ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಆಗಸ್ಟ್‌ ಪು. 26-31
  • ಯೆಹೋವನ ಜನರು ನೀತಿಯನ್ನ ಪ್ರೀತಿಸ್ತಾರೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಜನರು ನೀತಿಯನ್ನ ಪ್ರೀತಿಸ್ತಾರೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನೀತಿ ಅಂದ್ರೆ ಏನು?
  • ಯೆಹೋವನ ನೀತಿ-ನಿಯಮಗಳನ್ನ ಪ್ರೀತಿಸೋಕೆ ಕಲಿಯಿರಿ
  • ಸಂಪೂರ್ಣ ಹೃದಯದಿಂದ ನೀತಿಯನ್ನು ಪ್ರೀತಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಮೊದಲು ‘ದೇವರ ನೀತಿಯನ್ನು’ ಹುಡುಕುತ್ತಾ ಇರ್ರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಯೆಹೋವನ ನೀತಿಯಲ್ಲಿ ಆನಂದವನ್ನು ಕಂಡುಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ನೀತಿಗಾಗಿ ತವಕಪಡುವುದು ನಮ್ಮನ್ನು ಸಂರಕ್ಷಿಸುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಆಗಸ್ಟ್‌ ಪು. 26-31

ಅಧ್ಯಯನ ಲೇಖನ 36

ಯೆಹೋವನ ಜನರು ನೀತಿಯನ್ನ ಪ್ರೀತಿಸ್ತಾರೆ

“ನೀತಿಗಾಗಿ ಹುಡುಕುವವರು ಸಂತೋಷವಾಗಿ ಇರ್ತಾರೆ.” —ಮತ್ತಾ. 5:6.

ಗೀತೆ 46 ಯೆಹೋವನು ನಮ್ಮ ಅರಸನು!

ಕಿರುನೋಟa

1. (ಎ) ಯೋಸೇಫನಿಗೆ ಯಾವ ದೊಡ್ಡ ಪರೀಕ್ಷೆ ಬಂತು? (ಬಿ) ಆಗ ಅವನು ಏನು ಮಾಡಿದ?

ಯಾಕೋಬನ ಮಗ ಯೋಸೇಫನ ಮುಂದೆ ಈಗ ದೊಡ್ಡ ಪರೀಕ್ಷೆ ಬಂದಿದೆ. “ಬಾ, ನನ್ನ ಜೊತೆ ಮಲಗು” ಅಂತ ಪೋಟೀಫರನ ಹೆಂಡತಿ ಅವನನ್ನ ಕರೀತಿದ್ದಾಳೆ. ಆದ್ರೆ ಯೋಸೇಫ ಅದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ‘ಯೋಸೇಫ ಯಾಕೆ ಒಪ್ಪಿಕೊಳ್ಳಲಿಲ್ಲ?’ ಅಂತ ಕೆಲವರು ಅಂದುಕೊಳ್ಳಬಹುದು. ಅವನ ಯಜಮಾನ ಪೋಟೀಫರ ಹೇಗಿದ್ರೂ ಮನೆಯಲ್ಲಿ ಇರಲಿಲ್ಲ. ಯೋಸೇಫ ಆ ಮನೆಯಲ್ಲಿ ಆಳಾಗಿ ಕೆಲಸ ಮಾಡ್ತಿದ್ದ. ಪೋಟೀಫರನ ಹೆಂಡತಿ ಹೇಳಿದ್ದಕ್ಕೆ ಅವನು ಒಪ್ಪಿಕೊಳ್ಳದೇ ಇದ್ದಿದ್ರೆ ಯೋಸೇಫನ ಜೀವನನೇ ತಲೆಕೆಳಗಾಗ್ತಿತ್ತು. ಇಷ್ಟೆಲ್ಲ ಗೊತ್ತಿದ್ರೂ ಯೋಸೇಫ ಅವಳ ಜೊತೆ ವ್ಯಭಿಚಾರ ಮಾಡೋಕೆ ಒಪ್ಪಿಕೊಳ್ಳಲಿಲ್ಲ. “ಈ ಮಹಾ ಕೆಟ್ಟ ಕೆಲಸ ಮಾಡಿ ದೇವರ ವಿರುದ್ಧ ಪಾಪ ಮಾಡೋಕೆ ನನ್ನಿಂದ ಸಾಧ್ಯನೇ ಇಲ್ಲ” ಅಂತ ಅವನು ಹೇಳಿದ.—ಆದಿ. 39:7-12.

2. ಯೆಹೋವನ ದೃಷ್ಟಿಯಲ್ಲಿ ವ್ಯಭಿಚಾರ ತಪ್ಪು ಅಂತ ಯೋಸೇಫನಿಗೆ ಹೇಗೆ ಗೊತ್ತಿತ್ತು?

2 “ವ್ಯಭಿಚಾರ ಮಾಡಬಾರದು” ಅನ್ನೋ ಆಜ್ಞೆಯನ್ನ ಯೆಹೋವ ಯೋಸೇಫನ ಕಾಲದಲ್ಲಿ ಇನ್ನೂ ಕೊಟ್ಟಿರಲಿಲ್ಲ. ಅದನ್ನ ಕೊಟ್ಟಿದ್ದು 200 ವರ್ಷಗಳಾದ ಮೇಲೆ. (ವಿಮೋ. 20:14) ಹಾಗಾದ್ರೆ ಯೆಹೋವ ದೇವರು ವ್ಯಭಿಚಾರವನ್ನ ‘ಮಹಾ ಕೆಟ್ಟ ಕೆಲಸದ’ ತರ ನೋಡ್ತಾನೆ ಅಂತ ಯೋಸೇಫನಿಗೆ ಹೇಗೆ ಗೊತ್ತಿತ್ತು? ಅವನು ಯೆಹೋವನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ. ಯೆಹೋವನ ದೃಷ್ಟಿಯಲ್ಲಿ ವ್ಯಭಿಚಾರ ಎಷ್ಟು ದೊಡ್ಡ ತಪ್ಪು ಅಂತ ಅವನು ತಿಳಿದುಕೊಂಡಿದ್ದ. ಉದಾಹರಣೆಗೆ, ತನ್ನ ಮುತ್ತಜ್ಜಿ ಸಾರಳನ್ನ ಬೇರೆ ಗಂಡಸಿನಿಂದ ಕಾಪಾಡೋಕೆ ಯೆಹೋವ ಏನು ಮಾಡಿದನು ಅಂತ ಅವನಿಗೆ ಗೊತ್ತಿತ್ತು. ಅಷ್ಟೇ ಅಲ್ಲ, ಇಸಾಕನ ಹೆಂಡತಿ ರೆಬೆಕ್ಕಳನ್ನೂ ಬೇರೆ ಗಂಡಸಿನಿಂದ ಯೆಹೋವ ಕಾಪಾಡಿದನು. (ಆದಿ. 2:24; 12:14-20; 20:2-7; 26:6-11) ಇದ್ರಿಂದ ಯೆಹೋವ ದೇವರು ಮದುವೆ ಅನ್ನೋ ಬಂಧವನ್ನ ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವೆ ಮಾತ್ರ ಇಟ್ಟಿದ್ದಾನೆ ಅಂತ ಯೋಸೇಫ ಅರ್ಥ ಮಾಡಿಕೊಂಡ. ಇವೆಲ್ಲದರ ಬಗ್ಗೆ ಯೋಸೇಫ ಯೋಚನೆ ಮಾಡಿದ್ರಿಂದ ಯೆಹೋವ ದೇವರ ದೃಷ್ಟಿಯಲ್ಲಿ ಯಾವುದು ಸರಿ ಯಾವುದು ತಪ್ಪು ಅಂತ ಅವನಿಗೆ ತಿಳಿದುಕೊಳ್ಳೋಕೆ ಆಯ್ತು. ಅವನಿಗೆ ಯೆಹೋವ ದೇವರ ಮೇಲೆ, ಆತನ ನೀತಿ-ನಿಯಮಗಳ ಮೇಲೆ ಪ್ರೀತಿ ಇದ್ದಿದ್ರಿಂದ ಅವನು ಅವುಗಳನ್ನ ಮೀರೋಕೆ ಹೋಗಲಿಲ್ಲ.

