ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 10/15 ಪು. 27-31
  • ನಿಮ್ಮ ಮಾತು ಹೌದಾದರೆ ಹೌದು ಎಂದಿರಲಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಮಾತು ಹೌದಾದರೆ ಹೌದು ಎಂದಿರಲಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಹಾನ್‌ ಮಾದರಿಯಾದ ಯೇಸು
  • ನುಡಿದಂತೆ ನಡೆದ ಪೌಲ
  • ಇತರ ಉತ್ತಮ ಮಾದರಿಗಳು
  • ನೀವು “ಹೌದು” ಎಂದು ಮಾತುಕೊಟ್ಟ ಪ್ರಮುಖ ಸಂದರ್ಭ
  • ಮಹಾ ಯಾಜಕನೂ ರಾಜನೂ ಆದ ಯೇಸು ನೀಡುವ ಸಹಾಯ
  • ದೇವರಿಗೆ ವಿಧೇಯರಾಗಿ ಆತನ ವಾಗ್ದಾನಗಳಿಂದ ಪ್ರಯೋಜನಹೊಂದಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ನಿಮ್ಮ ಮಾತು​—⁠ಮೊದಲು “ಹೌದು” ನಂತರ “ಅಲ್ಲ” ಎಂದಾಗಿದೆಯೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ‘ಕ್ರಿಸ್ತನನ್ನು’ ಏಕೆ ಹಿಂಬಾಲಿಸಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 10/15 ಪು. 27-31

ನಿಮ್ಮ ಮಾತು ಹೌದಾದರೆ ಹೌದು ಎಂದಿರಲಿ

“ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ.”​—⁠ಮತ್ತಾ. 5:⁠37.

ಉತ್ತರ ಹುಡುಕಿ. . .

ಆಣೆಯಿಡುವುದರ ಕುರಿತು ಯೇಸು ಏನಂದನು?

ನುಡಿದಂತೆ ನಡೆಯುವುದರಲ್ಲಿ ಯೇಸು ಏಕೆ ಅತ್ಯುತ್ತಮ ಮಾದರಿಯಾಗಿದ್ದಾನೆ?

ಬದುಕಿನ ಯಾವೆಲ್ಲ ಕ್ಷೇತ್ರಗಳಲ್ಲಿ ನಮ್ಮ ಮಾತು ಹೌದಾದರೆ ಹೌದು ಎಂದಿರಬೇಕು?

1. (1) ಆಣೆಯಿಟ್ಟು ಪ್ರಮಾಣ ಮಾಡುವುದರ ಕುರಿತು ಯೇಸು ಏನು ಹೇಳಿದನು? (2) ಏಕೆ?

ನಿಜ ಕ್ರೈಸ್ತರಿಗೆ ಹೆಚ್ಚಾಗಿ ಪ್ರಮಾಣ ಮಾಡುವ ಅಥವಾ ಆಣೆಯಿಡುವ ಅಗತ್ಯವಿರುವುದಿಲ್ಲ. ಏಕೆಂದರೆ ಅವರು ಯೇಸುವಿನ ಆಜ್ಞೆಗೆ ವಿಧೇಯರಾಗುತ್ತಾರೆ. ಯೇಸು ಹೇಳಿದ್ದು “ನಿಮ್ಮ ಮಾತು ಹೌದಾದರೆ ಹೌದು . . . ಎಂದಿರಲಿ.” ಇದರರ್ಥ ಕ್ರೈಸ್ತನೊಬ್ಬನು ನುಡಿದಂತೆ ನಡೆಯಬೇಕು. ಯೇಸು ಆ ಆಜ್ಞೆಯನ್ನು “ಆಣೆಯಿಡಲೇ ಬೇಡಿ” ಎಂದು ಹೇಳುವ ಮೂಲಕ ಆರಂಭಿಸಿದನು. ಮಾತುಮಾತಿಗೆ ಇಲ್ಲಸಲ್ಲದ್ದಕ್ಕೆಲ್ಲ ಆಣೆಯಿಡುವ ಅಭ್ಯಾಸವನ್ನು ಯೇಸು ಇಲ್ಲಿ ಖಂಡಿಸಿದನು. ಹಾಗಾದರೆ ಒಂದು ವಿಷಯದ ಕುರಿತು ಹೌದು ಅಥವಾ ಇಲ್ಲ ಅನ್ನುವುದಕ್ಕಿಂತ ‘ಹೆಚ್ಚಿನದ್ದನ್ನು’ ಹೇಳುವುದಾದರೆ ತಾವು ಭರವಸಯೋಗ್ಯರಲ್ಲ ಎಂದು ಅವರೇ ತೋರಿಸಿಕೊಡುತ್ತಾರೆ. ಅಂಥವರು ‘ಕೆಡುಕನ’ ಪ್ರಭಾವದೊಳಗಿದ್ದಾರೆ.​—⁠ಮತ್ತಾಯ 5:​33-37 ಓದಿ.

2. ಆಣೆಯಿಟ್ಟು ಪ್ರಮಾಣ ಮಾಡುವುದು ಯಾವಾಗಲೂ ತಪ್ಪಲ್ಲವೇಕೆ? ವಿವರಿಸಿ.

