ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಜುಲೈ ಪು. 31-ಪು. 32 ಪ್ಯಾ. 5
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ನಾನು ಆತ್ಮ-ರಕ್ಷಣೆಯನ್ನು ಕಲಿಯಬೇಕೊ?
    ಎಚ್ಚರ!—1995
  • ಆತ್ಮ ರಕ್ಷಣೆ—ಒಬ್ಬ ಕ್ರೈಸ್ತನು ಎಲ್ಲಿಯ ವರೆಗೆ ಹೋಗಸಾಧ್ಯವಿದೆ?
    ಎಚ್ಚರ!—1992
  • ಬಂದೂಕುಗಳು ಜೀವನದ ಒಂದು ರೀತಿ
    ಎಚ್ಚರ!—1991
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಜುಲೈ ಪು. 31-ಪು. 32 ಪ್ಯಾ. 5

ವಾಚಕರಿಂದ ಪ್ರಶ್ನೆಗಳು

ಒಬ್ಬ ಕ್ರೈಸ್ತನು ಬೇರೆ ಮನುಷ್ಯರಿಂದ ತನ್ನನ್ನು ರಕ್ಷಿಸಿಕೊಳ್ಳಲು ಯಾವುದೇ ವಿಧದ ಬಂದೂಕನ್ನು ಇಟ್ಟುಕೊಳ್ಳುವುದು ಸರಿಯಾಗಿರುತ್ತಾ?

ಕ್ರೈಸ್ತರು ಆತ್ಮರಕ್ಷಣೆಗಾಗಿ ಏನು ಮಾಡಬೇಕೆಂದು ತೀರ್ಮಾನಿಸುವಾಗ ಬೈಬಲ್‌ ತತ್ವಗಳನ್ನು ಪಾಲಿಸುತ್ತಾರೆ. ಬೇರೆ ಮನುಷ್ಯರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪಿಸ್ತೂಲು, ರೈಫಲ್ಲು, ಬೇರೆ ರೀತಿಯ ಬಂದೂಕುಗಳು ಹೀಗೆ ಯಾವುದೇ ರೀತಿಯ ಆಯುಧವನ್ನು ಬಳಸುವುದು ತಪ್ಪೆಂದು ಬೈಬಲ್‌ ತತ್ವಗಳು ತೋರಿಸುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ಕೆಳಗಿರುವ ಅಂಶಗಳು ಸಹಾಯ ಮಾಡುತ್ತವೆ.

ಯೆಹೋವನ ದೃಷ್ಟಿಯಲ್ಲಿ ಮಾನವ ಜೀವ ಅಮೂಲ್ಯ. ಕೀರ್ತನೆಗಾರನಾದ ದಾವೀದನು ಯೆಹೋವನ ಬಗ್ಗೆ, “ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ” ಎಂದು ಬರೆದಿದ್ದಾನೆ. (ಕೀರ್ತ. 36:9) ಆದ್ದರಿಂದ ಒಬ್ಬ ಕ್ರೈಸ್ತನು ತನ್ನ ಮತ್ತು ತನ್ನ ಮನೆ ಅಥವಾ ಆಸ್ತಿಯ ಭದ್ರತೆಗೆಂದು ಏನಾದರೂ ಏರ್ಪಾಡು ಮಾಡಿದರೆ ಅದರಿಂದ ಇನ್ನೊಬ್ಬನ ಜೀವಕ್ಕೆ ಹಾನಿ ಆಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅವನ ಮೇಲೆ ರಕ್ತಾಪರಾಧ ಬರುತ್ತದೆ.—ಧರ್ಮೋ. 22:8; ಕೀರ್ತ. 51:14.