3. ಈ ಲೇಖನದಲ್ಲಿ ನಾವೇನು ಕಲಿತೀವಿ?

3 ನಾವು ನೀತಿಯನ್ನ ಪ್ರೀತಿಸ್ತೀವಿ ನಿಜ, ಆದ್ರೆ ನಾವೆಲ್ಲ ಅಪರಿಪೂರ್ಣರು. ಅದಕ್ಕೆ ನಾವು ಹುಷಾರಾಗಿರಬೇಕು. ಇಲ್ಲಾಂದ್ರೆ ನಾವೂ ಕೂಡ ಈ ಲೋಕದ ಜನರ ತರ ಯೋಚನೆ ಮಾಡೋಕೆ ಶುರು ಮಾಡಿಬಿಡ್ತೀವಿ. (ಯೆಶಾ. 5:20; ರೋಮ. 12:2) ಹಾಗಾಗಿ ನೀತಿ ಅಂದ್ರೆ ಏನು, ಯೆಹೋವನ ನೀತಿ-ನಿಯಮಗಳನ್ನ ಪ್ರೀತಿಸೋದ್ರಿಂದ ನಮಗೆ ಹೇಗೆ ಒಳ್ಳೇದಾಗುತ್ತೆ ಅಂತ ಈಗ ನೋಡೋಣ. ಯೆಹೋವನ ನೀತಿಯ ಮಟ್ಟಗಳನ್ನ ಪ್ರೀತಿಸೋಕೆ ಯಾವ 3 ವಿಷಯಗಳು ಸಹಾಯ ಮಾಡುತ್ತೆ ಅಂತನೂ ನೋಡೋಣ.

ನೀತಿ ಅಂದ್ರೆ ಏನು?

4. ನೀತಿಯ ಬಗ್ಗೆ ಜನರ ಅಭಿಪ್ರಾಯ ಏನು?

4 ನೀತಿವಂತ ವ್ಯಕ್ತಿ ಅಹಂಕಾರಿಯಾಗಿರುತ್ತಾನೆ, ಬೇರೆಯವರಲ್ಲಿ ತಪ್ಪು ಹುಡುಕುತ್ತಿರುತ್ತಾನೆ, ತಾನು ಮಾಡೋದೆಲ್ಲಾ ಸರಿಯಾಗೇ ಇರುತ್ತೆ ಅಂತ ಅಂದ್ಕೊಳ್ತಾನೆ ಅನ್ನೋದು ಜನರ ಅಭಿಪ್ರಾಯ. ಆದ್ರೆ ಯೆಹೋವ ದೇವರು ಈ ಗುಣಗಳನ್ನ ಯಾವತ್ತೂ ಇಷ್ಟಪಡಲ್ಲ. ಯೇಸುವಿನ ಕಾಲದಲ್ಲಿ ಧರ್ಮಗುರುಗಳು ಅತೀ ನೀತಿವಂತರ ತರ ನಡ್ಕೊಂಡು ತಮ್ಮದೇ ಆದ ನೀತಿಯ ಮಟ್ಟಗಳನ್ನ ಮಾಡಿಕೊಂಡಿದ್ದರು. ಅದಕ್ಕೆ ಯೇಸು ಅವರನ್ನ ಗದರಿಸಿದನು. (ಪ್ರಸಂ. 7:16; ಲೂಕ 16:15) ಇದ್ರಿಂದ ನಮಗೇನು ಗೊತ್ತಾಗುತ್ತೆ? ನೀತಿ ಅಂದ್ರೆ ನಮಗೇನು ಸರಿ ಅನಿಸುತ್ತೋ ಆ ತರ ನಡೆದುಕೊಳ್ಳೋದಲ್ಲ, ಯೆಹೋವ ನಮಗೆ ಯಾವುದು ಸರಿ ಅಂತ ಹೇಳಿಕೊಟ್ಟಿದ್ದಾನೋ ಅದರ ತರ ನಡೆದುಕೊಳ್ಳೋದು.

5. ನೀತಿ ಅಂದ್ರೆ ಏನು ಅಂತ ಬೈಬಲ್‌ ಹೇಳುತ್ತೆ? ಉದಾಹರಣೆ ಕೊಡಿ.

5 ನೀತಿ ಅನ್ನೋದು ಒಂದು ಒಳ್ಳೇ ಗುಣ. ಯೆಹೋವನಿಗೆ ಯಾವುದು ಸರಿ ಅನಿಸುತ್ತೋ ಅದನ್ನ ಮಾಡೋದೇ ನೀತಿಯಾಗಿದೆ. ಯೆಹೋವನ ನೀತಿಯ ಮಟ್ಟಗಳನ್ನ ಪಾಲಿಸ್ತಾ ಇರೋದೇ ನೀತಿ ಅಂತ ಬೈಬಲ್‌ ಹೇಳುತ್ತೆ. ಉದಾಹರಣೆಗೆ, ವ್ಯಾಪಾರ ಮಾಡೋರು “ಸರಿಯಾದ ತೂಕದ ಕಲ್ಲನ್ನ” ಬಳಸಬೇಕು ಅಂತ ಯೆಹೋವ ಹೇಳಿದ್ದನು. (ಧರ್ಮೋ. 25:15) “ಪ್ರಾಮಾಣಿಕತೆ” ಅನ್ನೋ ಹೀಬ್ರು ಪದಕ್ಕೆ “ನೀತಿ” ಅನ್ನೋ ಅರ್ಥನೂ ಇದೆ. ಹಾಗಾಗಿ ಯಾರು ನೀತಿವಂತರಾಗಿ ಇರೋಕೆ ಇಷ್ಟ ಪಡ್ತಾರೋ ಅವರು ವ್ಯಾಪಾರ ವ್ಯವಹಾರಗಳಲ್ಲಿ ಪ್ರಾಮಾಣಿಕವಾಗಿ ಇರುತ್ತಾರೆ. ಅಷ್ಟೇ ಅಲ್ಲ, ಒಬ್ಬ ನೀತಿವಂತ ವ್ಯಕ್ತಿ ನ್ಯಾಯವನ್ನ ಪ್ರೀತಿಸ್ತಾನೆ. ಯಾರಿಗಾದ್ರೂ ಅನ್ಯಾಯ ಆಗ್ತಿದ್ರೆ ಅದನ್ನ ಸಹಿಸಲ್ಲ. ಅವನು ತನ್ನ ಜೀವನದಲ್ಲಿ ಏನೇ ನಿರ್ಧಾರ ಮಾಡಿದ್ರೂ ಅದು ‘ಯೆಹೋವನನ್ನು ಖುಷಿಪಡಿಸುತ್ತಾ’ ಅಂತ ಯೋಚನೆ ಮಾಡ್ತಾನೆ.—ಕೊಲೊ. 1:10.

