ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದೇವಜನರ ಪರವಹಿಸಿ ನಿಂತಾಕೆ
    ಅವರ ನಂಬಿಕೆಯನ್ನು ಅನುಕರಿಸಿ
    • ಎಸ್ತೇರ್‌

      ಅಧ್ಯಾಯ ಹದಿನೈದು

      ದೇವಜನರ ಪರವಹಿಸಿ ನಿಂತಾಕೆ

      1-3. (1) ತನ್ನ ಗಂಡನ ಸನ್ನಿಧಿಗೆ ಹೋಗುತ್ತಿದ್ದ ಎಸ್ತೇರಳಿಗೆ ಏಕೆ ಹೆದರಿಕೆ ಆಗುತ್ತಿದ್ದಿರಬಹುದು? (2) ಎಸ್ತೇರಳ ಬಗ್ಗೆ ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

      ಎಸ್ತೇರಳು ಶೂಷನ್‌ನಲ್ಲಿದ್ದ ಅರಮನೆಯ ಪ್ರಾಕಾರದ ಹತ್ತಿರಹತ್ತಿರ ಬರುತ್ತಿದ್ದಳು. ಆಕೆಯ ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಸ್ತಿಮಿತಕ್ಕೆ ತರಲು ಶತಪ್ರಯತ್ನ ಮಾಡಿದರೂ ಆಗುತ್ತಿರಲಿಲ್ಲ. ಆ ಅರಮನೆಯಲ್ಲಿದ್ದ ಪ್ರತಿಯೊಂದನ್ನೂ ಭಯವಿಸ್ಮಯ ಹುಟ್ಟಿಸುವ ರೀತಿಯಲ್ಲಿ ವಿನ್ಯಾಸಿಸಲಾಗಿತ್ತು. ಗೋಡೆಗಳ ಮೇಲೆ ಬಿಲ್ಲುಗಾರರ, ಸಿಂಹಗಳ, ರೆಕ್ಕೆಗಳಿರುವ ಹೋರಿಗಳ ಉಬ್ಬುಚಿತ್ರಣಗಳು. ಅವುಗಳಿಗೆ ಹಾಕಲಾಗಿದ್ದ ಬಣ್ಣಬಣ್ಣದ ಲೇಪ. ಲಂಬವಾಗಿ ಗಾಡಿ ತೋಡಲಾದ ಅರೆಕೊಳವೆ ಆಕಾರದ ದೊಡ್ಡದೊಡ್ಡ ಕಲ್ಲಿನ ಕಂಬಗಳು. ದೈತ್ಯಾಕಾರದ ಪ್ರತಿಮೆಗಳು. ಅಲ್ಲದೆ ಆ ಅರಮನೆ ಇದದ್ದು ಹಿಮಾವೃತ ಸಾಗ್ರಸ್‌ ಪರ್ವತಗಳ ಸಮೀಪವಿದ್ದ ದೊಡ್ಡ ದಿಬ್ಬದ ಮೇಲೆ. ಅಲ್ಲಿಂದ ಕಣ್ಣುಹಾಯಿಸಿದರೆ ಸ್ಫಟಿಕದಷ್ಟು ಸ್ವಚ್ಛ ನೀರು ಹರಿಯುತ್ತಿದ್ದ ಚೋಆಸ್ಪಿಸ್‌ ನದಿಯ ರಮ್ಯ ನೋಟ. ಇದೆಲ್ಲವೂ ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಅಲ್ಲಿನ ರಾಜನ ಪ್ರಚಂಡ ಶಕ್ತಿಯನ್ನು ಸಾರಿಹೇಳುತ್ತಿದ್ದವು. ತನ್ನನ್ನೇ ‘ಮಹಾ ಅರಸ’ ಎಂದು ಕರೆದುಕೊಳ್ಳುತ್ತಿದ್ದ ಆ ರಾಜನನ್ನೇ ಎಸ್ತೇರಳು ಈಗ ಭೇಟಿಮಾಡಲು ಹೋಗುತ್ತಿದ್ದಳು. ಅವನು ಆಕೆಯ ಗಂಡನೂ ಹೌದು.

      2 ನಂಬಿಗಸ್ತಳಾದ ಯೆಹೂದಿ ಹುಡುಗಿಯೊಬ್ಬಳು ಅಪೇಕ್ಷಿಸುವಂಥ ರೀತಿಯ ಗಂಡನಾಗಿರಲಿಲ್ಲ ರಾಜ ಅಹಷ್ವೇರೋಷ.a ಏಕೆಂದರೆ ಅವನಿಗೆ ದೇವರ ನಿರ್ದೇಶನದಂತೆ ನಮ್ರಭಾವದಿಂದ ಪತ್ನಿಯ ಮಾತನ್ನು ಪಾಲಿಸಿದ ಅಬ್ರಹಾಮನಂಥ ದೇವರ ಸೇವಕರು ಆದರ್ಶ ವ್ಯಕ್ತಿಗಳಾಗಿರಲಿಲ್ಲ. (ಆದಿ. 21:12) ಪರ್ಷಿಯದ ರಾಜನಾಗಿದ್ದ ಅವನಿಗೆ ಎಸ್ತೇರಳ ದೇವರಾದ ಯೆಹೋವನ ಬಗ್ಗೆ, ಆತನ ನಿಯಮಗಳ ಬಗ್ಗೆ ಏನೂ ತಿಳಿದಿರಲಿಲ್ಲ. ತಿಳಿದಿದ್ದರೂ ಅಷ್ಟಿಷ್ಟು ಮಾತ್ರ. ಪರ್ಷಿಯದ ಕಾನೂನಂತೂ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅದರಲ್ಲಿದ್ದ ಒಂದು ನಿಯಮವನ್ನೇ ಎಸ್ತೇರಳು ಈಗ ಉಲ್ಲಂಘಿಸುತ್ತಿದ್ದಳು. ಅದೇನು? ರಾಜನ ಅಪ್ಪಣೆಯಿಲ್ಲದೆ ಯಾರೂ ಅವನ ಸನ್ನಿಧಿಗೆ ಬರಬಾರದಿತ್ತು. ಹಾಗೆ ಬಂದರೆ ಮರಣ ದಂಡನೆಯಾಗಬೇಕೆಂಬ ನಿಯಮವಿತ್ತು. ಆದರೆ ಎಸ್ತೇರಳು ಈಗ ರಾಜನ ಸನ್ನಿಧಿಗೆ ಬರಲು ಅಪ್ಪಣೆ ಇಲ್ಲದಿದ್ದರೂ ಅಲ್ಲಿಗೆ ಹೋಗುತ್ತಾ ಇದ್ದಳು. ಒಳಗಣ ಪ್ರಾಕಾರದೆಡೆಗೆ ಹೆಜ್ಜೆಯಿಡುತ್ತಿದ್ದಂತೆ ತಾನೀಗ ಸಾವಿನ ಬಾಗಿಲು ತಟ್ಟಲು ಹೋಗುತ್ತಿದ್ದೇನೆಂದು ಆಕೆಗೆ ಅನಿಸಿರಬೇಕು. ಆಕೆ ಸಿಂಹಾಸನದ ಮೇಲೆ ಕೂತಿದ್ದ ರಾಜನ ಕಣ್ಣಿಗೆ ಬೀಳಲಿದ್ದಳು.—ಎಸ್ತೇರಳು 4:11; 5:1 ಓದಿ.

      3 ಎಸ್ತೇರಳು ಇಷ್ಟೊಂದು ದೊಡ್ಡ ಅಪಾಯಕ್ಕೆ ಏಕೆ ತಲೆಯೊಡ್ಡಿದಳು? ಗುಣಸಂಪನ್ನೆಯಾದ ಈಕೆಯ ನಂಬಿಕೆಯಿಂದ ನಾವೇನು ಕಲಿಯಬಹುದು? ಇದಕ್ಕಿಂತ ಮೊದಲು ಏಳುವ ಪ್ರಶ್ನೆ, ಯೆಹೂದ್ಯಳಾಗಿದ್ದ ಆಕೆ ಪರ್ಷಿಯದ ರಾಣಿಯಾದದ್ದು ಹೇಗೆ? ಉತ್ತರ ತಿಳಿಯೋಣ.

      ಎಸ್ತೇರಳ ಹಿನ್ನೆಲೆ

      4. (1) ಎಸ್ತೇರಳ ಹಿನ್ನಲೆ ಏನು? (2) ಅವಳು ಮೊರ್ದೆಕೈ ಮನೆಯಲ್ಲಿ ವಾಸಿಸಲು ಕಾರಣವೇನು?

      4 ಎಸ್ತೇರ್‌ ಅಪ್ಪಅಮ್ಮ ಇಲ್ಲದ ತಬ್ಬಲಿ. ಅವಳ ಹೆತ್ತವರ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇಲ್ಲ. ಆಕೆಗೆ ‘ಹದೆಸ್ಸಾ’ ಎಂದು ಹೆಸರಿಟ್ಟವರು ಅವರೇ. ಇದು ಬಿಳಿಹೂವು ಬಿಡುವ ಸುಂದರ ಪೊದೆಗಿಡವಾದ ‘ಮರ್ಟಲ್‌’ಗಿರುವ ಹೀಬ್ರು ಪದ. ಎಸ್ತೇರಳ ತಂದೆತಾಯಿ ತೀರಿಹೋದಾಗ ಆಕೆಯ ದೊಡ್ಡಪ್ಪನ ಮಗನಾದ ಮೊರ್ದೆಕೈ ಆಕೆಯನ್ನು ಪರಾಮರಿಸುವ ಜವಾಬ್ದಾರಿ ಹೊತ್ತುಕೊಂಡನು. ವಯಸ್ಸಿನಲ್ಲಿ ಆಕೆಗಿಂತ ಎಷ್ಟೋ ಹಿರಿಯವನಾಗಿದ್ದನು. ದಯಾಪರನಾಗಿದ್ದ ಅವನು ಎಸ್ತೇರಳನ್ನು ತನ್ನ ಮನೆಗೆ ಕರೆತಂದು ಮಗಳಂತೆ ಸಾಕಿದನು.—ಎಸ್ತೇ. 2:5-7, 15.

      ಎಸ್ತೇರಳು ಮೊರ್ದೆಕೈಗೆ ಮನೆಯಲ್ಲಿ ಊಟ ಬಡಿಸುತ್ತಿದ್ದಾಳೆ

      ದತ್ತುಪುತ್ರಿಯ ಬಗ್ಗೆ ಹೆಮ್ಮೆಪಡಲು ಮೊರ್ದೆಕೈಗೆ ಕಾರಣವಿತ್ತು

      5, 6. (1) ಮೊರ್ದೆಕೈ ಎಸ್ತೇರಳನ್ನು ಹೇಗೆ ಬೆಳೆಸಿದನು? (2) ಶೂಷನ್‌ನಲ್ಲಿ ಎಸ್ತೇರ್‌ ಮತ್ತು ಮೊರ್ದೆಕೈಯ ಜೀವನ ಹೇಗಿತ್ತು?

      5 ಮೊರ್ದೆಕೈ ಮತ್ತು ಎಸ್ತೇರಳು ಪರ್ಷಿಯದ ರಾಜಧಾನಿ ಶೂಷನ್‌ನಲ್ಲಿ ಸೆರೆಯಾಳುಗಳಾಗಿ ವಾಸಿಸುತ್ತಿದ್ದರು. ಅವರು ಯೆಹೂದ್ಯರಾಗಿದ್ದ ಕಾರಣ, ದೇವರ ನಿಯಮಗಳನ್ನು ಪಾಲಿಸುತ್ತಿದ್ದ ಕಾರಣ ಅಲ್ಲಿನವರ ಪೂರ್ವಗ್ರಹಕ್ಕೆ ತುತ್ತಾಗಿರಬಹುದು. ಎಸ್ತೇರಳು ಮೊರ್ದೆಕೈಗೆ ಆಪ್ತಳಾಗಿದ್ದಳು. ಅವನು ಆಕೆಗೆ ಯೆಹೋವನು ಒಬ್ಬ ಕರುಣಾಳು ದೇವರು, ಹಿಂದೆ ತನ್ನ ಜನರನ್ನು ಎಷ್ಟೋ ಸಲ ಕಷ್ಟದಿಂದ ಪಾರುಮಾಡಿದ್ದಾನೆ, ಅದೇ ರೀತಿ ಪುನಃ ಪಾರುಮಾಡುವನೆಂದು ಕಲಿಸಿದನು. (ಯಾಜ. 26:44, 45) ಹೌದು, ಅವರಿಬ್ಬರ ಮಧ್ಯೆ ಪ್ರೀತಿತುಂಬಿದ, ನಿಷ್ಠಾವಂತ ಬಂಧ ಬೆಳೆಯಿತು.

      6 ಶೂಷನ್‌ ಕೋಟೆಯಲ್ಲಿ ಮೊರ್ದೆಕೈ ಒಬ್ಬ ಅಧಿಕಾರಿಯಾಗಿ ಕೆಲಸಮಾಡುತ್ತಿದ್ದಿರಬೇಕು. ಹಾಗಾಗಿ ರಾಜನ ಇತರ ಸೇವಕರೊಂದಿಗೆ ಅರಮನೆಯ ಹೆಬ್ಬಾಗಿಲಲ್ಲಿ ಇರುತ್ತಿದ್ದನು. (ಎಸ್ತೇ. 2:19, 21; 3:3) ಎಸ್ತೇರಳು ಬೆಳೆಯುತ್ತಾ ಹೋದಂತೆ ಮನೆಯಲ್ಲಿ ಹೇಗೆ ಸಮಯ ಕಳೆದಳೆಂಬದರ ಬಗ್ಗೆ ನಾವು ಊಹಿಸಬಹುದಷ್ಟೆ. ಆಕೆ ಮನೆಯನ್ನು ಅಚ್ಚುಕಟ್ಟಾಗಿಟ್ಟು ಅಡಿಗೆ ಇತ್ಯಾದಿ ಕೆಲಸಗಳನ್ನು ಮಾಡುತ್ತಾ ವಯಸ್ಸಾದ ಮೊರ್ದೆಕೈಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಿರಬಹುದು. ಬಹುಶಃ ಅವರ ಚಿಕ್ಕ ಮನೆ ಭವ್ಯ ಅರಮನೆಯ ಸಮೀಪವಿದ್ದ ನದಿಯಾಚೆ ಇತ್ತು. ಎಸ್ತೇರ್‌ ಶೂಷನ್‌ನಲ್ಲಿದ್ದ ಮಾರುಕಟ್ಟೆಗಳಿಗೂ ಹೋಗಿಬರುತ್ತಿದ್ದಿರಬೇಕು. ಅಲ್ಲಿ ಚಿನ್ನ-ಬೆಳ್ಳಿಯ ಅಕ್ಕಸಾಲಿಗರು ಮತ್ತಿತ್ತರ ವ್ಯಾಪಾರಿಗಳು ಪ್ರದರ್ಶನಕ್ಕಿಡುತ್ತಿದ್ದ ಮಾರಾಟದ ವಸ್ತುಗಳನ್ನು ಎಸ್ತೇರ್‌ ನೋಡಿರಬಹುದು. ಇಂಥೆಲ್ಲ ದುಬಾರಿ ವಸ್ತುಗಳು ಮುಂದೊಂದು ದಿನ ತನಗೆ ದಿನಬಳಕೆಯ ಸಾಮಾನ್ಯ ವಸ್ತುಗಳಾಗುವವೆಂದು ಆಕೆ ಕನಸುಮನಸ್ಸಲ್ಲೂ ನೆನಸಿರಲಿಕ್ಕಿಲ್ಲ. ತನ್ನ ಭವಿಷ್ಯದ ಬಗ್ಗೆ ಅವಳಿಗೆ ಕಿಂಚಿತ್ತೂ ಸುಳಿವಿರಲಿಲ್ಲ.

      “ಲಾವಣ್ಯವತಿ”

      7. (1) ವಷ್ಟಿಯನ್ನು ರಾಣಿ ಪಟ್ಟದಿಂದ ಏಕೆ ತೆಗೆಯಲಾಯಿತು? (2) ಅನಂತರ ಏನಾಯಿತು?

      7 ಒಂದು ದಿನ ರಾಜನ ಮನೆಯಲ್ಲಿ ನಡೆದ ಘಟನೆಯೊಂದು ಇಡೀ ಶೂಷನ್‌ನಲ್ಲಿ ಗುಲ್ಲೆಬ್ಬಿಸಿತು. ನಡೆದದ್ದೇನೆಂದರೆ ರಾಜ ಅಹಷ್ವೇರೋಷನು ತನ್ನ ಆಸ್ಥಾನದಲ್ಲಿದ್ದವರಿಗೆಲ್ಲ ಒಂದು ದೊಡ್ಡ ಔತಣ ಮಾಡಿಸಿ ಎಲ್ಲರಿಗೂ ಮದ್ಯ, ಭರ್ಜರಿ ಭೋಜನವನ್ನು ಏರ್ಪಡಿಸಿದ್ದನು. ಆ ಸಂತೋಷದ ಸಂದರ್ಭದಲ್ಲಿ ರಾಜ ಬಹುಸುಂದರಿಯಾದ ತನ್ನ ರಾಣಿ ವಷ್ಟಿಯನ್ನು ಕರೆಕಳುಹಿಸಿದನು. ಹೆಂಗಸರೊಂದಿಗೆ ಒಂದು ಪ್ರತ್ಯೇಕ ಔತಣದಲ್ಲಿದ್ದ ಆಕೆ ರಾಜನ ಮಾತನ್ನು ಪಾಲಿಸಲಿಲ್ಲ. ಇದರಿಂದ ಅವಮಾನಗೊಂಡು ಕ್ರೋಧಿತನಾದ ರಾಜನು ವಷ್ಟಿಗೆ ಯಾವ ಶಿಕ್ಷೆ ಕೊಡಬೇಕೆಂದು ತನ್ನ ಸಮಾಲೋಚಕರನ್ನು ಕೇಳಿದ. ಅವರ ಸಲಹೆಯಂತೆ ವಷ್ಟಿಯನ್ನು ರಾಣಿ ಪಟ್ಟದಿಂದ ತೆಗೆದುಹಾಕಲಾಯಿತು. ಹಾಗಾಗಿ ರಾಜನು ಹೊಸ ರಾಣಿಯನ್ನು ಆಯ್ಕೆ ಮಾಡಲು ಸಾಧ್ಯವಾಗುವಂತೆ ಅವನ ಸೇವಕರು ಸುಂದರಿಯರಾದ ಯುವ ಕನ್ಯೆಯರಿಗಾಗಿ ಇಡೀ ದೇಶದಲ್ಲಿ ಶೋಧ ಆರಂಭಿಸಿದರು.—ಎಸ್ತೇ. 1:1–2:4.

      8. (1) ಯುವತಿ ಎಸ್ತೇರಳ ಬಗ್ಗೆ ಮೊರ್ದೆಕೈಗೆ ಏಕೆ ಸ್ವಲ್ಪ ಚಿಂತೆ ಆಗಿರಬೇಕು? (2) ಸೌಂದರ್ಯದ ಬಗ್ಗೆ ಬೈಬಲಿನ ನೋಟವನ್ನು ನಾವು ಹೇಗೆ ಅನ್ವಯಿಸಬಹುದೆಂದು ನೆನಸುತ್ತೀರಿ? (ಜ್ಞಾನೋಕ್ತಿ 31:30 ಸಹ ನೋಡಿ.)

      8 ಪುಟ್ಟ ಎಸ್ತೇರಳು ಸುಂದರ ಯುವತಿಯಾಗಿ ಬೆಳೆದುನಿಂತಿದ್ದಳು. ಬೈಬಲ್‌ ಹೇಳುವಂತೆ ಆಕೆ “ರೂಪವತಿಯೂ ಲಾವಣ್ಯವತಿಯೂ ಆಗಿದ್ದಳು.” (ಎಸ್ತೇ. 2:7) ಇದರಿಂದ ಮೊರ್ದೆಕೈಗೆ ಹೆಮ್ಮೆ ಅನಿಸಿರಬೇಕು, ಚಿಂತೆಯೂ ಆಗಿರಬಹುದು. ಸೌಂದರ್ಯವಿದ್ದರಷ್ಟೇ ಸಾಲದು, ಜೊತೆಗೆ ವಿವೇಕ ಮತ್ತು ದೀನಭಾವವೂ ಇರಬೇಕೆಂದು ಬೈಬಲು ತೋರಿಸುತ್ತದೆ. ಇವಿಲ್ಲದಿದ್ದರೆ ಸೌಂದರ್ಯದಿಂದಾಗಿ ಒಬ್ಬರಲ್ಲಿ ಒಣಹೆಮ್ಮೆ, ಗರ್ವ ಮತ್ತಿತರ ದುರ್ಗುಣಗಳು ಮೊಳಕೆಯೊಡೆಯಬಹುದು. (ಜ್ಞಾನೋಕ್ತಿ 11:22 ಓದಿ.) ಈ ಮಾತಿನ ಸತ್ಯತೆಯನ್ನು ಕಣ್ಣಾರೆ ನೋಡಿದ್ದೀರೊ? ಆದರೆ ಎಸ್ತೇರಳ ವಿಷಯದಲ್ಲೇನು? ಅವಳ ಸೌಂದರ್ಯದಿಂದ ಅವಳು ಉಬ್ಬಿಹೋದಳಾ? ಅಥವಾ ತಗ್ಗಿಬಗ್ಗಿ ನಡೆದಳಾ? ಸಮಯ ಉತ್ತರ ಕೊಡಲಿತ್ತು.

