ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 8/15 ಪು. 31-32
  • ಪಿಲ್‌ಗ್ರಿಮ್ಸ್‌ ಜೊತೆಯಲ್ಲಿ ಪಯಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪಿಲ್‌ಗ್ರಿಮ್ಸ್‌ ಜೊತೆಯಲ್ಲಿ ಪಯಣ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 8/15 ಪು. 31-32

ನಮ್ಮ ಸಂಗ್ರಹಾಲಯ

ಪಿಲ್‌ಗ್ರಿಮ್ಸ್‌ ಜೊತೆಯಲ್ಲಿ ಪಯಣ

“ಮನೆ ಮನೆಗೆ ಹೋಗಿ ಸಾರೋದಾ? ನನ್ನಿಂದಂತೂ ಅದು ಸಾಧ್ಯವೇ ಇಲ್ಲ!” ಹೀಗೆಂದು ಹೊಸದಾಗಿ ಬೈಬಲನ್ನು ಕಲಿಯುತ್ತಿರುವವರು ಹೇಳಿದರೆ ಆಶ್ಚರ್ಯ ಆಗಲ್ಲ. ಏಕೆಂದರೆ ಪರಿಚಯವಿಲ್ಲದವರ ಬಳಿ ಹೋಗಿ ಮಾತಾಡುವುದನ್ನು ನೆನಸಿದರೆ ಅವರಿಗೆ ಎದೆ ಡವಗುಟ್ಟುತ್ತೆ. ಆದರೆ ಆ ರೀತಿ ಆಕ್ಷೇಪಿಸಿದ್ದು ಒಬ್ಬ ಅನುಭವಸ್ಥ ಭಾಷಣಕರ್ತ, ಬೈಬಲ್‌ ಬೋಧಕ, ಪಿಲ್‌ಗ್ರಿಮ್‌ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ.

ಝಯನ್ಸ್‌ ವಾಚ್‌ಟವರ್‌ ಪತ್ರಿಕೆ ಓದಿ ಚರ್ಚ್‌ಗಳನ್ನು ಬಿಟ್ಟುಬಂದ ಅನೇಕರು ತಮ್ಮಂತೆ ಬೈಬಲ್‌ ಸತ್ಯಕ್ಕಾಗಿ ಹಾತೊರೆಯುತ್ತಿದ್ದ ಜನರೊಂದಿಗೆ ಸಹವಾಸಮಾಡಲು ಇಷ್ಟಪಟ್ಟರು. ಆಗ ವಾಚ್‌ಟವರ್‌ ಪತ್ರಿಕೆಯು ಒಂದೇ ರೀತಿಯ ಕ್ರೈಸ್ತ ನಂಬಿಕೆಯಿದ್ದವರೆಲ್ಲರೂ ಒಟ್ಟುಗೂಡಿ ಕ್ರಮವಾಗಿ ಬೈಬಲ್‌ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸಿತು. ಹೀಗೆ ಆರಂಭಗೊಂಡ ಗುಂಪುಗಳು ತಮ್ಮ ಬಳಿ ಯಾರನ್ನಾದರೂ ಕಳುಹಿಸುವಂತೆ ಸಂಸ್ಥೆಯನ್ನು ಕೇಳಿಕೊಂಡವು. ಆ ಕೋರಿಕೆಯ ಮೇರೆಗೆ ಸಂಸ್ಥೆ 1894ರ ಆರಂಭದಲ್ಲಿ ಸಂಚರಣ ಪ್ರತಿನಿಧಿಗಳನ್ನು ಕಳುಹಿಸಿತು. ಇವರೇ ಪಿಲ್‌ಗ್ರಿಮ್ಸ್‌. ದೈನ್ಯಭಾವ, ಬೈಬಲ್‌ನ ಉತ್ತಮ ಜ್ಞಾನ, ಮಾತಾಡುವ-ಬೋಧಿಸುವ ಕಲೆ, ವಿಮೋಚನ ಮೌಲ್ಯಕ್ಕೆ ಗಣ್ಯತೆ ತೋರಿಸುತ್ತಿದ್ದ ಶ್ರಮಶೀಲ ಅನುಭವಸ್ಥ ಪುರುಷರನ್ನು ಆ ಸೇವೆಗಾಗಿ ಆರಿಸಿಕೊಳ್ಳಲಾಯಿತು. ಒಂದೆರಡು ದಿನಗಳ ಅವರ ಭೇಟಿ ತುಂಬ ಕಾರ್ಯಮಗ್ನವಾಗಿರುತ್ತಿತ್ತು. ಈ ಸಂದರ್ಭದಲ್ಲಿ ಅವರು ಒಂದು ಸಾರ್ವಜನಿಕ ಭಾಷಣ ಕೊಡುತ್ತಿದ್ದರು. ಇದರ ಕರಪತ್ರಗಳನ್ನು ಹಂಚುವ ಮೂಲಕವೇ ಅನೇಕ ಬೈಬಲ್‌ ವಿದ್ಯಾರ್ಥಿಗಳು ಪ್ರಪ್ರಥಮ ಬಾರಿ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಂಡದ್ದು. ಸಹೋದರ ಯುಗೋ ರೀಮರ್‌ (ಸಮಯಾನಂತರ ಆಡಳಿತ ಮಂಡಲಿಯ ಸದಸ್ಯರಾದರು) ಒಂದು ಸಂಜೆ ಶಾಲೆಯೊಂದರಲ್ಲಿ ಸಾರ್ವಜನಿಕ ಭಾಷಣ ಕೊಟ್ಟ ಬಳಿಕ ಸಭಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸತೊಡಗಿದರು. ಇದೆಲ್ಲಾ ಮುಗಿಯುವಾಗ ಮಧ್ಯರಾತ್ರಿ ದಾಟಿತ್ತು. ಸಹೋದರ ರೀಮರ್‌ ದಣಿದು ಸುಸ್ತಾಗಿದ್ದರೂ ಆ ಕೂಟ ತುಂಬ ಖುಷಿ ಕೊಟ್ಟಿತು ಎಂದು ಹೇಳಿದರು.

