ಟಿಪ್ಪಣಿಗಳು
1. ಮಹಾ ಬಾಬೆಲ್ ಅಂದರೆ ಏನು?
“ಮಹಾ ಬಾಬೆಲ್” ಅನ್ನೋ ಸ್ತ್ರೀ ಭೂಮಿಯಲ್ಲಿರೋ ಎಲ್ಲ ಸುಳ್ಳು ಧರ್ಮಗಳನ್ನ ಸೂಚಿಸುತ್ತೆ. ಅದು ನಮಗೆ ಹೇಗೆ ಗೊತ್ತು? (ಪ್ರಕಟನೆ 17:5) ಇದಕ್ಕಿರುವ ಕಾರಣಗಳನ್ನ ನೋಡೋಣ.
ಇಡೀ ಭೂಮಿ ಅವಳ ಬಿಗಿಮುಷ್ಠಿಯಲ್ಲಿದೆ. ಮಹಾ ಬಾಬೆಲ್ ‘ಜನರ ಮತ್ತು ದೇಶಗಳ ಮೇಲೆ ಕೂತಿದ್ದಾಳೆ’ ಅಂತ ಬೈಬಲ್ ಹೇಳುತ್ತೆ. ಅಷ್ಟೇ ಅಲ್ಲ, ಅವಳು ‘ಭೂಮಿಯ ರಾಜರನ್ನ ಆಳುತ್ತಾಳೆ’ ಅಂತನೂ ಹೇಳುತ್ತೆ.—ಪ್ರಕಟನೆ 17:15, 18.
ಅವಳು ರಾಜಕೀಯ ಮತ್ತು ವಾಣಿಜ್ಯ ವ್ಯವಸ್ಥೆಯನ್ನ ಸೂಚಿಸೋದಿಲ್ಲ. ಯಾಕಂದ್ರೆ ಅವಳು ನಾಶವಾಗುವಾಗ “ಭೂಮಿಯ ರಾಜರು” ಮತ್ತು “ವ್ಯಾಪಾರಿಗಳು” ನಾಶವಾಗದೇ ಉಳಿದಿರುತ್ತಾರೆ.—ಪ್ರಕಟನೆ 18:9, 15.
ಅವಳು ದೇವರಿಗೆ ಕೆಟ್ಟ ಹೆಸರು ಬರೋ ತರ ನಡೆದುಕೊಳ್ಳುತ್ತಾಳೆ. ಅವಳು ದೇವರ ಹೆಸರಿನಲ್ಲಿ ಕೆಟ್ಟ ಕೆಲಸಗಳನ್ನ ಮಾಡ್ತಾಳೆ. ಹಣಕ್ಕಾಗಿ ಮತ್ತು ಇತರ ಲಾಭಕ್ಕಾಗಿ ಸರ್ಕಾರಗಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ. ಅದಕ್ಕೆ ಬೈಬಲ್ ಅವಳನ್ನ ವೇಶ್ಯೆ ಅಂತ ಕರೆಯುತ್ತೆ. (ಪ್ರಕಟನೆ 17:1, 2) ಅವಳು ಜನರನ್ನ ದಾರಿ ತಪ್ಪಿಸುತ್ತಾಳೆ. ತುಂಬ ಜನರ ಸಾವಿಗೆ ಕಾರಣ ಆಗಿದ್ದಾಳೆ.—ಪ್ರಕಟನೆ 18:23, 24.
ಪಾಠ 13, ಉಪಶೀರ್ಷಿಕೆ 6ಕ್ಕೆ ವಾಪಸ್ ಹೋಗಿ
2. ಮೆಸ್ಸೀಯ ಯಾವಾಗ ಬಂದನು?
69 ವಾರಗಳು ಆದಮೇಲೆ ಮೆಸ್ಸೀಯ ಬರುತ್ತಾನೆ ಅಂತ ಬೈಬಲ್ ಮುಂಚೆನೇ ತಿಳಿಸಿತ್ತು.—ದಾನಿಯೇಲ 9:25 ಓದಿ.
