ನಿಮ್ಮ ಭವಿಷ್ಯ, ನಿಮ್ಮದೇ ಆಯ್ಕೆ!
ನಿಮ್ಮ ಭವಿಷ್ಯ ಹೇಗಿರಬೇಕೆಂದು ಆಯ್ಕೆ ಮಾಡುವ ಅವಕಾಶ ನಿಜವಾಗಲೂ ನಿಮಗಿದೆಯಾ? ನಮ್ಮ ಜೀವನ ಹೇಗಿರಬೇಕೆಂದು ಹಣೆಯಲ್ಲಿ ಬರೆಯಲಾಗಿದೆ ಅಥವಾ ಮೊದಲೇ ನಿರ್ಧರಿಸಲಾಗಿದೆ, ಅದು ನಮ್ಮ ಕೈಯಲ್ಲಿಲ್ಲ, ನಾವು ಆಯ್ಕೆ ಮಾಡಲು ಆಗುವುದಿಲ್ಲ ಅಂತ ಕೆಲವರು ನಂಬುತ್ತಾರೆ. ಯಾವುದಾದರೊಂದು ಗುರಿಯನ್ನು ತಲುಪಲು ಆಗದಿದ್ದಾಗ ‘ನನ್ನ ಹಣೆಯಲ್ಲಿ ಅದು ಬರೆದಿಲ್ಲ, ಏನು ಮಾಡೋಕ್ಕಾಗುತ್ತೆ?’ ಎನ್ನುತ್ತಾರೆ.
ಇನ್ನು ಕೆಲವರು, ತಾವು ಏನೇ ಮಾಡಿದರೂ ಈ ಲೋಕದ ದಬ್ಬಾಳಿಕೆ, ಅನ್ಯಾಯದಿಂದ ತಪ್ಪಿಸಿಕೊಳ್ಳಲು ಆಗದಿರುವುದನ್ನು ನೋಡಿ ನಿರಾಶರಾಗಿದ್ದಾರೆ. ತಮ್ಮ ಜೀವನವನ್ನು ಉತ್ತಮಗೊಳಿಸಲು ಅವರು ಪ್ರಯತ್ನಿಸಿರಬಹುದು. ಆದರೂ ಯುದ್ಧ, ಅಪರಾಧಗಳು, ನೈಸರ್ಗಿಕ ವಿಪತ್ತುಗಳು, ಕಾಯಿಲೆಗಳು ಪುನಃ ಪುನಃ ಅವರ ಯೋಜನೆಗಳನ್ನು ಬುಡಮೇಲು ಮಾಡಿರುತ್ತವೆ. ಆದ್ದರಿಂದ ‘ಏನ್ ಮಾಡಿದ್ರೂ ಅಷ್ಟೇ’ ಎಂದವರು ಸುಮ್ಮನಾಗಿ ಬಿಟ್ಟಿದ್ದಾರೆ.
ಜೀವನದ ಸನ್ನಿವೇಶಗಳು ನಿಮ್ಮ ಯೋಜನೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲವು ಎನ್ನುವುದು ನಿಜ. (ಪ್ರಸಂಗಿ 9:11) ಆದರೆ, ನಿಮ್ಮ ಶಾಶ್ವತ ಭವಿಷ್ಯದ ಕುರಿತು ನಿಮಗೆ ಆಯ್ಕೆ ಮಾಡಿಕೊಳ್ಳಲು ನಿಜವಾಗಿಯೂ ಅವಕಾಶ ಇದೆ. ನಿಮ್ಮ ಭವಿಷ್ಯ ನಿಮ್ಮ ಆಯ್ಕೆಯ ಮೇಲೆ ಹೊಂದಿಕೊಂಡಿದೆ ಎಂದು ಬೈಬಲ್ ತೋರಿಸುತ್ತದೆ. ಅದು ಏನು ಹೇಳುತ್ತದೆಂದು ಗಮನಿಸಿ.
