ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 7/1 ಪು. 12-13
  • ಅಬ್ರಹಾಮ ಪ್ರೀತಿಯುಳ್ಳ ವ್ಯಕ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಬ್ರಹಾಮ ಪ್ರೀತಿಯುಳ್ಳ ವ್ಯಕ್ತಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಅನುರೂಪ ಮಾಹಿತಿ
  • “ನನ್ನ ಸ್ನೇಹಿತ” ಎಂದು ಯೆಹೋವನು ಕರೆದ ವ್ಯಕ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ನಂಬಿಕೆಯ ಪರೀಕ್ಷೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅಬ್ರಹಾಮ ಮತ್ತು ಸಾರ ಅವರ ನಂಬಿಕೆಯನ್ನು ನೀವು ಅನುಕರಿಸಬಲ್ಲಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 7/1 ಪು. 12-13

ಅಬ್ರಹಾಮ ಪ್ರೀತಿಯುಳ್ಳ ವ್ಯಕ್ತಿ

ಸಾರಳು ಮೃತಪಟ್ಟ ಸಂದರ್ಭ. ಅಬ್ರಹಾಮ ಅತೀವ ದುಃಖದಲ್ಲಿದ್ದಾನೆ. ತನ್ನ ಪ್ರೀತಿಯ ಮಡದಿಯ ನೂರಾರು ಸವಿನೆನಪುಗಳು ಮನಃಪಟಲದಲ್ಲಿ ಓಡಾಡುತ್ತಿವೆ. ದುಃಖ ಹೃದಯದಲ್ಲಿ ಉಕ್ಕೇರುತ್ತಾ ಹೋದಂತೆ ಕಂಗಳಿಂದ ಕಂಬನಿ ಉದುರ ತೊಡಗುತ್ತವೆ. (ಆದಿಕಾಂಡ 23:1, 2) ಹೀಗೆ ಅಳಲು ಅಬ್ರಹಾಮನಿಗೆ ನಾಚಿಕೆ, ಸಂಕೋಚ ಆಗಲಿಲ್ಲವೇ? ಖಂಡಿತ ಇಲ್ಲ. ಇದು ಅಬ್ರಹಾಮನ ಅತ್ಯುತ್ತಮ ಗುಣವನ್ನು ತೋರಿಸಿಕೊಟ್ಟಿತು. ಅದುವೇ ಪ್ರೀತಿ!

ಪ್ರೀತಿ ಎಂದರೆ? ಆಪ್ತ ಬಾಂಧವ್ಯದ ಇಲ್ಲವೆ ಅಪಾರ ಮಮತೆಯ ಭಾವನೆ. ಈ ಭಾವನೆ ವ್ಯಕ್ತಿಯ ಕ್ರಿಯೆಯಲ್ಲಿ ಬಿಂಬಿತವಾಗುತ್ತದೆ. ಅವನು ಪ್ರೀತಿಸುವ ವ್ಯಕ್ತಿಗಳಿಗಾಗಿ ತ್ಯಾಗಗಳನ್ನೂ ಮಾಡಲು ಸಿದ್ಧನಿರುತ್ತಾನೆ.

ಅಬ್ರಹಾಮ ಪ್ರೀತಿ ತೋರಿಸಿದ್ದು ಹೇಗೆ? ಕುಟುಂಬ ಸದಸ್ಯರಿಗೆ ಅಪಾರ ಪ್ರೀತಿ ತೋರಿಸಿದ. ಅಬ್ರಹಾಮ ಕಾರ್ಯಮಗ್ನ ವ್ಯಕ್ತಿಯಾಗಿದ್ದನು. ಹಾಗಿದ್ದರೂ ಆತ ತನ್ನ ಕುಟುಂಬದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಕಡೆಗಣಿಸಲಿಲ್ಲ. ಆತ ಆರಾಧನಾ ವಿಷಯಗಳಲ್ಲಿ ಮುಂದಾಳತ್ವ ವಹಿಸುವ ಪ್ರೀತಿಯುಳ್ಳ ಕುಟುಂಬ ಯಜಮಾನನಾಗಿದ್ದನೆಂದು ಯೆಹೋವನಿಗೆ ತಿಳಿದಿತ್ತು. (ಆದಿಕಾಂಡ 18:19) ದೇವರಿಗೆ ಇದು ತಿಳಿದಿತ್ತು ಮಾತ್ರವಲ್ಲ ಅದನ್ನಾತ ಮಾತಿನಲ್ಲಿ ವ್ಯಕ್ತಪಡಿಸಿದನು ಸಹ. ಒಮ್ಮೆ ಇಸಾಕನನ್ನು ಸೂಚಿಸಿ ‘ನಿನಗೆ ಪ್ರಿಯನಾಗಿರುವ ಮಗ’ ಎಂದು ಅಬ್ರಹಾಮನಿಗೆ ಹೇಳಿದನು.—ಆದಿಕಾಂಡ 22:2.