2 ಹಾಗಾದರೆ ಪ್ರಮಾಣ ಮಾಡುವುದೇ ತಪ್ಪು ಎಂದು ಯೇಸು ಹೇಳುತ್ತಿದ್ದನೇ? ಹಾಗೇನಿಲ್ಲ. ಹಿಂದಿನ ಲೇಖನದಲ್ಲಿ ಕಲಿತಂತೆ ಸ್ವತಃ ಯೆಹೋವ ದೇವರು ಮತ್ತು ಆತನ ನಂಬಿಗಸ್ತ ಸೇವಕ ಅಬ್ರಹಾಮ ಕೆಲವು ಪ್ರಮುಖ ಸಂದರ್ಭಗಳಲ್ಲಿ ಆಣೆಯಿಟ್ಟು ಪ್ರಮಾಣಗಳನ್ನು ಮಾಡಿದ್ದರು. ಮಾತ್ರವಲ್ಲ ಕೆಲವು ವ್ಯಾಜ್ಯಗಳನ್ನು ಬಗೆಹರಿಸಲು ಆಣೆಯಿಟ್ಟು ಪ್ರಮಾಣ ಮಾಡಬೇಕೆಂದು ಧರ್ಮಶಾಸ್ತ್ರದಲ್ಲೂ ಹೇಳಲಾಗಿತ್ತು. (ವಿಮೋ. 22:​10, 11; ಅರ. 5:​19-22) ಹಾಗೆಯೇ ಇಂದು ಸಹ ನ್ಯಾಯಾಲಯದಲ್ಲಿ ಕ್ರೈಸ್ತನೊಬ್ಬನು ‘ನಾನು ಸತ್ಯವನ್ನೇ ಹೇಳುತ್ತೇನೆ’ ಎಂದು ಪ್ರಮಾಣ ಮಾಡಬೇಕಾಗಬಹುದು. ಒಂದು ವಿಷಯವನ್ನು ಮಾಡಲು ತನಗಿರುವ ಇರಾದೆಯನ್ನು ಸ್ಪಷ್ಟಪಡಿಸಲು ಅಥವಾ ಒಂದು ಸಮಸ್ಯೆಯನ್ನು ಬಗೆಹರಿಸಲು ವಿರಳ ಸಂದರ್ಭಗಳಲ್ಲಿ ಆಣೆಯಿಟ್ಟು ಪ್ರಮಾಣ ಮಾಡಬೇಕಾಗಬಹುದು. ಯೆಹೂದಿ ಹಿರೀ ಸಭೆಯಲ್ಲಿ ಮಹಾ ಯಾಜಕನು ಆಣೆಯಿಟ್ಟು ಯೇಸುವನ್ನು ವಿಚಾರಿಸಿದಾಗ ಯೇಸು ಅದನ್ನು ಆಕ್ಷೇಪಿಸಲಿಲ್ಲ, ಬದಲಿಗೆ ಸತ್ಯವನ್ನೇ ನುಡಿದನು. (ಮತ್ತಾ. 26:​63, 64) ಆತನಿಗೆ ಏನನ್ನೂ ಆಣೆಯಿಟ್ಟು ಹೇಳುವ ಅಗತ್ಯವಿರಲಿಲ್ಲ. ಹಾಗಿದ್ದರೂ ತಾನು ಸಾರುತ್ತಿರುವ ಸಂದೇಶ ಸತ್ಯವಾದದ್ದು ಎಂದು ಸ್ಪಷ್ಟಪಡಿಸಲು “ನಿಮಗೆ ನಿಜನಿಜವಾಗಿ ಹೇಳುತ್ತೇನೆ” ಎಂದು ಅವನು ಪದೇ ಪದೇ ಹೇಳಿದನು. (ಯೋಹಾ. 1:51; 13:​16, 20, 21, 38) ಯೇಸು, ಪೌಲ ಹಾಗೂ ಇನ್ನಿತರರ ಮಾತು ಯಾವಾಗಲೂ ಹೌದಾದರೆ ಹೌದು ಎಂದಿತ್ತು. ಇವರ ಮಾದರಿಗಳಿಂದ ನಾವು ಯಾವ ಪಾಠ ಕಲಿಯಬಹುದೆಂದು ಈಗ ನೋಡೋಣ.

ಮಹಾನ್‌ ಮಾದರಿಯಾದ ಯೇಸು

3. (1) ಯೇಸು ಪ್ರಾರ್ಥನೆಯಲ್ಲಿ ಏನೆಂದು ಮಾತುಕೊಟ್ಟನು? (2) ಅವನ ತಂದೆಯಾದ ಯೆಹೋವನು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದನು?

3 “ಇಗೋ ದೇವರೇ, ನಾನು . . . ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ.” (ಇಬ್ರಿ. 10:⁠7) ಪ್ರಾರ್ಥನೆಯಲ್ಲಿ ಈ ಅರ್ಥಭರಿತ ಮಾತುಗಳನ್ನು ಯೇಸು ಹೇಳುವ ಮೂಲಕ ವಾಗ್ದತ್ತ ಸಂತತಿಯ ಬಗ್ಗೆ ಬರೆದಿದ್ದ ಎಲ್ಲ ಪ್ರವಾದನೆಗಳನ್ನು ನೆರವೇರಿಸಲಿಕ್ಕಾಗಿ ತನ್ನನ್ನೇ ನೀಡಿಕೊಂಡನು. ಸೈತಾನನಿಂದ ‘ಹಿಮ್ಮಡಿಯಲ್ಲಿ ಕಚ್ಚಿಸಿಕೊಳ್ಳಲೂ’ ಆತನು ಸಿದ್ಧನಿದ್ದನು. (ಆದಿ. 3:15) ಯೇಸುವನ್ನು ಬಿಟ್ಟರೆ ಇಂಥ ಅಸಾಧಾರಣ ಜವಾಬ್ದಾರಿಯನ್ನು ವಹಿಸಿಕೊಳ್ಳಲು ತಾನಾಗಿ ಮುಂದೆ ಬಂದ ಮನುಷ್ಯ ಒಬ್ಬನೂ ಇಲ್ಲ. ಯೆಹೋವನಿಗೂ ತನ್ನ ಮಗನ ಮೇಲೆ ಸಂಪೂರ್ಣ ಭರವಸೆಯಿತ್ತು. ಇದನ್ನು ಸ್ವರ್ಗದಿಂದ ವಾಣಿಯ ಮೂಲಕ ತಿಳಿಯಪಡಿಸಿದನು. “ನಿನ್ನ ಚಿತ್ತವನ್ನು ಮಾಡಲು ಬಂದಿದ್ದೇನೆ” ಎಂದು ನುಡಿದಾಗ ಯೇಸು ಆಣೆಯಿಡಬೇಕೆಂದು ಯೆಹೋವನು ಬಯಸಲಿಲ್ಲ.​—⁠ಲೂಕ 3:​21, 22.

4. ಎಷ್ಟರ ಮಟ್ಟಿಗೆ ಯೇಸುವಿನ ಮಾತು ಹೌದಾದ ಹೌದು ಎಂದಿತ್ತು?

4 ಯೇಸುವಿನ ಮಾತು ಯಾವಾಗಲೂ ಹೌದಾದರೆ ಹೌದು ಎಂದಿತ್ತು. ಅವನು ಏನನ್ನು ಸಾರಿದನೋ ಅದರಂತೆ ನಡೆದನು. ತಂದೆ ಕೊಟ್ಟ ನೇಮಕವನ್ನು ಮಾಡಿಮುಗಿಸುವುದರ ಮೇಲೆಯೇ ಗಮನ ನೆಟ್ಟನು. ಬೇರೆ ವಿಷಯಗಳು ತನ್ನ ಗಮನವನ್ನು ತಿರುಗಿಸುವಂತೆ ಅವನು ಬಿಡಲಿಲ್ಲ. ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಮತ್ತು ದೇವರಿಂದ ಸೆಳೆಯಲ್ಪಟ್ಟವರನ್ನು ಶಿಷ್ಯರನ್ನಾಗಿ ಮಾಡುವುದರಲ್ಲಿ ನಿರತನಾಗಿದ್ದನು. (ಯೋಹಾ. 6:44) ಯೇಸು ಎಷ್ಟರ ಮಟ್ಟಿಗೆ ತಾನು ಹೇಳಿದಂತೆ ನಡೆದನೆಂದರೆ “ದೇವರ ವಾಗ್ದಾನಗಳು ಎಷ್ಟೇ ಇರುವುದಾದರೂ ಅವು ಅವನ ಮೂಲಕ ಹೌದಾಗಿ ಪರಿಣಮಿಸಿವೆ” ಎಂದು ಬೈಬಲ್‌ ಹೇಳುತ್ತದೆ. (2 ಕೊರಿಂ. 1:20) ತನ್ನ ತಂದೆಗೆ ಕೊಟ್ಟ ಮಾತಿಗನುಸಾರ ಚಾಚೂತಪ್ಪದೆ ನಡೆದದ್ದರಲ್ಲಿ ಯೇಸು ಮಹಾನ್‌ ಮಾದರಿ. ಈ ಮಾದರಿಯನ್ನು ಅನುಕರಿಸಲು ಶ್ರಮಿಸಿದ ಪೌಲನ ಉದಾಹರಣೆಯನ್ನು ಈಗ ನೋಡೋಣ.