ಪುರಾತನ ಇಸ್ರಾಯೇಲ್ ಜನಾಂಗದವರು ದೇವರು ಕೊಡುತ್ತೇನೆಂದು ಮಾತುಕೊಟ್ಟಿದ್ದ ದೇಶವನ್ನು ಪ್ರವೇಶಿಸಲಿದ್ದಾಗ ಅವರ ನಾಯಕನಾಗಿದ್ದ ಮೋಶೆ ಹೀಗೆ ಹೇಳಿದನು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ. . . . ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ.”—ಧರ್ಮೋಪದೇಶಕಾಂಡ 30:15, 19, 20.
‘ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ; ನೀವು ಜೀವವನ್ನೇ ಆದುಕೊಳ್ಳಿರಿ.’—ಧರ್ಮೋಪದೇಶಕಾಂಡ 30:19
ಆ ಇಸ್ರಾಯೇಲ್ಯರನ್ನು ಐಗುಪ್ತದ ಗುಲಾಮಗಿರಿಯಿಂದ ಬಿಡುಗಡೆ ಮಾಡಿ ಹೊರತಂದ ನಂತರ ದೇವರು ಅವರ ಮುಂದೆ, ತಾನು ಮಾತುಕೊಟ್ಟಿದ್ದ ದೇಶದಲ್ಲಿ ಸ್ವತಂತ್ರ, ಸಂತೋಷದ ಜೀವನದ ನಿರೀಕ್ಷೆಯನ್ನು ಇಟ್ಟನು. ಆದರೆ ಇದು ಅವರಿಗೆ ತನ್ನಿಂದ ತಾನೇ ಸಿಗುತ್ತಿರಲಿಲ್ಲ. ಆ ಆಶೀರ್ವಾದಗಳನ್ನು ಪಡೆಯಲಿಕ್ಕೆ ಅವರು ‘ಜೀವವನ್ನು ಆದುಕೊಳ್ಳಬೇಕಿತ್ತು.’ ಹೇಗೆ? ‘ದೇವರನ್ನು ಪ್ರೀತಿಸಿ, ಆತನ ಮಾತಿಗೆ ವಿಧೇಯರಾಗಿ, ಆತನನ್ನು ಹೊಂದಿಕೊಂಡೇ ಇರುವ ಮೂಲಕ.’
ಇಂದು ನಿಮ್ಮ ಮುಂದೆ ಸಹ ಇಂಥದ್ದೇ ಆಯ್ಕೆ ಇದೆ. ನಿಮ್ಮ ಭವಿಷ್ಯವು ನೀವೇನು ಆರಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಹೊಂದಿಕೊಂಡಿದೆ. ನೀವು ಜೀವವನ್ನೇ ಆರಿಸಿಕೊಳ್ಳಲು ಸಾಧ್ಯ. ಅದೂ, ಸುಂದರ ತೋಟದಂತಿರುವ ಭೂಮಿಯಲ್ಲಿ ಶಾಶ್ವತ ಜೀವನ! ಆದರೆ ಅದಕ್ಕಾಗಿ ನೀವು ಸಹ ದೇವರನ್ನು ಪ್ರೀತಿಸಿ, ಆತನ ಮಾತಿಗೆ ವಿಧೇಯರಾಗಿ ಮತ್ತು ಆತನನ್ನೇ ಹೊಂದಿಕೊಳ್ಳಬೇಕು. ಈ ಮೂರು ವಿಷಯಗಳನ್ನು ಮಾಡುವುದರಲ್ಲಿ ಏನೆಲ್ಲಾ ಒಳಗೂಡಿದೆ?
