊಂದು ಕಡೆ, ಬೈಬಲ್ ಸೂತ್ರಗಳಿಗೆ ಅನುಸಾರವಾಗಿ ಜೀವಿಸುವವರು ಹೆಚ್ಚು ಸಂತೋಷಕರ ಸಂಸಾರ, ಮನಶ್ಶಾಂತಿ ಹಾಗೂ ಒಳ್ಳೇ ಮನಸ್ಸಾಕ್ಷಿಯನ್ನು ಅನುಭವಿಸುತ್ತಾರೆ.”
ತದ್ರೀತಿ ಕಾಸ್ಟಸ್ ಹೇಳುವುದು: “ನಾವು ಸುಖಭೋಗದ ಜೀವನವನ್ನು ನಡೆಸುವಂತೆ ದೇವರು ಬಯಸುವುದಿಲ್ಲ. ಕೆಲವು ಸಲ ನಮ್ಮ ದಿನನಿತ್ಯದ ಅಗತ್ಯಕ್ಕೆ ಬೇಕಾದದಕ್ಕಿಂತ ಹೆಚ್ಚಿನ ವಿಷಯಗಳನ್ನು ಆತನು ಒದಗಿಸುತ್ತಾನೆ. ಇದು ನಮ್ಮನ್ನು ಆತನ ಚಿತ್ತಕ್ಕನುಸಾರ ಅವನ್ನು ಉಪಯೋಗಿಸುವ ಹಂಗಿನೊಳಗೆ ಹಾಕುತ್ತದೆ ಎಂದು ನನ್ನೆಣಿಕೆ.” ಇತ್ತೀಚಿಗೆ ಕಾಸ್ಟಸ್ ಮತ್ತು ಅವನ ಪರಿವಾರವು ಹೆಚ್ಚಿನ ಜನರಿಗೆ ಬೈಬಲನ್ನು ಕಲಿಸುವುದಕ್ಕೋಸ್ಕರ ಒಂದು ಹೊಸ ಭಾಷೆಯನ್ನು ಕಲಿಯಲು ನಿರ್ಣಯಿಸಿದೆ. ಅವನನ್ನುವುದು: “ತೆಗೆದುಕೊಳ್ಳುವದಕ್ಕಿಂತ ಕೊಡುವುದರಲ್ಲೇ ಹೆಚ್ಚಿನ ಸಂತೋಷವೆಂದು ನಾವು ಕಲಿತೆವು.”—ಅ. ಕೃತ್ಯಗಳು 20:35.
ಪ್ರಾಪಂಚಿಕ ಐಶ್ವರ್ಯಗಳಿಗಿಂತ ಆಧ್ಯಾತ್ಮಿಕ ಆಶೀರ್ವಾದಗಳು ಎಷ್ಟೋ ಹೆಚ್ಚು ಅಮೂಲ್ಯವೆಂದು ಜಾನ್ ಮತ್ತು ಕಾಸ್ಟಸ್ ಇಬ್ಬರೂ ಕಲಿತುಕೊಂಡರು ಎಂಬುದು ನಿಶ್ಚಯ. ಹಾವರ್ಡ್ ಯುನಿವರ್ಸಿಟಿಯ ಪ್ರಾಧ್ಯಾಪಕರಾದ ಡ್ಯಾನಿಯೆಲ್ ಗಿಲ್ಬರ್ಟ್ ಗಮನಿಸುವುದು: ಮಾನಸಿಕ ಸ್ವಾಸ್ಥ್ಯದ ಪರಿಣತರು “ಐಶ್ವರ್ಯ ಮತ್ತು ಸಂತೋಷದ ನಡುವಣ ಸಂಬಂಧವನ್ನು ಅಧ್ಯಯನಿಸುವುದರಲ್ಲಿ ದಶಕಗಳನ್ನೇ ವ್ಯಯಿಸಿದ್ದಾರೆ. ಅವರ ಸಾಮಾನ್ಯ ತೀರ್ಮಾನ ಏನೆಂದರೆ, ಐಶ್ವರ್ಯವು ಜನರನ್ನು ಕಡುಬಡತನದಿಂದ ಮಧ್ಯಮ ವರ್ಗಕ್ಕೆ ಮೇಲಕ್ಕೆತ್ತುವಾಗ ಅವರು ಹೆಚ್ಚು ಸಂತೋಷಪಡುತ್ತಾರೆ. ಆದರೆ ತದನಂತರ ಅದು ಅವರಿಗೆ ಎಳ್ಳಷ್ಟೂ ಆನಂದವನ್ನು ಕೊಡಲಾರದು.”
