ಮತ್ತಾಯ
22 ಯೇಸು ಪುನಃ ಅವರೊಂದಿಗೆ ದೃಷ್ಟಾಂತಗಳ ಮೂಲಕ ಮಾತಾಡುತ್ತಾ ಹೀಗಂದನು: 2 “ಸ್ವರ್ಗದ ರಾಜ್ಯವು ತನ್ನ ಮಗನಿಗೆ ಮದುವೆ ಔತಣವನ್ನು ಏರ್ಪಡಿಸಿದ ಒಬ್ಬ ಮನುಷ್ಯನಿಗೆ, ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 3 ಅವನು ಮದುವೆ ಔತಣಕ್ಕಾಗಿ ಆಮಂತ್ರಿಸಿದವರನ್ನು ಕರೆಯಲು ತನ್ನ ಆಳುಗಳನ್ನು ಕಳುಹಿಸಿದನು; ಆದರೆ ಅವರಿಗೆ ಬರಲು ಇಷ್ಟವಿರಲಿಲ್ಲ. 4 ಪುನಃ ಅವನು ಬೇರೆ ಆಳುಗಳನ್ನು ಕರೆದು, ‘ನೀವು ಆಮಂತ್ರಿಸಲ್ಪಟ್ಟವರ ಬಳಿಗೆ ಹೋಗಿ “ಇಗೋ, ನಾನು ಅಡುಗೆಯನ್ನು ಸಿದ್ಧಪಡಿಸಿದ್ದೇನೆ; ನನ್ನ ಹೋರಿಗಳನ್ನೂ ಕೊಬ್ಬಿದ ಪಶುಗಳನ್ನೂ ಕೊಯಿಸಿದ್ದೇನೆ ಮತ್ತು ಎಲ್ಲವೂ ಸಿದ್ಧವಾಗಿದೆ. ಮದುವೆ ಔತಣಕ್ಕೆ ಬನ್ನಿ” ಎಂದು ಹೇಳಿ’ ಎಂದು ಅಪ್ಪಣೆಕೊಟ್ಟು ಕಳುಹಿಸಿದನು. 5 ಆದರೆ ಆಮಂತ್ರಿಸಲ್ಪಟ್ಟವರು ಇದನ್ನು ಲಕ್ಷ್ಯಮಾಡದೆ ಒಬ್ಬನು ತನ್ನ ಹೊಲಕ್ಕೂ ಇನ್ನೊಬ್ಬನು ತನ್ನ ವ್ಯಾಪಾರಕ್ಕೂ ಹೋಗಿಬಿಟ್ಟರು; 6 ಉಳಿದವರು ಅವನ ಆಳುಗಳನ್ನು ಹಿಡಿದು ಅವಮಾನಪಡಿಸಿ ಅವರನ್ನು ಕೊಂದುಹಾಕಿದರು.
7 “ಅರಸನು ಕ್ರೋಧಗೊಂಡು ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ನಾಶಮಾಡಿದನು ಮತ್ತು ಅವರ ಪಟ್ಟಣವನ್ನು ಸುಟ್ಟುಬಿಟ್ಟನು. 8 ಬಳಿಕ ತನ್ನ ಆಳುಗಳಿಗೆ ಅವನು ‘ಮದುವೆ ಔತಣವು ಸಿದ್ಧವಾಗಿದೆ, ಆದರೆ ಆಮಂತ್ರಿಸಲ್ಪಟ್ಟವರು ಯೋಗ್ಯರಾಗಿರಲಿಲ್ಲ. 9 ಆದುದರಿಂದ ನೀವು ಹೆದ್ದಾರಿಗಳಿಗೆ ಹೋಗಿ ಕಂಡವರನ್ನೆಲ್ಲಾ ಮದುವೆ ಔತಣಕ್ಕೆ ಆಮಂತ್ರಿಸಿರಿ’ ಎಂದನು. 10 ಅದೇ ರೀತಿಯಲ್ಲಿ ಆಳುಗಳು ಹೆದ್ದಾರಿಗಳಿಗೆ ಹೋಗಿ ತಮಗೆ ಸಿಕ್ಕಿದ ಕೆಟ್ಟವರನ್ನೂ ಒಳ್ಳೆಯವರನ್ನೂ ಒಟ್ಟುಗೂಡಿಸಿದರು; ಹೀಗೆ ವಿವಾಹ ಸಭಾಂಗಣವು ಊಟಕ್ಕೆ ಕುಳಿತಿದ್ದವರಿಂದ ತುಂಬಿಹೋಯಿತು.