ದೇವರನ್ನು ಪ್ರೀತಿಸಿ
ಪ್ರೀತಿಯು ದೇವರ ಮುಖ್ಯ ಗುಣ. ಯೇಸುವಿನ ಶಿಷ್ಯನಾದ ಯೋಹಾನನು ದೇವರ ಪ್ರೇರಣೆಯಿಂದ ಹೀಗೆ ಬರೆದನು: “ದೇವರು ಪ್ರೀತಿಯಾಗಿದ್ದಾನೆ.” (1 ಯೋಹಾನ 4:8) ಆದ್ದರಿಂದಲೇ, ಅತಿ ದೊಡ್ಡ ಆಜ್ಞೆ ಯಾವುದೆಂದು ಒಬ್ಬನು ಕೇಳಿದಾಗ ಯೇಸು, “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು” ಎಂದು ಹೇಳಿದನು. (ಮತ್ತಾಯ 22:37) ಯೆಹೋವ ದೇವರೊಂದಿಗಿನ ನಿಜ ಸಂಬಂಧಕ್ಕೆ ಆಧಾರ ಆತನ ಮೇಲಿನ ಪ್ರೀತಿ ಆಗಿರಬೇಕೇ ಹೊರತು ಭಯ ಅಥವಾ ಕುರುಡು ವಿಧೇಯತೆ ಅಲ್ಲ. ಆದರೆ, ನಾವು ಆತನನ್ನು ಪ್ರೀತಿಸುವ ಆಯ್ಕೆ ಯಾಕೆ ಮಾಡಬೇಕು?
ಯೆಹೋವನಿಗೆ ಮಾನವರ ಮೇಲಿರುವ ಪ್ರೀತಿಯು ಹೆತ್ತವರಿಗೆ ತಮ್ಮ ಮಕ್ಕಳ ಮೇಲಿರುವ ಅಪಾರ ಪ್ರೀತಿಯಂತಿದೆ. ಹೆತ್ತವರಲ್ಲಿ ಕುಂದುಕೊರತೆಗಳಿದ್ದರೂ ತಮ್ಮ ಮಕ್ಕಳಿಗೆ ಮಾರ್ಗದರ್ಶನ, ಉತ್ತೇಜನ, ಬೆಂಬಲ, ಶಿಸ್ತು ನೀಡುತ್ತಾರೆ. ಕಾರಣ ತಮ್ಮ ಮಕ್ಕಳು ಸಂತೋಷವಾಗಿರಬೇಕು, ಯಶಸ್ಸು ಪಡೆಯಬೇಕು ಎಂದವರು ಬಯಸುತ್ತಾರೆ. ಇದಕ್ಕೆ ಪ್ರತಿಯಾಗಿ ಮಕ್ಕಳೇನು ಮಾಡಬೇಕೆಂದು ಅವರು ನಿರೀಕ್ಷಿಸುತ್ತಾರೆ? ಮಕ್ಕಳು ತಮ್ಮನ್ನು ಪ್ರೀತಿಸಬೇಕು ಮತ್ತು ಅವರ ಒಳಿತಿಗಾಗಿ ಏನನ್ನು ಕಲಿಸಿದ್ದಾರೊ ಅದನ್ನು ಹೃದಯಕ್ಕೆ ತೆಗೆದುಕೊಳ್ಳಬೇಕು ಎಂದು ನಿರೀಕ್ಷಿಸುತ್ತಾರೆ. ಹಾಗಿರುವಾಗ ಸ್ವರ್ಗದಲ್ಲಿರುವ ನಮ್ಮ ಪರಿಪೂರ್ಣ ತಂದೆ ನಮಗಾಗಿ ಮಾಡಿದ್ದೆಲ್ಲದ್ದಕ್ಕಾಗಿ ನಾವಾತನಿಗೆ ಪ್ರೀತಿ, ಗಣ್ಯತೆ ತೋರಿಸಬೇಕೆಂದು ಬಯಸುವುದು ನ್ಯಾಯವಲ್ಲವೇ?
ಆತನ ಮಾತಿಗೆ ವಿಧೇಯರಾಗಿರಿ
ನಾವು ದೇವರಿಗೆ ವಿಧೇಯರಾಗಬೇಕೆಂದರೆ ಆತನು ಏನು ಹೇಳುತ್ತಾನೆಂದು ಮೊದಲು ಕಲಿಯಬೇಕು. ಆದರೆ ದೇವರು ನಮ್ಮ ಹತ್ತಿರ ನೇರವಾಗಿ ಮಾತಾಡುವುದಿಲ್ಲ. ಆದ್ದರಿಂದ ಆತನ ವಾಕ್ಯವಾದ ಬೈಬಲನ್ನು ಓದಿ ಅನ್ವಯಿಸುವ ಮೂಲಕ ನಾವು ಆತನಿಗೆ ವಿಧೇಯರಾಗಬಹುದು.—1 ಯೋಹಾನ 5:3.
