ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp16 ನಂ. 2 ಪು. 5-7
  • ಯೇಸು ಏಕೆ ಕಷ್ಟಗಳನ್ನು ಅನುಭವಿಸಿ ಸತ್ತನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ಏಕೆ ಕಷ್ಟಗಳನ್ನು ಅನುಭವಿಸಿ ಸತ್ತನು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಾವಿಗೆ ಕಾರಣ
  • ದೇವರು ಮಾಡಿರುವ ದಾರಿ
  • ಯೇಸು ಏಕೆ ಕಷ್ಟವನ್ನು ಅನುಭವಿಸಿ ಸತ್ತನು?
  • ನಮಗಿರುವ ಪ್ರಯೋಜನಗಳು
  • ಯೇಸು ರಕ್ಷಿಸುತ್ತಾನೆ—ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಕ್ರಿಸ್ತನ ಪ್ರಾಯಶ್ಚಿತ್ತ ದೇವರ ರಕ್ಷಣಾಮಾರ್ಗ
    ಕಾವಲಿನಬುರುಜು—1999
  • ಸಾವು ಯಾಕೆ ಬರುತ್ತದೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಕೊನೆಯ ಶತ್ರುವಾದ ಮರಣ​—⁠ಆಗಲಿದೆ ನಿರ್ಮೂಲನ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
wp16 ನಂ. 2 ಪು. 5-7
ಪರದೈಸಿನಲ್ಲಿ ಎಲ್ಲಾ ರೀತಿಯ ಜನರು ಸಂತೋಷದಿಂದಿದ್ದಾರೆ

ಮುಖಪುಟ ಲೇಖನ

ಯೇಸು ಏಕೆ ಕಷ್ಟಗಳನ್ನು ಅನುಭವಿಸಿ ಸತ್ತನು?

‘ಒಬ್ಬ ಮನುಷ್ಯನಿಂದ [ಆದಾಮ] ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿತು.’—ರೋಮನ್ನರಿಗೆ 5:12

ಆದಾಮ ಮತ್ತು ಹವ್ವ ನಿಷೇಧಿತ ಹಣ್ಣನ್ನು ನೋಡುತ್ತಿದ್ದಾರೆ; ವಯಸ್ಸಾದ ಆದಾಮ ಮತ್ತು ಹವ್ವ; ಶವಪೆಟ್ಟಿಗೆಯನ್ನು ಸ್ಮಶಾನಕ್ಕೆ ಹೊತ್ತುಕೊಂಡು ಹೋಗುತ್ತಿದ್ದಾರೆ

“ಸಾವೇ ಇಲ್ಲದೆ ಬದುಕುತ್ತಾ ಇರಲು ನಿಮಗೆ ಇಷ್ಟ ಇದೆಯಾ?” ಎಂದು ಯಾರಾದರೂ ಕೇಳಿದರೆ ನೀವೇನು ಹೇಳುತ್ತೀರಾ? ಹೆಚ್ಚಿನವರು ‘ಸದಾ ಜೀವಿಸಲಿಕ್ಕೆ ನಮಗೆ ಇಷ್ಟ ಇದೆ. ಆದರೆ ಹಾಗಾಗಬೇಕಲ್ಲ, ಹುಟ್ಟಿದ ಮನುಷ್ಯ ಸಾಯಲೇಬೇಕು, ಅದು ಪ್ರಕೃತಿ ನಿಯಮ’ ಅಂತ ಹೇಳುತ್ತಾರೆ.