ನುಡಿದಂತೆ ನಡೆದ ಪೌಲ

5. ಅಪೊಸ್ತಲ ಪೌಲ ನಮಗೆ ಯಾವ ಮಾದರಿ ಇಟ್ಟಿದ್ದಾನೆ?

5 “ಕರ್ತನೇ ನಾನೇನು ಮಾಡಬೇಕು?” (ಅ. ಕಾ. 22:10) ದರ್ಶನದಲ್ಲಿ ಕಾಣಿಸಿಕೊಂಡ ಯೇಸುವಿಗೆ ಸೌಲ ಹಾಗೆ ಕೇಳಿದನು. ತನ್ನ ಶಿಷ್ಯರನ್ನು ಹಿಂಸಿಸುತ್ತಿದ್ದ ಸೌಲನನ್ನು ಮಹಿಮಾಭರಿತ ಯೇಸು ತಡೆದಾಗ ಸೌಲ ಮನಸ್ಸು ಬಿಚ್ಚಿ ನುಡಿದ ಮಾತದು. ತಾನು ಮಾಡುತ್ತಿರುವುದು ತಪ್ಪೆಂದು ದೀನತೆಯಿಂದ ಒಪ್ಪಿಕೊಂಡು ಅವನು ಪಶ್ಚಾತ್ತಾಪಪಟ್ಟನು. ಅನಂತರ ದೀಕ್ಷಾಸ್ನಾನ ಪಡೆದು ಅನ್ಯಜನರಿಗೆ ಯೇಸುವಿನ ವಿಷಯದಲ್ಲಿ ಸಾಕ್ಷಿಕೊಡುವ ವಿಶೇಷ ನೇಮಕವನ್ನು ಸ್ವೀಕರಿಸಿದನು. ಬಳಿಕ ಪೌಲನೆಂದು ಖ್ಯಾತನಾದ ಅವನು ತನ್ನ ಉಳಿದ ಜೀವಮಾನದಲ್ಲೆಲ್ಲ ಯೇಸುವನ್ನು “ಕರ್ತನು” ಎಂದು ಕರೆಯುತ್ತ ಅದಕ್ಕೆ ತಕ್ಕಂತೆ ನಡೆದುಕೊಂಡನು. (ಅ. ಕಾ. 22:​6-16; 2 ಕೊರಿಂ. 4:5; 2 ತಿಮೊ. 4:⁠8) ಯೇಸುವನ್ನು “ ‘ಕರ್ತನೇ! ಕರ್ತನೇ!’ ಎಂದು ಕರೆದು [ಯೇಸು] ಹೇಳುವುದನ್ನು ಮಾಡದೇ” ಇರುವ ಜನರಂತೆ ಅವನಿರಲಿಲ್ಲ. (ಲೂಕ 6:46) ಅಪೊಸ್ತಲ ಪೌಲನಂತೆ ಯೇಸುವನ್ನು ತಮ್ಮ ಕರ್ತನೆಂದು ಸ್ವೀಕರಿಸಿದವರು ಅದಕ್ಕೆ ತಕ್ಕಂತೆ ನಡೆಯಬೇಕೆಂದು ಅಂದರೆ ಅವನ ಮಾತಿಗೆ ವಿಧೇಯರಾಗಿರಬೇಕೆಂದು ಯೇಸು ಅಪೇಕ್ಷಿಸುತ್ತಾನೆ.

6, 7. (1) ಕೊರಿಂಥಕ್ಕೆ ಭೇಟಿ ನೀಡುವುದನ್ನು ಪೌಲ ಮುಂದೂಡಿದ್ದೇಕೆ? (2) ಪೌಲ ಭರವಸಾರ್ಹ ವ್ಯಕ್ತಿಯಲ್ಲವೆಂದು ಕೆಲವರು ಹೇಳಿದ್ದು ತಪ್ಪಾಗಿತ್ತು ಏಕೆ? (3) ನಮ್ಮ ಮಧ್ಯೆ ಮುಂದಾಳತ್ವ ವಹಿಸುವ ಸಹೋದರರನ್ನು ನಾವು ಹೇಗೆ ಕಾಣಬೇಕು?

6 ಏಷ್ಯಾ ಮೈನರ್‌ ಹಾಗೂ ಯೂರೋಪ್‌ನ ಎಲ್ಲೆಡೆ ಪೌಲ ಹುರುಪಿನಿಂದ ಸುವಾರ್ತೆ ತಲಪಿಸಿದನು. ಸಭೆಗಳನ್ನು ಸ್ಥಾಪಿಸಿದನು. ಅನೇಕ ಸಭೆಗಳನ್ನು ಮತ್ತೆ ಮತ್ತೆ ಭೇಟಿಮಾಡಿದನು. ಕೆಲವೊಮ್ಮೆ ತಾನು ಬರೆಯುತ್ತಿರುವ ಸಂಗತಿಗಳು ಸತ್ಯವೆಂದು ದೃಢೀಕರಿಸಲು ಅವನು ಆಣೆಯಿಡಬೇಕಾಯಿತು. (ಗಲಾ. 1:20) ಕೊರಿಂಥ ಸಭೆಯ ಕೆಲವರು ಪೌಲ ಭರವಸಾರ್ಹ ವ್ಯಕ್ತಿಯಲ್ಲ ಎಂದು ದೂರಿದಾಗ ಅವನು “ನಾವು ನಿಮಗೆ ಹೇಳಿದ ಮಾತು ಮೊದಲು ಹೌದು ಎಂದು ಅನಂತರ ಅಲ್ಲ ಎಂದು ಆಗುವುದಿಲ್ಲ; ಈ ವಿಷಯದಲ್ಲಿ ದೇವರ ಮೇಲೆ ಭರವಸೆಯಿಡಸಾಧ್ಯವಿದೆ” ಎಂದು ಹೇಳಿದನು. (2 ಕೊರಿಂ. 1:18) ಆ ಮಾತುಗಳನ್ನು ಪೌಲ ಹೇಳುವ ಸಂದರ್ಭ ಏಕೆ ಬಂತು? ಪೌಲ ಎಫೆಸದಲ್ಲಿದ್ದಾಗ ಅಲ್ಲಿಂದ ನೇರವಾಗಿ ಕೊರಿಂಥಕ್ಕೆ ಹೋಗಿ ನಂತರ ಮಕೆದೋನ್ಯವನ್ನು ಭೇಟಿಮಾಡಲು ಯೋಜಿಸಿದ್ದನು. ಆದರೆ ಕಾರಣಾಂತರದಿಂದ ಅವನು ತನ್ನ ಯೋಜನೆಯನ್ನು ಬದಲಾಯಿಸಿದನು. ಮೊದಲು ಮಕೆದೋನ್ಯಕ್ಕೆ ಹೋಗಿ ನಂತರ ಕೊರಿಂಥಕ್ಕೆ ಹೋಗಲು ನಿರ್ಧರಿಸಿದನು. (2 ಕೊರಿಂ. 1:​15, 16) ಇಂದು ಸಂಚರಣ ಮೇಲ್ವಿಚಾರಕರು ಸಭೆಗಳನ್ನು ಭೇಟಿಮಾಡಲು ಯೋಜಿಸಿರುವ ದಿನಾಂಕಗಳಲ್ಲಿ ಕೆಲವೊಮ್ಮೆ ಹೇಗೆ ಬದಲಾವಣೆ ಮಾಡುತ್ತಾರೋ ಹಾಗೆಯೇ ಅಂದು ಪೌಲನು ಕೂಡ ಮಾಡಬೇಕಾಯಿತು. ಇಂಥ ಬದಲಾವಣೆಗಳನ್ನು ಸಣ್ಣಪುಟ್ಟ ಕಾರಣಕ್ಕಾಗಲಿ ಸ್ವಾರ್ಥ ಉದ್ದೇಶಕ್ಕಾಗಲಿ ಮಾಡಲಾಗುವುದಿಲ್ಲ. ಕೆಲವು ತುರ್ತು ಕಾರಣಗಳಿಂದ ಮಾಡಲಾಗುತ್ತದೆ. ಪೌಲನು ಹೇಳಿದ ಸಮಯಕ್ಕೆ ಕೊರಿಂಥ ಸಭೆಯನ್ನು ಭೇಟಿಮಾಡದೆ ತಡಮಾಡಿದ್ದು ಅವರ ಒಳಿತಿಗಾಗಿಯೇ. ಹೇಗದು?