ತನ್ನನ್ನೇ ರಕ್ಷಿಸಿಕೊಳ್ಳಲಿಕ್ಕಾಗಿ ಒಬ್ಬ ವ್ಯಕ್ತಿ ಉಪಯೋಗಿಸುವ ಯಾವುದೇ ವಸ್ತುವಿನಿಂದ ಅವನ ಮೇಲೆ ರಕ್ತಾಪರಾಧ ಬರುವ ಸಾಧ್ಯತೆ ಇದೆ ನಿಜ. ಆದರೆ ಒಂದು ಬಂದೂಕಿನಿಂದ ಒಬ್ಬರ ಜೀವ ಹೋಗುವ ಸಾಧ್ಯತೆ ಹೆಚ್ಚು. ಅಪ್ಪಿತಪ್ಪಿ ಗುಂಡು ಹಾರಿದರೂ ಜೀವ ಹೋಗಬಹುದು.a ದಾಳಿ ಮಾಡುತ್ತಿರುವ ವ್ಯಕ್ತಿ ಮೊದಲೇ ಉದ್ರೇಕಗೊಂಡಿರುತ್ತಾನೆ. ಅದರಲ್ಲಿ ಅವನು ಬಂದೂಕನ್ನು ನೋಡಿಬಿಟ್ಟರೆ ಸನ್ನಿವೇಶ ಇನ್ನು ಅಪಾಯಕಾರಿ ಆಗಿಬಿಡಬಹುದು. ಒಬ್ಬರ ಜೀವನೇ ಹೋಗಬಹುದು.

ಯೇಸು ಸಾಯಲಿಕ್ಕಿದ್ದ ಹಿಂದಿನ ರಾತ್ರಿ ತನ್ನ ಹಿಂಬಾಲಕರು ಕತ್ತಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದು ಅವರ ಸ್ವಂತ ರಕ್ಷಣೆಗಾಗಿ ಅಲ್ಲ. (ಲೂಕ 22:36, 38) ಯೇಸು ಅವರಿಗೆ ಒಂದು ಪಾಠ ಕಲಿಸಲು ಬಯಸಿದನು. ಅದೇನೆಂದರೆ, ಅವನ ಹಿಂಬಾಲಕರು ಯಾವ ಕಾರಣಕ್ಕೂ ಹಿಂಸಾಚಾರ ಮಾಡಬಾರದು. ಶಸ್ತ್ರಸಜ್ಜಿತ ಜನರ ಗುಂಪು ಎದುರಾದರೂ ಆಯುಧಗಳನ್ನು ಬಳಸಬಾರದೆಂದು ಕಲಿಸಲು ಬಯಸಿದನು. (ಲೂಕ 22:52) ಪೇತ್ರನು ತನ್ನ ಕತ್ತಿಯನ್ನು ತೆಗೆದು ಮಹಾ ಯಾಜಕನ ಸೇವಕನ ಮೇಲೆ ಹಲ್ಲೆ ಮಾಡಿದಾಗ ಯೇಸು ಅವನಿಗೆ, “ನಿನ್ನ ಕತ್ತಿಯನ್ನು ಒರೆಗೆ ಸೇರಿಸು” ಎಂದು ಆಜ್ಞಾಪಿಸಿದನು. ಆಮೇಲೆ ಅವನು ಈ ತತ್ವ ಕೊಟ್ಟನು: “ಕತ್ತಿಯನ್ನು ಹಿಡಿಯುವವರೆಲ್ಲರು ಕತ್ತಿಯಿಂದಲೇ ನಾಶವಾಗುವರು.” ಇಂದು ಸಹ ಕ್ರೈಸ್ತರು ಏನು ಮಾಡಬೇಕೆಂದು ಈ ತತ್ವ ತೋರಿಸಿಕೊಡುತ್ತದೆ.—ಮತ್ತಾ. 26:51, 52.

ಮೀಕ 4:3​ರಲ್ಲಿ ಮುಂತಿಳಿಸಿರುವಂತೆ ದೇವರ ಜನರು “ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು.” ನಿಜ ಕ್ರೈಸ್ತರು ಶಾಂತಿಶೀಲರೆಂದು ಜನರಿಗೆ ಗೊತ್ತು. ದೇವರು ಅಪೊಸ್ತಲ ಪೌಲನ ಮೂಲಕ ಕೊಟ್ಟ ಆಜ್ಞೆಗಳನ್ನು ಅವರು ಪಾಲಿಸುತ್ತಾ “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು” ಮಾಡುವುದಿಲ್ಲ. “ಎಲ್ಲರೊಂದಿಗೆ ಶಾಂತಿಶೀಲರಾಗಿ” ಇರುತ್ತಾರೆ. (ರೋಮ. 12:17, 18) ಪೌಲನು ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದಾಗಲೂ, “ದಾರಿಗಳ್ಳರಿಂದ ಅಪಾಯಗಳು” ಬಂದಾಗಲೂ ತನ್ನನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಬೈಬಲ್‌ ತತ್ವಗಳನ್ನು ಮೀರಲಿಲ್ಲ. (2 ಕೊರಿಂ. 11:26) ಅವನು ದೇವರಲ್ಲಿ ಭರವಸೆ ಇಟ್ಟನು ಮತ್ತು ಬೈಬಲ್‌ ಕೊಡುವ ಸಲಹೆ “ಯುದ್ಧಾಯುಧಗಳಿಗಿಂತ . . . ಉತ್ತಮ” ಎಂದು ಅರ್ಥಮಾಡಿಕೊಂಡನು.—ಪ್ರಸಂ. 9:18.