      9. (1) ಎಸ್ತೇರಳು ರಾಜನ ಸೇವಕರ ಕಣ್ಣಿಗೆ ಬಿದ್ದಾಗ ಏನಾಯಿತು? (2) ಮೊರ್ದೆಕೈ ಮತ್ತು ಎಸ್ತೇರಳ ಅಗಲಿಕೆ ಅವರಿಬ್ಬರಿಗೂ ಏಕೆ ತುಂಬ ನೋವು ತಂದಿರಬೇಕು? (3) ಎಸ್ತೇರಳು ಅವಿಶ್ವಾಸಿಯೊಬ್ಬನನ್ನು ಮದುವೆಯಾಗಲು ಮೊರ್ದೆಕೈ ಬಿಟ್ಟದ್ದೇಕೆ? (ಚೌಕವನ್ನು ಸೇರಿಸಿ.)

      9 ರಾಜನ ಸೇವಕರು ಸುಂದರ ಕನ್ಯೆಯರಿಗಾಗಿ ಹುಡುಕುತ್ತಿದ್ದಾಗ ಎಸ್ತೇರಳು ಅವರ ಕಣ್ಣಿಗೆ ಬಿದ್ದಳು. ಬೇರೆ ಹುಡುಗಿಯರ ಸಮೇತ ಅವಳನ್ನೂ ನದಿಯಾಚೆ ಇದ್ದ ಭವ್ಯ ಅರಮನೆಗೆ ಕೊಂಡೊಯ್ದರು. ಮೊರ್ದೆಕೈಯಿಂದ ಆಕೆಯನ್ನು ದೂರಮಾಡಿದರು. (ಎಸ್ತೇ. 2:8) ತಂದೆಮಗಳಂತಿದ್ದ ಅವರಿಬ್ಬರಿಗೆ ಈ ಅಗಲಿಕೆಯಿಂದ ತುಂಬ ನೋವಾಗಿರಬೇಕು. ತನ್ನ ದತ್ತುಪುತ್ರಿ ಒಬ್ಬ ಅವಿಶ್ವಾಸಿಯನ್ನು, ಅವನು ರಾಜನಾಗಿದ್ದರೂ ಸರಿ ಮದುವೆಯಾಗುವುದು ಮೊರ್ದೆಕೈಗೆ ಸ್ವಲ್ಪವೂ ಇಷ್ಟವಿದ್ದಿರಲಿಕ್ಕಿಲ್ಲ. ಆದರೆ ಇದನ್ನು ತಡೆಯುವುದು ಅವನಿಂದ ಸಾಧ್ಯವಿಲ್ಲದ ವಿಷಯವಾಗಿತ್ತು.b ಎಸ್ತೇರಳು ಹೋಗುವ ಮುಂಚೆ ಮೊರ್ದೆಕೈ ಹೇಳಿದ ಬುದ್ಧಿಮಾತುಗಳನ್ನು ಗಮನಕೊಟ್ಟು ಆಲಿಸಿರಬೇಕು. ಆ ಸೇವಕರು ಅವಳನ್ನು ಶೂಷನ್‌ ಕೋಟೆಗೆ ಕರೆತರುತ್ತಿದ್ದಾಗ ಅವಳ ತಲೆಯಲ್ಲಿ ನೂರೆಂಟು ಪ್ರಶ್ನೆಗಳೆದ್ದಿರಬಹುದು. ಅಲ್ಲಿ ಅವಳ ಜೀವನ ಹೇಗಿರಲಿತ್ತು?

      “ನೋಡುವವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು”

      10, 11. (1) ಹೊಸ ಪರಿಸರ ಎಸ್ತೇರಳ ಮೇಲೆ ಯಾವ ಪರಿಣಾಮಬೀರುವ ಸಾಧ್ಯತೆಯಿತ್ತು? (2) ಎಸ್ತೇರಳ ಯೋಗಕ್ಷೇಮದ ಬಗ್ಗೆ ಮೊರ್ದೆಕೈಗೆ ಚಿಂತೆಯಿತ್ತೆಂದು ಹೇಗೆ ಗೊತ್ತಾಗುತ್ತದೆ?

      10 ಎಸ್ತೇರಳು ಹಿಂದೆಂದೂ ಕಂಡಿರದ ಹೊಸದೊಂದು ಪ್ರಪಂಚಕ್ಕೆ ಈಗ ಕಾಲಿಟ್ಟಿದ್ದಳು. ಪರ್ಷಿಯದ ಸಾಮ್ರಾಜ್ಯದ ಎಲ್ಲೆಡೆಯಿಂದಲೂ ಒಟ್ಟುಗೂಡಿಸಲಾಗಿದ್ದ “ಅನೇಕಾನೇಕ ಕನ್ಯೆಯರ” ಮಧ್ಯೆಯಿದ್ದಳು. ಅವರ ಪದ್ಧತಿಗಳು, ಭಾಷೆಗಳು, ಮನೋಭಾವಗಳು ಭಿನ್ನಭಿನ್ನವಾಗಿದ್ದವು. ಅವರೆಲ್ಲರನ್ನೂ ಹೇಗೈ ಎಂಬ ಅಧಿಕಾರಿಯ ಸುಪರ್ದಿಗೆ ವಹಿಸಲಾಗಿತ್ತು. ಈ ಯುವ ಸ್ತ್ರೀಯರಿಗೆ ಸೌಂದರ್ಯ ಚಿಕಿತ್ಸೆಯನ್ನು ಕೊಡಲಾಯಿತು. ಒಂದು ವರ್ಷದ ಮಟ್ಟಿಗಿನ ಈ ಚಿಕಿತ್ಸೆಯಲ್ಲಿ ಸುಗಂಧಭರಿತ ತೈಲಗಳಿಂದ ಅಂಗಮರ್ದನವೂ ಇತ್ತು. (ಎಸ್ತೇ. 2:8, 12) ಇಂಥ ಪರಿಸರ, ಜೀವನಶೈಲಿಯಿಂದಾಗಿ ಅಲ್ಲಿದ್ದ ಯುವ ಸ್ತ್ರೀಯರಲ್ಲಿ ರೂಪಲಾವಣ್ಯದ ಬಗ್ಗೆ ಗೀಳು, ಅಹಂಕಾರ ಹುಟ್ಟಿರಬಹುದು. ಪೈಪೋಟಿಯೂ ಶುರುವಾಗಿರಬಹುದು. ಇದೆಲ್ಲವೂ ಎಸ್ತೇರಳ ಮೇಲೆ ಯಾವ ಪರಿಣಾಮ ಬೀರಿತು?

      11 ಎಸ್ತೇರಳ ಬಗ್ಗೆ ಮೊರ್ದೆಕೈಗಿದ್ದಷ್ಟು ಚಿಂತೆ ಬೇರಾರಿಗೂ ಇದ್ದಿರಲಿಕ್ಕಿಲ್ಲ. ಅವನು ಪ್ರತಿದಿನವೂ ಅಂತಃಪುರದ ಪ್ರಾಕಾರದ ಹತ್ತಿರ ಹೋಗಿ, ಎಸ್ತೇರಳ ಯೋಗಕ್ಷೇಮ ವಿಚಾರಿಸಲು ಪ್ರಯತ್ನಿಸುತ್ತಿದ್ದನೆಂದು ಬೈಬಲ್‌ ಹೇಳುತ್ತದೆ. (ಎಸ್ತೇ. 2:11) ಅವನಿಗೆ ಸ್ವಲ್ಪ ಸಹಾಯಮಾಡಲೆಂದು ಬಹುಶಃ ಅಲ್ಲಿನ ಕೆಲವು ಸೇವಕರು ಒಂದಿಷ್ಟು ಸುದ್ದಿ ಕೊಡುತ್ತಿದ್ದರು. ಆಗ ಅವನಿಗೆ ಎಸ್ತೇರಳ ಬಗ್ಗೆ ತುಂಬ ಹೆಮ್ಮೆ ಅನಿಸಿರಬಹುದು. ಏಕೆ?

      12, 13. (1) ಎಸ್ತೇರಳ ಬಗ್ಗೆ ಅಲ್ಲಿದ್ದವರಿಗೆ ಏನನಿಸುತ್ತಿತ್ತು? (2) ಎಸ್ತೇರಳು ತಾನು ಯೆಹೂದ್ಯಳು ಎನ್ನುವುದನ್ನು ಯಾರಿಗೂ ಹೇಳಿಲ್ಲವೆಂದು ತಿಳಿದು ಮೊರ್ದೆಕೈಗೆ ಏಕೆ ಖುಷಿಯಾಗಿರಬೇಕು?

      12 ಎಸ್ತೇರಳ ನಡತೆ ನೋಡಿ ಹೇಗೈ ಪ್ರಭಾವಿತನಾಗಿದ್ದನು. ಅವಳಿಗೆ ತುಂಬ ದಯೆ ತೋರಿಸಿದ್ದನು. ಎಸ್ತೇರಳ ಸೇವೆಗೆಂದು ಏಳು ಮಂದಿ ಸೇವಕಿಯರನ್ನು ನೇಮಿಸಿ ಆಕೆಯನ್ನು ಅಂತಃಪುರದ ಉತ್ತಮ ಭಾಗದಲ್ಲಿರಿಸಿದ್ದನು. “ನೋಡುವವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು” ಎಂದು ವೃತ್ತಾಂತ ಹೇಳುತ್ತದೆ. (ಎಸ್ತೇ. 2:9, 15) ಎಲ್ಲರೂ ಬರೀ ಸೌಂದರ್ಯ ನೋಡಿ ಅವಳನ್ನು ಮೆಚ್ಚಿದ್ದರೊ? ಇಲ್ಲ. ಅವಳಲ್ಲಿ ಅದಕ್ಕಿಂತಲೂ ಶ್ರೇಷ್ಠವಾದ ಗುಣಗಳಿದ್ದವು.

      ಬೇರೆಲ್ಲ ಯುವತಿಯರು ತಮ್ಮನ್ನು ಅಲಂಕರಿಸಿಕೊಳ್ಳುತ್ತಿರುವಾಗ ಎಸ್ತೇರಳ ಗಮನವಾದರೋ ಪ್ರಕೃತಿಯ ಮೇಲಿದೆ

      ರೂಪಲಾವಣ್ಯಕ್ಕಿಂತ ದೀನತೆ, ವಿವೇಕ ಹೆಚ್ಚು ಪ್ರಾಮುಖ್ಯವೆಂದು ಎಸ್ತೇರಳಿಗೆ ಗೊತ್ತಿತ್ತು

      13 ಇದಕ್ಕೊಂದು ಉದಾಹರಣೆ ನೋಡೋಣ. “ಎಸ್ತೇರಳು ತಾನು ಇಂಥ ಜನಾಂಗದವಳು, ಇಂಥ ಕುಲದವಳು ಎಂಬದನ್ನು ತೋರ್ಪಡಿಸಿಕೊಳ್ಳಲಿಲ್ಲ; ಮೊರ್ದೆಕೈಯು ಹೀಗೆ ಅಪ್ಪಣೆಕೊಟ್ಟಿದ್ದನು” ಎಂದು ಬೈಬಲ್‌ ಹೇಳುತ್ತದೆ. (ಎಸ್ತೇ. 2:10) ತಾನು ಯೆಹೂದ್ಯಳು ಎಂಬದನ್ನು ಯಾರಿಗೂ ಹೇಳಬಾರದೆಂದು ಮೊರ್ದೆಕೈ ಎಸ್ತೇರಳಿಗೆ ತಿಳಿಸಿದ್ದ. ಏಕೆಂದರೆ ಪರ್ಷಿಯದ ರಾಜಕುಟುಂಬದಲ್ಲಿ ಯೆಹೂದ್ಯರ ಬಗ್ಗೆ ಪೂರ್ವಗ್ರಹವಿತ್ತೆಂದು ಅವನಿಗೆ ಗೊತ್ತಿತ್ತು. ಈಗ ಎಸ್ತೇರಳು ತನ್ನಿಂದ ದೂರವಿದ್ದರೂ, ತಾನು ಹೇಳಿದ ಮಾತನ್ನು ಪಾಲಿಸುತ್ತಾ ವಿಧೇಯತೆ, ವಿವೇಚನೆ ತೋರಿಸುತ್ತಿದ್ದಾಳೆಂದು ತಿಳಿದು ಅವನಿಗೆಷ್ಟೊಂದು ಖುಷಿ ಆಗಿರಬೇಕು!

      14. ಇಂದು ಯುವಜನರು ಹೇಗೆ ಎಸ್ತೇರಳ ಮಾದರಿಯನ್ನು ಅನುಕರಿಸಬಲ್ಲರು?

      14 ಇಂದು ಸಹ ಯುವ ಜನರು ಎಸ್ತೇರಳಂತೆ ತಮ್ಮ ಪೋಷಕರಿಗೆ ಅಥವಾ ಹೆತ್ತವರಿಗೆ ಸಂತೋಷ ತರಬಹುದು. ಹೆತ್ತವರು ತಮ್ಮ ಕಣ್ಮುಂದೆ ಇಲ್ಲದಿರುವಾಗಲೂ ದುಷ್ಪ್ರಭಾವವನ್ನು ಪ್ರತಿರೋಧಿಸಬೇಕು, ತಾವು ಕಲಿತಿರುವ ನೀತಿಯುತ ಮಟ್ಟಗಳಿಗೆ ಅಂಟಿಕೊಳ್ಳಬೇಕು. ಅನೈತಿಕ, ಕ್ರೂರ, ಎಲ್ಲವನ್ನೂ ಹಗುರವಾಗಿ ತಕ್ಕೊಳ್ಳುವ ಜನರ ಮಧ್ಯೆ ಇರುವಾಗಲೂ ಅದನ್ನು ಮಾಡಬೇಕು. ಆಗ ಯುವಜನರು ತಮ್ಮ ತಂದೆಯಾದ ಯೆಹೋವನಿಗೂ ಹರ್ಷ ತರುತ್ತಾರೆ.—ಜ್ಞಾನೋಕ್ತಿ 27:11 ಓದಿ.

      15, 16. (1) ಎಸ್ತೇರಳು ರಾಜನ ಮೆಚ್ಚಿಕೆ ಗಳಿಸಿದ್ದು ಹೇಗೆ? (2) ತನ್ನ ಬದುಕಿನಲ್ಲಾದ ಬದಲಾವಣೆಗಳಿಗೆ ಹೊಂದಿಕೊಳ್ಳಲು ಎಸ್ತೇರಳಿಗೆ ಏಕೆ ಕಷ್ಟವಾಗಿರಬಹುದು?

      15 ಈಗ ಎಸ್ತೇರಳನ್ನು ರಾಜನ ಮುಂದೆ ನಿಲ್ಲಿಸುವ ಸಮಯ ಬಂತು. ಅಲ್ಲಿಗೆ ಹೋಗುವ ಮುಂಚೆ, ಇನ್ನಷ್ಟು ಸುಂದರ ಕಾಣಲಿಕ್ಕಾಗಿ ಅವಳಿಗೆ ಏನು ಬೇಕೊ ಆ ಶೃಂಗಾರಸಾಮಗ್ರಿಗಳನ್ನು ಆಯ್ಕೆಮಾಡುವ ಅವಕಾಶ ಕೊಡಲಾಯಿತು. ಆದರೆ ವಿನಮ್ರಳಾದ ಎಸ್ತೇರಳು ತನಗೆ ಹೇಗೈ ಏನನ್ನು ಹೇಳಿದ್ದನೊ ಅದನ್ನು ಬಿಟ್ಟು ಬೇರೇನನ್ನೂ ಕೇಳಲಿಲ್ಲ. (ಎಸ್ತೇ. 2:15) ರಾಜ ಮೆಚ್ಚುವುದು ಬರೀ ಸೌಂದರ್ಯವೊಂದನ್ನೇ ಅಲ್ಲ. ಆಸ್ಥಾನದಲ್ಲಿ ತುಂಬ ವಿರಳವಾಗಿದ್ದ ವಿನಮ್ರತೆ, ದೀನತೆಯೂ ಇರುವಂತೆ ಬಯಸುತ್ತಾನೆಂದು ಬಹುಶಃ ಆಕೆ ಅರಿತಿದ್ದಳು. ಅವಳೆಣಿಕೆ ಸರಿಯಾಗಿತ್ತೇ?

      16 ವೃತ್ತಾಂತ ನಮಗೆ ಉತ್ತರಕೊಡುತ್ತದೆ. ‘ಅರಸನು ಎಲ್ಲಾ ಸ್ತ್ರೀಯರಲ್ಲಿ ಎಸ್ತೇರಳನ್ನು ಮೆಚ್ಚಿದನು. ಎಲ್ಲಾ ಕನ್ಯೆಯರಲ್ಲಿ ಆಕೆಯು ಅವನ ದಯೆಗೂ ಪ್ರೀತಿಗೂ ಪಾತ್ರಳಾದದರಿಂದ ಅವನು ರಾಜಮುಕುಟವನ್ನು ಆಕೆಯ ತಲೆಯ ಮೇಲಿಟ್ಟು ಆಕೆಯನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಮಾಡಿಕೊಂಡನು.’ (ಎಸ್ತೇ. 2:17) ತನ್ನ ಜೀವನದಲ್ಲಾದ ಈ ದೊಡ್ಡ ಬದಲಾವಣೆಗೆ ಹೊಂದಿಕೊಳ್ಳಲು ಎಸ್ತೇರಳಿಗೆ ಸುಲಭವಾಗಿರಲಿಕ್ಕಿಲ್ಲ. ವಿನೀತಳಾದ ಈ ಯೆಹೂದಿ ಹುಡುಗಿ ಆ ಕಾಲದ ಅತ್ಯಂತ ಶಕ್ತಿಶಾಲಿ ಸಾಮ್ರಾಟನ ಪತ್ನಿಯಾದಳು, ಆ ರಾಜ್ಯದ ಹೊಸ ಪಟ್ಟದರಸಿ ಆದಳು! ತನಗೆ ಈ ಸ್ಥಾನ ಸಿಕ್ಕಿದೆ ಅಂತ ಅವಳಿಗೆ ಕೊಂಬು ಬಂತೇ, ಅಹಂಕಾರಿಯಾದಳೇ? ಖಂಡಿತ ಇಲ್ಲ!

      17. (1) ಎಸ್ತೇರಳು ರಾಣಿಯಾದ ಮೇಲೂ ತನ್ನ ದತ್ತುತಂದೆಗೆ ವಿಧೇಯತೆ ತೋರಿಸುತ್ತಿದ್ದಳೆಂದು ಹೇಗೆ ಗೊತ್ತಾಗುತ್ತದೆ? (2) ಎಸ್ತೇರಳ ಮಾದರಿ ನಮಗಿಂದು ಏಕೆ ಮಹತ್ವದ್ದು?

