ತಾಳ್ಮೆಯಿಂದ ಕಾಯುತ್ತಾ ಇರಲು ಯಾವುದು ನೆರವಾಗುತ್ತದೆ?
“ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು.”—ಮೀಕ 7:7.
1. ನಾವು ಏಕೆ ತಾಳ್ಮೆಗೆಡಬಹುದು?
ಮೆಸ್ಸೀಯನ ರಾಜ್ಯವು 1914ರಲ್ಲಿ ಸ್ಥಾಪನೆಯಾದಾಗ ಸೈತಾನನ ವ್ಯವಸ್ಥೆಯ ಕಡೇ ದಿವಸಗಳು ಆರಂಭವಾದವು. ಸ್ವರ್ಗದಲ್ಲಿ ಯುದ್ಧ ನಡೆದ ನಂತರ ಯೇಸು ಪಿಶಾಚನನ್ನೂ ದೆವ್ವಗಳನ್ನೂ ಭೂಕ್ಷೇತ್ರಕ್ಕೆ ಎಸೆದನು. (ಪ್ರಕಟನೆ 12:7-9 ಓದಿ.) ಸೈತಾನನಿಗೆ ತಿಳಿದಿದೆ ತನಗೀಗ ಉಳಿದಿರುವ “ಸಮಯಾವಧಿಯು ಸ್ವಲ್ಪ” ಎಂದು. (ಪ್ರಕ. 12:12) ಆದರೆ ಆ “ಸಮಯಾವಧಿಯು” ಬಹುಮಟ್ಟಿಗೆ ನೂರು ವರ್ಷಗಳು ಉರುಳಿದರೂ ಇನ್ನೂ ಮುಂದುವರಿಯುತ್ತಿದೆ. ಹಾಗಾಗಿ, ‘ಕಡೇ ದಿವಸಗಳು ಇಷ್ಟು ದೀರ್ಘವಾಗಿವೆಯಾ, ಕೊನೆಯೇ ಆಗುತ್ತಿಲ್ಲವಲ್ಲಾ’ ಎಂದು ಕೆಲವರಿಗೆ ಅನಿಸಬಹುದು. ನಮ್ಮ ಬಗ್ಗೆ ಏನು? ಈ ವ್ಯವಸ್ಥೆಯನ್ನು ಯೆಹೋವನು ನಾಶಮಾಡಲಿರುವ ದಿನಕ್ಕಾಗಿ ನಾವು ಕಾಯುತ್ತಾ ಕಾಯುತ್ತಾ ತಾಳ್ಮೆಗೆಟ್ಟಿದ್ದೇವೆಯೇ?
2. ಈ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
2 ತಾಳ್ಮೆಗೆಡುವುದು ತುಂಬ ಅಪಾಯಕಾರಿ. ಏಕೆಂದರೆ ಆಗ ನಾವು ದುಡುಕಿ ಕ್ರಿಯೆಗೈಯುತ್ತೇವೆ. ಹಾಗಾಗಿ ನಮ್ಮಲ್ಲಿ ಕಾಯುವ ಮನೋಭಾವ ಯಾವಾಗಲೂ ಇರಬೇಕು. ಈ ಲೇಖನವು ಮುಂದಿನ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ನಾವು ಕಾಯುವ ಮನೋಭಾವವನ್ನು ಕಳಕೊಳ್ಳದಿರಲು ನೆರವಾಗುತ್ತದೆ: (1) ಪ್ರವಾದಿ ಮೀಕನ ಮಾದರಿಯಿಂದ ತಾಳ್ಮೆಯ ಬಗ್ಗೆ ನಾವೇನು ಕಲಿಯಬಲ್ಲೆವು? (2) ನಮ್ಮ ಕಾಯುವ ಅವಧಿ ಮುಗಿಯುತ್ತಿದೆಯೆಂದು ಯಾವ ಘಟನೆಗಳು ಸೂಚಿಸುವವು? (3) ಯೆಹೋವನು ತಾಳ್ಮೆ ತೋರಿಸುತ್ತಿರುವುದಕ್ಕಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಲ್ಲೆವು?
ಮೀಕನ ಮಾದರಿಯಿಂದ ಏನು ಕಲಿಯಬಲ್ಲೆವು?
3. ಮೀಕನ ದಿನಗಳಲ್ಲಿ ಇಸ್ರಾಯೇಲಿನ ಪರಿಸ್ಥಿತಿ ಹೇಗಿತ್ತು?
3 ಮೀಕ 7:2-6 ಓದಿ. ಇಸ್ರಾಯೇಲಿನ ಆಧ್ಯಾತ್ಮಿಕ ಸ್ಥಿತಿ ದಿನ ದಿನಕ್ಕೆ ಹದಗೆಡುತ್ತಾ ದುಷ್ಟ ರಾಜ ಆಹಾಜನ ಆಳ್ವಿಕೆಯಡಿ ಅಧೋಗತಿಗೆ ಇಳಿದದ್ದನ್ನು ಯೆಹೋವನ ಪ್ರವಾದಿ ಮೀಕ ನೋಡಿದನು. ಅಪನಂಬಿಗಸ್ತ ಇಸ್ರಾಯೇಲ್ಯರನ್ನು ಮೀಕನು “ಮುಳ್ಳುಕಂಪೆ” ಮತ್ತು ‘ಮುಳ್ಳುಬೇಲಿಗೆ’ ಹೋಲಿಸಿದನು. ಮುಳ್ಳುಕಂಪೆ ಇಲ್ಲವೆ ಮುಳ್ಳುಬೇಲಿಗೆ ತಾಗಿದಾಗ ಗಾಯವಾಗುವಂತೆಯೇ ಭ್ರಷ್ಟ ಇಸ್ರಾಯೇಲ್ಯರಿಂದ ಇತರರಿಗೆ ಹಾನಿಯಾಗುತ್ತಿತ್ತು. ಅವರ ಭ್ರಷ್ಟಾಚಾರ ಎಲ್ಲಿ ವರೆಗೆ ಮುಟ್ಟಿತ್ತೆಂದರೆ ಒಂದೇ ಕುಟುಂಬದವರ ಮಧ್ಯೆಯೂ ಪ್ರೀತಿ ಬತ್ತಿಹೋಗಿತ್ತು. ಈ ದುಃಸ್ಥಿತಿಯನ್ನು ಬದಲಾಯಿಸಲು ತನ್ನಿಂದಾಗದೆಂದು ತಿಳಿದಿದ್ದ ಮೀಕನು ಯೆಹೋವನ ಮುಂದೆ ಹೃದಯ ತೋಡಿಕೊಂಡನು. ಬಳಿಕ ಯೆಹೋವನು ಕ್ರಮ ತಕ್ಕೊಳ್ಳುವಂತೆ ತಾಳ್ಮೆಯಿಂದ ಕಾದನು. ತಕ್ಕ ಸಮಯದಲ್ಲಿ ಖಂಡಿತ ಯೆಹೋವನು ಕ್ರಿಯೆಗೈಯುವನೆಂಬ ದೃಢಭರವಸೆ ಅವನಿಗಿತ್ತು.
