ನಿಮ್ಮ ಭವಿಷ್ಯ ಹೇಗಿರಬೇಕಂತ ನೀವೇ ಆಯ್ಕೆ ಮಾಡಿ
ಸುಮಾರು 3,500 ವರ್ಷಗಳ ಮುಂಚೆ ಯೆಹೋವ ದೇವರು ತನ್ನ ಆರಾಧಕರಿಗೆ ಸುಭದ್ರ ಭವಿಷ್ಯ ಪಡಿಯೋಕೆ ಏನು ಮಾಡಬೇಕು ಅಂತ ಹೇಳಿದ್ರು. ಅದೇನಂದ್ರೆ “ಜೀವ ಅಥವಾ ಮರಣ, ಆಶೀರ್ವಾದ ಅಥವಾ ಶಾಪ ಆಯ್ಕೆ ಮಾಡೋ ಅವಕಾಶ ಇವತ್ತು ನಿಮ್ಮ ಮುಂದೆ ಇಟ್ಟಿದ್ದೀನಿ. ನೀವು, ನಿಮ್ಮ ವಂಶದವರು ಬದುಕಿ ಬಾಳೋ ತರ ಜೀವವನ್ನೇ ಆರಿಸ್ಕೊಳ್ಳಿ.”—ಧರ್ಮೋಪದೇಶಕಾಂಡ 30:19.
ಒಳ್ಳೇ ಭವಿಷ್ಯ ಪಡಿಯೋಕೆ ಆತನ ಆರಾಧಕರು ಸರಿಯಾದ ಆಯ್ಕೆ ಮಾಡಬೇಕಿತ್ತು. ಇವತ್ತು ನಾವು ಅವರ ತರಾನೇ ಮಾಡಬೇಕು. ಸುಭದ್ರ ಭವಿಷ್ಯ ಪಡಿಯೋಕೆ ಏನು ಮಾಡಬೇಕು ಅಂತ ಬೈಬಲ್ ಹೇಳುತ್ತೆ: “ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು, ಆತನ ಮಾತು ಕೇಳಬೇಕು.”—ಧರ್ಮೋಪದೇಶಕಾಂಡ 30:20.
ಯೆಹೋವನನ್ನ ಪ್ರೀತಿಸಿ, ಆತನ ಮಾತು ಕೇಳಲು ಏನು ಮಾಡಬೇಕು?
ಬೈಬಲಿಂದ ಕಲಿಯಿರಿ: ಯೆಹೋವನನ್ನ ಪ್ರೀತಿಸಲು, ಮೊದಲು ಆತನ ಬಗ್ಗೆ ಬೈಬಲಿಂದ ಕಲಿಯಬೇಕು. ಹೀಗೆ ಮಾಡೋದಾದ್ರೆ ಆತನು ನಮಗೆ ಒಳ್ಳೇದನ್ನು ಬಯಸೋ ಪ್ರೀತಿಯ ದೇವರು ಅಂತ ಅರ್ಥಮಾಡ್ಕೊಳ್ತೀರ. ನೀವು ಆತನಿಗೆ ಪ್ರಾರ್ಥಿಸಬೇಕು ಅಂತ ಬಯಸ್ತಾನೆ. “ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.” (1 ಪೇತ್ರ 5:7) ನೀವು ದೇವರಿಗೆ ಹತ್ರ ಆಗೋದಾದ್ರೆ “ದೇವರು ನಿಮಗೆ ಹತ್ರ ಆಗ್ತಾನೆ” ಅಂತ ಬೈಬಲ್ ಹೇಳುತ್ತೆ.—ಯಾಕೋಬ 4:8.
ಕಲಿತಿದ್ದನ್ನು ಅನ್ವಯಿಸಿ: ದೇವರ ಮಾತು ಕೇಳೋಕೆ ಬೈಬಲಲ್ಲಿರೋ ಸಲಹೆಗಳನ್ನು ಪಾಲಿಸಬೇಕು. “ಆಗ ನೀನು ವಿವೇಕದಿಂದ ನಡ್ಕೊಳ್ತೀಯ, ಒಳ್ಳೇ ತೀರ್ಮಾನಗಳನ್ನ ಮಾಡ್ತೀಯ.”—ಯೆಹೋಶುವ 1:8.