ಯೆಹೋವನಿಗೆ ಪೂರ್ಣ ಹೃದಯದಿಂದ ಯಜ್ಞಗಳನ್ನು ಅರ್ಪಿಸಿರಿ
“ನೀವು ಏನೇ ಮಾಡುವುದಾದರೂ . . . ಯೆಹೋವನಿಗೋಸ್ಕರವೇ ಎಂದು ಪೂರ್ಣ ಪ್ರಾಣದಿಂದ ಮಾಡುವವರಾಗಿರಿ.”—ಕೊಲೊ. 3:23.
ಉತ್ತರ ಕಂಡುಹಿಡಿಯಿರಿ
ದೈನಂದಿನ ಚಟುವಟಿಕೆಗಳಲ್ಲಿ ನಾವು ಹೇಗೆ ಯೆಹೋವನ ನಾಮಕ್ಕೆ ಗೌರವ ತರಬಹುದು?
ಆರಾಧನೆಯಲ್ಲಿ ನಾವು ದೇವರಿಗೆ ಯಾವ ಯಜ್ಞಗಳನ್ನು ಅರ್ಪಿಸುತ್ತೇವೆ?
ನಮ್ಮ ಸ್ವತ್ತುಗಳನ್ನು ಹೇಗೆ ಯೆಹೋವನಿಗೆ ಅರ್ಪಿಸಬಹುದು?
1-3. (ಎ) ಯೇಸು ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸಿದ್ದರಿಂದ ನಾವು ದೇವರಿಗೆ ಯಾವುದೇ ರೀತಿಯ ಯಜ್ಞಗಳನ್ನು ಅರ್ಪಿಸಬೇಕಾಗಿಲ್ಲವಾ? ವಿವರಿಸಿ. (ಬಿ) ನಾವಿಂದು ಅರ್ಪಿಸುವ ಯಜ್ಞಗಳ ಕುರಿತು ಯಾವ ಪ್ರಶ್ನೆ ಕೇಳಿಕೊಳ್ಳಬೇಕು?
ಯೇಸುವಿನ ವಿಮೋಚನಾ ಮೌಲ್ಯ ಯಜ್ಞವು ಧರ್ಮಶಾಸ್ತ್ರವನ್ನು ರದ್ದುಗೊಳಿಸಿತು ಎಂದು ಕ್ರಿ.ಶ. ಒಂದನೇ ಶತಮಾನದಲ್ಲಿ ಯೆಹೋವನು ತನ್ನ ಜನರಿಗೆ ತಿಳಿಯಪಡಿಸಿದನು. (ಕೊಲೊ. 2:13, 14) ನೂರಾರು ವರ್ಷಗಳಿಂದ ಯೆಹೂದ್ಯರು ಕೊಡುತ್ತಿದ್ದ ಯಜ್ಞಾರ್ಪಣೆಗಳ ಅಗತ್ಯ ಇನ್ನೆಂದಿಗೂ ಇರಲಿಲ್ಲ. ಅವುಗಳಿಗೆ ಇನ್ನು ಮುಂದೆ ಯಾವುದೇ ಮೌಲ್ಯವಿರಲಿಲ್ಲ. ಧರ್ಮಶಾಸ್ತ್ರವು “ಕ್ರಿಸ್ತನ ಬಳಿಗೆ ನಡಿಸುವ ಪಾಲಕನಾಗಿ” ತನ್ನ ಕಾರ್ಯವನ್ನು ಪೂರೈಸಿಯಾಗಿತ್ತು.—ಗಲಾ. 3:24.
2 ಅಂದರೆ ಕ್ರೈಸ್ತರು ಯಜ್ಞವನ್ನೇ ಅರ್ಪಿಸುವುದಿಲ್ಲ ಎಂದರ್ಥವಾ? ಖಂಡಿತ ಹಾಗಲ್ಲ. ಅಪೊಸ್ತಲ ಪೇತ್ರ ತಿಳಿಸಿದಂತೆ ನಾವು “ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ವೀಕೃತವಾದ ಆಧ್ಯಾತ್ಮಿಕ ಯಜ್ಞಗಳನ್ನು” ಅರ್ಪಿಸುತ್ತೇವೆ. (1 ಪೇತ್ರ 2:5) ಅಪೊಸ್ತಲ ಪೌಲ ಸಹ ಸಮರ್ಪಿತ ಕ್ರೈಸ್ತನೊಬ್ಬನು ತನ್ನ ಇಡೀ ಜೀವನವನ್ನೇ ದೇವರಿಗೆ ಒಂದು “ಯಜ್ಞವಾಗಿ” ಅರ್ಪಿಸಬೇಕು ಎಂದು ಸ್ಪಷ್ಟಪಡಿಸಿದ್ದಾನೆ.—ರೋಮ. 12:1.
3 ಆದುದರಿಂದ ನಾವು ಯೆಹೋವನಿಗಾಗಿ ಏನೇ ಕೊಡಲಿ ಅಥವಾ ಏನನ್ನೇ ತ್ಯಾಗಮಾಡಲಿ ಅದು ನಾವಾತನಿಗೆ ಅರ್ಪಿಸುವ ಯಜ್ಞವಾಗಿದೆ. ನಮ್ಮ ಆ ಯಜ್ಞ ದೇವರಿಗೆ ಸ್ವೀಕಾರಾರ್ಹ ಆಗಿರಬೇಕಾದರೆ ನಾವೇನು ಮಾಡಬೇಕು? ಇಸ್ರಾಯೇಲ್ಯರು ಯೆಹೋವನಿಗೆ ಅರ್ಪಿಸಿದ ಸ್ವೀಕೃತ ಯಜ್ಞಗಳ ಕುರಿತು ನಾವು ಕಲಿತದ್ದು ನಮಗೆ ಖಂಡಿತ ಸಹಾಯಮಾಡುತ್ತದೆ.