      17 ದತ್ತುತಂದೆಯಾದ ಮೊರ್ದೆಕೈಗೆ ಆಗಲೂ ಆಕೆ ವಿಧೇಯತೆ ತೋರಿಸುವುದನ್ನು ಮುಂದುವರಿಸಿದಳು. ಆದ್ದರಿಂದ ಯೆಹೂದಿ ಜನರಿಗೂ ತನಗೂ ಇದ್ದ ನಂಟಿನ ಬಗ್ಗೆ ಆಕೆ ಬಾಯಿಬಿಡಲಿಲ್ಲ. ಅಲ್ಲದೆ, ಅಹಷ್ವೇರೋಷನ ಹತ್ಯೆಯ ಸಂಚಿನ ಬಗ್ಗೆ ಮೊರ್ದೆಕೈ ಎಸ್ತೇರಳಿಗೆ ತಿಳಿಸಿದಾಗ ಆಕೆ ವಿಧೇಯತೆಯಿಂದ ಈ ಸುದ್ದಿಯನ್ನು ರಾಜನಿಗೆ ಮುಟ್ಟಿಸಿ ಆ ಸಂಚುಗಾರರನ್ನು ಬಯಲಿಗೆಳೆದಳು. (ಎಸ್ತೇ. 2:20-23) ದೀನಳೂ ವಿಧೇಯಳೂ ಆಗಿರುವ ಮೂಲಕ ತನ್ನ ದೇವರಲ್ಲಿಟ್ಟಿದ್ದ ನಂಬಿಕೆಯನ್ನು ಸಹ ತೋರಿಸಿದಳು. ನಮಗಿಂದು ಎಸ್ತೇರಳ ಮಾದರಿ ತುಂಬ ಸಹಾಯಕಾರಿ. ಏಕೆಂದರೆ ವಿಧೇಯತೆ ವಿರಳವಾಗಿರುವ ಇಂದಿನ ಲೋಕದಲ್ಲಿ ಅವಿಧೇಯತೆ, ದಂಗೆಗಳೇ ರಾರಾಜಿಸುತ್ತಿವೆ! ಆದರೆ ನಿಜ ನಂಬಿಕೆಯುಳ್ಳ ಜನರು ಎಸ್ತೇರಳಂತೆ ವಿಧೇಯತೆಗೆ ತುಂಬ ಮಹತ್ವ ಕೊಡುತ್ತಾರೆ.

      ಎಸ್ತೇರಳ ನಂಬಿಕೆ ಪರೀಕ್ಷೆಗೊಳಗಾಯಿತು

      18. (1) ಮೊರ್ದೆಕೈ ಹಾಮಾನನಿಗೆ ಬಗ್ಗಿ ನಮಸ್ಕರಿಸದಿರಲು ಕಾರಣ ಏನಾಗಿರಬಹುದು? (ಪಾದಟಿಪ್ಪಣಿ ಸಹ ನೋಡಿ.) (2) ಇಂದು ನಂಬಿಗಸ್ತ ಸ್ತ್ರೀಪುರುಷರು ಮೊರ್ದೆಕೈಯ ಮಾದರಿಯನ್ನು ಹೇಗೆ ಅನುಕರಿಸುತ್ತಾರೆ?

      18 ರಾಜ ಅಹಷ್ವೇರೋಷನ ಆಸ್ಥಾನದಲ್ಲಿದ್ದ ಹಾಮಾನ ಎಂಬವನು ಪ್ರಧಾನಮಂತ್ರಿಯ ಉನ್ನತ ಹುದ್ದೆಗೆ ನೇಮಕಗೊಂಡನು. ರಾಜನ ಮುಖ್ಯ ಸಲಹೆಗಾರನೂ ಆ ಸಾಮ್ರಾಜ್ಯದಲ್ಲಿ ರಾಜನ ನಂತರ ಎರಡನೇ ಸ್ಥಾನದಲ್ಲಿದ್ದವನೂ ಅವನೇ. ಜನರು ಇವನನ್ನು ಎದುರುಗೊಂಡಾಗೆಲ್ಲ ಬಗ್ಗಿ ನಮಸ್ಕರಿಸಬೇಕೆಂದೂ ರಾಜ ಅಪ್ಪಣೆ ಹೊರಡಿಸಿದ್ದ. (ಎಸ್ತೇ. 3:1-4) ಈ ಅಪ್ಪಣೆಯಿಂದ ಮೊರ್ದೆಕೈಗೆ ಒಂದು ಸಮಸ್ಯೆ ಎದುರಾಯಿತು. ಅವನು ರಾಜನಿಗೆ ವಿಧೇಯತೆ ತೋರಿಸಲು ಸಿದ್ಧನಿದ್ದನು. ಆದರೆ ದೇವರಿಗೆ ಅಗೌರವ ತೋರಿಸಿ ರಾಜನ ಮಾತು ಪಾಲಿಸಲು ಸಿದ್ಧನಿರಲಿಲ್ಲ. ಅಲ್ಲದೆ, ಹಾಮಾನನು ಅಗಾಗನ ವಂಶದವನು. ಅಂದರೆ ದೇವರ ಪ್ರವಾದಿ ಸಮುವೇಲನು ಹತಿಸಿದ ಅಮಾಲೇಕ್ಯರ ರಾಜನಾದ ಅಗಾಗನ ಸಂತತಿಯವನು ಆಗಿರಬಹುದೆಂದು ತೋರುತ್ತದೆ. (1 ಸಮು. 15:33) ಅಮಾಲೇಕ್ಯರು ಬಹು ದುಷ್ಟರಾಗಿದ್ದರು. ಯೆಹೋವನ ಮತ್ತು ಇಸ್ರಾಯೇಲ್ಯರ ಶತ್ರುಗಳಾಗಿದ್ದರು. ಹಾಗಾಗಿ ಆ ಇಡೀ ಜನಾಂಗ ದೇವರ ಖಂಡನೆಗೆ ಒಳಗಾಗಿತ್ತು.c (ಧರ್ಮೋ. 25:19) ಹೀಗಿರುವಾಗ ಒಬ್ಬ ಅಮಾಲೇಕ್ಯನಿಗೆ ನಂಬಿಗಸ್ತ ಯೆಹೂದಿಯೊಬ್ಬನು ಬಗ್ಗಿ ನಮಸ್ಕರಿಸಲು ಹೇಗೆ ತಾನೇ ಸಾಧ್ಯ? ಮೊರ್ದೆಕೈಗಂತೂ ಅದು ದೂರದ ಮಾತಾಗಿತ್ತು. ಹಾಗಾಗಿ ಅವನು ಹಾಮಾನನಿಗೆ ಬಗ್ಗಿ ನಮಸ್ಕರಿಸಲಿಲ್ಲ. ಅದೇ ರೀತಿ ಇಂದು ನಂಬಿಗಸ್ತ ಸ್ತ್ರೀಪುರುಷರು, “ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ” ಎಂಬ ತತ್ತ್ವವನ್ನು ಪಾಲಿಸಲಿಕ್ಕಾಗಿ ತಮ್ಮ ಜೀವವನ್ನೇ ಪಣಕ್ಕೊಡ್ಡಿದ್ದಾರೆ.—ಅ. ಕಾ. 5:29.

      19. (1) ಹಾಮಾನ ಏನು ಮಾಡಬೇಕೆಂದಿದ್ದ? (2) ಅವನು ಹೇಗೆ ರಾಜನ ಮನವೊಪ್ಪಿಸಿದ?

      19 ಮೊರ್ದೆಕೈಯ ವರ್ತನೆಯಿಂದ ಹಾಮಾನ ಕೆಂಡಾಮಂಡಲನಾದ. ಎಷ್ಟರ ಮಟ್ಟಿಗೆಂದರೆ ಮೊರ್ದೆಕೈ ಒಬ್ಬನನ್ನೇ ಮುಗಿಸಿದರೆ ಅವನಿಗೆ ತೃಪ್ತಿಯಾಗುತ್ತಿರಲಿಲ್ಲ. ಅವನ ಜನಾಂಗದವರೆಲ್ಲರನ್ನೂ ಮುಗಿಸಬೇಕೆಂದಿದ್ದ! ಆದ್ದರಿಂದ ಯೆಹೂದ್ಯರ ಬಗ್ಗೆ ರಾಜನ ಮನಸ್ಸಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿದ. ಅವರು ಯಾವ ಜನಾಂಗದವರೆಂದು ಹೇಳದೆ ಅವರು “ಇತರ ಜನಾಂಗಗಳವರ ಮಧ್ಯದಲ್ಲಿ ಹರಡಿ”ಕೊಂಡಿದ್ದಾರೆಂದು ಹೇಳಿದ. ಹೀಗೆ ಅವರು ಲೆಕ್ಕಕ್ಕೆ ಬಾರದವರೆಂದು ಸೂಚಿಸಿದ. ಇದಕ್ಕಿಂತ ಕೆಟ್ಟ ಸಂಗತಿ ಏನೆಂದರೆ ಅವರು ರಾಜಾಜ್ಞೆಗಳನ್ನು ಪಾಲಿಸದ ದಂಗೆಕೋರರೆಂದು ಇಲ್ಲಸಲ್ಲದ್ದನ್ನು ಹೇಳಿದ. ಆ ಸಾಮ್ರಾಜ್ಯದಲ್ಲಿರುವ ಎಲ್ಲ ಯೆಹೂದ್ಯರನ್ನು ಹತಿಸಲಿಕ್ಕಾಗಿ ತಗಲುವ ಖರ್ಚನ್ನು ಭರಿಸಲು ರಾಜಭಂಡಾರಕ್ಕೆ ದೊಡ್ಡ ಮೊತ್ತದ ಹಣವನ್ನು ಕೊಡಲೂ ಸಿದ್ಧನಿದ್ದೇನೆಂಬ ಪ್ರಸ್ತಾಪವನ್ನು ರಾಜನ ಮುಂದಿಟ್ಟ.d ಆಗ ರಾಜ ಅಹಷ್ವೇರೋಷ ಹಾಮಾನನಿಗೆ ತನ್ನ ಮುದ್ರೆಯುಂಗುರ ಕೊಟ್ಟು, ಅವರನ್ನು ಸಂಹರಿಸಲು ಅವನಿಗೆ ಬೇಕಾದ ಆಜ್ಞೆ ಹೊರಡಿಸಿ ಮುದ್ರೆಯೊತ್ತಬಹುದೆಂದು ಅನುಮತಿ ಕೊಟ್ಟ.—ಎಸ್ತೇ. 3:5-10.

      20, 21. (1) ಹಾಮಾನನು ಹೊರಡಿಸಿದ ಆಜ್ಞೆಯು ಪರ್ಷಿಯದ ಸಾಮ್ರಾಜ್ಯದಲ್ಲಿ ಮೊರ್ದೆಕೈ ಸಮೇತ ಎಲ್ಲ ಯೆಹೂದ್ಯರನ್ನು ಹೇಗೆ ಬಾಧಿಸಿತು? (2) ಎಸ್ತೇರ್‌ ಏನು ಮಾಡುವಂತೆ ಮೊರ್ದೆಕೈ ಬೇಡಿಕೊಂಡನು?

      20 ಹಾಮಾನನು ಯೆಹೂದಿ ಜನರ ಮೇಲೆ ಮರಣ ಶಿಕ್ಷೆಗೆ ಸಮಾನವಾಗಿದ್ದ ಒಂದು ಆಜ್ಞೆ ಹೊರಡಿಸಿದ. ಈ ಆಜ್ಞೆಯನ್ನು ಆ ವಿಸ್ತಾರ ಸಾಮ್ರಾಜ್ಯದ ಮೂಲೆಮೂಲೆಗೂ ರವಾನಿಸಲು ಕುದುರೆಸವಾರರು ವೇಗದಿಂದ ದೌಡಾಯಿಸಿದರು. ಆ ಘೋಷಣೆ ದೂರದ ಯೆರೂಸಲೇಮಿಗೆ ತಲಪಿದಾಗ ಅಲ್ಲಿದ್ದವರಿಗೆ ಹೇಗಾಗಿರಬೇಕೆಂದು ಊಹಿಸಿ! ಬಾಬೆಲಿನ ಸೆರೆವಾಸದಿಂದ ಹಿಂದಿರುಗಿದ್ದ ಹಲವಾರು ಯೆಹೂದ್ಯರು ಅಲ್ಲಿದ್ದರು. ಗೋಡೆಗಳಿಲ್ಲದ ಆ ನಗರವನ್ನು ಪುನಃ ನಿರ್ಮಿಸಲು ಮೊದಲೇ ಹೆಣಗಾಡುತ್ತಿದ್ದ ಅವರಿಗೆ ರಾಜಾಜ್ಞೆ ಕೇಳಿ ದಿಗಿಲಾಗಿರಬೇಕು. ಮೊರ್ದೆಕೈಗೆ ಆ ಘೋರ ಆಜ್ಞೆ ಬಗ್ಗೆ ತಿಳಿದುಬಂದಾಗ ಸ್ವದೇಶದಲ್ಲಿದ್ದ ಅವರೆಲ್ಲರು ಮತ್ತು ಶೂಷನ್‌ನಲ್ಲಿದ್ದ ತನ್ನ ಸ್ವಂತ ಬಂಧುಮಿತ್ರರೆಲ್ಲರೂ ನೆನಪಿಗೆ ಬಂದಿರಬೇಕು. ಕಂಗೆಟ್ಟು ತನ್ನ ಬಟ್ಟೆಗಳನ್ನು ಹರಿದುಕೊಂಡು, ಗೋಣಿತಟ್ಟು ಧರಿಸಿ, ತಲೆ ಮೇಲೆ ಬೂದಿ ಹಾಕಿ ನಗರದ ಮಧ್ಯೆ ನಿಂತು ಗಟ್ಟಿಯಾಗಿ ಗೋಳಾಡಿದನು. ಇತ್ತ ಹಾಮಾನನಾದರೊ ರಾಜನ ಸಂಗಡ ಕೂತು ಮದ್ಯ ಕುಡಿಯುತ್ತಾ ಇದ್ದನು. ತನ್ನಿಂದಾಗಿ ಶೂಷನ್‌ನಲ್ಲಿದ್ದ ಯೆಹೂದ್ಯರಿಗೂ ಮತ್ತವರ ಸ್ನೇಹಿತರಿಗೂ ಆಗುತ್ತಿದ್ದ ದುಃಖ, ಸಂಕಟದ ಬಗ್ಗೆ ಅವನಿಗೆ ಕಿಂಚಿತ್ತೂ ಚಿಂತೆ ಇರಲಿಲ್ಲ.—ಎಸ್ತೇರಳು 3:12–4:1 ಓದಿ.

      21 ಸ್ವಜನರಾದ ಯೆಹೂದ್ಯರನ್ನು ರಕ್ಷಿಸಲು ತಾನು ಏನಾದರೂ ಮಾಡಲೇಬೇಕೆಂದು ಮೊರ್ದೆಕೈಗೆ ತಿಳಿದಿತ್ತು. ಆದರೆ ಅವನು ಏನು ಮಾಡಸಾಧ್ಯವಿತ್ತು? ಅವನ ಗೋಳಾಟ, ಸಂಕಟದ ಬಗ್ಗೆ ಎಸ್ತೇರಳಿಗೆ ಸುದ್ದಿ ಮುಟ್ಟಿದಾಗ ಅವನಿಗಾಗಿ ಬಟ್ಟೆಗಳನ್ನು ಕಳುಹಿಸಿ ಸಂತೈಸಲು ಪ್ರಯತ್ನಿಸಿದಳು. ಆದರೆ ಅವನದನ್ನು ತೆಗೆದುಕೊಳ್ಳಲಿಲ್ಲ. ಮುದ್ದಿನ ಮಗಳಂತಿದ್ದ ಎಸ್ತೇರಳು ತನ್ನಿಂದ ದೂರ ಆಗಿ, ವಿಧರ್ಮಿ ರಾಜನ ಹೆಂಡತಿಯಾಗುವಂತೆ ಯೆಹೋವನು ಯಾಕೆ ಬಿಟ್ಟನು ಎಂಬ ಪ್ರಶ್ನೆ ತುಂಬ ದಿನದಿಂದ ಅವನ ಮನಸ್ಸನ್ನು ಕೊರೆಯುತ್ತಾ ಇತ್ತೇನೊ. ಈಗ ಅವನಿಗೆ ಉತ್ತರ ಸ್ಪಷ್ಟವಾಗುತ್ತಾ ಇತ್ತು. ರಾಣಿ ಎಸ್ತೇರಳಿಗೆ ಒಂದು ಸಂದೇಶ ಕಳುಹಿಸಿದನು. ಎಸ್ತೇರಳು ‘ತನ್ನ ಜನರ’ ಪರವಾಗಿ ರಾಜನ ಬಳಿ ಮಾತಾಡಿ ಅವರಿಗೆ ಸಹಾಯಮಾಡುವಂತೆ ಬೇಡಿಕೊಂಡನು.—ಎಸ್ತೇ. 4:4-8.

      22. ತನ್ನ ಗಂಡನಾದ ರಾಜನ ಸನ್ನಿಧಿಗೆ ಹೋಗಲು ಎಸ್ತೇರಳು ಏಕೆ ಭಯಪಟ್ಟಳು? (ಪಾದಟಿಪ್ಪಣಿ ಸಹ ನೋಡಿ.)

      22 ಆ ಸಂದೇಶ ಕೇಳಿ ಎಸ್ತೇರಳಿಗೆ ಹೃದಯ ಬಾಯಿಗೆ ಬಂದಂತಾಗಿರಬೇಕು. ಅವಳ ನಂಬಿಕೆಯ ಅತ್ಯಂತ ಕಠಿನ ಪರೀಕ್ಷೆ ಇದಾಗಿತ್ತು. ಮೊರ್ದೆಕೈಗೆ ಆಕೆ ಕಳುಹಿಸಿದ ಉತ್ತರದಲ್ಲಿ ತನಗಾಗುತ್ತಿದ್ದ ಭಯವನ್ನು ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸಿದಳು. ಅಪ್ಪಣೆಯಿಲ್ಲದೆ ರಾಜನ ಸನ್ನಿಧಿಗೆ ಹೋಗುವವರಿಗೆ ಮರಣ ದಂಡನೆ ಆಗುವುದೆಂಬ ರಾಜಾಜ್ಞೆಯನ್ನು ಅವನಿಗೆ ನೆನಪು ಹುಟ್ಟಿಸಿದಳು. ರಾಜನು ತನ್ನ ಸುವರ್ಣ ದಂಡ ಚಾಚಿದರೆ ಮಾತ್ರ ಆ ತಪ್ಪುಮಾಡಿದವನ ಜೀವ ಉಳಿಯುತ್ತಿತ್ತು. ಆದರೆ ರಾಜನು ಅಷ್ಟೊಂದು ದಯೆ ತೋರಿಸುವನೆಂದು ನಿರೀಕ್ಷಿಸಲು ಎಸ್ತೇರಳಿಗೆ ಆಧಾರವಿರಲಿಲ್ಲ. ಹಿಂದೊಮ್ಮೆ ವಷ್ಟಿಯು ರಾಜನ ಅಪ್ಪಣೆ ಧಿಕ್ಕರಿಸಿದಾಗ ಅವಳಿಗಾದ ಗತಿ ಎಸ್ತೇರಳಿಗೆ ನೆನಪಿರಬೇಕು. 30 ದಿನಗಳ ವರೆಗೆ ರಾಜನ ಬಳಿ ಹೋಗಲು ತನಗೆ ಅಪ್ಪಣೆಯಾಗಿಲ್ಲವೆಂದೂ ಎಸ್ತೇರಳು ಮೊರ್ದೆಕೈಗೆ ಹೇಳಿದಳು. ಹಾಗಾಗಿ ಸಾಮ್ರಾಟನ ಮನಸ್ಸು ಬದಲಾಗಿದೆ, ಬಹುಶಃ ಈಗ ತನ್ನನ್ನು ಮುಂಚಿನಷ್ಟು ಇಷ್ಟಪಡುವುದಿಲ್ಲವೆನೋ ಎಂದು ನೆನಸಲು ಆಕೆಗೆ ಕಾರಣವಿತ್ತು.e—ಎಸ್ತೇ. 4:9-11.

      23. (1) ಎಸ್ತೇರಳ ನಂಬಿಕೆಯನ್ನು ಬಲಪಡಿಸಲು ಮೊರ್ದೆಕೈ ಏನಂದನು? (2) ಮೊರ್ದೆಕೈ ಅನುಕರಣೆಗೆ ಯೋಗ್ಯನು ಏಕೆ?

