2 ತಿಮೊತಿ
1 ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿರುವ ಜೀವವಾಗ್ದಾನಕ್ಕನುಸಾರ ದೇವರ ಚಿತ್ತದ ಮೂಲಕ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೆಂಬ ನಾನು 2 ಪ್ರಿಯ ಮಗನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ,
ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ಅಪಾತ್ರ ದಯೆಯೂ * ಕರುಣೆಯೂ ಶಾಂತಿಯೂ ಉಂಟಾಗಲಿ.
3 ನನ್ನ ಪೂರ್ವಜರಂತೆಯೇ ಶುದ್ಧ ಮನಸ್ಸಾಕ್ಷಿಯೊಂದಿಗೆ ನಾನು ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ದೇವರಿಗೆ ಕೃತಜ್ಞನಾಗಿದ್ದೇನೆ; ಹಗಲೂರಾತ್ರಿ ಮಾಡುತ್ತಿರುವ ನನ್ನ ಯಾಚನೆಗಳಲ್ಲಿ ನಿನ್ನನ್ನು ಎಡೆಬಿಡದೆ ಜ್ಞಾಪಿಸಿಕೊಳ್ಳುತ್ತಾ 4 ನಾನು ಆನಂದಭರಿತನಾಗುವಂತೆ ನಿನ್ನ ಕಣ್ಣೀರನ್ನು ನೆನಪಿಸಿಕೊಂಡು ನಿನ್ನನ್ನು ನೋಡಲು ಹಂಬಲಿಸುತ್ತಾ ಇದ್ದೇನೆ. 5 ನಿನ್ನಲ್ಲಿರುವ ನಿಷ್ಕಪಟವಾದ ನಂಬಿಕೆಯು ನನ್ನ ನೆನಪಿಗೆ ಬರುತ್ತದೆ; ಅದು ಮೊದಲಾಗಿ ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನಿಕೆಯಲ್ಲಿಯೂ ಇತ್ತು; ಅಂಥ ನಂಬಿಕೆಯು ನಿನ್ನಲ್ಲಿಯೂ ಇದೆ ಎಂಬ ದೃಢಭರವಸೆ ನನಗಿದೆ.
6 ಈ ಕಾರಣದಿಂದಲೇ ನಾನು ನಿನ್ನ ಮೇಲೆ ಹಸ್ತವನ್ನಿಡುವ ಮೂಲಕ ನಿನಗೆ ದೇವರಿಂದ ದೊರೆತ ವರವನ್ನು ಬೆಂಕಿಯ ಹಾಗೆ ಪ್ರಜ್ವಲಿಸುವಂತೆ ನಿನಗೆ ಜ್ಞಾಪಕಹುಟ್ಟಿಸುತ್ತೇನೆ. 7 ದೇವರು ನಮಗೆ ಹೇಡಿತನದ ಮನೋವೃತ್ತಿಯನ್ನು ಕೊಡದೆ ಶಕ್ತಿ, ಪ್ರೀತಿ ಮತ್ತು ಸ್ವಸ್ಥಬುದ್ಧಿಯ ಮನೋವೃತ್ತಿಯನ್ನು ಕೊಟ್ಟಿದ್ದಾನೆ. 8 ಆದುದರಿಂದ ನಮ್ಮ ಕರ್ತನ ಕುರಿತು ಹೇಳುವ ಸಾಕ್ಷಿಯ ವಿಷಯವಾಗಿಯೂ ಅವನ ನಿಮಿತ್ತವಾಗಿ ಸೆರೆಯವನಾದ ನನ್ನ ವಿಷಯವಾಗಿಯೂ ನೀನು ನಾಚಿಕೆಪಡದೆ ದೇವರ ಶಕ್ತಿಗನುಸಾರ ಸುವಾರ್ತೆಗೋಸ್ಕರ ಕಷ್ಟವನ್ನು ಅನುಭವಿಸು. 9 ಆತನು ನಮ್ಮ ಕ್ರಿಯೆಗಳ ನಿಮಿತ್ತವಾಗಿ ಅಲ್ಲ, ತನ್ನ ಸ್ವಂತ ಉದ್ದೇಶ ಮತ್ತು ಅಪಾತ್ರ ದಯೆಯ ನಿಮಿತ್ತವಾಗಿ ನಮ್ಮನ್ನು ರಕ್ಷಿಸಿ ಪವಿತ್ರ ಕರೆಯಿಂದ ನಮ್ಮನ್ನು ಕರೆದನು. ಈ ಅಪಾತ್ರ ದಯೆಯು ಅನಾದಿಕಾಲಕ್ಕೆ ಮುಂಚೆಯೇ ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ನಮಗೆ ಕೊಡಲ್ಪಟ್ಟಿತು. 10 ಆದರೆ ಈಗ ಅದು ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ಸ್ಪಷ್ಟವಾಗಿ ವ್ಯಕ್ತವಾಗಿದೆ. ಅವನು ಮರಣವನ್ನು ತೆಗೆದುಹಾಕಿ ಸುವಾರ್ತೆಯ ಮೂಲಕ ಜೀವ ಮತ್ತು ನಿರ್ಲಯತ್ವದ ಮೇಲೆ ಬೆಳಕನ್ನು ಬೀರಿದನು. 11 ಈ ಸುವಾರ್ತೆಗಾಗಿಯೇ ನಾನು ಸಾರುವವನಾಗಿಯೂ ಅಪೊಸ್ತಲನಾಗಿಯೂ ಬೋಧಕನಾಗಿಯೂ ನೇಮಿಸಲ್ಪಟ್ಟೆನು.