ಇದೇ ಪ್ರಶ್ನೆಯನ್ನು ಸ್ವಲ್ಪ ತಿರುಗಿಸಿ, “ನೀವು ಸಾಯೋಕೆ ಸಿದ್ಧರಿದ್ದೀರಾ?” ಎಂದು ಕೇಳಿದರೆ ಹೆಚ್ಚಿನವರು ‘ಇಲ್ಲಪ್ಪ’ ಅಂತ ಹೇಳುತ್ತಾರೆ. ಇದರಿಂದ ನಮಗೆ ಏನು ಗೊತ್ತಾಗುತ್ತೆ? ಎಷ್ಟೇ ಕಷ್ಟ ಸಮಸ್ಯೆಗಳು ಇದ್ದರೂ ಬದುಕುತ್ತಾ ಇರಬೇಕೆನ್ನುವ ಆಸೆ ನಮ್ಮೆಲ್ಲರಿಗೂ ಇದೆ. ಇದು ಸಹಜ. ದೇವರು ಮನುಷ್ಯರಲ್ಲಿ ಸದಾ ಬದುಕಬೇಕೆಂಬ ಆಸೆಯಿಟ್ಟು ಅವರನ್ನು ಸೃಷ್ಟಿಸಿದ್ದಾನೆ ಎಂದು ಬೈಬಲ್‌ ತಿಳಿಸುತ್ತದೆ. ಅದು ಹೇಳುವುದು, “ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.”—ಪ್ರಸಂಗಿ 3:11.

ಆದರೆ ನಾವೆಲ್ಲರೂ ಒಂದಲ್ಲ ಒಂದು ದಿನ ಸಾಯುತ್ತೇವೆ. ಹಾಗಾದರೆ ದೇವರ ಉದ್ದೇಶ ಈಗ ಏಕೆ ನಡೆಯುತ್ತಿಲ್ಲ? ನಮ್ಮನ್ನು ಸಾವಿನ ದವಡೆಯಿಂದ ಬಿಡಿಸಲು ದೇವರು ಏನಾದರೂ ದಾರಿ ಮಾಡಿದ್ದಾನಾ? ಈ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರವನ್ನು ಬೈಬಲ್‌ ನೀಡುತ್ತದೆ. ಈ ಪ್ರಶ್ನೆಗಳ ಉತ್ತರಕ್ಕೂ, ಯೇಸು ಏಕೆ ಕಷ್ಟಗಳನ್ನು ಅನುಭವಿಸಿ ಸತ್ತನು ಎನ್ನುವುದಕ್ಕೂ ಹತ್ತಿರದ ಸಂಬಂಧ ಇದೆ.

ಸಾವಿಗೆ ಕಾರಣ

ಬೈಬಲಿನ ಮೊದಲನೇ ಪುಸ್ತಕವಾದ ಆದಿಕಾಂಡದ ಮೊದಲ ಮೂರು ಅಧ್ಯಾಯಗಳಲ್ಲಿ ಇದಕ್ಕೆ ಕಾರಣವನ್ನು ಕೊಡಲಾಗಿದೆ. ದೇವರು ಮೊದಲ ಮಾನವ ದಂಪತಿಗಳಾದ ಆದಾಮ ಮತ್ತು ಹವ್ವರಿಗೆ ಸದಾಕಾಲ ಜೀವಿಸುವ ಸದವಕಾಶವನ್ನು ಕೊಟ್ಟಿದ್ದನು. ಅದನ್ನು ಪಡೆಯಲು ಅವರು ಏನು ಮಾಡಬೇಕೆಂದು ಸಹ ದೇವರು ತಿಳಿಸಿದ್ದನು. ನಂತರ, ಅವರು ಹೇಗೆ ದೇವರಿಗೆ ಅವಿಧೇಯರಾಗಿ ಈ ಸದವಕಾಶವನ್ನು ಕಳೆದುಕೊಂಡರು ಎಂದೂ ಅದರಲ್ಲಿ ದಾಖಲಾಗಿದೆ. ಇದೆಲ್ಲಾ ಕಟ್ಟುಕಥೆ ಎಂದು ಕೆಲವರು ಹೇಳುತ್ತಾರೆ. ಆದರೆ, ಸುವಾರ್ತಾ ಪುಸ್ತಕಗಳಂತೆ ಆದಿಕಾಂಡ ಪುಸ್ತಕ ಸಹ ನಿಷ್ಕೃಷ್ಟ ಮತ್ತು ಐತಿಹಾಸಿಕವಾಗಿ ನಿಖರವಾಗಿದೆ ಎನ್ನಲು ಸಾಕಷ್ಟು ಪುರಾವೆಗಳಿವೆ.