69 ವಾರಗಳು ಎಲ್ಲಿಂದ ಶುರುವಾಗುತ್ತೆ? ಕ್ರಿ.ಪೂ. 455ರಿಂದ. ಅದೇ ವರ್ಷ ರಾಜ್ಯಪಾಲನಾದ ನೆಹೆಮೀಯ ‘ಯೆರೂಸಲೇಮನ್ನ ಜೀರ್ಣೋದ್ಧಾರ ಮಾಡಿ ಅದನ್ನ ಮತ್ತೆ ಕಟ್ಟೋಕೆ’ ಬಂದ.—ದಾನಿಯೇಲ 9:25; ನೆಹೆಮೀಯ 2:1, 5-8.
69 ವಾರಗಳು ಅಂದರೆ ಎಷ್ಟು ಸಮಯ? ಬೈಬಲ್ ಭವಿಷ್ಯವಾಣಿಗಳಲ್ಲಿ ಒಂದು ದಿನ ಒಂದು ವರ್ಷವನ್ನ ಸೂಚಿಸುತ್ತೆ. (ಅರಣ್ಯಕಾಂಡ 14:34; ಯೆಹೆಜ್ಕೇಲ 4:6) ಹಾಗಾಗಿ ಒಂದು ವಾರ ಏಳು ವರ್ಷಗಳನ್ನ ಸೂಚಿಸುತ್ತೆ. ಈ ಭವಿಷ್ಯವಾಣಿಯಲ್ಲಿ ಹೇಳಿರುವ 69 ವಾರಗಳು ಅಂದರೆ 483 ವರ್ಷಗಳು (69x7).
69 ವಾರಗಳು ಯಾವಾಗ ಕೊನೆಯಾಯಿತು? ಕ್ರಿ.ಪೂ. 455ರಿಂದ 483 ವರ್ಷಗಳನ್ನ ಲೆಕ್ಕ ಮಾಡುವಾಗ ಅದು ಕ್ರಿ.ಶ. 29ಕ್ಕೆa ಬಂದು ಮುಟ್ಟುತ್ತೆ. ಆ ವರ್ಷದಲ್ಲೇ ಯೇಸು ದೀಕ್ಷಾಸ್ನಾನ ಪಡೆದು ಮೆಸ್ಸೀಯನಾದನು!—ಲೂಕ 3:1, 2, 21, 22.
ಪಾಠ 15, ಉಪಶೀರ್ಷಿಕೆ 5ಕ್ಕೆ ವಾಪಸ್ ಹೋಗಿ
3. ರಕ್ತ ಒಳಗೂಡಿರುವ ಚಿಕಿತ್ಸಾ ಕ್ರಮಗಳು
ರೋಗಿಯ ಸ್ವಂತ ರಕ್ತವನ್ನೇ ಉಪಯೋಗಿಸಿ ಮಾಡುವ ಚಿಕಿತ್ಸೆಗಳಿವೆ. ಇದರಲ್ಲಿ ಕೆಲವನ್ನ ಕ್ರೈಸ್ತರು ಮಾಡಲ್ಲ. ಉದಾಹರಣೆಗೆ, ರಕ್ತದಾನವನ್ನಾಗಲಿ, ರಕ್ತವನ್ನ ಮುಂಚೆನೇ ಶೇಖರಿಸಿಟ್ಟು ಆಮೇಲೆ ಅದನ್ನ ತಮ್ಮ ಚಿಕಿತ್ಸೆಗಾಗಿ ಬಳಸಿಕೊಳ್ಳುವುದಾಗಲಿ ಕ್ರೈಸ್ತರು ಮಾಡಲ್ಲ.—ಧರ್ಮೋಪದೇಶಕಾಂಡ 15:23.