12 ಆದುದರಿಂದಲೇ ನಾನು ಸಹ ಈ ಎಲ್ಲ ಕಷ್ಟಗಳನ್ನು ಅನುಭವಿಸುತ್ತಿದ್ದೇನೆ, ಆದರೆ ನಾನು ನಾಚಿಕೆಪಡುವುದಿಲ್ಲ. ನಾನು ಯಾರಲ್ಲಿ ನಂಬಿಕೆಯಿಟ್ಟಿದ್ದೇನೋ ಆತನನ್ನು ಬಲ್ಲೆನು ಮತ್ತು ನಾನು ಆತನ ವಶಕ್ಕೆ ಯಾವುದನ್ನು ಕೊಟ್ಟಿದ್ದೇನೋ ಅದನ್ನು ಆತನು ಆ ದಿನದ ವರೆಗೆ ಕಾಪಾಡಲು ಶಕ್ತನಾಗಿದ್ದಾನೆಂಬ ಭರವಸೆ ನನಗಿದೆ. 13 ಕ್ರಿಸ್ತ ಯೇಸುವಿನ ಸಂಬಂಧದಲ್ಲಿನ ನಂಬಿಕೆ ಮತ್ತು ಪ್ರೀತಿಯೊಂದಿಗೆ ನೀನು ನನ್ನಿಂದ ಕೇಳಿಸಿಕೊಂಡ ಸ್ವಸ್ಥಕರವಾದ ಮಾತುಗಳ ನಮೂನೆಯನ್ನು ಭದ್ರವಾಗಿ ಹಿಡಿದುಕೊಂಡಿರು. 14 ನಿನ್ನ ವಶಕ್ಕೆ ಕೊಡಲ್ಪಟ್ಟಿರುವ ಈ ಶ್ರೇಷ್ಠ ಹೊಣೆಗಾರಿಕೆಯನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮದ * ಮೂಲಕ ಕಾಪಾಡು.
15 ಏಷ್ಯಾ ಸೀಮೆಯಲ್ಲಿನ ಜನರೆಲ್ಲರೂ ನನ್ನನ್ನು ಬಿಟ್ಟುಹೋಗಿದ್ದಾರೆಂಬುದು ನಿನಗೆ ಗೊತ್ತಿದೆ. ಫುಗೇಲನೂ ಹೆರ್ಮೊಗೇನನೂ ಇವರಲ್ಲಿ ಸೇರಿದ್ದಾರೆ. 16 ಒನೇಸಿಫೊರನ ಮನೆವಾರ್ತೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಏಕೆಂದರೆ ಅವನು ಅನೇಕಾವರ್ತಿ ನನಗೆ ಚೈತನ್ಯವನ್ನು ತಂದನು ಮತ್ತು ನನ್ನ ಬೇಡಿಗಳ ವಿಷಯವಾಗಿ ಅವನು ನಾಚಿಕೆಪಡಲಿಲ್ಲ. 17 ಅದಕ್ಕೆ ಬದಲಾಗಿ ಅವನು ರೋಮ್ನಲ್ಲಿದ್ದಾಗ ಬಹಳ ಶ್ರದ್ಧೆಯಿಂದ ನನ್ನನ್ನು ಹುಡುಕಿ ಕಂಡುಕೊಂಡನು. 18 ಆ ದಿನದಲ್ಲಿ ಅವನು ಯೆಹೋವನಿಂದ ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ಅನುಗ್ರಹಮಾಡಲಿ. ಅವನು ಎಫೆಸದಲ್ಲಿ ಮಾಡಿದ ಎಲ್ಲ ಸೇವೆಗಳ ಕುರಿತು ನಿನಗೆ ಸಾಕಷ್ಟು ಚೆನ್ನಾಗಿ ಗೊತ್ತಿದೆ.