ದುಃಖದಿಂದ ಕಲಿತ ಪಾಠ
“ಬಡತನದ ರೇಖೆಯನ್ನು ಒಮ್ಮೆ ದಾಟಿದೆವೆಂದರೆ ಆಮೇಲೆ ಹಣ ಎಷ್ಟು ಸಿಕ್ಕಿದರೂ ಆದಾಯದಲ್ಲಿ ಎಷ್ಟು ಬಡ್ತಿಯಾದರೂ ಅದರಿಂದ ಯಾವ ವೈಯಕ್ತಿಕ ಸಂತೋಷವು ಸಿಗಲಾರದು” ಎಂದು ವಿಚಾರಪರ ವೀಕ್ಷಕರೊಬ್ಬರು ತಿಳಿಸಿದರು. ಈ ಕುರಿತ ಪಾಠವು, ಕಳೆದ ಶತಮಾನದ ಆರಂಭದಲ್ಲಿ ಒಬ್ಬ ವರದಿಗಾರನ ಮನಸ್ಸಿನಲ್ಲಿ ಅಚ್ಚೊತ್ತಿತು. ಆ ಕಾಲದಲ್ಲಿ ಪ್ರಪಂಚದಲ್ಲೇ ಅತಿ ಶ್ರೀಮಂತ ವ್ಯಕ್ತಿಯಾದ ಸ್ಟೀಲ್ ಇಂಡಸ್ಟ್ರೀಯ ಉದ್ಯಮಿ ಆ್ಯಂಡ್ರು ಕಾರ್ನಿಗಿ ಅವರನ್ನು ಅವನು ಇಂಟರ್ವ್ಯೂ ಮಾಡಿದನು. ಆಗ ಅವರಂದದ್ದು: “ಜನರು ನನ್ನ ಐಶ್ವರ್ಯವನ್ನು ನೋಡಿ ಅಸೂಯೆಪಡಬೇಕಾಗಿಲ್ಲ. ಏಕೆಂದರೆ ಅದು ನನಗೆ ಏನೂ ಸಹಾಯಮಾಡಿರುವುದಿಲ್ಲ. ನೋಡಿ, ನನಗೀಗ 60 ವಯಸ್ಸು. ತಿಂದ ಊಟವೂ ಜೀರ್ಣವಾಗುವುದಿಲ್ಲ. ಯಾರಾದರೂ ನನಗೆ ಪುನಃ ನವಯೌವನವನ್ನೂ ಒಳ್ಳೇ ಆರೋಗ್ಯವನ್ನೂ ನೀಡುವುದಾದರೆ ನಾನು ನನ್ನ ಸಕಲ ಐಶ್ವರ್ಯವನ್ನೂ ಕೊಡಲು ಸಿದ್ಧ.”