ಪಿಲ್‌ಗ್ರಿಮ್‌ಗಳ ಭೇಟಿಯ ಮುಖ್ಯ ಉದ್ದೇಶ ಏನಾಗಿತ್ತು? “ನಂಬಿಕೆಯುಳ್ಳ ಮನೆವಾರ್ತೆಯ” ಭಕ್ತಿವೃದ್ಧಿ ಮಾಡುವುದೇ ಎಂದು ವಾಚ್‌ ಟವರ್‌ ಹೇಳಿತು. ಕೂಟಗಳು ವಿಶ್ವಾಸಿಗಳ ಮನೆಗಳಲ್ಲಿ ನಡೆಯುತ್ತಿತ್ತು. ಸುತ್ತಮುತ್ತಲಿನ ಸ್ಥಳಗಳಿಂದ ಬೈಬಲ್‌ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು. ಪಿಲ್‌ಗ್ರಿಮ್‌ ಮೊದಲು ಭಾಷಣ ನೀಡುತ್ತಿದ್ದರು. ಅನಂತರ ಸಭಿಕರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಬಳಿಕ ಅಲ್ಲಿನ ಸಹೋದರಿಯರಿಂದ ಅತಿಥಿಸತ್ಕಾರ. ಮತ್ತೆ ಭಾಷಣ ಹಾಗೂ ಚರ್ಚೆ. ಇಂಥ ಕೂಟವೊಂದಕ್ಕೆ ಚಿಕ್ಕ ವಯಸ್ಸಿನಲ್ಲಿ ಹಾಜರಾಗಿದ್ದ ಮಾಡ್‌ ಅಬ್ಬೊಟ್‌ ತಮ್ಮ ನೆನಪನ್ನು ಹಂಚಿಕೊಳ್ಳುತ್ತಾರೆ. ಬೆಳಗ್ಗಿನ ಭಾಷಣ ಮುಗಿದ ಮೇಲೆ ಎಲ್ಲರೂ ಅಂಗಳದಲ್ಲಿದ್ದ ಉದ್ದ ಮೇಜಿನ ಸುತ್ತ ಸೇರಿದೆವು. “ಹಂದಿ ಮಾಂಸ, ಚಿಕನ್‌ ಫ್ರೈ, ತರತರದ ಬ್ರೆಡ್‌, ಸಿಹಿ ತಿಂಡಿ, ಕೇಕ್‌​—⁠ಅಬ್ಬಾ ಎಂಥ ಭರ್ಜರಿ ಊಟ! ನಾವೆಲ್ಲ ಹೊಟ್ಟೆ ತುಂಬ ತಿಂದೆವು. ಮಧ್ಯಾಹ್ನ 2ಗಂಟೆ ಸುಮಾರಿಗೆ ಇನ್ನೊಂದು ಭಾಷಣ ಕೇಳಲು ಕೂತುಕೊಂಡಾಗ ಎಲ್ಲರ ಕಣ್ಣಲ್ಲೂ ನಿದ್ದೆಯ ಮಂಪರು.” ದೀರ್ಘ ಸಮಯ ಪಿಲ್‌ಗ್ರಿಮ್‌ ಆಗಿದ್ದ ಬೆಂಜಮಿನ್‌ ಬಾರ್ಟನ್‌ ಒಮ್ಮೆ ಹೀಗಂದರು: ‘ಹೋದಲ್ಲೆಲ್ಲಾ ಕೊಡುತ್ತಿದ್ದ ಬಗೆ ಬಗೆಯ ಊಟವನ್ನು ತಿಂದಿದ್ದರೆ ನನ್ನ ಕಥೆ ಯಾವತ್ತೋ ಮುಗಿದು ಹೋಗ್ತಿತ್ತು.’ ಸನ್ನಿವೇಶ ಹೀಗಿದ್ದದರಿಂದ ಪಿಲ್‌ಗ್ರಿಮ್‌ಗಳಿಗೆ “ಲಘು ಊಟ” ಕೊಟ್ಟು ಅವರ “ನಿದ್ರೆಗೆ ತೊಂದರೆಯಾಗದಂತೆ” ನೋಡಿಕೊಂಡರೆ ಸಾಕೆಂದು ಮುಖ್ಯಕಾರ್ಯಾಲಯ ಸತ್ಕಾರಭಾವದ ಸಹೋದರಿಯರಿಗೆ ಸಲಹೆ ನೀಡಿತು.