ನಮ್ಮ ಸ್ವಂತ ರಕ್ತವನ್ನ ಬಳಸಿ ಮಾಡುವ ಕೆಲವು ಚಿಕಿತ್ಸಾ ವಿಧಾನಗಳಿವೆ, ಅವುಗಳನ್ನ ನಾವು ಮಾಡಿಸಿಕೊಳ್ಳಬಹುದು. ಉದಾಹರಣೆಗೆ, ರಕ್ತ ಪರೀಕ್ಷೆ, ಹೀಮೋಡಯಾಲಿಸಿಸ್, ಹೀಮೋಡೈಲ್ಯೂಶನ್, ಸೆಲ್ ಸ್ಯಾಲ್ವೇಜ್ ಅಥವಾ ಹಾರ್ಟ್-ಲಂಗ್ ಬೈಪಾಸ್ ಮಷಿನ್ ಇತ್ಯಾದಿ. ಪ್ರತಿಯೊಬ್ಬ ಕ್ರೈಸ್ತ, ತನ್ನ ಸ್ವಂತ ರಕ್ತವನ್ನ ಬಳಸಿ ಮಾಡುವ ಚಿಕಿತ್ಸಾ ರೀತಿಯನ್ನ, ಪರೀಕ್ಷೆಗಳನ್ನ, ಥೆರಪಿಗಳನ್ನ ಸ್ವೀಕರಿಸಬೇಕಾ ಬೇಡ್ವಾ ಅಂತ ನಿರ್ಧರಿಸಬೇಕು. ಆದರೆ ಒಂದು ವಿಷಯ ನೆನಪಿಡಿ, ಇಂಥ ಚಿಕಿತ್ಸಾ ರೀತಿಗಳನ್ನ ಒಬ್ಬೊಬ್ಬ ಡಾಕ್ಟರ್ ಒಂದೊಂದು ತರ ಮಾಡಬಹುದು. ಹಾಗಾಗಿ ನಿಮ್ಮ ಸ್ವಂತ ರಕ್ತವನ್ನ ಬಳಸಿ ಮಾಡುವ ಇಂಥ ಚಿಕಿತ್ಸಾ ಕ್ರಮಗಳು, ಪರೀಕ್ಷೆಗಳು, ಥೆರಪಿಗಳಲ್ಲಿ ಡಾಕ್ಟರ್ ಏನು ಮಾಡುತ್ತಾರೆ ಅಂತ ಮುಂಚೆನೇ ಕೇಳಿ ತಿಳಿದುಕೊಳ್ಳೋದು ಒಳ್ಳೇದು. ಇಂಥ ಸನ್ನಿವೇಶಗಳಲ್ಲಿ ಈ ಪ್ರಶ್ನೆಗಳನ್ನ ಕೇಳಿಕೊಳ್ಳಿ:
ನನ್ನ ರಕ್ತ ಶರೀರದಿಂದ ಮಷಿನಿಗೆ ಹೋಗಿ ಮತ್ತೆ ಒಳಗೆ ಬರೋದನ್ನ ಸ್ವಲ್ಪ ಸಮಯ ತಡೆ ಹಿಡಿದರೆ ಅದನ್ನ ನಾನು ಹೇಗೆ ನೋಡುತ್ತೇನೆ? ಆಗಲೂ ಅದು ನನ್ನ ಶರೀರದ ಭಾಗ ಅಂತ ನೆನಸುತ್ತೇನಾ? ಇಲ್ಲಾ ಅದನ್ನ “ನೆಲದಲ್ಲಿ ಸುರಿಬೇಕು” ಅಂತ ನನ್ನ ಮನಸ್ಸಾಕ್ಷಿ ಹೇಳುತ್ತಾ?—ಧರ್ಮೋಪದೇಶಕಾಂಡ 12:23, 24.
ಚಿಕಿತ್ಸೆ ನಡೆಯುತ್ತಿರುವಾಗ ನನ್ನ ರಕ್ತವನ್ನ ಹೊರಗೆ ತೆಗೆದು ಸ್ವಲ್ಪ ಬದಲಾವಣೆ ಮಾಡಿ (ಉದಾಹರಣೆಗೆ ಅದಕ್ಕೆ ಔಷಧಿಯನ್ನ ಸೇರಿಸಿ) ಮತ್ತೆ ನನ್ನ ಶರೀರದ ಒಳಗೆ ತೆಗೆದುಕೊಳ್ಳೋದಕ್ಕೆ (ಅಥವಾ ಚಿಕಿತ್ಸೆಯ ಸಮಯದಲ್ಲಿ ಆದ ಗಾಯದ ಮೇಲೆ ಹಚ್ಚೋದಕ್ಕೆ) ನನ್ನ ಮನಸ್ಸಾಕ್ಷಿ ಒಪ್ಪುತ್ತಾ?