4. ಯಾವ ರೀತಿಯ ಸವಾಲುಗಳನ್ನು ನಾವು ಎದುರಿಸುತ್ತೇವೆ?
4 ಮೀಕನಂತೆ ಇಂದು ನಾವು ಸಹ ಸ್ವಾರ್ಥಿಗಳಾದ ಜನರ ಮಧ್ಯೆ ಜೀವಿಸಬೇಕಿದೆ. ಅನೇಕರು “ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ” ಆಗಿದ್ದಾರೆ. (2 ತಿಮೊ. 3:2, 3) ಸಹೋದ್ಯೋಗಿಗಳು, ಸಹಪಾಠಿಗಳು, ನೆರೆಯವರು ಹೀಗೆ ಎಲ್ಲರೂ ತಮ್ಮ ಸ್ವಾರ್ಥವನ್ನೇ ಸಾಧಿಸುವ ಜನರು. ಇದರಿಂದ ದೇವರ ಸೇವಕರಾದ ನಾವು ತುಂಬ ನೋವುಣ್ಣುತ್ತೇವೆ. ನಮ್ಮಲ್ಲಿ ಕೆಲವರಂತೂ ಇದಕ್ಕಿಂತಲೂ ಕಷ್ಟಕರವಾದ ಸವಾಲನ್ನು ಎದುರಿಸುತ್ತಾರೆ. ಸ್ವಂತ ಕುಟುಂಬದವರಿಂದಲೇ ವಿರೋಧ ಎದುರಿಸುತ್ತಾರೆ. ಯೇಸು ಇದನ್ನೇ ಹೇಳಿದನು. ಅವನ ಸಂದೇಶದಿಂದಾಗಿ ಉಂಟಾಗುವ ಪರಿಣಾಮವನ್ನು ವರ್ಣಿಸಲು ಅವನು ಮೀಕ 7:6ರಲ್ಲಿರುವ ಮಾತುಗಳನ್ನು ಬಳಸುತ್ತಾ ಹೀಗಂದನು: “ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದ ಹುಟ್ಟಿಸುವದಕ್ಕೆ ಬಂದೆನು. ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.” (ಮತ್ತಾ. 10:35, 36) ಸತ್ಯದಲ್ಲಿಲ್ಲದ ಕುಟುಂಬ ಸದಸ್ಯರಿಂದ ಅಪಹಾಸ್ಯ, ವಿರೋಧ ಬರುವಾಗ ಅದನ್ನು ತಾಳಿಕೊಳ್ಳುವುದು ಎಷ್ಟು ಕಷ್ಟಕರವಲ್ಲವೇ? ನಾವು ಒಂದುವೇಳೆ ಅಂಥ ಪರೀಕ್ಷೆ ಎದುರಿಸುತ್ತಿರುವಲ್ಲಿ ಕುಟುಂಬದ ಒತ್ತಡಕ್ಕೆ ಮಣಿಯದಿರೋಣ. ಯೆಹೋವನಿಗೆ ನಿಷ್ಠರಾಗಿ ಉಳಿದು ಆತನೇ ವಿಷಯಗಳನ್ನು ಸರಿಪಡಿಸುವಂತೆ ತಾಳ್ಮೆಯಿಂದ ಕಾಯೋಣ. ನಾವು ನಿರಂತರ ಆತನ ಸಹಾಯಕ್ಕಾಗಿ ಬೇಡಿಕೊಂಡರೆ ತಾಳಿಕೊಳ್ಳಲು ಬೇಕಾದ ಶಕ್ತಿ, ವಿವೇಕವನ್ನು ಆತನು ಕೊಡುವನು.
5, 6. (1) ಯೆಹೋವನು ಮೀಕನಿಗೆ ಹೇಗೆ ಪ್ರತಿಫಲ ಕೊಟ್ಟನು? (2) ಮೀಕನು ಏನನ್ನು ಕಣ್ಣಾರೆ ಕಾಣಲಿಲ್ಲ?
