ಫಿಲಿಪ್ಪಿ
1 ಕ್ರಿಸ್ತ ಯೇಸುವಿನ ದಾಸರಾಗಿರುವ ಪೌಲನೂ ತಿಮೊಥೆಯನೂ ಫಿಲಿಪ್ಪಿಯಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿರುವ ಎಲ್ಲ ಪವಿತ್ರ ಜನರಿಗೂ ಅವರಲ್ಲಿರುವ ಮೇಲ್ವಿಚಾರಕರಿಗೂ ಶುಶ್ರೂಷಾ ಸೇವಕರಿಗೂ ಬರೆಯುವುದೇನೆಂದರೆ,
2 ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಉಂಟಾಗಲಿ.
3 ಪ್ರತಿಬಾರಿ ನಾನು ನಿಮ್ಮನ್ನು ನೆನಸಿಕೊಳ್ಳುವಾಗೆಲ್ಲ ನನ್ನ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 4 ನಾನು ನಿಮ್ಮೆಲ್ಲರಿಗೋಸ್ಕರ ಮಾಡುವ ನನ್ನ ಪ್ರತಿಯೊಂದು ಯಾಚನೆಯಲ್ಲಿ ಆನಂದದಿಂದಲೇ ನನ್ನ ಯಾಚನೆಯನ್ನು ಸಲ್ಲಿಸುವವನಾಗಿದ್ದೇನೆ. 5 ಏಕೆಂದರೆ ನೀವು ಮೊದಲ ದಿನದಿಂದ ಈ ಗಳಿಗೆಯ ವರೆಗೆ ಸುವಾರ್ತೆಗೆ ಸಹಕಾರ ನೀಡಿದ್ದೀರಿ. 6 ನಿಮ್ಮಲ್ಲಿ ಒಂದು ಒಳ್ಳೇ ಕೆಲಸವನ್ನು ಆರಂಭಿಸಿದಾತನು ಯೇಸು ಕ್ರಿಸ್ತನ ದಿನದ ವರೆಗೆ ಅದನ್ನು ಪೂರ್ಣತೆಗೆ ತರುವನು ಎಂಬ ವಿಷಯದಲ್ಲಿ ನನಗೆ ಭರವಸೆಯಿದೆ. 7 ನಾನು ನಿಮ್ಮನ್ನು ನನ್ನ ಹೃದಯದಲ್ಲಿಟ್ಟುಕೊಂಡಿರುವುದರಿಂದ, ನನ್ನ ಸೆರೆಯ ಬೇಡಿಗಳಲ್ಲಿಯೂ ಸುವಾರ್ತೆಯನ್ನು ಸಮರ್ಥಿಸಿ ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸುವುದರಲ್ಲಿಯೂ ನೀವೆಲ್ಲರೂ ನನ್ನೊಂದಿಗೆ ಅಪಾತ್ರ ದಯೆಯಲ್ಲಿ ಪಾಲಿಗರಾಗಿರುವುದರಿಂದ ನಿಮ್ಮೆಲ್ಲರ ವಿಷಯದಲ್ಲಿ ನಾನು ಹೀಗೆ ಯೋಚಿಸುತ್ತಿರುವುದು ಸಂಪೂರ್ಣವಾಗಿ ನ್ಯಾಯಸಮ್ಮತವಾದುದಾಗಿದೆ.