ಕ್ರೈಸ್ತರಿಗೆ ಹಣ ವಸ್ತುಗಳಿಗಿಂತ ಜೀವ ಮುಖ್ಯ. ಒಬ್ಬ ವ್ಯಕ್ತಿ “ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು” ಎಂದು ನಮಗೆ ಗೊತ್ತು. (ಲೂಕ 12:15) ಆದ್ದರಿಂದ ಬಂದೂಕು ಹಿಡಿದು ಬೆದರಿಸುತ್ತಿರುವ ಕಳ್ಳನ ಹತ್ತಿರ ಮೃದುವಾಗಿ ಮಾತಾಡಿಯೂ ಪ್ರಯೋಜನ ಆಗಿಲ್ಲವಾದರೆ “ದುಷ್ಟನನ್ನು ಎದುರಿಸಬೇಡಿ” ಎಂಬ ಯೇಸುವಿನ ಬುದ್ಧಿವಾದವನ್ನು ಪಾಲಿಸುತ್ತೇವೆ. ಅಂದರೆ ಕಳ್ಳನಿಗೆ ಏನು ಬೇಕೋ ಅದನ್ನು ಕೊಟ್ಟು ಬಿಡುತ್ತೇವೆ. (ಮತ್ತಾ. 5:39, 40; ಲೂಕ 6:29)b ಇದಕ್ಕಿಂತಲೂ ಉತ್ತಮ ಏನೆಂದರೆ, ನಾವು ದುಷ್ಟರ ಕಣ್ಣಿಗೆ ಬೀಳದಿರುವುದು. ಬೈಬಲ್‌ ಕೊಡುವ ಸಲಹೆಯನ್ನು ಪಾಲಿಸುತ್ತಾ “ಜೀವನೈಶ್ವರ್ಯದ ಆಡಂಬರ ಪ್ರದರ್ಶನ” ಮಾಡದೆ ಇದ್ದರೆ ನಮ್ಮ ಮೇಲೆ ದಾಳಿಯಾಗುವ ಸಾಧ್ಯತೆ ಕಡಿಮೆ. (1 ಯೋಹಾ. 2:16) ನಾವು ಶಾಂತಿಯಿಂದ ಇರಲು ಬಯಸುವ ಯೆಹೋವನ ಸಾಕ್ಷಿಗಳೆಂದು ನಮ್ಮ ಅಕ್ಕಪಕ್ಕದ ಮನೆಯವರಿಗೆ ಗೊತ್ತಿದ್ದರೆ ಅದರಿಂದ ಸಹ ಸಂರಕ್ಷಣೆ ಸಿಗುತ್ತದೆ.—ಜ್ಞಾನೋ. 18:10.