5 ಮೀಕ ತೋರಿಸಿದ ತಾಳ್ಮೆಗೆ ಯೆಹೋವನು ಪ್ರತಿಫಲ ಕೊಟ್ಟನು. ಹೇಗೆ? ರಾಜ ಆಹಾಜ ಮತ್ತವನ ದುಷ್ಟ ಆಳ್ವಿಕೆ ಅಂತ್ಯಗೊಂಡದ್ದನ್ನು ಮೀಕ ಕಣ್ಣಾರೆ ಕಂಡನು. ಆಹಾಜನ ನಂತರ ಪಟ್ಟಕ್ಕೆ ಬಂದ ಅವನ ಪುತ್ರ ಹಿಜ್ಕೀಯನು ಒಳ್ಳೆಯ ಅರಸನಾಗಿದ್ದು ಸತ್ಯಾರಾಧನೆಯನ್ನು ಪುನಃಸ್ಥಾಪಿಸಿದ್ದನ್ನು ಕೂಡ ಮೀಕ ನೋಡಿದನು. ಅಲ್ಲದೆ, ಸಮಾರ್ಯದ ವಿಷಯದಲ್ಲಿ ತಾನು ಬರೆದ ಯೆಹೋವನ ತೀರ್ಪಿನ ಸಂದೇಶವು ತನ್ನ ಕಣ್ಮುಂದೆ ನೆರವೇರುವುದನ್ನು ನೋಡಿದನು. ಅಶ್ಶೂರ್ಯರು ಉತ್ತರದ ಇಸ್ರಾಯೇಲ್ ರಾಜ್ಯದ ಮೇಲೆ ದಾಳಿಮಾಡಿದಾಗ ಅದು ನೆರವೇರಿತು.—ಮೀಕ 1:6.
6 ಆದರೆ ಯೆಹೋವನ ಪ್ರೇರಣೆಯಿಂದ ತಾನೇನನ್ನು ಪ್ರವಾದಿಸಿದ್ದನೋ ಅದೆಲ್ಲ ನೆರವೇರಿದ್ದನ್ನು ಮೀಕನು ಕಣ್ಣಾರೆ ಕಾಣಲಿಲ್ಲ. ಉದಾಹರಣೆಗೆ “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು. ಹೊರಟುಬಂದ ಬಹು ದೇಶಗಳವರು—ಬನ್ನಿರಿ, ಯೆಹೋವನ ಪರ್ವತಕ್ಕೆ . . . ಹೋಗೋಣ . . . ಎಂದು ಹೇಳುವರು” ಎಂಬುದಾಗಿ ಮೀಕ ಬರೆದಿದ್ದನು. (ಮೀಕ 4:1, 2) ಈ ಪ್ರವಾದನೆಯ ನೆರವೇರಿಕೆಯನ್ನು ಮೀಕನು ನೋಡಲಿಲ್ಲ. ಹಾಗಿದ್ದರೂ ಮರಣದ ತನಕವೂ ಯೆಹೋವನಿಗೆ ನಿಷ್ಠನಾಗಿರುವ ಅವನ ನಿರ್ಧಾರ ಗಟ್ಟಿಯಾಗಿತ್ತು. ಸುತ್ತಲಿರುವವರು ಏನೇ ಮಾಡಲಿ ಅದು ಅವನಿಗೆ ಮುಖ್ಯವಾಗಿರಲಿಲ್ಲ. ಈ ವಿಷಯದಲ್ಲಿ ಅವನು ಬರೆದದ್ದು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” (ಮೀಕ 4:5) ಕಷ್ಟಕರ ಸಮಯಗಳಲ್ಲೂ ಮೀಕ ತಾಳ್ಮೆಯಿಂದ ಕಾಯಲು ಶಕ್ತನಾದನು ಏಕೆಂದರೆ ಯೆಹೋವನು ತನ್ನ ಎಲ್ಲ ವಾಗ್ದಾನಗಳನ್ನು ಪೂರೈಸುವನೆಂಬ ಪೂರ್ಣ ವಿಶ್ವಾಸ ಅವನಿಗಿತ್ತು. ಹೌದು, ಆ ನಂಬಿಗಸ್ತ ಪ್ರವಾದಿಯು ಯೆಹೋವನಲ್ಲಿ ಭರವಸೆಯಿಟ್ಟನು.
7, 8. (1) ಯೆಹೋವನಲ್ಲಿ ಭರವಸೆಯಿಡಲು ನಮಗೆ ಯಾವ ಕಾರಣವಿದೆ? (2) ಸಮಯ ಹೋದದ್ದೇ ಗೊತ್ತಾಗಬಾರದಾದರೆ ನಾವೇನು ಮಾಡಬೇಕು?
7 ಯೆಹೋವನಲ್ಲಿ ಅಂಥ ಭರವಸೆ ನಮಗೂ ಇದೆಯೇ? ಹಾಗೆ ಭರವಸೆಯಿಡಲು ನಮಗೆ ಒಳ್ಳೇ ಕಾರಣವಿದೆ. ಅದೇನೆಂದರೆ ಮೀಕನ ಪ್ರವಾದನೆಯ ನೆರವೇರಿಕೆಯನ್ನು ನಾವೇ ನಮ್ಮ ಕಣ್ಣಿಂದ ನೋಡಿದ್ದೇವೆ. ಈ ‘ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟಕ್ಕೆ’ ಎಲ್ಲ ಜನಾಂಗ, ಕುಲ, ನಾನಾ ಭಾಷೆಗಳ ಲಕ್ಷಾಂತರ ಮಂದಿ ಪ್ರವಾಹದಂತೆ ಹರಿದುಬಂದಿದ್ದಾರೆ. ಅವರಿರುವ ದೇಶಗಳು ಪರಸ್ಪರ ಕಾದಾಡುತ್ತವಾದರೂ ಈ ಜನರು ‘ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ’ ಮಾಡಿದ್ದಾರೆ ಮತ್ತು ‘ಯುದ್ಧಾಭ್ಯಾಸ ಮಾಡಲು’ ನಿರಾಕರಿಸುತ್ತಾರೆ. (ಮೀಕ 4:3) ಯೆಹೋವನ ಈ ಶಾಂತಿಭರಿತ ಜನರ ಮಧ್ಯೆ ಇರುವುದು ನಿಜಕ್ಕೂ ಒಂದು ದೊಡ್ಡ ಸುಯೋಗ!