6. ಯೆಹೋವನ ನೀತಿಯ ಮಟ್ಟಗಳು ಯಾವಾಗಲೂ ಸರಿಯಾಗಿರುತ್ತೆ ಅಂತ ನಾವು ಯಾಕೆ ನಂಬಬಹುದು? (ಯೆಶಾಯ 55:8, 9)

6 ಯೆಹೋವ ‘ನೀತಿವಂತ ದೇವರು’ ಅಂತ ಬೈಬಲ್‌ ಕರೆಯುತ್ತೆ. (ಯೆರೆ. 50:7) ಯಾಕಂದ್ರೆ ನೀತಿ ಅನ್ನೋ ಗುಣ ಹುಟ್ಟಿಕೊಂಡಿದ್ದೇ ಯೆಹೋವ ದೇವರಿಂದ. ನಮ್ಮ ಸೃಷ್ಟಿಕರ್ತನಾದ ಯೆಹೋವನಿಂದ ಮಾತ್ರನೇ ಯಾವುದು ಸರಿ ಯಾವುದು ತಪ್ಪು ಅಂತ ತೀರ್ಮಾನ ಮಾಡೋಕೆ ಆಗೋದು. ನಾವು ಅಪರಿಪೂರ್ಣರಾಗಿ ಇರೋದ್ರಿಂದ ಯಾವುದು ಸರಿ ಯಾವುದು ತಪ್ಪು ಅಂತ ನಮಗೆ ಗೊತ್ತಾಗಲ್ಲ. (ಜ್ಞಾನೋ. 14:12; ಯೆಶಾಯ 55:8, 9 ಓದಿ.) ಆದ್ರೆ ನಮ್ಮನ್ನ ಯೆಹೋವನ ಹೋಲಿಕೆಯಲ್ಲಿ ಸೃಷ್ಟಿ ಮಾಡಿರೋದ್ರಿಂದ ಆತನು ಹೇಳೋದನ್ನ ಪಾಲಿಸೋಕೆ ಆಗುತ್ತೆ. (ಆದಿ. 1:27) ಅದನ್ನ ಪಾಲಿಸೋಕೆ ನಾವು ಇಷ್ಟಪಡ್ತೀವಿ. ನಮಗೆ ಯೆಹೋವನ ಮೇಲೆ ಪ್ರೀತಿ ಇರೋದ್ರಿಂದ ಆತನ ತರ ಇರೋಕೆ ನಾವು ಆದಷ್ಟು ಪ್ರಯತ್ನ ಮಾಡ್ತೀವಿ.—ಎಫೆ. 5:1.

7. ಯಾವುದು ಸರಿ ಯಾವುದು ತಪ್ಪು ಅಂತ ತೋರಿಸೋ ನೀತಿ-ನಿಯಮಗಳು ನಮಗ್ಯಾಕೆ ಬೇಕು? ಉದಾಹರಣೆ ಕೊಡಿ.

7 ಯೆಹೋವನ ನೀತಿ-ನಿಯಮಗಳನ್ನ ಪಾಲಿಸೋದ್ರಿಂದ ನಮಗೆ ತುಂಬ ಪ್ರಯೋಜನ ಆಗುತ್ತೆ. ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡಿ. ಒಂದೊಂದು ಕಡೆ ಒಂದೊಂದು ಟ್ರಾಫಿಕ್‌ ರೂಲ್ಸ್‌ ಇದ್ರೆ ಏನಾಗ್ತಿತ್ತು? ಡಾಕ್ಟರ್‌ ಮತ್ತು ನರ್ಸ್‌ಗಳು ತಮಗಿಷ್ಟ ಬಂದ ಹಾಗೆ ಜನರಿಗೆ ಔಷಧಿ ಕೊಡ್ತಾ ಹೋದ್ರೆ ಏನಾಗ್ತಿತ್ತು? ತುಂಬ ಜನರ ಜೀವನೇ ಹೋಗ್ತಿತ್ತು ಅಲ್ವಾ? ಹಾಗಾಗಿ ನೀತಿ-ನಿಯಮಗಳನ್ನ ಪಾಲಿಸಿದ್ರೆ ನಮ್ಮೆಲ್ಲರಿಗೂ ಒಳ್ಳೇದಾಗುತ್ತೆ. ಹಾಗೇನೇ ಸರಿ-ತಪ್ಪುಗಳ ಬಗ್ಗೆ ಯೆಹೋವ ಕೊಟ್ಟಿರೋ ನೀತಿ-ನಿಯಮಗಳು ನಮ್ಮ ಜೀವವನ್ನ ಕಾಪಾಡುತ್ತೆ.

8. ಸರಿಯಾಗಿರೋದನ್ನ ಮಾಡುವವರಿಗೆ ಯಾವ ಆಶೀರ್ವಾದ ಸಿಗುತ್ತೆ?

8 ಯೆಹೋವನ ನೀತಿ-ನಿಯಮಗಳನ್ನ ಪಾಲಿಸಿದ್ರೆ ಆತನು ನಮ್ಮನ್ನ ಆಶೀರ್ವದಿಸ್ತಾನೆ. “ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ” ಅಂತ ಆತನು ಮಾತುಕೊಟ್ಟಿದ್ದಾನೆ. (ಕೀರ್ತ. 37:29) ಯೆಹೋವ ಹೇಳೋ ತರ ಎಲ್ಲರೂ ನಡೆದುಕೊಂಡ್ರೆ ಈ ಭೂಮಿ ಹೇಗಿರುತ್ತೆ ಅಂತ ಸ್ವಲ್ಪ ಯೋಚನೆ ಮಾಡಿ. ಜನರು ಒಗ್ಗಟ್ಟಾಗಿ, ಶಾಂತಿಯಿಂದ, ಸಂತೋಷವಾಗಿ ಇರುತ್ತಾರೆ. ನಮ್ಮ ಜೀವನ ಹೀಗಿರಬೇಕು ಅನ್ನೋದೇ ಯೆಹೋವನ ಆಸೆ. ದೇವರು ಇಟ್ಟಿರೋ ನೀತಿ-ನಿಯಮಗಳನ್ನ ಪಾಲಿಸೋಕೆ ನಮಗೆ ಇದಕ್ಕಿಂತ ದೊಡ್ಡ ಕಾರಣ ಬೇಕಾ? ನೀತಿಯನ್ನ ಪ್ರೀತಿಸೋಕೆ ಸಹಾಯ ಮಾಡೋ 3 ವಿಷಯಗಳನ್ನ ನಾವೀಗ ನೋಡೋಣ.

ಯೆಹೋವನ ನೀತಿ-ನಿಯಮಗಳನ್ನ ಪ್ರೀತಿಸೋಕೆ ಕಲಿಯಿರಿ

9. ನಾವು ನೀತಿ-ನಿಯಮಗಳನ್ನ ಪಾಲಿಸಬೇಕಂದ್ರೆ ಮೊದಲು ಏನು ಮಾಡಬೇಕು?