      23 ಎಸ್ತೇರಳ ನಂಬಿಕೆಯನ್ನು ಬಲಪಡಿಸಲು ಮೊರ್ದೆಕೈ ದೃಢವಾದ ಉತ್ತರಕೊಟ್ಟನು. ಒಂದುವೇಳೆ ಅವಳು ಯಾವುದೇ ಹೆಜ್ಜೆ ತಕ್ಕೊಳ್ಳದಿದ್ದರೆ, ಯೆಹೂದ್ಯರಿಗೆ ಬೇರೆ ಕಡೆಯಿಂದ ರಕ್ಷಣೆ ಬಂದೇ ಬರುವುದೆಂದು ನಿಶ್ಚಿತವಾಗಿ ಹೇಳಿದನು. ಆದರೆ ಯೆಹೂದ್ಯರ ಸಂಹಾರವಾಗುವಾಗ ಅವಳ ಜೀವ ಉಳಿಯುವ ಖಾತರಿಯೂ ಇಲ್ಲವೆಂದು ಹೇಳಿದನು. ಮೊರ್ದೆಕೈ ಹೀಗೆ ಎಸ್ತೇರಳಿಗೆ ಕೊಟ್ಟ ಉತ್ತರದಲ್ಲಿ ಅವನಿಗೆ ಯೆಹೋವನಲ್ಲಿದ್ದ ಗಾಢ ನಂಬಿಕೆಯನ್ನು ತೋರಿಸಿದನು. ಯೆಹೋವನು ತನ್ನ ಜನರು ನಿರ್ನಾಮವಾಗುವಂತೆ ಹಾಗೂ ತನ್ನ ಮಾತು ವ್ಯರ್ಥವಾಗುವಂತೆ ಎಂದಿಗೂ ಬಿಡುವುದಿಲ್ಲವೆಂಬ ವಿಶ್ವಾಸ ಮೊರ್ದೆಕೈಗಿತ್ತು. (ಯೆಹೋ. 23:14) ಅನಂತರ ಅವನು ಎಸ್ತೇರಳಿಗೆ “ನೀನು ಇಂಥ ಸಂದರ್ಭಕ್ಕಾಗಿಯೇ ಪಟ್ಟಕ್ಕೆ ಬಂದಿರಬಹುದು, ಯಾರು ಬಲ್ಲರು” ಎಂದೂ ಹೇಳಿದ. (ಎಸ್ತೇ. 4:12-14) ಮೊರ್ದೆಕೈ ನಿಜವಾಗಿ ನಮ್ಮ ಅನುಕರಣೆಗೆ ಯೋಗ್ಯನಾದ ವ್ಯಕ್ತಿಯಲ್ಲವೇ? ಅವನು ತನ್ನ ದೇವರಾದ ಯೆಹೋವನಲ್ಲಿ ಪೂರ್ಣ ಭರವಸೆಯಿಟ್ಟನು. ಅಷ್ಟು ಭರವಸೆ ನಮಗಿದೆಯಾ?—ಜ್ಞಾನೋ. 3:5, 6.

      ಮರಣ ಭಯಕ್ಕಿಂತ ಹೆಚ್ಚು ಬಲವಾದ ನಂಬಿಕೆ

      24. ಎಸ್ತೇರಳು ನಂಬಿಕೆ ಹಾಗೂ ಧೈರ್ಯ ತೋರಿಸಿದ್ದು ಹೇಗೆ?

      24 ಎಸ್ತೇರಳು ನಿರ್ಣಯ ತಕ್ಕೊಳ್ಳುವ ಸಮಯ ಬಂದೇಬಿಟ್ಟಿತು. ತಾನು ಮೂರು ದಿನ ಉಪವಾಸಮಾಡುವಾಗ ತನ್ನ ಸ್ವಜನರೆಲ್ಲರೂ ಉಪವಾಸಮಾಡಲು ಹೇಳುವಂತೆ ಮೊರ್ದೆಕೈಗೆ ತಿಳಿಸಿದಳು. ಕೊನೆಯಲ್ಲಿ ಅವಳು “ಸತ್ತರೆ ಸಾಯುತ್ತೇನೆ” ಎಂದು ಹೇಳಿದಳು. ಅವಳ ನಂಬಿಕೆ ಹಾಗೂ ಧೈರ್ಯವನ್ನು ತೋರಿಸುವ ಈ ಮಾತು ಅಂದಿನಿಂದ ಇಂದಿನ ವರೆಗೂ ಪ್ರತಿಧ್ವನಿಸುತ್ತಿದೆ. (ಎಸ್ತೇ. 4:15-17) ಆ ಮೂರು ದಿನ ಅವಳು ಕಟ್ಟಾಸಕ್ತಿಯಿಂದ ಪ್ರಾರ್ಥಿಸಿರಬೇಕು. ಬಹುಶಃ ತನ್ನ ಜೀವನದಲ್ಲಿ ಹಿಂದೆಂದೂ ಅಷ್ಟು ಶ್ರದ್ಧೆಯಿಂದ ಆಕೆ ಪ್ರಾರ್ಥಿಸಿರಲಿಕ್ಕಿಲ್ಲ. ಕೊನೆಗೂ ರಾಜನ ಮುಂದೆ ಹೋಗುವ ಗಳಿಗೆ ಬಂದೇಬಿಟ್ಟಿತು. ರಾಜನನ್ನು ಪ್ರಸನ್ನಗೊಳಿಸಲು ತನ್ನಿಂದಾದೆಲ್ಲವನ್ನೂ ಮಾಡುತ್ತಾ, ವೈಭವಯುತ ವಸ್ತ್ರಗಳನ್ನು ಧರಿಸಿ ಅಲಂಕರಿಸಿಕೊಂಡು ಹೊರಟಳು.

      ವೈಭವಯುತ ವಸ್ತ್ರಗಳನ್ನು ಧರಿಸಿರುವ ಎಸ್ತೇರಳು ರಾಜ ಅಹಷ್ವೇರೋಷನ ಆಸ್ಥಾನ ಪ್ರವೇಶಿಸುತ್ತಿದ್ದಾಳೆ

      ದೇವಜನರನ್ನು ಕಾಪಾಡಲು ಎಸ್ತೇರ್‌ ತನ್ನ ಜೀವವನ್ನು ಪಣಕ್ಕೊಡ್ಡಿದಳು

      25. ಎಸ್ತೇರಳು ತನ್ನ ಗಂಡನ ಮುಂದೆ ಬರುವ ವರೆಗೆ ಏನೇನು ನಡೆದಿರಬಹುದೆಂದು ವರ್ಣಿಸಿ.

      25 ಈ ಅಧ್ಯಾಯದ ಆರಂಭದಲ್ಲಿ ತಿಳಿಸಲಾದಂತೆ ಎಸ್ತೇರಳು ರಾಜನ ಆಸ್ಥಾನದ ಹತ್ತಿರ ಬಂದಳು. ಅವಳ ಮನಸ್ಸಲ್ಲಿ ಯಾವೆಲ್ಲ ಯೋಚನೆಗಳು ತುಂಬಿಕೊಂಡಿದ್ದಿರಬಹುದೆಂದು ನೀವು ಊಹಿಸಬಹುದು. ಏನಾಗಲಿದೆಯೊ ಎಂಬ ಚಿಂತೆ ಕಾಡುತ್ತಿದ್ದಿರಬಹುದು. ಆಕೆ ಮನಸ್ಸಲ್ಲೇ ದೇವರಿಗೆ ಶ್ರದ್ಧೆಯಿಂದ ಪ್ರಾರ್ಥಿಸಿರಬಹುದು. ಪ್ರಾಕಾರವನ್ನು ಪ್ರವೇಶಿಸಿದಾಗ ಆಕೆಗೆ ಅಲ್ಲಿಂದ ರಾಜ ಅಹಷ್ವೇರೋಷ ಸಿಂಹಾಸನದ ಮೇಲೆ ಕುಳಿತಿರುವುದು ಕಾಣುತ್ತಿತ್ತು. ಅವನ ಮನಸ್ಥಿತಿ ಹೇಗಿದೆಯೆಂದು ತಿಳಿಯಲಿಕ್ಕಾಗಿ ಬಹುಶಃ ಅಲ್ಲಿಂದಲೇ ಆಕೆ ಅವನ ಮುಖಚರ್ಯೆ ನೋಡಲು ಪ್ರಯತ್ನಿಸಿದಳೇನೋ. ಆಕೆಗೇನಾದರೂ ಕಾಯಬೇಕಾಗಿ ಬಂದಿದ್ದರೆ ಆ ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಕಂಡಿರಬಹುದು. ಕೊನೆಗೂ ಆಕೆಯ ಗಂಡ ಅವಳನ್ನು ನೋಡಿದ. ಖಂಡಿತ ಅವನಿಗೆ ಆಶ್ಚರ್ಯವಾಗಿರಬಹುದು. ಆದರೆ ಅವನು ರೋಷಗೊಳ್ಳಲಿಲ್ಲ. ಮುಖದಲ್ಲಿ ಮಂದಹಾಸ ಮೂಡಿತು. ತನ್ನ ಸುವರ್ಣ ದಂಡವನ್ನು ಅವಳೆಡೆಗೆ ಚಾಚಿದನು!—ಎಸ್ತೇ. 5:1, 2.

      26. (1) ನಿಜ ಕ್ರೈಸ್ತರಿಗೆ ಏಕೆ ಎಸ್ತೇರಳಿಗಿದ್ದಂಥ ಧೈರ್ಯ ಇರಬೇಕು? (2) ರಾಜನ ಮುಂದೆ ನಿಂತದ್ದು ಅವಳು ಮಾಡಲಿಕ್ಕಿದ್ದ ಕೆಲಸದ ಕೇವಲ ಆರಂಭವಾಗಿತ್ತೇಕೆ?

      26 ರಾಜನು ಎಸ್ತೇರಳಿಗೆ ಕಿವಿಗೊಡಲು ಸಿದ್ಧನಿದ್ದನು. ಎಸ್ತೇರಳು ತನ್ನ ದೇವರ ಹಾಗೂ ತನ್ನ ಜನರ ಪರವಹಿಸಿ ನಿಂತಿದ್ದಳು. ಹೀಗೆ ಅವಳು ತೋರಿಸಿದ ನಂಬಿಕೆ ಶತಮಾನಗಳಿಂದಲೂ ದೇವರ ಸೇವಕರೆಲ್ಲರಿಗೆ ಅತ್ಯುತ್ತಮ ಮಾದರಿಯಾಗಿದೆ. ನಿಜ ಕ್ರೈಸ್ತರು ಇಂದು ಅಂಥ ಮಾದರಿಗಳನ್ನು ಅಮೂಲ್ಯವೆಂದೆಣಿಸುತ್ತಾರೆ. ತನ್ನ ನಿಜ ಹಿಂಬಾಲಕರಾಗಿರುವವರು ಸ್ವತ್ಯಾಗದ ಪ್ರೀತಿ ತೋರಿಸುವರೆಂದು ಯೇಸು ಹೇಳಿದನು. (ಯೋಹಾನ 13:34, 35 ಓದಿ.) ಅಂಥ ಪ್ರೀತಿ ತೋರಿಸಬೇಕಾದರೆ ಎಸ್ತೇರಳಿಗಿದ್ದಂಥ ಧೈರ್ಯ ಅನೇಕವೇಳೆ ಬೇಕಾಗುತ್ತದೆ. ಆ ದಿನ ಎಸ್ತೇರಳು ದೇವಜನರ ಪರವಹಿಸಿ ಧೈರ್ಯದಿಂದ ನಿಂತದ್ದು ಅವಳು ಮಾಡಲಿಕ್ಕಿದ್ದ ಕೆಲಸದ ಆರಂಭವಾಗಿತ್ತಷ್ಟೇ. ರಾಜನ ಅಚ್ಚುಮೆಚ್ಚಿನ ಸಲಹೆಗಾರನಾದ ಹಾಮಾನ ಒಬ್ಬ ದುಷ್ಟ ಸಂಚುಗಾರನೆಂದು ರಾಜನಿಗೆ ಹೇಗೆ ಮನದಟ್ಟು ಮಾಡಿಸಿದಳು? ತನ್ನ ಜನರ ಜೀವ ಉಳಿಸಲು ಅವಳು ಹೇಗೆ ನೆರವಾದಳು? ಈ ಪ್ರಶ್ನೆಗಳನ್ನು ಮುಂದಿನ ಅಧ್ಯಾಯದಲ್ಲಿ ಚರ್ಚಿಸೋಣ.

      a ಅಹಷ್ವೇರೋಷನು ರಾಜ Iನೇ ಸರ್‌ಕ್ಸೀಸ್‌ ಎಂಬುದು ಹೆಚ್ಚಿನವರ ಅಭಿಪ್ರಾಯ. ಈತ ಕ್ರಿ.ಪೂ. ಐದನೇ ಶತಮಾನದ ಆರಂಭದಲ್ಲಿ ಪರ್ಷಿಯದ ಸಾಮ್ರಾಜ್ಯವನ್ನು ಆಳುತ್ತಿದ್ದ.

      b ಅಧ್ಯಾಯ 16ರಲ್ಲಿರುವ “ಎಸ್ತೇರ್‌ ಪುಸ್ತಕಕ್ಕೆ ಸಂಬಂಧಪಟ್ಟ ಪ್ರಶ್ನೆಗಳು” ಚೌಕ ನೋಡಿ.

      c ಈ ಹಿಂದೆ ರಾಜ ಹಿಜ್ಕೀಯನ ದಿನಗಳಲ್ಲೇ “ಅಮಾಲೇಕ್ಯರಲ್ಲಿ ಉಳಿದವರನ್ನು” ನಾಶಮಾಡಲಾಗಿತ್ತು. ಕೊನೆಗೆ ಉಳಿದಿದ್ದ ಅಮಾಲೇಕ್ಯರಲ್ಲಿ ಹಾಮಾನನು ಒಬ್ಬನಾಗಿದ್ದಿರಬಹುದು.—1 ಪೂರ್ವ. 4:43.

      d ಹಾಮಾನನು 10,000 ತಲಾಂತು ಬೆಳ್ಳಿಯನ್ನು ಕೊಡುವೆನೆಂದು ಹೇಳಿದ. ಇವತ್ತಿನ ಮೌಲ್ಯಕ್ಕನುಸಾರ ಅದು ನೂರಾರು ಮಿಲಿಯ ಡಾಲರುಗಳು. ಅಹಷ್ವೇರೋಷನು ರಾಜ Iನೇ ಸರ್‌ಕ್ಸೀಸ್‌ ಆಗಿದ್ದಲ್ಲಿ ಇಷ್ಟೊಂದು ಹಣದ ಪ್ರಸ್ತಾಪ ತುಂಬ ಆಕರ್ಷಕವಾಗಿ ತೋರಿರಬೇಕು. ಏಕೆಂದರೆ ಗ್ರೀಸ್‌ ವಿರುದ್ಧ ಯುದ್ಧ ನಡೆಸಲು ತುಂಬ ಸಮಯದಿಂದ ಯೋಜಿಸುತ್ತಿದ್ದ ಅವನಿಗೆ ಆ ಯುದ್ಧಕ್ಕಾಗಿ ಬಹಳಷ್ಟು ಹಣದ ಅಗತ್ಯವಿತ್ತು. ಆಮೇಲೆ ಆ ಯುದ್ಧದಲ್ಲಿ ಅವನು ಸೋಲುಕಂಡದ್ದು ಬೇರೆ ಮಾತು.

      e ರಾಜ Iನೇ ಸರ್‌ಕ್ಸೀಸ್‌ನ ಸ್ವಭಾವ ‘ಕ್ಷಣಚಿತ್ತ ಕ್ಷಣಪಿತ್ತ,’ ಕೋಪ ಬಂದರಂತೂ ಅವನಷ್ಟು ಕ್ರೂರಿ ಯಾರೂ ಇಲ್ಲವೆಂದು ಎಲ್ಲರಿಗೂ ತಿಳಿದಿತ್ತು. ಇದಕ್ಕೆ ಉದಾಹರಣೆಯಾಗಿ, ಗ್ರೀಸ್‌ ವಿರುದ್ಧ ಅವನು ನಡೆಸಿದ ಯುದ್ಧದ ಸಮಯದಲ್ಲಾದ ಪ್ರಸಂಗಗಳನ್ನು ಗ್ರೀಕ್‌ ಇತಿಹಾಸಕಾರ ಹಿರಾಡಾಟಸ್‌ ದಾಖಲಿಸಿದ್ದಾನೆ. ಹೆಲೆಸ್‌ಪೊಂಟ್‌ ಎಂಬ ಜಲಸಂಧಿಯಲ್ಲಿ ಹಡಗುಗಳನ್ನು ಸಾಲಾಗಿ ನಿಲ್ಲಿಸಿ ಅದನ್ನೊಂದು ತೇಲು ಸೇತುವೆ ಆಗಿ ಮಾಡಲು ರಾಜ ಆದೇಶ ನೀಡಿದ್ದನು. ಆದರೆ ಬಿರುಗಾಳಿ ಬಂದು ಆ ತೇಲು ಸೇತುವೆ ಚೆಲ್ಲಾಪಿಲ್ಲಿಯಾದಾಗ ಅದನ್ನು ನಿರ್ಮಿಸಿದ್ದ ಇಂಜಿನೀಯರುಗಳ ಶಿರಚ್ಛೇದ ಮಾಡುವ ಅಪ್ಪಣೆ ಕೊಟ್ಟನು. ಅಲ್ಲದೆ ಹೆಲೆಸ್‌ಪೊಂಟ್‌ ಜಲಸಂಧಿಯನ್ನು ಶಿಕ್ಷಿಸುತ್ತಾನೊ ಎಂಬಂತೆ ಅದರ ನೀರನ್ನು ಚಾಟಿಯಿಂದ ಹೊಡೆಸುತ್ತಾ ಅದೇ ಸಮಯದಲ್ಲಿ ಅದನ್ನು ಅವಮಾನಿಸುವಂಥ ಘೋಷಣೆಯನ್ನು ಗಟ್ಟಿಯಾಗಿ ಓದಿಸಿದನು. ಅದೇ ಯುದ್ಧ ಕಾರ್ಯಾಚರಣೆಯ ಸಮಯದಲ್ಲಿ ಒಬ್ಬ ಧನಿಕನು ಬಂದು ತನ್ನ ಮಗ ಸೇನೆಗೆ ಸೇರುವುದರಿಂದ ವಿನಾಯಿತಿ ಕೊಡುವಂತೆ ಬೇಡಿಕೊಂಡಾಗ, ಸರ್‌ಕ್ಸೀಸನು ಆ ಮಗನ ದೇಹವನ್ನು ಅರ್ಧಕ್ಕೆ ತುಂಡರಿಸಿ ಅದನ್ನು ಎಲ್ಲರಿಗೆ ಎಚ್ಚರಿಕೆಯಾಗಿ ತೂಗುಹಾಕಿಸಿದ್ದನು.

      ಯೋಚಿಸಿ ನೋಡಿ . . .

      • ಎಸ್ತೇರಳು ದೀನತೆ, ವಿಧೇಯತೆ ತೋರಿಸಿದ್ದು ಹೇಗೆ?

      • ಎಸ್ತೇರಳು ನಂಬಿಗಸ್ತಿಕೆಯಿಂದ ಕ್ರಮ ಕೈಗೊಳ್ಳಲು ಮೊರ್ದೆಕೈ ಸಹಾಯಮಾಡಿದ್ದು ಹೇಗೆ?

      • ಎಸ್ತೇರಳಿಗಿದ್ದ ಧೈರ್ಯ ಅವಳ ಯಾವ ಕ್ರಿಯೆಗಳಿಂದ ಗೊತ್ತಾಗುತ್ತದೆ?

      • ಎಸ್ತೇರಳ ನಂಬಿಕೆಯನ್ನು ನೀವು ಯಾವ ವಿಧಗಳಲ್ಲಿ ಅನುಕರಿಸಬೇಕೆಂದಿದ್ದೀರಿ?

  • ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ
    ಅವರ ನಂಬಿಕೆಯನ್ನು ಅನುಕರಿಸಿ
    • ರಾಣಿ ಎಸ್ತೇರ್‌

      ಅಧ್ಯಾಯ ಹದಿನಾರು

      ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ

      1-3. (1) ಗಂಡನ ಸಿಂಹಾಸನದತ್ತ ಹೆಜ್ಜೆಯಿಡುತ್ತಿದ್ದಾಗ ಎಸ್ತೇರಳಿಗೆ ಹೇಗನಿಸಿರಬೇಕು? (2) ಎಸ್ತೇರಳು ಆಸ್ಥಾನಕ್ಕೆ ಬಂದಾಗ ರಾಜ ಹೇಗೆ ಪ್ರತಿಕ್ರಿಯಿಸಿದನು?