ಕ್ರೈಸ್ತರು ಬೇರೆಯವರ ಮನಸ್ಸಾಕ್ಷಿಯನ್ನು ಗೌರವಿಸುತ್ತಾರೆ. (ರೋಮ. 14:21) ತಮ್ಮ ಕ್ರೈಸ್ತ ಸಹೋದರನೊಬ್ಬ ಬೇರೆ ಮನುಷ್ಯರಿಂದ ತನ್ನನ್ನೇ ರಕ್ಷಿಸಿಕೊಳ್ಳಲು ಗನ್‌ ಇಟ್ಟುಕೊಂಡಿದ್ದಾನೆ ಎಂದು ಕೆಲವು ಸಹೋದರ ಸಹೋದರಿಯರಿಗೆ ಗೊತ್ತಾದರೆ ಆಘಾತ ಆಗಬಹುದು, ಎಡವಬಹುದು. ಆದ್ದರಿಂದ, ಅದನ್ನು ಇಟ್ಟುಕೊಳ್ಳಲು ನಮಗೆ ಪರವಾನಗಿ ಇದ್ದರೂ ನಾವು ನಮ್ಮ ಸಹೋದರರನ್ನು ಪ್ರೀತಿಸುವುದರಿಂದ ಅವರು ಎಡವುವಂತೆ ಮಾಡುವ ಯಾವುದೇ ವಿಷಯವನ್ನು ಮಾಡುವುದಿಲ್ಲ.—1 ಕೊರಿಂ. 10:32, 33; 13:4, 5.

ಕ್ರೈಸ್ತರು ಬೇರೆಯವರಿಗೆ ಒಳ್ಳೇ ಮಾದರಿ ಇಡುತ್ತಾರೆ. (2 ಕೊರಿಂ. 4:2; 1 ಪೇತ್ರ 5:2, 3) ಒಬ್ಬ ಕ್ರೈಸ್ತನು ಬೇರೆ ಮನುಷ್ಯರಿಂದ ತನ್ನನ್ನು ರಕ್ಷಿಸಿಕೊಳ್ಳಲು ಬಂದೂಕು ಇಟ್ಟುಕೊಂಡಿದ್ದರೆ ಹಿರಿಯರು ಅವನಿಗೆ ಬೈಬಲಿನಿಂದ ಬುದ್ಧಿಮಾತನ್ನು ಹೇಳುತ್ತಾರೆ. ಇದರ ನಂತರವೂ ಅವನು ಬಂದೂಕನ್ನು ಇಟ್ಟುಕೊಂಡಿದ್ದರೆ ಅವನು ಒಳ್ಳೇ ಮಾದರಿ ಆಗಿರಲ್ಲ. ಈ ಕಾರಣದಿಂದ ಅವನಿಗೆ ಸಭೆಯಲ್ಲಿ ಯಾವುದೇ ಜವಾಬ್ದಾರಿಗಳು, ವಿಶೇಷ ಸುಯೋಗಗಳು ಸಿಗುವುದಿಲ್ಲ. ಇದೇ ವಿಷಯ ತನ್ನ ಕೆಲಸದ ನಿಮಿತ್ತವಾಗಿ ಬಂದೂಕನ್ನು ಹಿಡಿಯಬೇಕಾದ ಕ್ರೈಸ್ತನಿಗೂ ಅನ್ವಯಿಸುತ್ತದೆ. ಅವನು ಬೇರೆ ಕೆಲಸ ಹುಡುಕಿಕೊಂಡರೆ ಉತ್ತಮ.c

ಒಬ್ಬ ಕ್ರೈಸ್ತನು ತನ್ನನ್ನು, ತನ್ನ ಕುಟುಂಬವನ್ನು, ತನ್ನ ಆಸ್ತಿಪಾಸ್ತಿಯನ್ನು ಹೇಗೆ ಸಂರಕ್ಷಿಸಬೇಕು ಮತ್ತು ಯಾವ ಕೆಲಸ ಮಾಡಬೇಕು ಅನ್ನುವ ವಿಷಯದಲ್ಲಿ ಸ್ವಂತ ತೀರ್ಮಾನಗಳನ್ನು ಮಾಡಬೇಕು. ಆದರೆ ಈ ತೀರ್ಮಾನಗಳನ್ನು ಅವನು ಬೈಬಲ್‌ ತತ್ವಗಳ ಮೇಲಾಧರಿಸಿ ಮಾಡಬೇಕು. ವಿವೇಕಿಯಾದ ನಮ್ಮ ದೇವರು ನಮ್ಮನ್ನು ಪ್ರೀತಿಸುವುದರಿಂದ ಈ ತತ್ವಗಳನ್ನು ಕೊಟ್ಟಿದ್ದಾನೆ. ಆದ್ದರಿಂದಲೇ, ಯೆಹೋವನೊಂದಿಗೆ ಬಲವಾದ ಸಂಬಂಧ ಇಟ್ಟುಕೊಂಡಿರುವ ಕ್ರೈಸ್ತರು ಬೇರೆ ಮನುಷ್ಯರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಂದೂಕನ್ನು ಇಟ್ಟುಕೊಳ್ಳುವುದಿಲ್ಲ. ದೇವರಲ್ಲಿ ನಂಬಿಕೆ ಇಟ್ಟು ತಮ್ಮ ಜೀವನದಲ್ಲಿ ಬೈಬಲ್‌ ತತ್ವಗಳನ್ನು ಪಾಲಿಸಿದರೆ ಅವರಿಗೆ ನಿಜವಾದ ಭದ್ರತೆ ಶಾಶ್ವತಕ್ಕೂ ಇರುವುದೆಂದು ಗೊತ್ತು.—ಕೀರ್ತ. 97:10; ಜ್ಞಾನೋ. 1:33; 2:6, 7.