ಪಿಲ್‌ಗ್ರಿಮ್‌ಗಳು ನುರಿತ ಭಾಷಣಕರ್ತರಾಗಿದ್ದರು. ನಕ್ಷೆಗಳನ್ನು, ನಮೂನೆಗಳನ್ನು ಹಾಗೂ ಲಭ್ಯವಿದ್ದದ್ದೆಲ್ಲವನ್ನು ಬಳಸಿ ಭಾಷಣಕ್ಕೆ ಜೀವ ತುಂಬುತ್ತಿದ್ದರು. ಸಹೋದರ ಆರ್‌. ಎಚ್‌. ಬಾರ್ಬರ್‌ ಅವರ ಭಾಷಣ ಯಾವಾಗಲೂ ಆಧ್ಯಾತ್ಮಿಕ ರಸದೌತಣದಂತೆ ಇರುತ್ತಿತ್ತು. ವಾಲ್ಟರ್‌. ಜೆ. ಥಾರ್ನ್‌ರವರು ಪ್ರೀತಿಯ ತಂದೆ ಮಕ್ಕಳೊಂದಿಗೆ ಮಾತಾಡುವಂತೆ ಭಾಷಣ ಕೊಡುತ್ತಿದ್ದರು. ಅವರ ಸ್ವರ “ಪ್ರಾಚೀನ ಮೂಲಪಿತೃಗಳಂತೆ” ಮಮತೆಯಿಂದ ಕೂಡಿರುತ್ತಿತ್ತು. ಪ್ರಕೃತಿಯಲ್ಲಿರುವ ವಸ್ತುಗಳನ್ನು ಬಳಸಿ ಬೋಧಿಸುವುದರಲ್ಲಿ ಶೀಲ್ಡ್‌ ಟೂಟ್ಜನ್‌ ನಿಪುಣರು. ಒಮ್ಮೆ ಎ-ಫೋರ್ಡ್‌ ಮಾದರಿಯ ಕಾರ್‌ನಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ “ನಿಲ್ಲಿಸಿ!” ಎಂದು ಕೂಗಿದರು. ಥಟ್ಟನೆ ಕಾರಿಂದ ಇಳಿದು ರಸ್ತೆಬದಿಯಲ್ಲಿ ಬೆಳೆದಿದ್ದ ಹೂಗಳನ್ನು ಕಿತ್ತು ತಂದರು. ಯಾವುದೇ ಪೂರ್ವತಯಾರಿಯಿಲ್ಲದೆ ಅದನ್ನು ಉಪಯೋಗಿಸಿ ಜೊತೆಯಲ್ಲಿದ್ದವರಿಗೆ ಯೆಹೋವನ ಸೃಷ್ಟಿಯ ಕುರಿತು ಅಮೂಲ್ಯ ಪಾಠವನ್ನು ಕಲಿಸಿದರು.

