2 ಕೊರಿಂಥ
2 ಆದುದರಿಂದಲೇ ಪುನಃ ನಿಮ್ಮ ಬಳಿಗೆ ದುಃಖದಿಂದ ಬರಬಾರದೆಂದು ನನ್ನಲ್ಲಿ ತೀರ್ಮಾನಿಸಿಕೊಂಡಿದ್ದೇನೆ. 2 ನಾನು ನಿಮ್ಮನ್ನು ದುಃಖಪಡಿಸುವುದಾದರೆ, ನನ್ನಿಂದ ದುಃಖಪಡಿಸಲ್ಪಟ್ಟವರಲ್ಲದೆ ನನ್ನನ್ನು ಸಂತೋಷಪಡಿಸುವವರು ಬೇರೆ ಯಾರಿದ್ದಾರೆ? 3 ನಾನು ಬಂದಾಗ ಯಾರಿಂದ ಸಂತೋಷಪಡಬೇಕೋ ಅವರಿಂದಲೇ ದುಃಖಿತನಾಗಬಾರದೆಂಬ ಕಾರಣಕ್ಕಾಗಿ ಈ ಸಂಗತಿಯನ್ನು ಬರೆದೆನು; ನನ್ನ ಸಂತೋಷವೇ ನಿಮ್ಮೆಲ್ಲರ ಸಂತೋಷವಾಗಿದೆ ಎಂಬ ವಿಷಯದಲ್ಲಿ ನನಗೆ ನಿಮ್ಮೆಲ್ಲರ ಮೇಲೆ ಭರವಸೆಯಿದೆ. 4 ನಿಮಗೆ ದುಃಖವನ್ನು ಉಂಟುಮಾಡಬೇಕೆಂದಲ್ಲ, ನಿಮ್ಮ ಮೇಲೆ ನನಗಿರುವ ಹೆಚ್ಚು ವಿಶೇಷವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂದೇ ನಾನು ಬಹಳ ಕಣ್ಣೀರಿನೊಂದಿಗೆ ಬಹು ಸಂಕಟದಿಂದಲೂ ಹೃದಯದ ವೇದನೆಯಿಂದಲೂ ನಿಮಗೆ ಬರೆದೆನು.
5 ಯಾವನಾದರೂ ದುಃಖವನ್ನು ಉಂಟುಮಾಡಿರುವಲ್ಲಿ, ಅವನು ನನ್ನನ್ನಲ್ಲ ಸ್ವಲ್ಪಮಟ್ಟಿಗೆ ನಿಮ್ಮೆಲ್ಲರನ್ನೂ ದುಃಖಪಡಿಸಿದ್ದಾನೆ. ನಾನು ತೀರ ಕಟುವಾದ ಮಾತುಗಳನ್ನು ಆಡಲು ಬಯಸುವುದಿಲ್ಲ. 6 ಅಂಥ ಮನುಷ್ಯನಿಗೆ ಹೆಚ್ಚಿನವರಿಂದ ನೀಡಲ್ಪಟ್ಟ ಖಂಡನೆಯೇ ಸಾಕು. 7 ಈಗ ನೀವು ಅವನನ್ನು ದಯಾಭಾವದಿಂದ ಕ್ಷಮಿಸಬೇಕು ಮತ್ತು ಸಾಂತ್ವನಗೊಳಿಸಬೇಕು; ಇಲ್ಲವಾದರೆ ಅವನು ವಿಪರೀತವಾಗಿ ದುಃಖಿತನಾಗಿರುವ ಕಾರಣ ಹೇಗೋ ಕಬಳಿಸಲ್ಪಟ್ಟಾನು. 8 ಆದುದರಿಂದ ಅವನ ಕಡೆಗಿರುವ ನಿಮ್ಮ ಪ್ರೀತಿಯನ್ನು ಸ್ಥಿರೀಕರಿಸುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇನೆ. 9 ಎಲ್ಲ ಸಂಗತಿಗಳಲ್ಲಿ ನೀವು ವಿಧೇಯರಾಗಿದ್ದೀರೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿಯೂ ನಾನು ಇದನ್ನು ಬರೆದೆನು. 10 ನೀವು ದಯೆಯಿಂದ ಯಾವನಿಗಾದರೂ ಯಾವುದನ್ನಾದರೂ ಕ್ಷಮಿಸುವಲ್ಲಿ ನಾನೂ ಕ್ಷಮಿಸುತ್ತೇನೆ. ವಾಸ್ತವದಲ್ಲಿ, ನನ್ನ ಮಟ್ಟಿಗೆ ಹೇಳುವುದಾದರೆ, ನಾನು ದಯೆಯಿಂದ ಏನನ್ನಾದರೂ ಕ್ಷಮಿಸಿರುವಲ್ಲಿ—ದಯೆಯಿಂದ ಯಾವುದನ್ನಾದರೂ ಕ್ಷಮಿಸಿರುವಲ್ಲಿ—ಅದು ಕ್ರಿಸ್ತನ ದೃಷ್ಟಿಯಲ್ಲಿ ನಿಮ್ಮ ನಿಮಿತ್ತವಾಗಿದೆ. 11 ಹೀಗಿರುವುದರಿಂದ ನಾವು ಸೈತಾನನ ವಶಕ್ಕೆ ಒಳಗಾಗದಿರುವೆವು; ಏಕೆಂದರೆ ಅವನ ಕುತಂತ್ರಗಳ ವಿಷಯದಲ್ಲಿ ನಾವು ಅಜ್ಞಾನಿಗಳಾಗಿರುವುದಿಲ್ಲ.