ಆ ವರದಿಗಾರನು ನಂತರ ಹೇಳಿದ್ದು: “ಮಿಸ್ಟರ್ ಕಾರ್ನಿಗಿರವರು ಆಮೇಲೆ ಥಟ್ಟನೆ ತಿರುಗಿ ಅವರ್ಣನೀಯ ಭಾವುಕತೆಯಿಂದಲೂ ಹತಾಶೆಯಿಂದಲೂ ಮೆಲ್ಲನೆ ಅಂದದ್ದು: ‘ಪುನಃ ಇನ್ನೊಮ್ಮೆ ಜೀವಿಸಲು ನನಗೆ ಸಾಧ್ಯವಿರುವುದಾದರೆ ಏನು ಬೇಕಾದರೂ ಕೊಡಲು ತಯಾರಿದ್ದೇನೆ.’” ತೈಲ ಉದ್ಯಮಿಯಾದ ಇನ್ನೊಬ್ಬ ಕೋಟ್ಯಾಧಿಪತಿ ಜೆ. ಪಾಲ್ ಗೆಟ್ಟೀ ಸಮ್ಮತಿಸುತ್ತ ಅಂದದ್ದು: “ಹಣಕ್ಕೂ ಸಂತೋಷಕ್ಕೂ ಯಾವ ಸಂಬಂಧವೂ ಇಲ್ಲ. ಇದ್ದರೆ ಅಸಂತೋಷದೊಂದಿಗೆ ಮಾತ್ರ.”
ಬೈಬಲ್ ಲೇಖಕನೊಬ್ಬನ ಈ ಮಾತಿನೊಂದಿಗೆ ನೀವು ಸಹಮತಿಸಬಹುದು. ಅವನು ದೇವರಿಗೆ ವಿನಂತಿಸಿದ್ದು: “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. ಹಾಗಾಗದೆ ಹೊಟ್ಟೆತುಂಬಿದವನಾದರೆ ಯೆಹೋವನು ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು; ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು.”—ಜ್ಞಾನೋಕ್ತಿ 30:8, 9.
ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು, “ಯೆರೂಸಲೇಮಿನಲ್ಲಿ ಹಿಂದೆ ಇದ್ದವರೆಲ್ಲರಿಗಿಂತಲೂ ಹೆಚ್ಚು ಅಭಿವೃದ್ಧಿಹೊಂದಿ ದೊಡ್ಡವನಾದೆನು” ಎಂದನು. ಅವನು ಮತ್ತೂ ಹೇಳಿದ್ದು: “ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು.” ಸೊಲೊಮೋನನು ಇನ್ನೂ ಹೇಳಿದ್ದು: “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.”—ಪ್ರಸಂಗಿ 2:9-11; 5:12, 13; ಜ್ಞಾನೋಕ್ತಿ 10:22.
ನಿತ್ಯ ಆಶೀರ್ವಾದಗಳಿಗೆ ದಾರಿ
ನಾವು ಸರಿಯಾಗಿ ನಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ತೃಪ್ತಿಗೊಳಿಸುವಲ್ಲಿ ಮಾತ್ರ ಬಾಳುವ ನಿಜ ಸಂತೋಷವನ್ನು ಗಳಿಸಬಲ್ಲೆವು ಎಂಬುದು ಸ್ಪಷ್ಟ. ದೇವರನ್ನು ಪ್ರಥಮವಾಗಿಟ್ಟಲ್ಲಿ ನಮ್ಮ ಜೀವಿತದ ಪ್ರತಿಯೊಂದು ಅಂಶವು ಅತ್ಯಂತ ಸಮೃದ್ಧವೂ ಪ್ರತಿಫಲದಾಯಕವೂ ಆಗಿರುವುದು.
ಹಣವು ಸದಾಕಾಲಕ್ಕೂ ಚಿಂತೆಯ ವಿಷಯವಾಗಿ ಉಳಿಯಲಾರದು ಎಂಬುದಕ್ಕಾಗಿ ನಾವು ಕೃತಜ್ಞರು. ಲೋಭಿಗಳೂ ಸುಲುಕೊಳ್ಳುವವರೂ ಶಾಶ್ವತವಾಗಿ ನಾಶವಾಗುವರು ಎಂದು ಬೈಬಲ್ ಹೇಳುತ್ತದೆ. (1 ಯೋಹಾನ 2:15-17) ಹಿಂಬಾಲಿಸಿ ಬರುವ ದೇವರ ಹೊಸ ವ್ಯವಸ್ಥೆಯು ಆತನ ನೀತಿಯ ತತ್ತ್ವಗಳ ಆಧಾರದ ಮೇಲೆ ಆಳಲ್ಪಡುವುದು. ಭೂಮಿಯು ದೇವರ ಮೂಲ ಉದ್ದೇಶಕ್ಕನುಸಾರ, ಮೊದಲನೆಯ ದಂಪತಿಯನ್ನು ಆತನು ಸೃಷ್ಟಿಸಿದಾಗ ಹೇಗಿತ್ತೋ ಹಾಗೆ ಪರದೈಸವಾಗಿ ಮಾರ್ಪಡುವುದು. ಇಡೀ ಭೂಲೋಕವೇ ಸಂತೋಷ, ಸಮಾಧಾನ, ಪ್ರೀತಿಯಿಂದ ತುಂಬಿತುಳುಕುವುದನ್ನು ಕಾಣುವುದು ಅದೆಷ್ಟು ಆಶೀರ್ವಾದದಾಯಕ!—ಯೆಶಾಯ 2:2-4; 2 ಪೇತ್ರ 3:13; 1 ಯೋಹಾನ 4:8-11.