11 “ಅರಸನು ಅತಿಥಿಗಳನ್ನು ನೋಡಲಿಕ್ಕಾಗಿ ಒಳಗೆ ಬಂದಾಗ ಮದುವೆ ಬಟ್ಟೆಯನ್ನು ಧರಿಸಿಕೊಂಡಿರದ ಒಬ್ಬ ಮನುಷ್ಯನನ್ನು ಕಂಡು 12 ಅವನಿಗೆ ‘ಏನಪ್ಪಾ, ಮದುವೆ ಬಟ್ಟೆಯನ್ನು ಹಾಕಿಕೊಳ್ಳದೆ ನೀನು ಹೇಗೆ ಒಳಗೆ ಬಂದೆ?’ ಎಂದು ಕೇಳಿದನು. ಅವನಿಂದ ಮಾತೇ ಹೊರಡಲಿಲ್ಲ. 13 ಆಗ ಅರಸನು ತನ್ನ ಸೇವಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗೆ ಕತ್ತಲೆಗೆ ಎಸೆಯಿರಿ. ಅಲ್ಲಿ ಅವನ ಗೋಳಾಟವೂ ಹಲ್ಲುಕಡಿಯೋಣವೂ ಇರುವುದು’ ಎಂದು ಹೇಳಿದನು.
14 “ಆಮಂತ್ರಿಸಲ್ಪಟ್ಟವರು ಅನೇಕ ಮಂದಿ, ಆದರೆ ಆರಿಸಲ್ಪಟ್ಟವರು ಸ್ವಲ್ಪವೇ ಮಂದಿ.”
15 ಆಗ ಫರಿಸಾಯರು ಹೊರಟುಹೋಗಿ ಅವನನ್ನು ಮಾತಿನಲ್ಲಿ ಸಿಕ್ಕಿಸುವುದಕ್ಕಾಗಿ ಸಮಾಲೋಚನೆ ನಡೆಸಿದರು. 16 ಆದುದರಿಂದ ಅವರು ತಮ್ಮ ಶಿಷ್ಯರನ್ನು ಹೆರೋದ್ಯರೊಂದಿಗೆ ಅವನ ಬಳಿಗೆ ಕಳುಹಿಸಿದರು ಮತ್ತು ಅವರು “ಬೋಧಕನೇ, ನೀನು ಸತ್ಯವಂತನೂ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುವವನೂ ಯಾರಿಗೂ ಭಯಪಡದವನೂ ಆಗಿದ್ದೀ; ನೀನು ಮನುಷ್ಯರ ಹೊರತೋರಿಕೆಯನ್ನು ನೋಡುವುದಿಲ್ಲ ಎಂಬುದನ್ನು ನಾವು ಬಲ್ಲೆವು. 17 ಆದುದರಿಂದ ನಿನ್ನ ಅಭಿಪ್ರಾಯವೇನು? ಕೈಸರನಿಗೆ ತಲೆಗಂದಾಯವನ್ನು ನೀಡುವುದು ನ್ಯಾಯಸಮ್ಮತವೋ ಅಲ್ಲವೊ? ನಮಗೆ ಹೇಳು” ಅಂದರು. 18 ಯೇಸು ಅವರ ದುಷ್ಟತನವನ್ನು ಅರಿತವನಾಗಿ, “ಕಪಟಿಗಳೇ, ನೀವು ನನ್ನನ್ನು ಪರೀಕ್ಷಿಸುವುದೇಕೆ? 19 ತಲೆಗಂದಾಯದ ನಾಣ್ಯವನ್ನು ನನಗೆ ತೋರಿಸಿರಿ” ಎಂದನು. ಅವರು ಅವನಿಗೊಂದು ದಿನಾರ ನಾಣ್ಯವನ್ನು ತಂದುಕೊಟ್ಟರು. 20 ಆಗ ಅವನು ಅವರಿಗೆ, “ಇದರ ಮೇಲಿರುವ ಬಿಂಬವೂ ಮೇಲ್ಬರಹವೂ ಯಾರದು?” ಎಂದು ಕೇಳಿದಾಗ, 21 “ಕೈಸರನದು” ಎಂದು ಹೇಳಿದರು. ಅದಕ್ಕೆ ಯೇಸು, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ” ಅಂದನು. 22 ಅವರಿದನ್ನು ಕೇಳಿಸಿಕೊಂಡಾಗ ಆಶ್ಚರ್ಯಪಟ್ಟು ಅವನನ್ನು ಬಿಟ್ಟುಹೋದರು.