ಪಾಠ 39, ಉಪಶೀರ್ಷಿಕೆ 3ಕ್ಕೆ ವಾಪಸ್ ಹೋಗಿ
4. ಪ್ರತ್ಯೇಕವಾಸ
ಮದುವೆಯಾದ ಗಂಡ ಹೆಂಡತಿ ಬೇರೆ ಆಗಬಾರದು ಅಂತ ಬೈಬಲ್ ಹೇಳುತ್ತೆ. ಒಂದುವೇಳೆ ಪ್ರತ್ಯೇಕವಾದರೆ ಗಂಡ ಅಥವಾ ಹೆಂಡತಿ ಇನ್ನೊಬ್ಬರನ್ನ ಮದುವೆ ಆಗಬಾರದು ಅಂತನೂ ಹೇಳುತ್ತೆ. (1 ಕೊರಿಂಥ 7:10, 11) ಆದರೆ ಕೆಲವು ಸನ್ನಿವೇಶಗಳಲ್ಲಿ ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ಇರೋಕೆ ಬಯಸುತ್ತಾರೆ. ಅಂಥ ಕೆಲವು ಸನ್ನಿವೇಶಗಳನ್ನ ನೋಡೋಣ.
ಬೇಕುಬೇಕಂತ ಕುಟುಂಬದ ಅಗತ್ಯ ಪೂರೈಸದೇ ಇದ್ದಾಗ: ಗಂಡ ಬೇಕುಬೇಕಂತ ತನ್ನ ಕುಟುಂಬಕ್ಕೆ ಅತ್ಯಗತ್ಯ ವಸ್ತುಗಳನ್ನೂ ಕೊಡದೆ, ಕುಟುಂಬದವರನ್ನ ಯಾವುದಕ್ಕೂ ಗತಿಯಿಲ್ಲದ ಪರಿಸ್ಥಿತಿಗೆ ತಂದರೆ.—1 ತಿಮೊತಿ 5:8.
ವಿಪರೀತ ಶಾರೀರಿಕ ಹಿಂಸೆ: ತನ್ನ ಸಂಗಾತಿಯ ಆರೋಗ್ಯಕ್ಕೆ ಮತ್ತು ಜೀವಕ್ಕೆ ಹಾನಿಯಾಗುವಷ್ಟು ಹಿಂಸೆಯನ್ನ ಕೊಡುತ್ತಿದ್ದರೆ.—ಗಲಾತ್ಯ 5:19-21.
ಯೆಹೋವ ದೇವರ ಜೊತೆ ಇರೋ ಸಂಬಂಧಕ್ಕೆ ಅಪಾಯ ತಂದಾಗ: ಸಂಗಾತಿ ತುಂಬ ತೊಂದರೆ ಕೊಡುತ್ತಿದ್ದು ಎಷ್ಟೇ ಪ್ರಯತ್ನ ಹಾಕಿದ್ರೂ ಯೆಹೋವ ದೇವರನ್ನ ಆರಾಧಿಸೋಕೆ ಸಾಧ್ಯವಾಗ್ತಾ ಇಲ್ಲ ಅನ್ನೋ ಸನ್ನಿವೇಶ ಬಂದರೆ.—ಅಪೊಸ್ತಲರ ಕಾರ್ಯ 5:29.
5. ಹಬ್ಬಗಳು ಮತ್ತು ಆಚರಣೆಗಳು
ಯೆಹೋವ ದೇವರಿಗೆ ಇಷ್ಟವಿಲ್ಲದ ಆಚರಣೆಗಳನ್ನ ಕ್ರೈಸ್ತರು ಮಾಡೋದಿಲ್ಲ. ಆದರೆ ಇಂಥ ಆಚರಣೆಗಳಿಗೆ ಸಂಬಂಧಪಟ್ಟ ಕೆಲವು ಸನ್ನಿವೇಶಗಳಲ್ಲಿ ಏನು ಮಾಡಬೇಕು ಅಂತ ಒಬ್ಬ ಕ್ರೈಸ್ತನು ತನ್ನ ಮನಸ್ಸಾಕ್ಷಿಗೆ ತಕ್ಕಂತೆ ತೀರ್ಮಾನ ಮಾಡಬೇಕು. ಆದರೆ ಆ ತೀರ್ಮಾನ ಬೈಬಲ್ ನಿಯಮಗಳಿಗೆ ಹೊಂದಿಕೆಯಲ್ಲಿರಬೇಕು. ಅಂಥ ಕೆಲವು ಸನ್ನಿವೇಶಗಳು ಯಾವುವು ಅಂತ ನೋಡೋಣ.