      ಎಸ್ತೇರ್‌ ಆ ದೊಡ್ಡ ಆಸ್ಥಾನದೊಳಗೆ ಕಾಲಿಟ್ಟಳು. ಅವಳ ಹೃದಯ ಒಂದೇ ಸಮನೆ ಬಡಿದುಕೊಳ್ಳುತ್ತಾ ಇತ್ತು. ಸಿಂಹಾಸನದತ್ತ ಅವಳು ಮೆಲ್ಲ ಮೆಲ್ಲನೆ ಹೆಜ್ಜೆಹಾಕುತ್ತಿದ್ದಂತೆ ಆಸ್ಥಾನದಲ್ಲಿ ತಟ್ಟನೆ ಮೌನ ಆವರಿಸಿತು. ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ. ಆಕೆಗೆ ತನ್ನ ಸ್ವಂತ ಹೆಜ್ಜೆಯ ಸದ್ದು ಹಾಗೂ ತನ್ನ ವೈಭವಯುತ ವಸ್ತ್ರಗಳ ಸರಪರ ಸದ್ದು ಕಿವಿಗೆ ಬೀಳುತ್ತಿತ್ತು. ಆಸ್ಥಾನದ ಭವ್ಯತೆ, ಸ್ತಂಭಗಳ ಸೌಂದರ್ಯ, ಲೆಬನೋನಿನ ದೇವದಾರು ಮರದಿಂದ ನಿರ್ಮಿತವಾದ ಚಾವಣಿ, ಅದರಲ್ಲಿದ್ದ ಸೂಕ್ಷ್ಮ ಕೆತ್ತನೆ ಕೆಲಸದ ಸೊಬಗನ್ನು ಆಸ್ವಾದಿಸಲು ಎಸ್ತೇರ್‌ ಅತ್ತಿತ್ತ ನೋಡುವ ಸಮಯ ಅದಾಗಿರಲಿಲ್ಲ. ಆಕೆಯ ಗಮನ, ಮನಸ್ಸೆಲ್ಲ ಸಿಂಹಾಸನದಲ್ಲಿ ಕೂತಿದ್ದವನ ಮೇಲಿತ್ತು. ಅವಳ ಸಾವು ಬದುಕು ಈಗ ಅವನ ಕೈಯಲ್ಲಿತ್ತು.

      2 ಹತ್ತಿರ ಬರುತ್ತಿದ್ದ ಎಸ್ತೇರಳನ್ನು ಎವೆಯಿಕ್ಕದೆ ನೋಡುತ್ತ ರಾಜ ಆಕೆಯತ್ತ ತನ್ನ ಸುವರ್ಣದಂಡ ಚಾಚಿದ. ಇದೊಂದು ಚಿಕ್ಕ ಸನ್ನೆ. ಆದರೆ ಅದರಿಂದಲೇ ಅವಳ ಜೀವ ಉಳಿಯಿತು. ಅಪ್ಪಣೆಯಾಗದೆ ಅವನ ಸನ್ನಿಧಿಗೆ ಬಂದ ಆಕೆಯನ್ನು ರಾಜ ಕ್ಷಮಿಸಿದ್ದಾನೆಂದು ಆ ಸನ್ನೆ ತೋರಿಸುತ್ತಿತ್ತು. ಎಸ್ತೇರ್‌ ಹತ್ತಿರ ಬಂದು ಕೈಚಾಚಿ, ಕೃತಜ್ಞತಾಭಾವದಿಂದ ಸುವರ್ಣದಂಡದ ತುದಿಯನ್ನು ಮುಟ್ಟಿದಳು.—ಎಸ್ತೇ. 5:1, 2.

      ರಾಣಿ ಎಸ್ತೇರ್‌ ರಾಜ ಅಹಷ್ವೇರೋಷನ ಸಿಂಹಾಸನದ ಬಳಿ ಬರುತ್ತಿದ್ದಂತೆ ಅವನು ತನ್ನ ಸುವರ್ಣ ದಂಡ ಚಾಚುತ್ತಾನೆ

      ರಾಜನು ತೋರಿಸಿದ ಕರುಣೆಗೆ ಎಸ್ತೇರ್‌ ಕೃತಜ್ಞತೆ ಸೂಚಿಸಿದಳು

      3 ರಾಜ ಅಹಷ್ವೇರೋಷನನ್ನು ನೋಡಿದಾಕ್ಷಣ ಅವನಲ್ಲಿ ಅಪಾರ ಧನಸಂಪತ್ತು, ಶಕ್ತಿಸಾಮರ್ಥ್ಯ ಇತ್ತೆಂದು ಗೊತ್ತಾಗುತ್ತಿತ್ತು. ಆ ಕಾಲದ ಪರ್ಷಿಯದ ಸಾಮ್ರಾಟರು ತೊಡುತ್ತಿದ್ದ ಉಡುಗೆ ನೂರಾರು ಮಿಲಿಯ ಡಾಲರಿಗೆ ಸಮಾನವಾದ ಬೆಲೆಯದ್ದೆಂದು ಹೇಳಲಾಗುತ್ತದೆ. ಅಷ್ಟು ದೊಡ್ಡ ರಾಜನಾಗಿದ್ದರೂ ಅವನಿಗೆ ಪತ್ನಿ ಎಸ್ತೇರಳ ಮೇಲೆ ಪ್ರೀತಿಯಿತ್ತು. ಎಸ್ತೇರಳಿಗೆ ಆ ಪ್ರೀತಿ ಅವನ ಕಣ್ಣುಗಳಲ್ಲಿ ಕಾಣುತ್ತಿತ್ತು. ಅವನದನ್ನು ತನ್ನದೇ ಆದ ರೀತಿಯಲ್ಲಿ ತೋರಿಸುತ್ತಿದ್ದ. ಈಗ ಅವನು ಅವಳಿಗೆ, “ಎಸ್ತೇರ್‌ ರಾಣಿಯೇ, ನಿನಗೇನು ಬೇಕು? ನಿನ್ನ ವಿಜ್ಞಾಪನೆ ಯಾವದು? ನನ್ನ ಅರ್ಧರಾಜ್ಯವನ್ನು ಕೇಳಿದರೂ ನಿನಗೆ ಕೊಡುತ್ತೇನೆ” ಎಂದು ಹೇಳಿದನು.—ಎಸ್ತೇ. 5:3.

      4. ಎಸ್ತೇರಳ ಮುಂದೆ ಇನ್ಯಾವ ಸವಾಲುಗಳಿದ್ದವು?

      4 ಎಸ್ತೇರ್‌ ಅಸಾಧಾರಣ ನಂಬಿಕೆ ಧೈರ್ಯ ತೋರಿಸುತ್ತಾ, ಸ್ವಜನರನ್ನು ಮುಗಿಸುವ ಸಂಚನ್ನು ಬಯಲಿಗೆಳೆದು ಅವರನ್ನು ರಕ್ಷಿಸಲಿಕ್ಕಾಗಿ ಈಗ ರಾಜನ ಮುಂದೆ ಬಂದು ನಿಂತಿದ್ದಳು. ಇಲ್ಲಿ ತನಕ ಯಶಸ್ವಿಯಾದಳು ನಿಜ. ಆದರೆ ಮುಂದಕ್ಕೆ ಇದಕ್ಕಿಂತ ದೊಡ್ಡ ಸವಾಲುಗಳನ್ನು ಎದುರಿಸಲಿಕ್ಕಿದ್ದಳು. ಅದೇನೆಂದರೆ, ತುಂಬ ಸ್ವಾಭಿಮಾನವುಳ್ಳ ಈ ಸಾಮ್ರಾಟನಿಗೆ ಅವನ ನೆಚ್ಚಿನ ಸಲಹೆಗಾರ ಮಹಾ ದುಷ್ಟನೆಂದೂ ರಾಜನಿಗೆ ಮೋಸಮಾಡಿ ಎಸ್ತೇರಳ ಜನರ ಮೇಲೆ ಮರಣದಂಡನೆ ವಿಧಿಸುವ ಹಾಗೆ ಮಾಡಿದ್ದಾನೆಂದು ಆಕೆ ಮನವರಿಕೆ ಮಾಡಿಸಬೇಕಿತ್ತು. ಇದನ್ನು ಹೇಗೆ ಮಾಡುವಳು? ಅವಳ ನಂಬಿಕೆಯಿಂದ ನಾವೇನು ಕಲಿಯಬಲ್ಲೆವು?

      “ಮಾತಾಡುವ ಸಮಯ”ವನ್ನು ವಿವೇಕದಿಂದ ಆಯ್ಕೆಮಾಡಿದಳು

      5, 6. (1) ಪ್ರಸಂಗಿ 3:1, 7 ರಲ್ಲಿರುವ ಸೂತ್ರವನ್ನು ಎಸ್ತೇರ್‌ ಹೇಗೆ ಅನ್ವಯಿಸಿಕೊಂಡಳು? (2) ಎಸ್ತೇರ್‌ ತನ್ನ ಗಂಡನೊಟ್ಟಿಗೆ ಹೇಗೆ ವಿವೇಕಯುತವಾಗಿ ಮಾತಾಡಿದಳು?

      5 ಎಸ್ತೇರ್‌ ಅಲ್ಲೇ ಆಸ್ಥಾನದಲ್ಲಿ ಎಲ್ಲರ ಸಮ್ಮುಖದಲ್ಲಿ ರಾಜನಿಗೆ ಸಮಸ್ಯೆಯನ್ನು ಬಿಚ್ಚಿಡಲಿಲ್ಲ. ಹಾಗೆ ಮಾಡಿರುತ್ತಿದ್ದರೆ ಗಂಡನಿಗೆ ಅವಮಾನ ಮಾಡಿದಂತಾಗುತ್ತಿತ್ತು. ಅಲ್ಲದೆ ಹಾಮಾನನ ಬಗ್ಗೆ ಅವಳು ಏನೇ ಹೇಳಿರುತ್ತಿದ್ದರೂ ಅದು ತಪ್ಪೆಂದು ವಾದಿಸಲು ಅವನಿಗೆ ಸಮಯಾವಕಾಶವೂ ಸಿಗುತ್ತಿತ್ತು. ಆದ್ದರಿಂದ ಎಸ್ತೇರ್‌ ಏನು ಮಾಡಿದಳು? “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; . . . ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆಯೆಂದು ವಿವೇಕಿ ರಾಜ ಸೊಲೊಮೋನ ದೇವಪ್ರೇರಣೆಯಿಂದ ಬರೆದಿದ್ದ ಮಾತನ್ನು ಪಾಲಿಸಿದಳು. (ಪ್ರಸಂ. 3:1, 7) ಇಂಥ ಸೂತ್ರಗಳನ್ನು ಎಸ್ತೇರಳ ಸಾಕುತಂದೆಯಾದ ನಂಬಿಗಸ್ತ ವ್ಯಕ್ತಿ ಮೊರ್ದೆಕೈ ತನ್ನ ಮನೆಯಲ್ಲಿ ಬೆಳೆಯುತ್ತಿದ್ದ ಅವಳಿಗೆ ಕಲಿಸಿದ್ದಿರಬಹುದು. ಹಾಗಾಗಿ ‘ಮಾತಾಡುವ ಸಮಯವನ್ನು’ ಜಾಗ್ರತೆಯಿಂದ ಆರಿಸಿಕೊಳ್ಳುವುದರ ಮಹತ್ವ ಆಕೆಗೆ ಚೆನ್ನಾಗಿ ತಿಳಿದಿತ್ತು.

      6 ಆಕೆ ರಾಜನಿಗೆ ಹೀಗಂದಳು: “ಅರಸರ ಚಿತ್ತಕ್ಕೆ ಬಂದರೆ ನಾನು ಈಹೊತ್ತು ತಮಗೋಸ್ಕರ ಸಿದ್ಧಮಾಡಿಸಿರುವ ಔತಣಕ್ಕೆ ಹಾಮಾನನೊಡನೆ ಬರೋಣವಾಗಲಿ.” (ಎಸ್ತೇ. 5:4) ರಾಜ ಇದಕ್ಕೊಪ್ಪಿದನು, ಹಾಮಾನನನ್ನೂ ಕರೆಕಳುಹಿಸಿದನು. ಎಸ್ತೇರ್‌ ಎಷ್ಟು ವಿವೇಕಯುತವಾಗಿ ಮಾತಾಡಿದಳೆಂದು ಗಮನಿಸಿದಿರಾ? ಗಂಡನ ಮಾನಮರ್ಯಾದೆ ಕಾಪಾಡಿದಳು. ಹಾಗೆಯೇ ತನಗಿರುವ ಚಿಂತೆಗಳನ್ನು ಅವನಿಗೆ ಹೇಳಲು ಹೆಚ್ಚು ಸೂಕ್ತವಾದ ಸಮಯ ಹಾಗೂ ಸ್ಥಳವನ್ನು ಗೊತ್ತುಮಾಡಿದಳು.—ಜ್ಞಾನೋಕ್ತಿ 10:19 ಓದಿ.

      7, 8. (1) ಎಸ್ತೇರಳು ಮೊದಲನೇ ದಿನ ಏರ್ಪಡಿಸಿದ್ದ ಔತಣ ಹೇಗಿತ್ತು? (2) ರಾಜನಿಗೆ ತನ್ನ ಕೋರಿಕೆಯನ್ನು ತಿಳಿಸುವುದನ್ನು ಅವಳು ಯಾಕೆ ಮುಂದೂಡುತ್ತಿದ್ದಳು?

      7 ಎಸ್ತೇರಳು ಆ ಔತಣದ ತಯಾರಿಯಲ್ಲಿ ತುಂಬ ಮುತುವರ್ಜಿ ವಹಿಸಿದ್ದರಲ್ಲಿ ಸಂದೇಹವಿಲ್ಲ. ಪ್ರತಿಯೊಂದೂ ತನ್ನ ಗಂಡನ ಇಷ್ಟದ ಪ್ರಕಾರ ಇರುವಂತೆ ಆಕೆಯೇ ಮುಂದೆ ನಿಂತು ಎಲ್ಲವನ್ನೂ ಏರ್ಪಡಿಸಿರಬೇಕು. ಉಲ್ಲಾಸಕ್ಕಾಗಿ ಶ್ರೇಷ್ಠ ಗುಣಮಟ್ಟದ ದ್ರಾಕ್ಷಾಮದ್ಯವೂ ಔತಣದಲ್ಲಿತ್ತು. (ಕೀರ್ತ. 104:15) ಅಹಷ್ವೇರೋಷನು ಆ ಔತಣದಲ್ಲಿ ತುಂಬ ಆನಂದಿಸಿದನು. ಎಷ್ಟೆಂದರೆ ಎಸ್ತೇರಳ ಕೋರಿಕೆ ಏನಾಗಿತ್ತೆಂದು ಪುನಃ ಕೇಳಿದನು. ಅವಳು ಈಗ ಅದನ್ನು ಹೇಳುವ ಸಮಯ ಬಂದಿತ್ತೇ?

      8 ಇದು ಸರಿಯಾದ ಸಮಯ ಅಲ್ಲವೆಂದು ಎಸ್ತೇರಳಿಗೆ ಅನಿಸಿತು. ಅವಳು ರಾಜನನ್ನೂ ಹಾಮಾನನನ್ನೂ ಇನ್ನೊಂದು ಔತಣಕ್ಕೆ ಮರುದಿನ ಬರಲು ಆಮಂತ್ರಿಸಿದಳು. (ಎಸ್ತೇ. 5:7, 8) ಅವಳು ತನ್ನ ಕೋರಿಕೆಯನ್ನು ತಿಳಿಸುವುದನ್ನು ಯಾಕೆ ಮುಂದೂಡುತ್ತಿದ್ದಳು? ನೆನಪಿಡಿ, ಹಾಮಾನನು ರಾಜನ ಅನುಮತಿಯಿಂದ ಹೊರಡಿಸಿದ ಆಜ್ಞೆ ಮೇರೆಗೆ ಎಸ್ತೇರಳ ಸ್ವಜನರೆಲ್ಲರ ಸಂಹಾರ ಆಗಲಿಕ್ಕಿತ್ತು. ಒಂದುವೇಳೆ ಎಸ್ತೇರಳು ಮಾತಾಡುವ ಸಮಯ ಸೂಕ್ತವಾಗಿರದಿದ್ದರೆ ಎಷ್ಟೋ ಜನರು ಜೀವ ಕಳಕೊಳ್ಳಲಿದ್ದರು. ಆದ್ದರಿಂದಲೇ ಕಾದಳು. ತನ್ನ ಗಂಡನನ್ನು ಎಷ್ಟು ಮಾನ್ಯಮಾಡುತ್ತೇನೆಂದು ತೋರಿಸಲಿಕ್ಕಾಗಿ ಇದರಿಂದ ಅವಳಿಗೆ ಮತ್ತೊಂದು ಅವಕಾಶ ಸಿಕ್ಕಿತು.

      9. (1) ತಾಳ್ಮೆ ಏಕೆ ಬೇಕು? (2) ತಾಳ್ಮೆ ತೋರಿಸುವ ವಿಷಯದಲ್ಲಿ ಎಸ್ತೇರಳನ್ನು ಹೇಗೆ ಅನುಕರಿಸಬಲ್ಲೆವು?

      9 ತಾಳ್ಮೆ ಅಮೂಲ್ಯವಾದ ಗುಣ. ಅಪರೂಪವೂ ಹೌದು. ತನ್ನ ಜನರನ್ನು ನೆನಸಿ ಎಸ್ತೇರ್‌ ಒಳಗೊಳಗೆ ತುಂಬ ಸಂಕಟಪಡುತ್ತಿದ್ದಳು. ತನ್ನ ಚಿಂತೆಯನ್ನು ಹೇಳಿಬಿಡಲು ಮನಸ್ಸು ತುಂಬ ತುಡಿಯುತ್ತಿತ್ತು. ಆದರೂ ಅದನ್ನು ಹೇಳಲು ಸರಿಯಾದ ಸಮಯಕ್ಕಾಗಿ ಕಾದಳು. ಆಕೆಯ ಮಾದರಿಯಿಂದ ನಾವು ಬಹಳಷ್ಟನ್ನು ಕಲಿಯಬಹುದು. ಒಂದು ತಪ್ಪು ನಡೆಯುತ್ತಿರುವುದನ್ನು ನೋಡಿದಾಗ ಅದನ್ನು ಸರಿಪಡಿಸುವುದರ ಬಗ್ಗೆ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಗೆ ಮನಗಾಣಿಸಬೇಕಾದಲ್ಲಿ ನಾವು ಎಸ್ತೇರಳಂತೆ ತಾಳ್ಮೆ ತೋರಿಸಬೇಕು. “ದೀರ್ಘಶಾಂತಿಯಿಂದ [ತಾಳ್ಮೆಯಿಂದ, NW] ಪ್ರಭುವನ್ನೂ ಸಮ್ಮತಿಪಡಿಸಬಹುದು; ಮೃದುವಚನವು ಎಲುಬನ್ನು ಮುರಿಯುವದು” ಎನ್ನುತ್ತದೆ ಜ್ಞಾನೋಕ್ತಿ 25:15. ನಾವು ಎಸ್ತೇರಳಂತೆ ಸರಿಯಾದ ಸಮಯಕ್ಕಾಗಿ ತಾಳ್ಮೆಯಿಂದ ಕಾದು, ಸೌಮ್ಯ ರೀತಿಯಲ್ಲಿ ಮಾತಾಡಿದರೆ ಎಲುಬಿನಷ್ಟು ಗಡುಸಾದ ವಿರೋಧಿಯ ಮನಸ್ಸನ್ನೂ ಒಪ್ಪಿಸಲು ಸಾಧ್ಯವಾಗಬಹುದು. ಎಸ್ತೇರಳ ದೇವರಾದ ಯೆಹೋವನು ಆಕೆ ತಾಳ್ಮೆಯಿಂದ, ವಿವೇಕದಿಂದ ನಡೆದುಕೊಂಡದ್ದಕ್ಕಾಗಿ ಆಕೆಯನ್ನು ಹರಸಿದನೊ?

      ತಾಳ್ಮೆಯು ನ್ಯಾಯದ ಬಾಗಿಲನ್ನು ತೆರೆಯಿತು

      10, 11. (1) ಮೊದಲ ದಿನ ಔತಣ ಮುಗಿಸಿ ಹೊರಟ ನಂತರ ಹಾಮಾನನ ಮನಸ್ಥಿತಿ ಏಕೆ ಬದಲಾಯಿತು? (2) ಅವನ ಹೆಂಡತಿ ಹಾಗೂ ಆಪ್ತರು ಯಾವ ಸಲಹೆಕೊಟ್ಟರು?