8 ಯೆಹೋವನು ಈ ದುಷ್ಟ ವ್ಯವಸ್ಥೆಗೆ ಅಂತ್ಯವನ್ನು ಬೇಗನೆ ತರಲಿ ಎಂದು ನಾವು ಅಪೇಕ್ಷಿಸುವುದು ಸಹಜ. ಆದರೆ ತಾಳ್ಮೆಯಿಂದ ಕಾಯಬೇಕಾದರೆ ನಾವು ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಬೇಕು. “ತಾನು ನೇಮಿಸಿರುವ ಒಬ್ಬ ಮನುಷ್ಯನ ಮೂಲಕ” ಅಂದರೆ ಯೇಸು ಕ್ರಿಸ್ತನ ಮೂಲಕ ಮಾನವಕುಲದ ತೀರ್ಪು ಮಾಡಲು ಆತನು ಈಗಾಗಲೇ ಒಂದು ದಿನವನ್ನು ನಿಗದಿಮಾಡಿ ಆಗಿದೆ. (ಅ. ಕಾ. 17:31) ಆದರೆ ಅದಕ್ಕಿಂತಲೂ ಮುಂಚೆ ಆತನು ಎಲ್ಲ ರೀತಿಯ ಜನರಿಗೂ ‘ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು,’ ಆ ಜ್ಞಾನಾನುಸಾರ ಕ್ರಿಯೆಗೈಯಲು, ಈ ಮೂಲಕ ರಕ್ಷಣೆಹೊಂದಲು ಅವಕಾಶಕೊಡುತ್ತಿದ್ದಾನೆ. ಏಕೆಂದರೆ ಎಷ್ಟೋ ಅಮೂಲ್ಯ ಜೀವಗಳು ಅಪಾಯದಲ್ಲಿವೆ. (1 ತಿಮೊಥೆಯ 2:3, 4 ಓದಿ.) ಆದ್ದರಿಂದ ದೇವರ ಕುರಿತು ನಿಷ್ಕೃಷ್ಟ ಜ್ಞಾನ ಪಡೆಯುವಂತೆ ಇತರರಿಗೆ ನೆರವಾಗುವ ಈ ಕೆಲಸದಲ್ಲಿ ನಾವು ಮುಳುಗಿದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಸಮಯ ಉರುಳಿಹೋದಂತೆ ಅನಿಸುವುದು. ಯೆಹೋವನ ತೀರ್ಪಿನ ದಿನ ಬಂದಾಗಲಂತೂ, ಸಾರುವ ಕೆಲಸದಲ್ಲಿ ಕಾರ್ಯಮಗ್ನರಾಗಿ ಇದ್ದದ್ದಕ್ಕಾಗಿ ನಾವು ಬಹಳ ಸಂತೋಷಪಡುವೆವು.
ನಮ್ಮ ಕಾಯುವ ಅವಧಿಯ ಕೊನೆಯನ್ನು ಯಾವ ಘಟನೆಗಳು ಸೂಚಿಸುವವು?
9-11. ಒಂದನೇ ಥೆಸಲೊನೀಕ 5:3 ನೆರವೇರಿದೆಯೇ? ವಿವರಿಸಿ.
9 ಒಂದನೇ ಥೆಸಲೊನೀಕ 5:1-3 ಓದಿ. ಭವಿಷ್ಯತ್ತಿನಲ್ಲಿ ಬಲುಬೇಗನೆ ರಾಷ್ಟ್ರಗಳು “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆಯನ್ನು ಮಾಡಲಿವೆ. ಆ ಘೋಷಣೆಯಿಂದ ಮೋಸಹೋಗದಿರಲು ನಾವು “ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ” ಇರಬೇಕು. (1 ಥೆಸ. 5:6) ಆ ಗಮನಾರ್ಹ ಘೋಷಣೆಗೆ ಈಗಾಗಲೇ ದಾರಿ ಸಿದ್ಧಮಾಡಿರುವ ಕೆಲವು ಘಟನೆಗಳನ್ನು ನಾವೀಗ ಚುಟುಕಾಗಿ ವಿಮರ್ಶಿಸೋಣ. ಇದು ಆಧ್ಯಾತ್ಮಿಕವಾಗಿ ಎಚ್ಚರವಾಗಿರಲು ನಮಗೆ ನೆರವಾಗುತ್ತದೆ.
10 ಒಂದನೇ ಮಹಾಯುದ್ಧದ ಬಳಿಕ ಹಾಗೂ ಎರಡನೇ ಮಹಾಯುದ್ಧದ ಬಳಿಕ ಪ್ರತಿ ಬಾರಿಯೂ ರಾಷ್ಟ್ರಗಳು ಶಾಂತಿ ತರುವ ನಿಟ್ಟಿನಲ್ಲಿ ದೊಡ್ಡ ಹುಯಿಲೆಬ್ಬಿಸಿದವು. ಶಾಂತಿ ತರುವ ಉದ್ದೇಶದಿಂದ ಒಂದನೇ ವಿಶ್ವಮಹಾಯುದ್ಧದ ಬಳಿಕ ಜನಾಂಗ ಸಂಘವನ್ನು ಸ್ಥಾಪಿಸಲಾಯಿತು. ಎರಡನೇ ಮಹಾಯುದ್ಧದ ಬಳಿಕ ವಿಶ್ವಸಂಸ್ಥೆ ಭೂಮಿಗೆ ಶಾಂತಿ ತರುವುದೆಂದು ಬಹುತೇಕ ಮಂದಿ ನಿರೀಕ್ಷಿಸಿದರು. ಈ ಜನಾಂಗ ಸಂಘ ಮತ್ತು ವಿಶ್ವಸಂಸ್ಥೆಯಿಂದಲೇ ಮಾನವರಿಗೆ ಶಾಂತಿಯುತ ಪರಿಸ್ಥಿತಿಗಳು ಬರುವವೆಂದು ಸರಕಾರೀ ಹಾಗೂ ಧಾರ್ಮಿಕ ಧುರೀಣರು ಆಸೆಯಿಟ್ಟುಕೊಂಡಿದ್ದಾರೆ. ಉದಾಹರಣೆಗೆ ವಿಶ್ವಸಂಸ್ಥೆಯು 1986ನೇ ವರ್ಷವನ್ನು ಅಂತಾರಾಷ್ಟ್ರೀಯ ಶಾಂತಿಯ ವರ್ಷವೆಂದು ಅಬ್ಬರದ ಘೋಷಣೆ ಮಾಡಿತು. ಮಾತ್ರವಲ್ಲ ಆ ವರ್ಷ ಅನೇಕ ರಾಷ್ಟ್ರಗಳ ಹಾಗೂ ಧರ್ಮಗಳ ಮುಖಂಡರು ಇಟಲಿಯ ಅಸಿಸಿಯಲ್ಲಿ ಸೇರಿಬಂದು ಕ್ಯಾಥೊಲಿಕ್ ಚರ್ಚ್ನ ಮುಖ್ಯಸ್ಥನ ಜೊತೆಗೂಡಿ ಶಾಂತಿಗಾಗಿ ಪ್ರಾರ್ಥನೆಗಳನ್ನು ಸಲ್ಲಿಸಿದರು.
11 ಆದರೆ ಆ ಘೋಷಣೆಯಾಗಲಿ ಅಂಥ ಬೇರಾವುದೇ ಘೋಷಣೆಯಾಗಲಿ 1 ಥೆಸಲೊನೀಕ 5:3ರಲ್ಲಿರುವ ಪ್ರವಾದನೆಯ ನೆರವೇರಿಕೆಯಲ್ಲ. ಯಾಕಲ್ಲ? ಏಕೆಂದರೆ ಅದರ ನಂತರ ‘ಫಕ್ಕನೇ ನಾಶನ’ ಬರಲಿಲ್ಲ.
12. “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆಯ ಬಗ್ಗೆ ನಮಗೇನು ಗೊತ್ತಿದೆ?
12 ಭವಿಷ್ಯದಲ್ಲಿ “ಶಾಂತಿ ಮತ್ತು ಭದ್ರತೆಯ” ಘೋಷಣೆಯನ್ನು ಯಾರು ಮಾಡುವರು? ಈ ಗಮನಾರ್ಹ ಘೋಷಣೆಯಲ್ಲಿ ಕ್ರೈಸ್ತಪ್ರಪಂಚದ ಹಾಗೂ ಇತರ ಧರ್ಮಗಳ ಮುಖಂಡರು ಯಾವ ಪಾತ್ರ ವಹಿಸುವರು? ವಿಭಿನ್ನ ಸರಕಾರಗಳ ಧುರೀಣರು ಈ ಘೋಷಣೆಯಲ್ಲಿ ಹೇಗೆ ಒಳಗೂಡಿರುವರು? ಈ ಬಗ್ಗೆ ಬೈಬಲ್ ಏನೂ ತಿಳಿಸುವುದಿಲ್ಲ. ಆದರೆ ಒಂದಂತೂ ಖಚಿತ. ಏನೆಂದರೆ ಆ ಘೋಷಣೆ ಯಾವುದೇ ರೀತಿಯಲ್ಲಿ ಮಾಡಲ್ಪಡಲಿ, ಅದೆಷ್ಟೇ ಸತ್ಯವೆಂಬಂತೆ ತೋರಲಿ ಅದು ಬರೀ ಪೊಳ್ಳಷ್ಟೆ. ಏನಿದ್ದರೂ ಆ ಸಮಯದಲ್ಲೂ ಈ ಹಳೇ ವ್ಯವಸ್ಥೆ ಸೈತಾನನ ವಶದಲ್ಲೇ ಇರುವುದು. ಈ ವ್ಯವಸ್ಥೆಯ ಕಣಕಣವೂ ಕೊಳೆತುಹೋಗಿರುವ ಕಾರಣ ಸುಧಾರಣೆಯಂತೂ ಅಸಾಧ್ಯದ ಮಾತು. ಹಾಗಾಗಿ ಸೈತಾನನ ಪ್ರೇರಣೆಯಿಂದ ಮಾಡಲಾಗುವ ಆ ಪ್ರಚಾರವನ್ನು ನಂಬಿ ನಮ್ಮ ಕ್ರೈಸ್ತ ತಾಟಸ್ಥ್ಯವನ್ನು ಬಿಟ್ಟುಕೊಟ್ಟರೆ ಅದೆಂಥ ದೊಡ್ಡ ದುರಂತ!
13. ದೇವದೂತರು ವಿನಾಶದ ಗಾಳಿಗಳನ್ನು ಏಕೆ ತಡೆದು ಹಿಡಿದಿದ್ದಾರೆ?
13 ಪ್ರಕಟನೆ 7:1-4 ಓದಿ. ನಾವು 1 ಥೆಸಲೊನೀಕ 5:3ರ ನೆರವೇರಿಕೆಗಾಗಿ ಕಾಯುತ್ತಿರುವ ಇದೇ ಸಮಯದಲ್ಲಿ ಶಕ್ತಿಶಾಲಿ ದೇವದೂತರು ಮಹಾ ಸಂಕಟದ ವಿನಾಶಕಾರಿ ಗಾಳಿಗಳನ್ನು ತಡೆದು ಹಿಡಿದಿದ್ದಾರೆ. ಅವರು ಯಾವುದಕ್ಕಾಗಿ ಕಾಯುತ್ತಿದ್ದಾರೆ? ಅವರು ಕಾಯುತ್ತಿರುವ ಒಂದು ಮುಖ್ಯ ಘಟನೆಯನ್ನು ಅಪೊಸ್ತಲ ಯೋಹಾನನು ವರ್ಣಿಸಿದ್ದಾನೆ. ಅದೇನೆಂದರೆ, ದೇವರ ಅಭಿಷಿಕ್ತ “ದಾಸರ” ಕೊನೆಯ ಮುದ್ರೆಯೊತ್ತುವಿಕೆಯೇ.a ಇದು ಪೂರ್ಣಗೊಂಡಾಗ ದೇವದೂತರು ವಿನಾಶದ ಗಾಳಿಗಳನ್ನು ಬಿಡುಗಡೆಮಾಡಲಿದ್ದಾರೆ. ಬಳಿಕ ಏನಾಗುವುದು?