9 ನೀತಿ-ನಿಯಮಗಳನ್ನ ಕೊಟ್ಟವನನ್ನ ಪ್ರೀತಿಸಿ. ನೀವು ನೀತಿ-ನಿಯಮಗಳನ್ನ ಪ್ರೀತಿಸಬೇಕಂದ್ರೆ ಅದನ್ನ ಕೊಟ್ಟವರನ್ನ ಮೊದಲು ಪ್ರೀತಿಸಬೇಕು. ಆದಾಮ ಹವ್ವ ಯೆಹೋವ ಕೊಟ್ಟ ನಿಯಮವನ್ನ ಪಾಲಿಸಲಿಲ್ಲ. ಯಾಕಂದ್ರೆ ಅವರಿಗೆ ಆತನ ಮೇಲೆ ಪ್ರೀತಿ ಇರಲಿಲ್ಲ. ಹಾಗಾಗಿ ನಾವು ಯೆಹೋವನನ್ನು ಪ್ರೀತಿಸಿದ್ರೆ ಆತನು ಕೊಟ್ಟಿರೋ ನಿಯಮಗಳನ್ನ ಮನಸಾರೆ ಪಾಲಿಸ್ತೀವಿ.—ಆದಿ. 3:1-6, 16-19.

10. ಯೆಹೋವ ಹೇಗೆ ಯೋಚನೆ ಮಾಡ್ತಾನೆ ಅಂತ ತಿಳಿದುಕೊಳ್ಳೋಕೆ ಅಬ್ರಹಾಮ ಏನು ಮಾಡಿದ?

10 ಆದಾಮ ಹವ್ವ ಮಾಡಿದ ತಪ್ಪನ್ನ ನಾವೂ ಮಾಡಬಾರದು. ಅದಕ್ಕೆ ನಾವು ಯೆಹೋವನ ಬಗ್ಗೆ ಆತನ ಗುಣಗಳ ಬಗ್ಗೆ ಚೆನ್ನಾಗಿ ತಿಳ್ಕೋಬೇಕು. ಆತನು ಹೇಗೆ ಯೋಚನೆ ಮಾಡ್ತಾನೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಆಗ ನಮಗೆ ಆತನ ಮೇಲಿರೋ ಪ್ರೀತಿ ಜಾಸ್ತಿಯಾಗುತ್ತೆ. ಅಬ್ರಹಾಮನ ಉದಾಹರಣೆ ನೋಡಿ. ಅಬ್ರಹಾಮನಿಗೆ ಯೆಹೋವ ಅಂದ್ರೆ ತುಂಬ ಇಷ್ಟ. ಯೆಹೋವ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಾಗ ಅದಕ್ಕೆ ಕಾರಣ ಏನು ಅಂತ ಅಬ್ರಹಾಮನಿಗೆ ಗೊತ್ತಿಲ್ಲದಿದ್ದರೂ, ಅವನು ಅದನ್ನ ಒಪ್ಪಿಕೊಳ್ಳುತ್ತಿದ್ದ, ಆತನನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತಿದ್ದ. ಉದಾಹರಣೆಗೆ, ಸೊದೋಮ್‌ ಗೊಮೋರವನ್ನ ಯೆಹೋವ ನಾಶ ಮಾಡಬೇಕು ಅಂತ ತೀರ್ಮಾನ ಮಾಡಿದಾಗ ಅಬ್ರಹಾಮನಿಗೆ ಮೊದಮೊದಲು ತುಂಬ ಭಯ ಆಯ್ತು. “ಇಡೀ ಭೂಮಿಯ ನ್ಯಾಯಾಧೀಶನಾದ” ಯೆಹೋವ ಕೆಟ್ಟವರ ಜೊತೆ ಒಳ್ಳೆಯವರನ್ನೂ ನಾಶ ಮಾಡಿಬಿಡ್ತಾನೇನೋ ಅಂತ ಹೆದರಿಕೊಂಡಿದ್ದ. ಆದ್ರೆ ಯೆಹೋವ ಹೀಗೆ ಮಾಡೋಕೆ ಸಾಧ್ಯಾನೇ ಇಲ್ಲ ಅಂತ ಅವನಿಗೆ ಗೊತ್ತಿತ್ತು. ಅದಕ್ಕೆ ಅವನು ಆತನ ಹತ್ರ ಪ್ರಶ್ನೆಗಳನ್ನ ಕೇಳಿದ, ಯೆಹೋವನೂ ಅವನಿಗೆ ಉತ್ತರ ಕೊಟ್ಟನು. ಯೆಹೋವ ಪ್ರತಿಯೊಬ್ಬರ ಮನಸ್ಸಲ್ಲಿ ಏನಿದೆ ಅನ್ನೋದನ್ನ ನೋಡ್ತಾನೆ ಹಾಗಾಗಿ ಕೆಟ್ಟವರ ಜೊತೆ ಒಳ್ಳೆಯವರನ್ನ ನಾಶ ಮಾಡಲ್ಲ ಅಂತ ಅಬ್ರಹಾಮ ಅರ್ಥ ಮಾಡಿಕೊಂಡ.—ಆದಿ. 18:20-32.

11. ಯೆಹೋವನ ಮೇಲೆ ಪ್ರೀತಿ ಮತ್ತು ನಂಬಿಕೆ ಇದೆ ಅಂತ ಅಬ್ರಹಾಮ ಹೇಗೆ ತೋರಿಸಿಕೊಟ್ಟ?

11 ಸೊದೋಮ್‌ ಗೊಮೋರ ಪಟ್ಟಣದ ಬಗ್ಗೆ ಯೆಹೋವ ಅಬ್ರಹಾಮನ ಹತ್ರ ಮಾತಾಡಿದ ವಿಷಯ ಅವನ ಮನಸ್ಸಲ್ಲಿ ಕೂತುಬಿಡ್ತು. ಅವನಿಗೆ ಯೆಹೋವನ ಮೇಲೆ ಗೌರವ ಜಾಸ್ತಿಯಾಯ್ತು ಮತ್ತು ಯೆಹೋವನನ್ನು ಇನ್ನೂ ಜಾಸ್ತಿ ಪ್ರೀತಿಸೋಕೆ ಶುರುಮಾಡಿದ. ಸ್ವಲ್ಪ ವರ್ಷಗಳಾದ ಮೇಲೆ ಯೆಹೋವ ಅಬ್ರಹಾಮನ ಹತ್ರ ಇಸಾಕನನ್ನ ತನಗೋಸ್ಕರ ಬಲಿ ಕೊಡೋಕೆ ಕೇಳಿಕೊಂಡನು. ಆದ್ರೆ ಈ ಸಲ ಅಬ್ರಹಾಮ ಯೆಹೋವನ ಹತ್ರ ಯಾವ ಪ್ರಶ್ನೆನೂ ಕೇಳಲಿಲ್ಲ. ಯಾಕಂದ್ರೆ ಅವನು ಯೆಹೋವನ ಮೇಲೆ ಅಷ್ಟು ನಂಬಿಕೆ ಬೆಳೆಸಿಕೊಂಡಿದ್ದ. ಬಲಿ ಕೊಡೋಕೆ ಎಲ್ಲಾ ರೆಡಿ ಮಾಡ್ತಿದ್ದಾಗ ಅಬ್ರಹಾಮನಿಗೆ ತನ್ನ ಹೃದಯನೇ ಹಿಂಡಿದ ಹಾಗೆ ಆಗಿದ್ದಿರಬೇಕು, ಆದ್ರೂ ಯೆಹೋವ ಕ್ರೂರಿಯಲ್ಲ, ಅನೀತಿವಂತನಲ್ಲ ಅಂತ ಅವನು ಜ್ಞಾಪಕ ಮಾಡಿಕೊಂಡ. ಯೆಹೋವ ತನ್ನ ಮಗನಿಗೆ ಮತ್ತೆ ಜೀವ ಕೊಡ್ತಾನೆ ಅನ್ನೋ ನಂಬಿಕೆ ಅಬ್ರಹಾಮನಿಗೆ ಇತ್ತು ಅಂತ ಅಪೊಸ್ತಲ ಪೌಲ ಹೇಳಿದ. (ಇಬ್ರಿ. 11:17-19) ಇಸಾಕನಿಂದ ಒಂದು ದೊಡ್ಡ ಜನಾಂಗ ಆಗುತ್ತೆ ಅಂತ ಈಗಾಗಲೇ ಯೆಹೋವ ದೇವರು ಮಾತು ಕೊಟ್ಟಿದ್ದನು. ಆದ್ರೆ ಇಸಾಕನಿಗೆ ಮಕ್ಕಳೇ ಇರಲಿಲ್ಲ. ಹಾಗಿದ್ರೂ ಯೆಹೋವ ನೀತಿವಂತ ದೇವರು, ತಾನು ಕೊಟ್ಟ ಮಾತನ್ನ ಖಂಡಿತ ಉಳಿಸಿಕೊಳ್ತಾನೆ ಅಂತ ಅಬ್ರಹಾಮನಿಗೆ ಪೂರ್ತಿ ನಂಬಿಕೆ ಇತ್ತು. ಅದಕ್ಕೆ ಅವನಿಗೆ ಕಷ್ಟವಾದ್ರೂ ತನ್ನ ಮಗನನ್ನ ಬಲಿ ಕೊಡೋಕೆ ಮುಂದೆ ಬಂದ.—ಆದಿ. 22:1-12.