ಆದಾಮನು ದೇವರ ಮಾತನ್ನು ಕೇಳದೆ ಇದ್ದದರಿಂದ ಏನಾಯಿತು? ಬೈಬಲ್‌ ಕೊಡುವ ಉತ್ತರವನ್ನು ಗಮನಿಸಿ: “ಒಬ್ಬ ಮನುಷ್ಯನಿಂದ [ಆದಾಮ] ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮನ್ನರಿಗೆ 5:12) ದೇವರ ಮಾತನ್ನು ಕೇಳದೆ ಆದಾಮನು ಪಾಪ ಮಾಡಿದನು. ಹಾಗಾಗಿ ಸದಾಕಾಲ ಜೀವಿಸುವ ಸದವಕಾಶವನ್ನು ಕಳೆದುಕೊಂಡನು ಮತ್ತು ಕಾಲಾನಂತರ ಸತ್ತನು. ಆತನ ಸಂತತಿಯವರಾದ ನಮಗೂ ಆ ಪಾಪವನ್ನು ದಾಟಿಸಿದನು. ಹೀಗೆ ಕಾಯಿಲೆ, ವೃದ್ಧಾಪ್ಯ ಮತ್ತು ಮರಣ ನಮ್ಮೆಲ್ಲರಿಗೆ ಬಂತು. ಅನುವಂಶೀಯ ಕಾಯಿಲೆಗಳು ಹೇಗೆ ಹೆತ್ತವರಿಂದ ಮಕ್ಕಳಿಗೆ ಬರುತ್ತವೋ ಅದೇ ರೀತಿ ಪಾಪ ಮತ್ತು ಮರಣ ನಮ್ಮೆಲ್ಲರಿಗೆ ಬಂತು. ಈ ಸಾವಿನ ದವಡೆಯಿಂದ ಬಿಡಿಸಲು ದೇವರು ಏನಾದರೂ ದಾರಿ ಮಾಡಿದ್ದಾನಾ?

ದೇವರು ಮಾಡಿರುವ ದಾರಿ

ಆದಾಮನು ಮಾನವರೆಲ್ಲರನ್ನು ಮರಣವೆಂಬ ಬಂಧನಕ್ಕೆ ತಳ್ಳಿದನು. ನಮ್ಮನ್ನು ಆ ಬಂಧನದಿಂದ ಬಿಡಿಸಲು ದೇವರು ದಾರಿ ಮಾಡಿದ್ದಾನೆ. ಯಾವುದು ಆ ದಾರಿ?

“ಪಾಪವು ಕೊಡುವ ಸಂಬಳ ಮರಣ” ಎನ್ನುತ್ತದೆ ರೋಮನ್ನರಿಗೆ 6:23. ಇದರರ್ಥ, ಪಾಪದ ಫಲಿತಾಂಶ ಮರಣವಾಗಿದೆ. ಆದಾಮನು ಪಾಪ ಮಾಡಿದನು, ಅದಕ್ಕೆ ಅವನು ಸತ್ತನು. ನಾವೂ ಪಾಪ ಮಾಡುತ್ತೇವೆ, ಹಾಗಾಗಿ ಪಾಪದ ಸಂಬಳವಾಗಿ ಸಾಯುತ್ತೇವೆ. ಆದರೆ ಗಮನಿಸಬೇಕಾದ ವಿಷಯ ಏನೆಂದರೆ ಆದಾಮ ಮಾಡಿದ ತಪ್ಪಿನಿಂದಾಗಿ ನಾವು ಹುಟ್ಟುತ್ತಲೇ ಪಾಪಿಗಳಾಗಿ ಹುಟ್ಟುತ್ತೇವೆ. ಅದರಲ್ಲಿ ನಮ್ಮದೇನೂ ತಪ್ಪಿಲ್ಲ. ಹಾಗಾಗಿ ದೇವರು ಪ್ರೀತಿಯಿಂದ ತನ್ನ ಮಗನಾದ ಯೇಸುವನ್ನು ನಮಗಾಗಿ ಕೊಟ್ಟನು. ಆತನು ನಮ್ಮ ಪರವಾಗಿ ಆ ಪಾಪದ ಸಂಬಳವೆಂಬ ಹೊರೆಯನ್ನು ಹೊರಲು ತನ್ನ ಮಗನನ್ನು ಕಳುಹಿಸಿದನು. ನಮ್ಮ ಪರವಾಗಿ ಯೇಸು ಹೇಗೆ ಆ ಪಾಪದ ಹೊರೆ ಹೊರಲು ಸಾಧ್ಯ?