14. ಮಹಾ ಬಾಬೆಲಿನ ಅಂತ್ಯ ಹತ್ತಿರವಿದೆಯೆಂದು ಯಾವುದು ಸೂಚಿಸುತ್ತದೆ?
14 ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲ್ಗೆ ತಕ್ಕ ಶಾಸ್ತಿಯಾಗುವುದು. ಅವಳು ಅಂತ್ಯ ಕಾಣುವಳು. ಅವಳು ಅಂತ್ಯಗೊಳ್ಳುವಾಗ ‘ಜನರು, ಸಮೂಹಗಳು, ಜನಾಂಗಗಳು ಮತ್ತು ಭಾಷೆಗಳವರು’ ಯಾವ ನೆರವನ್ನೂ ನೀಡಲಾರರು. ಆಕೆಯ ಅವಸಾನದ ಸೂಚನೆಗಳನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. (ಪ್ರಕ. 16:12; 17:15-18; 18:7, 8, 21) ಆಕೆಗಿರುವ ಬೆಂಬಲ ಈಗಲೇ ಕುಸಿಯುತ್ತಾ ಇರುವುದು ವಾರ್ತಾಮಾಧ್ಯಮದಲ್ಲಿ ತೋರಿಬರುತ್ತಿದೆ. ಧರ್ಮ ಹಾಗೂ ಧರ್ಮಗುರುಗಳ ಮೇಲೆ ಟೀಕೆಗಳ ಪ್ರಹಾರ ವಾರ್ತಾಮಾಧ್ಯಮದಲ್ಲಿ ಹೆಚ್ಚೆಚ್ಚಾಗುತ್ತಾ ಇದೆ. ಹಾಗಿದ್ದರೂ ನಿಜವಾದ ಆಪತ್ತೇನೂ ಇಲ್ಲವೆಂದು ಮಹಾ ಬಾಬೆಲಿನ ಮುಖಂಡರಿಗೆ ಅನಿಸುತ್ತಿದೆ. ಅವರ ಯೋಚನೆ ತಪ್ಪು! “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆಯ ನಂತರ ಸೈತಾನನ ವ್ಯವಸ್ಥೆಯ ರಾಜಕೀಯ ಘಟಕಗಳು ಥಟ್ಟನೆ ಸುಳ್ಳು ಧರ್ಮದ ಮೇಲೆರಗಿ ಅದನ್ನು ನಾಶಮಾಡಿಬಿಡುವವು. ಇನ್ನೆಂದೂ ಮಹಾ ಬಾಬೆಲ್ ತಲೆಯೆತ್ತದು! ಇಂಥ ಮಹತ್ವಪೂರ್ಣ ಘಟನೆಗಳನ್ನು ನೋಡಲಿಕ್ಕಾಗಿ ನಾವು ತಾಳ್ಮೆಯಿಂದ ಕಾಯುವುದು ಸಾರ್ಥಕ.—ಪ್ರಕ. 18:8, 10.
ದೇವರ ತಾಳ್ಮೆಗಾಗಿ ಹೇಗೆ ಕೃತಜ್ಞತೆ ತೋರಿಸಬಲ್ಲೆವು?
15. ಯೆಹೋವನು ಕ್ರಮಗೈಯಲು ಏಕೆ ಅವಸರಪಟ್ಟಿಲ್ಲ?
15 ಜನರು ಯೆಹೋವನ ಹೆಸರನ್ನು ಬಹಳ ನಿಂದಿಸುತ್ತಿದ್ದರೂ ಆತನು ಕ್ರಮಗೈಯಲು ಅವಸರಪಟ್ಟಿಲ್ಲ. ತಕ್ಕ ಸಮಯಕ್ಕಾಗಿ ತಾಳ್ಮೆಯಿಂದ ಕಾಯುತ್ತಾ ಬಂದಿದ್ದಾನೆ. ಏಕೆಂದರೆ ಪ್ರಾಮಾಣಿಕ ಹೃದಯದ ಜನರಲ್ಲಿ ಒಬ್ಬರು ಕೂಡ ನಾಶವಾಗುವುದು ಆತನಿಗೆ ಇಷ್ಟವಿಲ್ಲ. (2 ಪೇತ್ರ 3: 9, 10) ಅದೇ ಆಸೆ ನಮಗೂ ಇದೆಯೇ? ಹಾಗಾದರೆ ಯೆಹೋವನ ದಿನ ಬರುವ ಮುಂಚೆ ನಾವು ಈ ಕೆಳಗಿನ ವಿಧಗಳಲ್ಲಿ ಆತನ ತಾಳ್ಮೆಗಾಗಿ ಕೃತಜ್ಞತೆ ತೋರಿಸೋಣ.
16, 17. (1) ನಿಷ್ಕ್ರಿಯರಾದವರಿಗೆ ನಾವೇಕೆ ನೆರವಾಗಬೇಕು? (2) ನಿಷ್ಕ್ರಿಯರಾದವರು ಯೆಹೋವನ ಬಳಿ ಹಿಂದಿರುಗುವುದು ಏಕೆ ತುರ್ತಿನದ್ದಾಗಿದೆ?