8 ಕ್ರಿಸ್ತ ಯೇಸುವಿಗಿರುವಂಥ ಕೋಮಲ ಮಮತೆಯಿಂದ ನಿಮ್ಮೆಲ್ಲರಿಗೋಸ್ಕರ ನಾನು ಎಷ್ಟು ಹಂಬಲಿಸುತ್ತಿದ್ದೇನೆ ಎಂಬುದಕ್ಕೆ ದೇವರೇ ನನ್ನ ಸಾಕ್ಷಿಯಾಗಿದ್ದಾನೆ. 9 ನಿಮ್ಮ ಪ್ರೀತಿಯು ನಿಷ್ಕೃಷ್ಟ ಜ್ಞಾನ ಮತ್ತು ಪೂರ್ಣ ವಿವೇಚನೆಯೊಂದಿಗೆ ಹೆಚ್ಚುತ್ತಾ ಹೆಚ್ಚುತ್ತಾ ಸಮೃದ್ಧಿಹೊಂದುವಂತೆಯೂ 10 ಕ್ರಿಸ್ತನ ದಿನದ ವರೆಗೆ ನೀವು ನಿರ್ದೋಷಿಗಳೂ ಇತರರನ್ನು ಎಡವಿಸದಿರುವವರೂ ಆಗಿರಲಿಕ್ಕಾಗಿ ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವವರಾಗಿ ಇರುವಂತೆಯೂ 11 ದೇವರ ಮಹಿಮೆ ಮತ್ತು ಸ್ತುತಿಗಾಗಿ ಯೇಸು ಕ್ರಿಸ್ತನ ಮೂಲಕವಾಗಿರುವ ನೀತಿಯ ಫಲದಿಂದ ತುಂಬಿರುವವರಾಗಿರುವಂತೆಯೂ ನಾನು ಪ್ರಾರ್ಥಿಸುತ್ತಾ ಇರುತ್ತೇನೆ.
12 ಸಹೋದರರೇ, ನನಗೆ ಸಂಭವಿಸಿರುವ ಸಂಗತಿಗಳಿಂದ ಸುವಾರ್ತೆಯು ಅಭಿವೃದ್ಧಿ ಹೊಂದಿದೆಯೇ ಹೊರತು ಅದು ಅವನತಿ ಹೊಂದಲಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. 13 ಇದರಿಂದ ನನ್ನ ಬೇಡಿಗಳು ಕ್ರಿಸ್ತನಿಗೆ ಸಂಬಂಧಿಸಿದವುಗಳಾಗಿವೆ ಎಂಬುದು ಅರಮನೆಯ ಅಂಗರಕ್ಷಕ ದಳದವರೆಲ್ಲರಿಗೂ ಉಳಿದವರೆಲ್ಲರಿಗೂ ಬಹಿರಂಗವಾಗಿ ಪ್ರಸಿದ್ಧವಾಗಿವೆ; 14 ಮತ್ತು ಕರ್ತನಲ್ಲಿರುವ ಸಹೋದರರಲ್ಲಿ ಹೆಚ್ಚಿನವರು ನನ್ನ ಸೆರೆಯ ಬೇಡಿಗಳ ನಿಮಿತ್ತವಾಗಿಯೇ ಭರವಸೆಯುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಮಾತಾಡಲು ಇನ್ನಷ್ಟು ಧೈರ್ಯವನ್ನು ತೋರಿಸುತ್ತಿದ್ದಾರೆ.