ದೈನಂದಿನ ಜೀವನದಲ್ಲಿ ಯಜ್ಞಾರ್ಪಣೆ
4. ದೈನಂದಿನ ಚಟುವಟಿಕೆಗಳ ವಿಷಯದಲ್ಲಿ ನಾವೇನನ್ನು ನೆನಪಿನಲ್ಲಿಡಬೇಕು?
4 ದೈನಂದಿನ ಚಟುವಟಿಕೆಗಳು ಹೇಗೆ ದೇವರಿಗೆ ಯಜ್ಞಾರ್ಪಣೆಗಳಾಗಿವೆ ಎಂದು ನಾವು ಯೋಚಿಸಬಹುದು. ಮನೆಗೆಲಸ, ಶಾಲಾಕೆಲಸ, ಉದ್ಯೋಗ, ಶಾಪಿಂಗ್ ಮುಂತಾದ ದಿನನಿತ್ಯದ ಚಟುವಟಿಕೆಗಳಿಗೂ ಆಧ್ಯಾತ್ಮಿಕ ವಿಷಯಗಳಿಗೂ ಏನು ಸಂಬಂಧ ಎಂದು ನೀವು ಕೇಳಬಹುದು. ನೀವು ನಿಮ್ಮನ್ನು ದೇವರಿಗೆ ಸಮರ್ಪಣೆ ಮಾಡಿಕೊಂಡಿದ್ದಲ್ಲಿ ಅಥವಾ ಮುಂದೆ ಮಾಡಲು ಇಷ್ಟಪಡುವಲ್ಲಿ ದೈನಂದಿನ ಚಟುವಟಿಕೆಗಳನ್ನು ಯಾವ ಮನೋಭಾವದಿಂದ ಮಾಡುತ್ತೀರೆಂಬುದು ತುಂಬ ಮಹತ್ವದ್ದಾಗಿರುತ್ತದೆ. ಏಕೆಂದರೆ ನಾವು ದಿನದ 24 ಗಂಟೆಯೂ ಕ್ರೈಸ್ತರಾಗಿದ್ದೇವೆ. ನಾವೇನೇ ಮಾಡಲಿ ಅದು ಬೈಬಲ್ ಮೂಲತತ್ವಗಳಿಗೆ ಹೊಂದಿಕೆಯಲ್ಲಿರಬೇಕು. ಪೌಲನ ಪ್ರೋತ್ಸಾಹವನ್ನು ಗಮನಿಸಿ: “ಏನೇ ಮಾಡುವುದಾದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಯೆಹೋವನಿಗೋಸ್ಕರವೇ ಎಂದು ಪೂರ್ಣ ಪ್ರಾಣದಿಂದ ಮಾಡುವವರಾಗಿರಿ.”—ಕೊಲೊಸ್ಸೆ 3:18-24 ಓದಿ.
5, 6. ನಮ್ಮ ಉಡುಗೆ ಮತ್ತು ವರ್ತನೆ ಹೇಗಿರಬೇಕು ಎಂದು ನಿರ್ಧರಿಸಲು ಯಾವುದು ಸಹಾಯ ಮಾಡುತ್ತದೆ?
5 ನಮ್ಮ ದೈನಂದಿನ ಚಟುವಟಿಕೆಗಳು ಪವಿತ್ರ ಸೇವೆಯ ಭಾಗವಾಗಿಲ್ಲ ನಿಜ. ಆದರೂ ನಾವು ನಮ್ಮ ಇಡೀ ಜೀವನರೀತಿ ಹೇಗಿದೆ ಎಂದು ಪರಿಶೀಲಿಸಬೇಕು. ಏಕೆಂದರೆ ನಾವೇನೇ ಮಾಡಲಿ “ಯೆಹೋವನಿಗೋಸ್ಕರವೇ ಎಂದು ಪೂರ್ಣ ಪ್ರಾಣದಿಂದ” ಮಾಡಬೇಕು ಎನ್ನುವುದು ಪೌಲನ ಉತ್ತೇಜನವಾಗಿತ್ತು. ಪೌಲನ ಈ ಮಾತನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು? ಎಲ್ಲ ಸಮಯದಲ್ಲೂ ನಾವು ಧರಿಸುವ ಉಡುಪು ಸಭ್ಯವಾಗಿರುತ್ತದಾ? ವರ್ತನೆ ಯೋಗ್ಯ ರೀತಿಯಲ್ಲಿರುತ್ತದಾ? ಅಥವಾ ದೈನಂದಿನ ಚಟುವಟಿಕೆಯಲ್ಲಿ ಮುಳುಗಿರುವಾಗ ನಮ್ಮ ಉಡುಪು, ವರ್ತನೆ ನಾನೊಬ್ಬ ಯೆಹೋವನ ಸಾಕ್ಷಿ ಎಂದು ಹೇಳಲು ಮುಜುಗರಪಡುವ ರೀತಿಯಲ್ಲಿರುತ್ತದಾ? ಹಾಗೆಂದೂ ಇರಬಾರದು. ದೇವರ ನಾಮಕ್ಕೆ ಕಳಂಕ ತರುವ ಯಾವುದೇ ಕೆಲಸವನ್ನು ಮಾಡದಿರೋಣ.—ಯೆಶಾ. 43:10; 2 ಕೊರಿಂ. 6:3, 4, 9.
6 ಯೆಹೋವನಿಗೆ “ಪೂರ್ಣ ಪ್ರಾಣದಿಂದ” ಸೇವೆಸಲ್ಲಿಸುವ ಇಚ್ಛೆ ನಮ್ಮ ಇಡೀ ಜೀವನರೀತಿಯನ್ನು ಪ್ರಭಾವಿಸುತ್ತದೆ. ಅದು ಹೇಗೆಂದು ನಾವೀಗ ನೋಡೋಣ. ಅದೇ ಸಮಯದಲ್ಲಿ, ಇಸ್ರಾಯೇಲ್ಯರು ದೇವರಿಗೆ ಅರ್ಪಿಸಿದ ಎಲ್ಲಾ ಯಜ್ಞಗಳು ಉತ್ಕೃಷ್ಟ ಆಗಿರಬೇಕಿತ್ತು ಎಂಬುದನ್ನು ನೆನಪಿನಲ್ಲಿಡೋಣ.—ವಿಮೋ. 23:19.