ಪಿಲ್‌ಗ್ರಿಮ್‌ ಸೇವೆಯಲ್ಲಿ ಸವಾಲುಗಳೂ ಎದುರಾದವು. ಮಧ್ಯ ವಯಸ್ಸಿನವರಿಗೆ ಮತ್ತು ವಯಸ್ಸಾದವರಿಗೆ ಸವಾಲುಗಳನ್ನು ಎದುರಿಸುವುದು ಸುಲಭವಾಗಿರಲಿಲ್ಲ. ಆದರೆ ಕೆಲವರಿಗೆ ಇದೆಲ್ಲದಕ್ಕಿಂತಲೂ ಅತಿ ದೊಡ್ಡ ಪರೀಕ್ಷೆ ಎದುರಾದದ್ದು ಪಿಲ್‌ಗ್ರಿಮ್‌ಗಳ ಭೇಟಿಯ ಉದ್ದೇಶದಲ್ಲಿ ಬದಲಾವಣೆಯಾದಾಗ. ಮನೆಯಿಂದ ಮನೆಗೆ ಸಾರುವ ಕೆಲಸದಲ್ಲಿ ಮುಂದಾಳತ್ವ ವಹಿಸುವುದೇ ಪಿಲ್‌ಗ್ರಿಮ್‌ಗಳ ಭೇಟಿಯ ಮುಖ್ಯ ಉದ್ದೇಶವಾಗಿರುವುದು ಎಂದು ಸಂಸ್ಥೆ ಹೇಳಿತು. ಸತ್ಯ ಕ್ರೈಸ್ತರಿಗೆ ಕೊಡಲಾಗಿರುವ “ಪ್ರಮುಖ ಆಜ್ಞೆಗಳಲ್ಲಿ ರಾಜ್ಯದ ಕುರಿತು ಸಾಕ್ಷಿ ನೀಡಬೇಕೆನ್ನುವ ಆಜ್ಞೆ ಒಂದು. ಆದ್ದರಿಂದ ಪಿಲ್‌ಗ್ರಿಮ್‌ಗಳು ಇನ್ನು ಮುಂದೆ ಈ ಉದ್ದೇಶಕ್ಕಾಗಿ ಕಳುಹಿಸಲ್ಪಡುವರು” ಎಂದು ತಿಳಿಸಿತು 1924, ಮಾರ್ಚ್‌ 15ರ ವಾಚ್‌ ಟವರ್‌.