ಪರದೈಸಿನಲ್ಲಿ ಎಲ್ಲಾ ರೀತಿಯ ಜನರು ಸಂತೋಷದಿಂದಿದ್ದಾರೆ

ಯೇಸುವಿನ ಮರಣ ನಾವು ಸದಾಕಾಲ ಸಂತೋಷದಿಂದ ಜೀವಿಸಲು ದಾರಿ ಮಾಡಿಕೊಟ್ಟಿತು

ಪರಿಪೂರ್ಣ ಮನುಷ್ಯನಾದ ಆದಾಮನೊಬ್ಬನ ಅವಿಧೇಯತೆಯಿಂದ ಪಾಪ ಮತ್ತು ಮರಣ ನಮ್ಮೆಲ್ಲರಿಗೂ ಬಂತು. ಅದೇರೀತಿ ಒಬ್ಬ ಪರಿಪೂರ್ಣ ಮನುಷ್ಯ ಸಾಯುವ ತನಕ ವಿಧೇಯನಾಗುವ ಮೂಲಕ ಪಾಪ ಮತ್ತು ಮರಣವೆಂಬ ಬಂಧನದಿಂದ ಬಿಡುಗಡೆ ಸಿಗುವುದು. ಬೈಬಲ್‌ ಇದರ ಬಗ್ಗೆ ಹೀಗೆ ತಿಳಿಸುತ್ತದೆ: “ಒಬ್ಬ ಮನುಷ್ಯನ ಅವಿಧೇಯತೆಯಿಂದ ಅನೇಕರು ಪಾಪಿಗಳಾಗಿ ಪರಿಗಣಿಸಲ್ಪಟ್ಟಂತೆಯೇ ಒಬ್ಬ ವ್ಯಕ್ತಿಯ ವಿಧೇಯತೆಯಿಂದ ಅನೇಕರು ನೀತಿವಂತರಾಗಿ ಪರಿಗಣಿಸಲ್ಪಡುವರು.” (ರೋಮನ್ನರಿಗೆ 5:19) ಆ “ಒಬ್ಬ ವ್ಯಕ್ತಿ” ಯೇಸು. ಅವನು ಭೂಮಿಗೆ ಪರಿಪೂರ್ಣ ಮನುಷ್ಯನಾಗಿa ಬಂದು ನಮಗಾಗಿ ಸತ್ತನು. ಇದರಿಂದ ದೇವರ ದೃಷ್ಟಿಯಲ್ಲಿ ನಾವು ನೀತಿವಂತರಾಗಿರಲು ಮತ್ತು ಸದಾಕಾಲ ಜೀವಿಸುವ ಅವಕಾಶ ಪಡೆಯಲು ಸಾಧ್ಯ.

ಯೇಸು ಏಕೆ ಕಷ್ಟವನ್ನು ಅನುಭವಿಸಿ ಸತ್ತನು?