ಜೀವನರೀತಿಯನ್ನು ಪ್ರಭಾವಿಸುವ ವಿಧ
7. ನಾವು ಸಮರ್ಪಣೆ ಮಾಡಿಕೊಂಡಿರುವುದರ ಅರ್ಥವೇನು?
7 ನೀವು ನಿಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಾಗ ಇಡೀ ಜೀವನವನ್ನು ಆತನ ಸೇವೆಗೆ ಮುಡಿಪಾಗಿಡುವುದಾಗಿ ಮಾತುಕೊಟ್ಟಿದ್ದೀರಿ. ಅಂದರೆ ಜೀವನದ ಪ್ರತಿಯೊಂದು ಸನ್ನಿವೇಶದಲ್ಲೂ ಯೆಹೋವನನ್ನು ಸದಾ ನಿಮ್ಮ ಕಣ್ಣ ಮುಂದಿಡುತ್ತೀರೆಂದು ಹೇಳಿದ್ದೀರಿ. (ಇಬ್ರಿಯ 10:7 ಓದಿ.) ಆ ನಿಮ್ಮ ನಿರ್ಧಾರ ಒಳ್ಳೆಯದೇ ಆಗಿತ್ತಲ್ಲವೆ? ಯೆಹೋವನ ಚಿತ್ತ ಏನೆಂದು ತಿಳಿದು ಅದಕ್ಕನುಸಾರ ನಡೆದಾಗೆಲ್ಲ ಫಲಿತಾಂಶ ಅತ್ಯುತ್ತಮ ಆಗಿರುವುದನ್ನು ನೀವು ನೋಡಿದ್ದೀರಲ್ಲವೆ? (ಯೆಶಾ. 48:17, 18) ಹೌದು, ನಮ್ಮನ್ನು ಮಾರ್ಗದರ್ಶಿಸಿ ನಡಿಸುವ ದೇವರಾದ ಯೆಹೋವನ ಗುಣಗಳನ್ನು ಅನುಕರಿಸುವ ಕಾರಣದಿಂದಲೇ ನಾವು ನಿಜಕ್ಕೂ ಸಂತೋಷಿತರೂ ಪವಿತ್ರರೂ ಆಗಿದ್ದೇವೆ.—ಯಾಜ. 11:44; 1 ತಿಮೊ. 1:11.
8. ಇಸ್ರಾಯೇಲ್ಯರು ಅರ್ಪಿಸಿದ ಯಜ್ಞಗಳು ಯೆಹೋವ ದೇವರಿಗೆ ಪವಿತ್ರವಾಗಿದ್ದವು ಎನ್ನುವುದನ್ನು ನಾವು ನೆನಪಿನಲ್ಲಿಡುವುದು ಪ್ರಾಮುಖ್ಯವೇಕೆ?
8 ಇಸ್ರಾಯೇಲ್ಯರು ಅರ್ಪಿಸುತ್ತಿದ್ದ ಯಜ್ಞಗಳು ಯೆಹೋವನಿಗೆ ಪವಿತ್ರವಾಗಿದ್ದವು. (ಯಾಜ. 6:25; 7:1) “ಪವಿತ್ರ” ಎಂಬುದಕ್ಕಿರುವ ಹೀಬ್ರು ಮೂಲಪದವು ಪ್ರತ್ಯೇಕಿಸು, ದೇವರಿಗಾಗಿ ಮೀಸಲಾಗಿಡು ಎಂಬ ಅರ್ಥಕೊಡುತ್ತದೆ. ಹಾಗಾಗಿ ನಮ್ಮ ಯಜ್ಞಗಳನ್ನು ಯೆಹೋವನು ಸ್ವೀಕರಿಸಬೇಕಾದರೆ ಅವು ಈ ಲೋಕದ ವಿಷಯಗಳಿಂದ ಮಲಿನವಾಗಿರದೆ ಪ್ರತ್ಯೇಕವಾಗಿರಬೇಕು. ಯೆಹೋವನು ದ್ವೇಷಿಸುವ ವಿಷಯಗಳನ್ನು ನಾವು ಪ್ರೀತಿಸಬಾರದು. (1 ಯೋಹಾನ 2:15-17 ಓದಿ.) ಅಂದರೆ ದೇವರ ದೃಷ್ಟಿಯಲ್ಲಿ ನಮ್ಮನ್ನು ಮಲಿನರಾಗಿಸುವ ವಿಚಾರಗಳಿಂದ ಮತ್ತು ಸಹವಾಸದಿಂದ ದೂರವಿರಬೇಕು. (ಯೆಶಾ. 2:4; ಪ್ರಕ. 18:4) ಮಾತ್ರವಲ್ಲ, ಅಶುದ್ಧ ಅಥವಾ ಅನೈತಿಕ ವಿಷಯಗಳನ್ನು ನೋಡುವುದಾಗಲಿ ಅಂಥ ವಿಷಯಗಳ ಕನಸು ಕಾಣುತ್ತಾ ಇರುವುದಾಗಲಿ ತಪ್ಪಾಗಿದೆ.—ಕೊಲೊ. 3:5, 6.
9. ಬೇರೆಯವರೊಂದಿಗೆ ನಾವು ವರ್ತಿಸುವ ರೀತಿ ತುಂಬ ಪ್ರಾಮುಖ್ಯವೇಕೆ?