ಈ ಬದಲಾವಣೆಯಿಂದ ಕೆಲವು ಪಿಲ್‌ಗ್ರಿಮ್‌ಗಳಿಗೆ ಅಸಮಾಧಾನವಾದ ಕಾರಣ ಸಂಚರಣ ಕೆಲಸವನ್ನು ಬಿಟ್ಟುಬಿಟ್ಟರು. ಹೀಗೆ ಸಿಟ್ಟಿಗೆದ್ದ ಇನ್ನೂ ಕೆಲವರು ತಮ್ಮದೇ ಆದ ಪಂಥಗಳನ್ನು ಸ್ಥಾಪಿಸಿಕೊಂಡರು. ಒಬ್ಬ ಉತ್ತಮ ಭಾಷಣಕರ್ತರಾಗಿದ್ದ ಪಿಲ್‌ಗ್ರಿಮ್‌ ಕೋಪದಿಂದ, “ಮನೆ ಮನೆಗೆ ಹೋಗಿ ಸಾರೋದಾ? ನನ್ನಿಂದಂತೂ ಅದು ಸಾಧ್ಯವೇ ಇಲ್ಲ! ವೇದಿಕೆಯಿಂದ ಪ್ರಸಂಗ ಬೇಕಾದರೆ ಕೊಡ್ತೇನೆ” ಎಂದು ಖಾರವಾಗಿ ಹೇಳಿದರೆಂದು ರೋಬೀ ಡಿ. ಆ್ಯಡ್ಗನ್ಸ್‌ ತಿಳಿಸುತ್ತಾರೆ. “1924ರಲ್ಲಿ ಒಹಾಯೋದ ಕೊಲಂಬಸ್‌ನಲ್ಲಿ ನಡೆದ ಅಧಿವೇಶನದಲ್ಲೇ ನಾನು ಅವರನ್ನು ಕೊನೇ ಬಾರಿ ನೋಡಿದ್ದು. ಅಲ್ಲಿ ಸಾವಿರಾರು ಸಹೋದರರು ಸಂತೋಷದಿಂದ ಇದ್ದರೂ ಇವರು ಮಾತ್ರ ಹತಾಶೆಯಿಂದ ಚಿಕ್ಕ ಮರದ ಕೆಳಗೆ ಏಕಾಂಗಿಯಾಗಿ ನಿಂತಿದ್ದರು. ಮುಖದಲ್ಲಿ ಕಳೆ ಇರಲಿಲ್ಲ. ಸ್ವಲ್ಪದರಲ್ಲೇ ಸಂಸ್ಥೆಯನ್ನು ಬಿಟ್ಟುಹೋದರು.” ಅಧಿವೇಶನಕ್ಕೆ ಬಂದಿದ್ದ ಇತರ ಸಹೋದರರಾದರೋ “ಸಂತೋಷದಿಂದ ಪುಸ್ತಕಗಳನ್ನು ತಮ್ಮತಮ್ಮ ಕಾರುಗಳಿಗೆ ತುಂಬಿಸುತ್ತಿದ್ದರು” ಎನ್ನುತ್ತಾರೆ ಆ್ಯಡ್ಗನ್ಸ್‌. ಮನೆಯಿಂದ ಮನೆಗೆ ಸಾರುವ ಉದ್ದೇಶದಿಂದ ಈ ಸಹೋದರರು ಇಷ್ಟು ಪುಸ್ತಕಗಳನ್ನು ತೆಗೆದುಕೊಂಡಿರಬೇಕು ಎಂಬುದು ಸ್ಪಷ್ಟ.​—⁠ಅ. ಕಾ. 20:​20, 21.

ಮನೆ ಮನೆ ಸೇವೆಯೆಂದರೆ ಸಭೆಯಲ್ಲಿದ್ದವರಿಗೆ ಮಾತ್ರವಲ್ಲ ಅವರಿಗೆ ತರಬೇತಿ ಕೊಡಲು ಬಂದ ಅನೇಕ ಪಿಲ್‌ಗ್ರಿಮ್‌ಗಳಿಗೂ ಹೆದರಿಕೆಯಿತ್ತು. ಆದರೂ ಅವರು ಹಿಂದೇಟು ಹಾಕಲಿಲ್ಲ. ಮನೆ ಮನೆ ಸೇವೆಯ ಕುರಿತು ಜರ್ಮನ್‌ ಭಾಷೆಯ ಸಹೋದರ ಮ್ಯಾಕ್ಸ್‌ವೆಲ್‌ ಜಿ. ಫ್ರೆಂಡ್‌ (ಫೆಶಲ್‌) ಹೀಗೆ ಬರೆದರು: “ಸಾರುವ ಕೆಲಸದಿಂದ ಪಿಲ್‌ಗ್ರಿಮ್‌ ಸೇವೆಯಲ್ಲಿ ಆಶೀರ್ವಾದಗಳು ಇಮ್ಮಡಿಯಾಯಿತು.” ರಾಜ್ಯದ ಸುವಾರ್ತೆ ಸಾರುವ ಕೆಲಸಕ್ಕೆ ಕೊಡಲಾದ ಮಹತ್ವವನ್ನು ಹೆಚ್ಚಿನವರು ಗಣ್ಯಮಾಡಿದರೆಂದು ಜಾನ್‌ ಎ. ಬೋನೆಟ್‌ ವರದಿಸಿದರು. ಬಹುಪಾಲು ಮಂದಿ ಆಧ್ಯಾತ್ಮಿಕ “ಹೋರಾಟದಲ್ಲಿ ಮುಂಚೂಣಿಯಲ್ಲಿರಲು ತುಂಬ ಉತ್ಸುಕ”ರಾಗಿದ್ದರು ಎಂದವರು ಹೇಳಿದರು.