15 ಕೆಲವರು ಕ್ರಿಸ್ತನ ಕುರಿತು ಸಾರುವುದು ಅಸೂಯೆ ಮತ್ತು ಪ್ರತಿಸ್ಪರ್ಧೆಯ ಮೂಲಕವೆಂಬುದು ನಿಜವಾದರೂ ಇತರರು ಒಳ್ಳೇ ಭಾವನೆಯಿಂದಲೂ ಸಾರುತ್ತಿದ್ದಾರೆ. 16 ಇವರು ಪ್ರೀತಿಯಿಂದಾಗಿ ಕ್ರಿಸ್ತನ ಕುರಿತು ಪ್ರಸಿದ್ಧಪಡಿಸುತ್ತಿದ್ದಾರೆ; ಏಕೆಂದರೆ ನಾನು ಸುವಾರ್ತೆಯ ಸಮರ್ಥನೆಗಾಗಿ ಇಲ್ಲಿ ಇರಿಸಲ್ಪಟ್ಟಿದ್ದೇನೆ ಎಂಬುದನ್ನು ಅವರು ಬಲ್ಲವರಾಗಿದ್ದಾರೆ. 17 ಮೊದಲನೆಯವರಾದರೋ ಯಥಾರ್ಥವಾದ ಹೇತುವಿನಿಂದಲ್ಲ ಬದಲಾಗಿ ಕಲಹಶೀಲ ಮನೋಭಾವದಿಂದ ಸಾರುತ್ತಾರೆ; ಏಕೆಂದರೆ ನನ್ನ ಸೆರೆಯ ಬೇಡಿಗಳಲ್ಲಿಯೂ ನನಗೆ ಸಂಕಟವನ್ನು ಉಂಟುಮಾಡುವ ಯೋಚನೆ ಅವರಿಗಿದೆ. 18 ಹಾಗಾದರೆ ಏನು? ಕಪಟದಿಂದಾಗಲಿ ಸತ್ಯದಿಂದಾಗಲಿ ಪ್ರತಿಯೊಂದು ರೀತಿಯಿಂದಾದರೂ ಕ್ರಿಸ್ತನು ಪ್ರಸಿದ್ಧಪಡಿಸಲ್ಪಡುತ್ತಿದ್ದಾನೆ ಮತ್ತು ಇದಕ್ಕಾಗಿ ನಾನು ಹರ್ಷಪಡುತ್ತೇನೆ. ವಾಸ್ತವದಲ್ಲಿ ನಾನು ಹರ್ಷಪಡುತ್ತಾ ಇರುವೆನು; 19 ಏಕೆಂದರೆ ನಿಮ್ಮ ಯಾಚನೆಯಿಂದಲೂ ಯೇಸು ಕ್ರಿಸ್ತನ ಪವಿತ್ರಾತ್ಮದ * ಒದಗಿಸುವಿಕೆಯಿಂದಲೂ ಇದು ನನಗೆ ರಕ್ಷಣೆಯನ್ನು ಉಂಟುಮಾಡುವುದೆಂದು ನಾನು ಬಲ್ಲೆನು. 20 ನಾನು ಯಾವುದೇ ವಿಷಯದಲ್ಲಿ ನಾಚಿಕೆಪಡದೆ ಮಹಾ ವಾಕ್ಸರಳತೆಯೊಂದಿಗೆ ಜೀವದ ಮೂಲಕವಾಗಿರಲಿ ಮರಣದ ಮೂಲಕವಾಗಿರಲಿ ಕ್ರಿಸ್ತನು ನನ್ನ ದೇಹದ ಮುಖಾಂತರ ಎಂದಿನಂತೆ ಈಗಲೂ ಮಹಿಮೆಗೇರಿಸಲ್ಪಡಲಿ ಎಂಬುದು ನಾನು ಬಹಳ ತವಕದಿಂದ ಎದುರುನೋಡುವ ಮತ್ತು ನಿರೀಕ್ಷಿಸುವ ವಿಷಯವಾಗಿದೆ.