      10 ಎಸ್ತೇರಳು ತಾಳ್ಮೆ ತೋರಿಸಿದ್ದರಿಂದ ಮುಂದೆ ಅಸಾಧಾರಣವಾದ ಘಟನೆಗಳು ನಡೆದವು. ಮೊದಲ ದಿನದ ಔತಣ ಮುಗಿಸಿ ಹಾಮಾನನು “ಆನಂದಲಹರಿಯಲ್ಲಿ” ಮನೆಗೆ ಹೊರಟನು ಎನ್ನುತ್ತದೆ ಬೈಬಲ್‌. ಬೇರಾರಿಗೂ ಕೊಟ್ಟಿರದ ಈ ಸನ್ಮಾನವನ್ನು ರಾಜ ರಾಣಿ ತನಗೆ ಕೊಟ್ಟಿದ್ದಾರೆಂದು ಬೀಗುತ್ತಿದ್ದನು. ಆದರೆ ಅವನು ಅರಮನೆಯ ಹೆಬ್ಬಾಗಿಲನ್ನು ದಾಟಿಹೋಗುತ್ತಿದ್ದಾಗ ಅವನ ದೃಷ್ಟಿ ಯೆಹೂದ್ಯನಾದ ಮೊರ್ದೆಕೈ ಮೇಲೆ ಬಿತ್ತು. ಈಗಲೂ ಅವನು ಹಾಮಾನನಿಗೆ ಬಗ್ಗಿ ನಮಸ್ಕರಿಸಲಿಲ್ಲ. ಹಿಂದಿನ ಅಧ್ಯಾಯದಲ್ಲಿ ನೋಡಿದಂತೆ, ಮೊರ್ದೆಕೈ ಹೀಗೆ ಮಾಡುತ್ತಿದ್ದದ್ದು ಅಗೌರವ ತೋರಿಸಲಿಕ್ಕಲ್ಲ ಬದಲಾಗಿ ತನ್ನ ಮನಸ್ಸಾಕ್ಷಿಯನ್ನು ಶುದ್ಧವಾಗಿಟ್ಟುಕೊಳ್ಳಲು ಹಾಗೂ ಯೆಹೋವ ದೇವರೊಂದಿಗಿನ ತನ್ನ ಸಂಬಂಧವನ್ನು ಕಾಪಾಡಿಕೊಳ್ಳಲು. ಆದರೆ ಹಾಮಾನನು “ಅವನ ಮೇಲೆ ಕೋಪಭರಿತನಾದನು.”—ಎಸ್ತೇ. 5:9.

      11 ಹಾಮಾನನು ಮನೆಗೆ ಹೋಗಿ ತನ್ನ ಹೆಂಡತಿ ಹಾಗೂ ಆಪ್ತರಿಗೆ ತನಗೆ ಮೊರ್ದೆಕೈ ಮಾಡಿದ ಅವಮಾನದ ಬಗ್ಗೆ ಹೇಳಿದನು. ಆಗ ಅವರು 72 ಅಡಿ ಎತ್ತರದ ಗಲ್ಲುಗಂಬವನ್ನು ತಯಾರಿಸಿ, ರಾಜನ ಅಪ್ಪಣೆ ಪಡೆದು ಮೊರ್ದೆಕೈಯನ್ನು ಅದರಲ್ಲಿ ನೇತುಹಾಕಬೇಕೆಂದು ಹಾಮಾನನಿಗೆ ಸಲಹೆಕೊಟ್ಟರು. ಅವನಿಗೆ ಈ ಸಲಹೆ ಇಷ್ಟವಾಗಿ ಕೂಡಲೇ ಗಲ್ಲುಗಂಬ ಸಿದ್ಧಮಾಡಲು ಅಪ್ಪಣೆಕೊಟ್ಟನು.—ಎಸ್ತೇ. 5:12-14.

      12. (1) ಆಸ್ಥಾನದ ದಾಖಲೆಗಳಿಂದ ಓದಿಹೇಳುವಂತೆ ರಾಜ ಹೇಳಿದ್ದೇಕೆ? (2) ಅದರಿಂದ ಅವನಿಗೆ ಏನು ತಿಳಿದುಬಂತು?

      12 ಇತ್ತ ಅರಮನೆಯಲ್ಲಿದ್ದ ರಾಜನಿಗಾದರೊ ಆ ರಾತ್ರಿ ಎಂದಿನಂತಿರಲಿಲ್ಲ. “ಆ ರಾತ್ರಿಯಲ್ಲಿ ಅರಸನಿಗೆ ನಿದ್ರೆಬರಲಿಲ್ಲ” ಎನ್ನುತ್ತದೆ ಬೈಬಲ್‌. ಆದ್ದರಿಂದ ಆಸ್ಥಾನದ ದಾಖಲೆಗಳನ್ನು ತರಿಸಿ ಅದರಿಂದ ಓದಿಹೇಳಬೇಕೆಂದು ಆದೇಶ ನೀಡಿದನು. ಹಿಂದೊಮ್ಮೆ ರಾಜನ ಹತ್ಯೆಗಾಗಿ ನಡೆಸಲಾದ ಸಂಚಿನ ವಿವರ ಆ ದಾಖಲೆಗಳಲ್ಲಿತ್ತು. ಆಗ ರಾಜನಿಗೆ ಆ ಸಂಚುಗಾರರನ್ನು ಹಿಡಿದು ಹತಿಸಲಾದದ್ದು, ಸಂಚನ್ನು ಬಯಲುಪಡಿಸಿದವನು ಮೊರ್ದೆಕೈ ಎನ್ನುವುದು ನೆನಪಿಗೆ ಬಂತು. ತಟ್ಟನೆ ಏನೋ ಹೊಳೆದಂತಾಗಿ ಮೊರ್ದೆಕೈಗೆ ಯಾವ ಪ್ರತಿಫಲ ಕೊಡಲಾಯಿತೆಂದು ಕೇಳಿದನು. ಯಾವ ಪ್ರತಿಫಲವನ್ನೂ ಕೊಡಲಾಗಿಲ್ಲ ಎಂಬ ಉತ್ತರ ಸಿಕ್ಕಿತು.—ಎಸ್ತೇರಳು 6:1-3 ಓದಿ.

      13, 14. (1) ಹಾಮಾನನ ಯೋಜನೆಗಳು ತಲೆಕೆಳಗಾಗಲು ಆರಂಭವಾದದ್ದು ಹೇಗೆ? (2) ಅವನ ಪತ್ನಿ ಮತ್ತು ಆಪ್ತರು ಏನಂದರು?

      13 ಇದರಿಂದ ರಾಜ ಚಿಂತಿತನಾದನು. ತಮ್ಮ ಕಡೆಯಿಂದಾದ ಈ ತಪ್ಪನ್ನು ತಿದ್ದಲಿಕ್ಕೆ ಆಸ್ಥಾನದ ಅಧಿಕಾರಿಗಳು ಯಾರಾದರೂ ಪ್ರಾಕಾರದಲ್ಲಿದ್ದಾರಾ ಎಂದು ಕೇಳಿದನು. ಹಾಮಾನನೇ ಅಲ್ಲಿ ಇರಬೇಕಾ?! ಮೊರ್ದೆಕೈಯನ್ನು ಹತಿಸಲಿಕ್ಕಾಗಿ ಅನುಮತಿ ಕೇಳಬೇಕೆಂಬ ಆತುರದಿಂದ ರಾಜನ ಆಸ್ಥಾನಕ್ಕೆ ಬೆಳ್ಳಂಬೆಳಗ್ಗೆ ಬಂದಿದ್ದ. ಆದರೆ ಅವನು ಈ ಬಗ್ಗೆ ಬಾಯಿ ತೆರೆಯುವ ಮುಂಚೆಯೇ ರಾಜ ತನ್ನ ಅನುಗ್ರಹಕ್ಕೆ ಪಾತ್ರನಾದವನಿಗೆ ಹೇಗೆ ಸನ್ಮಾನಮಾಡಬೇಕೆನ್ನುತ್ತೀ ಎಂದು ಸಲಹೆ ಕೇಳಿದನು. ರಾಜನ ಮನಸ್ಸಿನಲ್ಲಿರುವುದು ತಾನೇ ಎಂದು ಹಾಮಾನ ನೆನಸಿ, ಆ ವ್ಯಕ್ತಿಗೆ ತುಂಬ ಆಡಂಬರದಿಂದ ಹೇಗೆಲ್ಲ ಸನ್ಮಾನಿಸಬೇಕೆಂದು ವಿವರಿಸಲು ಶುರುಮಾಡಿದ. ಅವನಿಗೆ ರಾಜವಸ್ತ್ರಗಳನ್ನು ಹಾಕಿಸಬೇಕು, ರಾಜನ ಕುದುರೆ ಮೇಲೆ ಕೂರಿಸಬೇಕು, ಅರಸನ ಉನ್ನತ ಅಧಿಕಾರಿಯೊಬ್ಬನು ಶೂಷನ್‌ನಲ್ಲೆಲ್ಲಾ ಅವನ ಮೆರವಣಿಗೆ ಮಾಡಿಸಿ, ಕುದುರೆ ಮುಂದೆ ಹೋಗುತ್ತಾ ಎಲ್ಲರಿಗೂ ಕೇಳುವ ಹಾಗೆ ಗಟ್ಟಿಯಾಗಿ ಅವನ ಗುಣಗಾನ ಮಾಡಬೇಕೆಂದು ಹೇಳಿದ. ಆದರೆ ಸನ್ಮಾನಿಸಬೇಕಾದ ವ್ಯಕ್ತಿ ಬೇರ್ಯಾರೂ ಅಲ್ಲ ಮೊರ್ದೆಕೈ ಅಂತ ಹಾಮಾನನಿಗೆ ಗೊತ್ತಾದಾಗ ಅವನ ಮುಖ ವಿವರ್ಣ ಆದದ್ದನ್ನು ಸ್ವಲ್ಪ ಊಹಿಸಿ! ಮೊರ್ದೆಕೈಯ ಗುಣಗಾನ ಮಾಡುವ ಕೆಲಸವನ್ನು ರಾಜನು ಯಾರಿಗೆ ವಹಿಸಿದನು? ಹಾಮಾನನಿಗೇ!!—ಎಸ್ತೇ. 6:4-10.

      14 ಅವನಿಗೆ ಜುಗುಪ್ಸೆಯಾದರೂ ಈ ಕೆಲಸವನ್ನು ಮನಸ್ಸಿಲ್ಲದ ಮನಸ್ಸಿನಿಂದ ಮಾಡಿ ಮುಗಿಸಿದ. ಸಂಕಟ ತಾಳಲಾರದೆ ಮನೆಗೆ ಓಡಿದ. ಅವನ ಪತ್ನಿ ಮತ್ತು ಆಪ್ತರೆಲ್ಲರೂ ಇದೆಲ್ಲ ಕೇಡಿನ ಸೂಚನೆ, ಯೆಹೂದ್ಯನಾದ ಮೊರ್ದೆಕೈ ವಿರುದ್ಧದ ಹೋರಾಟದಲ್ಲಿ ಹಾಮಾನನಿಗೆ ಸೋಲು ಖಂಡಿತ ಎಂದು ಹೇಳಿದರು.—ಎಸ್ತೇ. 6:12, 13.

      15. (1) ಎಸ್ತೇರಳು ತಾಳ್ಮೆ ತೋರಿಸಿದ್ದರ ಫಲಿತಾಂಶ ಏನಾಯಿತು? (2) ನಾವು ‘ಕಾದುಕೊಳ್ಳುವುದು’ ವಿವೇಕಯುತವೇಕೆ?

      15 ಎಸ್ತೇರ್‌ ತಾಳ್ಮೆ ತೋರಿಸಿ ರಾಜನ ಮುಂದೆ ತನ್ನ ಕೋರಿಕೆ ತಿಳಿಸಲಿಕ್ಕೆ ಇನ್ನೊಂದು ದಿನದ ಮಟ್ಟಿಗೆ ಕಾದದ್ದು ಒಳ್ಳೇದೇ ಆಯಿತು. ಏಕೆಂದರೆ ಹಾಮಾನನು ತನ್ನ ಗೋರಿಯನ್ನು ತಾನೇ ತೋಡಿಕೊಳ್ಳಲಾರಂಭಿಸಿದ್ದ. ಅಲ್ಲದೆ, ರಾಜನಿಗೆ ಆ ರಾತ್ರಿ ನಿದ್ದೆ ಬರದ ಹಾಗೆ ಮಾಡಿದ್ದು ಯೆಹೋವ ದೇವರೇ ಆಗಿರಬಹುದು. (ಜ್ಞಾನೋ. 21:1) ದೇವರ ವಾಕ್ಯವು ನಮಗೆ ‘ಕಾದುಕೊಳ್ಳುವಂತೆ’ ಪ್ರೋತ್ಸಾಹಿಸುವುದು ನಮ್ಮ ಒಳಿತಿಗೇ. (ಮೀಕ 7:7 ಓದಿ.) ನಮಗೆ ಸಮಸ್ಯೆಗಳಿರುವಾಗ ಅವನ್ನು ಪರಿಹರಿಸಲು ನಾವು ದೇವರಲ್ಲಿ ಭರವಸೆಯಿಟ್ಟು ಆತನು ಕ್ರಮಗೈಯುವಂತೆ ಕಾಯಬೇಕು. ಆತನದನ್ನು ಪರಿಹರಿಸುವ ವಿಧವು ಎಷ್ಟೋ ಶ್ರೇಷ್ಠವಾಗಿರುತ್ತದೆ. ಒಂದುವೇಳೆ ನಾವಾಗಿಯೇ ಅದನ್ನು ಪರಿಹರಿಸಲು ಹೆಜ್ಜೆ ತಕ್ಕೊಂಡಿರುತ್ತಿದ್ದರೆ ಅದು ಅಷ್ಟು ಉತ್ತಮವಾಗಿರುತ್ತಿರಲಿಲ್ಲ ಎಂದು ನಮಗೆ ಗೊತ್ತಾಗುವುದು.

      ಹೇಳಬೇಕಾದದ್ದನ್ನು ಧೈರ್ಯದಿಂದ ಹೇಳಿಬಿಟ್ಟಳು

      16, 17. (1) ಎಸ್ತೇರಳಿಗೆ “ಮಾತಾಡುವ ಸಮಯ” ಯಾವಾಗ ಬಂತು? (2) ಎಸ್ತೇರ್‌ ವಷ್ಟಿಯಂತಿರಲಿಲ್ಲ ಹೇಗೆ?

      16 ರಾಜನ ತಾಳ್ಮೆಯನ್ನು ಇನ್ನಷ್ಟು ಪರೀಕ್ಷಿಸುವುದು ಉಚಿತವಲ್ಲವೆಂದು ಎಸ್ತೇರಳಿಗನಿಸಿತು. ಎರಡನೇ ದಿನದ ಔತಣದಲ್ಲಿ ರಾಜನಿಗೆ ಎಲ್ಲವನ್ನು ಮುಚ್ಚುಮರೆಯಿಲ್ಲದೆ ಹೇಳಲು ನಿರ್ಧರಿಸಿದಳು. ಆದರೆ ಹೇಳುವುದು ಹೇಗೆ? ಆ ಔತಣದಲ್ಲಿ ರಾಜನು ಪುನಃ ಒಮ್ಮೆ ಅವಳ ಕೋರಿಕೆ ಏನೆಂದು ಕೇಳಿ ಅವಳಿಗೆ ಮಾತಾಡುವ ಅವಕಾಶ ಕೊಟ್ಟನು. (ಎಸ್ತೇ. 7:2) ಕೊನೆಗೂ ಎಸ್ತೇರಳಿಗೆ “ಮಾತಾಡುವ ಸಮಯ” ಬಂತು.

      17 ಮೊದಲು ಅವಳು ಮನಸ್ಸಲ್ಲೇ ದೇವರಿಗೆ ಪ್ರಾರ್ಥಿಸಿರಬಹುದು. ಅನಂತರ, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ಸಮ್ಮತಿಸುವದಾದರೆ ನನ್ನ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಲಾಲಿಸಿ ನನ್ನ ಜೀವವನ್ನೂ ಜನಾಂಗವನ್ನೂ ಉಳಿಯಗೊಡಿಸಬೇಕು” ಎಂದು ರಾಜನಿಗೆ ಹೇಳಿದಳು. (ಎಸ್ತೇ. 7:3) ಅವಳು ರಾಜನೊಟ್ಟಿಗೆ ಮಾತಾಡಿದ ರೀತಿ ಗಮನಿಸಿ. ಅವಳು ಹೇಳಲಿರುವ ವಿಷಯದಲ್ಲಿ ರಾಜನು ಯಾವುದೇ ತೀರ್ಮಾನ ತಕ್ಕೊಂಡರೂ ಅದನ್ನು ಗೌರವಿಸುತ್ತಾಳೆಂದು ಅದು ತೋರಿಸಿತು. ರಾಜನನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದ ಅವನ ಮಾಜಿ ಪತ್ನಿ ವಷ್ಟಿಯಂತೆ ಎಸ್ತೇರ್‌ ಇರಲಿಲ್ಲ. (ಎಸ್ತೇ. 1:10-12) ಅಲ್ಲದೆ, ರಾಜನು ಹಾಮಾನನಲ್ಲಿ ಭರವಸೆಯಿಟ್ಟದ್ದು ಮೂರ್ಖತನವಾಗಿತ್ತೆಂದು ಅವಳು ಟೀಕಿಸಲಿಲ್ಲ. ಬದಲಿಗೆ, ತನ್ನ ಜೀವಕ್ಕೆ ಬಂದಿರುವ ಅಪಾಯದಿಂದ ತನ್ನನ್ನು ರಕ್ಷಿಸುವಂತೆ ರಾಜನ ಬಳಿ ಅಂಗಲಾಚಿದಳು.

      18. ಎಸ್ತೇರಳು ರಾಜನ ಮುಂದೆ ಸಮಸ್ಯೆಯನ್ನು ಬಿಡಿಸಿಟ್ಟದ್ದು ಹೇಗೆ?

      18 ರಾಣಿಯ ವಿನಂತಿ ರಾಜನ ಮನಕಲಕಿತು. ತನ್ನ ಪತ್ನಿಯ ಜೀವಕ್ಕೆ ಕುತ್ತು ತರುವಷ್ಟು ಧೈರ್ಯ ಯಾರು ಮಾಡಿರಬಹುದೆಂದು ಚಕಿತನೂ ಆದ. ಎಸ್ತೇರ್‌ ಮಾತು ಮುಂದುವರಿಸುತ್ತಾ, “ಜನರು ನಮ್ಮನ್ನು ಕೊಂದು ಸಂಹರಿಸಿ ನಿರ್ನಾಮಗೊಳಿಸುವ ಹಾಗೆ ನನ್ನನ್ನೂ ನನ್ನ ಜನರನ್ನೂ ಮಾರಲಾಗಿದೆ. ಬರೇ ದಾಸದಾಸಿಯರಾಗುವದಕ್ಕೆ ಮಾರಲ್ಪಟ್ಟಿದ್ದರೆ ಸುಮ್ಮನಿರುತ್ತಿದ್ದೆ. ಆದರೆ ಈಗ ಬಂದೊದಗಿರುವ ಆಪತ್ತಿನಿಂದ ರಾಜನಿಗೇ ಹಾನಿ ಆಗಲಿದೆ” ಎಂದು ಹೇಳಿದಳು. (ಎಸ್ತೇ. 7:4, NW) ಸಮಸ್ಯೆಯನ್ನು ಎಸ್ತೇರಳು ಮುಚ್ಚುಮರೆಯಿಲ್ಲದೆ ಹೇಳಿದ್ದನ್ನು ಗಮನಿಸಿ. ಆದರೆ ಅದೇ ಸಮಯದಲ್ಲಿ ಅವಳದನ್ನು ಹೇಳುತ್ತಿರುವುದಕ್ಕೆ ಕಾರಣವನ್ನೂ ವಿವರಿಸಿದಳು. ಅದೇನೆಂದರೆ ತನ್ನನ್ನೂ ತನ್ನ ಜನರನ್ನೂ ದಾಸತ್ವಕ್ಕೆ ಒಳಪಡಿಸುವ ಬೆದರಿಕೆ ಮಾತ್ರ ಆಗಿರುತ್ತಿದ್ದರೆ ಸುಮ್ಮನಿರುತ್ತಿದ್ದೆ, ಆದರೆ ಈ ಮಾರಣಹೋಮದಿಂದ ರಾಜನಿಗೇ ದೊಡ್ಡ ನಷ್ಟ ಆಗಲಿದೆ ಎಂದಳು.

      19. ಒಡಂಬಡಿಸುವ ಕಲೆ ಬಗ್ಗೆ ಎಸ್ತೇರಳಿಂದ ಏನು ಕಲಿಯಬಲ್ಲೆವು?