7 ಪೌಲನು ಸಭೆಗಳನ್ನು ಭೇಟಿಮಾಡಲು ಯೋಜಿಸಿದ ನಂತರ ಕೊರಿಂಥ ಸಭೆಯಲ್ಲಿ ಕೆಲವು ಸಮಸ್ಯೆಗಳಿರುವುದು ಅವನಿಗೆ ತಿಳಿದುಬಂತು. ಕೊರಿಂಥದ ಕ್ರೈಸ್ತರಲ್ಲಿ ಏಕತೆ ಇರಲಿಲ್ಲ. ಮಾತ್ರವಲ್ಲ ಒಬ್ಬನು ಅನೈತಿಕತೆಯಲ್ಲಿ ಒಳಗೂಡಿದ್ದರೂ ಅದನ್ನು ಕಂಡುಕಾಣದಂತೆ ಇದ್ದರು. (1 ಕೊರಿಂ. 1:11; 5:⁠1) ಹಾಗಾಗಿ ಅವರನ್ನು ಖಂಡಿಸಿ ಸಮಸ್ಯೆಗಳನ್ನು ಸರಿಪಡಿಸುವಂತೆ ತೀಕ್ಷ್ಣ ಸಲಹೆ ಕೊಡುತ್ತಾ ಪೌಲ ಕೊರಿಂಥ ಸಭೆಗೆ ಮೊದಲ ಪತ್ರ ಬರೆದನು. ಬಳಿಕ ಆ ಸಲಹೆಯನ್ನು ಅನ್ವಯಿಸಿಕೊಳ್ಳಲು ಅಲ್ಲಿನ ಸಹೋದರರಿಗೆ ಸಮಯ ಕೊಟ್ಟನು. ಹಾಗಾಗಿಯೇ ಕೊರಿಂಥಕ್ಕೆ ಹೋಗುವ ಯೋಜನೆಯನ್ನು ಮುಂದೂಡಿದನು. ಇದರಿಂದಾಗಿ ಸ್ವಲ್ಪ ಸಮಯ ಬಿಟ್ಟು ಅವನು ಕೊರಿಂಥಕ್ಕೆ ಭೇಟಿ ನೀಡಲಿದ್ದಾಗ ಅದು ತುಂಬ ಪ್ರೋತ್ಸಾಹದಾಯಕ ಆಗಿರಲಿತ್ತು. ಸದುದ್ದೇಶದಿಂದಲೇ ತನ್ನ ಮೊದಲ ಯೋಜನೆಯನ್ನು ಬದಲಾಯಿಸಿದೆನೆಂದು ಸ್ಪಷ್ಟಪಡಿಸುತ್ತಾ ಪೌಲ ಎರಡನೇ ಪತ್ರದಲ್ಲಿ ಕೊರಿಂಥದವರಿಗೆ ಹೀಗೆ ಬರೆದನು: “ನಿಮಗೆ ಬೇಸರವನ್ನು ಉಂಟುಮಾಡದಿರಲಿಕ್ಕಾಗಿಯೇ ನಾನು ಕೊರಿಂಥಕ್ಕೆ ಇನ್ನೂ ಬರಲಿಲ್ಲ ಎಂದು ನನ್ನ ಜೀವದಾಣೆಯಿಟ್ಟು ಹೇಳುತ್ತೇನೆ; ಇದಕ್ಕೆ ದೇವರೇ ಸಾಕ್ಷಿಯಾಗಿರಲಿ.” (2 ಕೊರಿಂ. 1:23) ಪೌಲನನ್ನು ಸಂಶಯಿಸಿ ದೂರಿದವರಂತೆ ನಾವಿರದೆ ಮುಂದಾಳತ್ವ ವಹಿಸುವ ಸಹೋದರರಿಗೆ ಆಳವಾದ ಗೌರವ ತೋರಿಸೋಣ. ಪೌಲನು ಕ್ರಿಸ್ತನನ್ನು ಅನುಕರಿಸಿದಂತೆ ನಾವು ಪೌಲನನ್ನು ಅನುಕರಿಸೋಣ.​—⁠1 ಕೊರಿಂ. 11:1; ಇಬ್ರಿ. 13:⁠7.

ಇತರ ಉತ್ತಮ ಮಾದರಿಗಳು

8. ರೆಬೆಕ್ಕ ಯಾವ ಒಳ್ಳೇ ಮಾದರಿ ಇಟ್ಟಿದ್ದಾಳೆ?