ಕಳೆದ ಎಲ್ಲ ವರ್ಷಗಳಲ್ಲಿ ಸಂಚರಣ ಕೆಲಸದಲ್ಲಿರುವ ನಂಬಿಗಸ್ತ ಸಹೋದರರು ಸಭೆಯಲ್ಲಿರುವವರ ಮೇಲೆ ಒಳ್ಳೇ ಪ್ರಭಾವ ಬೀರಿದ್ದಾರೆ. “ಪಿಲ್‌ಗ್ರಿಮ್‌ಗಳಿಂದ ಎಲ್ಲರಿಗೆ ಮಹತ್ತರ ಪ್ರಯೋಜನವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿಕ್ಕಂದಿನಿಂದ ನಾನು ಕೂಡ ಅವರಿಂದ ಬಹಳಷ್ಟು ಪ್ರಯೋಜನ ಪಡೆದಿದ್ದೇನೆ. ಅವರು ತುಂಬ ಶ್ರಮಪಟ್ಟು ನನ್ನನ್ನು ಸರಿಯಾದ ರೀತಿಯಲ್ಲಿ ರೂಪಿಸಿದರು” ಎಂದರು ಬಹುಕಾಲದಿಂದ ಸಾಕ್ಷಿಯಾಗಿರುವ ನಾರ್ಮನ್‌ ಲಾರ್ಸನ್‌. ಹೌದು, “ಮನೆಯಿಂದ ಮನೆಗೆ ಸಾರಲು ನಮ್ಮಿಂದಾಗುತ್ತೆ” ಎಂದು ಜೊತೆ ವಿಶ್ವಾಸಿಗಳು ಹೇಳುವಂತಾಗಲು ಸ್ವತ್ಯಾಗದ ನಿಷ್ಠಾವಂತ ಸಂಚರಣ ಮೇಲ್ವಿಚಾರಕರು ಇಂದಿನ ವರೆಗೂ ಸಹಾಯ ಮಾಡುತ್ತಿದ್ದಾರೆ.

[ಪುಟ 32ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪಿಲ್‌ಗ್ರಿಮ್‌ ಬಂದರೆಂದರೆ ಎಲ್ಲರಿಗೂ ಖುಷಿಯೋ ಖುಷಿ!

[ಪುಟ 31ರಲ್ಲಿರುವ ಚಿತ್ರ]

ಬೆಂಜಮಿನ್‌ ಬಾರ್ಟನ್‌ 1905ರಲ್ಲಿ ಭೇಟಿ ಮಾಡಿದ ಸುಮಾರು 170 ಸ್ಥಳಗಳ ಮತ್ತು ಮಾರ್ಗಗಳ ಪಟ್ಟಿ

[ಪುಟ 32ರಲ್ಲಿರುವ ಚಿತ್ರ]

ವಾಲ್ಟರ್‌. ಜೆ. ಥಾರ್ನ್‌ ಪಿಲ್‌ಗ್ರಿಮ್‌ ಆಗಿದ್ದ ಅವರನ್ನು ಪ್ರೀತಿಯಿಂದ “ಪ್ಯಾಪಿ” ಎಂದು ಕರೆಯುತ್ತಿದ್ದರು. ತಂದೆಯಂಥ ಸ್ವಭಾವ, ಕ್ರಿಸ್ತನಂಥ ಮನೋಭಾವ ಅವರದ್ದು

[ಪುಟ 32ರಲ್ಲಿರುವ ಚಿತ್ರ]

ಜೆ. ಎ. ಬ್ರೌನ್‌ 1902ರ ಸುಮಾರಿಗೆ ಪಿಲ್‌ಗ್ರಿಮ್‌ ಆಗಿ ನೇಮಕ ಹೊಂದಿದ ಇವರನ್ನು ಜಮೈಕದ 14 ಚಿಕ್ಕ ಗುಂಪುಗಳನ್ನು ಬಲಪಡಿಸಿ ಪ್ರೋತ್ಸಾಹಿಸಲು ಕಳುಹಿಸಲಾಯಿತು

[ಪುಟ 32ರಲ್ಲಿರುವ ಚಿತ್ರ]

ಪಿಲ್‌ಗ್ರಿಮ್‌ಗಳ ಸೇವೆಯು ಸಹೋದರರ ನಂಬಿಕೆಯನ್ನೂ ಐಕ್ಯವನ್ನೂ ಬಲಪಡಿಸಿ ಸಂಘಟನೆಗೆ ಇನ್ನೂ ಆಪ್ತರನ್ನಾಗಿ ಮಾಡಿತು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