ಆ ಸಮಯದಲ್ಲಿ ಬದುಕು ಬರಡೂ ನೀರಸವೂ ಆಗಿರದು. ಪರದೈಸ ಭೂಮಿಯಲ್ಲಿ ಮಾನವರು ಚಿರಕಾಲ ಜೀವಿಸುವ ತನ್ನ ಮೂಲ ಉದ್ದೇಶವನ್ನು ದೇವರು ನೆರವೇರಿಸುವಾಗ ಐಹಿಕ ಆಶೀರ್ವಾದಗಳು ಆಧ್ಯಾತ್ಮಿಕ ಆಶೀರ್ವಾದಗಳೊಂದಿಗೆ ಜೊತೆಜೊತೆಯಾಗಿ ಬರುವುವು. ಆಗ ಭೂಮಿಯಲ್ಲಿ ಸಕಲರಿಗೂ ಬೇಕಾದಷ್ಟು ಆಹಾರ, ಮನೆ ಹಾಗೂ ಅರ್ಥಭರಿತ ಕೆಲಸವು ಇರುವುದು ಎಂಬ ಆಶ್ವಾಸನೆ ನಮಗಿದೆ. ಬಡತನವು ಸಂಪೂರ್ಣವಾಗಿ ಕೊನೆಗಾಣಿಸಲ್ಪಡುವುದು.—ಕೀರ್ತನೆ 72:16; ಯೆಶಾಯ 65:21-23; ಮೀಕ 4:4.
ಬೈಬಲಿನ ದೇವರಾದ ಯೆಹೋವನಲ್ಲಿ ಯಥಾರ್ಥವಾಗಿ ನಂಬಿಕೆಯನ್ನಿಡುವ ಪ್ರತಿಯೊಬ್ಬನು ಎಂದೂ ನಿರಾಶೆಪಡನು. (ರೋಮಾಪುರ 10:11-13) ಆದುದರಿಂದ ಐಶ್ವರ್ಯಕ್ಕಿಂತಲೂ ಮಿಗಿಲಾದ ಆಶೀರ್ವಾದಗಳನ್ನು ಈಗ ಬೆನ್ನಟ್ಟುವುದು ಅದೆಷ್ಟು ವಿವೇಕಪ್ರದ!—1 ತಿಮೊಥೆಯ 6:6-10. (g 3/09)
[ಪಾದಟಿಪ್ಪಣಿ]
a ಹೆಸರನ್ನು ಬದಲಾಯಿಸಲಾಗಿದೆ.
[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]
ದೇವರನ್ನು ಪ್ರಥಮವಾಗಿಟ್ಟಲ್ಲಿ ನಮ್ಮ ಜೀವಿತ ಅತ್ಯಂತ ಪ್ರತಿಫಲದಾಯಕ
[ಪುಟ 8ರಲ್ಲಿರುವ ಚಿತ್ರ]
ಹಣವನ್ನು ವಿವೇಕಯುತವಾಗಿ ಬಳಸುವಲ್ಲಿ ನಮ್ಮ ಜೀವಿತವು ಹೆಚ್ಚು ಆನಂದಕರವಾಗಬಲ್ಲದು