9 “ಒಳ್ಳೇದನ್ನು ಮಾಡುವುದನ್ನೂ ಇತರರೊಂದಿಗೆ ಹಂಚಿಕೊಳ್ಳುವುದನ್ನೂ ಮರೆಯಬೇಡಿರಿ, ಏಕೆಂದರೆ ಇಂಥ ಯಜ್ಞಗಳಲ್ಲಿ ದೇವರು ಸಂತೃಪ್ತನಾಗುತ್ತಾನೆ” ಎಂದು ಪೌಲ ಜೊತೆ ಕ್ರೈಸ್ತರನ್ನು ಉತ್ತೇಜಿಸಿದನು. (ಇಬ್ರಿ. 13:16) ಅಂದರೆ ನಾವು ಒಳ್ಳೆಯವರಾಗಿದ್ದು ಇತರರಿಗೆ ಒಳ್ಳೇದನ್ನು ಮಾಡುವುದಾದರೆ ಅದನ್ನು ಯೆಹೋವನು ಸ್ವೀಕಾರಾರ್ಹ ಯಜ್ಞದಂತೆ ವೀಕ್ಷಿಸುತ್ತಾನೆ. ಪರರ ಕಡೆಗೆ ಪ್ರೀತಿಯ ಕಾಳಜಿಯೇ ನಮ್ಮನ್ನು ನಿಜ ಕ್ರೈಸ್ತರೆಂದು ಗುರುತಿಸುತ್ತದೆ.—ಯೋಹಾ. 13:34, 35; ಕೊಲೊ. 1:10.
ಆರಾಧನಾ ಯಜ್ಞಗಳು
10, 11. ನಮ್ಮ ಸೇವೆ ಹಾಗೂ ಆರಾಧನೆಯನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ? ಏನು ಮಾಡುವಂತೆ ಇದು ನಮ್ಮನ್ನು ಪ್ರಚೋದಿಸಬೇಕು?
10 ಕ್ರೈಸ್ತರಾದ ನಾವು ಇತರರಿಗೆ ಒಳ್ಳೇದನ್ನು ಮಾಡುವ ಒಂದು ಪ್ರಾಮುಖ್ಯ ವಿಧ “ನಮ್ಮ ನಿರೀಕ್ಷೆಯ ಬಹಿರಂಗ ಅರಿಕೆ” ಮಾಡುವುದಾಗಿದೆ. ಹಾಗಿರುವಲ್ಲಿ ಸಿಗುವ ಪ್ರತಿಯೊಂದು ಅವಕಾಶವನ್ನು ಸಾಕ್ಷಿಕೊಡಲು ಬಳಸುತ್ತೀರಾ? ಪೌಲ ಈ ಸೇವೆಯನ್ನು “ಸ್ತೋತ್ರಯಜ್ಞ” ಎಂದು ಕರೆದನು. ಹೌದು, ನಮ್ಮ ಸೇವೆ “[ದೇವರ] ಹೆಸರಿಗೆ ಬಹಿರಂಗ ಪ್ರಕಟನೆಯನ್ನು ಮಾಡುವ . . . ತುಟಿಗಳ ಫಲ” ಆಗಿದೆ. (ಇಬ್ರಿ. 10:23; 13:15; ಹೋಶೇ. 14:2) ಹಾಗಾಗಿ ನಾವು ನಮ್ಮ ಕ್ಷೇತ್ರ ಸೇವೆಯ ಗುಣಮಟ್ಟದ ಕುರಿತು, ಅದಕ್ಕಾಗಿ ನಾವೆಷ್ಟು ಸಮಯ ವ್ಯಯಿಸುತ್ತೇವೆಂಬ ಕುರಿತು ಆಲೋಚಿಸಬೇಕು. ಸೇವಾ ಕೂಟದ ಭಾಗಗಳು ಈ ನಿಟ್ಟಿನಲ್ಲಿ ನಮಗೆ ಸಹಾಯಮಾಡುತ್ತವೆ. ಕ್ಷೇತ್ರ ಸೇವೆ ಹಾಗೂ ಅನೌಪಚಾರಿಕ ಸಾಕ್ಷಿಕಾರ್ಯ ನಾವು ಅರ್ಪಿಸುವ “ಸ್ತೋತ್ರಯಜ್ಞ” ಆಗಿದೆ. ನಮ್ಮ ಆರಾಧನೆಯ ಭಾಗವಾಗಿದೆ. ಆದಕಾರಣ ಆ ಯಜ್ಞವು ಸರ್ವೋತ್ಕೃಷ್ಟ ಆಗಿರಬೇಕು. ನಮ್ಮ ಸಮಯ, ಶಕ್ತಿ, ಸಾಮರ್ಥ್ಯ, ಸಂಪತ್ತು ಎಲ್ಲವನ್ನು ಸೇವೆಗಾಗಿ ಧಾರೆಯೆರೆಯಬೇಕು. ಪ್ರತಿಯೊಬ್ಬರ ಸನ್ನಿವೇಶ ಒಂದೇ ತೆರನಾಗಿರುವುದಿಲ್ಲ. ಆದರೂ ಆಧ್ಯಾತ್ಮಿಕ ವಿಷಯಗಳು ನಮಗೆ ಎಷ್ಟು ಮಹತ್ವ ಎನ್ನುವುದು ನಾವು ಸೇವೆಗೆ ಎಷ್ಟು ಸಮಯ ಕೊಡುತ್ತೇವೆ ಎಂಬುದರಲ್ಲಿ ಗೊತ್ತಾಗುತ್ತದೆ.