ಯಾರಾದ್ರೂ ನಿಮಗೆ ಹಬ್ಬ ಅಥವಾ ಆಚರಣೆಯ ಶುಭಾಶಯ ಹೇಳಿದರೆ. ನೀವು ಅವರಿಗೆ “ಥ್ಯಾಂಕ್ಸ್” ಹೇಳಿ ಸುಮ್ಮನಾಗಬಹುದು. ಒಂದುವೇಳೆ ನಮ್ಮ ನಂಬಿಕೆಯ ಬಗ್ಗೆ ಆ ವ್ಯಕ್ತಿಗೆ ತಿಳಿದುಕೊಳ್ಳೋಕೆ ಆಸಕ್ತಿ ಇದ್ದರೆ ನೀವು ಯಾಕೆ ಆಚರಣೆಯನ್ನ ಮಾಡಲ್ಲ ಅಂತ ಹೇಳಬಹುದು.
ಸತ್ಯದಲ್ಲಿಲ್ಲದ ಸಂಗಾತಿ ನಿಮ್ಮನ್ನ ಹಬ್ಬದ ಸಮಯದಲ್ಲಿ ಸಂಬಂಧಿಕರ ಮನೆಗೆ ಊಟಕ್ಕೆ ಕರೆದಾಗ. ಅಲ್ಲಿಗೆ ಹೋಗೋಕೆ ನಿಮ್ಮ ಮನಸ್ಸಾಕ್ಷಿ ಒಪ್ಪೋದಾದ್ರೆ “ನಾನು ಅಲ್ಲಿಗೆ ಬರುತ್ತೇನೆ ಆದರೆ ಬೈಬಲ್ಗೆ ವಿರುದ್ಧವಾಗಿರುವ ಯಾವುದೇ ಆಚರಣೆಗಳಲ್ಲಿ ಭಾಗವಹಿಸಲ್ಲ” ಅಂತ ಮುಂಚೆನೇ ಸಂಗಾತಿಗೆ ಹೇಳಿ.
ಹಬ್ಬ ಅಥವಾ ಆಚರಣೆಯ ಸಮಯದಲ್ಲಿ ಬೋನಸ್ ಕೊಟ್ಟಾಗ. ನೀವು ಅದನ್ನ ತೆಗೆದುಕೊಳ್ಳದೇ ಇರಬೇಕಾ? ಹಾಗೇನಿಲ್ಲ. ನಿಮ್ಮ ಬಾಸ್ ಆ ಬೋನಸ್ ಅನ್ನು ಆಚರಣೆಯ ಭಾಗವಾಗಿ ಕೊಡುತ್ತಿದ್ದಾನಾ? ಅಥವಾ ಇಡೀ ವರ್ಷ ನೀವು ಮಾಡಿದ ಒಳ್ಳೇ ಕೆಲಸವನ್ನ ಪ್ರೋತ್ಸಾಹಿಸಲಿಕ್ಕೆ ಕೊಡುತ್ತಿದ್ದಾನಾ?