23 ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಅವನ ಬಳಿಗೆ ಬಂದು, 24 “ಬೋಧಕನೇ ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗಾಗಿ ಸಂತಾನವನ್ನು ಪಡೆಯಬೇಕು’ ಎಂದು ಮೋಶೆ ಹೇಳಿದನು. 25 ನಮ್ಮಲ್ಲಿ ಏಳು ಮಂದಿ ಅಣ್ಣತಮ್ಮಂದಿರಿದ್ದರು; ಮೊದಲನೆಯವನು ಮದುವೆಯಾಗಿ ತೀರಿಹೋದನು. ಅವನಿಗೆ ಸಂತಾನವಿಲ್ಲದ ಕಾರಣ ತಮ್ಮನಿಗಾಗಿ ಹೆಂಡತಿಯನ್ನು ಬಿಟ್ಟುಹೋದನು. 26 ಅದರಂತೆಯೇ ಎರಡನೆಯವನಿಗೂ ಮೂರನೆಯವನಿಗೂ ಹೀಗೆ ಎಲ್ಲ ಏಳು ಮಂದಿಯ ತನಕವೂ ಸಂಭವಿಸಿತು. 27 ಕೊನೆಗೆ ಆ ಸ್ತ್ರೀಯೂ ಸತ್ತಳು. 28 ಹಾಗಾದರೆ ಪುನರುತ್ಥಾನದಲ್ಲಿ ಅವಳು ಆ ಏಳು ಮಂದಿಯಲ್ಲಿ ಯಾರಿಗೆ ಹೆಂಡತಿಯಾಗಿರುವಳು? ಏಕೆಂದರೆ ಏಳು ಮಂದಿಯೂ ಅವಳನ್ನು ಮದುವೆಮಾಡಿಕೊಂಡಿದ್ದರಲ್ಲಾ” ಎಂದರು.
29 ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಅವರಿಗೆ, “ನೀವು ಶಾಸ್ತ್ರಗ್ರಂಥವನ್ನಾಗಲಿ ದೇವರ ಶಕ್ತಿಯನ್ನಾಗಲಿ ತಿಳಿಯದಿರುವುದರಿಂದಲೇ ತಪ್ಪರ್ಥಮಾಡಿಕೊಂಡಿದ್ದೀರಿ; 30 ಪುನರುತ್ಥಾನದಲ್ಲಿ ಪುರುಷರು ಮದುವೆಮಾಡಿಕೊಳ್ಳುವುದೂ ಇಲ್ಲ, ಸ್ತ್ರೀಯರನ್ನು ಮದುವೆಯಲ್ಲಿ ಕೊಡುವುದೂ ಇಲ್ಲ; ಅವರು ಸ್ವರ್ಗದಲ್ಲಿರುವ ದೇವದೂತರಂತೆ ಇರುತ್ತಾರೆ. 31 ಆದರೆ ಸತ್ತವರ ಪುನರುತ್ಥಾನದ ವಿಷಯದಲ್ಲಿ, 32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೊ? ಆತನು ಸತ್ತವರಿಗಲ್ಲ, ಜೀವಿತರಿಗೆ ದೇವರಾಗಿದ್ದಾನೆ” ಎಂದು ಹೇಳಿದನು. 33 ಇದನ್ನು ಕೇಳಿ ಜನರ ಗುಂಪುಗಳು ಅವನ ಬೋಧನೆಯ ವಿಷಯದಲ್ಲಿ ಅತ್ಯಾಶ್ಚರ್ಯಪಟ್ಟವು.