11 ಕ್ರೈಸ್ತರಾದ ನಾವು ವ್ಯಕ್ತಿಪರವಾಗಿಯೂ ಸಭೆಯಾಗಿಯೂ ನಿಯತವಾಗಿ ಯೆಹೋವನನ್ನು ಸ್ತುತಿಸಿ ಆರಾಧಿಸುವುದಕ್ಕೆ ಮಹತ್ವ ನೀಡುತ್ತೇವೆ. ಯೆಹೋವನು ಅದನ್ನೇ ನಮ್ಮಿಂದ ಎದುರು ನೋಡುತ್ತಾನೆ. ನಾವೀಗ ಇಸ್ರಾಯೇಲ್ಯರಂತೆ ಸಬ್ಬತ್ತನ್ನು ಆಚರಿಸಬೇಕಾಗಿಲ್ಲ ನಿಜ. ಹಬ್ಬಗಳನ್ನು ಆಚರಿಸಲಿಕ್ಕಾಗಿ ಪ್ರತಿಸಾರಿ ಯೆರೂಸಲೇಮಿಗೂ ಪ್ರಯಾಣಿಸಬೇಕಾಗಿಲ್ಲ. ಆದರೆ ಆ ಏರ್ಪಾಡುಗಳಿಂದ ಬಹಳ ಕಲಿಯಬಹುದು. ನಾವು ನಿರ್ಜೀವ ಕಾರ್ಯಗಳಿಗೆ ಸಮಯ ಕೊಡುವುದನ್ನು ಬಿಟ್ಟು ಬೈಬಲ್ ಅಧ್ಯಯನಕ್ಕೆ, ಪ್ರಾರ್ಥನೆಗೆ, ಕೂಟಗಳಿಗೆ ಸಮಯ ಮೀಸಲಿಡುವಂತೆ ದೇವರು ಇಂದಿಗೂ ಬಯಸುತ್ತಾನೆ. ಮನೆಮಂದಿಯೊಂದಿಗೆ ಕುಟುಂಬ ಆರಾಧನೆಯನ್ನು ಮಾಡುವುದು ಕುಟುಂಬ ಶಿರಸ್ಸುಗಳ ಜವಾಬ್ದಾರಿ. (1 ಥೆಸ. 5:17; ಇಬ್ರಿ. 10:24, 25) ಹಾಗಾಗಿ, ‘ಯೆಹೋವನಿಗೆ ಸಲ್ಲಿಸುವ ನನ್ನ ಆರಾಧನೆಯ ಗುಣಮಟ್ಟ ಹೇಗಿದೆ, ನಾನೇನಾದರೂ ಪ್ರಗತಿ ಮಾಡಬೇಕಾ’ ಎಂದು ಒಬ್ಬೊಬ್ಬರೂ ಪರೀಕ್ಷಿಸಿಕೊಳ್ಳಬೇಕು.
12. (ಎ) ಇಸ್ರಾಯೇಲ್ಯರು ಅರ್ಪಿಸುತ್ತಿದ್ದ ಧೂಪಕ್ಕೆ ಯಾವುದನ್ನು ಹೋಲಿಸಲಾಗಿದೆ? (ಬಿ) ಇದು ಪ್ರಾರ್ಥನೆಯ ಬಗ್ಗೆ ನಮಗೇನು ಕಲಿಸುತ್ತದೆ?
12 ರಾಜ ದಾವೀದನು ಯೆಹೋವನಿಗೆ ಹೀಗೆ ಹಾಡಿದನು: “ನನ್ನ ಪ್ರಾರ್ಥನೆಯು ಧೂಪದಂತೆ . . . ಸಮರ್ಪಕವಾಗಲಿ.” (ಕೀರ್ತ. 141:2) ನಮ್ಮ ಪ್ರಾರ್ಥನೆಯ ಕುರಿತು ಸ್ವಲ್ಪ ಯೋಚಿಸೋಣ. ಗುಣಮಟ್ಟ ಹೇಗಿದೆ? ಎಷ್ಟು ಬಾರಿ ಪ್ರಾರ್ಥಿಸುತ್ತೇವೆ? “ಪವಿತ್ರ ಜನರ ಪ್ರಾರ್ಥನೆಗಳನ್ನು” ಪ್ರಕಟನೆ ಪುಸ್ತಕ ಧೂಪಕ್ಕೆ ಹೋಲಿಸುತ್ತದೆ. ದೇವರು ಮೆಚ್ಚುವ ಪ್ರಾರ್ಥನೆಗಳು ಸುಗಂಧಭರಿತ ಧೂಪದಂತೆ ಮೇಲೇರುತ್ತವೆ ಎಂದು ಹೇಳುತ್ತದೆ. (ಪ್ರಕ. 5:8) ಇಸ್ರಾಯೇಲ್ಯರ ಸಮಯದಲ್ಲಿ ಯೆಹೋವನಿಗೆ ಧೂಪವನ್ನು ನಿಯಮಿತವಾಗಿ ಅರ್ಪಿಸಲಾಗುತ್ತಿತ್ತು. ಅದನ್ನು ತುಂಬ ಜಾಗ್ರತೆವಹಿಸಿ, ಕೊಡಲಾದ ನಿರ್ದೇಶನದ ಪ್ರಕಾರವೇ ತಯಾರಿಸಬೇಕಿತ್ತು ಮತ್ತು ಅರ್ಪಿಸಬೇಕಿತ್ತು. ಆಗ ಮಾತ್ರ ಯೆಹೋವನು ಅದನ್ನು ಸ್ವೀಕರಿಸುತ್ತಿದ್ದನು. (ವಿಮೋ. 30:34-37; ಯಾಜ. 10:1, 2) ನಮ್ಮ ಪ್ರಾರ್ಥನೆಗಳ ವಿಷಯದಲ್ಲೂ ಇದು ಸತ್ಯ. ದೇವರು ಅಪೇಕ್ಷಿಸುವ ರೀತಿಯಲ್ಲಿ ನಮ್ಮ ಪ್ರಾರ್ಥನೆಗಳು ಇರುವಲ್ಲಿ ಆತನು ಸ್ವೀಕರಿಸುತ್ತಾನೆ.
ಉದಾರವಾಗಿ ನೀಡಿ, ಆಶೀರ್ವಾದ ಕೊಯ್ಯಿರಿ
13, 14. (ಎ) ಫಿಲಿಪ್ಪಿ ಸಭೆಯವರು ಮತ್ತು ಎಪಫ್ರೊದೀತನು ಪೌಲನಿಗೆ ಹೇಗೆ ಸಹಾಯ ಮಾಡಿದರು? ಅದರ ಬಗ್ಗೆ ಪೌಲನಿಗೆ ಹೇಗನಿಸಿತು? (ಬಿ) ಫಿಲಿಪ್ಪಿ ಸಭೆಯವರ ಹಾಗೂ ಎಪಫ್ರೊದೀತನ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು?