16 ನಿಷ್ಕ್ರಿಯರಾದವರಿಗೆ ನೆರವು ನೀಡಿ. ಯೇಸು ಹೇಳಿದಂತೆ, ಕಳೆದುಹೋದದ್ದರಲ್ಲಿ ಒಂದೇ ಒಂದು ಕುರಿ ಪುನಃ ಸಿಕ್ಕಿದಾಗಲೂ ಸ್ವರ್ಗದಲ್ಲಿ ಆನಂದವುಂಟಾಗುತ್ತದೆ. (ಮತ್ತಾ. 18:14; ಲೂಕ 15:3-7) ಇದರಿಂದ ತಿಳಿಯುತ್ತದೇನೆಂದರೆ, ಯೆಹೋವನು ತನ್ನ ಹೆಸರಿಗಾಗಿ ಪ್ರೀತಿ ವ್ಯಕ್ತಪಡಿಸಿದವರೆಲ್ಲರ ಬಗ್ಗೆ, ಒಂದುವೇಳೆ ಅವರು ಸದ್ಯಕ್ಕೆ ತನ್ನ ಸೇವೆಯಲ್ಲಿ ಸಕ್ರಿಯರಾಗಿರದಿದ್ದರೂ ಕೂಡ ಅವರ ಬಗ್ಗೆ ಗಾಢವಾಗಿ ಚಿಂತಿಸುತ್ತಾನೆ.
17 ಯೆಹೋವನ ಆರಾಧನೆಯನ್ನು ಬಿಟ್ಟುಬಿಟ್ಟಿರುವವರಲ್ಲಿ ನೀವೂ ಒಬ್ಬರೊ? ಸಭೆಯಲ್ಲಿರುವ ಯಾರೊ ನಿಮ್ಮ ಮನನೋಯಿಸಿದ ಕಾರಣ ನೀವು ಯೆಹೋವನ ಸಂಘಟನೆಯೊಂದಿಗೆ ಸಹವಾಸಿಸುವುದನ್ನು ಬಿಟ್ಟುಬಿಟ್ಟಿರಬಹುದು. ಇದಾಗಿ ಈಗಾಗಲೇ ಸ್ವಲ್ಪ ಸಮಯ ದಾಟಿರಬಹುದು. ಹಾಗಾಗಿ ನಿಮ್ಮನ್ನೇ ಹೀಗೆ ಕೇಳಿ: ‘ಈಗ ನನ್ನ ಬದುಕು ಮುಂಚೆಗಿಂತ ಹೆಚ್ಚು ಅರ್ಥಭರಿತವಾಗಿದೆಯೇ? ಹಿಂದಿಗಿಂತ ನಾನು ಹೆಚ್ಚು ಸಂತೋಷವಾಗಿದ್ದೇನೆಯೇ? ನನ್ನ ಮನನೋಯಿಸಿದವರು ಯಾರು?—ಯೆಹೋವನೊ? ಒಬ್ಬ ಅಪರಿಪೂರ್ಣ ಮನುಷ್ಯನೊ? ಯೆಹೋವ ದೇವರು ನನಗೆ ಯಾವತ್ತಾದರೂ ಹಾನಿಮಾಡಿದ್ದಾನೆಯೇ?’ ಸ್ವಲ್ಪ ಯೋಚಿಸಿ, ನಮಗೆ ಯೆಹೋವನು ಸದಾ ಒಳಿತನ್ನೇ ಮಾಡಿದ್ದಾನಲ್ಲಾ. ಆತನಿಗೆ ಮಾಡಿರುವ ಸಮರ್ಪಣೆಗೆ ತಕ್ಕಂತೆ ನಾವು ಜೀವಿಸುತ್ತಿಲ್ಲವಾದರೂ, ಆತನು ಒದಗಿಸುತ್ತಿರುವ ಒಳ್ಳೇ ವಿಷಯಗಳನ್ನು ಆನಂದಿಸಲು ಬಿಡುತ್ತಿದ್ದಾನೆ. (ಯಾಕೋ. 1:16, 17) ಯೆಹೋವನ ದಿನ ಬಲುಬೇಗನೆ ಬರಲಿದೆ. ಆದ್ದರಿಂದ ಆತನ ಪ್ರೀತಿಯ ತೆಕ್ಕೆಯೊಳಗೆ ಪುನಃ ಸೇರಿಕೊಳ್ಳಲು ತಡಮಾಡುವ ಸಮಯ ಇದಲ್ಲ. ಸಭೆಗೆ ಹಿಂತಿರುಗುವ ಸಮಯ ಇದೇ ಆಗಿದೆ. ಇದೊಂದೇ ನಮಗೆ ಈ ಕಡೇ ದಿವಸಗಳಲ್ಲಿ ಸುರಕ್ಷೆ ಒದಗಿಸುವ ತಾಣ!—ಧರ್ಮೋ. 33:27; ಇಬ್ರಿ. 10:24, 25.
18. ಮುಂದಾಳತ್ವ ವಹಿಸುವವರನ್ನು ನಾವೇಕೆ ಬೆಂಬಲಿಸಬೇಕು?
18 ಮುಂದಾಳತ್ವ ವಹಿಸುವವರನ್ನು ನಿಷ್ಠೆಯಿಂದ ಬೆಂಬಲಿಸಿ. ಪ್ರೀತಿಯ ಕುರುಬನಾಗಿರುವ ಯೆಹೋವನು ನಮ್ಮನ್ನು ಮಾರ್ಗದರ್ಶಿಸಿ ಸಂರಕ್ಷಿಸುತ್ತಾನೆ. ತನ್ನ ಪುತ್ರನನ್ನು ಮಂದೆಯ ಮುಖ್ಯ ಕುರುಬನಾಗಿ ನೇಮಿಸಿದ್ದಾನೆ. (1 ಪೇತ್ರ 5:4) ಒಂದು ಲಕ್ಷಕ್ಕಿಂತಲೂ ಹೆಚ್ಚು ಸಭೆಗಳಲ್ಲಿರುವ ಹಿರಿಯರು ದೇವರ ಕುರಿಗಳಲ್ಲಿ ವೈಯಕ್ತಿಕವಾಗಿ ಒಬ್ಬೊಬ್ಬರನ್ನೂ ಪರಿಪಾಲನೆ ಮಾಡುತ್ತಾರೆ. (ಅ. ಕಾ. 20:28) ಯೆಹೋವ ಮತ್ತು ಯೇಸು ನಮಗಾಗಿ ಮಾಡಿರುವ ಇವೆಲ್ಲವುಗಳಿಗೆ ನಾವು ಕೃತಜ್ಞತೆ ತೋರಿಸುವುದು ಹೇಗೆ? ಮುಂದಾಳತ್ವ ವಹಿಸುವವರನ್ನು ನಿಷ್ಠೆಯಿಂದ ಬೆಂಬಲಿಸುವ ಮೂಲಕವೇ.