12. ನಾವು ಹೇಗೆ ಅಬ್ರಹಾಮನ ತರ ನಡೆದುಕೊಳ್ಳಬಹುದು? (ಕೀರ್ತನೆ 73:28)

12 ನಾವು ಯೆಹೋವನ ಬಗ್ಗೆ ಹೆಚ್ಚು ಕಲಿತಾ ಹೋದ ಹಾಗೆ ಅಬ್ರಹಾಮನ ತರ ಯೆಹೋವನಿಗೆ ಹತ್ರ ಆಗ್ತೀವಿ, ಆತನನ್ನು ಇನ್ನೂ ಜಾಸ್ತಿ ಪ್ರೀತಿಸ್ತೀವಿ. (ಕೀರ್ತನೆ 73:28 ಓದಿ.) ಆತನ ತರಾನೇ ಯೋಚನೆ ಮಾಡೋಕೆ ಶುರುಮಾಡ್ತೀವಿ. (ಇಬ್ರಿ. 5:14) ಯಾರಾದ್ರೂ ನಮ್ಮನ್ನ ತಪ್ಪು ಮಾಡೋಕೆ ಒತ್ತಾಯ ಮಾಡಿದಾಗ, ನಾವು ಅದನ್ನ ಮಾಡಲ್ಲ. ಯೆಹೋವನ ಮನಸ್ಸಿಗೆ ನೋವು ತರಲ್ಲ. ಆತನ ಜೊತೆ ನಮಗಿರೋ ಸಂಬಂಧನ ಹಾಳು ಮಾಡೋ ವಿಷಯಗಳ ಬಗ್ಗೆ ಯೋಚನೆ ಕೂಡ ಮಾಡಲ್ಲ. ನೀತಿಯನ್ನ ಪ್ರೀತಿಸೋಕೆ ನಾವು ಮಾಡಬೇಕಾದ ಎರಡನೇ ವಿಷಯ ಯಾವುದು?

13. ನೀತಿಯಿಂದ ನಡೆದುಕೊಳ್ಳೋಕೆ ನಾವೇನು ಮಾಡಬೇಕು? (ಜ್ಞಾನೋಕ್ತಿ 15:9)

13 ನೀತಿಯನ್ನ ಪ್ರೀತಿಸೋಕೆ ಪ್ರತಿದಿನ ಪ್ರಯತ್ನ ಹಾಕಿ. ನಮ್ಮ ದೇಹವನ್ನ ಗಟ್ಟಿಮುಟ್ಟಾಗಿ ಇಟ್ಟುಕೊಳ್ಳೋಕೆ ನಾವು ಹೇಗೆ ಪ್ರತಿದಿನ ವ್ಯಾಯಾಮ ಮಾಡ್ತೀವೋ ಹಾಗೇ ಯೆಹೋವನ ನೀತಿ ನಿಯಮಗಳ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ಪ್ರತಿದಿನ ಪ್ರಯತ್ನ ಹಾಕಬೇಕು. ಆದ್ರೆ ಯೆಹೋವ ದೇವರು ನಮ್ಮಿಂದ ಆಗದೇ ಇರೋದನ್ನ ಮಾಡಿ ಅಂತ ಕೇಳಿಕೊಳ್ಳಲ್ಲ. (ಕೀರ್ತ. 103:14) “ನೀತಿಯಿಂದ ನಡ್ಕೊಳ್ಳೋ ವ್ಯಕ್ತಿ ಕಂಡ್ರೆ ಆತನಿಗೆ ಪ್ರೀತಿ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 15:9 ಓದಿ.) ಯೆಹೋವನ ಸೇವೆಯಲ್ಲಿ ನಾವು ಒಂದು ಗುರಿಯನ್ನ ಇಟ್ಟು ಅದನ್ನ ಮುಟ್ಟೋಕೆ ಹೇಗೆ ಪ್ರಯತ್ನ ಹಾಕುತ್ತೇವೋ ಹಾಗೇ ನೀತಿಯಿಂದ ನಡೆದುಕೊಳ್ಳೋಕೂ ನಾವು ಪ್ರಯತ್ನ ಹಾಕ್ತಾ ಇರಬೇಕು. ಆಗ ಯೆಹೋವ ನಮಗೆ ತಾಳ್ಮೆಯಿಂದ ಸಹಾಯ ಮಾಡ್ತಾನೆ.—ಕೀರ್ತ. 84:5, 7.

14. ‘ನೀತಿಯ ಎದೆಕವಚ’ ಅಂದ್ರೆ ಏನು ಮತ್ತು ನಾವು ಅದನ್ನ ಯಾಕೆ ಹಾಕಿಕೊಂಡಿರಬೇಕು?

14 ನೀತಿಯಿಂದ ನಡೆದುಕೊಳ್ಳೋದು ಅಷ್ಟೇನು ಕಷ್ಟ ಅಲ್ಲ ಅಂತ ಯೆಹೋವ ನಮಗೆ ಹೇಳ್ತಿದ್ದಾನೆ. (1 ಯೋಹಾ. 5:3) ನೀತಿಯಿಂದ ನಾವು ನಡೆದುಕೊಂಡ್ರೆ ನಮಗೇ ಒಳ್ಳೆದಾಗುತ್ತೆ, ಅದು ನಮ್ಮನ್ನ ಕಾಪಾಡುತ್ತೆ. ಅಪೊಸ್ತಲ ಪೌಲ ಹೇಳಿದ ರಕ್ಷಾಕವಚದ ಬಗ್ಗೆ ಸ್ವಲ್ಪ ನೆನಪಿಸಿಕೊಳ್ಳಿ. (ಎಫೆ. 6:14-18) ಒಬ್ಬ ಸೈನಿಕನ ಹೃದಯವನ್ನ ಎದೆಕವಚ ಹೇಗೆ ಕಾಪಾಡುತ್ತೋ ಅದೇ ತರ ‘ನೀತಿಯನ್ನೋ ಎದೆಕವಚ’ ಅಂದ್ರೆ ಯೆಹೋವನ ನೀತಿ-ನಿಯಮಗಳು ನಮ್ಮ ಸಾಂಕೇತಿಕ ಹೃದಯ ಅಥವಾ ನಮ್ಮ ಒಳಗಿನ ವ್ಯಕ್ತಿತ್ವವನ್ನ ಕಾಪಾಡುತ್ತೆ. ಅದಕ್ಕೆ ನಾವು ಪೂರ್ತಿ ರಕ್ಷಾಕವಚವನ್ನ ಅಂದ್ರೆ ನೀತಿ ಅನ್ನೋ ಎದೆಕವಚವನ್ನೂ ತಪ್ಪದೇ ಹಾಕಿಕೊಳ್ಳಬೇಕು ಅನ್ನೋದನ್ನ ನಾವು ಮರೆಯಬಾರದು.—ಜ್ಞಾನೋ. 4:23.

