1 ಕೊರಿಂಥ
2 ಆದುದರಿಂದ ಸಹೋದರರೇ, ನಾನು ನಿಮ್ಮ ಬಳಿಗೆ ದೇವರ ಪವಿತ್ರ ರಹಸ್ಯವನ್ನು ಪ್ರಕಟಿಸಲು ಬಂದಾಗ ವಾಕ್ಚಾತುರ್ಯದಿಂದಾಗಲಿ ವಿವೇಕಾಡಂಬರದಿಂದಾಗಲಿ ಬರಲಿಲ್ಲ. 2 ನಾನು ನಿಮ್ಮಲ್ಲಿದ್ದಾಗ, ಯೇಸು ಕ್ರಿಸ್ತನನ್ನು ಮತ್ತು ಅವನು ಶೂಲಕ್ಕೇರಿಸಲ್ಪಟ್ಟದ್ದನ್ನು ಹೊರತು ಇನ್ನಾವುದನ್ನೂ ತಿಳಿಯದಿರಲು ನಿರ್ಧರಿಸಿದೆನು. 3 ನಿಮ್ಮ ಬಳಿಗೆ ಬಂದಾಗ ನಾನು ಬಲಹೀನನೂ ಭಯಪಡುವವನೂ ಬಹಳ ನಡುಗುವವನೂ ಆಗಿದ್ದೆನು. 4 ನನ್ನ ಮಾತು ಮತ್ತು ನಾನು ಸಾರಿದ ಸುವಾರ್ತೆಯು ವಿವೇಕಾಡಂಬರದ ಒಡಂಬಡಿಸುವ ಮಾತುಗಳ ಮೇಲೆ ಅವಲಂಬಿಸಿರದೆ ಪವಿತ್ರಾತ್ಮದ * ಮತ್ತು ದೇವರ ಶಕ್ತಿಯ ಪುರಾವೆಯ ಮೇಲೆ ಅವಲಂಬಿಸಿತ್ತು. 5 ಇದರಿಂದಾಗಿ ನಿಮ್ಮ ನಂಬಿಕೆಯು ಮನುಷ್ಯರ ವಿವೇಕದ ಮೇಲಲ್ಲ, ದೇವರ ಶಕ್ತಿಯ ಮೇಲೆ ಅವಲಂಬಿಸಿರುವಂತಾಗುವುದು.
6 ನಾವು ಪ್ರೌಢರ ಮಧ್ಯೆ ವಿವೇಕದ ಕುರಿತು ಮಾತಾಡುತ್ತೇವೆ; ಅದು ಈ ವಿಷಯಗಳ ವ್ಯವಸ್ಥೆಯ ವಿವೇಕವಲ್ಲ, ಈ ವಿಷಯಗಳ ವ್ಯವಸ್ಥೆಯ ಇಲ್ಲವಾಗಲಿಕ್ಕಿರುವ ಅಧಿಪತಿಗಳ ವಿವೇಕವೂ ಅಲ್ಲ. 7 ಆದರೆ ನಾವು ಪವಿತ್ರ ರಹಸ್ಯದಲ್ಲಿರುವ ದೇವರ ವಿವೇಕದ ಕುರಿತು ಮಾತಾಡುತ್ತೇವೆ; ಇದು ಗುಪ್ತವಾಗಿರುವ ವಿವೇಕವಾಗಿದೆ ಮತ್ತು ದೇವರು ಇದನ್ನು ನಮ್ಮ ಮಹಿಮೆಗಾಗಿ ವಿಷಯಗಳ ವ್ಯವಸ್ಥೆಗಿಂತ ಮುಂಚೆಯೇ ಪೂರ್ವನಿಶ್ಚಯಮಾಡಿದನು. 8 ಈ ವಿವೇಕವನ್ನು ಈ ವಿಷಯಗಳ ವ್ಯವಸ್ಥೆಯ ಅಧಿಪತಿಗಳಲ್ಲಿ ಒಬ್ಬರೂ ತಿಳಿದುಕೊಳ್ಳಲಿಲ್ಲ; ಅವರು ಅದನ್ನು ತಿಳಿದುಕೊಂಡಿರುತ್ತಿದ್ದರೆ ಮಹಿಮಾಭರಿತ ಕರ್ತನನ್ನು ಶೂಲಕ್ಕೇರಿಸುತ್ತಿರಲಿಲ್ಲ. 9 ಇದು “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸಿರುವ ವಿಷಯಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಿಸಿಕೊಳ್ಳಲಿಲ್ಲ ಮತ್ತು ಮನುಷ್ಯನ ಹೃದಯದಲ್ಲಿ ಹುಟ್ಟಲೂ ಇಲ್ಲ” ಎಂದು ಬರೆಯಲ್ಪಟ್ಟಿರುವಂತೆಯೇ ಆಯಿತು. 10 ಆದರೆ ದೇವರು ಈ ವಿಷಯಗಳನ್ನು ತನ್ನ ಪವಿತ್ರಾತ್ಮದ ಮೂಲಕ ನಮಗೆ ಪ್ರಕಟಪಡಿಸಿದ್ದಾನೆ. ಆ ಪವಿತ್ರಾತ್ಮವು ಎಲ್ಲ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನೂ ಪರಿಶೋಧಿಸುತ್ತದೆ.