19. ನಾವು ಒತ್ತೊತ್ತಾಗಿ ನಿಲ್ಲುವುದು ಹೇಗೆ?
19 ಪರಸ್ಪರ ಆಪ್ತರಾಗಿ. ಇದರರ್ಥವೇನು? ಹಿಂದಿನ ಕಾಲದಲ್ಲಿ, ಚೆನ್ನಾಗಿ ತಾಲೀಮು ಪಡೆದ ಸೇನೆಯೊಂದರ ಮೇಲೆ ಶತ್ರುಸೇನೆ ಆಕ್ರಮಣಮಾಡಿದಾಗ ಸೈನಿಕರು ಪಕ್ಕಪಕ್ಕ ಬಂದು ಒತ್ತೊತ್ತಾಗಿ ನಿಲ್ಲುತ್ತಿದ್ದರು. ಆಗ ಶತ್ರುಸೇನೆಗೆ ಅವರನ್ನು ಭೇದಿಸಲು ಸಾಧ್ಯವಾಗುತ್ತಿರಲಿಲ್ಲ. ಇಂದು ಸೈತಾನನು ದೇವಜನರ ಮೇಲೆ ತನ್ನ ದಾಳಿಗಳನ್ನು ಇನ್ನಷ್ಟು ತೀವ್ರಗೊಳಿಸುತ್ತಿದ್ದಾನೆ. ಹಾಗಾಗಿ ನಾವು ನಮ್ಮನಮ್ಮೊಳಗೆ ಜಗಳವಾಡುವ ಸಮಯ ಇದಲ್ಲ. ಬದಲಿಗೆ ಪರಸ್ಪರರಿಗೆ ಹತ್ತಿರವಾಗಿ ಇರುವ, ಇತರರ ತಪ್ಪುಗಳನ್ನು ಮನ್ನಿಸಿ ಬಿಟ್ಟುಬಿಡುವ, ಯೆಹೋವನ ನಾಯಕತ್ವದಲ್ಲಿ ಭರವಸೆ ವ್ಯಕ್ತಪಡಿಸುವ ಸಮಯ ಇದಾಗಿದೆ.
20. ನಾವೀಗ ಏನು ಮಾಡಬೇಕು?
20 ನಾವೆಲ್ಲರೂ ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯೋಣ. ತಾಳ್ಮೆಯಿಂದ ಕಾಯುತ್ತಾ ಇರೋಣ. “ಶಾಂತಿ ಮತ್ತು ಭದ್ರತೆಯ” ಘೋಷಣೆಗಾಗಿ ಮತ್ತು ಅಭಿಷಿಕ್ತರ ಕೊನೆಯ ಮುದ್ರೆಯೊತ್ತುವಿಕೆಗಾಗಿ ತಾಳ್ಮೆಯಿಂದ ಕಾಯೋಣ. ಅನಂತರ ಆ ನಾಲ್ಕು ದೇವದೂತರು ನಾಶನದ ಗಾಳಿಗಳನ್ನು ಬಿಡುಗಡೆಮಾಡುವರು. ಮಹಾ ಬಾಬೆಲ್ ನಾಶವಾಗುವುದು. ಈ ಮಹತ್ವಪೂರ್ಣ ಘಟನೆಗಳು ಸಂಭವಿಸಲಿಕ್ಕಾಗಿ ನಾವು ಕಾಯುತ್ತಿರುವಾಗ, ಯೆಹೋವನ ಸಂಘಟನೆಯಲ್ಲಿ ಮುಂದಾಳತ್ವ ವಹಿಸುವವರು ಕೊಡುವ ನಿರ್ದೇಶನಗಳನ್ನು ಸ್ವೀಕರಿಸೋಣ. ಪಿಶಾಚ ಮತ್ತು ಅವನ ದೆವ್ವಗಳನ್ನು ವಿರೋಧಿಸಲು ನಾವೆಲ್ಲರೂ ಪರಸ್ಪರ ಒತ್ತಾಗಿ ನಿಲ್ಲೋಣ. “ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ; ನಿಮ್ಮ ಹೃದಯವು ಧೈರ್ಯದಿಂದಿರಲಿ” ಎಂಬ ಕೀರ್ತನೆಗಾರನ ಬುದ್ಧಿವಾದವನ್ನು ಪಾಲಿಸುವ ಸಮಯ ಇದೇ ಆಗಿದೆ!—ಕೀರ್ತ. 31:24.
a ಅಭಿಷಿಕ್ತ ಸದಸ್ಯರ ಆರಂಭದ ಮುದ್ರೆಯೊತ್ತುವಿಕೆ ಹಾಗೂ ಅವರ ಕೊನೆಯ ಮುದ್ರೆಯೊತ್ತುವಿಕೆಯ ನಡುವಣ ವ್ಯತ್ಯಾಸದ ಕುರಿತ ಚರ್ಚೆಗಾಗಿ 1997, ಆಗಸ್ಟ್ 15ರ ಕಾವಲಿನಬುರುಜು ಪುಟ 14, ಪ್ಯಾರ 12 ನೋಡಿ.