ನಮ್ಮನ್ನು ಪಾಪ ಮತ್ತು ಮರಣದಿಂದ ಬಿಡುಗಡೆ ಮಾಡಲು ಯೇಸು ಏಕೆ ಸಾಯಬೇಕಿತ್ತು? ದೇವರು ಸರ್ವಶಕ್ತನಾಗಿರುವುದರಿಂದ ಆದಾಮನ ಪಾಪವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅವನ ಸಂತಾನದವರಿಗೆ ಸದಾಕಾಲ ಜೀವಿಸುವ ಅವಕಾಶ ಕೊಡಬಹುದಿತ್ತಲ್ಲಾ? ಎಂಬ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರಬಹುದು. ದೇವರಿಗೆ ಹೀಗೆ ಮಾಡಲು ಅಧಿಕಾರ ಇತ್ತು. ಒಂದುವೇಳೆ ದೇವರು ಹೀಗೆ ಮಾಡಿದ್ದರೆ ಪಾಪದ ಸಂಬಳ ಮರಣ ಎಂಬ ತನ್ನ ಆಜ್ಞೆಯನ್ನು ಸ್ವತಃ ತಾನೇ ಕಡೆಗಣಿಸಿದಂತಾಗುತ್ತಿತ್ತು. ಇಷ್ಟ ಬಂದಾಗ ಬದಲಾಯಿಸಿಕೊಂಡು ಬಿಟ್ಟುಬಿಡಲು ಅದೇನು ಚಿಕ್ಕ ನಿಯಮವಲ್ಲ. ಅದು ತುಂಬ ಪ್ರಾಮುಖ್ಯವಾದ ನಿಯಮ.—ಕೀರ್ತನೆ 37:28.

ಒಂದುವೇಳೆ ದೇವರು ನ್ಯಾಯವನ್ನು ಪಕ್ಕಕ್ಕಿಟ್ಟಿದ್ದರೆ ದೇವರು ಎಲ್ಲಾ ಸಮಯದಲ್ಲೂ ಇದೇ ರೀತಿ ಮಾಡುತ್ತಾನೇನೋ ಎಂದು ಜನ ಸಂಶಯಿಸುವ ಸಾಧ್ಯತೆ ಇತ್ತು. ಉದಾಹರಣೆಗೆ, ಆದಾಮನ ಸಂತತಿಯಲ್ಲಿ ಸದಾ ಜೀವಿಸಲು ಯಾರು ಯೋಗ್ಯರು ಎಂದು ದೇವರು ನ್ಯಾಯವಾಗಿಯೇ ನಿರ್ಧರಿಸುತ್ತಾನಾ? ಆತನು ಕೊಟ್ಟ ಮಾತಿನಂತೆ ನಡೆಯುತ್ತಾನೆ ಎಂದು ನಾವು ಭರವಸೆಯಿಡಬಹುದಾ? ಎಂಬ ಸಂಶಯಗಳು ಬರುತ್ತಿದ್ದವು. ಆದ್ದರಿಂದ ನಾವು ನಿತ್ಯಜೀವ ಪಡೆಯಲು ದೇವರು ನ್ಯಾಯವಾದ ರೀತಿಯಲ್ಲೇ ಏರ್ಪಾಡನ್ನು ಮಾಡಿದನು. ಹೀಗೆ ಮಾಡಿದ್ದು ‘ದೇವರು ಯಾವಾಗಲೂ ಸರಿಯಾದದ್ದನ್ನೇ ಮಾಡುತ್ತಾನೆ’ ಎಂಬ ಖಾತ್ರಿಯನ್ನು ನಮಗೆ ಕೊಡುತ್ತದೆ.