ಆಚರಣೆಯ ಭಾಗವಾಗಿ ನಿಮಗೆ ಯಾರಾದರೂ ಉಡುಗೊರೆ ಕೊಟ್ಟಾಗ. “ನೀವು ಹಬ್ಬ ಮಾಡಲ್ಲ ಅಂತ ನಂಗೆ ಗೊತ್ತು, ಆದರೆ ಇದು ನಿಮಗೋಸ್ಕರ” ಅಂತ ಹೇಳಿ ಪ್ರೀತಿಯಿಂದ ಅವರು ಗಿಫ್ಟ್ ಕೊಡಬಹುದು. ಆದರೆ ಆ ವ್ಯಕ್ತಿ ನಿಮ್ಮನ್ನ ಪರೀಕ್ಷಿಸಬೇಕು ಅಂತನೋ ಹಬ್ಬದಲ್ಲಿ ನಿಮ್ಮನ್ನ ಸೇರಿಸಬೇಕು ಅಂತನೋ, ಉಡುಗೊರೆಯನ್ನ ಕೊಡೋದಾದ್ರೆ ಅದರ ಬಗ್ಗೆ ಚೆನ್ನಾಗಿ ಯೋಚಿಸಬೇಕು. ಆಮೇಲೆ ಆ ಗಿಫ್ಟ್ ತೆಗೆದುಕೊಳ್ಳಬೇಕಾ ಬೇಡ್ವಾ ಅಂತ ನೀವೇ ನಿರ್ಣಯಿಸಬೇಕು. ಯಾವಾಗ್ಲೂ ಒಳ್ಳೇ ಮನಸ್ಸಾಕ್ಷಿಯನ್ನ ಮತ್ತು ಯೆಹೋವನೊಟ್ಟಿಗಿನ ಸಂಬಂಧವನ್ನ ಕಾಪಾಡಿಕೊಳ್ಳಲು ಸಹಾಯ ಮಾಡುವಂಥ ನಿರ್ಣಯಗಳನ್ನೇ ಮಾಡಬೇಕು.—ಅಪೊಸ್ತಲರ ಕಾರ್ಯ 23:1.
ಪಾಠ 44, ಉಪಶೀರ್ಷಿಕೆ 1ಕ್ಕೆ ವಾಪಸ್ ಹೋಗಿ
6. ಅಂಟು ರೋಗಗಳು
ನಾವು ಜನರನ್ನ ಪ್ರೀತಿಸೋದ್ರಿಂದ ಯಾವುದೇ ರೀತಿಯ ಅಂಟು ರೋಗಗಳನ್ನ ಹರಡಿಸದಂತೆ ಎಚ್ಚರವಹಿಸುತ್ತೇವೆ. ಹಾಗಾಗಿ ನಮಗೆ ಅಂಟು ರೋಗ ಇದ್ದರೆ ಅಥವಾ ಅಂಟುರೋಗ ಇರಬಹುದು ಅಂತ ಅನಿಸಿದ್ರೆ ನಾವು ತುಂಬ ಜಾಗ್ರತೆ ವಹಿಸುತ್ತೇವೆ. “ನೀವು ನಿಮ್ಮನ್ನ ಪ್ರೀತಿಸೋ ಹಾಗೇ ಬೇರೆಯವ್ರನ್ನೂ ಪ್ರೀತಿಸಬೇಕು” ಅನ್ನೋ ಬೈಬಲಿನಲ್ಲಿರುವ ಆಜ್ಞೆಯನ್ನ ಪಾಲಿಸೋದ್ರಿಂದ ನಾವು ಹಾಗೆ ಮಾಡುತ್ತೇವೆ.—ರೋಮನ್ನರಿಗೆ 13:8-10.
ಈ ಆಜ್ಞೆಯನ್ನ ಪಾಲಿಸ್ತೇವೆ ಅಂತ ಹೇಗೆಲ್ಲಾ ತೋರಿಸಬಹುದು? ಸೋಂಕಿತ ವ್ಯಕ್ತಿ ತನ್ನ ಪ್ರೀತಿಯನ್ನ ತೋರಿಸಲಿಕ್ಕಾಗಿ ಬೇರೆಯವರನ್ನ ಯಾವುದೇ ರೀತಿಯಲ್ಲಿ ಮುಟ್ಟೋಕೆ ಹೋಗಲ್ಲ. ಉದಾಹರಣೆಗೆ, ಶೇಕ್ ಹ್ಯಾಂಡ್, ಅಪ್ಪಿಕೊಳ್ಳೋದು, ಮುತ್ತು ಕೊಡೋದು ಮಾಡಲ್ಲ. ಒಂದುವೇಳೆ ಯಾರಾದ್ರೂ ತನ್ನ ಕುಟುಂಬದ ಸುರಕ್ಷೆಗಾಗಿ ಸೋಂಕಿತ ವ್ಯಕ್ತಿಯನ್ನ ತಮ್ಮ ಮನೆಗೆ ಕರೆದಿಲ್ಲ ಅಂದರೆ ಆ ವ್ಯಕ್ತಿ ಬೇಜಾರು ಮಾಡಿಕೊಳ್ಳಬಾರದು. ದೀಕ್ಷಾಸ್ನಾನ ಪಡೆದುಕೊಳ್ಳೋ ಮುಂಚೆ ತನಗಿರುವ ಕಾಯಿಲೆಯ ಬಗ್ಗೆ ಹಿರಿಯರ ಮಂಡಳಿಯ ಸಂಯೋಜಕನಿಗೆ ತಿಳಿಸಬೇಕು. ಆಗ ದೀಕ್ಷಾಸ್ನಾನ ತೆಗೆದುಕೊಳ್ಳೋ ಬೇರೆ ವ್ಯಕ್ತಿಗಳಿಗೆ ಸೋಂಕು ಹರಡದಂತೆ ಜಾಗ್ರತೆವಹಿಸೋಕೆ ಆಗುತ್ತೆ. ಸೋಂಕು ತಗಲಿರುವ ಸಾಧ್ಯತೆ ಇರುವ ವ್ಯಕ್ತಿ ಮದುವೆಯಾಗೋ ಯೋಚನೆ ಮಾಡೋಕೆ ಮುಂಚೆ ಅವರಾಗಿಯೇ ಹೋಗಿ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು. ಹೀಗೆ ಮಾಡೋ ಮೂಲಕ ‘ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡ್ತೀರ’ ಅಂತ ತೋರಿಸಿಕೊಡಬಹುದು.—ಫಿಲಿಪ್ಪಿ 2:4.
ಪಾಠ 56, ಉಪಶೀರ್ಷಿಕೆ 2ಕ್ಕೆ ವಾಪಸ್ ಹೋಗಿ
7. ವ್ಯಾಪಾರ ಮತ್ತು ಕಾನೂನಿಗೆ ಸಂಬಂಧಪಟ್ಟ ವಿಷಯಗಳು
ಹಣಕಾಸಿನ ವ್ಯವಹಾರಗಳಲ್ಲಿ ನಾವು ಲಿಖಿತ ದಾಖಲೆಗಳನ್ನ (ಅಗ್ರಿಮೆಂಟ್) ಇಡುವ ಮೂಲಕ ಬರಲಿರುವ ಅನೇಕ ಸಮಸ್ಯೆಗಳನ್ನ ತಡೆಯಬಹುದು. ಕ್ರೈಸ್ತ ಸಹೋದರನ ಜೊತೆ ವ್ಯವಹಾರ ಮಾಡುವಾಗ ಕೂಡ ಈ ರೀತಿ ಮಾಡಿದ್ರೆ ಚೆನ್ನಾಗಿರುತ್ತೆ. (ಯೆರೆಮೀಯ 32:9-12) ಆದ್ರೂ ಕ್ರೈಸ್ತರ ಮಧ್ಯದಲ್ಲಿ ಹಣಕಾಸು ಅಥವಾ ಇನ್ನಿತರ ವಿಷಯಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬರಬಹುದು. ಅಂಥ ಸಂದರ್ಭದಲ್ಲಿ ಅವರಿಬ್ಬರೇ ಸಮಾಧಾನದಿಂದ ಮತ್ತು ಆದಷ್ಟು ಬೇಗನೇ ಅದನ್ನ ಸರಿಮಾಡಿಕೊಳ್ಳಬೇಕು.
ಮೋಸ ಅಥವಾ ಸುಳ್ಳು ಆರೋಪದಂಥ ಗಂಭೀರ ಸಮಸ್ಯೆಗಳನ್ನ ಹೇಗೆ ಬಗೆಹರಿಸಬೇಕು? (ಮತ್ತಾಯ 18:15-17 ಓದಿ.) ಅಂಥ ಸಂದರ್ಭದಲ್ಲಿ ನಾವು ಮಾಡಬೇಕಾದ ಮೂರು ವಿಷಯಗಳ ಬಗ್ಗೆ ಯೇಸು ಹೇಳಿದನು:
ಸಮಸ್ಯೆಯ ಬಗ್ಗೆ ನೀವಿಬ್ಬರೇ ಮಾತಾಡಿ, ಬಗೆಹರಿಸಿಕೊಳ್ಳಿ.—ವಚನ 15 ನೋಡಿ.