ಆತನ ಪ್ರೀತಿ ಎಷ್ಟಿತ್ತೆಂದು ಆತನ ಪ್ರಿಯ ಪತ್ನಿ ತೀರಿಕೊಂಡಾಗಲೂ ತಿಳಿದುಬರುತ್ತದೆ. ಆತ ಗೋಳಾಡಿ ಕಣ್ಣೀರು ಸುರಿಸಿದ. ಇದರರ್ಥ ಆತನಲ್ಲಿ ಮನೋಬಲ ಇರಲಿಲ್ಲ ಎಂದಾ? ಇಲ್ಲ. ಆತ ಧೀರ ಪುರುಷ. ಹಾಗಿದ್ದರೂ ಶೋಕ ವ್ಯಕ್ತಪಡಿಸಲು ಅಂಜಲಿಲ್ಲ. ಮನೋಬಲ ಹಾಗೂ ಕೋಮಲತೆ ಎರಡೂ ಆತನಲ್ಲಿ ಸಮ್ಮಿಳಿತವಾಗಿದ್ದವು.

ದೇವರಿಗೆ ಅಪಾರ ಪ್ರೀತಿ ತೋರಿಸಿದ. ಆತನ ಇಡೀ ಬದುಕು ಆ ಪ್ರೀತಿಗೆ ಹಿಡಿದ ಕನ್ನಡಿಯಂತಿತ್ತು. “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ” ಎನ್ನುತ್ತದೆ 1 ಯೋಹಾನ 5:3. ಇದಕ್ಕೆ ಅಬ್ರಹಾಮ ಒಂದು ಉಜ್ವಲ ಉದಾಹರಣೆ. ಹೇಗೆ?

ಎಷ್ಟೋ ಬಾರಿ ಯೆಹೋವನು ಅಬ್ರಹಾಮನಿಗೆ ಏನು ಮಾಡಬೇಕೆಂದು ಆಜ್ಞೆ ಕೊಟ್ಟನು. ಪ್ರತಿಯೊಂದನ್ನು ಆತ ಕೂಡಲೆ ಪಾಲಿಸಿದ. (ಆದಿಕಾಂಡ 12:4; 17:22, 23; 21:12-14; 22:1-3) ಅದು ಸುಲಭವಿರಲಿ ಕಷ್ಟವಿರಲಿ, ಅದನ್ನು ಕೊಟ್ಟ ಕಾರಣ ಅರ್ಥವಾಗಿರಲಿ ಆಗದಿರಲಿ ಅದೆಲ್ಲ ಅಬ್ರಹಾಮನಿಗೆ ಮುಖ್ಯವಾಗಿರಲಿಲ್ಲ. ತನ್ನ ದೇವರು ಅದನ್ನು ಮಾಡಲು ಹೇಳಿದ್ದಾನೆ ಎಂಬ ಕಾರಣಕ್ಕಿಂತ ಬೇರಾವ ಕಾರಣವೂ ಆತನಿಗೆ ಬೇಕಾಗಿರಲಿಲ್ಲ. ಇದು ಯೆಹೋವನ ಮೇಲೆ ತನಗಿರುವ ಪ್ರೀತಿಯನ್ನು ತೋರಿಸಲು ಒದಗಿಬಂದ ಅವಕಾಶವೆಂದು ನೆನಸಿದ.

ನಮಗಿರುವ ಪಾಠ? ನಾವು ಅಬ್ರಹಾಮನಂತೆ ಇತರರಿಗೆ ಮಮತೆ ತೋರಿಸೋಣ. ಅದರಲ್ಲೂ ವಿಶೇಷವಾಗಿ ನಮ್ಮ ಕುಟುಂಬ ಸದಸ್ಯರಿಗೆ. ಇಂದು ಜೀವನದ ಒತ್ತಡ ಅತಿಯಾಗಿದೆ ನಿಜ. ಹಾಗಿದ್ದರೂ ಆತ್ಮೀಯರಿಗಾಗಿ ಸಮಯ ಮೀಸಲಿಡಲು ತಪ್ಪದಿರೋಣ.