13 ಲೋಕವ್ಯಾಪಕ ಸಾರುವ ಕೆಲಸಕ್ಕೆ ನಾವು ಕೊಡುವ ಧನಕಾಣಿಕೆ ಯೆಹೋವನಿಗೆ ಅರ್ಪಿಸುವ ಯಜ್ಞದಂತಿದೆ. ಅದು ಸ್ವಲ್ಪವಿರಲಿ ಹೆಚ್ಚೇ ಇರಲಿ ಯೆಹೋವನು ಸ್ವೀಕರಿಸುತ್ತಾನೆ. (ಮಾರ್ಕ 12:41-44) ಕ್ರಿ.ಶ. ಒಂದನೇ ಶತಮಾನದಲ್ಲಿ ಫಿಲಿಪ್ಪಿ ಸಭೆಯವರು ರೋಮ್ನಲ್ಲಿದ್ದ ಪೌಲನಿಗೆ ಎಪಫ್ರೊದೀತನ ಮೂಲಕ ಕಾಣಿಕೆ ಕಳುಹಿಸಿದರು. ಅದು ಹಣವಾಗಿದ್ದಿರಬೇಕು. ಪೌಲ ಹಣಕಾಸಿನ ಚಿಂತೆಮಾಡದೆ ದೇವರ ಸೇವೆಗೆ ಹೆಚ್ಚು ಗಮನ ಕೊಡಬೇಕೆಂದು ಅವರು ಬಯಸಿದರು. ಇದಕ್ಕಿಂತ ಮುಂಚೆಯೂ ಅವರು ಹೀಗೆ ಸಹಾಯ ಮಾಡಿದ್ದರು. ಅದಕ್ಕೆ ಪೌಲನು “ಇದು ದೇವರಿಗೆ ಸುಗಂಧವಾಸನೆಯನ್ನು ಬೀರುವ ಕಾಣಿಕೆಯಾಗಿಯೂ ಸ್ವೀಕೃತವಾದ ಯಜ್ಞವಾಗಿಯೂ ಮೆಚ್ಚಿಕೆಯಾದದ್ದಾಗಿಯೂ ಇದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದನು. (ಫಿಲಿಪ್ಪಿ 4:15-19 ಓದಿ.) ಹೌದು, ಪೌಲನು ಅವರ ಪ್ರೀತಿಯನ್ನು ಬಹಳ ಗಣ್ಯಮಾಡಿದನು. ಯೆಹೋವನು ಸಹ ಮೆಚ್ಚಿದನು.
14 ಇಂದು ಲೋಕವ್ಯಾಪಕ ಸಾರುವ ಕೆಲಸಕ್ಕಾಗಿ ನಾವು ಕೊಡುವ ಕಾಣಿಕೆಗಳನ್ನು ಸಹ ಯೆಹೋವ ದೇವರು ತುಂಬ ಮೆಚ್ಚುತ್ತಾನೆ. ಅಷ್ಟೇಕೆ, ಆತನ ರಾಜ್ಯಕ್ಕೆ ನಮ್ಮ ಜೀವನದಲ್ಲಿ ಪ್ರಥಮ ಸ್ಥಾನಕೊಟ್ಟರೆ ನಮ್ಮ ಆಧ್ಯಾತ್ಮಿಕ, ಶಾರೀರಿಕ ಅಗತ್ಯಗಳನ್ನು ಪೂರೈಸುತ್ತಾನೆಂದು ಆಶ್ವಾಸನೆ ಕೊಟ್ಟಿದ್ದಾನೆ.—ಮತ್ತಾ. 6:33; ಲೂಕ 6:38.
ಗಣ್ಯತೆ ವ್ಯಕ್ತಪಡಿಸಿರಿ
15. ನೀವು ಯಾವ ಕಾರಣಗಳಿಗಾಗಿ ಯೆಹೋವನಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೀರಿ?
15 ನಾವು ಯೆಹೋವನಿಗೆ ಗಣ್ಯತೆ ತೋರಿಸಲು ಅಗಣಿತ ಕಾರಣಗಳಿವೆ. ಜೀವದ ಉಡುಗೊರೆಯನ್ನು ನೀಡಿರುವ ಆತನಿಗೆ ನಾವು ಪ್ರತಿದಿನ ಕೃತಜ್ಞತೆ ಸಲ್ಲಿಸಬೇಕು. ಜೀವ ಮಾತ್ರವಲ್ಲ ಜೀವಪೋಷಣೆಗಾಗಿ ಬೇಕಾದ ಆಹಾರ, ಬಟ್ಟೆ, ವಸತಿ ಎಲ್ಲವನ್ನು ಒದಗಿಸಿದ್ದಾನೆ. ಒಂದೊಂದು ಕ್ಷಣವೂ ನಾವು ಉಸಿರಾಡುತ್ತಿರುವುದು ಆತನ ಕೃಪೆ. ಮಾತ್ರವಲ್ಲ ಬೈಬಲಿನ ಸ್ಪಷ್ಟ ಜ್ಞಾನ ಕೊಡುವ ಮೂಲಕ ನಮ್ಮ ನಂಬಿಕೆಗೆ ಆಧಾರವನ್ನೂ ಭವಿಷ್ಯತ್ತಿನ ನಿರೀಕ್ಷೆಯನ್ನೂ ಕರುಣಿಸಿದ್ದಾನೆ. ನಮಗಾಗಿ ಇಷ್ಟೆಲ್ಲ ಮಾಡಿರುವ ಸೃಷ್ಟಿಕರ್ತನಾದ ಯೆಹೋವ ದೇವರನ್ನು ಆರಾಧಿಸಲು ಹಾಗೂ ಸ್ತೋತ್ರಯಜ್ಞಗಳನ್ನು ಸಲ್ಲಿಸಲು ನಿಮ್ಮ ಹೃದಯ ತುಂಬಿ ಬರುವುದಿಲ್ಲವೆ?—ಪ್ರಕಟನೆ 4:11 ಓದಿ.
16. ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞಕ್ಕಾಗಿ ನಾವು ಹೇಗೆ ಕೃತಜ್ಞತೆ ತೋರಿಸಬೇಕು?
16 ಹಿಂದಿನ ಲೇಖನದಲ್ಲಿ ಕಲಿತಂತೆ ಯೆಹೋವನು ನಮಗೆ ಕೊಟ್ಟಿರುವ ಅತ್ಯಂತ ದೊಡ್ಡ ಉಡುಗೊರೆ ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞವಾಗಿದೆ. ಹೀಗೆ ನಮ್ಮ ಮೇಲಿರುವ ಗಾಢ ಪ್ರೀತಿಯನ್ನು ಆತನು ತೋರಿಸಿದ್ದಾನೆ. (1 ಯೋಹಾ. 4:10) ಆತನ ಪ್ರೀತಿಗೆ ನಾವು ಹೇಗೆ ಸ್ಪಂದಿಸಬೇಕು? ಪೌಲನ ಮಾತನ್ನು ಗಮನಿಸಿ: “ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಏಕೆಂದರೆ ಒಬ್ಬ ಮನುಷ್ಯನು ಎಲ್ಲರಿಗೋಸ್ಕರ ಸತ್ತನೆಂದು ನಾವು ತೀರ್ಮಾನಿಸಿದ್ದೇವೆ; . . . ಜೀವಿಸುವವರು ಇನ್ನು ಮುಂದೆ ಸ್ವತಃ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎಬ್ಬಿಸಲ್ಪಟ್ಟವನಿಗಾಗಿ ಜೀವಿಸುವಂತೆ ಅವನು ಎಲ್ಲರಿಗೋಸ್ಕರ ಸತ್ತನು.” (2 ಕೊರಿಂ. 5:14, 15) ಇದರರ್ಥ ದೇವರು ತೋರಿಸಿದ ಆ ಅಪಾತ್ರ ದಯೆಗೆ ನಾವು ನಿಜಕ್ಕೂ ಕೃತಜ್ಞರಾಗಿರುವಲ್ಲಿ ನಮ್ಮ ಇಡೀ ಜೀವನವನ್ನು ಯೆಹೋವ ದೇವರಿಗೆ ಹಾಗೂ ಆತನ ಮಗನಿಗೆ ಗೌರವ ತರುವ ರೀತಿಯಲ್ಲಿ ಇಟ್ಟುಕೊಳ್ಳುತ್ತೇವೆ. ಅವರ ಕಡೆಗೆ ನಮಗಿರುವ ಪ್ರೀತಿ, ಕೃತಜ್ಞತೆಯನ್ನು ನಮ್ಮ ವಿಧೇಯತೆಯ ಮೂಲಕವೂ ಸಾರುವ, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವ ಮೂಲಕವೂ ವ್ಯಕ್ತಪಡಿಸುತ್ತೇವೆ.—1 ತಿಮೊ. 2:3, 4; 1 ಯೋಹಾ. 5:3.
17, 18. ಕೆಲವು ಕ್ರೈಸ್ತರು ಯೆಹೋವನಿಗೆ ಸಲ್ಲಿಸುವ ಸ್ತೋತ್ರಯಜ್ಞವನ್ನು ಹೇಗೆ ಹೆಚ್ಚುಮಾಡಿದ್ದಾರೆ? ಒಂದು ಉದಾಹರಣೆ ತಿಳಿಸಿ.
17 ನೀವು ದೇವರಿಗೆ ಸಲ್ಲಿಸುತ್ತಿರುವ ಸ್ತೋತ್ರಯಜ್ಞಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಸಾಧ್ಯವಿದೆಯಾ? ದೇವರು ಮಾಡಿರುವ ಎಲ್ಲ ಒಳ್ಳೇ ವಿಷಯಗಳಿಗಾಗಿ ಅನೇಕರು ಕೃತಜ್ಞತೆಯಿಂದ ಮನದುಂಬಿ ತಮ್ಮ ಕೆಲಸ, ಸಮಯವನ್ನೆಲ್ಲ ಹೊಂದಿಸಿಕೊಂಡು ಸಾರುವುದರಲ್ಲಿ ಹಾಗೂ ಇತರ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಿದ್ದಾರೆ. ಕೆಲವರು ಪ್ರತಿವರ್ಷವೂ ಒಂದು ಅಥವಾ ಹೆಚ್ಚು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಉತ್ಸಾಹ ತೋರಿದ್ದಾರೆ. ಇನ್ನು ಕೆಲವರು ರೆಗ್ಯುಲರ್ ಪಯನೀಯರ್ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಮತ್ತಿತರರು ಯೆಹೋವನ ಆರಾಧನೆಗೆ ಸಂಬಂಧಿಸಿದ ಕಟ್ಟಡ ನಿರ್ಮಾಣಕಾರ್ಯದಲ್ಲಿ ಸೇವೆಮಾಡುವ ಮೂಲಕ ತಮ್ಮ ಕೃತಜ್ಞತೆಯನ್ನು ತೋರಿಸುತ್ತಿದ್ದಾರೆ. ಕೃತಜ್ಞತೆಯನ್ನು ತೋರಿಸಲು ಇಂಥ ಎಷ್ಟೊಂದು ಉತ್ತಮ ಮಾರ್ಗಗಳು ಇವೆಯಲ್ಲವೆ? ನಾವು ಸಹ ಒಳ್ಳೇ ಹೇತುವಿನಿಂದ ಇಂಥ ಪವಿತ್ರ ಸೇವೆಯನ್ನು ಮಾಡಿ ನಮ್ಮ ಹೃತ್ಪೂರ್ವಕ ಗಣ್ಯತೆಯನ್ನು ತೋರಿಸುವಾಗ ದೇವರು ಅದನ್ನು ಸ್ವೀಕರಿಸುತ್ತಾನೆ.