34 ಅವನು ಸದ್ದುಕಾಯರ ಬಾಯನ್ನು ಮುಚ್ಚಿಸಿದನೆಂಬುದನ್ನು ಫರಿಸಾಯರು ಕೇಳಿಸಿಕೊಂಡಾಗ, ಅವರೆಲ್ಲರು ಒಟ್ಟುಗೂಡಿ ಅಲ್ಲಿಗೆ ಬಂದರು. 35 ಅವರಲ್ಲಿ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದ ಒಬ್ಬನು ಅವನನ್ನು ಪರೀಕ್ಷಿಸಲಿಕ್ಕಾಗಿ, 36 “ಬೋಧಕನೇ, ಧರ್ಮಶಾಸ್ತ್ರದಲ್ಲಿ ಅತಿ ದೊಡ್ಡ ಆಜ್ಞೆ ಯಾವುದು?” ಎಂದು ಕೇಳಿದನು. 37 ಅದಕ್ಕೆ ಅವನು, “ ‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’ 38 ಇದೇ ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆಯಾಗಿದೆ. 39 ಇದರಂತಿರುವ ಎರಡನೆಯ ಆಜ್ಞೆಯು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ. 40 ಇಡೀ ಧರ್ಮಶಾಸ್ತ್ರವೂ ಪ್ರವಾದಿಗಳ ಮಾತುಗಳೂ ಈ ಎರಡು ಆಜ್ಞೆಗಳ ಮೇಲೆ ಆಧಾರಿತವಾಗಿವೆ” ಎಂದನು.
41 ಫರಿಸಾಯರು ಕೂಡಿಬಂದಿರುವಾಗ ಯೇಸು ಅವರಿಗೆ, 42 “ಕ್ರಿಸ್ತನ ಕುರಿತು ನಿಮ್ಮ ಅಭಿಪ್ರಾಯವೇನು? ಅವನು ಯಾರ ಮಗನು?” ಎಂದು ಕೇಳಿದನು. ಅದಕ್ಕೆ ಅವರು “ದಾವೀದನ ಮಗನು” ಎಂದರು. 43 ಅವನು ಅವರಿಗೆ, “ಹಾಗಿದ್ದರೆ ದಾವೀದನು ಪವಿತ್ರಾತ್ಮ ಪ್ರೇರಿತನಾಗಿ, 44 ‘ “ನಾನು ನಿನ್ನ ವೈರಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಯೆಹೋವನು ನನ್ನ ಕರ್ತನಿಗೆ ನುಡಿದನು’ ಎಂದು ಹೇಳಿ ಅವನನ್ನು ‘ಕರ್ತನು’ ಎಂದು ಏಕೆ ಕರೆದನು? 45 ದಾವೀದನು ಅವನನ್ನು ‘ಕರ್ತನು’ ಎಂದು ಕರೆದರೆ ಅವನು ಅವನಿಗೆ ಮಗನಾಗುವುದು ಹೇಗೆ?” ಎಂದು ಕೇಳಿದನು. 46 ಅವನಿಗೆ ಉತ್ತರವಾಗಿ ಯಾರೂ ಒಂದು ಮಾತನ್ನೂ ಹೇಳಲಾರದೆಹೋದರು ಮತ್ತು ಅಂದಿನಿಂದ ಅವನನ್ನು ಪ್ರಶ್ನಿಸುವುದಕ್ಕೆ ಯಾವನೂ ಧೈರ್ಯಮಾಡಲಿಲ್ಲ.