ಯೇಸು ಒಮ್ಮೆ ದೇವರ ಮಾತಿಗೆ ವಿಧೇಯರಾಗುವುದರ ಮಹತ್ವವನ್ನು ಈ ಮಾತುಗಳಲ್ಲಿ ತಿಳಿಸಿದನು: “ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು.” (ಮತ್ತಾಯ 4:4) ನಮಗೆ ಆಹಾರ ತುಂಬ ಮುಖ್ಯ, ಆದರೆ ದೇವರ ಬಗ್ಗೆ ಜ್ಞಾನ ಪಡೆದುಕೊಳ್ಳುವುದು ಅದಕ್ಕಿಂತ ಹೆಚ್ಚು ಮುಖ್ಯ. ಯಾಕೆ? ವಿವೇಕಿ ರಾಜ ಸೊಲೊಮೋನನು ಹೀಗೆ ಹೇಳಿದ್ದಾನೆ: “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:12) ದೇವರು ಕೊಡುವ ಜ್ಞಾನ, ವಿವೇಕ ನಮಗಿಂದು ಸಂರಕ್ಷಣೆ ನೀಡುತ್ತದೆ ಮತ್ತು ವಿವೇಕಭರಿತ ಆಯ್ಕೆಮಾಡಲು ಸಹಾಯ ಮಾಡುತ್ತದೆ. ಈ ಆಯ್ಕೆಯೇ ಭವಿಷ್ಯದಲ್ಲಿ ಶಾಶ್ವತ ಜೀವನಕ್ಕೆ ನಡೆಸುತ್ತದೆ.
ಆತನನ್ನು ಹೊಂದಿಕೊಂಡಿರಿ
ಹಿಂದಿನ ಲೇಖನದಲ್ಲಿ ಕೊಡಲಾದ ಯೇಸುವಿನ ಮಾತುಗಳನ್ನು ಸ್ವಲ್ಪ ನೆನಪಿಸಿಕೊಳ್ಳಿ. ಆತನಂದದ್ದು: “ಜೀವಕ್ಕೆ ನಡಿಸುವ ಬಾಗಿಲು ಇಕ್ಕಟ್ಟಾಗಿಯೂ ದಾರಿಯು ಬಿಕ್ಕಟ್ಟಾಗಿಯೂ ಇದೆ ಮತ್ತು ಅದನ್ನು ಕಂಡುಕೊಳ್ಳುವವರು ಕೊಂಚವೇ ಜನ.” (ಮತ್ತಾಯ 7:13, 14) ಇಂಥ ದಾರಿಯಲ್ಲಿ ನಡೆಯುವಾಗ, ನಮ್ಮ ಜೊತೆ ಒಬ್ಬ ನಿಪುಣ ಮಾರ್ಗದರ್ಶಕ ಇರಬೇಕು ಮತ್ತು ನಾವಾತನಿಗೆ ಹತ್ತಿರದಲ್ಲಿ ಇದ್ದರೆ ಮಾತ್ರ ಹೋಗಬೇಕೆಂದಿರುವ ಸ್ಥಳ ತಲಪಲಿಕ್ಕಾಗುತ್ತದೆ. ಇದರರ್ಥ ನಾವು ನಿತ್ಯ ಜೀವ ಪಡೆಯಬೇಕಾದರೆ ದೇವರಿಗೆ ಆಪ್ತರಾಗಿ ಉಳಿಯಬೇಕು. (ಕೀರ್ತನೆ 16:8) ಇದನ್ನು ಮಾಡುವುದಾದರೂ ಹೇಗೆ?