8 “[ನಾನು] ಹೋಗುತ್ತೇನೆ.” (ಆದಿ. 24:59) ಅಬ್ರಹಾಮನ ಮಗನಾದ ಇಸಾಕನ ಪತ್ನಿಯಾಗಲು ಅದೇ ದಿನ ಹೊರಡಲಿಕ್ಕೆ ಮನಸ್ಸಿದೆಯಾ ಎಂದು ಅಮ್ಮ ಮತ್ತು ಅಣ್ಣ ಕೇಳಿದಾಗ ರೆಬೆಕ್ಕ ಮೇಲಿನಂತೆ ತನ್ನ ಮನದಿಚ್ಛೆಯನ್ನು ವ್ಯಕ್ತಪಡಿಸಿದಳು. ಮನೆಗೆ ಬಂದಿದ್ದ ಅಪರಿಚಿತನೊಂದಿಗೆ 800 ಕಿ.ಮೀ.ಗಳಷ್ಟು ದೂರ ಪ್ರಯಾಣಿಸಲಿಕ್ಕೆ ಸ್ವಇಷ್ಟದಿಂದ ಸಮ್ಮತಿಸಿದಳು. (ಆದಿ. 24:​50-59) ತಾನು ಹೇಳಿದಂತೆಯೇ ರೆಬೆಕ್ಕ ಹೋದಳು. ದೇವಭಯವುಳ್ಳ ನಂಬಿಗಸ್ತ ಮಡದಿಯಾದಳು. ಮುಂದೆ ಜೀವನ ಪೂರ್ತಿ ವಾಗ್ದತ್ತ ದೇಶದಲ್ಲಿ ಪರದೇಶಿಯಂತೆ ಗುಡಾರಗಳಲ್ಲಿ ವಾಸಿಸಿದಳು. ಮಾತಿಗೆ ತಪ್ಪದ ಕಾರಣ ದೇವರು ಆಕೆಗೆ ವಾಗ್ದತ್ತ ಸಂತತಿಯಾದ ಯೇಸು ಕ್ರಿಸ್ತನ ಪೂರ್ವಜೆಯಾಗುವ ಸೌಭಾಗ್ಯ ಕೊಟ್ಟನು.​—⁠ಇಬ್ರಿ. 11:​9, 13.

9. ರೂತಳು ಹೇಗೆ ತಾನು ಹೇಳಿದಂತೆ ನಡೆದುಕೊಂಡಳು?

9 “ನಾವೂ ನಿನ್ನ ಜೊತೆಯಲ್ಲೇ ನಿನ್ನ ಸ್ವಜನರ ಬಳಿಗೆ ಬರುತ್ತೇವೆ.” (ರೂತ. 1:10) ಹೀಗೆಂದು ಮೋವಾಬ್ಯ ಸ್ತ್ರೀಯರಾದ ರೂತ್‌ ಮತ್ತು ಒರ್ಫಾ ಅತ್ತೆ ನೊವೊಮಿಗೆ ಹೇಳುತ್ತಾ ಇದ್ದರು. ಇವರಿಬ್ಬರು ವಿಧವೆಯರು. ಮೋವಾಬ್‌ನಲ್ಲಿ ಗಂಡನನ್ನು ಕಳಕೊಂಡಿದ್ದ ನೊವೊಮಿ ತನ್ನಿಬ್ಬರು ಸೊಸೆಯರೊಂದಿಗೆ ಬೇತ್ಲೆಹೇಮಿನ ಕಡೆಗೆ ಹೆಜ್ಜೆ ಹಾಕುತ್ತಿದ್ದಳು. ದಾರಿ ಮಧ್ಯೆ ಅವರಿಬ್ಬರಿಗೆ ತವರು ಮನೆಗೆ ಹೋಗುವಂತೆ ನೊವೊಮಿ ಅಂಗಲಾಚುತ್ತಿದ್ದಳು. ಕೊನೆಗೆ ಆಕೆಯ ಒತ್ತಾಯಕ್ಕೆ ಮಣಿದು ಒರ್ಫಾ ತನ್ನೂರಿನ ದಾರಿಹಿಡಿದಳು. ಆದರೆ ರೂತಳು ತನ್ನ ಮಾತಿಗೆ ಅಂಟಿಕೊಂಡಳು. (ರೂತಳು 1:​16, 17 ಓದಿ.) ತನ್ನ ಕುಟುಂಬದವರನ್ನೆಲ್ಲಾ ಬಿಟ್ಟು ನಿಷ್ಠೆಯಿಂದ ಅತ್ತೆಯೊಂದಿಗೆ ಉಳಿದಳು. ಮೋವಾಬ್‌ನ ಸುಳ್ಳು ಧರ್ಮದೆಡೆ ಮತ್ತೆಂದೂ ಮುಖಮಾಡಲಿಲ್ಲ. ಯೆಹೋವನ ನಂಬಿಗಸ್ತ ಆರಾಧಕಳಾಗಿಯೇ ಉಳಿದಳು. ಫಲಿತಾಂಶವಾಗಿ ದೇವರಿಂದ ದೊಡ್ಡ ಆಶೀರ್ವಾದ ಪಡೆದಳು. ಮತ್ತಾಯ ದಾಖಲಿಸಿದ ಕ್ರಿಸ್ತನ ವಂಶಾವಳಿಯ ಪಟ್ಟಿಯಲ್ಲಿರುವ ಐದೇ ಮಂದಿ ಸ್ತ್ರೀಯರಲ್ಲಿ ರೂತ್‌ ಒಬ್ಬಳು.​—⁠ಮತ್ತಾ. 1:​1, 3, 5, 6, 16.

10. ಯೆಶಾಯನು ನಮಗೇಕೆ ಒಳ್ಳೇ ಮಾದರಿಯಾಗಿದ್ದಾನೆ?

10 “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.” (ಯೆಶಾ. 6:⁠8) ಹೀಗಂದನು ಯೆಶಾಯ. ಹೀಗೆ ಹೇಳುವ ಮುಂಚೆ ಭವ್ಯ ದರ್ಶನದಲ್ಲಿ ಇಸ್ರಾಯೇಲ್‌ನ ದೇವಾಲಯಕ್ಕಿಂತ ಉನ್ನತೋನ್ನತ ಸ್ಥಳದಲ್ಲಿ ಯೆಹೋವನು ಸಿಂಹಾಸನಾರೂಢನಾಗಿ ಇರುವುದನ್ನು ಅವನು ಕಂಡನು. ಈ ವೈಭವಯುತ ದೃಶ್ಯವನ್ನು ದಿಟ್ಟಿಸಿ ನೋಡುತ್ತಿದ್ದಾಗ, “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು” ಎಂಬ ಯೆಹೋವನ ನುಡಿ ಅವನಿಗೆ ಕೇಳಿಸಿತು. ಅಂದರೆ ಅವಿಧೇಯರಾದ ತನ್ನ ಜನರಿಗೆ ತಾನು ಹೇಳಲು ಬಯಸುವ ವಿಷಯಗಳನ್ನು ಯಾರಾದರೂ ಸಾರಿಹೇಳುವಂತೆ ಯೆಹೋವನು ಕರೆಕೊಡುತ್ತಿದ್ದನು. ಆ ಕರೆಗೆ ಪ್ರತ್ಯುತ್ತರವಾಗಿ ಯೆಶಾಯನು “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದನು. ಬಳಿಕ ಆ ಮಾತಿಗೆ ತಕ್ಕಂತೆ ನಡೆದುಕೊಂಡನು. 46ಕ್ಕಿಂತಲೂ ಹೆಚ್ಚು ವರ್ಷ ಪ್ರವಾದಿಯಾಗಿ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸಿದನು. ದೇವರು ತಿಳಿಸಿದ ಖಂಡನೆಯ ಮಾತುಗಳನ್ನು ಮತ್ತು ಸತ್ಯಾರಾಧನೆಯ ಪುನಃಸ್ಥಾಪನೆಯ ಕುರಿತು ಆತನು ಮಾಡಿದ ವಾಗ್ದಾನಗಳನ್ನೂ ಸಾರಿಹೇಳಿದನು.