12 ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಸಾರಲು ನಾನು ತ್ರೋವಕ್ಕೆ ಬಂದಾಗ ಕರ್ತನಲ್ಲಿ ನನಗೆ ಸಂದರ್ಭದ ದ್ವಾರವು ತೆರೆಯಲ್ಪಟ್ಟಿತು. 13 ನನ್ನ ಸಹೋದರನಾದ ತೀತನು ಸಿಗದೇ ಇದ್ದ ಕಾರಣ ನನ್ನ ಮನಸ್ಸಿಗೆ ಉಪಶಮನವಾಗಲಿಲ್ಲ; ಆದರೂ ನಾನು ಅಲ್ಲಿದ್ದ ಸಹೋದರರಿಗೆ ವಿದಾಯ ಹೇಳಿ ಅಲ್ಲಿಂದ ಹೊರಟು ಮಕೆದೋನ್ಯಕ್ಕೆ ಹೋದೆನು.
14 ಕ್ರಿಸ್ತನೊಂದಿಗೆ ಅನ್ಯೋನ್ಯತೆಯಲ್ಲಿ ನಮ್ಮನ್ನು ಯಾವಾಗಲೂ ವಿಜಯೋತ್ಸವದ ಮೆರವಣಿಗೆಯಲ್ಲಿ ನಡೆಸುವ ಹಾಗೂ ದೇವರ ಕುರಿತಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲ ಸ್ಥಳಗಳಲ್ಲಿ ಪ್ರಸರಿಸುವ ದೇವರಿಗೆ ಕೃತಜ್ಞತೆ ಸಲ್ಲಿಸಲ್ಪಡಲಿ! 15 ರಕ್ಷಣೆಯ ಮಾರ್ಗದಲ್ಲಿರುವವರ ಮತ್ತು ನಾಶನದ ಮಾರ್ಗದಲ್ಲಿರುವವರ ನಡುವೆ ನಾವು ದೇವರಿಗೆ ಕ್ರಿಸ್ತನ ಪರಿಮಳವಾಗಿದ್ದೇವೆ. 16 ನಾಶನದ ಮಾರ್ಗದಲ್ಲಿರುವವರಿಗೆ ಮರಣದಿಂದ ಹುಟ್ಟಿ ಮರಣಕ್ಕೆ ನಡೆಸುವ ವಾಸನೆಯಾಗಿಯೂ ರಕ್ಷಣೆಯ ಮಾರ್ಗದಲ್ಲಿರುವವರಿಗೆ ಜೀವದಿಂದ ಹುಟ್ಟಿ ಜೀವಕ್ಕೆ ನಡೆಸುವ ವಾಸನೆಯಾಗಿಯೂ ಇದ್ದೇವೆ. ಇಂಥ ಕಾರ್ಯಗಳಿಗೆ ಯಾರು ತಕ್ಕಷ್ಟು ಅರ್ಹರಾಗಿದ್ದಾರೆ? 17 ನಾವೇ; ಏಕೆಂದರೆ ನಾವು ಅನೇಕರಂತೆ ದೇವರ ವಾಕ್ಯದ ವ್ಯಾಪಾರಿಗಳಲ್ಲ; * ನಾವು ಯಥಾರ್ಥಭಾವದಿಂದ ದೇವರಿಂದ ಕಳುಹಿಸಲ್ಪಟ್ಟವರಿಗೆ ತಕ್ಕ ಹಾಗೆ ಕ್ರಿಸ್ತನಿಗೆ ಅನ್ಯೋನ್ಯತೆಯಲ್ಲಿ ದೇವರ ಸಮಕ್ಷಮದಲ್ಲಿಯೇ ಮಾತಾಡುತ್ತಿದ್ದೇವೆ.