21 ನನ್ನ ವಿಷಯದಲ್ಲಾದರೋ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ. 22 ಶರೀರದಲ್ಲಿಯೇ ಬದುಕುವುದೆಂದರೆ ಇದು ನನ್ನ ಕಾರ್ಯದ ಫಲವಾಗಿದೆ—ಆದರೂ ಯಾವುದನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಾನು ತಿಳಿಯಪಡಿಸುವುದಿಲ್ಲ. 23 ನಾನು ಈ ಎರಡು ವಿಷಯಗಳಿಂದಾಗಿ ಒತ್ತಡಕ್ಕೊಳಗಾಗಿದ್ದೇನೆ. ಆದರೆ ಶರೀರದಿಂದ ಬಿಡುಗಡೆಹೊಂದಿ ಕ್ರಿಸ್ತನೊಂದಿಗೆ ಇರುವುದನ್ನೇ ನಾನು ಇಷ್ಟಪಡುತ್ತೇನೆ; ಏಕೆಂದರೆ ಇದು ಎಷ್ಟೋ ಉತ್ತಮವಾದದ್ದಾಗಿದೆ ಎಂಬುದು ಖಂಡಿತ. 24 ಆದರೆ ನಿಮ್ಮ ಕಾರಣದಿಂದ ನಾನು ಶರೀರದಲ್ಲಿಯೇ ಉಳಿಯುವುದು ಹೆಚ್ಚು ಆವಶ್ಯಕವಾದದ್ದಾಗಿದೆ. 25 ಇದನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿರುವುದರಿಂದ, ನಿಮ್ಮ ಅಭಿವೃದ್ಧಿಗಾಗಿಯೂ ನಿಮ್ಮ ನಂಬಿಕೆಗೆ ಸೇರಿದ ಆನಂದಕ್ಕಾಗಿಯೂ ನಾನು ಶರೀರದಲ್ಲಿ ಉಳಿದು ನಿಮ್ಮೆಲ್ಲರೊಂದಿಗೆ ಇರುವೆನು ಎಂಬುದು ನನಗೆ ತಿಳಿದಿದೆ. 26 ಆದುದರಿಂದ ನಾನು ಪುನಃ ನಿಮ್ಮೊಂದಿಗಿರುವಾಗ ನನ್ನ ನಿಮಿತ್ತ ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಅತ್ಯಾನಂದವು ಇನ್ನೂ ಅತ್ಯಧಿಕವಾಗುವುದು.
27 ಕ್ರಿಸ್ತನ ಕುರಿತಾದ ಸುವಾರ್ತೆಗೆ ಯೋಗ್ಯವಾದ ರೀತಿಯಲ್ಲಿಯೇ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ ದೂರದಲ್ಲಿದ್ದರೂ ಸರಿಯೇ, ನೀವು ಒಂದೇ ಮನಸ್ಸಿನಲ್ಲಿ ದೃಢವಾಗಿ ನಿಂತು ಒಂದೇ ಪ್ರಾಣದೊಂದಿಗೆ ಸುವಾರ್ತೆಯ ನಂಬಿಕೆಗೋಸ್ಕರ ಒಂದಾಗಿ ಹೋರಾಡುತ್ತಿದ್ದೀರಿ 28 ಮತ್ತು ನಿಮ್ಮ ವಿರೋಧಿಗಳ ನಿಮಿತ್ತ ಯಾವುದೇ ವಿಷಯದಲ್ಲಿ ಹೆದರಿಹೋಗಿಲ್ಲ ಎಂದು ನಾನು ನಿಮ್ಮ ಕುರಿತು ಕೇಳಿಸಿಕೊಂಡಂತಾಗುವುದು. ಈ ವಿಷಯವು ತಾನೇ ಅವರಿಗೆ ನಾಶನದ ರುಜುವಾತಾಗಿದೆ, ಆದರೆ ನಿಮಗೆ ರಕ್ಷಣೆಯ ರುಜುವಾತಾಗಿದೆ ಮತ್ತು ಈ ಸೂಚನೆಯು ದೇವರಿಂದ ಬಂದದ್ದಾಗಿದೆ. 29 ಏಕೆಂದರೆ ಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದು ಮಾತ್ರವಲ್ಲ, ಅವನಿಗಾಗಿ ಬಾಧೆಯನ್ನೂ ಅನುಭವಿಸುವ ಸದವಕಾಶವು ನಿಮಗೆ ಕೊಡಲ್ಪಟ್ಟಿತು. 30 ನನ್ನ ವಿಷಯದಲ್ಲಿ ನೀವು ನೋಡಿದ ಮತ್ತು ನನ್ನ ವಿಷಯದಲ್ಲಿ ಈಗ ಕೇಳಿಸಿಕೊಳ್ಳುತ್ತಿರುವ ಅದೇ ಹೋರಾಟವು ನಿಮಗೂ ಇದೆ.