18 ಇಂದು ಅನೇಕರು ಯೆಹೋವನಿಗೆ ಪೂರ್ಣ ಹೃದಯದಿಂದ ಗಣ್ಯತೆ ವ್ಯಕ್ತಪಡಿಸುತ್ತಿದ್ದಾರೆ. ಸಹೋದರಿ ಮೊರೇನಾ ಒಬ್ಬರು. ಕ್ಯಾಥೊಲಿಕಳಾಗಿದ್ದ ಆಕೆಗೆ ದೇವರ ಕುರಿತು ಹಾಗೂ ಬದುಕಿನ ಅರ್ಥದ ಕುರಿತು ಪ್ರಶ್ನೆಗಳಿದ್ದವು. ಚರ್ಚ್ನಿಂದ ಆಕೆಗೆ ಉತ್ತರ ಸಿಗಲಿಲ್ಲ. ಏಷ್ಯನ್ ತತ್ವಜ್ಞಾನದಲ್ಲಿ ಉತ್ತರ ಕಂಡುಹಿಡಿಯಲು ಆಕೆ ಮಾಡಿದ ಪ್ರಯತ್ನವೂ ವ್ಯರ್ಥವಾಯಿತು. ಆದರೆ ಯೆಹೋವನ ಸಾಕ್ಷಿಗಳಿಂದ ಬೈಬಲನ್ನು ಕಲಿಯಲು ಆರಂಭಿಸಿದಾಗ ಆಕೆಯ ಆಧ್ಯಾತ್ಮಿಕ ಹಸಿವು ನೀಗಿತು. ಬೈಬಲ್ ಮೂಲಕ ಉತ್ತರಗಳು ಸಿಕ್ಕಿದ್ದಕ್ಕಾಗಿ ಹಾಗೂ ಇದು ತನ್ನ ಜೀವನದಲ್ಲಿ ಸಂತೋಷ ತುಂಬಿದ್ದಕ್ಕಾಗಿ ಆಕೆ ಯೆಹೋವನಿಗೆ ಕೃತಜ್ಞತೆ ತೋರಿಸಲು ಬಯಸಿದರು. ದೀಕ್ಷಾಸ್ನಾನವಾದ ಕೂಡಲೆ ಪ್ರತಿ ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡತೊಡಗಿದರು. ಪರಿಸ್ಥಿತಿ ಅನುಮತಿಸಿದ ಕೂಡಲೆ ರೆಗ್ಯುಲರ್ ಪಯನೀಯರ್ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಇದಾಗಿದ್ದು 30 ವರ್ಷಗಳ ಹಿಂದೆ. ಈಗಲೂ ಅವರು ಪೂರ್ಣ ಸಮಯದ ಸೇವೆಯಲ್ಲಿ ಆನಂದಿಸುತ್ತಿದ್ದಾರೆ.
19. ಯೆಹೋವನಿಗೆ ಸಲ್ಲಿಸುವ ಯಜ್ಞಗಳನ್ನು ನೀವು ಹೇಗೆ ಹೆಚ್ಚಿಸಲು ಬಯಸುತ್ತೀರಿ?
19 ದೇವರ ಎಲ್ಲ ನಿಷ್ಠಾವಂತ ಸೇವಕರಿಗೆ ಪಯನೀಯರ್ ಸೇವೆ ಮಾಡಲು ಸಾಧ್ಯವಾಗಲಿಕ್ಕಿಲ್ಲ ನಿಜ. ಆದರೂ ಯೆಹೋವನಿಗಾಗಿ ನಮ್ಮಿಂದ ಕೊಡಸಾಧ್ಯವಿರುವುದನ್ನು ಆತನು ಸ್ವೀಕರಿಸುವಂಥ ರೀತಿಯಲ್ಲಿ ಅರ್ಪಿಸಬಲ್ಲೆವು. ಅದಕ್ಕಾಗಿ ಎಲ್ಲ ಸಮಯದಲ್ಲೂ ನಾವು ಯೆಹೋವನ ಸಾಕ್ಷಿಗಳು ಎನ್ನುವುದನ್ನು ನೆನಪಿಟ್ಟುಕೊಂಡು ಆತನ ನೀತಿಯ ಮೂಲತತ್ವಗಳಿಗೆ ಅನುಸಾರವಾದ ನಡತೆಯನ್ನು ಕಾಪಾಡಿಕೊಳ್ಳೋಣ. ಯೆಹೋವನು ತನ್ನ ಉದ್ದೇಶಗಳನ್ನು ಪೂರೈಸುತ್ತಾನೆಂಬ ನಂಬಿಕೆ ಬಿಡದಿರೋಣ. ಸುವಾರ್ತೆ ಸಾರುವ ಮೂಲಕ ಒಳ್ಳೇದನ್ನು ಮಾಡುತ್ತಾ ಇರೋಣ. ಹೀಗೆ ಯೆಹೋವನು ನಮಗಾಗಿ ಮಾಡಿರುವ ಎಲ್ಲಾ ವಿಷಯಗಳಿಗಾಗಿ ಕೃತಜ್ಞತೆ ತುಂಬಿದ ಹೃದಯದಿಂದ ಮನಸಾರೆ ಯಜ್ಞಗಳನ್ನು ಅರ್ಪಿಸುತ್ತಾ ಇರೋಣ.
[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯೆಹೋವನ ಒಳ್ಳೇತನಕ್ಕಾಗಿ ಯಾವ ರೀತಿಯ ಸ್ತ್ರೋತ್ರಯಜ್ಞವನ್ನು ಅರ್ಪಿಸಲು ನಿಮ್ಮ ಮನ ಬಯಸುತ್ತದೆ?
[ಪುಟ 23ರಲ್ಲಿರುವ ಚಿತ್ರ]
ಪ್ರತಿಯೊಂದು ಅವಕಾಶವನ್ನು ಸಾಕ್ಷಿಕೊಡಲು ಬಳಸುವಿರಾ?