ಪ್ರಾರ್ಥನೆಯನ್ನು ಕೇಳುವಾತ ಏಕೆ ಕಷ್ಟಗಳನ್ನು ತೆಗೆದುಹಾಕಿಲ್ಲ?
ಕೆಲವರು ಪ್ರಾರ್ಥನೆ ಮಾಡುತ್ತಾರೇನೊ ನಿಜ, ಆದರೆ ಆ ಪ್ರಾರ್ಥನೆಯನ್ನು ಕೇಳುವ ದೇವರೊಬ್ಬ ಇದ್ದಾನಾ ಎಂಬ ಅನುಮಾನ ಅವರಿಗಿದೆ. ಯಾಕೆ? ಲೋಕದಲ್ಲಿ ತುಂಬಿರುವ ಕಷ್ಟಗಳೇ ಇದಕ್ಕೆ ಕಾರಣ. ನಿಮಗೂ ಹಾಗನಿಸಿದೆಯಾ? ದೇವರೇಕೆ ಕಷ್ಟಗಳನ್ನು ತೆಗೆದುಹಾಕಿಲ್ಲ ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ?
ದೇವರು ಮನುಷ್ಯರನ್ನು ಸೃಷ್ಟಿಸಿದಾಗ ಕುಂದುಕೊರತೆ ಇಟ್ಟು, ಕಷ್ಟಗಳನ್ನು ಅನುಭವಿಸುತ್ತಾ ಜೀವಿಸಲಿ ಎಂದು ಸೃಷ್ಟಿಸಿದ್ದನಾ? ಇದು ನಿಜವಾಗಿದ್ರೆ ಅಂಥ ದೇವರನ್ನು ನಾವು ಇಷ್ಟಪಡುತ್ತೇವಾ? ಉದಾ: ನೀವೊಂದು ಹೊಸ ಕಾರನ್ನು ನೋಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಒಂದು ಕಡೆ ಜಜ್ಜಿಹೋಗಿರುವುದು ನಿಮ್ಮ ಗಮನಕ್ಕೆ ಬೀಳುತ್ತದೆ. ಆಗ ನಿಮಗೇನನಿಸುತ್ತದೆ? ಕಾರಿನ ತಯಾರಕನೇ ಅದನ್ನು ಹೀಗೆ ತಯಾರಿಸಿದ್ದಾನೆಂದು ತೀರ್ಮಾನಿಸುತ್ತೀರಾ? ಖಂಡಿತ ಇಲ್ಲ! ಅವನದನ್ನು ಸರಿಯಾಗಿಯೇ ಮಾಡಿರುತ್ತಾನೆ ಆದರೆ ಯಾರೋ ಅದನ್ನು ಗುದ್ದಿ ಹಾಳುಮಾಡಿದ್ದಾರೆ ಎಂದು ನಿಮ್ಮ ಬುದ್ಧಿ ಹೇಳುತ್ತದೆ.
ಹಾಗೆಯೇ ನಮ್ಮ ಪ್ರಕೃತಿ ಒಂದು ಹೊಸ ಕಾರಿನಂತೆ ಸುಂದರವಾಗಿ, ಸುವ್ಯವಸ್ಥಿತವಾಗಿದೆ. ಆದರೆ ಇನ್ನೊಂದು ಕಡೆ ಅವ್ಯವಸ್ಥೆ, ಭ್ರಷ್ಟಾಚಾರ ಮಾನವರನ್ನು ಬಾಧಿಸುತ್ತಿದೆ. ಇದನ್ನು ನೋಡುವಾಗ ಯಾವ ತೀರ್ಮಾನಕ್ಕೆ ಬರುತ್ತೀರಿ? ವ್ಯವಸ್ಥಿತವಾಗಿ ಸೃಷ್ಟಿಸಿದ ದೇವರೇ ಈ ಅವ್ಯವಸ್ಥೆಗೆ ಕಾರಣನೆಂದು ನೆನಸುತ್ತೀರಾ? ಇಲ್ಲ ಅಲ್ಲವೇ. ಬೈಬಲ್ ತಿಳಿಸುವುದೇನೆಂದರೆ ಮೊದಲ ಮಾನವ ಜೋಡಿಯನ್ನು ದೇವರು ಯಾವುದೇ ಕುಂದುಕೊರತೆ ಇಲ್ಲದೆ ಸೃಷ್ಟಿಸಿದನು. ಆದರೆ ಅವರು ತಮಗೆ ತಾವೇ ಹಾನಿ ತಂದುಕೊಂಡರು. (ಧರ್ಮೋಪದೇಶಕಾಂಡ 32:4, 5) ಸಂತೋಷದ ಸುದ್ದಿಯೇನೆಂದರೆ ಆಗಿರುವ ಹಾನಿಯನ್ನೆಲ್ಲ ಸರಿಪಡಿಸುತ್ತೇನೆ, ವಿಧೇಯ ಮನುಷ್ಯರು ಕುಂದುಕೊರತೆ ಇಲ್ಲದೆ ಜೀವಿಸುವಂತೆ ಮಾಡುತ್ತೇನೆ ಎಂದು ದೇವರು ಮಾತುಕೊಟ್ಟಿದ್ದಾನೆ. ಆದರೆ ಈ ಮಾತನ್ನು ನೆರವೇರಿಸಲು ಇಷ್ಟು ತಡವೇಕೆ?