15. ನಾವು ನೀತಿಯ ಎದೆಕವಚವನ್ನ ಹೇಗೆ ಹಾಕಿಕೊಳ್ಳಬಹುದು?

15 ನೀವು ಏನಾದ್ರೂ ನಿರ್ಣಯ ತಗೊಳ್ಳೋಕು ಮುಂಚೆ ಅದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ಯೋಚನೆ ಮಾಡ್ತಿದ್ರೆ ನೀತಿಯ ಎದೆಕವಚವನ್ನ ಹಾಕಿಕೊಂಡಿದ್ದೀರ ಅಂತ ಅರ್ಥ. ‘ನನ್ನ ಮಾತು, ಆರಿಸಿಕೊಳ್ಳೋ ಮನೋರಂಜನೆ, ನಾನು ಕೇಳಿಸಿಕೊಳ್ಳೋ ಹಾಡುಗಳು, ನಾನು ಓದೋ ವಿಷಯಗಳು ಯೆಹೋವನಿಗೆ ಇಷ್ಟ ಆಗುತ್ತಾ ಅಥವಾ ಆತನು ದ್ವೇಷಿಸೋ ಗುಣಗಳನ್ನ ಅಂದ್ರೆ ಹಿಂಸೆ, ಅನೈತಿಕತೆ, ಸ್ವಾರ್ಥ ಮತ್ತು ದುರಾಸೆಯನ್ನ ಕಲಿಸ್ತಾ ಇದೆಯಾ?’ ಅಂತ ಕೇಳಿಕೊಳ್ಳಿ. (ಫಿಲಿ. 4:8) ಈ ತರ ಯೋಚನೆ ಮಾಡಿ ಯೆಹೋವನಿಗೆ ಇಷ್ಟವಾಗೋ ನಿರ್ಣಯ ಮಾಡಿದ್ರೆ ಯೆಹೋವನ ನೀತಿ-ನಿಯಮಗಳು ನಮ್ಮ ಹೃದಯನ ಕಾಪಾಡೋಕೆ ಬಿಟ್ಟುಕೊಡುತ್ತಿದ್ದೀವಿ ಅಂತ ಅರ್ಥ.

ಸಾಯಂಕಾಲ ಸಮುದ್ರ ತೀರದಲ್ಲಿ ಒಬ್ಬ ಸಹೋದರಿ ಅಲೆಗಳನ್ನ ನೋಡ್ತಾ ನಡಿತಾ ಇದ್ದಾರೆ.

‘ನಿನ್ನ ನೀತಿ ಸಮುದ್ರದ ಅಲೆಗಳ ತರ ಇರುತ್ತೆ’ (ಪ್ಯಾರ 16-17 ನೋಡಿ)

16-17. ಯೆಹೋವನ ನೀತಿ-ನಿಯಮಗಳನ್ನ ನಾವು ಯಾವಾಗಲೂ ಪಾಲಿಸೋಕೆ ಆಗುತ್ತೆ ಅಂತ ಯೆಶಾಯ 48:18 ನಮಗೆ ಹೇಗೆ ಭರವಸೆ ತುಂಬುತ್ತೆ?

16 ‘ಯೆಹೋವನ ನೀತಿ ನಿಯಮಗಳನ್ನ ಯಾವಾಗಲೂ ಪಾಲಿಸ್ತಾ ಇರೋಕೆ ನನ್ನಿಂದ ಆಗುತ್ತಾ’ ಅಂತ ನಿಮಗೆ ಯಾವತ್ತಾದರೂ ಅನಿಸಿದೆಯಾ? ಯೆಶಾಯ 48:18ರಲ್ಲಿ ಯೆಹೋವ ಏನು ಹೇಳಿದ್ದಾನೆ ಅಂತ ನೋಡಿ. (ಓದಿ.) ನಿಮ್ಮ ನೀತಿ “ಸಮುದ್ರದ ಅಲೆಗಳ ತರ” ಇರುತ್ತೆ ಅಂತ ಯೆಹೋವ ಹೇಳ್ತಿದ್ದಾನೆ. ನೀವು ಸಮುದ್ರದ ತೀರದಲ್ಲಿ ನಿಂತಿದ್ದೀರ ಅಂದ್ಕೊಳ್ಳಿ. ಅಲೆಗಳು ಒಂದಾದ ಮೇಲೆ ಒಂದು ಬರ್ತಾ ಇದೆ. ‘ಈ ಅಲೆಗಳು ಮುಂದೆ ಒಂದು ದಿನ ನಿಂತುಹೋಗುತ್ತೆ’ ಅಂತ ಅಂದುಕೊಳ್ತೀರಾ? ಇಲ್ಲ. ಯಾಕಂದ್ರೆ ಈ ಅಲೆಗಳು ಸಾವಿರಾರು ವರ್ಷಗಳಿಂದ ಬರ್ತಾನೇ ಇದೆ. ಮುಂದೆನೂ ಬರ್ತಾ ಇರುತ್ತೆ.

17 ನಿಮ್ಮ ನೀತಿನೂ ಆ ಅಲೆಗಳ ತರ ಇರುತ್ತೆ. ನೀವು ಯಾವುದಾದರೂ ಒಂದು ನಿರ್ಧಾರ ತಗೊಳ್ಳೋ ಮುಂಚೆ ನೀವು ಏನು ಮಾಡಬೇಕು ಅಂತ ಯೆಹೋವ ಬಯಸುತ್ತಾನೆ ಅನ್ನೋದನ್ನ ಮೊದಲು ತಿಳಿದುಕೊಳ್ಳಿ. ಆಮೇಲೆ ಅದನ್ನ ಮಾಡಿ. ಅದು ಎಂಥಾ ದೊಡ್ಡ ನಿರ್ಧಾರನೇ ಆಗಿರಲಿ, ಯೆಹೋವ ನಿಮ್ಮ ಜೊತೆ ಇರ್ತಾನೆ ಮತ್ತು ನೀವು ಯಾವಾಗಲೂ ಸರಿಯಾಗಿರೋದನ್ನೇ ಮಾಡೋಕೆ ಆತನು ಸಹಾಯ ಮಾಡ್ತಾನೆ.—ಯೆಶಾ. 40:29-31.

18. ನಾವು ಯಾಕೆ ಬೇರೆಯವರನ್ನ ತೀರ್ಪು ಮಾಡಬಾರದು?