      19 ಒಂದು ವಿಷಯದ ಬಗ್ಗೆ ಒಬ್ಬರನ್ನು ಒಡಂಬಡಿಸುವುದು ಹೇಗೆಂಬುದನ್ನು ಎಸ್ತೇರಳ ಮಾದರಿಯಿಂದ ಕಲಿಯಬಲ್ಲೆವು. ಒಡಂಬಡಿಸುವುದು ಒಂದು ಕಲೆ. ಗಂಭೀರ ಸಮಸ್ಯೆಯೊಂದರ ಬಗ್ಗೆ ಕ್ರಮ ತಕ್ಕೊಳ್ಳುವಂತೆ ನಮ್ಮ ಆತ್ಮೀಯರೊಬ್ಬರಿಗೊ ಅಧಿಕಾರದಲ್ಲಿರುವ ವ್ಯಕ್ತಿಗೊ ತಿಳಿಸಬೇಕಾಗಿ ಬಂದರೆ ಅದನ್ನು ತಾಳ್ಮೆಯಿಂದ, ಗೌರವದಿಂದ, ಮುಚ್ಚುಮರೆಯಿಲ್ಲದೆ ಹೇಳುವುದೇ ಸರಿಯಾದ ವಿಧಾನ.—ಜ್ಞಾನೋ. 16:21, 23.

      20, 21. (1) ಎಸ್ತೇರಳು ಹಾಮಾನನನ್ನು ಬಯಲಿಗೆಳೆದದ್ದು ಹೇಗೆ? (2) ರಾಜನ ಪ್ರತಿಕ್ರಿಯೆ ಏನಾಗಿತ್ತು? (3) ಹಾಮಾನ ಸಂಚುಗಾರ, ಹೇಡಿ ಎಂಬುದು ಬಯಲಾದಾಗ ಅವನೇನು ಮಾಡಿದ?

      20 “ಇಂಥ ದುಷ್ಕೃತ್ಯದ ಮೇಲೆ ಮನಸ್ಸಿಟ್ಟವನು ಯಾವನು?” ಎಂದು ಅಬ್ಬರಿಸಿದ ಅಹಷ್ವೇರೋಷ. “ನಮ್ಮನ್ನು ಬಾಧಿಸಬೇಕೆಂದಿರುವ ಹಗೆಗಾರನು ಈ ದುಷ್ಟ ಹಾಮಾನನೇ” ಎನ್ನುತ್ತಾ ಎಸ್ತೇರಳು ಅವನೆಡೆಗೆ ಬೊಟ್ಟುಮಾಡುವುದನ್ನು ಊಹಿಸಿ. ಆ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ಏನಾಗಿತ್ತು? ಹಾಮಾನನಿಗಂತೂ ಉಸಿರೇ ನಿಂತು ಹೋದಂತಾಯಿತು. ಮೊದಲೇ ಚಿಕ್ಕಚಿಕ್ಕ ಕಾರಣಕ್ಕೆಲ್ಲ ಸಿಡಿದೇಳುತ್ತಿದ್ದ ಈ ಅರಸ ಆ ಮಾತು ಕೇಳಿದೊಡನೆ ಅವನ ಮುಖ ಸಿಟ್ಟಿನಿಂದ ಕೆಂಪಾಗುವುದನ್ನು ಸ್ವಲ್ಪ ಊಹಿಸಿ. ತನ್ನ ಮುದ್ದಿನ ಮಡದಿಯನ್ನು ಸಾಯಿಸುವ ಆಜ್ಞೆಯನ್ನು ಮೋಸದಿಂದ ತನ್ನಿಂದ ಹೊರಡಿಸಿದವನು ತನ್ನ ನೆಚ್ಚಿನ ಸಲಹೆಗಾರನೇ ಎಂದು ತಿಳಿದಾಗ ರಾಜನಿಗೆ ಹೇಗಾಗಿರಬೇಕು? ತನ್ನ ಕೋಪವನ್ನು ಹತ್ತಿಕ್ಕಲು ರಾಜ ಅಲ್ಲಿಂದೆದ್ದು ಅರಮನೆಯ ತೋಟಕ್ಕೆ ಹೋದನು.—ಎಸ್ತೇ. 7:5-7.

      ಎಸ್ತೇರಳು ಎರಡನೇ ಔತಣದಲ್ಲಿ ರಾಜ ಅಹಷ್ವೇರೋಷನಿಗೆ ಎಲ್ಲವನ್ನೂ ಹೇಳಿ ಧೈರ್ಯದಿಂದ ಹಾಮಾನನೆಡೆಗೆ ಬೊಟ್ಟುಮಾಡುತ್ತಿದ್ದಾಳೆ

      ಹಾಮಾನನು ದುಷ್ಟನೆಂದು ಎಸ್ತೇರ್‌ ಧೈರ್ಯದಿಂದ ತೋರಿಸಿಕೊಟ್ಟಳು

      21 ಹಾಮಾನನು ಸಂಚುಗಾರ, ಹೇಡಿ ಎಂಬುದು ಬಯಲಾಯಿತು. ಅವನು ಎಸ್ತೇರಳ ಕಾಲಿಗೆ ಬಿದ್ದು ತನಗೆ ದಯೆತೋರಿಸುವಂತೆ ಬೇಡಿದ. ರಾಜ ಕೋಣೆಯೊಳಗೆ ವಾಪಸ್ಸು ಬಂದಾಗ, ಹಾಮಾನನು ಎಸ್ತೇರಳ ಮಂಚದ ಮೇಲೆ ಬಿದ್ದು ಅವಳಲ್ಲಿ ಬೇಡಿಕೊಳ್ಳುತ್ತಿರುವುದನ್ನು ನೋಡಿದನು. ತನ್ನ ಮನೆಯಲ್ಲೇ, ತನ್ನ ಮುಂದೆಯೇ ರಾಣಿಯ ಮಾನಭಂಗ ಮಾಡುತ್ತಿದ್ದಾನೆಂದು ರಾಜನು ಸಿಟ್ಟಿನಿಂದ ಹಾಮಾನನನ್ನು ದೂಷಿಸಿದನು. ಈ ಮಾತು ಹಾಮಾನನಿಗೆ ಮರಣಘಂಟೆ ಬಾರಿಸಿದಂತಿತ್ತು. ಸೇವಕರು ಬಂದು ಅವನ ಮುಖಕ್ಕೆ ಮುಸುಕು ಹಾಕಿ ಅಲ್ಲಿಂದ ಕರೆದೊಯ್ದರು. ಆಗ ರಾಜನ ಅಧಿಕಾರಿಗಳಲ್ಲೊಬ್ಬನು ಮೊರ್ದೆಕೈಗಾಗಿ ಹಾಮಾನ ದೊಡ್ಡ ಗಲ್ಲುಗಂಬ ಸಿದ್ಧಮಾಡಿಟ್ಟಿದ್ದಾನೆಂದು ಬಾಯಿಬಿಟ್ಟನು. ಅದೇ ಕಂಬದಲ್ಲಿ ಹಾಮಾನನನ್ನು ನೇತು ಹಾಕಬೇಕೆಂದು ಅಹಷ್ವೇರೋಷ ತಕ್ಷಣ ಅಪ್ಪಣೆಕೊಟ್ಟನು.—ಎಸ್ತೇ. 7:8-10.

      22. ನಾವು ಹತಾಶರಾಗದಂತೆ, ಸಿನಿಕರಾಗದಂತೆ, ನಂಬಿಕೆ ಕಳಕೊಳ್ಳದಂತೆ ಎಸ್ತೇರಳ ಮಾದರಿ ಹೇಗೆ ಕಲಿಸುತ್ತದೆ?

      22 ಅನ್ಯಾಯ ತುಂಬಿರುವ ಇಂದಿನ ಜಗತ್ತಿನಲ್ಲಿ ಯಾವತ್ತೂ ನ್ಯಾಯ ಸಿಗುವುದಿಲ್ಲವೆಂಬ ಯೋಚನೆ ಬರುವುದು ಸಹಜ. ನಿಮಗೆಂದಾದರೂ ಹಾಗೆ ಅನಿಸಿದೆಯೇ? ಎಸ್ತೇರಳಾದರೊ ಹತಾಶಳಾಗಲಿಲ್ಲ. ಯಾರಲ್ಲೂ ಭರವಸೆಯಿಡಲಾಗುವುದಿಲ್ಲ ಎಂಬ ಸಿನಿಕತನ ತಾಳಲಿಲ್ಲ. ನಂಬಿಕೆ ಕಳಕೊಳ್ಳಲಿಲ್ಲ. ಸಮಯ ಬಂದಾಗ ನ್ಯಾಯದ ಪರವಹಿಸಿ ಧೈರ್ಯದಿಂದ ಮಾತಾಡಿದಳು. ಮುಂದಿನದ್ದನ್ನು ಯೆಹೋವನು ಮಾಡುವನೆಂದು ಆತನಲ್ಲಿ ಭರವಸೆಯಿಟ್ಟಳು. ನಾವೂ ಹಾಗೆಯೇ ಮಾಡೋಣ. ಯೆಹೋವನು ಎಸ್ತೇರಳ ದಿನದಲ್ಲಿ ಹೇಗಿದ್ದನೊ ಇಂದು ಕೂಡ ಹಾಗೆಯೇ ಇದ್ದಾನೆ, ಬದಲಾಗಿಲ್ಲ. ಹಾಮಾನನಿಗೆ ಮಾಡಿದಂತೆ ಈಗಲೂ ಆತನು ದುಷ್ಟ ಹಾಗೂ ಕುಟಿಲ ಜನರು ತಮ್ಮ ಬಲೆಯಲ್ಲಿ ತಾವೇ ಸಿಕ್ಕಿಬೀಳುವಂತೆ ಮಾಡಬಲ್ಲನು.—ಕೀರ್ತನೆ 7:11-16 ಓದಿ.

      ಯೆಹೋವನಿಗಾಗಿ, ಆತನ ಜನರಿಗಾಗಿ ನಿಸ್ವಾರ್ಥದಿಂದ ಕ್ರಮಗೈದಳು

      23. (1) ರಾಜನು ಮೊರ್ದೆಕೈ ಮತ್ತು ಎಸ್ತೇರಳಿಗೆ ಯಾವ ಪ್ರತಿಫಲ ಕೊಟ್ಟ? (2) ಯಾಕೋಬನು ಮರಣಶಯ್ಯೆಯಲ್ಲಿದ್ದಾಗ ಬೆನ್ಯಾಮೀನನ ಕುರಿತು ನುಡಿದ ಪ್ರವಾದನೆ ಹೇಗೆ ನೆರವೇರಿತು? (“ಪ್ರವಾದನೆಯ ನೆರವೇರಿಕೆ” ಚೌಕ ನೋಡಿ.)

      23 ಕೊನೆಗೂ ರಾಜ ಅಹಷ್ವೇರೋಷನಿಗೆ ಮೊರ್ದೆಕೈ ಯಾರೆಂದು ಗೊತ್ತಾಯಿತು. ಅವನು ತನ್ನನ್ನು ಹತ್ಯೆಯಿಂದ ಬಚಾವು ಮಾಡಿದವನು ಮಾತ್ರವಲ್ಲ, ಎಸ್ತೇರಳ ಸಾಕುತಂದೆಯೂ ಆಗಿದ್ದನೆಂದು ತಿಳಿದುಕೊಂಡ. ಹಾಮಾನನ ಹುದ್ದೆಯನ್ನು ಮೊರ್ದೆಕೈಗೆ ಕೊಟ್ಟು ಅವನನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದ. ಹಾಮಾನನ ಮನೆಯನ್ನು, ಅಪಾರ ಧನಸಂಪತನ್ನು ಎಸ್ತೇರಳಿಗೆ ಕೊಟ್ಟ. ಎಸ್ತೇರಳು ಇದೆಲ್ಲದರ ಉಸ್ತುವಾರಿಯನ್ನು ಮೊರ್ದೆಕೈಗೆ ವಹಿಸಿಕೊಟ್ಟಳು.—ಎಸ್ತೇ. 8:1, 2.

      24, 25. (1) ಹಾಮಾನನ ಕುತಂತ್ರವನ್ನು ಬಯಲಿಗೆಳೆದ ನಂತರ ಎಸ್ತೇರ್‌ ಏಕೆ ಸುಮ್ಮನೆ ಕೂರಲಿಲ್ಲ? (2) ಎಸ್ತೇರ್‌ ಪುನಃ ತನ್ನ ಜೀವವನ್ನು ಅಪಾಯಕ್ಕೊಡ್ಡಿದ್ದು ಹೇಗೆ?

      24 ಎಸ್ತೇರ್‌ ಈಗ ತನಗೂ ಮೊರ್ದೆಕೈಗೂ ಜೀವಾಪಾಯ ತಪ್ಪಿತ್ತೆಂದು ಸುಮ್ಮನೆ ಕೂತಳೊ? ಅವಳು ಸ್ವಾರ್ಥಿಯಾಗಿರುತ್ತಿದ್ದರೆ ಹಾಗೆ ಮಾಡುತ್ತಿದ್ದಳು. ಆದರೆ ಅವಳು ಅಂಥವಳಾಗಿರಲಿಲ್ಲ. ಎಲ್ಲ ಯೆಹೂದ್ಯರನ್ನು ಸಂಹರಿಸಬೇಕೆಂದು ಹಾಮಾನನು ಹೊರಡಿಸಿದ್ದ ಆಜ್ಞೆ ಅದೇ ಸಮಯದಲ್ಲಿ ಸಾಮ್ರಾಜ್ಯದ ಮೂಲೆಮೂಲೆಗೂ ತಲಪುತ್ತಾ ಇತ್ತು. ಈ ಕ್ರೂರವಾದ ವಧೆಗಾಗಿ ಹಾಮಾನನು ಒಂದು ವಿಧದ ಮಾಟಮಂತ್ರವಾದ ಪೂರ್‌ ಅಂದರೆ ಚೀಟನ್ನು ಹಾಕಿಸಿ ದಿನವನ್ನೂ ನಿಶ್ಚಯಪಡಿಸಿದ್ದ. (ಎಸ್ತೇ. 9:24-26) ಆ ದಿನಕ್ಕೆ ಇನ್ನೂ ಕೆಲವು ತಿಂಗಳಿದ್ದವಾದರೂ ಅದು ವೇಗವಾಗಿ ಧಾವಿಸಿ ಬರುತ್ತಾ ಇತ್ತು. ಆ ಆಪತ್ತನ್ನು ತಪ್ಪಿಸುವ ಸಾಧ್ಯತೆ ಇತ್ತೇ?

      25 ಎಸ್ತೇರ್‌ ನಿಸ್ವಾರ್ಥದಿಂದ ಪುನಃ ತನ್ನ ಪ್ರಾಣವನ್ನು ಅಪಾಯಕ್ಕೊಡ್ಡಿದಳು. ರಾಜನ ಅಪ್ಪಣೆಯಿಲ್ಲದೆ ಅವನ ಸನ್ನಿಧಾನಕ್ಕೆ ಮತ್ತೊಮ್ಮೆ ಹೋದಳು. ಈ ಸಲವಂತೂ ತನ್ನ ಜನರಿಗಾಗಿ ಕಣ್ಣೀರು ಸುರಿಸುತ್ತಾ, ಆ ಘೋರ ಆಜ್ಞೆಯನ್ನು ಹಿಂದೆಗೆಯುವಂತೆ ಗಂಡನ ಬಳಿ ಅಂಗಲಾಚಿದಳು. ಆದರೆ ಪರ್ಷಿಯದ ರಾಜನ ಹೆಸರಿನಲ್ಲಿ ಒಮ್ಮೆ ಒಂದು ಆಜ್ಞೆ ಹೊರಡಿಸಲ್ಪಟ್ಟರೆ ಅದನ್ನು ಯಾವ ಕಾರಣಕ್ಕೂ ಹಿಂದೆಗೆಯಬಾರದೆಂಬ ಪದ್ಧತಿಯಿತ್ತು. (ದಾನಿ. 6:12, 15) ಆದ್ದರಿಂದ ಒಂದು ಹೊಸ ಆಜ್ಞೆಯನ್ನು ಜಾರಿಗೆ ತರಲು ರಾಜನು ಎಸ್ತೇರ್‌ ಹಾಗೂ ಮೊರ್ದೆಕೈಗೆ ಅಧಿಕಾರ ಕೊಟ್ಟ. ಈ ಎರಡನೆಯ ಆಜ್ಞೆ ಪ್ರಕಾರ ಯೆಹೂದ್ಯರು ತಮ್ಮ ಪ್ರಾಣರಕ್ಷಣೆಗಾಗಿ ಹೋರಾಡಬಹುದಿತ್ತು. ಈ ಒಳ್ಳೇ ಸುದ್ದಿಯನ್ನು ಸಾಮ್ರಾಜ್ಯದ ಪ್ರತಿಯೊಂದು ಭಾಗದಲ್ಲಿದ್ದ ಯೆಹೂದ್ಯರಿಗೆ ತಲಪಿಸಲು ಕುದುರೆಸವಾರರು ದೌಡಾಯಿಸಿದರು. ಈಗ ಯೆಹೂದ್ಯರ ಹೃದಯದಲ್ಲಿ ಆಶಾಕಿರಣ ಮೂಡಿತು. (ಎಸ್ತೇ. 8:3-16) ಆ ವಿಶಾಲ ಸಾಮ್ರಾಜ್ಯದಾದ್ಯಂತ ಯೆಹೂದ್ಯರು ಶಸ್ತ್ರಸಜ್ಜಿತರಾಗಿ, ಹೋರಾಟಕ್ಕೆ ಸಿದ್ಧರಾಗುವುದನ್ನು ಊಹಿಸಿಕೊಳ್ಳಿ. ಇದೆಲ್ಲ ಸಾಧ್ಯವಾದದ್ದು ಆ ಹೊಸ ಆಜ್ಞೆಯಿಂದ. ಆದರೆ ಪ್ರಶ್ನೆಯೇನೆಂದರೆ, ‘ಸೇನಾಧೀಶ್ವರನಾದ ಯೆಹೋವನು’ ಆತನ ಜನರ ಸಂಗಡ ಇರುವನೇ?—1 ಸಮು. 17:45.

      ಎಸ್ತೇರ್‌ ಮತ್ತು ಮೊರ್ದೆಕೈ ಎರಡನೇ ಆಜ್ಞೆಯನ್ನು ಹೇಳುತ್ತಿದ್ದಂತೆ ಒಬ್ಬ ಯುವಕನು ಅದನ್ನು ಬರೆಯುತ್ತಿದ್ದಾನೆ

      ಪರ್ಷಿಯದ ಸಾಮ್ರಾಜ್ಯದಲ್ಲಿದ್ದ ಯೆಹೂದ್ಯರಿಗೆಲ್ಲ ಎಸ್ತೇರ್‌ ಹಾಗೂ ಮೊರ್ದೆಕೈ ಹೊಸ ಆಜ್ಞೆ ಕಳುಹಿಸಿದರು

      26, 27. (1) ಯೆಹೋವನು ತನ್ನ ಜನರಿಗೆ ಶತ್ರುಗಳ ಮೇಲೆ ಕೊಟ್ಟ ವಿಜಯವು ಎಷ್ಟು ಮಹತ್ತರವೂ ಸಂಪೂರ್ಣವೂ ಆಗಿತ್ತು? (2) ಹಾಮಾನನ ಪುತ್ರರ ನಾಶನದಿಂದಾಗಿ ಯಾವ ಪ್ರವಾದನೆ ನೆರವೇರಿತು?

      26 ಹಾಮಾನನು ನಿಶ್ಚಯಿಸಿದ್ದ ದಿನ ಬಂದಾಗ ದೇವಜನರು ಸಿದ್ಧರಾಗಿದ್ದರು. ಈಗಂತೂ ಪರ್ಷಿಯದ ಅನೇಕ ಅಧಿಕಾರಿಗಳೂ ಅವರ ಪಕ್ಷದಲ್ಲಿದ್ದರು. ಏಕೆಂದರೆ ಯೆಹೂದ್ಯನಾದ ಮೊರ್ದೆಕೈ ಹೊಸ ಪ್ರಧಾನ ಮಂತ್ರಿ ಎಂಬ ಸುದ್ದಿ ದೂರ ದೂರದ ವರೆಗೂ ಹಬ್ಬಿತ್ತು. ಯೆಹೋವನು ತನ್ನ ಜನರಿಗೆ ಮಹಾ ವಿಜಯವನ್ನು ಕೊಟ್ಟನು. ಶತ್ರುಗಳು ಮತ್ತೆಂದೂ ತನ್ನ ಜನರಿಗೆ ಹಾನಿಮಾಡದಂತೆ ಅವರು ಪೂರ್ತಿ ಸೋಲುಣ್ಣುವ ಹಾಗೆ ಮಾಡಿದನು.a—ಎಸ್ತೇ. 9:1-6.