11. (1) ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಏಕೆ ತುಂಬ ಪ್ರಾಮುಖ್ಯ? (2) ಮಾತಿಗೆ ತಪ್ಪಿದ ಯಾರ ಉದಾಹರಣೆಗಳು ನಮಗೆ ಎಚ್ಚರಿಕೆ ನೀಡಲು ದಾಖಲಾಗಿವೆ?

11 ಇವರೆಲ್ಲರ ಮಾದರಿಗಳನ್ನು ಯೆಹೋವನು ನಮಗಾಗಿ ತನ್ನ ವಾಕ್ಯದಲ್ಲಿ ದಾಖಲಿಸಿದ್ದೇಕೆ? ನಮ್ಮ ಮಾತು ಹೌದಾದರೆ ಹೌದು ಎಂದಿರುವುದು ಎಷ್ಟು ಗಂಭೀರ ವಿಷಯವಾಗಿದೆ? “ಮಾತಿಗೆ ತಪ್ಪುವ” ವ್ಯಕ್ತಿ “ಮರಣಕ್ಕೆ ಪಾತ್ರ”ನೆಂದು ಬೈಬಲ್‌ ಸ್ಪಷ್ಟವಾಗಿ ಎಚ್ಚರಿಸುತ್ತದೆ. (ರೋಮ. 1:​31, 32) ಮಾತಿಗೆ ತಪ್ಪಿದವರ ಕೆಟ್ಟ ಉದಾಹರಣೆಗಳು ಬೈಬಲಿನಲ್ಲಿವೆ. ಅವರಲ್ಲಿ ಕೆಲವರು ಈಜಿಪ್ಟ್‌ನ ಫರೋಹ, ಯೆಹೂದದ ರಾಜ ಚಿದ್ಕೀಯ, ಅನನೀಯ ಮತ್ತು ಸಪ್ಫೈರ. ಇವರೆಲ್ಲರೂ ಮಾತಿಗೆ ತಪ್ಪಿದ್ದರಿಂದ ಪರಿಣಾಮ ಕೆಟ್ಟದ್ದಾಯಿತು. ಈ ಉದಾಹರಣೆಗಳು ನಾವು ಮಾತಿಗೆ ತಪ್ಪದಿರುವಂತೆ ಎಚ್ಚರಿಸುತ್ತವೆ.​—⁠ವಿಮೋ. 9:​27, 28, 34, 35; ಯೆಹೆ. 17:​13-15, 19, 20; ಅ. ಕಾ. 5:​1-10.

12. ಮಾತಿಗೆ ತಪ್ಪದಿರಲು ನಮಗೆ ಯಾವುದು ನೆರವಾಗುತ್ತದೆ?

12 ನಾವು “ಕಡೇ ದಿವಸಗಳಲ್ಲಿ” ಇರುವುದರಿಂದ ‘ನಿಷ್ಠೆಯಿಲ್ಲದ, ದೇವಭಕ್ತಿಯ ವೇಷವಿದ್ದು ಅದರ ಶಕ್ತಿಗೆ ವಿರುದ್ಧವಾಗಿ ವರ್ತಿಸುವ’ ಜನರ ಮಧ್ಯೆ ಜೀವಿಸಲೇಬೇಕು. (2 ತಿಮೊ. 3:​1-5) ಆದಷ್ಟು ಮಟ್ಟಿಗೆ ಇಂಥ ಜನರ ಸಹವಾಸದಿಂದ ನಾವು ದೂರವಿರಬೇಕು. ಯಾವಾಗಲೂ ತಮ್ಮ ಮಾತು ಹೌದಾದರೆ ಹೌದು ಎಂದಿರಲು ಶತಪ್ರಯತ್ನ ಮಾಡುವವರೊಂದಿಗೆ ನಿಯತವಾಗಿ ಒಡನಾಟ ಮಾಡಬೇಕು.​—⁠ಇಬ್ರಿ. 10:​24, 25.

ನೀವು “ಹೌದು” ಎಂದು ಮಾತುಕೊಟ್ಟ ಪ್ರಮುಖ ಸಂದರ್ಭ

13. ಯೇಸು ಕ್ರಿಸ್ತನ ಹಿಂಬಾಲಕರು “ಹೌದು” ಎಂದು ಮಾತುಕೊಡುವ ಪ್ರಮುಖ ಸಂದರ್ಭ ಯಾವುದು?

13 ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮಾಡುವ ಅತ್ಯಂತ ಪ್ರಾಮುಖ್ಯ ಪ್ರಮಾಣ ದೇವರಿಗೆ ಮಾಡುವ ಸಮರ್ಪಣೆಗೆ ಸಂಬಂಧಿಸಿದೆ. ತಮ್ಮನ್ನು ನಿರಾಕರಿಸಿಕೊಂಡು ಯೇಸುವಿನ ಶಿಷ್ಯರಾಗಲು ಬಯಸುವವರು ಮೂರು ಸಂದರ್ಭಗಳಲ್ಲಿ ಹೌದು ಎನ್ನುತ್ತ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. (ಮತ್ತಾ. 16:24) ಪ್ರಚಾರಕರಾಗಲು ಬಯಸುವ ಒಬ್ಬ ವ್ಯಕ್ತಿಯೊಂದಿಗೆ ಇಬ್ಬರು ಹಿರಿಯರು ಮಾತಾಡಿ “ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಲು ನಿಮಗೆ ನಿಜವಾಗಿಯೂ ಅಪೇಕ್ಷೆಯಿದೆಯೇ?” ಎಂದು ಕೇಳುತ್ತಾರೆ. ತರುವಾಯ ಆ ವ್ಯಕ್ತಿ ಆಧ್ಯಾತ್ಮಿಕವಾಗಿ ಇನ್ನೂ ಪ್ರಗತಿ ಮಾಡಿ ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸುವಲ್ಲಿ ಹಿರಿಯರು ಅವರೊಂದಿಗೆ ಮಾತಾಡುತ್ತಾರೆ. “ನೀವು ಯೆಹೋವನಿಗೆ ಪ್ರಾರ್ಥನೆಯಲ್ಲಿ ನಿಮ್ಮ ವೈಯಕ್ತಿಕ ಸಮರ್ಪಣೆಯನ್ನು ಮಾಡಿದ್ದೀರೊ?” ಎಂದು ಕೇಳುತ್ತಾರೆ. ಕೊನೆಗೆ ದೀಕ್ಷಾಸ್ನಾನದ ದಿನದಂದು ಪ್ರತಿ ಅಭ್ಯರ್ಥಿಗೆ “ಯೇಸು ಕ್ರಿಸ್ತನ ಯಜ್ಞದ ಆಧಾರದ ಮೇಲೆ ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ಯೆಹೋವನ ಚಿತ್ತವನ್ನು ಮಾಡಲು ನಿಮ್ಮನ್ನೇ ಆತನಿಗೆ ಸಮರ್ಪಿಸಿದ್ದೀರೊ?” ಎಂದು ಕೇಳಲಾಗುತ್ತದೆ. ಹೀಗೆ ಸಾಕ್ಷಿಗಳ ಮುಂದೆ ಅವರು “ಹೌದು” ಎಂದು ಹೇಳುವ ಮೂಲಕ ದೇವರ ಸೇವೆಯನ್ನು ನಿತ್ಯನಿರಂತರಕ್ಕೂ ಮಾಡುತ್ತೇವೆಂದು ವಚನಕೊಡುತ್ತಾರೆ.