ಯೆಹೋವ ದೇವರನ್ನೂ ಹೃದಯಾಳದಿಂದ ಪ್ರೀತಿಸೋಣ. ಅಂಥ ಪ್ರೀತಿ ನಮ್ಮ ಇಡೀ ಬದುಕನ್ನೇ ರೂಪಿಸಬಲ್ಲದು. ಉದಾಹರಣೆಗೆ, ದೇವರ ಮೇಲಿನ ಪ್ರೀತಿ ಆತನನ್ನು ಮೆಚ್ಚಿಸಲಿಕ್ಕಾಗಿ ನಮ್ಮ ಮನೋಭಾವ, ಮಾತು, ನಡತೆಯಲ್ಲಿ ಬದಲಾವಣೆ ಅಗತ್ಯವಿರುವಾಗ ಅದನ್ನು ಮಾಡುವಂತೆ ಪ್ರೇರಿಸಬಲ್ಲದು.—1 ಪೇತ್ರ 1:14-16.

ಯೆಹೋವನ ಆಜ್ಞೆಗಳನ್ನು ಪಾಲಿಸುವುದು ಯಾವಾಗಲೂ ಸುಲಭದ ವಿಷಯವಲ್ಲ. ಆದರೆ ಅಬ್ರಹಾಮನನ್ನು “ನನ್ನ ಸ್ನೇಹಿತ” ಎಂದು ಕರೆದು ಆತನಿಗೆ ಬೆಂಬಲ, ಸಹಾಯ ನೀಡಿದ ಯೆಹೋವನು ನಮಗೂ ನೀಡುವನು. (ಯೆಶಾಯ 41:8) ‘ನಿಮ್ಮನ್ನು ದೃಢಪಡಿಸುವೆನು, ನಿಮ್ಮನ್ನು ಬಲಪಡಿಸುವೆನು’ ಎಂದು ಆತನು ತನ್ನ ವಾಕ್ಯವಾದ ಬೈಬಲಿನಲ್ಲಿ ಮಾತುಕೊಟ್ಟಿದ್ದಾನೆ. (1 ಪೇತ್ರ 5:10) ಅಬ್ರಹಾಮನ ಭರವಸಾರ್ಹ ಸ್ನೇಹಿತನಾದ ದೇವರ ಈ ಮಾತು ನಮ್ಮಲ್ಲಿ ಎಷ್ಟು ಧೈರ್ಯ ತುಂಬಿಸುತ್ತದಲ್ಲವೆ! (w12-E 01/01)

[ಪುಟ 13ರಲ್ಲಿರುವ ಚೌಕ]

ಗಂಡಸರು ಅಳುವುದಾ!?

ಅಳುವುದು ಪುರುಷ ಲಕ್ಷಣವಲ್ಲ ಎನ್ನಬಹುದು ಅನೇಕರು. ಆದರೆ ಬೈಬಲ್‌ ಇದನ್ನು ಬೆಂಬಲಿಸುವುದಿಲ್ಲ. ಅಬ್ರಹಾಮ ಮಾತ್ರವಲ್ಲ ತೊಂದರೆಯ ಸಮಯದಲ್ಲಿ ಕಣ್ಣೀರು ಸುರಿಸಿರುವ ಅನೇಕ ದೇವಭಕ್ತ ಪುರುಷರ ಉದಾಹರಣೆಗಳೂ ಅದರಲ್ಲಿವೆ. ಯೋಸೇಫ, ದಾವೀದ, ಅಪೊಸ್ತಲ ಪೇತ್ರ, ಎಫೆಸ ಸಭೆಯ ಹಿರಿಯರು ಮುಂತಾದವರು. ಅಷ್ಟೇ ಏಕೆ ಯೇಸು ಸಹ ಕಣ್ಣೀರು ಸುರಿಸಿದನು. (ಆದಿಕಾಂಡ 50:1; 2 ಸಮುವೇಲ 18:33; ಲೂಕ 22:61, 62; ಯೋಹಾನ 11:35; ಅಪೊಸ್ತಲರ ಕಾರ್ಯಗಳು 20:36-38) ಹಾಗಾಗಿ ಅಳುವುದು ಪುರುಷ ಲಕ್ಷಣವಲ್ಲ ಎನ್ನುವ ಮಾತಲ್ಲಿ ಹುರುಳಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