ಯಾಕಿಷ್ಟು ತಡ?
ಮನುಷ್ಯರನ್ನು ಯಾರು ಆಳಬೇಕು ಎಂಬ ಸವಾಲೆದ್ದಿರುವುದೇ ಇದಕ್ಕೆ ಕಾರಣ. ಮನುಷ್ಯರು ತಮ್ಮನ್ನು ತಾವೇ ಆಳಿಕೊಳ್ಳುವುದು ದೇವರ ಉದ್ದೇಶವಾಗಿರಲಿಲ್ಲ. ನಾವು ಆತನ ಆಡಳಿತದ ಕೆಳಗಿರಬೇಕಿತ್ತು. ಮನುಷ್ಯನು ತನ್ನನ್ನು ತಾನೇ ಮಾರ್ಗದರ್ಶಿಸಲಾರ, ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರ ಎನ್ನುತ್ತೆ ಬೈಬಲ್. (ಯೆರೆಮೀಯ 10:23) ಮೊದಲ ಮಾನವರು ದೇವರ ಆಳ್ವಿಕೆಗೆ ವಿರುದ್ಧ ಬಂಡಾಯ ಎದ್ದರು. ಇದು ತಪ್ಪಾಗಿತ್ತು. ಅವರು ಪಾಪಿಗಳಾದರು. (1 ಯೋಹಾನ 3:4) ಪರಿಣಾಮ? ಕುಂದುಕೊರತೆಯಿಲ್ಲದ ಜೀವನವನ್ನು ಕಳೆದುಕೊಂಡರು. ತಮಗೆ ಹಾನಿಯನ್ನು ತಂದುಕೊಂಡರು ಮಾತ್ರವಲ್ಲ ತಮ್ಮ ಸಂತತಿಯನ್ನೂ ಹಾನಿಗೆ ಸಿಲುಕಿಸಿದರು.
ಸಾವಿರಾರು ವರುಷಗಳಿಂದ ಮನುಷ್ಯರು ತಮ್ಮನ್ನು ತಾವೇ ಆಳಿಕೊಳ್ಳುವಂತೆ ದೇವರು ಬಿಟ್ಟಿದ್ದಾನೆ. ಆದರೆ ಅವರು ಆಳಲು ಸಮರ್ಥರಲ್ಲ ಎಂದು ಇತಿಹಾಸ ರುಜುಪಡಿಸಿದೆ. ಇಷ್ಟರ ವರೆಗೆ ಆಳ್ವಿಕೆ ನಡೆಸಿರುವ ಯಾವುದೇ ಸರಕಾರ ಯುದ್ಧ, ಪಾತಕ, ಅನ್ಯಾಯ ಇಲ್ಲವೆ ಕಾಯಿಲೆಕಸಾಲೆಗಳನ್ನು ನಿರ್ಮೂಲಮಾಡಲು ಎಷ್ಟೇ ಪ್ರಯತ್ನಿಸಿದರೂ ಸೋಲುಂಡಿವೆ.
ದೇವರು ಹೇಗೆ ಸರಿಪಡಿಸುವನು?
ನ್ಯಾಯ, ನೀತಿ ತುಂಬಿದ ಹೊಸ ಲೋಕವನ್ನು ದೇವರು ಬೇಗನೆ ತರುವನೆಂದು ಬೈಬಲ್ ತಿಳಿಸುತ್ತದೆ. (2 ಪೇತ್ರ 3:13) ಮನಸಾರೆ ದೇವರನ್ನೂ ಇತರರನ್ನೂ ಯಾರು ಪ್ರೀತಿಸುತ್ತಾರೋ ಅಂಥವರಿಗೆ ಮಾತ್ರ ಅಲ್ಲಿ ಬದುಕಲು ದೇವರು ಅನುಮತಿ ನೀಡುತ್ತಾನೆ.—ಧರ್ಮೋಪದೇಶಕಾಂಡ 30:15, 16, 19, 20.