14. ಆಗಾಗ್ಗೆ ನಾವು ಏನೆಂದು ಸ್ವಪರೀಕ್ಷೆ ಮಾಡಿಕೊಳ್ಳಬೇಕು?

14 ನೀವು ಇತ್ತೀಚಿಗಷ್ಟೇ ದೀಕ್ಷಾಸ್ನಾನ ಪಡೆದಿರಲಿ ಅಥವಾ ದಶಕಗಳಿಂದ ದೇವರ ಸೇವೆಮಾಡುತ್ತಿರಲಿ ಆಗಾಗ್ಗೆ ಹೀಗೆ ಸ್ವಪರೀಕ್ಷೆ ಮಾಡಿಕೊಳ್ಳಿ: ‘ನಾನು ನನ್ನ ಜೀವನದ ಪ್ರಮುಖ ಸಂದರ್ಭದಲ್ಲಿ ಹೌದು ಎಂದು ಹೇಳಿದ ಮಾತು ಹೌದಾಗಿಯೇ ಇದೆಯಾ? ಹೀಗೆ ಯೇಸುವನ್ನು ಅನುಕರಿಸುತ್ತಿದ್ದೇನಾ? ಸಾರುವುದು ಮತ್ತು ಶಿಷ್ಯರನ್ನಾಗಿ ಮಾಡುವುದೇ ನನ್ನ ಬದುಕಲ್ಲಿ ಅತಿ ಪ್ರಮುಖ ಕೆಲಸವಾಗಿದೆಯಾ?’​—⁠2 ಕೊರಿಂಥ 13:5 ಓದಿ.

15. ಯಾವ ಕ್ಷೇತ್ರಗಳಲ್ಲಿ ನಮ್ಮ ಮಾತು ಹೌದಾದ ಹೌದು ಎಂದಿರಬೇಕು?

15 ನಾವು ಮಾಡಿದ ಸಮರ್ಪಣೆಯ ಪ್ರಮಾಣವನ್ನು ಪಾಲಿಸಲು ಇತರ ಪ್ರಮುಖ ವಿಷಯಗಳಲ್ಲೂ ನಂಬಿಗಸ್ತರಾಗಿರಬೇಕು. ಕೆಲವು ಉದಾಹರಣೆಗಳನ್ನು ಗಮನಿಸಿ. ನೀವು ವಿವಾಹಿತರೋ? ಹಾಗಾದರೆ ಕೈಹಿಡಿದ ಸಂಗಾತಿಯನ್ನು ಪ್ರೀತಿಸಿ ಪೋಷಿಸುತ್ತೇನೆಂದು ವಿವಾಹ ದಿನದಂದು ಪ್ರತಿಜ್ಞೆ ಮಾಡಿದ್ದೀರಲ್ಲಾ. ಅದನ್ನು ಮಾನ್ಯಮಾಡಿ ಅದಕ್ಕೆ ತಕ್ಕಂತೆ ನಡೆದುಕೊಳ್ಳಿರಿ. ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಿದ್ದೀರಾ ಅಥವಾ ಯಾವುದಾದರೂ ದೇವಪ್ರಭುತ್ವಾತ್ಮಕ ಚಟುವಟಿಕೆಯಲ್ಲಿ ಒಳಗೂಡುತ್ತೇನೆಂದು ಅರ್ಜಿ ಸಲ್ಲಿಸಿದ್ದೀರಾ? ಹಾಗಾದರೆ ಏನು ಮಾತು ಕೊಟ್ಟಿದ್ದೀರೋ ಅದನ್ನು ನಿಷ್ಠೆಯಿಂದ ಪೂರೈಸಿ. ಬಡ ಸಹೋದರರ ಮನೆಗೆ ಊಟಕ್ಕೆ ಹೋಗಲು ಒಪ್ಪಿಕೊಂಡಿದ್ದೀರಾ? ಅವರಿಗಿಂತ ಸ್ಥಿತಿವಂತರು ಕರೆದರೆಂಬ ಮಾತ್ರಕ್ಕೆ ಬಡ ಸಹೋದರನ ಆಮಂತ್ರಣವನ್ನು ತಳ್ಳಿಹಾಕಬೇಡಿ. ಮನೆ ಮನೆ ಸೇವೆಯಲ್ಲಿ ಆಸಕ್ತ ವ್ಯಕ್ತಿಗೆ ಹೆಚ್ಚು ಆಧ್ಯಾತ್ಮಿಕ ನೆರವು ನೀಡಲು ಪುನಃ ಬರುತ್ತೇನೆಂದು ಹೇಳಿದ್ದೀರಾ? ಹಾಗಾದರೆ ಏನೇ ಆದರೂ ನಿಮ್ಮ ಮಾತು ಹೌದಾದರೆ ಹೌದು ಎಂದಿರಲಿ. ಯೆಹೋವನು ನಿಮ್ಮ ಸೇವೆಯನ್ನು ಆಶೀರ್ವದಿಸುವನು.​—⁠ಲೂಕ 16:10 ಓದಿ.

ಮಹಾ ಯಾಜಕನೂ ರಾಜನೂ ಆದ ಯೇಸು ನೀಡುವ ಸಹಾಯ

16. ಒಂದುವೇಳೆ ನಾವು ಕೊಟ್ಟ ಮಾತಿಗೆ ತಪ್ಪಿರುವುದಾದರೆ ಏನು ಮಾಡಬೇಕು?