ದೇವರು ತನ್ನ ಮಗನಾದ ಯೇಸುವಿನ ಪ್ರಾಣವನ್ನು ನಮಗಾಗಿ ಕೊಟ್ಟನು. ಹೀಗೆ ನಾವು ಈ ಭೂಮಿಯ ಮೇಲೆ ಸದಾಕಾಲ ಜೀವಿಸಲು ದಾರಿ ಮಾಡಿದನು. ಯೋಹಾನ 3:16⁠ರಲ್ಲಿರುವ ಯೇಸುವಿನ ಮಾತುಗಳನ್ನು ಗಮನಿಸಿ: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” ಹೌದು, ಯೇಸುವಿನ ಮರಣವು ದೇವರ ನ್ಯಾಯವನ್ನು ಮಾತ್ರವಲ್ಲದೆ ಮಾನವರ ಮೇಲೆ ಆತನಿಗಿರುವ ಅಪಾರ ಪ್ರೀತಿಯನ್ನೂ ತೋರಿಸುತ್ತದೆ.

ಆದರೂ ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಿರುವಂತೆ ಯೇಸು ಏಕೆ ತುಂಬಾ ಕಷ್ಟಗಳನ್ನು ಅನುಭವಿಸಿ ನೋವಿನಿಂದ ಸಾಯಬೇಕಿತ್ತು? ಕಷ್ಟಗಳು ಬಂದಾಗ ಮಾನವರು ದೇವರಿಗೆ ನಂಬಿಗಸ್ತರಾಗಿ ಉಳಿಯುವುದಿಲ್ಲ ಎನ್ನುವುದು ಸೈತಾನನ ಆರೋಪವಾಗಿತ್ತು. ಯೇಸು ಅತೀವ ಕಷ್ಟಗಳ ಮಧ್ಯೆಯೂ ನಂಬಿಗಸ್ತನಾಗಿ ಉಳಿಯುವ ಮೂಲಕ ಸೈತಾನನ ಆರೋಪ ಶುದ್ಧ ಸುಳ್ಳು ಎಂದು ರುಜುಪಡಿಸಿದನು. (ಯೋಬ 2:4, 5) ಪರಿಪೂರ್ಣ ಆದಾಮನು ದೇವರಿಗೆ ಅವಿಧೇಯನಾದಾಗ ಸೈತಾನನ ಆರೋಪ ಸತ್ಯ ಎಂಬಂತೆ ತೋರಿರಬಹುದು. ಆದರೆ ಆದಾಮನಿಗೆ ಸರಿಸಮಾನನಾಗಿದ್ದ ಯೇಸು ಕಷ್ಟಗಳ ನಡುವೆಯೂ ದೇವರಿಗೆ ವಿಧೇಯನಾದನು. (1 ಕೊರಿಂಥ 15:45) ಇದರ ಮೂಲಕ ಆದಾಮನು ಕೂಡ ದೇವರಿಗೆ ವಿಧೇಯನಾಗಬಹುದಿತ್ತು ಎಂದು ಯೇಸು ತೋರಿಸಿದನು. ಕಷ್ಟಗಳನ್ನು ಸಹಿಸಿಕೊಳ್ಳುವ ಮೂಲಕ ಯೇಸು ನಮಗೆ ಅತ್ಯುತ್ತಮ ಮಾದರಿಯನ್ನು ಇಟ್ಟನು. (1 ಪೇತ್ರ 2:21) ಯೇಸು ಸಂಪೂರ್ಣ ವಿಧೇಯತೆ ತೋರಿಸಿದ್ದರಿಂದ ದೇವರು ಅವನಿಗೆ ಸ್ವರ್ಗದಲ್ಲಿ ಅಮರತ್ವವನ್ನು ಉಡುಗೊರೆಯಾಗಿ ಕೊಟ್ಟನು.

ನಮಗಿರುವ ಪ್ರಯೋಜನಗಳು

ಯೇಸು ನಮಗಾಗಿ ಸತ್ತದ್ದು ನಿಜ. ಹೀಗೆ ಅವನು ನಮಗೆ ಸದಾಕಾಲ ಜೀವಿಸಲು ದಾರಿ ಮಾಡಿಕೊಟ್ಟನು. ನೀವು ಸದಾ ಜೀವಿಸಲು ಬಯಸುತ್ತೀರಾ? ಅದಕ್ಕಾಗಿ ನೀವು ಏನು ಮಾಡಬೇಕೆಂದು ಯೇಸು ಹೇಳಿದ್ದಾನೆ: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.”—ಯೋಹಾನ 17:3.

