ಬೆಲೆ ಏರಿಕೆಯ ಬರೆಗೆ ಔಷಧಿ!
ಇರೋದ್ರಲ್ಲೇ ತೃಪ್ತಿಯಿಂದ ಇರಿ
ತೃಪ್ತಿಯಿಂದ ಇರೋ ಜನ ಹಾಸಿಗೆ ಇದ್ದಷ್ಟೇ ಕಾಲು ಚಾಚ್ತಾರೆ. ಅವ್ರ ಪರಿಸ್ಥಿತಿ ಬದಲಾದ್ರೆ ಅವ್ರ ಜೀವನಾನೂ ಅದಕ್ಕೆ ಅನುಗುಣವಾಗಿ ಹೊಂದಿಸ್ಕೊತ್ತಾರೆ.
ಇದನ್ನ ತಿಳ್ಕೊಳ್ಳೋದು ಯಾಕೆ ಮುಖ್ಯ?
ಜೆಸಿಕಾ ಕೊಹ್ಲರ್ ಅನ್ನೋ ಮನೋವೈದ್ಯೆ ಏನು ಹೇಳಿದ್ದಾರೆ ನೋಡಿ: ‘ತೃಪ್ತಿಯಿಂದ ಇರೋ ಜನ ಚೆನ್ನಾಗಿ ಯೋಚ್ನೆ ಮಾಡ್ತಾರೆ. ಅವರು ಬೇರೆಯವ್ರನ್ನ ನೋಡಿ ಹೊಟ್ಟೆಕಿಚ್ಚುಪಡಲ್ಲ. ಆದ್ರಿಂದ ಅವರು ಜಾಸ್ತಿ ಚಿಂತೆ ಮಾಡಲ್ಲ, ಖುಷಿಖುಷಿಯಾಗಿ ಇರ್ತಾರೆ.’ ಈ ತರ ಖುಷಿಯಾಗಿರೋ ಕೆಲವ್ರ ಬಗ್ಗೆ ನೀವು ಯೋಚ್ನೆ ಮಾಡಿ ನೋಡಿ. ಅವ್ರ ಹತ್ರ ಜಾಸ್ತಿ ಹಣ ಇರಲ್ಲ, ಆದ್ರೂ ಅವ್ರ ಖುಷಿಗೇನೂ ಕಮ್ಮಿ ಇರಲ್ಲ. ಯಾಕಂದ್ರೆ ಅವರು ಹಣಕ್ಕಿಂತ ಹೆಚ್ಚಾಗಿ ಕುಟುಂಬಕ್ಕೆ, ಸ್ನೇಹಿತರಿಗೆ ಬೆಲೆ ಕೊಡ್ತಾರೆ.
ನೀವೇನು ಮಾಡಬಹುದು?
ಹೋಲಿಕೆ ಮಾಡಬೇಡಿ. ‘ಅವ್ರ ಹತ್ರ ಅಷ್ಟೊಂದ್ ಇದೆ, ನನ್ನ ಹತ್ರ ಏನೂ ಇಲ್ಲ’ ಅಂತ ಹೋಲಿಕೆ ಮಾಡಿದ್ರೆ ನಿಮಗೇ ಬೇಜಾರಾಗುತ್ತೆ, ಹೊಟ್ಟೆಕಿಚ್ಚು ಬಂದುಬಿಡುತ್ತೆ. ನಿಮಗೆ ಕಾಣೋದೆಲ್ಲ ನಿಜ ಅಲ್ಲ ಅಂತ ನೆನಪಿಡಿ. ನೋಡೋಕೆ ಹೊರಗಡೆ ಅವರ ಹತ್ರ ಏನೇನೋ ವಸ್ತುಗಳು ಇರಬಹುದು, ಆದ್ರೆ ತುಂಬ ಜನ ಅದನ್ನೆಲ್ಲ ಸಾಲದಲ್ಲಿ ತಂದಿರುತ್ತಾರೆ. ಸೆನೆಗಲ್ ದೇಶದಲ್ಲಿರೋ ನಿಕೋಲೆ ಅನ್ನೋ ವ್ಯಕ್ತಿ ಏನು ಹೇಳ್ತಾರೆ ನೋಡಿ, “ಖುಷಿಯಾಗಿ ಇರೋಕೆ ನಮ್ಮತ್ರ ತುಂಬ ವಸ್ತುಗಳು ಇರಬೇಕಾಗಿಲ್ಲ. ತೃಪ್ತಿ ಇರಬೇಕು ಅಷ್ಟೇ, ಆಗ ಬೇರೆಯವ್ರ ಹತ್ರ ಅದೆಷ್ಟೇ ವಸ್ತುಗಳಿರಲಿ ನಮ್ಮ ಪಾಡಿಗೆ ನಾವು ಖುಷಿಯಾಗಿರ್ತೀವಿ.”