18 ತೀರ್ಪು ಮಾಡೋದನ್ನ ಯೆಹೋವನಿಗೆ ಬಿಟ್ಟುಬಿಡಿ. ಯೆಹೋವನ ನೀತಿ-ನಿಯಮಗಳನ್ನ ನಾವು ಚಾಚೂತಪ್ಪದೆ ಪಾಲಿಸುತ್ತಾ ಇರಬಹುದು, ನಿಜ. ಹಾಗಂತ ನಾನು ಮಾಡೋದೆಲ್ಲ ಸರಿ ಬೇರೆಯವರು ಮಾಡೋದು ತಪ್ಪು ಅಂತ ತೀರ್ಪು ಮಾಡಬಾರದು. ನಾವು ನಮ್ಮದೇ ಆದ ನೀತಿ ನಿಯಮಗಳನ್ನ ಇಟ್ಟುಕೊಂಡು ಬೇರೆಯವರಲ್ಲಿ ತಪ್ಪು ಹುಡುಕೋಕೆ ಹೋಗಬಾರದು. ಯಾಕಂದ್ರೆ “ಇಡೀ ಭೂಮಿಯ ನ್ಯಾಯಾಧೀಶನಾದ” ಯೆಹೋವನಿಂದ ಮಾತ್ರ ಸರಿಯಾದ ತೀರ್ಪನ್ನ ಮಾಡಕ್ಕಾಗುತ್ತೆ. (ಆದಿ. 18:25) ತೀರ್ಪು ಮಾಡೋ ಅಧಿಕಾರನ ಯೆಹೋವ ನಮಗೆ ಕೊಟ್ಟಿಲ್ಲ. ಅದಕ್ಕೆ ಯೇಸು ಕೂಡ ತೀರ್ಪು ಮಾಡೋದನ್ನ ಅಥವಾ “ಬೇರೆಯವ್ರಲ್ಲಿ ತಪ್ಪು ಹುಡುಕೋದನ್ನ ನಿಲ್ಲಿಸಿ” ಅಂತ ಹೇಳಿದ್ದಾನೆ.—ಮತ್ತಾ. 7:1.b

19. ತೀರ್ಪು ಮಾಡೋ ಅಧಿಕಾರ ಯೆಹೋವನಿಗೆ ಮಾತ್ರ ಇದೆ ಅಂತ ಯೋಸೇಫ ಹೇಗೆ ತೋರಿಸಿಕೊಟ್ಟ

19 ಯೋಸೇಫನ ಉದಾಹರಣೆ ನೋಡಿ. ಅವನು ಯಾವತ್ತೂ ಯಾರನ್ನೂ ತೀರ್ಪು ಮಾಡಲಿಲ್ಲ. ಅವನ ಅಣ್ಣಂದಿರು ಅವನ ಜೊತೆ ತುಂಬ ಕೆಟ್ಟದ್ದಾಗಿ ನಡಕೊಂಡರು. ಅವನನ್ನ ದಾಸನಾಗಿ ಮಾರಿಬಿಟ್ಟರು. ಅವನು ಸತ್ತುಹೋಗಿದ್ದಾನೆ ಅಂತ ಅವನ ಅಪ್ಪನ ಹತ್ರ ಸುಳ್ಳು ಹೇಳಿದರು. ಆದ್ರೆ ಸ್ವಲ್ಪ ವರ್ಷಗಳಾದ ಮೇಲೆ ಅವನ ಅಣ್ಣಂದಿರು ಯೋಸೇಫನ ಹತ್ರ ಹೋದ್ರು. ಆಗ ಯೋಸೇಫ ಈಜಿಪ್ಟ್‌ನಲ್ಲಿ ದೊಡ್ಡ ಅಧಿಕಾರಿಯಾಗಿದ್ದ. ಅವನು ಮನಸ್ಸು ಮಾಡಿದ್ದರೆ ತನ್ನ ಅಣ್ಣಂದಿರನ್ನ ಏನು ಬೇಕಾದ್ರೂ ಮಾಡಬಹುದಿತ್ತು. ಅವನ ಅಣ್ಣಂದಿರು, ಯೋಸೇಫ ತಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಅಂತ ಅಂದುಕೊಂಡಿದ್ದರು. ಆದ್ರೆ ಯೋಸೇಫ ಅವರಿಗೆ “ಹೆದರಬೇಡಿ. ನಿಮಗೆ ಶಿಕ್ಷೆ ವಿಧಿಸೋಕೆ ನಾನೇನು ದೇವರಾ?” ಅಂತ ಕೇಳಿದ. (ಆದಿ. 37:18-20, 27, 28, 31-35; 50:15-21) ಯೆಹೋವನೇ ತೀರ್ಪು ಮಾಡಲಿ ಅಂತ ಬಿಟ್ಟುಬಿಟ್ಟ.

20-21. ಎಲ್ಲರಿಗಿಂತ ನಾವೇ ನೀತಿವಂತರು ಅಂತ ನಾವು ಯಾಕೆ ಅಂದುಕೊಳ್ಳಬಾರದು?

20 ನಾವು ಕೂಡ ಯೋಸೇಫನ ತರ ಇರಬೇಕು. ತೀರ್ಪು ಮಾಡೋದನ್ನ ಯೆಹೋವನ ಕೈಗೆ ಬಿಟ್ಟುಬಿಡಬೇಕು. ನಮ್ಮ ಸಹೋದರ ಸಹೋದರಿಯರಿಂದ ನಮಗೇನಾದ್ರೂ ಬೇಜಾರಾಗಿದ್ರೆ, ಇವರು ಬೇಕು ಅಂತಾನೇ ಮಾಡಿದರು ಅಂತ ನಾವು ಊಹಿಸಿಕೊಳ್ಳಬಾರದು. ಯಾಕಂದ್ರೆ ನಾವು ಅವರ ಮನಸ್ಸನ್ನ ಓದೋಕೆ ಆಗಲ್ಲ. “ಯೆಹೋವ [ಮಾತ್ರನೇ] ಉದ್ದೇಶಗಳನ್ನ ಪರೀಕ್ಷಿಸ್ತಾನೆ.” (ಜ್ಞಾನೋ. 16:2) ಎಲ್ಲಾ ಹಿನ್ನಲೆ ಸಂಸ್ಕೃತಿಯ ಜನರನ್ನ ಯೆಹೋವ ಪ್ರೀತಿಸುತ್ತಾನೆ. ನಮಗೂ “ನಿಮ್ಮ ಹೃದಯದ ಬಾಗಿಲನ್ನ ವಿಶಾಲವಾಗಿ ತೆರೀರಿ” ಅಂತ ಹೇಳುತ್ತಿದ್ದಾನೆ. (2 ಕೊರಿಂ. 6:13) ಹಾಗಾಗಿ ನಮ್ಮ ಸಹೋದರ ಸಹೋದರಿಯರನ್ನ ತೀರ್ಪು ಮಾಡದೆ ಪ್ರೀತಿಸೋಕೆ ಪ್ರಯತ್ನ ಮಾಡಬೇಕು.