11 ಒಬ್ಬ ಮನುಷ್ಯನ ಆಲೋಚನೆಗಳು ಅವನ ಮನಸ್ಸಿಗಲ್ಲದೆ ಮನುಷ್ಯರಲ್ಲಿ ಮತ್ತಾರಿಗೆ ತಿಳಿಯುವುದು? ಹಾಗೆಯೇ ದೇವರ ಆತ್ಮವು * ತಿಳಿಯಪಡಿಸಿದ ಹೊರತು ಬೇರೆ ಯಾರೂ ದೇವರ ಆಲೋಚನೆಗಳನ್ನು ತಿಳಿದುಕೊಂಡಿರುವುದಿಲ್ಲ. 12 ನಾವು ಲೋಕದ ಮನೋಭಾವವನ್ನಲ್ಲ, ದೇವರಿಂದ ಬರುವ ಆತ್ಮವನ್ನು * ಪಡೆದುಕೊಂಡಿದ್ದೇವೆ; ಹೀಗೆ ದೇವರು ನಮಗೆ ದಯೆಯಿಂದ ನೀಡಿರುವಂಥ ವಿಷಯಗಳನ್ನು ನಾವು ಅರ್ಥಮಾಡಿಕೊಳ್ಳುವಂತಾಗುವುದು. 13 ನಾವು ಈ ವಿಷಯಗಳನ್ನು ಮಾನವ ವಿವೇಕದಿಂದ ಬೋಧಿಸಲ್ಪಟ್ಟ ಮಾತುಗಳಿಂದ ವಿವರಿಸದೆ, ಪವಿತ್ರಾತ್ಮದಿಂದ ಬೋಧಿಸಲ್ಪಟ್ಟ ಆಧ್ಯಾತ್ಮಿಕ ವಿಷಯಗಳನ್ನು ಆಧ್ಯಾತ್ಮಿಕ ಮಾತುಗಳಿಂದ ವಿವರಿಸುತ್ತೇವೆ.
14 ಭೌತಿಕ ಮನುಷ್ಯನು ದೇವರಾತ್ಮದ ವಿಷಯಗಳನ್ನು ಹುಚ್ಚುಮಾತಾಗಿ ಎಣಿಸುವುದರಿಂದ ಅವುಗಳನ್ನು ಸ್ವೀಕರಿಸುವುದಿಲ್ಲ; ಅವುಗಳು ಆಧ್ಯಾತ್ಮಿಕವಾಗಿ ಪರೀಕ್ಷಿಸಲ್ಪಡುವುದರಿಂದ ಅವನು ಅವುಗಳನ್ನು ತಿಳಿದುಕೊಳ್ಳಲಾರನು. 15 ಆಧ್ಯಾತ್ಮಿಕ ಮನುಷ್ಯನಾದರೋ ಎಲ್ಲವನ್ನೂ ಪರೀಕ್ಷಿಸುತ್ತಾನೆ; ಆದರೆ ಅವನು ತಾನೇ ಯಾವ ಮನುಷ್ಯನಿಂದಲೂ ಪರೀಕ್ಷಿಸಲ್ಪಡುವುದಿಲ್ಲ. 16 “ಯೆಹೋವನಿಗೆ ಉಪದೇಶಮಾಡುವಂತೆ ಆತನ ಮನಸ್ಸನ್ನು ಯಾರು ತಿಳಿದಿರುತ್ತಾನೆ?” ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದ್ದೇವೆ.