ಹೀಗೆ ಮಾಡಬೇಡಿ: ಹಣದ ಬಗ್ಗೆ, ದುಬಾರಿ ವಸ್ತುಗಳ ಬಗ್ಗೆ ಮಾತಾಡೋ ಜಾಹೀರಾತುಗಳನ್ನ, ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನ ನೋಡೋಕೆ ಹೋಗಬೇಡಿ.
ಕೃತಜ್ಞತೆ ತೋರಿಸಿ. ಕೃತಜ್ಞತೆ ತೋರಿಸೋ ಜನ ತೃಪ್ತಿಯಿಂದ ಇರ್ತಾರೆ. ಅವರು ‘ನನಗಿನ್ನೂ ಏನೇನು ಬೇಕು’ ಅನ್ನೋದ್ರ ಬಗ್ಗೆನೇ ಮೂರು ಹೊತ್ತು ಯೋಚ್ನೆ ಮಾಡ್ತಿರಲ್ಲ. ಹೈಟಿ ದೇಶದ ರಾಬರ್ಟನ್ ಅನ್ನೋ ವ್ಯಕ್ತಿ ಏನು ಹೇಳ್ತಾರೆ ನೋಡಿ, “ನನಗೆ ಮತ್ತು ನಮ್ಮ ಕುಟುಂಬಕ್ಕೆ ಸಹಾಯ ಮಾಡಿರೋ ಜನ್ರ ಬಗ್ಗೆ, ಅವರು ಮಾಡಿದ ಸಹಾಯದ ಬಗ್ಗೆ ನಾನು ಆಗಾಗ ಯೋಚ್ನೆ ಮಾಡ್ತೀನಿ. ಅವರು ಮಾಡಿದ ಸಹಾಯಕ್ಕೆ ನಾನು ಅವ್ರಿಗೆ ಥ್ಯಾಂಕ್ಸ್ ಹೇಳ್ತೀನಿ. ಅಷ್ಟೇ ಅಲ್ಲ, ನನ್ನ ಎಂಟು ವರ್ಷದ ಮಗನಿಗೆ ಯಾರಾದ್ರೂ ಏನಾದ್ರೂ ಕೊಟ್ರೆ, ‘ಥ್ಯಾಂಕ್ ಯೂ’ ಹೇಳೋದು ಎಷ್ಟು ಮುಖ್ಯ ಅಂತ ಕಲಿಸ್ತಿದ್ದೀನಿ.”
ಹೀಗೆ ಮಾಡಿ ನೋಡಿ: ಒಂದು ಡೈರಿಲಿ ನಿಮಗೆ ಖುಷಿ ಕೊಟ್ಟ ವಿಷ್ಯದ ಬಗ್ಗೆ ಪ್ರತಿದಿನ ಬರೀರಿ. ಉದಾಹರಣೆಗೆ, ನಿಮಗಿರೋ ಒಳ್ಳೆ ಆರೋಗ್ಯದ ಬಗ್ಗೆ, ನಿಮ್ಮ ಸ್ನೇಹಿತರ ಅಥವಾ ನಿಮ್ಮ ಕುಟುಂಬದವ್ರ ಒಳ್ಳೆ ಗುಣಗಳ ಬಗ್ಗೆ ಮತ್ತು ಆ ದಿನ ಸೂರ್ಯ ಮುಳುಗೋ ಸುಂದರ ದೃಶ್ಯನ ನೀವು ನೋಡಿದ್ರ ಬಗ್ಗೆ ಬರೀಬಹುದು. ಈ ತರ ಬರೀತಿದ್ರೆ ನಿಮ್ಮಲ್ಲಿ ಕೃತಜ್ಞತೆ ಅನ್ನೋ ಗುಣ ಹೆಚ್ಚಾಗುತ್ತೆ.
ತೃಪ್ತಿಗೆ ಅತಿಯಾಸೆನೇ ಶತ್ರು! ತೃಪ್ತಿಯಿಂದ ಇರಬೇಕು ಅಂತ ನೀವು ಎಷ್ಟೇ ಅಂದ್ಕೊಂಡ್ರೂ ಈ ಅತಿಯಾಸೆ ಅನ್ನೋದು ಬಿಡಲ್ಲ. ಆದ್ರೆ ನೀವು ತೃಪ್ತಿಯಿಂದ ಇರೋಕೆ ಕಲಿತ್ರೆ, ಸಂತೋಷ ನಿಮ್ಮನ್ನ ಹುಡ್ಕೊಂಡು ಬರುತ್ತೆ. ನೆನಪಿಡಿ, ಹಣದಿಂದ ತಗೊಳೋಕೆ ಆಗದೇ ಇರೋ ಇನ್ನೊಂದು ವಿಷ್ಯ ಸಂತೋಷನೇ.