21 ಸತ್ಯದಲ್ಲಿ ಇಲ್ಲದಿರುವವರನ್ನೂ ನಾವು ತೀರ್ಪು ಮಾಡಬಾರದು. (1 ತಿಮೊ. 2:3, 4) ಉದಾಹರಣೆಗೆ, ನಮ್ಮ ಸಂಬಂಧಿಕರು ಯಾವತ್ತೂ ಸತ್ಯಕ್ಕೆ ಬರಲ್ಲ ಅಂತ ನೆನಸಬಾರದು. ಆ ರೀತಿ ಅಂದ್ಕೊಂಡ್ರೆ ನಾವು ಅತೀ ನೀತಿವಂತರಾಗಿ ಬಿಡುತ್ತೀವಿ. ಆದ್ರೆ ಯೆಹೋವ ಆ ರೀತಿ ಅಲ್ಲ. ಆತನು ಈಗಲೂ ಎಲ್ಲರೂ ಪಶ್ಚಾತ್ತಾಪ ಪಟ್ಟು ತನ್ನ ಕಡೆ ಬರಬೇಕಂತ “ಎಲ್ರಿಗೂ” ಅವಕಾಶಗಳನ್ನ ಕೊಟ್ಟಿದ್ದಾನೆ. (ಅ. ಕಾ. 17:30) ಎಲ್ಲರಿಗಿಂತ ನಾವೇ ನೀತಿವಂತರು ಅಂತ ಯಾರು ಅಂದುಕೊಳ್ಳುತಾರೋ ಅವರೇ ಅನೀತಿವಂತರು ಅನ್ನೋದನ್ನ ನಾವು ನೆನಪಲ್ಲಿಡಬೇಕು.

22. ನೀವು ಯೆಹೋವನ ನೀತಿ-ನಿಯಮಗಳನ್ನ ಯಾಕೆ ಪಾಲಿಸಬೇಕು ಅಂದುಕೊಂಡಿದ್ದೀರಾ?

22 ನಾವು ಯೆಹೋವನ ನೀತಿ-ನಿಯಮಗಳನ್ನ ಪಾಲಿಸೋದನ್ನ ಬೇರೆಯವರು ನೋಡುವಾಗ ಅವರಿಗೆ ಖುಷಿಯಾಗಬೇಕು. ನಾವೂ ಅದನ್ನ ಪಾಲಿಸಬೇಕು ಅಂತ ಅವರಿಗೆ ಅನಿಸಬೇಕು. ಅವರು ನಮಗೂ ಯೆಹೋವ ದೇವರಿಗೂ ಹತ್ರ ಆಗಬೇಕು. ಹಾಗಾಗಿ ‘ನೀತಿಗಾಗಿ ಹುಡುಕುತ್ತಾ’ ಇರೋಣ. (ಮತ್ತಾ. 5:6) ಅದಕ್ಕೋಸ್ಕರ ನಾವು ಹಾಕೋ ಪ್ರಯತ್ನಗಳನ್ನ ಯೆಹೋವ ನೋಡುತ್ತಾ ಇದ್ದಾನೆ. ನಮ್ಮನ್ನ ಖಂಡಿತ ಮೆಚ್ಚಿಕೊಳ್ತಾನೆ. ಈ ಲೋಕದಲ್ಲಿ ಇರೋ ಜನರು ಬರ್ತಾ-ಬರ್ತಾ ಅನೀತಿವಂತರಾಗುತ್ತಾ ಇದ್ದಾರೆ. ಆದ್ರೆ ನಾವು ಹುಷಾರಾಗಿರಬೇಕು. “ಯೆಹೋವ ನೀತಿವಂತರನ್ನ ಪ್ರೀತಿಸ್ತಾನೆ” ಅನ್ನೋದನ್ನ ಮರೆಯಬಾರದು.—ಕೀರ್ತ. 146:8.

ನಿಮ್ಮ ಉತ್ತರವೇನು?

  • ನೀತಿ ಅಂದ್ರೆ ಏನು?

  • ಯೆಹೋವನ ನೀತಿ-ನಿಯಮಗಳನ್ನ ಪಾಲಿಸೋದ್ರಿಂದ ನಮಗೆ ಹೇಗೆ ಒಳ್ಳೇದಾಗುತ್ತೆ?

  • ಯೆಹೋವನ ನೀತಿ-ನಿಯಮಗಳ ಮೇಲೆ ಪ್ರೀತಿ ಬೆಳಸಿಕೊಳ್ಳೋಕೆ ನಾವು ಏನು ಮಾಡಬೇಕು?

ಗೀತೆ 134 ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು

a ಈ ಕೆಟ್ಟ ಲೋಕದಲ್ಲಿ ನೀತಿವಂತರು ಸಿಗೋದು ತುಂಬ ಕಮ್ಮಿ. ಆದ್ರೂ ಇವತ್ತು ಲಕ್ಷಾಂತರ ಜನ ನೀತಿವಂತರಾಗಿ ಯೆಹೋವನಿಗೆ ಇಷ್ಟ ಆಗೋ ತರ ನಡೆದುಕೊಳ್ತಿದ್ದಾರೆ. ನೀವೂ ಅವರಲ್ಲಿ ಒಬ್ಬರು. ಯಾಕಂದ್ರೆ ನೀವು ಯೆಹೋವನನ್ನು ಪ್ರೀತಿಸ್ತೀರ. ಯೆಹೋವ ನೀತಿಯನ್ನ ಇಷ್ಟ ಪಡ್ತಾನೆ ಹಾಗಾಗಿ ನಾವೂ ನೀತಿಯನ್ನ ಇಷ್ಟ ಪಡಬೇಕು. ನೀತಿ ಅಂದ್ರೆ ಏನು, ಅದನ್ನ ಪ್ರೀತಿಸೋದ್ರಿಂದ ನಮಗೆ ಹೇಗೆ ಒಳ್ಳೇದಾಗುತ್ತೆ ಮತ್ತು ಅದನ್ನ ಪ್ರೀತಿಸೋಕೆ ನಾವೇನು ಮಾಡಬೇಕು ಅಂತ ಈ ಲೇಖನದಲ್ಲಿ ನೋಡೋಣ.

b ಕೆಲವೊಮ್ಮೆ ಸಭೆಯಲ್ಲಿ ಒಬ್ಬ ವ್ಯಕ್ತಿ ದೇವರ ವಿರುದ್ಧ ದೊಡ್ಡ ತಪ್ಪು ಮಾಡಿದಾಗ, ಅವನು ಪಶ್ಚಾತ್ತಾಪ ಪಟ್ಟಿದ್ದಾನಾ ಇಲ್ವಾ ಅಂತ ನೋಡಿಕೊಂಡು ಹಿರಿಯರು ತೀರ್ಪು ಮಾಡ್ತಾರೆ. (1 ಕೊರಿಂ. 5:11; 6:5; ಯಾಕೋ. 5:14, 15) ಆದರೆ ತಮಗೆ ಬೇರೆಯವರ ಮನಸ್ಸನ್ನ ಓದೋಕೆ ಆಗಲ್ಲ ಮತ್ತು ತಾವು ತೀರ್ಪು ಮಾಡ್ತಿರೋದು ಯೆಹೋವನಿಗೋಸ್ಕರ ಅನ್ನೋದನ್ನ ಯಾವಾಗಲೂ ಮನಸ್ಸಲ್ಲಿ ಇಟ್ಟುಕೊಳ್ತಾರೆ. (2 ಪೂರ್ವಕಾಲವೃತ್ತಾಂತ 19:6 ಹೋಲಿಸಿ.) ಅವರು ತೀರ್ಪು ಕೊಡುವಾಗ ಯೆಹೋವನ ಕರುಣೆ ತೋರಿಸುತ್ತಾರೆ. ಹಾಗಂತ ಆತನ ನೀತಿಯ ಮಟ್ಟಗಳನ್ನ ಅವರು ಬಿಟ್ಟುಕೊಡಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