ಮಹಾ ಸಂಕಟದಲ್ಲಿ ಆಕ್ರಮಣಕ್ಕೆ ಒಳಗಾಗಿರುವ ಕ್ರೈಸ್ತರು ತಮ್ಮ ರಕ್ಷಣೆಗಾಗಿ ಯೆಹೋವನ ಮೇಲೆ ಆತುಕೊಳ್ಳುತ್ತಾರೆ

ಮಹಾ ಸಂಕಟದ ಸಮಯದಲ್ಲಿ ಕ್ರೈಸ್ತರು ಯೆಹೋವನ ಮೇಲೆ ಅವಲಂಬಿಸುತ್ತಾರೆ, ತಮ್ಮನ್ನು ರಕ್ಷಿಸಿಕೊಳ್ಳಲು ಹೋರಾಡುವುದಿಲ್ಲ

a ಒಬ್ಬ ಕ್ರೈಸ್ತನು ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಲು ಅಥವಾ ಕಾಡು ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಒಂದು ಬಂದೂಕನ್ನು (ರೈಫಲ್ಲು ಅಥವಾ ಕೋವಿ) ಇಟ್ಟುಕೊಳ್ಳಲು ತೀರ್ಮಾನಿಸಬಹುದು. ಅದನ್ನು ಬಳಸದಿರುವ ಸಮಯದಲ್ಲಿ ಅದರಿಂದ ಗುಂಡುಗಳನ್ನು ತೆಗೆದಿಡಬೇಕು. ಬಂದೂಕನ್ನು ಬಿಡಿಬಿಡಿಯಾಗಿ ಬಿಚ್ಚಿ ಸುರಕ್ಷಿತವಾದ ಸ್ಥಳದಲ್ಲಿ ಬೀಗ ಹಾಕಿ ಇಡುವುದು ಒಳ್ಳೇದು. ಬಂದೂಕು ಇಟ್ಟುಕೊಳ್ಳುವುದನ್ನು ಕಾನೂನು ನಿಷೇಧಿಸಿದರೆ ಅಥವಾ ಬಂದೂಕನ್ನು ಇಟ್ಟುಕೊಳ್ಳುವುದರ ಬಗ್ಗೆ ಕೆಲವು ಕಾನೂನು-ಕಾಯಿದೆಗಳಿದ್ದರೆ ಕ್ರೈಸ್ತರು ಅದನ್ನು ಪಾಲಿಸಬೇಕು.—ರೋಮ. 13:1.

b ಅತ್ಯಾಚಾರದಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳಲು ಜೂನ್‌ 8, 1993ರ ಎಚ್ಚರ! ಪತ್ರಿಕೆಯಲ್ಲಿ ಬಂದ “ಬಲಾತ್ಕಾರ ಸಂಭೋಗವನ್ನು ತಡೆಯುವ ವಿಧ” ಎಂಬ ಲೇಖನ ನೋಡಿ.

c ಬಂದೂಕನ್ನು ಹಿಡಿಯಬೇಕಾದ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾವಲಿನಬುರುಜು 2005 ನವೆಂಬರ್‌ 1ರ ಸಂಚಿಕೆ ಪುಟ 31 ಮತ್ತು 1984 ಫೆಬ್ರವರಿ 1ರ ಸಂಚಿಕೆ ಪುಟ 23, 24 ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