ದೇವರು ನಮ್ಮಿಂದ ಏನು ಬಯಸುತ್ತಾನೆಂದು ತಿಳಿದುಕೊಳ್ಳಲು ನಮಗೆ ಸಮಯ ಇರಲಿಕ್ಕಿಲ್ಲ. ಯಾಕೆಂದರೆ ಪ್ರತಿದಿನ ನಾವು ಮಾಡಲೇಬೇಕಾದ ಅನೇಕ ಕೆಲಸಗಳಿರುತ್ತವೆ ಮಾತ್ರವಲ್ಲ ಇನ್ನೂ ಅನೇಕ ಕೆಲಸಗಳನ್ನು ಮಾಡಬೇಕೆಂದಿರುತ್ತೇವೆ. ಹಾಗಾಗಿ ನಾವು ಈ ಕೆಲಸಗಳಲ್ಲೇ ಮಗ್ನರಾಗಿಬಿಡಬಹುದು ಅಥವಾ ಅದರಿಂದ ಅಪಕರ್ಷಿತರಾಗಬಹುದು. ಆದರೆ ಬೈಬಲ್ ನಮಗೆ ನೆನಪುಹುಟ್ಟಿಸುವುದು: “ನೀವು ನಡೆದುಕೊಳ್ಳುವ ರೀತಿಯನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಿರಿ. ಅವಿವೇಕಿಗಳಂತೆ ನಡೆದುಕೊಳ್ಳದೆ ವಿವೇಕಿಗಳಂತೆ ನಡೆದುಕೊಳ್ಳಿರಿ. ದಿನಗಳು ಕೆಟ್ಟವುಗಳಾಗಿರುವುದರಿಂದ ನಿಮಗೋಸ್ಕರ ಸುಸಮಯವನ್ನು ಖರೀದಿಸಿಕೊಳ್ಳಿರಿ.” (ಎಫೆಸ 5:15, 16) ನಮ್ಮ ಜೀವನದಲ್ಲಿ ದೇವರೊಂದಿಗಿನ ಸಂಬಂಧಕ್ಕೆ ಅತಿ ಮುಖ್ಯ ಸ್ಥಾನ ಕೊಡುವ ಮೂಲಕ ನಾವು ಆತನಿಗೆ ಆಪ್ತರಾಗಿ ಉಳಿಯಬಹುದು.—ಮತ್ತಾಯ 6:33.
ಆಯ್ಕೆ ನಿಮಗೇ ಬಿಟ್ಟದ್ದು
ನೀವು ಹಿಂದಕ್ಕೆ ಹೋಗಿ ಇಲ್ಲಿವರೆಗೆ ಮಾಡಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲವಾದರೂ ಒಂದು ವಿಷಯ ಖಂಡಿತ ಮಾಡಬಹುದು. ನಿಮ್ಮ ಹಾಗೂ ನಿಮ್ಮ ಪ್ರಿಯರ ಭವಿಷ್ಯ ಅತ್ಯುತ್ತಮವಾಗಿರಲು ಆಯ್ಕೆ ಮಾಡಬಹುದು. ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರು ನಮ್ಮನ್ನು ತುಂಬ ಪ್ರೀತಿಸುತ್ತಾನೆ ಮತ್ತು ನಮ್ಮಿಂದ ಏನು ಬಯಸುತ್ತಾನೆಂದೂ ತಿಳಿಸುತ್ತಾನೆ ಎನ್ನುತ್ತದೆ ಬೈಬಲ್. ದೇವರ ಸೇವಕನಾದ ಮೀಕನು ಹೀಗಂದಿದ್ದಾನೆ:
“ಮನುಷ್ಯನೇ, ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೆ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”—ಮೀಕ 6:8.
ತನ್ನೊಂದಿಗೆ ನಡೆಯಲು ಯೆಹೋವನು ಕೊಟ್ಟಿರುವ ಆಮಂತ್ರಣವನ್ನು ಸ್ವೀಕರಿಸಿ, ಹಾಗೆ ನಡೆಯುವವರಿಗಾಗಿ ಆತನು ಕಾದಿರಿಸಿರುವ ಶಾಶ್ವತ ಆಶೀರ್ವಾದಗಳನ್ನು ಪಡೆಯುವಿರಾ? ಆಯ್ಕೆ ನಿಮಗೇ ಬಿಟ್ಟದ್ದು!