ಸಮಸ್ಯೆ ಬಗೆಹರಿಯಲಿಲ್ಲ ಅಂದರೆ ಒಬ್ಬರು ಅಥವಾ ಇಬ್ಬರು ಪ್ರೌಢ ಕ್ರೈಸ್ತರ ಜೊತೆ ಹೋಗಿ ಅವರ ಹತ್ತಿರ ಮಾತಾಡಿ.—ವಚನ 16 ನೋಡಿ.
ಆಗಲೂ ಸರಿಯಾಗಲಿಲ್ಲ ಅಂದರೆ ಸಭೆಯ ಹಿರಿಯರ ಸಹಾಯ ಪಡೆದುಕೊಳ್ಳಿ.—ವಚನ 17 ನೋಡಿ.
ಸಹೋದರರ ಮಧ್ಯೆ ಬರುವ ಹೆಚ್ಚಿನ ಸಮಸ್ಯೆಗಳನ್ನ ಬಗೆಹರಿಸೋಕೆ ನಾವು ಕೋರ್ಟಿಗೆ ಹೋಗಲ್ಲ. ಯಾಕಂದ್ರೆ ಈ ತರ ಕೋರ್ಟಿಗೆ ಹೋಗೋದ್ರಿಂದ ಯೆಹೋವನಿಗೂ ಸಭೆಗೂ ಕೆಟ್ಟ ಹೆಸರು ಬರಬಹುದು. (1 ಕೊರಿಂಥ 6:1-8) ಆದರೆ ಕೆಲವೊಂದು ಸಮಸ್ಯೆಗಳನ್ನ ಕಾನೂನಿನ ಮೂಲಕನೇ ಸರಿಪಡಿಸಬೇಕಾಗುತ್ತೆ. ಉದಾಹರಣೆಗೆ, ವಿವಾಹ ವಿಚ್ಛೇದನ, ಮಗುವಿನ ಕಸ್ಟಡಿ, ಜೀವನಾಂಶ ಪಾವತಿ, ವಿಮೆಯ ನಷ್ಟಭರ್ತಿ, ದಿವಾಳಿ, ಉಯಿಲುಗಳನ್ನ ಪ್ರಮಾಣಿಕರಿಸುವುದು. ಇಂಥ ವಿಷಯಗಳನ್ನ ಶಾಂತಿಯಿಂದ ಬಗೆಹರಿಸಲು ಕೋರ್ಟಿನ ಮೊರೆ ಹೋಗುವುದು ಬೈಬಲ್ ನಿಯಮಕ್ಕೆ ವಿರುದ್ಧವಲ್ಲ.
ಒಂದುವೇಳೆ ಗಂಭೀರ ಅಪರಾಧಗಳು ನಡೆದರೆ ಉದಾಹರಣೆಗೆ, ಅತ್ಯಾಚಾರ, ಮಕ್ಕಳ ಮೇಲೆ ದೌರ್ಜನ್ಯ, ಹಲ್ಲೆ, ದೊಡ್ಡ ಕಳ್ಳತನ ಅಥವಾ ಕೊಲೆಯಾದರೆ ಒಬ್ಬ ಕ್ರೈಸ್ತ ಅದರ ಬಗ್ಗೆ ಅಧಿಕಾರಿಗೆ ತಿಳಿಸುವುದು ಬೈಬಲ್ ನಿಯಮಕ್ಕೆ ವಿರುದ್ಧವಾಗಿ ಇರುವುದಿಲ್ಲ.
a ಕ್ರಿ.ಪೂ. 455ರಿಂದ ಕ್ರಿ.ಪೂ. 1ರ ವರೆಗೆ 454 ವರ್ಷಗಳು. ಕ್ರಿ.ಪೂ. 1ರಿಂದ ಕ್ರಿ.ಶ. 1ರ ವರೆಗೆ 1 ವರ್ಷ (ಯಾಕಂದ್ರೆ ಸೊನ್ನೆ ವರ್ಷ ಇಲ್ಲ) ಮತ್ತು ಕ್ರಿ.ಶ. 1ರಿಂದ ಕ್ರಿ.ಶ. 29ರವರೆಗೆ 28 ವರ್ಷಗಳು. ಈ ವರ್ಷಗಳನ್ನ ಒಟ್ಟಿಗೆ ಕೂಡಿಸಿದರೆ 483 ವರ್ಷಗಳು ಆಗುತ್ತೆ.