ಕಷ್ಟಗಳನ್ನೂ ಅದಕ್ಕೆ ಕಾರಣರಾಗಿರುವವರನ್ನೂ ದೇವರು “ನ್ಯಾಯತೀರ್ಪಿನ ದಿನ”ದಂದು ತೆಗೆದುಹಾಕುವನು ಎಂದು ಬೈಬಲ್ ತಿಳಿಸುತ್ತದೆ. ಆ ದಿನ ಅತಿ ಹತ್ತಿರದಲ್ಲಿದೆ. (2 ಪೇತ್ರ 3:7) ಇದಾದ ಬಳಿಕ, ದೇವರೇ ನೇಮಿಸಿರುವ ಯೇಸು ಕ್ರಿಸ್ತನು ವಿಧೇಯ ಮಾನವರನ್ನು ಆಳುವನು. (ದಾನಿಯೇಲ 7:13, 14) ಯೇಸುವಿನ ಆಳ್ವಿಕೆಯಿಂದ ಪ್ರಯೋಜನ? “ದೀನರು [ಭೂಮಿಯನ್ನು] ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು” ಎನ್ನುತ್ತೆ ಬೈಬಲ್.—ಕೀರ್ತನೆ 37:11.
ನಾವೀಗಾಗಲೇ ತಿಳಿದಂತೆ ಜೀವದಾತನಾದ ಯೆಹೋವ ದೇವರ ವಿರುದ್ಧ ಮಾನವರು ಬಂಡಾಯ ಎದ್ದ ಕಾರಣ ಕಷ್ಟತೊಂದರೆಗಳು ಸಂಭವಿಸಿವೆ. (ಕೀರ್ತನೆ 36:9) ಸ್ವರ್ಗದಿಂದ ಅರಸನಾಗಿ ಆಳುವ ಯೇಸು ಅದನ್ನೆಲ್ಲ ಸರಿಪಡಿಸುವನು. ರೋಗ, ವೃದ್ಧಾಪ್ಯ, ಮರಣವನ್ನು ಸಹ ತೆಗೆದುಹಾಕುವನು. ಈ ಪ್ರಯೋಜನ ಸಿಗುವುದು ಅವನ ಆಳ್ವಿಕೆಗೆ ವಿಧೇಯತೆ ತೋರಿಸುವವರಿಗೆ ಮಾತ್ರ. ಬೈಬಲಿನಲ್ಲಿರುವ ಈ ಎಲ್ಲ ವಾಗ್ದಾನಗಳು ಆಗ ನೆರವೇರುವವು:
◼ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವದು.”—ಯೆಶಾಯ 33:24.
◼ “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”—ಪ್ರಕಟನೆ 21:4.
ದೇವರು ಎಲ್ಲ ಕಷ್ಟಗಳನ್ನು ತೆಗೆದುಬಿಡುತ್ತೇನೆ ಅಂತ ಹೇಳಿರುವ ಮಾತು ಬೇಗ ಈಡೇರಲಿದೆ. ಇದನ್ನು ತಿಳಿಯುವುದು ಎಷ್ಟೊಂದು ಚೇತೋಹಾರಿ ಅಲ್ಲವಾ? ಆದರೆ ಈಗ ಕಷ್ಟಗಳನ್ನು ಅನುಮತಿಸಿದ್ದಾನೆ ಎಂದ ಮಾತ್ರಕ್ಕೆ ನಮ್ಮ ಪ್ರಾರ್ಥನೆಗಳನ್ನು ಕೇಳುವುದಿಲ್ಲ ಎಂದು ನಿರಾಶರಾಗಬೇಡಿ, ಭರವಸೆ ಕಳಕೊಳ್ಳಬೇಡಿ.
ದೇವರಿದ್ದಾನೆ. ಆತನು ನಿಮಗೆ ಕಿವಿಗೊಡುತ್ತಾನೆ. ದುಃಖ ನೋವಿನಿಂದ ಕೂಡಿದ ನಿಮ್ಮ ಅಳಲನ್ನು ಆತ ಕೇಳುತ್ತಾನೆ. ನೀವು ಅನುಮಾನ, ನೋವು ಇಲ್ಲದೆ ಸಂತೋಷದಿಂದ ಬದುಕುವುದನ್ನು ನೋಡಲು ಆತ ಹಾತೊರೆಯುತ್ತಾನೆ. (w12-E 07/01)