      27 ಅಲ್ಲದೆ, ದುಷ್ಟ ಹಾಮಾನನ ಪುತ್ರರು ಜೀವದಿಂದಿರುವಂತೆ ಬಿಟ್ಟರೆ ಅವನ ಮನೆ ಮೇಲೆ ಉಸ್ತುವಾರಿ ಮಾಡುವ ಮೊರ್ದೆಕೈಯ ಜೀವಕ್ಕೆ ಅಪಾಯವಿರುತ್ತಿತ್ತು ಖಂಡಿತ. ಹಾಗಾಗಿ ಹಾಮಾನನ ಪುತ್ರರನ್ನೂ ಸಂಹರಿಸಲಾಯಿತು. (ಎಸ್ತೇ. 9:7-10) ಹೀಗೆ ಒಂದು ಬೈಬಲ್‌ ಪ್ರವಾದನೆ ನೆರವೇರಿತು. ತನ್ನ ಜನರ ಶತ್ರುಗಳಾಗಿದ್ದ ಅಮಾಲೇಕ್ಯರು ಪೂರ್ತಿಯಾಗಿ ನಾಶವಾಗಿ ಹೋಗುವರೆಂದು ದೇವರು ಎಷ್ಟೋ ಮುಂಚೆ ನುಡಿದಂತೆಯೇ ಆಯಿತು. (ಧರ್ಮೋ. 25:17-19) ದೇವರ ಖಂಡನೆಗೊಳಗಾಗಿದ್ದ ಆ ಜನಾಂಗದಲ್ಲಿ ಕೊನೆಗೆ ಉಳಿದವರ ಪೈಕಿ ಬಹುಶಃ ಹಾಮಾನನ ಪುತ್ರರಿದ್ದರು.

      28, 29. (1) ಎಸ್ತೇರ್‌ ಮತ್ತವಳ ಜನರು ಹೋರಾಟದಲ್ಲಿ ಒಳಗೂಡಬೇಕೆಂಬುದು ಯೆಹೋವನ ಚಿತ್ತವಾಗಿತ್ತು ಏಕೆ? (2) ಎಸ್ತೇರಳ ಮಾದರಿ ನಮಗಿಂದು ಪ್ರಯೋಜನಕರವೇಕೆ?

      28 ಯುವ ಪ್ರಾಯದ ಎಸ್ತೇರಳು ಯುದ್ಧ ಹಾಗೂ ಸಂಹಾರಕ್ಕೆ ಸಂಬಂಧಪಟ್ಟ ರಾಜಾಜ್ಞೆಗಳನ್ನು ಹೊರಡಿಸುವಂಥ ಭಾರವಾದ ಹೊರೆಯನ್ನು ಹೊರಬೇಕಾಯಿತು. ಅದು ಸುಲಭವಾಗಿರಲಿಲ್ಲವಾದರೂ ಅದನ್ನು ಮಾಡಿದಳು. ದೇವಜನರಾದ ಇಸ್ರಾಯೇಲ್ಯರನ್ನು ನಾಶನದಿಂದ ಪಾರುಮಾಡಬೇಕೆಂಬುದು ಯೆಹೋವನ ಚಿತ್ತವಾಗಿತ್ತು. ಏಕೆಂದರೆ ಆ ಜನಾಂಗದಿಂದಲೇ ಇಡೀ ಮಾನವಕುಲಕ್ಕೆ ನಿರೀಕ್ಷೆಯ ಏಕೈಕ ಮೂಲನಾದ ವಾಗ್ದತ್ತ ಮೆಸ್ಸೀಯನು ಹುಟ್ಟಿಬರಲಿದ್ದನು. (ಆದಿ. 22:18) ಇಂದಿರುವ ದೇವರ ಸೇವಕರಾದರೊ ಯಾವುದೇ ಸಂಘರ್ಷ, ಯುದ್ಧಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಏಕೆಂದರೆ ಮೆಸ್ಸೀಯನಾದ ಯೇಸು ಭೂಮಿಗೆ ಬಂದಾಗ ತನ್ನ ಹಿಂಬಾಲಕರು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವುದನ್ನು ನಿಷೇಧಿಸಿದನು.—ಮತ್ತಾ. 26:52.

      29 ಆದರೆ ಕ್ರೈಸ್ತರು ಆಧ್ಯಾತ್ಮಿಕ ಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆ. ಯೆಹೋವ ದೇವರಲ್ಲಿ ನಮಗಿರುವ ನಂಬಿಕೆಯನ್ನು ನಾಶಮಾಡಲು ಸೈತಾನನು ಹಿಂದೆಂದಿಗಿಂತಲೂ ಈಗ ಹೆಚ್ಚು ಕಾರ್ಯೋನ್ಮುಖನಾಗಿದ್ದಾನೆ. (2 ಕೊರಿಂಥ 10:3, 4 ಓದಿ.) ಹಾಗಾಗಿ ಎಸ್ತೇರಳ ಮಾದರಿ ನಮಗಿರುವುದು ನಿಜಕ್ಕೂ ಪ್ರಯೋಜನಕರ. ಧೈರ್ಯದಿಂದಿರುವ ಮೂಲಕ, ಒಡಂಬಡಿಸುವ ಕಲೆಯನ್ನು ವಿವೇಕ ಹಾಗೂ ತಾಳ್ಮೆಯಿಂದ ಬಳಸುವ ಮೂಲಕ, ನಿಸ್ವಾರ್ಥದಿಂದ ದೇವಜನರನ್ನು ಬೆಂಬಲಿಸಲು ಸಿದ್ಧಮನಸ್ಸಿನವರಾಗಿರುವ ಮೂಲಕ ಎಸ್ತೇರಳಂತೆ ನಮ್ಮ ನಂಬಿಕೆಯನ್ನು ತೋರಿಸೋಣ.

      ಎಸ್ತೇರ್‌ ಪುಸ್ತಕಕ್ಕೆ ಸಂಬಂಧಪಟ್ಟ ಪ್ರಶ್ನೆಗಳು

      ಯೆಹೋವನ ಆರಾಧಕನಲ್ಲದ ವ್ಯಕ್ತಿಯನ್ನು ಎಸ್ತೇರ್‌ ಮದುವೆಯಾಗುವಂತೆ ಮೊರ್ದೆಕೈ ಬಿಟ್ಟದ್ದೇಕೆ?

      ಮೊರ್ದೆಕೈ ಪ್ರತಿಷ್ಠೆಯ ಲಾಲಸೆಯಿಂದ ಎಸ್ತೇರಳನ್ನು ರಾಜನಿಗೆ ಮದುವೆಮಾಡಿಕೊಟ್ಟನು, ಅವನೊಬ್ಬ ಸಮಯಸಾಧಕ ಎನ್ನುವುದು ಕೆಲವು ವಿದ್ವಾಂಸರ ಅಂಬೋಣ. ಆದರೆ ಈ ಮಾತು ಸತ್ಯವೆನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಒಬ್ಬ ನಂಬಿಗಸ್ತ ಯೆಹೂದಿ ಆಗಿದ್ದ ಮೊರ್ದೆಕೈ ಅಂಥ ವಿವಾಹವನ್ನು ಖಂಡಿತ ಮೆಚ್ಚುತ್ತಿರಲಿಲ್ಲ. (ಧರ್ಮೋ. 7:3) ಪ್ರಾಚೀನ ಯೆಹೂದಿ ಪಾರಂಪರ್ಯ ಕಥೆಗನುಸಾರ ಮೊರ್ದೆಕೈ ಆ ವಿವಾಹವನ್ನು ತಡೆಯಲು ಯತ್ನಿಸಿದನಂತೆ. ಆದರೆ ರಾಜನನ್ನು ದೇವರೆಂದು ಕಾಣಲಾಗುತ್ತಿದ್ದ ಆ ದೇಶದಲ್ಲಿ ಮೊರ್ದೆಕೈ ಮತ್ತು ಎಸ್ತೇರ್‌ ಪರದೇಶೀಯರಾಗಿದ್ದ ಕಾರಣ ಅವರಿಗೆ ಈ ವಿವಾಹವನ್ನು ತಡೆಯಲು ಆಗಿರಲಿಕ್ಕಿಲ್ಲವೆಂದು ತೋರುತ್ತದೆ. ಎಸ್ತೇರಳ ವಿವಾಹವನ್ನು ಯೆಹೋವನು ತನ್ನ ಜನರನ್ನು ಸಂರಕ್ಷಿಸಲಿಕ್ಕಾಗಿ ಬಳಸಿದನೆಂದು ಕಾಲಾನಂತರ ಸ್ಪಷ್ಟವಾಯಿತು. —ಎಸ್ತೇ. 4:14.

      ದೇವರ ವೈಯಕ್ತಿಕ ಹೆಸರಾದ ಯೆಹೋವ ಎಸ್ತೇರಳ ಪುಸ್ತಕದಲ್ಲಿ ಒಂದೇ ಒಂದು ಸಾರಿಯೂ ಇಲ್ಲವೇಕೆ?

      ಈ ಪುಸ್ತಕವನ್ನು ಮೊರ್ದೆಕೈ ದೇವರ ಪ್ರೇರಣೆಯಿಂದ ಬರೆದನು. ಆದರೆ ಇದನ್ನು ಬರೆದ ನಂತರ ಬಹುಶಃ ಪರ್ಷಿಯದ ಅಧಿಕೃತ ದಾಖಲೆಗಳ ಜೊತೆ ಇಡಲಾಗಿತ್ತು. ಕಾಲಾನಂತರ ಅದನ್ನು ಯೆರೂಸಲೇಮಿಗೆ ಕೊಂಡೊಯ್ಯಲಾಗಿತ್ತು. ಒಂದುವೇಳೆ ಈ ಪುಸ್ತಕದಲ್ಲಿ ಯೆಹೋವನ ಹೆಸರು ಕಂಡುಬರುತ್ತಿದ್ದರೆ ಪರ್ಷಿಯನ್‌ ದೇವರುಗಳ ಭಕ್ತರು ಆ ಪುಸ್ತಕವನ್ನು ನಾಶಮಾಡಿಬಿಡುತ್ತಿದ್ದರು. ಮೊರ್ದೆಕೈ ಯೆಹೋವನ ಹೆಸರನ್ನು ನೇರವಾಗಿ ಬಳಸಿಲ್ಲವಾದರೂ ಈ ಪುಸ್ತಕದಲ್ಲಿ ತಿಳಿಸಲಾಗಿರುವ ಘಟನೆಗಳಲ್ಲಿ ಯೆಹೋವನು ಒಳಗೂಡಿದ್ದನೆಂಬುದು ನಿಶ್ಚಿತ. ಆಸಕ್ತಿಕರ ಸಂಗತಿಯೇನೆಂದರೆ, ಎಸ್ತೇರ್‌ ಪುಸ್ತಕದ ಹೀಬ್ರು ಮೂಲಪ್ರತಿಗಳಲ್ಲಿ ದೇವರ ಹೆಸರು ನಾಲ್ಕು ಕಡೆಗಳಲ್ಲಿ ಪದ್ಯಬಂಧದ ರೂಪದಲ್ಲಿ ತೋರಿಬರುತ್ತದೆ. ಅಂದರೆ ಒಂದರ ನಂತರ ಒಂದು ಬರುವ ನಾಲ್ಕು ಪದಗಳಲ್ಲಿನ ಪ್ರಥಮ ಅಕ್ಷರ ಇಲ್ಲವೆ ಕೊನೆಯ ಅಕ್ಷರಗಳನ್ನು ಕೂಡಿಸಿದರೆ ದೇವರ ಹೆಸರು ಬರುತ್ತದೆ. ಹೀಗೆ ಬರುವಂತೆ ಪದಗಳನ್ನು ಜಾಗ್ರತೆಯಿಂದ ಜೋಡಿಸಲಾಗಿದೆಯೆಂದು ತೋರಿಬರುತ್ತದೆ.

      ಎಸ್ತೇರಳ ಪುಸ್ತಕವನ್ನು ಇತಿಹಾಸ ಬೆಂಬಲಿಸುತ್ತದೆಯೇ?

      ಎಸ್ತೇರಳ ಪುಸ್ತಕವನ್ನು ಇತಿಹಾಸ ಬೆಂಬಲಿಸುವುದಿಲ್ಲವೆಂದು ವಿಮರ್ಶಕರು ಆಪಾದಿಸುತ್ತಾರೆ. ಆದರೆ ಇನ್ನೂ ಕೆಲವು ವಿದ್ವಾಂಸರು ಈ ಪುಸ್ತಕದ ಲೇಖಕನಿಗೆ ಪರ್ಷಿಯದ ರಾಜಪ್ರಭುತ್ವ, ವಾಸ್ತುಶಿಲ್ಪ, ರೀತಿನೀತಿಗಳ ಬಗ್ಗೆ ಸೂಕ್ಷ್ಮ ಜ್ಞಾನವಿದ್ದಂತೆ ತೋರುತ್ತದೆಂದೂ ಹೇಳುತ್ತಾರೆ. ಈಗ ಉಳಿದಿರುವ ಐಹಿಕ ದಾಖಲೆಗಳಲ್ಲಿ ಯಾವುದರಲ್ಲೂ ರಾಣಿ ಎಸ್ತೇರಳ ಹೆಸರಿಲ್ಲವೆಂಬುದು ಸತ್ಯ. ಆದರೆ ಸಾರ್ವಜನಿಕ ದಾಖಲೆಗಳಿಂದ ಆಕೆಯೊಬ್ಬಳ ಹೆಸರನ್ನಷ್ಟೇ ಅಲ್ಲ ರಾಜಮನೆತನದ ಇನ್ನೂ ಹಲವರ ಹೆಸರುಗಳನ್ನು ಅಳಿಸಿಹಾಕಲಾಗಿದೆ. ಇನ್ನೊಂದು ಸಂಗತಿಯೇನೆಂದರೆ, ಈ ಪುಸ್ತಕದಲ್ಲಿ ವರ್ಣಿಸಲಾಗಿರುವ ಸಮಯದಲ್ಲಿ ಶೂಷನ್‌ನಲ್ಲಿ ಮಾರ್ದುಕಾ (ಮೊರ್ದೆಕೈಯನ್ನು ಪರ್ಷಿಯನ್‌ ಭಾಷೆಯಲ್ಲಿ ಹೀಗನ್ನಲಾಗುತ್ತದೆ) ಎಂಬ ಹೆಸರಿನ ವ್ಯಕ್ತಿ ಆಸ್ಥಾನಾಧಿಕಾರಿ ಆಗಿದ್ದ ಎಂದು ಐಹಿಕ ದಾಖಲೆಗಳು ತೋರಿಸಿಕೊಡುತ್ತವೆ.

      ಪ್ರವಾದನೆಯ ನೆರವೇರಿಕೆ

      ದೇವಜನರ ಪರವಹಿಸಿ ಹೋರಾಡುವ ಮೂಲಕ ಎಸ್ತೇರ್‌, ಮೊರ್ದೆಕೈ ಬೈಬಲಿನ ಒಂದು ಪ್ರಾಚೀನ ಪ್ರವಾದನೆಯನ್ನು ನೆರವೇರಿಸಿದರು. ಅವರಿಗಿಂತ 1,200 ವರ್ಷಕ್ಕೂ ಹಿಂದೆ ಮೂಲಪಿತೃವಾದ ಯಾಕೋಬನು ತನ್ನ ಪುತ್ರರಲ್ಲೊಬ್ಬನ ಬಗ್ಗೆ ಒಂದು ಪ್ರವಾದನೆ ನುಡಿಯುವಂತೆ ಯೆಹೋವನು ಪ್ರೇರಿಸಿದನು. ಅದೇನೆಂದರೆ, “ಬೆನ್ಯಾಮೀನನು ಕುರಿಗಳನ್ನು ಹಿಡಿದುಕೊಳ್ಳುವ ತೋಳದಂತಿದ್ದಾನೆ. ಹಿಡಿದುಕೊಂಡದ್ದನ್ನು ಬೆಳಿಗ್ಗೆ ಉಣ್ಣುವನು, ಕೊಳ್ಳೆಮಾಡಿದ್ದನ್ನು ಸಂಜೆಯಲ್ಲಿ ಹಂಚಿಕೊಳ್ಳುವನು.” (ಆದಿ. 49:27) “ಬೆಳಿಗ್ಗೆ” ಅಂದರೆ ಇಸ್ರಾಯೇಲಿನಲ್ಲಿ ರಾಜರ ಆಳ್ವಿಕೆ ಆರಂಭವಾದಾಗ ಬೆನ್ಯಾಮೀನನ ವಂಶಸ್ಥರಾದ ರಾಜ ಸೌಲ ಮತ್ತು ಇನ್ನಿತರ ಮಹಾ ಯೋಧರು ಯೆಹೋವನ ಜನರ ಪರವಾಗಿ ಹೋರಾಡಿದರು. “ಸಂಜೆ” ಅಂದರೆ ಇಸ್ರಾಯೇಲಿನ ರಾಜರ ಆಳ್ವಿಕೆ ಕೊನೆಗೊಂಡ ಬಳಿಕ ಬೆನ್ಯಾಮೀನನ ಕುಲದವರೇ ಆಗಿದ್ದ ಎಸ್ತೇರ್‌ ಹಾಗೂ ಮೊರ್ದೆಕೈ ಯೆಹೋವನ ಶತ್ರುಗಳ ವಿರುದ್ಧ ಹೋರಾಡಿ ಯಶಸ್ವಿಯಾದರು. ಒಂದರ್ಥದಲ್ಲಿ ಅವರು ಕೊಳ್ಳೆಯನ್ನೂ ಹಂಚಿಕೊಂಡರು, ಹೇಗೆಂದರೆ ಹಾಮಾನನ ಅಪಾರ ಆಸ್ತಿಪಾಸ್ತಿ ಅವರಿಗೆ ಸೇರಿತು.

      a ಯೆಹೂದ್ಯರು ಶತ್ರುಗಳನ್ನು ಪೂರ್ತಿಯಾಗಿ ಸೋಲಿಸಲು ರಾಜನು ಅವರಿಗೆ ಇನ್ನೊಂದು ದಿನ ಕೊಟ್ಟನು. (ಎಸ್ತೇ. 9:12-14) ಆ ವಿಜಯವನ್ನು ಯೆಹೂದ್ಯರು ಇವತ್ತಿಗೂ ಪ್ರತಿ ವರ್ಷ ಎಡಾರ್‌ ತಿಂಗಳಿನಲ್ಲಿ ಆಚರಿಸುತ್ತಾರೆ. ಈ ತಿಂಗಳು ನಮ್ಮ ಕ್ಯಾಲೆಂಡರಿನಲ್ಲಿ ಫೆಬ್ರವರಿ ತಿಂಗಳ ಕೊನೆ ಭಾಗದಿಂದ ಹಿಡಿದು ಮಾರ್ಚ್‌ ತಿಂಗಳ ಆರಂಭ ಭಾಗದ ವರೆಗೆ ಇರುತ್ತದೆ. ಈ ಹಬ್ಬದ ಹೆಸರು ಪ್ಯೂರಿಮ್‌. ಏಕೆಂದರೆ ಇಸ್ರಾಯೇಲ್ಯರನ್ನು ನಾಶಮಾಡಲಿಕ್ಕಾಗಿ ಹಾಮಾನನು ಪೂರ್‌ ಅಥವಾ ಚೀಟಿ ಹಾಕಿದ್ದನು.

      ಯೋಚಿಸಿ ನೋಡಿ . . .

      • ಎಸ್ತೇರಳು “ಮಾತಾಡುವ ಸಮಯ”ವನ್ನು ವಿವೇಕದಿಂದ ಆಯ್ಕೆಮಾಡಿದ್ದು ಹೇಗೆ?

      • ಎಸ್ತೇರಳ ತಾಳ್ಮೆ ಯಾವ ಆಶೀರ್ವಾದಗಳನ್ನು ತಂದಿತು?

      • ತನ್ನ ಜನರ ಪರವಹಿಸಿ ಮಾತಾಡುವಾಗ ಎಸ್ತೇರ್‌ ಧೈರ್ಯ ಹಾಗೂ ನಿಸ್ವಾರ್ಥ ಗುಣ ತೋರಿಸಿದ್ದು ಹೇಗೆ?

      • ಎಸ್ತೇರಳ ನಂಬಿಕೆಯನ್ನು ನೀವು ಯಾವ ವಿಧಗಳಲ್ಲಿ ಅನುಕರಿಸುವ ದೃಢಸಂಕಲ್ಪ ಮಾಡಿದ್ದೀರಿ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