16 ಅಪರಿಪೂರ್ಣರಾಗಿರುವ ಕಾರಣ “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ.” ವಿಶೇಷವಾಗಿ ಮಾತಾಡುವ ವಿಷಯದಲ್ಲಿ. (ಯಾಕೋ. 3:⁠2) ಒಂದುವೇಳೆ ಕೊಟ್ಟ ಮಾತಿಗೆ ನಾವು ತಪ್ಪಿದರೆ ಏನು ಮಾಡಬೇಕು? ಇಸ್ರಾಯೇಲ್ಯರಲ್ಲಿ ಯಾರಾದರೂ “ಆಲೋಚಿಸದೆ” ಮಾತಾಡಿ ದೋಷಿಯಾದರೆ ಕ್ಷಮೆ ಪಡೆಯಲು ಧರ್ಮಶಾಸ್ತ್ರದಡಿಯಲ್ಲಿ ದೇವರು ದಯಾಪೂರ್ಣ ಏರ್ಪಾಡನ್ನು ಮಾಡಿದ್ದನು. (ಯಾಜ. 5:​4-7, 11) ಇಂದು ಕೂಡ ಅಂಥ ಒಂದು ಪ್ರೀತಿಯ ಏರ್ಪಾಡು ಇದೆ. ಪಶ್ಚಾತ್ತಾಪಪಟ್ಟು ಯೆಹೋವನಲ್ಲಿ ಆ ಪಾಪವನ್ನು ನಿವೇದಿಸಿಕೊಂಡರೆ ಆತನು ನಮ್ಮ ಮಹಾ ಯಾಜಕನಾದ ಯೇಸು ಕ್ರಿಸ್ತನ ಮೂಲಕ ದಯೆಯಿಂದ ನಮ್ಮನ್ನು ಕ್ಷಮಿಸುವನು. (1 ಯೋಹಾ. 2:​1, 2) ದೇವರ ಅನುಗ್ರಹ ನಮ್ಮ ಮೇಲೆ ಇರಬೇಕಾದರೆ ನಾವು ನಿಜವಾಗಿಯೂ ಪಶ್ಚಾತ್ತಾಪಪಟ್ಟಿದ್ದೇವೆಂದು ಕ್ರಿಯೆಯಲ್ಲಿ ತೋರಿಸಬೇಕು. ಹೇಗೆ? ಅದೇ ಪಾಪವನ್ನು ಪುನಃ ಪುನಃ ಮಾಡದಿರುವ ಮೂಲಕವೇ. ಜೊತೆಗೆ ಈಗಾಗಲೇ ಮಾತಿಗೆ ತಪ್ಪಿದ್ದರಿಂದ ಆಗಿರುವ ಕಷ್ಟನಷ್ಟವನ್ನು ಸಾಧ್ಯವಾದಷ್ಟು ಸರಿಪಡಿಸಲು ಪ್ರಯತ್ನಿಸಬೇಕು. (ಜ್ಞಾನೋ. 6:​2, 3) ನಾವು ಒಂದು ವಿಷಯವನ್ನು ನೆನಪಿನಲ್ಲಿಡಬೇಕು, ಏನೆಂದರೆ ಮಾತುಕೊಡುವುದಕ್ಕೆ ಮೊದಲು ಅದನ್ನು ನಮ್ಮಿಂದ ಪೂರೈಸಲಿಕ್ಕೆ ಆಗುತ್ತಾ ಎಂದು ಜಾಗ್ರತೆಯಿಂದ ಯೋಚಿಸಬೇಕು. ಆಗುವುದಿಲ್ಲ ಎಂದು ತಿಳಿದರೆ ಮಾತುಕೊಡದೆ ಇರುವುದೇ ಮೇಲು.​—⁠ಪ್ರಸಂಗಿ 5:2 ಓದಿ.

17, 18. ತಮ್ಮ ಮಾತು ಹೌದಾದ ಹೌದು ಎಂದಿರಲು ಶ್ರಮಿಸುವವರೆಲ್ಲರಿಗೆ ಯಾವ ಭವ್ಯ ಭವಿಷ್ಯತ್ತಿದೆ?

17 ತಮ್ಮ ಮಾತು ಹೌದಾದರೆ ಹೌದು ಎಂದಿರುವಂತೆ ಶ್ರಮಿಸುವ ಯೆಹೋವನ ಆರಾಧಕರಿಗೆಲ್ಲ ಸುಂದರ ಭವಿಷ್ಯತ್ತಿದೆ. 1,44,000 ಮಂದಿ ಅಭಿಷಿಕ್ತರಿಗೆ ಸ್ವರ್ಗದಲ್ಲಿ ಅಮರ ಜೀವನದೊಂದಿಗೆ ಯೇಸು ಕ್ರಿಸ್ತನ ರಾಜ್ಯದಲ್ಲಿ ಅವನ ಜೊತೆ “ಸಾವಿರ ವರ್ಷ ರಾಜರಾಗಿ ಆಳುವ” ಸದವಕಾಶ! (ಪ್ರಕ. 20:⁠6) ಎಣಿಸಲಾಗದ ಮಹಾ ಜನಸಮೂಹಕ್ಕೆ ಕ್ರಿಸ್ತನ ಆಳ್ವಿಕೆಯ ಕೆಳಗೆ ಭೂಪರದೈಸಿನಲ್ಲಿ ಜೀವಿಸುವ ಸೌಭಾಗ್ಯ! ಅಲ್ಲಿ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಪರಿಪೂರ್ಣತೆಗೇರಲು ಅವರಿಗೆ ಸಹಾಯ ಸಿಗುವುದು.​—⁠ಪ್ರಕ. 21:​3-5.

18 ಯೇಸುವಿನ ಸಾವಿರ ವರ್ಷದ ಆಳ್ವಿಕೆಯ ಕೊನೆಗೆ ಬರುವ ಅಂತಿಮ ಪರೀಕ್ಷೆಯಲ್ಲಿ ನಾವು ನಂಬಿಗಸ್ತರೆಂದು ಸಾಬೀತಾದರೆ ಮುಂದೆಂದೂ ನಮಗೆ ಬೇರೆಯವರ ಮಾತನ್ನು ಸಂಶಯಿಸಲು ಕಾರಣವೇ ಇರುವುದಿಲ್ಲ. (ಪ್ರಕ. 20:​7-10) ಎಲ್ಲರ ಮಾತು ಹೌದಾದರೆ ಹೌದು, ಇಲ್ಲವಾದರೆ ಇಲ್ಲ ಎಂದಿರುವುದು. ಪ್ರತಿಯೊಬ್ಬರು ‘ಸತ್ಯವಂತನಾದ’ ನಮ್ಮ ತಂದೆ ಯೆಹೋವನನ್ನು ಪರಿಪೂರ್ಣವಾಗಿ ಅನುಕರಿಸುವರು.​—⁠ರೋಮ. 3:4

[ಪುಟ 28ರಲ್ಲಿರುವ ಚಿತ್ರ]

ದೀಕ್ಷಾಸ್ನಾನದ ಸಮಯದಿಂದ ಮರಣದ ವರೆಗೆ ಯೇಸು ತನ್ನ ತಂದೆಗೆ ಕೊಟ್ಟ ಮಾತಿನಂತೆ ನಡೆದನು

[ಪುಟ 30ರಲ್ಲಿರುವ ಚಿತ್ರ]

ಹೌದು ಎಂದು ಯೆಹೋವನಿಗೆ ಮಾತುಕೊಟ್ಟಂತೆ ನಡೆಯುತ್ತಿದ್ದೀರಾ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