ಸತ್ಯ ದೇವರಾದ ಯೆಹೋವನ ಬಗ್ಗೆ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಬಗ್ಗೆ ಹೆಚ್ಚನ್ನು ತಿಳಿಯುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಇದಕ್ಕೆ ನಿಮಗೆ ಹತ್ತಿರದಲ್ಲಿರುವ ಯೆಹೋವನ ಸಾಕ್ಷಿಗಳು ನೆರವು ನೀಡಲು ಸಂತೋಷಿಸುತ್ತಾರೆ. www.jw.org ವೆಬ್‌ಸೈಟಿನಲ್ಲಿ ಸಹ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ▪ (w16-E No.2)

a ದೇವರು ತನ್ನ ಮಗನ ಜೀವವನ್ನು ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿದನು. ಹೀಗೆ ಗರ್ಭಿಣಿಯಾದ ಮರಿಯಳಿಂದ ಯೇಸುವಿಗೆ ಅಪರಿಪೂರ್ಣತೆ ಬರದಂತೆ ದೇವರ ಪವಿತ್ರಾತ್ಮವು ಸಂರಕ್ಷಿಸಿತು.—ಲೂಕ 1:31, 35.

ಕ್ರಿಸ್ತನ ಮರಣದ ಸ್ಮರಣೆಯಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ದಾಟಿಸುತ್ತಿದ್ದಾರೆ

“ಇದನ್ನು ಮಾಡುತ್ತಾ ಇರಿ”

ಯೇಸು ಸಾಯುವುದಕ್ಕೆ ಹಿಂದಿನ ರಾತ್ರಿ ತನ್ನ ನಂಬಿಗಸ್ತ ಅಪೊಸ್ತಲರನ್ನು ಒಟ್ಟು ಸೇರಿಸಿ ತನ್ನ ಮರಣದ ಸ್ಮರಣೆಯನ್ನು ಆರಂಭಿಸಿದನು. ಆತನು ಅವರಿಗೆ ಹೇಳಿದ್ದು: “ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ.” (ಲೂಕ 22:19) ಈ ಆಜ್ಞೆಗೆ ವಿಧೇಯರಾಗಿ ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಪ್ರತಿ ವರ್ಷ ಯೇಸುವಿನ ಮರಣವನ್ನು ಸ್ಮರಿಸುತ್ತಾರೆ. ಕಳೆದ ವರ್ಷ 1,98,62,783 ಮಂದಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಈ ವರ್ಷ ಯೇಸುವಿನ ಮರಣದ ಸ್ಮರಣೆಯು ಮಾರ್ಚ್‌ 23, ಬುಧವಾರದಂದು ಸೂರ್ಯಾಸ್ತಮಾನದ ನಂತರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಾಜರಾಗಿ ಬೈಬಲಾಧಾರಿತ ಭಾಷಣವನ್ನು ಕೇಳಲು ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಆಮಂತ್ರಿಸುತ್ತೇವೆ. ಆ ಭಾಷಣದಲ್ಲಿ ಯೇಸುವಿನ ಮರಣದ ಪ್ರಾಮುಖ್ಯತೆ ಮತ್ತು ಅದರಿಂದ ನಮಗಿರುವ ಪ್ರಯೋಜನಗಳ ಬಗ್ಗೆ ತಿಳಿಸಲಾಗುವುದು. ಪ್ರವೇಶ ಉಚಿತ. ಹಣ ವಸೂಲಿ ಮಾಡುವುದಿಲ್ಲ. ಈ ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಸಮಯವನ್ನು ತಿಳಿಯಲು ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ, ಅಥವಾ www.jw.org ವೆಬ್‌ಸೈಟಿನಲ್ಲಿ ಹೆಚ್ಚಿನ ಮಾಹಿತಿ ಪಡೆಯಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